Tuesday, November 20, 2018

ಕಾಲಚಕ್ರ (ಕಥೆ)




         ‘ಓಂ ಕೇಶವಾಯ ಸ್ವಾಹ, ಓಂ ನಾರಾಯಣಾಯ ಸ್ವಾಹ, ಓಂ ಮಾಧವಾಯ ಸ್ವಾಹ, ಓಂ ಗೋವಿಂದಾಯ ನಮ:’ ಎಂದು ಆಚಮನ ಮಾಡಿ  ಹನ್ನೊಂದು ಸಲ ಗಾಯತ್ರಿ ಮಂತ್ರವನ್ನು ಪಠಿಸಿ ಮನೆದೇವರಾದ ವೆಂಕಟರಮಣನಿಗೆ ದೀರ್ಘದಂಡ ಪ್ರಣಾಮ ಸಲ್ಲಿಸಿ ದೇವರ ಕೋಣೆಯಿಂದ ಮಾಧವಶಾಸ್ತ್ರಿಗಳು ಹೊರಬಂದರೆಂದರೆ ಆ ದಿನದ ಮಹತ್ವದ ಕಾರ್ಯವೊಂದು ಪೂರ್ಣಗೊಂಡಂತೆ. ಮಾಧವಶಾಸ್ತ್ರಿಗಳು ದೇವರ ಕೋಣೆಯಿಂದ ಪಡಸಾಲೆಗೆ ಬರುವುದಕ್ಕೂ ಸಾವಿತ್ರಮ್ಮನವರು ಮೊಸರವಲಕ್ಕಿ ಮತ್ತು ತಂಬಿಗೆ ನೀರಿನೊಂದಿಗೆ ಅವರಿಗಾಗಿ ಕಾಯುತ್ತ ನಿಂತಿರುವುದಕ್ಕೂ ಸರಿಹೋಯಿತು. ಹೆಂಡತಿಯ ಕೈಯಿಂದ ತಾಟನ್ನು ತೆಗೆದುಕೊಂಡು ಮೊಸರವಲಕ್ಕಿ ಮೆಲ್ಲುತ್ತಿದ್ದ ಶಾಸ್ತ್ರಿಗಳು ಅದೇನೋ ವಿಚಾರ ಮಾಡುತ್ತ ಕ್ಷಣಕ್ಕೊಮ್ಮೆ ತಲಬಾಗಿಲಿನತ್ತ ನೋಡತೊಡಗಿದರು. ಗಂಡನ ಇವತ್ತಿನ ವರ್ತನೆ ಸಾವಿತ್ರಮ್ಮನವರಿಗೆ ವಿಚಿತ್ರವಾಗಿ ಕಾಣಿಸಿ ‘ಅಷ್ಟೊತ್ಲಿಂದ ನೋಡ್ಲಿಕತ್ತಿನಿ ಘಳಿಗೆಗೊಮ್ಮೆ ತಲಬಾಗಿಲ ಕಡಿ ನೋಡ್ಲಿಕತ್ತಿರಿ. ಯಾರ ದಾರಿ ಕಾಯ್ಲಿಕತ್ತಿರಿ ಅದಾದ್ರೂ ಬಿಡಿಸಿ ಹೇಳ್ರಿ’ ಎಂದ ಹೆಂಡತಿ ಮಾತಿಗೆ ಮಾಧವ ಶಾಸ್ತ್ರಿಗಳು ‘ಏನಿಲ್ಲ ಇವತ್ತು ನಸಕಿನ್ಯಾಗ ತ್ವಾಟದ ಹತ್ರ ಕೃಷ್ಣಾಚಾರ್ಯ ಭೇಟಿಯಾಗಿದ್ದ. ನಮ್ಮ ರಾಘುಗ ಒಂದು ಹೆಣ್ಣು ನೋಡ್ಯಾನಂತ. ಬೆಳಿಗ್ಗೆ ಮನಿಗಿ ಹುಡುಗಿ ಜಾತಕ ತರ್ತಿನಿ ಅಂದಿದ್ದ. ಅದಕ್ಕ ಅವನ ದಾರಿ ಕಾಯ್ಲಿಕತ್ತಿನಿ. ಇಷ್ಟರಾಗ ಬಂದ್ರೂ ಬರಬಹುದು. ಸ್ವಲ್ಪ ಚಹಾಕ್ಕ ಇಡು’ ಎಂದುತ್ತರಿಸಿದವರು ತಾಟನ್ನು ಹೆಂಡತಿಯ ಕೈಗೆ ಕೊಟ್ಟು ತಂಬಿಗೆಯನ್ನು ಎತ್ತರಿಸಿ ಅದರೊಳಗಿನ ಇಡೀ ನೀರನ್ನು ಗಂಟಲಿಗೆ ಸುರಿದು ಕೊಂಡರು.
  
      ರಾಘವ ಮಾಧವಶಾಸ್ತ್ರಿಗಳ ಏಕೈಕ ಸಂತಾನ. ಊರಿನ ಶಾಲೆಯಲ್ಲಿ ಹೈಸ್ಕೂಲು ಶಿಕ್ಷಣ ಮುಗಿಸಿದವನು ಮುಂದೆ ಕಾಲೇಜು ಸೇರಲು ಪಟ್ಟಣಕ್ಕೆ ಹೋಗುತ್ತೇನೆಂದು ಹಠ ಹಿಡಿದರೂ ತಮಗಿರುವ ಇಪ್ಪತ್ತು ಎಕರೆ ಹೊಲ ಮತ್ತು ವಂಶಪಾರಂಪರ್ಯವಾಗಿ ಬಂದ ದೇವಸ್ಥಾನದ ಪೂಜೆಯನ್ನು ನೋಡಿಕೊಂಡು ಮನೆಯಲ್ಲೇ ಇರಲಿ ಎಂದು ಶಾಸ್ತ್ರಿಗಳು ಮಗನ ಹಠಕ್ಕೆ ಸೊಪ್ಪು ಹಾಕಿರಲಿಲ್ಲ. ಶಾಸ್ತ್ರಿಗಳ ಮನೆಯಲ್ಲಿ ಶ್ರೀಮಂತಿಕೆಗೇನೂ ಕೊರತೆ ಇರಲಿಲ್ಲ. ದೇವಸ್ಥಾನದ ಆದಾಯವೇ ಸಾಕಷ್ಟಿತ್ತು. ಹೊಲದಿಂದ ಬರುವ ಆದಾಯವೂ ತಕ್ಕಮಟ್ಟಿಗಿತ್ತು. ಪೂರ್ವಿಕರಿಂದ ಬಂದ ಚಿನ್ನ, ಬೆಳ್ಳಿ ಮನೆಯಲ್ಲಿ ಸಮೃದ್ಧವಾಗಿದ್ದು ಮನೆತುಂಬ ಮಕ್ಕಳಿಲ್ಲ ಎನ್ನುವ ಕೊರತೆಯೊಂದು ಬಿಟ್ಟರೆ ಮಾಧವಶಾಸ್ತ್ರಿಗಳ ಬದುಕಿನಲ್ಲಿ ಅಂಥ ಸಮಸ್ಯೆಗಳೇನೂ ಇರಲಿಲ್ಲ. ಚಿಕ್ಕ ವಯಸ್ಸಿನಲ್ಲೇ ಗಂಡನನ್ನು ಕಳೆದುಕೊಂಡು ತವರು ಮನೆ ಸೇರಿದ ತಂಗಿ ಶಾರದಾ ಅವರಿಗೆಂದೂ ಹೊರೆ ಎನಿಸಿರಲಿಲ್ಲ. ಪೌರೋಹಿತ್ಯದ ಮನೆತನವಾದ್ದರಿಂದ ಮನೆಗೆ ಬಂದುಹೋಗುವವರ ತಿಂಡಿ, ಊಟದ ಆತಿಥ್ಯದಲ್ಲಿ ಶಾರದಾ ಅತ್ತಿಗೆ ಸಾವಿತ್ರಮ್ಮನವರಿಗೆ ನೆರವಾಗುತ್ತ ಶಾಸ್ತ್ರಿಗಳ ಮನೆಯಲ್ಲಿ ತನ್ನ ಅಸ್ತಿತ್ವದ ಅನಿವಾರ್ಯತೆಯನ್ನು ಸಾಬಿತುಪಡಿಸಿದ್ದಳು. ಹೈಸ್ಕೂಲು ಶಿಕ್ಷಣದ ನಂತರ ರಾಘವ ಉಡುಪಿಯ ಮಠದಲ್ಲಿ ಪೌರೋಹಿತ್ಯದ ಎಲ್ಲ ವಿಧಿ ವಿಧಾನಗಳನ್ನು ಕಲಿತು ಬಂದಿದ್ದ. ತಮಗೆ ವಯಸ್ಸಾಗಿದೆ ಎಂದು ಈಗೀಗ ಮಾಧವಶಾಸ್ತ್ರಿಗಳು ದೇವಸ್ಥಾನ, ಮನೆ ಮತ್ತು ಹೊಲದ ಜವಾಬ್ದಾರಿಗಳನ್ನೆಲ್ಲ ಮಗ ರಾಘವನಿಗೆ ವಹಿಸಿಕೊಟ್ಟು ರಾಮಾಯಣ, ಮಾಹಾಭಾರತಗಳನ್ನು ಓದುತ್ತ ಕಾಲ ಕಳೆಯುತ್ತಿದ್ದರು. 

       ಕೃಷ್ಣಾಚಾರ್ಯರು ಎದುಸಿರು ಬಿಡುತ್ತ ಬಂದವರೆ ಮಾಧವ ಶಾಸ್ತ್ರಿಗಳು ಕುಳಿತಿದ್ದ ಎದುರಿನ ಕುರ್ಚಿಯಲ್ಲಿ ಕೂಡುತ್ತ ಹೆಗಲ ಮೇಲಿನ ಪಂಚೆಯಿಂದ ಎದೆ ಮತ್ತು ಕಂಕುಳಲ್ಲಿನ ಬೇವರನ್ನು ಒರೆಸಿಕೊಂಡು ‘ಶಾಸ್ತ್ರಿಗಳೆ ಒಂದು ತಂಬಿಗೆ ತಣ್ಣನೆ ನೀರು ಹೊಟ್ಟೆ ಸೇರಿದರ ಜೀವ ತಂಪಾಗ್ತದ ನೋಡಿ’ ಎಂದು ಮಾಧವ ಶಾಸ್ತ್ರಿಗಳ ಮುಖ ನೋಡಿದರು. ‘ಅದಕ್ಕೆನಂತೆ ಬರೀ ನೀರೇನು ಮೊಸರವಲಕ್ಕಿನೆ ತಿನ್ನುವಿಯಂತೆ’ ಎಂದು ‘ಏ ಇವಳೇ ಕೃಷ್ಣಾಚಾರ್ಯಗ ಗಟ್ಟಿ ಮೊಸರಲ್ಲಿ ನೆನಸಿದ ಅವಲಕ್ಕಿ ತೊಗೊಂಡು ಬಾ’ ತಮ್ಮ ಹೆಂಡತಿಯನ್ನು ಕೂಗಿ ಕರೆದವರು ಆಚಾರ್ಯರು ಹೇಳಲಿದ್ದ ಸುದ್ದಿಗಾಗಿ ಕಾಯತೊಡಗಿದರು. ಮಾಧವಶಾಸ್ತ್ರಿಗಳ ಮನದಿಂಗಿತ ಅರಿತ ಕೃಷ್ಣಾಚಾರ್ಯರು ‘ಮೊದಲು ಅವಲಕ್ಕಿ ಸೇವನೆಯಾಗಲಿ ಬಂದ ವಿಷಯ ನಿಧಾನವಾಗಿ ಮಾತಾಡಿದರಾಯ್ತು ಅದಕ್ಕೇನು ಅವಸರ’ ಎಂದವರೆ ಸಾವಿತ್ರಮ್ಮನವರು ತಂದು ಕೊಟ್ಟ ಮೊಸರವಲಕ್ಕಿ ತಿನ್ನತೊಡಗಿದರು. ಆಚಾರ್ಯರೊಂದಿಗೆ ಮಾಧವಶಾಸ್ತ್ರಿಗಳೂ ಮತ್ತೊಮ್ಮೆ ಚಹ ಕುಡಿದು ಇನ್ನೇನು ವಿಷಯ ಹೇಳೊಣವಾಗಲಿ ಎನ್ನುವಂತೆ ಕೃಷ್ಣಾಚಾರ್ಯರ ಮುಖ ನೋಡಿದರು. ಖಾಲಿಯಾದ ಚಹಾ ಕಪ್ಪುಗಳನ್ನು ಒಯ್ಯಲೆಂದು ಬಂದ ಸಾವಿತ್ರಮ್ಮನವರು ಆಚಾರ್ಯರು ಹೇಳಲಿರುವ ಸುದ್ದಿ ಕೇಳಲು ಕಾತುರರಾಗಿ ಕಪ್ಪುಗಳನ್ನು ಕೈಯಲ್ಲಿ ಹಿಡಿದುಕೊಂಡು ಅಲ್ಲಿಯೇ ನಿಂತರು. ಸಾವಿತ್ರಮ್ಮನವರನ್ನು ನೋಡಿದ ಕೃಷ್ಣಾಚಾರ್ಯರು ‘ಶಾಸ್ತ್ರಿಗಳೇ ನೀವು ಹೇಗೂ ತೋಟಕ್ಕೆ ಹೋಗುವ ವೇಳೆಯಲ್ವೇ ನಾನು ನಿಮ್ಮ ಜೊತೆ ಬರ್ತಿನಿ ಹಾಗೆ ದಾರಿಯಲ್ಲಿ ಮಾತಾಡ್ಕೊಂಡು ಹೋದರಾಯ್ತು’ ಎಂದು ಮಾಧವಶಾಸ್ತ್ರಿಗಳ ಪ್ರತಿಕ್ರಿಯೆಗೂ ಕಾಯದೆ ಎದ್ದು ನಿಂತರು. ಏನೋ ಗಂಭೀರವಾದ ವಿಷಯವೇ ಇರಬಹುದು ಕೃಷ್ಣಾಚಾರ್ಯನಿಗೆ ಇಲ್ಲಿ ಸಾವಿತ್ರಿ ಎದುರು ಹೇಳಲು ಮನಸ್ಸಿಲ್ಲದಿರಬಹುದು ಎಂದರಿತ ಮಾಧವಶಾಸ್ತ್ರಿಗಳು ಹೆಂಡತಿಗೆ ಹೇಳಿ ಪಡಸಾಲೆಯಿಂದ ಅಂಗಳಕ್ಕೆ ಬಂದು ತಲಬಾಗಿಲ ಕಡೆ ನಡೆದರು. ಗಂಡಸರ ವಿಷಯವೇ ಇಷ್ಟು ಮನೆಯವರೊಂದಿಗೂ ಗುಟ್ಟು ಮಾಡ್ತಾರೆ ಎಂದು ಬೇಸರದಿಂದ ಸಾವಿತ್ರಮ್ಮನವರು ಆ ದಿನದ ಅಡುಗೆ ಸಿದ್ಧತೆಗಾಗಿ ಮನೆಯ ಒಳಗಡೆ ಕಾಲಿಟ್ಟರು. 

