Tuesday, April 17, 2012

ಹೊಳೆಯುವುದೆಲ್ಲಾ ಬಂಗಾರವಲ್ಲ

       ನಿಮಗೊಂದು ದೃಷ್ಟಾಂತ ಹೇಳುತ್ತೇನೆ ಕೇಳಿ. ಇಬ್ಬರು ವ್ಯಕ್ತಿಗಳಿದ್ದರು. ಇಬ್ಬರೂ ಸರಿ ಸುಮಾರು ಸಮ ವಯಸ್ಸಿನವರು. ಇಬ್ಬರೂ ವಿದ್ಯಾವಂತರು. ಆ ಇಬ್ಬರಲ್ಲಿ ಒಬ್ಬ ಪರಮ ವಾಚಾಳಿ. ಮಾತೇ ಅವನ ಬಂಡವಾಳ. ಎಂಥವರನ್ನೂ ಆತ ಮಾತನಾಡಿಸಬಲ್ಲ. ಇನ್ನೊಬ್ಬನಿದ್ದಲ್ಲ ಅವನೋ ಮಹಾ ಮೌನಿ. ಕಡಿಮೆ ಮಾತು ಅದು ಅವನ ದೌರ್ಬಲ್ಯವೂ ಹೌದು ಮತ್ತು ಶಕ್ತಿಯೂ ಕೂಡಾ. ಕಡಿಮೆ ಮಾತಿನಿಂದಾಗಿಯೇ ಆತ ಎಲ್ಲರೊಡನೆಯೂ ಬಹು ಬೇಗ ಬೆರೆಯುತ್ತಿರಲಿಲ್ಲ. ಅನೇಕ ಸಂದರ್ಭಗಳಲ್ಲಿ ಆತನ ಮೌನವನ್ನು ಅಹಂಕಾರವೆಂದು ಹಲವರು ತಪ್ಪಾಗಿ ಭಾವಿಸಿದ್ದುಂಟು. ಮದುವೆ ಮತ್ತಿತರ ಖಾಸಗಿ ಕಾರ್ಯಕ್ರಮಗಳನ್ನು ಆತ ಬೇಕೆಂದೆ ತಪ್ಪಿಸಿಕೊಳ್ಳುತ್ತಿದ್ದ. ಅಂಥ ಸಮಾರಂಭಗಳಲ್ಲಿ ಭಾಗವಹಿಸುವ ಅನಿವಾರ್ಯತೆ ಎದುರಾದಾಗ ಸುಮ್ಮನೆ ಒಂದು ಮೂಲೆಯಲ್ಲಿ ಕುಳಿತು ಎದ್ದು ಬರುತ್ತಿದ್ದ. ತನ್ನ ವೈಯಕ್ತಿಕ ಬದುಕಿನ ಖಾಸಗಿತನವನ್ನು ಅವನೆಂದೂ ಸಾರ್ವತ್ರಿಕರಣ ಗೊಳಿಸಲಿಲ್ಲ. ಹೀಗೆ ಅತ್ಯಂತ ಮೌನವಾಗಿ ಬದುಕಿದ ಆತ ಆಂತರ್ಯದಲ್ಲಿ ಸಮಾಜ ಮುಖಿಯಾಗಿದ್ದ. ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದ. ದೇಶದ ಸಮಸ್ಯೆಗಳ ಕುರಿತು ಗಂಟೆಗಟ್ಟಲೆ ಚರ್ಚಿಸುತ್ತಿದ್ದ. ಕೈಲಾಗದವರಿಗೆ, ಅಸಹಾಯಕರಿಗೆ ತನ್ನಿಂದಾದ ನೆರವು ನೀಡುತ್ತಿದ್ದ. ಹೀಗೆ ಸಹಾಯ ಮಾಡಿದ್ದನ್ನು ಬೇರೆಯವರ ಹತ್ತಿರ ಹೇಳಿಕೊಳ್ಳುವ ಜಾಯಮಾನ ಅವನದಾಗಿರಲಿಲ್ಲ. ಬಡತನ, ಸ್ತ್ರೀ ಸಮಸ್ಯೆ, ಭೃಷ್ಟಾಚಾರ, ಅನಕ್ಷರತೆ, ಭಾಷಾ ಸಮಸ್ಯೆ, ಕೆಟ್ಟ ರಾಜಕೀಯ ಅನೇಕ ಸಮಸ್ಯೆಗಳನ್ನು ಕುರಿತು ತನ್ನದೇ ವೈಯಕ್ತಿಕ ಸಮಸ್ಯೆ ಎನ್ನುವಂತೆ ಚಿಂತಿಸುತ್ತಿದ್ದ. ಮೇಲೆ ಸೌಮ್ಯವಾಗಿ ಕಾಣುತ್ತಿದ್ದರು ಆತನ ಅಂತರಂಗದಲ್ಲಿ ಸುಡುವ ಜ್ವಾಲಾಮುಖಿಯೇ ಪ್ರವಹಿಸುತ್ತಿತ್ತು. ಆದರೆ ಆತನ ಬಗ್ಗೆ ಏನೊಂದೂ ಗೊತ್ತಿರದ ಅನೇಕರು ಅವನನ್ನು ನಿಷ್ಪ್ರಯೋಜಕ, ಅಹಂಕಾರಿ, ಒಬ್ಬಂಟಿ, ಸಮಾಜ ವಿರೋಧಿ ಎಂದೆಲ್ಲ ಟೀಕಿಸಿ ತೃಪ್ತಿ ಪಡುತ್ತಿದ್ದರು.
