ಇತ್ತೀಚಿನ ದಿನಗಳಲ್ಲಿ ಅಸಹಿಷ್ಣುತೆ ಎನ್ನುವುದು ಅತ್ಯಂತ ವ್ಯಾಪಕವಾಗಿ ಚರ್ಚೆಗೆ ಗ್ರಾಸವಾದ ಪದವಾಗಿದೆ. ಸ್ವಾತಂತ್ರ್ಯಾ ನಂತರ ಭಾರತದಲ್ಲಿ ಕಳೆದ ಅರವತ್ತು ವರ್ಷಗಳಿಂದ ಹೀಗೆ ಪ್ರಧಾನ ಭೂಮಿಕೆಯಲ್ಲಿ ಕಾಣಿಸಿಕೊಳ್ಳದಿದ್ದ ಈ ಅಸಹಿಷ್ಣುತೆ ಈಗ ಚರ್ಚೆ, ಸಂವಾದ ಮತ್ತು ಸಂಘರ್ಷದ ಮೂಲಕ ನಮ್ಮಗಳ ಬದುಕನ್ನು ಪ್ರವೇಶಿಸಿದೆ. ದಿನನಿತ್ಯ ಬೆಳಗಾದರೆ ಸುದ್ದಿ ಮಾಧ್ಯಮಗಳಲ್ಲಿ ಈ ಅಸಹಿಷ್ಣುತೆಯದೆ ಮಾತು ಮತ್ತು ಚರ್ಚೆ. ಈ ಅಸಹಿಷ್ಣುತೆ ಇದ್ದಕ್ಕಿದ್ದಂತೆ ಹುಟ್ಟಿಕೊಂಡ ಹೊಸ ಪರಿಕಲ್ಪನೆಯಾಗಲಿ ಅಥವಾ ಪರಿಭಾಷೆಯಾಗಲಿ ಅಲ್ಲ. ನೂರಾರು ವರ್ಷಗಳ ಕಾಲ ಕೇವಲ ಜಾತಿಗೆ ಮಾತ್ರ ಸೀಮಿತವಾಗಿದ್ದ ಈ ಪದ ಜಾಗತೀಕರಣ ಮತ್ತು ಆಧುನೀಕರಣದ ಪರಿಣಾಮ ತನ್ನ ವ್ಯಾಪ್ತಿಯನ್ನು ಜಾತಿಯಿಂದ ಧರ್ಮಕ್ಕೆ ಹಿಗ್ಗಿಸಿಕೊಂಡಿದೆ. ಹಿಂದೆಯೆಲ್ಲ ಗ್ರಾಮೀಣ ಪ್ರದೇಶಗಳಲ್ಲಿ ಮುಂದುವೆರೆದ ಜಾತಿಗೆ ಸೇರಿದ ಜನರು ಹಿಂದುಳಿದ ಜಾತಿಯವರನ್ನು ಒಂದಿಷ್ಟು ಹೆಚ್ಚೇ ಎನ್ನುವಷ್ಟು ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದ ಮತ್ತು ಅವಮಾನಿಸುತ್ತಿದ್ದ ಹಾಗೂ ಕೀಳಾಗಿ ಕಾಣುತ್ತಿದ್ದ ಸನ್ನಿವೇಶಗಳು ಮತ್ತು ಸಂದರ್ಭಗಳಿಗೆ ನಾವುಗಳು ಸಾಕ್ಷಿಯಾಗಿದ್ದುಂಟು. ಒಂದರ್ಥದಲ್ಲಿ ಅದು ಅಸಹಿಷ್ಣುತೆ ಅಲ್ಲದೆ ಬೇರೇನಲ್ಲ. ಶಿಕ್ಷಣ ಮತ್ತು ನಗರೀಕರಣದ ಪರಿಣಾಮ ಇವತ್ತು ನಮ್ಮ ಸಾಮಾಜಿಕ ಬದುಕಿನಲ್ಲಿ ಸಾಕಷ್ಟು ಸ್ಥಿತ್ಯಂತರಗಳಾಗಿ ನಾವುಗಳು ಬದುಕುವ ರೀತಿ ನೀತಿಗಳು ಬದಲಾಗಿವೆ. ಜಾಗತೀಕರಣ ನಮ್ಮ ನಮ್ಮ ಊರುಗಳಿಗೆ ಕಾಲಿಟ್ಟ ನಂತರವಂತೂ ನಾವು ವಾಸಿಸುತ್ತಿರುವ ನಾಲ್ಕು ಗೋಡೆಗಳ ಮನೆಗಳಲ್ಲೇ ಪರಸ್ಪರ ಅಪರಿಚಿತರಾಗುತ್ತಿರುವಾಗ ನಮ್ಮ ನೆರೆಯ ಮನೆಯಲ್ಲೋ ಇಲ್ಲವೇ ನಮ್ಮ ಊರಿನಲ್ಲೋ ಯಾರು ಹೇಗೆ ಬದುಕುತ್ತಿರುವರು ಮತ್ತು ಏನನ್ನು ತಿನ್ನುತ್ತಿರುವರು ಎಂದು ವಿಚಾರಿಸುವಷ್ಟು ಸಮಯ ಹಾಗೂ ವ್ಯವಧಾನವಾದರೂ ನಮಗೆಲ್ಲಿದೆ. ಪರಿಸ್ಥಿತಿ ಹೀಗಿರುವಾಗ ಈ ಅಸಹಿಷ್ಣುತೆ ಕುರಿತು ಗಲಭೆ ಮತ್ತು ಪುಕಾರು ಎಬ್ಬಿಸುತ್ತಿರುವವರಲ್ಲಿ ಹೆಚ್ಚಿನವರು ಈ ಬರಹಗಾರರು ಮತ್ತು ಸೋಕಾಲ್ಡ್ ಬುದ್ಧಿಜೀವಿಗಳು. ಇವರೊಂದಿಗೆ ನಮ್ಮನ್ನಾಳುವ ರಾಜಕಾರಣಿಗಳೂ ಜೊತೆಗೂಡಿರುವುದರಿಂದ ಅಸಹಿಷ್ಣುತೆಯ ಚರ್ಚೆಗೆ ವ್ಯಾಪಕ ಪ್ರಚಾರ ದೊರೆಯುತ್ತಿದೆ. ದಿನನಿತ್ಯದ ಬದುಕೇ ಒಂದು ಸವಾಲು ಮತ್ತು ಬಹುದೊಡ್ಡ ಸಮಸ್ಯೆಯಾಗಿ ಕುಳಿತಿರುವಾಗ ಭಾರತದ ಬಹುಸಂಖ್ಯಾತ ಬಡ ಮತ್ತು ಮಧ್ಯಮ ವರ್ಗದವರಿಗೆ ಈ ಅಸಹಿಷ್ಣುತೆ ಕುರಿತು ಚರ್ಚಿಸುವ ಮತ್ತು ಸಂವಾದಕ್ಕಿಳಿಯುವ ತಾಳ್ಮೆಯಾಗಲಿ ಇಲ್ಲವೇ ಆಸಕ್ತಿಯಾಗಲಿ ಅವರಲ್ಲಿಲ್ಲ.
