ಎಲ್ಲರಿಗೂ ಗೊತ್ತಿರುವಂತೆ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಕನ್ನಡದ ಪ್ರಮುಖ ಬರಹಗಾರರಲ್ಲೊಬ್ಬರು. ತಂದೆ ಕುವೆಂಪು ಅವರ ಗಾಢ ಪ್ರಭಾವಳಿಯಿಂದ ಬಹುದೂರ ನಿಂತು ಕನ್ನಡ ಸಾಹಿತ್ಯಕ್ಕೆ ವಿಶಿಷ್ಟ ಕೊಡುಗೆ ನೀಡಿದ ಅಪೂರ್ವ ಬರಹಗಾರ. ಕುವೆಂಪು ಮಲೆನಾಡಿನಿಂದ ಮೈಸೂರಿಗೆ ಬಂದು ನೆಲೆಸಿದರೆ ತೇಜಸ್ವಿ ಮೈಸೂರಿನಿಂದ ಮಲೆನಾಡಿಗೆ ಹೋಗಿ ಬದುಕು ಕಟ್ಟಿಕೊಂಡವರು. ಲೇಖಕರಾಗಿ, ಪ್ರಕಾಶಕರಾಗಿ, ಕೃಷಿಕರಾಗಿ, ಸಂಶೋಧಕರಾಗಿ, ಹೋರಾಟಗಾರರಾಗಿ, ಹವ್ಯಾಸಿ ಛಾಯಾಗ್ರಾಹಕರಾಗಿ ವಿವಿಧ ಪ್ರಕಾರದ ಸೃಜನಾತ್ಮಕ ಆಯಾಮಗಳನ್ನು ಅಭಿವ್ಯಕ್ತಿಗೊಳಿಸಿದ ವ್ಯಕ್ತಿತ್ವ ತೇಜಸ್ವಿ ಅವರದು. ತೇಜಸ್ವಿ ಮಹಾ ಮುಂಗೋಪಿಯಂತೆ, ಅವರ ಸ್ಕೂಟರ್ ಗೆ ಒಂದೇ ಸೀಟಂತೆ, ಪ್ರಶಸ್ತಿಗಳೆಂದರೆ ಅವರಿಗೆ ಅಲರ್ಜಿ ಹೀಗೆ ತೇಜಸ್ವಿ ಅವರ ಕುರಿತು ಅನೇಕ ವರ್ಣರಂಜಿತ ಸುದ್ದಿಗಳು ರೆಕ್ಕೆ ಬಿಚ್ಚಿಕೊಂಡು ಹಾರಾಡುತ್ತಿದ್ದರೆ ಅದು ನಮಗೆಲ್ಲ ಕುತೂಹಲದ ಸಂಗತಿಯಾಗಿರುತ್ತಿತ್ತು. ಕಾಡಿನ ಬದುಕಿನ ಅನೇಕ ವಿಸ್ಮಯಗಳನ್ನು ಬರವಣಿಗೆಯ ಮೂಲಕ ತೆರೆದಿಟ್ಟ ತೇಜಸ್ವಿ ಅವರ ಬದುಕು ನಮಗೆಲ್ಲ ಅಚ್ಚರಿ ಮತ್ತು ವಿಸ್ಮಯಗಳ ಸಂಗತಿ. ಕೊನೆಗೂ 'ನನ್ನ ತೇಜಸ್ವಿ' ಪುಸ್ತಕದ ಮೂಲಕ ಶ್ರೀಮತಿ ರಾಜೇಶ್ವರಿ ಅವರು ಆ ಎಲ್ಲ ಕುತೂಹಲಗಳಿಗೆ ಉತ್ತರಿಸಿದ್ದಾರೆ. ಒಂದರ್ಥದಲ್ಲಿ ಇದು ತೇಜಸ್ವಿ ಅವರ ಆತ್ಮಕಥೆ.
