Tuesday, March 27, 2012

ನೋಡಿ ಇದು ಕನ್ನಡದ ಸ್ಥಿತಿ


ಬಾಗಲಕೋಟೆಯ ವಿದ್ಯಾಗಿರಿಯಲ್ಲೊಂದು ಉಪಹಾರ ಗೃಹ ಉದ್ಘಾಟನೆಗೊಳ್ಳಲಿದೆ. ಆ ಉಪಹಾರ ಗೃಹದ ಹೆಸರು ¥ÀkªÁ£Àß' ಎಂದು. ಅದರ ಅರ್ಥಕ್ಕಾಗಿ ಮತ್ತು ಹೇಗೆ ಉಚ್ಚರಿಸಬೇಕೆಂದು ಅನೇಕರು ತಲೆ ಬಿಸಿ ಮಾಡಿಕೊಂಡಿದ್ದುಂಟು. ಶುದ್ಧಗನ್ನಡದಲ್ಲಿ ಅದು 'ಪಕ್ವಾನ್ನ' ಎಂದಾಗಬೇಕು. ಪಕ್ವಾನ್ನ ಪದದ ಅರ್ಥ ವಿಶೇಷ ಭೋಜನ ಎಂದಾಗುತ್ತದೆ. ಒಂದಿಷ್ಟು ಹೊಸತನ ಇರಲಿ ಎನ್ನುವುದು ಆ ಉಪಹಾರ ಗೃಹದ ಮಾಲೀಕರ ವಿಚಾರವಾಗಿರಬಹುದು. ಇದರಲ್ಲಿ ಉಪಹಾರ ಗೃಹಕ್ಕೆ ಗಿರಾಕಿಗಳನ್ನು ಸೆಳೆಯುವ ತಂತ್ರವೂ ಅಡಗಿದೆ. ಈ ಹೊಸತನ ಮತ್ತು ಸೆಳೆಯುವ ಆಟಗಳ ನಡುವೆ ಭಾಷೆಯ ಅಂದವನ್ನು ಕೆಡಿಸುವ ಅಧಿಕಾರ ನಮಗಿಲ್ಲ. ಒಟ್ಟಿನಲ್ಲಿ ಕನ್ನಡದ ಪದವೊಂದನ್ನು ಇಲ್ಲಿ ಅಪಭ್ರಂಶಗೊಳಿಸಲಾಗಿದೆ. ಈ ರೀತಿ ಪದ ಪ್ರಯೋಗ ಇತ್ತಿಚಿನ ದಿನಗಳಲ್ಲಿ ಹೆಚ್ಚುತ್ತಿದೆ. ಒಂದಿಷ್ಟು ಬದಲಾವಣೆ ಮತ್ತು ಹೊಸತನಕ್ಕಾಗಿ ಹೀಗೆ ಮಾಡಿದ್ದೇವೆಂದು ಸಮರ್ಥಿಸಿಕೊಳ್ಳುವವರ ಸಂಖ್ಯೆ ಏನೂ ಕಡಿಮೆ ಇಲ್ಲ. ಒಂದು ಕಾಲದಲ್ಲಿ ಕನ್ನಡದ ನಂಬರ್ ಒನ್ ದಿನಪತ್ರಿಕೆ ಎಂದೇ ಗುರುತಿಸಿಕೊಂಡಿದ್ದ ಪತ್ರಿಕೆ ತನ್ನ ಪುರವಣಿಗೆ ®ªÀ®vk’ ಎಂದು ಹೆಸರಿಸಿತು. ಸಂಪಾದಕರು ವಿವರಣೆ ಕೊಡುವವರೆಗೆ ಅನೇಕರಿಗೆ ಅದರ ಅರ್ಥವೇ ಹೊಳೆದಿರಲಿಲ್ಲ. ಮಹಿಳಾ ಪುರವಣಿಗೆ ಏನೆಂದು ಹೆಸರಿಸಬೇಕೆಂದಾಗ ಓದುಗರೊಬ್ಬರು vk’ಎಂದು ವ್ಯಂಗ್ಯವಾಗಿ ಬರೆದಿದ್ದರು.
ಹೀಗೆ ಹೊಸತನದ ವ್ಯಾಮೋಹಕ್ಕೆ ಸಿಲುಕಿ ನಮ್ಮದೇ ಭಾಷೆಯನ್ನು ಅವಹೇಳನಕಾರಿಯಾಗಿ ಬರೆಯುತ್ತಿರುವ ಸಮಯದಲ್ಲೇ ಅಲ್ಲಿ ಗಡಿನಾಡಿನಲ್ಲಿ ಪರಭಾಷಿಕರು ಕನ್ನಡ ನಾಮಫಲಕಗಳ ಮೇಲೆ ಮಸಿ ಬಳಿಯುತ್ತಾರೆ. ಕನ್ನಡ ಭಾಷೆಯ ವಿರುದ್ಧ ಉಗ್ರ ಪ್ರತಿಭಟನೆಗೆ ಇಳಿಯುತ್ತಾರೆ. ಕನ್ನಡದಲ್ಲಿ ಮಾತನಾಡುವುದೇ ತಪ್ಪು ಎನ್ನುವಂತೆ ವರ್ತಿಸುತ್ತಾರೆ. ಕನ್ನಡ ರಾಜ್ಯೋತ್ಸವ ದಿನದಂದೇ ಕರಾಳ ದಿನ ಆಚರಿಸುತ್ತಾರೆ. ತನ್ನ ನೆಲದಲ್ಲೇ ಕನ್ನಡ ಅನಾಥವಾಗುತ್ತದೆ.
