Monday, February 2, 2015

ಅಜಾತಶತ್ರುವಿಗೆ ಅತ್ಯುನ್ನತ ಗೌರವ




          ಅಟಲ್ ಬಿಹಾರಿ ವಾಜಪೇಯಿ ಅವರಿಗೀಗ ೯೦ ವರ್ಷ ವಯಸ್ಸು. ಅವರು ರಾಜಕಾರಣ ಮತ್ತು ಸಾರ್ವಜನಿಕ ಬದುಕಿನಿಂದ ನಿವೃತ್ತರಾಗಿ ಹತ್ತಿರ ಹತ್ತಿರ ಹತ್ತು ವರ್ಷಗಳು ಕಳೆದು ಹೋಗಿವೆ. ಈ ಹತ್ತು ವರ್ಷಗಳ ಅವಧಿಯಲ್ಲಿ ಭಾರತದ ರಾಜಕಾರಣದಲ್ಲಿ ಅನೇಕ ಬದಲಾವಣೆಗಳಾಗಿವೆ. ಕಳೆದ ಹತ್ತು ವರ್ಷಗಳ ರಾಷ್ಟ್ರದ ರಾಜಕಾರಣದಲ್ಲಿ ಕಾಣಿಸಿಕೊಂಡ ಭ್ರಷ್ಟಾಚಾರ, ಅಪ್ರಾಮಾಣಿಕತೆ, ನಿರಂಕುಶ ಪ್ರಭುತ್ವ, ಅಸಮರ್ಥ ಆಡಳಿತ ಸಾರ್ವಜನಿಕರಲ್ಲಿ ದಿಗಿಲು ಮತ್ತು ಆತಂಕ ಮೂಡಿಸಿವೆ. ರಾಜಕೀಯದ ಪಡಸಾಲೆಯಲ್ಲಿ ಪ್ರಾಮಾಣಿಕತೆ, ದಕ್ಷತೆ, ಮೃದುತ್ವ, ಸೃಜನಶೀಲತೆ, ವೈಚಾರಿಕತೆ, ಸರಳತೆ, ಸಜ್ಜನತೆ ನೋಡಲು ಸಿಗುತ್ತಿಲ್ಲ. ರಾಜಕಾರಣ ಎನ್ನುವುದು ಸೇಡು, ದ್ವೇಷ, ಪ್ರತಿಕಾರ, ಜಿದ್ದಾಜಿದ್ದಿನ ಕಣವಾಗಿ ರೂಪಾಂತರಗೊಂಡಿದೆ. ಇವತ್ತಿನ ಈ ರಾಜಕಾರಣ ನಮ್ಮನ್ನೆಲ್ಲ ಭ್ರಮನಿರಸನ ಗೊಳಿಸುತ್ತ ಅದು ವಿರೂಪ ಮತ್ತು ವಿಕಾರಗೊಳ್ಳುತ್ತಿರುವ ಈ ಸಂದರ್ಭ ರಾಜಕಾರಣಕ್ಕೊಂದು ಹೊಸ ವ್ಯಾಖ್ಯಾನ ನೀಡಿದ ರಾಷ್ಟ್ರ ಕಂಡ ಅಪರೂಪದ ರಾಜಕಾರಣಿ ಅಟಲ್ ಬಿಹಾರಿ ವಾಜಪೇಯಿ ಒಂದು ದಶಕದ ನಂತರ ಮತ್ತೊಮ್ಮೆ ನಮಗೆ ನೆನಪಾಗುತ್ತಿರುವರು. ಬದುಕಿನ ಮುಸ್ಸಂಜೆಯಲ್ಲಿರುವ ತೊಂಬತ್ತರ ಇಳಿವಯಸ್ಸಿನ ಕವಿಮನಸ್ಸಿನ ರಾಜಕಾರಣದ ಈ ಅಜಾತುಶತ್ರುವಿಗೆ ಭಾರತ ಸರ್ಕಾರ ಅತ್ಯುನ್ನತ ಗೌರವ ಎಂದೇ ಪರಿಗಣಿತವಾದ 'ಭಾರತ ರತ್ನ' ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಎಂದೋ ದೊರೆಯಬೇಕಿದ್ದ ಗೌರವ ಬಹಳ ತಡವಾಗಿ ಸಂದಿದೆ. ದೊರೆತ ಗೌರವಕ್ಕೆ ಸ್ಪಂದಿಸುವ ಮತ್ತು ಪ್ರತಿಕ್ರಿಯಿಸುವ ಸ್ಥಿತಿಯಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರಿಲ್ಲ. ಸುದೀರ್ಘ ಅನಾರೋಗ್ಯದಿಂದ ಹಾಸಿಗೆ ಹಿಡಿದಿರುವ ವಾಜಪೇಯಿ ಅವರ ಶರೀರ ಹತ್ತಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆಗಳಿಂದ ಬಳಲಿದೆ. ಭಾರತದ ದೌರ್ಭಾಗ್ಯವೇ ಅಂಥದ್ದು ಏಕೆಂದರೆ ಇಲ್ಲಿ ಸಾಧಕರನ್ನು ಯಾವ ರಾಗ ದ್ವೇಷಗಳಿಗೂ ಒಳಗಾಗದೆ, ಯಾವ ಜಾತಿ-ಧರ್ಮಗಳಿಗೂ ಸೀಮಿತಗೊಳಿಸಿದೆ ನೋಡುವ ವಿಶಾಲ ಮನಸ್ಸಿನ ಕೊರತೆ ಇದೆ. ಅದಕ್ಕೆಂದೇ ದೇಶದ ಈ ಮುತ್ಸದ್ದಿ ರಾಜಕಾರಣಿಗೆ ದೇಶದ ಅತ್ಯುನ್ನತ ಗೌರವ  ಸಿಗಲು ಅವರದೇ ಪಕ್ಷ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವವರೆಗೂ ಕಾಯಬೇಕಾಯಿತು. 

