Monday, July 1, 2019

ಸಿನಿಮಾಗಳಲ್ಲಿ ಅಮ್ಮ

          






           ‘ಮೇರಾ ಪಾಸ್ ಗಾಡಿ ಹೈ, ಬಂಗ್ಲಾ ಹೈ, ದೌಲತ್ ಹೈ. ತೇರಾ ಪಾಸ್ ಕ್ಯಾ ಹೈ’ ಅಮಿತಾಬ ಬಚ್ಚನ್‍ನ ತಣ್ಣನೆಯ ಕ್ರೌರ್ಯ ತುಂಬಿದ ಪ್ರಶ್ನೆಗೆ ಶಶಿಕಪೂರ್ ಎದೆಯುಬ್ಬಿಸಿ ಅಭಿಮಾನದಿಂದ ಉತ್ತರಿಸುತ್ತಾನೆ ‘ಮೇರಾ ಪಾಸ್ ಮಾ ಹೈ’. ಆಗ ಇಡೀ ಸಿನಿಮಾ ಮಂದಿರದ ತುಂಬ ಕಿವಿಗಡಚಿಕ್ಕುವ ಚಪ್ಪಾಳೆಯ ಶಬ್ದ ಮೊಳಗುತ್ತದೆ. 1980 ರ ದಶಕದ ಹಿಂದಿ ಸಿನಿಮಾವೊಂದರ ಈ ಸಂಭಾಷಣೆ ಅಂದಿನ ಸಿನಿಮಾ ಪ್ರೇಕ್ಷಕರ ನೆನಪಿನಂಗಳದಲ್ಲಿ ಹಚ್ಚ ಹಸಿರಾಗಿ ಉಳಿದುಕೊಂಡಿದೆ. ನಾಯಕ, ನಾಯಕಿಯರೆ ಪ್ರಧಾನ ಭೂಮಿಕೆಯಲ್ಲಿರುವ ಭಾರತೀಯ ಚಿತ್ರರಂಗದ ಸಿನಿಮಾಗಳಲ್ಲಿ ಆಗಾಗ ತಾಯಿ ಪ್ರಧಾನ ಸಿನಿಮಾಗಳೂ ತೆರೆಕಂಡು ಜನಪ್ರಿಯವಾಗಿವೆ. ಕನ್ನಡ ಸಿನಿಮಾ ರಂಗದಲ್ಲಿ ರಾಜಕುಮಾರ ಅವರಿಂದ ಇಂದಿನ ಯುವ ನಾಯಕ ನಟರವರೆಗೆ ಪ್ರತಿಯೊಬ್ಬರು ತಮ್ಮ ವೃತ್ತಿ ಬದುಕಿನಲ್ಲಿ ಒಂದಲ್ಲ ಒಂದು ಸಂದರ್ಭ ಮಾತೃ ಪ್ರಧಾನ ಸಿನಿಮಾಗಳಲ್ಲಿ ಅಭಿನಯಿಸಿದ ಅನೇಕ ಉದಾಹರಣೆಗಳಿವೆ. 

ನ್ನಡ ಸಿನಿಮಾರಂಗದಲ್ಲಿ ತಾಯಿ ಪ್ರಧಾನ ಸಿನಿಮಾಗಳ ಕುರಿತು ಚರ್ಚಿಸುವಾಗ ಪಂಢರಿಬಾಯಿ ಅವರ ಹೆಸರು ಮುಂಚೂಣಿಯಲ್ಲಿ ಬರುತ್ತದೆ. ಕನ್ನಡ ಸಿನಿಮಾ ಮಾಧ್ಯಮದಲ್ಲಿ ದೀರ್ಘಕಾಲ ಅಮ್ಮನ ಪಾತ್ರದಲ್ಲಿ ಅಭಿನಯಿಸಿದ ಹೆಗ್ಗಳಿಕೆ ಅವರದು. ಒಂದುಕಾಲದಲ್ಲಿ ನಾಯಕ ನಟಿಯಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಪಂಢರಿಬಾಯಿ ಜನಮಾನಸದಲ್ಲಿ ಶಾಶ್ವತವಾಗಿ ನೆಲೆ ನಿಂತಿದ್ದು ತಮ್ಮ ತಾಯಿ ಪಾತ್ರದ ಅಭಿನಯದ ಮೂಲಕವೇ. ರಾಜಕುಮಾರ ಅವರೊಂದಿಗೆ ನಾಯಕಿಯಾಗಿ ಅಭಿನಯಿಸಿದ ಪಂಢರಿಬಾಯಿ ಕಾಲಾನಂತರದಲ್ಲಿ ಅದೇ ರಾಜಕುಮಾರ ಅವರಿಗೆ ತಾಯಿಯಾಗಿ ಅಭಿನಯಿಸ ಬೇಕಾಗಿಬಂದದ್ದು ಸಿನಿಮಾ ಮಾಧ್ಯಮದಲ್ಲಿ ಮಹಿಳಾ ಕಲಾವಿದರ ವೃತ್ತಿ ಬದುಕಿನ ಅನಿಶ್ಚಿತತೆಗೊಂದು ದೃಷ್ಟಾಂತ. ರಾಜಕುಮಾರ ಮಾತ್ರವಲ್ಲದೆ ವಿಷ್ಣುವರ್ಧನ್ ಅವರ ಸಮಕಾಲಿನ ಎಲ್ಲ ನಾಯಕ ನಟರಿಗೆ ಅಮ್ಮನಾಗಿ ಅಭಿನಯಿಸಿದ ಈ ಕಲಾವಿದೆ ತಮ್ಮ ಅಭಿನಯದ ಮೂಲಕ ತಾಯಿ ಪಾತ್ರಕ್ಕೊಂದು ವಿಶಿಷ್ಠ ಮೆರುಗು ನೀಡಿದ್ದು ಕನ್ನಡ ಸಿನಿಮಾ ರಂಗದ ಮಹತ್ವಗಳಲ್ಲೊಂದು. 

ಲೀಲಾವತಿ, ಸಾಹುಕಾರ್ ಜಾನಕಿ, ಆದವಾನಿ ಲಕ್ಷ್ಮಿದೇವಮ್ಮ, ಶಾಂತಮ್ಮ ಇತ್ಯಾದಿ ಕಲಾವಿದೆಯರು ಕೂಡ ಕನ್ನಡ ಸಿನಿಮಾರಂಗದಲ್ಲಿ ಅಮ್ಮನ ಪಾತ್ರದಲ್ಲಿ ಅಭಿನಯಿಸಿ ತಮ್ಮದೇ ಛಾಪು ಮೂಡಿಸಿರುವರು. ಲೀಲಾವತಿ ಕೂಡ ಒಂದು ಕಾಲದಲ್ಲಿ ರಾಜಕುಮಾರ ಹಾಗೂ ಅವರ ಸಮಕಾಲಿನ ಕಲಾವಿದರೊಂದಿಗೆ ನಾಯಕಿಯಾಗಿ ಅಭಿನಯಿಸಿ ಜನಪ್ರಿಯ ತಾರೆಯಾಗಿ ಗುರುತಿಸಿಕೊಂಡವರು. ರಾಜಕುಮಾರ ಮತ್ತು ಲೀಲಾವತಿ ಅವರದು ಅತ್ಯಂತ ಜನಪ್ರಿಯ ಜೋಡಿ ಎಂದೇ ಹೆಸರಾಗಿತ್ತು. ಕಾಲಕ್ರಮೇಣ ಭಾರತಿ, ಜಯಂತಿ, ಲಕ್ಷ್ಮಿ, ಆರತಿ, ಮಂಜುಳಾ ಅವರ ಆಗಮನದಿಂದ ಅತ್ತೆ, ಅಮ್ಮನ ಇತ್ಯಾದಿ ಪೋಷಕ  ಪಾತ್ರಗಳಿಗೆ ಬಡ್ತಿ ಪಡೆದ ಲೀಲಾವತಿ ನಂತರದ ದಿನಗಳಲ್ಲಿ ಹಲವಾರು ಸಿನಿಮಾಗಳಲ್ಲಿ ತಮ್ಮ ಮನೋಜ್ಞ ಅಭಿನಯದ ಮೂಲಕ ತಾಯಿ ಪಾತ್ರಕ್ಕೆ ಜೀವ ತುಂಬಿದರು. ಒಂದು ಕಾಲದಲ್ಲಿ ತಮ್ಮ ಆಗಮನದಿಂದ ಹಿರಿಯ ನಾಯಕಿ ನಟಿಯರಿಗೆ ಪೋಷಕ  ಪಾತ್ರಗಳೆಡೆ ವಲಸೆ ಹೋಗುವಂತ ಸನ್ನಿವೇಶ ಸೃಷ್ಟಿಸಿದ್ದ ಭಾರತಿ, ಜಯಂತಿ, ಲಕ್ಷ್ಮಿ, ಜಯಮಾಲ, ಬಿ.ಸರೋಜಾದೇವಿ ಮುಂದೊಂದು ದಿನ ತಾವು ಕೂಡ ತಾಯಿಯ ಪಾತ್ರದಲ್ಲಿ ಅಭಿನಯಿಸಬೇಕಾದ ಅನಿವಾರ್ಯತೆ ಎದುರಾಯಿತು. ಸಿನಿಮಾ ಮಾಧ್ಯಮವೆ ಹಾಗೆ ಸದಾಕಾಲ ಅನಿಶ್ಚಿತತೆಯ ನಡುವೆ ತೂಗುಯ್ಯಾಲೆಯಾಡುವ ಬದುಕದು. ಕಲಾವಿದೆಯೋರ್ವಳು ದೀರ್ಘಕಾಲ ಇಲ್ಲಿ ನಾಯಕಿ ನಟಿಯಾಗಿ ನೆಲೆ ನಿಂತ ಉದಾಹರಣೆಗಳಿಲ್ಲ. ನಾಯಕಿಯನ್ನು ಕಾಮ ಮತ್ತು ಶೃಂಗಾರದ ಹಿನ್ನೆಲೆಯಲ್ಲೇ ಚಿತ್ರಿಸಲು ಬಯಸುವ ಸಿನಿಮಾ ಮಾಧ್ಯಮ ಯುವ ಕಲಾವಿದೆಯರಿಗೆ ಮಣೆಹಾಕಲು ಹಾತೊರೆಯುತ್ತದೆ. ವಯಸ್ಸು ಮತ್ತು ದೇಹ ಸೌಂದರ್ಯವಿರುವವರೆಗೆ ಮಾತ್ರ ಇಲ್ಲಿ ಕಲಾವಿದೆ ನಾಯಕಿ ನಟಿಯಾಗಿ ಚಲಾವಣೆಯಲ್ಲಿರಲು ಸಾಧ್ಯ. ದೇಹದ ಸೌಂದರ್ಯ ಮಾಸಿದಂತೆ ಕಲಾವಿದೆ ನೇಪಥ್ಯಕ್ಕೆ ಸರಿಯುವುದು ಅನಿವಾರ್ಯವಾಗಿರುವ ಸಿನಿಮಾ ಮಾಧ್ಯಮದಲ್ಲಿ ಅನೇಕ ಕಲಾವಿದೆಯರು ಪೋಷಕ  ಪಾತ್ರಗಳಿಗೆ ಜೀವ ತುಂಬಿ ನಾಯಕಿಗೆ ಸಮನಾದ ಪಾತ್ರಗಳಲ್ಲಿ ಅಭಿನಯಿಸುತ್ತಿರುವರು. ಒಂದುಕಾಲದಲ್ಲಿ ದ್ವಂದ್ವಾರ್ಥ ಸಂಭಾಷಣೆ ಹೇಳುವ ಗಯ್ಯಾಳಿ ಪಾತ್ರಗಳಲ್ಲಿ ಅಭಿನಯಿಸಿ ಜನಪ್ರಿಯರಾಗಿದ್ದ ಉಮಾಶ್ರೀ ವಯಸ್ಸಾದಂತೆ ಪೋಷಕ  ಪಾತ್ರಗಳಿಗೆ ಬಡ್ತಿ ಪಡೆದು ‘ಪುಟ್ನಂಜ’, ‘ದಿಗ್ಗಜರು’, ‘ವೀರಪ್ಪ ನಾಯ್ಕ’ ಸಿನಿಮಾಗಳಲ್ಲಿ ಅಮ್ಮನ ಪಾತ್ರದಲ್ಲಿ ಅವಿಸ್ಮರಣೀಯ ಅಭಿನಯ ನೀಡಿದರು. 

ಕನ್ನಡ ಸಿನಿಮಾಗಳಲ್ಲಿ ತಾಯಿಯನ್ನು ತ್ಯಾಗ ಮತ್ತು ಸಹನಾ ಮೂರ್ತಿಯಾಗಿ ಬಿಂಬಿಸಿದ್ದೇ ಹೆಚ್ಚು. ಕುಟುಂಬದ ಆಧಾರ ಸ್ತಂಬವಾಗಿ ಪತಿ, ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳೊಂದಿಗೆ ಏಗುತ್ತ ಸಂಸಾರದ ನೌಕೆಯನ್ನು ದಡಕ್ಕೆ ಮುಟ್ಟಿಸುವ ಅಮ್ಮನ ಪಾತ್ರದಲ್ಲಿ ಅನೇಕ ಕಲಾವಿದೆಯರು ಸಶಕ್ತವಾಗಿ ಅಭಿನಯಿಸಿ ಪಾತ್ರಗಳಿಗೆ ಜೀವಕಳೆ ತುಂಬಿರುವರು. ಮಗಳನ್ನು ಸಮಾಜದ ಕ್ರೂರ ದೃಷ್ಟಿಯಿಂದ ರಕ್ಷಿಸಿ ಅವಳಿಗೊಂದು ನೆಮ್ಮದಿಯ ಬದುಕನ್ನು ಕಟ್ಟಿಕೊಡಲು ಪ್ರಯತ್ನಿಸುವ ತಾಯಿಯಾಗಿ ‘ಹೂವು ಹಣ್ಣು’ ಸಿನಿಮಾದಲ್ಲಿ ಲಕ್ಷ್ಮಿ ಅವರದು ಮನೋಜ್ಞ ಅಭಿನಯ. ಪತಿ ಮತ್ತು ಮಕ್ಕಳ ಹೋರಾಟದ ನಡುವೆ ಮೂಕವೇದನೆ ಅನುಭವಿಸುತ್ತ ನಲುಗುವ ತಾಯಿಯ ಪಾತ್ರ ‘ಪ್ರೀತಿ ವಾತ್ಸಲ್ಯ’, ‘ಭಾಗ್ಯವಂತರು’, ‘ಲಯನ್ ಜಗಪತಿರಾವ್’ ಇತ್ಯಾದಿ ಸಿನಿಮಾಗಳಲ್ಲಿ ಮೂಡಿ ಬಂದಿದೆ. ಒಂದೆಡೆ ಕನೂನು ರಕ್ಷಿಸುವ ಪತಿ ಇನ್ನೊಂದೆಡೆ ಸಮಾಜ ಕಂಟಕ ಮಗ ಇವರಿಬ್ಬರ ನಡುವೆ ಪತ್ನಿ ಮತ್ತು ತಾಯಿಯಾಗಿ ಕಾಂಚನಾ ಅವರದು ‘ನಾನೊಬ್ಬ ಕಳ್ಳ’ ಸಿನಿಮಾದಲ್ಲಿ ಬಹುಕಾಲ ನೆನಪಿನಲ್ಲುಳಿಯುವ ಅಭಿನಯ. 

ತ್ಯಾಗ ಮತ್ತು ಸಹನೆಗೆ ವಿರುದ್ಧವಾಗಿ ತನ್ನ ಮಕ್ಕಳ ಮೂಲಕ ಪ್ರತಿಕಾರ ತೀರಿಸಿಕೊಳ್ಳುವ ತಾಯಿ ಪಾತ್ರ ಹಲವು ಸಂದರ್ಭಗಳಲ್ಲಿ ಸಿನಿಮಾ ಪರದೆಯ ಮೇಲೆ ಕಾಣಿಸಿಕೊಂಡಿದೆ. ತನ್ನ ಪತಿಯಿಂದಾದ ಅನ್ಯಾಯಕ್ಕೆ ಮಗನ ಮೂಲಕ ಪ್ರತಿಕಾರ ತೀರಿಸಿಕೊಳ್ಳುವ ಪಾತ್ರದಲ್ಲಿ ಜಯಂತಿ ಅಭಿನಯಿಸಿದ ‘ಆನಂದ’, ಊರ ಜಮೀನ್ದಾರನನ್ನು ಮಗನಿಂದ ಸದೆಬಡಿದು ಸೇಡು ತೀರಿಸಿಕೊಳ್ಳುವ ಅಮ್ಮನಾಗಿ ಭಾರತಿ ಅಭಿನಯಿಸಿದ ‘ದೊರೆ’ ಈ ಸಿನಿಮಾಗಳು ಅಮ್ಮನ ಹೋರಾಟದ ಮುಖವನ್ನು ಪರಿಚಯಿಸಿದವು. ಸಂದರ್ಭದ ಸುಳಿಗೆ ಸಿಲುಕಿ ರೌಡಿಯಾದ ಮಗನನ್ನು ತಾಯಿಯೇ  ವಿಷ ಹಾಕಿ ಕೊಲ್ಲಲು ಪ್ರಯತ್ನಿಸುವ ‘ವಂಶಿ’ ಸಿನಿಮಾದ ಮೂಲಕ ಕನ್ನಡ ಸಿನಿಮಾ ಮಾಧ್ಯಮದಲ್ಲಿ ಅಮ್ಮನನ್ನು ಹೊಸ ಪರಿವೇಷದಲ್ಲಿ ನೋಡುವಂತಾಯಿತು. ಕಾಶಿನಾಥ ಅಭಿನಯದ ಅನೇಕ ಸಿನಿಮಾಗಳಲ್ಲಿ ತಾಯಿಯ ಪಾತ್ರವನ್ನು ಹಾಸ್ಯದ ಹಿನ್ನೆಲೆಯಲ್ಲಿ ಚಿತ್ರಿಸಲಾಗಿದೆ. ಇಲ್ಲಿ ವರದಕ್ಷಿಣೆಗಾಗಿ ಆಸೆ ಪಡುವ ಜೀಪುಣ ಹೆಣ್ಣಾಗಿ ತಾಯಿಯ ಇನ್ನೊಂದು ಮುಖ ಅನಾವರಣಗೊಂಡಿದೆ. 

ಕನ್ನಡ ಚಿತ್ರರಂಗದಲ್ಲಿ ತಾಯಿ ಪದಕ್ಕೆ ಹೆಚ್ಚಿನ ಮಹತ್ವ ನೀಡಿದ ನಿರ್ಮಾಪಕರಲ್ಲಿ ಅಬ್ಬಯ್ಯ ನಾಯ್ಡು ಮೊದಲಿಗರು. ಅವರ ಬ್ಯಾನರ್‍ನಲ್ಲಿ ನಿರ್ಮಾಣಗೊಂಡ ಬಹುತೇಕ ಸಿನಿಮಾಗಳ ಶೀರ್ಷಿಕೆಯಲ್ಲಿ ತಾಯಿ ಪದ ಹೆಚ್ಚು ಹೆಚ್ಚು ಬಳಕೆಯಾಗಿದೆ. ತಾಯವ್ವ, ತಾಯಿಯ ಆಸೆ, ತಾಯಿಗೊಬ್ಬ ಕರ್ಣ, ಭೂಮಿ ತಾಯಾಣೆ, ತಾಯಿಯ ಮಡಿಲಲ್ಲಿ, ತಾಯಿ ಕನಸು, ತಾಯಿಯ ಹೊಣೆ, ತಾಯಿಯ ನುಡಿ, ಮಾತೃ ಭೂಮಿ ಹೀಗೆ ತಾಯಿಯ ಮಹತ್ವವನ್ನು ಸಾರುವ ಹಲವಾರು ಸಿನಿಮಾಗಳನ್ನು ನಿರ್ಮಾಣ ಮಾಡಿದ ಹೆಗ್ಗಳಿಕೆ ಅಬ್ಬಯ್ಯ ನಾಯ್ಡು ಅವರದು.  

ಗ್ಲಾಮರ್ ಅಮ್ಮ

ರಾಜಕುಮಾರ ಮತ್ತು ವಿಷ್ಣುವರ್ಧನ್ ಅವರ ಸಮಕಾಲಿನ ನಾಯಕ ನಟರ ಬಹುತೇಕ ಸಿನಿಮಾಗಳಲ್ಲಿ ಪಂಢರೀಬಾಯಿ, ಲೀಲಾವತಿ, ಶಾಂತಮ್ಮ, ಸಾಹುಕಾರ್ ಜಾನಕಿ ಶಾಶ್ವತ ಅಮ್ಮಂದಿರಾಗಿ ಅಭಿನಯಿಸಿದರು. ಆದರೆ ನಂತರದ ಯುವ ನಾಯಕ ನಟರ ಸಿನಿಮಾಗಳಲ್ಲಿ ತಾಯಿ ಪಾತ್ರದ ಅಭಿನಯಕ್ಕಾಗಿ ಕಲಾವಿದೆಯರ ಕೊರತೆ ಎದುರಾಯಿತು. ಈಗಾಗಲೇ ಅಮ್ಮನ ಪಾತ್ರದಲ್ಲಿ ತಮ್ಮ ವಿಶಿಷ್ಠ ಛಾಪು ಮೂಡಿಸಿದ್ದ ಹಿರಿಯ ಕಲಾವಿದೆಯರನ್ನು ಯುವ ಪೀಳಿಗೆಯ ನಾಯಕ ನಟರ ಸಿನಿಮಾಗಳಲ್ಲಿ ಅಮ್ಮಂದಿರಾಗಿ ತೋರಿಸಲು ಸಿನಿಮಾ ಮಾಧ್ಯಮ ಆಸಕ್ತಿ ತೋರಿಸಲಿಲ್ಲ. ರವಿಚಂದ್ರನ್ ಅಭಿನಯದ ‘ಯುದ್ಧಕಾಂಡ’ ಸಿನಿಮಾದಲ್ಲಿ ಭಾರತಿ ಅಮ್ಮನಾಗಿ ಅಭಿನಯಿಸುವುದರೊಂದಿಗೆ ಕನ್ನಡ ಚಿತ್ರರಂಗದಲ್ಲಿ ಅಮ್ಮನ ಪಾತ್ರಕ್ಕೆ ಗ್ಲಾಮರ್ ಕಳೆ ಬಂದಿತು. ಒಂದು ಕಾಲದಲ್ಲಿ ನಾಯಕ ನಟಿಯರಾಗಿದ್ದ ಜಯಂತಿ, ಭಾರತಿ, ಜಯಮಾಲ, ಲಕ್ಷ್ಮಿ ಯುವ ನಟ ನಟಿಯರ ಅಮ್ಮಂದಿರಾಗಿ ಅಭಿನಯಿಸುವುದರ ಮೂಲಕ ಗ್ಲಾಮರ್ ಅಮ್ಮಂದಿರಾಗಿ ಬಡ್ತಿ ಪಡೆದರು. 

ಕೇವಲ ನಾಯಕ ನಟಿ ಮಾತ್ರವಲ್ಲದೆ ತಾಯಿ ಪಾತ್ರಕ್ಕೂ ಬೇರೆ ಭಾಷೆಯ ಕಲಾವಿದೆಯರು ಕನ್ನಡ ಸಿನಿಮಾರಂಗಕ್ಕೆ ಆಮದಾದದ್ದು ಕನ್ನಡ ಸಿನಿಮಾ ಮಾಧ್ಯಮದ ಮಹತ್ವದ ಬೆಳವಣಿಗೆಗಳಲ್ಲೊಂದು. ಇಲ್ಲಿ ಕೂಡ ಗ್ಲಾಮರ್ ಅಂಶವೇ ಮುಖ್ಯ ಕಾರಣವಾಯಿತು. ಜಯಸುಧಾ, ರೋಜಾ ಇತ್ಯಾದಿ ಪರಭಾಷಾ ನಾಯಕಿಯರು ಕನ್ನಡದ ಸಿನಿಮಾಗಳಲ್ಲಿ ಅಮ್ಮನಾಗಿ ಅಭಿನಯಿಸಿದರು. ಅಣ್ಣಯ್ಯ ಸಿನಿಮಾದ ತಾಯಿ ಪಾತ್ರಕ್ಕಾಗಿ ಅದರ ಮೂಲ ಹಿಂದಿ ಸಿನಿಮಾದಲ್ಲಿ ಅಭಿನಯಿಸಿದ್ದ ಅರುಣಾ ಇರಾನಿ ಅವರನ್ನು ಕರೆ ತಂದದ್ದು ಸಿನಿಮಾದ ಯಶಸ್ಸಿಗೂ ಕಾರಣವಾಯಿತು. ಇದೇ ಸಿನಿಮಾದಲ್ಲಿ ನಾಯಕಿಯಾಗಿ ಮುದ್ದು ಮುದ್ದಾಗಿ ಕಾಣಿಸುತ್ತಿದ್ದ ನಟಿ ಮಧುಬಾಲ ಮುಂದೊಂದು ದಿನ ತಮ್ಮ ಗ್ಲಾಮರ್ ಕಾರಣದಿಂದಾಗಿಯೇ  ಅಮ್ಮನಾಗಿ ಅಭಿನಯಿಸುವ ಅವಕಾಶ ಪಡೆದರು. 

