Monday, July 1, 2013

ಪರಿಸರ ಪ್ರಜ್ಞೆ














          ಪರಿಸರ ಮಾನವನ ಬದುಕಿನ ಬಹುಮುಖ್ಯ ಅಗತ್ಯಗಳಲ್ಲೊಂದು. ಪ್ರತಿಯೊಬ್ಬ ವ್ಯಕ್ತಿ ತನ್ನ ಜೀವಿತಾವಧಿಯುದ್ದಕ್ಕೂ ಪರಿಸರದಿಂದ ಪಡೆಯುವುದು ನಮ್ಮ ಅಂಕಿ ಸಂಖ್ಯೆಗೂ ನಿಲುಕದ ಲೆಕ್ಕವದು. ಹೀಗಿದ್ದೂ ಮನುಷ್ಯ ಪರಿಸರಕ್ಕೆ ಕೃತಜ್ಞನಾಗಿರದೆ ಕೃತಘ್ನನಾಗಿರುವುದೇ ಹೆಚ್ಚು. ಮಾನವನ ಅನಾಗರಿಕ ಆಟಾಟೋಪಗಳಿಗೆ ಪರಿಸರ ಬಲಿಯಾಗುತ್ತಿದೆ. ನಾಗರಿಕ ಸಮಾಜ ನಿರಂತರವಾಗಿ ಪರಿಸರವನ್ನು ಹಾಳುಗೆಡುವುತ್ತ ಅದನ್ನು ವಿನಾಶದ ಅಂಚಿಗೆ ತಂದು ನಿಲ್ಲಿಸಿದೆ. ಇದು ಹೀಗೆ ಮುಂದುವರೆದಲ್ಲಿ ನಾವು ನಮ್ಮ ನಂತರದ ಪೀಳಿಗೆಯನ್ನು ಉಸಿರು ಕಟ್ಟುವ ವಾತಾವರಣದಲ್ಲಿ ಬಿಟ್ಟು ಹೋಗಬೇಕಾದಿತು. ಎಚ್ಚರಿಸುವ ಕೆಲಸ ಸಾಹಿತ್ಯ, ಸಿನಿಮಾ, ನಾಟಕಗಳಂಥ ಸೃಜನಶೀಲ ಕ್ಷೇತ್ರಗಳಿಂದಾಗಬೇಕು. ಜೊತೆಗೆ ಸರ್ಕಾರ ಮತ್ತು ಸಾರ್ವಜನಿಕರ ಪಾಲ್ಗೊಳ್ಳುವಿಕೆಯನ್ನು ಕಡೆಗಣಿಸುವಂತಿಲ್ಲ.

ಪರಿಸರ ಪ್ರಜ್ಞೆ: ಸಾಹಿತ್ಯ ಮತ್ತು ಸಿನಿಮಾ 


           ಜೂನ್ ತಿಂಗಳಂದು ಪರಿಸರ ದಿನವನ್ನು ಆಚರಿಸುವುದು ನಮ್ಮಲ್ಲಿ ಒಂದು ಸಂಪ್ರದಾಯದಂತೆ ಬೆಳೆದು ಬಂದಿದೆ. ಪತ್ರಿಕೆಗಳಲ್ಲಿ, ದೂರದರ್ಶನದ ವಿವಿಧ ವಾಹಿನಿಗಳಲ್ಲಿ ಮತ್ತು ಸಂಘ ಸಂಸ್ಥೆಗಳಲ್ಲಿ ಪರಿಸರ ದಿನಾಚರಣೆಯು ಒಂದು ಪ್ರತಿಷ್ಠೆಯ ವಿಷಯವಾಗುತ್ತಿರುವುದು ಅದೊಂದು ಕಳವಳಕಾರಿ ಸಂಗತಿ. ಈ ಪ್ರಯತ್ನದ ಹಿಂದೆ ನಿಜವಾದ ಕಾಳಜಿ ಇದ್ದಲ್ಲಿ ಇವತ್ತು ಪರಿಸರ ಇಷ್ಟೊಂದು ಮಾಲಿನ್ಯಗೊಳ್ಳುತ್ತಿರಲಿಲ್ಲ. ಪರಿಸರ ಸಂರಕ್ಷಣೆ ಕುರಿತು ಜನಜಾಗೃತಿ ಮೂಡಿಸುವ ಕೆಲಸ ಅದು ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು. ಇಂಥದ್ದೊಂದು ಅನುಸಂಧಾನ ದಿನನಿತ್ಯ ನಡೆಯಬೇಕು.