ಅಸಹಿಷ್ಣುತೆ ಮತ್ತು ಸಾಹಿತ್ಯ
ಅಸಹಿಷ್ಣುತೆಯನ್ನು ವ್ಯಾಪಕ ಚರ್ಚೆಗೆ ಒಳಪಡಿಸಿದವರಲ್ಲಿ ಬರಹಗಾರರು ಪ್ರಮುಖರು. ಹೀಗೆ ಇಂಥದ್ದೊಂದು ವಿಷಯವನ್ನು ಚರ್ಚೆಗೆ ಎತ್ತಿಕೊಳ್ಳಲು ಪ್ರಸ್ತುತ ಪರಿಸ್ಥಿತಿ ಎಷ್ಟು ಅನಿವಾರ್ಯಯಾಗಿತ್ತು ಎನ್ನುವುದಕ್ಕಿಂತ ನಮ್ಮ ಸಾಹಿತ್ಯ ಕ್ಷೇತ್ರದಲ್ಲಿನ ಎಡಪಂಥೀಯ ಮತ್ತು ಬಲಪಂಥೀಯ ಎನ್ನುವ ಈ ಎರಡು ಗುಂಪುಗಳೇ ಚರ್ಚೆಯ ಹಿಂದಿನ ಪ್ರಬಲ ಕಾರಣಗಳು ಎನ್ನುವ ಸಂಗತಿ ನಿರ್ವಿವಾದ. ಚರ್ಚೆಗೆ ಅವರಿಗೊಂದು ವಿಷಯ ಬೇಕು. ಅದು ದೇಶದ ಅಖಂಡತೆಯನ್ನಾಗಲಿ ಇಲ್ಲವೇ ಭದ್ರತೆಯನ್ನಾಗಲಿ ಸಡಿಲಗೊಳಿಸಲಿ, ಜನ ಸಮುದಾಯವನ್ನು ಸೀಳಿ ಇಬ್ಭಾಗವಾಗಿಸಲಿ, ರಾಷ್ಟ್ರದ ಆರ್ಥಿಕತೆಗೆ ದೊಡ್ಡ ಪೆಟ್ಟು ಬೀಳಲಿ ಆ ಕುರಿತು ಅವರೆಂದೂ ಚಿಂತಿಸಲಾರರು. ಮೊನ್ನೆ ಧಾರವಾಡದಲ್ಲಿ ನಡೆದ ಸಾಹಿತ್ಯ ಸಂಭ್ರಮದಲ್ಲಿ ನಮ್ಮ ಬರಹಗಾರರ ಚರ್ಚೆಗೆ ಹೆಚ್ಚು ಗ್ರಾಸವಾಗಿದ್ದು ಈ ಅಸಹಿಷ್ಣುತೆಯೇ. ಕೆಲವು ಲೇಖಕರು ಚರ್ಚೆಯ ಜೊತೆಗೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ತಮಗೆ ದೊರೆತ ಪ್ರಶಸ್ತಿಯನ್ನೇ ಹಿಂತಿರುಗಿಸಿ ಇತರರಿಗೆ ಮಾದರಿಯೂ ಮತ್ತು ಅನೇಕರ ಟೀಕೆಗೂ ಏಕಕಾಲಕ್ಕೆ ಒಳಗಾಗಬೇಕಾಯಿತು. ಹೀಗೆ ಸಾಹಿತ್ಯವಲಯ ಅಸಹಿಷ್ಣುತೆಯನ್ನು ವ್ಯಾಪಕ ಚರ್ಚೆಗೆ ಒಳಪಡಿಸುತ್ತಿರುವ ಸಂದರ್ಭದಲ್ಲಿ ಬರಹಗಾರರ ಈ ನಡೆ ಅನೇಕ ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದೆ. ಹೀಗೆ ಪ್ರಶಸ್ತಿಯನ್ನು ಮರಳಿಸುತ್ತಿರುವ ಲೇಖಕರು ಅಸಹಿಷ್ಣುತೆಯನ್ನು ವಿರೋಧಿಸುತ್ತಿರುವರೋ ಇಲ್ಲವೇ ಪ್ರಭುತ್ವವನ್ನೋ ಎನ್ನುವ ಅನುಮಾನ ಹಲವರದು. ಏಕೆಂದರೆ ಪ್ರಶಸ್ತಿಯನ್ನು ಹಿಂತಿರುಗಿಸಿದ ಲೇಖಕರಲ್ಲಿ ಬಹುಪಾಲು ಲೇಖಕರು ಎಡಪಂಥೀಯರು ಎನ್ನುವುದು ಇಲ್ಲಿ ಗಮನಿಸಬೇಕಾದ ಸಂಗತಿ. ಆದ್ದರಿಂದ ಈ ಲೇಖಕರಲ್ಲಿ ಪ್ರಭುತ್ವವನ್ನು ವಿರೋಧಿಸುವ ಭಾವನೆಯೇ ಅಧಿಕವಾಗಿದೆ ಎನ್ನುವುದು ಸ್ಪಷ್ಟವಾಗುತ್ತದೆ. ಹೀಗೆ ಪ್ರಭುತ್ವದ ವಿರೋಧವನ್ನೇ ತಮ್ಮ ಚರ್ಚೆ ಮತ್ತು ಬರವಣಿಗೆಯ ಮುಖ್ಯ ಅಜೆಂಡಾ ಮಾಡಿಕೊಂಡ ಈ ಬರಹಗಾರರು ಸಮಾಜದಲ್ಲಿನ ಇನ್ನಿತರ ಸಮಸ್ಯೆಗಳಿಗೆ ಕುರುಡಾಗುತ್ತಿರುವರು. ವಿಮರ್ಶಕ ಟಿ ಪಿ ಅಶೋಕ ತಮ್ಮ ಒಂದು ಲೇಖನದಲ್ಲಿ ಹೇಳಿದ 'ಮೋದಿ ಮೇನಿಯಾ ಅನಂತಮೂರ್ತಿ ಅವರೊಳಗಿನ ಸೃಜನಶೀಲತೆಯನ್ನೇ ಮುಕ್ಕಾಗಿಸಿತು' ಎನ್ನುವ ಮಾತು ಸತ್ಯಕ್ಕೆ ಹತ್ತಿರವಾಗಿದೆ. ಹಾಗೆಂದು ಅವರು ಎಸ್ ಎಲ್ ಭೈರಪ್ಪನವರನ್ನು ಸಮರ್ಥಿಸುತ್ತಾರೆ ಎಂದರ್ಥವಲ್ಲ. 