Thursday, November 8, 2012

ಅಭಿನಂದನೆಗಳು ಸರ್ ನಿಮಗೆ

     

         ಶಿಕ್ಷಣ ತಜ್ಞರು ಮತ್ತು  ಬಿ.ವಿ.ವಿ.ಸಂಘದ ಆಡಳಿತಾಧಿಕಾರಿಗಳಾದ  ಪ್ರೊ.ಎನ್.ಜಿ.ಕರೂರ ಅವರಿಗೆ 2012ನೆ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ದೊರೆತಿರುವುದು ಅತ್ಯಂತ ಸಂತಸದ ಸಂಗತಿ. ಸುಮಾರು ಐದು ದಶಕಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿರುವ ಮನಸ್ಸು ಅವರದು. ಎಲ್ಲರೂ ಹೇಳುವಂತೆ ಈ ಪ್ರಶಸ್ತಿ ಶಿಕ್ಷಣದ ಕುರಿತು ಅಪಾರ ಕಾಳಜಿಯುಳ್ಳ  ಅವರಿಗೆ ಎಂದೋ ದೊರೆಯಬೇಕಿತ್ತು. ತಡವಾಗಿಯಾದರೂ ಪ್ರಶಸ್ತಿ ದೊರೆಯಿತಲ್ಲ ಎನ್ನುವ ಸಂತಸ ಮತ್ತು ಸಮಾಧಾನ ಅವರನ್ನು ಬಲ್ಲವರಿಗೆ.
         ಪ್ರೊ.ಎನ್.ಜಿ.ಕರೂರ ವಿಜಾಪುರ ಜಿಲ್ಲೆಯ ಇಂಡಿ ತಾಲೂಕಿನ ಸಾಲೋಟಗಿ ಗ್ರಾಮದವರು. ಅವರು ಚಡಚಣದ ಗೆಳೆಯರ ಗುಂಪಿನ ಪ್ರಭಾವಳಿಯಲ್ಲಿ ಬೆಳೆದವರು. ಮಧುರ ಚೆನ್ನರ ಮತ್ತು ಸಿಂಪಿ ಲಿಂಗಣ್ಣನವರ ವ್ಯಕ್ತಿತ್ವದ ಗಾಢ ಪ್ರಭಾವಳಿ ಇವರ ವೃತ್ತಿ ಮತ್ತು ವೈಯಕ್ತಿಕ ಬದುಕಿನೊಂದಿಗೆ ಬೆಸೆದು ಕೊಂಡಿದೆ. ಗೆಳೆಯರ ಗುಂಪಿನ ಎರಡನೆ ತೆಲೆಮಾರಿನ ಶ್ರೀ ಗುರುಲಿಂಗ ಕಾಪಸೆ ಅವರೊಂದಿಗೆ ಇವರದು ಅನ್ಯೋನ್ಯ ಸ್ನೇಹ ಸಂಬಂಧ. ಒಂದು ಸಾಹಿತ್ಯಕ ವಾತಾವರಣದಲ್ಲಿ ತಮ್ಮ   ವ್ಯಕ್ತಿತ್ವವನ್ನು ರೂಪಿಸಿಕೊಂಡ ಶ್ರೀಯುತರದು ಅತ್ಯಂತ ಸಂವೇದನಾಶೀಲ ಮನೋಭಾವ. 