           ಜೊತೆಗೆ ಸೃಜನಶೀಲ ಮಾಧ್ಯಮಗಳಾದ ಸಾಹಿತ್ಯ ಮತ್ತು ಸಿನಿಮಾಗಳಿಂದ ಜನರಲ್ಲಿ ಪರಿಸರ ಪ್ರಜ್ಞೆಯನ್ನು ಮೂಡಿಸುವ ಕೆಲಸವಾಗುತ್ತಿಲ್ಲ ಎನ್ನುವುದನ್ನು ನಾನಿಲ್ಲಿ ಬೇಸರದಿಂದ ಹೇಳುತ್ತಿದ್ದೇನೆ. ಈ ಸಿನಿಮಾ ಮತ್ತು ಸಾಹಿತ್ಯ ಜನರನ್ನು ಮುಟ್ಟಬಲ್ಲ ಪರಿಣಾಮಕಾರಿ ಮಾಧ್ಯಮಗಳು. ಹೀಗಾಗಿ ಈ ಎರಡು ಮಾಧ್ಯಮಗಳು ಪ್ರಯತ್ನಿಸಿದಲ್ಲಿ ನಾಶವಾಗುತ್ತಿರುವ ಪರಿಸರವನ್ನು ಖಂಡಿತವಾಗಿ ನಾವು ಉಳಿಸಿಕೊಳ್ಳಬಹುದು. ಕನ್ನಡ ಸಾಹಿತ್ಯದ ವಿಷಯಕ್ಕೆ ಬಂದರೆ ಇಲ್ಲಿ ಪರಿಸರದ ಮೇಲೆ ರಚನೆಯಾದ ಸಾಹಿತ್ಯ ಬಹಳಷ್ಟು ಕಡಿಮೆ. ನಮ್ಮ ಹೆಚ್ಚಿನ ಬರಹಗಾರರು ಪರಿಸರವನ್ನು ಒಂದು ಆಕರ್ಷಣೆ ಇಲ್ಲವೇ ಶೃಂಗಾರವಾಗಿ ನೋಡಿದ್ದೆ ಹೆಚ್ಚು. ಪರಿಸರದ ಒಳಗಿಳಿದು ಅದರ ಅಗತ್ಯ ಮತ್ತು ಅದು ಎದುರಿಸುತ್ತಿರುವ ಅಪಾಯವನ್ನು ಶೋಧಿಸಿದ ಬರಹಗಾರರು ಬೆರಳೆಣಿಕೆಯಷ್ಟು ಮಾತ್ರ. ಅವರಲ್ಲಿ ನಾವು ತೇಜಸ್ವಿ ಮತ್ತು ಕಾರಂತರ ಹೆಸರನ್ನು ಸೂಚಿಸಬಹುದು. ಈ ಇಬ್ಬರೂ ಬರಹಗಾರರು ಪರಿಸರವನ್ನು ವಿಜ್ಞಾನವಾಗಿ ಮತ್ತು ಮಾನವ ಸಂಕುಲದ ಅಗತ್ಯವಾಗಿ ನೋಡಿದ್ದರಿಂದಲೇ ಕರ್ವಾಲೋ, ಚಿದಂಬರ ರಹಸ್ಯ, ಮಾಯಾಲೋಕ, ಚಿಗುರಿದ ಕನಸು ಇತ್ಯಾದಿ ಮಹತ್ವದ ಕೃತಿಗಳು ರಚನೆಯಾದವು. ತೇಜಸ್ವಿ ಕಾಡಿನೊಳಗಿನ ಬಗೆಬಗೆಯ ಸಸ್ಯ, ಕೀಟಗಳ ಕುರಿತು ಬರೆದರು. ಕಾಡಿನೊಂದಿಗೆ ನಿರಂತರ ಒಡನಾಟವಿಟ್ಟುಕೊಂಡು ಬದುಕುತ್ತಿದ್ದ ಮಂದಣ್ಣ, ಚೀಂಕ್ರ, ಅಣ್ಣಪ್ಪಣ್ಣ, ಪ್ಯಾರಾ, ಕರಾಟೆ ಮಂಜನಂಥವರು ಅವರ ಕಥೆ ಕಾದಂಬರಿಗಳ ನಾಯಕರಾದರು. ತೇಜಸ್ವಿ ಅವರ ಕಥೆ ಕಾದಂಬರಿಗಳಲ್ಲಿ ಧಾರಾಕಾರ ಮಳೆ, ಕಾಡ್ಗಿಚ್ಚು, ಭೀಕರ ಗಾಳಿ ಮುಖ್ಯ ಪಾತ್ರಗಳಾಗಿ ಬಂದಿವೆ. ಅವರು ಮಾನವ ಸಮಾಜಕ್ಕೆ ಎಚ್ಚರಿಕೆಯನ್ನು ಪರಿಸರದ ಮೂಲಕ ಒದಗಿಸುತ್ತಾರೆ. ಪರಿಸರದೊಂದಿಗೆ ತೇಜಸ್ವಿ ಅವರದು ನಿರಂತರ ಅನುಸಂಧಾನ. ಹೀಗೆ ಪರಿಸರವನ್ನು ತನ್ನೊಳಗೆ ಆವಾಹಿಸಿಕೊಂಡು ಬರೆದ ಲೇಖಕ ಕನ್ನಡದಲ್ಲಿ ತೇಜಸ್ವಿ ಅವರನ್ನು ಬಿಟ್ಟರೆ ಬೇರೊಬ್ಬರಿಲ್ಲ. ಶಿವರಾಮ ಕಾರಂತರು ಸಾಮಾಜಿಕ ಬದುಕಿನ ಸಂಕೀರ್ಣಗಳ ಜೊತೆ ಪರಿಸರದ ಬಗ್ಗೆಯೂ ಒಂದಿಷ್ಟು ಕೆಲಸ ಮಾಡಿದ್ದು ಶ್ಲಾಘನೀಯ. ಇಲ್ಲಿ ನಾವು ಕಾರಂತರು ಪರಿಸರದ ಬಗ್ಗೆ ಎಷ್ಟು ಬರೆದಿರುವರು ಎನ್ನುವುದಕ್ಕಿಂತ ಅವರು ಪರಿಸರ ರಕ್ಷಣೆಗಾಗಿ ಮಾಡಿದ ಚಳುವಳಿ ಕುರಿತು ಗಮನಹರಿಸಬೇಕು. ದಕ್ಷಿಣ ಕನ್ನಡದಲ್ಲಿ ಅಣುಸ್ಥಾವರ ಸ್ಥಾಪನೆಯನ್ನು ಅವರು ತಮ್ಮ ಬದುಕಿನುದ್ದಕ್ಕೂ ವಿರೋಧಿಸುತ್ತಲೇ ಬಂದರು. ಆದರೆ ಇಂಥದ್ದೊಂದು ಹೋರಾಟದ ಮನೋಭಾವ ಹೆಚ್ಚಿನ ಲೇಖಕರಿಂದ ವ್ಯಕ್ತವಾಗಿದ್ದು ಕನ್ನಡದಲ್ಲಿ ಕಡಿಮೆ.

