Thursday, September 21, 2017

ಸಂದರ್ಶನ




(ಬಾಗಲಕೋಟೆಯ ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯದ ಬಿ.ಇಡಿ ವಿದ್ಯಾರ್ಥಿನಿ ಶ್ರೀಮತಿ ಶ್ರೀದೇವಿ.ಸಿ.ಕುಸಬಿ ಅವರು ತಮ್ಮ ಪಠ್ಯೇತರ ಚಟುವಟಿಕೆಯ ಅಂಗವಾಗಿ ದಿನಾಂಕ 21.09.2017 ರಂದು ಮಾಡಿದ ನನ್ನ ಸಂದರ್ಶನ)

ಶ್ರೀ ರಾಜಕುಮಾರ ಕುಲಕರ್ಣಿ ಬರವಣಿಗೆಯ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೆ ಅಸ್ತಿತ್ವವೊಂದನ್ನು ಗುರುತಿಸಿಕೊಳ್ಳುತ್ತಿರುವ ಬರಹಗಾರರು. ಅವರ ಬರವಣಿಗೆಯ ಮುಖ್ಯವಸ್ತು ಅದು ಸಮಾಜಮುಖಿ ಚಿಂತನೆ. ತಮ್ಮ ಸುತ್ತಮುತ್ತಲಿನ ಆಗುಹೋಗುಗಳನ್ನೇ ಬರವಣಿಗೆಗಾಗಿ ಆಯ್ದುಕೊಳ್ಳುವ ಅವರು ತಮ್ಮ ವಿಶಿಷ್ಠ ಶೈಲಿಯಿಂದ ಓದುಗರನ್ನು ತಲಪುವಲ್ಲಿ ಯಶಸ್ವಿಯಾಗಿರುವರು. ಇದುವರೆಗು ಎಂಟು ಕೃತಿಗಳನ್ನು ಬರೆದು ಸಾಹಿತ್ಯ ಕ್ಷೇತ್ರದಲ್ಲಿ ಕೃಷಿ ಮಾಡುತ್ತಿರುವ ರಾಜಕುಮಾರ ಕುಲಕರ್ಣಿ ಅವರು ಕಥೆಗಳನ್ನು ಕೂಡ ಬರೆದಿರುವುದು ವಿಶಿಷ್ಠ ಸಂಗತಿ. ಶ್ರೀಯುತರೊಂದಿಗೆ ನಡೆಸಿದ ಸಂದರ್ಶನದ ಪೂರ್ಣ ವಿವರ ಇಲ್ಲಿದೆ.

ನಮಸ್ಕಾರಗಳು ಸರ್ ತಮ್ಮ ಸಂದರ್ಶನಕ್ಕಾಗಿ ಬಂದಿದ್ದೇನೆ. ಇದನ್ನು ಮಾತುಕತೆ ಅಥವಾ ಒಂದಿಷ್ಟು ಹರಟೆ ಎಂದರೂ ಅಡ್ಡಿಯಿಲ್ಲ.

ತಮಗೂ ನಮಸ್ಕಾರಗಳು. ಸಂದರ್ಶನದ ಚೌಕಟ್ಟಿಗೆ ಸೀಮಿತವಾಗಿ ಮಾತನಾಡದೆ ಮನಸ್ಸು ಬಿಚ್ಚಿ ಮಾತನಾಡಿ. ಚರ್ಚೆಯ ಮೂಲಕ ನಿಮ್ಮ ಪ್ರಶ್ನೆ ಅಥವಾ ಅನುಮಾನಗಳಿಗೆ ಒಂದಿಷ್ಟು ಉತ್ತರಗಳು ಸಿಗಬಹುದು.

ಬರವಣಿಗೆಯಲ್ಲಿ ತೊಡಗಿಸಿಕೊಳ್ಳಬೇಕೆನ್ನುವ ಆಸಕ್ತಿ ನಿಮಗೆ ಬಂದಿದ್ದು ಹೇಗೆ?.

ನಾನು ಹುಟ್ಟಿದ್ದು ಮತ್ತು ಬಾಲ್ಯ ಜೀವನ ಕಳೆದದ್ದು ತೀರ ಹಳ್ಳಿಗಾಡಿನ ಪ್ರದೇಶದಲ್ಲಿ. ಊರಲ್ಲಿದ್ದ ಕನ್ನಡ ಶಾಲೆ ಬಿಟ್ಟರೆ ನಗರದ ಇಂಗ್ಲಿಷ್ ಶಾಲೆಗೆ ಹೋಗಿ ಕಲಿಯುವಷ್ಟು ಆರ್ಥಿಕ ಅನುಕೂಲವಿರಲಿಲ್ಲ. ಹೀಗಾಗಿ ಕನ್ನಡ ಮಾತೃ ಭಾಷೆಯ ಜೊತೆಗೆ ಶಿಕ್ಷಣದ ಭಾಷೆ ಕೂಡ ಆಯಿತು. ಶಾಲೆಯಲ್ಲಿದ್ದ ಕನ್ನಡದ ಕಥೆ ಕಾದಂಬರಿಗಳ ಓದು ನನ್ನಲ್ಲಿ ಓದಿನ ಆಸಕ್ತಿ ಬೆಳೆಯಲು ಕಾರಣವಾಯಿತು. ಜೊತೆಗೆ ಮನೆಯಲ್ಲಿ ನನ್ನ ತಾಯಿ ಅನೇಕ ಕಥೆ, ಕಾದಂಬರಿಗಳನ್ನು ಓದುತ್ತಿದ್ದದ್ದು ಕೂಡ ನನ್ನ ಮೇಲೆ ಪ್ರಭಾವ ಬೀರಿತು. ನನ್ನ ತಾಯಿಯವರ ಓದಿನ ಕಾರಣ ಪ್ರಾಥಮಿಕ ಶಾಲೆಯಲ್ಲಿದ್ದಾಗಲೆ ನಾನು ತ್ರಿವೇಣಿ ಅವರ ಶರಪಂಜರ, ಬೆಕ್ಕಿನ ಕಣ್ಣು ಕಾದಂಬರಿಗಳನ್ನು ಓದಿದೆ. ಮುಂದೆ ಕಾಲೇಜಿನಲ್ಲಿರುವಾಗ ಈ ಸಿನಿಮಾ ಪತ್ರಿಕೆಗಳಿಗೆ ಬರೆಯಲು ಆರಂಭಿಸಿದೆ. ಹೀಗೆ ಚಿಕ್ಕವನಿದ್ದಾಗಲೆ ಈ ಓದುವ ಮತ್ತು ಬರೆಯುವ ಹವ್ಯಾಸ ನನ್ನಲ್ಲಿ ಬೆಳೆದುಬಂತು. 

ಈ ಸಿನಿಮಾ ಬರವಣಿಗೆಯಿಂದ ಸಮಾಜ ಮತ್ತು ಸಾಹಿತ್ಯದ ಕುರಿತು ಬರೆಯಲಾರಂಭಿಸಿದ್ದು ಯಾವಾಗಿನಿಂದ?.

ಬಾಗಲಕೋಟೆಗೆ 2001 ರಲ್ಲಿ ನಾನು ಗ್ರಂಥಪಾಲಕನಾಗಿ ಬಂದ ಮೇಲೆ ನನ್ನ ಬರವಣಿಗೆಯ ಬದುಕು ಒಂದು ಮಹತ್ವದ ತಿರುವು ಪಡೆದುಕೊಂಡಿತು ಎನ್ನಬಹುದು. ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದಲ್ಲಿ ಪ್ರಕಟವಾಗುವ ‘ಸಮಾಚಾರ’ ಪತ್ರಿಕೆಗೆ ನಾನು ಬರೆಯಲಾರಂಭಿಸಿದ ನಂತರ ನನ್ನ ಬರವಣಿಗೆಯಲ್ಲಿ ಸಾಕಷ್ಟು ಸುಧಾರಣೆ ಕಂಡು ಬಂದಿತು. ಈವರೆಗೆ ಸುಮಾರು ನೂರಕ್ಕೂ ಹೆಚ್ಚು ಲೇಖನಗಳನ್ನು ನಾನು ಸಮಾಚಾರ ಪತ್ರಿಕೆಗೆ ಬರೆದಿರುವೇನು. ಈ ಎಲ್ಲ ಲೇಖನಗಳು ವಿವಿಧ ವಿಷಯಕ್ಕೆ ಸಂಬಂಧಿಸಿದ ವೈವಿದ್ಯಮಯ ಲೇಖನಗಳೆಂದು ಅನೇಕರು ಹೇಳಿರುವರು. ಇಂಥದ್ದೊಂದು ಅವಕಾಶ ನನಗೆ ದೊರೆತಿದ್ದಕ್ಕಾಗಿ ನಾನು ಸಮಾಚಾರಕ್ಕೆ ಮತ್ತು ಸಮಾಚಾರದ ಸಂಪಾದಕ ಬಳಗಕ್ಕೆ ಸದಾಕಾಲ ಕೃತಜ್ಞನಾಗಿದ್ದೇನೆ. ಜೊತೆಗೆ ನನ್ನ ಬರವಣಿಗೆಯನ್ನು ಗುರುತಿಸಿ ಸಮಾಚಾರದ ಸಂಪಾದಕ ಸಮಿತಿಯ ಸದಸ್ಯನಾಗಿ ಕೂಡ ನೇಮಕ ಮಾಡಿದ್ದು ಸಂತೋಷದ ಸಂಗತಿ. 

ನಿಮ್ಮ ಮೊದಲ ಪುಸ್ತಕ ಪ್ರಕಟವಾದದ್ದು ಯಾವಾಗ?

