Saturday, May 18, 2013

ನನ್ನ ಬರವಣಿಗೆಗೆ ಸ್ಪೂರ್ತಿ ನೀಡಿದ ಬರಹಗಳು


        ಪುಸ್ತಕಗಳ ಓದು ನನ್ನ ಅತ್ಯಂತ ಇಷ್ಟದ ಸಂಗತಿಗಳಲ್ಲೊಂದು. ಕೆಲವೊಮ್ಮೆ ಓದಿಲ್ಲದೆ ಕಳೆಯುವ ಬದುಕೇ ದುಸ್ತರ ಎಂದೆನಿಸುತ್ತದೆ. ಏಕೆಂದರೆ  ಬೇಸರದ ಅನೇಕ ಸಂದರ್ಭಗಳಲ್ಲಿ ಓದು ಕೈ ಹಿಡಿದು ನನಗೆ ಮರು ಚೈತನ್ಯ ನೀಡಿದೆ. ಅದಕ್ಕೆಂದೇ ನನ್ನನ್ನು ನಾನು ಓದುವ ಕ್ರಿಯೆಯಲ್ಲಿ ತೊಡಗಿಸಿಕೊಳ್ಳುತ್ತೇನೆ. ಓದುವ ಸಂದರ್ಭ ಮನಸ್ಸಿಗೆ ಹಿಡಿಸಿದ ಸಂಗತಿಗಳನ್ನು ಟಿಪ್ಪಣಿ ಮಾಡಿಕೊಂಡು ನನ್ನ ಬರವಣಿಗೆಯಲ್ಲಿ ಬಳಸಿಕೊಂಡ ಉದಾಹರಣೆಯೂ ಉಂಟು. ಇವತ್ತಿನ ಯುವ ಲೇಖಕರಿಂದ ಹಿಡಿದು ಹಿರಿಯ ತಲೆಮಾರಿನ ಲೇಖಕರವರೆಗೆ ಯಾವ ಅಸುಯಾ ಪರ ಭಾವನೆಗಳಿಗೆ ಆಸ್ಪದ ನೀಡದಂತೆ ನಾನು ಓದಿದ್ದುಂಟು. ಹೀಗಾಗಿ ನನ್ನ ಓದು ಇಂಥ ಸಾಹಿತ್ಯ ಪ್ರಕಾರಕ್ಕೆ ಮತ್ತು ಇಂಥ ಲೇಖಕರಿಗೆಂದು ಸೀಮಿತವಾಗಿಲ್ಲ. ಪುಸ್ತಕವೊಂದರಲ್ಲಿನ ವಿಷಯ ನನ್ನ ಏಕಾಂತದ ವಲಯವನ್ನು ಪ್ರವೇಶಿಸಿದರೆ ಅಂಥ ಪುಸ್ತಕಗಳನ್ನು ಒಂದೇ ಗುಕ್ಕಿಗೆ ಓದಿಕೊಂಡು ಹೋಗಿದ್ದೇನೆ. ಕೆಲವೊಮ್ಮೆ ಪ್ರಾರಂಭದ ಪುಟಗಳಲ್ಲೇ ಬೇಸರ ಇಣುಕಿದಾಗ ಅಂಥ ಪುಸ್ತಕಗಳ ಓದು ಅರ್ಧಕ್ಕೆ ಬಿಟ್ಟಿದ್ದೂ ನಿಜ. ಒಟ್ಟಿನಲ್ಲಿ ಪುಸ್ತಕಗಳ ಓದು ನನಗೆ ಬರೆಯುವ ಚೈತನ್ಯ ನೀಡಿದೆ. ಹೀಗಾಗಿ ನನ್ನ ಪ್ರತಿ ಲೇಖನದಲ್ಲಿ ಅದಕ್ಕೆ ಪೂರಕವಾಗುವಂತಹ ಬರಹಗಳನ್ನು ನಾನೋದಿದ ಪುಸ್ತಕಗಳಿಂದ ಆಯ್ದು ಕೊಟ್ಟ ನಿದರ್ಶನ ಸಾಕಷ್ಟಿವೆ. ಒಂದರ್ಥದಲ್ಲಿ ನನಗೆ ಬರೆಯಲು ಸ್ಪೂರ್ತಿ ನೀಡಿದ ಲೇಖಕ ಮತ್ತು ಆತನ ಬರವಣಿಗೆಗೆ ನಾನು ಈ ರೀತಿ ಋಣಿಯಾಗಿರುವ ಸಾಧ್ಯತೆಯೂ ಇರಬಹುದು. ಹೀಗೆ ಸ್ಪೂರ್ತಿ ನೀಡಿದ ಕೆಲವೊಂದು ಬರಹಗಳನ್ನು ಇಲ್ಲಿ ಕೊಡುತ್ತಿದ್ದೇನೆ. ಯಾರಿಗೆ ಗೊತ್ತು ಓದಿದ ನಂತರ ನಿಮ್ಮಲ್ಲೂ ಬರೆಯುವ ಉಮೇದಿಯೊಂದು ನಿಮಗರಿವಿಲ್ಲದಂತೆಯೇ ನಿಮ್ಮೊಳಗಡೆ ಟಿಸಿಲೊಡೆಯಬಹುದು. ಓದಿ ನೋಡಿ,

