Monday, January 21, 2013

'ಪೂರ್ಣ ಸತ್ಯ' ಪುಸ್ತಕ ಬಿಡುಗಡೆ

        ದಿನಾಂಕ ೨೦.೦೧.೨೦೧೩ ರಂದು ಗುಲಬರ್ಗಾದ ಶ್ರೀ ಸಿದ್ದಲಿಂಗೇಶ್ವರ ಪ್ರಕಾಶನದವರು ಸುಮಾರು ೫೫ ಪುಸ್ತಕಗಳ ಬಿಡುಗಡೆ ಸಮಾರಂಭ ಆಯೋಜಿಸಿದ್ದರು. ಆ ೫೫ ಕೃತಿಗಳಲ್ಲಿ ನಾನು ಬರೆದ 'ಪೂರ್ಣ ಸತ್ಯ' ಸಹ ಬಿಡುಗಡೆಯಾದ ಕೃತಿಗಳಲ್ಲೊಂದು. 'ಪೂರ್ಣ ಸತ್ಯ' ಇದು ನನ್ನ ಎರಡನೇ ಕೃತಿ. ಆ ಪುಸ್ತಕದ ನನ್ನ ಮಾತುಗಳಲ್ಲಿ ನಾನು ಹೇಳಿದಂತೆ ಇಲ್ಲಿರುವ ೧೫ ಲೇಖನಗಳನ್ನು ಪಟ್ಟಾಗಿ ಕುಳಿತು ಒಂದೇ ಸಲಕ್ಕೆ ಬರೆದವುಗಳಲ್ಲ. ಸುಮಾರು ಹತ್ತು ವರ್ಷಗಳ ಅವಧಿಯಲ್ಲಿ ಬಾಗಲಕೋಟೆಯ ಬಿ.ವಿ.ವಿ.ಸಂಘದ ಸಮಾಚಾರ ಪತ್ರಿಕೆಗೆ ಅತ್ಯಂತ ಪ್ರೀತಿಯಿಂದ ಬರೆದ ಲೇಖನಗಳಿವು. 


ಈ ಬರೆಯಬೇಕೆನ್ನುವ ಹುಚ್ಚು ನನಗೆ ಪ್ರಾರಂಭವಾಗಿದ್ದೆ ಕಳೆದ ಒಂದು ದಶಕದಿಂದಿಚೆಗೆ. ನಾನು ಬರೆಯುತ್ತ ಹೋದಂತೆಲ್ಲ ನನ್ನೊಳಗಿನ ಸೃಜನಶೀಲತೆಯ ಸೆಲೆ ನಿರಂತರವಾಗಿ ಒಸರುತ್ತಲೇ ಹೋಯಿತು. ಯಾವಾಗ ನಾನು ಅಕ್ಷರ ಪ್ರಪಂಚದೊಳಗೆ ಮುಳುಗಿ ಹೋದೆನೋ ಆಗ ಬದುಕನ್ನು ಒಂದಿಷ್ಟು ಇತಿಮಿತಿಗಳಿಗೆ ಮುಖಾಮುಖಿಯಾಗಿ ನಿಲ್ಲಿಸಲು ಸಾಧ್ಯವಾಯಿತು. ಅಷ್ಟರ ಮಟ್ಟಿಗೆ ನಾನು ಅಕ್ಷರ ಪ್ರಪಂಚಕ್ಕೆ ಋಣಿಯಾಗಿರಬೇಕು. 



      ನನ್ನ ಬರೆಯಬೇಕೆನ್ನುವ ಹವ್ಯಾಸಕ್ಕೆ ನೀರೆರೆದು ಪೋಷಿಸಿದ್ದು ಬಾಗಲಕೋಟೆಯ ಬಿ.ವಿ.ವಿ.ಸಂಘದ 'ಸಮಾಚಾರ' ಪತ್ರಿಕೆ. ಒಂದು ಪತ್ರಿಕೆಯನ್ನು ಪ್ರಕಟಿಸುವುದರ ಮೂಲಕ ಸೃಜನಶೀಲ ಆಯಾಮವೊಂದು ಅನಾವರಣಗೊಳ್ಳಲು ಕಾರಣರಾಗಿರುವ ಸಂಘದ ಕಾರ್ಯಾಧ್ಯಕ್ಷರಾದ ಶ್ರೀ ವೀರಣ್ಣ ಚರಂತಿಮಠ ಅವರದು ನಿಜಕ್ಕೂ ಸೃಜನಶೀಲ ಮನಸ್ಸು. ಜೊತೆಗೆ ನನ್ನನ್ನು ಬರೆಯುವಂತೆ ಪ್ರೋತ್ಸಾಹಿಸಿ, ನಾನು ಬರೆದದ್ದನ್ನು ಓದಿ ಮತ್ತೆ ಮತ್ತೆ ಬರೆಯುವಂತೆ ಉತ್ತೇಜಿಸಿದವರು 'ಸಮಾಚಾರ' ಪತ್ರಿಕೆಯ ಪ್ರಧಾನ ಸಂಪಾದಕರಾದ ಶ್ರೀ ಎನ್.ಜಿ.ಕರೂರ ಮತ್ತು ಸಂಪಾದಕರಾದ ಶ್ರೀ ಪಿ.ಎನ್.ಸಿಂಪಿ ಅವರು. ಈ ಮಹನೀಯರ ಪ್ರೋತ್ಸಾಹದಿಂದ ನಾನೊಂದಿಷ್ಟು ಬರೆಯಲು ಸಾಧ್ಯವಾಯಿತು. ನನ್ನ ಮೊದಲ ಕೃತಿ ಸಾಧನೆಯನ್ನು ಬರೆಯಲು ಪ್ರೇರಣೆ ನೀಡಿದ ಮಹನೀಯರಾದ ಶ್ರೀ ಸಿದ್ದಣ್ಣ ಶೆಟ್ಟರ ಮತ್ತು ಡಾ.ಅಶೋಕ ಮಲ್ಲಾಪುರ ಅವರ ಸಹಕಾರ ಅವಿಸ್ಮರಣೀಯ.



