Saturday, March 24, 2012

ಆ ಪುಟ್ಟ ಮಕ್ಕಳ ಕಾಲಲ್ಲಿ ಚಪ್ಪಲಿ ಇರಲಿಲ್ಲ


    ಮೊನ್ನೆ ಮಾರ್ಚ್ ೨೨ ರಂದು ಗದಗಿಗೆ ಹೋಗಿ ಮರಳಿ ಬರುವಾಗ ದಾರಿಯಲ್ಲಿ ಚಿಕ್ಕ ಮಕ್ಕಳು ರಸ್ತೆ ದಾಟಲು ನಿಂತಿರುವುದು ಕಾಣಿಸಿತು. ಶಾಲಾ ಸಮವಸ್ತ್ರ ಧರಿಸಿ ಹೆಗಲಿಗೆ ಚೀಲ ಹಾಕಿಕೊಂಡು ದೂರದ ಶಾಲೆಯಿಂದ ಮನೆಗೆ ಹೋಗಲು ರಸ್ತೆ ದಾಟುತ್ತಿದ್ದ ಆ ಮಕ್ಕಳಲ್ಲಿ ಬಹುತೇಕ ಮಕ್ಕಳು ಬರಿಗಾಲಿನಲ್ಲೇ ಇದ್ದರು. ಮಧ್ಯಾಹ್ನದ ಸುಡುವ ಬಿಸಿಲಿನಲ್ಲಿ ಬರಿಗಾಲಿನಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಕ್ಕಳನ್ನು ನೋಡಿ ಕರುಳು ಚುರುಕ್ ಎಂದಿತು. ಹಿರಿಯರು ಮತ್ತು ಶಿಕ್ಷಣದ ಕುರಿತು ಅಪಾರ ಕಾಳಜಿಯುಳ್ಳವರೂ ಆದ ಶ್ರೀ ಏನ್.ಜಿ.ಕರೂರ ಅವರು ಆ ಶಾಲಾ ಮಕ್ಕಳ ಪರಿಸ್ಥಿತಿಗೆ ಕನಿಕರ ವ್ಯಕ್ತಪಡಿಸಿದರು. ಮಕ್ಕಳಿಗೆ ಓದಬೇಕೆನ್ನುವ ಆಸೆ ಇದೆ ಪಾಲಕರಿಗೂ ಶಿಕ್ಷಣ ಕೊಡಿಸಬೇಕೆನ್ನುವ ಬಯಕೆ ಇದೆ. ಆದರೆ ಸರ್ಕಾರ ಮಾತ್ರ ಸ್ಪಂದಿಸುವ ರೀತಿ ಮಾತ್ರ ಸರಿಯಿಲ್ಲ ಎಂದು ನಿರಾಸೆ ವ್ಯಕ್ತಪಡಿಸಿದರು.
    ಸರ್ಕಾರ ಸಮವಸ್ತ್ರ, ಬಿಸಿಯೂಟದಂಥ ಯೋಜನೆಗಳನ್ನು ಜಾರಿಗೆ ತಂದು ಸರ್ಕಾರಿ ಶಾಲೆಯಲ್ಲಿ ಮಕ್ಕಳ ಸಂಖ್ಯೆಯನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದೆ. ಜೊತೆಗೆ ಪುಸ್ತಕಗಳನ್ನು ಉಚಿತವಾಗಿ ವಿತರಿಸುತ್ತಿದೆ. ಆದರೆ ಅದೆಷ್ಟೋ ಹಳ್ಳಿಗಳಲ್ಲಿ ಇವತ್ತಿನವರೆಗೂ ಮಕ್ಕಳ ಮನೆ ಸಮೀಪದಲ್ಲೇ ಶಾಲೆಗಳಿಲ್ಲ. ಮಕ್ಕಳು ನಡೆದುಕೊಂಡೇ ಶಾಲೆಗೆ ಹೋಗಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.
    ನಗರ ಪ್ರದೇಶಗಳಲ್ಲಿ ವಾಸಿಸುತ್ತಿರುವ ಮತ್ತು ಕಾನ್ವೆಂಟ್ ಶಾಲೆಗಳಿಗೆ ಆಟೋ ಬಸ್ಸುಗಳಲ್ಲಿ ಮಕ್ಕಳನ್ನು ಕಳುಹಿಸುತ್ತಿರುವ ಎಷ್ಟೋ ಪಾಲಕರಿಗೆ ಹಳ್ಳಿಗಳಲ್ಲಿ ಮಕ್ಕಳು ಬರಿಗಾಲಿನಲ್ಲಿ ನಡೆದುಕೊಂಡು ಶಾಲೆಗೆ ಹೋಗುತ್ತಿರುವ ವಿಷಯ ಗೊತ್ತಿಲ್ಲ. ಈ ನಡುವೆ ಸರ್ಕಾರ ಏಕರೂಪ ಶಿಕ್ಷಣ ಪದ್ಧತಿ ಜಾರಿಗೆ ತರಲು ಯೋಜನೆ ರೂಪಿಸುತ್ತಿದೆ. ಶಾಲೆಗಳಲ್ಲಿ ಪಾಠ ಮಾಡುತ್ತಿರುವ ಶಿಕ್ಷಕರಿಗೆ ವೇತನ ಆಯೋಗದ ಶಿಫಾರಸ್ಸುಗಳ ಕುರಿತು ಚಿಂತೆ ಶುರುವಾಗಿದೆ. ಖಾಸಗಿ ಶಾಲೆಗಳ ಆಡಳಿತ ವರ್ಗದವರಿಗೆ ಸರ್ಕಾರದ ಅನುದಾನ ಪಡೆಯುವ ತವಕ. ಇವರೆಲ್ಲರ ನಡುವೆ ಆ ಪುಟ್ಟ ಮಕ್ಕಳು ಮಾತ್ರ ಹೆಗಲಿಗೆ ಚೀಲ ಏರಿಸಿಕೊಂಡು ಭವಿಷ್ಯದ ಕನಸು ಕಾಣುತ್ತ ಬರಿಗಾಲಿನಲ್ಲೇ ನಡೆದುಕೊಂಡು ಶಾಲೆಗೆ ಹೋಗುತ್ತಿವೆ.
    ಈ ನಡುವೆ ಸರ್ಕಾರಿ ಶಾಲೆಗಳಿಗೆ ಮಕ್ಕಳೇ ಬರುತ್ತಿಲ್ಲ ಎಂದು ಸರ್ಕಾರ ತಗಾದೆ ತೆಗೆಯುತ್ತಿದೆ. ಅದಕ್ಕೆಂದೇ ನಾಲ್ಕಾರು ಹಳ್ಳಿಗಳ ನಡುವೆ ಒಂದೇ ಶಾಲೆ ಇಟ್ಟು ಉಳಿದವುಗಳನ್ನು ಮುಚ್ಚಿ ಬಿಡುವ ನಿರ್ಧಾರಕ್ಕೆ ಬರುತ್ತಿದೆ. ಹಾಗೇನಾದರೂ ಶಾಲೆಗಳನ್ನು ಮುಚ್ಚಿ ಬಿಟ್ಟರೆ ಆ ಬರಿಗಾಲಿನ ಪುಟ್ಟ ಮಕ್ಕಳು ಇನ್ನಷ್ಟು ದೂರ ನಡೆದುಕೊಂಡು ಹೋಗಬೇಕು. ಸರ್ಕಾರಕ್ಕಾಗಲಿ ಶಿಕ್ಷಣ ಮಂತ್ರಿಗಳಿಗಾಗಲಿ ಈ ಕುರಿತು ತಿಳುವಳಿಕೆ ಇಲ್ಲವಾಗಿದೆ.
     ಮಕ್ಕಳ ಶಿಕ್ಷಣಕ್ಕಾಗಿ ಇವತ್ತು ಹಳ್ಳಿಗಳಲ್ಲಿನ ಅನೇಕ ಕುಟುಂಬಗಳು ನಗರ ಪ್ರದೇಶಗಳಿಗೆ ವಲಸೆ ಹೋಗುತ್ತಿವೆ ಎನ್ನುವುದು ಕೆಲವರ ವಾದ. ಹೌದು ಎಂದು ಒಪ್ಪಿಕೊಂಡರೂ ಅದೆಷ್ಟು ಕುಟುಂಬಗಳಿಗೆ ಹೀಗೆ ನಗರ ಪ್ರದೇಶಗಳಿಗೆ ವಲಸೆ ಹೋಗಲು ಸಾಧ್ಯವಾಗುತ್ತಿದೆ. ಬದುಕಿನ ಬಡತನ ಅನೇಕ ಕುಟುಂಬಗಳಿಗೆ ಇವತ್ತಿಗೂ ಹಳ್ಳಿಯಲ್ಲೇ ನೆಲೆ ನಿಲ್ಲುವ ಅನಿವಾರ್ಯತೆ ಸೃಷ್ಟಿಸಿದೆ. ಆದ್ದರಿಂದ ಸರ್ಕಾರಿ ಶಾಲೆಗಳಿಗೆ ಹೋಗುತ್ತಿರುವ ಎಲ್ಲ ಮಕ್ಕಳೂ ಬಡವರ ಮಕ್ಕಳೆ. ಕಡು ಬಡತನ ಆ ಮಕ್ಕಳು ಬರಿಗಾಲಿನಲ್ಲಿ ನಡೆದು ಶಾಲೆಗೆ ಹೋಗಲು ಕಾರಣವಾಗಿದೆ. ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ ಎನ್ನುವ ನೆಪವೊಡ್ಡಿ ಶಾಲೆಗಳನ್ನು ಮುಚ್ಚಿದರೆ ಆ ಮಕ್ಕಳು ಈಗ ನಡೆಯುವ ದೂರಿಗಿಂತ ಹೆಚ್ಚು ದೂರ ನಡೆಯಬೇಕಾಗುತ್ತದೆ. ಚಪ್ಪಲಿ ಇಲ್ಲದ ಆ ಪುಟ್ಟ ಮಕ್ಕಳ ಪಾದದ ನೋವು ಮತ್ತಷ್ಟು ಹೆಚ್ಚಲಿದೆ. ಹವಾನಿಯಂತ್ರಿತ ಕೊಣೆಯಲ್ಲಿ ಕುಳಿತು ನಿರ್ಧಾರಗಳನ್ನು ಕೈಗೊಳ್ಳುವ ರಾಜಕೀಯ ನಾಯಕರುಗಳಿಗೆ ಮತ್ತು ಸರ್ಕಾರಿ ಅಧಿಕಾರಿಗಳಿಗೆ ಮಕ್ಕಳ ಆ ನೋವು ಅರ್ಥವಾಗುವುದಿಲ್ಲ.  

-ರಾಜಕುಮಾರ ವ್ಹಿ.ಕುಲಕರ್ಣಿ (ಕುಮಸಿ), ಬಾಗಲಕೋಟೆ 

No comments:

Post a Comment