Tuesday, March 26, 2019

ನೆನಪು (ಕಥೆ)

           ದಾಮೋದರ ಜೋಷಿ ಒಂದು ಬೆಳಗ್ಗೆ ಹಾಸಿಗೆಯಲ್ಲಿ ನಿದ್ದೆಯಿಂದ ಎದ್ದು ಕುಳಿತವನು ಮಲಗುವ ಕೋಣೆಯಲ್ಲಿನ ವಸ್ತುಗಳನ್ನೆಲ್ಲ ಹೊಸದಾಗಿ ನೋಡುತ್ತಿರುವವನಂತೆ ಪ್ರತಿಯೊಂದು ವಸ್ತುವನ್ನು ದಿಟ್ಟಿಸಿ ನೋಡತೊಡಗಿದ. ದೇಹ ಮತ್ತು ಮನಸ್ಸು ಭಾರವನ್ನು ಕಳೆದುಕೊಂಡು ಹಗುರಾದಂತೆಯೂ ತಾನು ಯಾವುದೋ ಒಂದು ಅನೂಹ್ಯ ಅನುಭವಕ್ಕೆ ಒಳಗಾದಂತೆಯೂ ಅವನಿಗೆ ಭಾಸವಾಗತೊಡಗಿತು. ಎಷ್ಟು ಪ್ರಯತ್ನಿಸಿದರೂ ನಿನ್ನೆ ನಡೆದ ಘಟನೆಗಳು ಅವನ ನೆನಪಿಗೆ ಬರುತ್ತಿಲ್ಲ. ನೆನಪಿನ ಕೋಶದ ಭಾಗವೊಂದು ತನ್ನಿಂದ ಕಳಚಿ ಬಿದ್ದಂತೆಯೂ ಮತ್ತು ಹೀಗಾಗಿದ್ದರಿಂದ ತನ್ನಲ್ಲಿ ಲವಲವಿಕೆ ಮೂಡಿದಂತೆಯೂ ಅನಿಸಲುತೊಡಗಿತು. ರಾತ್ರಿ ಅಂಗಡಿ ಬಾಗಿಲು ಹಾಕಿ ಮನೆಗೆ ಬಂದು ಊಟ ಮಾಡಿದ್ದಷ್ಟೆ ತನಗೆ ನಿದ್ದೆ ಯಾವಾಗ ಬಂತು ಎನ್ನುವುದಾಗಲಿ ರಾತ್ರಿ ಏನು ನಡೆಯಿತೆನ್ನುವುದಾಗಲಿ ನೆನಪಿಸಿಕೊಳ್ಳಲು ಸಾಕಷ್ಟು ಪ್ರಯತ್ನಿಸಿದ ದಾಮೋದರನಿಗೆ ಎಲ್ಲವೂ ಗೋಜಲುಗೋಜಲಾಗಿ ಕಾಣಿಸಿತು. ಅಲ್ಲಲ್ಲಿ ಚದುರಿದ ನೆನಪಿನ ತುಣುಕುಗಳನ್ನು ಒಂದೊಂದಾಗಿ ಜೋಡಿಸಿದಾಗ ರಾತ್ರಿ ಕನಸಿನಲ್ಲಿ ಶ್ವೇತ ವಸ್ತ್ರಧಾರಿಯಾದ ಜಟಾಧಾರಿ ಮುದುಕನೊಬ್ಬ ಕಾಣಿಸಿಕೊಂಡು ತನಗೆ ಏನನ್ನೊ ಹೇಳಿದನೆಂದೂ ಮತ್ತು ಹತ್ತಿರ ಬಂದು ತನ್ನ ಕೈಯಿಂದ ನನ್ನ ತಲೆಯನ್ನು ಸವರಿದನೆನ್ನುವ ಅಸ್ಪಷ್ಟ ಸಂಗತಿಯೊಂದು ಅವನ ಸ್ಮೃತಿ ಪಟಲದ ಮೇಲೆ ಮೂಡಿತು. ಆ ಮುದುಕ ಹಾಗೆ ತನ್ನ ತಲೆಯನ್ನು ಸವರಿದ ಕ್ಷಣದಿಂದಲೇ ನನಗೆ ಆ ದಿನವೆಲ್ಲ ನಡೆದ ಘಟನೆಗಳ ಯಾವ ನೆನಪೂ ಮನಸ್ಸಿನಲ್ಲಿ ಉಳಿಯದ ಅನುಭವವಾಯಿತೆನ್ನುವ ಅರಿವು ಬಂದದ್ದೆ ದಾಮೋದರ ದಗ್ಗನೆ ಹಾಸಿಗೆಯಿಂದ ಎದ್ದು ಹತ್ತಿರದ ಕಿಟಕಿಯ ಬಳಿ ಹೋಗಿ ನಿಂತ. ಕಿಟಕಿಯ ಹೊರಗೆ ಕಾಣುತ್ತಿದ್ದ ಮನೆಯ ಅಂಗಳದಲ್ಲಿನ ಮರಗಿಡಗಳು, ಹೂ ಹಣ್ಣುಗಳು, ಅಮ್ಮ ಬಿಡಿಸಿದ ರಂಗೋಲಿ ಸುಂದರ ದೃಶ್ಯಗಳಂತೆ ಗೋಚರಿಸಿ ಅವುಗಳನ್ನೆ ನೋಡುತ್ತ ಮೈಮರೆತು ನಿಂತ. 