        ಉಪನ್ಯಾಸಕರಾಗಿ, ಪ್ರಾಚಾರ್ಯರಾಗಿ, ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿಗಳಾಗಿ ಪ್ರೊ.ಎನ್.ಜಿ.ಕರೂರ ಅವರದು ಶಿಕ್ಷಣ ಕ್ಷೇತ್ರದಲ್ಲಿ ಸುದೀರ್ಘ ಐದು ದಶಕಗಳ ಅನುಭವ. ಈ ಐದು ದಶಕಗಳ ಅವಧಿಯಲ್ಲಿ ಅವರಿಂದ ವಿದ್ಯಾರ್ಜನೆಗೊಂಡ ವಿದ್ಯಾರ್ಥಿಗಳ ಸಂಖ್ಯೆ ಸಾವಿರಾರು. ಜೊತೆಗೆ ಅವರ ಅನುಭವದ ಮೂಸೆಯಲ್ಲಿ ರೂಪಿತಗೊಂಡ ಶಿಕ್ಷಣ ಸಂಸ್ಥೆಗಳು ಹಲವಾರು. ತಮ್ಮ ಸುದೀರ್ಘ ಸೇವಾವಧಿಯಲ್ಲಿ ಅವರ ಶಿಕ್ಷಣದ ಕುರಿತಾದ ಉಪನ್ಯಾಸಗಳು ಅಸಂಖ್ಯಾತ ಮತ್ತು ಬರೆದ ಪುಸ್ತಕಗಳು ಅನೇಕ.
       ಶಿಕ್ಷಣದ ಔನತ್ಯ ಮತ್ತು ಅದರ ಪಾವಿತ್ರ್ಯತೆಯ ಕಾಯ್ದುಕೊಳ್ಳುವಿಕೆಗಾಗಿ ಅವರದು ನಿರಂತರ ಹುಡುಕಾಟ. ಅದು ಪ್ರಾಥಮಿಕ ಶಿಕ್ಷಣವಾಗಿರಲಿ, ಮಾಧ್ಯಮಿಕ ಶಿಕ್ಷಣ ಇರಲಿ ಉನ್ನತ ಹಾಗೂ ವೃತ್ತಿಪರ ಶಿಕ್ಷಣವಿರಲಿ ಒಟ್ಟಾರೆ ವಿದ್ಯಾರ್ಥಿ ಸಮೂಹಕ್ಕೆ ಗುಣಾತ್ಮಕ ಶಿಕ್ಷಣ ದೊರೆಯಬೇಕೆನ್ನುವುದು ಅವರ ಕಳಕಳಿ. ಗುಣಾತ್ಮಕ ಶಿಕ್ಷಣಕ್ಕೆ ಏನು ಬೇಕೆನ್ನುವುದನ್ನೂ ಅವರು ಪ್ರತಿಪಾದಿಸುತ್ತಾರೆ. ಪರಿಣಿತ ಮತ್ತು ಅನುಭವಿಕ ಬೋಧಕ ವೃಂದ, ಸುಸಜ್ಜಿತ ಪ್ರಯೋಗಾಲಯಗಳು, ಅತ್ಯುತ್ತಮ ಸೌಕರ್ಯದ ಗ್ರಂಥಾಲಯ, ವಿಶಾಲ ಆಟದ ಬಯಲು, ಆಧುನಿಕ ಬೋಧನಾ ಸಲಕರಣೆಗಳಿಂದ ಕೂಡಿದ ಪಾಠದ ಕೊಠಡಿಗಳು ಶಿಕ್ಷಣದ ಗುಣ ಮಟ್ಟದ ಹೆಚ್ಚಳಕ್ಕೆ ಅಗತ್ಯವಾದ ಅವಶ್ಯಕತೆಗಳಿವು ಎನ್ನುವುದು ಅವರ ಕಿವಿಮಾತು. ವಿಶೇಷವಾಗಿ ಪ್ರಾಥಮಿಕ ಶಿಕ್ಷಣದ ಬಗ್ಗೆ ಅವರಿಗೆ ಅಪರಿಮಿತವಾದ ಕಾಳಜಿ. ಪ್ರಾಥಮಿಕ ಶಿಕ್ಷಣವೇ ಶೈಕ್ಷಣಿಕ ಬದುಕಿನ ಅಡಿಪಾಯ ಎನ್ನುವುದನ್ನು ಬಲವಾಗಿ ಸಮರ್ಥಿಸುವ ಶ್ರೀಯುತರದು ಉನ್ನತ ಶಿಕ್ಷಣದ ಸಂದರ್ಭದಲ್ಲಿ ದೊರೆಯುವ ಎಲ್ಲ ಪ್ರಕಾರದ ಶೈಕ್ಷಣಿಕ ಸೌಲಭ್ಯಗಳು ಮಗುವಿಗೆ ಪ್ರಾಥಮಿಕ ಹಂತದಲ್ಲೇ ದೊರೆಯಬೇಕೆನ್ನುವ ಅಭಿಪ್ರಾಯ. ಶಿಕ್ಷಣ ಸಂಸ್ಥೆಗಳ ಬೆಳವಣಿಗೆಯನ್ನು ನೋಡಿ ಖುಷಿ ಪಡುವ ಅವರದು ಶಿಕ್ಷಣ ಕ್ಷೇತ್ರದಲ್ಲಿನ ಸಮಸ್ಯೆಗಳನ್ನೂ ತೀರ ವೈಯಕ್ತಿಕವಾಗಿ ತೆಗೆದುಕೊಂಡು ನೊಂದುಕೊಳ್ಳುವ ಸಂವೇದನಾಶೀಲ ಮನಸ್ಸು. 