       ಕೃಷ್ಣಾಚಾರ್ಯರೊಂದಿಗೆ ತೋಟಕ್ಕೆ ಬಂದ ಮಾಧವಶಾಸ್ತ್ರಿಗಳು ಗಂಟೆ ಹನ್ನೆರಡಾದರೂ ಇನ್ನೂ ತೋಟದಲ್ಲೇ ಕುಳಿತಿದ್ದರು. ಕೃಷ್ಣಾಚಾರ್ಯರು ರಾಘವನ ಮದುವೆಗೆ ಸಂಬಂಧಿಸಿದ್ದ ಹೇಳಬೇಕಾಗಿದ್ದ ವಿಷಯವನ್ನು ಕೂಲಂಕುಷವಾಗಿ ಶಾಸ್ತ್ರಿಗಳೊಂದಿಗೆ ಚರ್ಚಿಸಿ ಯಾವುದಕ್ಕೂ ಇನ್ನೆರಡು ದಿನಗಳಲ್ಲಿ ಅಭಿಪ್ರಾಯ ತಿಳಿಸಿರೆಂದು ಹೇಳಿ ಮನೆಗೆ ಹಿಂತಿರುಗಿದ್ದರು. ಆಚಾರ್ಯರು ಹೇಳಿದ ವಿಷಯವನ್ನು ಒಪ್ಪಿಕೊಳ್ಳಲು ಶಾಸ್ತ್ರಿಗಳ ಮನಸ್ಸು ಹಿಂದೇಟು ಹಾಕುತ್ತಿತ್ತು. ಛೇ ಎಂಥ ಕಾಲ ಬಂತು. ಮಗನಿಗೊಂದು ಅನುರೂಪವಾದ ಹೆಣ್ಣು ಹುಡುಕಿ ಮದುವೆ ಮಾಡುವ ಸಾಮರ್ಥ್ಯವೂ ತಮಗಿಲ್ಲವಾಯಿತಲ್ಲ ಎಂದು ಶಾಸ್ತ್ರಿಗಳು ಪರಿತಪಿಸತೊಡಗಿದರು. ಊರಿನಲ್ಲಿ ಮಾತ್ರವಲ್ಲದೆ ಸುತ್ತ ಹತ್ತು ಗ್ರಾಮಗಳಲ್ಲಿ ಮಾಧವಶಾಸ್ತ್ರಿಗಳಿಗೆ ಗೌರವವಿತ್ತು. ಮದುವೆ, ಸೀಮಂತ, ಜಾವಳ, ಸತ್ಯನಾರಾಯಣ ಪೂಜೆಗೆಲ್ಲ ಮಾಧವಶಾಸ್ತ್ರಿಗಳದೇ ಪೌರೋಹಿತ್ಯ. ನೇಮ, ನಿಷ್ಠೆ, ಸಂಪ್ರದಾಯಗಳಿಗೆ ಬದ್ಧರಾಗಿದ್ದ ಮಾಧವಶಾಸ್ತ್ರಿಗಳಿಂದ ಮಾತ್ರ ಪೂಜೆ ಪುನಸ್ಕಾರಗಳು ಸಾಂಗವಾಗಿ ನೇರವೇರುವವೆನ್ನುವ ನಂಬಿಕೆ ಜನರಲ್ಲಿ ಮನೆಮಾಡಿತ್ತು. ಬೇರೆ ಜಾತಿಯವರ ಮನೆಯಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಪೌರೋಹಿತ್ಯ ವಹಿಸಿದರೂ ಆ ಮನೆಯಲ್ಲಿ ಒಂದು ಹನಿ ನೀರನ್ನೂ ಸೇವಿಸುತ್ತಿರಲಿಲ್ಲ. ಮನೆಗೆ ಬಂದು ಮತ್ತೆ ಸ್ನಾನ ಮಾಡಿ ಮಡಿ ಬಟ್ಟೆ ಉಟ್ಟ ನಂತರವೇ ಊಟ. ಇಷ್ಟೊಂದು ಕರ್ಮಠರಾದ ತಾವು ಮಗನ ಮದುವೆಗಾಗಿ ಕೃಷ್ಣಾಚಾರ್ಯ ಹೇಳಿದಂತೆ ಒಪ್ಪಿದ್ದೇ ಆದರೆ ಊರಿನ ಮತ್ತು ಸುತ್ತಲಿನ ಗ್ರಾಮಗಳ ಜನರ ದೃಷ್ಟಿಯಲ್ಲಿ ತಮ್ಮ ಗೌರವ, ಮರ್ಯಾದೆಯೆಲ್ಲ ಮಣ್ಣು ಪಾಲಾದಂತೆ. ನಾಲ್ಕು ತಲೆಮಾರುಗಳು ಕುಳಿತು ತಿನ್ನುವಷ್ಟು ಆಸ್ತಿಯಿದೆಯಾದರೂ ಮಗನಿಗೆ ಹೆಣ್ಣು ಕೊಡಲು ಯಾರೂ ಮುಂದೆ ಬರುತ್ತಿಲ್ಲ. ಈಗಾಗಲೇ ರಾಘವನಿಗೆ ಮದುವೆ ವಯಸ್ಸು ಮೀರುತ್ತಿದೆ. ಬರುವ ಗಣೇಶ ಚತುರ್ಥಿಗೆ ಅವನಿಗೆ ಮೂವತ್ತೈದು ಮುಗಿದು ಮೂವತ್ತಾರು ಶುರು. ಅವನ ವಯಸ್ಸಿನ ಗೌಡರ ಓಣಿಯ ಶಂಕ್ರೆಗೌಡನಿಗೆ ಈಗಾಗಲೇ ಮದುವೆಯಾಗಿ ನಾಲ್ಕು ಮಕ್ಕಳಿವೆ. ಅವನ ಹಿರಿಯ ಮಗಳು ಹತ್ತನೆ ಕ್ಲಾಸಲ್ಲಿ ಊರಿಗೇ ಮೊದಲನೆಯವಳಾಗಿ ಪಾಸಾದಾಗ ಶಂಕ್ರೆಗೌಡ ಮನೆಗೆ ಬಂದು ಸಿಹಿಹಂಚಿ ಹೋಗಿದ್ದ. ಶಂಕ್ರೆಗೌಡ ಹೋದ ಮೇಲೆ ‘ನೋಡ್ರಿ ರಾಘುಗೂ ಆಗಬೇಕಾದ ವಯಸ್ಸಲ್ಲಿ ಮದ್ವಿ ಆಗಿದ್ದರ ನಮಗೂ ಮೊಮ್ಮಕ್ಕಳಿರುತ್ತಿದ್ದರು’ ಎಂದ ಸಾವಿತ್ರಿಯ ಮಾತನ್ನು ಕೇಳಿಸಿಕೊಂಡ ರಾಘವ ತುಳಿಸಿ ಕಟ್ಟೆಯಲ್ಲಿನ ಮಾರುತಿಗೆ ಮಾಡುತ್ತಿದ್ದ ಪೂಜೆಯನ್ನು ಅರ್ಧಕ್ಕೇ ಬಿಟ್ಟು ಒಳ ಹೋಗಿದ್ದ. ಈ ಬ್ರಾಹ್ಮಣರೆಲ್ಲ ಹಳ್ಳಿಗಳಿಂದ ನಗರಗಳಿಗೆ ವಲಸೆ ಹೋಗಿ ಅಲ್ಲಿಯೇ ನೆಲೆಸುತ್ತಿರುವುದರಿಂದ ಹಳ್ಳಿಗಳಲ್ಲಿನ ಗಂಡುಗಳಿಗೆ ತಮ್ಮ ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಡಲು ಒಪ್ಪುತ್ತಿಲ್ಲ. ಈ ಕನ್ಯಾಮಣಿಗಳಿಗೆಲ್ಲ ದೊಡ್ಡ ಪಟ್ಟಣಗಳಲ್ಲಿ ಕೆಲಸ ಮಾಡುತ್ತಿರುವ ಸಾಫ್ಟ್ ವೇರ್   ಇಂಜಿನಿಯರುಗಳೇ ಬೇಕು ಮದುವೆಯಾಗಲು. ದೇವಸ್ಥಾನದ ಆದಾಯದ ಆಸೆಯಿಂದ ಮಗನನ್ನು ಮನೆಯಲ್ಲೇ ಉಳಿಸಿಕೊಂಡಿದ್ದು ತಪ್ಪಾಯಿತೇನೋ ಎಂದು ಶಾಸ್ತ್ರಿಗಳ ಮನಸ್ಸು ಒಂದುಕ್ಷಣ ನೋವಿನಿಂದ ಒದ್ದಾಡಿತು. ತಲೆ ಎತ್ತಿ ಆಕಾಶವನ್ನೊಮ್ಮೆ ನೋಡಿದವರಿಗೆ ಹೊಟ್ಟೆ ಚುರುಗುಟ್ಟಿದ ಅನುಭವವಾಗಿ ಪಂಚೆಯನ್ನು ಹೆಗಲ ಮೇಲೆ ಹಾಕಿಕೊಂಡು ಮನೆಯ ದಾರಿ ಹಿಡಿದರು. 

     ಮಾಧವಶಾಸ್ತ್ರಿಗಳು ಮನೆಗೆ ಬಂದಾಗ ಸಾವಿತ್ರಮ್ಮನವರು ಅವರಿಗಾಗಿ ಕಾಯುತ್ತ ಪಡಸಾಲೆಯಲ್ಲಿ ಹೂ ಪೋಣಿಸುತ್ತ  ಕುಳಿತಿದ್ದರು. ಸ್ವಲ್ಪ ದೂರದಲ್ಲಿ ಬತ್ತಿ ಹೊಸೆಯುತ್ತ ದೇವರ ನಾಮವನ್ನು ಪಠಿಸುತ್ತ ಕುಳಿತಿದ್ದ ಶಾರದಾ ಅಣ್ಣನ ಆಗಮನವನ್ನು ಅತ್ತಿಗೆಗೆ ಸೂಚಿಸಲೆಂಬಂತೆ ಕೆಮ್ಮಿ ಮತ್ತೆ ತನ್ನ ಕೆಲಸದಲ್ಲಿ ಮಗ್ನಳಾದಳು. ಪತಿಯ ಮುಖದಲ್ಲಿನ ದುಗುಡವನ್ನು ಗುರುತಿಸಿದ ಸಾವಿತ್ರಮ್ಮನವರು ಮೊದಲು ಊಟ ಮಾಡಲಿ ಆಮೇಲೆ ಕೇಳಿದರಾಯ್ತೆಂದು ಶಾಸ್ತ್ರಿಗಳಿಗೆ ಊಟ ಬಡಿಸಲು ಹೂವಿನ ಬುಟ್ಟಿಯೊಂದಿಗೆ ಅಡುಗೆ ಮನೆ ಪ್ರವೇಶಿಸಿದರು. ತೋಟದಲ್ಲಿ ಕೃಷ್ಣಾಚಾರ್ಯರೊಂದಿಗೆ ಗಹನವಾದ ವಿಷಯವೇ ಚರ್ಚೆಯಾಗಿರಬೇಕೆಂದು ಶಾರದಾ ಕೂಡ ಅಣ್ಣನಿಗೆ ಏನನ್ನು ಕೇಳಲಿಲ್ಲ. ಮಾಧವಶಾಸ್ತ್ರಿಗಳಿಗೆ ಇಡೀ ಮನೆಯಲ್ಲಿ ನೆಲೆಸಿದ ಗಾಢ ಮೌನ ಅಸಹನೀಯವೆನಿಸತೊಡಗಿತು. ಆ ಮೌನವನ್ನು ಹೊಡೆದೊಡಿಸಲೆಂಬಂತೆ ತೊಟ್ಟ ಜುಬ್ಬಾವನ್ನು ಪಡಸಾಲೆಯಲ್ಲಿನ ಗೂಟಕ್ಕೆ ತೂಗು ಹಾಕುತ್ತ  ‘ರಾಘು ಎಲ್ಲಿ ಕಾಣಿಸ್ತಿಲ್ಲ’ ಎಂದು ತಂಗಿ ಶಾರದಾಳನ್ನು ಕೇಳಿ ಅವಳ ಉತ್ತರಕ್ಕಾಗಿ ಕಾಯತೊಡಗಿದರು. ಅಣ್ಣ ಹೀಗೆ ಮನೆಯವರ ಉತ್ತರಕ್ಕಾಗಿ ಕಾಯುವ ಮನೋಭಾವದವನಲ್ಲವಾದ್ದರಿಂದ ಇಂದಿನ ಅಣ್ಣನ ವರ್ತನೆ ಶಾರದಾಳಿಗೆ ಅಚ್ಚರಿಯೆನಿಸಿತು. ‘ದೇವಸ್ಥಾನದ ಪೂಜೆ ಮುಗಿಸಿ ಪಟ್ಟಣಕ್ಕೆ ಹೋಗಿ ಬರ್ತಿನಿ ಎಂದು