Tuesday, September 25, 2012

ಆಂದೋಲನಗಳೂ ಮತ್ತು ಅವುಗಳ ಹಿಂದಿನ ಮಹತ್ವಾಕಾಂಕ್ಷೆಯೂ

       ಜನರಿಗೆ ಈ ಆಂದೋಲನಗಳ ಕುರಿತು ಬಹುದೊಡ್ಡ ಭ್ರಮನಿರಸನ ಉಂಟಾಗಿದೆ. ಅದಕ್ಕೆ ಕಾರಣಗಳಿಲ್ಲದಿಲ್ಲ. ಅಣ್ಣಾ ಹಜಾರೆ ಅವರ ನೇತೃತ್ವದ 'ಭ್ರಷ್ಟಾಚಾರ ವಿರೋಧಿ ಆಂದೋಲನ'ವನ್ನೇ ತೆಗೆದುಕೊಳ್ಳಿ. ಈ ಆಂದೋಲನ ಶುರುವಾದ ಪ್ರಾರಂಭದ ದಿನಗಳಲ್ಲಿ ಇಡೀ ದೇಶದ ಜನತೆ ಬಹುದೊಡ್ಡ ಬದಲಾವಣೆಯೊಂದು ಇನ್ನೇನು ಕೆಲವೇ ದಿನಗಳಲ್ಲಿ ಸಂಭವಿಸಲಿದೆ ಎಂದೆನ್ನುವ ನಿರೀಕ್ಷೆಗಳನ್ನಿಟ್ಟುಕೊಂಡಿದ್ದರು. ಪರಿಣಾಮವಾಗಿ ಅವರೆಲ್ಲ ಅಣ್ಣಾ ಹಜಾರೆ ಅವರಲ್ಲಿ ಮತ್ತೊಬ್ಬ ಗಾಂಧೀಜಿಯನ್ನು ಕಂಡು ಕೊಂಡರು. ಆಂದೋಲನ ಶುರುವಾಗಿದ್ದೆ ತಡ ನಾಗರೀಕರೆಲ್ಲ ಅಣ್ಣಾ ಹೆಸರಿನ ಗಾಂಧಿ ಟೊಪ್ಪಿಗೆ ಧರಿಸಿ ಬೀದಿಗಿಳಿದರು. ಲಕ್ಷಾಂತರ ಜನ ಪ್ರವಾಹದೋಪಾದಿಯಲ್ಲಿ ಅಣ್ಣಾ ಹಜಾರೆ ಅವರನ್ನು ಕೂಡಿ ಕೊಂಡರು.  ಭ್ರಷ್ಟಾಚಾರ ವಿರೋಧಿ ಆಂದೋಲನದ ತಂಡ ದೂರದ ದೆಹಲಿಯಲ್ಲಿ ಆಂದೋಲನದ ಕಿಡಿ ಹೊತ್ತಿಸಿದರೆ ಅದು ದೇಶದಾದ್ಯಂತ ವ್ಯಾಪಿಸಿತು. ಪ್ರತಿ ನಗರ ಹಳ್ಳಿಗಳಲ್ಲಿ ಜನ ಸ್ವ ಇಚ್ಚೆಯಿಂದ ಆಂದೋಲನಕ್ಕೆ ಧುಮುಕಿದರು. ಉತ್ತರದಿಂದ ಬೀಸಿ ಬರಲಿರುವ ಗಾಳಿ ಬಹುದೊಡ್ಡ ಬದಲಾವಣೆಯನ್ನು ಹೊತ್ತು ತರಲಿದೆ ಎಂದು ಎಲ್ಲರೂ ಕಾದದ್ದೇ ಬಂತು. ಬದಲಾವಣೆ ಮಾತ್ರ ಸಂಭವಿಸಲೇ ಇಲ್ಲ.