           ರಾಜಕಾರಣವನ್ನು ವಿಶಾಲ ಅರ್ಥದಲ್ಲಿ ನೋಡಿದ ಮತ್ತು ಆ ನೋಟವನ್ನು ಕ್ರಿಯೆಯಾಗಿಸಿಕೊಂಡ ಅಟಲ್ ಬಿಹಾರಿ ವಾಜಪೇಯಿ ಅವರು ಹುಟ್ಟಿದ್ದು ಮಧ್ಯಪ್ರದೇಶದ  ಗ್ವಾಲಿಯರ್ ನಲ್ಲಿ ೧೯೨೪ ರ ಡಿಸೆಂಬರ್ ೨೫ ರಂದು ಅಟಲ್ ಬಿಹಾರಿ ಅವರ ತಂದೆ ಮೂಲತ: ಉತ್ತರ ಪ್ರದೇಶದ ಬಟೀಶ್ವರದವರು. ವೃತ್ತಿ ನಿಮಿತ್ಯ ವಲಸೆ ಬಂದು ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ನೆಲೆ  ನಿಂತ ಕೃಷ್ಣ ಬಿಹಾರಿ  ವಾಜಪೇಯಿ ಅವರಿಗೆ ನಾಲ್ಕು ಗಂಡು ಮತ್ತು ಮೂವರು ಹೆಣ್ಣು ಮಕ್ಕಳು. ತಾತನ ಅಗಾಧ   ಪಾಂಡಿತ್ಯ ಮತ್ತು ಅವರಲ್ಲಿನ ಸಂಸ್ಕಾರ ಬಾಲ್ಯದಲ್ಲೇ ಅಟಲ್ ಬಿಹಾರಿ ವಾಜಪೇಯಿ ಅವರ ಮೇಲೆ ಗಾಢ ಪ್ರಭಾವ ಬೀರಿದವು. ಮನೆಯಲ್ಲಿ ಪಠಿಸುತ್ತಿದ್ದ ರಾಮಾಯಣ ಮತ್ತು ಮಹಾಭಾರತ ಗ್ರಂಥಗಳು ಬದುಕನ್ನು ಪ್ರಾಮಾಣಿಕತೆಯ ನೆಲೆಯಲ್ಲಿ ರೂಪಿಸಿಕೊಳ್ಳಲು ನೆರವಾದವು.  

             ವಿದ್ಯಾರ್ಥಿ ದೆಸೆಯಲ್ಲಿ ಹಿಂದಿ, ಇಂಗ್ಲಿಷ್, ಸಂಸ್ಕೃತ ಸಾಹಿತ್ಯವನ್ನು ಆಳವಾಗಿ ಅಧ್ಯಯನ ಮಾಡಿದ ವಾಜಪೇಯಿ ಅವರು ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಮತ್ತು ಕಾನೂನು ಪದವಿಯನ್ನು ಪಡೆದರು. ಅವರು ವಿದ್ಯಾರ್ಥಿಯಾಗಿದ್ದ ಸಂದರ್ಭ ಭಾರತದ ಸ್ವಾತಂತ್ರ್ಯ ಚಳುವಳಿ ಅತ್ಯಂತ ಪ್ರಖರವಾಗಿದ್ದ ದಿನಗಳವು. ಗಾಂಧೀಜಿ  ಕರೆಗೆ ಓಗೊಟ್ಟು ಚಳುವಳಿಗೆ  ಧುಮುಕಿದ ವಾಜಪೇಯಿ ಅವರು ೧೯೪೨ ರಲ್ಲಿ ಸೆರೆಮನೆ ವಾಸವನ್ನು ಅನುಭವಿಸ ಬೇಕಾಯಿತು. ಬಾಲ್ಯದಿಂದಲೇ ರಾಷ್ಟ್ರ ಭಕ್ತಿಯನ್ನು ಮೈಗೂಡಿಸಿಕೊಂಡಿದ್ದ ಪರಿಣಾಮ ತಮ್ಮ ಬದುಕನ್ನೇ ರಾಷ್ಟ್ರ ಸೇವೆಗಾಗಿ ಮುಡುಪಾಗಿಟ್ಟರು. ತಾರುಣ್ಯದ ದಿನಗಳಲ್ಲೇ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು  ಸೇರಿ ವೈಯಕ್ತಿಕ ಬದುಕಿನ ಮಹತ್ವಾಕಾಂಕ್ಷೆಯನ್ನೆಲ್ಲ ಬದಿಗೆ ಸರಿಸಿ ರಾಷ್ಟ್ರದ ಪ್ರಗತಿಗಾಗಿ ತಮ್ಮ ಬದುಕನ್ನೇ ಧಾರೆ ಎರೆದರು.      

            ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರತಿ ಚಟುವಟಿಕೆಯಲ್ಲಿ ವಾಜಪೇಯಿ ಅವರದು ಸಕ್ರಿಯವಾದ ಪಾತ್ರ. ಭಾರತ ಸ್ವಾತಂತ್ರ್ಯಾ ನಂತರ ಅಖಂಡ ಹಿಂದೂಸ್ತಾನ ಒಡೆದು ಇಬ್ಭಾಗವಾಗಿತ್ತು. ಹಿಂದೂ ಮುಸ್ಲಿಂ ಸಂಘರ್ಷದಿಂದ ದೇಶದ ಏಕತೆಗೆ ಗಂಡಾಂತರ ಬಂದೊದಗಿತ್ತು. ಇಂಥ ಪ್ರಕ್ಷುಬ್ಧ ಪರಿಸ್ಥಿತಿಯಲ್ಲಿ ರಾಷ್ಟ್ರ ಧರ್ಮ ಪತ್ರಿಕೆಯ ಸಂಪಾದಕರಾಗಿ ಅಟಲ್ ಬಿಹಾರಿ ವಾಜಪೇಯಿ ಮೌಲಿಕ ಲೇಖನಗಳನ್ನು ಪ್ರಕಟಿಸಿ ಆ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸಿದರು. ಪಾಂಚಜನ್ಯ, ಕರ್ಮಯೋಗಿ, ಸ್ವದೇಶ, ವೀರ ಅರ್ಜುನ ಪತ್ರಿಕೆಗಳು ಸಹ ಅವರ ಸಂಪಾದಕತ್ವದಲ್ಲಿ ರಾಷ್ಟ್ರ ಪ್ರೇಮವನ್ನು ಜಾಗೃತಗೊಳಿಸುವ ಪತ್ರಿಕೆಗಳಾಗಿ ರೂಪುಗೊಂಡವು. ಪತ್ರಿಕೋದ್ಯಮದಲ್ಲಿ ತಮ್ಮ ಛಾಪು ಮೂಡಿಸುತ್ತಿದ್ದ ಸಂದರ್ಭದಲ್ಲೇ ಅಟಲ್ ಬಿಹಾರಿ ವಾಜಪೇಯಿ ಅವರ ಬದುಕು ಬೇರೊಂದು ಮಗ್ಗಲಿಗೆ ಹೊರಳಿಕೊಂಡಿತು. 


