Wednesday, July 11, 2012

ಕನ್ನಡ ಶಾಲೆಗಳಲ್ಲಿ ಮಕ್ಕಳ ಕೊರತೆ

      ಮೊನ್ನೆ ಸಂಭದಿಕರ ಮದುವೆಗೆಂದು ಗುಲಬರ್ಗಾ ಕ್ಕೆ ಹೋಗಿದ್ದಾಗ ನನ್ನೂರಿನ ಆ ಹಳ್ಳಿಗೂ ಹೋಗಿದ್ದೆ. ಸಾಯಂಕಾಲದ ಆ ಇಳಿ ಹೊತ್ತಿನಲ್ಲೂ ಊರಿನ ಬೀದಿಗಳು ಬಿಕೋ ಎನ್ನುತ್ತಿದ್ದವು. ಮಕ್ಕಳು ಮತ್ತು ಯುವಕರು ಕಾಣಿಸಿದ್ದು ಬೆರಳೆಣಿಕೆಯಷ್ಟು ಮಾತ್ರ. ಇಡೀ ಊರಿನ ಚಿತ್ರಣವೇ .ಬದಲಾಗಿತ್ತು. ಬೇರೆ ಊರಿಗೆ ಬಂದಿರಬಹುದೆನ್ನುವ ಆತಂಕದಿಂದ ಹೆಜ್ಜೆ ಹಾಕುತ್ತಿರುವಾಗ ದೂರದಲ್ಲಿ ನಡೆದು ಬರುತ್ತಿದ್ದ ಕಾಳಜ್ಜ ಕಾಣಿಸಿದ. ಮನಸ್ಸಿಗೆ ಒಂದಿಷ್ಟು ಸಮಾಧಾನವಾಯಿತು. ಹತ್ತಿರ ಬಂದ ಕಾಳಜ್ಜನ ಜೊತೆ ಒಂದಿಷ್ಟು ಉಭಯಕುಶಲೋಪರಿಯ ನಂತರ ಆತನ ಮೊಮ್ಮಕ್ಕಳ ಕುರಿತು ವಿಚಾರಿಸಿದೆ. ತನ್ನ ಮಕ್ಕಳನ್ನು ಶಾಲೆಯ ಮೆಟ್ಟಿಲೂ ಹತ್ತಲು ಬಿಟ್ಟಿರದ ಕಾಳಜ್ಜ ತನ್ನ ಮೊಮ್ಮಕ್ಕಳ  ವಿಷಯದಲ್ಲಾದರೂ ಬದಲಾಗಿರಬಹುದೆನ್ನುವ ಅನುಮಾನ ನನ್ನದಾಗಿತ್ತು. ನನ್ನ ಅನುಮಾನ ಪರಿಹರಿಸುವಂತೆ ಕಾಳಜ್ಜ ಹೇಳುತ್ತಾ ಹೋದ 'ಅಯ್ಯೋ ಮಾರಾಯಾ ಅದೆಲ್ಲ ನನ್ನ ಮಕ್ಕಳ ಕಾಲಕ್ಕೆ ಮುಗಿದು ಹೋಯ್ತು. ಮೊಮ್ಮಕ್ಕಳಾದ್ರೂ ನಾಲ್ಕಕ್ಷರ ಕಲ್ತು ಸಾಹೇಬ್ರಾಗಲಿ ಅಂತ ಪ್ಯಾಟಿ ಸಾಲಿಗಿ ಹಚ್ಚಿನಿ. ಇಲ್ಲಿನ ಸರ್ಕಾರಿ ಸಾಲ್ಯಾಗ ಕಲಿಸೋದು ಅಷ್ಟರಲ್ಲೇ ಅದಾ.. ಅದಕ್ಕಂತ ಹೆಚ್ಚು ರೊಕ್ಕ ಕೊಟ್ಟು