  ಬೆಳ್ಳನೆಯ ಪಂಚೆಯನ್ನು ಉಟ್ಟಿದ್ದ ಬರೀ ಮೈಯ ಸಣಕಲು ದೇಹದ ಗಡ್ಡ ಮೀಸೆ ಬಿಟ್ಟಿದ್ದ ಜಟಾಧಾರಿ ಆ ಮುದುಕ ನಿನ್ನೆಯಷ್ಟೆ ಕನಸಿನಲ್ಲಿ ಕಾಣಿಸಿಕೊಂಡಿರಲಿಲ್ಲ. ಈಗ ಕಳೆದ ಹಲವು ದಿನಗಳಿಂದ ಪ್ರತಿನಿತ್ಯ ಕನಸಿನಲ್ಲಿ ಬಂದು ಕೆಲವು ಕ್ಷಣಗಳ ಕಾಲ ಸುಮ್ಮನೆ ಹತ್ತಿರ ನಿಂತು ಹೊರಟು ಹೋಗುತ್ತಿದ್ದ. ದಾಮೋದರನಿಗೂ ಅದೊಂದು ವಿಚಿತ್ರ ಸಂಗತಿಯಾಗಿ ಕಾಣಿಸಿದರೂ ತನ್ನ ದಿನನಿತ್ಯದ ಬಿಡುವಿಲ್ಲದ ದುಡಿಮೆಯಲ್ಲಿ ಮರೆತು ಬಿಟ್ಟಿದ್ದ. ನಿನ್ನೆಯಷ್ಟೆ ಅವನು ಹತ್ತಿರ ಬಂದು ತನ್ನನ್ನು ಸ್ಪರ್ಷಿಸಿದ್ದು. ಮುದುಕನ ಕೈ ತನ್ನ ತಲೆಯನ್ನು ಸ್ಪರ್ಷಿಸಿದ್ದೆ ದಾಮೋದರನಿಗೆ ದೇಹ ಹಗುರಾದಂತೆಯೂ ತಾನು ಗಾಳಿಯಲ್ಲಿ ತೇಲಾಡುತ್ತಿರುವಂತೆಯೂ ಭಾಸವಾಗತೊಡಗಿತು. ಆ ಮುದುಕನ ಸ್ಪರ್ಷದಲ್ಲಿ ಅದೇನೋ ಮಾಂತ್ರಿಕತೆ ಇದ್ದಂತೆ ಭಾಸವಾಗಿ ತಾನು ಅನಿವರ್ಚನೀಯ ಆನಂದಕ್ಕೆ ಒಳಗಾದ. ನರನಾಡಿಗಳಲ್ಲಿ ವಿದ್ಯುತ್ ಸಂಚಾರವಾದಂತಾಗಿ ಅವನ ಮೈ ವಿಚಿತ್ರವಾದ ಅನುಭವದಿಂದ ಕಂಪಿಸಿತು. 

   ಕೋಣೆಯಿಂದ ಹೊರಬಂದ ದಾಮೋದರನಿಗೆ ಮನೆಯ ಎದುರಿನ ರಸ್ತೆಯಲ್ಲಿದ್ದ ಸಾರ್ವಜನಿಕ ನಲ್ಲಿಯಿಂದ ನೀರಿನ ಕೊಡವನ್ನು ಬಗಲಲ್ಲಿಟ್ಟುಕೊಂಡು ಏದುಸಿರು ಬಿಡುತ್ತ ಪಡಸಾಲೆಯ ಮೆಟ್ಟಿಲುಗಳನ್ನು ಏರುತ್ತಿರುವ ಅಮ್ಮ ಕಣ್ಣಿಗೆ ಬಿದ್ದಳು. ಅಮ್ಮನ ಮುಖದಲ್ಲಿನ ಆಯಾಸ ಮತ್ತು ಬಳಲಿಕೆ ಅವನಲ್ಲಿ ವಿಚಿತ್ರ ಸಂಕಟವನ್ನುಂಟು ಮಾಡಿತು. ಲಗುಬಗೆಯಿಂದ ಮೆಟ್ಟಿಲಿಳಿದು ಅಮ್ಮನ ಹತ್ತಿರ ಹೋದವನು ಅವಳ ಕಂಕುಳಲ್ಲಿದ್ದ ನೀರಿನ ಕೊಡವನ್ನು ತನ್ನ ಕೈಗೆ ತೆಗೆದುಕೊಂಡು ಅಡುಗೆ ಕೋಣೆಯತ್ತ ಹೋಗುತ್ತ ‘ಅಮ್ಮ ನಿನಗೆ ಈಗ ಮೊದಲಿನಂತೆ ಆಗೋದಿಲ್ಲ. ಯಾಕೆ ಆಯಾಸ ಮಾಡ್ಕೊತಿ’ ಎಂದು ನುಡಿದ. ಸಾವಿತ್ರಮ್ಮನವರು ದಂಗು ಬಡಿದಂತೆ ಒಂದು ಕ್ಷಣ ತಮ್ಮ ಇರುವಿಕೆಯನ್ನೇ ಮರೆತು ಅಡುಗೆ ಕೋಣೆಯತ್ತ ಹೋಗುತ್ತಿದ್ದ ಮಗನನ್ನೇ ನೋಡುತ್ತ ನಿಂತರು. ಅಡುಗೆ ಮನೆಯಲ್ಲಿ ಒಲೆಯ ಮೇಲಿಟ್ಟಿದ್ದ ಡಿಕಾಕ್ಷನ್ನಿಗೆ ಹಾಲು ಬೆರೆಸುತ್ತಿದ್ದ ಅಕ್ಕ ಶಾರದಾ ತಮ್ಮ ದಾಮೋದರ ನೀರಿನ ಕೊಡ ಹಿಡಿದುಕೊಂಡು ಬಂದದ್ದನ್ನು ನೋಡಿ ‘ಯಾಕೋ ದಾಮೂ ಅಮ್ಮ ಎಲ್ಲಿ’ ಎಂದು ಕೇಳಿದವಳೇ ತಮ್ಮನನ್ನು ಹೊಸದಾಗಿ ನೋಡುತ್ತಿರುವಂತೆ ನೋಡತೊಡಗಿದಳು. ಬೆಳಗಿನ ಪ್ರಾತ:ವಿಧಿಗಳನ್ನು ಮುಗಿಸಿ ಚಹಾ ಕುಡಿಯಲೆಂದು ಅಡುಗೆ ಮನೆಗೆ ಬಂದ ಶ್ರೀನಿವಾಸರಾಯರಿಗೂ ಮಗ ಇವತ್ತು ಬೇಗನೆ ಎದ್ದು ಮನೆಕೆಲಸದಲ್ಲಿ ತೊಡಗಿರುವುದು ನೋಡಿ ಅಚ್ಚರಿ ಎನಿಸಿತು. ದಾಮೋದರ ಕೊಡದಲ್ಲಿದ್ದ ನೀರನ್ನು ಬಚ್ಚಲು ಮನೆಯಲ್ಲಿದ್ದ ಹಂಡೆಗೆ ಸುರಿದು ಖಾಲಿಯಾದ ಕೊಡವನ್ನು ಕೈಯಲ್ಲಿ ಹಿಡಿದು ಲಗುಬಗೆಯಿಂದ ಅಡುಗೆ ಕೋಣೆಯನ್ನು ದಾಟಿ ಪಡಸಾಲೆಯ ಮೆಟ್ಟಿಲಿಳಿದು ರಸ್ತೆಗೆ ಹೋದ. ಅಡುಗೆ ಕೋಣೆಯಲ್ಲಿ ಒಲೆಯ ಮುಂದೆ ಕುಳಿತಿದ್ದ ಶ್ರೀನಿವಾಸರಾಯರು ಮತ್ತು ಶಾರದಾ ಅರ್ಥವಾಗದವರಂತೆ ಒಬ್ಬರ ಮುಖ ಒಬ್ಬರು ನೋಡಿಕೊಂಡರು. ಅಷ್ಟರಲ್ಲಿ ಸಾವಿತ್ರಮ್ಮನವರು ಅಡುಗೆ ಮನೆಗೆ ಬಂದು ಅವರನ್ನು ಕೂಡಿಕೊಂಡರು. ‘ಏನ್ರೀ ಇದು ವಿಚಿತ್ರ. ಬೆಳಗ್ಗೆ ಎದ್ದ ಕೂಡಲೇ ದುರ್ವಾಸಮುನಿ ಅವತಾರ ತಾಳ್ತಿದ್ದವನು ಇವತ್ತು ಎಷ್ಟೊಂದು ಶಾಂತನಾಗಿದ್ದಾನೆ. ಏನಾಯ್ತುರಿ ಇವನಿಗೆ’ ಒಲೆಯ ಮುಂದೆ ಕೂಡುತ್ತ ಸಾವಿತ್ರಮ್ಮನವರು ಗಂಡ ಮತ್ತು ಮಗಳ ಮುಖ ನೋಡುತ್ತ ಅಚ್ಚರಿ ವ್ಯಕ್ತಪಡಿಸಿದರು. ರಾಯರಿಗಾಗಲಿ ಮತ್ತು ಶಾರದಾಳಿಗಾಗಲಿ ಏನು ಉತ್ತರಿಸುವುದೆಂದು ತಿಳಿಯದೆ ಎದುರಿನಲ್ಲಿದ್ದ ಚಹಾದ ಲೋಟವನ್ನು ಕೈಗೆತ್ತಿಕೊಂಡು ಚಹಾ ಕುಡಿಯಲಾರಂಭಿಸಿದರು. ಅಲ್ಲಿದ್ದ ಮೂರೂ ಜನರ ಮುಖಗಳಲ್ಲಿ ಅಚ್ಚರಿಯೊಂದು ಮನೆ ಮಾಡಿತ್ತು.

   ಹೊರಗೆ ರಸ್ತೆಯಲ್ಲಿ ದಾಮೋದರ ಖಾಲಿ ಕೊಡ ಹಿಡಿದು ಬಂದದ್ದನ್ನು ನೋಡಿದ ನಲ್ಲಿಯ ಹತ್ತಿರ ಜಮಾಯಿಸಿದ್ದ ಅಕ್ಕಪಕ್ಕದ ಮನೆಯವರು ಪರಸ್ಪರ ಮುಖ ನೋಡಿಕೊಂಡು ದೂರ ಸರಿದು ಅವನಿಗೆ ಜಾಗ ಮಾಡಿಕೊಟ್ಟರು. ಅದುವರೆಗೂ ಗೌಜು ಗದ್ದಲದಿಂದ ಕೂಡಿದ್ದ ಆ ಜಾಗ ದಾಮೋದರ ಬರುತ್ತಿದ್ದಂತೆ ಸದ್ದು ಕಡಿಮೆಯಾಗಿ ನೀರವ ಮೌನವನ್ನು ಹೊದ್ದು ಮಲಗಿರುವಂತೆ ಭಾಸವಾಗತೊಡಗಿತು. ದಾಮೋದರನಿಗೂ ಅಲ್ಲಿ ನೆಲೆಸಿದ ಮೌನ ಅಸಹನೀಯ ಎನಿಸಿತು. ನಿಂತಿದ್ದವರ ಮೇಲೊಮ್ಮೆ ತನ್ನ ದೃಷ್ಟಿಯನ್ನು ಹರಿಸಿದವನಿಗೆ ಅಲ್ಲಿ ತನಗಿಂತ ವಯಸ್ಸಾದವರೆ ಗೋಚರಿಸಿದರು. ಪಕ್ಕದ ಮನೆಯ ಕಾಮಾಕ್ಷಮ್ಮ, ಎದುರು ಮನೆಯ ಗೌರಜ್ಜಿ, ಹಿಂದಿನ ಮನೆಯ ಲಿಂಗಜ್ಜ ಅವರನ್ನೆಲ್ಲ ನೋಡಿ ಅವನಿಗೆ ಅಯ್ಯೋಪಾಪ ಎನಿಸಿತು. ಮನೆಯಲ್ಲಿ ಮೊಮ್ಮಕ್ಕಳೊಡನೆ ಆಡುತ್ತಲೋ ಇಲ್ಲವೇ ಸಮವಯಸ್ಸಿನವರೊಂದಿಗೆ ಹರಟುತ್ತಲೋ ಕಾಲಕಳೆಯಬೇಕಾದವರು ಇಲ್ಲಿ ನೀರಿಗಾಗಿ ಪಾಳಿಗೆ ನಿಂತಿರುವುದು ನೋಡಿ ಅವನಿಗೆ ಬೇಸರವೆನಿಸಿತು. ನಲ್ಲಿಯ ನೀರು ವ್ಯರ್ಥ ಹರಿಯುತ್ತಿದ್ದುದ್ದರಿಂದ ದಾಮೋದರ ಕೊಡವನ್ನು ತುಂಬಿಸಿಕೊಳ್ಳಲಿ ಎಂದು ದೂರ ಸರಿದು ನಿಂತವರಿಗೆ ಅವನು ದೂರದಲ್ಲೇ ಕೈಕಟ್ಟಿಕೊಂಡು ನಿಂತಿರುವುದು ನೋಡಿ ಅಲ್ಲಿದ್ದವರಿಗೆಲ್ಲ ತುಂಬ ಆಶ್ಚರ್ಯವಾಯಿತು. ‘ದಾಮೂ ನಿನಗೆ ಅಂಗಡಿಗೆ ಹೊತ್ತಾಗುತ್ತೆ ನೀನು ನೀರು ತುಂಬ್ಕೊ. ನಾವೆಷ್ಟೆಂದರೂ ಕೆಲಸವಿಲ್ಲದೆ ಮನೆಯಲ್ಲಿರೋ ದಂಡಪಿಂಡಗಳು ತಾನೆ’ ಗೌರಜ್ಜಿ ದಾಮೋದರನನ್ನು ನೋಡುತ್ತ ನುಡಿದಳಾದರೂ ಅವನು ನೀಡಬಹುದಾದ ಪ್ರತ್ಯುತ್ತರವನ್ನು ಊಹಿಸಿಕೊಂಡು ಅವಳ ಧ್ವನಿ ಹೆದರಿಕೆಯಿಂದ ನಡುಗುತ್ತಿತ್ತು. ದಾಮೋದರ ಗೌರಜ್ಜಿಯ ಮುಖವನ್ನೊಮ್ಮೆ ನೋಡಿ ಸಮಾಧಾನದ ಧ್ವನಿಯಲ್ಲಿ ‘ಗೌರಜ್ಜಿ ಪಾಪ ನೀವೆಲ್ಲ ವಯಸ್ಸಾದವರು ಹೀಗೆ ಬಿಸಿಲಲ್ಲಿ ನಿಂತಿರುವುದು ನೋಡಿದರೆ ಕರುಳು ಚುರುಕ್ ಅನ್ನುತ್ತೆ. ಮೊದಲು ನೀವು ನೀರು ತುಂಬಿಸಿಕೊಳ್ಳಿ. ನಾನು ಆಮೇಲೆ ತೊಗೊಳ್ತೀನಿ’ ಎಂದವನೇ ಖಾಲಿ ಕೊಡವನ್ನು ನಲ್ಲಿಯ ಸಮೀಪದಲ್ಲಿಟ್ಟು ಮನೆಯ ಒಳಗಡೆ ಹೋದ. ಅಲ್ಲಿದ್ದ ಮೂರೂಜನ ಅವಕ್ಕಾಗಿ ಮನೆಯ ಒಳಗೆ ಹೋಗುತ್ತಿದ್ದ ದಾಮೋದರನನ್ನೇ ನೋಡುತ್ತ ಕ್ಷಣಕಾಲ ಮೈಮರೆತು ನಿಂತವರು ನಂತರ ಎಚ್ಚೆತ್ತುಕೊಂಡು ಲಗುಬಗೆಯಿಂದ ನೀರು ತುಂಬಿಸಿಕೊಳ್ಳತೊಡಗಿದರು.

  ದಾಮೋದರ ಜೋಷಿಗೆ ಈಗ ಮೂವತ್ತರ ಹರೆಯ. ಇನ್ನೂ ಮದುವೆಯಾಗಿಲ್ಲ. ಅಪ್ಪ ಶ್ರೀನಿವಾಸರಾಯರು ಮಗನಿಗಾಗಿ ಹೆಣ್ಣು ನೋಡುತ್ತಿರುವರಾದರೂ ಪಾಪ ದಾಮೋದರನಿಗೆ ಇನ್ನೂ ಕಂಕಣಭಾಗ್ಯ ಕೂಡಿ ಬಂದಿಲ್ಲ. ಮದುವೆಯಾಗಿ ಅತ್ತೆ ಮನೆಯಲ್ಲಿನ ನೂರಾರು ಸಮಸ್ಯೆಗಳಿಂದ ಗಂಡನೊಡನೆ ಜಗಳವಾಡಿ ತವರುಮನೆಗೆ ಬಂದು ಕುಳಿತ ಅಕ್ಕ ಶಾರದಾಳಿಂದಾಗಿ ತನಗೆ ಯಾರೂ ಹೆಣ್ಣು ಕೊಡಲು ಮುಂದೆ ಬರುತ್ತಿಲ್ಲ ಎನ್ನುವ ಸಿಟ್ಟು ಅವನಿಗಿದೆ. ಶ್ರೀನಿವಾಸರಾಯರದೋ ಪಾಪ ಬಡತನದ ಸಂಸಾರ. ತಲಾತಲಾಂತರದಿಂದ ನಡೆಸಿಕೊಂಡು ಬರುತ್ತಿರುವ ದಿನಸಿ ಅಂಗಡಿಯೇ ಅವರ ಸಂಸಾರಕ್ಕೆ ಆಧಾರವಾಗಿತ್ತು. ಸಾವಿತ್ರಮ್ಮನವರದು ಆರತಿ ತೊಗೊಂಡರೆ ಉಷ್ಣ ತೀರ್ಥ ಕುಡಿದರೆ ಶೀತ ಎನ್ನುವ ಆರೋಗ್ಯ. ಮಕ್ಕಳನ್ನು ತಮ್ಮ ಬಡತನದ ಕಾರಣ ಹೆಚ್ಚಿಗೆ ಓದಿಸಲು ಸಾಧ್ಯವಾಗಲಿಲ್ಲ ಎನ್ನುವ ಕೊರಗು ಶ್ರೀನಿವಾಸರಾಯರನ್ನು ಆಗಾಗ ಕಾಡುವುದುಂಟು. ಊರಿನಲ್ಲಿರುವ ಹೈಸ್ಕೂಲು ಶಿಕ್ಷಣ ಮುಗಿದದ್ದೆ ಶ್ರೀನಿವಾಸರಾಯರು ಮಗನನ್ನು ತಮ್ಮ ನಿತ್ಯದ ದಿನಸಿ ಅಂಗಡಿಯ ವ್ಯವಹಾರದಲ್ಲಿ ಜೊತೆಯಾಗಿಸಿಕೊಂಡರು. ಮುಂದೆ ಓದಬೇಕೆನ್ನುವ ಆಸೆ ಇದ್ದರೂ ಮನೆಯ ಬಡತನ ಅಮ್ಮನ ಅನಾರೋಗ್ಯ ಅಕ್ಕನ ಮದುವೆ ಅದಕ್ಕೆ ಅಡ್ಡಿಯಾಗಿವೆ ಎನ್ನುವ ಭಾವನೆ ದಾಮೋದರನಲ್ಲಿ ಮೊಳಕೆಯೊಡೆದು ಈಗ ಆ ಭಾವನೆಯೇ ಬಲಿತುಕೊಂಡಿತ್ತು. ತನ್ನ ಜೊತೆಯಲ್ಲಿ ಓದಿದವರೆಲ್ಲ ಕಾಲೇಜು ಸೇರಿ ಈಗ ಕೈತುಂಬ ಸಂಬಳ ತರುವ ಉದ್ಯೋಗದಲ್ಲಿರುವಾಗ ನಾನಿನ್ನೂ ಇದೇ ಹಳ್ಳಿಯಲ್ಲಿ ಆರಕ್ಕೇರದ ಮೂರಕ್ಕಿಳಿಯಿದ ವ್ಯಾಪಾರದಲ್ಲಿ ಬದುಕನ್ನೇ ಹಾಳು ಮಾಡಿಕೊಂಡೆ ಎನ್ನುವ ಸಿಟ್ಟು ದಾಮೋದರನಿಗಿದೆ. ಅದಕ್ಕೆಂದೇ ಅವನು ಮನೆಯಲ್ಲಾಗಲಿ ಅಕ್ಕಪಕ್ಕದ ಮನೆಯವರೊಂದಿಗಾಗಲಿ ನಗುನಗುತ್ತ ಮಾತನಾಡುವುದೇ ಕಡಿಮೆ. ಅವನ ಸಮವಯಸ್ಸಿನವರಲ್ಲಿ ಹಲವು ಸ್ನೇಹಿತರು ದೂರದ ಊರುಗಳಲ್ಲಿಯೂ ಮತ್ತು ಇನ್ನು ಕೆಲವರು ಮದುವೆಯಾಗಿ ಅದೇ ಊರಿನಲ್ಲಿದ್ದರೂ ಅವರೊಂದಿಗೆ ದಾಮೋದರನ ಒಡನಾಟ ಯಾವತ್ತೋ ಕಡಿದು ಹೋಗಿತ್ತು. ಮನೆ ಬಿಟ್ಟರೆ ಅಂಗಡಿ ಇವರಡೇ ಅವನ ಪ್ರಪಂಚ ಎಂಬಂತಾಗಿ ದಿನದಿಂದ ದಿನಕ್ಕೆ ಯಾರನ್ನೇ ಕಂಡರೂ ಸಿಡಿಮಿಡಿಗೊಳ್ಳುವುದು ಮಾತಿಗೆ ಪ್ರತಿ ಮಾತನ್ನಾಡಿ ಜಗಳಕ್ಕೆ ನಿಲ್ಲುವುದು ಸಹಜ ಸ್ವಭಾವ ಎನ್ನುವಂತಾಯಿತು. ಇಡೀ ಸಂಸಾರದ ಖರ್ಚನ್ನೆಲ್ಲ ಮಗನೇ ಈಗ ನಿಭಾಯಿಸುತ್ತಿದ್ದರಿಂದ ಮನೆಯಲ್ಲಿ ಅವನಿಗೆ ಯಾರೂ ಎದುರಾಡುತ್ತಿರಲಿಲ್ಲ. ಶಾರದಾ ಗಂಡನ ಮನೆಯಲ್ಲಿ ಜಗಳವಾಡಿ ತವರು ಮನೆ ಸೇರಿದವಳಿಗೆ ಇಲ್ಲಿ ಒಂದೊತ್ತಿನ ಊಟಕ್ಕೂ ಹೊರೆಯಾದೆನೇನೋ ಎನ್ನುವ ಭಾವವೇ ಬೆಳೆದು ಹೆಮ್ಮರವಾಗಿ ತಮ್ಮನೆದುರು ನಿಂತು ಮಾತನಾಡುವುದಕ್ಕೂ ಹೆದರುತ್ತಿದ್ದಳು. ಒಂದುದಿನವಂತೂ ಖರ್ಚಿಗೆಂದು ಒಂದಿಷ್ಟು ಹಣ ಕೇಳಿದ ಶಾರದಾಳನ್ನು ದಾಮೋದರ ಅಪ್ಪ ಅಮ್ಮನ ಎದುರೇ ಬಾಯಿಗೆ ಬಂದಂತೆ ಬಯ್ದು ಹೊಡೆಯಲು ಹೋಗಿದ್ದ. ಮಗನ ಅವತಾರ ನೋಡಿ ಶ್ರೀನಿವಾಸರಾಯರು ಮತ್ತು ಸಾವಿತ್ರಮ್ಮ ಭೂಮಿಗಿಳಿದು ಹೋಗಿದ್ದರು. ಆ ಘಟನೆಯ ನಂತರ ಮಗನ ಎದುರು ನಿಂತು ಮಾತನಾಡಲೂ ಅವರು ಹೆದರುತ್ತಿದ್ದರು.

