Thursday, November 22, 2012

ತುರ್ತು ನಿಗಾಘಟಕದಲ್ಲಿ ಸಾರ್ವಜನಿಕ ಗ್ರಂಥಾಲಯಗಳು

        

        ಇಡೀ ದೇಶದಾದ್ಯಂತ ನವೆಂಬರ್ 14 ರಿಂದ 20ರ ವರೆಗೆಗಿನ ಏಳು ದಿನಗಳ ಅವಧಿ ಸಾರ್ವಜನಿಕ ಗ್ರಂಥಾಲಯಗಳಿಗೆ 'ಗ್ರಂಥಾಲಯ ಸಪ್ತಾಹ' ಆಚರಣೆಯ ಸಂಭ್ರಮದ ಸಮಯ. ಆ ಏಳು ದಿನಗಳಲ್ಲಿ ಪುಸ್ತಕ ಪ್ರದರ್ಶನ, ಚಿಂತಕರಿಂದ  ಉಪನ್ಯಾಸ, ಓದುಗರಿಗೆ ಬಹುಮಾನ ಇತ್ಯಾದಿ ಚಟುವಟಿಕೆಗಳ ಮೂಲಕ ಓದುಗರನ್ನು ಗ್ರಂಥಾಲಯದೆಡೆಗೆ ಸೆಳೆಯುವ ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತದೆ. ಎಲೆಕ್ಟ್ರಾನಿಕ್ ಮಾಧ್ಯಮಗಳ ನಿರಂತರ 24 ತಾಸುಗಳ ಮನೋರಂಜನಾ ಕಾರ್ಯಕ್ರಮ ಮತ್ತು ಸಾರ್ವಜನಿಕ ಗ್ರಂಥಾಲಯಗಳಲ್ಲಿನ ಸಮಸ್ಯೆಗಳ ಕಾರಣ ಓದುವ ಕ್ರಿಯೆಯಂಥ ಸೃಜನಾತ್ಮಕ ಹವ್ಯಾಸ ಕ್ರಮೇಣ ಕ್ಷೀಣಿಸುತ್ತಿದೆ. ಪರಿಣಾಮವಾಗಿ ಸಾರ್ವಜನಿಕ ಗ್ರಂಥಾಲಯಗಳು ಓದುಗರ ಕೊರತೆಯನ್ನು ಅನುಭವಿಸುತ್ತಿವೆ.
        ಕರ್ನಾಟಕದಲ್ಲಿ ಸರ್ ಎಂ.ವಿಶ್ವೇಶ್ವರಯ್ಯನವರು ಕಬ್ಬನ್ ಪಾರ್ಕಿನ ಶೇಷಾದ್ರಿ ಮೆಮೋರಿಯಲ್ ಹಾಲ್ ನಲ್ಲಿ ಪ್ರಥಮ ಬಾರಿಗೆ ಸಾರ್ವಜನಿಕರಿಗಾಗಿ ಗ್ರಂಥಾಲಯವನ್ನು ಸ್ಥಾಪಿಸಿದರು. ಇದು ಸ್ಥಾಪನೆಯಾದದ್ದು 1914 ರಲ್ಲಿ. ಭಾರತ ಸ್ವಾತಂತ್ರ್ಯಾ ನಂತರ ಡಾ.ಎಸ್.ಆರ್.ರಂಗನಾಥನ್ ಮತ್ತು ಅಂದಿನ ಶಿಕ್ಷಣ ಮಂತ್ರಿ ಶ್ರೀ ಎಸ್.ಆರ್.