'ನನ್ನ ತೇಜಸ್ವಿ' ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಮರಣಾನಂತರ ಅವರ ಪತ್ನಿ ಶ್ರೀಮತಿ ರಾಜೇಶ್ವರಿ ಅವರು ಬರೆದ ಕೃತಿ. ತೇಜಸ್ವಿ ಅವರು ಬದುಕಿದ್ದಾಗಿನ ಘಟನೆ ಇದು ಆಗ ಅವರ ಸಾಹಿತಿ ಮಿತ್ರರೋರ್ವರು ರಾಜೇಶ್ವರಿ ಅವರಿಗೆ ಪುಸ್ತಕ ಬರೆಯುವಂತೆ ಸೂಚಿಸಿದ್ದರಂತೆ. ಅವರ ಮಾತಿಗೆ ತೇಜಸ್ವಿ 'ಅವಳು ದಿನಸಿ ಚೀಟಿ ಬರೆಯಲಿಕ್ಕೆ ಮಾತ್ರ ಲಾಯಕ್ಕು' ಎಂದು ಹಾಸ್ಯ ಮಾಡಿದ್ದನ್ನು ರಾಜೇಶ್ವರಿ ಈ ಪುಸ್ತಕದಲ್ಲಿ ಉಲ್ಲೇಖಿಸಿರುವರು. ಅಂದು ತೇಜಸ್ವಿ ಅವರ ಪರಿಹಾಸ್ಯಕ್ಕೆ ಒಳಗಾದ ಅದೇ ಗೃಹಿಣಿ ೫೪೮ ಪುಟಗಳ 'ನನ್ನ ತೇಜಸ್ವಿ' ಪುಸ್ತಕ ಬರೆದಿರುವುದು ಸಣ್ಣ ಸಂಗತಿಯಲ್ಲ. ತೇಜಸ್ವಿ ಬದುಕಿದ್ದರೆ ಹೇಗೆ ಪ್ರತಿಕ್ರಿಯಿಸುತ್ತಿದ್ದರೋ ಆದರೆ ಕನ್ನಡ ಸಾಹಿತ್ಯದ ಓದುಗರು ಈ ಕೃತಿಗೆ ಸೃಜನಶೀಲತೆಯ ನೆಲೆಯಲ್ಲಿ ಅತ್ಯುತ್ತಮವಾಗಿಯೇ ಸ್ಪಂದಿಸಿರುವರು. ಓದಿದವರೆಲ್ಲ ರಾಜೇಶ್ವರಿ ಅವರ ಬರವಣಿಗೆಯನ್ನು ಮೆಚ್ಚಿಕೊಂಡಿರುವರು.
ಪುಸ್ತಕದಲ್ಲಿ ಒಟ್ಟು ೨೧ ಅಧ್ಯಾಯಗಳಿವೆ. ಪುಸ್ತಕದ ವಿಷಯ ವಸ್ತು ಮುಖ್ಯವಾಗಿ ತೇಜಸ್ವಿ ಅವರನ್ನೇ ಕೇಂದ್ರವಾಗಿಟ್ಟುಕೊಂಡರು ಕುವೆಂಪು ಅವರ ವ್ಯಕ್ತಿ ಚಿತ್ರಣ, ಆ ಕಾಲಘಟ್ಟದ ಚಳುವಳಿಗಳು, ಕುವೆಂಪು ಅವರ ಪತ್ನಿ ಮತ್ತು ಮಕ್ಕಳು, ಮಲೆನಾಡಿನ ಮಳೆಯ ಸೊಗಸು, ಕಾಫಿ ಬೆಳೆಗಾರರ ಸಮಸ್ಯೆಗಳು ಹೀಗೆ ಅನೇಕ ವಿಷಯಗಳು ಓದಲು ಸಿಗುತ್ತವೆ. ತೇಜಸ್ವಿ ಅವರ ಜೊತೆ ಜೊತೆಗೆ ಕುವೆಂಪು ಅವರ ವ್ಯಕ್ತಿತ್ವವನ್ನು ಲೇಖಕಿ ಅತ್ಯಂತ ಸುಂದರವಾಗಿ ಕಟ್ಟಿ ಕೊಟ್ಟಿರುವರು. ಪುಸ್ತಕದಲ್ಲಿನ ಬರವಣಿಗೆಯ ಶೈಲಿ ಅತ್ಯಂತ ವಿಶಿಷ್ಟವಾಗಿದ್ದು ಓದಿದ ನಂತರ ಇದು ಲೇಖಕಿಯ ಪ್ರಥಮ ಕೃತಿಯೇ ಎನ್ನುವ ಅಚ್ಚರಿ ಓದುಗನಲ್ಲಿ ಮೂಡುತ್ತದೆ. ದೀರ್ಘಕಾಲದಿಂದ ಬರವಣಿಗೆಯಲ್ಲಿ ತೊಡಗಿಸಿಕೊಂಡ ಪರಿಣಿತ ಬರಹಗಾರನೋರ್ವನ ಶೈಲಿ ಪುಸ್ತಕದುದ್ದಕ್ಕೂ ಕಾಣಸಿಗುತ್ತದೆ. ತೇಜಸ್ವಿ ಅವರೊಂದಿಗೆ ದೀರ್ಘಕಾಲದಿಂದ ಕಟ್ಟಿಕೊಂಡು ಬಂದ ಅನುಭವಗಳಿಗೆ ಲೇಖಕಿ ಅಕ್ಷರರೂಪ ಕೊಟ್ಟು ಓದುಗರೆದುರು ಒಂದು ವಿಶಿಷ್ಟ ವ್ಯಕ್ತಿತ್ವವನ್ನು ಅನಾವರಣಗೊಳಿಸಿರುವರು. ಪುಸ್ತಕದ ಪ್ರತಿ ಪುಟದಲ್ಲಿ ತೇಜಸ್ವಿ ಅವರ ವ್ಯಕ್ತಿತ್ವ ತನ್ನ ಛಾಪು ಮೂಡಿಸಿದೆ. ಓದುತ್ತ ಹೋದಂತೆ ತೇಜಸ್ವಿ ಅವರ ಬದುಕಿನ ಅನೇಕ ಮಗ್ಗಲುಗಳ ಪರಿಚಯ ಓದುಗನಿಗಾಗುತ್ತದೆ. ತೇಜಸ್ವಿ ಅವರ ಕುರಿತಾದ ತನ್ನ ಎಲ್ಲ ಕುತೂಹಲಗಳು ಮತ್ತು ಅಚ್ಚರಿಗಳಿಗೆ ಓದುಗ ಈ ಪುಸ್ತಕವನ್ನು ಓದುವುದರ ಮೂಲಕ ಉತ್ತರ ಕಂಡುಕೊಳ್ಳುತ್ತಾನೆ.