ರಾಜಕೀಯ ಪ್ರವೇಶ 


             ಭಾರತದ ರಾಜಕಾರಣದ ಏನೆಲ್ಲಾ ದೌರ್ಭಾಗ್ಯಗಳ ನಡುವೆಯೂ ಇಲ್ಲಿ ವಾಕ್ ಮತ್ತು ಪ್ರತಿರೋಧದ ಸ್ವಾತಂತ್ರ್ಯ ನೀಡಿರುವುದು ಅದು ಪ್ರಜಾಪ್ರಭುತ್ವದ ಹೆಗ್ಗಳಿಕೆಯೂ ಹೌದು. ಭಾರತದ ಸ್ವಾತಂತ್ರ್ಯದ ಪೂರ್ವದಿಂದಲೂ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನೊಂದಿಗೆ ಭಿನ್ನಾಭಿಪ್ರಾಯದ ನೆಲೆಯಲ್ಲೇ ಸಂಘರ್ಷಣೆಗಿಳಿಯುತ್ತಿದ್ದ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸ್ವಾತಂತ್ರ್ಯಾ ನಂತರವೂ ತನ್ನ ವೈಚಾರಿಕ ಸಂಘರ್ಷವನ್ನು ಮುಂದುವರೆಸಿತು. ತನ್ನ ಹೋರಾಟವನ್ನು ಮತ್ತಷ್ಟು ಪ್ರಖರಗೊಳಿಸಲು ಸಂಘಕ್ಕೆ ರಾಜಕೀಯ ಅಸ್ತಿತ್ವದ ಅನಿವಾರ್ಯತೆ ಎದುರಾಯಿತು. ಅಂಥದ್ದೊಂದು ಅನಿವಾರ್ಯತೆಯ ಪರಿಣಾಮ ೧೯೫೧ ರಲ್ಲಿ ಭಾರತಿಯ ಜನಸಂಘ ಉದಯವಾಯಿತು. ಜನಸಂಘದ ಉದಯದಿಂದ ಅದರ ಜೊತೆಗಿದ್ದ ವಾಜಪೇಯಿ ಅದೇ ಪಕ್ಷವನ್ನು ಅಧಿಕಾರದ ಗದ್ದುಗೆಗೇರಿಸುವವರೆಗೂ ವಿಶ್ರಮಿಸಲಿಲ್ಲ. ೧೯೫೫ ರಲ್ಲಿ ಲೋಕಸಭೆಗೆ ನಡೆದ ಉಪಚುನಾವಣೆಯಲ್ಲಿ ಲಖನೌ ಕ್ಷೇತ್ರದಿಂದ ಸ್ಪರ್ಧಿಸಿ ಪರಾಭವಗೊಂಡ ವಾಜಪೇಯಿ ೧೯೫೭ ರಲ್ಲಿ ನಡೆದ ಎರಡನೇ ಲೋಕಸಭಾ ಚುನಾವಣೆಯಲ್ಲಿ ಬಲರಾಮಪುರ ಕ್ಷೇತ್ರದಿಂದ ಸ್ಪರ್ಧಿಸಿ ಲೋಕಸಭೆಯನ್ನು ಪ್ರವೇಶಿಸಿದರು. ಪ್ರಥಮ ಅವಧಿಯಲ್ಲೇ ತಮ್ಮ ವಿಶ್ಲೇಷಣಾತ್ಮಕ ಮತ್ತು ತರ್ಕಪೂರ್ಣ ವಿಚಾರ ಹಾಗೂ ಮಾತಿನ ಓಘದಿಂದ ಪ್ರಧಾನಿ ನೆಹರು ಅವರ ಗಮನ ಸೆಳೆದು ಅವರಿಂದ 'ಮುಂದೊಂದು ದಿನ ದೇಶದ ಪ್ರಧಾನಿಯಾಗುವ ಎಲ್ಲ ಅರ್ಹತೆಗಳು ಈ ಯುವಕನಿಗಿವೆ' ಎಂದು ಹೊಗಳಿಸಿಕೊಂಡರು. 

          ಇವತ್ತಿನ ಅನೇಕ ತರುಣ ಪೀಳಿಗೆಗೆ ಅಟಲ್ ಬಿಹಾರಿ ವಾಜಪೇಯಿ ಅವರು ಹಿಂದೊಮ್ಮೆ ವಿದೇಶಾಂಗ ಸಚಿವರಾಗಿದ್ದರು ಎನ್ನುವ ಸಂಗತಿ ಗೊತ್ತಿರಲಿಕ್ಕಿಲ್ಲ. ೧೯೭೫ ರ ತುರ್ತು ಪರಿಸ್ಥಿತಿ ಭಾರತದ ರಾಜಕೀಯದಲ್ಲಿ ಮಹತ್ವಪೂರ್ಣ ಬದಲಾವಣೆಗೆ ಕಾರಣವಾಯಿತು. ತುರ್ತುಪರಿಸ್ಥಿತಿಯ ನಂತರ ೧೯೭೭ ರಲ್ಲಿ ನಡೆದ ಚುನಾವಣೆಯಲ್ಲಿ ಮೂರು ದಶಕಗಳ ಕಾಲ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷ ಪರಾಭವಗೊಂಡು ಪ್ರಥಮ ಬಾರಿಗೆ ಕೇಂದ್ರದಲ್ಲಿ ಕಾಂಗ್ರೆಸ್ಸೇತರ ಸರ್ಕಾರ ಅಸ್ತಿತ್ವಕ್ಕೆ ಬಂದಿತು. ಅಂದಿನ ಆ ಸರ್ಕಾರದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಿದೇಶಾಂಗ ಸಚಿವರಾಗಿ ಪದಗ್ರಹಣ ಮಾಡಿದರು. 

