Tuesday, October 3, 2023

ಭೌತಿಕ ಶುಚಿತ್ವ ಮತ್ತು ಬೌದ್ಧಿಕ ವಿಕಸನ

     



( ೧೦.೦೭.೨೦೨೩ ರ ಪ್ರಜಾವಾಣಿಯ 'ಸಂಗತ' ಅಂಕಣದಲ್ಲಿ ಪ್ರಕಟ)

         ಇತ್ತೀಚೆಗೆ ಮಿತ್ರರೊಬ್ಬರ ಊರಿನಲ್ಲಿ ಮುಖ್ಯ ಬಸ್ ನಿಲ್ದಾಣಕ್ಕಿಂತ ಪೂರ್ವದ ನಿಲ್ದಾಣದಲ್ಲಿ ಇಳಿದು ಮೂತ್ರವಿಸರ್ಜನೆಗಾಗಿ ಸುತ್ತಲು ದೃಷ್ಟಿ ಬೀರಿದವನಿಗೆ ಅಲ್ಲೆಲ್ಲೂ ಸಾರ್ವಜನಿಕ ಶೌಚಾಲಯ ಗೋಚರಿಸಲಿಲ್ಲ. ವಸತಿ ಮತ್ತು ವಾಣಿಜ್ಯ ಸಂಕೀರ್ಣಗಳಿಂದ ದಟ್ಟವಾದ ಆ ಪ್ರದೇಶದಲ್ಲಿ ಬಯಲುಭೂಮಿಯನ್ನು ಹುಡುಕಿಕೊಂಡು ಹೋಗುವುದು ಅಸಾಧ್ಯವಾದ ಕೆಲಸವಾಗಿತ್ತು. ಕೊನೆಗೆ ಈ ಸಮಸ್ಯೆಗೆ ಪರಿಹಾರ ಸ್ನೇಹಿತರ ಮನೆ ತಲುಪಿದ ನಂತರವೇ ಪ್ರಾಪ್ತವಾಯಿತು. ಮನೆ ತಲುಪವರೆಗೂ ನನಗಾದ ಸಂಕಟ ವರ್ಣಿಸಲಸಾಧ್ಯವಾಗಿತ್ತು. ‘ಹೆಜ್ಜೆ ಹೆಜ್ಜೆಗೂ ದೇವಾಲಯಗಳಿರುವ ಈ ಊರಿನಲ್ಲಿ ಸಾರ್ವಜನಿಕರ ಅನುಕೂಲಕ್ಕೆಂದು ರಸ್ತೆಬದಿ ಶೌಚಾಲಯಗಳಿಲ್ಲ ನೋಡಿ’ ಎಂದ ಸ್ನೇಹಿತರ ಮಾತಿನಲ್ಲಿ ಸ್ಥಳೀಯ ಆಡಳಿತದ ವೈಫಲ್ಯ ಢಾಳಾಗಿ ಎದ್ದು ಕಾಣುತ್ತಿತ್ತು 

ಇದೇ ಸಮಯದಲ್ಲಿ ನನ್ನ ಸ್ನೇಹಿತರ ಮನೆಗೆ ಅತಿಥಿಯಾಗಿ ಬಂದ ಹಿರಿಯರೊಬ್ಬರು ಸಾರ್ವಜನಿಕ ಗ್ರಂಥಾಲಯಕ್ಕೆ ಭೇಟಿ ನೀಡುವ ಇಂಗಿತ ವ್ಯಕ್ತಪಡಿಸಿದರು. ಮನೆಯಿಂದ ಸಾರ್ವಜನಿಕ ಗ್ರಂಥಾಲಯ ಬಹಳ ದೂರದಲ್ಲಿರುವುದರಿಂದ ಸ್ನೇಹಿತರು ತಮ್ಮ ಅಸಹಾಯಕತೆ ತೋಡಿಕೊಂಡರು. ಹಿರಿಯರು ಸಮೀಪದಲ್ಲಿ ಶಾಖಾ ಗ್ರಂಥಾಲಯ ಇದೆಯೇ ಎಂದು ಕೇಳಿದರು. ಆಗ ಸ್ನೇಹಿತರ ಉತ್ತರ ನಕಾರಾತ್ಮಕವಾಗಿತ್ತು. ಕೊನೆಗೆ ಖಾಸಗಿ ಗ್ರಂಥಾಲಯದ ಬಗ್ಗೆ ಪ್ರಶ್ನಿಸಿದರು. ಈ ಖಾಸಗಿ ಗ್ರಂಥಾಲಯ ಎನ್ನುವ ವ್ಯವಸ್ಥೆ ಮರೆಯಾಗಿ ಹಲವು ದಶಕಗಳೇ ಸಂದಿರುವಾಗ ಆ ಹಿರಿಯರಿಗೆ ಉತ್ತರಿಸಲು ತುಂಬ ಇರಿಸುಮುರಿಸಾಯಿತು. ಪುಸ್ತಕಗಳ ಓದಿನ ಸಂಸ್ಕೃತಿಯೇ ನಾಶವಾಗುತ್ತಿದೆಯಲ್ಲ ಎಂದು ಅವರು ಬಹಳ ವೇದನೆಪಟ್ಟುಕೊಂಡರು. 

ಶೌಚಾಲಯ ಮತ್ತು ಗ್ರಂಥಾಲಯ ನಾಗರಿಕ ಸಮಾಜದ ಎರಡು ಬಹುಮುಖ್ಯ ಅಗತ್ಯಗಳಾಗಿವೆ. ಒಂದು ಭೌತಿಕÀ ಶುಚಿತ್ವಕ್ಕೆ ಆದ್ಯತೆ ನೀಡಿದರೆ ಇನ್ನೊಂದು ಬೌದ್ಧಿಕ ವಿಕಸನಕ್ಕೆ ದಾರಿ ಮಾಡಿಕೊಡುತ್ತದೆ. ಮನುಷ್ಯ ಭೌತಿಕವಾಗಿ ಮತ್ತು ಬೌದ್ಧಿಕವಾಗಿ ಎರಡೂ ಸ್ತರಗಳಲ್ಲಿ ಪ್ರಗತಿ ಸಾಧಿಸಬೇಕಿರುವುದರಿಂದ ಶೌಚಾಲಯ ಮತ್ತು ಗ್ರಂಥಾಲಯಗಳು ಅತಿ ಅಗತ್ಯದ ಬೇಡಿಕೆಗಳಾಗಿವೆ. ಈ ದಿಸೆಯಲ್ಲಿ ಸಾರ್ವಜನಿಕರಿಗೆ ಅನುಕೂಲವಾಗಲೆಂದು ಸರ್ಕಾರ ಸಾರ್ವಜನಿಕ ಶೌಚಾಲಯಗಳನ್ನು ಮತ್ತು ಗ್ರಂಥಾಲಯಗಳನ್ನು ಸ್ಥಾಪಿಸಿದೆ. ಆದರೆ ಸ್ಥಾಪನೆಯಲ್ಲಿರುವ ಆಸಕ್ತಿ ನಂತರದ ದಿನಗಳಲ್ಲಿ ಅವುಗಳ ನಿರ್ವಹಣೆಯಲ್ಲಿ ಕಾಣಿಸುತ್ತಿಲ್ಲದಿರುವುದು ಬಹುದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.