ಪತ್ರಗಳು 'ನನ್ನ ತೇಜಸ್ವಿ' ಪುಸ್ತಕದ ಪ್ರಮುಖ ಅಧ್ಯಾಯ. ಸುಮಾರು ೪೭ ಪುಟಗಳಿಗೆ ವಿಸ್ತರಿಸಿರುವ ಈ ಅಧ್ಯಾಯದಲ್ಲಿ ಒಟ್ಟು ೭೫ ಪತ್ರಗಳಿವೆ. ೧೯೬೧-೬೨ರ ಅವಧಿಯಲ್ಲಿ ಪೂರ್ಣಚಂದ್ರ ತೇಜಸ್ವಿ ಅವರು ರಾಜೇಶ್ವರಿ ಅವರಿಗೆ ಬರೆದ ಪತ್ರಗಳವು. ಆಗಿನ್ನೂ ತೇಜಸ್ವಿ ಅವರಿಗೆ ೨೩ರ ಹರೆಯ. ಅದೇ ಆಗ ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಶಿಕ್ಷಣವನ್ನು ಪೂರ್ಣಗೊಳಿಸಿದ ಘಳಿಗೆ ಅದು. ಮಾನಸ ಗಂಗೋತ್ರಿಯಲ್ಲಿ ಪರಿಚಯವಾದ ತೇಜಸ್ವಿ ಮತ್ತು ರಾಜೇಶ್ವರಿ ಅವರ ನಡುವೆ ಪ್ರೀತಿ ಮೊಳಕೆಯೊಡೆದ ಪ್ರಾರಂಭದ ದಿನಗಳವು. ಅಗಲುವಿಕೆಯ ಆ ವಿರಹ ವೇದನೆಯೇ ಅವರಿಬ್ಬರ ನಡುವೆ ನೂರಾರು ಪತ್ರಗಳು ಬಟಾವಡೆಯಾಗಲು ಕಾರಣವಾಗಿರಬಹುದು. ಆ ಪತ್ರಗಳು ಪ್ರೇಮಿಯೊಬ್ಬ ತನ್ನ ಪ್ರಿಯತಮೆಗೆ ಬರೆದ ಪತ್ರಗಳಂತಿರದೆ ಅಲ್ಲಿ ಅನೇಕ ಸಂಗತಿಗಳು ಚರ್ಚಿಸಲ್ಪಟ್ಟಿವೆ. ಈ ಪತ್ರಗಳನ್ನು ಯಥಾವತ್ತಾಗಿ ಓದುವದರಿಂದ ತೇಜಸ್ವಿ ಅವರ ವ್ಯಕ್ತಿತ್ವದ ಸ್ಪಷ್ಟ ಚಿತ್ರಣ ಸಿಗುತ್ತದೆ ಎನ್ನುವ ಕಾರಣದಿಂದ ಈ ಕಾಗದಗಳನ್ನು ಕೊಡುತ್ತಿರುವೆನು ಎಂದು ಲೇಖಕಿ ಹೇಳಿಕೊಂಡಿರುವರು. ಲೇಖಕಿ ಹೇಳಿದಂತೆ ಅವು ಸಾಮಾನ್ಯ ಪತ್ರಗಳಲ್ಲ. ಒಂದು ರೀತಿಯ ವೈಚಾರಿಕ ಕ್ರಾಂತಿಯೇ ಆ ಪತ್ರಗಳಲ್ಲಿ ಒಡಮೂಡಿದೆ. ಪತ್ರಗಳ ಮೂಲಕ ತೇಜಸ್ವಿ ರಾಜೇಶ್ವರಿ ಅವರಿಗೆ ಅನೇಕ ಸಂಗತಿಗಳನ್ನು ಪರಿಚಯಿಸುತ್ತಾರೆ. ಜೊತೆಯಲ್ಲಿ ಹಸಿ ಹುಡುಗಾಟಿಕೆಯೂ ಇದೆ. ಒಂದು ಪತ್ರದಲ್ಲಿ ತೇಜಸ್ವಿ ಹೀಗೆ ಬರೆಯುತ್ತಾರೆ 'Love ಎಂದರೆ ಏನು ಗೊತ್ತಾ. ಒಂದು ವ್ಯಕ್ತಿತ್ವದ ಸಂಪೂರ್ಣ ನಗ್ನತ್ವವನ್ನು ಸ್ವೀಕರಿಸುವುದು. ದೈಹಿಕವಾಗಿ, ಮಾನಸಿಕವಾಗಿ'. ಇನ್ನೊಂದು ಪತ್ರದಲ್ಲಿ ಅಂತರ್ಜಾತಿ ವಿವಾಹದ ಕುರಿತು ತೇಜಸ್ವಿ ಬರೆಯುತ್ತಾರೆ 'Intercaste ಮದುವೆಯಾದ್ದರಿಂದ ಎಲ್ಲರ ಕೋಪ ಅಸಹಕಾರಕ್ಕೂ ನಾವು ಗುರಿಯಾಗಲೇ ಬೇಕಾಗುತ್ತದೆ. ಅದಕ್ಕೆ ಮೊದಲೇ ಆರ್ಥಿಕವಾಗಿ ನಾವು ಸ್ಥಿರವಾಗಿಲ್ಲದಿದ್ದರೆ ಖಂಡಿತ ಬಹಳ ಕ್ಲೈಬ್ಯದ ಬಾಳನ್ನು ನಡೆಸಬೇಕಾಗುತ್ತದೆ. ಜೀವಮಾನದಾದ್ಯಂತ ಅನುಭವಿಸುವ ಈ ಯಾತನೆ ಕೊನೆಗೆ ನನ್ನ ಮಗಳಿಗೆ ಮದುವೆ ಮಾಡಲೂ ಅಸಾಧ್ಯವಾಗಿ ಕಂಡವರ ಕಾಲು ಹಿಡಿಯುವ ಅಸಹನೀಯ ಸ್ಥಿತಿಯನ್ನು ನಾನು ಕಲ್ಪಿಸಿಕೊಳ್ಳಲಾರೆ'. ಇಂಥ ಮಹತ್ವದ ವಿಚಾರಗಳನ್ನು ಚರ್ಚಿಸಿದ ಆ ಪತ್ರಗಳನ್ನು ಸುಮಾರು ಐದು ದಶಕಗಳಿಂದ ಅತ್ಯಂತ ಜೋಪಾನವಾಗಿ ಕಾಯ್ದುಕೊಂಡು ಬಂದಿರುವ ಲೇಖಕಿ ಅವುಗಳ ಮೂಲಕ ತೇಜಸ್ವಿ ಅವರ ವ್ಯಕ್ತಿತ್ವವನ್ನು ವಿಶಿಷ್ಟವಾಗಿಯೇ ಅನಾವರಣಗೊಳಿಸಿರುವರು. ಎಲ್ಲೋ ಕಳೆದು ಹೋಗುತ್ತಿದ್ದ ಪತ್ರಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿ ಓದುಗರಿಗೆ ದೊರೆಯುವಂತೆ ಮಾಡಿದ ಲೇಖಕಿಯ ಕಾರ್ಯ ಶ್ಲಾಘನೀಯ.
ಪುಸ್ತಕದ ಇನ್ನೊಂದು ಮಹತ್ವದ ಅಧ್ಯಾಯ ಆ ಕಾಲಘಟ್ಟದ ಚಳುವಳಿಗಳಿಗೆ ಸಂಬಂಧಿಸಿದ್ದು. ಸಾಹಿತ್ಯ ಚಳುವಳಿ, ನವ ನಿರ್ಮಾಣ ಕ್ರಾಂತಿ, ಜೆಪಿ ಆಂದೋಲನ, ರೈತ ಚಳುವಳಿ, ಭಾಷಾ ಚಳುವಳಿ, ದಲಿತ ಚಳುವಳಿ, ಜಾತಿ ವಿನಾಶ ಚಳುವಳಿ ಇತ್ಯಾದಿ ಚಳುವಳಿಗಳಲ್ಲಿ ತೇಜಸ್ವಿ ಅವರು ವಹಿಸಿದ ಪಾತ್ರದ ಕುರಿತಾಗಿ ರಾಜೇಶ್ವರಿ ಅವರು ನೆನಪು ಮಾಡಿಕೊಂಡಿರುವರು. ನಂಜುಂಡ ಸ್ವಾಮಿ, ಕಡಿದಾಳು ಶಾಮಣ್ಣ, ಎನ್.ಡಿ.ಸುಂದರೇಶ, ಬಿ.ಎನ್.ಶ್ರೀರಾಮ್, ಕೆ.ರಾಮದಾಸ, ಪಿ.ಲಂಕೇಶ್ ಇವರನ್ನೆಲ್ಲ ಕಟ್ಟಿಕೊಂಡು ತೇಜಸ್ವಿ ಕರ್ನಾಟಕದಾದ್ಯಂತ ಸಂಚರಿಸಿದ್ದು, ಜನಜಾಗೃತಿ ಮೂಡಿಸಲು ಪ್ರಯತ್ನಿಸಿದ್ದು, ಕೆಲವು ಸಂದರ್ಭಗಳಲ್ಲಿ ಜೀವಕ್ಕೆ ಕುತ್ತಾದ ಹೋರಾಟ, ತೇಜಸ್ವಿ ಅವರ ಮೇಲೆ ನಡೆದ ದಾಳಿ ಅನೇಕ ಪ್ರಸಂಗಗಳನ್ನು ಈ ಅಧ್ಯಾಯದಲ್ಲಿ ಸ್ಮರಿಸಿಕೊಳ್ಳಲಾಗಿದೆ. ಒಂದು ಹಂತದಲ್ಲಿ ಚಳುವಳಿಗಾರರ ನಡುವೆ ಮೂಡಿದ ಭಿನ್ನಾಭಿಪ್ರಾಯ, ಈ ಬೆಳವಣಿಗೆಯಿಂದ ಮನನೊಂದು ತೇಜಸ್ವಿ ಅವರು ಚಳುವಳಿಗಳಿಂದ ಹಿಂದೆ ಸರಿದದ್ದನ್ನು ಲೇಖಕಿ ಅತ್ಯಂತ ಭಾವಪೂರ್ಣವಾಗಿ ನೆನಪಿಸಿಕೊಂಡಿರುವರು. ಚಳುವಳಿಗಳ ವೈಫಲ್ಯವನ್ನು ಕುರಿತು ತೇಜಸ್ವಿ ರೈತ ಸಂಘದ ಮುಖಂಡರಾದ ನಂಜುಂಡಸ್ವಾಮಿ ಅವರಿಗೆ ಹೀಗೆ ಬರೆಯುತ್ತಾರೆ 'ನಾವು ಯಾರ ನೇತೃತ್ವದಲ್ಲಿ ಏನೇನು ಮಾಡಿದರೂ ಜಯಪ್ರಕಾಶರ ಚಳುವಳಿಯಂಥ ಎಚ್ಚರವನ್ನು ಸಧ್ಯಕ್ಕಂತೂ ಪ್ರಚೋದಿಸಲಾರೆವು. ಅಂಥದ್ದೊಂದು ಶತಮಾನಕ್ಕೊಂದು ಸಂಭವಿಸುವ ಮಹಾನ್ ಅವಕಾಶವನ್ನು ರಾಷ್ಟ್ರವು ಹಾಳುಮಾಡಿಕೊಂಡಿತು. ವೈಯಕ್ತಿಕವಾಗಿ ನಾವೂ ಪರಸ್ಪರ ಗುಮಾನಿ ಒಳಜಗಳಗಳಿಂದ ಹಾಳು ಮಾಡಿಕೊಂಡೆವು. ತೀರಾ ನಾಲಾಯಕ್ ಜನಗಳ ನಡುವೆ ನಾವು ಕಾರ್ಯ ಸಾಧನೆಗೆ ತೊಡಗಿದೆವು. ಅದನ್ನೆಲ್ಲಾ ನೆನಪಿಸಿಕೊಂಡರೆ ಕೋಪವೊಂದೆ ಸ್ಥಾಯಿ ಭಾವವಾಗಿ ಉಳಿಯುತ್ತದೆ'.
'ಸೊಸೆ ಕಂಡಂತೆ ಕುವೆಂಪು' ರಾಷ್ಟ್ರಕವಿಯ ವ್ಯಕ್ತಿತ್ವವನ್ನು ಅತ್ಯಂತ ಮನೋಜ್ಞವಾಗಿ ಚಿತ್ರಿಸಿದ ಅಧ್ಯಾಯವಿದು. ಇಲ್ಲಿ ಕುವೆಂಪು ಅವರನ್ನು ಕನ್ನಡದ ಒಬ್ಬ ಶ್ರೇಷ್ಠ ಬರಹಗಾರರಾಗಿ ನೋಡಿದ್ದಕ್ಕಿಂತ ಅವರನ್ನು ಒಂದು ಕುಟುಂಬದ ಸದಸ್ಯನಾಗಿ ಅವರ ಮಾನವೀಯ ಮುಖದ ಪರಿಚಯ ಮಾಡಿಕೊಡಲಾಗಿದೆ. ಬರಹಗಾರರಾಗಿ ಕುವೆಂಪು ಇಡೀ ನಾಡಿಗೇ ಚಿರಪರಿಚಿತರು. ಆದರೆ ಕೌಟಂಬಿಕವಾಗಿ ಕುವೆಂಪು ಬದುಕು ಹೇಗಿತ್ತು ಎನ್ನುವುದು ಅದು ಅನೇಕರಿಗೆ ಸೂಜಿಗದ ಸಂಗತಿ. ರಾಜೇಶ್ವರಿ ಅವರು 'ಉದಯ ರವಿ'ಯ ಸೊಸೆಯಾಗಿ ಆ ಮನೆಯ ಯಜಮಾನ ಕುವೆಂಪು ಅವರ ವ್ಯಕ್ತಿತ್ವವನ್ನು ಸುಂದರವಾಗಿ ಚಿತ್ರಿಸಿರುವರು. ಕುವೆಂಪು ಅವರಲ್ಲಿನ ಸಂಸ್ಕಾರ, ಕುಟುಂಬ ಪ್ರೀತಿ, ವಿಶ್ವ ಮಾನವ ಪರಿಕಲ್ಪನೆ, ತೇಜಸ್ವಿ ಅವರೊಂದಿಗಿನ ಒಡನಾಟ, ಅವರ ವೃದ್ಧಾಪ್ಯದ ದಿನಗಳು, ಇಷ್ಟದ ತಿಂಡಿ ಎಲ್ಲ ವಿಷಯಗಳ ಕುರಿತು ಈ ಅಧ್ಯಾಯದಲ್ಲಿ ವಿವರಣೆಗಳಿವೆ. ತೇಜಸ್ವಿ ಅವರ ಪ್ರಯೋಗಶೀಲ ಮನೋಭಾವವನ್ನು ತಂದೆಯಾಗಿ ಕುವೆಂಪು ಗೌರವಿಸುತ್ತಿದ್ದರು ಎಂದು ಹೇಳುವ ಲೇಖಕಿ ನಾಡಿನ ಎರಡು ಮಹಾನ್ ವ್ಯಕ್ತಿತ್ವಗಳೊಂದಿಗೆ ಒಡನಾಡುವ ಅವಕಾಶ ದೊರೆತದ್ದನ್ನು ಕೃತಜ್ಞತೆಯಿಂದ ಸ್ಮರಿಸಿಕೊಳ್ಳುತ್ತಾರೆ.