ಹೇಳಿ ಹೋದ’ ಎಂದವಳ ಮಾತಿನಲ್ಲಿ ಅಣ್ಣನ ಬಗ್ಗೆ ಕಕ್ಕುಲಾತಿಯಿತ್ತು. ಅಣ್ಣ ಮಗನ ಮದುವೆಗಾಗಿ ಪಡುತ್ತಿರುವ ಕಷ್ಟ ಶಾರದಾಳಿಗೆ ಗೊತ್ತಿಲ್ಲದ ವಿಷಯವೇನಲ್ಲ. ಮನೆದೇವರಾದ ವೆಂಕಟೇಶ್ವರನಿಗೆ ಅಣ್ಣನ ಮಗನ ಮದುವೆ ಸಾಂಗವಾಗಿ ನೆರವೇರಿದರೆ ಕುಟುಂಬ ಸಮೇತರಾಗಿ ಬಂದು ದರ್ಶನ ಮಾಡುತ್ತೆವೆಂದು ಶಾರದಾ ಹರಕೆ ಹೊತ್ತಿದ್ದಳು. ‘ವೈನಿ ಈ ಯೆಂಕಪ್ಪಗ ಎಡಕ್ಕೊಂದು ಬಲಕ್ಕೊಂದು ಹೆಂಡ್ತಿರನ್ನ ನಿಲ್ಲಿಸಿಕೊಂಡು ಪೂಜೆ ಮಾಡಿಸಿಕೊಳ್ಳೊದು ಗೊತ್ತದ ಆದರ ನಮ್ಮ ರಾಘಪ್ಪಗೊಂದು ಹೆಣ್ಣು ಹುಡುಕಿ ಕೊಡೊದು ಗೊತ್ತಿಲ್ಲ ನೋಡ್ರಿ’ ಎಂದು ಅತ್ತಿಗೆ ಎದುರು ಅದೆಷ್ಟೋ ಸಲ ಮನೆದೇವರಾದ ವೆಂಕಟೇಶ್ವರನನ್ನು ತರಾಟೆಗೆ ತೆಗೆದುಕೊಂಡಿದ್ದಳು. ಆಗೆಲ್ಲ ಸಾವಿತ್ರಮ್ಮನವರು ‘ಬಿಡ್ತು ಅನ್ನು ಶಾರದಾ ದೇವರಿಗೆ ಹಾಗೆಲ್ಲ ಅಂತಾರೇನು’ ಎಂದು ತಿರುಪತಿ ತಿಮ್ಮಪ್ಪನೆಲ್ಲಿ ಸಿಟ್ಟಾಗಿ ಇದ್ದೊಬ್ಬ ಮಗನ ಮದುವೆಗೆ ವಿಘ್ನ ತರುವನೋ ಎಂದು ಹೆದರಿ ಗಲ್ಲ ಗಲ್ಲ ಬಡಿದುಕೊಳ್ಳುತ್ತಿದ್ದರು.
      ಊಟ ಮಾಡುವಾಗಲಾದರೂ ಗಂಡ ಕೃಷ್ಣಾಚಾರ್ಯರ ಜೊತೆಗೆ ನಡೆದ ಮಾತುಗಳನ್ನು ತಮಗೆ ಮುಟ್ಟಿಸಬಹುದೆಂದು ನಿರೀಕ್ಷಿಸಿದ್ದ ಸಾವಿತ್ರಮ್ಮನವರಿಗೆ ಶಾಸ್ತ್ರಿಗಳು ಮೌನವಾಗಿ ಊಟ ಮಾಡಿ ಕೈತೊಳೆಯಲು ಬಚ್ಚಲು ಮನೆಗೆ ಹೋಗುತ್ತಿರುವುದನ್ನು ನೋಡಿ ನಿರಾಸೆಯಾಯಿತು. ಜೊತೆಗೆ ತನ್ನ ಮಗನ ಮದುವೆಗೆ ಸಂಬಂಧಿಸಿದ ವಿಚಾರವನ್ನು ತಾಯಿಯಾಗಿ ತನಗೆ ತಿಳಿದುಕೊಳ್ಳುವ ಹಕ್ಕಿಲ್ಲವೇನು ಎಂದು ಕೋಪ ಬಂದು ‘ರ್ರೀ ಬೆಳಿಗ್ಗೆಯಿಂದ ನೋಡ್ತಿದ್ದೀನಿ ನನ್ನಿಂದ ಏನನ್ನೋ ಮುಚ್ಚಿಡ್ತಿದ್ದೀರಿ. ಆ ಕಿಷ್ಟಪ್ಪ ಕೂಡ ಅದೇನೋ ಗುಟ್ಟಿನ ವಿಷಯ ಅನ್ನೊಥರ ಮನೆಯಲ್ಲಿ ಮಾತಾಡೊದು ಬ್ಯಾಡ ಅಂತ ತ್ವಾಟಕ್ಕ ಕರೆದುಕೊಂಡು ಹೋದ. ನೀವಾಗಿಯೇ ಹೇಳಬಹುದು ಅಂತ ಕಾಯ್ತಿದ್ದೆ. ತಾಯಿಯಾಗಿ ನನಗ ಅಷ್ಟು ಹಕ್ಕಿಲೇನ್ರಿ’ ಬಚ್ಚಲುಮನೆಯಿಂದ ಕೈತೊಳೆದುಕೊಂಡು ಹೊರಗೆ ಬರುತ್ತಿದ್ದ ಗಂಡನನ್ನು ನಿಲ್ಲಿಸಿ ಕೇಳಿದ ಸಾವಿತ್ರಮ್ಮನವರನ್ನು ಕರುಣೆಯಿಂದ ನೋಡಿದ ಶಾಸ್ತ್ರಿಗಳು ‘ಚಿಂತಿ ಮಾಡೊ ಅಂಥ ವಿಷಯ ಅಲ್ಲ ಸಾವಿತ್ರಿ’ ಎಂದು ಚುಟುಕಾಗಿ ಉತ್ತರಿಸಿ ಮಲಗುವ ಕೋಣೆಯ ಕಡೆ ಹೆಜ್ಜೆ ಹಾಕಿದರು. ಇವರನ್ನು ಈ ಜನ್ಮದಲ್ಲಿ ಅರ್ಥ ಮಾಡಿಕೊಳ್ಳೊಕೆ ಸಾಧ್ಯವಿಲ್ಲವೇನೊ ಎಂದು ಗೊಣಗುತ್ತ ಸಾವಿತ್ರಮ್ಮನವರು ನಾದಿನಿ ಶಾರದಾಳನ್ನು ಊಟಕ್ಕೆ ಕರೆಯಲು ನಡುಮನೆಯಿಂದ ಹೊರಬಂದರು. 