          ಇನ್ನು ಸಿನಿಮಾ ಕುರಿತು ಮಾತನಾಡುವುದಾದರೆ ನಮ್ಮ ಸಿನಿಮಾ ಜನ ವಿದೇಶಿ ಸಿನಿಮಾಗಳಿಂದ ಕಲಿಯುವುದು ಬಹಳಷ್ಟಿದೆ. ಜಾಗತಿಕ ತಾಪಮಾನ ತಂದೊಡ್ಡಬಹುದಾದ ಅಪಾಯ, ವಿನಾಶದಂಚಿಗೆ ಬಂದು ನಿಂತಿರುವ ಪ್ರಾಣಿ ಸಂಕುಲ ಹೀಗೆ ಪರಿಸರ ಪ್ರಜ್ಞೆಯನ್ನು ಜಾಗೃತಗೊಳಿಸುವ ಸಿನಿಮಾಗಳು ಇವತ್ತಿಗೂ ಹಾಲಿವುಡ್ ನಲ್ಲಿ ನಿರ್ಮಾಣಗೊಳ್ಳುತ್ತಿವೆ. ಆದರೆ ನೂರು ವರ್ಷಗಳ ಇತಿಹಾಸವುಳ್ಳ ನಮ್ಮ ಕನ್ನಡ ಚಿತ್ರರಂಗದಲ್ಲಿ ಪರಿಸರದ ಕುರಿತಾದ ಸಿನಿಮಾಗಳೇ ನಿರ್ಮಾಣಗೊಂಡಿಲ್ಲ. ಎಲ್ಲೋ ಒಂದು ಕಡೆ 'ದ್ವೀಪ' ದಂಥ ಸಿನಿಮಾದ ಮೂಲಕ ಒಂದು ಸಣ್ಣ ಪ್ರಯತ್ನವನ್ನು ಮಾಡಲಾಯಿತಾದರೂ ಅಲ್ಲಿಯೂ ಮನುಷ್ಯ ಬದುಕಿನ ಸಂಕೀರ್ಣತೆಯೇ ಮೇಲುಗೈ ಸಾಧಿಸಿ ನಿಜವಾದ ಕಾಳಜಿ ಮೂಲೆಗುಂಪಾಯಿತು. ೨೦೦೪ ರಲ್ಲಿ ಹಾಲಿವುಡ್ ನಲ್ಲಿ ನಿರ್ಮಾಣಗೊಂಡ 'ಡೇ ಆಫ್ಟರ್ ಟುಮಾರೋ' ಸಿನಿಮಾವನ್ನು ನೀವು ನೋಡಿರಬೇಕು. ಜಾಗತಿಕ ತಾಪಮಾನ ತಂದೊಡ್ಡುವ ಅಪಾಯವನ್ನು ಅತ್ಯಂತ ಪರಿಣಾಮಕಾರಿಯಾಗಿ ಕಟ್ಟಿಕೊಟ್ಟ ಚಿತ್ರವಿದು. ನೀರೆಲ್ಲ ಹೆಪ್ಪುಗಟ್ಟಿ ಹಿಮರಾಶಿಯ ನಡುವೆ ಸಿಕ್ಕಿಕೊಂಡ ನಾಗರಿಕ ಸಮಾಜ ಎದುರಿಸುವ ಅಪಾಯವನ್ನು ವೀಕ್ಷಿಸುತ್ತಿರುವ ಆ ಸಂದರ್ಭ ಪ್ರಕೃತಿ ವಿಕೋಪದ ಮುಂದೆ ಅತ್ಯಾಧುನಿಕ ತಂತ್ರಜ್ಞಾನ ಅದೆಷ್ಟು ಅಸಹಾಯಕ ಎಂದು ಆ ಕ್ಷಣ ಯಾರಿಗಾದರೂ ಅನಿಸುತ್ತದೆ. ಹೀಗೆ ಸಾಹಿತ್ಯ ಮತ್ತು ಸಿನಿಮಾ ಮಾಧ್ಯಮಗಳು ಕಟ್ಟಿಕೊಡುವ ಅನುಭವ ಅನನ್ಯ. ಆದ್ದರಿಂದ ಪರಿಸರ ಪ್ರೇಮವನ್ನು ಜಾಗೃತಗೊಳಿಸುವ ಪ್ರಯತ್ನ ಸೃಜನಶೀಲ ಮಾಧ್ಯಮಗಳಾದ ಸಾಹಿತ್ಯ ಮತ್ತು ಸಿನಿಮಾಗಳಿಂದ ಪ್ರಾರಂಭವಾದಲ್ಲಿ ಅದು ಅತಿ ಹೆಚ್ಚಿನ ಪರಿಣಾಮವನ್ನು ಬೀರಬಲ್ಲದು. ಆದರೆ ಸಧ್ಯದ ಪರಿಸ್ಥಿತಿಯಲ್ಲಿ ಅಂಥದ್ದೊಂದು ಪ್ರಯತ್ನವಾಗಲಿ ಮತ್ತು ಬೆಳವಣಿಗೆಯಾಗಲಿ ಕಾಣಿಸುತ್ತಿಲ್ಲ.