ತೇಜಸ್ವಿ ಮೈಸೂರಿನಿಂದ ಮಲೆನಾಡಿಗೆ ಬಂದು ತೋಟ ಮಾಡಿದ್ದು, ತೇಜಸ್ವಿ ಮತ್ತು ರಾಜೇಶ್ವರಿ ಅವರ ಮದುವೆ ಸಂಭ್ರಮ, ಈಶಾನ್ಯೆ ಮತ್ತು ಸುಶ್ಮಿತಾ ಹುಟ್ಟಿದ್ದು, ಪುಸ್ತಕ ಪ್ರಕಾಶನದ ಕೆಲಸಕ್ಕೆ ಕೈ ಹಾಕಿದ್ದು, ತೇಜಸ್ವಿ ಅವರಲ್ಲಿನ ಹವ್ಯಾಸಗಳು, ಬದುಕಿನ ಕೊನೆಯ ದಿನಗಳಲ್ಲಿ ಕೈ ಕೊಟ್ಟ ಆರೋಗ್ಯ ಈ ರೀತಿ ತೇಜಸ್ವಿ ಅವರ ಬದುಕಿನ ಅನೇಕ ಸಂಗತಿಗಳು ಓದುಗನಿಗೆ ಸಮೃದ್ಧವಾಗಿ ಓದಲು ಸಿಗುತ್ತವೆ. 'ಆವತ್ತು ಗುರುವಾರ ಮಗಳು ಅಳಿಯ ಬಂದಿರುವರೆಂದು ಮೂಡಿಗೆರೆ ಸಾಬು ಹೋಟೆಲ್ಲಿನಲ್ಲಿ ಬಿರ್ಯಾನಿಗೆ ಆರ್ಡರ್ ಕೊಟ್ಟಿದ್ದರು. ಅವರು ಶುಕ್ರವಾರ ಸಂತೆ ದಿನ ಮಾತ್ರ ಮಾಡುವಂಥವರು. ವಿಶೇಷವಾಗಿ ತೇಜಸ್ವಿಗೆ ಮಾಡಿಕೊಡಲು ಒಪ್ಪಿದ್ದರು. ಬಿರ್ಯಾನಿ ತರಲು ಫ್ರೆಶರ್ ಕುಕ್ಕರ್ ನ್ನೆ ತೇಜಸ್ವಿ ಕೈಗಿತ್ತೆ. ಇವರು ಮನೆಗೆ ಬರುವ ಹೊತ್ತಿಗೆ ಒಂದು ಘಂಟೆಯಾಗಿತ್ತು. ತುಂಬಾ ಹಸಿವೆಯಾಗಿದೆ ಊಟ ಮಾಡೋಣವೆಂದರು. ಎಲ್ಲರೂ ಒಟ್ಟಾಗಿ ಕೂತೆವು ಊಟ ಮಾಡಲು. ಸಖತ್ತಾಗಿ ಮಸಾಲೆ ಹಾಕಿದ್ದಾನೆ ನನ್ನ ಹೊಟ್ಟೆ ಕೆಡುವುದು ಖಾತರಿ ಎಂದಳು ಈಶಾನ್ಯೆ. ಇವರು ನಾನು ಚೆನ್ನಾಗಿ ಊಟ ಮಾಡಿರುವೆನೆಂದು ಹೇಳುತ್ತ ಹೋದರು. ಆ ಕೂಡಲೇ ಕಾಡಿನ ಆಕಾಶದೆತ್ತರಕ್ಕೆ ಬೆಳೆದ ದೊಡ್ಡ ಮರವೊಂದು ಬಿದ್ದ ಸದ್ದಾಯಿತು. ಅಯ್ಯೋ ನಿಮ್ಮ ಅಣ್ಣ ಬಿದ್ದರೆಂದು ಕಾಣುತ್ತೆ ಕಣೆ ಈಶಾ ಎಂದು ಓಡಿದೆ. ಅವಳೂ ಬಂದು ಎದೆ ಒತ್ತಿದಳು. ನಾನು ಮುಖಕ್ಕೆ ನೀರು ಸಿಂಪಡಿಸಿದೆ. ನೀರು ಕುಡಿಸಿದೆ ಎಚ್ಚರವಾಗಬಹುದೆಂದು. ಎರಡು ಸಲ ತೆಲೆ ಆಡಿಸಿದ್ದೇ ಕೊನೆಯಾಯ್ತು. ನನಗೆ ಎಲ್ಲೋ ಅಂತರಾಳದ ತಳದಲ್ಲಿ....... ವಿಹಾ ಕಿಟಾರನೆ ಚೀರಿದಳು. ನನ್ನ ತೇಜಸ್ವಿ ಕಾಡಿನ ಉಸಿರಲ್ಲಿ ಉಸಿರಾಗಿ ಹೋದರು. ಅವರ ವಾಸನೆ ನನ್ನ ಉಸಿರಿನಲ್ಲಿದೆ. ನನಗೆ ಅವರು ಬೇಕು' ಎಂದು ರಾಜೇಶ್ವರಿ ಅವರು ಹೇಳುವಲ್ಲಿಗೆ ಕೃತಿ ಕೊನೆಗೊಳ್ಳುತ್ತದೆ. ತೇಜಸ್ವಿ ನೆನಪಾಗಿ ಉಳಿಯುತ್ತಾರೆ.