2012 ರಲ್ಲಿ ನನ್ನ ಮೊದಲ ಪುಸ್ತಕ ‘ಸಾಧನೆ’ ಪ್ರಕಟವಾಯಿತು. ಆವರೆಗೆ ಸಮಾಚಾರದಲ್ಲಿ ನನ್ನ 50 ರಿಂದ 60 ಲೇಖನಗಳು ಪ್ರಕಟವಾಗಿದ್ದವು. ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪನೆಯಾಗಿ ಹತ್ತು ವರ್ಷಗಳಾಗಿದ್ದರ ನೆನಪಿಗಾಗಿ ‘ಸಾಧನೆ’ ಪುಸ್ತಕ ಬರೆಯುವ ಜವಾಬ್ದಾರಿ ನನಗೆ ವಹಿಸಿದಾಗ ಆರಂಭದಲ್ಲಿ ಒಂದಿಷ್ಟು ಅಳುಕಿತ್ತು. ಏಕೆಂದರೆ ಅದುವರೆಗೂ ನನ್ನ ಒಂದು ಪುಸ್ತಕ ಕೂಡ ಪ್ರಕಟವಾಗಿರಲಿಲ್ಲ. ಆದರೂ ಕೇವಲ ಮೂರು ತಿಂಗಳಲ್ಲಿ ಪುಸ್ತಕ ಬರೆದು ಮುಗಿಸಿದೆ. ಬಿ.ವಿ.ವಿ.ಸಂಘದ  ವೈರಾಗ್ಯದ ಮಲ್ಲಣಾರ್ಯ ಪ್ರಕಾಶನದಿಂದ ಪುಸ್ತಕ ಪ್ರಕಟವಾಗಿ ಎಲ್ಲರಿಂದ ಮೆಚ್ಚುಗೆಯ ಮಾತುಗಳು ಬಂದವು. ಒಂದರ್ಥದಲ್ಲಿ ‘ಸಾಧನೆ’ ಪುಸ್ತಕ ನನ್ನ ನಂತರದ ಪುಸ್ತಕಗಳ ಪ್ರಕಟಣೆಗೆ ಪ್ರೇರಣೆಯಾಯಿತು. ಸಾಧನೆ ಪುಸ್ತಕವನ್ನು ನೋಡಿಯೇ  ಕಲಬುರಗಿಯ ಸಿದ್ಧಲಿಂಗೇಶ್ವರ ಪ್ರಕಾಶನ ಸಂಸ್ಥೆಯವರು ನನ್ನ ‘ಪೂರ್ಣ ಸತ್ಯ’ ಪ್ರಕಟಿಸಲು ಮುಂದೆ ಬಂದರು.

ಇದುವರೆಗೂ ಎಷ್ಟು ಗ್ರಂಥಗಳು ಪ್ರಕಟವಾಗಿವೆ?

ಇದುವರೆಗೂ ಎಂಟು ಪುಸ್ತಕಗಳನ್ನು ಬರೆದಿರುವೇನು. ಈ ಎಂಟು ಕೃತಿಗಳಲ್ಲಿ ಆರು ಪುಸ್ತಕಗಳು ಸಿದ್ಧಲಿಂಗೇಶ್ವರ ಪ್ರಕಾಶನ ಸಂಸ್ಥೆಯಿಂದ ಪ್ರಕಟವಾಗಿವೆ. ಈ ಸಂದರ್ಭ ಸಿದ್ಧಲಿಂಗೇಶ್ವರ ಪ್ರಕಾಶನ ಸಂಸ್ಥೆಯವರ ಸಹಕಾರವನ್ನು ಕೂಡ ನಾನು ಕೃತಜ್ಞತೆಯಿಂದ ಸ್ಮರಿಸುತ್ತೇನೆ. ಕಲಬುರಗಿಯಂಥ ಊರಲ್ಲಿ ಪುಸ್ತಕ ಪ್ರಕಾಶನದ ಮೂಲಕ ಅವರು ಮಾಡುತ್ತಿರುವ ಕಾರ್ಯ ಬಹಳ ದೊಡ್ಡದು.

ನಿಮ್ಮ ಈ ಒಟ್ಟು ಎಂಟು ಕೃತಿಗಳಲ್ಲಿ ನಿಮಗೆ ಇಂಥದ್ದೆ ಕೃತಿ ತುಂಬ ತೃಪ್ತಿ ನೀಡಿದೆ ಎಂದು ಅನಿಸಿದೆಯೆ?

ನಿಮ್ಮ ಈ ಪ್ರಶ್ನೆಗೆ ಉತ್ತರಿಸುವುದು ಸ್ವಲ್ಪ ಕಷ್ಟದ ಕೆಲಸ. ಏಕೆಂದರೆ ಬರಹಗಾರನಿಗೆ ಆತನ ಎಲ್ಲ ಕೃತಿಗಳೂ ಪ್ರಿಯವಾದವುಗಳೆ. ಹಾಗೆನಾದರೂ ಹೃದಯಕ್ಕೆ ಒಂದಿಷ್ಟು ಹತ್ತಿರವಾದ ಕೃತಿ ಎಂದರೆ ‘ಮನದ ಮಾತು’ ಪುಸ್ತಕ. ಈ ಪುಸ್ತಕದ ವಿಷಯ ವ್ಯಾಪ್ತಿ ಒಂದಿಷ್ಟು ವಿಶಾಲವಾಗಿದ್ದು ಅಲ್ಲಿ ಅನೇಕ ಲೇಖನಗಳಿವೆ ಮತ್ತು ಬೇಕೆಂದೆ ನಾನು ಸಣ್ಣ  ಲೇಖನಗಳನ್ನು ಈ ಪುಸ್ತಕಕ್ಕಾಗಿ ಆಯ್ಕೆಮಾಡಿಕೊಂಡಿದ್ದೆ. ಚಿಕ್ಕ ಲೇಖನಗಳಲ್ಲಿ ಇಡೀ ವಿಷಯವನ್ನು ಪ್ರಸ್ತುತ ಪಡಿಸುವುದು ಅದು ಲೇಖಕನಿಗೆ ಸವಾಲಿನ ಕೆಲಸ. ಈ ಸವಾಲನ್ನು ಎದುರಿಸಿದ್ದು ನನಗೆ ತುಂಬಾ ಸಂತೋಷ ಕೊಟ್ಟ ಸಂಗತಿ. 

