ಮೊನ್ನೆ ಮೊನ್ನೆ ತೆಹಲ್ಕಾ ನಿಯತಕಾಲಿಕೆಯ ಪ್ರಧಾನ ಸಂಪಾದಕ ಲೈಂಗಿಕ ಹಗರಣದಲ್ಲಿ ಸಿಲುಕಿದ ಸುದ್ದಿ ಇಡೀ ದೇಶದಾದ್ಯಂತ ಸಂಚಲನ ಮೂಡಿಸಿತು. ಹೆಸರು ಮಾಡಿ ಜನಪ್ರಿಯತೆಯ ಉತ್ತುಂಗದಲ್ಲಿದ್ದ ಪತ್ರಕರ್ತನೋರ್ವನ ಈ ಅಸಹ್ಯದ ಕೆಲಸ ಸಾರ್ವಜನಿಕರು ಇಡೀ ಪತ್ರಿಕಾ ಸಮೂಹವನ್ನೇ ಅನುಮಾನದ ಕಣ್ಣುಗಳಿಂದ ನೋಡುವಂತೆ ಮಾಡಿತು. ಇದಕ್ಕಾಗಿಯೇ ಕಾಯುತ್ತಿದ್ದ ಕೆಲವರು ಆತನ ಸಂಪೂರ್ಣ ತೆಜೋವಧೆಗಾಗಿ ಪ್ರಯತ್ನಿಸಿದರು. ನಿಜಕ್ಕೂ ಪತ್ರಕರ್ತನಾದವನು ಪ್ರತಿ ಘಳಿಗೆ ಎಚ್ಚರದಿಂದ ಮೈಯೆಲ್ಲ ಕಣ್ಣಾಗಿರಬೇಕು. ಸಮಾಜದ ಹುಳುಕುಗಳ ಮೇಲೆ ಬೆಳಕು ಚೆಲ್ಲುವ ಆತನಿಗೆ ಒಂದು ಕಪ್ಪು ಹನಿ ಸಿಡಿದರೂ ಅದು ಆತನನ್ನು ಮುಳುಗಿಸಿ ಬಿಡಬಲ್ಲದು. ಕೆಟ್ಟ ವ್ಯವಸ್ಥೆಯನ್ನು ಜನರೆದುರು ಅನಾವರಣಗೊಳಿಸಲು ಹೋಗುವವನು ತಾನೆ ಕೆಟ್ಟ ವ್ಯವಸ್ಥೆಯ ಭಾಗವಾದಾಗ ಅದು ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದು. ಒಂದು ಕಾಲದಲ್ಲಿ ರಾಜಕಾರಣಿಗಳ ಭ್ರಷ್ಟಾಚಾರವನ್ನು ತೆಹಲ್ಕಾ ಪತ್ರಿಕೆಯು ಹೊರಗೆಳೆದಾಗ ಅದು ತೆಹಲ್ಕಾ ಹಗರಣವೆಂದೇ ಖ್ಯಾತಿ ಪಡೆಯಿತು. ಭ್ರಷ್ಟಾಚಾರದಂಥ ಹಗರಣವನ್ನು ಬಯಲಿಗೆಳೆದ ಪತ್ರಕರ್ತ ಸಹಜವಾಗಿಯೇ ಜನರ ದೃಷ್ಟಿಯಲ್ಲಿ ಆದರ್ಶ ವ್ಯಕ್ತಿಯಾದ. ಪತ್ರಿಕೋದ್ಯಮದ ವಿದ್ಯಾರ್ಥಿಗಳು ತಾವುಗಳೂ ಮುಂದೊಂದು ದಿನ ಅಂಥದ್ದೆ ದಿಟ್ಟ ವ್ಯಕ್ತಿತ್ವದ ಪತ್ರಕರ್ತರಾಗಬೇಕೆಂದು ಕನಸಿಸಿದರು. ಅನೇಕರು ತಮ್ಮ ಆದರ್ಶದ ಪತ್ರಕರ್ತನನ್ನು ಅನುಕರಣೆ ಮಾಡತೊಡಗಿದರು. ಒಟ್ಟಿನಲ್ಲಿ ಅಪರೋಕ್ಷವಾಗಿ ಆತ ಅನೇಕರಿಗೆ ಗುರುವಾದ. ಆದರೆ ಯಾವಾಗ ಆತ ಲೈಂಗಿಕ ಹಗರಣದಲ್ಲಿ ಸಿಲುಕಿಕೊಂಡನೋ ಆಗ ಆತನನ್ನು ಪೂಜಿಸಿದ, ಗೌರವಿಸಿದ, ಅನುಕರಿಸಿದ ಅದೇ ಪತ್ರಿಕಾ ಮಾಧ್ಯಮ ತೆಜೋವಧೆಗಾಗಿ ಅವನ ಬೆನ್ನು ಬಿದ್ದಿತು. ಆತನ ವಿಕ್ಷಿಪ್ತ ವ್ಯಕ್ತಿತ್ವದ ಅನೇಕ ಮುಖಗಳನ್ನು ಪರಿಚಯಿಸಲಾರಂಭಿಸಿತು. ಪತ್ರಕರ್ತರು ಆತನದು ಅಕ್ರಮ ಗಳಿಕೆಯ ಸಂಪತ್ತು ಎಂದು ಲೇಖನಗಳನ್ನು ಬರೆಯತೊಡಗಿದರು. ಹಲವು ವರ್ಷಗಳ ಕಾಲ ಸಾರ್ವಜನಿಕ ವಲಯದಲ್ಲಿ ಮತ್ತು ಪತ್ರಿಕೋದ್ಯಮದ ವಿದ್ಯಾರ್ಥಿಗಳಿಗೆ ಆದರ್ಶ ಮತ್ತು ಅನುಕರಣೆಗೆ ಯೋಗ್ಯನಾಗಿದ್ದ ವ್ಯಕ್ತಿ ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಅದೇ ಜನರ ನಿಂದನೆಗೆ ಮತ್ತು ಆಕ್ರೋಶಕ್ಕೆ ಪಾತ್ರನಾದ. ಪತ್ರಿಕೋದ್ಯಮದಿಂದ ದೊರೆತ ಹಣ ಮತ್ತು ಜನಪ್ರಿಯತೆಯನ್ನು ಸರಿಯಾದ ರೀತಿಯಲ್ಲಿ ನಿಭಾಯಿಸಲು ಆತ ವಿಫಲನಾದದ್ದೆ ಅವನ ಅವನತಿಗೆ ಕಾರಣವಾಯಿತು. ಜೊತೆಗೆ ಪತ್ರಕರ್ತನಾದ ತಾನು ಹೇಗೆ ವರ್ತಿಸಿದರೂ ಅದು ತಪ್ಪಲ್ಲ ಎನ್ನುವ ಧಾರ್ಷ್ಟ್ಯ ಮನೋಭಾವ ಕೂಡ ಆತ ತಪ್ಪುದಾರಿ ತುಳಿಯುವಂತೆ ಮಾಡಿತು. ಹೆಚ್ಚಿನ ಪತ್ರಕರ್ತರು ದಾರಿ ತಪ್ಪುತ್ತಿರುವುದು ಈ ಹಂತದಲ್ಲೇ. ಪತ್ರಕರ್ತನಾದವನು ಸಮಾಜದ ತಪ್ಪುಗಳನ್ನು ಜನರಿಗೆ ಪರಿಚಯಿಸುವ ಕೆಲಸ ಮಾಡಬೇಕೇ ವಿನ: ತಾನೇ ತಪ್ಪು ದಾರಿ ತುಳಿಯಬಾರದು. ಹೀಗೆ ಪತ್ರಿಕೋದ್ಯಮ ತಪ್ಪು ದಾರಿ ತುಳಿಯುತ್ತಿರುವ ಈ ಹೊತ್ತು ನಮಗೆ ಸಾಯಿನಾಥ ನೆನಪಾಗುತ್ತಾರೆ.