                 ಈ ಸಂದರ್ಭ ವನ್ಯಜೀವಿ ಛಾಯಾಗ್ರಾಹಕರಾದ ಕೃಪಾಕರ ಮತ್ತು ಸೇನಾನಿ ಈ ಇರ್ವರೂ ಪರಿಸರ ಸಂರಕ್ಷಣೆಗಾಗಿ ಮಾಡುತ್ತಿರುವ ಪ್ರಯತ್ನವನ್ನೊಮ್ಮೆ ಅವಲೋಕಿಸಬೇಕು. ಸಂಘ ಸಂಸ್ಥೆಗಳಿಂದ ಹಣ ಸಂಗ್ರಹಿಸಿ ಬಂಡಿಪುರ ಅರಣ್ಯದಂಚಿನಲ್ಲಿರುವ ಸುಮಾರು ಎರಡುನೂರು ಹಳ್ಳಿಗಳಲ್ಲಿನ ಮೂರು ಸಾವಿರ ಕುಟುಂಬಗಳಿಗೆ ಅಡುಗೆ ಅನಿಲದ ಸೌಲಭ್ಯವನ್ನು ಒದಗಿಸಿ ಆ ಮೂಲಕ ಅರಣ್ಯ ನಾಶವನ್ನು ತಡೆಗಟ್ಟಿದ ಇವರ ಪ್ರಯತ್ನ ಅಭಿನಂದನಾರ್ಹ. ಇಂಥ ಮನೋಭಾವ ಸೃಜನಶೀಲ ಮನಸ್ಸುಗಳಲ್ಲಿ ಹೆಚ್ಚಬೇಕು.