ನಿಮ್ಮ ಪುಸ್ತಕಗಳಲ್ಲಿ ಸಿನಿಮಾ ಕಲಾವಿದರ ಮತ್ತು ಸಿನಿಮಾ ಜಗತ್ತಿನ ಕುರಿತು ಲೇಖನಗಳಿವೆ. ಯಾಕೆ ಈ ಆಯ್ಕೆ?

ನೋಡಿ ನಾನು ನಿಮಗೆ ಮೊದಲೆ ಹೇಳಿರುವೇನು ಆರಂಭದಲ್ಲಿ ನಾನು ಸಿನಿಮಾ ಕುರಿತು ಲೇಖನಗಳನ್ನು ಬರೆಯುತ್ತಿದ್ದೆನೆಂದು. ಆನಂತರ ಓದು ಮತ್ತು ವಯಸ್ಸಿನ ಪ್ರಭಾವ ನನ್ನ  ಬರವಣಿಗೆಯ ವಿಷಯವಸ್ತುವಿನಲ್ಲಿ ಬದಲಾವಣೆಯಾಯಿತು. ಹಾಗೆಂದು ನಾನು ಸಿನಿಮಾ ಬರವಣಿಗೆಗೆ ಯೋಗ್ಯವಾದ ಸಂಗತಿಯಲ್ಲ ಎಂದು ವಾದಿಸುತ್ತಿಲ್ಲ. ಸಿನಿಮಾ ಕೂಡ ಒಂದು ನಾಡಿನ ಸಾಂಸ್ಕೃತಿಕ ಮಹತ್ವಗಳಲ್ಲೊಂದು. ಸಾಮಾನ್ಯವಾಗಿ ನಮ್ಮ ಅಕಾಡೆಮಿಕ್ ಬರಹಗಾರರು ಈ ಸಿನಿಮಾ ಪ್ರಪಂಚವನ್ನು ಒಂದು ರೀತಿಯ ಅಸಡ್ಡೆ ಮತ್ತು ನಿರ್ಲಕ್ಷದಿಂದಲೇ ನೋಡುತ್ತ ಬಂದಿರುವರು. ಆದರೆ ನನಗೆ ಸಿನಿಮಾ ಬೇರೆ ಇತರ ವಿಷಯಗಳಂತೆ ಅಧ್ಯಯನಕ್ಕೆ ಆಸಕ್ತಿಯ ಕ್ಷೇತ್ರವಾಗಿ ಕಾಣಿಸುತ್ತದೆ. ಈ ಕಾರಣದಿಂದಲೇ ನನ್ನ ಪುಸ್ತಕಗಳಲ್ಲಿ ಸಿನಿಮಾ ಕ್ಷೇತ್ರಕ್ಕೆ ಸಂಬಂಧಿಸಿದ ಲೇಖನಗಳನ್ನು ಸಹ ನಾನು ಬರೆದಿರುವೇನು.

ನಿಮ್ಮ ಬರವಣಿಗೆಯಿಂದ ಸಮಾಜದಲ್ಲಿ ಬದಲಾವಣೆಗಳಾಬೇಕೆಂದು ನಿಮಗೆ ನಿರೀಕ್ಷೆಗಳಿವೆಯೆ?.
ನನ್ನ ಬರವಣಿಗೆ ಕುರಿತು ನನಗೆ ಅಂಥ ತೀರ ಎತ್ತರದ ನಿರೀಕ್ಷೆಗಳೆನಿಲ್ಲ. ನನ್ನ ಪುಸ್ತಕಗಳಿಂದ ಸಮಾಜದಲ್ಲಿ ಬಹುದೊಡ್ಡ ಬದಲಾವಣೆಗಳು ಮತ್ತು ಪಲ್ಲಟಗಳಾಗುತ್ತವೆ ಎಂದು ನಾನು ಭಾವಿಸಿಲ್ಲ. ನಿರೀಕ್ಷೆಗಳನ್ನಿಟ್ಟುಕೊಂಡು ಬರೆಯಲು ಹೊರಟರೆ ನಿರೀಕ್ಷೆಗಳು ಈಡೇರದಿದ್ದಾಗ ಲೇಖಕನಿಗೆ ನಿರಾಸೆಯಾಗುತ್ತದೆ. ಮತ್ತು ಇಂಥ ನಿರಾಸೆ ನಂತರದ ದಿನಗಳಲ್ಲಿ ಆತನ ಬರವಣಿಗೆಯ ಆಸಕ್ತಿಯನ್ನೇ ಕುಂಠಿತಗೊಳಿಸಬಹುದು. ಹಾಗಾಗಿ ಬರೆಯುವುದಷ್ಟೇ ನನ್ನ ಕೆಲಸ ಎಂದು ತಿಳಿದುಕೊಂಡವನು ನಾನು. ಜೊತೆಗೆ ಸಮಾಜದಲ್ಲಿ ಪರಿವರ್ತನೆಯಾಗುತ್ತದೆ ಎನ್ನುವುದಕ್ಕಿಂತ ನನ್ನ ಮನಸ್ಸಿನ ಬೇಗುದಿಯನ್ನು ಹೊರಹಾಕಲು ನಾನು ಬರವಣಿಗೆಯ ಮಾಧ್ಯಮವನ್ನು ಆಯ್ಕೆ  ಮಾಡಿಕೊಂಡೆ. ಹೀಗಾಗಿ ಸಮಾಜಗೊಸ್ಕರ ನಾನು ಬರೆಯುತ್ತಿದ್ದೇನೆ ಎನ್ನುವುದಕ್ಕಿಂತ ನನಗೊಸ್ಕರ ಬರೆಯುತ್ತಿದ್ದೇನೆ ಎನ್ನುವುದು ಸರಿಯೇನೋ. ಈ ಸಂದರ್ಭ ನೊಬಲ್ ಪ್ರಶಸ್ತಿ ಪುರಸ್ಕೃತ ಲೇಖಕ ಯೋಸಾನ ಮಾತನ್ನು ನಿಮಗೆ ನೆನಪಿಸುತ್ತೇನೆ ಆತ ಹೇಳುತ್ತಾನೆ ಬರಹಗಾರನಾದವನು ಬರೆಯುವ ಮೂಲಕ ಸಮಾಜವನ್ನು ಪ್ರಶ್ನಿಸುತ್ತಿರಬೇಕೆಂದು. ಒಂದರ್ಥದಲ್ಲಿ ನನ್ನ ಬರವಣಿಗೆ ಕೂಡ ಪ್ರಶ್ನೆಯಿದ್ದ ಹಾಗೆ ಎನ್ನುವ ನಂಬಿಕೆ ನನ್ನದು. 

