Tuesday, December 12, 2023

ಸೇಡು, ದ್ವೇಷದ ಸಂದೇಶ ಬೇಕೆ?

    


(05.10.2023 ರ ಪ್ರಜಾವಾಣಿಯ 'ಸಂಗತ' ಅಂಕಣದಲ್ಲಿ  ಪ್ರಕಟ)

       ಬೆಳಗ್ಗೆ ವಾಕಿಂಗ್ ವೇಳೆ ಎದುರಾದ ಹಿರಿಯರ ತಂಡ ಗಹನವಾದ ಚರ್ಚೆಯಲ್ಲಿ ತೊಡಗಿತ್ತು. ಸಾಮಾಜಿಕ ಮಾಧ್ಯಮವಾದ ವಾಟ್ಸ್‍ಆ್ಯಪ್ ಬಳಕೆಗೆ ಭವಿಷ್ಯದಲ್ಲಿ ನಿರ್ಧಿಷ್ಟ ಶುಲ್ಕವನ್ನು ಗ್ರಾಹಕರು ಭರಿಸುವಂತಾಗಬೇಕು ಎನ್ನುವ ಆಶಯ ತಂಡದಲ್ಲಿದ್ದ ಹಿರಿಯರದಾಗಿತ್ತು. ಈ ಮೂಲಕವಾದರೂ ವಾಟ್ಸ್‍ಆ್ಯಪ್‍ನ ದುರ್ಬಳಕೆ ಕಡಿಮೆಯಾಗಬಹುದು ಎನ್ನುವುದು ಈ ಆಶಯದ ಹಿಂದಿನ ಸದುದ್ದೇಶವಾಗಿತ್ತು. ಸಧ್ಯದ ಸಂದರ್ಭದಲ್ಲಿ ಕೆಟ್ಟ ಮತ್ತು ದ್ವೇಷಪೂರಿತ ಸಂದೇಶಗಳು ವಾಟ್ಸ್‍ಆ್ಯಪ್‍ನಲ್ಲಿ ಅವ್ಯಾಹತವಾಗಿ ಹರಿದಾಡುತ್ತಿರುವುದೆ ಇಂಥದ್ದೊಂದು ಅಭಿಪ್ರಾಯ ರೂಪುಗೊಳ್ಳಲು ಕಾರಣವಾಗಿದೆ ಎನ್ನಬಹುದು.

‘ನಿನಗೆ ಮೋಸ ಮಾಡಿದ ಜನರು ಸಧ್ಯದ ಪರಿಸ್ಥಿತಿಯಲ್ಲಿ ನಗುನಗುತ್ತಾ ಇರಬಹುದು, ಆದರೆ ಆ ನಗು ಶಾಶ್ವತವಲ್ಲ. ಮಾಡಿದ ಮೋಸಕ್ಕೆ ನರಳಿ ನರಳಿ ಕಣ್ಣೀರಿಡುವ ದಿನ ಬಂದೇ ಬರುತ್ತದೆ, ಕಾದು ನೋಡಿ’ ಇಂಥದ್ದೊಂದು ಸಂದೇಶವನ್ನು ಪರಿಚಿತರೊಬ್ಬರು ತಮ್ಮ ವಾಟ್ಸ್‍ಆ್ಯಪ್ ಸ್ಟೇಟಸ್ ಮೂಲಕ ಹಂಚಿಕೊಂಡಿದ್ದರು. ಓದಿ ಒಂದು ಕ್ಷಣ ಹಂಚಿಕೊಂಡವರ ಮನಸ್ಥಿತಿ ಕುರಿತು ಕಳವಳವಾಯಿತು. ಇನ್ನೊಬ್ಬರಿಗೆ ಕೆಟ್ಟದ್ದನ್ನು ಬಯಸುವ ಈ ಸಂದೇಶ ಮನಸ್ಸಿನ ವಿಕೃತಿಗೆ ಕನ್ನಡಿ ಹಿಡಿದಂತಿದೆ. ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವ ಇಂಥ ಸಂದೇಶಗಳು ಬಹಳ ಅಪಾಯಕಾರಿ. ವಿಷ ಉಣಿಸಿದವನಿಗೆ ಹಾಲನೆರೆ, ಕಲ್ಲು ಹೊಡೆದವನ ಮನೆಗೆ ಹೂವನೆಸೆ ಎಂದು ಹಿರಿಯರು ನುಡಿದು, ಅವರು ನುಡಿದಂತೆ ಬದುಕಿ ಬಾಳಿದ ಈ ಸಮಾಜದಲ್ಲಿ ಈಗ ವಿಕೃತ ಸಂದೇಶಗಳು ರವಾನೆಯಾಗುತ್ತಿವೆ. 