ಸಾವಿನ ನೆನಪು ಬದಲಾವಣೆ ತಂದ ಆ ಕ್ಷಣ.....


          ಸಾವು ತನ್ನ ತಣ್ಣನೆಯ ಹಸ್ತವನ್ನು ನಮ್ಮ ಮೇಲಿಟ್ಟಾಗ ಹೇಗಿರುತ್ತದೆ?. ಹುಟ್ಟಿದವನು ಸಾಯಲೇ ಬೇಕು ಎಂದು ಕೊಂಡು ಬದುಕುತ್ತಿರುವುದಕ್ಕೂ, ಸಾವಿನ ಸ್ಪರ್ಷಕ್ಕೂ ವ್ಯತ್ಯಾಸವೇನು? ಬದುಕುತ್ತಿರುವವರು ಯಾರೂ ಸಾವನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಮನುಷ್ಯ ತನ್ನ ಸೋಮಾರಿತನದಲ್ಲಿ, ನಿರ್ಲಕ್ಷ್ಯದಲ್ಲಿ ಸಾವಿನ ಕಟು ನಿಷ್ಟುರತೆಯನ್ನು ಎದುರಿಸುವುದಿಲ್ಲವಾದ್ದರಿಂದ ಆತನ ನೆನಪು, ಆಶೆ, ರೋಮಾಂಚನಗಳು ಫೋಕಸ್ ಆಗಿರುವುದೇ ಇಲ್ಲ. ಸಾವಿನ ಶಾಕ್ ಮಾತ್ರ ಆತ  ತನಗೆ ಉಳಿದ ಕ್ಷಣಗಳನ್ನು ಜೀವಿಸುವಂತೆ ಮಾಡಬಲ್ಲದು.

      ನನ್ನ ಗಾಢ ದುಗುಡದ ವೇಳೆಯಲ್ಲಿ ಸಾವಿನ ಹತ್ತಿರ ಇದ್ದಂತ್ತಿದ್ದಾಗ ಮುತ್ಸದ್ದಿತನ, ಖ್ಯಾತಿ, ಪ್ರಶಸ್ತಿ ಮುಂತಾದವೆಲ್ಲ ಬದುಕಿನೆದುರು, ಸಾವಿನೆದುರು ಗೌಣ ಅನ್ನಿಸುತ್ತಿದ್ದಾಗ ನನ್ನ ಬರವಣಿಗೆಯ ರೀತಿ ಬದಲಾಯಿತು. ಸಾವು ಇನ್ನು ಮೇಲೆ ನನಗೆ ಕೇವಲ ಕತೆಯಾಗದೆ, ಬದುಕುವ ಅಂತ್ಯ ಎಂಬ ಸತ್ಯ ಮಾತ್ರವಾಗದೆ ನನ್ನ ಉಳಿದ ದಿನಗಳಲ್ಲಿ ಬರೆದ ಸಾಲುಗಳಲ್ಲಿ ನೆಲೆಸಿ ಎಚ್ಚರಿಸುವ ಛಾಯೆ ಅನ್ನಿಸತೊಡಗಿತು.