ಲೇಖನಗಳ ಹೊರತಾಗಿ ಕಥೆಗಳನ್ನೆನಾದರೂ ಬರೆದ ಅನುಭವ ತಮಗಿದೆಯೆ?
ಸಾಮಾನ್ಯವಾಗಿ ನಾನು ಇದುವರೆಗೂ ಬರೆದಿರುವುದು ಲೇಖನಗಳೇ ಹೆಚ್ಚು. 2009 ರಲ್ಲಿ ಮೊದಲ ಬಾರಿಗೆ ಸಂಬಂಧಗಳು ಎನ್ನುವ ಕಥೆ ಬರೆದು ಕರ್ಮವೀರ ಪತ್ರಿಕೆಗೆ ಕಳುಹಿಸಿದೆ. ಆ ಕಥೆ ಪ್ರಕಟವಾಯಿತು. ನಂತರ ಮೂರು ದೃಶ್ಯಗಳು ಕಥೆ ತುಷಾರದಲ್ಲಿ ಪ್ರಕಟಗೊಂಡಿತು. ಆಮೇಲೆ ಪರೀಕ್ಷೆ ಕಥೆ ಕೂಡ ಪ್ರಕಟವಾಯಿತು. ಇದೆಲ್ಲ ಆದದ್ದು 2009 ರಲ್ಲಿ. ಆದರೆ ಈ ಮೂರು ಕಥೆಗಳನ್ನು ಬರೆದ ನಂತರ ಈ ಎಂಟು ವರ್ಷಗಳಲ್ಲಿ ನಾನು ಮತ್ತೆ ಕಥೆ ಬರೆಯಲು ಪ್ರಯತ್ನಿಸಲೇ ಇಲ್ಲ ಎನ್ನುವುದು ನನಗೇ ಆಶ್ಚರ್ಯದ ಸಂಗತಿಯಾಗಿದೆ. ಈಗ ಮತ್ತೆರಡು ಕಥೆಗಳನ್ನು ಬರೆದಿರುವೇನು. ಇತ್ತೀಚಿಗೆ ಬರೆದಿರುವ ‘ಸಾಂಗತ್ಯ’ ಕಥೆಯಲ್ಲಿನ ಮನಸ್ವಿನಿ ಪಾತ್ರ ನನ್ನನ್ನು ಅನೇಕ ದಿನಗಳವರೆಗೆ ಕಾಡಿದೆ. ಮುಂದಿನ ವರ್ಷ ಒಂದು ಕಥಾಸಂಕಲನ ಬರೆಯುವ ಯೋಜನೆ ಇದೆ. 

ಲೇಖನ ಮತ್ತು ಕಥೆಯನ್ನು ಹೋಲಿಸಿದಾಗ ನಿಮಗೆ ಬರವಣಿಗೆಯಲ್ಲಿ ವ್ಯತ್ಯಾಸವೆನಿಸಿದೆಯೆ ?