ಸಿನಿಮಾ ಹಾಡುಗಳಲ್ಲಿ ಅಮ್ಮ

ಕನ್ನಡ ಸಿನಿಮಾಗಳಲ್ಲಿ ಅಮ್ಮನ ಮಹತ್ವವನ್ನು ಸಾರುವ ಅನೇಕ ಹಾಡುಗಳು ರಚನೆಯಾಗಿವೆ. ‘ಅಮ್ಮ ನಿನ್ನ ತೋಳಿನಲ್ಲಿ ಕಂದ ನಾನು’, ‘ಅಮ್ಮ ಎಂದರೆ ಏನೋ ಹರುಷವು ನಮ್ಮ ಪಾಲಿಗೆ ಅವಳೆ ದೈವವು’, ‘ಅಮ್ಮ ನೀನು ನಮಗಾಗಿ’, ‘ಕೈ ತುತ್ತು ಕೊಟ್ಟವಳೆ ಮೈ ಮದರ್ ಇಂಡಿಯಾ’, ‘ಕಣ್ಣಿಗೆ ಕಾಣುವ ದೇವರು ಎಂದರೆ ಅಮ್ಮನು ತಾನೆ’ ಹೀಗೆ ಹಲವಾರು ಸಿನಿಮಾ ಹಾಡುಗಳಲ್ಲಿ ತ್ಯಾಗ ಮತ್ತು ಸಹನಾ ಮೂರ್ತಿ ಅಮ್ಮ ಕಾಣಿಸಿಕೊಂಡಿದ್ದಾಳೆ. ‘ಅಲ್ಲೊಂದು ಲೋಕವುಂಟು ಇಲ್ಲೊಂದು ದಾರಿಯುಂಟು’ ಹಾಡಿನಲ್ಲಿ ಬಡತನದ ಬೆಗೆಯಲ್ಲಿ ನೊಂದ ಮಕ್ಕಳು ಅಗಲಿದ ಅಮ್ಮನ ಮಡಿಲು ಸೇರುವ ಕರುಣಾಜನಕ ಕಥೆಯಿದೆ. ಅನುರಾಗ ಅರಳಿತು ಚಿತ್ರದ ‘ಶ್ರೀಕಂಠ ವಿಷಕಂಠ’ ಹಾಡಿನಲ್ಲಿ ರಾಜಕುಮಾರ ಭಕ್ತಿ ಪರವಶರಾಗಿ ಅಮ್ಮನ ಸೇವೆ ಮಾಡುವ ದೃಶ್ಯ ಸಿನಿಮಾದ ಪ್ರಮುಖ ಭಾಗವಾಗಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಇದೇ ರಾಜಕುಮಾರ ಅವರ ಕಂಠಸಿರಿಯಲ್ಲಿ ಮೂಡಿಬಂದ ವಂಶಿ ಚಿತ್ರದ ‘ತಾಯಿ ತಾಯಿ ಲಾಲಿ ಹಾಡೋ ಭೂಮಿತಾಯಿಗೆ’ ಹಾಡಿನಲ್ಲಿ ಅಮ್ಮನಿಗೆ ಜೋಗುಳ ಹಾಡುವ ದೃಶ್ಯದಲ್ಲಿ ಲಕ್ಷ್ಮಿ ಮತ್ತು ಪುನಿತ್ ಅಭಿನಯ ಅತ್ಯಂತ ಹೃದಯಸ್ಪರ್ಷಿಯಾಗಿತ್ತು. ಜೋಗಿ ಚಿತ್ರದ ‘ಬೇಡುವೆನು ವರವನ್ನು ಕೊಡು ತಾಯೆ  ಜನ್ಮವನು’ ಮತ್ತು ಎಕ್ಸ್‍ಕ್ಯೂಜ್ ಮಿ ಸಿನಿಮಾದ ‘ಬೃಹ್ಮ ವಿಷ್ಣು ಶಿವ ಎದೆ ಹಾಲು ಕುಡಿದರೊ’ ಅಮ್ಮನ ಮಹತ್ವವನ್ನು ವಿವರಿಸುವ ಈ ಎರಡು ಸಿನಿಮಾ ಹಾಡುಗಳು ಇವತ್ತಿಗೂ ಜನಪ್ರಿಯ ಹಾಡುಗಳಾಗಿ ಜನಮನ್ನಣೆಗೆ ಪಾತ್ರವಾಗಿವೆ. ಈ ಎರಡೂ ಸಿನಿಮಾಗಳ ನಿರ್ದೇಶಕ ಪ್ರೇಮ ಎನ್ನುವುದು ಆ ನಿರ್ದೇಶಕನಿಗೆ ತಾಯಿ ಪಾತ್ರದ ಬಗೆಗಿರುವ ಗೌರವಕ್ಕೆ ಒಂದು ದೃಷ್ಟಾಂತ.  

ಸಾಹಿತ್ಯದಿಂದ ಸಿನಿಮಾಗೆ

ತಾಯಿ ಪ್ರಧಾನ ಕನ್ನಡದ ಕಾದಂಬರಿಗಳು ಸಿನಿಮಾಗಳಾಗಿ ಬೆಳ್ಳಿತೆರೆಯ ಮೇಲೆ ಮೂಡಿಬಂದಿವೆ. ಆದರೆ ಹೀಗೆ ನಿರ್ಮಾಣವಾದ ಚಿತ್ರಗಳ ಸಂಖ್ಯೆ ಕನ್ನಡದ ಸಿನಿಮಾ ಪ್ರೇಕ್ಷಕರು ಹೆಮ್ಮೆಪಡುವಷ್ಟೆನಿಲ್ಲ. ಒಟ್ಟಾರೆ ಕನ್ನಡ ಸಿನಿಮಾ ಮಾಧ್ಯಮದಲ್ಲಿ ಕಾದಂಬರಿ ಆಧಾರಿತ ಸಿನಿಮಾಗಳ ಸಂಖ್ಯೆ ಬಹಳಷ್ಟು ಕಡಿಮೆ. ಅದರಲ್ಲೂ ಕಾದಂಬರಿ ಆಧಾರಿತಿ ಸಿನಿಮಾಗಳಲ್ಲಿ ನಾಯಕ ಇಲ್ಲವೆ ನಾಯಕಿ ಪ್ರಧಾನ ಚಿತ್ರಗಳದೆ ಸಿಂಹಪಾಲು. ಜೊತೆಗೆ ಪೋಷಕ  ಕಲಾವಿದೆಯನ್ನು ಪ್ರಧಾನ ಭೂಮಿಕೆಯಲ್ಲಿ ಚಿತ್ರಿಸಿ ಸಿನಿಮಾ ಮಾಡಿ ಗೆಲ್ಲುವುದು ಅತ್ಯಂತ ಕಷ್ಟದ ಸಂಗತಿ. ಈ ಕಾರಣದಿಂದ ಎಲ್ಲೋ ಒಂದು ಕಡೆ ಅಭಿರುಚಿ ಇರುವ ನಿರ್ಮಾಪಕ ಮತ್ತು ನಿರ್ದೇಶಕರು ತಾಯಿ ಪ್ರಧಾನ ಕಾದಂಬರಿಗಳನ್ನು ಸಿನಿಮಾ ರೂಪದಲ್ಲಿ ಬೆಳ್ಳಿತೆರೆಗೆ ತಂದಿದ್ದುಂಟು. ಹೀಗೆ ನಿರ್ಮಾಣವಾದ ಸಿನಿಮಾಗಳಲ್ಲಿ ತಾಯಿಸಾಹೇಬ, ಗೆಜ್ಜೆಪೂಜೆ, ಹೂವು ಹಣ್ಣು, ಋಣಮುಕ್ತಳು ಪ್ರಮುಖವಾದವುಗಳು. ಲೀಲಾವತಿ ಅಭಿನಯದ ಪುಟ್ಟಣ್ಣ ಕಣಗಾಲ್ ನಿರ್ದೇಶನದಲ್ಲಿ 1980 ರಲ್ಲಿ ತೆರೆಕಂಡ ಗೆಜ್ಜೆಪೂಜೆ ಎಂ.ಕೆ.ಇಂದಿರಾರ ಅದೇ ಹೆಸರಿನ ಕಾದಂಬರಿ ಆಧಾರಿತ ಸಿನಿಮಾ. ವೈಶ್ಯೆಯಾದ ತಾಯಿ ತನ್ನ ಮಗಳು ತನ್ನಂತೆ ನೋವಿನ ಮತ್ತು ಬಹಿಷ್ಕೃತ ಬದುಕಿಗೆ ಪ್ರವೇಶಿಸುವುದನ್ನು ತಪ್ಪಿಸುವ ಅಮ್ಮನ ಪಾತ್ರದಲ್ಲಿ ಲೀಲಾವತಿ ಅವರ ಅಭಿನಯ ಹೃದಯಸ್ಪರ್ಷಿಯಾಗಿತ್ತು. ಹೂವುಹಣ್ಣು ಚಿತ್ರದಲ್ಲೂ ವೈಶ್ಯೆಯಾದ ತಾಯಿ ಮಗಳಿಗೆ ಸುಂದರ ಬಾಳನ್ನು ಕಟ್ಟಿಕೊಟ್ಟು ಮುಂದೊಂದು ದಿನ ಅದೇ ಮಗಳಿಂದ ಅವಮಾನಕ್ಕೆ ಒಳಗಾಗುವ ಕಥೆಯಿದೆ. ತಾಯಿ ಸಾಹೇಬ ಸಿನಿಮಾದಲ್ಲಿ ಬಾಳಾಸಾಹೇಬರ ಎರಡನೆ ಹೆಂಡತಿಯಾಗಿ ಬರುವ ನರ್ಮದೆ ಗಂಡನ ಸಾವಿನ ನಂತರ ಸವತಿಯ ಮಕ್ಕಳಿಗಾಗಿ ಇಡೀ ಜಗತ್ತನ್ನು ಎದುರುಹಾಕಿಕೊಳ್ಳುವ ಪಾತ್ರದಲ್ಲಿ ಜಯಮಾಲಾ ಅವರದು ಮನೋಜ್ಞ ಅಭಿನಯ. ಭಾರತಿ ಪ್ರಧಾನ ಭೂಮಿಕೆಯಲ್ಲಿ ಕಾಣಿಸಿಕೊಂಡ ಪುಟ್ಟಣ್ಣ ಕಣಗಾಲ ನಿರ್ದೇಶನದ ಋಣಮುಕ್ತಳು ಅನುಪಮ ನಿರಂಜನರ ತಾಯಿ ಪ್ರಧಾನ ಕಾದಂಬರಿ ಆಧಾರಿತ ಸಿನಿಮಾ. 

ಕನ್ನಡ ಸಿನಿಮಾಗಳಲ್ಲಿ ಅಮ್ಮ ಪ್ರಧಾನ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಕ್ಕಿಂತ ಪೋಷಕ  ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದೆ ಹೆಚ್ಚು. ಹಾಗೆ ನೋಡಿದಲ್ಲಿ ತಾಯಿ ಪ್ರಧಾನ ಪಾತ್ರದ ಸಿನಿಮಾಗಳ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ. ಕುಟುಂಬದ ಸದಸ್ಯರೆಲ್ಲ ಒಟ್ಟಾಗಿ ಕುಳಿತು ನೋಡುವಂಥ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದ ರಾಜಕುಮಾರ ಮತ್ತು ವಿಷ್ಣುವರ್ಧನ್ ಅವರಂಥ ಕೆಲವೇ ಕಲಾವಿದರ ಸಿನಿಮಾಗಳಲ್ಲಿ ಮಾತ್ರ ತಾಯಿ ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ ಎನ್ನುವ ಮಾತು ಸತ್ಯಕ್ಕೆ ಹತ್ತಿರವಾಗಿದೆ. ಇನ್ನು ಕೆಲವು ನಟರ ಸಿನಿಮಾಗಳಲ್ಲಿ ತಾಯಿ ಪಾತ್ರವನ್ನು ಗಯ್ಯಾಳಿಯಾಗಿಯೋ ಇಲ್ಲವೆ ಸೊಸೆಯ ಜೀವ ಹಿಂಡುವ ದುಷ್ಟ ಅತ್ತೆಯಾಗಿಯೋ ಚಿತ್ರಿತವಾದ ಉದಾಹರಣೆ ಇದೆ. ಇತ್ತೀಚಿನ ದಿನಗಳಲ್ಲಿ ಹಣಗಳಿಕೆಯೇ  ಮುನ್ನೆಲೆಗೆ ಬರುತ್ತಿರುವುದರಿಂದ ನಾಯಕ ಪ್ರಧಾನ ಸಿನಿಮಾಗಳ ಅಬ್ಬರದ ನಡುವೆ ತಾಯಿ ಪಾತ್ರ ತನ್ನ ಮಹತ್ವವನ್ನು ಕಳೆದುಕೊಂಡು ಸಾಮಾನ್ಯ ಪೋಷಕ  ಪಾತ್ರದಂತೆ ಚಿತ್ರಿತವಾಗುತ್ತಿದೆ. 

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 

    

Friday, May 31, 2019

ಅಪ್ಪಣ್ಣನ ಸಮಾಜವಾದ (ಕಥೆ)

    


       

            ಪ್ರತಿ ಎರಡು ತಿಂಗಳಿಗೊಮ್ಮೆ ರವಿವಾರದ ಬೆಳಗ್ಗೆ ಸಲೂನ್‍ಗೆ ಭೇಟಿ ನೀಡಿ ಕ್ಷೌರಕ್ಕೆ ತಲೆಯೊಡ್ಡಿ ಕೂಡುವುದು ಲಾಗಾಯ್ತಿನಿಂದಲೂ ನಾನು ಅನುಸರಿಸಿಕೊಂಡು ಬಂದ ಸಂಪ್ರದಾಯ. ಅದೇಕೋ ಗೊತ್ತಿಲ್ಲ ಮೊದಲಿನಿಂದಲೂ ಈ ಸಲೂನ್, ಟೇಲರ್, ಚಪ್ಪಲಿ ಅಂಗಡಿಗಳನ್ನು ಪದೆ ಪದೆ ಬದಲಿಸುವುದು ನನಗೊಂದುಥರ ಅಲರ್ಜಿ. ಹೀಗಾಗಿ ಈ ಕ್ಷೌರಿಕ, ದರ್ಜಿ, ಚಪ್ಪಲಿ ಮಾಡುವ ಮೋಚಿ ಇವರುಗಳೊಂದಿಗೆ ಪರಿಚಯ ಬೆಳೆದು ಅವರು ನನಗೆ ರಸ್ತೆಯಲ್ಲಿ ಎದುರಾದಾಗಲೆಲ್ಲ ನಮಸ್ಕಾರ ಹೇಳುವುದು, ಹಸ್ತಲಾಘವ ಮಾಡುವುದು, ಅರೆಘಳಿಗೆ ಮಾತನಾಡುತ್ತ ನಿಲ್ಲುವುದು ಸಾಮಾನ್ಯ ಎಂಬಂತಾಗಿದೆ. ನಾನೇನೋ ಒಬ್ಬನೆ ರಸ್ತೆಯಲ್ಲಿ ನಡೆದು ಹೋಗುತ್ತಿರುವಾಗ ಇವರಲ್ಲಿ ಯಾರಾದರೂ ಭೇಟಿ ಆಗಿ ಮಾತನಾಡುತ್ತ ನಿಲ್ಲುವುದರಿಂದ ನನಗೆ ಯಾವ ತೊಂದರೆಯಾಗಲಿ ಸಂಕೋಚವಾಗಲಿ ಇಲ್ಲ. ಕೆಲವೊಮ್ಮೆ ಹೆಂಡತಿ ಮಗಳೊಡನೆ ಮಾರ್ಕೆಟಿಗೆ ಹೋಗುವಾಗಲೊ ಅಥವಾ ಪರಿಚಿತರ, ಬಂಧುಗಳ ಮನೆಯ ಸಮಾರಂಭಕ್ಕೆ ಹೋಗುವಾಗ ಇವರು ಎದರು ಸಿಕ್ಕರೆ ಆಗೆಲ್ಲ ನನಗೆ ತುಂಬ ಇರುಸು ಮುರುಸಾಗುತ್ತದೆ. ನಾನು ಅವರೊಂದಿಗೆ ಮಾತನಾಡುತ್ತ ನಿಂತಿರುವಷ್ಟು ಹೊತ್ತು ಹೆಂಡತಿ ಮತ್ತು ಮಗಳು ದೂರದಲ್ಲಿ ನಿಂತು ಅಸಹನೆಯಿಂದ ನನ್ನ ದಾರಿಕಾಯುತ್ತಿರುತ್ತಾರೆ. ಅವಸರವಸರವಾಗಿ ಮಾತನಾಡಿ ಹೆಂಡತಿ ಮತ್ತು ಮಗಳ ಹತ್ತಿರ ಹೋಗುವಷ್ಟರಲ್ಲಿ ಅವರಿಬ್ಬರ ಮುಖದಲ್ಲಿ ಸಿಟ್ಟು ಮತ್ತು ನನ್ನ ಬಗ್ಗೆ ಜಿಗುಪ್ಸೆ ಜಿನುಗುತ್ತಿರುತ್ತದೆ. ನಾನು ತೀರ ಬಡಕುಟುಂಬದಲ್ಲಿ ಹುಟ್ಟಿ ನಮ್ಮ ಮನೆಯ ಎದುರಿನ ದೊಡ್ಡ ಆಲದ ಮರದಡಿ ವರ್ಷದಲ್ಲಿ ನಾಲ್ಕಾರು ತಿಂಗಳು ಕಾಲ ಬಿಡಾರ ಹೂಡುತ್ತಿದ್ದ ಕಮ್ಮಾರರ ಕುಟುಂಬದಲ್ಲಿನ ಮಕ್ಕಳೊಂದಿಗೆ ಆಡಿ ಬೆಳೆದಿದ್ದೆ ನನ್ನ ಈ ವ್ಯಸನಕ್ಕೆ ಕಾರಣವೆಂದು ಒಮ್ಮೊಮ್ಮೆ ನನ್ನ ಹೆಂಡತಿ ತೀರ್ಮಾನಕ್ಕೆ ಬರುತ್ತಾಳೆ. ಆಗೆಲ್ಲ ನಾನು ಹೆಂಡತಿಯ ಆರೋಪಕ್ಕೆ ಸಿಟ್ಟು ಮಾಡಿಕೊಳ್ಳದೆ ಒಳಗೊಳಗೆ ತುಂಬ ಖುಷಿಯಿಂದ ನನ್ನೊಂದಿಗೆ ಆಡುತ್ತಿದ್ದ ರುಕ್ಮಿ, ಸಂಭ್ಯಾ, ಜೀತ್ಯಾ, ಪೊನ್ನಿ  ಅವರನ್ನು ನೆನಪಿಸಿಕೊಂಡು ಪುಳಕಗೊಳ್ಳುತ್ತೇನೆ. ಅವರೆಲ್ಲ ಈಗ ದೊಡ್ಡವರಾಗಿ ಬೇರೆ ಬೇರೆ ಊರುಗಳಲ್ಲಿ ವಾಸಿಸುತ್ತಿರಬಹುದೆಂದು ಯಾವುದೇ ಊರಿಗೆ ಹೋದರೂ ಕಮ್ಮಾರರ ಟೆಂಟ್‍ಗಳು ಕಣ್ಣಿಗೆ ಕಾಣಿಸಿದ್ದೆ ಈ ರುಕ್ಮಿ, ಸಂಭ್ಯಾರೆಲ್ಲ ಅಲ್ಲಿರಬಹುದೇನೋ ಎನ್ನುವ ಆಸೆಯಿಂದ ಅರೆಘಳಿಗೆ ನಿಂತು ಹುಡುಕುತ್ತೇನೆ. 

    ನೋಡಿ ಹೇಳಬೇಕಾದ ಮುಖ್ಯ ವಿಷಯವನ್ನೆ ಮರೆತು ಬಿಟ್ಟೆ. ಅಂದಹಾಗೆ ನಾನು ನಿಮಗೆ ಹೇಳುತ್ತಿದ್ದದ್ದು ನಾನು ಪ್ರತಿ ಎರಡು ತಿಂಗಳಿಗೊಮ್ಮೆ ರವಿವಾರದ ರಜಾದಿನದಂದು ಸಲೂನಿಗೆ ಹೋಗುವ ವಿಷಯ. ಮೊನ್ನೆ ಸಲೂನ್‍ಗೆ ಹೋದಾಗ ರಜಾದಿನವಾದ್ದರಿಂದ ಕೂಡಲು ಜಾಗವಿಲ್ಲದಷ್ಟು ಗಿರಾಕಿಗಳಿದ್ದರು. ನಾನು ರೆಗ್ಯೂಲರ್ ಗಿರಾಕಿಯಾದ್ದರಿಂದ ಅಂಗಡಿಯಾತ ಪಕ್ಕದ ಅಂಗಡಿಯಿಂದ ಕುರ್ಚಿ ತರಿಸಿ ನನ್ನನ್ನು ಕೂಡುವಂತೆ ವಿನಂತಿಸಿಕೊಂಡ. ಅಲ್ಲಿರುವ ದಿನಪತ್ರಿಕೆಯನ್ನು ಈಗಾಗಲೆ ಹಲವು ಗಿರಾಕಿಗಳು ಹಂಚಿಕೊಂಡಿದ್ದರಿಂದ ಸುಮ್ಮನೆ ಅಂಗಡಿಯ ಮಾಲೀಕ ಕ್ಷೌರ ಮಾಡುವುದನ್ನೇ ನೋಡುತ್ತ ಕೂಡುವುದು ಒಳಿತೆಂಬ ಸಮ್ಮತಿಯ ಭಾವ ಮೂಡಿತು.  ನಾನು ಹಾಗೆ ಕುಳಿತುಕೊಂಡ ಘಳಿಗೆ ಒಂದು ಅನೂಹ್ಯವಾದ ಅನುಭವಕ್ಕೆ ಒಳಗಾದಂತೆ ಭಾಸವಾಗಿ ಅಲ್ಲಿದ್ದ ಕ್ಷೌರಿಕ ನನಗೆ ಹಲವು ವರ್ಷಗಳಿಂದ ಪರಿಚಿತ ಪಾತ್ರದಂತೆಯೂ ಅವನೊಂದಿಗೆ ಒಡನಾಡಿದ ಭಾವ ನನ್ನ ಅನುಭವಕ್ಕೆ ಬರತೊಡಗಿತು. ಕಣ್ಣುಗಳನ್ನು ಒಂದಷ್ಟು ಅಗಲಗೊಳಿಸಿ ನೋಡಿದಾಗ ಅವನು ಥೇಟ್ ನಮ್ಮ ಊರಿನ ಕ್ಷೌರಿಕ ಅಪ್ಪಣ್ಣನಂತೆ ಕಾಣಿಸುತ್ತಿರುವ ರೀತಿಗೆ ನನಗೇ ಅಚ್ಚರಿ ಅನ್ನಿಸತೊಡಗಿತು. 

    ಈ ಅಪ್ಪಣ್ಣ ನನ್ನೂರಿನ ಅತೀ ಸಂಭಾವಿತ ಮನುಷ್ಯ. ಅವನದು ಕ್ಷೌರಿಕ ವೃತ್ತಿ. ಇಡೀ ಊರಿಗೆ ಇರೋದು ಅವನೊಬ್ಬನದೆ ಕ್ಷೌರಿಕರ ಮನೆ. ಈ ಅಪ್ಪಣ್ಣನೇನೂ ನಮ್ಮ ಊರಿನವನಾಗಿರಲಿಲ್ಲ. ಅವನ ಅಕ್ಕನಿಗೆ ನಮ್ಮೂರಿನ ಕ್ಷೌರಿಕರ ತಮ್ಮಣ್ಣನಿಗೆ ಮದುವೆ ಮಾಡಿಕೊಟ್ಟು ಪಕ್ಕದೂರಿನವರು ನಮ್ಮೂರಿನೊಂದಿಗೆ ಬೀಗಸ್ತನ ಬೆಳೆಸಿದ್ದರು. ತಮ್ಮಣ್ಣನಿಗೆ ಮದುವೆಯಾಗಿ ಹತ್ತು ವರ್ಷಗಳು ಮಕ್ಕಳೇ ಆಗಿರಲಿಲ್ಲ. ಆಗೆಲ್ಲ ಮತ್ತೊಂದು ಮದುವೆಗೆ ಎಷ್ಟೇ ಒತ್ತಾಯಿಸಿದರೂ ತಮ್ಮಣ್ಣ ಹೆಂಡತಿಯ ಮೇಲಿನ ಪ್ರೀತಿಯಿಂದ ಮರುಮದುವೆಗೆ ಸಮ್ಮತಿಸಿರಲಿಲ್ಲ. ಅಫಜಲಪುರದ ಹತ್ತಿರದ ಘತ್ತರಗಿಯ ಭಾಗಮ್ಮನಿಗೆ ಹರಕೆ ಕಟ್ಟಿಕೊಂಡ ಮೇಲೆ ತಮ್ಮಣ್ಣನ ಹೆಂಡತಿ ಬಸಿರಾಗಿ ಹೆಣ್ಣುಮಗಳನ್ನು ಹೆತ್ತಿದ್ದೆ ಬಂತು ಮತ್ತೆ ಅವಳ ಒಡಲು ತುಂಬಲೇ ಇಲ್ಲ. ಮಗಳು ಬೆಳೆದು ದೊಡ್ಡವಳಾಗಿ ಮದುವೆ ವಯಸ್ಸಿಗೆ ಬಂದಾಗ ತಮ್ಮಣ್ಣ ಹೆಂಡತಿಯ ತಮ್ಮ ಅಪ್ಪಣ್ಣನನ್ನೆ ಮನೆಅಳಿಯನಾಗಿ ಮಾಡಿಕೊಂಡ. ಗಂಡು ಮಕ್ಕಳಿಲ್ಲದ ತಮ್ಮಣ್ಣ ದಂಪತಿಗಳಿಗೂ ಅಪ್ಪಣ್ಣ ಮನೆಅಳಿಯನಾಗಿ ಬಂದದ್ದು ಆಸರೆಯಾಯಿತು. ಮಾವನ ಜೊತೆಗೆ ಕ್ಷೌರಿಕ ವೃತ್ತಿಯನ್ನು ಆರಂಭಿಸಿದ ಅಪ್ಪಣ್ಣ ಮೊದಮೊದಲು ಚಿಕ್ಕ ಮಕ್ಕಳ ಕ್ಷೌರ ಮಾತ್ರ ಮಾಡುತ್ತಿದ್ದವನು ಕಾಲಕ್ರಮೇಣ ಊರಿನ ಗೌಡ, ಕುಲಕರ್ಣಿ, ಶ್ಯಾನುಭೋಗರಿಗೆಲ್ಲ ಕ್ಷೌರಕ್ಕೆ  ಅಪ್ಪಣ್ಣನೇ ಅನಿವಾರ್ಯವಾದ. ಚುರುಕು ಮಾತಿನ ಎಂಥ ಗಂಭೀರ ಸ್ವಭಾವದವರನ್ನೂ ಮಾತಿಗೆ ಎಳೆಯುತ್ತಿದ್ದ ಅಪ್ಪಣ್ಣ ತನ್ನ ಹಾಸ್ಯಸ್ವಭಾವದಿಂದ ಊರಿನಲ್ಲಿ ಬಲುಬೇಗ ಎಲ್ಲರಿಗೂ ಬೇಕಾದವನಾಗಿ ಬೆಳೆದ. ತಮ್ಮಣ್ಣನ ಆರೋಗ್ಯ ಕ್ಷೀಣಿಸಿ ಅವನು ಕೆಲಸದಿಂದ ದೂರ ಉಳಿಯತೊಡಗಿದ ಮೇಲೆ ಇಡೀ ಊರು ಅಪ್ಪಣ್ಣನ ಸುಪರ್ದಿಗೆ ಬಂತು. ಅಪ್ಪಣ್ಣನ ಹೆಂಡತಿ ಮಾಲಕ್ಷ್ಮಿ ಒಂಟಿಯಾಗಿ ಬೆಳೆದಿದ್ದರಿಂದಲೊ ಅಥವಾ ಘತ್ತರಗಿ ಭಾಗಮ್ಮನ ಹರಕೆ ಈಗ ಫಲಿಸಿದ್ದರಿಂದಲೊ ಆಕೆ ಸಾಲಾಗಿ ಎರಡು ಗಂಡು ಎರಡು ಹೆಣ್ಣು ಮಕ್ಕಳನ್ನು ಹೆತ್ತು ಮನೆತುಂಬ ಮಕ್ಕಳಿಲ್ಲ ಎಂಬ ಅವ್ವ ಅಪ್ಪನ ಕೊರಗನ್ನು ನೀಗಿಸಿದ್ದಳು.