(ಪಿ.ಲಂಕೇಶ್ ಅವರ 'ಹುಳಿ ಮಾವಿನ ಮರ' ಕೃತಿಯಿಂದ)

ಬರವಣಿಗೆಯೇ  ನನ್ನ ಧರ್ಮ 


       ಬಹುಕಾಲ ಬಾಳುವಂಥ ಯಾವುದನ್ನು ರಾಜಕಾರಣ ಮಾಡಲಾಗದಿಲ್ಲವೋ ಅದನ್ನು ಸಾಹಿತ್ಯ ಮಾಡಬೇಕು. ರಾಜಕೀಯ ಕ್ರಿಯೆ ಅಲ್ಪಾಯುಷ್ಯದ್ದು. ಸಾಹಿತ್ಯಕ್ಕೆ ಈ ಮಾತು ಅನ್ವಯಿಸುವುದಿಲ್ಲ. ಲೇಖಕ ಕೇವಲ ವರ್ತಮಾನಕ್ಕಾಗಿ ಮಾತ್ರ ಪುಸ್ತಕ ಬರೆಯುವುದಿಲ್ಲ ಅನ್ನುವುದು ನಮ್ಮ ಗಮನದಲ್ಲಿರಬೇಕು. ಟೀಕಿಸುವ ಮೂಲಕವೋ, ತಮ್ಮ ಆಲೋಚನೆಗಳನ್ನು ಬಳಸಿ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಮೂಲಕವೋ ಒಂದಲ್ಲ ಒಂದು ವಿಧದಲ್ಲಿ ಲೇಖಕರಾದವರು ಕಾರ್ಯಪ್ರವೃತ್ತರಾಗುವುದು ತುಂಬಾ ಮುಖ್ಯ. ಯಾವುದು ನಮ್ಮನ್ನು ಆಳಬೇಕು ಅಂತ ಬಯಸುತ್ತೆವೆಯೋ ಅಂತಹ ನ್ಯಾಯ, ಸ್ವಾತಂತ್ರ್ಯದಿಂದ ಎಂದಿಗೂ ಪ್ರತ್ಯೇಕಿಸಲ್ಪಡಕೂಡದು. ಕೆಲವು ಸಂದರ್ಭಗಳಲ್ಲಿ ಸ್ವಾತಂತ್ರ್ಯವನ್ನು ತ್ಯಾಗ ಮಾಡಬೇಕಾಗಿ ಬರುವಂಥ ಯಾವುದೇ ಅಭಿಪ್ರಾಯಕ್ಕೂ ಲೇಖಕ ಜಗ್ಗ ಕೂಡದು. ಕೆಲಸದ ಹಕ್ಕಿನಂತೆ ಅಥವಾ ಒಳ್ಳೆಯ ಸಂಬಳದಂತೆ ಲೇಖಕರು ತಮ್ಮ ಸ್ವಾತಂತ್ರ್ಯವನ್ನು ಒಂದು ಅಗತ್ಯದಂತೆ ಕಾಪಾಡಿಕೊಳ್ಳಬೇಕು.

       ನನ್ನ ಅಂತ:ಸಾಕ್ಷಿ ತುಂಬಾ ಗಡಸಾದದ್ದು. ಸಾಯುವ ಕೊನೆಯ ದಿನದವರೆಗೂ ನಾನು ಬರೆಯಬಲ್ಲೆ ಎನ್ನುವುದು ನನಗೆ ಗೊತ್ತು. ಬರವಣಿಗೆಯೇ ನನ್ನ ಧರ್ಮ, ಬರವಣಿಗೆಯೇ ನನ್ನ ಬದುಕು.

(ಮಯೂರ ೨೦೧೦ ರ ಸಂಚಿಕೆಯಲ್ಲಿ ಪ್ರಕಟವಾದ ನೊಬೆಲ್ ಪ್ರಶಸ್ತಿ ಪುರಸ್ಕೃತ ಮಾರಿಯೋ ವರ್ಗಾಸ್ ಯೋಸಾನ ಸಂದರ್ಶನದಿಂದ)

ಚಲಂ ಗೆ ಅದು ಹೇಗೆ ಸಾಧ್ಯವಾಯಿತು?