ಶಿಕ್ಷಣದ ಕುರಿತಾದ ಅವರ ಕಾಳಜಿಗಳು:-
1. ಶಿಕ್ಷಕ ಅಧ್ಯಯನ ಶೀಲ ಪ್ರವೃತ್ತಿಯನ್ನು ಸದಾ ಜಾಗೃತವಾಗಿಟ್ಟುಕೊಂಡು ವಿದ್ಯಾರ್ಥಿಗಳನ್ನು ಪ್ರೀತಿಸುತ್ತ ಎಲ್ಲಕ್ಕೂ ಮಿಗಿಲಾಗಿ ಶೀಲ ಸಂಪನ್ನರಾಗಿ ಬಾಳಬೇಕು.
2. ವಿದ್ಯಾರ್ಥಿಗಳಿಗೆ ಒಳ್ಳೆಯ ಸಂಸ್ಕಾರ ನೀಡುವುದು, ಅಭಿರುಚಿಯನ್ನು ತಿದ್ದುವುದು ಶಿಕ್ಷಣದ ಉದ್ದೇಶ. ಅದು ಫಲಿಸದಿದ್ದರೆ ಎಲ್ಲವೂ ವ್ಯರ್ಥ. 
3. ಸರಕಾರ ಕೊಡುವ ಪ್ರಶಸ್ತಿಗಿಂತಲೂ ಶಿಕ್ಷಕರಿಗೆ ವಿದ್ಯಾರ್ಥಿಗಳು ಕೊಡುವ ಪ್ರಶಸ್ತಿ ಶ್ರೇಷ್ಠ. ಬೋಧನಾ ಕೌಶಲ್ಯದ ಜೊತೆ ವಿದ್ಯಾರ್ಥಿಗಳನ್ನು ಪ್ರೀತಿಸುವ ಕಕ್ಕುಲಾತಿ ಮುಖ್ಯ. 
4. ರಾಜ್ಯದಲ್ಲಿ ಈ ವರ್ಷ ನೂರಿನ್ನೂರು ಬಿ.ಎಡ್ ಕಾಲೇಜುಗಳು ಅಸ್ತಿತ್ವಕ್ಕೆ. ನೀತಿ ನಿಯಮಗಳನ್ನು ಗಾಳಿಗೆ ತೂರಿ ಯದ್ವಾ ತದ್ವಾ ಅನುಮತಿ ನೀಡಿ ಶಿಕ್ಷಣ ಕ್ಷೇತ್ರ ಹದಗೆಡಲಿಕ್ಕೆ ಇದೊಂದು ಹೆದ್ದಾರಿ.
5. ದೇಶದ ಭವಿಷ್ಯ ನಿರ್ಮಾಣವಾಗುವುದು ಶಾಲೆ, ಕಾಲೇಜುಗಳಲ್ಲಿ. ಅಲ್ಲಿ ವಿದ್ಯಾರ್ಥಿಗಳ ಮಾರ್ಗದರ್ಶಕರಾದ ಶಿಕ್ಷಕರೇ ಶ್ರೇಷ್ಠ ನಾಗರಿಕರ ನಿರ್ಮಾಪಕರು.