     ಅಪ್ಪಣ್ಣನ ದಿನನಿತ್ಯದ ಕಾಯಕ ಅವನು ಬೆಳಗ್ಗೆ ಎಳುವುದರೊಂದಿಗೇ ಶುರುವಾಗುತ್ತಿತ್ತು. ಮುಂಜಾನೆ ಆರು ಗಂಟೆಗೇ ಅವನ ಮನೆಯ ಎದುರು ಜನರೆಲ್ಲ ಸರತಿಸಾಲಿನಲ್ಲಿ ಕಾಯುತ್ತ ಕೂಡುತ್ತಿದ್ದದ್ದು ಸಾಮಾನ್ಯ ದೃಶ್ಯವಾಗಿತ್ತು. ಹೀಗೆ ಕೂತವರಲ್ಲಿ ಶಾಲೆಗೆ ಹೋಗುವ ಮಕ್ಕಳು ಮತ್ತು ಪಟ್ಟಣಕ್ಕೆ ಕೆಲಸಕ್ಕೆ ಹೋಗುವವರ ಸಂಖ್ಯೆಯೇ ಹೆಚ್ಚಿರುತ್ತಿತ್ತು. ಊರಲ್ಲೇ ಇರುವವರು ಅವಸರವಿರುವವರು ಮೊದಲು ಕ್ಷೌರ ಮಾಡಿಸಿಕೊಳ್ಳಲಿ ನಾವು ನಿಧಾನವಾಗಿ ಮಾಡಿಸಿಕೊಂಡರಾಯ್ತು ಎನ್ನುವ ಅಲಿಖಿತ ಒಪ್ಪಂದಕ್ಕೆ ಬಂದಂತೆ ಕಾಣುತ್ತಿತ್ತು. ಭಾನುವಾರ ಇಲ್ಲವೇ ಯಾವುದೇ ಸರ್ಕಾರಿ ರಜಾದಿನವಾಗಿದ್ದರೆ ಅಪ್ಪಣ್ಣನ ಮನೆಯ ಎದುರಿನ ಸರತಿ ಸಾಲು ಹನುಮಂತನ ಬಾಲದಂತೆ ಬೆಳೆಯುತ್ತಿತ್ತು. ಒಮ್ಮೊಮ್ಮೆ ಬಯಲಿಗೆ ಹೋಗುವವರು ತಮ್ಮ ದಿನನಿತ್ಯದ ಕೆಲಸ ಮುಗಿಸಿಕೊಂಡು ಕೈಯಲ್ಲಿ ತಂಬಿಗೆ ಹಿಡಿದು ನೇರವಾಗಿ ಅಪ್ಪಣ್ಣನ ಮನೆಗೇ ಬರುತ್ತಿದ್ದರು. ಊರ ಮುಂದಿನ ಭಾವಿಯಿಂದ ನೀರು ತರಲು ಹೋಗುವವರು ಹೊಲಕ್ಕೆ ಹೋಗುವವರು ತಮ್ಮ ಮಕ್ಕಳನ್ನು ನಿದ್ದೆಯಿಂದ ಎಬ್ಬಿಸಿ ಅಪ್ಪಣ್ಣನ ಮನೆಗೆ ಕರೆತಂದು ಸರತಿ ಸಾಲಿನಲ್ಲಿ ಕೂಡಿಸಿ ಹೋಗುತ್ತಿದ್ದರು. ಅಪ್ಪಣ್ಣ ಚುಮುಚುಮು ಬೆಳಕಿನಲ್ಲೆ ಪ್ರಾತ:ವಿಧಿಗಳನ್ನು ಮುಗಿಸಿ ಸ್ನಾನ ಮಾಡಿ ವಿಭೂತಿ ಧರಿಸಿ ಬೆಳಗ್ಗಿನ ಚಹಾಸೇವಿಸಿದವನೇ ಕಾಯಕಕ್ಕೆ ನಿಲ್ಲುತ್ತಿದ್ದ. ಮನೆಯ ಎಡಗಡೆ ದನದ ಕೊಟ್ಟಿಗೆಗೆ ಹೊಂದಿಕೊಂಡಂತೆ ಇರುವ ಕಟ್ಟೆಯ ಮೇಲೆ ಕ್ಷೌರ ಸಾಮಗ್ರಿಗಳ ಪೆಟ್ಟಿಗೆಯೊಂದಿಗೆ ಬಂದು ಕುಳಿತು ಪೆಟ್ಟಿಗೆಗೆ ನಮಸ್ಕರಿಸಿ ತನ್ನ ಕಾಯಕ ಶುರು ಮಾಡುವ ಅಪ್ಪಣ್ಣನ ಕೆಲಸ ಮಧ್ಯಾಹ್ನದವರೆಗೂ ಬಿಡುವಿಲ್ಲದಂತೆ ಸಾಗುತ್ತಿತ್ತು. ಅಪ್ಪಣ್ಣನ ಮೊದಲ ಆದ್ಯತೆ ಯಾವತ್ತೂ ಶಾಲೆಗೆ ಹೋಗುವ ಮಕ್ಕಳಿಗೆ. ಮಕ್ಕಳ ಶಾಲೆಗೆ ತಡವಾದರೆ ಮಾಸ್ತರರು ಬೈಯುವರೆಂಬ ಕಳಕಳಿಯಿಂದ ಸರತಿ ಸಾಲಿನಲ್ಲಿ ಎಷ್ಟೇ ಹಿಂದಿದ್ದರೂ ಶಾಲೆಗೆ ಹೋಗುವ ಮಕ್ಕಳನ್ನು ಮುಂದೆ ಕರೆದು ಕ್ಷೌರ ಮಾಡಿ ಸಾಗಹಾಕಿದ ಮೇಲೆಯೇ ಉಳಿದವರ ತಲೆಗೆ ಅವನು ಕೈಹಚ್ಚುತಿದ್ದದ್ದು. ‘ಅಪ್ಪಣ್ಣ ನಸಕಿನ್ಯಾಗೆ ಬಂದು ನಿನ್ನ ಮನಿ ಎದುರು ಕೂತೀನಿ ಆಗ ಇವರ್ಯಾರು ಇನ್ನು ಬಂದಿರಲಿಲ್ಲ. ನನ್ನ ನಂತರ ಬಂದವರಿಗಿ ಕಟಿಂಗ್ ಮಾಡೋದು ತಪ್ಪ ನೋಡು’ ಎಂದು ಯಾರಾದರು ಎದುರಾಡಿದರೆ ‘ಪಾಪ ಸಾಲಿಗಿ ಹೋಗೋ ಮಕ್ಕಳು. ಅವಕ್ಕ ಅವಸರ ಇರ್ತದ. ಮನ್ಯಾಗ ಇರಾವ ನೀ ಸ್ವಲ್ಪ ತಡಿ’ ಎಂದು ಸಮಾಧಾನ ಹೇಳಿ ಅಂಗಳದಲ್ಲಿ ಕಸಗುಡಿಸುತ್ತಿದ್ದ ಹೆಂಡತಿಗೆ ‘ಶಿವರಾಯಣ್ಣಗ ಒಂದೀಟು ಚಹಾ ತಂದು ಕೊಡು’ ಎಂದು ತನ್ನ ಕಾಯಕದಲ್ಲಿ ಮಗ್ನನಾಗುತ್ತಿದ್ದ. ಅಪ್ಪಣ್ಣನ ಹಿರಿಯ ಮಗನಿಗೆ ವಿದ್ಯೆ ತಲೆಗೆ ಹತ್ತದೆ ಅವನು ಅಪ್ಪನ ಕಸುಬಿನಲ್ಲೇ ಮುಂದುವರೆಯುವ ಇಚ್ಛೆಯಿಂದ ಊರಲ್ಲೇ ಉಳಿದರೆ ಎರಡನೆ ಮಗ ಕಲಬುರಗಿಯ ಕಾಲೇಜೊಂದರಲ್ಲಿ ಬಿ.ಎ ಓದುತ್ತಿದ್ದ. ಎರಡು ಹೆಣ್ಣು ಮಕ್ಕಳು ಇನ್ನು ಚಿಕ್ಕವರಿದ್ದು ಊರಲ್ಲೇ ಶಾಲೆಗೆ ಹೋಗುತ್ತಿದ್ದರು. 

    ಅಪ್ಪಣ್ಣನಿಗೆ ಹೇಳಿಕೊಳ್ಳುವಂಥ ಆಸ್ತಿ ಇರಲಿಲ್ಲ. ಅಕ್ಕನ ಗಂಡ ಕಟ್ಟಿಸಿದ ಮನೆಯೊಂದು ಬಿಟ್ಟರೆ ತನ್ನ ದಿನನಿತ್ಯದ ಕ್ಷೌರದ ಕಾಯಕವೇ ಅನ್ನಕ್ಕೆ ಆಸರೆಯಾಗಿತ್ತು. ವರ್ಷಕ್ಕೆ ದವಸಧಾನ್ಯ ಕೊಟ್ಟು ಕ್ಷೌರ ಮಾಡಿಸಿಕೊಳ್ಳುವ ಕುಟುಂಬಗಳೇ ಊರಲ್ಲಿ ಹೆಚ್ಚಿದ್ದುದ್ದರಿಂದ ಹಣಕೊಡುವವರ ಸಂಖ್ಯೆ ತೀರ ಕಡಿಮೆಯಿತ್ತು. ಬೇಸಾಯವಿಲ್ಲದ ಕುಟುಂಬದವರು ಮಾತ್ರ ಹಣಕೊಟ್ಟು ಕ್ಷೌರ ಮಾಡಿಸಿಕೊಳ್ಳುತ್ತಿದ್ದರು. ಸಾಮಾನ್ಯವಾಗಿ ಅಂಥವರು ಅಪ್ಪಣ್ಣನಿಗಿಂತ ಪಟ್ಟಣದ ಸಲೂನ್ ಅಂಗಡಿಗಳಲ್ಲೇ ಕಟಿಂಗ್ ಮಾಡಿಸಿಕೊಳ್ಳುವುದಿತ್ತು. ಮೆತ್ತನೆಯ ಖುರ್ಚಿ, ಎದುರಿಗೆ ಪ್ರತಿಬಿಂಬ ತೋರಿಸುವ ದೊಡ್ಡಗಾತ್ರದ ಕನ್ನಡಿ, ಮುಖಕ್ಕೆ ಲೇಪಿಸುವ ಸುವಾಸನೆಯುಕ್ತ ಪೌಡರ್ ಇವುಗಳಿಂದ ವಂಚಿತರಾಗಿ ಅಪ್ಪಣ್ಣನಿಂದ ಕ್ಷೌರ ಮಾಡಿಸಿಕೊಳ್ಳಲು ಅವರ ಮನ್ನಸ್ಸು ಒಪ್ಪುತ್ತಿರಲಿಲ್ಲ. ಆಗೆಲ್ಲ ಅಪ್ಪಣ್ಣನಿಗೂ ಊರಲ್ಲಿ ಅಂಥದ್ದೊಂದು ಅಂಗಡಿ ತೆರೆಯುವ ಆಸೆಯಾಗುತ್ತಿತ್ತಾದರೂ ಅದಕ್ಕೆ ಬೇಕಾದ ಬಂಡವಾಳವಿಲ್ಲದೆ ಅಂಥದ್ದೆಲ್ಲ ನನ್ನಂಥವರಿಗಲ್ಲ ಎಂದು ಮನಸ್ಸಿಗೆ ಸಮಾಧಾನ ತಂದುಕೊಳ್ಳುತ್ತಿದ್ದ. ವರ್ಷವಿಡೀ ಕ್ಷೌರ ಮಾಡಿಸಿಕೊಳ್ಳುವ ಕುಟುಂಬಗಳು ಕೆಲವೊಮ್ಮೆ ಬೇಸಾಯದಲ್ಲಿ ನಷ್ಟವಾಯಿತೆಂದು ಅಪ್ಪಣ್ಣನಿಗೆ ಕೊಡಬೇಕಾದ ದವಸಧಾನ್ಯದಲ್ಲಿ ಅರ್ಧದಷ್ಟನ್ನೋ ಇಲ್ಲವೇ ಪೂರ್ತಿ ಕೊಡದೆ ಸತಾಯಿಸುತ್ತಿದ್ದರು. ಆಗೆಲ್ಲ ಈ ಹಳ್ಳಿಯ ಸಹವಾಸವೇ ಸಾಕು ಪಟ್ಟಣಕ್ಕೆ ಹೋಗಿ ತಾನೂ ಅಲ್ಲಿನವರಂತೆ ಕ್ಷೌರದ ಅಂಗಡಿಯನ್ನಿಡಬೇಕೆಂಬ ಅಪ್ಪಣ್ಣನ ಆಸೆ ಮತ್ತೆ ಚಿಗುರುತ್ತಿತ್ತು. ವರ್ಷದ ಬಾಬತ್ತನ್ನು ಸರಿಯಾದ ಸಮಯದಲ್ಲಿ ಕೊಡದೆ ಸತಾಯಿಸುವವರನ್ನು ಅಪ್ಪಣ್ಣ ಕೂಡ ಆಟವಾಡಿಸುತ್ತಿದ್ದ. ಕೆಲವು ದಿನಗಳ ಕಾಲ ಕ್ಷೌರದ ಕೆಲಸವನ್ನೇ ನಿಲ್ಲಿಸಿ ಬೇರೆ ಊರುಗಳಲ್ಲಿನ ಬಂಧುಗಳ ಮನೆಗೆ ಹೋಗಿ ಕುಳಿತು ಬಿಡುತ್ತಿದ್ದ. ಇಲ್ಲಿ ಊರಿನಲ್ಲಿ ಮಕ್ಕಳ, ಯುವಕರ, ಮುದುಕರ ತಲೆಕೂದಲು ಬೆಳೆದು ತಲೆಯಲ್ಲಿ ಹೇನುಗಳಾಗಿ ಅಪ್ಪಣ್ಣ ಯಾವಾಗ ಬರುವನೋ ಎಂದು ಇಡೀ ಊರು ಅವನ ದಾರಿ ಕಾಯುತ್ತಿತ್ತು. ಅಪ್ಪಣ್ಣ ಬಂದದ್ದು ಗೊತ್ತಾದದ್ದೆ ವರ್ಷದ ಬಾಬತ್ತಿನಲ್ಲಿ ಒಂದಷ್ಟನ್ನಾದರೂ ಕೊಟ್ಟು ಸಮಾಧಾನಪಡಿಸಿ ತಮ್ಮ ತಲೆಯನ್ನು ನುಣ್ಣಗೆ ಬೋಳಿಸಿಕೊಂಡು ಹೇನುಗಳ ಕಾಟದಿಂದ ಮುಕ್ತರಾಗುತ್ತಿದ್ದರು. 

      ಅಪ್ಪಣ್ಣ ಮಧ್ಯಾಹ್ನದವರೆಗೂ ಮನೆಯ ಎದುರಿನ ಜಗುಲಿಯ ಮೇಲೆ ಕುಳಿತು ಮನೆಗೆ ಬರುವ ಗಿರಾಕಿಗಳ ತಲೆ ಕ್ಷೌರ ಮಾಡಿ ಇನ್ನು ಉಳಿದವರನ್ನು ನಾಳೆ ಬರಲು ಸಾಗಹಾಕಿ ಮತ್ತೊಮ್ಮೆ ಚಹಾ ಕುಡಿದವನೇ ಪೆಟ್ಟಿಗೆಯನ್ನು ಕೈಯಲ್ಲಿ ಹಿಡಿದು ಊರ ಗೌಡರ ಮನೆಗೆ ಹೋಗುತ್ತಿದ್ದ. ಗೌಡರು, ಶ್ಯಾನುಭೋಗರು ಅಪ್ಪಣ್ಣನ ಮನೆಯ ಎದುರಿನ ಜಗುಲಿಯ ಮೇಲೆ ಕುಳಿತು ಕ್ಷೌರ ಮಾಡಿಸಿಕೊಳ್ಳುವುದೆಂದರೆ ಅದು ಅವರಿಗೆ ಮಾತ್ರವಲ್ಲ ಇಡೀ ಊರಿನ ಪ್ರತಿಷ್ಠೆಯ ಪ್ರಶ್ನೆಯಾಗಿತ್ತು. ಊರ ಕ್ಷೌರಿಕ ಗೌಡರ ಮನೆಯಲ್ಲಿ ಒಂದೆರಡು ತಾಸು ಮತ್ತು ಶ್ಯಾನುಭೋಗರ ಮನೆಯಲ್ಲಿ ಒಂದೆರಡು ತಾಸು ಪ್ರತಿದಿನ ಕಳೆಯುವುದು ಮೊದಲಿನಿಂದಲೂ ನಡೆದುಕೊಂಡು ಬಂದ ಪದ್ಧತಿಯಾಗಿತ್ತು. ಅಪ್ಪಣ್ಣನೂ ಚಾಚೂತಪ್ಪದೆ ಆ ಪದ್ಧತಿಯನ್ನು ಪಾಲಿಸಿಕೊಂಡು ಬಂದಿದ್ದ. ಆಗೆಲ್ಲ ಗೌಡರು ಮತ್ತು ಶ್ಯಾನುಭೋಗರಿಗೆ ಮಾತ್ರವಲ್ಲದೆ ಮನೆಯಲ್ಲಿನ ಮಕ್ಕಳಿಗೂ ಈ ವಿಶೇಷ ಸೌಲಭ್ಯ ಸಿಗುತ್ತಿತ್ತು. ಗೌಡರು ಮತ್ತು ಶ್ಯಾನುಭೋಗರಿಗೆ ಕ್ಷೌರ ಮಾಡುವುದರ ಜೊತೆಗೆ ಕೈಕಾಲುಗಳ ಉಗುರು ಕತ್ತರಿಸುವುದು, ತಲೆಗೆ ಎಣ್ಣೆಹಚ್ಚಿ ಮಸಾಜ್ ಮಾಡುವುದು ಇಂಥ ವಿಶೇಷ ಸೇವೆಗಳನ್ನು ಅಪ್ಪಣ್ಣ ಮಾಡಬೇಕಾಗುತ್ತಿತ್ತು. ಆಗೆಲ್ಲ ಅವನಿಗೆ ವರ್ಷದ ಬಾಬತ್ತಿನ ಹೊರತಾಗಿಯೂ ಒಂದಷ್ಟು ಚಿಲ್ಲರೆ ಕಾಸು ಭಕ್ಷಿಸಾಗಿ ಸಿಗುತ್ತಿತ್ತು. ಇದೆಲ್ಲ ಮುಗಿದು ಮನೆಗೆ ಹೋಗುವಷ್ಟರಲ್ಲಿ ಮಧ್ಯಾಹ್ನವಾಗಿರುತ್ತಿತ್ತು. ಮನೆಗೆ ಹೋಗಿ ಮತ್ತೊಮ್ಮೆ ಸ್ನಾನ ಮಾಡಿದ ನಂತರ ಅಪ್ಪಣ್ಣ ಕ್ಷೌರದ ಪೆಟ್ಟಿಗೆಯನ್ನು ಮತ್ತೆ ಮುಟ್ಟುವುದು ಮರುದಿನದ ಬೆಳಗ್ಗೆಯೇ.  

    ಯಾವ ತಂಟೆ ತಕರಾರುಗಳಿಲ್ಲದೆ ಅಪ್ಪಣ್ಣನ ಬದುಕಿನ ಬಂಡಿ ಸಲೀಸಾಗಿ ನಡೆದುಕೊಂಡು ಹೋಗುತ್ತಿರುವಾಗ ಇದ್ದಕ್ಕಿದ್ದಂತೆ ಒಂದು ದಿನ ಅಪ್ಪಣ್ಣ ತಳೆದ ನಿಲುವು ಆ ಊರಿನಲ್ಲಿ ಬಹುದೊಡ್ಡ ಸಾಮಾಜಿಕ ಸ್ಥಿತ್ಯಂತರಕ್ಕೆ ಕಾರಣವಾಗಬಹುದೆಂದು ಯಾರೂ ಊಹಿಸಿರಲಿಲ್ಲ. ಅಪ್ಪಣ್ಣನ ಕಿರಿಯ ಮಗ ಆನಂದ ಪಟ್ಟಣದ ಕಾಲೇಜಿನಲ್ಲಿ ಓದುತ್ತಿದ್ದು ಊರಿಗೆ ಬರುವಾಗಲೆಲ್ಲ ದೊಡ್ಡ ದೊಡ್ಡ ಪುಸ್ತಕಗಳನ್ನು ಹಿಡಿದುಕೊಂಡು ಮನೆಗೆ ಬರುತ್ತಿದ್ದ. ಆಗೆಲ್ಲ ಅಪ್ಪಣ್ಣನಿಗೆ ತನಗೂ ನಾಲ್ಕಕ್ಷರ ಗೊತ್ತಿದ್ದರೆ ಮಗ ಮನೆಗೆ ತರುತ್ತಿದ್ದ ಆ ದಪ್ಪ ಪುಸ್ತಕಗಳನ್ನು ಓದಿ ಅದರಲ್ಲಿರುವುದನ್ನು ತಿಳಿದುಕೊಳ್ಳುತ್ತಿದ್ದೆ ಎಂದೆನಿಸುತ್ತಿತ್ತು. ಮಗನಿಂದ ಆ ಪುಸ್ತಕದಲ್ಲಿರುವುದನ್ನು ಕೇಳಿ ತಿಳಿದುಕೊಳ್ಳುವ ಮೂಲಕ ಅಪ್ಪಣ್ಣ ತನಗಾಗುವ ನಿರಾಸೆಯನ್ನು ಮರೆಯುತ್ತಿದ್ದ. ಮಗನ ಪುಸ್ತಕಗಳಲ್ಲಿದ್ದ ಗಾಂಧಿ, ಅಂಬೇಡ್ಕರ್, ಲೋಹಿಯಾ, ಕಾರ್ಲ್ ಮಾರ್ಕ್ಸ್ ಹೀಗೆ ಒಬ್ಬೊಬ್ಬರಾಗಿ ಅಪ್ಪಣ್ಣನ ಭಾವದಲ್ಲಿ ಸೇರತೊಡಗಿದಂತೆ ತನ್ನ ಸುತ್ತಲಿನ ಜಗತ್ತನ್ನು ಅಪ್ಪಣ್ಣ ಹೊಸ ರೀತಿಯಲ್ಲಿ ಗ್ರಹಿಸತೊಡಗಿದ. ಹೀಗೆ ಅಪ್ಪಣ್ಣನ ಬದುಕಿನಲ್ಲಿ ಬದಲಾವಣೆಯ ಹೊಸಗಾಳಿ ಬೀಸುತ್ತಿರುವ ಘಳಿಗೆ ಅವನ ಮಗನೊಂದಿಗೆ ಪಟ್ಟಣದ ಕಾಲೇಜಿನಲ್ಲಿ ಓದುತ್ತಿದ್ದ ಹರಿಜನ ಕೇರಿಯ ಚೆನ್ನ ಆನಂದನನ್ನು ಹುಡುಕಿಕೊಂಡು ಒಂದು ಬೆಳಗ್ಗೆ ಮನೆ ಎದುರು ಬಂದು ನಿಲ್ಲುವುದಕ್ಕೂ ಅಪ್ಪಣ್ಣ ಎರ್ರಾಬಿರ್ರಿ ಕೂದಲು ಬೆಳೆದ ಚೆನ್ನನ ತಲೆಯನ್ನು ನೋಡುವುದಕ್ಕೂ ಸರಿಹೋಯಿತು. ‘ಯಾಕ್ಲ ಚೆನ್ನ ಯಾಪರಿ ಕೂದ್ಲು ಬೆಳೆಸಿದ್ದಿ. ಹೇನಾದ್ರ ನಿಂಗೆ ಕಷ್ಟ ನೋಡು’ ಅಪ್ಪಣ್ಣ ಲೊಚಗುಟ್ಟಿದ. ‘ಏನ್ಮಾಡ್ಲಿ ಕಣಣ್ಣೊ ಕಾಲೇಜಿಗಿ ರಜೆ ಅಂತ ಪಟ್ಟಣಕ ಹೋಗದೆ ಎರಡು ತಿಂಗಳಾಯ್ತು’ ಚೆನ್ನ ತನ್ನ ಅಸಹಾಯಕತೆ ತೋಡಿಕೊಂಡ. ‘ಕೂಡು ಮತ್ತೆ ತಲೆ ಬೋಳುಸ್ತೀನಿ’ ಅಪ್ಪಣ್ಣ ತನ್ನೆದುರು ಕುಳಿತ ಸಾಲನ್ನು ಲಕ್ಷಕ್ಕೆ ತೆಗೆದುಕೊಳ್ಳದೆ ಪೆಟ್ಟಿಗೆಯೊಳಗಿನ ಕ್ಷೌರದ ಸಾಮಗ್ರಿಗಳನ್ನು ಹೊರತೆಗೆದವನೇ ಚೆನ್ನನ ತಲೆಗೆ ಕೈ ಹಚ್ಚಿದ. ನೋಡು ನೋಡುವಷ್ಟರಲ್ಲಿ ಅಪ್ಪಣ್ಣನ ಕೈಯೊಳಗಿನ ಕತ್ತರಿ ಚೆನ್ನನ ತಲೆಯಲ್ಲಿ ಸಲೀಸಾಗಿ ಆಡಿ ಕೂದಲನ್ನೆಲ್ಲ ಧರೆಗಿಳಿಸಿ ನುಣ್ಣಗೆ ಹೊಳೆಯುವಂತೆ ಮಾಡಿತು. ಅಪ್ಪಣ್ಣನ ಮನೆ ಎದುರು ಕ್ಷೌರಕ್ಕಾಗಿ ಕಾದು ಕುಳಿತಿದ್ದ ಊರ ಜನ ದಂಗಾಗಿ ಹೋದರು. ಕ್ಷೌರಕ್ಕಾಗಿ ಕಾದು ಕುಳಿತವರೆಲ್ಲ ಒಬ್ಬೊಬ್ಬರಾಗಿ ಎದ್ದು ಹೋಗುತ್ತಿದ್ದಂತೆ ಅಪ್ಪಣ್ಣನ ಮನೆ ಎದುರಿನ ಸಾಲು ಕರಗತೊಡಗಿತು.