            ವಾಜಪೇಯಿ ಅವರು ವಿದೇಶಾಂಗ ಸಚಿವರಾಗಿದ್ದ ಆ  ಅವಧಿ ಭಾರತದ ರಾಜಕೀಯ ಇತಿಹಾಸದಲ್ಲಿ ಸುವರ್ಣ ಯುಗವೆಂದೇ ಬನ್ನಿಸಲ್ಪಟ್ಟಿದೆ. ವಿದೇಶಾಂಗ ಸಚಿವರಾಗಿ ಅವರು ತಳೆದ ನಿಲುವು ಮತ್ತು ಇತರ ರಾಷ್ಟ್ರಗಳೊಂದಿಗಿನ ಸಂಬಂಧ ಸುಧಾರಣೆಗಾಗಿ ಮಾಡಿದ ಪ್ರಯತ್ನ ತುಂಬ ಅಪರೂಪದ್ದು. ನೆರೆಯ ರಾಷ್ಟ್ರಗಳಾದ ಚೀನಾ, ನೇಪಾಳ, ಪಾಕಿಸ್ತಾನದೊಂದಿಗಿನ ಸಂಬಂಧವನ್ನು ಸುಧಾರಿಸುವ ನಿಟ್ಟಿನಲ್ಲಿ ತಮ್ಮ ರಾಜತಾಂತ್ರಿಕ ನೈಪುಣ್ಯವನ್ನು ಮೆರೆದ ವಾಜಪೇಯಿ ಹಲವಾರು ದೀರ್ಘಕಾಲಿಕ ಸಮಸ್ಯೆಗಳು    ಇತ್ಯರ್ಥಗೊಳ್ಳಲು ಕಾರಣರಾದರು. ವಿದೇಶಾಂಗ ಸಚಿವರಾಗಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಹಿಂದಿ ಭಾಷೆಯಲ್ಲಿ ಮಾತನಾಡಿದ ಹೆಗ್ಗಳಿಕೆ ಅವರದು. ತುರ್ತುಪರಿಸ್ಥಿತಿಯಂತಹ ಕರಾಳ  ನೆನಪಿನಿಂದ  ಭಾರತವನ್ನು  ಹೊರತರುವುದು  ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ವಿಶ್ವಾಸಾರ್ಹತೆಯನ್ನು ಎತ್ತಿ ಹಿಡಿಯುವುದು ವಿದೇಶಾಂಗ  ಸಚಿವರಾಗಿ ವಾಜಪೇಯಿ  ಅವರ  ಮುಂದೆ ಬಹುದೊಡ್ಡ ಸವಾಲುಗಳಿದ್ದವು.  ಆ ಎಲ್ಲ ಜವಾಬ್ದಾರಿಗಳನ್ನು ಅವರು ಅತ್ಯಂತ ಆತ್ಮವಿಶ್ವಾಸ ಮತ್ತು   ದಕ್ಷತೆಯಿಂದ  ನಿರ್ವಹಿಸಿದರು.     

            ವಿದೇಶಾಂಗ ಸಚಿವರಾಗಿ ಭಾರತಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಇನ್ನಷ್ಟು ಮಹತ್ವದ ಸ್ಥಾನ ಮತ್ತು ಮನ್ನಣೆ ತಂದುಕೊಡಬೇಕೆನ್ನುವ ವಾಜಪೇಯಿ ಅವರ ಹಂಬಲ ಸರ್ಕಾರದ ಪತನದ ಪರಿಣಾಮ ಇಡೇರಲಿಲ್ಲ. ಜನತಾ ಪಕ್ಷದೊಳಗಿನ ನಾಯಕರ ಅಧಿಕಾರದ ಆಸೆ ಹಾಗೂ ಒಳಜಗಳ ಪರಿಣಾಮ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ಸೇತರ ಸರ್ಕಾರ ಬಹುಬೇಗನೆ ಪತನಗೊಂಡಿತು. ಜನತಾ ಪಕ್ಷದವರ ಅಧಿಕಾರದ ಲಾಲಸೆಯಿಂದ ಬೇಸತ್ತು ಅವರೊಂದಿಗೆ ಸರ್ಕಾರ ರಚನೆಯಲ್ಲಿ ಕೈಜೋಡಿಸಿದ್ದ ಭಾರತೀಯ ಜನಸಂಘದ ಸದಸ್ಯರು ಮತ್ತೆ ತಮ್ಮ ಅಸ್ಮಿತೆಯ ಹುಡುಕಾಟದಲ್ಲಿ ತೊಡಗಿದರು. ಅಂಥದ್ದೊಂದು ಹುಡುಕಾಟದ ಪರಿಣಾಮ ೧೯೮೦ ರಲ್ಲಿ ಭಾರತೀಯ ಜನತಾ ಪಕ್ಷ ಅಸ್ತಿತ್ವಕ್ಕೆ ಬಂದು ಅಟಲ್ ಬಿಹಾರಿ ವಾಜಪೇಯಿ ಆ ಪಕ್ಷದ ಪ್ರಥಮ ಅಧ್ಯಕ್ಷರಾದರು. ೧೯೮೦ ರಲ್ಲಿ ವಾಜಪೇಯಿ ಅವರ ಸಾರಥ್ಯದಲ್ಲಿ ಚುನಾವಣೆಯನ್ನು ಎದುರಿಸಿದ ಪಕ್ಷ ೧೪ ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾದರೆ ೧೯೮೪ ರಲ್ಲಿ ಪಕ್ಷಕ್ಕೆ ದೊರೆತಿದ್ದು ಕೇವಲ ಎರಡು ಸ್ಥಾನಗಳು. ಇಂಥ ಶೋಚನಿಯ ಸ್ಥಿತಿಯಲ್ಲಿದ್ದ ಪಕ್ಷ ಮುಂದೊಂದು ದಿನ ವಾಜಪೇಯಿ ಅವರ ಹೋರಾಟ ಮತ್ತು ನಿರಂತರ ಪ್ರಯತ್ನದಿಂದ ಕೇಂದ್ರದಲ್ಲಿ ಅಧಿಕಾರದ ಗದ್ದುಗೆ ಏರಬಹುದೆನ್ನುವ ಕಲ್ಪನೆಯೇ ಯಾರಿಗೂ ಇರಲಿಲ್ಲ. ವಿಪಕ್ಷದಲ್ಲಿದ್ದುಕೊಂಡೇ ದೇಶದ ಪ್ರಗತಿಯ ಬಗ್ಗೆ ಚಿಂತಿಸಿದ, ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದಿಸಿದ, ಸರ್ಕಾರದ ಉತ್ತಮ ಕೆಲಸಗಳಿಗೆ ಬೆನ್ನುತಟ್ಟಿದ ಜೊತೆಗೆ ಕರ್ತವ್ಯ ಲೋಪವನ್ನು ಎತ್ತಿತೋರಿಸಿದ ವಾಜಪೇಯಿ ತಮ್ಮ ಸುದೀರ್ಘ ರಾಜಕೀಯ ಅನುಭವದಿಂದ ತಮ್ಮ ಪಕ್ಷವನ್ನು ೧೯೯೬ ರಲ್ಲಿ ಸರ್ಕಾರ ರಚಿಸುವ ಹಂತಕ್ಕೆ ತಂದು ನಿಲ್ಲಿಸಿದರು. 


ಪ್ರಧಾನ ಮಂತ್ರಿಯಾಗಿ ವಾಜಪೇಯಿ 


            ೧೯೯೬ ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಪ್ರಥಮ ಬಾರಿಗೆ ದೇಶದ ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಸರ್ಕಾರ ರಚನೆಗೆ ಸ್ಪಷ್ಟ ಬಹುಮತವಿಲ್ಲದಿದ್ದರೂ ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಪರಿಣಾಮ ರಾಷ್ಟ್ರಪತಿಗಳು ವಾಜಪೇಯಿ ಅವರನ್ನು ಸರ್ಕಾರ ರಚನೆಗೆ ಆಹ್ವಾನಿಸಿದರು. ಬಹುಮತದ ಕೊರತೆಯ ನಡುವೆಯೂ ವಾಜಪೇಯಿ ಪ್ರಧಾನ ಮಂತ್ರಿಯಾದರು. ಆದರೆ ವಾಜಪೇಯಿ ಮತ್ತು ಅವರ ಪಕ್ಷವನ್ನು ಅಧಿಕಾರದಿಂದ ಹೊರಗಿಡಬೇಕೆನ್ನುವ ಪೂರ್ವನಿರ್ಧಾರಿತ ಹುನ್ನಾರದಿಂದ ಯಾವ ಪಕ್ಷವೂ ಅವರನ್ನು ಬೆಂಬಲಿಸಲು ಮುಂದೆ ಬರಲಿಲ್ಲ. ವಿರೋಧ ಪಕ್ಷಗಳ ಹುನ್ನಾರದ ಮುನ್ಸೂಚನೆ ಅರಿತ ವಾಜಪೇಯಿ ಲೋಕಸಭೆಯಲ್ಲಿ ವಿಶ್ವಾಸ ಮತ ಚರ್ಚೆಗೆ ಮೊದಲೇ ರಾಷ್ಟ್ರಪತಿಗಳಿಗೆ ರಾಜಿನಾಮೆ ಸಲ್ಲಿಸಿದರು. ಆ ದಿನ ಪಾರ್ಲಿಮೆಂಟಿನಲ್ಲಿ ವಾಜಪೇಯಿ ಅವರು ಮಾಡಿದ ಭಾಷಣ ಐತಿಹಾಸಿಕ ದಾಖಲೆಯಾಗಿ ಉಳಿದಿದೆ. ಜನಾದೇಶ, ಬಹುಮತ, ಸಮ್ಮಿಶ್ರ ಸರ್ಕಾರದ ಅಗತ್ಯ, ಆಳುವ ಪಕ್ಷ ಹಾಗೂ ವಿಪಕ್ಷಗಳು ಜೊತೆಗೂಡಿ ಕೆಲಸ ಮಾಡಬೇಕಾದ ಅನಿವಾರ್ಯತೆ, ಚುನಾವಣೆಯಲ್ಲಿ ಆಗಬೇಕಾದ ಸುಧಾರಣೆ, ಪಕ್ಷಗಳನ್ನು ಒಡೆದು ಆಳುವ ಅನೈತಿಕತೆ ಹೀಗೆ ರಾಜಕಾರಣದ ವಿಶ್ಲೇಷಣಾತ್ಮಕ ಚರ್ಚೆಗಿಳಿದ ವಾಜಪೇಯಿ ಆತ್ಮಮಂಥನದ ಅಗತ್ಯವನ್ನು ಮನಗಾಣಿಸಿಕೊಟ್ಟರು. ಅಧಿಕಾರಕ್ಕೇರಿದ ಕೇವಲ ೧೩ ದಿನಗಳಲ್ಲಿ ಅವರ ಸರ್ಕಾರ ರಾಜಕಾರಣಿಗಳ ವೈಯಕ್ತಿಕ ಹಿತಾಸಕ್ತಿಗೆ ಬಲಿಯಾಗಿ ಪತನಗೊಂಡಿತು. ಅಟಲ್ ಬಿಹಾರಿ ವಾಜಪೇಯಿ ಅವರ ಮಾತಿನ ಓಘ ಮತ್ತು ನಿರ್ಧಾರಕ್ಕೆ ಅಭೂತಪೂರ್ವ ಬೆಂಬಲ ದೊರೆಯಿತು. 'ಸಂಸತ್ತಿನ ಬಲಾಬಲ ಪರೀಕ್ಷೆಯಲ್ಲಿ ವಾಜಪೇಯಿ ಸೋತಿರಬಹುದು ಆದರೆ ಮತದಾರರ ಹೃದಯ ಗೆಲ್ಲುವಲ್ಲಿ ಅವರು ಯಶಸ್ವಿಯಾಗಿರುವರು. ವಾಜಪೇಯಿ ವೈಫಲ್ಯವನ್ನೇ ಗೆಲುವನ್ನಾಗಿಸಿಕೊಂಡ ದುರಂತ ನಾಯಕ' ಎಂದು ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಲೇಖನ ಪ್ರಕಟಿಸಿತು. 'ಸಂಖ್ಯಾ ಬಲದಲ್ಲಿ ಸಮರ್ಥ ವ್ಯಕ್ತಿಯೊಬ್ಬ ವಿಫಲವಾಗಿದ್ದು ದುರ್ದೈವದ ಸಂಗತಿ' ಎಂದು ಫ್ರೀ ಪ್ರೆಸ್ ಪತ್ರಿಕೆ ಬಣ್ಣಿಸಿತು. 'ವಾಜಪೇಯಿ ಸರ್ಕಾರದ ನಿರ್ಗಮನ ಬಿಜೆಪಿಯ ಅತ್ಯುತ್ಕೃಷ್ಟ ಘಳಿಗೆ. ಜನರಿಗೆ ಈಗ ತಾವು ಎಂಥ ಧೀಮಂತ ನಾಯಕನನ್ನು ಕಳೆದುಕೊಂಡಿದ್ದೇವೆ ಎನ್ನುವ ಅರಿವಾಗಿದೆ' ಎಂದು ಅಡ್ವಾಣಿ ಪ್ರತಿಕ್ರಿಯಿಸಿದರು. 