ಪರಿಸರ ಪ್ರಜ್ಞೆ ಮತ್ತು ಸರ್ಕಾರ 


             ಪರಿಸರ ರಕ್ಷಣೆ ಕುರಿತಾಗಿ ಸರ್ಕಾರೇತರ ಸಂಸ್ಥೆಗಳು ಮಾಡುತ್ತಿರುವ ಪ್ರಯತ್ನದಲ್ಲಿ ಅರ್ಧದಷ್ಟನ್ನಾದರೂ ಕಾಲಕಾಲಕ್ಕೆ ಬಂದ ನಮ್ಮ ಸರ್ಕಾರಗಳು ಮಾಡಲೇ ಇಲ್ಲ. ನಿಮಗೆ ನೆನಪಿರಬಹುದು ಕೆಲವು ದಿನಗಳ ಹಿಂದೆ ಗೊರಿಲ್ಲಾಗಳ ನಾಮಕರಣಕ್ಕೆ ಸಂಬಂಧಿಸಿದ ಲೇಖನವೊಂದು ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಇದು ನಡೆದದ್ದು ಆಫ್ರಿಕಾದ ರವಾಂಡಾ ಎನ್ನುವ ಪುಟ್ಟ ದೇಶದಲ್ಲಿ. ಇದು ನಮ್ಮ ಕರ್ನಾಟಕಕ್ಕಿಂತಲೂ ವಿಸ್ತೀರ್ಣದಲ್ಲಿ ಚಿಕ್ಕದಾದ ದೇಶ. ಅಲ್ಲಿ ನಶಿಸಿ ಹೋಗುತ್ತಿರುವ ಗೊರಿಲ್ಲಾಗಳನ್ನು ಉಳಿಸಿಕೊಳ್ಳಲು ಹಾಗೂ ಅವುಗಳಿಗಾಗಿ ಅರಣ್ಯದ ಸಂರಕ್ಷಣೆಗೆ ಸರ್ಕಾರವೇ ಮುಂದಾಗಿದೆ. ಸರ್ಕಾರವೇ ಖುದ್ದು ಆಸಕ್ತಿವಹಿಸಿ ಪ್ರತಿವರ್ಷ ಗೊರಿಲ್ಲಾಗಳ ನಾಮಕರಣದ ಸಮಾರಂಭ ಏರ್ಪಡಿಸುತ್ತದೆ. ಹೀಗೆ ಸರ್ಕಾರವೇ ಪಾಲ್ಗೊಳ್ಳುವುದರ ಮೂಲಕ ಸಾರ್ವಜನಿಕರಲ್ಲಿ ಪ್ರಾಣಿಸಂಕುಲ ಮತ್ತು ಪರಿಸರದ ಕುರಿತಾದ ಅರಿವು ಮೂಡಿಸುತ್ತಿದೆ. ಆದರೆ ಇಲ್ಲಿ ಯಾವುದೇ ಸರ್ಕಾರದಿಂದ ಅಂಥದ್ದೊಂದು ಪ್ರಯತ್ನ ಇದುವರೆಗೆ ಕಂಡುಬಂದಿಲ್ಲ. ಸುಂದರಲಾಲ ಬಹುಗುಣ, ಅಣ್ಣಾ ಹಜಾರೆ, ಮೇಧಾ ಪಾಟ್ಕರ್, ಪಾಳೇಕರ್ ಅವರು ಮಾಡಿದ ಮತ್ತು ಮಾಡುತ್ತಿರುವ ಪರಿಸರ ಸಂರಕ್ಷಣೆ ಕುರಿತಾದ ಪ್ರಯತ್ನಗಳು ವೈಯಕ್ತಿಕ ಮಟ್ಟದಲ್ಲಾದವೇ  ವಿನ: ಈ ವಿಷಯವಾಗಿ ಸರ್ಕಾರದ ಪ್ರಯತ್ನ ಹೇಳಿಕೊಳ್ಳುವಂಥದ್ದೆನಿಲ್ಲ.