        ಖ್ಯಾತ ವಿಮರ್ಶಕರು ಮತ್ತು ಸಾಹಿತಿಗಳಾದ ಡಾ.ಗುರುಲಿಂಗ ಕಾಪಸೆ ಅವರು ಪ್ರೊ.ಎನ್.ಜಿ.ಕರೂರ ಅವರನ್ನು ಅತಿ ಹತ್ತಿರದಿಂದ ಬಲ್ಲವರು. ಡಾ.ಕಾಪಸೆ ಅವರ ಮಾತುಗಳಲ್ಲಿ ಹೇಳುವುದಾರೆ ಶಿಕ್ಷಣ, ಸಾಹಿತ್ಯ, ಆಡಳಿತ, ಸನ್ನಡತೆ ಇವು ಪ್ರೊ.ಎನ್.ಜಿ.ಕರೂರ ಅವರ ಜೀವನದ ಚತುರ್ಮುಖಗಳು. ಅವುಗಳಿಂದಾಗಿ ಆದರ್ಶ ಶಿಕ್ಷಕ, ಅಧ್ಯಯನಶೀಲ ಸಾಹಿತಿ, ದಕ್ಷ ಆಡಳಿತಗಾರ ಹಾಗು ತತ್ವ ನಿಷ್ಠ ನಡೆ-ನುಡಿ ಇವು ಅವರ ವ್ಯಕ್ತಿತ್ವದ ವಿಶೇಷತೆಗಳಾಗಿ ಕಂಗೊಳಿಸಿವೆ. ವಿದ್ಯಾರ್ಥಿ ದೆಸೆಯಿಂದಲೂ, ಪ್ರಾಪಂಚಿಕ ತೊಂದರೆಗಳಲ್ಲಿಯೂ ತೂಕ ತಪ್ಪದಂತೆ ನಡೆಯುವ ಅವರ ಜಾಗೃತ ಮನಸ್ಸು ಅರ್ಧಶತಮಾನಕ್ಕೂ ಮಿಕ್ಕಿ ಶಿಕ್ಷಣ ಕ್ಷೇತ್ರದಲ್ಲಿ ತನ್ಮಯತೆಯಿಂದ ಕಾರ್ಯ ಮಾಡಿದೆ, ಮಾಡುತ್ತಲೂ ಇದೆ.
               ಸಾಹಿತ್ಯದ ವಿದ್ಯಾರ್ಥಿಯಾಗಿ ಕನ್ನಡ, ಇಂಗ್ಲಿಷ್ ಎರಡರಲ್ಲೂ ಸಮಾನ ಆಸಕ್ತಿ ಹೊಂದಿದ ಅವರು ವರ್ಡ್ಸವರ್ಥ್, ಶೆಲ್ಲಿ, ಇಲಿಯಟ್ ರನ್ನು ತಿಳಿದು ಕೊಂಡಂತೆ ಮಧುರ ಚೆನ್ನ, ಬೇಂದ್ರೆ, ಕುವೆಂಪು ಅವರನ್ನೂ ಬಲ್ಲವರು. ರನ್ನನಂಥ ಪ್ರಾಚೀನ ಕವಿಯನ್ನು ಕುರಿತು ಅಧಿಕಾರವಾಣಿಯಿಂದಲೇ ಮಾತನಾಡಬಲ್ಲವರು. ಹೀಗಿದ್ದರೂ ಅವರ ಬಿ.ಇಡಿ ಮತ್ತು ಎಂ.ಇಡಿಗಳು ಶಿಕ್ಷಣ ಕ್ಷೇತ್ರದ ಕಡೆಗೆ ವಾಲುವಂತೆ ಮಾಡಿದವು. ಅವುಗಳಿಂದಾಗಿ ಅವರು ಪ್ರಾಚಾರ್ಯರಾದರು. ಜೊತೆಗೆ ಸಂಸ್ಥೆಗಳನ್ನು ಕಟ್ಟುವ, ಬೆಳೆಸುವ ಕಾರ್ಯದಲ್ಲಿ ನಿಮಗ್ನರಾದರು. ಸಂಸ್ಥೆಗಾಗಿ ಹೊಸ ಹೊಸ ಯೋಜನೆಗಳನ್ನು ರೂಪಿಸುವುದು, ಅವುಗಳನ್ನು ಕಾರ್ಯಗತಗೊಳಿಸುವುದು, ಶಿಸ್ತಿನಿಂದ ಹಿಡಿದ ಕೆಲಸವನ್ನು ಪೂರೈಸುವುದು ಇವು ಅವರ ನಿರಂತರದ ಕಾರ್ಯಚಟುವಟಿಕೆಗಳಾದವು.