      ಊರ ಗೌಡರಿಗೆ ಸುದ್ದಿ ಮುಟ್ಟಿತು. ಊರವರೆಲ್ಲ ಸಭೆ ಸೇರಿ ಪಂಚಾಯಿತಿ ಕಟ್ಟೆಗೆ ಅಪ್ಪಣ್ಣನನ್ನು ಕರೆಕಳಿಸಿದರು. ಪಂಚಾಯಿತಿ ತೀರ್ಪು ತಿಳಿಯಲು ಇಡೀ ಊರು ಅಲ್ಲಿ ನೆರೆದಿತ್ತು. ಮಗ ಆನಂದನ ಜೊತೆಗೂಡಿ ಅಪ್ಪಣ್ಣ ಪಂಚಾಯ್ತಿ ಕಟ್ಟೆಗೆ ಬಂದಾಗ ಸಭೆಯಲ್ಲಿ ಗುಸುಗುಸು ಮಾತುಗಳಿಂದ ಗದ್ದಲ ಮೂಡಿ ಒಬ್ಬರ ಮಾತು ಇನ್ನೊಬ್ಬರಿಗೆ ಕೇಳಿಸದಾಯಿತು. ಪಂಚಾಯಿತಿ ಕಟ್ಟೆಯ ಮೇಲೆ ಕುಳಿತಿದ್ದ ಊರ ಪ್ರಮುಖರನ್ನು ನಮಸ್ಕರಿಸಿ ಅಪ್ಪಣ್ಣ ಕಟ್ಟೆಯ ಎಡಬದಿಗೆ ಹೋಗಿ ಕೈಕಟ್ಟಿ ನಿಂತುಕೊಂಡ. ‘ಏನು ಅಪ್ಪಣ್ಣ ಇವತ್ತು ಬೆಳಗ್ಗೆ ಕೇರಿಯ ಮಾದನ ಮಗ ಚೆನ್ನನಿಗೆ ನೀನು ಊರಿನವರೆದುರೇ ಅದು ಹಾಡ ಹಗಲು ಕ್ಷೌರ ಮಾಡಿದಿಯಂತೆ ನಿಜಾನಾ’ ನ್ಯಾಯಸ್ಥರ ಮಧ್ಯದಲ್ಲಿ ಕುಳಿತಿದ್ದ ಶಾಂತಪ್ಪಗೌಡರು ತಮ್ಮ ಎಂದಿನ ಗಂಭೀರ ಧ್ವನಿಯಲ್ಲಿ ಮಾತಿಗೆ ಪೀಠಿಕೆ ಹಾಕಿದರು. ‘ನಾನು ಮಾಡಿದ್ದರಲ್ಲಿ ತಪ್ಪೆನಿದೆ ಗೌಡ್ರೆ’ ಅಪ್ಪಣ್ಣ ಸಮಾಧಾನದ ಸ್ವರದಲ್ಲೇ ಉತ್ತರಿಸಿದ. ಸಭೆಯಲ್ಲಿ ಮತ್ತೊಮ್ಮೆ ಗುಸುಗುಸು ಮಾತುಗಳಿಂದ ಗದ್ದಲ ಶುರುವಾಯಿತು. ಶಾಂತಪ್ಪಗೌಡರು ಎಲ್ಲರಿಗೂ ಸುಮ್ಮನಿರುವಂತೆ ಹೇಳಿ ‘ತಲತಲಾಂತರದಿಂದ ನಡೆದುಕೊಂಡು ಬಂದ ಸಂಪ್ರದಾಯ ಕಡೆಗಣಿಸಿದರೆ ಊರಿಗೆ ಕೇಡು ತಪ್ಪಿದ್ದಲ್ಲ ಅಪ್ಪಣ್ಣ’ ಈ ಸಲ ಗೌಡರ ಧ್ವನಿಯಲ್ಲಿ ಬೆದರಿಸುವ ಗಡಸುತನವಿತ್ತು. ‘ಪ್ಯಾಟಿನ್ಯಾಗ ಕಟಿಂಗ್ ಮಾಡಿಸಿಕೊಳ್ಳೊರಿಗಿ ಕೇಳ್ರಿ. ಅಲ್ಲಿ ಊರವರು ಕೇರಿಯವರು ಅಂತ ಭೇದ ಇರಲ್ಲ. ಪ್ಯಾಟ್ಯಾಗ ಇಲ್ಲದ್ದು ಈ ಊರಿನ್ಯಾಗ್ಯಾಕೆ’ ಅಪ್ಪಣ್ಣ ತಾನು ಮಾಡಿದ್ದಕ್ಕೆ ಸಮಜಾಯಿಷಿ ಕೊಡುತ್ತಿರುವನೋ ಅಥವಾ ಪ್ರಶ್ನಿಸುತ್ತಿರುವನೋ ಎನ್ನುವ ಗೊಂದಲ ಅಲ್ಲಿ ನೆರೆದಿದ್ದವರಲ್ಲಿ ಮೂಡಿತು. ‘ಅಪ್ಪಣ್ಣ ಎದುರುತ್ತರಾ ಬ್ಯಾಡ. ಪಂಚಾಯಿತಿ ಕಠಿಣ ತೀರ್ಮಾನ ತಗೊಬೇಕಾಗ್ತದ’ ವಾಡ್ಯಾದ ಶಿವನಿಂಗೇಗೌಡ ಅದುಮಿಟ್ಟುಕೊಂಡ ಸಿಟ್ಟು ಹೊರಹಾಕಿದ. ‘ಗೌಡ ಕೈಯಾಗ ಅಧಿಕಾರ ಅದ ಅಂತ ಏನು ಬೇಕಾದ್ರ ಮಾಡ್ತೀನಿ ಅಂದ್ರ ಈಗ ಕಾನೂನು ಕೇಳಂಗಿಲ್ಲ. ಸರ್ಕಾರನೇ ಸಮಾನತೆ ಬರಬೇಕು ಅಂತ ಹೇಳ್ಯಾದಂತ. ಗಾಂಧೀಜಿ ಅಂಥ ದೊಡ್ಡ ವ್ಯಕ್ತಿನೇ ಕೇರಿ ಕೇರಿಗಿ ಹೋಗಿ ಹೇಲ ಬಳದಮ್ಯಾಲ ನಮ್ಮ ನಿಮ್ಮಂಥೊರು ಯಾವ ಲೆಕ್ಕಕ್ಕ. ನಾನು ಇನ್ಮುಂದ ಯಾರೇ ಬರಲಿ ಕಟಿಂಗ್ ಮಾಡೋನೆ. ನೀವು ಏನ್ ಬೇಕಾದ್ರೂ ಮಾಡಿ’ ಅಪ್ಪಣ್ಣ ಎದ್ದುನಿಂತು ಮಗನ ಕೈಹಿಡಿದು ಸೇರಿದ್ದ ಜನರ ನಡುವಿನಿಂದ ದಾರಿ ಮಾಡಿಕೊಂಡು ಮನೆಯಕಡೆ ಹೆಜ್ಜೆ ಹಾಕಿದ. ಮತ್ತೆ ಸಭೆಯಲ್ಲಿ ಗದ್ದಲ ಶುರುವಾಯಿತು. ಪಂಚಾಯಿತಿ ಕಟ್ಟೆಯಲ್ಲಿನ ನ್ಯಾಯಸ್ಥರು ತಮ್ಮ ತಮ್ಮಲ್ಲೆ ಮಾತನಾಡಿಕೊಂಡು ಒಂದು ತೀರ್ಮಾನಕ್ಕೆ ಬಂದವರಂತೆ ಶಾಂತಪ್ಪಗೌಡರನ್ನು ಮಾತನಾಡಲು ಅನುವು ಮಾಡಿಕೊಟ್ಟರು. ಶಾಂತಪ್ಪಗೌಡರು ನೆರೆದಿದ್ದ ಜನಸ್ತೋಮದತ್ತ ಒಮ್ಮೆ ದೃಷ್ಟಿ ಹರಿಸಿ ಕೆಮ್ಮಿ ಗಂಟಲನ್ನು ಸರಿಮಾಡಿಕೊಂಡು ಎಂದಿನ ತಮ್ಮ ಸಹಜ ಗಂಭೀರ ಧ್ವನಿಯಲ್ಲಿ ಪಂಚಾಯಿತಿ ತೀರ್ಮಾನ ಹೇಳಿದರು ‘ನೋಡಿ ನಾವು ನ್ಯಾಯಸ್ಥರೆಲ್ಲ ಕೂಡಿ ತೀರ್ಮಾನ ತೆಗೆದುಕೊಂಡಿದ್ದೀವಿ. ಆ ಪ್ರಕಾರ ಇನ್ಮುಂದೆ ಊರಿನ ಯಾವ ನರಪಿಳ್ಳೆಯೂ ಕ್ಷೌರಕ್ಕಾಗಿ ಅಪ್ಪಣ್ಣನ ಮನೆಗೆ ಹೋಗುವಂತಿಲ್ಲ. ಬೇರೆ ಊರಿಂದ ಕ್ಷೌರಿಕನನ್ನು ಊರಿಗೆ ಕರೆತಂದರಾಯ್ತು. ಅಲ್ಲಿವರೆಗೂ ಎಲ್ಲರೂ ಪಂಚಾಯಿತಿ ನ್ಯಾಯಕ್ಕೆ ಚ್ಯುತಿ ಬರದಂಗ ನಡ್ಕೊಳ್ಳಬೇಕು’. ಸಭೆ ಮುಗಿದು ಒಬ್ಬಬ್ಬೊರಾಗಿ ಎಲ್ಲರೂ ತಮ್ಮ ತಮ್ಮ ಮನೆಗಳಿಗೆ ತೆರಳಿದರು.

      ಅಪ್ಪಣ್ಣನ ಹೆಂಡತಿ ಮಾಲಕ್ಷ್ಮಿಗೆ ತನ್ನ ಗಂಡ ಮಾಡಿದ್ದು ಸರಿ ಅನಿಸಲಿಲ್ಲ. ಅಪ್ಪಣ್ಣನಿಗೂ ಆರಂಭದಲ್ಲಿ ಊರವರನ್ನು ಎದುರುಹಾಕಿಕೊಂಡೆನೇನೋ ಎನ್ನುವ ಭಯ ಕಾಡಿದರೂ ಮನೆಯಲ್ಲಿ ತೂಗು ಹಾಕಿದ್ದ ಗಾಂಧೀಜಿ ಫೆÇೀಟೋ ನೋಡುವಾಗಲೆಲ್ಲ ತಾನು ಮಾಡಿದ್ದು ಸರಿ ಅನಿಸತೊಡಗಿತು. ಊರಲ್ಲಿ ಜನರು ಕೂತಲ್ಲಿ ನಿಂತಲ್ಲಿ ಇದೇ ಮಾತನ್ನು ಆಡಿಕೊಂಡು ಕೆಲವರು ಅಪ್ಪಣ್ಣನ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರೆ ಇನ್ನು ಕೆಲವರು ಅಪ್ಪಣ್ಣನಿಗೆ ಕೇಡು ಸಮೀಪಿಸಿದೆಯೆಂದೂ ಇದರಿಂದ ಊರಿಗೆ ಒಳ್ಳೆಯದಾಗುವುದಿಲ್ಲವೆಂದು ಆತಂಕಪಟ್ಟರು. ಒಂದೆರಡು ದಿನ ಮನೆಯಲ್ಲಿ ಸುಮ್ಮನೆ ಕುಳಿತಿದ್ದ ಅಪ್ಪಣ್ಣ ಒಂದು ದಿನ ಬೆಳಗ್ಗೆ ಎದ್ದವನೇ ಸ್ನಾನ ಮಾಡಿ ಕ್ಷೌರದ ಪೆಟ್ಟಿಗೆ ಹಿಡಿದು ಊರ ಹೊರಗಿನ ಕೇರಿಯ ಕಡೆ ನಡೆದ. ಗಂಡನನ್ನು ತಡೆಯಬೇಕೆಂದ ಮಾಲಕ್ಷ್ಮಿಗೆ ಧೈರ್ಯ ಸಾಲದೆ ಆತ ಹೋಗುವುದನ್ನೇ ನೋಡುತ್ತ ನಿಂತವಳಿಗೆ ಕೊಟ್ಟಿಗೆಯ ಕಸ ಹಾಗೇ ಇರುವುದು ನೆನಪಾಗಿ ಕೈಯಲ್ಲಿ ಕಸಬಾರಿಗೆ ಹಿಡಿದು ಗುಡಿಸತೊಡಗಿದಳು. ಅಪ್ಪಣ್ಣ ಊರಿನ ಮುಖ್ಯ ಬೀದಿಗಳನ್ನು ಹಾದು ಆಂಜನೇಯ ಗುಡಿಯನ್ನು ದಾಟಿ ಕೇರಿಯನ್ನು ಪ್ರವೇಶಿಸಿ ಮಾದನ ಮನೆಯ ಎದುರಿನ ದೊಡ್ಡ ಆಲದ ಮರದ ಕೆಳಗೆ ಕೂತು ಪೆಟ್ಟಿಗೆ ಕೆಳಗಿಟ್ಟು ಬೀಡಿ ಹೊತ್ತಿಸಿದ. ಜನ ಒಬ್ಬೊಬ್ಬರಾಗಿ ಮನೆಯೊಳಗಿಂದ ಹೊರಬಂದು ಅಪ್ಪಣ್ಣನನ್ನು ವಿಚಿತ್ರವಾಗಿ ನೋಡುತ್ತ ಕ್ಷಣಕಾಲ ನಿಂತು ಮತ್ತೆ ಮನೆ ಸೇರತೊಡಗಿದರು. ಕೊನೆಗೆ ಮಾದ ಮನೆಯಿಂದ ಹೊರಬಂದವನೆ ಅಪ್ಪಣ್ಣನ ಎದುರು ಕುಳಿತು ತಲೆ ಬಗ್ಗಿಸಿದ. ಅಪ್ಪಣ್ಣ ಬೀಡಿಯ ತುಂಡನ್ನು ನೆಲಕ್ಕೆ ಒರಸಿ ದೂರ ಒಗೆದು ಬಟ್ಟಲಲ್ಲಿದ್ದ ನೀರನಲ್ಲಿ ಕೈ ಅದ್ದಿ ಮಾದನ ತಲೆಗೆ ರಪರಪನೆ ಬಡಿಯತೊಡಗಿದ. 

    ಅಪ್ಪಣ್ಣನ ಬದುಕು ಮತ್ತೆ ನಿರಾತಂಕವಾಗಿ ಸಾಗತೊಡಗಿತು. ಅವನ ಹಿರಿಮಗ ಪ್ರತಿನಿತ್ಯ ಪಟ್ಟಣಕ್ಕೆ ಹೋಗಿ ಅಲ್ಲಿನ ಸಲೂನ್ ಅಂಗಡಿಗಳಲ್ಲಿ ದುಡಿಯತೊಡಗಿದ್ದರಿಂದ ಈಗ ಮನೆಯಲ್ಲಿ ಯಾವ ಆರ್ಥಿಕ ಅಡಚಣೆಗಳೂ ಇರಲಿಲ್ಲ. ಕೇರಿಯ ಜನ ಕೂಡ ಹಣ ಕೊಟ್ಟು ಅಪ್ಪಣ್ಣನಿಂದ ಕ್ಷೌರ ಮಾಡಿಸಿಕೊಳ್ಳುತ್ತಿದ್ದರಿಂದ ಒಂದಷ್ಟು ಕಾಸು ಕೂಡತೊಡಗಿತು. ಸಮಸ್ಯೆ ಎದುರಾದದ್ದು ಊರಿನವರಿಗೆ. ಪಂಚಾಯಿತಿಯಲ್ಲೇನೋ ತೀರ್ಮಾನ ತೆಗೆದುಕೊಂಡಾಗಿತ್ತು. ಆದರೆ ಒಂದೆರಡು ತಿಂಗಳಲ್ಲಿ ಅಪ್ಪಣ್ಣನ ಅನಿವಾರ್ಯತೆ ಎಲ್ಲರಿಗೂ ಅರ್ಥವಾಗತೊಡಗಿತು. ವರ್ಷಕ್ಕೊಮ್ಮೆ ಕಾಳುಕಡಿ ನೀಡಿ ಕ್ಷೌರ ಮಾಡಿಸಿಕೊಳ್ಳುತ್ತಿದ್ದವರಿಗೆ ಪಟ್ಟಣದ ಸಲೂನ್‍ಗಳಲ್ಲಿ ಅವರು ಹೇಳಿದಷ್ಟು ಹಣ ಕೊಡುವುದು ದುಬಾರಿ ಅನಿಸಲಾರಂಭಿಸಿತು. ಒಮ್ಮೊಮ್ಮೆ ಸಲೂನ್ ಅಂಗಡಿಯಲ್ಲಿ ಊರಿನವರು ಮತ್ತು ಕೇರಿಯವರು ಜೊತೆಯಾಗಿಯೇ ಕೂಡುವುದಿತ್ತು. ಆಗೆಲ್ಲ ಒಂದೇ ಕತ್ತರಿ ಇಬ್ಬರ ತಲೆಯಲ್ಲೂ ಆಡುತ್ತಿತ್ತು. ಈ ವಿಷಯವಾಗಿ ರುಕ್ಮೋಜಿ ಊರ ಪಟೇಲರಾದ ಶಾಂತಪ್ಪಗೌಡರ ಎದುರು ತನ್ನ ಅಸಮಾಧಾನವನ್ನು ತೋಡಿಕೊಂಡಿದ್ದ ‘ಗೌಡ್ರೆ ಇಲ್ಲಿ ಊರಾಗೇನೋ ಅಪ್ಪಣ್ಣ ಮಾಡಿದ್ದು ತಪ್ಪು ಅಂತೀರಿ. ಮೊನ್ನೆ ಶಹರದಾಗ ಸಲೂನ್ ಅಂಗಡ್ಯಾಗ ಮಾದರ ಲಕ್ಕ್ಯಾ ನನ್ನ ಪಕ್ಕದಾಗೆ ಕೂತಿದ್ದ. ಲಕ್ಕ್ಯಾಗ ಮಾಡಿದ ಕತ್ತರಿನಿಂದೇ ನನಗೂ ಕಟಿಂಗ್ ಮಾಡ್ದ ಆ ಅಂಗಡಿಯವ. ಆಗ ನಮಗ ಇಲ್ಲಿ ಮಾಡದಂಗ ಜಬರ್ದಸ್ತಿ ಮಾಡ್ಲಿಕ್ಕಿ ಬರ್ತಿತ್ತೇನು’. ಗೌಡರಿಗೂ ಸಮಸ್ಯೆಯ ಬಿಸಿ ತಟ್ಟಿತ್ತು. ಅವರೂ ಕಳೆದ ಎರಡು ವಾರಗಳಿಂದ ಅಕ್ಕಪಕ್ಕದ ಊರುಗಳಲ್ಲಿದ್ದ ತಮ್ಮ ನೆಂಟರಿಷ್ಟರನ್ನು ಸಂಪರ್ಕಿಸಿ ಒಬ್ಬ ಕ್ಷೌರಿಕನನ್ನು ತಮ್ಮೂರಿಗೆ ಕಳುಹಿಸಿಕೊಡಲು ವಿನಂತಿಸಿಕೊಂಡಿದ್ದರು. ಸುತ್ತಮುತ್ತಲಿನ ಫಾಸಲೆಯಲ್ಲೆಲ್ಲ ಅಪ್ಪಣ್ಣನ ಸಂಬಂಧಿಕರೇ ಇದ್ದುದ್ದರಿಂದ ಯಾರೂ ಬರಲು ತಯ್ಯಾರಿರಲಿಲ್ಲ. 

   ನಾಲ್ಕಾರು ತಿಂಗಳಲ್ಲಿ ಊರಿನ ಅರ್ಧದಷ್ಟು ಜನರ ತಲೆ ಕೂದಲು ಸಿಕ್ಕಾಪಟ್ಟೆ ಬೆಳೆದು ಅವರೆಲ್ಲ ನೋಡಲು ನಾಟಕಗಳಲ್ಲಿನ ಋಷಿಮುನಿಗಳಂತೆ ಕಾಣಿಸತೊಡಗಿದರು. ಮಕ್ಕಳ ಕೂದಲೂ ಬೆಳೆದು ಅವುಗಳು ಬಾಲಮುನಿಗಳಂತೆ ಗೋಚರಿಸತೊಡಗಿದವು.  ತಲೆಯಲ್ಲಿ ಹೇನುಗಳಾಗಿ ಕುಳಿತಲ್ಲಿ ನಿಂತಲ್ಲಿ ತಲೆ ಕೆರೆದುಕೊಳ್ಳುತ್ತ ಇಡೀ ಊರು ವಿಚಿತ್ರವಾಗಿಯೂ ಮತ್ತು ನಿಗೂಢವಾದ ಸಮಸ್ಯೆಯಲ್ಲಿ ಸಿಲುಕಿರುವಂತೆ ಅನುಭವಕ್ಕೆ ಬರತೊಡಗಿತು. ಗಡ್ಡ ಮತ್ತು ತಲೆ ಕೂದಲು ಬೆಳೆದು ಅಸಹ್ಯವಾಗಿ ಕಾಣುತ್ತಿದ್ದ ತಮ್ಮ ಗಂಡಂದಿರನ್ನು ಹೆಣ್ಣುಮಕ್ಕಳು ರಾತ್ರಿ ತಮ್ಮ ಪಕ್ಕದಲ್ಲಿ ಮಲಗಲು ಬಿಡದೆ ಇರುವುದರಿಂದ ಊರ ಹರೆಯದ ಗಂಡುಗಳೆಲ್ಲ ಮನೆಯ ಅಂಗಳದಲ್ಲೊ ಇಲ್ಲವೇ ಊರಗುಡಿಯ ಪ್ರಾಂಗಣದಲ್ಲೊ ಮಲಗಿ ಊರ ನ್ಯಾಯಸ್ಥರಿಗೆ ಹಿಡಿಶಾಪ ಹಾಕತೊಡಗಿದರು.  ಊರಿನಲ್ಲಿ ಮದುವೆಗೆ ಬೆಳೆದುನಿಂತ ಗಂಡುಗಳಿಗೆ ಬೇರೆ ಊರಿನವರು ತಮ್ಮ ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಡಲು ಹಿಂದೇಟು ಹಾಕತೊಡಗಿದರು. ಮಕ್ಕಳ ತಲೆಯಿಂದ ಹೇನುಗಳು ತಮ್ಮ ತಲೆಗೆ ಸೇರಿ ಎಲ್ಲಿ ಆರೋಗ್ಯ ಹಾಳಾಗುವುದೋ ಎಂದು ಹೆದರಿ ಊರಿನಲ್ಲಿದ್ದ ಒಂದೇ ಒಂದು ಸರ್ಕಾರಿ ಶಾಲೆಗೆ ಪಟ್ಟಣದಿಂದ ಬರುತ್ತಿದ್ದ ಶಿಕ್ಷಕರು ಯಾವುದ್ಯಾವುದೋ ಸಬೂಬು ಹೇಳಿ ಗೈರುಹಾಜರಾಗತೊಡಗಿದ್ದರಿಂದ ಮಕ್ಕಳು ಅಂಕೆಗೆ ಸಿಗದೆ ಉಡಾಳರಂತೆ ವರ್ತಿಸಲಾರಂಭಿಸಿದವು. ಮಕ್ಕಳ ಕಷ್ಟ ಮತ್ತು ಅವುಗಳ ಉಡಾಳತನ ನೋಡಲಾಗದೆ ಊರ ಕೆಲವು ಸೊಸೆಯಂದಿರು ಊರಿಗೆ ಕ್ಷೌರಿಕನನ್ನು ಕರೆತಂದ ಮೇಲಷ್ಟೆ ಮರಳಿ ಬರುವುದಾಗಿ  ಹೇಳಿ  ಮಕ್ಕಳನ್ನು ಕಟ್ಟಿಕೊಂಡು ತಮ್ಮ ತಮ್ಮ ತವರುಮನೆಯ ಹಾದಿ ಹಿಡಿದರು. ಊರು ತನ್ನ ಮೊದಲಿನ ಹೊಳಪನ್ನು ಕಳೆದುಕೊಂಡು ಸೂತಕದ ಛಾಯೆ ಇಡೀ ಊರನ್ನು ಆವರಿಸಿದಂತೆಯೂ ಮತ್ತು ಅಲ್ಲಿ ವಾಸಿಸುತ್ತಿದ್ದ ಜನ ಯಾವುದೋ ಅನ್ಯಗ್ರಹದಿಂದ ಬಂದ ಜೀವಿಗಳಂತೆ ನೋಡುವ ಕಣ್ಣುಗಳಿಗೆ ಗೋಚರಿಸತೊಡಗಿದರು.

