Tuesday, November 28, 2017

ಸಾಂಗತ್ಯ (ಕಥೆ)

             



(ಎಪ್ರಿಲ್ ೨೦೧೮ ರ 'ತುಷಾರ' ಪತ್ರಿಕೆಯಲ್ಲಿ ಪ್ರಕಟವಾಗಿದೆ)

       ‘ಮನಸ್ವಿನಿ ಮೇಡಂ ಷಾರ್ಪ್ 10 ಗಂಟೆಗೆ ಬಸವೇಶ್ವರ ಸರ್ಕಲ್‍ನಲ್ಲಿರೊ ಸಾಹಿತ್ಯ ಪ್ರಕಾಶನಕ್ಕೆ ಬನ್ನಿ. ಇವತ್ತು ನನ್ನ ‘ಭಾವನೆಗಳು’ ಪುಸ್ತಕ ಬಿಡುಗಡೆ ಆಗ್ತಿದೆ. ಆ ಪುಸ್ತಕದ ಮೊದಲನೆ ಓದುಗರು ನೀವೇ ಆಗ್ಬೇಕು. ಪ್ಲೀಜ್ ತಪ್ಪಿಸಬೇಡಿ ದಯವಿಟ್ಟು ಬನ್ನಿ ಸಭಾಂಗಣದ ಬಾಗಿಲಲ್ಲೆ ನಿಮಗಾಗಿ ಕಾಯ್ತಿರ್ತಿನಿ’ ರಾಘವ ಫೋನ್  ಮಾಡಿದಾಗ ಗಡಿಯಾರ ಬೆಳಗಿನ 9 ಗಂಟೆ ತೋರಿಸುತ್ತಿತ್ತು. ರವಿವಾರವಾದ್ರೂ ಮಕ್ಕಳಿಬ್ಬರು ಸ್ಪೆಷಲ್ ಕ್ಲಾಸ್ ಅಂತ ಸ್ಕೂಲಿಗೆ ರೆಡಿ ಆಗ್ತಿದ್ರು. ಪ್ರದೀಪ ಬಿಜಿನೆಸ್ ಅಂತ ಹೈದರಾಬಾದಿಗೆ ಹೋಗಿ ಎರಡು ದಿನಗಳಾಗಿತ್ತು. ಹೇಗೂ ಭಾನುವಾರ ಕಾಲೇಜಿಗೆ ರಜೆ ಬೇರೆ, ಮೇಲೆ ರಾಘವ ಸರ್ ಅವರ ಆತ್ಮೀಯ ಒತ್ತಾಯ. ಮಕ್ಕಳಿಬ್ಬರನ್ನೂ ಸ್ಕೂಲ್ ವ್ಯಾನಿಗೆ ಹತ್ತಿಸಿ ಗಡಿಯಾರ ನೋಡಿಕೊಂಡಾಗ ಕಾರ್ಯಕ್ರಮಕ್ಕೆ ಇನ್ನೂ ಅರ್ಧಗಂಟೆ ಸಮಯವಿತ್ತು. ಕಾರಿನಲ್ಲಿ ಮನೆಯಿಂದ ಸಾಹಿತ್ಯ ಪ್ರಕಾಶನಕ್ಕೆ ಹದಿನೈದು ನಿಮಿಷಗಳ ದಾರಿ. ಮಕ್ಕಳಿಗೆಂದು ಮಾಡಿಟ್ಟಿದ್ದ ಟಿಫಿನ್‍ನಲ್ಲೆ ಒಂದಿಷ್ಟನ್ನು ತಿಂದು ಅಡುಗೆ ಮನೆಯಲ್ಲಿದ್ದ ಶಾರದಮ್ಮನವರಿಗೆ ಹೇಳಿ ಹೊರಬಂದಾಗ ಫೋನ್  ರಿಂಗಣಿಸಿತು. ಆ ಕಡೆಯಿಂದ ‘ಮೇಡಂ ಎಲ್ಲಿದ್ದಿರಾ?’ ಎನ್ನುವ ರಾಘವ ಮಾತಿಗೆ ಇಲ್ಲೆ ಹತ್ತಿರದಲ್ಲಿದ್ದೇನೆಂದು ಹೇಳಿ ಕಾರನ್ನು ಬಸವೇಶ್ವರ ಸರ್ಕಲ್ ಕಡೆ ತಿರುಗಿಸಿದೆ.  

   ರಾಘವ ಇತಿಹಾಸದ ಪ್ರಾಧ್ಯಾಪಕರಾಗಿ ನಾನು ಉಪನ್ಯಾಸಕಿಯಾಗಿರುವ ಕಾಲೇಜಿಗೆ ಬಂದು ಎಂಟು ತಿಂಗಳುಗಳಾಯ್ತು. ಇತಿಹಾಸದ ಪ್ರಾಧ್ಯಾಪಕರಾದರೂ ಸಾಹಿತ್ಯದಲ್ಲಿ ಹೆಚ್ಚಿನ ಆಸಕ್ತಿ ಅವರಿಗೆ. ಅನಂತಮೂರ್ತಿ, ಭೈರಪ್ಪ, ಯಶವಂತ ಚಿತ್ತಾಲ, ಲಂಕೇಶ್ ಅವರ ಹೆಚ್ಚಿನ ಕೃತಿಗಳನ್ನು ಓದಿಕೊಂಡವರು. ಕಿಟ್ಸ್, ಬೊದಿಲೇರ್, ಕಮೂ, ಕಾಫ್ಕಾ ಬಗ್ಗೆ ಅವರು ಆಸಕ್ತಿಯಿಂದ ಮಾತನಾಡುವುದನ್ನು ಕೇಳುವುದೆ ಚೆಂದ. ಜೊತೆಗೆ ನಾಲ್ಕಾರು ಪುಸ್ತಕಗಳನ್ನು ಬರೆದು ಸಾಹಿತ್ಯ ಕ್ಷೇತ್ರದಲ್ಲಿ ಒಂದಿಷ್ಟು ಗುರುತಿಸಿಕೊಂಡಿರುವರು ಬೇರೆ. ಸಂಕೋಚ ಸ್ವಭಾವದ ರಾಘವ ಇತರರೊಂದಿಗೆ ಬೆರೆಯುವುದು ಅತಿ ಕಡಿಮೆ. ತಮ್ಮ ಬರವಣಿಗೆ ಬಗ್ಗೆ ಕಾಲೇಜಿನ ಸ್ಟಾಪ್ ರೂಮಿನಲ್ಲಿ ಇತರ ಉಪನ್ಯಾಸಕರೊಂದಿಗೆ ಅವರು ಮಾತಾಡಿದ್ದನ್ನು ನಾನು ಕೇಳಿಯೇ ಇಲ್ಲ. ಆದರೆ ಕಾಲೇಜಿನಲ್ಲಿನ ಸಾಹಿತ್ಯಕ್ಕೆ ಸಂಬಂಧಿಸಿದ ಯಾವ ಸಮಾರಂಭಗಳನ್ನು ತಪ್ಪಿಸಿಕೊಂಡವರಲ್ಲ. ಕಾಲೇಜಿನಲ್ಲಿದ್ದಾಗ ರಾಘವ ಸರ್ ಒಂದು ಕ್ಲಾಸ್ ರೂಮಿನಲ್ಲಿ ಪಾಠ ಮಾಡ್ತಿರಬಹುದು ಅಥವಾ ಸ್ಟಾಪ್ ರೂಮಿನಲ್ಲಿ ಪುಸ್ತಕ ಓದುತ್ತ ಕುಳಿತಿರಬಹುದು ಎಂದು ಇಡೀ ಕಾಲೇಜು ಹಾಸ್ಯ ಮಾಡುತ್ತಿತ್ತು. ರಾಘವ ಮಾತ್ರ ಯಾವದಕ್ಕೂ ತಲೆಕೆಡಿಸಿಕೊಳ್ಳದೆ ತಮ್ಮ ನೆಚ್ಚಿನ ಲೇಖಕರ ಪುಸ್ತಕಗಳ ಓದಿನಲ್ಲಿ ಮಗ್ನರಾಗಿ ಸುತ್ತಲಿನ ಜಗತ್ತನ್ನೆ ಮರೆಯುತ್ತಿದ್ದರು. 