ಅವರೊಳಗಿನ ಬರಹಗಾರ 
         ಪ್ರೊ.ಎನ್.ಜಿ.ಕರೂರ ಅವರದು ಸೃಜನಶೀಲ ಮನಸ್ಸು. ಇಂಗ್ಲಿಷ್ ಸಾಹಿತ್ಯವನ್ನು ಓದಿಕೊಂಡಿರುವ ಅವರು ಬರವಣಿಗೆಯ ಕ್ಷೇತ್ರದಲ್ಲೂ ಕೃಷಿ ಮಾಡಿರುವರು. ಭಾಷೆ, ಶಿಕ್ಷಣ, ಸಾಮಾಜಿಕ ಸಮಸ್ಯೆಗಳು, ಸಾಹಿತ್ಯ, ಕಲೆಗೆ ಸಂಬಂಧಿಸಿದಂತೆ ಹಲವಾರು ಲೇಖನಗಳನ್ನು ಬರೆದಿರುವರು. ಅಪರೂಪದವರು, ಶಿಕ್ಷಣ ಮಾರ್ಗ, ಮಿಂಚು ಮಾಲೆ, ಬಾನ್ದನಿ, ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘ ಇವು ಶ್ರೀಯುತರು ಬರೆದಿರುವ ಪ್ರಮುಖ ಕೃತಿಗಳು. ಸಾರ್ಥಕ ಮತ್ತು ಅಂತರಂಗದ ರತ್ನ ಅವರ ಸಂಪಾದಿತ ಕೃತಿಗಳು. 
         ಬಾಗಲಕೋಟೆಯ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘಕ್ಕೆ ಅವರು ಆಡಳಿತಾಧಿಕಾರಿಗಳಾಗಿ ಬಂದ ಪ್ರಾರಂಭದ ದಿನಗಳಲ್ಲಿ ಅವರು ಮಾಡಿದ ಮೊದಲ ಕೆಲಸ ಕಾರ್ಯಾಧ್ಯಕ್ಷರ ಇಚ್ಛೆಯಂತೆ 'ಸಮಾಚಾರ' ಪತ್ರಿಕೆಯನ್ನು ಪ್ರಾರಂಭಿಸಿದ್ದು. ಬಿ.ವಿ.ವಿ.ಸಂಘದ ಶೈಕ್ಷಣಿಕ ಚಟುವಟಿಕೆಗಳ ಜೊತೆಗೆ ಪತ್ರಿಕೆಯಲ್ಲಿ ಸಿಬ್ಬಂದಿ ವರ್ಗದವರ ಲೇಖನಗಳ ಪ್ರಕಟಣೆಗೆ ಪ್ರೋತ್ಸಾಹ ನೀಡಿದರು. ಪತ್ರಿಕಾ ಪ್ರಕಟಣೆಯ ಪರಿಣಾಮ ಒಂದು ಸಾಹಿತ್ಯಕ ವಾತಾವರಣ ನಿರ್ಮಾಣವಾಗಿ  ಬಿ.ವಿ.ವಿ.ಸಂಘದಲ್ಲಿ ಅನೇಕ ಲೇಖಕರು ರೂಪಗೊಳ್ಳಲು ಸಾಧ್ಯವಾಯಿತು. ಶ್ರೀಯುತರ ನೂರಕ್ಕೂ ಹೆಚ್ಚು ಸಂಪಾದಕೀಯ ಲೇಖನಗಳು 'ಸಮಾಚಾರ' ಪತ್ರಿಕೆಯಲ್ಲಿ ಪ್ರಕಟಗೊಂಡವು. ಅವರ ಸಂಪಾದಕೀಯ ಲೇಖನಗಳು