ಈ ನಡುವೆ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆ ರಾಜಕೀಯ ಬಣ್ಣ ಪಡೆಯುತ್ತದೆ. ಯಾವ ರಾಜಕೀಯ ನಾಯಕರುಗಳಿಗೂ ಕಡಿಮೆ ಇಲ್ಲದಂತೆ ನಮ್ಮ ಸೃಜನಶೀಲ ಸಾಹಿತಿಗಳು ವರ್ತಿಸುತ್ತಾರೆ. ಪರಿಷತ್ತಿನ ಸದಸ್ಯರನ್ನು ಓಲೈಸಲು ಭಾರಿ ಭೋಜನದ ವ್ಯವಸ್ಥೆ, ಪ್ರಣಾಳಿಕೆ ಬಿಡುಗಡೆ, ಸಾಧನೆಗಳ ಪಟ್ಟಿ ಹೀಗೆ ಹತ್ತು ಹಲವು ಚಟುವಟಿಕೆಗಳಿಂದ ಕನ್ನಡದ ಸೃಜನಶೀಲ ಕ್ಷೇತ್ರ ರಣಾಂಗಣವಾಗಿ ಮಾರ್ಪಡುತ್ತದೆ. ಲಕ್ಷಾಂತರ ರುಪಾಯಿಗಳನ್ನು ವ್ಯಯಿಸಿ ಪರಿಷತ್ತಿಗೆ ಆಯ್ಕೆಯಾಗಲು ನಮ್ಮ ಸಾಹಿತಿಗಳು ನಡೆಸುವ ಹುನ್ನಾರ ಅನೇಕ ಅನುಮಾನಗಳಿಗೆ ಎಡೆ ಮಾಡಿಕೊಡುತ್ತದೆ. ಪರಿಷತ್ತಿನ ಕೆಲಸ ಅದು ಲಾಭದಾಯಕ ಕೆಲಸ ಎಂದಾದರೆ ಈ ಲಾಭ ನಷ್ಟದ ಸಂಗತಿಗಳಲ್ಲಿ ನಾಡು ನುಡಿಯ ಬೆಳವಣಿಗೆ ಆಗುವುದಾದರೂ ಹೇಗೆ ಸಾಧ್ಯ?
ಇವರೆಲ್ಲರ ನಡುವೆ ಇನ್ನೊಂದು ಗುಂಪಿದೆ ಅದು ಭಾಷೆಯ ರಕ್ಷಣೆಯ ಹೆಸರಿನಲ್ಲಿ ಹಣ ಕೊಳ್ಳೆ ಹೊಡೆಯುವ ಕೆಲಸಕ್ಕೆ ಇಳಿಯುತ್ತದೆ. ಭಾಷೆಯ ಹೆಸರಿನಲ್ಲಿ ಒಂದಿಷ್ಟು ಹಣ ಮಾಡುವುದು ಮತ್ತು ಒಂದಿಷ್ಟು ಹೆಸರುಗಳಿಸುವುದು ಅವರ ಮುಖ್ಯ ಉದ್ದೇಶ. ಭಾಷೆಯೊಂದು ಅಪಭ್ರಂಶವಾಗುತ್ತಿರುವುದಾಗಲಿ, ಗಡಿನಾಡಿನಲ್ಲಿ ಭಾಷೆ ಅನಾಥ ಪ್ರಜ್ಞೆಯಿಂದ ಬಳಲುತ್ತಿರುವುದಾಗಲಿ, ಸಾಹಿತ್ಯ ಪರಿಷತ್ತು ರಾಜಕೀಯದ ರಂಗು ಪಡೆಯುತ್ತಿರುವುದಾಗಲಿ ಈ ಯಾವ ಸಮಸ್ಯೆಯೂ ಅವರಿಗೆ  ತಟ್ಟುವುದಿಲ್ಲ. ಭಾಷೆಯ ರಕ್ಷಣೆಯನ್ನು ಫುಲ್ ಟೈಮ್ ಕೆಲಸವಾಗಿಸಿಕೊಂಡಿರುವ ಆ ಮಹನೀಯರು ಕನ್ನಡ ಭಾಷೆಯನ್ನು ಅಪಭ್ರಂಶವಾಗದಂತೆ ಉಚ್ಚರಿಸಿದರೆ ಅದೇ ಅವರು ಭಾಷೆಗೆ ಮಾಡುವ ಬಹು ದೊಡ್ಡ ಉಪಕಾರ.
ಈ ಎಲ್ಲ ಸಮಸ್ಯೆಗಳ ನಡುವೆಯೂ ಒಂದಿಷ್ಟು ಸಂವೇದನಾಶೀಲರು ನಾಡು ನುಡಿಯ ಕುರಿತು ವ್ಯಕ್ತಪಡಿಸುತ್ತಿರುವ ಕಾಳಜಿ ಮತ್ತು ಸದ್ದಿಲ್ಲದೇ ಅವರು ಮಾಡುತ್ತಿರುವ ಪ್ರಯತ್ನಗಳಿಂದ  ಕನ್ನಡ ಭಾಷೆ ತನ್ನ ತನವನ್ನು ಉಳಿಸಿಕೊಳ್ಳಲು ಸಾಧ್ಯವಾಗಿದೆ ಎನ್ನುವುದು ನಾವುಗಳೆಲ್ಲ ಒಪ್ಪಿಕೊಳ್ಳುವಂತ ಮಾತು. ಅಂಥ ಸೃಜನಶೀಲರ ಸಂಖ್ಯೆ ಹೆಚ್ಚಾಗಲಿ ಎನ್ನುವ ಆಶಯ ಅನೇಕರದು.

-ರಾಜಕುಮಾರ ವ್ಹಿ.ಕುಲಕರ್ಣಿ (ಕುಮಸಿ), ಬಾಗಲಕೋಟೆ 

No comments:

Post a Comment