ನಗರ ಪ್ರದೇಶಗಳಲ್ಲಿ ಸಾರ್ವಜನಿಕ ಶೌಚಾಲಯ ಮತ್ತು ಗ್ರಂಥಾಲಯಗಳ ನಿರ್ವಹಣೆ ಸಮರ್ಪಕವಾಗಿ ಆಗುತ್ತಿಲ್ಲ. ಬಸ್ ನಿಲ್ದಾಣ, ಸರ್ಕಾರಿ ಕಚೇರಿಗಳು ಮತ್ತು ಜನನಿಬಿಡ ಮಾರುಕಟ್ಟೆ ಪ್ರದೇಶಗಳಲ್ಲಿನ ಶೌಚಾಲಯಗಳು ಅವ್ಯವಸ್ಥೆಯ ಆಗರಗಳಾಗಿವೆ. ಶೌಚಾಲಯಗಳನ್ನು ಪ್ರವೇಶಿಸಿ ಅಲ್ಲಿನ ದುರ್ಗಂಧವನ್ನು ಸಹಿಸಿಕೊಳ್ಳುವುದಕ್ಕಿಂತ ದೈಹಿಕ ಒತ್ತಡವನ್ನು ಸಹಿಸಿಕೊಳ್ಳುವುದು ಎಷ್ಟೋ ಪಾಲು ಉತ್ತಮ ಎನಿಸುತ್ತದೆ. ‘ಶುಚಿತ್ವವಿದ್ದಲ್ಲಿ ದೈವತ್ವವಿದೆ’ ಎಂದ ಮಹಾತ್ಮ ಗಾಂಧೀಜಿ ಅವರ ಮಾತನ್ನು ಸರ್ಕಾರ ಮತ್ತು ಸಾರ್ವಜನಿಕರು ಅರ್ಥಮಾಡಿಕೊಂಡಿಲ್ಲ. ಇನ್ನು ಸಾರ್ವಜನಿಕ ಗ್ರಂಥಾಲಯಗಳಲ್ಲಿಯೂ ಅನೇಕ ಸಮಸ್ಯೆಗಳಿವೆ. ಪುಸ್ತಕ, ಪಿಠೋಪಕರಣಗಳು ಮತ್ತು ಸಿಬ್ಬಂದಿಯ ಕೊರತೆಯಿಂದ ಸಾರ್ವಜನಿಕ ಗ್ರಂಥಾಲಯಗಳು ಓದುಗರನ್ನು ಆಕರ್ಷಿಸುವಲ್ಲಿ ವಿಫಲವಾಗುತ್ತಿವೆ. ಅಗತ್ಯದ ಪುಸ್ತಕಗಳಿಗಿಂತ ಅನಗತ್ಯದ ಪುಸ್ತಕಗಳ ಸಂಖ್ಯೆಯೇ ಅಲ್ಲಿ ಹೆಚ್ಚು. ಗುಣಾತ್ಮಕ ಪುಸ್ತಕಗಳ ಕೊರತೆಯಿಂದಾಗಿ ಸಾರ್ವಜನಿಕ ಗ್ರಂಥಾಲಯಗಳಿಗೆ ಭೇಟಿ ನೀಡುವ ಓದುಗರ ಸಂಖ್ಯೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ.  