ಕಂಠಿ ಅವರ ಪ್ರಯತ್ನದ ಫಲವಾಗಿ 1965ರಲ್ಲಿ ಕರ್ನಾಟಕ ಸಾರ್ವಜನಿಕ ಗ್ರಂಥಾಲಯ ಕಾಯ್ದೆ ಜಾರಿಗೆ ಬಂದಿತು. ಸಾರ್ವಜನಿಕ ಗ್ರಂಥಾಲಯಗಳಿಗೆ ಅಗತ್ಯವಾದ ಹಣಕಾಸಿನ ನೆರವು ದೊರೆಯುವಂತಾಗಲು ಈ ಕಾಯ್ದೆಯ ರಚನೆ ಅವಶ್ಯಕವಾಗಿತ್ತು. ಈ ಕಾಯ್ದೆಯನ್ವಯ ಆಸ್ತಿ ತೆರಿಗೆಯಿಂದ ಸಂಗ್ರಹವಾಗುವ ಹಣದಲ್ಲಿ ಪ್ರತಿ ಒಂದು ರೂಪಾಯಿಗೆ ಆರು ಪೈಸೆಗಳಷ್ಟು ಹಣವನ್ನು ಸಾರ್ವಜನಿಕ ಗ್ರಂಥಾಲಯಗಳಿಗಾಗಿ ಮೀಸಲಾಗಿಡಲಾಗುತ್ತದೆ. ಜೊತೆಗೆ ಪ್ರತಿ ಜಿಲ್ಲೆಯಲ್ಲಿನ ಸಾರ್ವಜನಿಕ ಗ್ರಂಥಾಲಯಗಳು ಆಯಾ ಜಿಲ್ಲೆಯಲ್ಲಿ ಸಂಗ್ರಹವಾಗುವ ಭೂಕಂದಾಯದಿಂದ ಪ್ರತಿಶತ 6ರಷ್ಟು ಹಣವನ್ನು ಸರ್ಕಾರದಿಂದ ಅನುದಾನದ ರೂಪದಲ್ಲಿ ಪಡೆಯುತ್ತವೆ. ಕೊಲ್ಕತ್ತಾದ ರಾಜಾ ರಾಮಮೋಹನ ರಾಯ್ ಲೈಬ್ರರಿ ಫೌಂಡೆಶನ್ ನಿಂದಲೂ ಸಾರ್ವಜನಿಕ ಗ್ರಂಥಾಲಯಗಳಿಗೆ ವಿಶೇಷ ಅನುದಾನ ದೊರೆಯುತ್ತಿದೆ. 
       ಸಾರ್ವಜನಿಕ ಗ್ರಂಥಾಲಯವೇ ಒದಗಿಸಿದ ಅಂಕಿಅಂಶಗಳ ಪ್ರಕಾರ ಇಂದು ರಾಜ್ಯದಲ್ಲಿ 27 ಜಿಲ್ಲಾ ಕೇಂದ್ರ ಗ್ರಂಥಾಲಯಗಳು, 19 ನಗರ ಕೇಂದ್ರ ಗ್ರಂಥಾಲಯಗಳು, 16 ಸಂಚಾರಿ ಗ್ರಂಥಾಲಯಗಳು ಮತ್ತು 2751 ಗ್ರಾಮೀಣ ಗ್ರಂಥಾಲಯಗಳಿವೆ. ಇವುಗಳ ಜೊತೆಗೆ ಒಟ್ಟು 451 ಶಾಖಾ ಗ್ರಂಥಾಲಯಗಳು ನಗರ ಮತ್ತು ಜಿಲ್ಲಾ ಕೇಂದ್ರಗಳಡಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಸಂಖ್ಯಾ ದೃಷ್ಟಿಯಿಂದ ಕರ್ನಾಟಕದಲ್ಲಿ ಸಾರ್ವಜನಿಕ ಗ್ರಂಥಾಲಯಗಳ ಸೌಲಭ್ಯ ಸಮೃದ್ಧವಾಗಿದೆ. ಆದರೆ ಗುಣಾತ್ಮಕ ಸೇವೆಯ ದೃಷ್ಟಿಯಿಂದ ನೋಡಿದಾಗ ಇವುಗಳ ಸಾಧನೆ ಶೂನ್ಯ. ಜನಸಾಮಾನ್ಯರ ವಿಶ್ವವಿದ್ಯಾಲಯಗಳೆನ್ನುವ ಘನ ಉದ್ದೇಶದೊಂದಿಗೆ ಅಸ್ತಿತ್ವಕ್ಕೆ ಬಂದ ಸಾರ್ವಜನಿಕ ಗ್ರಂಥಾಲಯಗಳು ಕ್ರಮೇಣ ಸಾರ್ವಜನಿಕರಿಂದಲೇ ದೂರವಾಗುತ್ತಿರುವುದು ವಿಪರ್ಯಾಸ.
