Monday, May 23, 2016

ಸಂಬಂಧಗಳು (ಕಥೆ)

           
(ಲೇಖನಗಳನ್ನು ಬರೆಯುವ ನನಗೆ ಕಥೆ ಬರೆಯುವುದು ಕಷ್ಟದ ಕೆಲಸ. ಒಂದರ್ಥದಲ್ಲಿ ಬರಹಗಾರನ ನಿಜವಾದ ಸೃಜನಶೀಲತೆ ಪರೀಕ್ಷೆಗೆ ಒಳಗಾಗುವುದು ಕಥೆಯ ರಚನೆಯಲ್ಲಿ. ಅನೇಕ ಬರಹಗಾರರು ಕಥಾ ಪ್ರಕಾರವನ್ನು ಬರವಣಿಗೆಯ ಅಭಿವ್ಯಕ್ತಿ ಮಾಧ್ಯಮವಾಗಿ ಮಾಡಿಕೊಂಡು ಉತ್ಕೃಷ್ಟ ಸಾಹಿತ್ಯವನ್ನು ರಚಿಸಿದ ಉದಾಹರಣೆ ಕನ್ನಡದಲ್ಲಿ ಸಾಕಷ್ಟಿದೆ. ಮಾಸ್ತಿಯವರು ಕಥಾ ಪ್ರಕಾರಕ್ಕೆ ಹೊಸ ಭಾಷ್ಯ ಬರೆದು ತಮ್ಮ ನಂತರದ ಅನೇಕ ಬರಹಗಾರರಿಗೆ ಮೇಲ್ಪಂಕ್ತಿ ಹಾಕಿಕೊಟ್ಟರು. ಲಂಕೇಶ್, ಅನಂತಮೂರ್ತಿ, ತೇಜಸ್ವಿ, ದೇವನೂರು ಅವರ ಕಥೆಗಳಿಂದ ಕನ್ನಡದಲ್ಲಿ ಕಥಾ ಸಾಹಿತ್ಯ ಹೊಸದೊಂದು ಮಾರ್ಗಕ್ಕೆ ತೆರೆದುಕೊಂಡಿತು. ಲೇಖಕರೋರ್ವರು ಹೇಳುವಂತೆ ಅನಂತಮೂರ್ತಿ ಅವರ ಬರವಣಿಗೆಯ ಸೃಜನಶೀಲತೆ ವ್ಯಕ್ತವಾಗಿತ್ತಿದ್ದದ್ದು ಲೇಖನಗಳಿಗಿಂತ ಕಥೆಗಳಲ್ಲೇ ಹೆಚ್ಚು ಎನ್ನುವ ಮಾತು ಕಥಾ ಪ್ರಕಾರದ ಮಹತ್ವಕ್ಕೆ ಸಾಕ್ಷಿಯಾಗಿದೆ. ಒಂದೆರಡು ಕಥೆಗಳನ್ನು ಬರೆಯುವ ಮೂಲಕ ನಾನು ಆಗಾಗ ಕಥೆಗಾರನೆಂಬ ಭ್ರಮೆಗೆ ಒಳಗಾಗಿದ್ದುಂಟು. ಅಂಥದ್ದೇ ಒಂದು ಭ್ರಮೆಯಲ್ಲಿ ಬರೆದ ಈ ಕಥೆ 'ಕರ್ಮವೀರ' ದಲ್ಲಿ ಪ್ರಕಟವಾಗಿ ಸಂತೋಷ, ಸಂಕಟ, ಭ್ರಮೆಗಳನ್ನು ಒಟ್ಟೊಟ್ಟಿಗೆ ಅನುಭವಿಸುವಂತೆ ಮಾಡಿತು).




         ಆಟೋ ಚಾಲಕನಿಗೆ ಹಣ ಕೊಟ್ಟು ಬಸ್ ಸ್ಟ್ಯಾಂಡ್ ಒಳಗಡೆ ಬಂದಾಗ ಗಡಿಯಾರದ ಮುಳ್ಳು ಎಂಟು ಗಂಟೆ ತೋರಿಸುತ್ತಿತ್ತು. ರಜಾದಿನವಾದ್ದರಿಂದ ಬಸ್ ನಿಲ್ದಾಣದಲ್ಲಿ ಗದ್ದಲವಿರಲಿಲ್ಲ. ಅಣ್ಣನ ಮಕ್ಕಳಿಗಾಗಿ ಮೈಸೂರು ಪಾಕ್ ಮತ್ತು ಧಾರವಾಡದ ಸ್ಪೆಷಲ್ ಪೇಡಾ ಪ್ಯಾಕ್ ಮಾಡಿಸಿ ಅಂಗಡಿಯವನಿಗೆ ಬಸ್ ಯಾವಾಗ ಹೊರಡುವದೆಂದು ವಿಚಾರಿಸಿದೆ. ಇನ್ನೂ ಅರ್ಧ ಗಂಟೆ ಸಮಯವಿದೆಯೆಂದು ಹೇಳಿದ. ಮನೆಯಿಂದ ಬರುವಾಗ ಬರೀ ಚಹಾ ಕುಡಿದು ಬಂದಿದ್ದರಿಂದ ಹೊಟ್ಟೆ ಚುರುಗುಟ್ಟುತ್ತಿತ್ತು. ಇಲ್ಲಿಂದ ಊರಿಗೆ ಎನಿಲ್ಲವೆಂದರೂ ಮೂರು ಗಂಟೆಗಳ ಪ್ರಯಾಣ. ಊಟದ ಹೊತ್ತಿಗೆ ಮನೆ ಸೇರಬಹುದು. ಅಲ್ಲಿಯವರೆಗೂ ಹೊಟ್ಟೆ ಸಮಾಧಾನದಿಂದಿರಲು ಒಂದಿಷ್ಟು ಉಪಹಾರ ಮಾಡಿದರಾಯಿತೆಂದು ಬಸ್ ಸ್ಟ್ಯಾಂಡಿನಲ್ಲೇ ಇದ್ದ ಉಪಹಾರಗೃಹವನ್ನು ಪ್ರವೇಶಿಸಿದೆ. ಖಾಲಿಯಿದ್ದ ಟೇಬಲ್ ಸಮಿಪಿಸಿ ಮನೆಯಿಂದ ತಂದಿದ್ದ ದಿನಪತ್ರಿಕೆ ಓದುತ್ತ ಕುಳಿತೆ. `ಟಿಫಿನ್ ಏನು ಕೊಡ್ಲಿ ಸರ್'  ವೇಟರ್ ಬಂದು ಕೇಳಿದಾಗ ಓದುತ್ತಿದ್ದ ಪತ್ರಿಕೆಯಿಂದ ತಲೆ ಎತ್ತಿ ನೋಡಿದೆ. ಒಂದು ಕ್ಷಣ ಆಶ್ಚರ್ಯದಿಂದ ಎದುರಿಗೆ ನಿಂತ ವ್ಯಕ್ತಿಯನ್ನು ದಿಟ್ಟಿಸಿದೆ. ಅನುಮಾನವೇ ಇಲ್ಲ. `ರಘು ನೀನಿಲ್ಲಿ' ಅಪ್ರಯತ್ನವಾಗಿ ಶಬ್ದಗಳು ಹೊರಬಂದವು. `ಅನಂತ ಎಷ್ಟು ದಿನಗಳಾದ್ವು ನಿನ್ನ ನೋಡಿ' ರಘು ಕಣ್ಣಲ್ಲಿ ಆನಂದಭಾಷ್ಪ. ಮರುಕ್ಷಣ ಒಬ್ಬರ ಅಪ್ಪುಗೆಯಲ್ಲಿ ಇನ್ನೊಬ್ಬರು. ಎಲ್ಲರೂ ನಮ್ಮನ್ನೇ ನೋಡ್ತಿದ್ದಾರೆ ಎಂದರಿವಾದಾಗ ಇಬ್ಬರಿಗೂ ಮುಜುಗರವಾಯಿತು. `ಅನಂತ ಇಲ್ಲೇ ನನ್ನ ರೂಂ ಇದೆ ಬಾ' ಎಂದು ರಘು ಕೈ ಹಿಡಿದು ಹೊಟೆಲ್‍ನಲ್ಲೇ ಇರುವ ಒಂದು ಕೋಣೆಗೆ ಕರೆದೊಯ್ದ. ಚಾಪೆ ಹಾಸಿ ಕೂತ್ಕೊ ಎಂದು ಹೇಳಿ ಹೊರಗೆ ಹೋದ ರಘು ನನಗೆ ಪ್ರೀಯವಾದ ಉಪ್ಪಿಟ್ಟು ಕೇಸರಿಬಾತ್ ತಂದು `ತಿಂಡಿ ತಿನ್ನಲು ಬಂದವನನ್ನು ಖಾಲಿ ಹೊಟ್ಟೆಯಲ್ಲಿ ಕೂಡಿಸಿದಂಗಾಯಿತು' ಎಂದು ಉಪಚರಿಸಿದ. ಅಲ್ಲಿನ ಪರಿಸ್ಥಿತಿಗೆ ಹೊಂದಿಕೊಳ್ಳಲು ನನಗೆ ಕೆಲವು ಕ್ಷಣಗಳೇ ಬೇಕಾದವು. ಒಬ್ಬರು ಮಾತ್ರ ಇರಲು ಸಾಧ್ಯವಿರುವ ತೀರ ಇಕ್ಕಟ್ಟಾದ ಸಣ್ಣ ಕೋಣೆ. ಆದರೆ ಅಲ್ಲಿನ ವಾತಾವರಣ ಸುಮಾರು ಏಳೆಂಟು ಜನ ಆ ಕೋಣೆಯಲ್ಲಿ ವಾಸವಾಗಿದ್ದಾರೆ ಎಂದು ಹೇಳುವಂತಿತ್ತು. `ಏನಿದೆಲ್ಲ ರಘು' ಕೈಹಿಡಿದು ಸಂಕಟದಿಂದ ಕೇಳಿದೆ. `ಇದು ನನ್ನ ಬದುಕಿನ ವಾಸ್ತವ ಅನಂತ. ಯಾರಿಗೂ ನನ್ನ ಬದುಕಿನ ಸತ್ಯ ಗೊತ್ತಾಗಬಾರದೆಂದು ಪ್ರಯತ್ನಿಸಿದೆ. ಇವತ್ತು ನಿನಗೆ ಗೊತ್ತಾಗಿಹೋಯಿತು. ಸತ್ಯ ಗೊತ್ತಾದಮೇಲೆ ಅದನ್ನು ಒಪ್ಪಿಕೊಳ್ಳಲೇ ಬೇಕು' ರಘು ನಿರ್ವಿಕಾರದ ದ್ವನಿಯಲ್ಲಿ ಹೇಳಿದ. `ಆದರೆ ಊರಿನಲ್ಲಿ ಎಲ್ಲರೂ' ನನ್ನ ಮಾತನ್ನು ಅರ್ಧಕ್ಕೆ  ತುಂಡರಿಸಿದ ರಘು `ಗೊತ್ತು ಅನಂತ ನೀನೇನು ಹೇಳ್ತಿಯಂತ. ಊರವರಷ್ಟೇ ಏಕೆ ನನ್ನ ಮನೆಯವರೆಲ್ಲ ನಾನು ಒಳ್ಳೆ ಕೆಲಸದಲ್ಲಿದ್ದೆನೆಂದೆ ತಿಳಿದಿದ್ದಾರೆ. ಆದರೆ ವಿಧಿಯಾಟ ನೋಡು ನಾವು ಇವತ್ತು ಎಂಥ ಪರಿಸ್ಥಿತಿಯಲ್ಲಿ ಭೇಟಿಯಾಗ್ತಿದ್ದಿವಿ.' ರಘು ದ್ವನಿ ಕಂಪಿಸುತ್ತಿತ್ತು. `ಅನಂತ ನೀನು ಓದಲೇ ಬೇಕು ಅಂತ ಹಟ ಹಿಡಿದೆ. ನಿನ್ನ ತಂದೆ ತಕ್ಕ ಮಟ್ಟಿಗೆ ಅನುಕೂಲಸ್ಥರೆ. ನಿನ್ನ ಅಣ್ಣನಿಗೆ ತಮ್ಮ ಓದಿ ಒಳ್ಳೆ ಕೆಲಸ ಹಿಡೀ ಬೇಕು ಎನ್ನುವ ಪ್ರೀತಿ ಬೇರೆ. ನೀನು ಓದಿ ಇವತ್ತು ಒಳ್ಳೆ ಕೆಲಸದಲ್ಲಿದ್ದಿಯ. ಆದರೆ ನನ್ನ ಪರಿಸ್ಥಿತಿ ನೀನಗಿಂತ ಬೇರೆಯಾಗಿತ್ತು. ಸದಾ ಅನಾರೋಗ್ಯದಿಂದ ಹಾಸಿಗೆ ಹಿಡಿಯುವ ತಾಯಿ, ಪೌರೋಹಿತ್ಯವನ್ನೇ ನಂಬಿ ಜೀವನಸಾಗಿಸುತ್ತಿದ್ದ ತಂದೆ, ಹುಟ್ಟಿನಿಂದಲೇ ಅಂಗವಿಕಲನಾದ ಅಣ್ಣ, ಮದುವೆ ವಯಸ್ಸಿಗೆ ಬಂದ ಅಕ್ಕ ಇಂತಹ ಸ್ಥಿತಿಯಲ್ಲಿ ನಾನು ಓದಬೇಕೆಂದು ಹಟ ಹಿಡಿದರೂ ಪ್ರಯೋಜನವಿರಲಿಲ್ಲ. ಊರಲ್ಲಿ ಅಭ್ಯಾಸ ಮುಗಿದ ನಂತರ ಪಟ್ಟಣಕ್ಕೆ ಬಂದೆ. ನಾನು ಕಲಿತ ನಾಲ್ಕಕ್ಷರಕ್ಕೆ ಇಲ್ಲಿ ಸರ್ಕಾರಿ  ನೌಕರಿ ಸಿಗಲಿಲ್ಲ. ಕೊನೆಗೆ ನನ್ನಂತವರಿಗೆ ಹೊಟೆಲ್ ಬಾರ್‍ಗಳೆ ಗತಿ ಅಂತ ಗೊತ್ತಾಯಿತು. ಇಲ್ಲಿ ಬರುವ ಸಂಬಳದಲ್ಲಿ ಒಂದು ಪೈಸೆ ಖರ್ಚುಮಾಡದೆ ಊರಿಗೆ ಕಳಿಸ್ತಿದ್ದೆನೆ' ರಘು ಹೇಳಿ ಮುಗಿಸಿದಾಗ ಬೇರೆಯವರ ಬದುಕಿಗಾಗಿ ಜೀವಿಸುತ್ತಿರುವ ಸಂತಸ ಅವನ ಧ್ವನಿಯಲ್ಲಿತ್ತು. `ರಘು ನಾನೊಬ್ಬ ಸ್ನೇಹಿತ ಇದೇ ಊರಿನಲ್ಲಿದ್ದೆನೆಂದು ನೆನಪೇ ಆಗಲಿಲ್ವ' ಕೋಪದಿಂದ ಕೇಳಿದೆ. `ನನ್ಗೊತ್ತಿತ್ತು ನೀನು ಇದೇ ಊರಿನಲ್ಲಿರೊದಂತ. ಅದೆಷ್ಟೋ ಸಲ ನಿನ್ನನ್ನ ನೋಡಿದ್ದೀನಿ. ಆದರೆ ಅವರವರ ಬದುಕಿಗೆ ಅವರೇ ಹೊಣೆ ಅಲ್ವ ಅನಂತ. ನನ್ನ ಬದುಕು ಬೇರೆಯವರ ಸಹಾನುಭೂತಿಗೆ ಆಹಾರವಾಗೊದು ನನಗಿಷ್ಟವಿಲ್ಲ. ಅಲ್ಲದೆ ಗೆಳೆತನವನ್ನು ದುರೂಪಯೋಗ ಪಡಿಸಿಕೊಳ್ಳೊಷ್ಟು ಸ್ವಾಥಿ9ನಾನಲ್ಲ'. ಅತ್ಯಂತ ಸ್ವಾಭಿಮಾನಿಯಾದ ರಘುಗೆ ಹೇಳುವ ಸಾಮರ್ಥ್ಯ  ನನಗಿರಲಿಲ್ಲ. `ಅನಂತು ಊರಿಗೆ ಹೋಗ್ತಿದ್ದಿಯ' ರಘು ಕೇಳಿದ. `ಹೌದು ಹಳ್ಳಿಲಿ ಒಂದಿಷ್ಟು ಕೆಲಸಯಿತ್ತು ಅದಕ್ಕೆ ಹೋಗ್ತಿದ್ದಿನಿ'. `ಹಾಗಾದರೆ ನನಗೊಂದು ಸಹಾಯ ಮಾಡ್ತಿಯ' ಎಂದವನೆ ರಘು ಅಲ್ಲೇ ಮೂಲೆಯಲ್ಲಿದ್ದ ಟ್ರಂಕ್ ನಿಂದ ಕಾಗದದ ಪೊಟ್ಟಣವನ್ನು  ತೆಗೆದು ನನ್ನ ಕೈಯಲ್ಲಿಟ್ಟ. ಅರ್ಥವಾಗದೆ  ಅವನ ಮುಖ ನೋಡಿದೆ. `ಅನಂತ ಅದರಲ್ಲಿ ಒಂದು ಲಕ್ಷ ರೂಪಾಯಿ ಇವೆ. ಈ ಹಣನ ರಾಧಕ್ಕನಿಗೆ ಒಯ್ದು ಕೊಡು'. ನನ್ನ ಮೌನವನ್ನು ಬೇರೆಯೇ ರೀತಿಯಾಗ ಅರ್ಥೈಸಿಕೊಂಡ ರಘು ಹೇಳಿದ ` ಅನಂತ ಇದು ಕಳ್ಳತನದ ಹಣ ಅಲ್ಲ. ಕಿಡ್ನಿ ವೈಫಲ್ಯದಿಂದ ಸಾವಿಗೆ ಹತ್ತೀರವಾಗಿದ್ದ ಶ್ರೀಮಂತ ಯುವಕನಿಗೆ ಕಿಡ್ನಿಯ ಅವಶ್ಯಕತೆಯಿತ್ತು. ಒಂದು ವಾರದ ಹಿಂದೆ ನಾನು ಒಂದು ಕಿಡ್ನಿನ ಒಂದು ಲಕ್ಷ ರೂಪಾಯಿಗಳಿಗೆ ಮಾರಿದೆ. ಅದರಿಂದ ಬಂದ ಹಣ ಇದು'. ರಘುನ ಮಾತುಗಳನ್ನ ಕೇಳಿಸಿಕೊಳ್ಳುವ ಸ್ಥಿತಿಯಲ್ಲಿ ನಾನಿರಲಿಲ್ಲ. ಅವನ ಈಗಿನ ಪರಿಸ್ಥಿತಿ ನೋಡಿ ದು:ಖ  ಉಮ್ಮಳಿಸಿ ಬಂತು. ಎರಡೂ ಕೈಗಳಿಂದ ಮುಖ ಮುಚ್ಚಿ ಮನಸ್ಸಿಗೆ ಸಮಾಧಾನವಾಗುವವರೆಗೂ ಅತ್ತೆ. ಎಷ್ಟೋ ಹೊತ್ತು ಒಬ್ಬರಿಗೊಬ್ಬರು ಸಮಾಧಾನಪಡಿಸುತ್ತ ಹಾಗೇ ಕುಳಿತಿದ್ದೇವು. ಕೊನೆಗೆ ರಘು ಎಚ್ಚೆತ್ತು ನಾನು ಊರಿಗೆ ಹೋಗಬೇಕಾಗಿರುವುದನ್ನು ನೆನಪಿಸಿದ. ಬಸ್ಸಿನವರೆಗೂ ಜೊತೆಗೆ ಬಂದು ನನ್ನನ್ನು ಬಸ್ ಹತ್ತಿಸಿ ಹಿಂದಿರುಗುವಾಗ ರಘು ಕೇಳಿದ ` ಅನಂತ ನನ್ಗೊಂದು ಉಪಕಾರ ಮಾಡ್ತಿಯ'. ಏನು ಎನ್ನುವಂತೆ ನೋಡಿದೆ. `ದಯವಿಟ್ಟು ನಾನಿರುವ ಪರಿಸ್ಥಿತಿಯನ್ನು ನಮ್ಮ ಮನೆಯಲ್ಲಿ ಯಾರಿಗೂ ಹೇಳ್ಬೇಡ' ಎಂದವನೆ ಉತ್ತರಕ್ಕೂ ಕಾಯದೆ ಸರಿದು ಹೋದ. ಹೋಗುತ್ತಿದ್ದವನನ್ನು ನೀರು ತುಂಬಿದ ಕಣ್ಣುಗಳಿಂದ ನೋಡುತ್ತ ಕುಳಿತುಬಿಟ್ಟೆ. ಬಸ್ ಮುಂದೆ ಚಲಿಸುತ್ತಿದ್ದಂತೆ ರಘುನ ಆಕೃತಿ ಮುಸುಕು ಮುಸುಕಾಗಿ ಕೊನೆಗೆ ಅವನು ನನ್ನಿಂದ ಶಾಶ್ವತವಾಗಿ ದೂರ ಹೋಗುತ್ತಿರುವಂತೆ ಭಾಸವಾಯಿತು.  