ಒಂದಕ್ಕಿಂತ ಇನ್ನೊಂದು ವಿಭಿನ್ನ. ತಮ್ಮ ಸಂಪಾದಕೀಯದಲ್ಲಿ ಉತ್ತಮವಾದದ್ದನ್ನು ಬೆನ್ನುತಟ್ಟಿ ಪ್ರೋತ್ಸಾಹಿಸಿದರೆ ಸಮಸ್ಯೆಗಳನ್ನು ಯಾವ ಮುಲಾಜು ಮತ್ತು ಬಿಡೆಗೆ ಸಿಲುಕದೆ ಟಿಕಿಸಿರುವರು. ತಮ್ಮ ಮೊನಚು ಬರವಣಿಗೆಯಿಂದ ಒಂದು ಜಾಗೃತ ವಾತಾವರಣವನ್ನು ನಿರ್ಮಿಸಿ ಆ ಮೂಲಕ ಅನೇಕ ಸಮಸ್ಯೆಗಳ ಪರಿಹಾರಕ್ಕೆ ಕಾರಣರಾಗಿರುವರು. ಅವರ ಬಹಳಷ್ಟು ಲೇಖನಗಳಲ್ಲಿ ಒಂದು ತುಡಿತ, ಸಂವೇದನೆ, ಪ್ರಾಮಾಣಿಕ ಕಳಕಳಿ, ಸಾತ್ವಿಕ ಸಿಟ್ಟು ಮತ್ತು ಬದಲಾಗದ ಪರಿಸ್ಥಿತಿ ಕುರಿತಾದ ಹತಾಶ ಸ್ಥಿತಿ ಎದ್ದು ಕಾಣುತ್ತವೆ. ಒಂದು ಸೂಕ್ಷ್ಮ ಸಂವೇದನಾಶೀಲ ಮನಸ್ಸಿನ ನಿಜವಾದ ಕಳಕಳಿ  ಇದು.

  ಅವರೊಂದಿಗೆ ಒಂದು ದಶಕದ ನಂಟು 
          ನಾನು 2001ರಲ್ಲಿ ಬಿ.ವಿ.ವಿ.ಸಂಘದ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಗ್ರಂಥಪಾಲಕನಾಗಿ ನಿಯುಕ್ತಿಗೊಂಡ ದಿನದಿಂದ ನನಗೆ ಅವರ ನಿಕಟ ಸಂಪರ್ಕವಿದೆ. 'ಸಮಾಚಾರ' ಪತ್ರಿಕೆಗೆ ನಾನು ಬರೆಯುವ ಲೇಖನಗಳನ್ನು ಓದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಲೇಖನ ಮೆಚ್ಚುಗೆಯಾಗದೇ ಇದ್ದಲ್ಲಿ ಬೇಸರಿಸಿದ್ದಾರೆ. ಹೇಗೆ ಬರೆಯ ಬೇಕೆಂದು ತಿಳಿ ಹೇಳಿದ್ದಾರೆ. ಒಂದರ್ಥದಲ್ಲಿ ನನ್ನೊಳಗಿನ ಬರೆಯುವ ಹವ್ಯಾಸಕ್ಕೆ ನೀರೆರೆದು ಪೋಷಿಸಿದ್ದಾರೆ. 