   ಒಂದು ಬೆಳಗ್ಗೆ ಅಪ್ಪಣ್ಣ ಕ್ಷೌರದ ಪೆಟ್ಟಿಗೆ ಕೈಯಲ್ಲಿ ಹಿಡಿದು ಬಾಗಿಲು ತೆರೆದು ಹೊರಬಂದಾಗ ಮನೆಯ ಎದುರು ಊರಿನ ಜನ ಉದ್ದನೆಯ ಸರತಿ ಸಾಲಿನಲ್ಲಿ ನಿಂತಿರುವುದು ಕಾಣಿಸಿತು. ಮಕ್ಕಳು, ವಯಸ್ಕರು, ವೃದ್ಧರು ಮಾತ್ರವಲ್ಲದೆ ಊರ ಗೌಡರು, ಶ್ಯಾನುಭೋಗರು, ಪಟೇಲರು ಎಲ್ಲರೂ ಅಪ್ಪಣ್ಣ ಬಾಗಿಲು ತೆರೆದು ಹೊರಬರುವುದನ್ನೇ ಕಾಯುತ್ತ ನಿಂತಿದ್ದರು. ಅಪ್ಪಣ್ಣ ಕಟ್ಟೆಯನ್ನು ಏರಿ ಕುಳಿತು ಕ್ಷೌರದ ಪೆಟ್ಟಿಗೆಗೆ ನಮಸ್ಕರಿಸಿ ಬಟ್ಟಲಲ್ಲಿ ನೀರು ಹುಯ್ದು ನೀರಿನಲ್ಲಿ ಕೈ ಅದ್ದಿ ತನ್ನೆದುರು ಕುಳಿತ ಶಾಂತಪ್ಪಗೌಡರ ತಲೆಗೆ ರಪರಪನೆ ಬಡಿಯತೊಡಗಿದ. ಅಪ್ಪಣ್ಣನ ಕೈಯ ತಾಳಕ್ಕೆ ಗೌಡರಿಗೆ ವಿಚಿತ್ರ ಅಮಲೇರಿದಂತಾಗಿ ಅವರ ಮುಖದಲ್ಲಿ ಒಂದು ರೀತಿಯ ನೆಮ್ಮದಿ ಮತ್ತು ಸಮಾಧಾನದ ಭಾವ ಮೂಡತೊಡಗಿತು. ಆ ಕ್ಷಣಕ್ಕೆ ಇಡೀ ಊರು ಆ ಒಂದು ನೆಮ್ಮದಿಗಾಗಿ ಅಪ್ಪಣ್ಣನ ಮನೆ ಎದುರು ಕಾದು ಕುಳಿತಂತೆ ಭಾಸವಾಗತೊಡಗಿತು.

(ಜೂನ್ ೬, ೨೦೧೯ ರ  'ತರಂಗ' ವಾರಪತ್ರಿಕೆಯಲ್ಲಿ ಪ್ರಕಟವಾಗಿದೆ)


-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟ 


Tuesday, March 26, 2019

ನೆನಪು (ಕಥೆ)

           ದಾಮೋದರ ಜೋಷಿ ಒಂದು ಬೆಳಗ್ಗೆ ಹಾಸಿಗೆಯಲ್ಲಿ ನಿದ್ದೆಯಿಂದ ಎದ್ದು ಕುಳಿತವನು ಮಲಗುವ ಕೋಣೆಯಲ್ಲಿನ ವಸ್ತುಗಳನ್ನೆಲ್ಲ ಹೊಸದಾಗಿ ನೋಡುತ್ತಿರುವವನಂತೆ ಪ್ರತಿಯೊಂದು ವಸ್ತುವನ್ನು ದಿಟ್ಟಿಸಿ ನೋಡತೊಡಗಿದ. ದೇಹ ಮತ್ತು ಮನಸ್ಸು ಭಾರವನ್ನು ಕಳೆದುಕೊಂಡು ಹಗುರಾದಂತೆಯೂ ತಾನು ಯಾವುದೋ ಒಂದು ಅನೂಹ್ಯ ಅನುಭವಕ್ಕೆ ಒಳಗಾದಂತೆಯೂ ಅವನಿಗೆ ಭಾಸವಾಗತೊಡಗಿತು. ಎಷ್ಟು ಪ್ರಯತ್ನಿಸಿದರೂ ನಿನ್ನೆ ನಡೆದ ಘಟನೆಗಳು ಅವನ ನೆನಪಿಗೆ ಬರುತ್ತಿಲ್ಲ. ನೆನಪಿನ ಕೋಶದ ಭಾಗವೊಂದು ತನ್ನಿಂದ ಕಳಚಿ ಬಿದ್ದಂತೆಯೂ ಮತ್ತು ಹೀಗಾಗಿದ್ದರಿಂದ ತನ್ನಲ್ಲಿ ಲವಲವಿಕೆ ಮೂಡಿದಂತೆಯೂ ಅನಿಸಲುತೊಡಗಿತು. ರಾತ್ರಿ ಅಂಗಡಿ ಬಾಗಿಲು ಹಾಕಿ ಮನೆಗೆ ಬಂದು ಊಟ ಮಾಡಿದ್ದಷ್ಟೆ ತನಗೆ ನಿದ್ದೆ ಯಾವಾಗ ಬಂತು ಎನ್ನುವುದಾಗಲಿ ರಾತ್ರಿ ಏನು ನಡೆಯಿತೆನ್ನುವುದಾಗಲಿ ನೆನಪಿಸಿಕೊಳ್ಳಲು ಸಾಕಷ್ಟು ಪ್ರಯತ್ನಿಸಿದ ದಾಮೋದರನಿಗೆ ಎಲ್ಲವೂ ಗೋಜಲುಗೋಜಲಾಗಿ ಕಾಣಿಸಿತು. ಅಲ್ಲಲ್ಲಿ ಚದುರಿದ ನೆನಪಿನ ತುಣುಕುಗಳನ್ನು ಒಂದೊಂದಾಗಿ ಜೋಡಿಸಿದಾಗ ರಾತ್ರಿ ಕನಸಿನಲ್ಲಿ ಶ್ವೇತ ವಸ್ತ್ರಧಾರಿಯಾದ ಜಟಾಧಾರಿ ಮುದುಕನೊಬ್ಬ ಕಾಣಿಸಿಕೊಂಡು ತನಗೆ ಏನನ್ನೊ ಹೇಳಿದನೆಂದೂ ಮತ್ತು ಹತ್ತಿರ ಬಂದು ತನ್ನ ಕೈಯಿಂದ ನನ್ನ ತಲೆಯನ್ನು ಸವರಿದನೆನ್ನುವ ಅಸ್ಪಷ್ಟ ಸಂಗತಿಯೊಂದು ಅವನ ಸ್ಮೃತಿ ಪಟಲದ ಮೇಲೆ ಮೂಡಿತು. ಆ ಮುದುಕ ಹಾಗೆ ತನ್ನ ತಲೆಯನ್ನು ಸವರಿದ ಕ್ಷಣದಿಂದಲೇ ನನಗೆ ಆ ದಿನವೆಲ್ಲ ನಡೆದ ಘಟನೆಗಳ ಯಾವ ನೆನಪೂ ಮನಸ್ಸಿನಲ್ಲಿ ಉಳಿಯದ ಅನುಭವವಾಯಿತೆನ್ನುವ ಅರಿವು ಬಂದದ್ದೆ ದಾಮೋದರ ದಗ್ಗನೆ ಹಾಸಿಗೆಯಿಂದ ಎದ್ದು ಹತ್ತಿರದ ಕಿಟಕಿಯ ಬಳಿ ಹೋಗಿ ನಿಂತ. ಕಿಟಕಿಯ ಹೊರಗೆ ಕಾಣುತ್ತಿದ್ದ ಮನೆಯ ಅಂಗಳದಲ್ಲಿನ ಮರಗಿಡಗಳು, ಹೂ ಹಣ್ಣುಗಳು, ಅಮ್ಮ ಬಿಡಿಸಿದ ರಂಗೋಲಿ ಸುಂದರ ದೃಶ್ಯಗಳಂತೆ ಗೋಚರಿಸಿ ಅವುಗಳನ್ನೆ ನೋಡುತ್ತ ಮೈಮರೆತು ನಿಂತ. 

  ಬೆಳ್ಳನೆಯ ಪಂಚೆಯನ್ನು ಉಟ್ಟಿದ್ದ ಬರೀ ಮೈಯ ಸಣಕಲು ದೇಹದ ಗಡ್ಡ ಮೀಸೆ ಬಿಟ್ಟಿದ್ದ ಜಟಾಧಾರಿ ಆ ಮುದುಕ ನಿನ್ನೆಯಷ್ಟೆ ಕನಸಿನಲ್ಲಿ ಕಾಣಿಸಿಕೊಂಡಿರಲಿಲ್ಲ. ಈಗ ಕಳೆದ ಹಲವು ದಿನಗಳಿಂದ ಪ್ರತಿನಿತ್ಯ ಕನಸಿನಲ್ಲಿ ಬಂದು ಕೆಲವು ಕ್ಷಣಗಳ ಕಾಲ ಸುಮ್ಮನೆ ಹತ್ತಿರ ನಿಂತು ಹೊರಟು ಹೋಗುತ್ತಿದ್ದ. ದಾಮೋದರನಿಗೂ ಅದೊಂದು ವಿಚಿತ್ರ ಸಂಗತಿಯಾಗಿ ಕಾಣಿಸಿದರೂ ತನ್ನ ದಿನನಿತ್ಯದ ಬಿಡುವಿಲ್ಲದ ದುಡಿಮೆಯಲ್ಲಿ ಮರೆತು ಬಿಟ್ಟಿದ್ದ. ನಿನ್ನೆಯಷ್ಟೆ ಅವನು ಹತ್ತಿರ ಬಂದು ತನ್ನನ್ನು ಸ್ಪರ್ಷಿಸಿದ್ದು. ಮುದುಕನ ಕೈ ತನ್ನ ತಲೆಯನ್ನು ಸ್ಪರ್ಷಿಸಿದ್ದೆ ದಾಮೋದರನಿಗೆ ದೇಹ ಹಗುರಾದಂತೆಯೂ ತಾನು ಗಾಳಿಯಲ್ಲಿ ತೇಲಾಡುತ್ತಿರುವಂತೆಯೂ ಭಾಸವಾಗತೊಡಗಿತು. ಆ ಮುದುಕನ ಸ್ಪರ್ಷದಲ್ಲಿ ಅದೇನೋ ಮಾಂತ್ರಿಕತೆ ಇದ್ದಂತೆ ಭಾಸವಾಗಿ ತಾನು ಅನಿವರ್ಚನೀಯ ಆನಂದಕ್ಕೆ ಒಳಗಾದ. ನರನಾಡಿಗಳಲ್ಲಿ ವಿದ್ಯುತ್ ಸಂಚಾರವಾದಂತಾಗಿ ಅವನ ಮೈ ವಿಚಿತ್ರವಾದ ಅನುಭವದಿಂದ ಕಂಪಿಸಿತು. 

   ಕೋಣೆಯಿಂದ ಹೊರಬಂದ ದಾಮೋದರನಿಗೆ ಮನೆಯ ಎದುರಿನ ರಸ್ತೆಯಲ್ಲಿದ್ದ ಸಾರ್ವಜನಿಕ ನಲ್ಲಿಯಿಂದ ನೀರಿನ ಕೊಡವನ್ನು ಬಗಲಲ್ಲಿಟ್ಟುಕೊಂಡು ಏದುಸಿರು ಬಿಡುತ್ತ ಪಡಸಾಲೆಯ ಮೆಟ್ಟಿಲುಗಳನ್ನು ಏರುತ್ತಿರುವ ಅಮ್ಮ ಕಣ್ಣಿಗೆ ಬಿದ್ದಳು. ಅಮ್ಮನ ಮುಖದಲ್ಲಿನ ಆಯಾಸ ಮತ್ತು ಬಳಲಿಕೆ ಅವನಲ್ಲಿ ವಿಚಿತ್ರ ಸಂಕಟವನ್ನುಂಟು ಮಾಡಿತು. ಲಗುಬಗೆಯಿಂದ ಮೆಟ್ಟಿಲಿಳಿದು ಅಮ್ಮನ ಹತ್ತಿರ ಹೋದವನು ಅವಳ ಕಂಕುಳಲ್ಲಿದ್ದ ನೀರಿನ ಕೊಡವನ್ನು ತನ್ನ ಕೈಗೆ ತೆಗೆದುಕೊಂಡು ಅಡುಗೆ ಕೋಣೆಯತ್ತ ಹೋಗುತ್ತ ‘ಅಮ್ಮ ನಿನಗೆ ಈಗ ಮೊದಲಿನಂತೆ ಆಗೋದಿಲ್ಲ. ಯಾಕೆ ಆಯಾಸ ಮಾಡ್ಕೊತಿ’ ಎಂದು ನುಡಿದ. ಸಾವಿತ್ರಮ್ಮನವರು ದಂಗು ಬಡಿದಂತೆ ಒಂದು ಕ್ಷಣ ತಮ್ಮ ಇರುವಿಕೆಯನ್ನೇ ಮರೆತು ಅಡುಗೆ ಕೋಣೆಯತ್ತ ಹೋಗುತ್ತಿದ್ದ ಮಗನನ್ನೇ ನೋಡುತ್ತ ನಿಂತರು. ಅಡುಗೆ ಮನೆಯಲ್ಲಿ ಒಲೆಯ ಮೇಲಿಟ್ಟಿದ್ದ ಡಿಕಾಕ್ಷನ್ನಿಗೆ ಹಾಲು ಬೆರೆಸುತ್ತಿದ್ದ ಅಕ್ಕ ಶಾರದಾ ತಮ್ಮ ದಾಮೋದರ ನೀರಿನ ಕೊಡ ಹಿಡಿದುಕೊಂಡು ಬಂದದ್ದನ್ನು ನೋಡಿ ‘ಯಾಕೋ ದಾಮೂ ಅಮ್ಮ ಎಲ್ಲಿ’ ಎಂದು ಕೇಳಿದವಳೇ ತಮ್ಮನನ್ನು ಹೊಸದಾಗಿ ನೋಡುತ್ತಿರುವಂತೆ ನೋಡತೊಡಗಿದಳು. ಬೆಳಗಿನ ಪ್ರಾತ:ವಿಧಿಗಳನ್ನು ಮುಗಿಸಿ ಚಹಾ ಕುಡಿಯಲೆಂದು ಅಡುಗೆ ಮನೆಗೆ ಬಂದ ಶ್ರೀನಿವಾಸರಾಯರಿಗೂ ಮಗ ಇವತ್ತು ಬೇಗನೆ ಎದ್ದು ಮನೆಕೆಲಸದಲ್ಲಿ ತೊಡಗಿರುವುದು ನೋಡಿ ಅಚ್ಚರಿ ಎನಿಸಿತು. ದಾಮೋದರ ಕೊಡದಲ್ಲಿದ್ದ ನೀರನ್ನು ಬಚ್ಚಲು ಮನೆಯಲ್ಲಿದ್ದ ಹಂಡೆಗೆ ಸುರಿದು ಖಾಲಿಯಾದ ಕೊಡವನ್ನು ಕೈಯಲ್ಲಿ ಹಿಡಿದು ಲಗುಬಗೆಯಿಂದ ಅಡುಗೆ ಕೋಣೆಯನ್ನು ದಾಟಿ ಪಡಸಾಲೆಯ ಮೆಟ್ಟಿಲಿಳಿದು ರಸ್ತೆಗೆ ಹೋದ. ಅಡುಗೆ ಕೋಣೆಯಲ್ಲಿ ಒಲೆಯ ಮುಂದೆ ಕುಳಿತಿದ್ದ ಶ್ರೀನಿವಾಸರಾಯರು ಮತ್ತು ಶಾರದಾ ಅರ್ಥವಾಗದವರಂತೆ ಒಬ್ಬರ ಮುಖ ಒಬ್ಬರು ನೋಡಿಕೊಂಡರು. ಅಷ್ಟರಲ್ಲಿ ಸಾವಿತ್ರಮ್ಮನವರು ಅಡುಗೆ ಮನೆಗೆ ಬಂದು ಅವರನ್ನು ಕೂಡಿಕೊಂಡರು. ‘ಏನ್ರೀ ಇದು ವಿಚಿತ್ರ. ಬೆಳಗ್ಗೆ ಎದ್ದ ಕೂಡಲೇ ದುರ್ವಾಸಮುನಿ ಅವತಾರ ತಾಳ್ತಿದ್ದವನು ಇವತ್ತು ಎಷ್ಟೊಂದು ಶಾಂತನಾಗಿದ್ದಾನೆ. ಏನಾಯ್ತುರಿ ಇವನಿಗೆ’ ಒಲೆಯ ಮುಂದೆ ಕೂಡುತ್ತ ಸಾವಿತ್ರಮ್ಮನವರು ಗಂಡ ಮತ್ತು ಮಗಳ ಮುಖ ನೋಡುತ್ತ ಅಚ್ಚರಿ ವ್ಯಕ್ತಪಡಿಸಿದರು. ರಾಯರಿಗಾಗಲಿ ಮತ್ತು ಶಾರದಾಳಿಗಾಗಲಿ ಏನು ಉತ್ತರಿಸುವುದೆಂದು ತಿಳಿಯದೆ ಎದುರಿನಲ್ಲಿದ್ದ ಚಹಾದ ಲೋಟವನ್ನು ಕೈಗೆತ್ತಿಕೊಂಡು ಚಹಾ ಕುಡಿಯಲಾರಂಭಿಸಿದರು. ಅಲ್ಲಿದ್ದ ಮೂರೂ ಜನರ ಮುಖಗಳಲ್ಲಿ ಅಚ್ಚರಿಯೊಂದು ಮನೆ ಮಾಡಿತ್ತು.

   ಹೊರಗೆ ರಸ್ತೆಯಲ್ಲಿ ದಾಮೋದರ ಖಾಲಿ ಕೊಡ ಹಿಡಿದು ಬಂದದ್ದನ್ನು ನೋಡಿದ ನಲ್ಲಿಯ ಹತ್ತಿರ ಜಮಾಯಿಸಿದ್ದ ಅಕ್ಕಪಕ್ಕದ ಮನೆಯವರು ಪರಸ್ಪರ ಮುಖ ನೋಡಿಕೊಂಡು ದೂರ ಸರಿದು ಅವನಿಗೆ ಜಾಗ ಮಾಡಿಕೊಟ್ಟರು. ಅದುವರೆಗೂ ಗೌಜು ಗದ್ದಲದಿಂದ ಕೂಡಿದ್ದ ಆ ಜಾಗ ದಾಮೋದರ ಬರುತ್ತಿದ್ದಂತೆ ಸದ್ದು ಕಡಿಮೆಯಾಗಿ ನೀರವ ಮೌನವನ್ನು ಹೊದ್ದು ಮಲಗಿರುವಂತೆ ಭಾಸವಾಗತೊಡಗಿತು. ದಾಮೋದರನಿಗೂ ಅಲ್ಲಿ ನೆಲೆಸಿದ ಮೌನ ಅಸಹನೀಯ ಎನಿಸಿತು. ನಿಂತಿದ್ದವರ ಮೇಲೊಮ್ಮೆ ತನ್ನ ದೃಷ್ಟಿಯನ್ನು ಹರಿಸಿದವನಿಗೆ ಅಲ್ಲಿ ತನಗಿಂತ ವಯಸ್ಸಾದವರೆ ಗೋಚರಿಸಿದರು. ಪಕ್ಕದ ಮನೆಯ ಕಾಮಾಕ್ಷಮ್ಮ, ಎದುರು ಮನೆಯ ಗೌರಜ್ಜಿ, ಹಿಂದಿನ ಮನೆಯ ಲಿಂಗಜ್ಜ ಅವರನ್ನೆಲ್ಲ ನೋಡಿ ಅವನಿಗೆ ಅಯ್ಯೋಪಾಪ ಎನಿಸಿತು. ಮನೆಯಲ್ಲಿ ಮೊಮ್ಮಕ್ಕಳೊಡನೆ ಆಡುತ್ತಲೋ ಇಲ್ಲವೇ ಸಮವಯಸ್ಸಿನವರೊಂದಿಗೆ ಹರಟುತ್ತಲೋ ಕಾಲಕಳೆಯಬೇಕಾದವರು ಇಲ್ಲಿ ನೀರಿಗಾಗಿ ಪಾಳಿಗೆ ನಿಂತಿರುವುದು ನೋಡಿ ಅವನಿಗೆ ಬೇಸರವೆನಿಸಿತು. ನಲ್ಲಿಯ ನೀರು ವ್ಯರ್ಥ ಹರಿಯುತ್ತಿದ್ದುದ್ದರಿಂದ ದಾಮೋದರ ಕೊಡವನ್ನು ತುಂಬಿಸಿಕೊಳ್ಳಲಿ ಎಂದು ದೂರ ಸರಿದು ನಿಂತವರಿಗೆ ಅವನು ದೂರದಲ್ಲೇ ಕೈಕಟ್ಟಿಕೊಂಡು ನಿಂತಿರುವುದು ನೋಡಿ ಅಲ್ಲಿದ್ದವರಿಗೆಲ್ಲ ತುಂಬ ಆಶ್ಚರ್ಯವಾಯಿತು. ‘ದಾಮೂ ನಿನಗೆ ಅಂಗಡಿಗೆ ಹೊತ್ತಾಗುತ್ತೆ ನೀನು ನೀರು ತುಂಬ್ಕೊ. ನಾವೆಷ್ಟೆಂದರೂ ಕೆಲಸವಿಲ್ಲದೆ ಮನೆಯಲ್ಲಿರೋ ದಂಡಪಿಂಡಗಳು ತಾನೆ’ ಗೌರಜ್ಜಿ ದಾಮೋದರನನ್ನು ನೋಡುತ್ತ ನುಡಿದಳಾದರೂ ಅವನು ನೀಡಬಹುದಾದ ಪ್ರತ್ಯುತ್ತರವನ್ನು ಊಹಿಸಿಕೊಂಡು ಅವಳ ಧ್ವನಿ ಹೆದರಿಕೆಯಿಂದ ನಡುಗುತ್ತಿತ್ತು. ದಾಮೋದರ ಗೌರಜ್ಜಿಯ ಮುಖವನ್ನೊಮ್ಮೆ ನೋಡಿ ಸಮಾಧಾನದ ಧ್ವನಿಯಲ್ಲಿ ‘ಗೌರಜ್ಜಿ ಪಾಪ ನೀವೆಲ್ಲ ವಯಸ್ಸಾದವರು ಹೀಗೆ ಬಿಸಿಲಲ್ಲಿ ನಿಂತಿರುವುದು ನೋಡಿದರೆ ಕರುಳು ಚುರುಕ್ ಅನ್ನುತ್ತೆ. ಮೊದಲು ನೀವು ನೀರು ತುಂಬಿಸಿಕೊಳ್ಳಿ. ನಾನು ಆಮೇಲೆ ತೊಗೊಳ್ತೀನಿ’ ಎಂದವನೇ ಖಾಲಿ ಕೊಡವನ್ನು ನಲ್ಲಿಯ ಸಮೀಪದಲ್ಲಿಟ್ಟು ಮನೆಯ ಒಳಗಡೆ ಹೋದ. ಅಲ್ಲಿದ್ದ ಮೂರೂಜನ ಅವಕ್ಕಾಗಿ ಮನೆಯ ಒಳಗೆ ಹೋಗುತ್ತಿದ್ದ ದಾಮೋದರನನ್ನೇ ನೋಡುತ್ತ ಕ್ಷಣಕಾಲ ಮೈಮರೆತು ನಿಂತವರು ನಂತರ ಎಚ್ಚೆತ್ತುಕೊಂಡು ಲಗುಬಗೆಯಿಂದ ನೀರು ತುಂಬಿಸಿಕೊಳ್ಳತೊಡಗಿದರು.