           ಬಸ್ಸಿನಿಂದಿಳಿದಾಗ ಸೂರ್ಯ  ನೆತ್ತಿಯ ಮೇಲೆ ಬಂದಿದ್ದ. ಬರುವ ವಿಷಯ ಮೊದಲೇ ತಿಳಿಸಿದ್ದರಿಂದ ಅಣ್ಣ ಕೊಡೆ ಹಿಡಿದುಕೊಂಡು ನನಗಾಗಿ ಕಾಯುತ್ತ ನಿಂತಿದ್ದು ಕಾಣಿಸಿತು. `ಚೆನ್ನಾಗಿದ್ದಿಯ ಅನಂತು' ಎಂದು ಅಪ್ಯಾಯತೆಯಿಂದ ಬೆನ್ನು ಸವರಿ ಬಿಸಿಲು ತಾಗದಂತೆ ನನ್ನೆಡೆ ಕೊಡೆ ಬಾಗಿಸಿದ ಅಣ್ಣ ಮೊದಲಿನಂತೆ ಲವಲವಿಕೆಯಿಂದಿರದೆ ತೀರ ಸೊರಗಿದಂತೆ ಅನ್ನಿಸಿತು. ಅಂಗಳದಲ್ಲಿ ಆಡುತ್ತಿದ್ದ ಅಣ್ಣನ ಮಕ್ಕಳು ಚಿಕ್ಕಪ್ಪ ಬಂದ್ರು ಎನ್ನುತ್ತ ಒಳಗೋಡಿ ವಿಷಯ ತಿಳಿಸಿದರು. `ಎಷ್ಟೊಂದು ಬಡವಾಗಿದ್ಯೋ' ಅಮ್ಮ ಕಕ್ಕುಲತೆಯಿಂದ ತೆಲೆ ಸವರಿದಳು. ಅಪ್ಪ ಎಂದಿನಂತೆ ಗಂಭೀರವಾಗಿದ್ದರೂ ಮಗ ಬಂದ ಸಂತೋಷ ಅವರ ಕಣ್ಣುಗಳಲ್ಲಿ ಕಾಣಿಸುತ್ತಿತ್ತು. ಅತ್ತಿಗೆ ಅಡುಗೆ ಮನೆಯಲ್ಲಿ ಊಟದ ತಯ್ಯಾರಿಯಲ್ಲಿದ್ದರು. ಮನೆಯಲ್ಲಿನ ಎಲ್ಲರ ಪ್ರೀತ್ಯಾದಾರಗಳಿಂದ ಮನಸ್ಸು ತುಂಬಿತ್ತು. ಜೊತೆಗೆ ಭರ್ಜರಿ  ಊಟ. ಒಂದು ನಿದ್ದೆ ತೆಗೆದು ರಘುನ ಮನೆಗೆ ಹೋದರಾಯಿತೆಂದು ಅಮ್ಮ ಹಾಕಿಕೊಟ್ಟ ಹಾಸಿಗೆಯಲ್ಲಿ ಉರುಳಿದೆ. ಎಚ್ಚರವಾದಾಗ ಐದು ಗಂಟೆಯಾಗುತ್ತಿತ್ತು. ಮುಖ ತೊಳೆದು ಕಾಫಿ ಕುಡಿದು `ಅಮ್ಮ ರಘು ಮನೆಕಡೆ ಹೋಗಿಬರ್ತೀನಿ' ಅವಳ ಉತ್ತರಕ್ಕೂ ಕಾಯದೆ ಹೊರ ಬಂದೆ. ಊರು ತುಂಬ ಬದಲಾಗಿತ್ತು. ಒಂದೆರಡು ಪರಿಚಿತ ಮುಖಗಳನ್ನು ಬಿಟ್ಟರೆ ಎಲ್ಲರೂ ಅಪರಿಚಿತರೆ. ಪಟ್ಟಣಕ್ಕೆ ಹೋಗಿ ಅದಾಗಲೇ ಹದಿನೈದು ವರ್ಷಗಳಾದವು . ಹಬ್ಬ ಜಾತ್ರೆ ಅಂತ ಬಿಟ್ಟರೆ ಊರಿಗೆ ಬರುವುದೇ ಅಪರೂಪವಾಗಿತ್ತು. ವೆಂಕಟರಮಣ ದೇವಸ್ಥಾನದ ಪಕ್ಕವೆ ರಘುನ ಮನೆ. ಚಿಕ್ಕವರಾಗಿದ್ದಾಗ ಪ್ರಸಾದದ ಆಸೆಗಾಗಿ ರಘುನ ಮನೆಗೆ ಹೋಗುತ್ತಿದ್ದುದ್ದು ಅವರ ಅಮ್ಮನ ಕೈಯಿಂದ ಬೈಸಿಕೊಳ್ಳುತ್ತಿದ್ದುದ್ದು ನೆನಪಾಗಿ ನಗು ಬಂತು. ಊರು ಬದಲಾದರೂ ರಘುನ ಮನೆ ಬದಲಾಗಿರಲಿಲ್ಲ. ಮನೆಯ ಒಂದು ಭಾಗ ಕುಸಿದು ಬಿದ್ದು ಅಲ್ಲಲ್ಲಿ ಬೆಳೆದ ಹುಲ್ಲು ಮನೆಯಲ್ಲಿ ವಾಸಿಸುವವರ ಶೋಚನೀಯ ಸ್ಥಿತಿಯನ್ನು ಸಾರಿ ಹೇಳುವಂತಿತ್ತು. ತಲೆಬಾಗಿಲು ದಾಟಿ ಒಳಗಡಿಯಿಟ್ಟಾಗ ಕತ್ತಲು ಗುಹೆಯನ್ನು ಪ್ರವೇಶಿಸಿದಂತೆ ಭಾಸವಾಯಿತು. ಕಾಲೇಜು ಶಿಕ್ಷಣಕ್ಕೆಂದು ಪಟ್ಟಣಕ್ಕೆ ಹೋದಂದಿನಿಂದ ರಘುನ ಮನೆ ಕಡೆ ಬಂದಿರಲಿಲ್ಲ. ಪಡಸಾಲೆಯಲ್ಲಿ ಕುಳಿತು ಕೈಬೆರೆಳುಗಳನ್ನೆಣಿಸುತ್ತ ಲೆಖ್ಖಹಾಕುತ್ತಿದ್ದ ಶ್ರೀನಿವಾಸ ದೀರ್ಘ  ಯೋಚನೆಯಲ್ಲಿದ್ದಂತೆ ಕಂಡು ಬಂದ. ಕಂಬಕ್ಕೊರಗಿ ಕುಳಿತಿದ್ದ ಸೀತಾರಾಮಶಾಸ್ತ್ರಿಗಳು ಎನನ್ನೊ ಗೊಣುಗುತ್ತಿದ್ದರು. ಅಡುಗೆ ಕೋಣೆಯ ಹೊಸ್ತಿಲಿಗೆ ತಲೆಯಾನಿಸಿ ಮಲಗಿದ್ದ ಕಮಲಮ್ಮನವರ ಗಂಟಲಿನಿಂದ ಬರುತ್ತಿದ್ದ ಗೊರ ಗೊರ ಶಬ್ದ ಆ ಇಡೀ ವಾತಾವರಣಕ್ಕೆ ಭೀಕರ ಸ್ವರೂಪವನ್ನು ನೀಡಿತ್ತು. ಒಟ್ಟಿನಲ್ಲಿ ಅಲ್ಲಿದ್ದ ಆ ಮೂವರಿಗೂ ಹೊರ ಪ್ರಪಂಚದ ಸಂಪರ್ಕವೇ  ಇದ್ದಂತಿರಲಿಲ್ಲ. ಎಷ್ಟು ಹೊತ್ತಿನಿಂದ ಹಾಗೇ ನಿಂತಿದ್ದೇನೊ ರಾಧಕ್ಕ ಬಾ ಅನಂತು ಎಂದು ಕೂಗಿದಾಗಲೇ ಎಚ್ಚರವಾಯಿತು. `ಯಾವಾಗ ಬಂದೆ ಹೆಂಡ್ತಿ ಮಗಳನ್ನೂ ಕರದೆಕೊಂಡು ಬಂದಿದ್ಯ' ಕೇಳಿದಳು ರಾಧಕ್ಕ. ಚಹಾ ಮಾಡುತ್ತೆನೆಂದವಳನ್ನು ಬೇಡ ಎಂದು ತಡೆದೆ. `ಏನು ರಾಧಕ್ಕ ಮನೆಯ ಸ್ಥಿತಿ ಹೀಗಾಗಿದೆ' ವೇದನೆಯಿಂದ ಕೇಳಿದ್ದಕ್ಕೆ ರಾಧಕ್ಕ ಅಳುವುದೊಂದೆ ಬಾಕಿ. `ಏನ್ಹೇಳ್ಲಿ ಅನಂತು ಅಪ್ಪನಿಗೆ ಈಗೀಗ ಕಣ್ಣು ಕಾಣಿಸ್ತಿಲ್ಲ ಅಂತ ಪೂಜೆ ಮಾಡೋದನ್ನ ಬಿಡಿಸಿ ಬಿಟ್ಟಿದ್ದಾರೆ. ಶಿನಣ್ಣನ ಪರಿಸ್ಥಿತಿ ಬೇರೆ ಹೀಗೆ. ಬದುಕಿನಲ್ಲಿ ಭರವಸೆನೇ ಕಳ್ಕೊಂಡು ಬಿಟ್ಟಿದ್ದಾನೆ. ಅಮ್ಮ ಸಾವು ಯಾವಾಗ ಬರುತ್ತೋ ಅಂತ ಕಾಯ್ತಿದ್ದಾಳೆ. ಮದುವೆಯಾದ ಎರಡೇ ತಿಂಗಳಿಗೆ ಗಂಡನ್ನ ಕಳ್ಕೊಂಡೆ ಅಂತ ಅತ್ತೆ ಮನೆಯವರು ನನ್ನನ್ನ ತವರಿಗೆ ಕಳಿಸಿದ್ರು. ಇನ್ನು ಈ ಕುಟುಂಬಕ್ಕೆ ಆಸರೆ ಅಂದ್ರೆ ರಘು ಒಬ್ನೆ. ಮದುವೆ ಮುಂಜಿ ಎನೂ ಇಲ್ದೆ ನಮಗಾಗಿ ದುಡಿತಿದ್ದಾನೆ. ಒಳ್ಳೆ ಕೆಲಸದಲ್ಲಿದ್ದಿಯ ಮದುವೆಯಾಗಿ ಸುಖವಾಗಿರು ಅಂದ್ರೆ ಕೇಳ್ತಿಲ್ಲ. ನೀನಾದ್ರು ಅವನಿಗೆ ಬುದ್ಧಿ ಹೇಳು' ಎಂದ ರಾಧಕ್ಕ ಸೇರಗಿನಿಂದ ಕಣ್ಣೊರಿಸಿಕೊಂಡಳು. ಇನ್ನು ಅಲ್ಲಿ ಕುಳಿತುಕೊಳ್ಳಲಾಗದೆ ಹಣವನ್ನು ರಾಧಕ್ಕನ ಕೈಗಿಟ್ಟು `ರಘು ಕೊಟ್ಟಿದ್ದಾನೆ ನಾನಿನ್ನು ಬರ್ತೀನಿ' ಎಂದು ಹೇಳಿ ಹೊರಬಂದೆ. ಹೇಳಿಕೊಳ್ಳಲಾಗದ ತಳಮಳ. ಬಡತನ ಅಂದ್ರೇ ಏನು ಎಂದು ಮೊದಲಬಾರಿಗೆ ಪರಿಚಯವಾಗಿತ್ತು. ಬಡತನ ಬದುಕನ್ನ ಇಷ್ಟೊಂದು ಹತಾಶ ಸ್ಥಿತಿಗೆ ನೂಕುತ್ತೆ ಅಂತ ಗೊತ್ತಿರಲಿಲ್ಲ. ಮನೆಗೆ ಬಂದವನೇ ಊಟದ ಶಾಸ್ತ್ರ ಮಾಡಿ ಮಲಗಿದೆ. ಕಣ್ಮುಚ್ಚಿದರೂ ರಘುನ ಮನೆಯ ಚಿತ್ರ ಮತ್ತೆ ಮತ್ತೆ ಕಣ್ಣೆದುರು ಬಂದು ಮನಸ್ಸನ್ನು ಚುಚ್ಚುತಿತ್ತು. ನಿದ್ರೆ ಹತ್ತೀರ ಸುಳಿಯುತ್ತಿಲ್ಲ. ಕೆಲ ದಿನಗಳಿಂದ ಈ ಮನೆಯ ಪರಿಸ್ಥಿತಿ ಕೂಡ ಮೊದಲಿನಂತಿಲ್ಲ. ಸಮಯಕ್ಕೆ ಸರಿಯಾಗಿ ಮಳೆ ಬಾರದೆ ಜಮೀನಿನಿಂದ ಬರುವ ಆದಾಯ ಕಡಿಮೆಯಾಗುತ್ತಿದೆ. ಅಣ್ಣನದು ದೊಡ್ಡ ಕುಟುಂಬ ಬೇರೆ. ಎಲ್ಲ ಗೊತ್ತಿದ್ದೂ ಈ ವಿಷಯ ಅಣ್ಣನೊಡನೆ ಮಾತನಾಡುವುದಾದರೂ ಹೇಗೆ ಎಂಬ ಚಿಂತೆ ಮನಸ್ಸನ್ನು ಆವರಿಸಿತ್ತು. ಹೊರಡುವ ಹಿಂದಿನ ರಾತ್ರಿ ಶಾಲಿನಿ ಹೇಳಿದ ಮಾತು ನೆನಪಾಯ್ತು `ಈ ಸಾರಿ ಬರುವಾಗ ಒಂದು ನಿರ್ಧಾರ  ಮಾಡ್ಕೊಂಡು ಬನ್ನಿ. ನಮ್ದೂ ಸಂಸಾರ ಬೆಳಿತಿದೆ. ಎಷ್ಟು ದಿನಾಂತ ಬಾಡಿಗೆ ಮನೆಯಲ್ಲಿರೊದು. ವರ್ಷಕ್ಕೆ  ಇಂತಿಷ್ಟು ಅಂತ ಹಣ ಕೊಡೊದಾದ್ರೆ ಕೊಡ್ಲಿ. ಇಲ್ಲಾಂದ್ರೆ ಜಮೀನಿನಲ್ಲಿ ಪಾಲು ಕೊಡ್ಲಿ. ನಿಮಗೆ ಕೇಳೊಕ್ಕೆ ಧೈರ್ಯ  ಇಲ್ಲಾಂದ್ರೆ ನಾನೂ ಬರ್ತಿನಿ' ಎಂದಿದ್ದಳು. ರಘು ಭೇಟಿಯಾದದ್ದೂ, ಅವನ ಮನೆಯ ದಾರುಣ ಸ್ಥಿತಿ, ಅಣ್ಣ ಪಡುತ್ತಿರುವ ಕಷ್ಟ ಇದನ್ನೆಲ್ಲ ನೋಡಿ ನನ್ನ ನಿರ್ಧಾರ  ಗಟ್ಟಿಯಾಗತೊಡಗಿತು. ಮನಸ್ಸಿನಲ್ಲಿ ಒಂದು ಸ್ಪಷ್ಟ ಚಿತ್ರ ಮೂಡುವ ಹೊತ್ತಿಗೆ ಪೂರ್ವ  ಕೆಂಪಾಗುತ್ತಿತ್ತು.
        ಬೆಳ್ಳಿಗ್ಗೆ ಎದ್ದು ಸ್ನಾನ ಕರ್ಮಾದಿಗಳನ್ನೆಲ್ಲ ಮುಗಿಸಿ ಮನೆಯವರಿಗೆ ಊರಿಗೆ ಹೊರಡುವದಾಗಿ ತಿಳಿಸಿದೆ. `ಎಷ್ಟೊಂದು ಅವಸರ ಇನ್ನೆರಡು ದಿನ ಇದ್ದು ಹೋಗಬಾರ್ದ' ಅಮ್ಮ ಆಕ್ಷೇಪಿಸಿದಳು. ಅಣ್ಣ ಸಣ್ಣ ಸಣ್ಣ ಮೂಟೆಗಳನ್ನೆಲ್ಲ ಒಂದು ಚೀಲಕ್ಕೆ ಸೇರಿಸಿ ತಂದಿಟ್ಟ. `ಅಣ್ಣ ಏನಿದೆಲ್ಲ' ಕೇಳಿದೆ. `ಅನಂತು ನೀನು ಕೆಲಸಕ್ಕೆ ಸೇರ್ದಾಗಿಂದ ನಮ್ಮಿಂದ ಯಾವ ಸಹಾಯನೂ ಕೇಳ್ದೊನಲ್ಲ. ಜಮೀನಿನಿಂದ ಬರೋ ಆದಾಯದಲ್ಲಿ ನಿನಗೂ ಕೊಡೋಣಾಂದ್ರೆ ಇತ್ತೀಚಿಗೆ ಆದಾಯ ಕಡಿಮೆಯಾಗ್ತಿದೆ. ನಿನಗೂ ಸಂಸಾರ ಇದೆ. ಒಲ್ಲ ಅನ್ಬೇಡ' ಅಣ್ಣನ ಮಾತಿನಲ್ಲಿ ಬೇಡಿಕೆಯಿತ್ತು. ಗಂಟಲುಬ್ಬಿ ಮಾತು ಹೊರಬರಲಿಲ್ಲ. ಅಪ್ಪ ಅಮ್ಮ ಅತ್ತಿಗೆಗೆ ನಮಸ್ಕರಿಸಿ ಅಣ್ಣನೊಡನೆ ಬಸ್ ಸ್ಟ್ಯಾಂಡ್ ಕಡೆ ಹೆಜ್ಜೆ ಹಾಕಿದೆ. ನಮ್ಮಿಬ್ಬರ ನಡುವೆ ಮೌನ ಹೆಪ್ಪುಗಟ್ಟಿತ್ತು. ಬಸ್ ಹೊರಡುವ ವೇಳೆ ಅಣ್ಣ ಹೇಳಿದ `ಇನ್ನೊಂದ್ಸಾರಿ ಹೆಂಡ್ತಿ ಮಗು ಜೊತೆ ಬಂದು ನಾಲ್ಕಾರು ದಿನ ಇದ್ದು ಹೋಗು ಅಂದ್ರೆ ಅಪ್ಪ ಅಮ್ಮನಿಗೂ ಸಂತೋಷವಾಗುತ್ತೆ'. ಬರ್ತೀನಿ ಎಂದು ಅಣ್ಣನಿಗೆ ನಮಸ್ಕರಿಸಿ ಯಾವುದಕ್ಕೂ ಇರಲಿ ಎಂದು ತಂದಿದ್ದ ಹತ್ತು ಸಾವಿರ ರೂಪಾಯಿಗಳನ್ನು ಕೈಗಿಟ್ಟು ` ಮುಂದಿನ ಸಾರಿ ಬರೋವಷ್ಟರಲ್ಲಿ ಮನೆ ಮತ್ತು ಜಮೀನು ನಿನ್ನ ಹೆಸರಲ್ಲಿ ಮಾಡೊದಕ್ಕೆ ಅಗತ್ಯವಾದ ಎಲ್ಲ ಕಾಗದ ಪತ್ರಗಳನ್ನೂ ತಂದಿಡು. ಬಂದು ಸಹಿ ಮಾಡ್ತಿನಿ' ಹೇಳಿದವನೆ ಬಸ್ ಹತ್ತಿದೆ. ಅಚ್ಚರಿಯಿಂದ ನೋಡುತ್ತಿದ್ದ ಅಣ್ಣ ಆ ಕ್ಷಣ ತನ್ನ ಇರುವಿಕೆಯನ್ನೇ ಮರೆತಂತಿತ್ತು. ಬಸ್ ಮುಂದೆ ಮುಂದೆ ಹೋಗುತ್ತಿದ್ದಂತೆ ಕೆಳಗೆ ನಿಂತು ಕೈ ಬೀಸುತ್ತಿದ್ದ ಅಣ್ಣನ ಚಿತ್ರ ಕಿರಿದಾಗುತ್ತ ಕೊನೆಗೆ ನೀರು ತುಂಬಿದ ಕಣ್ಣುಗಳಿಗೆ ಎಲ್ಲವೂ ಅಸ್ಪಷ್ಟವಾಗಿ ಕಾಣತೊಡಗಿತು.
       ಬಸ್ ಸ್ಟ್ಯಾಂಡಿನಲ್ಲಿ ಇಳಿದವನೇ ರಘುನ ನೋಡಲು ಹೊಟೆಲ್ ನ ಕಡೆ ಧಾವಿಸಿದೆ. ನನ್ನ ಬದುಕು ಮಹತ್ವದ ತಿರುವು ಪಡೆಯಲು ಕಾರಣನಾದ ಆ ಮಹಾಪುರುಷನನ್ನು ಕಂಡು ಅಭಿನಂದಿಸಬೇಕಾಗಿತ್ತು. ಸಂಬಂಧಗಳ ಮಹತ್ವವನ್ನು ತೋರಿಸಿಕೊಟ್ಟ ಅವನನ್ನು ಪೂಜಿಸಬೇಕಿತ್ತು. `ರಘು ರಘು' ಎಂದು ಕೂಗುತ್ತ ಒಳ ನಡೆದೆ. ಗಲ್ಲಾ ಪೆಟ್ಟಿಗೆಯ ಮೇಲೆ ಕುಳಿತಿದ್ದ ವ್ಯಕ್ತಿ ನನ್ನೆಡೆ ಬಂದು ಯಾರು ಬೇಕಿತ್ತು ಎಂದು ಕೇಳಿದ. ರಘುನಂದನ ಎಂದೆ. `ಇಲ್ಲ ಅವರು ಇವತ್ತು ಬೆಳಿಗ್ಗೆನೇ ಕೆಲಸ ಬಿಟ್ಟು ಬೇರೆ ಊರಿಗೆ ಹೊರಟು ಹೋದ್ರು' ಎಂದ. ನನಗೆ ನಿಂತ ನೆಲ ಕುಸಿಯುತ್ತಿರುವಂತೆ ಭಾಸವಾಯಿತು. ಎಲ್ಲ ಅನುಕೂಲವಿದ್ದು ಹೆಂಡತಿ ಮಾತು ಕೇಳಿ ಪಾಲು ಕೇಳಲು ಹೋದ ಸ್ವಾರ್ಥಿ  ನಾನು. ಇನ್ನೊಬ್ಬರ ಬದುಕಿಗಾಗಿ ಅವರ ಒಳಿತಿಗಾಗಿ ನಿಸ್ವಾರ್ಥದಿಂದ  ದುಡಿಯುತ್ತಿರುವ ರಘು. ನಮ್ಮಿಬ್ಬರ ನಡುವೆ ಹೋಲಿಕೆಯೇ ಸಲ್ಲದು. ಕ್ಷಣ ಕ್ಷಣಕ್ಕೂ ರಘು ಹೆಮ್ಮರವಾಗಿ ಬೆಳೆಯುತ್ತಿರುವಂತೆ ನಾನು ಅವನೆದುರು ತೀರ ಕುಬ್ಜನಾದಂತೆ ಅನ್ನಿಸಿ ಕಣ್ಣು ಕತ್ತಲಾವರಿಸಿ ಕುಸಿದು ಬಿದ್ದೆ.

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 


No comments:

Post a Comment