'ಸಾಧನೆ' ಪುಸ್ತಕ ಬರೆಯುತ್ತಿರುವ ಸಂದರ್ಭ ಪ್ರತಿ ಘಳಿಗೆ ಜೊತೆಗೆ ನಿಂತು ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಪುಸ್ತಕ ಪ್ರಕಟವಾಗಿ ಹೊರಬಂದ ನಂತರ ಅನೇಕ ವ್ಯಕ್ತಿಗಳೆದುರು ಕರೆದೊಯ್ದು ನಿಲ್ಲಿಸಿ ನನ್ನನ್ನು ಅವರಿಗೆ ಪರಿಚಯಿಸಿದ್ದಾರೆ. ಅವರಿಂದ ನನ್ನ ಓದಿನ ವ್ಯಾಪ್ತಿ ವಿಸ್ತರಿಸಿದೆ. ತಾವು ಓದಿದ ಅನೇಕ ಉತ್ತಮ ಪುಸ್ತಕಗಳನ್ನು ಕೊಟ್ಟು ಓದುವಂತೆ ಪ್ರಚೋದಿಸಿದ್ದಾರೆ. ಒಂದು ಸೃಜನಶೀಲ ಹವ್ಯಾಸ ಮೊಳಕೆಯೊಡೆದು ಬೆಳೆಯಲು ಕಾರಣರಾಗಿರುವ ಶ್ರೀಯುತರಿಗೆ ನಾನು ಮತ್ತು ನನ್ನೊಳಗಿನ ಬರಹಗಾರ ಕೃತಜ್ಞರಾಗಿದ್ದೇವೆ.
           ಒಮ್ಮೆ ಪುಸ್ತಕವೊಂದರ ಪ್ರಕಟಣಾ ಕೆಲಸಕ್ಕೆ ಸಂಬಂಧಿಸಿದಂತೆ ನಾನು ಮತ್ತು ಸ್ನೇಹಿತರಾದ ಶ್ರೀ ಪಿ.ಎನ್.ಸಿಂಪಿ ಅವರು ಹಿರಿಯರಾದ ಶ್ರೀ ಎನ್.ಜಿ.ಕರೂರ ಅವರೊಂದಿಗೆ ಗದುಗಿಗೆ ಹೋಗುವ ಸಂದರ್ಭ ಒದಗಿ ಬಂತು. ಹೊರ ನೋಟಕ್ಕೆ ಗಂಭೀರ ವದನರಾಗಿ ಮತ್ತು ಮಿತಭಾಷಿಯಾಗಿ ಕಾಣುವ ಅವರು ಆ ಘಳಿಗೆ ನಮ್ಮಗಳ ಊಟ ತಿಂಡಿಯ ಬಗ್ಗೆ ತೋರಿದ ಕಾಳಜಿ, ಕಕ್ಕುಲಾತಿ ಕಂಡು ಮೂಕವಿಸ್ಮಿತನಾಗಿದ್ದೇನೆ. ರಾತ್ರಿ ಬಹಳ ತಡವಾಯಿತೆಂದು ನಮ್ಮನ್ನು ವಾಹನದಲ್ಲಿ ನಮ್ಮ ನಮ್ಮ ಮನೆಯವರೆಗೂ ಬಿಟ್ಟು ಹೋದ ಅವರ ಔದಾರ್ಯ ಅವರ ವ್ಯಕ್ತಿತ್ವಕ್ಕೊಂದು ದೃಷ್ಟಾಂತ. ಆ ಪ್ರಯಾಣದ ವೇಳೆ ಅವರಿಂದ ಅನೇಕ ವಿಷಯಗಳನ್ನು ಕಲಿಯಲು ಸಾಧ್ಯವಾಯಿತು.
   
           ಶ್ರೀಯುತರಿಗೆ ಅಭಿನಂದನೆಗಳು ಮತ್ತೊಮ್ಮೆ.

-ರಾಜಕುಮಾರ.ವ್ಹಿ.ಕುಲಕರ್ಣಿ (ಕುಮಸಿ), ಬಾಗಲಕೋಟೆ 
      

No comments:

Post a Comment