'ಈ ದಿನಗಳಲ್ಲಿ ಭೈರಪ್ಪನವರಲ್ಲಿ ತೀರ ಮತೀಯ ಭಾವನೆಗಳೇ ತುಂಬಿರುವ ಪರಿಣಾಮ ಅವರಿಗೆ ಹಿಂದಿನಂತೆ ಸೃಜನಶೀಲ ಸಾಹಿತ್ಯ ಸೃಷ್ಟಿಸಲು ಸಾಧ್ಯವಾಗುತ್ತಿಲ್ಲ' ಎಂದು ವಿಮರ್ಶಿಸುತ್ತಾರೆ. ಹೀಗೆ ಸಾಹಿತ್ಯವಲಯದಲ್ಲಿನ ಈ ಗುಂಪುಗಾರಿಕೆಯ ಪರಿಣಾಮ ಇದೆ ಈಗ ಸಾಹಿತ್ಯ ಕ್ಷೇತ್ರವನ್ನು ಪ್ರವೇಶಿಸುತ್ತಿರುವ ಹೊಸ ಬರಹಗಾರರು ಏನನ್ನು ಬರೆಯಬೇಕೆನ್ನುವ ಗೊಂದಲದಲ್ಲಿದ್ದಂತೆ ಕಾಣುತ್ತದೆ. ಯಾವುದೇ ಒಂದು ಗುಂಪಿನೊಂದಿಗೆ ಗುರುತಿಸಿಕೊಳ್ಳದೆ ಹೋದಲ್ಲಿ ತಮ್ಮ ಬರವಣಿಗೆಗೆ ಓದುಗರು ದಕ್ಕಲಾರರು ಎನ್ನುವ ಸಂಗತಿ ಅನೇಕ ಹೊಸ ಪೀಳಿಗೆಯ ಲೇಖಕರಿಗೆ ಮನದಟ್ಟಾಗಿದೆ. ಪರಿಣಾಮವಾಗಿ ಈ ನವ ಲೇಖಕರು ಕೂಡ ಧರ್ಮ, ಅಸಹಿಷ್ಣುತೆಯ ಬೆನ್ನು ಬಿದ್ದು ಅಸಹಿಷ್ಣುತೆಯ ಚರ್ಚೆಯ ವ್ಯಾಪ್ತಿಯನ್ನು ಮತ್ತಷ್ಟು ಹಿಗ್ಗಿಸುತ್ತಿರುವರು.
ಯುವಜನರ ಭಾವನಾತ್ಮಕತೆ
ನಮ್ಮ ಇಂದಿನ ರಾಜಕಾರಣಿಗಳು ಮತ್ತು ಬರಹಗಾರರು ಯುವಜನರ ಭಾವನೆಗಳನ್ನೇ ಬಂಡವಾಳ ಮಾಡಿಕೊಂಡು ಅಸಹಿಷ್ಣುತೆಯ ವ್ಯಾಪ್ತಿಯನ್ನು ಹಿಗ್ಗಿಸುತ್ತಿರುವರು. ಒಂದು ಧರ್ಮದ ಇಲ್ಲವೇ ಸಮುದಾಯದ ವಿರುದ್ಧ ಯುವಜನರಲ್ಲಿ ಸುಲಭವಾಗಿ ದ್ವೇಷದ ಭಾವನೆಗಳನ್ನು ಬೇರೂರಿಸಬಹುದು. ಇವತ್ತು ಎಲೆಕ್ಟ್ರಾನಿಕ್ ಮಾಧ್ಯಮದ ಮೂಲಕ ದೇಶದ ಯುವಜನತೆ ತಮಗಾಗದ ಧರ್ಮ ಮತ್ತು ಸಮುದಾಯಗಳ ವಿರುದ್ಧ ಬಹುದೊಡ್ಡ ಸಮರವನ್ನೇ ಸಾರಿರುವ ಉದಾಹರಣೆ ನಮ್ಮೆದುರಿಗಿದೆ. ಧರ್ಮದಿಂದಲೇ ಒಂದು ರಾಷ್ಟ್ರವನ್ನು ಕಟ್ಟುವುದು ಸಾಧ್ಯವಾಗುವಂತಿದ್ದರೆ ೧೯೭೧ ರಲ್ಲಿ ಪೂರ್ವಪಾಕಿಸ್ತಾನ ತನ್ನ ರಾಷ್ಟ್ರದಿಂದ ಹೊರಬಂದು ಹೊಸ ರಾಷ್ಟ್ರವೊಂದು ಉದಯಿಸುವ ಅನಿವಾರ್ಯತೆ ಎದುರಾಗುತ್ತಿರಲಿಲ್ಲ. ವಿಶ್ಲೇಷಣೆ ಮತ್ತು ವಿಮರ್ಶೆ ರಹಿತ ಮನಸ್ಥಿತಿಯ ಯುವಜನರು ನಮ್ಮ ಬುದ್ಧಿಜೀವಿಗಳ, ಧಾರ್ಮಿಕ ಮುಖಂಡರ ಹಾಗೂ ರಾಜಕೀಯ ನಾಯಕರ ಮಾತುಗಳನ್ನೇ ನಿಜವೆಂದು ನಂಬಿ ತಮ್ಮನ್ನು ರಾಷ್ಟ್ರ ವಿಭಜಕ ಕ್ರಿಯೆಯಲ್ಲಿ ತೊಡಗಿಸಿಕೊಳ್ಳುತ್ತಿರುವರು. ಅವಿದ್ಯಾವಂತ ಯುವಕರಿಗಿಂತಲೂ ಸುಶಿಕ್ಷಿತ ಯುವಕರು ರಾಷ್ಟ್ರ ವಿಭಜಕ ಕ್ರಿಯೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿರುವುದು ದುರಂತದ ಸಂಗತಿ. ಕೆಲವೊಂದು ಧರ್ಮ ಮತ್ತು ಸಮುದಾಯದ ಯುವಜನತೆಗೆ ದೇಶಪ್ರೇಮಕ್ಕಿಂತ ಅವರಿಗೆ ಧರ್ಮವೇ ಮುಖ್ಯವಾಗಿ ಕಾಣಿಸುತ್ತಿದೆ. ತೀರ ಧರ್ಮಾಂಧತೆಯ ಪರಿಣಾಮ ರಾಷ್ಟ್ರದಲ್ಲಿ ಹಿಂಸಾತ್ಮಕ ವಾತಾವರಣವನ್ನು ಸೃಷ್ಟಿಸುತ್ತಿರುವುದು ಕೂಡ ಯುವಜನತೆಯೇ. ಹೀಗೆ ಯುವಜನತೆಯ ಭಾವನೆಗಳನ್ನು ತಮ್ಮ ಲಾಭಕ್ಕೆ ಉಪಯೋಗಿಸಿಕೊಳ್ಳುವ ಈ ಧಾರ್ಮಿಕ ಮುಖಂಡರುಗಳು, ರಾಜಕಾರಣಿಗಳು ಮತ್ತು ಬುದ್ಧಿಜೀವಿಗಳು ಅಸಹಿಷ್ಣುತೆ ನೆಪದಲ್ಲಿ ಯುಜನರನ್ನು ದಾರಿತಪ್ಪಿಸುತ್ತಿರುವರು. ಅತ್ಯಂತ ಭಾವಾವೇಶದಲ್ಲಿ ಈ ಯುವಜನತೆ ಪಾರ್ಲಿಮೆಂಟಿನ ಮೇಲೆ ದಾಳಿಯ ಸಂಚು ರೂಪಿಸಿದ ಉಗ್ರ ಅಫ್ಜಲ್ ಗುರುನ ಗಲ್ಲು ಶಿಕ್ಷೆಯ ದಿನವನ್ನು ಹುತಾತ್ಮ ದಿನವಾಗಿ ಆಚರಿಸುತ್ತಾರೆ. ಆ ಸಂದರ್ಭ ಭಾರತದ ವಿರುದ್ಧದ ಘೋಷಣೆಗಳನ್ನು ಕೂಗುತ್ತಾರೆ. ಕಾಶ್ಮೀರದ ಪ್ರತ್ಯೇಕತೆಗಾಗಿ ಒತ್ತಾಯಿಸುತ್ತಾರೆ. ಜೊತೆಗೆ ಗಾಂಧೀಜಿ ಹತ್ಯೆಯನ್ನು ಒಂದು ಗುಂಪಿನ ಯುವಕರು ಸಮರ್ಥಿಸಿಕೊಳ್ಳುವುದು ಕೂಡ ಖಂಡನೀಯ. ಆತಂಕದ ಸಂಗತಿ ಎಂದರೆ ಕೆಲವು ರಾಜಕೀಯ ಪಕ್ಷಗಳು ಯುವಜನತೆಯ ಈ ನಡೆಯನ್ನು ತಮ್ಮ ಹಿತಾಸಕ್ತಿಗಾಗಿ ಬಳಸಿಕೊಳ್ಳುತ್ತವೆ. ಬುದ್ಧಿಜೀವಿಗಳು, ರಾಜಕಾರಣಿಗಳು ವಿಶ್ವವಿದ್ಯಾಲಯದ ಕ್ಯಾಂಪಸ್ಸಿಗೆ ಭೇಟಿ ನೀಡಿ ಯುವಕರನ್ನು ಇನ್ನಷ್ಟು ಪ್ರಚೋದಿಸುವ ಮಾತನಾಡುತ್ತಾರೆ. ಇಂಥದ್ದೊಂದು ಗೂಡಾರ್ಥದ ಅರಿವಿಲ್ಲದ ಯುವಜನತೆ ತಮ್ಮದೇ ರಾಷ್ಟ್ರದ ವಿರುದ್ಧ ತಿರುಗಿಬಿದ್ದು ಹಿಂಸಾತ್ಮಕ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವರು.
ಜನಪ್ರಿಯತೆಯ ಅಸ್ತ್ರ
ಅಸಹಿಷ್ಣುತೆಯನ್ನು ಅತ್ಯಂತ ವ್ಯವಸ್ಥಿತವಾಗಿ ಬಳಸಿಕೊಂಡು ಬೆಳೆದ ಬರಹಗಾರರ ಮತ್ತು ರಾಜಕಾರಣಿಗಳ ಸಂಖ್ಯೆ ಭಾರತದಲ್ಲಿ ಬಹಳಷ್ಟಿದೆ. ಪರಿಣಾಮವಾಗಿ ಇಲ್ಲಿ ಇವರುಗಳಿಗೆ ಅಸಹಿಷ್ಣುತೆ ಎಂದಿಗೂ ಅದೊಂದು ಸಮಸ್ಯೆಯಾಗಿ ಕಾಡಿದ್ದು ತುಂಬ ಅಪರೂಪ. ಅಸಹಿಷ್ಣುತೆಯನ್ನು ಜನಪ್ರಿಯತೆಯ ಅಸ್ತ್ರವಾಗಿ ಬಳಸಿಕೊಂಡು ಈ ಬುದ್ಧಿಜೀವಿಗಳು, ರಾಜಕಾರಣಿಗಳು, ಸಾಹಿತಿಗಳು ಮತ್ತು ಸೋಕಾಲ್ಡ್ ಚಿಂತಕರು ತಮ್ಮ ತಮ್ಮ ಬದುಕನ್ನು ಹಸನಾಗಿಸಿಕೊಂಡಿದ್ದೆ ಹೆಚ್ಚು. ಜೊತೆಗೆ ಈ ಬರಹಗಾರರಿಗೆ ಬರವಣಿಗೆಗೆ ಬಂಡವಾಳದ ಕೊರತೆ ಎದುರಾದಾಗಲೆಲ್ಲ ಅವರಿಗೆ ಈ ಅಸಹಿಷ್ಣುತೆ ನೆನಪಾಗುತ್ತದೆ. ಇನ್ನು ಕೆಲವು ಲೇಖಕರು ಬರವಣಿಗೆ ಬದುಕಿನಿಂದ ಮತ್ತು ಬುದ್ಧಿಜೀವಿಗಳು ಹೋರಾಟ, ಚಳವಳಿಗಳಿಂದ ನಿವೃತ್ತರಾಗಿ ದಶಕಗಳೇ ಕಳೆದು ಹೋಗಿವೆ. ಜನರ ನೆನಪುಗಳಿಂದ ದೂರವಾಗಿರುವ ಅವರಿಗೆ ಮತ್ತೆ ಮುಖ್ಯವಾಹಿನಿಯಲ್ಲಿ ಕಾಣಿಸಿಕೊಳ್ಳಬೇಕೆನ್ನುವ ಹಂಬಲ ಮತ್ತು ಚಪಲ ಅವರನ್ನು ಈ ಅಸಹಿಷ್ಣುತೆ ಕಡೆಗೆ ಮುಖಮಾಡಿ ನಿಲ್ಲಿಸಿದೆ. ಯಾವ ಸಮಸ್ಯೆಗಳ ಪರವಾಗಿ ನಿಂತರೆ ತಾವು ಜನಪ್ರಿಯರಾಗಬಹುದು ಮತ್ತು ಜನರ ಗೌರವಾದಾರಗಳಿಗೆ ಪಾತ್ರರಾಗಬಹುದು ಎನ್ನುವ ತಿಳುವಳಿಕೆ ಇವರಿಗಿದೆ. ಅಲ್ಲದೆ ಇಂಥದ್ದೇ ನೀತಿ ಮತ್ತು ಸಿದ್ಧಾಂತವನ್ನು ತಮ್ಮ ಪಕ್ಷಗಳ ಪ್ರಣಾಳಿಕೆಯಾಗಿ ಮಾಡಿಕೊಂಡ ರಾಜಕೀಯ ಪಕ್ಷಗಳಿಗೆ ಹತ್ತಿರವಾಗಿ ಮುಂದೊಂದು ದಿನ ಕಳೆದುಹೋದ ಅಧಿಕಾರ ಮತ್ತು ಆಯಕಟ್ಟಿನ ಸ್ಥಾನವನ್ನು ಮತ್ತೆ ಮರಳಿ ಪಡೆಯಬಹುದೆನ್ನುವ ದೂರದ ಆಸೆ ಹಾಗೂ ಇರಾದೆ ಈ ಬುದ್ಧಿಜೀವಿಗಳದು. ಅದಕ್ಕೆಂದೇ ಅವರು ಸದಾಕಾಲ ಚಲಾವಣೆಯಲ್ಲಿರಲು ಮತ್ತು ಜನರ ನೆನಪುಗಳಲ್ಲಿ ಹಸಿರಾಗಿರಲು ಬಯಸುತ್ತಾರೆ. ಹೀಗಾಗಿ ಇವರುಗಳಿಗೆ ಜಾತಿ ಮತ್ತು ಧರ್ಮಗಳ ನಡುವೆ ನಡೆಯುವ ಸಣ್ಣ ಘರ್ಷಣೆಗಳು ಕೂಡ ಬಹುದೊಡ್ಡ ಸಮಸ್ಯೆಗಳಾಗಿ ಕಾಣಿಸುತ್ತವೆ. ನೆರೆಹಾವಳಿಯಿಂದಾದ ಸಮಸ್ಯೆಗಳನ್ನು ವರದಿ ಮಾಡಲು ಕಳುಹಿಸಿದ ಕನ್ನಡದ ದೊಡ್ಡ ಬರಹಗಾರರೊಬ್ಬರು ಅಲ್ಲಿನ ಜನರ ಬವಣೆಗಳನ್ನು ವರದಿ ಮಾಡುವುದಕ್ಕಿಂತ ಅವರು ಪುನಶ್ಚೇತನ ಶಿಬಿರಗಳಲ್ಲಿ ಇಂಥ ಧರ್ಮ ಮತ್ತು ಸಮುದಾಯದವರಿಗೆ ಅನ್ಯಾಯವಾಗುತ್ತಿದೆ ಎಂದು ನುಡಿಯುತ್ತಾರೆ. ಇದರರ್ಥ ಸೂತಕದ ಮನೆಯಲ್ಲೂ ಅಸಹಿಷ್ಣುತೆಯನ್ನು ಹುಡುಕುವ ಚಟ ನಮ್ಮ ಬುದ್ಧಿಜೀವಿಗಳದು.ವಿಶ್ವವಿದ್ಯಾಲಯಗಳು
ನಮ್ಮ ವಿಶ್ವವಿದ್ಯಾಲಯಗಳು ಬೋಧನೆಗಿಂತ ಧರ್ಮ ಧರ್ಮಗಳ ನಡುವೆ ಮತ್ತು ಜಾತಿ ಸಮುದಾಯಗಳ ಮಧ್ಯೆ ಬಿರುಕು ಮೂಡಿಸುವ ಕೆಲಸವನ್ನು ಅತ್ಯಂತ ವ್ಯವಸ್ಥಿತವಾಗಿ ಮಾಡುತ್ತಿವೆ. ಅಸಹಿಷ್ಣುತೆಯೊಂದು ಮೊದಲು ಹುಟ್ಟುವುದೇ ವಿಶ್ವವಿದ್ಯಾಲಯಗಳಲ್ಲಿ ಪಾಠ ಮಾಡುತ್ತಿರುವ ನಮ್ಮ ಪ್ರಭೃತಿಗಳ ಪ್ರಚೋದನೆಯಿಂದ. ವಿಶ್ವವಿದ್ಯಾಲಯಕ್ಕೆ ಕಾಲಿಟ್ಟ ತಕ್ಷಣ ನಮ್ಮ ವಿದ್ಯಾರ್ಥಿಗಳಲ್ಲಿ ಸಮಾಜವನ್ನು ಗ್ರಹಿಸುವ ರೀತಿಯೇ ಬದಲಾಗುತ್ತಿದೆ. ಅಲ್ಲಿರುವ ಪ್ರಾಧ್ಯಾಪಕರು ಪಾಠ ಮಾಡುವುದಕ್ಕಿಂತ ವಿದ್ಯಾರ್ಥಿಗಳ ಮೇಲೆ ತಾವು ನಂಬಿಕೊಂಡು ಬಂದಿರುವ ತತ್ವ ಮತ್ತು ಸಿದ್ಧಾಂತಗಳನ್ನು ಬಲವಂತವಾಗಿ ಹೇರುತ್ತಿರುವರು. ಸ್ನಾತಕೋತ್ತರ ಶಿಕ್ಷಣ ಪಡೆದ ಯುವಜನತೆ ಇವತ್ತು ನಕ್ಸಲೈಟ್ ಗುಂಪಿನೊಂದಿಗೆ ಗುರುತಿಸಿಕೊಳ್ಳುತ್ತಿರುವುದು ಮತ್ತು ಹಿಂಸಾತ್ಮಕ ಮಾರ್ಗವನ್ನು ಹಿಡಿದಿರುವುದರ ಹಿಂದೆ ವಿಶ್ವವಿದ್ಯಾಲಯಗಳ ಪ್ರಭಾವ ಸಾಕಷ್ಟಿದೆ. ವಿಶ್ವವಿದ್ಯಾಲಯಗಳ ಅದೆಷ್ಟೋ ಅಧ್ಯಾಪಕರ ಮೇಲೆ ಯುವ ವಿದ್ಯಾರ್ಥಿಗಳನ್ನು ನಕ್ಸಲೈಟ್ ಗುಂಪಿಗೆ ಸೇರಿಸುತ್ತಿರುವ ಮತ್ತು ಸೇರುವಂತೆ ಪ್ರೋತ್ಸಾಹಿಸುತ್ತಿರುವ ಕಾರಣಕ್ಕಾಗಿ ಕೇಸ್ ಗಳು ಕೂಡ ದಾಖಲಾಗಿವೆ. ಮೊನ್ನೆ ಮೊನ್ನೆ ಆತ್ಮಹತ್ಯೆ ಮಾಡಿಕೊಂಡ ರೋಹಿತ್ ವೆಮುಲಾ ದುರಂತ ನಾಯಕನಾಗಿಯೂ ಮತ್ತು ಯುವಜನತೆಗೆ ಆದರ್ಶವಾಗಿಯೂ ಪ್ರತಿಷ್ಥಾಪನೆಗೊಂಡಿದ್ದರ ಹಿಂದೆ ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರ ಪ್ರೋಚದನಕಾರಿ ಮಾತುಗಳೇ ಕಾರಣ. ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತಿನ ಮತ್ತು ದಲಿತ ಸಂಘರ್ಷ ಸಮಿತಿಯ ಸದಸ್ಯರು ಕೈ ಕೈಹಿಡಿದು ಹೊಡೆದಾಡುವ ತಾಣಗಳಾಗಿವೆ ಈ ವಿಶ್ವವಿದ್ಯಾಲಯಗಳು. ಭಾರತ ಸ್ವಾತಂತ್ರ್ಯಾ ನಂತರದ ದಿನಗಳಿಂದ ಎಡಪಂಥೀಯರ ವಿಚಾರ ಧಾರೆಯ ಪ್ರಬಲ ಶಕ್ತಿ ಕೇಂದ್ರಗಳಾಗಿದ್ದ ವಿಶ್ವವಿದ್ಯಾಲಯಗಳು ಕೇಂದ್ರದಲ್ಲಿ ಹಿಂದುತ್ವದ ಪರವಾದ ಪಕ್ಷ ಅಧಿಕಾರದ ಗದ್ದುಗೆ ಏರಿದಾಗ ಸಹಜವಾಗಿಯೇ ಅವುಗಳು ಬಲಪಂಥೀಯರ ಕಾರ್ಯಕ್ಷೇತ್ರಗಳಾಗಿ ರೂಪಾಂತರಗೊಂಡವು. ಪರಿಣಾಮವಾಗಿ ಇದುವರೆಗೂ ವಿಶ್ವವಿದ್ಯಾಲಯಗಳಂಥ ಆಯಕಟ್ಟಿನ ಸ್ಥಳಗಳಲ್ಲಿ ಕುಳಿತು ರಾಷ್ಟ್ರದ ಯುವಜನತೆಯ ನಡೆಯನ್ನು ನಿರ್ಧರಿಸುತ್ತಿದ್ದ ಎಡಪಂಥೀಯರಿಗೆ ಅಭದ್ರತೆ ಕಾಡತೊಡಗಿತು. ಇಂಥದ್ದೊಂದು ಅಭದ್ರತೆಯಿಂದ ಹೊರಬರಲು ಅವರು ಸಹಜವಾಗಿಯೇ ಅಸಹಿಷ್ಣುತೆಯನ್ನು ಒಂದು ಪ್ರಬಲ ಅಸ್ತ್ರವಾಗಿ ಉಪಯೋಗಿಸಿಕೊಳ್ಳಲಾರಂಭಿಸಿರುವರು. ಹಾಗೆಂದು ವಿಶ್ವವಿದ್ಯಾಲಯಗಳು ಈ ಎಲ್ಲ ರಾಷ್ಟ್ರ ವಿಭಜಕ ಚಿಂತನೆಗಳಿಂದ ಮುಕ್ತಿ ಹೊಂದಿ ನಮ್ಮ ವಿದ್ಯಾರ್ಥಿಗಳಿಗೆ ಶಿಸ್ತಿನಿಂದ ಪಾಠ ಮಾಡುವ ದಿನಗಳು ಮರುಕಳಿಸಿವೆ ಎಂದು ನಾವು ಸಂಭ್ರಮಪಡುವಂತಿಲ್ಲ. ಏಕೆಂದರೆ ವಿಶ್ವವಿದ್ಯಾಲಯಗಳು ಧಾರ್ಮಿಕ ಕೇಂದ್ರಗಳಾಗಿ ರೂಪಾಂತರ ಹೊಂದುವ ದಿನಗಳೇನೂ ದೂರವಿಲ್ಲ. ಕಾಲ ಚಕ್ರ ಉರಿಳಿರುವುದರಿಂದ ವಿಶ್ವವಿದ್ಯಾಲಯಗಳ ಆವರಣದೊಳಗಿನ ಚಿಂತನೆಯ ಕ್ರಮ ಬದಲಾಗಿದೆಯೇ ಹೊರತು ಅವುಗಳು ಸೋಕಾಲ್ಡ್ ಬುದ್ಧಿಜೀವಿಗಳಿಂದ ಮುಕ್ತವಾಗಿಲ್ಲ. ಈ ಲೇಖನ ಬರೆಯುತ್ತಿರುವ ಸಂದರ್ಭದಲ್ಲೇ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಗುಂಪೊಂದು ಮೂರು ವರ್ಷಗಳ ಹಿಂದೆ ಉಗ್ರ ಅಫ್ಜಲ್ ಗುರುನನ್ನು ಗಲ್ಲಿಗೆರಿಸಿದ್ದನ್ನು ಪ್ರತಿಭಟಿಸಿ ಮೆರವಣಿಗೆ ನಡೆಸಿದ ಘಟನೆಯೊಂದು ನಡೆದು ಹೋಗಿದೆ. ಭಾರತದಲ್ಲಿ ವಿದ್ಯಾರ್ಥಿ ಪ್ರತಿಭಟನೆಗಳು ಹೊಸದಲ್ಲವಾದರೂ ಹೀಗೆ ವಿದ್ಯಾರ್ಥಿಗಳು ಪ್ರತಿಭಟಿಸುತ್ತಿರುವುದಕ್ಕೆ ಕಾರಣವಾದ ಹಿನ್ನೆಲೆ ಅತಿ ಮುಖ್ಯ ಎನಿಸಿಕೊಳ್ಳುತ್ತದೆ. ರಾಷ್ಟ್ರೀಯತೆಗೆ ಮಾರಕವಾಗುವ ಇಂಥ ಪ್ರತಿಭಟನೆಗಳನ್ನು ನಿಯಂತ್ರಿಸದೆ ಇರುವುದು ವಿಶ್ವವಿದ್ಯಾಲಯಗಳನ್ನು ಸಂಶಯದ ದೃಷ್ಟಿಯಿಂದ ನೋಡುವಂತಾಗುತ್ತದೆ. ಭಿನ್ನ ಸೈದ್ಧಾಂತಿಕ ಬೌದ್ಧಿಕ ಸಂಘರ್ಷದ ಮೂಲಕವೇ ಹೊಸ ಹೊಸ ಚಿಂತನೆಗಳು ಮೊಳೆಯಲು ಸಾಧ್ಯ ಎನ್ನುವ ಮಾತು ಒಪ್ಪಿಕೊಳ್ಳುವಂಥದ್ದು ಹಾಗೆಂದು ಉಗ್ರನ ಗಲ್ಲುಶಿಕ್ಷೆಯನ್ನೇ ಪ್ರತಿರೋಧಿಸುವುದನ್ನು ಭಿನ್ನ ಸೈದ್ಧಾಂತಿಕ ಸಂಘರ್ಷ ಎನ್ನಬಹುದೇ?