ಇಂಗ್ಲಿಷ್ ಸಾಲಿಗಿ ಹಾಕೀನಿ. ಊಟಕ್ಕ ತೊಂದರಿ ಆಗಬಾರದಂತ ಮಗ ಸೋಸಿಗೂ ಪ್ಯಾಟ್ಯಾಗೆ ಮನಿ ಮಾಡಿ ಕೊಟ್ಟಿನಿ' ಇದು ನನ್ನೂರಿನ ಒಬ್ಬ ಕಾಳಜ್ಜನಲ್ಲಾದ ಬದಲಾವಣೆ ಅಲ್ಲ.   ಇಂಥ  ಕಾಳಜ್ಜರು ಅನೇಕ ಊರುಗಳಲ್ಲಿ ಕಾಣಸಿಗುತ್ತಾರೆ. ಶಿಕ್ಷಣವನ್ನು ಅವರು ಯಾವತ್ತೋ ತಮ್ಮ ಮೂಲಭೂತ ಹಕ್ಕುಗಳಲ್ಲಿ ಒಂದನ್ನಾಗಿಸಿಕೊಂಡಿದ್ದಾರೆ. ಇಲ್ಲಿ ಕಾಳಜ್ಜನ ಜೊತೆ ಮಾತನಾಡಿದ ನಂತರ ನನ್ನನ್ನು ಬೆನ್ನು ಹತ್ತಿದ ಬೇತಾಳದಂತೆ ಕಾಡಿದ ಪ್ರಶ್ನೆ ಎಂದರೆ ಊರಿನಲ್ಲೇ ಹೈಸ್ಕೂಲು ವರೆಗೆ ಶಾಲೆ ಇರುವಾಗ ಕಾಳಜ್ಜ ದುಬಾರಿ ಫಿಜು ಕೊಟ್ಟು ತನ್ನ ಮೊಮ್ಮಕ್ಕಳನ್ನು ಪಟ್ಟಣದ ಶಾಲೆಗೆ ಕಳುಹಿಸುವ ಅಗತ್ಯವಾದರೂ ಏನಿತ್ತು?. ಅವನೇ ಹೇಳುವಂತೆ ಸರ್ಕಾರಿ ಶಾಲೆಗಳಲ್ಲಿ ಕಲಿಸುವುದು ಅಷ್ಟರಲ್ಲೇ ಇದೆ. ಓದಲು ಒಂದಕ್ಷರವೂ ಬಾರದ, ತನ್ನ ಮಕ್ಕಳನ್ನು ಶಾಲೆಗೇ ಕಳುಹಿಸದ, ಹಳ್ಳಿಯಲ್ಲಿದ್ದುಕೊಂಡು ವ್ಯವಸಾಯ ಮಾಡುತ್ತಿರುವ ಕಾಳಜ್ಜ ಸರ್ಕಾರಿ ಶಾಲೆಗಳ ಹಣೆಬರಹ ಹೀಗೇ ಎಂದು ನಿರ್ಧರಿಸಿದ್ದ. ಆತ ಮಾತನಾಡಿದ್ದರಲ್ಲಿ ಯಾವ ತಪ್ಪೂ ಇರಲಿಲ್ಲ. ವಿಪರ್ಯಾಸ ನೋಡಿ ಕಾಳಜ್ಜನಂಥ ಅನಕ್ಷರಸ್ಥರು ಸರ್ಕಾರದ ಶಿಕ್ಷಣ ವ್ಯವಸ್ಥೆಯನ್ನು ಅನುಮಾನದಿಂದ ನೋಡುತ್ತಿರುವ ಈ ಹೊತ್ತಿನಲ್ಲೇ ನಮ್ಮ ಘನ ಸರ್ಕಾರ 'ಶಿಕ್ಷಣ ಹಕ್ಕು ಕಾಯ್ದೆ'ಗೆ ಅಧಿಕೃತವಾಗಿ ಚಾಲನೆ ನೀಡುತ್ತದೆ.
        ನಾನು ನನ್ನೂರಿನ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಆ ದಿನಗಳಲ್ಲಿ ಸಮವಸ್ತ್ರವಾಗಲಿ, ಪುಸ್ತಕಗಳನ್ನಾಗಲಿ  ಉಚಿತವಾಗಿ ಕೊಡುತ್ತಿರಲಿಲ್ಲ. ಮಧ್ಯಾಹ್ನದ ಊಟ ನಾವು ಕಟ್ಟಿಕೊಂಡು ಬಂದ ಬುತ್ತಿಯೇ ಆಗಿರುತ್ತಿತ್ತು. ಸರ್ಕಾರ ಸೈಕಲ್ ಕೊಡುವುದಿರಲಿ ಶಾಲೆಗೆ ಸರಿಯಾದ ರಸ್ತೆಯನ್ನೂ ನಿರ್ಮಿಸಿರಲಿಲ್ಲ. ಅಂಥ ಸ್ಥಿತಿಯಲ್ಲಿಯೂ ಆ ಶಾಲೆ ಮಕ್ಕಳಿಂದ ಗಿಜಿಗುಡುತಿತ್ತು. ಕಳೆದ ಮೂರು ದಶಕಗಳ ಹಿಂದಿನ ಶಾಲೆಗೂ ಮತ್ತು ಇವತ್ತಿನ ಶಾಲೆಗೂ ಹೋಲಿಸಿ ನೋಡಿದಾಗ ಸಾಕಷ್ಟು ಬದಲಾವಣೆಯಾಗಿದೆ. ಶಾಲಾ ಕಟ್ಟಡ ವಿಸ್ತರಿಸಿದೆ. ಶಾಲೆಗೆ ಉತ್ತಮ ರಸ್ತೆ ನಿರ್ಮಿಸಲಾಗಿದೆ. ಶಾಲೆಯಲ್ಲಿ ಶೌಚಾಲಯದ ಸೌಲಭ್ಯವಿದೆ. ಮಕ್ಕಳಿಗೆ ಸಮವಸ್ತ್ರ ಮತ್ತು ಪುಸ್ತಕಗಳನ್ನು ಉಚಿತವಾಗಿ ಕೊಡುತ್ತಿರುವರು. ಮಕ್ಕಳ ಮಧ್ಯಾಹ್ನದ ಊಟ ಸರ್ಕಾರದ ಖರ್ಚಿನಲ್ಲಿ ಶಾಲೆಯಲ್ಲೇ ನಡೆಯುತ್ತಿದೆ. ಮಕ್ಕಳಿಗೆ ಸರ್ಕಾರ ಉಚಿತವಾಗಿ ಬೈಸಿಕಲ್ ಕೊಟ್ಟು ಉಪಕರಿಸಿದೆ. ಇಷ್ಟೆಲ್ಲಾ ಸೌಲಭ್ಯಗಳ ನಂತರವೂ ಆ ಶಾಲೆಯನ್ನು ಕಾಡುತ್ತಿರುವ ಬಹು ಮುಖ್ಯ ಸಮಸ್ಯೆ ಎಂದರೆ ಅದು ವಿದ್ಯಾರ್ಥಿಗಳ ಕೊರತೆ. ವರ್ಷದಿಂದ ವರ್ಷಕ್ಕೆ  ಆ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕ್ಷಿಣಿಸುತ್ತಿದೆ. ಸರ್ಕಾರವೇ ಮುಂದಾಗಿ ಉಚಿತ ಶಿಕ್ಷಣ ಕೊಡಲು ನಿಂತಿರುವಾಗ ಕಾಳಜ್ಜನಂಥ ಆನಕ್ಷರಸ್ಥರು ಕೂಡಾ ಪಟ್ಟಣಗಳ ದುಬಾರಿ ಶಾಲೆಗಳೆದುರು ಪ್ರವೇಶಕ್ಕಾಗಿ ಅರ್ಜಿ ಹಿಡಿದು ನಿಲ್ಲುತ್ತಾರೆ. ಇಲ್ಲಿ ನಾನು ಕಾಳಜ್ಜ ಮಾಡುತ್ತಿರುವುದು ತಪ್ಪು ಎನ್ನುತ್ತಿಲ್ಲ. ಏಕೆಂದರೆ ಅವನಿಗೆ ಬೇಕಿರುವುದು ಗುಣಮಟ್ಟದ ಶಿಕ್ಷಣವೇ ಹೊರತು ಸರ್ಕಾರದ ಸೌಲಭ್ಯಗಳಲ್ಲ. ಕೆಲವೊಂದು ಸೌಲಭ್ಯಗಳನ್ನು ಒದಗಿಸಿ ಒಂದಿಷ್ಟು ಭೌತಿಕ ಬದಲಾವಣೆ ಮಾಡಿದ ಮಾತ್ರಕ್ಕೆ ಸರ್ಕಾರಿ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣ ದೊರೆಯುತ್ತಿದೆ ಎನ್ನುವ ನಿರ್ಧಾರಕ್ಕೆ ಬರುವುದು ಆತುರದ ನಿರ್ಣಯವಾಗುತ್ತದೆ.