'ನನ್ನ ತೇಜಸ್ವಿ' ಪುಸ್ತಕದಲ್ಲಿನ ಒಂದಿಷ್ಟು ಸ್ವಾರಸ್ಯಕರ ಘಟನೆಗಳು ಶ್ರೀಮತಿ ರಾಜೇಶ್ವರಿ ಅವರ ಮಾತುಗಳಲ್ಲಿ ನಿಮಗಾಗಿ,
# ಮೈಸೂರಿನಿಂದ ನಿರುತ್ತರಕ್ಕೆ ಬರುವಾಗ ಮಾರ್ಗ ಮಧ್ಯೆ ಹಾಸನದ ಹೊಟೇಲಿನಲ್ಲಿ ಕಾಫಿ ಕುಡಿಯುತ್ತಿದ್ದೇವು. ಅಲ್ಲೊಂದು ಮರದ ಕೆಳಗೆ ಮ್ಯುಜಿಷಿಯನ್ ಮುದಕನೊಬ್ಬ ಕುಳಿತಿರುತ್ತಿದ್ದ. ಅವನೊಟ್ಟಿಗೆ ತೇಜಸ್ವಿಯ ಆತ್ಮೀಯ ಮಾತುಕತೆ. ನಮ್ಮ ಮಕ್ಕಳಿಗೂ ಕುತೂಹಲ ಕೆರಳಿಸುವಂತೆ ಮಾತು ಮುಂದುವರೆಯುತ್ತಿತ್ತು. ಅವನು ಹಣ ಪಡೆದು ಸಲಾಂ ಹೊಡೆದು ಬಿಳ್ಕೊಡುತ್ತಿದ್ದ. ಅವನು ತೀರಿಕೊಂಡಾಗ ಹಾಸನದವರು ತೇಜಸ್ವಿಗೆ ಸುದ್ದಿ ಮುಟ್ಟಿಸಿದ್ದರು.
# ನಮ್ಮ ರಾಜ್ಯಕ್ಕೆ ಜನತಾದಳದ ಜೆ.ಹೆಚ್.ಪಟೇಲರು ಮುಖ್ಯ ಮಂತ್ರಿಯಾಗಿದ್ದಾಗ ಇವರನ್ನು ಎಮ್.ಎಲ್.ಸಿ ಆಗಲು ಆಹ್ವಾನಿಸಿದರು. ಇವರು ಮಾತ್ರ ನಯವಾಗಿ ನಿರಾಕರಿಸಿದರು.
# ತುಮಕೂರಿನ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಗಾದೆಗೆ ಇವರನ್ನು ತುಂಬ ಒತ್ತಾಯ ಮಾಡಿ ಕೇಳಿಕೊಂಡಿದ್ದರು. ಒಂದು ಪ್ರೆಸ್ ಮೀಟ್ ನಲ್ಲಿ ಇವರು ಹೇಳಿದ್ದು ನಾನು ಸಾಹಿತ್ಯ ಸಮ್ಮೇಳನದ ಅಧ್ಯಕ್ಷನಾಗದೇ ಸಾಯುವೆನೆಂದರು.
# ವಿವೇಕ್ ರೈ ಅವರ ಕಾಲದಲ್ಲಿ ನಾಡೋಜ ಪ್ರಶಸ್ತಿ ನೀಡಲು ಎರಡೆರಡು ಸಲ ಒತ್ತಾಯ ಮಾಡಿದರು. ರೈ ಅವರು ಮನೆಗೇ ಬಂದು ಕೂತು ಕೇಳಿಕೊಂಡರು. ಇವರು ಸ್ವೀಕರಿಸಲು ಒಪ್ಪಿಕೊಳ್ಳಲಿಲ್ಲ.