       ಕಡು ವ್ಯಾಮೋಹಿಯ ಹಾಗೆ, ಸಂತನ ಹಾಗೆ, ಎಲ್ಲವನ್ನು ಮೀರಿಯೂ ಮೀರದವನ ಹಾಗೆ, ನಮ್ಮನ್ನು ಕಂಗೆಡಿಸುವವನ ಹಾಗೆ, ನಾವು ಸಾಧನೆ, ಸುಖ, ತೃಪ್ತಿ, ನೆಮ್ಮದಿ ಅಂದುಕೊಂಡಿದ್ದನ್ನೆಲ್ಲ ಕೇವಲ ನಮಗೆ ನಾವೇ ಹೇಳಿಕೊಂಡ ಅಪ್ಯಾಯಮಾನ ಸುಳ್ಳು ಎಂದೆನಿಸಿ ಕಂಗಾಲಾಗುವ ಹಾಗೆ, ಅದು ಅರಿವಾಗಿಯೂ ಆ ಸುಳ್ಳನ್ನು ಧಿಕ್ಕರಿಸುವ ಧೈರ್ಯವಾಗದ ಹಾಗೆ. ಚಲಂ ನಿಜಕ್ಕೂ ಹಾಗಿದ್ದರಾ? ಅವರು ಹಾಗಿದ್ದರೆ ನಾವೇಕೆ ಹೀಗಿದ್ದೇವೆ? ಅದೇ ಭೂಮಿ, ಅದೇ ಬಾನು, ಅದೇ ಗಾಳಿ, ಅದೇ ನೀರು ಸೃಷ್ಟಿ ಮಾತ್ರ ಬೇರೆ ಬೇರೆ. ಅದು ನಮ್ಮ ಮಿತಿಯಾ?

       ಅಹಂಕಾರದ ಲವಲೇಶವೂ ಇಲ್ಲದೆ ಆತ್ಮ ಚರಿತ್ರೆ ಬರೆಯುವುದಾದರೂ ಹೇಗೆ? ನಾನೆಂಬ ಮಮಕಾರವನ್ನು ತೊರೆದು ತನ್ನ ಬದುಕನ್ನು ನಡುದಾರಿಯಲ್ಲಿ ಸತ್ತು ಬಿದ್ದ ಅಪರಿಚಿತ ಶವವನ್ನು ನೋಡುವಷ್ಟು ಪರಕೀಯ ಭಾವದಿಂದ ನೋಡುವುದು ಸಾಧ್ಯವಾ? ಚಲಂ ಗೆ ಅದು ಹೇಗೆ ಸಾಧ್ಯವಾಯಿತು?

(ರವಿ ಬೆಳಗೆರೆ ಅನುವಾದಿಸಿರುವ 'ಚಲಂ' ಆತ್ಮಕಥೆಯಲ್ಲಿನ ಜೋಗಿ ಅವರ ಲೇಖನದಿಂದ)

ಓದುಗರ ಏಕಾಂತ 


         ಬರಹಗಾರರಿಗೆ ಆಶ್ಚರ್ಯವಾಗಬಹುದು. ಬರಹಗಾರರ ಪ್ರವೇಶವೆಂಬುವುದು (ರೈಟರ್ಸ್ ಸ್ಪೇಸ್) ಕೊನೆಗೂ ಇರುವುದು ಓದುಗರ ಏಕಾಂತದಲ್ಲಿ. ಓದುಗನ ಏಕಾಂತವನ್ನು ಪ್ರವೇಶಿಸಬಲ್ಲ ಕೃತಿಗಳು ದೊಡ್ಡ ದೊಡ್ಡ ಪಲ್ಲಟಗಳಿಗೆ, ಜಿಗಿತಗಳಿಗೆ ಕಾರಣವಾಗುತ್ತವೆ. ಒಂದು ಕೃತಿ ಸುಂದರವಾಗಿದ್ದು, ನಿಪುಣವಾಗಿದ್ದು, ಕುಶಲತೆಯಿಂದ ಕೂಡಿದ್ದು ಕೂಡ ಓದುಗನ ಏಕಾಂತವನ್ನು ಪ್ರವೇಶಿಸದೇ ಹೋಗಬಹುದು. ಇಲ್ಲ ಏಕಾಂತದ ಹೊರವಲಯವನ್ನು ಪ್ರವೇಶಿಸಿ ಏನೂ ಪ್ರಭಾವ ಬೀರದೆ ಹೋಗಬಹುದು. ನಾವೆಲ್ಲಾ ಪ್ರತಿನಿತ್ಯವೂ ಎದುರಿಸುವ ಬಹುಪಾಲು ಕೃತಿಗಳು ಈ ಪೈಕಿಯವೆ. ಓದುಗ ಏಕಾಂತದಲ್ಲಿದ್ದಾಗ ತನ್ನನ್ನೂ, ತಾನು ಓದುತ್ತಿರುವ ಕೃತಿಯನ್ನೂ ಹೇಗೆ ಪರಿಭಾವಿಸುತ್ತಾನೆ ಎಂಬುದರ ಬಗ್ಗೆ ಯೋಚಿಸದೆ ಬರೆಯುವ ಬಹುಪಾಲು ಲೇಖಕರು ಸಹಸ್ರಾರು ಪ್ರತಿಗಳಲ್ಲಿ, ಗ್ರಂಥಾಲಯದ ಅಲ್ಮೆರಾಗಳಲ್ಲಿ ಉಳಿದು ಬಿಡುತ್ತಾರೆ. ಕೆಲವು ಲೇಖಕರು ಮಾತ್ರ ಓದುಗನ ಏಕಾಂತಕ್ಕೆ ಲಗ್ಗೆ ಹಾಕಲು ಪ್ರಯತ್ನಿಸುತ್ತಾರೆ. 

