Monday, February 1, 2016

ಸೃಜನಶೀಲತೆ ಮತ್ತು ನಾನು


                                         


             ಪುಸ್ತಕಗಳ ಓದು, ಸಿನಿಮಾ ವೀಕ್ಷಣೆ ಮತ್ತು ಬರವಣಿಗೆ ನನ್ನಲ್ಲಿ ಒಂದಿಷ್ಟು ಸೃಜನಶೀಲತೆಯ ಸೆಲೆ ಜಿನುಗಲು ಕಾರಣವಾಗಿರುವ ಪ್ರಮುಖ ಸಂಗತಿಗಳು ಎನ್ನುವ ನಂಬಿಕೆ ನನ್ನದು. ಪುಸ್ತಕಗಳ ಓದು ಅದೊಂದು ಹವ್ಯಾಸವಾಗಿ ರೂಪಾಂತರಗೊಂಡಿದ್ದು ಅದು ಬಾಲ್ಯದಲ್ಲಿದ್ದ ಮನೆಯ ವಾತಾವರಣದಿಂದ. ಈ ಮೊದಲು ಅನೇಕ ಸಂದರ್ಭಗಳಲ್ಲಿ ನಾನು ಹೇಳಿಕೊಂಡಂತೆ ಓದು  ನನಗೆ ಅಮ್ಮನಿಂದ ಬಂದ ಬಳುವಳಿ. ಅಮ್ಮ ತನ್ನ    ಮನೆಯ ಕೆಲಸದ ಬಿಡುವಿನ ನಡುವೆ ಕುಳಿತು ಓದುತ್ತಿದ್ದ ಪುಸ್ತಕಗಳೇ ನನ್ನಲ್ಲಿ ಓದಿನ ಅಭಿರುಚಿ ಹೆಚ್ಚಲು ಕಾರಣವಾದವು. ನನ್ನ ಅಮ್ಮ ಒಂದೋ ಕೆಲಸ ಮಾಡುತ್ತ ಇಲ್ಲವೇ ಓದುತ್ತ ಕುಳಿತಿರುತ್ತಿದ್ದ ಚಿತ್ರ ನನ್ನ ಚಿತ್ತ ಭಿತ್ತಿಯಲ್ಲಿ ಮಾಸದ ಚಿತ್ರವಾಗಿ ನೆಲೆ ನಿಂತಿದೆ. ತನ್ನ ಬಿಡುವಿನ ವೇಳೆಯನ್ನು ಯಾವ ಹಾಳು ಹರಟೆಯಲ್ಲಿ ಕಳೆಯದೆ ಓದಿನಂಥ ಸೃಜನಾತ್ಮಕ ಹವ್ಯಾಸದಲ್ಲಿ ತನ್ನನ್ನು ತೊಡಗಿಸಿಕೊಳ್ಳುತ್ತಿದ್ದ ಅಮ್ಮ ನನ್ನ ಆದರ್ಶ ಮತ್ತು ಗುರು. ಕೇವಲ ನಾಲ್ಕನೆಯ ತರಗತಿಯವರೆಗೆ ಓದಿದ್ದ ಆಕೆ ರಾಮಾಯಣ, ಮಹಾಭಾರತ ಮತ್ತು ತ್ರಿವೇಣಿ ಅವರ ಕಾದಂಬರಿಗಳನ್ನು ಅತ್ಯಂತ ಆಸಕ್ತಿಯಿಂದ ಓದುತ್ತಿದ್ದಳು. ತ್ರಿವೇಣಿ ಅವರ ಶರಪಂಜರ, ಬೆಕ್ಕಿನ ಕಣ್ಣು, ಹೂವು ಹಣ್ಣು ಕಾದಂಬರಿಗಳು ನನ್ನ ಓದಿಗೆ ದಕ್ಕಿದ್ದು ನನ್ನ ಬಾಲ್ಯದ ದಿನಗಳಲ್ಲೇ. ಹೀಗೆ ಅಮ್ಮನ ಪುಸ್ತಕಗಳ ಓದಿನ ಒಡನಾಟದಿಂದ ನನ್ನ ಓದು ಸಹ ಒಂದು ಸದಭಿರುಚಿಯ ಹವ್ಯಾಸವಾಗಿ ರೂಪುಗೊಂಡಿತು. ನಂತರದ ದಿನಗಳಲ್ಲಿ ನಾಟಕಗಳು, ಕಥಾ ಸಂಕಲನಗಳು, ಕಾದಂಬರಿಗಳು, ಜೀವನ ಚರಿತ್ರೆಗಳು ಹೀಗೆ ಓದಿಗೆ ಹೇರಳ ಪುಸ್ತಕಗಳು ಲಭ್ಯವಾಗಿ ಓದು ಅತ್ಯಂತ ಖುಷಿ ಕೊಡುವ ಕ್ರಿಯೆಯಾಗಿ ನನ್ನೊಳಗೆ ಅಂತರ್ಗತಗೊಂಡಿತು. ಎಸ್ ಎಲ್ ಭೈರಪ್ಪ, ಅನಂತಮೂರ್ತಿ, ದೇವನೂರ ಮಹಾದೇವ, ಲಂಕೇಶ್, ತೇಜಸ್ವಿ, ಕುಂವೀ, ನಾಗತಿಹಳ್ಳಿ, ವೈದೇಹಿ, ಎಮ್ ಕೆ ಇಂದಿರಾ ಮೊದಲಾದ ಬರಹಗಾರರು ನನ್ನ ಅನುಭವದ ವ್ಯಾಪ್ತಿಗೆ ದಕ್ಕಿದ್ದು ಪುಸ್ತಕಗಳ ಓದಿನಿಂದಲೇ. ಜೊತೆಗೆ ಸಾಹಿತ್ಯದ ಓದನ್ನು ನಾನು ಯಾವತ್ತೂ ನವ್ಯ, ನವೋದಯ, ಎಡ, ಬಲ, ಬಂಡಾಯ ಎಂದು ವರ್ಗಿಕರಿಸದೆ ಓದಿದ್ದರ ಪರಿಣಾಮ ನನ್ನ ಓದಿನ ವ್ಯಾಪ್ತಿಯಲ್ಲಿ ಅನೇಕ ಬರಹಗಾರರ ಪುಸ್ತಕಗಳು ಸೇರ್ಪಡೆಯಾದವು. ಅದಕ್ಕೆಂದೇ ಅನಂತಮೂರ್ತಿ ಅವರ 'ಸಂಸ್ಕಾರ' ದಷ್ಟೇ ಭೈರಪ್ಪನವರ 'ವಂಶ ವೃಕ್ಷ' ಕೂಡ ನನಗೆ ಇಷ್ಟವಾದ ಕೃತಿ. ಅನೇಕ ಪುಸ್ತಕಗಳನ್ನು ಅತ್ಯಂತ ಆಸಕ್ತಿಯಿಂದ ಒಂದೇ ಗುಕ್ಕಿಗೆ ಓದಿಕೊಂಡು ಹೋಗಿದ್ದೇನೆ. ಇನ್ನು ಕೆಲವು ಸಂದರ್ಭಗಳಲ್ಲಿ ಆಸಕ್ತಿಯನ್ನೇ ಕೆರಳಿಸದ ಪುಸ್ತಕಗಳ ಓದನ್ನು ಅರ್ಧಕ್ಕೆ ಬಿಟ್ಟ ಉದಾಹರಣೆಯೂ ಉಂಟು. ಓದಲೇ ಬೇಕೆನ್ನುವ ಹಟದಿಂದ ನಾನು ಓದಿಗೆ ಕುಳಿತುಕೊಳ್ಳುವುದಿಲ್ಲ. ಬದಲಾಗಿ ಓದು ನನಗೆ ಅತ್ಯಂತ ಖುಷಿ ಕೊಡುವ ಅನುಭವ ಎನ್ನುವ ಮಾನಸಿಕ ಸಿದ್ಧತೆ ನನ್ನ ಪ್ರತಿ ಓದಿನ ಸಂದರ್ಭದಲ್ಲೂ ನನ್ನಲ್ಲಿ ಜಾಗೃತವಾಗಿರುತ್ತದೆ.


               ಪುಸ್ತಕಗಳ ಓದಿನ ಜೊತೆಗೆ ಸಿನಿಮಾ ಕೂಡ ನನ್ನನ್ನು ಪ್ರಭಾವಿಸಿದ ಮಾಧ್ಯಮಗಳಲ್ಲೊಂದು. ಸಿನಿಮಾ ವೀಕ್ಷಣೆ ಸಹ ನನಗೆ ಅಮ್ಮನಿಂದಲೇ ಬಂದ ಬಳುವಳಿ. ಕಪ್ಪು ಬಿಳುಪಿನ ಕಾಲದ ಸಿನಿಮಾಗಳನ್ನು ಅತ್ಯಂತ ಆಸಕ್ತಿಯಿಂದ ದೂರದರ್ಶನದ ಪರದೆಯ ಮೇಲೆ ವೀಕ್ಷಿಸುತ್ತಿದ್ದ ಅಮ್ಮನೊಂದಿಗೆ ಒಂದೆರಡು ಬಣ್ಣದ ಸಿನಿಮಾಗಳನ್ನು ದೊಡ್ಡ ಪರದೆಯ ಮೇಲೆ ನೋಡಿದ್ದು ನನ್ನ  ನೆನಪುಗಳಲ್ಲಿ ಇನ್ನು ಹಸಿರಾಗಿದೆ. ನಾನು ಶಾಲೆಗ ಹೋಗುತ್ತಿದ್ದ ದಿನಗಳಿಂದಲೂ ಸಿನಿಮಾ ಥೇಟರಿನಲ್ಲಿ ಕೆಲಸ ಮಾಡುತ್ತಿದ್ದ ಅಣ್ಣ ಅಶೋಕ ತಾನು ನೋಡಿದ ಸಿನಿಮಾಗಳನ್ನು ವರ್ಣಿಸಿ ಕಥೆ ಹೇಳುತ್ತಿದ್ದ ಸಂದರ್ಭ ನನ್ನಲ್ಲಿ ಈ ಸಿನಿಮಾದ ಕುರಿತು ಬೆರಗು ಮತ್ತು ಕುತೂಹಲ ಮೂಡುತ್ತಿತ್ತು. ನನ್ನ ಕುತೂಹಲವನ್ನು ಗುರುತಿಸಿದ ಅಣ್ಣ ಸಿನಿಮಾಗಳ ಟಿಕೇಟ್ ನ್ನು ಮನೆಗೆ ತಂದು ಕೊಟ್ಟು ನನ್ನನ್ನು ಸಿನಿಮಾ ನೋಡುವಂತೆ ಪ್ರೇರೆಪಿಸದೆ ಹೋಗಿದ್ದರೆ ನನ್ನಲ್ಲಿ ಬರವಣಿಗೆಯಂಥ ಸೃಜನಶೀಲ ಪ್ರಕ್ರಿಯೆ ಮೂಡಲು ಸಾಧ್ಯವಾಗುತ್ತಿರಲಿಲ್ಲ. ಕನ್ನಡ, ಹಿಂದಿ, ತೆಲುಗು, ತಮಿಳು ಎನ್ನುವ ತಾರತಮ್ಯವಿಲ್ಲದೆ ಕಲಾತ್ಮಕ ಕಮರ್ಷಿಯಲ್ ಎನ್ನುವ ವ್ಯತ್ಯಾಸ ತೋರುಗೊಡದೆ ನೂರಾರು ಸಿನಿಮಾಗಳನ್ನು ನಾನು ನೋಡಿದ್ದೇನೆ. ಸಿನಿಮಾವೊಂದನ್ನು ನೂರಾರು ಜನರ ಜನಜಂಗುಳಿಯ ನಡುವೆ ಕುಳಿತು ನೋಡುವುದಕ್ಕಿಂತ ಕೆಲವೇ ಕೆಲವು ಸದಭಿರುಚಿಯ ಪ್ರೇಕ್ಷಕರ ನಡುವೆ ಕುಳಿತು ನೋಡುವುದು ನನಗೆ ಅತ್ಯಂತ ಇಷ್ಟದ ಸಂಗತಿ. ಅದಕ್ಕೆಂದೇ ನನ್ನ ವಿದ್ಯಾರ್ಥಿ ಜೀವನದ ದಿನಗಳಲ್ಲಿ ನಾನು ಸಿನಿಮಾಗಳ ವೀಕ್ಷಣೆಗೆ ಅತ್ಯಂತ ಪ್ರಶಾಂತ ಸಮಯವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೆ. ಈ ಕಾರಣದಿಂದಲೇ ಸಿನಿಮಾ ಮಾಧ್ಯಮ ನನ್ನನ್ನು ಹೆಚ್ಚು  ಪ್ರಭಾವಿಸಿತು. ಜೊತೆಗೆ ನಾಯಕನ ಸಿನಿಮಾ ನೋಡುವುದಕ್ಕಿಂತ ನಿರ್ದೇಶಕನ ಸಿನಿಮಾ ನೋಡುವುದು ನನ್ನ ಆಯ್ಕೆಗಳಲ್ಲೊಂದು. ಸಿನಿಮಾ ಎಂದಾಕ್ಷಣ ನನಗೆ ಪುಟ್ಟಣ್ಣ ಕಣಗಾಲ್, ರಾಜೇಂದ್ರ ಸಿಂಗ್, ದಿನೇಶ್ ಬಾಬು, ಹೃಷಿಕೇಶ್ ಮುಖರ್ಜಿ, ಗಿರೀಶ್ ಕಾಸರವಳ್ಳಿ, ಶಂಕರ್, ಚಂದ್ರಮೌಳಿಯಂಥ ನಿರ್ದೇಶಕರು ಮೊದಲು ನೆನಪಾಗುತ್ತಾರೆ ನಂತರ ಕಲಾವಿದರು. ನಮ್ಮ ಕನ್ನಡದ ರಾಜಕುಮಾರ ಅವರಿಗಿಂತಲೂ ಕಲಾವಿದನಾಗಿ ನನಗೆ ಅನಂತನಾಗ್ ಇಷ್ಟವಾದರೆ ರಜನಿಕಾಂತ್ ಗಿಂತಲೂ ಕಮಲ್ ಹಾಸನ್ ಮೆಚ್ಚಿನ ಕಲಾವಿದ. ಶೋಲೆ, ಶಂಕರ್ ಗುರು, ರೊಬೋಟ್ ಸಿನಿಮಾಗಳು  ಹಣ ಗಳಿಕೆಯಿಂದ ಜನಪ್ರಿಯ ಸಿನಿಮಾಗಳಾಗಿರಬಹುದು. ಆದರೆ ಬ್ಲ್ಯಾಕ್, ಆಕ್ಸಿಡೆಂಟ್ ನಂತಹ ಹಣ ಗಳಿಕೆಯಲ್ಲಿ ಸೋತ ಸಿನಿಮಾಗಳು ತಮ್ಮ ಕಥಾ ಹಂದರ ಮತ್ತು ಕಲಾವಿದರ ಅಭಿನಯದಿಂದ ನನ್ನನ್ನು ಹೆಚ್ಚು ಹೆಚ್ಚು ಚಿಂತನೆಗೆ ಹಚ್ಚಿವೆ. ಸಿನಿಮಾ ಯಾವತ್ತೂ ಹಾಡು, ಹೊಡೆದಾಟ, ವಿದೇಶಿ ಚಿತ್ರೀಕರಣದಿಂದ ನನ್ನನ್ನು ಆಕರ್ಷಿಸಲಾರದು ಹಾಗೂ ಅದು ಸಮಯ ಕಳೆಯಲೆಂದು ಕುಳಿತು ನೋಡುವ ಮನೋರಂಜನಾ ಮಾಧ್ಯಮವೂ ಅಲ್ಲ. ಸಿನಿಮಾ ನಮ್ಮನ್ನು ಒಂದಿಷ್ಟು ಚಿಂತಿಸುವಂತೆ, ವಿವೇಚಿಸುವಂತೆ ಮಾಡುವ ಮತ್ತು ನಮ್ಮೊಳಗಿನ ಸಂವೇದನೆ  ಮತ್ತೆ ಮತ್ತೆ ಮರುಹುಟ್ಟು ಪಡೆಯುವಂತೆ ಪ್ರೇರೇಪಿಸುವ ಅತ್ಯಂತ ಪರಿಣಾಮಕಾರಿಯಾದ ದೃಶ್ಯ ಮಾಧ್ಯಮ. ಇಂಥ ಸೃಜನಶೀಲ ಮಾಧ್ಯಮವೊಂದು ಅಪಾತ್ರರ ಕೈಗೆ ಸಿಕ್ಕು ವಿಕಾರ ಮತ್ತು ವಿರೂಪಗೊಳ್ಳುತ್ತಿರುವಾಗ ನಾನು ಆತಂಕ, ತಲ್ಲಣ ಮತ್ತು ವೇದನೆಯಿಂದ ನರಳಿದ್ದೇನೆ.