  ದಾಮೋದರ ಜೋಷಿಗೆ ಈಗ ಮೂವತ್ತರ ಹರೆಯ. ಇನ್ನೂ ಮದುವೆಯಾಗಿಲ್ಲ. ಅಪ್ಪ ಶ್ರೀನಿವಾಸರಾಯರು ಮಗನಿಗಾಗಿ ಹೆಣ್ಣು ನೋಡುತ್ತಿರುವರಾದರೂ ಪಾಪ ದಾಮೋದರನಿಗೆ ಇನ್ನೂ ಕಂಕಣಭಾಗ್ಯ ಕೂಡಿ ಬಂದಿಲ್ಲ. ಮದುವೆಯಾಗಿ ಅತ್ತೆ ಮನೆಯಲ್ಲಿನ ನೂರಾರು ಸಮಸ್ಯೆಗಳಿಂದ ಗಂಡನೊಡನೆ ಜಗಳವಾಡಿ ತವರುಮನೆಗೆ ಬಂದು ಕುಳಿತ ಅಕ್ಕ ಶಾರದಾಳಿಂದಾಗಿ ತನಗೆ ಯಾರೂ ಹೆಣ್ಣು ಕೊಡಲು ಮುಂದೆ ಬರುತ್ತಿಲ್ಲ ಎನ್ನುವ ಸಿಟ್ಟು ಅವನಿಗಿದೆ. ಶ್ರೀನಿವಾಸರಾಯರದೋ ಪಾಪ ಬಡತನದ ಸಂಸಾರ. ತಲಾತಲಾಂತರದಿಂದ ನಡೆಸಿಕೊಂಡು ಬರುತ್ತಿರುವ ದಿನಸಿ ಅಂಗಡಿಯೇ ಅವರ ಸಂಸಾರಕ್ಕೆ ಆಧಾರವಾಗಿತ್ತು. ಸಾವಿತ್ರಮ್ಮನವರದು ಆರತಿ ತೊಗೊಂಡರೆ ಉಷ್ಣ ತೀರ್ಥ ಕುಡಿದರೆ ಶೀತ ಎನ್ನುವ ಆರೋಗ್ಯ. ಮಕ್ಕಳನ್ನು ತಮ್ಮ ಬಡತನದ ಕಾರಣ ಹೆಚ್ಚಿಗೆ ಓದಿಸಲು ಸಾಧ್ಯವಾಗಲಿಲ್ಲ ಎನ್ನುವ ಕೊರಗು ಶ್ರೀನಿವಾಸರಾಯರನ್ನು ಆಗಾಗ ಕಾಡುವುದುಂಟು. ಊರಿನಲ್ಲಿರುವ ಹೈಸ್ಕೂಲು ಶಿಕ್ಷಣ ಮುಗಿದದ್ದೆ ಶ್ರೀನಿವಾಸರಾಯರು ಮಗನನ್ನು ತಮ್ಮ ನಿತ್ಯದ ದಿನಸಿ ಅಂಗಡಿಯ ವ್ಯವಹಾರದಲ್ಲಿ ಜೊತೆಯಾಗಿಸಿಕೊಂಡರು. ಮುಂದೆ ಓದಬೇಕೆನ್ನುವ ಆಸೆ ಇದ್ದರೂ ಮನೆಯ ಬಡತನ ಅಮ್ಮನ ಅನಾರೋಗ್ಯ ಅಕ್ಕನ ಮದುವೆ ಅದಕ್ಕೆ ಅಡ್ಡಿಯಾಗಿವೆ ಎನ್ನುವ ಭಾವನೆ ದಾಮೋದರನಲ್ಲಿ ಮೊಳಕೆಯೊಡೆದು ಈಗ ಆ ಭಾವನೆಯೇ ಬಲಿತುಕೊಂಡಿತ್ತು. ತನ್ನ ಜೊತೆಯಲ್ಲಿ ಓದಿದವರೆಲ್ಲ ಕಾಲೇಜು ಸೇರಿ ಈಗ ಕೈತುಂಬ ಸಂಬಳ ತರುವ ಉದ್ಯೋಗದಲ್ಲಿರುವಾಗ ನಾನಿನ್ನೂ ಇದೇ ಹಳ್ಳಿಯಲ್ಲಿ ಆರಕ್ಕೇರದ ಮೂರಕ್ಕಿಳಿಯಿದ ವ್ಯಾಪಾರದಲ್ಲಿ ಬದುಕನ್ನೇ ಹಾಳು ಮಾಡಿಕೊಂಡೆ ಎನ್ನುವ ಸಿಟ್ಟು ದಾಮೋದರನಿಗಿದೆ. ಅದಕ್ಕೆಂದೇ ಅವನು ಮನೆಯಲ್ಲಾಗಲಿ ಅಕ್ಕಪಕ್ಕದ ಮನೆಯವರೊಂದಿಗಾಗಲಿ ನಗುನಗುತ್ತ ಮಾತನಾಡುವುದೇ ಕಡಿಮೆ. ಅವನ ಸಮವಯಸ್ಸಿನವರಲ್ಲಿ ಹಲವು ಸ್ನೇಹಿತರು ದೂರದ ಊರುಗಳಲ್ಲಿಯೂ ಮತ್ತು ಇನ್ನು ಕೆಲವರು ಮದುವೆಯಾಗಿ ಅದೇ ಊರಿನಲ್ಲಿದ್ದರೂ ಅವರೊಂದಿಗೆ ದಾಮೋದರನ ಒಡನಾಟ ಯಾವತ್ತೋ ಕಡಿದು ಹೋಗಿತ್ತು. ಮನೆ ಬಿಟ್ಟರೆ ಅಂಗಡಿ ಇವರಡೇ ಅವನ ಪ್ರಪಂಚ ಎಂಬಂತಾಗಿ ದಿನದಿಂದ ದಿನಕ್ಕೆ ಯಾರನ್ನೇ ಕಂಡರೂ ಸಿಡಿಮಿಡಿಗೊಳ್ಳುವುದು ಮಾತಿಗೆ ಪ್ರತಿ ಮಾತನ್ನಾಡಿ ಜಗಳಕ್ಕೆ ನಿಲ್ಲುವುದು ಸಹಜ ಸ್ವಭಾವ ಎನ್ನುವಂತಾಯಿತು. ಇಡೀ ಸಂಸಾರದ ಖರ್ಚನ್ನೆಲ್ಲ ಮಗನೇ ಈಗ ನಿಭಾಯಿಸುತ್ತಿದ್ದರಿಂದ ಮನೆಯಲ್ಲಿ ಅವನಿಗೆ ಯಾರೂ ಎದುರಾಡುತ್ತಿರಲಿಲ್ಲ. ಶಾರದಾ ಗಂಡನ ಮನೆಯಲ್ಲಿ ಜಗಳವಾಡಿ ತವರು ಮನೆ ಸೇರಿದವಳಿಗೆ ಇಲ್ಲಿ ಒಂದೊತ್ತಿನ ಊಟಕ್ಕೂ ಹೊರೆಯಾದೆನೇನೋ ಎನ್ನುವ ಭಾವವೇ ಬೆಳೆದು ಹೆಮ್ಮರವಾಗಿ ತಮ್ಮನೆದುರು ನಿಂತು ಮಾತನಾಡುವುದಕ್ಕೂ ಹೆದರುತ್ತಿದ್ದಳು. ಒಂದುದಿನವಂತೂ ಖರ್ಚಿಗೆಂದು ಒಂದಿಷ್ಟು ಹಣ ಕೇಳಿದ ಶಾರದಾಳನ್ನು ದಾಮೋದರ ಅಪ್ಪ ಅಮ್ಮನ ಎದುರೇ ಬಾಯಿಗೆ ಬಂದಂತೆ ಬಯ್ದು ಹೊಡೆಯಲು ಹೋಗಿದ್ದ. ಮಗನ ಅವತಾರ ನೋಡಿ ಶ್ರೀನಿವಾಸರಾಯರು ಮತ್ತು ಸಾವಿತ್ರಮ್ಮ ಭೂಮಿಗಿಳಿದು ಹೋಗಿದ್ದರು. ಆ ಘಟನೆಯ ನಂತರ ಮಗನ ಎದುರು ನಿಂತು ಮಾತನಾಡಲೂ ಅವರು ಹೆದರುತ್ತಿದ್ದರು.

      ಇಂಥ ಸ್ವಭಾವದ ದಾಮೋದರ ಜೋಷಿ ಒಂದು ದಿನ ಇದ್ದಕ್ಕಿದ್ದಂತೆ ಅಕ್ಕರೆ ತುಂಬಿದ ಮಾತುಗಳನ್ನಾಡತೊಡಗಿದಾಗ ಊರಿನವರಿರಲಿ ಮನೆಯವರಿಗೂ ಅವನ ಬದಲಾದ ಸ್ವಭಾವ ವಿಚಿತ್ರ ಸಮಸ್ಯೆಯಾಗಿ ತೋರಿತು. ಅಕ್ಕಪಕ್ಕದ ಮನೆಯವರು ದಾಮೋದರ ಅಂಗಡಿಗೆ ಹೋದ ಸಮಯವನ್ನು ನೋಡಿಕೊಂಡು ಸಾವಿತ್ರಮ್ಮನವರಿಗೆ ನಿಮ್ಮ ಮಗನಿಗೆ ಯಾವುದೋ ದೆವ್ವ ಮೆಟ್ಟಿಕೊಂಡಿರಬಹುದು ಯಾವುದಕ್ಕೂ ಮಂತ್ರಗಾರನ ಹತ್ತಿರ ಕರೆದೊಯ್ಯಿರಿ ಎಂದು ಸಲಹೆ ನೀಡಿದರು. ಇನ್ನು ಕೆಲವರು ದೇವರಿಗೆ ಹರಕೆ ಕಟ್ಟುವಂತೆಯೂ ಕೆಲವರು ಬೇಗ ಮದುವೆ ಮಾಡಿದರೆ ಸರಿಹೋಗಬಹುದೆಂದು ಹೇಳಿದರು. ಇದೇ ವೇಳೆ ದಾಮೋದರ ಭಾವನನ್ನು ಭೇಟಿ ಮಾಡಿ ಅಕ್ಕನ ಸಂಸಾರ ಸರಿಮಾಡಲು ಪ್ರಯತ್ನಿಸಿದ ವಿಷಯ ಎದುರು ಮನೆಯ ಶಾಮರಾಯರಿಂದ ತಿಳಿದು ಮನೆಯವರು ಇನ್ನಷ್ಟು ಗಾಬರಿಯಾದರು. ದಾಮೋದರನ ದಿನಚರಿಯಲ್ಲೂ ಸಾಕಷ್ಟು ಮಾರ್ಪಾಡುಗಳಾದವು. ಈ ಮೊದಲು ತಡರಾತ್ರಿ ಮನೆಗೆ ಬಂದು ಬೆಳಗ್ಗೆ ಲೇಟಾಗಿ ಎಳುತ್ತಿದ್ದವನು ಈಗ ಅಂಗಡಿ ಬಾಗಿಲು ಹಾಕಿದ್ದೆ ಬೇಗನೆ ಮನೆ ಸೇರಿಕೊಳ್ಳತೊಡಗಿದ. ಬೆಳಗ್ಗೆ ಮನೆಯ ಎದುರಿನ ನಲ್ಲಿಯಿಂದ ನೀರು ತರುವುದು, ದೇವರ ಪೂಜೆ, ಅಡುಗೆ ಮನೆಯಲ್ಲಿ ಅಕ್ಕನಿಗೆ ನೆರವಾಗುವುದು, ಅಮ್ಮನಿಗೆ ಸಮಯಕ್ಕೆ ಸರಿಯಾಗಿ ಔಷಧಿ ಕೊಡುವುದು ದಿನದಿಂದ ದಿನಕ್ಕೆ ಹೊಸ ವ್ಯಕ್ತಿಯಾಗಿ ಬದಲಾಗುತ್ತ ಹೋದ. ಈಗ ಸಾವಿತ್ರಮ್ಮನವರಿಗಾಗಲಿ ಶ್ರೀನಿವಾಸರಾಯರಿಗಾಗಲಿ ಮಗನೊಂದಿಗೆ ಮಾತನಾಡುವಾಗ ಈ ಮೊದಲಿನ ಹೆದರಿಕೆ ಇಲ್ಲದೆ ತುಂಬ ಸಲುಗೆಯಿಂದ ಮಾತನಾಡುವ ಧೈರ್ಯ ಬಂದಿದೆ. ಅಕ್ಕ ಶಾರದಾಳಿಗೆ ತಮ್ಮನೊಂದಿಗೆ ತನ್ನ ಕಷ್ಟ ಸುಖ ಹೇಳಿಕೊಳುವಷ್ಟು ಅವರಿಬ್ಬರ ನಡುವೆ ಅನ್ಯೋನ್ಯತೆ ಬೆಳೆದಿದೆ. ಅಕ್ಕಪಕ್ಕದ ಮನೆಯವರೊಂದಿಗೆ ಮತ್ತು ಅಂಗಡಿಗೆ ಬರುವ ಗಿರಾಕಿಗಳೊಂದಿಗೆ ದಾಮೋದರ ನಗುನಗುತ್ತ ಮಾತನಾಡುತ್ತ ಅವರ ಯೋಗಕ್ಷೇಮ ವಿಚಾರಿಸುವನು. ಮೊದಲಿನ ಸಿಡುಕು ಮೋರೆಯ ಸದಾ ಸಿಡಿಸಿಡಿಗುಟ್ಟುತ್ತಿದ್ದ ದಾಮೋದರ ಇವನೇ ಏನು ಎಂದು ಇಡೀ ಊರೇ ಅಚ್ಚರಿಪಡುತ್ತ ಮೂಗಿನ ಮೇಲೆ ಬೆರಳಿಟ್ಟುಕೊಂಡು ಅವನನ್ನು ನೋಡುವಷ್ಟು ನಮ್ಮ ಕಥಾನಾಯಕನ ವ್ಯಕ್ತಿತ್ವದಲ್ಲಿ ಬದಲಾವಣೆಯಾಯಿತು. ಇದಕ್ಕೆಲ್ಲ ಕಾರಣ ಮನಸ್ಸಿಗೆ ದು:ಖ ಕೊಡುವ ಸಂಗತಿಗಳು ಈಗ ದಾಮೋದರನ ನೆನಪಿನಲ್ಲುಳಿಯುತ್ತಿಲ್ಲ. ಕನಸಿನಲ್ಲಿ ಕಾಣಿಸಿಕೊಂಡ ಮುದುಕ ಅವನ ತಲೆಯನ್ನು ಸವರಿಹೋದ ಕ್ಷಣದಿಂದ ಹಿತಕರ ನೆನಪುಗಳಷ್ಟೇ ಮನಸ್ಸಿನಲ್ಲಿ ಉಳಿಯುತ್ತಿವೆ. ಸ್ವತ: ದಾಮೋದರನಿಗೂ ತನ್ನಲ್ಲಾದ ಬದಲಾವಣೆ ಅಚ್ಚರಿ ತಂದಿದೆ. ಕೆಟ್ಟ ಘಟನೆಗಳು ನೆನಪಿನಲ್ಲುಳಿಯದ ಈ ಹೊಸ ಬದುಕು ಅವನಲ್ಲಿ ಜೀವನೋತ್ಸಾಹವನ್ನು ಇಮ್ಮಡಿಗೊಳಿಸಿದೆ.

      ಹೊಸ ಮನುಷ್ಯನಾಗಿ ರೂಪಾಂತರ ಹೊಂದಿದ ನಮ್ಮ ದಾಮೋದರನಲ್ಲಿ ಮನಸ್ಸಿನ ನೆಮ್ಮದಿ ಕೆಡಿಸುವ ಘಟನೆಗಳನ್ನು ನೆನಪಿನಲ್ಲಿಟ್ಟುಕೊಳ್ಳುವ ಶಕ್ತಿ ಮತ್ತೆ ಪ್ರಾಪ್ತವಾಗುತ್ತೆದೆಂದು ಪಾಪ ಅವನಿಗೂ ಗೊತ್ತಿರಲಿಲ್ಲ. ಇವತ್ತು ಬೆಳಗ್ಗೆ ನಿದ್ದೆಯಿಂದ ಎಚ್ಚರವಾಗಿ ಹಾಸಿಗೆಯಲ್ಲಿ ಎದ್ದು ಕುಳಿತವನಿಗೆ ಮೈಯೆಲ್ಲ ಭಾರವಾದ ಅನುಭವ. ನಿನ್ನೆ ಇಡೀ ದಿನ ನಡೆದ ಘಟನೆಗಳೆಲ್ಲ ಒಂದೊಂದಾಗಿ ನೆನಪಿನ ಕೋಶದಿಂದ ಹೊರಬಂದು ತನ್ನ ಮೇಲೆ ದಾಳಿಯಿಡುತ್ತಿರುವಂತೆ ಭಾಸವಾಗಿ ತಲೆ ನೋವಿನಿಂದ ಸಿಡಿಯಲಾರಂಭಿಸಿತು. ತಲೆಯಲ್ಲಿ ಕಾಣಿಸಿಕೊಂಡ ನೋವು ಕ್ರಮೇಣ ದೇಹವನ್ನೆಲ್ಲ ವ್ಯಾಪಿಸುತ್ತಿರುವಂತೆ ಅನಿಸತೊಡಗಿತು.  ನಿನ್ನೆ ಬೆಳಗ್ಗೆ ರಸ್ತೆಯಲ್ಲಿ ನೀರು ತರುವಾಗ ಪಕ್ಕದ ಮನೆಯ ಗೋವಿಂದ ಬೈಯ್ದದ್ದು ಯಾವುದೋ ಮಾತಿಗೆ ಅಪ್ಪ ಹರಿಹಾಯ್ದದ್ದು ಅಂಗಡಿಯಲ್ಲಿ ಕೆಲವು ಗಿರಾಕಿಗಳು ಸಿಟ್ಟಿನಿಂದ ಮಾತನಾಡಿದ್ದು ಎಲ್ಲವೂ ಒಂದೊಂದಾಗಿ ನೆನಪಿಗೆ ಬಂದು ದಾಮೋದರನ ಮನಸ್ಸು ಕ್ಷೋಭೆಗೊಂಡಿತು. ಮರುಕ್ಷಣವೆ ಅರೇ ಕಳೆದ ಹದಿನೈದು ದಿನಗಳಿಂದ ಯಾವ ಕೆಟ್ಟ ಘಟನೆಗಳೂ ನೆನಪಿಗೆ ಬರದಿರುವ ತನಗೆ ಇವತ್ತು ಇದ್ದಕ್ಕಿದ್ದಂತೆ ಮತ್ತೆ ನೆನಪಾಗುತ್ತಿರುವುದು ಅವನಿಗೆ ಆಶ್ಚರ್ಯವೆನಿಸಿತು. ದಾಮೋದರ ತಾನು ಮತ್ತೆ ಮೊದಲಿನ ಸ್ಥಿತಿಗೆ ಮರಳಿದ್ದಕ್ಕೆ ಅಧೀರನಾದ. ಕಳೆದ ಹಲವು ದಿನಗಳಿಂದ ಯಾವ ಅಹಿತಕರ ಘಟನೆಗಳು ನೆನಪಿನಲ್ಲಿ ಸ್ಥಿರವಾಗಿ ನಿಲ್ಲದೆ ಇದ್ದುದ್ದರಿಂದ ಅವನ ಮನಸ್ಸು ತುಂಬ ಹಗುರವಾಗಿತ್ತು. ಮನೆ ಮತ್ತು ಸುತ್ತಲಿನ ಪರಿಸರ ತುಂಬ ಹಿತಕರವಾಗಿಯೂ ಮತ್ತು ಸಹನೀಯವಾಗಿಯೂ ಅವನಿಗೆ ಗೋಚರಿಸಿತ್ತು. ಮನಸ್ಸಿನೊಂದಿಗೆ ದೇಹವೂ ಲವಲವಿಕೆಯಿಂದ ಇದ್ದು ಬದುಕಿನಲ್ಲಿ ಆಸಕ್ತಿ ಮೂಡತೊಡಗಿತ್ತು. ಆದರೆ ಇವತ್ತು ಮನಸ್ಸಿನ ನೆಮ್ಮದಿ ಕದಡಿಹೋದಂತಾಗಿ ದೇಹ ಮಣಭಾರವಾದಂತಾಗಿತ್ತು. ಇಡೀ ದಿನ ದಾಮೋದರ ಒಂದು ರೀತಿಯ ಅಶಾಂತಿಯಲ್ಲೇ ಕಾಲಕಳೆದ.

     ರಾತ್ರಿ ಅಂಗಡಿಯಿಂದ ಮನೆಗೆ ಬಂದು ಊಟ ಮಾಡಿ ಮಲಗುವ ಕೋಣೆ ಸೇರಿದ ದಾಮೋದರ ಬೇಗ ನಿದ್ದೆಗೆ ಜಾರಲು ಹಂಬಲಿಸಿದ. ಕನಸಿನಲ್ಲಿ ಇಂದು ಮುದುಕ ಬರಬಹುದೇನೋ ಅನ್ನುವ ನಿರೀಕ್ಷೆ ಅವನದಾಗಿತ್ತು. ಮಲಗಿ ಒಂದೆರಡು ಗಂಟೆಗಳಾದರೂ ನಿದ್ದೆ ಹತ್ತಿರ ಸುಳಿಯದೆ ಹಾಸಿಗೆಯಲ್ಲಿ ಹೋರಳಾಡಿದ. ಘಳಿಗೆಗೊಮ್ಮೆ ಎದ್ದು ತಂಬಿಗೆಯಲ್ಲಿದ್ದ ನೀರು ಕುಡಿಯುವುದು ಗಡಿಯಾರ ನೋಡಿಕೊಳ್ಳುವುದು ಮತ್ತೆ ಮತ್ತೆ ಪುನರಾವರ್ತನೆಯಾಗತೊಡಗಿತು. ಮುದುಕನ ಆಗಮನದ ನಿರೀಕ್ಷೆಯಲ್ಲಿ ಒಂದೊಂದು ಕ್ಷಣ ಯುಗದಂತೆ ಭಾಸವಾಗತೊಡಗಿತು. ಸೂರ್ಯ ಉದಯಿಸಲು ಇನ್ನೇನು ಒಂದೆರಡು ಗಂಟೆಗಳಿವೆ ಎನ್ನುವಾಗ ದಾಮೋದರ ಗಾಢ ನಿದ್ದೆಗೆ ಜಾರಿದ. ಹಾಗೆ ನಿದ್ದೆ ಹೋದವನಿಗೆ ಕನಸಿನಲ್ಲಿ ತನ್ನ ಹತ್ತಿರ ಯಾರೋ ನಿಂತು ಮೃದುವಾದ ಧ್ವನಿಯಲ್ಲಿ ಮಾತನಾಡುತ್ತಿರುವಂತೆ ಅನ್ನಿಸಿ ದಾಮೋದರ ಕಣ್ಣು ಬಿಟ್ಟ. ಇಡೀ ಕೋಣೆ ಪ್ರಕಾಶಮಾನವಾಗಿ ಬೆಳಗಲಾರಂಭಿಸಿದಂತೆ ಅನ್ನಿಸತೊಡಗಿತು. ಎದುರಿಗೆ ಹಸನ್ಮುಖಿಯಾಗಿ ಶ್ವೇತವಸ್ತ್ರ ಧರಿಸಿದ್ದ ಜಟಾಧಾರಿ ಮುದುಕ ನಿಂತಿರುವುದು ಕಾಣಿಸಿತು. ದಾಮೋದರ ಎದ್ದು ಮುದುಕನ ಹತ್ತಿರ ಹೋದ. ಮುದುಕ ತಾನು ಮೊದಲು ನಿಂತಿದ್ದ ಸ್ಥಳದಿಂದ ಸ್ವಲ್ಪ ಹಿಂದೆ ಸರಿದ. ದಾಮೋದರ ಮುದುಕನನ್ನು ಸಮೀಪಿಸುವುದು ಅವನು ದೂರ ಸರಿಯುವುದು ಸ್ವಲ್ಪ ಹೊತ್ತು ಈ ಆಟ ಮುಂದುವರಿಯಿತು. ಕೊನೆಗೆ ದಾಮೋದರ ಹತಾಶನಾಗಿ ಕೇಳಿದ ‘ದಯವಿಟ್ಟು ನಿನ್ನ ಕೈಯನ್ನೊಮ್ಮೆ ನನ್ನ ತಲೆಯ ಮೇಲಿಡು. ನನ್ನ ನೆನಪಿನ ಶಕ್ತಿ ಕುಂದಲಿ’. ಮುದುಕ ದಾಮೋದರನನ್ನು ಕರುಣೆಯಿಂದ ನೋಡಿ ಮುಗುಳ್ನಕ್ಕ. ಮುದುಕನ ಮುಖದಲ್ಲಿ ಗೋಚರಿಸಿದ ಆ ದೇದಿಪ್ಯಮಾನ ಪ್ರಭೆಗೆ ದಾಮೋದರ ಬೆರಗಾದ. ‘ನನ್ನನ್ನು ನಿನ್ನಂತೆ ಮಾಡು ತಂದೆ’ ಕೈಮುಗಿದು ಬೇಡಿಕೊಂಡ ಕಾಲು ಹಿಡಿದು ಅಂಗಲಾಚಿದ. ‘ಲೌಕಿಕ ಬದುಕಿನಿಂದ ನನ್ನನ್ನು ಪಾರು ಮಾಡು. ಈ ಬದುಕು ನನಗೆ ಬೇಡ. ನನ್ನ ಬದುಕೆಂಬುದು ಶಾಂತಿಯ ಕಡಲಾಗಲಿ’ ಅವನ ಧ್ವನಿಯಲ್ಲಿ ದೈನ್ಯತೆ ಇತ್ತು. ಮುದುಕ ಕರಗಿಹೋದ. ಹತ್ತಿರ ಬಂದು ಕರುಣೆಯಿಂದ ದಾಮೋದರನ ತಲೆಯನ್ನೊಮ್ಮೆ ತನ್ನ ಕೈಯಿಂದ ಸವರಿದ. ಅದುವರೆಗೂ ಆವರಿಸಿಕೊಂಡಿದ್ದ ಜಡತ್ವ ದೂರಾಗಿ ದಾಮೋದರನಿಗೆ ಮನಸ್ಸು ಮತ್ತು ದೇಹ ಹಗುರವಾದ ಅನುಭವವಾಗಿ ಅವನ ಮುಖದಲ್ಲಿ ದೇದಿಪ್ಯಮಾನದ ಪ್ರಭೆ ಬೆಳಗಲಾರಂಭಿಸಿತು.
---000---

(ಎಪ್ರಿಲ್ ೨೦೧೯ ರ ತುಷಾರ ಮಾಸಪತ್ರಿಕೆಯಲ್ಲಿ ಪ್ರಕಟವಾಗಿದೆ)

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 


Saturday, March 2, 2019

ಮಾಧ್ಯಮ ಮತ್ತು ಉದ್ಯಮ

     


         ಹೊಸ ಬದಲಾವಣೆಯ ಕಾಲಘಟ್ಟದಲ್ಲಿ ನಾವು ನಿಂತಿದ್ದೇವೆ. ಜಾಗತೀಕರಣದ ಪ್ರಭಾವಕ್ಕೆ ಒಳಗಾಗಿ ಮಾನವನ ಸಾಧನೆಯ ಕ್ಷೇತ್ರಗಳೆಲ್ಲ ಬದಲಾವಣೆ ಹೊಂದಿ ಅವುಗಳೆಲ್ಲ ಹೊಸ ಪರಿವೇಷದಲ್ಲಿ ನಮಗೆ ಗೋಚರಿಸುತ್ತಿವೆ. ಬದಲಾವಣೆಯನ್ನುವುದು ನಿರಂತರವಾದದ್ದು ಮತ್ತು ಅದು ಬೆಳವಣಿಗೆಯ ಸಂಕೇತ ಕೂಡ ಹೌದು. ಹರಿಯದೇ ನಿಂತ ನೀರು ಕೂಡ ಪಾಚಿಗಟ್ಟಿ ಮಲೀನಗೊಳ್ಳುತ್ತದೆ. ಇನ್ನು ಮಾನವನ ಕಾರ್ಯಕ್ಷೇತ್ರಗಳೂ ಬದಲಾವಣೆಯಿಂದ ಹೊರತಾಗಿಲ್ಲ. ಸದಾ ಹೊಸತನಕ್ಕೆ ತೆರೆದುಕೊಳ್ಳುತ್ತಿರುವುದು ಮಾನವ ಜನಾಂಗದ ಅಭ್ಯುದಯಕ್ಕೆ ಅಗತ್ಯವಾದ ಪ್ರಕ್ರಿಯೆಯಾಗಿದೆ. ಮನುಷ್ಯನ ಸಾಧನೆಯ ಕಾರ್ಯ ಕ್ಷೇತ್ರಗಳಾದ ಶಿಕ್ಷಣ, ಪತ್ರಿಕೆ, ಸಿನಿಮಾ ಮತ್ತು ಬರವಣಿಗೆ ಕಾಲಕಾಲಕ್ಕೆ ಆಧುನಿಕತೆಯನ್ನು ಮೈಗೂಡಿಸಿಕೊಳ್ಳುತ್ತ ಹೊಸ ಹೊಸ ಪರಿವೇಷದಲ್ಲಿ ನಮಗೆ ಗೋಚರಿಸುತ್ತಿವೆ. ಒಂದುಕಾಲದಲ್ಲಿ ಮಾಧ್ಯಮಗಳಾಗಿ ಮಾನವ ಜನಾಂಗದ ಪ್ರಗತಿಯನ್ನೇ ತಮ್ಮ ಮೂಲ ಧ್ಯೇಯವಾಗಿಸಿಕೊಂಡಿದ್ದ ಈ ನಾಲ್ಕು ಮಾಧ್ಯಮ ಕ್ಷೇತ್ರಗಳು ಇಂದು ಉದ್ಯಮದ ಅವತಾರವನ್ನು ಆವಾಹಿಸಿಕೊಂಡು ಬಂಡವಾಳ ಹೂಡಿಕೆದಾರರ ದುರಾಸೆಗೆ ಸಿಲುಕಿ ತಮ್ಮ ಮೂಲ ಅರ್ಥವನ್ನೇ ಕಳೆದುಕೊಂಡು ವಿಕಾರಗೊಳ್ಳುತ್ತಿವೆ. ಮಾಧ್ಯಮವೊಂದು ಉದ್ಯಮವಾಗಿ ರೂಪಾಂತರಗೊಂಡಾಗ ಅಲ್ಲಿ ಹಣಗಳಿಕೆಯೇ  ಮುನ್ನೆಲೆಗೆ ಬಂದು ಸಮಾಜದ ಕಳಕಳಿ ಮತ್ತು ಅಭ್ಯುದಯ ಎನ್ನುವುದು ಹಿನ್ನೆಲೆಗೆ ಸರಿಯುತ್ತದೆ.