ದ್ವೇಷ ಮತ್ತು ಪ್ರತೀಕಾರದಿಂದ ಕೂಡಿದ ಸಂದೇಶಗಳನ್ನು ಹರಡುವುದರ ಮೂಲಕ ನಾವು ನಮ್ಮ ಮಕ್ಕಳಿಗೆ ಏನನ್ನು ಕಲಿಸುತ್ತಿದ್ದೇವೆ ಎಂದು ಪಾಲಕರು ಯೋಚಿಸಬೇಕಿದೆ. ಬುದ್ಧಗುರುವಿನ ಕರುಣೆ, ಬಸವಣ್ಣನವರ ಚಿಂತನೆ, ಗಾಂಧೀಜಿಯ ಸತ್ಯಸಂಧತೆಯನ್ನು ಮಕ್ಕಳ ಮನಸ್ಸಿನಲ್ಲಿ ಬಿತ್ತಿ ಬೆಳೆಯಬೇಕಾದ ಪಾಲಕರೆ ಸಾಮಾಜಿಕ ಮಾಧ್ಯಮಗಳಲ್ಲಿ ಅನಾರೋಗ್ಯಕರವಾದ ಸಂದೇಶಗಳನ್ನು ಹಂಚಿಕೊಳ್ಳುತ್ತಿರುವರು. ಒಂದರ್ಥದಲ್ಲಿ ಇಂಥ ಸಂದೇಶಗಳ ಮೂಲಕ ಸ್ವತ: ಪಾಲಕರೆ ಮಕ್ಕಳಲ್ಲಿ ದ್ವೇಷದ ಬೀಜವನ್ನು ಬಿತ್ತಿದಂತಾಗುತ್ತದೆ. ಇನ್ನೊಂದು ವಿಧದಲ್ಲಿ ಇಂಥ ಕೆಟ್ಟ ಸಂದೇಶಗಳು ಮಕ್ಕಳ ಓದಿನ ಅಭಿರುಚಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಯಿದೆ. ಈಗಾಗಲೇ ಮಕ್ಕಳು ಮೊಬೈಲ್ ವ್ಯಸನಿಗಳಾಗಿದ್ದು ಪುಸ್ತಕಗಳ ಓದಿನ ಅಭಿರುಚಿ ಕ್ಷೀಣಿಸುತ್ತಿರುವ ಹೊತ್ತಿನಲ್ಲಿ ಭಾಷೆಯೊಂದನ್ನು ಕೆಟ್ಟ ಸಂದೇಶಗಳ ಮೂಲಕ ಮಕ್ಕಳಿಗೆ ಪರಿಚಯಿಸುವುದರಿಂದ ಮತ್ತಷ್ಟು ಅಪಾಯವನ್ನು ಆಹ್ವಾನಿಸಿದಂತಾಗುತ್ತದೆ.

ಸಾಮಾಜಿಕ ಮಾಧ್ಯಮದ ಮೂಲಕ ದ್ವೇಷ, ಸೇಡು ಮತ್ತು ಪ್ರತೀಕಾರದ ಸಂದೇಶಗಳನ್ನು ಹರಡುವುದು ಅದೊಂದು ರೀತಿಯ ಮಾನಸಿಕ ಕ್ರೌರ್ಯ. ಇಲ್ಲಿ ಕೇವಲ ಶಬ್ದಗಳ ಮೂಲಕ ವ್ಯಕ್ತಿ ಇನ್ನೊಬ್ಬನ ಮೇಲೆ ಹಲ್ಲೆ ಮಾಡುತ್ತಾನೆ. ಪ್ರಖ್ಯಾತ ಮನೋವಿಶ್ಲೇಷಣಾ ತಜ್ಞ ಎರಿಕ್ ಫ್ರಾಮ್ ತನ್ನ ‘ದಿ ಅನಾಟಮಿ ಆಫ್ ಹ್ಯೂಮನ್ ಡಿಸ್ಟ್ರಕ್ಟಿವನೆಸ್’ ಎಂಬ ಗ್ರಂಥದಲ್ಲಿ ವಿಶ್ಲೇಷಿರುವ ಮಾನವ ಸ್ವಭಾವದ ವ್ಯಾಖ್ಯಾನವನ್ನು ಕಥೆಗಾರ ಎಸ್.ದಿವಾಕರ್ ತಮ್ಮ ಲೇಖನದಲ್ಲಿ ಉಲ್ಲೇಖಿಸಿರುವರು. ಆ ವ್ಯಾಖ್ಯಾನ ಹೀಗಿದೆ-‘ಇತರರನ್ನು ಹಂಗಿಸುವ, ಅವರ ಭಾವನೆಗಳ ಮೇಲೆ ಹಲ್ಲೆಮಾಡುವ ಮಾನಸಿಕ ಕ್ರೌರ್ಯವಿದೆಯಲ್ಲ, ಅದು ದೈಹಿಕ ಕ್ರೌರ್ಯಕ್ಕಿಂತ ಹೆಚ್ಚು ವ್ಯಾಪಕ. ಇಂಥ ಕ್ರೌರ್ಯ ಎಸಗುವವನು ಸ್ವತ: ಸುರಕ್ಷಿತವಾಗಿರುತ್ತಾನೆ. ಯಾಕೆಂದರೆ ಅವನು ಉಪಯೋಗಿಸುವುದು ದೈಹಿಕ ಶಕ್ತಿಯನ್ನಲ್ಲ ಕೇವಲ ಶಬ್ದಗಳನ್ನು ಮಾತ್ರ’. 

ಓದಿದ ಉತ್ತಮ ಪುಸ್ತಕ, ಕೇಳಿದ ಸನ್ಮಾರ್ಗದ ಮಾತು, ನೋಡಿದ ಒಳ್ಳೆಯ ಸಿನಿಮಾ, ಭೇಟಿನೀಡಿದ ಸುಂದರ ಪ್ರವಾಸಿತಾಣದಂತಹ ಮಹತ್ವದ ಮತ್ತು ಆರೋಗ್ಯಕರವಾದ ಮಾಹಿತಿಯನ್ನು ಜಾಲತಾಣಗಳಲ್ಲಿ ಹಂಚಿಕೊಳ್ಳುವುದು ಬೌದ್ಧಿಕವಾಗಿ ಮತ್ತು ಸಾಮಾಜಿಕವಾಗಿ ಅದೊಂದು ಉತ್ತಮವಾದ ನಡೆ. ವಿಷಯಾಧಾರಿತ ಚರ್ಚೆ ಮತ್ತು ಸಂವಾದಗಳಿಗೆ ಸಾಮಾಜಿಕ ಮಾಧ್ಯಮ ವೇದಿಕೆಯಾಗಬೇಕು. ಒಟ್ಟಾರೆ ಹಂಚಿಕೊಂಡ ಸಂದೇಶಗಳು ನಮ್ಮ ಬೌದ್ಧಿಕ ವಿಕಾಸಕ್ಕೆ ನೆರವಾಗಬೇಕು. ವಿಪರ್ಯಾಸವೆಂದರೆ ಸಾಮಾಜಿಕ ಮಾಧ್ಯಮವನ್ನು ದ್ವೇಷ, ಪ್ರತೀಕಾರದ ಸಾಧನೆಗೆ ಗುರಾಣಿಯಾಗಿಸಿಕೊಳ್ಳುವವರ ಸಂಖ್ಯೆಯೇ ಹೆಚ್ಚು.  ಧರ್ಮ ಮತ್ತು ಸಮುದಾಯಗಳ ಬಗ್ಗೆ ಅವಹೇಳನಕಾರಿಯಾದ ಸಂದೇಶಗಳನ್ನು ಹರಡುವುದರ ಮೂಲಕ ಸಮಾಜದಲ್ಲಿನ ಸೌಹಾರ್ದ ವಾತಾವರಣವನ್ನು ಕದಡಲಾಗುತ್ತಿದೆ. ಚುನಾವಣೆಯ ಸಂದರ್ಭ ಫೇಸ್‍ಬುಕ್ ಮತ್ತು ವಾಟ್ಸ್‍ಆ್ಯಪ್‍ಗಳನ್ನು ಎದುರಾಳಿಗಳ ತೇಜೊವಧೆಗಾಗಿ ರಾಜಕಾರಣಿಗಳು ವ್ಯಾಪಕವಾಗಿ ಬಳಸಿಕೊಳ್ಳುತ್ತಿರುವರು. ಸೃಜನಶೀಲ ಕ್ಷೇತ್ರವೆಂದೆ ಪರಿಗಣಿತವಾದ ಸಾಹಿತ್ಯದಲ್ಲೂ ಬರಹಗಾರರು ಪರಸ್ಪರ ನಿಂದನೆಗೆ ಪ್ರಬಲ ಅಸ್ತ್ರವಾಗಿ ಈ ಮಾಧ್ಯಮವನ್ನು ಉಪಯೋಗಿಸುತ್ತಿರುವುದು ಆತಂಕದ ಸಂಗತಿ.