    ಕಾರು ಬಸವೇಶ್ವರ ಸರ್ಕಲ್ ಸುತ್ತುಹಾಕಿ ಎಡಕ್ಕೆ ತಿರುಗಿ ಸಾಹಿತ್ಯ ಪ್ರಕಾಶನದ ಆವರಣವನ್ನು ಪ್ರವೇಶಿಸಿದಾಗ ದೂರದಿಂದಲೆ ಬಾಗಿಲಲ್ಲಿ ರಾಘವ ನಿಂತಿರುವುದು ಕಾಣಿಸಿತು. ನನ್ನನ್ನು ನೋಡುತ್ತಲೆ ಕಾರಿನ ಸಮೀಪ ಬಂದರು. ಬಿಳಿ ಪಾಯಿಜಾಮ ಜುಬ್ಬಾದಲ್ಲಿ ಎಂದಿಗಿಂತ ಹೆಚ್ಚು ಆಕರ್ಷಕವಾಗಿ ಕಾಣಿಸುತ್ತಿದ್ದರು. ಸಾಹಿತ್ಯ ಪ್ರಕಾಶನದ ಕಟ್ಟಡ ಮಾವಿನ ತೋರಣ ಮತ್ತು ಹೂಗಳಿಂದ ಶೃಂಗಾರಗೊಂಡಿತ್ತು. ಪ್ರವೇಶ ದ್ವಾರದ ಬಳಿ ಬಣ್ಣದ ಚಿತ್ತಾರಗಳಿಂದ ಕಂಗೊಳಿಸುತ್ತಿದ್ದ ರಂಗೋಲಿ ಅತಿಥಿಗಳನ್ನು ಸ್ವಾಗತಿಸುತ್ತಿತ್ತು. ‘ಮೇಡಂ ಇನ್ನೇನು ಕಾರ್ಯಕ್ರಮ ಶುರುವಾಗುತ್ತೆ ನಿಮಗಾಗಿ ಫ್ರಂಟ್ ಸೀಟ್ ಕಾಯ್ದಿರಿಸಿದ್ದಿನಿ ಬನ್ನಿ’ ರಾಘವ ಅವಸರಿಸುತ್ತ ನನ್ನನ್ನು ವೇದಿಕೆಯ ಮುಂಭಾಗಕ್ಕೆ ಕರೆದೊಯ್ದು ಕೂರಿಸಿದರು. ‘ಸರ್ ನಿಮ್ಮ ಹೆಂಡತಿ ಎಲ್ಲಿ’ ನನ್ನ ಮಾತಿನಿಂದ ಕಳೆಗುಂದಿದ ರಾಘವ ಮುಖ ನೋಡಿ ಪ್ರಶ್ನೆ ಕೇಳಬಾರದಿತ್ತೇನೋ ಅನಿಸಿತು. 

     ಅತಿಥಿಗಳ ಭಾಷಣ ಮುಗಿದು ಪುಸ್ತಕ ಬಿಡುಗಡೆಯಾಗಿ ಕಾರ್ಯಕ್ರಮ ಮುಗಿಯುವ ಹೊತ್ತಿಗೆ ಮಧ್ಯಾಹ್ನ ಒಂದು ಗಂಟೆಯಾಗಿತ್ತು. ‘ಮೇಡಂ ನಿಮಗೆ’ ರಾಘವ ಕೊಟ್ಟ ಪುಸ್ತಕ ತೆರೆದು ನೋಡಿದೆ ‘ಆತ್ಮೀಯ ಮನಸ್ವಿನಿ ಮೇಡಮ್‍ಗೆ ಪ್ರೀತಿಯಿಂದ’ ಎನ್ನುವ ಮುದ್ದಾದ ಅಕ್ಷರಗಳ ಕೆಳಗೆ ‘ನಿಮ್ಮ ರಾಘವ’ ಎಂದಿತ್ತು. ಮನಸ್ಸು ತುಂಬಿ ಬಂದು ಮಾತಿಗಾಗಿ ತಡವರಿಸಿದೆ. ರಾಘವ ಕಣ್ಣಲ್ಲೂ ಹೊಳಪು. ಊಟ ಮಾಡಿಕೊಂಡೆ ಹೋಗಬೇಕೆಂದು ರಾಘವ ಒತ್ತಾಯಿಸಿದಾಗ ‘ಇಲ್ಲ ಸರ್ ಸ್ಕೂಲಿಂದ ಮಕ್ಕಳು ಬರೊ ಹೊತ್ತು. ನನಗಾಗಿ ಕಾಯ್ತಿರ್ತಾರೆ ನಾನು ಹೋಗ್ಬೇಕು’ ಗಡಿಬಿಡಿಸಿ ಕಾರಿನಕಡೆ ನಡೆದೆ. ಕಾರಿನವರೆಗೂ ಬಿಳ್ಕೊಡಲು ಬಂದ ರಾಘವ ‘ಮೇಡಂ ನಿಧಾನವಾದರೂ ಪರ್ವಾಗಿಲ್ಲ ಪುಸ್ತಕ ಓದಿ ನಿಮ್ಮ ಅಭಿಪ್ರಾಯ ಹೇಳಿ ಕಾಯ್ತಿರ್ತಿನಿ’ ಎಂದಾಗ ಪುಸ್ತಕದ ಮೇಲೆ ಮೃದುವಾಗಿ ಕೈಯಾಡಿಸಿ ಕಣ್ಣಲ್ಲೆ ಮೆಚ್ಚುಗೆ ಸೂಚಿಸಿದೆ. ರಾಘವ ಕಣ್ಣೊಳಗಿನ ಹೊಳಪು ಇನ್ನಷ್ಟು ಹೆಚ್ಚಿದಂತೆ ಕಾಣಿಸಿತು. ಕಾರು ಸಾಹಿತ್ಯ ಪ್ರಕಾಶನ ಆವರಣದ ಮೇನ್ ಗೇಟ್ ದಾಟಿ ಮುಖ್ಯರಸ್ತೆಗೆ ಬರುವವರೆಗೂ ರಾಘವ ಅಲ್ಲೇ ನಿಂತಿರುವುದು ಕಾರಿನ ಸೈಡ್ ಮಿರರ್‍ನಲ್ಲಿ ಕಾಣಿಸಿ ಕಣ್ಣುಗಳು ಹನಿಗೂಡಿದವು. 