ಪತ್ರಿಕೋದ್ಯಮದಿಂದ ದೊರೆತ ಜನಪ್ರಿಯತೆಯ ಅಮಲಿನಿಂದ ಪತ್ರಕರ್ತರು ತಪ್ಪು ದಾರಿಗಿಳಿಯುತ್ತಿದ್ದರೆ ಇನ್ನು ಕೆಲವರಿಗೆ ಈ ಪತ್ರಿಕೋದ್ಯಮವು ಹಣ ಮಾಡುವ ದಂಧೆಯಾಗಿ ಪರಿಣಮಿಸಿದೆ. ಕೆಲವು ದಿನಗಳ ಹಿಂದೆ ಪರಿಚಯದ ಹುಡುಗನೊಬ್ಬ ಭೇಟಿಯಾಗಿದ್ದ. ಈ ಮೊದಲು ಕೆಲಸವಿಲ್ಲದೇ ಅಲೆದಾಡುತ್ತಿದ್ದ ಆತ ಇವತ್ತು ಪತ್ರಿಕೆಯೊಂದರ ವರದಿಗಾರ. ಕೇವಲ ಹತ್ತನೇ ತರಗತಿಯವರೆಗೆ ಓದಿದ ಮತ್ತು ಪತ್ರಿಕೋದ್ಯಮದ ಅನುಭವವೇ ಇಲ್ಲದ ಆತ ಪತ್ರಿಕಾ ವರದಿಗಾರನಾಗಿ ಕೆಲಸ ಮಾಡುತ್ತಿರುವ ವಿಷಯ ಕೇಳಿ ಅಚ್ಚರಿಯಾಯಿತು. ನಾನು ಅಚ್ಚರಿ ಮತ್ತು ಆಶ್ಚರ್ಯದಲ್ಲಿ ಮುಳುಗಿಹೋದ ಆ ಕ್ಷಣ ಆತ ತನ್ನ ಹೆಸರಿನ ವಿಸಿಟಿಂಗ್ ಕಾರ್ಡ್ ಕೊಟ್ಟು ಏನಾದರೂ ಸಮಸ್ಯೆಯಿದ್ದರೆ ಸಂಪರ್ಕಿಸಿ ಎಂದು ಹೇಳಿ ಮರೆಯಾದ. ಆನಂತರ ಗೊತ್ತಾಯಿತು ಪತ್ರಕರ್ತನೆನ್ನುವುದು ಅವನಿಗೆ ಹಣ ಗಳಿಸುವ ಕೆಲಸವಾಗಿತ್ತು. ಸ್ಥಳೀಯ ರಾಜಕಾರಣಿಗಳನ್ನು, ಸರ್ಕಾರಿ ಅಧಿಕಾರಿಗಳನ್ನು ಮತ್ತು ಅಕ್ರಮ ದಂಧೆಯ ವ್ಯಾಪಾರಿಗಳನ್ನು ಆತ ವರದಿಗಾರನ ಹೆಸರಿನಲ್ಲಿ ಹೆದರಿಸಿ ಅವರಿಂದ ಪ್ರತಿ ತಿಂಗಳು ಇಂತಿಷ್ಟು ಹಣವನ್ನು ವಸೂಲಿ ಮಾಡುತ್ತಿದ್ದ. ಒಂದು ಸಂದರ್ಭ ಸಾರ್ವಜನಿಕ ಗ್ರಂಥಾಲಯಕ್ಕೆ ಭೇಟಿ ನೀಡಿ ಅಲ್ಲಿನ ಸಹಾಯಕ ಪುಸ್ತಕಗಳನ್ನು ಜೋಡಿಸಿಡುತ್ತಿರುವ ಹೊತ್ತು ಖಾಲಿ ಕುರ್ಚಿಯ ಫೋಟೋ ಕ್ಲಿಕ್ಕಿಸಿ ಅವನ ಹುದ್ದೆಗೇ ಸಂಚಕಾರ ತಂದಿದ್ದ. ಅಂದಿನಿಂದ ಸರ್ಕಾರಿ ನೌಕರರು ಮತ್ತು ರಾಜಕಾರಣಿಗಳು ಈ ಪತ್ರಕರ್ತನನ್ನು ಕಂಡರೆ ಹೆದರತೊಡಗಿದರು. ಅವರೊಳಗಿನ ಭಯವನ್ನೇ ಬಂಡವಾಳವಾಗಿಸಿಕೊಂಡು ಈತ ಒಂದಿಷ್ಟು ಹಣ ಗಳಿಸಿ ತಕ್ಕ ಮಟ್ಟಿಗೆ ಆಸ್ತಿಯನ್ನೂ ಮಾಡಿಕೊಂಡಿದ್ದ.