ನೋಡಿ ಇದು ತುಂಬ ಮಹತ್ವದ ಪ್ರಶ್ನೆ. ಸಾಮಾನ್ಯವಾಗಿ ಲೇಖನ ಎನ್ನುವುದು ವಾಸ್ತವ ಸ್ಥಿತಿಯನ್ನು ಅವಲಂಬಿಸಿದ್ದು. ಅಲ್ಲಿ ಲೇಖಕನಿಗೆ ಹೆಚ್ಚಿನ ಸ್ವಾತಂತ್ರ್ಯವಿರುವುದಿಲ್ಲ. ಲೇಖಕನಾದವನು ತಾನು ನೋಡಿದ ಸಂಗತಿಗಳಿಗೆ ಅಕ್ಷರ ರೂಪ ನೀಡಬೇಕಷ್ಟೆ. ಆದರೆ ಕಥಾ ಸಾಹಿತ್ಯ ಹಾಗಲ್ಲ ಅಲ್ಲಿ ಲೇಖಕನ ಕಲ್ಪನೆಗೆ ಹೆಚ್ಚಿನ ಸ್ವಾತಂತ್ರ್ಯವಿದೆ. ವಾಸ್ತವಕ್ಕೆ ಕಥೆಗಾರ ತನ್ನ ಕಲ್ಪನೆಯನ್ನು ಸೇರಿಸಿ ಕಥೆ ಹೆಣೆಯುತ್ತಾನೆ. ಹೀಗಾಗಿ ಲೇಖಕ ಕಥಾ ಮಾಧ್ಯಮದಲ್ಲಿ ಅಥವಾ ಕಾದಂಬರಿ ಮಾಧ್ಯಮದಲ್ಲಿ ಹೆಚ್ಚಿನ ಸ್ವಾತಂತ್ರ್ಯವನ್ನು ಅನುಭವಿಸುತ್ತಾನೆ. ಈ ಕಾರಣಕ್ಕೆ ಭೈರಪ್ಪನವರು ಕಾದಂಬರಿ ಪ್ರಕಾರಕ್ಕೆ ಮಾತ್ರ ನಿಷ್ಟರಾಗಿ ಉಳಿದಿರುವರು. 

ಭೈರಪ್ಪನವರು ಎಂದಾಗ ನೆನಪಾಯಿತು ಅವರ ಸಾಹಿತ್ಯ ನಿಮ್ಮನ್ನು ಪ್ರಭಾವಿಸಿದೆಯೆ ?

ಭೈರಪ್ಪನವರು ಕನ್ನಡದ ಪ್ರಮುಖ ಕಾದಂಬರಿಕಾರರಲ್ಲೊಬ್ಬರು. ಭೈರಪ್ಪನವರು ಅನೇಕ ಕಾದಂಬರಿಗಳನ್ನು ಓದಿಕೊಂಡಿರುವೇನು. ಅವರ ವಂಶವೃಕ್ಷ, ದಾಟು, ನಿರಾಕರಣ, ಮಂದ್ರ ಕಾದಂಬರಿಗಳು ನನ್ನನ್ನು ಹೆಚ್ಚು ಹೆಚ್ಚು ಪ್ರಭಾವಿಸಿವೆ. ಒಟ್ಟಿನಲ್ಲಿ ಅವರ ಕಾದಂಬರಿಗಳಲ್ಲಿ ನೈತಿಕತೆ ತನ್ನ ಪ್ರಾಬಲ್ಯವನ್ನು ಮೆರೆದು ಕೊನೆಗೆ ಜಯ ಸಾಧಿಸುವುದು ನನಗೆ ಅತ್ಯಂತ ಮೆಚ್ಚುಗೆಯಾದ ಸಂಗತಿಗಳಲ್ಲೊಂದು. ಅವರ ಆತ್ಮಕಥೆ ಭಿತ್ತಿ ಭೈರಪ್ಪನವರ ಬದುಕಿನ ಅನೇಕ ಸಂಗತಿಗಳ ಮೇಲೆ ಬೆಳಕು ಚೆಲ್ಲುತ್ತದೆ. 

ಕನ್ನಡದ ಯಾವ ಲೇಖಕರು ನಿಮ್ಮನ್ನು ಹೆಚ್ಚು ಪ್ರಭಾವಿಸಿರುವರು?

ಇಂಥದ್ದೆ ಲೇಖಕರು ಎನ್ನುವುದಕ್ಕಿಂತ ನಾನು ಕನ್ನಡದ ಬಹುತೇಕ ಲೇಖಕರನ್ನು ಓದಿಕೊಂಡಿರುವೇನು. ಲಂಕೇಶ್, ತೇಜಸ್ವಿ, ಅನಂತಮೂರ್ತಿ, ಯಶವಂತ ಚಿತ್ತಾಲ, ದೇವನೂರ ಮಹಾದೇವ, ಭೈರಪ್ಪ, ಗೀತಾ ನಾಗಭೂಷಣ ಹೀಗೆ ಪಟ್ಟಿ ಬಹಳ ದೊಡ್ಡದಿದೆ. ಇನ್ನು ಇವರಲ್ಲಿ ಹೆಚ್ಚು ಪ್ರಭಾವಿಸಿದವರಲ್ಲಿ ಯಶವಂತ ಚಿತ್ತಾಲರ ಹೆಸರು ಮೊದಲು ನೆನಪಿಗೆ ಬರುತ್ತದೆ. ಏಕೆಂದರೆ ಚಿತ್ತಾಲರ ಇಡೀ ಬರವಣಿಗೆಯಲ್ಲಿ ನಾವು ನೋಡುವುದು ಮನುಷ್ಯ ಸಂಬಂಧಗಳ ಹುಡುಕಾಟವನ್ನು. ಅವರ ಕಥೆ, ಕಾದಂಬರಿ ಅಷ್ಟೆ ಏಕೆ ಅವರ ಲೇಖನಗಳಲ್ಲೂ ಈ ಹುಡುಕಾಟವಿದೆ. ಚಿತ್ತಾಲರ ಶಿಕಾರಿ ಮತ್ತು ಪುರುಷೋತ್ತಮ ಕಾದಂಬರಿಗಳನ್ನು ನಾನು ಮತ್ತೆ ಮತ್ತೆ ಓದುತ್ತೇನೆ. ಒಟ್ಟಿನಲ್ಲಿ ಯಾವ ಪಂಥ ಪಂಗಡಗಳಿಗೂ ಸೀಮಿತಗೊಳಿಸಿಕೊಳ್ಳದೆ ತಮ್ಮ ಬರವಣಿಗೆಯ ಮೂಲಕ ಮನುಷ್ಯ ಸಂಬಂಧ ಮತ್ತು ಮನುಷ್ಯ ಪ್ರೀತಿಯನ್ನು  ಹುಡುಕಿದ ಅಪೂರ್ವ ಬರಹಗಾರ ಚಿತ್ತಾಲರು.