                ಕರ್ನಾಟಕದ ಅರ್ಧದಷ್ಟೂ ಇರದ ಪುಟ್ಟ ದೇಶವೊಂದು ಪರಿಸರ ಸಂರಕ್ಷಣೆಗೆ ಮುಂದಾಗುವುದರ ಮೂಲಕ ಅದನ್ನೇ ರಾಷ್ಟ್ರದ ಬಂಡವಾಳವಾಗಿಸಿಕೊಂಡು ಅಧಿಕ ಕಂದಾಯವನ್ನು ಸಂಗ್ರಹಿಸುತ್ತಿರುವಾಗ ಜಗತ್ತಿನ ಎರಡನೇ ಅತಿ ದೊಡ್ಡ ದೇಶವೆನ್ನುವ ಹೆಗ್ಗಳಿಕೆಗೆ ಪಾತ್ರವಾಗಿರುವ ಭಾರತದಲ್ಲಿ ವರ್ಷದಿಂದ ವರ್ಷಕ್ಕೆ ಅರಣ್ಯ ನಾಶವಾಗುತ್ತಿರುವ ಜೊತೆಗೆ ಪ್ರಾಣಿಗಳ ಸಂತತಿಯೂ ನಶಿಸುತ್ತಿದೆ. ದೇಶವೊಂದು ಸುಭಿಕ್ಷವಾಗಿರಬೇಕೆಂದರೆ ಅದು ಕೇವಲ ಕೈಗಾರೀಕರಣ ಮತ್ತು ಜಾಗತೀಕರಣದಿಂದ ಸಾಧ್ಯವಿಲ್ಲ. ರಾಷ್ಟ್ರದ ಪ್ರಗತಿಯಲ್ಲಿ ಪರಿಸರ ಸಹ ಅತ್ಯುತ್ತಮ ಪಾತ್ರವನ್ನು ನಿರ್ವಹಿಸುತ್ತದೆ. ಭೂಮಿ ಅಗೆಯುವ, ಅರಣ್ಯ ಸಂಪತ್ತು ಕೊಳ್ಳೆ ಹೊಡೆಯುವ ಪ್ರಕರಣಗಳಿಗೆ ಸರ್ಕಾರ ಕಡಿವಾಣ ಹಾಕುವ ಪ್ರಯತ್ನಕ್ಕೆ ಮುಂದಾಗಬೇಕು. ಇದು ಯಾರೋ ವೈಯಕ್ತಿಕವಾಗಿ ಮಾಡುವಂಥ ಕೆಲಸವಲ್ಲ. ಸರ್ಕಾರ ಮನಸ್ಸು ಮಾಡಬೇಕು.