       ಸರ್ಕಾರಿ ಶಾಲೆಗಳಲ್ಲಿನ ಮಕ್ಕಳ ಕೊರತೆಯಿಂದಾಗಿ ಮಧ್ಯಾಹ್ನದ ಬಿಸಿಯೂಟ, ಉಚಿತ ಸಮವಸ್ತ್ರ, ಪುಸ್ತಕಗಳು ಮತ್ತು ಬೈಸಿಕಲ್ ಇತ್ಯಾದಿ ಸೌಲಭ್ಯಗಳ ಆಮಿಷವೊಡ್ಡಿ ವಿದ್ಯಾರ್ಥಿಗಳನ್ನು ಆಕರ್ಷಿಸುವ ಪ್ರಯತ್ನ ಅವ್ಯಾಹತವಾಗಿ ಮುಂದುವರೆದಿದೆ. ಏನೆಲ್ಲಾ ಆಮಿಷಗಳನ್ನೊಡ್ಡಿದರೂ ಸರ್ಕಾರಿ ಶಾಲೆಗಳಿಗೆ ಬರುವ ಮಕ್ಕಳ ಸಂಖ್ಯೆ ಕ್ಷಿಣಿಸುತ್ತಿದೆ. ಗುಣಾತ್ಮಕ ಶಿಕ್ಷಣವನ್ನು ಅರಸುತ್ತ ಹಳ್ಳಿಗರೆಲ್ಲ ನಗರ ಪ್ರದೇಶಗಳಿಗೆ ಗುಳೆ ಹೋಗುತ್ತಿರುವಾಗ ಸರ್ಕಾರದ ಆಮಿಷಗಳಿಗೆ ಬಲಿಯಾಗುವವರಾದರು ಯಾರು. ಒಂದೆರಡು ವರ್ಷಗಳ ಹಿಂದೆ ಮಲೆನಾಡಿನ ಕೆಲವು ಹಳ್ಳಿಗಳ ಸರ್ಕಾರಿ ಶಾಲೆಗಳಲ್ಲಿ ಅಗತ್ಯದಷ್ಟು ಮಕ್ಕಳ ಸಂಖ್ಯೆ ಇಲ್ಲ ಎನ್ನುವ ಕಾರಣದಿಂದ ಸರ್ಕಾರವೇ ಅಲ್ಲಿನ ಶಾಲೆಗಳನ್ನು ಮುಚ್ಚಲು ಮುಂದಾಗಿತ್ತು. ಓದುತ್ತಿರುವ ಅಲ್ಲಿನ ಕೆಲವು ಮಕ್ಕಳಾದರೂ ಆ ಸೌಲಭ್ಯದಿಂದ ವಂಚಿತರಾಗಬಾರದೆಂದು ಜನ ಪ್ರತಿಭಟನೆಯ ಮೂಲಕ ಶಾಲೆಗಳನ್ನು ಉಳಿಸಿಕೊಂಡರು. ಈ ಸಂದರ್ಭ ಸರ್ಕಾರ ಒಂದಿಷ್ಟು ಆತ್ಮವಿಮರ್ಶೆ ಮಾಡಿಕೊಳ್ಳುವುದೊಳಿತು. ಸರ್ಕಾರಿ ಶಾಲೆಗಳಲ್ಲಿ ಸುಸಜ್ಜಿತ ಪ್ರಯೋಗಾಲಯ ಮತ್ತು ಗ್ರಂಥಾಲಯಗಳಿವೆಯೇ , ಅಲ್ಲಿ ಗಣಿತ ಮತ್ತು ವಿಜ್ಞಾನ ದಂಥ ಜಟಿಲ ವಿಷಯಗಳನ್ನು ಪಾಠ ಮಾಡಲು  ಅರ್ಹ ಶಿಕ್ಷಕರಿರುವರೆ, ಆ ಶಾಲೆಗಳಲ್ಲಿ ಉತ್ತಮ ಶೈಕ್ಷಣಿಕ ವಾತಾವರಣವನ್ನು ನಿರ್ಮಾಣ ಮಾಡಲಾಗಿದೆಯೇ ಹೀಗೆ ಅನೇಕ ವಿಷಯಗಳ ಕುರಿತು ಸರ್ಕಾರದ ಶಿಕ್ಷಣ ಇಲಾಖೆ ಪರಾಮರ್ಶೆ ಮಾಡಿಕೊಳ್ಳಬೇಕು. ಸರ್ಕಾರಿ ಶಾಲೆಗಳಲ್ಲಿ ಓದಿಯೂ ನಮ್ಮ ಮಕ್ಕಳು ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಕೋರ್ಸುಗಳನ್ನು ಆಯ್ಕೆ ಮಾಡಿಕೊಳ್ಳಬಹುದೆಂಬ ಭರವಸೆ  ಪಾಲಕರಲ್ಲಿ ಮೂಡಬೇಕು. ಮದ್ದೂರಿನ ಸರ್ಕಾರಿ ಶಾಲೆಯಲ್ಲಿ ಓದಿದ ವಿದ್ಯಾರ್ಥಿಯೊಬ್ಬ ಪ್ರತಿಷ್ಟಿತ ಏಮ್ಸ್ ಸಂಸ್ಥೆಯಲ್ಲಿ ಪ್ರವೇಶ ಗಿಟ್ಟಿಸಿದ ಮಾತ್ರಕ್ಕೆ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಂದ ಅದನ್ನೇ ನಿರೀಕ್ಷಿಸುವುದು ಶುದ್ಧ ಮೂರ್ಖತನವಾಗುತ್ತದೆ.
       ಇವತ್ತು ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿರುವುದರ ಹಿಂದೆ ಇಂಗ್ಲಿಷ್ ಮಾಧ್ಯಮದ ಶಾಲೆಗಳ ಸಂಖ್ಯೆ ಪ್ರತಿವರ್ಷ ಹೆಚ್ಚುತ್ತಿರುವುದೇ ಬಹುಮುಖ್ಯ ಕಾರಣವಾಗಿದೆ. ಜಿಲ್ಲಾ ಮತ್ತು ತಾಲೂಕು ಕೇಂದ್ರಗಳು ಮಾತ್ರವಲ್ಲದೆ ಹೋಬಳಿ ಪ್ರದೇಶಗಳಲ್ಲಿಯೂ ಇವತ್ತು ಇಂಗ್ಲಿಷ್ ಮಾಧ್ಯಮದ ಶಾಲೆಗಳು ಸ್ಥಾಪನೆಯಾಗುವುದರ ಮೂಲಕ ಬೃಹತ್ ಶೈಕ್ಷಣಿಕ ಉದ್ದಿಮೆಯೊಂದು ರಾಜ್ಯಕ್ಕೆ ಕಾಲಿಟ್ಟಿದೆ. ಕೆಲವರು ವಸತಿ ಶಾಲೆಗಳನ್ನು ಸ್ಥಾಪಿಸುವುದರ ಮೂಲಕ ಮಕ್ಕಳು  ದಿನದ 12 ರಿಂದ 14 ಗಂಟೆಗಳ ಕಾಲ ಶೈಕ್ಷಣಿಕ ಚಟುವಟಿಕೆಗಳಲ್ಲಿ  ತೊಡಗಿಸಿಕೊಳ್ಳುವಂಥ ವಾತಾವರಣವನ್ನು ಸೃಷ್ಟಿಸುತ್ತಿರುವರು. ಇಂಥ ಶಾಲೆಗಳಲ್ಲಿ ಕಲಿತು ಬಂದ ಮಕ್ಕಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಲೀಲಾಜಾಲವಾಗಿ ಉತ್ತಿರ್ಣರಾಗುತ್ತಿರುವರು. ರಾಜ್ಯದಲ್ಲಿನ ಬಹುಪಾಲು ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಸೀಟುಗಳು ಇಂಥ ಶಾಲೆಗಳಲ್ಲಿ ಕಲಿತ ಮಕ್ಕಳ ಪಾಲಾಗುತ್ತಿವೆ. ಜೊತೆಗೆ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತು ಬಂದ ಮಕ್ಕಳು ಉನ್ನತ ಮತ್ತು ವೃತ್ತಿಪರ ಶಿಕ್ಷಣದ ಪರಿಸರಕ್ಕೆ ಬಹುಬೇಗ ಹೊಂದಿಕೊಳ್ಳುತ್ತಿರುವರು. ಪರಿಸ್ಥಿತಿ ಹೀಗಿರುವಾಗ ಕಾಳಜ್ಜನಿಗೆ ನಿನ್ನ ಮೊಮ್ಮಕ್ಕಳನ್ನು ಊರಿನಲ್ಲಿರುವ ಸರ್ಕಾರಿ ಶಾಲೆಗೇ ಸೇರಿಸು ಎಂದು ಹೇಳುವ ನೈತಿಕ ಧೈರ್ಯವಾದರೂ ನನಗೆ ಹೇಗೆ ಬಂದಿತು.