     ಊಟಮಾಡಿ ಘಳಿಗೆ ನಿದ್ದೆ ತೆಗೆದರಾಯ್ತೆಂದು ಮಂಚದ ಮೇಲೆ ಮಲಗಿದ ಶಾಸ್ತ್ರಿಗಳಿಗೆ ನಿದ್ದೆ ಹತ್ತಿರ ಸುಳಿಯದಾಯ್ತು. ಕೃಷ್ಣಾಚಾರ್ಯರು ಹೇಳಿದ ವಿಷಯವೇ ಮನಸ್ಸನ್ನು ಕೊರೆಯುತ್ತಿದ್ದುದ್ದರಿಂದ ಎಂದಿನಂತೆ ಸುಖವಾಗಿ ನಿದ್ದೆ ಮಾಡುವುದು ಅವರಿಂದಾಗಲಿಲ್ಲ. ಬಲವಂತವಾಗಿ ಕಣ್ಣು ಮುಚ್ಚಿದವರಿಗೆ ಶಾರದಾ ಎದುರು ನಿಂತು ‘ಅಣ್ಣಾ ನಾನೇನು ತಪ್ಪ ಮಾಡೀನಿ ಅಂತ ನನ್ನ ಮದುವಿಗಿ ವಿರೋಧ ಮಾಡ್ದಿ’ ಎಂದು ಕೇಳಿದಂತಾಗಿ ಮೈಯೆಲ್ಲ ಬೆವರೊಡೆದು ಹಾಸಿಗೆಯಲ್ಲಿ ಎದ್ದು ಕುಳಿತವರಿಗೆ ಆ ಕೋಣೆಯಲ್ಲಿ ಉಸಿರು ಕಟ್ಟಿದಂತಾಗಿ ಶರೀರ ಕಂಪಿಸಿತು. ಕಣ್ಣನ್ನು ಅಗಲಗೊಳಿಸಿ ನೋಡಿದವರಿಗೆ ಇಡೀ ಕೋಣೆಯಲ್ಲಿ ತಾವೊಬ್ಬರೆ ಇರುವುದು ಅರಿವಿಗೆ ಬಂದು ಇದೆಲ್ಲ ತನ್ನ ಭ್ರಮೆ ಎಂದು ಮನಸ್ಸಿಗೆ ಸಮಾಧಾನ ತಂದುಕೊಂಡರು. ಮೂವತ್ತು ವರ್ಷಗಳ ಹಿಂದೆ ನಡೆದ ಘಟನೆಯೊಂದು ಈಗ ತನ್ನ ಮಗನ ಬದುಕಿನೊಂದಿಗೆ ತಳಕು ಹಾಕಿಕೊಳ್ಳುತ್ತಿರುವುದು ಪೂರ್ವನಿರ್ಧಾರಿತವೇ ಇರಬಹುದೇನೋ ಎಂದು ಶಾಸ್ತ್ರಿಗಳ ಮನಸ್ಸು ಆಲೋಚಿಸತೊಡಗಿತು. ಆ ಸಂದರ್ಭದ ತನ್ನ  ನಿರ್ಣಯವೊಂದು ಹೀಗೆ ಇವತ್ತು ನನ್ನೆದುರೇ ಪ್ರಶ್ನೆಯಾಗಿ ನಿಲ್ಲಬಹುದೆಂದು ಯೋಚಿಸಿರಲಿಲ್ಲ. ಯಾವ ನಿರ್ಧಾರವನ್ನು ಕೈಗೊಳ್ಳಲಿ? ಶಾರದಾಳಿಗೆ ಹೇಗೆ ಮನವರಿಕೆ ಮಾಡಿಸಲಿ? ಅವಳನ್ನು ಎದುರಿಸುವ ಮಾನಸಿಕ ಸ್ಥೈರ್ಯ ತನಗಿದೆಯೇ? ಆಲೋಚಿಸಿದಷ್ಟೂ ವಿಷಯ ಕಗ್ಗಂಟಾಗುತ್ತ ಹೋಗುತ್ತಿತ್ತು. ಕೃಷ್ಣಾಚಾರ್ಯ ಬೇರೆ ಇನ್ನೆರಡು ದಿನಗಳಲ್ಲಿ ನಿರ್ಧಾರ ತಿಳಿಸುವಂತೆ ಹೇಳಿರುವನು. ಯಾವ ನಿರ್ಧಾರಕ್ಕೂ ಬರಲಾಗದೆ ಮಾಧವಶಾಸ್ತ್ರಿಗಳು ಅಶಾಂತಿಯಿಂದ ಹಾಸಿಗೆಯಲ್ಲಿ ನಿದ್ದೆಯಿಲ್ಲದೆ ಅತ್ತಿಂದಿತ್ತ ಮಗ್ಗಲು ಬದಲಾಯಿಸತೊಡಗಿದರು. ಬಾಗಿಲಲ್ಲಿ ನಿಂತು ನೋಡುತ್ತಿದ್ದ ಸಾವಿತ್ರಮ್ಮನವರಿಗೆ ಶಾಸ್ತ್ರಿಗಳು ಯಾವುದೋ ಗಹನವಾದ ಸಮಸ್ಯೆಯಲ್ಲಿ ಸಿಲುಕಿರುವರೆಂಬ ಸಂಗತಿ ಅವರನ್ನು ಚಿಂತೆಗೀಡುಮಾಡಿತು.  