ಸಾರ್ವಜನಿಕರ ಪಾತ್ರ 


        ನಾವುಗಳ ನಮ್ಮ ಇತಿಮಿತಿಯೊಳಗೆ ಪರಿಸರವನ್ನು ಸಂರಕ್ಷಿಸುವ ಕೆಲಸಕ್ಕೆ ಮುಂದಾಗಬೇಕು. ಈ ಸಂದರ್ಭ ನಾವು ಮಾಡಬೇಕಾಗಿರುವುದೆನೆಂದರೆ,

೧. ವಾಹನಗಳ ಉಪಯೋಗ ಕಡಿಮೆ ಮಾಡುವುದು ನಾವು ಪರಿಸರಕ್ಕೆ ನೀಡುವ ಬಹುಮೂಲ್ಯ ಕೊಡುಗೆಯಾಗಿದೆ. ವಾಹನಗಳ ಕಡಿಮೆ ಉಪಯೋಗದಿಂದ ಆರ್ಥಿಕವಾಗಿ ನಮಗೆ ಉಳಿತಾಯವಾಗುವುದಲ್ಲದೆ ಪರಿಸರಕ್ಕೆ ಸೇರಿ ಮಲಿನಗೊಳಿಸುವ ಕಾರ್ಬನ್ ಡೈ ಆಕ್ಸೈಡ್ ಪ್ರಮಾಣವನ್ನು ನಾವು ಕಡಿಮೆಮಾಡಿದಂತಾಗುತ್ತದೆ.

೨. ಬಿಸಿ ನೀರಿನ ಉಪಯೋಗ ಕಡಿಮೆ ಮಾಡುವುದರಿಂದ ನಾವು ಕಾರ್ಬನ್ ಡೈ  ಆಕ್ಸೈಡ್ ನ ವಿಸರ್ಜನೆಯ ಪ್ರಮಾಣವನ್ನು ತಗ್ಗಿಸಬಹುದು.

೩. ಗೃಹ ಬಳಕೆಯ ವಿದ್ಯುತ್ ನ್ನು ಮಿತವಾಗಿ ಬಳಸುವುದು ಸಹ ನಾವು ಪರಿಸರಕ್ಕೆ ನೀಡುವ ಬಹುದೊಡ್ಡ ಕೊಡುಗೆಯಾಗಿದೆ. ಮನೆಯ ಎಲ್ಲ ಕೋಣೆಗಳಲ್ಲಿ ಅನಾವಶ್ಯಕವಾಗಿ ದೀಪಗಳನ್ನು ಉರಿಸದೆ ಅಗತ್ಯದ ಸಂದರ್ಭಗಳಲ್ಲಿ ಮಾತ್ರ ವಿದ್ಯುತ್ ದೀಪವನ್ನು ಉಪಯೋಗಿಸಬೇಕು. ಟಿ.ವಿ ಮತ್ತು ಕಂಪ್ಯೂಟರ್ ಗಳನ್ನು ಅಗತ್ಯವಿದ್ದಾಗ ಮಾತ್ರ ಉಪಯೋಗಿಸುವುದು ಉತ್ತಮ.

೪. ಪರಿಸರ ನೈರ್ಮಲ್ಯಕ್ಕಾಗಿ ಮರಗಳನ್ನು ಬೆಳೆಸುವುದು ಅದು ಎಲ್ಲರ ಕರ್ತವ್ಯವಾಗಬೇಕು. ಮರಗಳು ಪರಿಸರ ಸಮತೋಲನದ ಕಾಪಾಡುವಿಕೆಗಾಗಿ ಭೂಮಿಯ ಮೇಲಿರುವ ನೈಸರ್ಗಿಕ ರಕ್ಷಣಾ ವ್ಯವಸ್ಥೆಯ ಅತಿ ಮುಖ್ಯ ಭಾಗಗಳಾಗಿವೆ. ಆದ್ದರಿಂದ ಹೆಚ್ಚು ಹೆಚ್ಚು ಮರಗಳನ್ನು ಬೆಳೆಸುವುದರ ಮೂಲಕ ತಾಪಮಾನದ ಏರಿಕೆಯನ್ನು ತಡೆಗಟ್ಟಬಹುದು.