         ೧೯೯೮ ರಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಮತ್ತೊಮ್ಮೆ ಜನಾದೇಶ ದೊರೆತು ಅಟಲ್ ಬಿಹಾರಿ ವಾಜಪೇಯಿ ಎರಡನೇ ಬಾರಿಗೆ ದೇಶದ ಪ್ರಧಾನ ಮಂತ್ರಿಯಾದರು. ದುರಾದೃಷ್ಟಕ್ಕೆ ಪ್ರಾದೇಶಿಕ ಪಕ್ಷವೊಂದರ ವೈಯಕ್ತಿಕ ಹಿತಾಸಕ್ತಿಗೆ ಬಲಿಯಾಗಿ ಸರ್ಕಾರ ಹದಿಮೂರು ತಿಂಗಳುಗಳಲ್ಲೇ ಬಹುಮತ ಕಳೆದುಕೊಂಡಿತು. ನಂತರ ೧೯೯೯ ರಲ್ಲಿ ನಡೆದ ಚುನಾವಣೆಯಲ್ಲಿ ಪಕ್ಷ   ಮತ್ತೊಮ್ಮೆ ಬಹುಮತ ಪಡೆದು ವಾಜಪೇಯಿ ಮೂರನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ಅಧಿಕಾರದ ಪೂರ್ಣಾವಧಿಯನ್ನು ಪೂರೈಸಿದರು. ಪ್ರಧಾನ ಮಂತ್ರಿಯಾಗಿ ವಾಜಪೇಯಿ ಅವರದು ಅನನ್ಯ ಸಾಧನೆ. ಪೊಖ್ರಾನ್ ಅಣ್ವಸ್ತ್ರ ಸ್ಫೋಟ, ಲಾಹೋರ್   ಶೃಂಗ ಸಭೆ, ಕಾರ್ಗಿಲ್ ಯುದ್ಧದಲ್ಲಿ ಭಾರತದ ಜಯಭೇರಿ, ರಾಷ್ಟ್ರೀಯ ಹೆದ್ದಾರಿ ಯೋಜನೆ, ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ, ಸರ್ವಶಿಕ್ಷಾ ಅಭಿಯಾನ, ಟೆಲಿಕಾಮ್- ಐಟಿ ಬೆಳವಣಿಗೆ, ಪಾಕಿಸ್ತಾನಕ್ಕೆ ಬಸ್ ಸಂಚಾರ ಈ ಬೆಳವಣಿಗೆಗಳು ವಾಜಪೇಯಿ ಅವರ ಸಾಧನೆಯ ಕೆಲವು ಮೈಲಿಗಲ್ಲುಗಳು. 


ಅಜಾತಶತ್ರು 


        ದ್ವೇಷ ಮತ್ತು ಸೇಡಿನ ರಾಜಕಾರಣ ಭಾರತದ ರಾಜಕೀಯ ಕ್ಷೇತ್ರವನ್ನು ಕಲುಷಿತಗೊಳಿಸುತ್ತಿರುವ ಈ ಘಳಿಗೆ ವಾಜಪೇಯಿ ತಮ್ಮ ನಿಷ್ಕಳಂಕ ಹಾಗೂ ದ್ವೇಷ ರಹಿತ ರಾಜಕಾರಣದಿಂದ ನಮಗೆ ಹೆಚ್ಚು ಆಪ್ತರಾಗುತ್ತಾರೆ. 'ರಾಜಕೀಯದಲ್ಲಿ ವಿರೋಧವಿದೆ ಆದರೆ ವಿರೋಧಿಗಳಿರುವುದಿಲ್ಲ' ಎನ್ನುವುದು ವಾಜಪೇಯಿ ಅವರ ಅಚಲ  ನಂಬಿಕೆ. ತಮ್ಮ ಸುದೀರ್ಘ ಐದು ದಶಕಗಳ ರಾಜಕೀಯದ ಬದುಕಿನಲ್ಲಿ ಅವರೆಂದೂ ಯಾವ ರಾಜಕೀಯ ನಾಯಕರನ್ನೂ ದ್ವೇಷಿಸಿದವರಲ್ಲ. ತಮ್ಮ ವಿರೋಧಿಗಳು ಉತ್ತಮ ಕೆಲಸ ಮಾಡಿದಾಗ ಯಾವ ಅಸೂಯೆಗೂ  ಒಳಗಾಗದೆ ಹೊಗಳಿದ ಅನೇಕ  ಉದಾಹರಣೆಗಳಿವೆ. ಉತ್ತಮ ಆಡಳಿತಗಾರರಾಗಿ ವಾಜಪೇಯಿ ಅವರಿಗೆ ಜವಾಹರಲಾಲ ನೆಹರು ಎಂದಿಗೂ ಆದರ್ಶ. ೧೯೭೧ ರಲ್ಲಿ ಪಾಕಿಸ್ತಾನದೊಂದಿಗಿನ ವಿಜಯದ ಬಳಿಕ ಇಂದಿರಾ ಗಾಂಧಿಯನ್ನು ಮುಕ್ತಕಂಠದಿಂದ ಶ್ಲಾಘಿಸಲು ಅವರು ಮರೆಯಲಿಲ್ಲ. ಪಂಡಿತ ನೆಹರು ಅವರು ಸಂಸತ್ತಿನಲ್ಲಿ ಅಳಿಸಲಾಗದ ಗುರುತನ್ನು ಬಿಟ್ಟು ಹೋಗಿರುವರು ಎಂದು ಹೊಗಳುವ ವಾಜಪೇಯಿ ಲಾಲಬಹಾದ್ದೂರ ಶಾಸ್ತ್ರಿ ನೆಹರು ಅವರ ಸಮರ್ಥ ಉತ್ತಾರಾಧಿಕಾರಿ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಮೊರಾರ್ಜಿ ದೇಸಾಯಿ ಅವರು ಕೆಲವು ಅಚಲ ನಂಬಿಕೆ, ನಿಶ್ಚಿತ ಅಭಿಪ್ರಾಯ ಹೊಂದಿದ್ದರು ಎಂದು ವಿಶ್ಲೇಷಿಸುವುದರೊಂದಿಗೆ  ರಾಜೀವ ಗಾಂಧಿ ಅವರಲ್ಲಿ  ಬೇರೆಯವರ ಅನಿಸಿಕೆಗಳನ್ನು ಅರ್ಥಮಾಡಿಕೊಳ್ಳುವ ಗುಣವಿತ್ತು ಎಂದು ಹೇಳಲು ಹಿಂಜರಿಯುವುದಿಲ್ಲ. ನರಸಿಂಹರಾವ ದೇಶದ ಆರ್ಥಿಕ ಸುಧಾರಣೆಗೆ ಹೊಸ ದಿಕ್ಕನ್ನು ತೋರಿಸುವ ಮಹಾನ್ ಧೈರ್ಯವನ್ನು ಪ್ರದರ್ಶಿಸಿದರು ಎಂದು ವಿರೋಧ  ಪಕ್ಷದಲ್ಲಿದ್ದೂ ಹೊಗಳುವ ಔದಾರ್ಯತೆಯನ್ನು ಮೆರೆಯುವರು. ರಾಜಕಾರಣದ ಸೋಲು, ಗೆಲುವು ಮತ್ತು ಅಧಿಕಾರದ ಅಸ್ಥಿರತೆಯ ನಡುವೆಯೂ ವಾಜಪೇಯಿ ತಮ್ಮ ಸಮಚಿತ್ತದ ಹಾಗೂ ವಿಶಾಲ  ಮನೋಭಾವದಿಂದ ರಾಜಕೀಯದಲ್ಲಿ ಅಜಾತಶತ್ರು ಎನ್ನುವ ಗೌರವಕ್ಕೆ ಪಾತ್ರರಾಗಿರುವರು. 


ಅವರೊಳಗಿನ ಕವಿ 


        ಅಟಲ್ ಬಿಹಾರಿ ವಾಜಪೇಯಿ ಕವಿ  ಮನಸ್ಸಿನ  ಮೃದು ಹೃದಯದ  ರಾಜಕಾರಣಿ. ರಾಜಕಾರಣದ ಅವಕಾಶವಾದಿತನದ ನಡುವೆಯೂ ಅವರು ತಮ್ಮ ವ್ಯಕ್ತಿತ್ವವನ್ನು ಹಸನಾಗಿ ರೂಪಿಸಿಕೊಂಡಿರಲು ಸಾಧ್ಯವಾಗಿದ್ದು ಅವರೊಳಗಿನ ಬರವಣಿಗೆಯ ಸೃಜನಶೀಲತೆಯಿಂದ. ಇಕ್ಕೀಸ್ ಕವಿತಾಯೇಂ, ಕ್ಯಾ ಖೋಯಾ ಕ್ಯಾ ಪಾಯಾ, ಮೇರಿ ಇಕ್ಯಾವನ್ ಕವಿತಾಯೇಂ, ಶ್ರೇಷ್ಠ ಕವಿತಾ, ನಯೀ ದಿಶಾ, ಸಂವೇದನಾ ಇವು ವಾಜಪೇಯಿ ಅವರ ಕೆಲವು ಪ್ರಮುಖ ಕವನ ಸಂಗ್ರಹಗಳು. ತುರ್ತುಪರಿಸ್ಥಿತಿಯ ಸಂದರ್ಭ ಸೆರೆವಾಸದ ಸಮಯ ತಮ್ಮ ವ್ಯಕ್ತಿತ್ವವನ್ನು ಗಟ್ಟಿಗೊಳಿಸಿಕೊಂಡಿದ್ದು ಕವಿತೆಗಳನ್ನು ಬರೆಯುವುದರ ಮೂಲಕ. ಅದಕ್ಕೆಂದೇ ರಾಜಕಾರಣಿಗಿಂತ ಅವರೊಳಗಿನ ಕವಿಯೇ ವಾಜಪೇಯಿ ಅವರಿಗೆ ಹೆಚ್ಚು ಆಪ್ತ. ಈ ಭಾವನಾಜೀವಿಯ ಕವಿತೆಗಳಲ್ಲಿ ಬದುಕಿನ ದಟ್ಟ ಅನುಭವವಿದೆ. ಅವರ  ಕೆಲವೊಂದು  ಕವಿತೆಗಳಲ್ಲಿ  ರಾಷ್ಟ್ರಪ್ರೇಮವೂ ಅನಾವರಣ ಗೊಂಡಿದೆ. ಹದಿಮೂರು ದಿನಗಳಲ್ಲೇ ಅಧಿಕಾರ ಕೈಯಿಂದ ಜಾರಿದಾಗ, ಹದಿಮೂರು ತಿಂಗಳುಗಳಲ್ಲೇ ಅಧಿಕಾರದಿಂದ  ಕೆಳಗಿಳಿದಾಗ, ಉತ್ತಮ ಆಡಳಿತದ ನಂತರವೂ ಜನಾದೇಶ ವಿರುದ್ಧವಾದಾಗ, ಸಕ್ರಿಯ ರಾಜಕಾರಣದಿಂದ ನಿವೃತ್ತರಾದಾಗ ಈ ಎಲ್ಲ ದ್ವಂದ್ವ ಹಾಗೂ ಅನಿಶ್ಚಿತತೆಯ ನಡುವೆಯೂ ಅಟಲ್ ಜೀ ಅಟಲ್ ಜೀಯಾಗಿಯೆ ತಮ್ಮ ವ್ಯಕ್ತಿತ್ವವನ್ನು ಉಳಿಸಿಕೊಳ್ಳಲು ಕಾರಣವಾಗಿರುವುದು   ಅವರೊಳಗಿನ ಬರವಣಿಗೆಯ ಶಕ್ತಿಯಿಂದ. ಬರಹಗಾರ ಕಲಾತ್ಮಕತೆಯ ಬೆನ್ನು ಹತ್ತಿದಾಗ ಆತನ ಬರವಣಿಗೆಯಲ್ಲಿ ಸತ್ಯವನ್ನು ಮರೆಮಾಚುವ ಅಪಾಯ ಎದುರಾಗುತ್ತದೆ. ಆದರೆ ವಾಜಪೇಯಿ ಅವರ ಕವಿತೆಗಳಲ್ಲಿ ಕಲಾತ್ಮಕತೆ ಮತ್ತು ಸತ್ಯ ಎರಡೂ ಒಟ್ಟಾಗಿ ಮೇಳೈಸಿವೆ. ಈ ದೃಷ್ಟಿಯಿಂದ ಅವರೊಬ್ಬ ಅಪರೂಪದ ಕವಿ. 