# ನೀನು ಯಾವುದಕ್ಕೂ ಹತ್ತಿರ ಬರಲೇ ಬೇಡೆಂದು ನನಗೆ ತೇಜಸ್ವಿ ಎಚ್ಚರಿಸಿದ್ದರು. ದೊಡ್ಡ ಹಿಂಡಾಲಿಯಂ ಪಾತ್ರೆಯೂ ಐದು ಕೇಜಿ ಚಿಕನ್ನೂ ಮೂಡಿಗೆರೆಯಿಂದ ಮನೆಗೆ ತಂದರು. ನಮ್ಮ ಕಾರು ಶೆಡ್ಡಿನ ಪಕ್ಕ ತೇಜಸ್ವಿ ಒಬ್ಬ ಸಹಾಯಕನೊಟ್ಟಿಗೆ ಸೇರಿ ಮೂರು ಕಲ್ಲಿಟ್ಟು ಒಲೆ ಹಚ್ಚಿದರು. ಈರುಳ್ಳಿ, ಬೆಳ್ಳುಳ್ಳಿ, ಶುಂಠಿ ಎಲ್ಲ ಅವರೇ ಸಿದ್ದಮಾಡಿಕೊಂಡರು. ದೊಡ್ಡ ಪಾತ್ರೆ. ಎರಡು ಬಾಳೆಲೆ ಮುಚ್ಚಿದ್ರಂತೆ. ತೇಜಸ್ವಿ ಉತ್ಸಾಹಕ್ಕೆ ಎಣೆಯೇ ಇರಲಿಲ್ಲ. ಅತಿಥಿಗಳ ಉಪಚಾರಕ್ಕೆ ಚಿಕನ್ ಗೊಜ್ಜು.
ನನ್ನ ಸಮಕಾಲಿನ ಓದುಗರಿಗೆ ತೇಜಸ್ವಿ ಅವರ ಪರಿಚಯವಾಗಿದ್ದು ಅವರ ಕರ್ವಾಲೋ ಕಾದಂಬರಿಯ ಓದಿನಿಂದ. ಕರ್ವಾಲೋ ಕಾದಂಬರಿ ದ್ವಿತೀಯ ಪಿಯುಸಿಯಲ್ಲಿ ನಮಗೆ ಅಭ್ಯಾಸಕ್ಕೆ ಪಠ್ಯವಾಗಿತ್ತು. ಕರ್ವಾಲೋ ಪಾತ್ರವೇ ಅತ್ಯಂತ ಕುತೂಹಲದ ಸಂಗತಿಯಾಗಿದ್ದ ನಮಗೆಲ್ಲ ಆಗಲೇ ತೇಜಸ್ವಿ ಅವರ ಕುರಿತು ಸಣ್ಣದೊಂದು ಆಸಕ್ತಿ ಮೊಳಕೆಯೊಡೆಯಿತು. ನಂತರದ ದಿನಗಳಲ್ಲಿ ಲಂಕೇಶ್ ಪತ್ರಿಕೆಗೆ ಬರೆಯುತ್ತಿದ್ದ ಲೇಖನಗಳ ಮೂಲಕ ತೇಜಸ್ವಿ ನಮಗೆಲ್ಲ ಮತ್ತಷ್ಟು ಹತ್ತಿರವಾದರು. ಆ ಆಪ್ತತೆಯೇ ಮುಂದಿನ ದಿನಗಳಲ್ಲಿ ಜುಗಾರಿ ಕ್ರಾಸ್, ಚಿದಂಬರ ರಹಸ್ಯದಂಥ ಮಹತ್ವಪೂರ್ಣ ಕೃತಿಗಳ ಓದಿಗೆ ಪ್ರೇರಣೆಯಾಯಿತು. ಈಗ 'ನನ್ನ ತೇಜಸ್ವಿ' ಮೂಲಕ ನನ್ನ ಸಮಕಾಲಿನ ಓದುಗರನ್ನು ಪೂರ್ಣಚಂದ್ರ ತೇಜಸ್ವಿ ಇಡಿಯಾಗಿ ಆವರಿಸಿಕೊಂಡಿರುವರು. ಇದು ಅವರ ಬದುಕಿನ ಅನೇಕ ಮಗ್ಗಲುಗಳನ್ನು ಪರಿಚಯಿಸುವ ಮಹತ್ವದ ಕೃತಿ. ನಿಜಕ್ಕೂ ಈ ಪುಸ್ತಕದ ಓದು ಅದೊಂದು ಅನನ್ಯ ಅನುಭವ. ಪುಸ್ತಕವನ್ನೊಮ್ಮೆ ಓದಿ ನೋಡಿ ತೇಜಸ್ವಿ ಅನೇಕ ದಿನಗಳವರೆಗೆ ನಿಮ್ಮನ್ನು ಕಾಡುತ್ತಾರೆ.

ಒಂದಿಷ್ಟು ಪ್ರಸಂಗಗಳು

ಕೊನೆಯ ಮಾತು

No comments:
Post a Comment