         ಆ ಇನ್ನೊಬ್ಬನಿದ್ದಲ್ಲ ಹೆಚ್ಚು ಮಾತನಾಡುವಾತ ಆತನೋ ಎಲ್ಲರೊಡನೆಯೂ ಬೆರೆಯುತ್ತಿದ್ದ. ದಿನಬೆಳಗಾದರೆ ಅಲ್ಲಿ ಮದುವೆ ಇಲ್ಲಿ ತಿಥಿಯೂಟ ಎಂದು ತಿರುಗುತ್ತಿದ್ದ. ನಗು ನಗುತ್ತ ಮಾತನಾಡಿ ಒಳ್ಳೆಯವನೆಂದು ಹೆಸರು ಗಳಿಸಿದ್ದ. ಇದ್ದರೆ ಅವನ ಹಾಗೆ ಇರಬೇಕೆಂದು ಅವನನ್ನು ನೋಡಿ ಮೆಚ್ಚುಗೆ ಸೂಚಿಸುತ್ತಿದ್ದರು. ನೋಡಲು ಹೀಗಿದ್ದವನು ಆದರೆ ಆಂತರ್ಯದಲ್ಲಿ ಮಾತ್ರ ಅವನು ಸಮಾಜದ ಯಾವ ಸಮಸ್ಯೆಗೂ ಸ್ಪಂದಿಸುತ್ತಿರಲಿಲ್ಲ. ಒಬ್ಬರಿಗೂ ಕೈಮುಂದೆ ಮಾಡಿ ನೆರವಿನ ಹಸ್ತ ಚಾಚಿರಲಿಲ್ಲ. ಸಿಹಿ ಮಾತುಗಳನ್ನಾಡಿ ಬೇರೆಯವರಿಂದ ಸಹಾಯ ಪಡೆಯುವ ಜಾಣತನ ಅವನಲ್ಲಿತ್ತೆ ಹೊರತು ಕೈಲಾಗದವರಿಗೆ, ಅಸಹಾಯಕರಿಗೆ ಒಂದಿಷ್ಟು ನೆರವಾಗುವ ಬುದ್ಧಿ ಅವನಿಗಿರಲಿಲ್ಲ. ತಾನು ತನ್ನ ಕುಟುಂಬ ಸಂತೃಪ್ತವಾಗಿ ಬದುಕಿದರೆ ಸಾಕೆಂಬ ಮನೋಭಾವ ಅವನದಾಗಿತ್ತು. ಬಡತನ, ಅಸಹಾಯಕತೆಗಳನ್ನು ಯಾರಿಗೂ ಗೊತ್ತಾಗದಂತೆ ದ್ವೇಷಿಸುತ್ತಿದ್ದ. ಹಣಕಾಸಿನ ವಿಷಯದಲ್ಲಿ ಮಹಾಜಿಪುಣನಾಗಿದ್ದ ಜೊತೆಗೆ ಅವನೊಬ್ಬ ಪಕ್ಕಾ ವ್ಯವಹಾರಸ್ಥನಾಗಿದ್ದ. ಹೀಗಿದ್ದೂ ತನ್ನ ಬಣ್ಣದ ಮಾತುಗಳಿಂದ ಸುತ್ತಮುತ್ತಲಿನ  ಜನರನ್ನು, ಬಂಧು ಬಳಗದವರನ್ನು ಸುಲಭವಾಗಿ ಮರಳು ಮಾಡುತ್ತಿದ್ದ. ಪಾದರಸ, ಚುರುಕು ಮತಿ, ಸಮಾಜ ಮುಖಿ ಎಂದೆಲ್ಲ ಜನರು ಅವನ ಗುಣಗಾನ ಮಾಡುತ್ತಿದ್ದರು.
       ಈಗ ಹೇಳಿ ಈ ಮೇಲಿನ ಇಬ್ಬರಲ್ಲಿ ಯಾರನ್ನು ನೀವು ಉತ್ತಮ ಮನುಷ್ಯ ಎಂದೆನ್ನುವಿರಿ. ವಾಚಾಳಿಯಾಗಿದ್ದುಕೊಂಡು ಸಮಾಜ ವಿರೋಧಿಯಾಗಿ ಬದುಕುವುದು ಉತ್ತಮವೋ ಅಥವಾ ಮೌನವಾಗಿದ್ದುಕೊಂಡೇ ಸಮಾಜದ ಕುರಿತು ಚಿಂತಿಸುತ್ತ ಬದುಕುವುದು ಸರಿಯೋ. ನೆನಪಿರಲಿ ಹೊಳೆಯುವುದೆಲ್ಲಾ ಬಂಗಾರವಲ್ಲ.

-ರಾಜಕುಮಾರ ವ್ಹಿ.ಕುಲಕರ್ಣಿ (ಕುಮಸಿ), ಬಾಗಲಕೋಟೆ 

No comments:

Post a Comment