ಎತ್ತರ ಶಿಖರದ ಮೇಲೆ 
ಮರ ಬೆಳೆಯುವುದಿಲ್ಲ 
ಗಿಡ ಚಿಗುರುವುದಿಲ್ಲ 
ಹುಲ್ಲೂ ಹುಟ್ಟುವುದಿಲ್ಲ 

ಬರೀ ಮಂಜು 
ಗಡ್ಡೆ ಕಟ್ಟುತ್ತದೆ 
ಹೆಣದ  ಹೊದಿಕೆಯಂತೆ ಬೆಳ್ಳಗೆ 
ಹೆಣದಂತೆ ತಣ್ಣಗೆ 

ನನ್ನ ಪ್ರಭುವೇ 
ಅಂಥ ಎತ್ತರವನ್ನು 
ನನಗೆಂದೂ ನೀಡದಿರು 
ಅಂಥ ಎತ್ತರದ ಕಠೋರತೆಯನ್ನೆಂದೂ ನೀಡದಿರು 

(ವಿಶ್ವೇಶ್ವರ ಭಟ್ ಅವರು ಅನುವಾದಿಸಿದ ವಾಜಪೇಯಿ ಅವರ ಕವನದಿಂದ)


ಕೊನೆಯ ಮಾತು 


      ಅಟಲ್ ಬಿಹಾರಿ ವಾಜಪೇಯಿ ಅವರಂಥ ರಾಜಕಾರಣಿ ಭಾರತದ ರಾಜಕೀಯದಲ್ಲಿ ಅತಿ ವಿರಳ. ಉತ್ತಮ ವಾಗ್ಮಿ, ಶ್ರೇಷ್ಠ  ಸಂಸದಿಯ ಪಟು, ದಕ್ಷ ಆಡಳಿತಗಾರ, ಆರ್ದ್ರ ಮನಸ್ಸಿನ ಕವಿ, ಶುದ್ಧ ಚಾರಿತ್ರ್ಯದ ಭಾವನಾ ಜೀವಿ ಈ ಎಲ್ಲ ಗುಣಗಳ ಒಟ್ಟು ವ್ಯಕ್ತಿತ್ವವೇ ಅಟಲ್ ಬಿಹಾರಿ ವಾಜಪೇಯಿ. ರಾಜಕಾರಣ ಎನ್ನುವುದು ಕುಲದ ಇಲ್ಲವೇ ಮನೆತನದ ಕಸುಬಲ್ಲ ಎನ್ನುವುದನ್ನು ಅಕ್ಷರಶ: ಬದುಕಿ ತೋರಿಸಿದ ಪರಿಶುದ್ಧ ರಾಜಕಾರಣಿ ಇವರು. ವೈಯಕ್ತಿಕವಾಗಿ ಯಾರನ್ನೂ ದ್ವೇಷಿಸದ ಮತ್ತು ವಿರೋಧಿಸದ ತಮ್ಮ ನಿಷ್ಕಂಳಕ ವ್ಯಕ್ತಿತ್ವದಿಂದ ರಾಜಕೀಯದಲ್ಲಿ ಅಜಾತಶತ್ರು ಎನ್ನುವ ಗೌರವಕ್ಕೆ ಪಾತ್ರರಾದವರು. ಪತ್ರಕರ್ತ ವೈಎನ್ ಕೆ ಹೇಳುವಂತೆ ಒಬ್ಬ ವ್ಯಕ್ತಿ ನಿಷ್ಕ್ರಿಯನಾಗಿದ್ದಾಗಲೂ ಅಜಾತಶತ್ರುವಾಗಿರುತ್ತಾನೆ. ಆದರೆ ರಾಜಕೀಯದಲ್ಲಿ ಸಕ್ರಿಯರಾಗಿದ್ದುಕೊಂಡು ಅಜಾತಶತ್ರು ಎಂದು ಕರೆಸಿಕೊಳ್ಳುವುದು ಸಣ್ಣ ಸಾಧನೆಯಲ್ಲ. ಅದಕ್ಕೆಂದೇ ಅಟಲ್ ಬಿಹಾರಿ ವಾಜಪೇಯಿ ಭಾರತದ ರಾಜಕಾರಣದಲ್ಲಿ ಅವರೊಂದು ಆದರ್ಶ ಮತ್ತು ಮಾದರಿ. 


-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 

No comments:

Post a Comment