      ಸಾರ್ವಜನಿಕ ಗ್ರಂಥಾಲಯಗಳಲ್ಲ ಏನಿದೆ, ಏನಿಲ್ಲ ಎನ್ನುವುದನ್ನು ಪಟ್ಟಿ ಮಾಡುತ್ತ ಹೋದರೆ ಅಲ್ಲಿ ಇಲ್ಲಗಳ ಸಂಖ್ಯೆಯೇ ಬೆಳೆಯುತ್ತ ಹೋಗುತ್ತದೆ. ಸ್ವಂತ ಕಟ್ಟಡ ಇಲ್ಲದಿರುವುದು, ಪುಸ್ತಕಗಳ ಕೊರತೆ, ಸಿಬ್ಬಂದಿ ಸಮಸ್ಯೆ, ಉಪಕರಣಗಳ ಅಭಾವ ಹೀಗೆ ಸಾರ್ವಜನಿಕ ಗ್ರಂಥಾಲಯಗಳು ಸಮಸ್ಯೆಗಳ ಆಗರಗಳಾಗಿವೆ. ಅದೆಷ್ಟೋ ಸಾರ್ವಜನಿಕ ಗ್ರಂಥಾಲಯಗಳಿಗೆ ಸ್ವಂತ ಕಟ್ಟಡಗಳಿಲ್ಲ. ಬಹಳಷ್ಟು ಗ್ರಂಥಾಲಯಗಳು ಸರಿಯಾದ ಗಾಳಿ ಬೆಳಕಿನ ವ್ಯವಸ್ಥೆ ಇಲ್ಲದ ಬಾಡಿಗೆ ಕಟ್ಟಡಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಓದುಗರಿಗೆ ಕುಳಿತು ಓದಲು ಕುರ್ಚಿ, ಟೇಬಲ್ ಗಳ ಕೊರತೆಯಿಂದಾಗಿ ಅನೇಕ ಗ್ರಂಥಾಲಯಗಳಲ್ಲಿ ಓದುಗರು ನಿಂತು ಓದುವ ದೃಶ್ಯ ಸಾಮಾನ್ಯವಾಗಿದೆ. ಪುಸ್ತಕಗಳ ಬಗ್ಗೆ ಹೇಳದಿರುವುದೇ ಒಳಿತು ಏಕೆಂದರೆ ಸಾರ್ವಜನಿಕ ಗ್ರಂಥಾಲಯಗಳಲ್ಲಿ ಹರಿದು ಓದಲಾರದಂಥ ಸ್ಥಿತಿಗೆ ಬಂದ ಪುಸ್ತಕಗಳ ಸಂಖ್ಯೆಯೇ ಸಿಂಹಪಾಲು. ಇರುವ ಕೆಲವೇ ಉತ್ತಮ ಪುಸ್ತಕಗಳು ಸಹ ಓದಲು ಉಪಯುಕ್ತವಾಗಿರುವುದಿಲ್ಲ. ಸಾಮಾನ್ಯವಾಗಿ ಸಾರ್ವಜನಿಕ ಗ್ರಂಥಾಲಯಗಳಿಗೆ ಅಧಿಕಾರಿಗಳು ತಮಗೆ ಬೇಕಾದ ಲೇಖಕರಿಂದ ಪುಸ್ತಕಗಳನ್ನು ಬರೆಸಿ ಮತ್ತು ಬೇಕಾದ ಪ್ರಕಾಶಕರಿಂದ ಪುಸ್ತಕಗಳನ್ನು ಪ್ರಕಟಿಸಿ ಖರೀದಿಸುವರೆಂಬ ದೂರಿದೆ. ಅಧಿಕಾರಿಗಳು ಈ ಮಾತನ್ನು ಅಲ್ಲಗಳೆದರೂ ಅಲ್ಲಿನ ಪುಸ್ತಕಗಳನ್ನು ನೋಡಿದಾಗ ಆ ಮಾತು ನಿಜವೆಂದು ತೋರುತ್ತದೆ. ಅಧಿಕಾರಿಗಳು, ಪ್ರಕಾಶಕರು ಮತ್ತು ಲೇಖಕರ ನಡುವೆ ಕಮಿಷನ್ ರೂಪದಲ್ಲಿ ಹಣ ಹರಿದಾಡಿ ಅವರವರ ಜೇಬು ಭರ್ತಿಯಾಗುತ್ತದೆ ಎನ್ನುವ ಮಾತಿಗೆ ಪುಷ್ಟಿ ಕೊಡುವಂತೆ ಅಲ್ಲಿನ ಪುಸ್ತಕಗಳು ಸಾಹಿತ್ಯ ಲೋಕಕ್ಕೆ ಪರಿಚಯವೇ ಇಲ್ಲದ ಲೇಖಕರಿಂದ ಬರೆದವುಗಳಾಗಿರುತ್ತವೆ. ಅಲ್ಲಿರುವ ಪುಸ್ತಕಗಳಲ್ಲಿ ಅಡುಗೆ ಮನೆಯ ಸಾಹಿತ್ಯದ್ದೆ ಅಧಿಕ ಪಾಲು. ಕುವೆಂಪು, ಬೇಂದ್ರೆ, ಕಾರಂತ, ಅಡಿಗರ ಪುಸ್ತಕಗಳನ್ನು ದುರ್ಬೀನು ಹಾಕಿಕೊಂಡು ಹುಡುಕಬೇಕು. ಇನ್ನು ಅಲ್ಲಿ ಕೆಲಸ ಮಾಡುವ ಸಿಬ್ಬಂದಿಯ ವರ್ತನೆ ಆ ದೇವರಿಗೆ ಪ್ರೀತಿ. ಪುಸ್ತಕ ದ್ವೇಷಿಗಳಂತೆ ವರ್ತಿಸುವವರಿಗೆ ಪುಸ್ತಕಗಳ ನಡುವೆ ಕಾರ್ಯನಿರ್ವಹಿಸುವ ಅವಕಾಶ ದೊರೆತದ್ದು ಕುಚೋದ್ಯದ ಸಂಗತಿ. ಗ್ರಂಥಾಲಯದಲ್ಲಿ ಶಾಂತಿ ಮತ್ತು ಶಿಸ್ತನ್ನು ಕಾಪಾಡಬೇಕಾದವರೇ ಅಶಿಸ್ತಿಗೆ ದಾರಿಮಾಡಿ ಕೊಡುತ್ತಾರೆ. ದಿನದ ಹೆಚ್ಚಿನ ಸಮಯ ಅವರುಗಳು ಗ್ರಂಥಾಲಯದ ಒಳಗಿರುವುದಕ್ಕಿಂತ ಹೊರಗಿರುವುದೇ ಹೆಚ್ಚು. ಓದಲು ಮತ್ತು ಬರೆಯಲು ಬರದವರು ಸಹ ಸಾರ್ವಜನಿಕ ಗ್ರಂಥಾಲಯಗಳಲ್ಲಿ ಗ್ರಂಥಪಾಲಕರಾಗಿಯೋ ಅಥವಾ ಗ್ರಂಥಾಲಯ ಸಹಾಯಕರಾಗಿಯೋ ಕೆಲಸಕ್ಕೆ ಸೇರಬಹುದೆನ್ನುವ ಮನೋಭಾವ ಬಲವಾಗುತ್ತಿದೆ. ಪರಿಣಾಮವಾಗಿ ಯಾವುದೋ ಮೂಲಗಳಿಂದ ವಿದ್ಯಾರ್ಹತೆ ಪಡೆದು ಸಾರ್ವಜನಿಕ ಗ್ರಂಥಾಲಯಗಳಲ್ಲಿ ಕೆಲಸಕ್ಕೆ ಸೇರುವವರ ಸಂಖ್ಯೆ ಹೆಚ್ಚುತ್ತಿದೆ. ಓದುಗರದು ಮಾತ್ರ ಸಾರ್ವಜನಿಕ ಗ್ರಂಥಾಲಯಗಳಲ್ಲಿನ ಸಿಬ್ಬಂದಿಯನ್ನು ಸರಸ್ವತಿಯ ಆರಾಧಕರೆನ್ನಬೇಕೋ ಅಥವಾ ವಿಧ್ವಂಸಕರೆಂದು ಕರೆಯಬೇಕೋ ಎನ್ನುವ ಜಿಜ್ಞಾಸೆ.