      ಇಂಥ ಸ್ವಭಾವದ ದಾಮೋದರ ಜೋಷಿ ಒಂದು ದಿನ ಇದ್ದಕ್ಕಿದ್ದಂತೆ ಅಕ್ಕರೆ ತುಂಬಿದ ಮಾತುಗಳನ್ನಾಡತೊಡಗಿದಾಗ ಊರಿನವರಿರಲಿ ಮನೆಯವರಿಗೂ ಅವನ ಬದಲಾದ ಸ್ವಭಾವ ವಿಚಿತ್ರ ಸಮಸ್ಯೆಯಾಗಿ ತೋರಿತು. ಅಕ್ಕಪಕ್ಕದ ಮನೆಯವರು ದಾಮೋದರ ಅಂಗಡಿಗೆ ಹೋದ ಸಮಯವನ್ನು ನೋಡಿಕೊಂಡು ಸಾವಿತ್ರಮ್ಮನವರಿಗೆ ನಿಮ್ಮ ಮಗನಿಗೆ ಯಾವುದೋ ದೆವ್ವ ಮೆಟ್ಟಿಕೊಂಡಿರಬಹುದು ಯಾವುದಕ್ಕೂ ಮಂತ್ರಗಾರನ ಹತ್ತಿರ ಕರೆದೊಯ್ಯಿರಿ ಎಂದು ಸಲಹೆ ನೀಡಿದರು. ಇನ್ನು ಕೆಲವರು ದೇವರಿಗೆ ಹರಕೆ ಕಟ್ಟುವಂತೆಯೂ ಕೆಲವರು ಬೇಗ ಮದುವೆ ಮಾಡಿದರೆ ಸರಿಹೋಗಬಹುದೆಂದು ಹೇಳಿದರು. ಇದೇ ವೇಳೆ ದಾಮೋದರ ಭಾವನನ್ನು ಭೇಟಿ ಮಾಡಿ ಅಕ್ಕನ ಸಂಸಾರ ಸರಿಮಾಡಲು ಪ್ರಯತ್ನಿಸಿದ ವಿಷಯ ಎದುರು ಮನೆಯ ಶಾಮರಾಯರಿಂದ ತಿಳಿದು ಮನೆಯವರು ಇನ್ನಷ್ಟು ಗಾಬರಿಯಾದರು. ದಾಮೋದರನ ದಿನಚರಿಯಲ್ಲೂ ಸಾಕಷ್ಟು ಮಾರ್ಪಾಡುಗಳಾದವು. ಈ ಮೊದಲು ತಡರಾತ್ರಿ ಮನೆಗೆ ಬಂದು ಬೆಳಗ್ಗೆ ಲೇಟಾಗಿ ಎಳುತ್ತಿದ್ದವನು ಈಗ ಅಂಗಡಿ ಬಾಗಿಲು ಹಾಕಿದ್ದೆ ಬೇಗನೆ ಮನೆ ಸೇರಿಕೊಳ್ಳತೊಡಗಿದ. ಬೆಳಗ್ಗೆ ಮನೆಯ ಎದುರಿನ ನಲ್ಲಿಯಿಂದ ನೀರು ತರುವುದು, ದೇವರ ಪೂಜೆ, ಅಡುಗೆ ಮನೆಯಲ್ಲಿ ಅಕ್ಕನಿಗೆ ನೆರವಾಗುವುದು, ಅಮ್ಮನಿಗೆ ಸಮಯಕ್ಕೆ ಸರಿಯಾಗಿ ಔಷಧಿ ಕೊಡುವುದು ದಿನದಿಂದ ದಿನಕ್ಕೆ ಹೊಸ ವ್ಯಕ್ತಿಯಾಗಿ ಬದಲಾಗುತ್ತ ಹೋದ. ಈಗ ಸಾವಿತ್ರಮ್ಮನವರಿಗಾಗಲಿ ಶ್ರೀನಿವಾಸರಾಯರಿಗಾಗಲಿ ಮಗನೊಂದಿಗೆ ಮಾತನಾಡುವಾಗ ಈ ಮೊದಲಿನ ಹೆದರಿಕೆ ಇಲ್ಲದೆ ತುಂಬ ಸಲುಗೆಯಿಂದ ಮಾತನಾಡುವ ಧೈರ್ಯ ಬಂದಿದೆ. ಅಕ್ಕ ಶಾರದಾಳಿಗೆ ತಮ್ಮನೊಂದಿಗೆ ತನ್ನ ಕಷ್ಟ ಸುಖ ಹೇಳಿಕೊಳುವಷ್ಟು ಅವರಿಬ್ಬರ ನಡುವೆ ಅನ್ಯೋನ್ಯತೆ ಬೆಳೆದಿದೆ. ಅಕ್ಕಪಕ್ಕದ ಮನೆಯವರೊಂದಿಗೆ ಮತ್ತು ಅಂಗಡಿಗೆ ಬರುವ ಗಿರಾಕಿಗಳೊಂದಿಗೆ ದಾಮೋದರ ನಗುನಗುತ್ತ ಮಾತನಾಡುತ್ತ ಅವರ ಯೋಗಕ್ಷೇಮ ವಿಚಾರಿಸುವನು. ಮೊದಲಿನ ಸಿಡುಕು ಮೋರೆಯ ಸದಾ ಸಿಡಿಸಿಡಿಗುಟ್ಟುತ್ತಿದ್ದ ದಾಮೋದರ ಇವನೇ ಏನು ಎಂದು ಇಡೀ ಊರೇ ಅಚ್ಚರಿಪಡುತ್ತ ಮೂಗಿನ ಮೇಲೆ ಬೆರಳಿಟ್ಟುಕೊಂಡು ಅವನನ್ನು ನೋಡುವಷ್ಟು ನಮ್ಮ ಕಥಾನಾಯಕನ ವ್ಯಕ್ತಿತ್ವದಲ್ಲಿ ಬದಲಾವಣೆಯಾಯಿತು. ಇದಕ್ಕೆಲ್ಲ ಕಾರಣ ಮನಸ್ಸಿಗೆ ದು:ಖ ಕೊಡುವ ಸಂಗತಿಗಳು ಈಗ ದಾಮೋದರನ ನೆನಪಿನಲ್ಲುಳಿಯುತ್ತಿಲ್ಲ. ಕನಸಿನಲ್ಲಿ ಕಾಣಿಸಿಕೊಂಡ ಮುದುಕ ಅವನ ತಲೆಯನ್ನು ಸವರಿಹೋದ ಕ್ಷಣದಿಂದ ಹಿತಕರ ನೆನಪುಗಳಷ್ಟೇ ಮನಸ್ಸಿನಲ್ಲಿ ಉಳಿಯುತ್ತಿವೆ. ಸ್ವತ: ದಾಮೋದರನಿಗೂ ತನ್ನಲ್ಲಾದ ಬದಲಾವಣೆ ಅಚ್ಚರಿ ತಂದಿದೆ. ಕೆಟ್ಟ ಘಟನೆಗಳು ನೆನಪಿನಲ್ಲುಳಿಯದ ಈ ಹೊಸ ಬದುಕು ಅವನಲ್ಲಿ ಜೀವನೋತ್ಸಾಹವನ್ನು ಇಮ್ಮಡಿಗೊಳಿಸಿದೆ.