ಶಿಕ್ಷಣ

    ಇವತ್ತು ರಾಷ್ಟ್ರದಲ್ಲಿ ಸಾರ್ವಜನಿಕರಿಗೆ ಅಗತ್ಯವಾದ ಶಿಕ್ಷಣವು ಬೃಹತ್ ಉದ್ಯಮದ ರೂಪವನ್ನು ತಾಳಿ ಸಾಮಾನ್ಯ ಜನರಿಗೆ ಕೈಗೆಟುಕದಷ್ಟು ದುಬಾರಿಯಾಗಿದೆ. ಶಿಕ್ಷಣ ಮನುಷ್ಯನ ಮೂಲಭೂತ ಅಗತ್ಯಗಳಲ್ಲೊಂದು. ಹೀಗಾಗಿ ಈ ರಾಷ್ಟ್ರದಲ್ಲಿ ಬದುಕುತ್ತಿರುವ ಪ್ರತಿಯೊಬ್ಬ ವ್ಯಕ್ತಿಗೂ ಶಿಕ್ಷಣ ಉಚಿತವಾಗಿ ಮತ್ತು ಗುಣಾತ್ಮಕವಾಗಿ ದೊರೆಯಬೇಕು. ಜೊತೆಗೆ ಉಚಿತ ಮತ್ತು ಗುಣಾತ್ಮಕ ಶಿಕ್ಷಣವನ್ನು ತನ್ನದಾಗಿಸಿಕೊಳ್ಳುವುದು ಇಲ್ಲಿರುವ ಪ್ರತಿಯೊಬ್ಬ ಪ್ರಜೆಯ ಹಕ್ಕು ಕೂಡ ಹೌದು. ಹಾಗೆಂದು ಸರ್ಕಾರವನ್ನಾಗಲಿ ಮತ್ತು ಜನಪ್ರತಿನಿಧಿಗಳನ್ನಾಗಲಿ ನೇರವಾಗಿ ಆರೋಪಿಗಳನ್ನಾಗಿಸುವುದು ತುಂಬ ಕಷ್ಟವಾದ ಕೆಲಸ. ಏಕೆಂದರೆ ಈ ರಾಷ್ಟ್ರದಲ್ಲಿ ಉಚಿತ ಶಿಕ್ಷಣಕ್ಕಾಗಿ ನಮ್ಮ ಸರ್ಕಾರ ಕಾನೂನನ್ನೇ ಮಾಡಿದೆ. ಪ್ರತಿಯೊಂದು ಮಗು ಹತ್ತು ವರ್ಷಗಳವರೆಗಿನ ಶಿಕ್ಷಣವನ್ನು ಉಚಿತವಾಗಿ ಪಡೆಯುವ ಎಲ್ಲ ಅವಕಾಶಗಳನ್ನು ರೂಪಿಸಲಾಗಿದೆ. ಹೀಗೆ ಸರ್ಕಾರ ಕಾನೂನನ್ನು ರೂಪಿಸಿದ್ದೆ ತಪ್ಪಾಯೊತೇನೋ ಎನ್ನುವಂತೆ ಬಂಡವಾಳ ಹೂಡಿಕೆದಾರರಿಗೆ ಮತ್ತು ಉದ್ಯಮಪತಿಗಳಿಗೆ ಶಿಕ್ಷಣ ಎನ್ನುವುದು ಮನುಷ್ಯನ ಮೂಲಭೂತ ಅಗತ್ಯಗಳಲ್ಲೊಂದು ಎನ್ನುವ ಅರಿವು ಮೂಡಿ ಶಿಕ್ಷಣವನ್ನು ಕೂಡ ಅವರು ಬಂಡವಾಳ ಹೂಡಿಕೆಗೆ ತುಂಬ ಫಲವತ್ತಾದ ಕ್ಷೇತ್ರವೆಂದು ಪರಿಭಾವಿಸಲಾರಂಭಿಸಿದರು. ಪರಿಣಾಮವಾಗಿ ಉದ್ಯಮಿಗಳು ಬೇರೆ ಬೇರೆ ಉದ್ಯಮದಲ್ಲಿ ತಾವು ಗಳಿಸಿದ್ದನ್ನು ಶಿಕ್ಷಣ ಕ್ಷೇತ್ರದಲ್ಲಿ ಬಂಡವಾಳ ಹೂಡತೊಡಗಿದರು. ಪಾಲಕರನ್ನು ಮತ್ತು ವಿದ್ಯಾರ್ಥಿಗಳನ್ನು ಆಕರ್ಷಿಸಲು ಮಗುವಿನ ಶಿಕ್ಷಣ ಮಾಧ್ಯಮವನ್ನು ಇಂಗ್ಲಿಷಾಗಿ ಪರಿವರ್ತಿಸಿ ಬೃಹದಾಕಾರದ ಕಟ್ಟಡಗಳು, ಆಧುನಿಕ ತಂತ್ರಜ್ಞಾನದಡಿ ನಿರ್ಮಾಣಗೊಂಡ ಪಾಠದ ಕೊಠಡಿಗಳು, ಡಿಜಿಟಲ್ ಗ್ರಂಥಾಲಯಗಳು, ವಿಶಾಲವಾದ ಆಟದ ಆವರಣ, ಸುಸಜ್ಜಿತ ಪ್ರಯೋಗಾಲಯಗಳು, ಅರಳು ಹುರಿದಂತೆ ಮಾತನಾಡುವ ಶಿಕ್ಷಕರು ಹೀಗೆ ಒಟ್ಟಿನಲ್ಲಿ ಉದ್ಯಮಕ್ಕೆ ಅಗತ್ಯವಾದ ಎಲ್ಲ ಸಿದ್ಧತೆಗಳೊಂದಿಗೆ ಶಿಕ್ಷಣ ಕ್ಷೇತ್ರಕ್ಕೆ ಉದ್ಯಮಪತಿಗಳು ಕಾಲಿಟ್ಟರು. ಒಟ್ಟಾರೆ ಅದುವರೆಗಿನ ಸರ್ಕಾರಿ ಶಾಲೆಗಳಲ್ಲಿನ ಕೊರತೆಗಳನ್ನೇ ತಮ್ಮ ಲಾಭಕ್ಕೆ ಪರಿವರ್ತಿಸಿಕೊಂಡ ಉದ್ಯಮಪತಿಗಳು ಪಾಲಕರ ಮತ್ತು ವಿದ್ಯಾರ್ಥಿಗಳ ಮೂಗಿಗೆ ಗುಣಾತ್ಮಕ ಶಿಕ್ಷಣ ಎನ್ನುವ ತುಪ್ಪ ಸವರಿದ್ದು ಮಾತ್ರ ಸತ್ಯವಾದ ಸಂಗತಿ.
    ಹೀಗೆ ಪ್ರತಿ ಮಗುವಿಗೂ ಅಗತ್ಯವಾದ ಶಿಕ್ಷಣವು ಉದ್ಯಮಪತಿಗಳ ನೇರ ಪ್ರವೇಶದಿಂದಾಗಿ ಖಾಸಗೀಕರಣವಾಗಿ ರೂಪಾಂತರಗೊಂಡಿತ್ತು. ಅಚ್ಚರಿಯ ಸಂಗತಿ ಎಂದರೆ ಈ ನೆಲದಲ್ಲಿ ಶಿಕ್ಷಣವನ್ನು ಆರಂಭದಲ್ಲಿ ಖಾಸಗೀಕರಣಗೊಳಿಸಿದ್ದು ಧಾರ್ಮಿಕ ಕೇಂದ್ರಗಳಾದ ಮಠಗಳು. ಎಲ್ಲಿ ಸರ್ಕಾರಕ್ಕೆ ಉಚಿತ ಮತ್ತು ಪರಿಣಾಮಕಾರಿಯಾದ ಶಿಕ್ಷಣವನ್ನು ಒದಗಿಸಲು ಸಾಧ್ಯವಾಗುತ್ತಿರಲಿಲ್ಲವೋ ಅಲ್ಲೆಲ್ಲ ಮಠಗಳು ಸರ್ಕಾರದ ಅನುಮತಿಯೊಂದಿಗೆ ಖಾಸಗಿ ಶಾಲೆಗಳನ್ನು ಸ್ಥಾಪಿಸಲಾರಂಭಿಸಿದವು. ಮಠಗಳು ಸ್ಥಾಪಿಸುತ್ತಿದ್ದ ಖಾಸಗಿ ಶಾಲೆಗಳಲ್ಲೂ ಕೂಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಾಗುತ್ತಿತ್ತು ಎನ್ನುವುದು ಗಮನಿಸಬೇಕಾದ ಸಂಗತಿ. ಸರ್ಕಾರ ಕೂಡ ತನ್ನ ಹೊರೆ ಅಥವಾ ಜವಾಬ್ದಾರಿಯನ್ನು ಮಠಗಳು ನಿರ್ವಹಿಸಲು ಮುಂದೆ ಬಂದಾಗ ಅದು ಸಹಜವಾಗಿಯೇ  ಒಪ್ಪಿಗೆ ನೀಡಿತು. ಮಠಗಳ ಉದ್ದೇಶ ಕೂಡ ಶಿಕ್ಷಣದ ಮೂಲಕವೇ ನಿರ್ಲಕ್ಷಿತ ತಳಸಮುದಾಯಗಳನ್ನು ಸಮಾಜದ ಮುಖ್ಯವಾಹಿನಿಗೆ ತಂದು ನಿಲ್ಲಿಸಬೇಕೆನ್ನುವ ಒಂದು ಕಳಕಳಿ ಇದ್ದುದ್ದರಿಂದ ಇಲ್ಲಿ ಧಾರ್ಮಿಕ ಮಠಗಳ ನಡೆಯನ್ನು ಅನುಮಾನಿಸುವಂತಿರಲಿಲ್ಲ. ಮಠಗಳು ಸಹ ಶಿಕ್ಷಣವನ್ನು ಸಮಾಜದ ಅಭಿವೃದ್ಧಿಗಾಗಿ ತುಂಬ ಪರಿಣಾಮಕಾರಿಯಾಗಿ ಸದ್ಬಳಕೆ ಮಾಡಿಕೊಂಡವು ಎನ್ನುವುದು ಗಮನಾರ್ಹ ಸಂಗತಿ.  
   ಶಿಕ್ಷಣದ ಖಾಸಗೀಕರಣ ಉದ್ಯಮದ ರೂಪವನ್ನು ತಳೆಯಲು ಜಾಗತೀಕರಣದ ಪ್ರಭಾವ ಮತ್ತು ಪಾತ್ರ ಗಣನೀಯವಾಗಿದೆ. ಇಂಗ್ಲಿಷ್ ಮಾಧ್ಯಮದ ಮೂಲಕ ಶಿಕ್ಷಣ ಪಡೆದ ನಮ್ಮ ಯುವ ಪೀಳಿಗೆ ಜಾಗತೀಕರಣದ ಕಾರಣ ನಾಲ್ಕಂಕಿ ಸಂಬಳ ಪಡೆಯುವ ಉದ್ಯೋಗವನ್ನು ದಕ್ಕಿಸಿಕೊಳತೊಡಗಿದರು. ಜೊತೆಗೆ ಇದೇ ವಿದ್ಯಾವಂತ ಪೀಳಿಗೆಗೆ ಸಲೀಸಾಗಿ ವಿದೇಶಗಳಿಗೆ ಉದ್ಯೋಗದ ನೆಪದಲ್ಲಿ ವಲಸೆಹೋಗಲು ಜಾಗತೀಕರಣ ಅನುವು ಮಾಡಿಕೊಟ್ಟಿತು. ಪರಿಣಾಮವಾಗಿ ಪಾಲಕರೆಲ್ಲ ಸರ್ಕಾರದ ಕನ್ನಡ ಶಾಲೆಗಳಿಗೆ ಬದಲಾಗಿ ಖಾಸಗಿ ಇಂಗ್ಲಿಷ್ ಮಾಧ್ಯಮದ ಶಾಲೆಗಳಲ್ಲಿ ತಮ್ಮ ಮಕ್ಕಳಿಗೆ ಪ್ರವೇಶ ದೊರಕಿಸಿಕೊಡಲು ಆರಂಭಿಸಿದರು. ಇದು ಎಷ್ಟರ ಮಟ್ಟಿಗೆ ಬೆಳೆಯಿತೆಂದರೆ ಹಳ್ಳಿಗಳಲ್ಲಿನ ಕೃಷಿಕರು ಕೂಡ ತಮ್ಮ ಮಕ್ಕಳಿಗೂ ಇಂಗ್ಲಿಷ್ ಮಾಧ್ಯಮದ ಶಿಕ್ಷಣ ಕೊಡಿಸಲು ನಗರ ಪ್ರದೇಶಗಳಿಗೆ ವಲಸೆ ಬರಲಾರಂಭಿಸಿದರು. ಪಾಲಕರ ಈ ಮಹತ್ವಾಕಾಂಕ್ಷೆಯನ್ನೇ ತಮ್ಮ ಬಂಡವಾಳವಾಗಿಸಿಕೊಂಡ ಖಾಸಗಿ ಶಿಕ್ಷಣ ಸಂಸ್ಥೆಗಳು ಲಕ್ಷಾಂತರ ರೂಪಾಯಿಗಳ ಶುಲ್ಕವನ್ನು ವಸೂಲು ಮಾಡುತ್ತ ಬೆಳೆಯತೊಡಗಿದವು. ಸರ್ಕಾರ ಕೂಡ ಖಾಸಗಿ ಶಿಕ್ಷಣ ಸಂಸ್ಥೆಗಳ ನಡೆಗೆ ಸಮ್ಮತಿ ಸೂಚಿಸಿ ಒಂದರ್ಥದಲ್ಲಿ ಶಿಕ್ಷಣ ಮಾಧ್ಯಮವನ್ನು ಉದ್ಯಮವಾಗಿಸಲು ಉದ್ಯಮ ಪತಿಗಳೊಂದಿಗೆ ಕೈಜೋಡಿಸಿತು. ಇವತ್ತು ನಾವುಗಳೆಲ್ಲ ಬಹುದೂರ ಸಾಗಿ ಬಂದಿದ್ದೇವೆ. ಒಂದೆಡೆ ಅನೇಕ ಸಮ್ಸ್ಯೆಗಳು ಮತ್ತು ಕೊರತೆಗಳಿಂದ ಕುಂಟುತ್ತ ಸಾಗಿರುವ ಸರ್ಕಾರದ ಕನ್ನಡ ಶಾಲೆಗಳು ಇನ್ನೊಂದೆಡೆ ಲಕ್ಷಾಂತರ ರೂಪಾಯಿಗಳ ಶುಲ್ಕವನ್ನು ವಸೂಲಿ ಮಾಡುತ್ತ ಶಿಕ್ಷಣವನ್ನು ವ್ಯಾಪಾರದ ಮಟ್ಟಕ್ಕಿಳಿಸಿರುವ ಖಾಸಗಿ ಇಂಗ್ಲಿಷ್ ಮಾಧ್ಯಮದ ಶಾಲೆಗಳು. ಮೊದಲಿನದನ್ನು ನೆಚ್ಚಿಕೊಂಡು ಕೂಡುವಂತಿಲ್ಲ ಮತ್ತು ಎರಡನೆಯದನ್ನು ನಿಭಾಯಿಸುವಷ್ಟು ಆರ್ಥಿಕ ಸಾಮರ್ಥ್ಯವಿಲ್ಲ. ಇಂಥ ವಾತಾವರಣದಲ್ಲಿ ಬಡವರ ಮಕ್ಕಳ ಗೋಳು ಕೇಳುವವರಿಲ್ಲದಂತಾಗಿದೆ. ಸರ್ಕಾರದ ಉಚಿತ ಮತ್ತು ಕಡ್ಡಾಯ ಶಿಕ್ಷಣ ತನ್ನ ಅರ್ಥವನ್ನು ಕಳೆದುಕೊಂಡು ಸಾರ್ವಜನಿಕರ ಕಣ್ಣೊರೆಸುವ ಒಂದು ತಂತ್ರವಾಗಿ ಗೋಚರಿಸುತ್ತದೆ. ಈಗ ಆಗಬೇಕಾಗಿರುವುದು ಶಿಕ್ಷಣವನ್ನು ಉದ್ಯಮದ ಸ್ವರೂಪದಿಂದ ಹೊರತಂದು ಅದನ್ನು ಮೊದಲಿನಂತೆ ಮಾಧ್ಯಮವಾಗಿ ರೂಪಾಂತರಿಸಬೇಕಾಗಿದೆ. 

ಪತ್ರಿಕೋದ್ಯಮ


     ಆರಂಭದಲ್ಲೇ ಒಂದು ವಿಷಯವನ್ನು ಹೇಳುವುದೊಳಿತು. ಕನ್ನಡಿಗರಾದ ಶಾರದಾ ಪ್ರಸಾದ ಇಪ್ಪತ್ತು ವರ್ಷಗಳಷ್ಟು ದೀರ್ಘಕಾಲ ಪ್ರಧಾನ ಮಂತ್ರಿಗಳ ಮಾಧ್ಯಮ ಸಲಹೆಗಾರರಾಗಿ ಕಾರ್ಯನಿರ್ವಹಿಸಿದವರು. ನಾಲ್ಕು ಜನ ಪ್ರಧಾನ ಮಂತ್ರಿಗಳನ್ನು ತೀರ ಹತ್ತಿರದಿಂದ ಕಂಡವರು. ಅವರು ಮನಸ್ಸು ಮಾಡಿದಿದ್ದರೆ ಪ್ರಧಾನ ಮಂತ್ರಿಗಳನ್ನು ಕುರಿತು ಹಲವಾರು ಪುಸ್ತಕಗಳನ್ನು ಬರೆಯಬಹುದಿತ್ತು. ಅವರ ಎದೆಗೂಡಲ್ಲಿ ಅದೆಷ್ಟು ರಹಸ್ಯಗಳು ಅಡಕವಾಗಿದ್ದವೋ ಬಲ್ಲವರಾರು. ಆದರೆ ಅವರೆಂದು ನಂಬಿಕೆಯನ್ನು ಕಳೆದುಕೊಳ್ಳಲಿಲ್ಲ. ಮಾಧ್ಯಮ ಸಲಹೆಗಾರರಾಗಿದ್ದ ಅವರಲ್ಲಿ ಒಂದು ಎಥಿಕ್ಸ್ ಇತ್ತು. ನಿಮಗೆಲ್ಲ ನೆನಪಿರುವಂತೆ ಇತ್ತೀಚಿಗೆ ‘The Accidental Primeminister’   ಎನ್ನುವ ಹೆಸರಿನ ಸಿನಿಮಾ ಬಿಡುಗಡೆಗೆ ಮೊದಲೇ ಸ್ವಲ್ಪ ಹೆಚ್ಚೆ ಎನ್ನುವಂತೆ ಸುದ್ದಿ ಮಾಡಿತು. ಇದು ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರ ಕುರಿತು ತಯ್ಯಾರಾದ ಸಿನಿಮಾ. ಈ ಸಿನಿಮಾಕ್ಕೆ ‘The Accidental Primeminister’ ಎನ್ನುವ ಹೆಸರಿನ ಪುಸ್ತಕ ಆಧಾರವಾಗಿತ್ತು. ಈ ಪುಸ್ತಕದ ಲೇಖಕ ಮನಮೋಹನ ಸಿಂಗ್ ಪ್ರಧಾನ ಮಂತ್ರಿಯಾಗಿದ್ದಾಗ ನಾಲ್ಕು ವರ್ಷಗಳ ಕಾಲ ಅವರ ಮಾಧ್ಯಮ ಸಲಹೆಗಾರರಾಗಿದ್ದ ಸಂಜಯ ಬಾರು. ಮನಮೋಹನ ಸಿಂಗ್ ಅವರ ಅಧಿಕಾರವಧಿ ಕೊನೆಗೊಂಡ ತಕ್ಷಣ ಈ ಕೃತಿ ಪ್ರಕಟವಾಗಿ ಹೊರಬಂತು. ಸಹಜವಾಗಿಯೇ  ಪುಸ್ತಕ ಸಾರ್ವಜನಿಕ ವಲಯದಲ್ಲಿ ಕುತೂಹಲ ಹುಟ್ಟಿಸಿತು. ಕೊನೆಗೆ ಸಿನಿಮಾ ಆಗಿ ದೇಶದ ಹೆಚ್ಚಿನ ಜನರನ್ನು ತಲುಪಿತು. ಈ ಪುಸ್ತಕ ಮತ್ತು ಸಿನಿಮಾದಿಂದ ಕೆಲವರ ವ್ಯಕ್ತಿತ್ವಕ್ಕೆ ಅಪಚಾರವಾದರೂ ಲೇಖಕರಿಗೆ ಸಾಕಷ್ಟು ಖ್ಯಾತಿಯನ್ನು ತಂದುಕೊಟ್ಟಿತು. ಇನ್ನು ಮುಂದೆ ಭವಿಷ್ಯದಲ್ಲಿ ಮಾಧ್ಯಮ ಸಲಹೆಗಾರರನ್ನು ಆಯ್ಕೆ  ಮಾಡುವಾಗ ಪ್ರಧಾನ ಮಂತ್ರಿ ಸಾವಿರಾರು ಸಲ ಯೋಚಿಸಬಹುದು. ಕೊನೆಗೂ ಇಲ್ಲಿ ಮಾಧ್ಯಮವು ಉದ್ಯಮವಾಗಿ ಎಥಿಕ್ಸ್ ಎನ್ನುವುದು ಗಾಳಿಗೆ ತೂರಿ ಹೋಯಿತು. 
     ಈ ಮೇಲಿನ ಉದಾಹರಣೆ ಹೇಳಲು ಕಾರಣವಿಷ್ಟೇ ಇವತ್ತು ದೇಶದಲ್ಲಿ ಪತ್ರಿಕಾ ಮಾಧ್ಯಮ ಎನ್ನುವುದು ಉದ್ಯಮದ ರೂಪವನ್ನು ತಾಳಿದೆ. ದೇಶದ ಸ್ವಾತಂತ್ರ್ಯ ಚಳವಳಿಯ ಕಾಲಘಟ್ಟದಲ್ಲಿ ಹೋರಾಟಕ್ಕೆ ಲೇಖನಗಳ ಮೂಲಕವೇ ಸಕಾರಾತ್ಮಕವಾಗಿ ಸ್ಪಂದಿಸಿದ ಪತ್ರಿಕಾ ಮಾಧ್ಯಮ ನಂತರದ ದಿನಗಳಲ್ಲಿ ಉದ್ಯಮಪತಿಗಳ ಮತ್ತು  ರಾಜಕಾರಣಿಗಳ ಸ್ವಹಿತಾಸಕ್ತಿಗೆ ಬಲಿಯಾಯಿತು. ಅಕ್ಷರಗಳ ಪ್ರಾಮುಖ್ಯತೆಯ ಅರಿವಿಲ್ಲದ ರಾಜಕಾರಣಿಗಳು ಮತ್ತು ಉದ್ಯಮಪತಿಗಳು ಇವತ್ತು ತಮ್ಮ ರಕ್ಷಣೆಗಾಗಿ ಪತ್ರಿಕಾ ಮಾಧ್ಯಮವನ್ನು ಬೆಂಗಾವಲು ಪಡೆಯಂತೆ ಉಪಯೋಗಿಸುತ್ತಿರುವರು. ಪತ್ರಿಕಾ ಮಾಧ್ಯಮವರು ಕೂಡ ಆಸ್ಥಾನದ ಹೊಗಳು ಭಟ್ಟರಾಗಿ ರಾಜಕಾರಣಿಗಳನ್ನು ಮತ್ತು ಉಳ್ಳವರನ್ನು ಓಲೈಸುತ್ತ ತಮ್ಮ ತಮ್ಮ ಬದುಕನ್ನು ಹಸನಾಗಿಸಿಕೊಳ್ಳುತ್ತಿರುವರು. ಆಧುನಿಕ ತಂತ್ರಜ್ಞಾನದ ಈ ದಿನಗಳಲ್ಲಿ ಪತ್ರಿಕಾ ಮಾಧ್ಯಮ ತಂತ್ರಜ್ಞಾನದ ಛದ್ಮವೇಷದಲ್ಲಿ ಇಡೀ ಮಾಧ್ಯಮವನ್ನು ಉದ್ಯಮದ ಸ್ವರೂಪಕ್ಕೆ ಕೊಂಡೊಯ್ದಿದೆ. ಹಣವಿರುವವರು ಬಂಡವಾಳ ಹೂಡಲು ಪತ್ರಿಕಾ ಮಾಧ್ಯಮಕ್ಕೆ ಕಾಲಿಡುತ್ತಿರುವುದರಿಂದ ಇಲ್ಲಿ ಲಾಭ-ನಷ್ಟಗಳ ಸಂಗತಿ ಮೇಲುಗೈ ಸಾಧಿಸುತ್ತಿದೆ. ಪತ್ರಿಕಾ ಧರ್ಮ ಮತ್ತು ಪತ್ರಿಕಾ ಸ್ವಾತಂತ್ರ್ಯ ತೆರೆಮರೆಗೆ ಸರಿದಿವೆ. ಇಂಥದ್ದೊಂದು ವಿಪ್ಲವದ ನಡುವೆಯೂ ಪಿ.ಸಾಯಿನಾಥ ಅವರಂಥ ಪ್ರಾಮಾಣಿಕ ಮತ್ತು ಸಾಮಾಜಿಕ ಕಳಕಳಿಯುಳ್ಳ ಪತ್ರಕರ್ತರು ಪತ್ರಿಕಾ ಧರ್ಮವನ್ನು ಮತ್ತೆ ಮರು ಸ್ಥಾಪಿಸಲು ಪ್ರಯತ್ನಿಸುತ್ತಿರುವುರಾದರೂ ಅಂಥವರ ಸಂಖ್ಯೆ ಆಶಾದಾಯಕವಾಗೇನೂ ಇಲ್ಲ ಎನ್ನುವುದು ಆತಂಕದ ಸಂಗತಿ.