        ಉತ್ತಮ ಪುಸ್ತಕಗಳ ಕೊರತೆಯ ನಡುವೆಯೂ ಸರ್ಕಾರ ಸಾರ್ವಜನಿಕ ಗ್ರಂಥಾಲಯಗಳಿಗೆ ಕಂಪ್ಯೂಟರ್ ಗಳನ್ನೂ ಒದಗಿಸಿದೆ. ಒಂದರ್ಥದಲ್ಲಿ ಅದು 'ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂ' ಎನ್ನುವಂತಿದೆ. ಪುಸ್ತಕಗಳ ಕೊರತೆಯೇ ಪ್ರಮುಖ ಸಮಸ್ಯೆಯಾಗಿರುವಾಗ ಸರ್ಕಾರ ಕೋಟ್ಯಾಂತರ ರೂಪಾಯಿಗಳನ್ನು ಖರ್ಚು ಮಾಡಿ ಸಾರ್ವಜನಿಕ ಗ್ರಂಥಾಲಯಗಳಿಗೆ ಕಂಪ್ಯೂಟರ್ ಗಳನ್ನು  ಒದಗಿಸಿದ ಯೋಜನೆಯ ಹಿಂದಿನ ಉದ್ದೇಶ ಅನುಮಾನ ಬರಿಸುವಂತಿದೆ. ಗ್ರಂಥಾಲಯಗಳಿಗೆ ಕೊಟ್ಟ ಕಂಪ್ಯೂಟರ್ ಗಳೆನಾದರೂ ಕೆಲಸ ಮಾಡುತ್ತಿವೆಯೇ? ಕಂಪ್ಯೂಟರ್ ಶಿಕ್ಷಣ ಮತ್ತು ತರಬೇತಿ ಪಡೆದ ಸಿಬ್ಬಂದಿಯ ಕೊರತೆಯಿಂದಾಗಿ ಇವತ್ತು ಸಾರ್ವಜನಿಕ ಗ್ರಂಥಾಲಯಗಳಲ್ಲಿ ಕಂಪ್ಯೂಟರ್ ಗಳು ಧೂಳು ತಿನ್ನುತ್ತ ಕುಳಿತಿವೆ. ಬೆಂಗಳೂರು ಮತ್ತು ಹುಬ್ಬಳ್ಳಿಯಲ್ಲಿನ ಒಂದೆರಡು ಗ್ರಂಥಾಲಯಗಳನ್ನು ಗಣಕೀಕರಣಗೊಳಿಸಿದ ಮಾತ್ರಕ್ಕೆ ರಾಜ್ಯದಲ್ಲಿನ ಎಲ್ಲ ಸಾರ್ವಜನಿಕ ಗ್ರಂಥಾಲಯಗಳನ್ನು ಗಣಕೀಕೃತಗೊಳಿಸಬಹುದೆನ್ನುವ ನಿರ್ಧಾರಕ್ಕೆ ಬರುವುದು ತಪ್ಪು. ಕೋಟ್ಯಾಂತರ ರೂಪಾಯಿಗಳನ್ನು ಕಂಪ್ಯೂಟರ್ ಗಳ ಮೇಲೆ ಖರ್ಚು ಮಾಡುವುದಕ್ಕಿಂತ ಅದೇ ಹಣವನ್ನು ಪುಸ್ತಕಗಳು ಮತ್ತು ಉಪಕರಕಣಗಳ ಮೇಲೆ ಖರ್ಚು ಮಾಡಬಹುದಿತ್ತು. ಈ ವಿಷಯವನ್ನು ಸರ್ಕಾರದ ಗಮನಕ್ಕೆ ತರಬೇಕಿದ್ದ ಅಧಿಕಾರಿಗಳೇ ಇಂಥದ್ದೊಂದು ಯೋಜನೆಯ ಫಲಾನುಭವಿಗಳಾಗುತ್ತಿರುವುದು ವ್ಯವಸ್ಥೆಯೊಂದರ ದುರಂತಕ್ಕೆ ಸಾಕ್ಷಿ.