ಗ್ರಾಮೀಣ ಪ್ರದೇಶಗಳಲ್ಲಿ ಶೌಚಾಲಯದ ಪರಿಕಲ್ಪನೆ ಪೂರ್ಣಪ್ರಮಾಣದಲ್ಲಿ ಕಾರ್ಯರೂಪಕ್ಕೆ ಬಂದಿಲ್ಲ. ಅದೆಷ್ಟೋ ಹಳ್ಳಿಗಳಲ್ಲಿ ಸರ್ಕಾರದ ಅನುದಾನದಲ್ಲಿ ಕಟ್ಟಿದ ಶೌಚಾಲಯಗಳನ್ನು ಮನೆಯ ಅನುಪಯುಕ್ತ ವಸ್ತುಗಳನ್ನು ಶೇಖರಿಸಿಡಲು ಜನರು ಉಪಯೋಗಿಸುತ್ತಿರುವರು. ಅನೇಕ ಸಂದರ್ಭಗಳಲ್ಲಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಸರ್ಕಾರದ ಅನುದಾನವನ್ನು ದುರ್ಬಳಕೆ ಮಾಡಿಕೊಳ್ಳುವರು. ಪರಿಣಾಮವಾಗಿ ‘ಬಯಲುಶೌಚ ಮುಕ್ತ’ ಎನ್ನುವುದು ಸರ್ಕಾರದ ದಸ್ತಾವೇಜುಗಳಲ್ಲಿ ಮಾತ್ರ ದಾಖಲಾಗುತ್ತಿದೆ ವಿನಾ ಪ್ರಾಯೋಗಿಕವಾಗಿ ಸಾಕಾರಗೊಂಡಿಲ್ಲ. ಇದೇ ಮಾತು ಗ್ರಾಮೀಣ ಗ್ರಂಥಾಲಯಗಳಿಗೂ ಅನ್ವಯಿಸುತ್ತದೆ. ಕಾಟಾಚಾರಕ್ಕೆನ್ನುವಂತೆ ಗ್ರಾಮೀಣ ಗ್ರಂಥಾಲಯಗಳನ್ನು ಸ್ಥಾಪಿಸಲಾಗಿದೆ ವಿನಾ ಅವುಗಳ ನಿರ್ವಹಣೆ ಸಮರ್ಪಕವಾಗಿಲ್ಲ. ಸ್ಥಳೀಯರನ್ನೇ ಗ್ರಂಥಾಲಯಗಳ ಮೇಲ್ವಿಚಾರಕರನ್ನಾಗಿ ನೇಮಿಸುತ್ತಿರುವುದರಿಂದ ಅವರ ಕಾರ್ಯನಿರ್ವಹಣೆ ಕುರಿತು ಪ್ರಶ್ನಿಸುವಂತಿಲ್ಲ. ಬಹಳಷ್ಟು ಗ್ರಾಮಗಳಲ್ಲಿ ಗ್ರಂಥಾಲಯಗಳು ಜೂಜು ಮತ್ತು ಇಸ್ಪಿಟ್ ಆಟದ ಅಡ್ಡಾಗಳಾಗಿ ಪರಿವರ್ತನೆಗೊಂಡಿವೆ.

ಸರ್ಕಾರಿ ಶಾಲೆಗಳಲ್ಲಿ ಗ್ರಂಥಾಲಯ ಮತ್ತು ಶೌಚಾಲಯದ ಕೊರತೆ ಬಹುಮುಖ್ಯ ಸಮಸ್ಯೆಯಾಗಿದೆ. ಗ್ರಾಮೀಣ ಭಾಗ ಮಾತ್ರವಲ್ಲದೆ ನಗರ ಪ್ರದೇಶಗಳಲ್ಲಿನ ಸರ್ಕಾರಿ ಶಾಲೆಗಳಲ್ಲಿಯೂ ಗ್ರಂಥಾಲಯ ಮತ್ತು ಶೌಚಾಲಯಗಳಿಲ್ಲ. ಶೌಚಾಲಯಗಳ ಕೊರತೆಯಿಂದಾಗಿ ಮಕ್ಕಳು ದೈಹಿಕ ಒತ್ತಡವನ್ನು ಸಹಿಸಿಕೊಂಡು ಪಾಠದತ್ತ ಗಮನವನ್ನು ಕೇಂದ್ರೀಕರಿಸುವುದು ಕಷ್ಟಸಾಧ್ಯ. ವಿಶೇಷವಾಗಿ ವಿದ್ಯಾರ್ಥಿನಿಯರು ಶೌಚಾಲಯ ಸಂಬಂಧಿತ ಸಮಸ್ಯೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಎದುರಿಸುತ್ತಿರುವರು. ಈ ಸಮಸ್ಯೆಯಿಂದಾಗಿ ಪ್ರತಿತಿಂಗಳ ಮುಟ್ಟಿನ ಸಂದರ್ಭ ವಿದ್ಯಾರ್ಥಿನಿಯರು ಶಾಲೆಗೆ ಗೈರುಹಾಜರಾಗುವುದು ಕಡ್ಡಾಯ ಎನ್ನುವಂತಾಗಿದೆ. 