ಬಹುತ್ವದ ಭಾರತ
ಭಾರತ ವೈವಿಧ್ಯಮಯ ಸಂಸ್ಕೃತಿ ಮತ್ತು ಸಾಮಾಜಿಕ ಜೀವನವನ್ನು ಒಳಗೊಂಡಿರುವ ಬಹು ವಿಶಿಷ್ಠ ರಾಷ್ಟ್ರ. ಜೊತೆಗೆ ವಿಭಿನ್ನ ಧರ್ಮೀಯರು ಮತ್ತು ಸಮುದಾಯಗಳು ಒಟ್ಟಾಗಿ ಬಾಳಲು ಅವಕಾಶ ಒದಗಿಸಿರುವ ವಿಶ್ವದ ಬಹುದೊಡ್ಡ ಪ್ರಜಾಪ್ರಭುತ್ವವನ್ನು ಹೊಂದಿರುವ ದೇಶ ಎನ್ನುವ ಹೆಗ್ಗಳಿಕೆ ಬೇರೆ. ಧರ್ಮ, ಜಾತಿ, ಭಾಷೆ, ಸಂಸ್ಕೃತಿ, ಆಚಾರ ಮತ್ತು ಸಂಪ್ರದಾಯದಲ್ಲಿ ನಮ್ಮದು ಬಹುತ್ವದ ಭಾರತ. ಇಲ್ಲಿ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಜನರ ಬದುಕಿನ ರೀತಿ ನೀತಿಗಳು, ಸಂಪ್ರದಾಯ, ಮಾತನಾಡುವ ಭಾಷೆ, ಜಾತಿ ಬೇರೆ ಬೇರೆಯಾಗಿವೆ. ಭಾರತದಲ್ಲಿ ಬಹುಸಂಖ್ಯಾತ ಹಿಂದು ಧರ್ಮೀಯರಿದ್ದರೂ ಇಲ್ಲಿ ಅಲ್ಪಸಂಖ್ಯಾತರೆಂದೇ ಗುರುತಿಸಲ್ಪಡುತ್ತಿರುವ ಇಸ್ಲಾಂ, ಕ್ರೈಸ್ತ, ಜೈನ, ಬೌದ್ಧ ಧರ್ಮೀಯರಿಗೂ ನೆಮ್ಮದಿಯ ಬದುಕಿಗೆ ಅವಕಾಶಗಳಿವೆ. ಅಲ್ಪಸಂಖ್ಯಾತರಿಗೆ ಸರ್ಕಾರದ ವಿಶೇಷ ಕಾಯ್ದೆಯಡಿ ಹಲವಾರು ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗಿದೆ. ಅನ್ಯಧರ್ಮಿಯರಿಗೆ ಪ್ರತ್ಯೇಕ ಕಾಯ್ದೆ ಕಾನೂನುಗಳನ್ನು ರೂಪಿಸಿ ಎಲ್ಲ ಧರ್ಮದವರ ಭಾವನೆಗಳನ್ನು ಇಲ್ಲಿ ಗೌರವಿಸಲಾಗಿದೆ. ಈ ಪರಧರ್ಮ ಸಹಿಷ್ಣುತಾ ಭಾವನೆಯ ಕಾರಣದಿಂದಲೇ ಭಾರತದ ನೆಲದಲ್ಲಿ ಮತಾಂತರದ ಚಟುವಟಿಕೆಗಳು ಯಾವ ಅಡೆತಡೆಗಳಿಲ್ಲದೆ ನಿರಾತಂಕವಾಗಿ ನಡೆಯುತ್ತಿವೆ. ಹಿಂದುಳಿದ ಸಮುದಾಯದವರನ್ನು ಮತ್ತು ಆರ್ಥಿಕವಾಗಿ ದುರ್ಬಲರಾದವರನ್ನು ಒಂದಿಷ್ಟು ಹಣದ ಇಲ್ಲವೇ ಉದ್ಯೋಗದ ಆಮೀಷವೊಡ್ಡಿ ಮತಾಂತರಿಸುವ ಪ್ರಯತ್ನ ಬಹಳ ಹಿಂದಿನಿಂದಲೂ ನಡೆದುಕೊಂಡು ಬರುತ್ತಿದೆ. ಇಂಥ ಪ್ರಯತ್ನಗಳಿಗೆ ಪ್ರತಿರೋಧ ತೋರಿದಾಗ ಇಲ್ಲವೇ ವಿರೋಧಿಸಿದಾಗ ಅದನ್ನು ಮತಾಂಧತೆ ಮತ್ತು ಅಸಹಿಷ್ಣುತೆ ಎಂದು ಅಪಪ್ರಚಾರ ಮಾಡಿ ದೇಶದ ಒಂದು ಧರ್ಮದ ಜನರ ಕುರಿತು ಇತರರಲ್ಲಿ ಅಸಹನೀಯ ಭಾವನೆಯನ್ನು ಮೂಡಿಸುವ ವ್ಯವಸ್ಥಿತ ಹುನ್ನಾರ ನಮ್ಮ ಬುದ್ಧಿಜೀವಿಗಳದು. ಹೀಗೆ ಅಪಪ್ರಚಾರ ಮಾಡುವವರು ವಿಶ್ವದ ಯಾವ ದೇಶದಲ್ಲಿ ಹೀಗೆ ಬಹುತ್ವವು ಸಾವಿರಾರು ವರ್ಷಗಳಿಂದ ಜೀವಂತವಾಗಿದೆ ಮತ್ತು ಅನ್ಯಧರ್ಮ ಸಹಿಷ್ಣುತೆಯನ್ನು ಇದುವರೆಗೂ ಜತನದಿಂದ ಕಾಪಿಟ್ಟುಕೊಂಡು ಬಂದ ದೇಶ ಭಾರತ ಬಿಟ್ಟರೆ ಬೇರೆ ಯಾವುದಿದೆ ಎಂದು ಉತ್ತರಿಸಲಿ.