(ಕೆ.ಸತ್ಯನಾರಾಯಣ ಅವರ 'ಖಾಸಗಿ ವಿಮರ್ಶೆ' ಪುಸ್ತಕದಿಂದ)

ಸತ್ಯವಲ್ಲದೆ ಬೇರೇನೂ ಇಲ್ಲ 


        ಈ ಎಲ್ಲಾ ಪುಟಗಳೊಳಗೆ ಇರುವುದೆಲ್ಲವೂ ಸತ್ಯ. ಸತ್ಯವಲ್ಲದೆ ಬೇರೇನೂ ಇಲ್ಲ. ನಾನು ಹೇಳಿರುವುದೆಲ್ಲವೂ ಸತ್ಯ. ಓದುಗರು ಅರಗಿಸಿಕೊಳ್ಳಬಹುದಾದ ಬದುಕಿನ ಅಪರೂಪವೆನ್ನಿಸಬಹುದಾದ ಬಹುಪಾಲು ಘಟನೆಗಳನ್ನು ಶೇಕಡಾ ನೂರಕ್ಕೆ ತೊಂಬತ್ತರಷ್ಟು ನೈಜವಾಗಿ ಬರೆದಿರುವೆ. ಇದು ನನ್ನ ಕಥೆ ಮಾತ್ರವಲ್ಲ. ನನ್ನ ವಾರಿಗೆಯ ಮತ್ತು ಪ್ರಥಮ ಪಂಚ ವಾರ್ಷಿಕ ಯೋಜನೆಯ ಎಡ ಬಲ ಹುಟ್ಟಿರುವ ಎಲ್ಲರ ಜೀವನದ ಕಥೆ ಕೂಡ. ನಮ್ಮೆಲ್ಲರ ಸಂಕಟಗಳು ಆಯಾ ಕಾಲ ಘಟ್ಟದ ನಿಸ್ತೇಜ ಚಹರೆಗಳಿಗೆ ಸಂಬಂಧಿಸಿದವು ಕೂಡ. ಆದ್ದರಿಂದ ನನ್ನ ವಾರಿಗೆಯ ನಮ್ಮನ್ನು ಹುರಿದು ಮುಕ್ಕಿದ ಆ ದಿನಗಳ ಪ್ರತಿನಿಧಿಯಾಗಿ ನಾನಿಷ್ಟೊಂದು ಬರೆಯಲೇ ಬೇಕಾಯಿತು. ಈ ಬರಹದೊಳಗೆ ಸ್ಲಂಗಳಿರುವಂತೆಯೇ ಹಲವು ಸುಂದರ ಬಡಾವಣೆಗಳೂ ಇವೆ. ಹತಾಶೆ, ಸಂಕಟಗಳು, ಹುಂಬತನ, ಸಾಹಸಗಳು, ಕನಸುಗಳು, ನನಸುಗಳಿರುವಂತೆಯೇ ಒಂದು ಕಾಲ ಘಟ್ಟದ, ಒಂದು ಸಮಾಜದ, ಒಂದು ಪ್ರದೇಶದ, ಸಾಹಿತ್ಯದ ಇತಿಹಾಸವೂ ಇದೆ. ಇಲ್ಲಿನ ಅಕ್ಷರಗಳು ಕೇವಲ ಅಕ್ಷರಗಳಲ್ಲ. ಒಂದೊಂದು ಅಕ್ಷರ ಸಂಕಟದ ಕನ್ನಡಿಯಲ್ಲಿ ಗೋಚರಿಸುವ ಪ್ರತಿಬಿಂಬವೂ ಹೌದು. ಗ್ರಹಿಕೆ ಮತ್ತು ಸತ್ಯದ ನಡುವಿನ ಕಂದಕವನ್ನು ಮುಚ್ಚುವ ಪ್ರಯತ್ನವೇ ನನ್ನೀ 'ಗಾಂಧಿ ಕ್ಲಾಸು'.