ಓದುಗರ ಪ್ರತಿಕ್ರಿಯೆ ಹೇಗೆ?

ಬರೆದ ಬರಹವನ್ನು ಬೇರೆಯವರು ಓದಲೇ ಬೇಕೆನ್ನುವ ಅತಿಯಾದ ನಿರೀಕ್ಷೆ ಸರಿಯಲ್ಲ. ಆದರೂ ಕೆಲವೊಮ್ಮೆ ಭೇಟಿಯಾದಾಗಲೋ ಇಲ್ಲವೇ ಪತ್ರದ ಮೂಲಕವೋ ಅಭಿಪ್ರಾಯ ತಿಳಿಸಿದಾಗ ಮನಸ್ಸಿಗೆ ಒಂದಿಷ್ಟು ಖುಷಿಯಾಗುವುದಂತೂ ನಿಜ. ಈಗ ಕೆಲವು ದಿನಗಳ ಹಿಂದೆ ನಾನು ಬ್ಲಾಗಿನಲ್ಲಿ ಬರೆದ 'ಗಾಂಧಿ ಮತ್ತು ದೇವನೂರ' ಲೇಖನವನ್ನು ಓದಿದ ಓದುಗರೊಬ್ಬರು Wonderful thought and I felt very peaceful today after reading this article ಎಂದು ಪ್ರತಿಕ್ರಿಯಿಸಿರುವರು. ಕುಂ. ವೀರಭದ್ರಪ್ಪನವರ ಆತ್ಮಕಥೆ 'ಗಾಂಧಿ ಕ್ಲಾಸು' ಕೃತಿ ಕುರಿತು ನಿಲುಮೆಯಲ್ಲಿ ಪ್ರಕಟವಾದ ನನ್ನ ಲೇಖನಕ್ಕೆ ಸ್ವತಃ ಕುಂ. ವೀರಭದ್ರಪ್ಪನವರೇ 'ಲೇಖನ ಚೆನ್ನಾಗಿದೆ' ಎಂದು ಪ್ರತಿಕ್ರಿಯಿಸಿದ್ದು ನನಗೆ ಮರೆಯಲಾಗದ ಅನುಭವ. ಇಂಥದ್ದೆ ಅಲ್ಲವೆ ಲೇಖಕನಿಗೆ ಮತ್ತೆ ಮತ್ತೆ ಬರೆಯಲು ಪ್ರೇರಣೆ ನೀಡುವುದು.

ನಿಮ್ಮ ಮುಂದಿನ ಯೋಜನೆಗಳೇನು?

ಹೀಗೆ ಬರೆಯಲೇ ಬೇಕೆನ್ನುವ ಹಠ ಏನಿಲ್ಲ. ಬರವಣಿಗೆ ಅತ್ಯಂತ ತ್ರಾಸದಾಯಕ ಕೆಲಸ. ಬರೆಯಲು ವಿಷಯ ವಸ್ತು ಹೊಳೆಯಬೇಕು ಆ ಕುರಿತು ಸಾಕಷ್ಟು ಪೂರ್ವ ಸಿದ್ಧತೆಯಾಗಬೇಕು. ಇನ್ನು ಕಥೆ ಬರೆಯುವುದು ತೀರ ಕಷ್ಟದ ಕೆಲಸ. ನನ್ನ ಕಥೆಯಾದವಳು ಕಥೆಯ ಒಂದು ಪುಟ ಬರೆದಿಟ್ಟು ಒಂದು ತಿಂಗಳ ಮೇಲಾಯ್ತು ಇನ್ನು ಎರಡನೆ ಪುಟಕ್ಕೆ ಮುಂದುವರೆಯಲು ಆಗುತ್ತಲೇ ಇಲ್ಲ. ಹೀಗಾಗಿ ನಾನು ಮುಂದಿನ ದಿನಗಳಲ್ಲಿ ಇಂತಿಷ್ಟು ಪುಸ್ತಕಗಳನ್ನು ಬರೆಯುತ್ತೇನೆ ಎನ್ನುವುದು ಹಾಸ್ಯಾಸ್ಪದ ಸಂಗತಿಯಾಗಬಹುದು. ಆದರೂ ಅಲ್ಲಲ್ಲಿ ಬರೆದಿರುವ ವ್ಯಕ್ತಿ ವಿಷಯ ಕುರಿತ ಲೇಖನಗಳನ್ನು ಒಟ್ಟುಗೂಡಿಸಿ ‘ಹೆಜ್ಜೆ ಮೂಡಿದ ಹಾದಿ’ ಮತ್ತು ಓದಿದ ಉತ್ತಮ ಪುಸ್ತಕಗಳ ಕುರಿತಾದ ಲೇಖನಗಳ ಸಂಕಲನ ‘ಪ್ರತಿಬಿಂಬ’ ಪ್ರಕಟಿಸುವ ಯೋಜನೆಯಂತು ಸಧ್ಯಕ್ಕಿದೆ. ಮುಂದಿನ ದಿನಗಳಲ್ಲಿ ಇನ್ನೊಂದಿಷ್ಟು ಕಥೆಗಳನ್ನು ಬರೆದಲ್ಲಿ ನನ್ನಿಂದ ಒಂದು ಕಥಾ ಸಂಕಲನ ಹೊರಬರಬಹುದು. ಇವಿಷ್ಟು ಯೋಜನೆಗಳಿವೆ.