ಭಾರತದ ರಾಜಕಾರಣ
ಭಾರತ ಬಹುತ್ವದ ರಾಷ್ಟ್ರವಾಗಿರುವುದರಿಂದ ಇಲ್ಲಿ ಪ್ರಜಾಪ್ರಭುತ್ವವಿದೆ ಮತ್ತು ಈ ಕಾರಣದಿಂದ ಇಲ್ಲಿ ಅನೇಕ ರಾಜಕೀಯ ಪಕ್ಷಗಳು ಅಸ್ತಿತ್ವದಲ್ಲಿವೆ. ರಾಷ್ಟ್ರ ಮಟ್ಟದ ರಾಜಕೀಯ ಪಕ್ಷಗಳು ಮಾತ್ರವಲ್ಲದೆ ಪ್ರಾದೇಶಿಕ ಪಕ್ಷಗಳು ಸಹ ಭಾರತದ ರಾಜಕಾರಣದಲ್ಲಿ ಗಮನಾರ್ಹ ಪಾತ್ರವಹಿಸುತ್ತಿವೆ. ಜೊತೆಗೆ ಯಾವ ಪಕ್ಷಗಳಿಗೂ ಅಂಟಿಕೊಳ್ಳದೆ ವ್ಯಕ್ತಿಯೋರ್ವ ಪಕ್ಷೇತರನಾಗಿ ಸ್ಪರ್ಧಿಸುವ ಆ ಮೂಲಕ ಭಾರತದ ಕಾರ್ಯಾಂಗದಲ್ಲಿ ಪಾಲ್ಗೊಳ್ಳುವ ಅವಕಾಶ ಇಲ್ಲಿದೆ. ಹೀಗೆ ಭಾರತದ ರಾಜಕಾರಣ ಪ್ರಜಾಪ್ರಭುತ್ವದ ಕಾರಣದಿಂದ ಮುಕ್ತ ಸ್ವಾತಂತ್ರ್ಯವನ್ನು ಹೊಂದಿ ತನ್ನ ಅಸ್ತಿತ್ವವನ್ನು ಕಟ್ಟಿಕೊಳ್ಳುವ ವಿಪುಲ ಅವಕಾಶವನ್ನು ಹೊಂದಿದೆ. ಆದರೆ ಈ ವಿಪುಲ ಅವಕಾಶ ಮತ್ತು ಮುಕ್ತ ಸ್ವಾತಂತ್ರ್ಯ ನಮ್ಮ ರಾಜಕಾರಣವನ್ನು ಭ್ರಷ್ಟಾಚಾರವಾಗಿಯೂ ಹಾಗೂ ಜನರು ಅದರ ಮೇಲಿಟ್ಟ ಭರವಸೆಯನ್ನು ಕಳೆದುಕೊಳ್ಳುವಂತೆಯೂ ಮಾಡಿವೆ. ಏಕೆಂದರೆ ಈ ರಾಜಕಾರಣಿಗಳು ತಮಗೆ ದೊರೆತ ಮುಕ್ತ ಸ್ವಾತಂತ್ರ್ಯವನ್ನು ತಮ್ಮ ವೈಯಕ್ತಿಕ ಹಿತಾಸಕ್ತಿಗಾಗಿ ಬಳಸಿಕೊಳ್ಳುತ್ತಿರುವರು. ಧರ್ಮ ಧರ್ಮದ ನಡುವೆ ಮತ್ತು ಜಾತಿ ಸಮುದಾಯಗಳ ನಡುವೆ ಬಹುದೊಡ್ಡ ಕಂದಕವನ್ನು ನಿರ್ಮಿಸಿ ಆ ಮೂಲಕ ತಮ್ಮ ರಾಜಕಾರಣದ ಬದುಕನ್ನು ಕಟ್ಟಿಕೊಂಡ ರಾಜಕೀಯ ನಾಯಕರುಗಳಿಗೆ ಇಲ್ಲಿ ಕೊರತೆಯಿಲ್ಲ. ಧರ್ಮ ಮತ್ತು ಜಾತಿಗಳ ನಡುವಣ ಅಸಹಿಷ್ಣುತೆಯನ್ನು ತಮ್ಮ ರಾಜಕೀಯ ಬದುಕನ್ನು ಹಸನಾಗಿಸಿಕೊಳ್ಳಲು ವ್ಯವಸ್ಥಿತವಾಗಿ ದುಡಿಸಿಕೊಂಡ ರಾಜಕಾರಣಿಗಳೇ ಇಲ್ಲಿ ಹೆಚ್ಚು. ಆಳುವ ಪಕ್ಷ ಮತ್ತು ವಿರೋಧ ಪಕ್ಷಗಳು ಜೊತೆಗೂಡಿ ದೇಶದ ಅಭಿವೃದ್ಧಿಗಾಗಿ ಚಿಂತಿಸಿದ್ದು ಮತ್ತು ದುಡಿದದ್ದು ತುಂಬ ವಿರಳ. ಸಮಸ್ಯೆ ಮತ್ತು ಸಂಘರ್ಷಗಳಿಂದ ಮುಕ್ತವಾದ ಸಮಾಜವನ್ನು ಅವರೆಂದೂ ಬಯಸಲಾರರು. ಅದಕ್ಕೆಂದೇ ಪಾರ್ಲಿಮೆಂಟಿನ ಮೇಲೆ ದಾಳಿಯ ಸಂಚು ರೂಪಿಸಿದ ಉಗ್ರನನ್ನು ಸಹ ಇವರು ಕರುಣೆಯ ದೃಷ್ಟಿಯಿಂದ ನೋಡುತ್ತಾರೆ. ಗಲ್ಲು ತಡೆಯುವಂತೆ ಮನವಿ ಮಾಡುತ್ತಾರೆ ಆ ಮೂಲಕ ತಮ್ಮದೇ ವೋಟ್ ಬ್ಯಾಂಕೊಂದನ್ನು ಸೃಷ್ಟಿಸಿಕೊಳ್ಳುತ್ತಾರೆ. 'ಪ್ರಭುತ್ವಗಳು ಧರ್ಮದ ಹೆಸರೆತ್ತುವುದೇ ತನ್ನ ದಮನಕಾರಿ ಮತ್ತು ಅಪ್ರಾತಿನಿಧಿಕವಾದ ಆಡಳಿತವನ್ನು ಸಮರ್ಥಿಸಿಕೊಳ್ಳಲು' ಎಂಬ ಎಡ್ವರ್ಡ್ ಸಯೀದ್ ನ ಚಿಂತನೆಯನ್ನು ನಮ್ಮ ರಾಜಕಾರಣಿಗಳು ಅರ್ಥಮಾಡಿಕೊಳ್ಳಬೇಕು.
No comments:
Post a Comment