      ಅಕ್ಷರ ಪ್ರಪಂಚಕ್ಕೆ ಹೊಸಬನಾದ ನನ್ನನ್ನು ಬರಹಗಾರನಾಗಿ ಪರಿಚಯಿಸುವ ಮಹತ್ವದ ಜವಾಬ್ದಾರಿಯೊಂದಿಗೆ ನನ್ನ ಪುಸ್ತಕವನ್ನು ಪ್ರಕಟಿಸುತ್ತಿರುವ ಶ್ರೀ ಸಿದ್ದಲಿಂಗೇಶ್ವರ ಪ್ರಕಾಶನದ ಮಾಲೀಕರಾದ ಶ್ರೀ ಬಸವರಾಜ ಕೋನೆಕ್ ಅವರ ಸಹಕಾರವನ್ನು ಕೆಲವೇ ಶಬ್ದಗಳಲ್ಲಿ ವಿವರಿಸುವುದು ಕಷ್ಟ ಸಾಧ್ಯದ ಕೆಲಸ. 



        ನಾನು ಬರೆದ ನಂತರದ ಪ್ರತಿ ಸಂದರ್ಭದಲ್ಲೂ ನಾನು ಹೀಗೆ ಬರೆಯುತ್ತಿರುವುದಕ್ಕೆ ಕಾರಣರಾರು ಎಂದು ನೆನಪಿಸಿಕೊಂಡಾಗಲೆಲ್ಲ ನನಗೆ ನೆನಪಿಗೆ ಬರುವ ವ್ಯಕ್ತಿತ್ವ ನನ್ನ ಅಮ್ಮನದು. ನನ್ನ ಅಮ್ಮನ ಪ್ರಭಾವ ನನ್ನ ಬರವಣಿಗೆಯ ಪ್ರತಿ ಅಕ್ಷರದಲ್ಲೂ ಇದೆ. ಅವಳಲ್ಲಿನ ಓದುವ ಹವ್ಯಾಸ ಮತ್ತು ಅವಳು ಓದಿದ ಐತಿಹಾಸಿಕ ಮತ್ತು ಸಾಮಾಜಿಕ ಕಾದಂಬರಿಗಳು ನಂತರದ ದಿನಗಳಲ್ಲಿ ನನ್ನ ಮೇಲೆ ಗಾಢ ಪ್ರಭಾವ ಬೀರಿದವು. ತನ್ನ ಬಿಡುವಿನ ಸಮಯವನ್ನು ಓದಿನಂಥ ಸೃಜನಾತ್ಮಕ ಚಟುವಟಿಕೆಯಲ್ಲಿ ಕಳೆಯುತ್ತಿದ್ದ ನನ್ನ ಅಮ್ಮ ನಾನು ನೋಡಿದಂತೆ ಅತ್ಯುತ್ತಮ ಓದುಗರಲ್ಲಿ ಒಬ್ಬಳು. ಅವಳು ಓದಿ ನನ್ನ ಕೈಗಿಟ್ಟ ಪುಸ್ತಕಗಳೇ ನನಗೆ ಈಗ ಬರೆಯಲು ಚೈತನ್ಯ ನೀಡಿವೆ. ಒಂದು ಸೃಜನಾತ್ಮಕ ಹವ್ಯಾಸ ನನ್ನೊಳಗೆ ಮೊಳಕೆಯೊಡೆಯಲು ಕಾರಣಳಾದ ನನ್ನ ಅಮ್ಮನಿಗೆ ಈ ಕೃತಿಯನ್ನು ಅರ್ಪಿಸುವುದರ ಮೂಲಕ ಒಂದು ಉತ್ತಮ ವ್ಯಕ್ತಿತ್ವವನ್ನು ಸ್ಮರಿಸಿಕೊಂಡ ಧನ್ಯತೆ ನನ್ನದು. 


-ರಾಜಕುಮಾರ.ವ್ಹಿ.ಕುಲಕರ್ಣಿ (ಕುಮಸಿ), ಬಾಗಲಕೋಟೆ 



No comments:

Post a Comment