      ಹೊಸ ಮನುಷ್ಯನಾಗಿ ರೂಪಾಂತರ ಹೊಂದಿದ ನಮ್ಮ ದಾಮೋದರನಲ್ಲಿ ಮನಸ್ಸಿನ ನೆಮ್ಮದಿ ಕೆಡಿಸುವ ಘಟನೆಗಳನ್ನು ನೆನಪಿನಲ್ಲಿಟ್ಟುಕೊಳ್ಳುವ ಶಕ್ತಿ ಮತ್ತೆ ಪ್ರಾಪ್ತವಾಗುತ್ತೆದೆಂದು ಪಾಪ ಅವನಿಗೂ ಗೊತ್ತಿರಲಿಲ್ಲ. ಇವತ್ತು ಬೆಳಗ್ಗೆ ನಿದ್ದೆಯಿಂದ ಎಚ್ಚರವಾಗಿ ಹಾಸಿಗೆಯಲ್ಲಿ ಎದ್ದು ಕುಳಿತವನಿಗೆ ಮೈಯೆಲ್ಲ ಭಾರವಾದ ಅನುಭವ. ನಿನ್ನೆ ಇಡೀ ದಿನ ನಡೆದ ಘಟನೆಗಳೆಲ್ಲ ಒಂದೊಂದಾಗಿ ನೆನಪಿನ ಕೋಶದಿಂದ ಹೊರಬಂದು ತನ್ನ ಮೇಲೆ ದಾಳಿಯಿಡುತ್ತಿರುವಂತೆ ಭಾಸವಾಗಿ ತಲೆ ನೋವಿನಿಂದ ಸಿಡಿಯಲಾರಂಭಿಸಿತು. ತಲೆಯಲ್ಲಿ ಕಾಣಿಸಿಕೊಂಡ ನೋವು ಕ್ರಮೇಣ ದೇಹವನ್ನೆಲ್ಲ ವ್ಯಾಪಿಸುತ್ತಿರುವಂತೆ ಅನಿಸತೊಡಗಿತು.  ನಿನ್ನೆ ಬೆಳಗ್ಗೆ ರಸ್ತೆಯಲ್ಲಿ ನೀರು ತರುವಾಗ ಪಕ್ಕದ ಮನೆಯ ಗೋವಿಂದ ಬೈಯ್ದದ್ದು ಯಾವುದೋ ಮಾತಿಗೆ ಅಪ್ಪ ಹರಿಹಾಯ್ದದ್ದು ಅಂಗಡಿಯಲ್ಲಿ ಕೆಲವು ಗಿರಾಕಿಗಳು ಸಿಟ್ಟಿನಿಂದ ಮಾತನಾಡಿದ್ದು ಎಲ್ಲವೂ ಒಂದೊಂದಾಗಿ ನೆನಪಿಗೆ ಬಂದು ದಾಮೋದರನ ಮನಸ್ಸು ಕ್ಷೋಭೆಗೊಂಡಿತು. ಮರುಕ್ಷಣವೆ ಅರೇ ಕಳೆದ ಹದಿನೈದು ದಿನಗಳಿಂದ ಯಾವ ಕೆಟ್ಟ ಘಟನೆಗಳೂ ನೆನಪಿಗೆ ಬರದಿರುವ ತನಗೆ ಇವತ್ತು ಇದ್ದಕ್ಕಿದ್ದಂತೆ ಮತ್ತೆ ನೆನಪಾಗುತ್ತಿರುವುದು ಅವನಿಗೆ ಆಶ್ಚರ್ಯವೆನಿಸಿತು. ದಾಮೋದರ ತಾನು ಮತ್ತೆ ಮೊದಲಿನ ಸ್ಥಿತಿಗೆ ಮರಳಿದ್ದಕ್ಕೆ ಅಧೀರನಾದ. ಕಳೆದ ಹಲವು ದಿನಗಳಿಂದ ಯಾವ ಅಹಿತಕರ ಘಟನೆಗಳು ನೆನಪಿನಲ್ಲಿ ಸ್ಥಿರವಾಗಿ ನಿಲ್ಲದೆ ಇದ್ದುದ್ದರಿಂದ ಅವನ ಮನಸ್ಸು ತುಂಬ ಹಗುರವಾಗಿತ್ತು. ಮನೆ ಮತ್ತು ಸುತ್ತಲಿನ ಪರಿಸರ ತುಂಬ ಹಿತಕರವಾಗಿಯೂ ಮತ್ತು ಸಹನೀಯವಾಗಿಯೂ ಅವನಿಗೆ ಗೋಚರಿಸಿತ್ತು. ಮನಸ್ಸಿನೊಂದಿಗೆ ದೇಹವೂ ಲವಲವಿಕೆಯಿಂದ ಇದ್ದು ಬದುಕಿನಲ್ಲಿ ಆಸಕ್ತಿ ಮೂಡತೊಡಗಿತ್ತು. ಆದರೆ ಇವತ್ತು ಮನಸ್ಸಿನ ನೆಮ್ಮದಿ ಕದಡಿಹೋದಂತಾಗಿ ದೇಹ ಮಣಭಾರವಾದಂತಾಗಿತ್ತು. ಇಡೀ ದಿನ ದಾಮೋದರ ಒಂದು ರೀತಿಯ ಅಶಾಂತಿಯಲ್ಲೇ ಕಾಲಕಳೆದ.