    ಮನೆ ಒಳಗಡೆ ಕಾಲಿಡುತ್ತಿದ್ದಂತೆ ಪ್ರದೀಪ ಮತ್ತು ಮಕ್ಕಳ ಗಲಾಟೆ ನನ್ನನ್ನು ಸ್ವಾಗತಿಸಿತು. ‘ಅರೇ ಒಂದುವಾರ ಅಂತಹೇಳಿ ಮೂರೇ ದಿನಗಳಲ್ಲಿ ಹೈದರಾಬಾದಿನಿಂದ ಹಿಂದಿರುಗಿದ್ದಿರಿ’ ಎನ್ನುತ್ತ ವ್ಯಾನಿಟಿ ಬ್ಯಾಗನ್ನು ಟೀಪಾಯ್ ಮೇಲಿಟ್ಟು ಸೋಫಾಕ್ಕೆ ಒರಗಿದೆ. ‘ಕೆಲಸ ಬೇಗ ಮುಗೀತು. ಬೇರೆ ಇನ್ನೇನೂ ಕೆಲಸ ಇರ್ಲಿಲ್ಲ ಅಲ್ಲಿ. ಅದಕ್ಕೆ ಇವತ್ತೇ ಹೊರಟು ಬಂದೆ’ ಎಂದು ಉತ್ತರಿಸಿದ ಪ್ರದೀಪ ವ್ಯಾನಿಟಿ ಬ್ಯಾಗಿನಿಂದ ಅರ್ಧ ಹೊರಕ್ಕೆ ಕಾಣಿಸುತ್ತಿದ್ದ ಪುಸ್ತಕವನ್ನು ಕೈಗೆತ್ತಿಕೊಂಡು ಒಳಪುಟದ ಮೇಲೆ ಕಣ್ಣಾಡಿಸಿದರು. ನನ್ನೆದೆ ಢವಢವ ಎಂದು ಹೊಡೆದುಕೊಳ್ಳಲಾರಂಭಿಸಿತು. ‘ಏ ಮನು ರಾಘವ ನಿನ್ನನ್ನು ಲವ್ ಮಾಡ್ತಿರಬಹುದು ಅಂತ ಅನಿಸುತ್ತೆ’ ಪ್ರದೀಪ ಮಾತಿನಲ್ಲಿ ಛೇಡಿಸುವಿಕೆ ಇತ್ತೆ ವಿನ: ಯಾವುದೇ ಕೊಂಕಿರಲಿಲ್ಲ. ಪ್ರದೀಪ ಬೆನ್ನ ಮೇಲೊಂದು ಹುಸಿಎಟು ಹಾಕಿ ತೋಳಿಗೆ ಮುಖ ಉಜ್ಜಿದಾಗ ಇವತ್ತು ನಾನೇಕೋ ಎಂದಿನಂತಿಲ್ಲ ಎನ್ನುವ ಭಾವ ಉದಿಸಿ ಕಾಡಿದಂತಾಯಿತು. 