ಇನ್ನೂ ಅಚ್ಚರಿಯ ಸಂಗತಿ ಎಂದರೆ ಈ ಜಿಲ್ಲಾ ಮತ್ತು ತಾಲೂಕು ಪ್ರದೇಶಗಳಲ್ಲಿ ಹಣ ಗಳಿಕೆಗಾಗಿಯೇ ಪತ್ರಿಕೆಗಳನ್ನು ಪ್ರಕಟಿಸುವ ಪತ್ರಕರ್ತರಿರುವರು. ಒಮ್ಮೆ ಇವರು ಪತ್ರಿಕೆಯ ಪ್ರಥಮ ಸಂಚಿಕೆಯೊಂದನ್ನು ಪ್ರಕಟಿಸಿ ನೊಂದಣಿ ಮಾಡಿಸಿದರೆಂದರೆ ಮತ್ತೆಂದೂ ಪತ್ರಿಕೆಯನ್ನು ಪ್ರಕಟಿಸುವ ಗೊಡವೆಗೆ ಹೋಗುವುದಿಲ್ಲ. ಆದರೆ ತಮ್ಮ ಪ್ರಥಮ ಸಂಚಿಕೆಯನ್ನೇ ಬಗಲಲ್ಲಿಟ್ಟುಕೊಂಡು ತಾವು ಪತ್ರಕರ್ತರೆಂಬ ಫೋಜು ನೀಡುತ್ತಾರೆ. ಅದನ್ನೇ ಈ ಭ್ರಷ್ಟ ರಾಜಕಾರಣಿಗಳಿಗೆ ಮತ್ತು ಅಧಿಕಾರಿಗಳಿಗೆ ತೋರಿಸಿ ಹಣ ವಸೂಲಿಗಿಳಿಯುತ್ತಾರೆ. ಪತ್ರಕರ್ತರ ಇನ್ನೊಂದು ವರ್ಗವಿದೆ ಅವರು ಪತ್ರಿಕೆಗಳನ್ನು ಪ್ರಕಟಿಸುವುದು ಜಾಹಿರಾತುಗಳಿಂದ ಬರುವ ಹಣಕ್ಕಾಗಿ. ಅಂಥ ಪತ್ರಿಕೆಗಳ ಬಹುಪಾಲು ಜಾಗವನ್ನು ಜಾಹಿರಾತುಗಳೇ ಆಕ್ರಮಿಸಿಕೊಂಡಿರುತ್ತವೆ. ಪತ್ರಿಕೆಯೊಂದು ಹಣ ಗಳಿಸುವ ಉದ್ಯಮ ಎನ್ನುವ ಕಾರಣದಿಂದಾಗಿ ಇವತ್ತು ಜಿಲ್ಲಾ ಮತ್ತು ತಾಲೂಕು ಪ್ರದೇಶಗಳಲ್ಲೇ ನೂರಾರು ಪತ್ರಿಕೆಗಳು ಪ್ರಕಟವಾಗುತ್ತಿವೆ. ಹೀಗೆ ಪ್ರಕಟವಾಗುತ್ತಿರುವ ಪತ್ರಿಕೆಗಳಿಗಾಗಲಿ ಮತ್ತು ಅವುಗಳನ್ನು ಪ್ರಕಟಿಸುತ್ತಿರುವ ಪತ್ರಕರ್ತರಿಗಾಗಲಿ ಸಮಾಜದ ಕುರಿತಾದ ಕನಿಷ್ಠ ಕಾಳಜಿಯಾಗಲಿ ಇಲ್ಲವೇ ಸಾಮಾಜಿಕ ಬದ್ಧತೆಯಾಗಲಿ ಇಲ್ಲ. ಅವರೇನಿದ್ದರೂ ಪತ್ರಕರ್ತರ ವೇಷದಲ್ಲಿರುವ ಭ್ರಷ್ಟರು. ಇಂಥ ಭ್ರಷ್ಟರು ಪತ್ರಿಕೋದ್ಯಮವನ್ನು ತಪ್ಪು ದಾರಿಗೆಳೆಯುತ್ತಿರುವ ಈ ಹೊತ್ತಿನಲ್ಲೇ ನಮಗೆ ಸಾಯಿನಾಥ ನೆನಪಾಗುತ್ತಾರೆ.
ಮೂವತ್ತು ವರ್ಷಗಳ ಹಿಂದೆ ಗುಲಬರ್ಗಾದಂಥ ಸಣ್ಣ ಊರಿನಲ್ಲಿ (ಈಗ ಅದು ದೊಡ್ಡ ಊರಾಗಿ ಬೆಳೆದಿದೆ) ಸ್ಥಳೀಯ ಪತ್ರಿಕೆಯ ಸಂಪಾದಕನ ಕೊಲೆಯಾಯಿತು. ಅದು ರಾತ್ರಿ ಒಂಬತ್ತರ ವೇಳೆಗೆ ಮುಖ್ಯ ರಸ್ತೆಯ ಮೇಲೆ ಕೊಲೆಯಾದಾಗ ಅನೇಕರಿಗೆ ಪತ್ರಿಕೆಯ ಕೆಲಸ ಅದು ಎಷ್ಟೊಂದು ಅಪಾಯಕಾರಿ ಎಂದೆನಿಸಿತು. ಜೊತೆಗೆ ಅಪಾಯ ಎದುರಾಗದೆ ಇದ್ದಲ್ಲಿ ಪತ್ರಿಕೋದ್ಯಮದ ಕೆಲಸ ತೀರ ಸಪ್ಪೆಯಾಗುತ್ತದೆ ಎನ್ನುವುದು ಕೆಲವರ ಅಭಿಮತವಾಗಿತ್ತು. ಈ ಎಲೆಕ್ಟ್ರಾನಿಕ್ ಮಾಧ್ಯಮ ಇನ್ನು ಕಣ್ಣು