ಜ್ಞಾನ ಕಲಿಕೆಯ ಕೇಂದ್ರವಾದ ಶಾಲೆಗಳಲ್ಲಿ ಅತ್ಯುತ್ತಮ ಗ್ರಂಥಾಲಯಗಳನ್ನು ಸ್ಥಾಪಿಸಲು ಸರ್ಕಾರ ನಿರಾಸಕ್ತಿ ತೋರಿಸುತ್ತಿದೆ. ಮುಖ್ಯೋಪಾಧ್ಯಾಯರ ಕೋಣೆಯಲ್ಲಿ ಕಾಟಾಚಾರಕ್ಕೆನ್ನುವಂತೆ ಕೆಲವು ಪುಸ್ತಕಗಳನ್ನು ಅಲ್ಮೆರಾದಲ್ಲಿ ಜೋಡಿಸಿಟ್ಟು ಗ್ರಂಥಾಲಯವೆಂದು ಮಕ್ಕಳಿಗೆ ತೋರಿಸಲಾಗುತ್ತಿದೆ. ಪಠ್ಯಪುಸ್ತಕಗಳ ಪೂರೈಕೆಯಲ್ಲೆ ಅನೇಕ ಸಮಸ್ಯೆಗಳಿರುವಾಗ ಇನ್ನು ಶಾಲಾಗ್ರಂಥಾಲಯಗಳಿಗೆ ಸಾಹಿತ್ಯ ಮತ್ತಿತರ ಪಠ್ಯೇತರ ಪುಸ್ತಕಗಳನ್ನು ಪೂರೈಸುವುದು ದೂರದ ಮಾತು. ಶಿಕ್ಷಕರಲ್ಲಿನ ಓದಿನ ಅಭಿರುಚಿಯ ಕೊರತೆ ಕೂಡ ಶಾಲೆಗಳಲ್ಲಿ ಗ್ರಂಥಾಲಯ ಸ್ಥಾಪನೆಯ ಹಿನ್ನೆಡೆಗೆ ಕಾರಣವಾಗುತ್ತಿದೆ. ಶಾಲಾಹಂತದಲ್ಲೆ ಮಕ್ಕಳಲ್ಲಿ ಓದಿನ ಹವ್ಯಾಸವನ್ನು ಬೆಳೆಸುವಲ್ಲಿ ವಿಫಲವಾಗುತ್ತಿರುವುದರಿಂದ ಸಹಜವಾಗಿಯೇ ಪುಸ್ತಕಗಳ ಓದುಗರ ಸಂಖ್ಯೆ ಕಡಿಮೆಯಾಗುತ್ತಿದೆ.

ಸರ್ಕಾರ ದೇವಾಲಯಗಳ ನಿರ್ಮಾಣದಲ್ಲಿ ತೋರುವ ಆಸಕ್ತಿ ಶೌಚಾಲಯ ಮತ್ತು ಗ್ರಂಥಾಲಯಗಳ ಸ್ಥಾಪನೆಯಲ್ಲಿ ತೋರಿಸುತ್ತಿಲ್ಲದಿರುವುದು ವಿಪರ್ಯಾಸದ ಸಂಗತಿ. ನಾಗರಿಕ ಸಮಾಜದ ಈ ಎರಡು ಅಗತ್ಯದ ಬೇಡಿಕೆಗಳನ್ನು ಅನುಷ್ಠಾನಕ್ಕೆ ತಂದು ಅವುಗಳನ್ನು ನಿರ್ವಹಿಸಬೇಕಾದ ಹೊಣೆಗಾರಿಕೆ ಸರ್ಕಾರದ್ದಾಗಿದೆ. ಜೊತೆಗೆ ಅವುಗಳನ್ನು ಸಮರ್ಪಕವಾಗಿ ಉಪಯೋಗಿಸುವ ಜವಾಬ್ದಾರಿ ನಾಗರಿಕ ಸಮಾಜದ ಮೇಲಿದೆ ಎನ್ನುವುದನ್ನು ಮರೆಯಬಾರದು.

-ರಾಜಕುಮಾರ ಕುಲಕರ್ಣಿ


No comments:

Post a Comment