     ಕಳೆದ ಮೂರ್ನಾಲ್ಕು ತಿಂಗಳಿಂದ ರಾಘವ ಅವರು ನನ್ನನ್ನು ನೋಡುವ ರೀತಿಯಲ್ಲಿ ಏನೋ ಬದಲಾವಣೆ ಕಾಣಿಸುತ್ತಿದೆ. ಕಾಲೇಜಿನಲ್ಲಿ ನನ್ನನ್ನು ಹುಡುಕಿಕೊಂಡು ಬಂದು ಸಾಹಿತ್ಯದ ಕುರಿತು ಮಾತನಾಡುವುದು, ತಾವು ಓದಿದ ಪುಸ್ತಕಗಳನ್ನು ನನಗೆ ಓದಲು ಕೊಡುವುದು, ನಾನು ರಜೆ ಹಾಕಿ ಮರುದಿನ ಕಾಲೇಜಿಗೆ ಹೋದಾಗ ನನಗಾಗಿಯೇ ಕಾಯುತ್ತಿರುವರೇನೋ ಎನ್ನುವಷ್ಟು ಭಾವಪರವಶರಾಗುವುದು ಅವರ ಈ ವರ್ತನೆ ಕೆಲವೊಮ್ಮೆ ಅತಿ ಎನಿಸಿ ಮನಸ್ಸಿಗೆ ಕಿರಿಕಿರಿಯಾದರೂ ರಾಘವ ಅವರ ಜೊತೆಗಿನ ಈ ಒಡನಾಟ ನನ್ನಲ್ಲೂ ಒಂದಿಷ್ಟು ಲವಲವಿಕೆಗೆ ಕಾರಣವಾಗಿದೆ. ಸಂಕೋಚ ಸ್ವಭಾವದ ರಾಘವ ಅವರೇನೂ ನೇರವಾಗಿ ನನ್ನ ಗೆಳೆತನ ಬಯಸಿರಲಿಲ್ಲ. ಸ್ಟಾಫ್ ರೂಮಿನಲ್ಲಿ ಭೇಟಿಯಾದಾಗ ಹಾಯ್ ಹಲೋಗಳಿಗಷ್ಟೆ ನಮ್ಮ ಮಾತುಕತೆ ಸೀಮಿತವಾಗಿರುತಿತ್ತು. ವಾಟ್ಸಪ್ಪಿನಲ್ಲೊಮ್ಮೆ  ಕುವೆಂಪು ಅವರ ‘ತನವು ನಿನ್ನದು ಮನವು ನಿನ್ನದು’ ಕವಿತೆಯನ್ನು ರಾಘವ ಮೆಸೆಜಿಸಿದಾಗ ನಾನು ಮೆಚ್ಚಿ ಅವರ ಪರ್ಸನಲ್ ನಂಬರಿಗೆ ಅಭಿಪ್ರಾಯ ಕಳುಹಿಸಿದ್ದೆ. ಅವತ್ತಿನಿಂದ ರಾಘವ ಅವರಿಗೆ ನನಗೂ ಸಾಹಿತ್ಯದ ಕುರಿತು ಅಭಿರುಚಿಯಿದೆ ಎಂದು ಗೊತ್ತಾಗಿ ಸಮಯ ಸಿಕ್ಕಾಗಲೆಲ್ಲ ನನ್ನೊಡನೆ ಸಾಹಿತ್ಯದ ಕುರಿತು ಚರ್ಚಿಸುತ್ತಿದ್ದರು. ಕನ್ನಡ ಸಾಹಿತ್ಯವನ್ನು ತುಂಬ ಓದಿಕೊಂಡಿರುವ ರಾಘವ ಅವರೊಂದಿಗೆ ಮಾತನಾಡುವುದು ಮತ್ತು ಚರ್ಚಿಸುವುದು ನನ್ನಲ್ಲಿಯೂ ಕನ್ನಡ ಕಥೆ, ಕಾದಂಬರಿಗಳನ್ನು ಓದುವ ಆಸಕ್ತಿಯನ್ನು ಮೂಡಿಸಿತ್ತು. ನಿದ್ದೆ ಬಾರದೆ ಮಗ್ಗುಲು ಬದಲಿಸಿದಾಗ ‘ಮನು ಯಾಕೆ ನಿದ್ದೆ ಬರ್ತಿಲ್ವಾ’ ಪ್ರದೀಪ ಕೈನ ಬೆಚ್ಚನೆ ಸ್ಪರ್ಷದಿಂದ ವಾಸ್ತವಕ್ಕೆ ಮರಳಿದೆ. ‘ನನ್ಗೊತ್ತು ನೀನು ಏನನ್ನು ಚಿಂತಿಸ್ತಿದ್ದಿಯಾ ಅಂತ’ ಪ್ರದೀಪ ನುಡಿದಾಗ ಎದೆ ಝಲ್ ಎಂದು ಆ ಚಳಿಯಲ್ಲೂ ಮುಖದ ಮೇಲೆ ಬೆವರೊಡೆಯಿತು. ‘ಕಾಲೇಜಿನ ರಾಜಕೀಯವನ್ನ ತೀರ ತಲೆಗೆ ಹಚ್ಕೊಬೇಡ. ನೀನು ಕೊರ್ಗೊದಲ್ಲದೆ ಮನೆಯಲ್ಲಿ ಎಲ್ಲರನ್ನೂ ಕೊರಗಸ್ತಿಯಾ’ ಭಾರವೊಂದು ಇಳಿದಂತಾಗಿ ದೀರ್ಘವಾಗಿ ಉಸಿರೆಳೆದುಕೊಂಡೆ. ಪ್ರದೀಪ ಮತ್ತೆ ನಿದ್ದೆಗೆ ಜಾರಿದ್ದರು. ಯಾವ ಚಿಂತೆಯನ್ನು ತಲೆಗೆ ಹಚ್ಚಿಕೊಳ್ಳದೆ ತಾನಾಯ್ತು ತನ್ನ ಬಿಜಿನೆಸ್ ಆಯ್ತು ಎನ್ನುವ ಪ್ರದೀಪ ನಿಜಕ್ಕೂ ಸುಖ ಪುರುಷ. ರಾತ್ರಿ ನಿದ್ದೆ ಬರುವವರೆಗೂ ಕಥೆ ಇಲ್ಲವೆ ಕಾದಂಬರಿಯನ್ನು ಓದುತ್ತ ಕುಳಿತಾಗಲೆಲ್ಲ ಪ್ರದೀಪ ‘ಈ ಸಾಹಿತ್ಯ ಮನುಷ್ಯನನ್ನು ಸೆಂಟಿಮೆಂಟಲ್ ಫೂಲ್ ಆಗಿಸುತ್ತೆ. ತೀರ ಓದ್ಬೇಡ ಸ್ವಲ್ಪ ವ್ಯವಹಾರ ಜ್ಞಾನ ಇರಲಿ’ ಎಂದು ರೇಗಿಸುತ್ತಿದ್ದರು. ಈ ಸಾಹಿತ್ಯ, ನಾಟಕ, ಸಂಗೀತ ಇವುಗಳಿಂದ ಪ್ರದೀಪ ಬಲುದೂರ. ಆದರೆ ನನಗೆ ಚಿಕ್ಕಂದಿನಿಂದ ಈ ಸಂಗೀತ ಮತ್ತು ನೃತ್ಯದಲ್ಲಿ ಬಹಳ ಆಸಕ್ತಿ. ನನ್ನ ಆಸಕ್ತಿಯನ್ನು ಅರಿತ ಅಪ್ಪ ಚಿಕ್ಕಂದಿನಲ್ಲೆ ನನ್ನನ್ನ ಡ್ಯಾನ್ಸ್ ಕ್ಲಾಸಿಗೆ ಸೇರಿಸಿದ್ದರು. ಕಾಲೇಜಿಗೆ ಸೇರಿದ ಮೇಲೆ ಅಲ್ಲಿ ನಡೆಯುತ್ತಿದ್ದ ಸಾಹಿತ್ಯದ ಕಾರ್ಯಕ್ರಮಗಳಿಂದ ಕಥೆ ಕಾದಂಬರಿಗಳ ಓದಿನ ಹವ್ಯಾಸವೂ ಮೊಳಕೆಯೊಡೆದು ಬೆಳೆಯಿತು. ಈ ಕೆಲವು ತಿಂಗಳುಗಳಿಂದ ರಾಘವ ಸ್ನೇಹದಿಂದಾಗಿ ಸಾಹಿತ್ಯದ ಅಭಿರುಚಿ ಮತ್ತಷ್ಟು ಹೆಚ್ಚಿದೆ. 