ಸಾಮಾಜಿಕ ಮಾಧ್ಯಮದ ಮೂಲಕ ಕೆಟ್ಟ ಸಂದೇಶಗಳನ್ನು ರವಾನಿಸುತ್ತಿರುವ ರೋಗಗ್ರಸ್ಥ ಮನಸ್ಥಿತಿಯನ್ನು ನಿಯಂತ್ರಿಸಲು ಮನಶಾಸ್ತ್ರಜ್ಞ ಎರಿಕ್ ಬರ್ನ್‍ಸ್ಟೀನ್ ಪರಿಚಯಿಸಿದ ‘ಟ್ರಾನ್ಸಾಕ್ಷನಲ್ ಅನ್ಯಾಲಿಸಿಸ್’  ಎನ್ನುವ ಪರಿಕಲ್ಪನೆಯನ್ನು ಶಿಕ್ಷಣ ಮತ್ತು ಬೋಧನೆಯ ಮೂಲಕ ಕಾರ್ಯಗತಗೊಳಿಸಬೇಕಾದ ಅಗತ್ಯವಿದೆ. ಈ ಪರಿಕಲ್ಪನೆಯು ಮನುಷ್ಯ ಮನುಷ್ಯನಂತೆ ಬದುಕುವುದನ್ನು ಹೇಳಿಕೊಡುತ್ತದೆ. ಈ ವಿಧಾನದಲ್ಲಿ ಮನುಷ್ಯ ಬೇರೆಯವರೊಂದಿಗೆ ಮಾತನಾಡುವ ಪೂರ್ವದಲ್ಲಿ ತನ್ನ ವರ್ತನೆ, ಆಲೋಚನೆ ಮತ್ತು ತನ್ನೊಳಗಿನ ಸಂಘರ್ಷ ಇವುಗಳ ಬಗ್ಗೆ ವಿಶೇಷ ಎಚ್ಚರವಹಿಸಬೇಕು ಎನ್ನುತ್ತಾರೆ ಮನೋವಿಜ್ಞಾನಿಗಳು. ಸಂಭಾಷಣೆ ಸಂದರ್ಭ ತನ್ನ ಮಾತು ಮತ್ತು ವರ್ತನೆ ಎದುರಿಗಿರುವ ವ್ಯಕ್ತಿಗೆ ನೋವನ್ನು ಉಂಟುಮಾಡದಂತೆ ಪೂರ್ವ ಸಿದ್ಧತೆಯೊಂದಿಗೆ ಮಾತಿಗಿಳಿಯುವುದೇ ಟ್ರಾನ್ಸಾಕ್ಷನಲ್ ಅನ್ಯಾಲಿಸಿಸ್ ಸಿದ್ಧಾಂತದ ಪ್ರಮುಖ ಲಕ್ಷಣವಾಗಿದೆ.

ನಿನ್ನನ್ನು ಎಷ್ಟು ನಿಂದಿಸಿದರೂ ನಿನಗೆ ನೋವಾಗುವುದಿಲ್ಲವೆ ಎಂದ ದೇವದತ್ತನ ಮಾತಿಗೆ ಭಗವಾನ್ ಬುದ್ಧ ಪ್ರತಿಕ್ರಿಯಿಸಿದ್ದು ಹೀಗೆ-‘ಒಬ್ಬ ಇನ್ನೊಬ್ಬನಿಗೆ ಏನಾದರೂ ಕೊಡುತ್ತಾನೆ. ಆ ಇನ್ನೊಬ್ಬನು ಅದನ್ನು ತೆಗೆದುಕೊಳ್ಳದೆ ಹೋದರೆ, ಅದು ಕೊಡುವವನಿಗೇ ಸೇರುತ್ತದೆ. ನೀನು ನನಗೆ ರಾಶಿರಾಶಿ ಬೈಗುಳಗಳನ್ನು ಕೊಟ್ಟೆ, ಅದನ್ನು ನಾನು ತೆಗೆದುಕೊಳ್ಳಲಿಲ್ಲ. ಆಗ ಬೈಗುಳಗಳ ರಾಶಿ ಯಾರಿಗೆ ಸೇರಬೇಕು? ನಿನಗೇ ತಾನೆ’. ಸಾಮಾಜಿಕ ಜಾಲತಾಣಗಳಲ್ಲಿ ಅನಾರೋಗ್ಯಕರವಾದ ಸಂದೇಶಗಳು ಪುಂಖಾನುಪುಂಖವಾಗಿ ಹರಿದಾಡುತ್ತಿರುವ ಈ ಸಂದರ್ಭ ಬುದ್ಧ ಗುರುವಿನ ನಿರ್ಲಿಪ್ತ ಗುಣವನ್ನು ಮೈಗೂಡಿಸಿಕೊಳ್ಳಬೇಕಾದದ್ದು ತುರ್ತು ಅಗತ್ಯವಾಗಿದೆ.

-ರಾಜಕುಮಾರ ಕುಲಕರ್ಣಿ

No comments:

Post a Comment