     ರಾತ್ರಿ ಅಂಗಡಿಯಿಂದ ಮನೆಗೆ ಬಂದು ಊಟ ಮಾಡಿ ಮಲಗುವ ಕೋಣೆ ಸೇರಿದ ದಾಮೋದರ ಬೇಗ ನಿದ್ದೆಗೆ ಜಾರಲು ಹಂಬಲಿಸಿದ. ಕನಸಿನಲ್ಲಿ ಇಂದು ಮುದುಕ ಬರಬಹುದೇನೋ ಅನ್ನುವ ನಿರೀಕ್ಷೆ ಅವನದಾಗಿತ್ತು. ಮಲಗಿ ಒಂದೆರಡು ಗಂಟೆಗಳಾದರೂ ನಿದ್ದೆ ಹತ್ತಿರ ಸುಳಿಯದೆ ಹಾಸಿಗೆಯಲ್ಲಿ ಹೋರಳಾಡಿದ. ಘಳಿಗೆಗೊಮ್ಮೆ ಎದ್ದು ತಂಬಿಗೆಯಲ್ಲಿದ್ದ ನೀರು ಕುಡಿಯುವುದು ಗಡಿಯಾರ ನೋಡಿಕೊಳ್ಳುವುದು ಮತ್ತೆ ಮತ್ತೆ ಪುನರಾವರ್ತನೆಯಾಗತೊಡಗಿತು. ಮುದುಕನ ಆಗಮನದ ನಿರೀಕ್ಷೆಯಲ್ಲಿ ಒಂದೊಂದು ಕ್ಷಣ ಯುಗದಂತೆ ಭಾಸವಾಗತೊಡಗಿತು. ಸೂರ್ಯ ಉದಯಿಸಲು ಇನ್ನೇನು ಒಂದೆರಡು ಗಂಟೆಗಳಿವೆ ಎನ್ನುವಾಗ ದಾಮೋದರ ಗಾಢ ನಿದ್ದೆಗೆ ಜಾರಿದ. ಹಾಗೆ ನಿದ್ದೆ ಹೋದವನಿಗೆ ಕನಸಿನಲ್ಲಿ ತನ್ನ ಹತ್ತಿರ ಯಾರೋ ನಿಂತು ಮೃದುವಾದ ಧ್ವನಿಯಲ್ಲಿ ಮಾತನಾಡುತ್ತಿರುವಂತೆ ಅನ್ನಿಸಿ ದಾಮೋದರ ಕಣ್ಣು ಬಿಟ್ಟ. ಇಡೀ ಕೋಣೆ ಪ್ರಕಾಶಮಾನವಾಗಿ ಬೆಳಗಲಾರಂಭಿಸಿದಂತೆ ಅನ್ನಿಸತೊಡಗಿತು. ಎದುರಿಗೆ ಹಸನ್ಮುಖಿಯಾಗಿ ಶ್ವೇತವಸ್ತ್ರ ಧರಿಸಿದ್ದ ಜಟಾಧಾರಿ ಮುದುಕ ನಿಂತಿರುವುದು ಕಾಣಿಸಿತು. ದಾಮೋದರ ಎದ್ದು ಮುದುಕನ ಹತ್ತಿರ ಹೋದ. ಮುದುಕ ತಾನು ಮೊದಲು ನಿಂತಿದ್ದ ಸ್ಥಳದಿಂದ ಸ್ವಲ್ಪ ಹಿಂದೆ ಸರಿದ. ದಾಮೋದರ ಮುದುಕನನ್ನು ಸಮೀಪಿಸುವುದು ಅವನು ದೂರ ಸರಿಯುವುದು ಸ್ವಲ್ಪ ಹೊತ್ತು ಈ ಆಟ ಮುಂದುವರಿಯಿತು. ಕೊನೆಗೆ ದಾಮೋದರ ಹತಾಶನಾಗಿ ಕೇಳಿದ ‘ದಯವಿಟ್ಟು ನಿನ್ನ ಕೈಯನ್ನೊಮ್ಮೆ ನನ್ನ ತಲೆಯ ಮೇಲಿಡು. ನನ್ನ ನೆನಪಿನ ಶಕ್ತಿ ಕುಂದಲಿ’. ಮುದುಕ ದಾಮೋದರನನ್ನು ಕರುಣೆಯಿಂದ ನೋಡಿ ಮುಗುಳ್ನಕ್ಕ. ಮುದುಕನ ಮುಖದಲ್ಲಿ ಗೋಚರಿಸಿದ ಆ ದೇದಿಪ್ಯಮಾನ ಪ್ರಭೆಗೆ ದಾಮೋದರ ಬೆರಗಾದ. ‘ನನ್ನನ್ನು ನಿನ್ನಂತೆ ಮಾಡು ತಂದೆ’ ಕೈಮುಗಿದು ಬೇಡಿಕೊಂಡ ಕಾಲು ಹಿಡಿದು ಅಂಗಲಾಚಿದ. ‘ಲೌಕಿಕ ಬದುಕಿನಿಂದ ನನ್ನನ್ನು ಪಾರು ಮಾಡು. ಈ ಬದುಕು ನನಗೆ ಬೇಡ. ನನ್ನ ಬದುಕೆಂಬುದು ಶಾಂತಿಯ ಕಡಲಾಗಲಿ’ ಅವನ ಧ್ವನಿಯಲ್ಲಿ ದೈನ್ಯತೆ ಇತ್ತು. ಮುದುಕ ಕರಗಿಹೋದ. ಹತ್ತಿರ ಬಂದು ಕರುಣೆಯಿಂದ ದಾಮೋದರನ ತಲೆಯನ್ನೊಮ್ಮೆ ತನ್ನ ಕೈಯಿಂದ ಸವರಿದ. ಅದುವರೆಗೂ ಆವರಿಸಿಕೊಂಡಿದ್ದ ಜಡತ್ವ ದೂರಾಗಿ ದಾಮೋದರನಿಗೆ ಮನಸ್ಸು ಮತ್ತು ದೇಹ ಹಗುರವಾದ ಅನುಭವವಾಗಿ ಅವನ ಮುಖದಲ್ಲಿ ದೇದಿಪ್ಯಮಾನದ ಪ್ರಭೆ ಬೆಳಗಲಾರಂಭಿಸಿತು.
---000---

(ಎಪ್ರಿಲ್ ೨೦೧೯ ರ ತುಷಾರ ಮಾಸಪತ್ರಿಕೆಯಲ್ಲಿ ಪ್ರಕಟವಾಗಿದೆ)

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 


No comments:

Post a Comment