       ರಾತ್ರಿ ಹಸಿವಿಲ್ಲವೆಂದು ಲೋಟ ಹಾಲು ಕುಡಿದು ಮಲಗಿದ ಮಾಧವಶಾಸ್ತ್ರಿಗಳು ‘ರಾಘು ಬಂದನೇನೆ’ ಎಂದು ಮಲಗಿದ್ದಲ್ಲೇ ಸಾವಿತ್ರಮ್ಮನವರನ್ನು ಕೂಗಿ ಕೇಳಿ ಮಗ ಬಂದಿರುವುದನ್ನು ಖಾತ್ರಿಪಡಿಸಿಕೊಂಡು ಮನಸ್ಸಿಗೆ ಸಮಾಧಾನ ತಂದುಕೊಂಡರು. ಮದುವೆಯಾಗಿ ಅವನಿಗೂ ಹೆಂಡತಿ ಮಕ್ಕಳು ಅಂತಿದ್ದರೆ ಹೀಗೆ ಊರೂರು ಅಲೆಯುತ್ತಿರಲಿಲ್ಲ. ಮನೆತುಂಬ ಶ್ರೀಮಂತಿಕೆ ಇದೆ ಆದರೆ ಹೆಣ್ಣು ಕೊಡಲು ಯಾರೂ ಮುಂದೆ ಬರುತ್ತಿಲ್ಲ ವೆಂಕಪ್ಪ ನೀನೇ ದಾರಿ ತೋರಿಸಬೇಕು ಎಂದು ಹಾಸಿಗೆಯಲ್ಲೇ ಮನೆದೇವರಿಗೆ ಕೈಮುಗಿದರು. ಯೋಚಿಸುತ್ತ ಮಲಗಿದ್ದ ಶಾಸ್ತ್ರಿಗಳ ಮನಸ್ಸು ಮೂವತ್ತು ವರ್ಷಗಳ ಹಿಂದಕ್ಕೆ ಜಾರಿತು. ತಂಗಿ ಶಾರದಾಳನ್ನು ಮದುವೆ ಮಾಡಿ ಗಂಡನ ಮನೆಗೆ ಕಳುಹಿಸಿದಾಗ ಆಗಿನ್ನೂ ಆಕೆಗೆ ಹದಿನೆಂಟು ವರ್ಷ ವಯಸ್ಸು. ಅವಳ ದುರಾದೃಷ್ಟಕ್ಕೆ ಮದುವೆಯಾದ ಆರು ತಿಂಗಳಲ್ಲೆ ಗಂಡ ರಸ್ತೆ ಅಪಘಾತದಲ್ಲಿ ಅಸುನೀಗಿದ. ತಂಗಿ ವಿಧವೆಯಾಗಿ ತವರು ಮನೆ ಸೇರಿದಳು. ಅಪ್ಪ ಅಮ್ಮ ಇದೇ ಕೊರಗಿನಲ್ಲಿ ಹಾಸಿಗೆ ಹಿಡಿದವರು ಮುಂದಿನ ಕೆಲವೇ ತಿಂಗಳುಗಳಲ್ಲಿ ಒಬ್ಬರ ಹಿಂದೆ ಒಬ್ಬರಂತೆ ದೇವರ ಪಾದ ಸೇರಿದರು. ಮನೆಯ ಜವಾಬ್ದಾರಿ ಮಾಧವಶಾಸ್ತ್ರಿಗಳ ಹೆಗಲೇರಿತು. ಮನೆಯಲ್ಲಿ ಶ್ರೀಮಂತಿಕೆಗೇನೂ ಕೊರತೆ ಇರಲಿಲ್ಲ. ತಂಗಿ ಶಾರದಾ ಅವರಿಗೆಂದೂ ಭಾರವೆನಿಸಲಿಲ್ಲ. ಬದುಕು ನಿರಾತಂಕವಾಗಿ ಸಾಗುತ್ತಿದ್ದ ಆ ದಿನಗಳಲ್ಲಿ ಮಾಧವಶಾಸ್ತ್ರಿಗಳ ಬದುಕಿನಲ್ಲಿ ಶಾರದಾಳಿಗೆ ಸಂಬಂಧಿಸಿದ ವಿಷಯವೊಂದು ಬಿರುಗಾಳಿಯಾಗಿ ಪ್ರವೇಶಿಸಿ ಅವರ ಮನಸ್ಸಿನ ಶಾಂತಿಯನ್ನೇ ಕದಡಿತು. ಆ ಊರಿಗೆ ಮೇಷ್ಟ್ರಾಗಿ ಬಂದ ಶ್ರೀನಿವಾಸನೆಂಬ ಯುವಕ ವಿಧವೆ ಶಾರದಾಳನ್ನು ತನಗೆ ಮದುವೆ ಮಾಡಿಕೊಡುವಂತೆ ಕೇಳಿದಾಗ ಶಾಸ್ತ್ರಿಗಳು ಭೂಮಿಗಿಳಿದು ಹೋದರು. ಶ್ರೀನಿವಾಸ ತಮ್ಮದೆ ಜಾತಿಯವನಾದರೂ ವಿಧವೆಯನ್ನು ಸುಮಂಗಲಿಯಾಗಿಸುವುದು ತಮ್ಮ ಮನೆತನಕ್ಕೆ ಮಾಡುವ ಅಪಚಾರವೆಂದೇ ಭಾವಿಸಿದ ಮಾಧವಶಾಸ್ತ್ರಿಗಳು ಮದುವೆಗೆ ಸುತಾರಾಂ ಒಪ್ಪಿಗೆ ನೀಡಲಿಲ್ಲ. ಇದನ್ನು ಹೀಗೇ ಮುಂದುವರೆಯಲು ಬಿಟ್ಟರೆ ಊರಲ್ಲಿ ತಮ್ಮ ಮರ್ಯಾದೆ ಮಣ್ಣು ಪಾಲಾದಂತೆ ಎಂದು ಬಗೆದ ಶಾಸ್ತ್ರಿಗಳು ಊರ ಪಟೇಲರ ಶಿಫಾರಸ್ಸಿನಿಂದ ಶ್ರೀನಿವಾಸನನ್ನು ಬೇರೆ ಊರಿಗೆ ಎತ್ತಂಗಡಿ ಮಾಡಿಸಿ ಸಮಾಧಾನದ ನಿಟ್ಟುಸಿರು ಬಿಟ್ಟರು. ಇದೆಲ್ಲ ನಡೆದು ಮೂವತ್ತು ವರ್ಷಗಳೇ ಕಳೆದು ಹೋಗಿವೆ. ಪಾಪ ಶಾರದಾಳಲ್ಲೂ ಮದುವೆಯಾಗಿ ಹೊಸ ಬದುಕನ್ನು ಕಟ್ಟಿಕೊಳ್ಳಬೇಕೆನ್ನುವ ಆಸೆ ಇತ್ತೇನೋ. ಆದರೆ ಆ ಸಂದರ್ಭ ಅವಳ ಮನಸ್ಸಿನ ಭಾವನೆಗಳನ್ನು ತಿಳಿದುಕೊಳ್ಳುವ ಒಂದು ಸಣ್ಣ ಪ್ರಯತ್ನವನ್ನೂ ನಾನು ಮಾಡಲಿಲ್ಲ. ಇಂಥ ಪರಿಸ್ಥಿತಿಯಲ್ಲಿ ಈಗ ರಾಘವನಿಗೆ ನೋಡಿದ ಹೆಣ್ಣಿನ ವಿಷಯವಾಗಿ ಶಾರದಾಳ ಜೊತೆ ಹೇಗೆ ಮಾತನಾಡಬೇಕು. ಸಾವಿತ್ರಿ ಮತ್ತು ರಾಘವನನ್ನು ಒಪ್ಪಿಸುವುದು ಅಂಥ ಕಷ್ಟದ ಸಂಗತಿಯೇನಲ್ಲ. ಆದರೆ ಮನಸ್ಸು ಹಿಂಜರಿಯುವುದು ಶಾರದಾಳ ವಿಷಯದಲ್ಲಿ ಮಾತ್ರ. ಅವಳೆದುರು ನಾನು ತೀರ ಸಣ್ಣವನಾಗಬಹುದೇನೋ ಎನ್ನುವ ಆತಂಕ ಶಾಸ್ತ್ರಿಗಳ ನಿದ್ದೆಯನ್ನು ದೂರ ಮಾಡಿತು. ನಾಳೆ ಕೃಷ್ಣಾಚಾರ್ಯನಿಗೆ ಈ ಸಂಬಂಧ ಬೇಡ ಎಂದರಾಯ್ತು ಎನ್ನುವ ನಿರ್ಧಾರ ಅವರಲ್ಲಿ ಗಟ್ಟಿಯಾಗುತ್ತಿದ್ದಂತೆ ಹೊರಗೆ ಬೆಳಗಾಗುತ್ತಿರುವ ಸಂಕೇತವಾಗಿ ಹಕ್ಕಿಗಳ ಚಿಲಿಪಿಲಿ ನಿನಾದ ಕಿವಿ ತುಂಬಲಾರಂಭಿಸಿತು. 