     ರಾಘವ ನನಗೆ ತೀರ ಹತ್ತಿರವಾಗಲು ಇದರಲ್ಲಿ ಅವರಷ್ಟೇ ನನ್ನ ಪಾಲೂ ಇದೆ. ಇಡೀ ಮನೆಯಲ್ಲಿ ಪ್ರದೀಪಗಾಗಲಿ ಅಥವಾ ಮಕ್ಕಳಿಗಾಗಲಿ ಹಾಡು, ಡ್ಯಾನ್ಸ್, ಸಾಹಿತ್ಯದ ಅಭಿರುಚಿಯಿಲ್ಲ. ಪ್ರದೀಪ್‍ಗೆ ಆಫೀಸು ಮನೆ ಒಂದೇ ಎನ್ನುವಂತೆ ದಿನದ ಹೆಚ್ಚಿನ ಸಮಯ ಕಳೆಯೊದು ತಮ್ಮ ಬಿಜಿನೆಸ್‍ನಲ್ಲೆ. ಮಕ್ಕಳು ಸ್ಕೂಲಿಂದ ಮನೆಗೆ ಬಂದವರೆ ಹೋಂವರ್ಕ್, ಟ್ಯೂಷನ್, ಪಕ್ಕದ ಮನೆಯ ಮಕ್ಕಳೊಂದಿಗೆ ಆಟ, ಕಾರ್ಟೂನ್ ನೋಡೊದು ಹೀಗೆ ಅವರಿಗೆ ನನ್ನೊಂದಿಗೆ ಮಾತಾಡೊದಕ್ಕೂ ಟೈಮ್ ಸಿಗೊಲ್ಲ. ಒಮ್ಮೊಮ್ಮೆ ಕಥೆ ಹೇಳ್ತಿನಿ ಬನ್ನಿ ಎಂದು ಕರೆದರೆ ‘ಹೋಗಮ್ಮಾ ನಿನ್ನ ಓಬೆರಾಯನ ಕಾಲದ ಕಥೆಗಳನ್ನ ಯಾರ ಕೇಳ್ತಾರೆ’ ಎಂದು ಸಿಡಿಮಿಡಿ ಗುಟ್ಟುತ್ತಾರೆ. ಸಹಜವಾಗಿಯೇ ನನಗೂ ನನ್ನ ಅಭಿರುಚಿಗಳನ್ನ ಹಂಚಿಕೊಳ್ಳಲು ಒಂದು ಗೆಳೆತನ ಬೇಕಾಗಿತ್ತು. ನನ್ನದೆ ಅಭಿರುಚಿ ಇರುವವರನ್ನು ಮನಸ್ಸು ಹುಡುಕುತ್ತಿತ್ತು ಅಂತ ಕಾಣುತ್ತೆ. ಹೀಗೆ ಹುಡುಕಾಟದಲ್ಲಿ ರಾಘವ ಪರಿಚಯವಾಯಿತು. ಅಭಿರುಚಿ ಒಂದೇ ಇರುವುದರಿಂದ ಇಬ್ಬರ ನಡುವೆ ಸಹಜವಾಗಿಯೆ ಆತ್ಮೀಯತೆ ಬೆಳೆಯಿತು. ಆದರೆ ಈ ಆತ್ಮೀಯತೆಯನ್ನು ರಾಘವ ತಪ್ಪಾಗಿ ತಿಳಿದುಕೊಂಡರೇನೋ ಎನ್ನುವ ಭಾವ ಕಳೆದ ಕೆಲವು ದಿನಗಳಿಂದ ನನ್ನನ್ನು ಕಾಡುತ್ತಿದೆ. ಎರಡು ಮಕ್ಕಳ ತಾಯಿಯಾದರು ನನ್ನ ದೈಹಿಕ ಸೌಂದರ್ಯ ಇನ್ನು ಮಾಸಿಲ್ಲ. ಮದುವೆಯಾಗುವವರೆಗೂ ಡ್ಯಾನ್ಸ್ ಕ್ಲಾಸಿಗೆ ಹೋಗುತ್ತಿದ್ದ ಕಾರಣ ಬೊಜ್ಜಿಲ್ಲದೆ ಶರೀರ ನೀಳವಾಗಿದೆ. ಅಂದರೆ ರಾಘವ ಅವರದು ನನ್ನ ಮೇಲೆ ಇನ್‍ಫ್ಯಾಚುಯೇಷನ್ ಅನ್ಬಹುದಾ. ಛೀ ರಾಘವ ಅವರಂಥ ನಿಷ್ಕಲ್ಮಶ ಮನಸ್ಸಿನ ವ್ಯಕ್ತಿಯನ್ನು ಆ ದೃಷ್ಟಿಯಲ್ಲಿ ನೋಡೊದಕ್ಕೂ ಮನಸ್ಸು ಬರಲ್ಲ. ಕಳೆದ  ಗಣೇಶ ಚತುರ್ಥಿಗೆ ನಲ್ವತ್ಮೂರು ತುಂಬಿದ  ನನಗಿಂತ ರಾಘವ ನಾಲ್ಕು ವರ್ಷ ದೊಡ್ಡವರು. ಇಂಥ ವಯಸ್ಸಿನಲ್ಲಿ ಅದೆಂಥ ದೈಹಿಕ ಆಕರ್ಷಣೆ ಇರುತ್ತೆ. ಕಳೆದ ವಾರದ ಘಟನೆಯನ್ನು ನೆನಪಿಸಿಕೊಂಡರೆ ರಾಘವ ಅವರ ಬಗೆಗಿನ ನನ್ನ ಕಲ್ಪನೆಯೇ ತಪ್ಪು ಅನಿಸುತ್ತೆ. ಆ ದಿನ ಕಾಲೇಜಿನಲ್ಲಿ ಸೇಮಿನಾರ ಮುಗಿಸಿಕೊಂಡು ಮನೆಗೆ ಹೊರಟಾಗ ಆಕಾಶದ ತುಂಬೆಲ್ಲ ಮೋಡಗಳು ದಟ್ಟವಾಗಿ ಕವಿದು ಆಗಲೋ ಈಗಲೋ ಮಳೆ ಸುರಿಯುವಂತ ವಾತಾವರಣವಿತ್ತು. ಕಾಲೇಜಿನಿಂದ ಒಂದಿಷ್ಟು ದೂರ ಬಂದದ್ದೆ ಕಾರು ಕೆಟ್ಟು ನಿಂತು ಮಳೆ ಧೋ ಎಂದು ಸುರಿಯಲಾರಂಭಿಸಿತು. ಸುತ್ತಲೂ ಕತ್ತಲು ಗಂವ್ ಎಂದು ಕವಿದ ನಿರ್ಜನ ಪ್ರದೇಶವದು. ಮನೆಗೆ ಫೋನ್ ಮಾಡಬೇಕೆಂದರೆ ಅಂದು ಪ್ರದೀಪ್ ಬೇರೆ ಊರಲ್ಲಿರಲಿಲ್ಲ. ಸ್ವಲ್ಪ ಹೊತ್ತು ಕಾರಿನಲ್ಲೆ ಕುಳಿತವಳಿಗೆ ಎರಿಸಿದ ಗ್ಲಾಸಿನಿಂದ ಆಕೃತಿಯೊಂದು ನಿಧಾನವಾಗಿ ಬರುತ್ತಿರುವುದು ಅಸ್ಪಷ್ಟವಾಗಿ ಕಾಣಿಸಿ ಹೆದರಿಕೆಯಿಂದ ಇಡೀ ಮೈಯೆಲ್ಲ ಬೆವತು ಒದ್ದೆಯಾಯಿತು. ಹತ್ತಿರ ಬಂದ ವ್ಯಕ್ತಿ ಗ್ಲಾಸಿಗೆ ಬಡಿದು ಬಾಗಿಲು ತೆರೆಯುವಂತೆ ಹೇಳಿದಾಗ ಆದದ್ದಾಗಲಿ ಎಂದು ಬಾಗಿಲು ನೂಕಿದೆ. ಮೊಬೈಲ್ ಬೆಳಕಲ್ಲಿ ರಾಘವ ನಿಂತಿರುವುದು ಕಾಣಿಸಿ ಹೋದ ಜೀವ ಮತ್ತೆ ಮರಳಿ ಬಂದಂತಾಯಿತು. ‘ಯಾಕೆ ಮೇಡಂ ಕಾರು ರಿಪೇರಿನಾ. ಮನೆಗೆ ಹೋಗ್ತಿದ್ದೆ ನಿಮ್ಮದೆ ಕಾರು ಅಂತ ಅನುಮಾನ ಬಂದು ನೋಡಿದ್ರೆ ಒಳಗಡೆ ನೀವೆ ಇದ್ದಿರಾ. ಇಂಥ ಮಳೆನಲ್ಲಿ  ಮೆಕ್ಯಾನಿಕ್ ಸಿಗೊಲ್ಲ. ನೋಡಿ ಆಟೋ ಬರ್ತಿದೆ ನಿಮ್ಮನ್ನ ಮನೆವರೆಗೂ ತಲುಪಿಸಿ ನಾನು ಹೋಗ್ತಿನಿ. ನನ್ನ ಕೊಡೆ ಹಿಡ್ಕೊಳ್ಳಿ’ ಎಂದವರೆ ರಾಘವ ಬರುತ್ತಿದ್ದ ಆಟೋ ನಿಲ್ಲಿಸಿ ನನ್ನನ್ನು ಕೂಡಲು ಹೇಳಿದರು. ನನ್ನ ಪಕ್ಕ ಇನ್ನೊಬ್ಬರು ಕೂಡುವಷ್ಟು ಜಾಗವಿದ್ದರೂ ಸಂಕೋಚದಿಂದ ರಾಘವ ಮಳೆಯಲ್ಲಿ ನೆನೆಯುತ್ತಲೆ ಚಾಲಕನ ಹತ್ತಿರ ಕೂತು ಮನೆ ಅಡ್ರೆಸ್ ಹೇಳಿದರು. ಅಂದು ರಾಘವ ಸಮೀಪ ನಿಂತಿದ್ದಾಗ ಫಳ್ಳೆಂದು ಹೊಳೆದ ಮಿಂಚಿನ ಬೆಳಕಲ್ಲಿ ಅವರ ಕಣ್ಣಲ್ಲಿ ಕಂಡದ್ದು ಅದೆ ನಿಷ್ಕಲ್ಮಶ ನೋಟವನ್ನು. ಕಾಮನೆಯಾಗಲಿ ಪರಿಸ್ಥಿತಿಯ ಉಪಯೋಗವನ್ನು ತನ್ನ ಅನುಕೂಲಕ್ಕೆ ಬಳಸಿಕೊಳ್ಳಬೇಕೆಂಬ ವಾಂಛೆಯಾಗಲಿ ಅಲ್ಲಿ ಇರಲಿಲ್ಲ. ಆದರೂ ಬೆಲ್ಲಕ್ಕೆ ಮುತ್ತುವ ಇರುವೆಗಳಂತೆ  ಮನಸ್ಸು ರಾಘವ ಸುತ್ತಲೆ ಸುತ್ತುತ್ತಿದೆ.  ಸರಿ ತಪ್ಪುಗಳ ಲೆಕ್ಕಾಚಾರದಲ್ಲಿ ಇಡೀ ರಾತ್ರಿ ನಿದ್ರೆ ಕೂಡ ಹತ್ತಿರ ಸುಳಿಯದೆ ಇನ್ನೇನು ಒಂದಿಷ್ಟು ಜೊಂಪು ಹತ್ತುವ ವೇಳೆಗೆ ಪೂರ್ವ ಕೆಂಪಾಗುತ್ತಿತ್ತು. 