      ಈ ನಡುವೆ ಭ್ರಷ್ಟಾಚಾರ  ವಿರೋಧಿ ಆಂದೋಲನದ ತಂಡ ರಾಜಕೀಯ ಪಕ್ಷವೊಂದನ್ನು ಕಟ್ಟುವ ತನ್ನ ನಿರ್ಧಾರ ಪ್ರಕಟಿಸಿತು.  2014ರ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ ಆ ತಂಡದ ಸದಸ್ಯರು ಪಾರ್ಲಿಮೆಂಟಿನಲ್ಲಿ ಭ್ರಷ್ಟಾಚಾರ ಮುಕ್ತ ಸದಸ್ಯರನ್ನು ಪ್ರತಿಷ್ಠಾಪಿಸುವ ಪ್ರಬಲ ನಿರೀಕ್ಷೆಯೊಂದನ್ನು ಜನರಲ್ಲಿ ಮೂಡಿಸತೊಡಗಿದರು. ಏತನ್ಮಧ್ಯೆ ಆ ತಂಡದಲ್ಲೇ ಭಿನ್ನಾಭಿಪ್ರಾಯಗಳು ಮೂಡಿ  ಅದೊಂದು ಒಡೆದ ಮನೆಯಾಯಿತು. ಒಂದು ತಂಡ ಜನಾಭಿಪ್ರಾಯಕ್ಕೆ ಹೆದರಿ ರಾಜಕಾರಣದಿಂದ ನಿರ್ಧಿಷ್ಟ ಅಂತರವನ್ನು ಕಾಯ್ದುಕೊಳ್ಳಲು ಬಯಸಿದರೆ ಇನ್ನೊಂದು ತಂಡ ರಾಜಕೀಯ ಪ್ರವೇಶದ ತನ್ನ ಮಹತ್ವಾಕಾಂಕ್ಷೆಗೆ ಅಂಟಿ ಕೊಂಡಿತು. ಹೀಗೆ ಅವರವರ ಭಿನ್ನಾಭಿಪ್ರಾಯಗಳ ನಡುವೆ   ಭ್ರಷ್ಟಾಚಾರ ವಿರೋಧಿ ಆಂದೋಲನವು ತನ್ನ ಮಹತ್ವ ಕಳೆದು ಕೊಂಡು ಮೂಲೆಗುಂಪಾಯಿತು.
           ಭ್ರಷ್ಟಾಚಾರ  ವಿರೋಧಿ ಆಂದೋಲನ ಆರಂಭಗೊಂಡ ಮೊದಲ ದಿನಗಳಲ್ಲೇ ಮುಂದೊಂದು ದಿನ ಇಂಥದ್ದೇ ಪರಿಸ್ಥಿತಿ ಎದುರಾಗಬಹುದೆಂದು ಅನೇಕರು ಆತಂಕ ವ್ಯಕ್ತಪಡಿಸಿದ್ದರು. ಏಕೆಂದರೆ ಪ್ರತಿಯೊಂದು ಹೋರಾಟ ಮತ್ತು ಚಳುವಳಿಗಳು ರಾಜಕೀಯ ಪಕ್ಷಗಳಾಗಿ ರೂಪಾಂತರಗೊಳ್ಳುತ್ತಿವೆ. ಇದು ಬಹು ಹಿಂದಿನಿಂದಲೂ ನಡೆದುಕೊಂಡು ಬಂದ ಪದ್ಧತಿ. 