ತೆರೆಯದಿದ್ದ ಆ ದಿನಗಳಲ್ಲಿ ಪತ್ರಿಕೆಗಳು ಸಮಾಜವನ್ನು ಸ್ವಚ್ಛಗೊಳಿಸುವ ಕೆಲಸ ಮಾಡುತ್ತಿದ್ದವು. ಪತ್ರಕರ್ತರು ಪ್ರಾಮಾಣಿಕರಾಗಿದ್ದರು. ತಮ್ಮ ದಿಟ್ಟ ವರದಿಗಳಿಂದ ಭ್ರಷ್ಟರನ್ನು ಎದುರು ಹಾಕಿಕೊಂಡು ಪ್ರಾಣಕೊಟ್ಟ ಪತ್ರಕರ್ತರ ಸಂಖ್ಯೆಗೇನೂ ಕೊರತೆ ಇರಲಿಲ್ಲ. ಆದರೆ ಕಾಲಾನಂತರದಲ್ಲಿ ಭ್ರಷ್ಟತೆಯ ಪ್ರಮಾಣ ಹೆಚ್ಚಿದಂತೆ ಪತ್ರಕರ್ತರೂ ಕೂಡ ಭ್ರಷ್ಟತೆಯ ಭಾಗವಾಗತೊಡಗಿದರು. ಅವರಿಗೆ ಪತ್ರಿಕೋದ್ಯಮವು ಹಣ ಮಾಡುವ ಸುಲಭ ಮತ್ತು ಸರಳ ಮಾರ್ಗೋಪಾಯ ಎಂದೆನಿಸತೊಡಗಿತು. ಈ ಬದಲಾವಣೆಯಿಂದಾಗಿ ಒಂದು ಸಮಯದಲ್ಲಿ ಭ್ರಷ್ಟರನ್ನು ವಿರೋಧಿಸುತ್ತಿದ್ದವರು ಕಾಲಕ್ರಮೇಣ ಭ್ರಷ್ಟರನ್ನೇ ಓಲೈಸಲು ಮುಂದಾದರು. ಈ ಬದಲಾವಣೆಗೆ ಪೂರಕವಾಗಿ ಭ್ರಷ್ಟ ರಾಜಕಾರಣಿಗಳು ಮತ್ತು ಅಧಿಕಾರಿಗಳು ತಾವು ಬೆಳೆಯಲು ಮತ್ತು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಪತ್ರಕರ್ತರ ಓಲೈಕೆಗೆ ತೊಡಗಿದರು. ಒಟ್ಟಿನಲ್ಲಿ ಪತ್ರಕರ್ತರು ಮತ್ತು ಭ್ರಷ್ಟರ ನಡುವೆ ಕೊಡು ಕೊಳ್ಳುವಿಕೆಯ ಸಂಪ್ರದಾಯ ಕಾಣಿಸಿಕೊಂಡಿತು. ಅನೇಕ ಪತ್ರಕರ್ತರು ಪತ್ರಿಕೆಯ ಹೆಸರಿನಲ್ಲಿ ಗಳಿಸಿದ ಹಣವನ್ನೇ ಬೇರೆ ಬೇರೆ ಉದ್ಯಮಗಳಲ್ಲಿ ತೊಡಗಿಸಿ ಆರ್ಥಿಕವಾಗಿ ಸ್ಥಿತಿವಂತರಾದರು. ಈ ಎಲೆಕ್ಟ್ರಾನಿಕ್ ಮಾಧ್ಯಮ ಕಣ್ಣು ತೆರೆದ ಮೇಲಂತೂ ಹಿಡನ್ ಕ್ಯಾಮೆರಾವನ್ನು ಕಿಸೆಯಲ್ಲಿಟ್ಟು ಕೊಂಡು ಸಮಾಜದಲ್ಲಿನ ಭ್ರಷ್ಟರ ಜೊತೆಗೆ ಗೌರವಸ್ಥರನ್ನೂ ಬ್ಲಾಕ್ ಮೇಲ್ ಮಾಡಿ ಹಣ ಗಳಿಸುವ ಹೊಸ ಪೀಳಿಗೆಯ ಪತ್ರಕರ್ತರ ಪರಂಪರೆಯೇ ಜನ್ಮ ತಳೆಯಿತು. ಪಂಚತಾರಾ ಹೊಟೇಲ್ ಗಳಲ್ಲಿ ವಾಸ, ವರ್ಷಕ್ಕೆ ಒಂದೆರಡು ವಿದೇಶ ಪ್ರಯಾಣ, ಓಡಾಡಲು ಐಶಾರಾಮಿ ಕಾರು ಒಟ್ಟಿನಲ್ಲಿ ಇವತ್ತಿನ ಪತ್ರಕರ್ತರ ಬದುಕಿನ ಶೈಲಿ ಬದಲಾಗಿದೆ. ಹೀಗೆ ನಮ್ಮ ಪತ್ರಕರ್ತರು ಐಶಾರಾಮಿ ಬದುಕನ್ನು ಹುಡುಕಿಕೊಂಡು ಹೋಗುತ್ತಿರುವ ಈ ಘಳಿಗೆ ತಮ್ಮ ಬದುಕಿನ ಬಹುಸಮಯವನ್ನು ಹಳ್ಳಿಗಳಲ್ಲೇ ಕಳೆಯುತ್ತಿರುವ ಭಾರತದ ಪತ್ರಿಕೋದ್ಯಮಕ್ಕೊಂದು ಹೊಸ ಅರ್ಥ ತಂದುಕೊಟ್ಟ ಸಾಯಿನಾಥ ನೆನಪಾಗುತ್ತಾರೆ.