(ಕುಂವೀ ಆತ್ಮಕಥೆ 'ಗಾಂಧಿ ಕ್ಲಾಸು' ಪುಸ್ತಕದಿಂದ)


ಪ್ರೀತಿಸುವವರು ಬಹುಶ: ಲೇಖಕರಾಗಿರುವುದಿಲ್ಲ 


        ರಮ್ಯತೆಯು ಕಲ್ಪನಾ ಶಕ್ತಿಯನ್ನು ಅಣಕವಾಡುತ್ತದೆಂದು ಅಮೇರಿಕನ್  ಕವಿ ವಾಲೇಸ್ ಸ್ಟೀವನ್ಸ್ ಹೇಳಿದ್ದನ್ನು ಇಲ್ಲಿ ಜ್ಞಾಪಿಸೋಣ. ಭಾವುಕತೆಯ ಭಾವುಕತೆಯು ಸಂವೇದನಾ ಶಕ್ತಿಗೆ  ಹೇಗೋ ಹಾಗೆ ರಮ್ಯತೆಯು ಕಲ್ಪನಾ ಶಕ್ತಿಗೆ ಎನ್ನುತ್ತಾನೆ ಈತ. ಅತಿ ರಮ್ಯತೆಯು ನಮ್ಮನ್ನು ಆತ್ಮರತಿಗೂ ಅತಿ ಭಾವುಕತೆಯು ಆತ್ಮಾವಲೊಕನಕ್ಕೂ ಕೊಂಡೊಯ್ದು ಕೂಡ್ರಿಸಬಹುದೆಂಬುದು ವಾಲೇಸ್ ಸ್ಟೀವನ್ಸ್ ನ  ಮತ. ಲೇಖಕನಾದವನಿಗೆ, ಕಲಾವಿದನಿಗೆ ಸಂವೇದನಾ ಶಕ್ತಿ ಮತ್ತು ಕಲ್ಪನಾ ಶಕ್ತಿಗಳು ಎಲ್ಲರಕ್ಕಿಂತ ಹೆಚ್ಚು. ಇವೆರಡನ್ನೂ ಆತ ಎಂಥ ಸಂದರ್ಭಗಳಲ್ಲೂ ಬಿಟ್ಟು ಕೊಡಬಾರದು. ಈ ಗುಣಗಳೇ ಆತನನ್ನು ಎಲ್ಲರ ಮಧ್ಯೆ ಒಂಟಿಯನ್ನಾಗಿ ಮಾಡುತ್ತದೆಂದು ತೋರುತ್ತದೆ.