೫. ರೈತರು ತಮ್ಮ ಬೇಸಾಯ ಪದ್ಧತಿಯಲ್ಲಿ ಯಂತ್ರೋಪಕರಣಗಳ  ಬದಲಾಗಿ ಪ್ರಾಣಿಗಳನ್ನು ಬಳಸುವ ಪದ್ಧತಿಯನ್ನೇ ಹೆಚ್ಚು ಹೆಚ್ಚು ಅನುಸರಿಸಬೇಕು. ಜೊತೆಗೆ ಆಧುನಿಕ ರಸಗೊಬ್ಬರಗಳ ಉಪಯೋಗ ಕಡಿಮೆಮಾಡಿ ಸಾವಯವ ಕೃಷಿಗೆ ಹೆಚ್ಚಿನ ಆದ್ಯತೆ ನೀಡಬೇಕು.

೬. ಜನಸಂಖ್ಯಾ ಸ್ಫೋಟ ಕೇವಲ ನಿರುದ್ಯೋಗ ಸಮಸ್ಯೆಯನ್ನು ಮಾತ್ರ ತಂದೊಡ್ಡುವುದಿಲ್ಲ. ಅದು ಪರಿಸರಕ್ಕೂ ಮಾರಕವಾಗಿ ಪರಿಣಮಿಸುತ್ತದೆ. ಜನರ ಸಂಖ್ಯೆ ಹೆಚ್ಚಿದಂತೆಲ್ಲ ವಾಹನಗಳ ಉಪಯೋಗ ಅಧಿಕವಾಗುತ್ತಿದೆ. ಹೆಚ್ಚುತ್ತಿರುವ ಜನಸಂಖ್ಯೆಯಿಂದಾಗಿ ನಿರುದ್ಯೋಗ ಸಮಸ್ಯೆಯನ್ನು ಪರಿಹರಿಸಲು ಕಾರ್ಖಾನೆಗಳು ನಾಯಿಕೊಡೆಗಳಂತೆ ತಲೆ ಎತ್ತುತ್ತಿವೆ. ಈ ವಾಹನಗಳ ಮತ್ತು ಕಾರ್ಖಾನೆಗಳ ಹೊಗೆ ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿದೆ. ಆದ್ದರಿಂದ ಪರಿಸರದ ಸಮತೋಲನಕ್ಕಾಗಿ ಜನಸಂಖ್ಯಾ ನಿಯಂತ್ರಣ ಕಡ್ಡಾಯವಾಗಬೇಕು.

ಕೊನೆಯ ಮಾತು 


            ನಿಸರ್ಗದ ಮೇಲೆ ಮಾನವನ ದಾಳಿ ಇದು ಇಂದು ನಿನ್ನೆಯದಲ್ಲ. ಅನಾದಿ ಕಾಲದಿಂದಲೂ ಮನುಷ್ಯ ನಿಸರ್ಗದೊಂದಿಗೆ ಆಟವಾಡುತ್ತಲೇ ಬಂದಿರುವನು. ಪ್ರತಿಯೊಂದು ಆರಂಭಕ್ಕೆ ಅಂತ್ಯವಿರುವಂತೆ ಮನುಷ್ಯನ ಈ ಆಟಕ್ಕೆ ಕೊನೆ ಎನ್ನುವುದಿದೆ. ತನ್ನ ಮಿತಿಯನ್ನು ಅರ್ಥ ಮಾಡಿಕೊಳ್ಳದೆ ಮಾನವನ ಈ ದುಷ್ಕೃತ್ಯಗಳು ಹೀಗೆ ಮುಂದುವರೆದಲ್ಲಿ ಇಡೀ ಮನುಕುಲವೇ ನಾಶ ಹೊಂದಬಹುದು. ಈಗಾಗಲೇ ಹವಾಮಾನದಲ್ಲಿ ಆಗುತ್ತಿರುವ ಬದಲಾವಣೆಗಳು ನಾಗರಿಕ ಸಮಾಜವನ್ನು ಕಂಗೆಡಿಸಿವೆ. ಜಾಗತಿಕ ತಾಪಮಾನ ಮನುಕುಲಕ್ಕೆ ತನ್ನ ಬಿಸಿ ಮುಟ್ಟಿಸಿದೆ. ಇನ್ನಾದರೂ ಮನುಷ್ಯ ಎಚ್ಚೆತ್ತುಕೊಳ್ಳುವುದೊಳಿತು.

-ರಾಜಕುಮಾರ.ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 

No comments:

Post a Comment