ಪಿ.ಸಾಯಿನಾಥ
ಈ ಮೇಲೆ ಹೇಳಿದ ಉದಾಹರಣೆಗಳಿಗೆ ಅಪವಾದ ಎನ್ನುವಂತೆ ಅನೇಕ ಪತ್ರಕರ್ತರು ಪತ್ರಿಕೋದ್ಯಮದಲ್ಲಿ ಕೆಲಸ ಮಾಡುತ್ತಿರುವರು. ಅಂಥ ಹೆಸರುಗಳಲ್ಲಿ ತಟ್ಟನೆ ನೆನಪಿಗೆ ಬರುವ ಹೆಸರು ಅದು ಪಿ. ಸಾಯಿನಾಥ ಅವರದು. ಪತ್ರಿಕೆ ಕೆಲಸಕ್ಕಾಗಿ ಮ್ಯಾಗ್ಸಸೆ ಪ್ರಶಸ್ತಿ ಪಡೆದ ಪತ್ರಕರ್ತರಿವರು. ಬರಗಾಲ ಮತ್ತು ರೈತರ ಬವಣೆಗಳನ್ನು ಕುರಿತು ಅಧ್ಯಯನ ಮಾಡುವ ಆಸಕ್ತಿ ಅವರದು. ೧೯೯೩ ರಲ್ಲಿ ಟೈಮ್ಸ್ ಆಫ್ ಇಂಡಿಯಾ ಫೆಲೋಶಿಪ್ ನೊಂದಿಗೆ ತಮ್ಮ ಅಧ್ಯಯನವನ್ನಾರಂಭಿಸಿದ ಸಾಯಿನಾಥ ೧೮ ತಿಂಗಳುಗಳ ಅವಧಿಯಲ್ಲಿ ಒಂದು ಲಕ್ಷ ಕಿಲೋ ಮೀಟರ್ ಸಂಚರಿಸಿರುವರು. ಅದರಲ್ಲಿ ಸುಮಾರು ಐದು ಸಾವಿರ ಕಿಲೋ ಮೀಟರ್ ಗಳಷ್ಟು ದಾರಿಯನ್ನು ನಡೆದುಕೊಂಡೇ ಸಂಚರಿಸಿದರು. ತಮ್ಮ ಅಧ್ಯಯನಕ್ಕಾಗಿ ಭಾರತದ ಐದು ರಾಜ್ಯಗಳಲ್ಲಿನ ಹತ್ತು ಜಿಲ್ಲೆಗಳನ್ನು ಆಯ್ದುಕೊಂಡ ಅವರು ಈ ಅವಧಿಯಲ್ಲಿ ಒಟ್ಟು ೮೪ ವರದಿಗಳನ್ನು ಪ್ರಕಟಿಸಿದರು. ಅವರ ಪ್ರತಿಯೊಂದು ವರದಿ ರೈತರ ಸಮಸ್ಯೆಗಳನ್ನು ಮತ್ತು ಅವರು ಅನುಭವಿಸುತ್ತಿರುವ ಬದುಕಿನ ದಾರುಣತೆಯನ್ನು ಕಟ್ಟಿಕೊಡುತ್ತದೆ. ಈ ೮೪ ವರದಿಗಳನ್ನೇ ಆಧರಿಸಿ ಸಾಯಿನಾಥ 'ಎವರಿ ಬಡಿ ಲವ್ಸ್ ಎ ಗುಡ್ ಡ್ರಾಟ್' ಎನ್ನುವ ಪುಸ್ತಕ ಪ್ರಕಟಿಸಿರುವರು. ಈ ಪುಸ್ತಕಕ್ಕೆ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಸೇರಿ ೧೮ ಕ್ಕೂ ಹೆಚ್ಚು ಪ್ರಶಸ್ತಿಗಳು ಲಭಿಸಿವೆ. ಭಾರತದ ಪತ್ರಿಕೋದ್ಯಮದಲ್ಲಿ ಬರಗಾಲ ಮತ್ತು ರೈತರ ಸಮಸ್ಯೆಗಳನ್ನು ಸಾಯಿನಾಥರಷ್ಟು ಆಳವಾಗಿ ಅಧ್ಯಯನ ಮಾಡಿದ ಪತ್ರಕರ್ತ ಬೇರೊಬ್ಬರಿಲ್ಲ. ಪತ್ರಕರ್ತರೆಲ್ಲ ರಾಜಕೀಯ, ಕ್ರೀಡೆ, ಭ್ರಷ್ಟಾಚಾರ, ಸಿನಿಮಾ ಅಪರಾಧ ಪ್ರಕರಣ ಇತ್ಯಾದಿ ರೋಚಕ ಸುದ್ದಿಗಳ ಸುತ್ತ ಗಿರಕಿ ಹೊಡೆಯುತ್ತಿರುವಾಗ ಸಾಯಿನಾಥ ಹಳ್ಳಿಗಳತ್ತ ಮುಖ ಮಾಡುತ್ತಾರೆ. ರೈತರ ಸಮಸ್ಯೆಗಳನ್ನು ತಮ್ಮ ಲೇಖನಗಳ ಮೂಲಕ ಒಂದೊಂದಾಗಿ ಸರ್ಕಾರದ ಮುಂದಿಡುತ್ತಾರೆ. ಆಂಧ್ರ ಪ್ರದೇಶ, ರಾಜಸ್ಥಾನ, ಒರಿಸ್ಸಾ ರಾಜ್ಯಗಳಲ್ಲಿನ ರೈತರ ಆತ್ಮಹತ್ಯೆಯ ಮಾಹಿತಿಯನ್ನು ಸ್ಪಷ್ಟ ಅಂಕಿ ಸಂಖ್ಯೆಗಳೊಂದಿಗೆ ಪ್ರಕಟಿಸಿದ ಸಾಯಿನಾಥ ಸರ್ಕಾರಕ್ಕೆ ರೈತರ ಸಮಸ್ಯೆಗಳನ್ನು ಮನಗಾಣಿಸಿ ಕೊಟ್ಟಿರುವರು. ವರ್ಷದಲ್ಲಿ ೨೭೦ ರಿಂದ ೩೦೦ ದಿನಗಳನ್ನು ಹಳ್ಳಿಗಳಲ್ಲಿ ಕಳೆಯುವ ಅವರು ರೈತರ ಸಮಸ್ಯೆಗಳಿಗೆ ಧ್ವನಿಯಾಗಿರುವರು. ಪತ್ರಿಕೆಗಳಿಂದ ಹಣಕಾಸಿನ ನೆರವು ದೊರೆಯದಿದ್ದಾಗ ತಮ್ಮ ಉಳಿತಾಯದ ಹಣ, ಪ್ರಾವಿಡೆಂಟ್ ಫಂಡ್, ಪ್ರಶಸ್ತಿಗಳಿಂದ ದೊರೆತ ಹಣವನ್ನೆಲ್ಲ ಅಧ್ಯಯನಕ್ಕಾಗಿ ಖರ್ಚು ಮಾಡುವರು. ಬರವಣಿಗೆ ಅವರಿಗೆ ಹಣ ಮಾಡುವ ದಂಧೆ ಅಲ್ಲ. ಈ ವೃತ್ತಿ ರೈತರ, ಬಡವರ, ಅಸಾಹಾಯಕರ ಧ್ವನಿಯಾಗಬೇಕೆನ್ನುವುದು ಸಾಯಿನಾಥರ ಪ್ರಬಲ ಇಚ್ಛೆಯಾಗಿದೆ.