       2010 ರಲ್ಲಿ ಸರ್ಕಾರವೇ ಮುಂದಾಗಿ ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಕೆಲವು ಇಂಗ್ಲಿಷ್ ಮಾಧ್ಯಮದ ಶಾಲೆಗಳನ್ನು ತೆರೆಯಲು ಯೋಜನೆ ರೂಪಿಸಿತ್ತು. ಈ ಕುರಿತು ಪತ್ರಿಕೆಗಳಲ್ಲಿ ಸುದ್ಧಿಯೂ ಪ್ರಕಟವಾಗಿತ್ತು. ದುಬಾರಿ ಫೀಜು  ಕಟ್ಟಲು ಸಾಧ್ಯವಾಗದ ಪಾಲಕರು ಇಂಗ್ಲಿಷ್ ಮಾಧ್ಯಮ ಶಿಕ್ಷಣದ ಕನಸು ಕಾಣುವಂತಾಯಿತು. ಹಣವಂತರಿಗೆ ಮಾತ್ರ ಮೀಸಲಾಗಿದ್ದ ಇಂಗ್ಲಿಷ್ ಶಿಕ್ಷಣ ಇನ್ನು ಮುಂದೆ ಬಡವರಿಗೂ ಕೈಗೆಟಕುವಂತಾಯಿತು ಎಂದು ಅನೇಕರು ಸಂಭ್ರಮಿಸಿದರು. ಆದರೆ ಈಗ ಸರ್ಕಾರದ ಆ ಯೋಜನೆಯನ್ನು ವಿರೋಧಿಸುವವರ ಸಂಖ್ಯೆ ಹೆಚ್ಚುತ್ತಿದೆ. ಒಟ್ಟಿನಲ್ಲಿ ಬಡವರ ಮಕ್ಕಳಿಗೆ ಇಂಗ್ಲಿಷ್ ಮಾಧ್ಯಮದ ಶಿಕ್ಷಣ ಮರೀಚಿಕೆಯಾಗಿಯೇ ಉಳಿಯಲಿ ಎನ್ನುವ ಹುನ್ನಾರ ಅನೇಕರದಾಗಿದೆ.