        ಲಾರೆನ್ಸ್ ತನ್ನನ್ನು ಪ್ರೀತಿಸಿದ ಹುಡುಗಿಯರನ್ನೇ ತನ್ನ ಕತೆ ಕಾದಂಬರಿಗಳ ನಾಯಕಿಯರನ್ನಾಗಿ ಮಾಡಿದಾಗ ಆತನ ಪ್ರೀತಿ  ಯಾವ ಬಗೆಯದಿತ್ತು ಎಂಬ ಸಂದೇಹವೆಳುತ್ತದೆ. ನಿಜಕ್ಕೂ ಪ್ರೀತಿಸುವವರು ಬಹುಶ: ಲೇಖಕರಾಗಿರುವುದಿಲ್ಲ. ಅವರು ನಾವು ದಿನವೂ ಬಸ್ಸಿನಲ್ಲಿ, ಪಾರ್ಕಿನಲ್ಲಿ, ಸಿನಿಮಾಗಳಲ್ಲಿ, ಹೋಟೆಲುಗಳಲ್ಲಿ, ಗುಡಿಸಿಲುಗಳಲ್ಲಿ ಕಾಣಬಹುದಾದ ಸಾಮಾನ್ಯ ಜನರು. ಅದೇ ರೀತಿ ನಿಜಕ್ಕೂ ಕ್ರಾಂತಿಕಾರಿಗಳಾದವರು ಕೂಡ ಲೇಖಕರಾಗಿರುವುದಿಲ್ಲ. ಕ್ರಾಂತಿಕಾರಿಗಳು ಕ್ರಾಂತಿಯನ್ನು ಮಾಡುತ್ತಲೇ ಇರುತ್ತಾರೆ. ಇಲ್ಲಿ ಮತ್ತೆ ಲಾರೆನ್ಸ್ ನದೇ  ಉದಾಹರಣೆಯನ್ನು ಕೊಡುವುದಾದರೆ ಆತ ಫ್ಲೋರಿಡಾದಲ್ಲೋ ಇನ್ನೆಲ್ಲೋ ಒಂದು ಆದರ್ಶ ಗ್ರಾಮವನ್ನು  ಕಟ್ಟುತ್ತೇನೆ ಎನ್ನುತ್ತಿದ್ದ. ಅದಕ್ಕೆ ಹೊಸ ಹೊಸ ಹೆಸರುಗಳನ್ನು ಹುಡುಕುತ್ತಿದ್ದ. ಇಡಿಯ ಲೋಕದ ವಿರುದ್ಧವೇ ಲಾರೆನ್ಸ್ ಗೆ ಸಿಟ್ಟಿತ್ತು. ಆದ್ದರಿಂದಲೇ ಇಂಥ ಲೋಕವನ್ನು ನಾಶಪಡಿಸಿ ತಾನು ಹೊಸದೊಂದು ಲೋಕವನ್ನು  ಸೃಷ್ಟಿಸುತ್ತೇನೆ ಎಂದುಕೊಳ್ಳುತ್ತಿದ್ದ. ಆದರೆ ಲಾರೆನ್ಸ್ ನ ಈ ಯೋಜನೆ ಕಾರ್ಯ ರೂಪಕ್ಕೆ ಬರಲಿಲ್ಲ. ಬಹುಶ: ಅದರಿಂದ ಯಾರಿಗೂ ಅಚ್ಚರಿಯೆನಿಸಲಿಲ್ಲ. ಅಲ್ದಸ್ ಹಕ್ಸಲಿ ಹೇಳುವಂತೆ ಇದೊಂದೂ ಮುಖ್ಯವಾಗಿರಲಿಲ್ಲ. ಮುಖ್ಯವಾಗಿದ್ದುದ್ದೆಂದರೆ ಲಾರೆನ್ಸ್ ಮಾತ್ರ ಹಾಗೂ ಆತನ ಒಳಗೆ ಉರಿಯುತ್ತಿದ್ದ ಆತ ಬರೆದ ಪ್ರತಿಯೊಂದು ಬರಹದಿಂದಲೂ ಉಜ್ವಲವಾಗಿ ಬೆಳಗುತ್ತಿದ್ದ ಬೆಂಕಿ.