ಸಾಯಿನಾಥ ಬರೆಯುತ್ತಾರೆ
ಭಾರತದ ಗ್ರಾಮೀಣ ಬದುಕನ್ನು ಆಳವಾಗಿ ಕೆದಕಿ ನೋಡಿದ ಪತ್ರಕರ್ತರ ಸಾಲಿನಲ್ಲಿ ಮುಂಚೂಣಿಯಲ್ಲಿ ನಿಲ್ಲುವ ಹೆಸರು ಪಿ. ಸಾಯಿನಾಥ ಅವರದು. ಗ್ರಾಮೀಣ ಬದುಕಿನ ಅದರಲ್ಲೂ ರೈತರ ಸಮಸ್ಯೆಗಳ ಹಸಿಹಸಿ ಚಿತ್ರಣವನ್ನು ತಮ್ಮ ವರದಿಗಳ ಮೂಲಕ ತೋರಿಸಿಕೊಟ್ಟ ಅನನ್ಯ ಪತ್ರಕರ್ತ. ಸಾಯಿನಾಥ ರೈತರ ಆತ್ಮಹತ್ಯೆ, ಬತ್ತುತ್ತಿರುವ ಬಾವಿಗಳು, ನೀರಿನ ಖಾಸಗೀಕರಣ, ಭೂಕಬಳಿಕೆ, ಸಾಲದ ಗಂಡಾಂತರ, ಕಳಪೆ ಬೀಜದ ಸಮಸ್ಯೆಗಳು, ಕುಸಿಯುತ್ತಿರುವ ಕೃಷಿ ಆದಾಯ ಹೀಗೆ ರೈತರ ಬದುಕಿನ ಅನೇಕ ಸಂಕಟಗಳನ್ನು ತಮ್ಮ ಬರಹದ ಮೂಲಕ ಅನಾವರಣಗೊಳಿಸಿರುವರು. ಅವರ ಬರಹದಲ್ಲಿ ಆಡಂಬರವಾಗಲಿ ಇಲ್ಲವೇ ಅತಿಶಯೋಕ್ತಿಯಾಗಲಿ ಇರುವುದಿಲ್ಲ. ರೈತರ ಸಮಸ್ಯೆಗಳನ್ನು ಅತ್ಯಂತ ಸರಳ ಪದಗಳು ಮತ್ತು ವಾಕ್ಯಗಳ ಮೂಲಕ ಹೇಳುವ ಸಾಯಿನಾಥರಿಗೆ ಮಣ್ಣಿನ ಮಕ್ಕಳ ಕುರಿತು ಪ್ರಾಮಾಣಿಕ ಕಾಳಜಿ ಇದೆ. ಅದಕ್ಕೆಂದೇ ವರ್ಷದ ೧೨ ತಿಂಗಳಲ್ಲಿ ಹೆಚ್ಚಿನ ಸಮಯವನ್ನು ಅವರು ಹಳ್ಳಿಗಳಲ್ಲೇ ಕಳೆಯುತ್ತಾರೆ. ಬಸ್, ಲಾರಿ, ಜೀಪು, ಸೈಕಲ್ ಇದಾವುದೂ ಇಲ್ಲದಿದ್ದರೆ ನಡೆದುಕೊಂಡೇ ಹಳ್ಳಿಗಳನ್ನು ಸಂಚರಿಸುತ್ತಾರೆ. ರೈತರನ್ನು ನೇರವಾಗಿ ಭೇಟಿಮಾಡಿ ಅವರೊಂದಿಗೆ ಮಾತಿಗಿಳಿಯುತ್ತಾರೆ. ರೈತರ ಹೊಲಗಳಿಗೆ ಹೋಗಿ ಪರೀಕ್ಷಿಸುತ್ತಾರೆ. ಸಮಸ್ಯೆಯ ಮೂಲ ಎಲ್ಲಿದೆ ಎಂದು ಹುಡುಕುತ್ತಾರೆ. ಪತ್ರಕರ್ತರೆಂದರೆ ಚುನಾವಣಾ ಸಂದರ್ಭದಲ್ಲಿ ಮಾತ್ರ ಹಳ್ಳಿಗಳಿಗೆ ಭೇಟಿ ನೀಡುವರು ಎನ್ನುವ ಅಪವಾದವನ್ನು ಪಿ. ಸಾಯಿನಾಥ ತಮ್ಮ ಹಳ್ಳಿಗಳ ಸುತ್ತಾಟ ಮತ್ತು ಅಧ್ಯಯನದಿಂದ ಸುಳ್ಳಾಗಿಸಿರುವರು. ಪ್ರಾದೇಶಿಕ ಭಾಷೆಯ ಪತ್ರಕರ್ತರೇ ಹಳ್ಳಿಗಳಿಗೆ ಹೋಗಲು ಹಿಂದೇಟು ಹಾಕುತ್ತಿರುವಾಗ ಇಂಗ್ಲಿಷ್ ಪತ್ರಕರ್ತರೋರ್ವರು ಹೀಗೆ ಹಳ್ಳಿಹಳ್ಳಿಗಳನ್ನು ಸುತ್ತುತ್ತಿರುವುದು ನಿಜಕ್ಕೂ ಅಚ್ಚರಿಯ ಸಂಗತಿಗಳಲ್ಲೊಂದು. ಹೆಚ್ಚಿನ ಪತ್ರಕರ್ತರೆಲ್ಲ ರಾಜಕೀಯ, ಸಿನಿಮಾ, ಕ್ರೀಡೆ, ಕ್ರೈಮ್ ಈ ರೋಚಕ ಮತ್ತು ವರ್ಣರಂಜಿತ ಸುದ್ದಿಗಳ ಸುತ್ತ ಸುತ್ತುತ್ತಿರುವಾಗ ಪಿ. ಸಾಯಿನಾಥ ಆ ಎಲ್ಲ ರೋಚಕ ಸುದ್ದಿಗಳಿಗೆ ಬೆನ್ನುಮಾಡಿ ಹಳ್ಳಿಗಳತ್ತ ಮುಖಮಾಡುತ್ತಾರೆ. ೧೯೯೭-೨೦೦೫ ರ ಈ ೯ ವರ್ಷಗಳ ಅವಧಿಯಲ್ಲಿ ಭಾರತದಲ್ಲಿ ಒಂದೂವರೆ ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡ ಅಧಿಕೃತ ಅಂಕಿಅಂಶಗಳನ್ನು ತಮ್ಮ ವರದಿಯ ಮೂಲಕ ಸರ್ಕಾರದೆದುರು ಇಟ್ಟು ಅದಕ್ಕೆ ಕಾರಣ ಕೇಳುತ್ತಾರೆ. ಈ ಅವಧಿಯಲ್ಲಿ ಭಾರತದಲ್ಲಿ ಪ್ರತಿ ಅರ್ಧಗಂಟೆಗೊಬ್ಬ ರೈತ ಆತ್ಮಹತ್ಯೆ ಮಾಡಿಕೊಂಡಿರುವನೆಂಬ ಸಾಯಿನಾಥರ ವರದಿ ನಮ್ಮನ್ನು ಬೆಚ್ಚಿ ಬಿಳಿಸುತ್ತದೆ. ಇಂಡಿಯನ್ ಪ್ರಿಮಿಯರ್ ಲೀಗ್ ಕ್ರಿಕೆಟ್ ಪಂದ್ಯಗಳ ಮನೋರಂಜನಾ ತೆರಿಗೆಯ ಕೋಟ್ಯಾಂತರ ರೂಪಾಯಿಗಳನ್ನು ಮನ್ನಾ ಮಾಡುವ ಸರ್ಕಾರ ರೈತರ ಸಾಲ ಮನ್ನಾ ಮಾಡದೆ ವಂಚಿಸುತ್ತಿದೆ ಏಕೆ ಎಂದು ಪ್ರಶ್ನಿಸುತ್ತಾರೆ.