            ಗ್ರಾಮಾಂತರ ಪ್ರದೇಶದ ಜನತೆಗೂ ಪತ್ರಿಕೆ ಮತ್ತು ಪುಸ್ತಕಗಳನ್ನೊದುವ ಸೌಲಭ್ಯ ದೊರೆಯಲಿ ಎನ್ನುವ ಉದ್ದೇಶದಿಂದ ಗ್ರಾಮೀಣ ಗ್ರಂಥಾಲಯಗಳ ಸ್ಥಾಪನೆಗೆ ಮುಂದಾದ ಸರ್ಕಾರದ ಕ್ರಮ ಸ್ವಾಗತಾರ್ಹ. ಈ ಕಾರಣದಿಂದಾಗಿ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಾಮೀಣ ಗ್ರಂಥಾಲಯಗಳನ್ನು ಸ್ಥಾಪಿಸುವ ಯೋಜನೆ ಹಮ್ಮಿಕೊಳ್ಳಲಾಯಿತು. ಇದುವರೆಗೆ 2751 ಗ್ರಾಮೀಣ ಗ್ರಂಥಾಲಯಗಳನ್ನು ಕರ್ನಾಟಕ ರಾಜ್ಯದಾದ್ಯಂತ ಸ್ಥಾಪಿಸಲಾಗಿದೆ. ಇಲ್ಲಿಯೂ ಕಟ್ಟಡ, ಪುಸ್ತಕಗಳು, ಸಿಬ್ಬಂದಿ ಮತ್ತು ಉಪಕರಣಗಳದ್ದೆ ಸಮಸ್ಯೆ. ಜಿಲ್ಲಾ ಮತ್ತು ನಗರ ಕೇಂದ್ರ ಗ್ರಂಥಾಲಯಗಳಲ್ಲಿ ಮುರಿದು ದುರಸ್ಥಿಯಾದ ಕುರ್ಚಿ ಮೇಜುಗಳನ್ನೇ ಗ್ರಾಮೀಣ ಗ್ರಂಥಾಲಯಗಳಿಗೆ ಕೊಡಲಾಗುವುದು. ಪುಸ್ತಕಗಳ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿರುವುದಿಲ್ಲ. ಮುಖ್ಯ ಗ್ರಂಥಾಲಯಗಳಲ್ಲಿ ಓದಿ ಹಾಳಾದ ಪುಸ್ತಕಗಳೇ ಇಲ್ಲಿ ಓದಲು ಸಿಗುತ್ತವೆ. ಗ್ರಾಮೀಣ ಪರಿಸರದ ಓದುಗರಿಗೆ ಅವರ ಅಭಿರುಚಿಗನುಗುಣವಾದ ಪುಸ್ತಕಗಳು ಇಲ್ಲಿ ಓದಲು ಸಿಗುವುದಿಲ್ಲ. ಗ್ರಂಥಾಲಯಕ್ಕೆ ದಿನಪತ್ರಿಕೆ ಮತ್ತು ನಿಯತಕಾಲಿಕೆಗಳು ಬರುತ್ತವೆಯಾದರೂ ಅವುಗಳು ಸ್ಥಳೀಯ ರಾಜಕೀಯ ನಾಯಕರುಗಳ ಮನೆಯ ಪಡಸಾಲೆಯ ಅಲಂಕಾರಿಕ ವಸ್ತುಗಳಾಗುತ್ತಿವೆ. ಓದುಗರಿಲ್ಲದೆ ಗ್ರಂಥಾಲಯಗಳು ಹಾಳು ಹರಟೆಯ ಇಲ್ಲವೇ ಇಸ್ಪಿಟ್ ಆಟದ ಕೇಂದ್ರಗಳಾಗಿವೆ. ಗ್ರಾಮೀಣ ಗ್ರಂಥಾಲಯಗಳಲ್ಲಿ ಕೆಲಸ ಮಾಡಲು ನೇಮಕಗೊಂಡ ಮೇಲ್ವಿಚಾರಕರಿಗೆ ಸರ್ಕಾರದಿಂದ ಪ್ರತಿ ತಿಂಗಳು 1500 ರೂಪಾಯಿಗಳ ಸಹಾಯಧನ ದೊರೆಯುತ್ತಿದೆ. ಈ ಸಂಬಳದಲ್ಲಿ ಆ ಮೇಲ್ವಿಚಾರಕರು ಪ್ರತಿದಿನ 6 ರಿಂದ 8 ಗಂಟೆಗಳವರೆಗೆ ಗ್ರಂಥಾಲಯದಲ್ಲಿ ಕಾರ್ಯನಿರ್ವಹಿಸಬೇಕು. ಕಡಿಮೆ ಸಂಬಳಕ್ಕೆ ಹೆಚ್ಚಿನ ಅವಧಿಗೆ ಗ್ರಂಥಾಲಯಗಳಲ್ಲಿ ಕೆಲಸ ಮಾಡಲು ಮಾನಸಿಕವಾಗಿ ಸಿದ್ಧರಿಲ್ಲದ ಮೇಲ್ವಿಚಾರಕರಿಂದ ಹೆಚ್ಚಿನದನ್ನು  ನಿರೀಕ್ಷಿಸುವುದು ದೂರದ ಮಾತು. ಹಾಗೆ ನಿರೀಕ್ಷಿಸುವುದು ಕೂಡಾ ತಪ್ಪು. ಈ ನಡುವೆ ತಿಂಗಳು ಪೂರ್ತಿ ಕೆಲಸ ಮಾಡಿದರೂ ಅವರಿಗೆ ದೊರೆಯಬೇಕಾದ ಸಂಬಳ ದೊರೆಯುತ್ತಿಲ್ಲ ಎನ್ನವ ಮಾತೂ ಕೇಳಿ ಬರುತ್ತಿದೆ.