1977ರಲ್ಲಿ ತುರ್ತು ಪರಿಸ್ಥಿತಿಯನ್ನು ವಿರೋಧಿಸಿ ಆಗ ಹುಟ್ಟಿಕೊಂಡ ಚಳುವಳಿ ಭಾರತದಲ್ಲಿ ಅನೇಕ ಬದಲಾವಣೆಗಳಿಗೆ ಕಾರಣವಾಯಿತು. ಈ ಚಳುವಳಿಯ ಪರಿಣಾಮ ಕೇಂದ್ರದಲ್ಲಿ ಮೊದಲ ಬಾರಿಗೆ ಕಾಂಗ್ರೆಸೇತರ ಸರ್ಕಾರ ಅಧಿಕಾರಕ್ಕೆ ಬಂದಿತು. ಈ ಚಳುವಳಿ ಸಮಾಜವಾದಿ ಸಿದ್ಧಾಂತದ ಹಿನ್ನೆಲೆಯುಳ್ಳ ಅನೇಕ ಯುವ ರಾಜಕಾರಣಿಗಳನ್ನು ಪರಿಚಯಿಸಿತು. ಕಾಲಾನಂತರದಲ್ಲಿ ಜೆಪಿ ಚಳುವಳಿಯಿಂದ ಸಿಡಿದು ಬಂದ ಯುವಕರೆಲ್ಲ ಫುಲ್ ಟೈಂ ರಾಜಕಾರಣಕ್ಕಿಳಿದು ಜನರು ಅವರುಗಳ ಮೇಲಿಟ್ಟಿದ್ದ ಭರವಸೆಗಳನ್ನೆಲ್ಲ ಹುಸಿಗೊಳಿಸಿದರು. ಒಂದು ಕಾಲದಲ್ಲಿ ಅನ್ಯಾಯ, ಅಕ್ರಮಗಳನ್ನು ಕಂಡು ಸಿಡಿದೆಳುತ್ತಲಿದ್ದ ಅದೇ ಯುವಕರು ಮುಂದೊಂದು ದಿನ ಅನೇಕ  ಭ್ರಷ್ಟಾಚಾರಗಳಿಗೆ ಕಾರಣರಾಗಬೇಕಾಗಿ ಬಂದದ್ದು ಜೆಪಿ ಚಳುವಳಿಯ ಬಹುದೊಡ್ಡ ದುರಂತಗಳಲ್ಲೊಂದು.
      ಕರ್ನಾಟಕದಲ್ಲೂ ಒಂದು ಕಾಲದಲ್ಲಿ ಸಮಾಜವಾದಿ ಚಳುವಳಿ ಪ್ರಖರವಾಗಿತ್ತು. ಶಾಂತವೇರಿ ಗೋಪಾಲಗೌಡರ ಗರಡಿಯಲ್ಲಿ ಪಳಗಿದ ಅನೇಕ ಯುವನಾಯಕರು ಸಮಾಜವಾದಿ ಸಿದ್ಧಾಂತವನ್ನು ರಾಜ್ಯದ ಮೂಲೆ ಮೂಲೆಗೂ ಪ್ರಚುರ ಪಡಿಸಿದರು. ಅನ್ಯಾಯ, ಅಕ್ರಮಗಳ ವಿರುದ್ಧ ದೊಡ್ಡ ಮಟ್ಟದ ಹೋರಾಟವನ್ನೇ ಮಾಡಿದರು. ವಿಪರ್ಯಾಸವೆಂದರೆ ಅದೇ ಯುವ ನಾಯಕರು ಮುಂದೊಂದು ದಿನ ರಾಜಕೀಯ ಪಕ್ಷಗಳನ್ನು ಸೇರಿ ಸಮಾಜವಾದಿ ಸಿದ್ಧಾಂತವನ್ನೇ ಮೂಲೆಗುಂಪಾಗಿಸಿದರು. ಸಮಾಜವಾದದ ಹಿನ್ನೆಲೆಯನ್ನೇ ಬಂಡವಾಳವಾಗಿಸಿಕೊಂಡು ರಾಜಕೀಯದಲ್ಲಿ ಮೇಲೆರಿದ ಇವರುಗಳು ಅಧಿಕಾರದ ರುಚಿ ಹತ್ತಿಸಿಕೊಂಡು ಇತಿಹಾಸ ಕಂಡು  ಕೇಳರಿಯದ ಅನೇಕ   ಭ್ರಷ್ಟಾಚಾರಗಳಿಗೆ ಕಾರಣರಾದರು.