ದೇಶದ ಜಲ ಸಂಪನ್ಮೂಲ ಅದು ಹೇಗೆ ದುರ್ಬಳಕೆಯಾಗುತ್ತಿದೆ ಎನ್ನುವುದರ ಮೇಲೂ ಸಾಯಿನಾಥರ ವರದಿಗಳು ಬೆಳಕು ಚೆಲ್ಲುತ್ತವೆ. ಮುಂಬೈನ ಕೊಳೆಗೇರಿಗಳು ಮತ್ತು ಚಾಲ್ ಗಳಲ್ಲಿ ವಾಸಿಸುವ ಅಸಂಖ್ಯಾತ ಮಹಿಳೆಯರು ಕೇವಲ ೨೦ ಲೀಟರ್ ನೀರಿಗಾಗಿ ಗಂಟೆಗಟ್ಟಲೇ ಸರತಿಯಲ್ಲಿ ಕಾಯುತ್ತಿರುವ ಇದೇ ಸಮಯದಲ್ಲಿ ಮುಂಬೈ ಸುತ್ತಮುತ್ತಲಿನ ಖಾಸಗಿ ಮನೋರಂಜನಾ ಪಾರ್ಕ್ ಗಳು ಪ್ರತಿನಿತ್ಯ ೫೦ ಶತಕೋಟಿ ನೀರನ್ನು ಬಳಸುತ್ತಿವೆ ಎಂದು ಬರೆದು ಸರ್ಕಾರದ ಕಣ್ಣು ತೆರೆಸುತ್ತಾರೆ. ಹತ್ತು ದಿನಗಳಿಗೊಮ್ಮೆ ಟ್ಯಾಂಕರ್ ಮೂಲಕ ನೀರನ್ನು ಪೂರೈಸುತ್ತಿರುವ ಅನೇಕ ಹಳ್ಳಿಗಳ ಪಕ್ಕದಲ್ಲೇ ದಿನಕ್ಕೆ ಹತ್ತಾರು ಲಕ್ಷ ಲೀಟರ್ ನೀರನ್ನು ವ್ಯರ್ಥಗೊಳಿಸುತ್ತಿರುವ ಫನ್ ಅಂಡ್ ಫುಡ್ ವಿಲೇಜ್ ಗಳಿವೆ ಎನ್ನುವ ವಿಪರ್ಯಾಸವನ್ನು ಸಾಯಿನಾಥ ಸಾರ್ವಜನಿಕರ ಗಮನಕ್ಕೆ ತರುತ್ತಾರೆ.
ಇನ್ನೊಂದೆಡೆ ರೈತರ ಊಟ ಖೈದಿಗಳಿಗಿಂತಲೂ ಕಳಪೆಯಾಗಿದೆ ಎಂದು ಬರೆಯುವ ಸಾಯಿನಾಥ ಸರ್ಕಾರದ ವೈಫಲ್ಯವನ್ನು ಬಿಚ್ಚಿಡುತ್ತಾರೆ. ಮಂಡ್ಯ ಜಿಲ್ಲೆಯ ಹುಲುಗನ ಹಳ್ಳಿಯ ಜಯಲಕ್ಷ್ಮಮ್ಮ ಒಬ್ಬ ರೈತ ವಿಧವೆ. ರೈತನಾಗಿದ್ದ ಆಕೆಯ ಗಂಡ ೨೦೦೩ ರಲ್ಲಿ ಆತ್ಮಹತ್ಯೆ ಮಾಡಿಕೊಂಡ ಮೇಲೆ ಆಕೆಗೆ ಪ್ರತಿತಿಂಗಳು ೪ ಕೆ ಜಿ ಅಕ್ಕಿ ಸಬ್ಸಿಡಿ ದರದಲ್ಲಿ ಸರ್ಕಾರದಿಂದ ಸಿಗುತ್ತಿದೆ. ಆಕೆ ಪ್ರತಿನಿತ್ಯ ಮೂರು ಹೊತ್ತು ಊಟ ಮಾಡುತ್ತಾಳೆಂದರೆ ಪ್ರತಿಹೊತ್ತಿನ ಆಹಾರ ಕೇವಲ ೪೫ ಗ್ರಾಂ ಅನ್ನ ಮಾತ್ರ. ಅದೇ ಶಿಕ್ಷೆಗೆ ಒಳಗಾಗಿರುವ ಒಬ್ಬ ಖೈದಿಯು ಒಂದು ಹೊತ್ತಿನ ಊಟದಲ್ಲಿ ೭೧೦ ಗ್ರಾಂ ಅನ್ನ ಪಡೆಯುತ್ತಾನೆ. ಅಂದರೆ ರೈತರ ಊಟ ಖೈದಿಗಳ ಊಟಕ್ಕಿಂತಲೂ ಕಳಪೆಯಾಗಿದೆ ಎನ್ನುವ ಸತ್ಯ ಓದುಗರ ಮನಸ್ಸನ್ನು ಕಲಕುತ್ತದೆ. ಆತ್ಮಹತ್ಯೆಗೆ ಯತ್ನಿಸಿದ ರೈತನೋರ್ವನನ್ನು ಗೆಳೆಯರು ಸಕಾಲದಲ್ಲಿ ಆಸ್ಪತ್ರೆಗೆ ಸೇರಿಸಿ ಅವನ ಜೀವ ಉಳಿಸುತ್ತಾರೆ. ಬದುಕುಳಿದ ರೈತ ನೆರವಾದ ಗೆಳೆಯರನ್ನೇ ಬಯ್ಯುತ್ತಾನೆ. ಕಾರಣವಿಷ್ಟೇ ಒಂದೂವರೆ ;ಲಕ್ಷ ಸಾಲ ತೀರಿಸಲು ಆಗುವುದಿಲ್ಲವೆಂದು ಆತ ಆತ್ಮಹತ್ಯೆಗೆ ಪ್ರಯತ್ನಿಸಿದ್ದ. ಈಗ ಬದುಕುಳಿಯಲು ೪೫,೦೦೦ ರೂಪಾಯಿ ಆಸ್ಪತ್ರೆಗೆ ಖರ್ಚಾಗಿತ್ತು. ಇನ್ನೂ ಹೆಚ್ಚು ಸಾಲ ತೀರಿಸಬೇಕಲ್ಲ ಎನ್ನುವ ಆತಂಕ ಅವನದು. ಇದು ಅನಂತಪುರ ಜಿಲ್ಲೆಯ ನಲ್ಲಮಡ ಗ್ರಾಮದ ರೈತ ಕುಟುಂಬದ ಕಥೆ ಎಂದು ಸಾಯಿನಾಥ ಹೇಳುತ್ತಾರೆ.