               ಪುಸ್ತಕಗಳ ಓದು ಮತ್ತು ಸಿನಿಮಾಗಳ ವೀಕ್ಷಣೆ ನನ್ನಲ್ಲಿ ಬರವಣಿಗೆಯಂಥ ಸೃಜನಶೀಲತೆಯೊಂದು ಹುಟ್ಟು ಪಡೆಯಲು ಕಾರಣವಾದ ಬಹುಮುಖ್ಯವಾದ ಎರಡು ಸಂಗತಿಗಳು ಎನ್ನುವ ನಂಬಿಕೆ ನನ್ನದು. ಪುಸ್ತಕವೊಂದನ್ನು ಓದಿದಾಗ ಮತ್ತು ಸಿನಿಮಾವೊಂದನ್ನು ನೋಡಿದಾಗ ಮನಸ್ಸಿನ ಭಾವಕೋಶದಲ್ಲಿ ಹರಳುಗಟ್ಟುವ ವಿಚಾರಗಳನ್ನು ಅಕ್ಷರ ರೂಪಾಕ್ಕಿಳಿಸಲು ನಾನು ಹಂಬಲಿಸುತ್ತೇನೆ. ಈ ಹಂಬಲದೊಂದಿಗೆ ಆತಂಕ ಮತ್ತು ತಲ್ಲಣಗಳೂ ಜೊತೆಗೂಡಿ ಬರೆಯಲು ನನ್ನನ್ನು ಪ್ರೇರೇಪಿಸುತ್ತವೆ. ಸಾಧನೆ, ಪೂರ್ಣ ಸತ್ಯ, ಅನಾವರಣ, ಮನದ ಮಾತು, ಮಹಾಚೇತನ ಮತ್ತು ಅನ್ವೇಷಣೆ ಹೀಗೆ ಇದುವರೆಗೆ ನಾನು ಬರೆದ ಪುಸ್ತಕಗಳ ಸಂಖ್ಯೆ ಆರು. ಬರವಣಿಗೆ ಅದು ನನ್ನ ಖಾಸಗಿ ವಿಷಯ ಮತ್ತು ವೈಯಕ್ತಿಕವಾಗಿ ಖುಷಿ ಕೊಡುವ ಸಂಗತಿ ಎನ್ನುವ ಪ್ರಜ್ಞೆ ನನ್ನಲ್ಲಿ ಸದಾಕಾಲ ಜಾಗೃತವಾಗಿದೆ. ನಾನು ಬರೆದದ್ದನ್ನು ಬೇರೆಯವರು ಓದಬೇಕೆನ್ನುವ ಹಠಮಾರಿತನದ ಧೋರಣೆಯಾಗಲಿ ಮತ್ತು ಸಾಹಿತ್ಯ ಲೋಕದ ವಿಮರ್ಶಕರು ಮೆಚ್ಚಬೇಕೆನ್ನುವ ಆಸಕ್ತಿಯಾಗಲಿ ನನಗಿಲ್ಲ. ನನ್ನ ಬರವಣಿಗೆ ಸಮಾಜ ಪರಿವರ್ತನೆಗೆ ಎನ್ನುವ ಒಣ ಆದರ್ಶವಂತೂ ಮೊದಲೇ ನನ್ನಲ್ಲಿಲ್ಲ. ಬರವಣಿಗೆಯಿಂದಲೇ ಬದುಕನ್ನು ರೂಪಿಸಿಕೊಳ್ಳುವಷ್ಟು ದೊಡ್ಡ ಬರಹಗಾರನೂ ನಾನಲ್ಲ. ಈ ಎಲ್ಲವೂಗಳಿಗಿಂತ ಭಾಷೆಯೊಂದು ಅಪಾಯವನ್ನು ಎದುರಿಸುತ್ತಿರುವ ಸಂದರ್ಭ ಓದು  ಮತ್ತು ಬರವಣಿಗೆಯ ಮೂಲಕ ಕನ್ನಡವನ್ನು ಹೃದಯದ ಭಾಷೆಯಾಗಿ ಮಾಡಿಕೊಂಡಿರುವ ತೃಪ್ತಿ ಮತ್ತು ಖುಷಿ ನನಗಿದೆ.