        ಸರ್ಕಾರ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ಪ್ರಾರಂಭಿಸುವುದರಿಂದ ಮಾತೃ ಭಾಷೆಗೆ ದ್ರೋಹ ಬಗೆದಂತಾಗುತ್ತದೆ ಎನ್ನುವುದು ಕೆಲವರ ವಾದ. ವಿಪರ್ಯಾಸವೆಂದರೆ ಹೀಗೆ ವಾದಿಸುವವರ ಮಕ್ಕಳು, ಮೊಮ್ಮಕ್ಕಳು ಓದುತ್ತಿರುವುದು ಪ್ರತಿಷ್ಟಿತ ಇಂಗ್ಲಿಷ್ ಶಾಲೆಗಳಲ್ಲಿ. ಇಂಗ್ಲಿಷ್ ಶಾಲೆಗಳನ್ನು ಸ್ಥಾಪಿಸಲೇ ಬೇಕೆನ್ನುವುದು ನನ್ನ ವಿತಂಡವಾದವಲ್ಲ. ಇಂಗ್ಲಿಷ್ ಕಲಿಯುವ ಭಾಷೆಯಾಗಬೇಕೆ ವಿನಹ ಶಿಕ್ಷಣದ ಮಾಧ್ಯಮವಾಗಬಾರದು ಎನ್ನುವುದು ಹಿರಿಯ ಸಾಹಿತಿ ಯು.ಆರ್.ಅನಂತಮೂರ್ತಿ ಅವರ ಮಾತು. ಅವರ ಮಾತಿನಲ್ಲೂ ಹುರುಳಿದೆ. ಜೊತೆಗೆ ಇಲ್ಲೊಂದು ಪ್ರಶ್ನೆ ಉದ್ಭವಿಸುತ್ತದೆ. ಹತ್ತನೇ ತರಗತಿಯವರೆಗೆ ವಿಜ್ಞಾನವನ್ನು ಕನ್ನಡದಲ್ಲಿ ಕಲಿತ ವಿದ್ಯಾರ್ಥಿ ಪಿ.ಯು.ಸಿ ನಲ್ಲಿ ವಿಜ್ಞಾನವನ್ನು ಯಾವ ಭಾಷೆಯಲ್ಲಿ ಕಲಿಯಬೇಕು?. ಅಲ್ಲಿ ಮಾಧ್ಯಮದ ಆಯ್ಕೆಗೆ ಅವನಿಗೆ ಅವಕಾಶವಿದೆಯೇ?. ಹತ್ತನೇ ವರೆಗೆ ಕನ್ನಡದಲ್ಲಿ ಕಲಿತು ಬಂದ ವಿದ್ಯಾರ್ಥಿಗೆ ಪಿ.ಯು.ಸಿ ನಲ್ಲಿ ಇಂಗ್ಲಿಷ್ ಅನಿವಾರ್ಯವಾಗುವುದರಿಂದ ಸಹಜವಾಗಿಯೇ ಅವನ ಕಲಿಕಾ ಸಾಮರ್ಥ್ಯ ಕುಂಠಿತಗೊಳ್ಳುತ್ತದೆ. ಪ್ರಾರಂಭದಿಂದಲೂ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತು ಬಂದ ಸಾಧಾರಣ ಬುದ್ಧಿ ಮಟ್ಟದ ವಿದ್ಯಾರ್ಥಿ ಸಹಜವಾಗಿಯೇ ಕನ್ನಡದಲ್ಲಿ ಕಲಿತು ಬಂದ ವಿದ್ಯಾರ್ಥಿಗಿಂತ ಹೆಚ್ಚು ಅಂಕಗಳನ್ನು ಗಳಿಸಲು ಸಾಧ್ಯವಾಗುತ್ತದೆ. ಪರಿಸ್ಥಿತಿ ಹೀಗಿರುವಾಗ ಪಾಲಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಇಂಗ್ಲಿಷ್ ನ್ನು ಭಾಷೆಯಾಗಿ ಕಲಿಯುವುದಕ್ಕಿಂತ ಅದನ್ನು ಮಾಧ್ಯಮವಾಗಿ ಕಲಿಯುವ ಅನಿವಾರ್ಯತೆ ಹೆಚ್ಚುತ್ತಿದೆ.
        ಮಾತೃ ಭಾಷೆಯನ್ನು ಉಳಿಸಿಕೊಳ್ಳಲೇ ಬೇಕೆನ್ನುವುದಾದರೆ ಒಂದೇ ಮಾಧ್ಯಮದ ಶಾಲೆಗಳನ್ನು ಎಲ್ಲ ಕಡೆ ಸ್ಥಾಪಿಸಲಿ. ಪ್ರತಿಯೊಂದು ಮಗು ಪ್ರಾಥಮಿಕ ಶಿಕ್ಷಣವನ್ನು ಆ ರಾಜ್ಯದ ಭಾಷೆಯಲ್ಲೇ ಕಲಿಯುವಂಥ ನಿಯಮ ರಚನೆಯಾಗಲಿ. ಅದು ಖಾಸಗಿ ಶಾಲೆಯಾಗಿರಲಿ, ಸರ್ಕಾರಿ ಶಾಲೆಯಾಗಿರಲಿ ಏಕರೂಪ pathya ಕ್ರಮದ ಕನ್ನಡ ಮಾಧ್ಯಮದ ಶಿಕ್ಷಣ ಪದ್ಧತಿ ಜಾರಿಗೆ ಬರಲಿ. ಈ ಮಾತು ವಸತಿ ಶಾಲೆಗಳಿಗೂ ಅನ್ವಯಿಸಲಿ. ಆದರೆ ಹೀಗೆ ಮಾಡುವುದು ಸರ್ಕಾರದ ಸಾಮರ್ಥ್ಯವನ್ನು ಮೀರಿದ ಸಂಗತಿ. ಸರ್ಕಾರದ ಉದಾರೀಕರಣ ನೀತಿ ಮತ್ತು ಸರ್ಕಾರದ ತಾರತಮ್ಯ ನೀತಿಯಿಂದಾಗಿ ಪಾಲಕರಿಗೆ ಶಿಕ್ಷಣ ಮಾಧ್ಯಮವನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ದೊರೆಯುತ್ತಿದೆ. ಆಯ್ಕೆಯ ಪ್ರಶ್ನೆ ಎದುರಾದಾಗ ಸಹಜವಾಗಿಯೇ ಅವರ ಆಯ್ಕೆ ಇಂಗ್ಲಿಷ್ ಮಾಧ್ಯಮವಾಗುತ್ತಿದೆ. ಆ ಇಂಗ್ಲಿಷ್ ಶಿಕ್ಷಣಕ್ಕಾಗಿ  ಅವರು ಖಾಸಗಿ ಶಾಲೆಗಳನ್ನು ಹುಡುಕಿಕೊಂಡು ಹೋಗುತ್ತಿರುವುದು ಸಾಮಾನ್ಯ ದೃಶ್ಯವಾಗಿದೆ. ಸರ್ಕಾರಿ ಶಾಲೆಗಳೆಲ್ಲ ಮಕ್ಕಳಿಲ್ಲದೆ ಬಿಕೋ ಎನ್ನುತ್ತಿವೆ. ಈ ನಡುವೆ ಶಿಕ್ಷಣ ಹಕ್ಕು ಕಾಯ್ದೆಯೊಂದು ಜಾರಿಗೆ ಬರುತ್ತದೆ. ಅದರಿಂದಾಗುವ ಪ್ರಯೋಜನವಾದರೂ ಏನು?. ನಾನು ಈ ಮೊದಲೇ ಹೇಳಿದಂತೆ ಜನರು ಶಿಕ್ಷಣವನ್ನು ತಮ್ಮ ಮೂಲಭೂತ ಹಕ್ಕನ್ನಾಗಿಸಿಕೊಂಡು ಅನೇಕ ವರ್ಷಗಳಾಗಿವೆ. ಆದ್ದರಿಂದ ಶಿಕ್ಷಣವನ್ನು ಹಕ್ಕಾಗಿಸುವ ಕಾಯ್ದೆಯೇ ಅರ್ಥವಿಲ್ಲದ್ದು ಎಂದೆನಿಸುತ್ತದೆ. ಅತ್ಯುತ್ತಮ ಶೈಕ್ಷಣಿಕ ವ್ಯವಸ್ಥೆಯನ್ನು ಹುಟ್ಟು ಹಾಕಿದಾಗ ಮಾತ್ರ ಜನರಲ್ಲಿ ಹಕ್ಕಿನ ಪ್ರಜ್ಞೆಯನ್ನು ಒಡಮೂಡಿಸುವ ಪ್ರಯತ್ನಕ್ಕೊಂದು ನೈತಿಕ ಬೆಂಬಲ ದೊರೆಯಬಹುದು.

-ರಾಜಕುಮಾರ ವ್ಹಿ.ಕುಲಕರ್ಣಿ (ಕುಮಸಿ), ಬಾಗಲಕೋಟೆ 

No comments:

Post a Comment