           ಗೋಕಾಕ ಚಳುವಳಿಯ ನಂತರ ಕರ್ನಾಟಕದಲ್ಲಿ ಭಾಷೆಯ ರಕ್ಷಣೆಗಾಗಿ ಅನೇಕ ಸಂಘ ಸಂಸ್ಥೆಗಳು ಹುಟ್ಟಿ ಕೊಂಡಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ. ರಾಜಕುಮಾರ ಅವರ ನೇತೃತ್ವದಲ್ಲಿ ಗೋಕಾಕ ಚಳುವಳಿಯಿಂದ ದೊರಕಿಸಿಕೊಂಡ ಅಭೂತಪೂರ್ವ ಯಶಸ್ಸು ನಂತರದ ದಿನಗಳಲ್ಲಿ ಕನ್ನಡ ಪರ ಚಳುವಳಿಯನ್ನು ಅನೇಕರ ಮುಖ್ಯ ಉದ್ಯೋಗವಾಗಿಸಿತು. ಕನ್ನಡದ ರಕ್ಷಣೆಗಾಗಿ ಅಸ್ತಿತ್ವಕ್ಕೆ ಬಂದ ಸಂಘ ಸಂಸ್ಥೆಗಳೆಲ್ಲ ಕಾಲಾನಂತರದಲ್ಲಿ ರಾಜಕೀಯ ಪಕ್ಷಗಳೊಂದಿಗೆ ಗುರುತಿಸಿಕೊಳ್ಳಲಾರಂಭಿಸಿದವು. ಅನೇಕ ಹೋರಾಟಗಾರರು ಚುನಾವಣೆಗೂ ಸ್ಪರ್ಧಿಸಿ ಸೋತಿದ್ದು ಬೇರೆ ವಿಷಯ. ಒಟ್ಟಿನಲ್ಲಿ ಕನ್ನಡ ಪರ ಹೋರಾಟದ ಹಿಂದೆ ರಾಜಕೀಯ ಪ್ರವೇಶಿಸಬೇಕೆನ್ನುವ ಚಳುವಳಿಗಾರರ ಪ್ರಬಲ ಮಹತ್ವಾಕಾಂಕ್ಷೆಯನ್ನು ಕನ್ನಡಿಗರು ಗುರುತಿಸದೇ ಇರಲಿಲ್ಲ. ಕನ್ನಡ ಭಾಷೆಗಿಂತಲೂ ಘೋರವಾದ ಇನ್ನೊಂದು ಸಂಗತಿ ಎಂದರೆ ಅದು ಅನ್ನ ನೀಡುವ  ರೈತನ ಹೆಸರಿನಲ್ಲಿ ಸಂಘ ಸಂಸ್ಥೆಗಳನ್ನು ಕಟ್ಟಿ ಹಸಿರು ಶಾಲು ಹೊದೆದು ಕೆಲವರು ಹೋರಾಟಕ್ಕಿಳಿದಿದ್ದು. ಈ ಹೋರಾಟದ ಹಿಂದೆ ರೈತನ ಬದುಕನ್ನು ಹಸನಾಗಿಸಬೇಕೆನ್ನುವುದಕ್ಕಿಂತ ಅವರವರ ವೈಯಕ್ತಿಕ ಹಿತಾಸಕ್ತಿಯೇ ಪ್ರಧಾನವಾಗಿತ್ತು. ರೈತ ಸಂಘದ ನೇತಾರರಲ್ಲೂ ರಾಜಕೀಯ ವಾಂಛೆ ಮನೆ ಮಾಡಿತ್ತು. ರೈತರ ಹೆಸರಿನಲ್ಲಿ ಕೆಲವರು ತಾವು ಪಡೆದ ಜನಪ್ರಿಯತೆಯನ್ನೇ ಬಂಡವಾಳವಾಗಿಟ್ಟುಕೊಂಡು ಚುನಾವಣೆಗೆ ನಿಂತು ಗೆಲುವಿನ ರುಚಿಯನ್ನು ಕಂಡರು. ಹೀಗೆ ರೈತರ ಹೆಗಲ ಮೇಲೆ ಕಾಲಿಟ್ಟು ಮೇಲೆರಿದವರೆಲ್ಲ ಮುಂದಿನ ದಿನಗಳಲ್ಲಿ ತಮ್ಮ  ತಮ್ಮ ಬದುಕನ್ನು ಹಸನಾಗಿಸಿ ಕೊಂಡರೆ ಹೊರತು ರೈತರ ಬದುಕಿನ ಬವಣೆಯನ್ನು ಸ್ವಲ್ಪವೂ ನೀಗಿಸಲಿಲ್ಲ. ಹಾಗೇನಾದರೂ ಅವರುಗಳು ಪ್ರಯತ್ನಿಸಿದ್ದರೆ ಕಾವೇರಿ ಪ್ರತಿವರ್ಷ ನೆರೆಯ ರಾಜ್ಯಕ್ಕೆ ಹರಿದು ಹೋಗುತ್ತಿರಲಿಲ್ಲ
        ಒಟ್ಟಿನಲ್ಲಿ ಅದು ರೈತಪರ ಚಳುವಳಿಯಾಗಲಿ ,   ಭ್ರಷ್ಟಾಚಾರ  ವಿರೋಧಿ ಆಂದೋಲನವಾಗಲಿ, ಕನ್ನಡಪರ ಹೋರಾಟವಾಗಲಿ ಈ ಎಲ್ಲ ಚಳುವಳಿಗಳಲ್ಲಿನ ಹೋರಾಟಗಾರರ ಮನಸ್ಥಿತಿ ಒಂದೆ. ಪ್ರತಿ ಹೋರಾಟದ ಹಿಂದೆ ರಾಜಕೀಯದ ಮಹತ್ವಾಕಾಂಕ್ಷೆ ಪ್ರಬಲವಾಗಿದೆ. ಪ್ರತಿಯೊಂದು ಆಂದೋಲನ ರಾಜಕೀಯದಲ್ಲಿ ಪರ್ಯಾವಸಾನ  ಗೊಳ್ಳುತ್ತಿರುವುದು ಸತ್ಯಕ್ಕೆ ಹತ್ತಿರವಾದ ಸಂಗತಿ. ಈ ನಡುವೆ ಇಂಗ್ಲಿಷ್ ದೈನಿಕವೊಂದರಲ್ಲಿ ಹೀಗೊಂದು ವರದಿ ಪ್ರಕಟವಾಗಿತ್ತು. ಮುಂಬೈ ಮೂಲದ ನಿವಾಸಿ ನಾರಾಯಣ ಪಾಟೀಲ ಎನ್ನುವ ವ್ಯಕ್ತಿ ಕಳೆದ ನಾಲ್ಕು ವರ್ಷಗಳಿಂದ ಕಸಬ್ ನನ್ನು ಗಲ್ಲಿಗೆರಿಸುವಂತೆ ಪ್ರತಿ ನಿತ್ಯ ದೇಶದ ಪ್ರಧಾನಿ ಮತ್ತು ರಾಷ್ಟ್ರಪತಿಗಳಿಗೆ ಪತ್ರ ಬರೆದು ಒತ್ತಾಯಿಸುತ್ತಿರುವರು. ಕಸಬ್ ನನ್ನು ಗಲ್ಲಿಗೇರಿಸುವ ತನಕ ಯಾವ ಹಬ್ಬ ಹರಿದಿನಗಳಲ್ಲೂ ಪಾಲ್ಗೊಳ್ಳದಿರಲು ಅವರು ನಿರ್ಧರಿಸಿರುವರಂತೆ. ರಾಜಕೀಯ ಮಹತ್ವಾಕಾಂಕ್ಷೆಯನ್ನಿಟ್ಟುಕೊಂಡು  ಸದ್ದು ಮಾಡುವ ಈ ಹೋರಾಟಗಾರರಿಗಿಂತ ಸದ್ದಿಲ್ಲದೇ ಒಂದು ಹೋರಾಟದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ನಾರಾಯಣ ಪಾಟೀಲ ನಿಜಕ್ಕೂ ರಾಷ್ಟ್ರ ಕಂಡ ಅಪರೂಪದ ದೇಶಪ್ರೇಮಿಗಳಲ್ಲೊಬ್ಬರು.

-ರಾಜಕುಮಾರ.ವ್ಹಿ.ಕುಲಕರ್ಣಿ (ಕುಮಸಿ), ಬಾಗಲಕೋಟೆ 

No comments:

Post a Comment