        ಲಾರೆನ್ಸ್ ಫ್ಲೋರಿಡಾದಲ್ಲಿ ಕಾಲನಿಯನ್ನು ಸ್ಥಾಪಿಸಲಿಲ್ಲ. ಅಂಥ ಕಾಲನಿಗಳನ್ನು ಸ್ಥಾಪಿಸುವುದಕ್ಕೆ ರಜನೀಶರಂಥವರು  ಇದ್ದಾರೆ. ಒಂದು ವೇಳೆ ಲಾರೆನ್ಸ್ ಒಂದು ಆದರ್ಶ ಲೋಕವನ್ನು ಸೃಷ್ಟಿಸಿದ್ದರೂ ಅದು ಹೆಚ್ಚು ಕಾಲ ಹಾಗೆ ಉಳಿಯುತ್ತಿರಲಿಲ್ಲ. ಮಾತ್ರವಲ್ಲ ಅವನಿಂದ ಶ್ರೇಷ್ಠ ಕೃತಿಗಳ  ನಿರ್ಮಾಣವೂ ಆಗುತ್ತಿರಲಿಲ್ಲ. ಆದರ್ಶಗಳು ಕನಸಾಗಿ ಉಳಿಯುವುದೇ ಒಳ್ಳೆಯದೆಂದು ಕಾಣುತ್ತದೆ. ಇದರರ್ಥ ಆದರ್ಶಗಳು ಯಾವ ಗಳಿಗೆಯಲ್ಲೂ  ನನಸಾಗಲಾರವು ಎಂದಲ್ಲ. ಆದರೆ ನೆನಪಾಗಿ ಅವು ಬಹಳ ಕಾಲ ಉಳಿಯಲಾರವು. ಕನಸು ಮತ್ತು ನೆನಪುಗಳ  ಸಂಘರ್ಷ  ನಿರಂತರವಾದುದು ಮತ್ತು ಈ ಸಂಘರ್ಷ   ಇರುವ ತನಕ ಕನಸುಗಳೂ ಬೇಕು ಮತ್ತು ಅವನ್ನು ಕಾಣುವವರೂ ಬೇಕು.

(ಶೂದ್ರ ಶ್ರೀನಿವಾಸ ಅವರ 'ಕನಸಿಗೊಂದು ಕಣ್ಣು' ಪುಸ್ತಕದ ಕೆ.ವಿ.ತಿರುಮಲೇಶ ಅವರ ಮುನ್ನುಡಿಯಿಂದ)

ಕೊನೆಯ ಮಾತು 


               ಪುಸ್ತಕವೊಂದು ಅದು ಅನೇಕ ಗೆಳೆಯರಿಗೆ ಸಮ ಎಂದು ಪುಸ್ತಕ ಪ್ರಿಯನೊಬ್ಬ ಹೇಳಿದ ಮಾತಿದು. ಒಂದು ಉತ್ತಮ ಪುಸ್ತಕದ ಓದು ಅದು ನಮ್ಮ ಬದುಕಿನ  ದಿಕ್ಕನ್ನೇ ಬದಲಿಸಬಲ್ಲದು. ಇವತ್ತಿನ ಏನೆಲ್ಲಾ ಮನೋರಂಜನಾ ಮಾಧ್ಯಮಗಳೆದರು ಪುಸ್ತಕದ ಓದು ಕಡಿಮೆಯಾಗುತ್ತಿದೆ ಎನ್ನುವ ಮಾತು ನಿಜ. ಆದರೆ ಪುಸ್ತಕವೊಂದನ್ನು ಓದಿದ ಆ ಕ್ಷಣ ಮನಸ್ಸಿಗೆ ಸಿಗುವ ತೃಪ್ತಿ ಮತ್ತು ಸಮಾಧಾನ ಯಾವ ಆಧುನಿಕ ಮನೋರಂಜನಾ ಮಾಧ್ಯಮಗಳಿಂದಲೂ ದೊರೆಯಲಾರದು. ಒಂದು ಓದು ನಮ್ಮನ್ನು ವಿವೇಚನೆಗೆ ಹಚ್ಚುತ್ತದೆ, ಚಿಂತನೆಯ ಕಡೆಗೆ  ಕರೆದೊಯ್ಯುತ್ತದೆ, ನಮ್ಮಲ್ಲೊಂದು ಸೃಜನಶೀಲತೆ ವಿಕಸಿಸಲು ನೆರವಾಗುತ್ತದೆ. ಒಂದರ್ಥದಲ್ಲಿ ನಮ್ಮನ್ನು ಮನುಷ್ಯರಾಗುವತ್ತ ಹೆಜ್ಜೆ ಹಾಕುವಂತೆ ಮಾಡುವ ಶಕ್ತಿ ಮತ್ತು ಸಾಮರ್ಥ್ಯ ಓದಿಗಿದೆ.  

-ರಾಜಕುಮಾರ.ವ್ಹಿ.ಕುಲಕರ್ಣಿ (ಕುಮಸಿ), ಬಾಗಲಕೋಟೆ 


No comments:

Post a Comment