       ಇಷ್ಟೆಲ್ಲ ಸಮಸ್ಯೆಗಳ ಮಧ್ಯೆ ಸಾರ್ವಜನಿಕ ಗ್ರಂಥಾಲಯ ಇಲಾಖೆ ಮಕ್ಕಳ ಗ್ರಂಥಾಲಯಗಳ ಸ್ಥಾಪನೆಗೆ ಚಾಲನೆ ನೀಡಿತು. ಈ ಒಂದು ಯೋಜನೆಯಲ್ಲಾದರೂ ಯಶಸ್ವಿಯಾಗಬಹುದೆಂಬ ಸಾರ್ವಜನಿಕರ ನಿರೀಕ್ಷೆಯನ್ನು ಅದು ಹುಸಿಗೊಳಿಸಿತು. ಮಕ್ಕಳ ವಿಭಾಗ ಎನ್ನುವ ಹೆಸರಿನ ವಿಭಾಗ ಗ್ರಂಥಾಲಯಗಳಲ್ಲಿ ಹೆಸರಿಗೆ ಮಾತ್ರವಿದ್ದು ಅಲ್ಲಿ ಮಕ್ಕಳ ಅಭಿರುಚಿ ಮತ್ತು ಅವರ ವಯೋಮಾನಕ್ಕನುಗುಣವಾದ ಪುಸ್ತಕಗಳೇ ಇರುವುದಿಲ್ಲ. ಮಕ್ಕಳ ಉಪಯೋಗಕ್ಕೆಂದು ತಂದಿಟ್ಟ ಒಂದೆರಡು ಕಂಪ್ಯೂಟರ್ ಗಳನ್ನು ಅಲ್ಲಿನ ಸಿಬ್ಬಂದಿ ಮಕ್ಕಳಿಗೆ ಉಪಯೋಗಿಸಲು ಬಿಡುವುದಿಲ್ಲವಾದ್ದರಿಂದ ಪವಿತ್ರ ಗೋವನ್ನು ತೋರಿಸುವಂತೆ ದೂರದಿಂದಲೇ ತೋರಿಸಬೇಕು. ಒಟ್ಟಿನಲ್ಲಿ ಸಮಸ್ಯೆ ಕೇಂದ್ರಿತವಾದ ಸಾರ್ವಜನಿಕ ಗ್ರಂಥಾಲಯಗಳನ್ನು ಪುನಶ್ಚೇತನಗೊಳಿಸುವ ಕಾರ್ಯಕ್ಕೆ ಸಾರ್ವಜನಿಕ ಗ್ರಂಥಾಲಯ ಇಲಾಖೆ ಮುಂದಾಗಬೇಕು. ಸಂಬಂಧಪಟ್ಟ ಮಂತ್ರಿಗಳು ಈ ಬಗ್ಗೆ ಗಮನಹರಿಸಬೇಕು. ಸಾರ್ವಜನಿಕ ಗ್ರಂಥಾಲಯಗಳು ಜನಸಾಮಾನ್ಯರ ವಿಶ್ವವಿದ್ಯಾಲಯಗಳೆನ್ನುವ ನಂಬಿಕೆ ನಿಜವಾಗಬೇಕು.

-ರಾಜಕುಮಾರ.ವ್ಹಿ.ಕುಲಕರ್ಣಿ (ಕುಮಸಿ), ಬಾಗಲಕೋಟೆ 

No comments:

Post a Comment