ಕೊನೆಯ ಮಾತು 



               ಓದು ಮತ್ತು ಸಿನಿಮಾ ವೀಕ್ಷಣೆಯ ಜೊತೆಗೆ ನನ್ನಲ್ಲಿ ಬರವಣಿಗೆಯಂಥ ಸೃಜನಶೀಲತೆಯೊಂದು ಅಭಿವ್ಯಕ್ತಗೊಳ್ಳಲು ಕಾರಣವಾದ ಅನೇಕ ಸಂಗತಿಗಳಿವೆ. ನನಗೆ ಗಾಂಧಿಯಷ್ಟೇ ದಿನಬೆಳಗಾದರೆ ಎದುರಾಗುವ ಪೇಪರ್ ಮಾರುವ ಹುಡುಗ  ಕೂಡ ಬರೆಯಲು ಪ್ರೇರಣೆಯಾಗಬಲ್ಲ. ಕಲಾಮ್ ರಷ್ಟೇ ಬೀದಿ ಬದಿಯಲ್ಲಿ ಮಗನ ಭವಿಷ್ಯದ ಕನಸು ಕಾಣುತ್ತ ಚಪ್ಪಲಿ ಹೊಲಿಯುತ್ತ ಕುಳಿತ ತಂದೆಯೊಬ್ಬ ಸ್ಪೂರ್ತಿಯಾಗಬಲ್ಲ. ಭೈರಪ್ಪನವರ  ಕಾದಂಬರಿಗಳಷ್ಟೇ ತಳ್ಳು ಗಾಡಿಯಲ್ಲಿ ತರಕಾರಿ ಮಾರುವ ವೃದ್ಧ ನನ್ನೊಳಗೆ ಸಂವೇದನೆ ಹುಟ್ಟಿಸಬಲ್ಲ. ಜಿಎಸ್ಸೆಸ್ ಕಾವ್ಯದ ಓದಿನಷ್ಟೇ ಚಿಂದಿ ಆಯುವ ಹೆಂಗಸು ಕೂಡ ನನ್ನನ್ನು ಸೂಕ್ಷ್ಮಜ್ಞನನ್ನಾಗಿಸಬಲ್ಲಳು. ಹೀಗೆ ಬದುಕಿನ ಪ್ರತಿ ಘಳಿಗೆ ಎದುರಾಗಿ ನನ್ನೊಳಗೆ ಸೃಜನಶೀಲತೆಯ ಸೆಲೆ ಜಿನುಗಲು ಕಾರಣರಾದವರೆಲ್ಲರಿಗೂ ನಾನು ಋಣಿಯಾಗಿದ್ದೇನೆ.


-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 


    

No comments:

Post a Comment