          ಬೆಳೆಗ್ಗೆ ಕಾಲೇಜಿಗೆ ಹೋದಾಗ ಸ್ಟಾಫ್ ರೂಮಿನಲ್ಲಿ ಶಾಲಿನಿ ಹೇಳಿದ ವಿಷಯ ಕೇಳಿ ನನಗೆ ನಂಬಲೆ ಆಗಲಿಲ್ಲ. ರಾಘವ ಅವರಿಗೆ ಮೈಸೂರಿಗೆ ವರ್ಗವಾಗಿ ಅವರು ಎರಡು ದಿನಗಳ ಹಿಂದೆಯೆ ಮನೆಯ ಸಾಮಾನುಗಳನ್ನೆಲ್ಲ ಸಾಗಿಸಿ ಹೆಂಡತಿಯನ್ನು ತವರಿಗೆ ಕಳಿಸಿದ್ದರು. ಕಾಲೇಜಿನಲ್ಲಿನ ಕೆಲವು ಕೆಲಸಗಳನ್ನು ಪೂರ್ಣಗೊಳಿಸಿ ಇವತ್ತೆ ಸಾಯಂಕಾಲ ಮೈಸೂರಿಗೆ ಹೊರಟು ನಾಳೆಯೆ ಡ್ಯೂಟಿಗೆ ರಿಪೋರ್ಟ್ ಮಾಡ್ಕೊಬೇಕಂತೆ. ವಿಷಯ ತಿಳಿದು ನನಗೆ ಒಂದು ರೀತಿಯ ಅನಾಥ ಭಾವ ಕಾಡಲಾರಂಭಿಸಿತು. ಹಾಗಾದರೆ ನಿನ್ನೆ ಭೇಟಿಯಾದಾಗಲೇ ನನಗೇಕೆ ಈ ವಿಷಯ ತಿಳಿಸಲಿಲ್ಲ ಎಂದು ರಾಘವ ಮೇಲೆ ಕೋಪಬಂತು. ಅಷ್ಟರಲ್ಲಿ ರಾಘವ ನಾನಿದ್ದ ಕಡೆಯೆ ಬರುವುದು ಕಾಣಿಸಿ ಏನೂ ಗೊತ್ತಿಲ್ಲದವಳಂತೆ ಅವತ್ತಿನ ಪಾಠದ ತಯ್ಯಾರಿ ಕಡೆ ಗಮನಹರಿಸಿದೆ. ‘ಮೇಡಂ ನಿಮಗೂ ವಿಷಯ ಗೊತ್ತಾಗಿರಬಹುದು. ನಿನ್ನೆ ಪುಸ್ತಕ ಬಿಡುಗಡೆ ಕಾರ್ಯಕ್ರಮದ ಗಡಿಬಿಡಿಯಲ್ಲಿ ನಿಮಗೆ ಹೇಳೊದಕ್ಕೆ ಆಗ್ಲಿಲ್ಲ. ಇವತ್ತು ಸಂಜೆ ಆರು ಗಂಟೆ ಟ್ರೇನ್‍ಗೆ ನಾನು ಮೈಸೂರಿಗೆ ಹೋಗ್ತಿದ್ದಿನಿ. ಅದಕ್ಕೆ ಮುಂಚೆ ಐದು ಗಂಟೆಗೆ ಪಾರ್ಕ್ ಹತ್ತಿರ ಸ್ವಲ್ಪ ಬಿಡುವು ಮಾಡ್ಕೊಂಡು ಬಂದ್ರೆ ನಿಮ್ಮ ಜೊತೆ ಒಂದಿಷ್ಟು ಮಾತನಾಡೊದಿದೆ. ಮೇಡಂ ದಯವಿಟ್ಟು ಬನ್ನಿ’ ಎಂದವರೆ ರಾಘವ ಬಿ.ಎ ಫೈನಲ್ ಇಯರ್ ಕ್ಲಾಸಿನ ಕಡೆ ಹೆಜ್ಜೆ ಹಾಕಿದರು. ಮನಸ್ಸು ನನ್ನ ನಿಯಂತ್ರಣದಲ್ಲಿಲ್ಲ ಎನ್ನುವ ಭಾವ ಮೂಡಿ ಕ್ಲಾಸಿನಲ್ಲಿ ಪಾಠ ಮಾಡಲು ಕೂಡ ಆಸಕ್ತಿಯಿಲ್ಲದೆ ಪ್ರಿನ್ಸಿಪಾಲರಿಗೆ ಹೇಳಿ ಮನೆಗೆ ಹೊರಟು ಬಂದೆ. ಪ್ರದೀಪ್ ಬಿಜಿನೆಸ್‍ಗೆಂದು ಚೆನ್ನೈಗೆ ಹೋಗಿದ್ದರು. ಸ್ಕೂಲಿನಿಂದ ಮಕ್ಕಳು ಬರಲು ಇನ್ನು ಸಮಯವಿತ್ತು. ಶಾರದಮ್ಮ ಮನೆಕೆಲಸ ಮುಗಿಸಿ ಹೊರಟು ಹೋಗಿದ್ದರು. ಇಡೀ ಮನೆ ಬಿಕೋ ಎನ್ನುತ್ತಿತ್ತು. ಅಳು ಒತ್ತರಿಸಿಬಂದು ದಿಂಬಿಗೆ ಮುಖ ಕೊಟ್ಟು ಮನಸ್ಸು ಹಗುರಾಗುವವರೆಗೂ ಅತ್ತೆ. ಹಾಗೆ ನಿದ್ದೆ ಹೋದವಳಿಗೆ ಶಾಲೆಯಿಂದ ಬಂದ ಮಕ್ಕಳ ಗಲಾಟೆಯಿಂದ ಎಚ್ಚರವಾಯಿತು. ಮಕ್ಕಳಿಬ್ಬರು ಸಾಯಂಕಾಲದ ತಿಂಡಿ ತಿಂದು ಟ್ಯೂಷನ್‍ಗೆ ಹೊರಟು ಹೋದರು. ಶಾರದಮ್ಮ ರಾತ್ರಿ ಅಡುಗೆಯ ಸಿದ್ಧತೆಯಲ್ಲಿದ್ದರು. ಗಡಿಯಾರ ನೋಡಿಕೊಂಡೆ ಸಮಯ ನಾಲ್ಕೂವರೆ. ರಾಘವ ಭೇಟಿಗೆ ಹೋಗಲೊ ಬೇಡವೊ ಎಂದು ಮನಸ್ಸು ಹೊಯ್ದಾಡಿತು. ಕೊನೆಪಕ್ಷ ರಾಘವ ಮನಸ್ಸಲ್ಲೇನಿದೆ ಎಂದಾದರು ತಿಳಿಯುತ್ತದೆ ಎಂದು ಎದ್ದು ಮುಖ ತೊಳೆದು ಸೀರೆ ಬದಲಿಸಿ ತೆಳುವಾಗಿ ಮೇಕಪ್ ಮಾಡಿಕೊಂಡು ಶಾರದಮ್ಮನವರಿಗೆ ಹೇಳಿ ಹೊರಬಂದೆ. 

         ರಾಘವ ನನಗಾಗಿ ಕಾಯುತ್ತ ನಿಂತಿದ್ದರು. ಇವತ್ತು ಅವರನ್ನು ನೇರವಾಗಿ ನೋಡಲು ಆಗದೆ ತುಂಬ ನರ್ವಸ್‍ನೆಸ್ ಅನ್ನಿಸತೊಡಗಿತು. ‘ಥ್ಯಾಂಕ್ಯು ಮೇಡಂ. ಎಲ್ಲಿ ಬರಲ್ವೇನೊ ಅಂದ್ಕೊಂಡಿದ್ದೆ’ ರಾಘವ ಧ್ವನಿ ಕಂಪಿಸುತ್ತಿತ್ತು. ಇಬ್ಬರು ಮರದ ನೆರಳಿನಲ್ಲಿ ಕುಳಿತುಕೊಂಡೆವು. ಅಲ್ಲಿ ನೆಲೆಸಿದ ಮೌನ ಅಸಹನೀಯವೆನಿಸಿ ನಾನೆ ಮಾತಿಗಾರಂಭಿಸಿದೆ ‘ಏನು ರಾಘವ ಸರ್ ಹೀಗೆ ಇದ್ದಕ್ಕಿದ್ದಂತೆ ಊರು ಬಿಟ್ಟು ಹೋಗ್ತಿರೊದು’ ಧ್ವನಿಯಲ್ಲಿನ ಕೋಪ ರಾಘವಗೆ ಅರ್ಥವಾಗಿ ಮಾತು ಹೇಗೆ ಆರಂಭಿಸಬೇಕೆಂದು ತೊಚದೆ ತಲೆ ತಗ್ಗಿಸಿದರು. ‘ಪ್ಲೀಜ್ ಏನಾದರು ಮಾತಾಡಿ ಹೀಗೆ ಸುಮ್ನೆ ಕುಳಿತರೆ ನನಗೇನು ಅರ್ಥವಾಗುತ್ತೆ’ ಒತ್ತಾಯಿಸಿದೆ. ರಾಘವ ಅವರ ಕಣ್ಣುಗಳು ಹನಿಗೂಡಿದ್ದು ನೋಡಿ ಹೊಟ್ಟೆಯಲ್ಲಿ ಸಂಕಟವಾಯಿತು. ‘ಮೇಡಂ ಚಿಕ್ಕ ವಯಸ್ಸಿನಿಂದ ಕಥೆ ಕಾದಂಬರಿಗಳನ್ನು ಓದುತ್ತ ಬೆಳೆದ ನಾನು ಭಾವಜೀವಿ. ಓದು, ನೌಕರಿ, ಕುಟುಂಬದ ಜವಾಬ್ದಾರಿ, ಮದುವೆ, ಸಂಸಾರ ಈ ಎಲ್ಲದರ ನಡುವೆಯೂ ಬದುಕನ್ನು ಸಹನೀಯವಾಗಿಸಿದ್ದು ನನ್ನೊಳಗಿನ ಈ ಸಾಹಿತ್ಯದ ಅಭಿರುಚಿ. ಆದರೆ ಈ ಸಮಾನ ಅಭಿರುಚಿ ಇರುವಂಥವರ ಸಂಪರ್ಕ ನನಗೆ ಸಿಕ್ಕಿದ್ದು ತುಂಬ ಕಡಿಮೆ ಮೇಡಂ. ಆಗಾಗ ಮನಸ್ಸು ಬೌದ್ಧಿಕ ಸಾಂಗತ್ಯ ಬಯಸುತ್ತಿತ್ತು. ಈ ಊರಿಗೆ ಬಂದಮೇಲೆ ನಿಮ್ಮೊಂದಿಗೆ ಆತ್ಮೀಯತೆ ಬೆಳೆದು ಮನಸ್ಸು ಬಯಸುತ್ತಿದ್ದ ಬೌದ್ಧಿಕ ಸಾಂಗತ್ಯ ನನಗೆ ನಿಮ್ಮಿಂದ ದೊರೆಯಿತು. ಕೆಲವೊಮ್ಮೆ ಅನಿಸುತ್ತಿತ್ತು ನಿಮ್ಮೊಂದಿಗೆ ಅತಿಯಾದ ಸಲುಗೆಯಿಂದ ನಡ್ಕೊಳ್ತಿದ್ದಿನಿ ಅಂತ. ನನ್ನ ನಡುವಳಿಕೆಯಿಂದ ನಿಮಗೆ ಹರ್ಟ್ ಆಗ್ಬಹುದು ಅಂತ ವಿವೇಕ ಎಚ್ಚರಿಸುತ್ತಿತ್ತು. ಆದರೆ ತೀರ ಭಾವಜೀವಿಯಾದ ನನಗೆ ನಿಮ್ಮೊಂದಿಗಿನ ಒಡನಾಟದಿಂದ ಹೊರಬರ್ಬೇಕು ಅಂದಷ್ಟು ಮತ್ತೆ ಮತ್ತೆ ನಿಮಗೆ ಹತ್ತಿರವಾಗುತ್ತಿದ್ದೆ. ಮೇಡಂ ನಿಮ್ಮೊಂದಿಗೆ ಕಳೆದ ಈ ಎಂಟು ತಿಂಗಳುಗಳು ನನ್ನ ಬದುಕಿನ ಅತಿ ಮಹತ್ವದ ಘಳಿಗೆಗಳು. ಇಷ್ಟು ಸಾಕು ಮೇಡಂ ಉಳಿದಿರುವ ಬದುಕನ್ನು ಅತ್ಯಂತ ಅರ್ಥಪೂರ್ಣವಾಗಿ ಕಳೆಯಲು. ನನ್ನಿಂದ ನಿಮಗೆ ನೋವಾಗಿದ್ದರೆ ದಯವಿಟ್ಟು ಕ್ಷಮಿಸಿ. ಹೀಗೆ ಪರಸ್ಪರ  ಗೌರವಿಸುತ್ತ, ಅಭಿಮಾನಿಸುತ್ತ ನಮ್ಮ ನಡುವಿನ ಸ್ನೇಹ ಪರಿಶುದ್ಧವಾಗಿ ಇರಲಿ ಮೇಡಂ.  ಹಾಂ ಮೇಡಂ ನನ್ನ ಪುಸ್ತಕ ಬಿಡುಗಡೆಯಾಗುವ ಸಂದರ್ಭದಲ್ಲೆಲ್ಲ ನಿಮ್ಮನ್ನ ನೆನಪಿಸಿಕೊಂಡು ಕಾಗದ ಬರಿತೀನಿ. ಬರೊದಕ್ಕೆ ಆಗದೆ ಇದ್ದರೂ ಶುಭಾಷಯ ಹೇಳೊದನ್ನ ಮಾತ್ರ ಮರಿಬೇಡಿ. ಮೇಡಂ ಬರ್ತಿನಿ’ ಎಂದು ರಾಘವ ಕೈಮುಗಿದಾಗ ಅವರ ಕೈಗಳನ್ನು ಮೃದುವಾಗಿ ಸ್ಪರ್ಷಿಸಿದೆ. ಆ ಸ್ಪರ್ಷದಲ್ಲಿ ನೂರೆಂಟು ಭಾವಗಳು ಮಿಳಿತಗೊಂಡು ಮನಸ್ಸು ಆರ್ದ್ರವಾಯಿತು. ಕಣ್ಣುಗಳು ಹನಿಗೂಡಿ ದೂರದಲ್ಲಿ ನಡೆದು ಹೋಗುತ್ತಿದ್ದ ರಾಘವ ಆಕೃತಿ ಮುಸುಕು ಮುಸುಕಾಗಿ ಕಾಣಿಸಿ ನನ್ನಿಂದ ಶಾಶ್ವತವಾಗಿ ದೂರಾದಂತೆ ಭಾಸವಾಯಿತು.

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 


No comments:

Post a Comment