ಕೃಷಿ ಪರಿಸ್ಥಿತಿ ಹದಗೆಟ್ಟಾಗ ರೈತರು ಮಾತ್ರವಲ್ಲ ಎಲ್ಲರ ಪರಿಸ್ಥಿತಿಯೂ ಬಿಗಡಾಯಿಸುತ್ತದೆ ಎನ್ನುತ್ತಾರೆ ಸಾಯಿನಾಥ. ಅದಕ್ಕೆ ನಲಗೊಂಡದ ಬಡಗಿ ರಾಮಾಚಾರಿಯ ಉದಾಹರಣೆ ನೀಡುತ್ತಾರೆ. ರಾಮಾಚಾರಿ ರೈತನಲ್ಲ ಆದರೆ ಅವನ ಬದುಕು ನಲಗೊಂಡದ ಹಳ್ಳಿಯಲ್ಲಿ ಕೃಷಿ ಹೇಗಿದೆ ಎನ್ನುವುದರ ಮೇಲೆ ನಿಂತಿತ್ತು. ಕಳೆದ ಮೂರು ವರ್ಷಗಳಲ್ಲಿ ನೇಗಿಲನ್ನಾಗಲಿ, ಕೊಡಲಿಯ ಅಥವಾ ಪಿಕಾಸಿಯ ಹಿಡಿಯನ್ನಾಗಲಿ ಮಾಡಿಸಲು ಯಾರೂ ಬರಲಿಲ್ಲ. ಪರಿಣಾಮವಾಗಿ ರಾಮಾಚಾರಿ ಕೆಲಸವಿಲ್ಲದೆ ತೊಂದರೆಗೆ ಸಿಲುಕಿದ. ತೊಂದರೆ ಹೆಚ್ಚಾಗಿ ಅವನು ಒಂದು ದಿನ ಹಸಿವಿನಿಂದ ಸತ್ತು ಹೋದ. ಅನೇಕ ತಲೆಮಾರುಗಳಿಂದ ಕೃಷಿಯೊಂದಿಗೆ ಬೆಸೆದುಕೊಂಡ ವೃತ್ತಿಗಳೆಲ್ಲ ಈಗ ತೀವ್ರ ಸಂಕಷ್ಟಕ್ಕೆ ಒಳಗಾಗಿವೆ ಎನ್ನುವ ಸಂಗತಿ ಆತಂಕವನ್ನುಂಟು ಮಾಡುತ್ತದೆ.
ಹೀಗೆ ಸಾಯಿನಾಥರ ವರದಿಗಳನ್ನು ಓದುತ್ತ ಹೋದಂತೆ ಅವರೊಳಗಿನ ಪ್ರಾಮಾಣಿಕ ಮತ್ತು ರೈತಪರ ಕಾಳಜಿಯಿರುವ ಲೇಖಕ ನಮ್ಮೆದುರು ನಿಲ್ಲುತ್ತಾನೆ. ನಿಜಕ್ಕೂ ರೈತರ ಸಮಸ್ಯೆಗಳಿಗೆ ಮುಖಾಮುಖಿಯಾಗಿ ನಿಲ್ಲುವ ಪತ್ರಕರ್ತನ ಅವಶ್ಯಕತೆಯಿತ್ತು. ರೈತರ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿ ಆ ಮೂಲಕ ಸರ್ಕಾರವೊಂದನ್ನು ಜಾಗೃತ ಸ್ಥಿತಿಗೆ ತಂದು ನಿಲ್ಲಿಸುವ ತುರ್ತು ಪತ್ರಿಕೋದ್ಯಮಕ್ಕೆ ಬೇಕಿತ್ತು. ಇಂಥದ್ದೊಂದು ಅಗತ್ಯದ ನಡುವೆ ಪಿ.ಸಾಯಿನಾಥರ ಆಗಮನ ಅದೊಂದು ಆಶಾಕಿರಣದಂತೆ ಗೋಚರಿಸುತ್ತದೆ. ರೈತರ ಸಮಸ್ಯೆಗಳೂ ಪತ್ರಿಕೆಗಳ ಪುಟಗಳಲ್ಲಿ ಜಾಗಪಡೆಯತೊಡಗುತ್ತವೆ. ಸರ್ಕಾರ ಒಂದಿಷ್ಟು ಎಚ್ಚೆತ್ತುಕೊಳ್ಳುತ್ತದೆ. ಮುಂದೆ ಆಗಬೇಕಿರುವ ಕೆಲಸ ಪಿ.ಸಾಯಿನಾಥರ ವಾರಸುದಾರರ ಸಂಖ್ಯೆ ಹೆಚ್ಚಬೇಕು.
No comments:
Post a Comment