ಸಮಾಜ ನಿಮ್ಮನ್ನು ಬರಹಗಾರನೆಂದು ಗುರುತಿಸಿದೆ ಎಂದೆನಿಸಿದೆಯೆ ?

ನೋಡಿ ಬರಹಗಾರನಾಗಬೇಕೆಂದು ನಾನು ಬರವಣಿಗೆಯನ್ನಾರಂಭಿಸಲಿಲ್ಲ. ಬರವಣಿಗೆ ಎನ್ನುವುದು ನನಗೆ ಒಂದು ಅಭಿವ್ಯಕ್ತಿ ಮಾಧ್ಯಮ. ನಾನು ನೋಡಿದ್ದು ಮತ್ತು ನನ್ನ ಅನುಭವಕ್ಕೆ ಬಂದಿದ್ದು ನನ್ನನ್ನು ತಲ್ಲಣಗೊಳಿಸಿದಾಗ ನಾನು ಬರವಣಿಗೆಯ ಮೊರೆ ಹೋಗುತ್ತೇನೆ. ಆತ್ಮೀಯರೊಬ್ಬರ ಪ್ರಭಾವವೇ ನನಗೆ ಮನಸ್ವಿನಿ ಪಾತ್ರ ಸೃಷ್ಟಿಸಲು ಮತ್ತು ‘ಸಾಂಗತ್ಯ’ ಕಥೆ ಬರೆಯಲು ಪ್ರೇರಣೆಯಾಯಿತು. ನನ್ನ ದೃಷ್ಟಿಯಲ್ಲಿ ಬರವಣಿಗೆ ಎನ್ನುವುದು ಕಾರ್ಯಾಗಾರದ ಮೂಲಕ ಮೂಡಿ ಬರುವ ಸೃಜನಶೀಲ ಸೃಷ್ಟಿಯಲ್ಲ. ಸಾಹಿತ್ಯ ಕ್ಷೇತ್ರದಲ್ಲಿ ಅಕಾಡೆಮಿಕ್ ವಲಯದ ಲೇಖಕರು ನಾನ್-ಅಕಾಡೆಮಿಕ್ ವಲಯದ ಲೇಖಕರನ್ನು ತೀರ ನಿರ್ಲಕ್ಷದಿಂದ ಕಾಣುತ್ತಿರುವುದು ಹೊಸದೆನಲ್ಲ. ನಾನು ಕನ್ನಡ ಸಾಹಿತ್ಯದ ವಿದ್ಯಾರ್ಥಿ ಅಲ್ಲ ಮತ್ತು ರಾಘವಾಂಕ, ರನ್ನ, ಪಂಪರನ್ನು ಓದಿಕೊಂಡವನೂ ಅಲ್ಲ. ಲೇಖಕನೆಂದು ಗುರುತಿಸಿಕೊಳ್ಳಲು ಬರಹಗಾರನು ಈ ಎಡ ಅಥವಾ ಬಲ ಯಾವುದಾದರು ಒಂದು ಗುಂಪಿನೊಂದಿಗೆ ಗುರುತಿಸಿಕೊಳ್ಳುವುದು ಇವತ್ತಿನ ಅನಿವಾರ್ಯ ಸ್ಥಿತಿಯಾಗಿದೆ. ಇಂಥ ಸನ್ನಿವೇಶದಲ್ಲಿ ನಾನು ಬರಹಗಾರನೆಂದು ಗುರುತಿಸಿಕೊಳ್ಳುವುದಕ್ಕಿಂತ ನನ್ನನ್ನು ನಾನು ಅರ್ಥ ಮಾಡಿಕೊಳ್ಳಲು ನಾನು ಬರೆಯುತ್ತೇನೆ ಎನ್ನುವುದೇ ಅತ್ಯಂತ ಸಂತಸದ ವಿಷಯ ನನಗೆ.

ನಮಸ್ಕಾರಗಳು ಸರ್ ತಮ್ಮಿಂದ ಅನೇಕ ಸಂಗತಿಗಳು ತಿಳಿದವು.

ತಮಗೂ ನಮಸ್ಕಾರಗಳು.

No comments:

Post a Comment