      ಮಾಧವಶಾಸ್ತ್ರಿಗಳು ಎಂದಿನಂತೆ ಬೆಳೆಗ್ಗೆ ಸಂಧ್ಯಾವಂದನೆ ಪೂಜೆ ಮುಗಿಸಿ ಕೃಷ್ಣಾಚಾರ್ಯರ ಮನೆಗೆ ಹೊರಡುವ ತಯ್ಯಾರಿಯಲ್ಲಿದ್ದವರನ್ನು ‘ಅಣ್ಣ ನಿನ್ನ ಜೊತಿ ಸ್ವಲ್ಪ ಮಾತಾಡ್ಬೇಕಾಗ್ಯಾದ’ ಎಂದ ಶಾರದಾಳ ಧ್ವನಿ ತಡೆಯಿತು. ಏನು ಎನ್ನುವಂತೆ ನೋಡಿದವರನ್ನು ‘ಇಲ್ಲಿ ಬ್ಯಾಡ ಹಿತ್ತಲಕಡಿ ಬಾ’ ಎಂದು ಮುಂದೆ ನಡೆದ ತಂಗಿಯನ್ನು ಅನುಸರಿಸಿ ಹಿತ್ತಲಕಡೆ ಹೆಜ್ಜೆ ಹಾಕಿದರು. ‘ನಸಿಕಿನ್ಯಾಗ ದೇವಸ್ಥಾನದ ಕಸಗೂಡಿಸ್ಲಿಕ್ಕ ಹೋದಾಗ ಕೃಷ್ಣಾಚಾರ್ಯರು ಭೇಟಿಯಾಗಿದ್ರು. ಎಲ್ಲ ವಿಷಯ ನನಗ ಹೇಳ್ಯಾರ. ಸವಣೂರಿನ ನಾರಾಯಣರಾಯರ ಮಗಳು ಮದುವಿ ಆದ ಎರಡ ತಿಂಗಳಿಗೀ ಗಂಡನ್ನ ಕಳ್ಕೊಂಡು ವಿಧವಾ ಆಗ್ಯಾಳಂತ. ನಾರಾಯಣರಾಯರು ಮಗಳಿಗಿ ಮರುಮದ್ವಿ ಮಾಡಲಿಕ್ಕ ತಯ್ಯಾರ ಆದಾರಂತ. ನಮ್ಮ ರಾಘಪ್ಪಗ ಬೇರೆ ಈ ಕಾಲದಾಗ ಹೆಣ್ಣ ಸಿಗ್ತಿಲ್ಲ. ಸುಮ್ನ ಒಪ್ಕೊಂಡು ಬಿಡು. ಶಾರದಾ ಏನಂತಾಳೋ ಅಂದಿಅಂತ. ಮೂವತ್ತು ವರ್ಷದ ಹಿಂದ ವಿಧವಾಗ ಮರುಮದ್ವಿ ಅನ್ನೊದು ಈಗಿನಷ್ಟು ಸರಳ ಆಗಿರಲಿಲ್ಲ. ಅದು ನನ್ನ ಹಣೆಬರಹ ನೀ ಕೊರಗಬ್ಯಾಡ. ನನ್ನ ಮದ್ವಿ ನೀ ವಿರೋಧ ಮಾಡದಾಗ ನನ್ನ ಮನಸ್ಸಿಗೂ ಭಾಳ ಕೆಟ್ಟದನಿಸಿತ್ತು. ಈ ಮನಸಿನ್ಯಾಗೂ ಹುಚ್ಚ ಆಸೆಗಳಿದ್ವು. ಹಾಗಂತ ಸಂಪ್ರದಾಯ, ಪದ್ಧತಿಗಳನ್ನ ಬಿಡೊಕ್ಕ ಆಗ್ತಿತ್ತೇನು. ಈಗ ಕಾಲ ಬದಲಾಗ್ಯಾದ. ಬದಕನ್ಯಾಗ ಸೋತ ಹೆಣ್ಣಿಗಿ ಬಾಳ ಕೊಟ್ಟಾಂಗ ಆಗ್ತದ. ಎಲ್ಲಾ ಒಳ್ಳೆದಾಗ್ತದ ಮದುವಿಗಿ ಒಪ್ಕೊಂಡು ಬಿಡು. ವೈನಿ ಮತ್ತು ರಾಘಪ್ಪನ ಜೋಡಿನೂ ಮಾತಾಡಿ ಒಪ್ಪಿಸಿದ್ದೀನಿ. ಕೃಷ್ಣಾಚಾರ್ಯರಿಗಿ ಹೆಣ್ಣು ನೋಡ್ಲಿಕ್ಕಿ ಬರ್ತಿವಿ ಅಂತ ಭೇಟಿಯಾಗಿ ಹೇಳ್ಬಿಡು’ ಶಾರದಾ ಅಣ್ಣನಿಗೆ ಹೇಳಿ ಅವರ ಉತ್ತರಕ್ಕೂ ಕಾಯದೆ ಹಿತ್ತಲ ಬಾಗಿಲಿಂದ ಅಡುಗೆ ಮನೆಯ ಕಡೆ ಹೆಜ್ಜೆ ಹಾಕಿದಳು. ಬಂಡೆಯಂತೆ ಬಂದೆರಗಿದ ಸಮಸ್ಯೆಯನ್ನು ಶಾರದಾ ಕ್ಷಣ ಮಾತ್ರದಲ್ಲಿ ಬಗೆಹರಿಸಿದ್ದಳು. ಮಾಧವಶಾಸ್ತ್ರಿಗಳು ಕತ್ತೆತ್ತಿ ನೋಡಿದರು.  ದೂರದಲ್ಲಿ ನಡೆದು ಹೋಗುತ್ತಿರುವ ತಂಗಿ ಶಾರದೆ ಕ್ಷಣ ಕ್ಷಣಕ್ಕೂ ಆಕಾಶದೆತ್ತರಕ್ಕೆ ಬೆಳೆಯುತ್ತಿರುವಂತೆಯೂ ತಾವು ಅವಳೆದುರು ತೀರ ಕುಬ್ಜರಾದಂತೆ ಅನ್ನಿಸಿ ಕಣ್ಣಿಗೆ ಕತ್ತಲಾವರಿಸಿ ಆಸರೆಗಾಗಿ ಸುತ್ತಲೂ ನೋಡತೊಡಗಿದರು.

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 



No comments:

Post a Comment