ಸಿನಿಮೋದ್ಯಮ


     ಆ ಕಾಲವೊಂದಿತ್ತು. ಆಗ ಸಿನಿಮಾ ಮಾಧ್ಯಮವಾಗಿತ್ತು ಮತ್ತು ಸಮಾಜದ ಜ್ವಲಂತ ಸಮಸ್ಯೆಗಳು ಸಿನಿಮಾ ಪರದೆಯ ಮೇಲೆ ಪ್ರತಿಫಲಿಸುತ್ತಿದ್ದವು. ಸಿನಿಮಾದ ಮೂಲಕವೇ ಸಮಾಜದಲ್ಲಿ ಬಹುದೊಡ್ಡ ಪರಿವರ್ತನೆಗಳಾದ ಅನೇಕ ಉದಾಹರಣೆಗಳಿವೆ. ಬಾಲ್ಯವಿವಾಹ ಮತ್ತು ಸತಿಸಗಮನ ಪದ್ಧತಿಯ ವಿರುದ್ಧದ ಹೋರಾಟ, ಮಧ್ಯಪಾನ ವಿರೋಧಿ ಚಳವಳಿ, ಸಾಕ್ಷರತೆಯ ಮಹತ್ವ, ವರದಕ್ಷಿಣೆಯ ಸಮಸ್ಯೆ, ಮಹಿಳಾ ಸಮಸ್ಯೆಗಳು, ರೈತರ ಬದುಕಿನ ಸಮಸ್ಯೆಗಳು ಹೀಗೆ ಸಿನಿಮಾ ಮಾಧ್ಯಮ ಸಮಾಜದ ಇಂಥ ಹಲವಾರು ಸಮಸ್ಯೆಗಳಿಗೆ ಧ್ವನಿಯಾಗಿತ್ತು. ಸಮಾಜ ಕೂಡ ಅಂಥ ಸಿನಿಮಾಗಳನ್ನು ಸ್ವೀಕರಿಸಿ ಬದಲಾವಣೆಗೆ ತನ್ನನ್ನು ತಾನು ತೆರೆದುಕೊಳ್ಳುತ್ತಿತ್ತು. ರಾಜಕುಮಾರರಂಥ ಕಲಾವಿದ ನಾವು ಬದುಕುತ್ತಿರುವ ಇಡೀ ಸಮಾಜದ ಪ್ರತಿನಿಧಿ ಎನ್ನುವಂತೆ ಆಗೆಲ್ಲ ಸಿನಿಮಾಗಳನ್ನು ವೀಕ್ಷಿಸಿದಾಗ ಭಾಸವಾಗುತ್ತಿತ್ತು. ಕಮರ್ಷಿಯಲ್ ಸಿನಿಮಾಗಳ ಉದ್ದೇಶ ಹಣ ಗಳಿಕೆಯೇ  ಆಗಿದ್ದರೂ ಆ ಸಿನಿಮಾಗಳಲ್ಲಿ ಸಮಾಜಕ್ಕೆ ಒಂದು ಸಂದೇಶವಿರುತ್ತಿತ್ತು. ಕಮರ್ಷಿಯಲ್ ಸಿನಿಮಾಗಳ ಮೂಲಕ ಹೇಳಲು ಸಾಧ್ಯವಾಗದೆ ಇದ್ದದ್ದನ್ನು ಕಲಾತ್ಮಕ ಸಿನಿಮಾಗಳು ಅಭಿವ್ಯಕ್ತಿಸುತ್ತಿದ್ದವು. ಕಾಡು, ಬರ, ಫಣಿಯಮ್ಮ ಇತ್ಯಾದಿ ಕಲಾತ್ಮಕ ಸಿನಿಮಾಗಳು ಸಮಾಜದಲ್ಲಿನ ಜ್ವಲಂತ ಸಮಸ್ಯೆಗಳನ್ನು ಸಿನಿಮಾ ಪರದೆಯ ಮೂಲಕ ಜನರನ್ನು ತಲುಪಿಸುವಲ್ಲಿ ಯಶಸ್ವಿಯಾದವು. ಮನೋರಂಜನೆ ಮತ್ತು ನಾಯಕ ಪ್ರಧಾನ ಸಿನಿಮಾಗಳ ಮಧ್ಯೆಯೂ ಆಗ ಸಿನಿಮಾ ಮಾಧ್ಯಮ ತನ್ನ ಮೂಲ ಉದ್ದೇಶಕ್ಕೆ ಬದ್ಧವಾಗಿತ್ತು. 
       ಸಿನಿಮಾ ಮಾಧ್ಯಮ ಉದ್ಯಮವಾಗಿ ರೂಪಾಂತರ ಹೊಂದಲು ಕಾರಣವೇನು ಎನ್ನುವ ಪ್ರಶ್ನೆ ಎದುರಾದಾಗ ನಾವು ಮತ್ತೆ ಮುಖ ಮಾಡುವುದು ಜಾಗತೀಕರಣದತ್ತಲೆ. ಜಾಗತೀಕರಣದ ಕಾರಣ ಇಲ್ಲಿನ ಪ್ರೇಕ್ಷಕನಿಗೆ ವಿದೇಶಿ ಸಿನಿಮಾಗಳನ್ನು ನೋಡುವ ಹೇರಳ ಅವಕಾಶ ಮುಕ್ತವಾಗಿ ದೊರೆಯಲಾರಂಭಿಸಿತು. ಆಗೆಲ್ಲ ಅವನ ಮನಸ್ಸು ಇಲ್ಲಿನ ಸಿನಿಮಾಗಳನ್ನು ಬೇರೆ ರಾಷ್ಟ್ರಗಳ ಸಿನಿಮಾಗಳೊಂದಿಗೆ ತುಲನಾತ್ಮಕವಾಗಿ ನೋಡಲು ಆರಂಭಿಸಿತು. ಪ್ರೇಕ್ಷಕರಲ್ಲಾದ ಬದಲಾವಣೆ ಮತ್ತು ಅವರಲ್ಲಿ ಒಡಮೂಡಿದ ಹೊಸ ಅಭಿರುಚಿಯನ್ನು ಗುರುತಿಸಿದ ಕನ್ನಡ ಸಿನಿಮಾ ಮಾಧ್ಯಮದವರು ತಾವು ಕೂಡ ಹೊಸದೊಂದು ಬದಲಾವಣೆಗೆ ತೆರೆದುಕೊಳ್ಳತೊಡಗಿದರು. ಜೊತೆಗೆ ಅದೇ ಆಗ ಕಾಲಿಟ್ಟ ತಂತ್ರಜ್ಞಾನದ ಬಿಸಿ ಸಿನಿಮಾ ಮಾಧ್ಯಮಕ್ಕೂ ತಟ್ಟಿತು. ಅಷ್ಟೊತ್ತಿಗಾಗಲೇ ಇಂಗ್ಲಿಷ್ ಭಾಷೆಯಲ್ಲಿ ವಿಜ್ಞಾನದ ಅನ್ವೇಷಣೆಯಾದ ಗ್ರಾಫಿಕ್ ತಂತ್ರಜ್ಞಾನವನ್ನು ಅತ್ಯಂತ ಸಶಕ್ತವಾಗಿ ದುಡಿಸಿಕೊಂಡು ನಿರ್ಮಾಣವಾದ ಹಲವಾರು ಸಿನಿಮಾಗಳು ತೆರೆಗೆ ಬಂದು ಪ್ರೇಕ್ಷಕರನ್ನು ಸಮ್ಮೋಹಿನಿಯಂತೆ ಆಕರ್ಷಿಸುವಲ್ಲಿ ಯಶಸ್ವಿಯಾಗಿದ್ದವು. ಪರಿಣಾಮವಾಗಿ ಕನ್ನಡ ಸಿನಿಮಾ ಮಾಧ್ಯಮದೆದುರು ಜಾಗತಿಕ ಮಟ್ಟದ ಪ್ರೇಕ್ಷಕರಿಗೆ ಒಪ್ಪಿಗೆಯಾಗುವ ಸಿನಿಮಾಗಳನ್ನು ನಿರ್ಮಿಸುವ ಸವಾಲು ಎದುರಾಯಿತು. ಒಟ್ಟಾರೆ ದೇಶ ಭಾಷೆಗಳ ಗಡಿಯನ್ನು ಮೀರಿ ಅಸಂಖ್ಯಾತ ಪ್ರೇಕ್ಷಕರಿಗೆ ತಮ್ಮ ಸಿನಿಮಾಗಳನ್ನು ತೋರಿಸಬೇಕೆನ್ನುವ ಇಲ್ಲಿನ ನಿರ್ದೇಶಕರು ಮತ್ತು ನಿರ್ಮಾಪಕರ ಹಂಬಲದಿಂದಾಗಿ ಕನ್ನಡ ಸಿನಿಮಾ ಮಾಧ್ಯಮದ ಮಾರುಕಟ್ಟೆ ಅಚಿತರರಾಷ್ಟ್ರೀಯ ಮಟ್ಟಕ್ಕೆ ವಿಸ್ತರಿಸಿತು. ಇಲ್ಲಿ ಸವಾಲು ಸ್ವೀಕರಿಸಿ ಗೆಲುವು ಸಾಧಿಸಿದವರು ಉಳಿದುಕೊಂಡರು ಮತ್ತು ಹೊಸ ಸವಾಲಿಗೆ ಎದೆಗುಂದಿದವರು ಸಿನಿಮಾ ಮಾಧ್ಯಮದಿಂದ ದೂರಸರಿದರು. ಹೀಗೆ ದೂರ ಸರಿದವರಲ್ಲಿ ಸಿನಿಮಾ ಕುರಿತು ಅಪಾರ ಪ್ರೀತಿ ಮತ್ತು ಪ್ರತಿಭೆ ಹೊಂದಿದವರ ಸಂಖ್ಯೆಯೇ  ಬಹಳಷ್ಟು ಎನ್ನುವುದು ಗಮನಿಸಬೇಕಾದ ವಿಷಯ. 
     ಈಗ ಸಿನಿಮಾ ಮಾಧ್ಯಮದಲ್ಲಿ ಅದೇನಿದ್ದರೂ ಹೊಸಬರ ಭರಾಟೆ0iÉು. ಆಧುನಿಕ ತಂತ್ರಜ್ಞಾನದ ಈ ಯುಗದಲ್ಲಿ ಹುಟ್ಟಿದ ಈ ನವ ನಾಗರಿಕರಿಗೆ ಸಿನಿಮಾ ಅದೇನಿದ್ದರೂ ಉದ್ಯಮವೇ ವಿನ: ಮಾಧ್ಯಮವಲ್ಲ. ಎಲ್ಲವೂ ಲಾಭ ಮತ್ತು ನಷ್ಟದ ಲೆಕ್ಕಾಚಾರದಲ್ಲೇ ತೂಗಿ ನೋಡುವ ಮನೋಭಾವ. ಪರಿಣಾಮವಾಗಿ ಇಲ್ಲಿ ಪ್ರೇಕ್ಷಕರನ್ನು ಸಮ್ಮೋಹಿನಿಯಂತೆ ಹಿಡಿದಿಟ್ಟು ಕಾಸು ಮಾಡಿಕೊಳ್ಳುವ ಲೆಕ್ಕಾಚಾರ ಈ ಸಿನಿಮಾ ಜನಗಳದ್ದು. ಆದ್ದರಿಂದ ಸಿನಿಮಾ ಎನ್ನುವುದು ವಾಸ್ತವಿಕತೆಗೆ ಹತ್ತಿರವಾಗಿರಬೇಕು ಎನ್ನುವುದಾಗಲಿ ಅಥವಾ ಸಿನಿಮಾವನ್ನು ಹೀಗೆ ತೆಗೆಯಬೇಕೆನ್ನುವ ಆ ಒಂದುಕಾಲದ ಫಾರ್ಮುಲಾ ಆಗಲಿ ಈಗಿಲ್ಲ. ಏನಿದ್ದರೂ ಮನೋರಂಜನೆಯೇ  ಪ್ರಧಾನ ಮತ್ತು ಗ್ರಾಫಿಕ್ ತಂತ್ರಜ್ಞಾನವೇ ಮೂಲ ಬಂಡವಾಳ. 

ಪುಸ್ತಕೋದ್ಯಮ  


     ಪುಸ್ತಕ ಪ್ರಕಟಣೆ ಕೂಡ ಇವತ್ತು ಬಂಡವಾಳ ಹೂಡಿ ಲಾಭ ಗಳಿಸುವ ಉದ್ದಿಮೆಯಾಗಿ ಪರಿವರ್ತಿತಗೊಂಡಿದೆ. ಪುಸ್ತಕ ಎನ್ನುವುದು ಕೂಡ ಬರಹಗಾರ ತನ್ನ ಅಭಿವ್ಯಕ್ತಿಗಾಗಿ ಆಯ್ಕೆ  ಮಾಡಿಕೊಳ್ಳುವ ಮಾಧ್ಯಮ. ಆಗೆಲ್ಲ ಪುಸ್ತಕ ಪ್ರಕಟಣೆ ಎನ್ನುವುದು ಈಗಿನಷ್ಟು ಸುಲಭವಾಗಿರಲಿಲ್ಲ. ಲೇಖಕರಂತೂ ಸ್ವತ: ಪ್ರಕಾಶಕರಾಗಿ ಪುಸ್ತಕಗಳನ್ನು ಪ್ರಕಟಿಸಲು ಆಗ ಮುಂದಾಗುತ್ತಿರಲಿಲ್ಲ. ಪುಸ್ತಕಗಳ ಪ್ರಕಟಣೆಗಾಗಿಯೇ  ಪ್ರಕಾಶನ ಸಂಸ್ಥೆಗಳಿದ್ದವು. ಜಿ.ಬಿ.ಜೋಷಿ ಅಂಥವರು ಪುಸ್ತಕಗಳ ಪ್ರಕಟಣೆಯನ್ನು ಒಂದು ತಪಸ್ಸಿನಂತೆ ಪಾಲಿಸಿಕೊಂಡು ಬಂದರು. ಪುಸ್ತಕಗಳ ಪ್ರಕಟಣೆ ಎನ್ನುವುದು ಆರ್ಥಿಕ ಹೊರೆಯಾಗಿದ್ದ ಆ ದಿನಗಳಲ್ಲಿ ಮನೋಹರ ಗ್ರಂಥಮಾಲೆಯವರು ಓದುಗರಿಂದ ಚಂದಾ ಹಣವನ್ನು ಪಡೆದು ಪುಸ್ತಕಗಳನ್ನು ಪ್ರಕಟಿಸುತ್ತಿದ್ದರು. ಮನೋಹರ ಗ್ರಂಥಮಾಲೆಯ ಪ್ರಕಾಶಕರಾಗಿದ್ದ ಜಿ.ಬಿ.ಜೋಷಿ ಅವರು ಪ್ರಕಟಿತ ಪುಸ್ತಕಗಳ ಗಂಟನ್ನು ತಲೆಯ ಮೇಲೆ ಹೊತ್ತೊಯ್ದು ಮಾರಾಟ ಮಾಡುತ್ತಿದ್ದರು. ಪುಸ್ತಕ ಓದುವವರ ಸಂಖ್ಯೆ ಅಪಾರ ಪ್ರಮಾಣದಲ್ಲಿದ್ದ ದಿನಗಳಲ್ಲೂ ಪುಸ್ತಕಗಳ ಪ್ರಕಟಣೆ ಎನ್ನುವುದು ಪ್ರಕಾಶಕರಿಗೆ ಹೊರೆಯಾಗುತ್ತಿತ್ತು. ಅದೆಷ್ಟೋ ಪ್ರತಿಭಾನ್ವಿತ ಲೇಖಕರು ತಮ್ಮ ಕೃತಿಗಳು ಬೆಳಕು ಕಾಣದ ಕಾರಣ ತೆರೆಮರೆಗೆ ಸರಿದು ಹೋದರು. 
       ಪುಸ್ತಕ ಪ್ರಕಾಶಕರ ಸಮಸ್ಯೆಯನ್ನು ಅರಿತು ಸರ್ಕಾರ ಸಾರ್ವಜನಿಕ ಗ್ರಂಥಾಲಯಗಳಿಗೆ ಪುಸ್ತಕಗಳನ್ನು ಖರೀದಿಸುವ ಕಾಯ್ದೆ  ತಂದ ನಂತರ ಪುಸ್ತಕ ಮಾಧ್ಯಮದಲ್ಲಿ ಸಾಕಷ್ಟು ಬದಲಾವಣೆಗಳು ಕಂಡುಬಂದವು. ಈಗ ಪುಸ್ತಕ ಪ್ರಕಟಣೆ ಎನ್ನುವುದು ಪ್ರಕಾಶಕರಿಗೆ ಲಾಭ ತರುವ ಉದ್ದಿಮೆಯಾಗಿ ಬೆಳೆದು ನಿಂತಿದೆ. ಪರಿಣಾಮವಾಗಿ ಅಸಂಖ್ಯಾತ ಪ್ರಕಾಶನ ಸಂಸ್ಥೆಗಳು ಹುಟ್ಟಿಕೊಂಡಿವೆ. ಲಾಭದ ಆಸೆಯಿಂದ ಲೇಖಕರೇ ಪ್ರಕಾಶಕರಾಗಿ ಪುಸ್ತಕಗಳನ್ನು ಪ್ರಕಟಿಸುತ್ತಿರುವರು. ಕೆಲವರಂತೂ ತಮ್ಮ ಪಿ.ಹೆಚ್.ಡಿ ಪ್ರಬಂಧಗಳನ್ನೇ ಪುಸ್ತಕ ರೂಪದಲ್ಲಿ ಪ್ರಕಟಿಸಿ ಸಾರ್ವಜನಿಕ ಗ್ರಂಥಾಲಯಗಳಿಗೆ ಮಾರಾಟ ಮಾಡುತ್ತಿರುವರು. ಕೆಲವು ವರ್ಷಗಳ ಹಿಂದೆ ರಾಜ್ಯದ ಮಂತ್ರಿಯೋರ್ವರು ತಮ್ಮ ಸಂಬಂಧಿಕರ ಪ್ರಕಾಶನ ಸಂಸ್ಥೆಯಿಂದಲೇ ಪುಸ್ತಕಗಳನ್ನು ಖರೀದಿಸುವಂತೆ ಒತ್ತಡ ತಂದು ಕೋಟ್ಯಾಂತರ ರೂಪಾಯಿಗಳ ವಹಿವಾಟು ನಡೆಸಿದರು. ಹೀಗೆ ಲಾಭದ ಆಸೆಯಿಂದ ಪುಸ್ತಕಗಳನ್ನು ಪ್ರಕಟಿಸುವುದರಿಂದ ಸಾಹಿತ್ಯದ ಗುಣಮಟ್ಟ ಕುಸಿಯುತ್ತದೆ ಎನ್ನುವ ಆತಂಕ ಹಲವರದು. ಬರವಣಿಗೆ ಎನ್ನುವುದು ಅದೊಂದು ಸೃಜನಶೀಲ ಸೃಷ್ಟಿ. ಸಮಾಜದ ಹಿತವೇ ಬರವಣಿಗೆಯ ಉದ್ದೇಶ. ಆದರೆ ಲಾಭದ ಆಸೆಯಿಂದ ಈಗ ಕನ್ನಡ ಸಾಹಿತ್ಯದಲ್ಲಿ ಪ್ರಕಟವಾಗುತ್ತಿರುವ ಪುಸ್ತಕಗಳನ್ನು ಗಮನಿಸಿದಾಗ ಹೆಚ್ಚಿನ ಪುಸ್ತಕಗಳು ಕಾಟಾಚಾರಕ್ಕೆಂಬಂತೆ ಪ್ರಕಟವಾಗುತ್ತಿವೆ. ಧನದಾಹ ಮತ್ತು ವ್ಯಾಪಾರಿ ಮನೋಭಾವದ ಲೇಖಕರು ಹಾಗೂ ಪ್ರಕಾಶಕರಿಂದಾಗಿ ಸಾಹಿತ್ಯ ಇಲ್ಲಿ ಮಾರಾಟವಾಗುತ್ತಿದೆ. 

ಕೊನೆಯ ಮಾತು


     ಹಿರಿಯ ಬರಹಗಾರರಾದ ಬರಗೂರು ರಾಮಚಂದ್ರಪ್ಪನವರು ಮಾದ್ಯಮ ಮತ್ತು ಉದ್ಯಮದ ನಡುವಣ ವ್ಯತ್ಯಾಸವನ್ನು ಬಹಳ ಅರ್ಥಪೂರ್ಣವಾಗಿ ಗುರುತಿಸುತ್ತಾರೆ. ಅವರ ದೃಷ್ಟಿಯಲ್ಲಿ ಮಾಧ್ಯಮದಲ್ಲಿ ಸಂವೇದನೆಯೆ   ಮುಖ್ಯವಾಗಿದ್ದರೆ ಉದ್ಯಮದಲ್ಲಿ ಲಾಭದ ಹಿತಾಸಕ್ತಿ ಮುಖ್ಯವಾಗಿರುತ್ತದೆ. ಶ್ರೀಯುತರ ಚಿಂತನೆ ಸತ್ಯಕ್ಕೆ ಹತ್ತಿರವಾಗಿದೆ. ಮಾಧ್ಯಮ ಸಂವೇದನಾಶೀಲವಾಗಿದ್ದಾಗ ಮಾತ್ರ ಬದುಕುತ್ತಿರುವ ವ್ಯವಸ್ಥೆ ಕುರಿತು ಅದಕ್ಕೆ ಸಹಜವಾದ ಕಾಳಜಿ ಇರಲು ಸಾಧ್ಯ. ಉದ್ಯಮವಾದಾಗ ಬಂಡವಾಳ ಮತ್ತು ಲಾಭ-ನಷ್ಟಗಳೇ ಮುನ್ನೆಲೆಗೆ ಬಂದು ಸಮಾಜದ ಕುರಿತಾದ ಕಳಕಳಿ ಹಿನ್ನೆಲೆಗೆ ಸರಿಯುತ್ತದೆ. ಜಾಗತೀಕರಣದ ಈ ಯುಗದಲ್ಲಿ ಪುಸ್ತಕ, ಪತ್ರಿಕೆ, ಸಿನಿಮಾ ಮತ್ತು ಶಿಕ್ಷಣ ಮಾಧ್ಯಮಗಳು ಉದ್ಯಮಗಳಾಗಿ ಬದಲಾಗುತ್ತಿರುವುದು ತುಂಬ ಆತಂಕದ ಸಂಗತಿ. ಹೀಗೆ ಸಮಾಜದ ಪ್ರಮುಖ ಮಾಧ್ಯಮಗಳು ಉದ್ಯಮದ ರೂಪವನ್ನು ತಾಳುತ್ತಿರುವುದರಿಂದ ಇಲ್ಲಿ ಬದುಕುತ್ತಿರುವ ಮನುಷ್ಯರು ಕೂಡ ಸಂವೇದನೆಯನ್ನು ಕಳೆದುಕೊಂಡು ಕ್ರೂರರಾಗುತ್ತಿರುವರು. ನಾವುಗಳೆಲ್ಲ ತುಂಬ ಆತಂಕ ಪಡುವ ವಿಷಯವಿದು.

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 


Monday, February 4, 2019

ಹೆಜ್ಜೆ ಮೂಡಿದ ಹಾದಿ: ಪುಸ್ತಕ ಬಿಡುಗಡೆ






ಫೆಬ್ರುವರಿ ೩, ೨೦೧೯ ರಂದು ಕಲಬುರಗಿಯಲ್ಲಿ ನನ್ನ 'ಹೆಜ್ಜೆ ಮೂಡಿದ ಹಾದಿ' ಪುಸ್ತಕ ಬಿಡುಗಡೆಯಾಯಿತು. ಕನ್ನಡದ ಮಹತ್ವದ ಲೇಖಕರಾದ ಡಾ.ಬರಗೂರು ರಾಮಚಂದ್ರಪ್ಪ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. 

ಬರವಣಿಗೆ ಎನ್ನುವುದು ನನ್ನನ್ನು ನಾನು ಕಂಡುಕೊಳ್ಳುವ ಪ್ರಯತ್ನ. ಈ ಸಾಹಿತ್ಯ ಕೃತಿಗಳ ಓದಿನಿಂದ ನನ್ನ ಭಾವದಲ್ಲಿ ಹರಳುಗಟ್ಟಿ ನಿಲ್ಲುವ ವಿಚಾರಗಳಿಗೆ ಅಕ್ಷರರೂಪ ನೀಡಬೇಕೆನ್ನುವ ನನ್ನೊಳಿಗಿನ ತುಡಿತ ಇದುವರೆಗೆ ಕೆಲವು ಪುಸ್ತಕಗಳನ್ನು ನಾನು ಬರೆಯಲು ಕಾರಣವಾಗಿದೆ. ಒಟ್ಟಾರೆ ಈ ಓದು ಮತ್ತು ಬರವಣಿಗೆಯಂಥ ಸೃಜನಶೀಲ ಚಟುವಟಿಕೆ ನನ್ನನ್ನು ಹೆಚ್ಚು ಹೆಚ್ಚು ಕ್ರಿಯಾಶೀಲಗೊಳಿಸುವುದರಿಂದ ನಾನು ಸಾಹಿತ್ಯ ಕೃತಿಗಳ ಓದನ್ನು ಹೆಚ್ಚು ಪ್ರೀತಿಸುತ್ತೇನೆ. ಜೊತೆಗೆ ಈ ಬರವಣಿಗೆ ಎನ್ನುವುದು ಬದುಕುತ್ತಿರುವ ಈ ಸಮಾಜದಲ್ಲಿ ನಾನು ಒಂಟಿಯಲ್ಲ ಎನ್ನುವ ಭಾವ ಹುಟ್ಟಿಸಿ ಬರೆಯುವ ಕ್ರಿಯೆಯಲ್ಲಿ ನಾನು ಮತ್ತೆ ಮತ್ತೆ ತೊಡಗಿಸಿಕೊಳ್ಳುವಂತೆ ಆ ಭಾವವೆ ಪ್ರೇರೇಪಿಸುತ್ತದೆ. ಒಂದರ್ಥದಲ್ಲಿ ಅಕ್ಷರಗಳ ಸಾಂಗತ್ಯದಲ್ಲಿ ನೆಮ್ಮದಿಯನ್ನು ಕಂಡುಕೊಳ್ಳುವ ಮನೋಭಾವ ನನ್ನದು. 
ಬರವಣಿಗೆ ವಿಷಯವಾಗಿ ನನ್ನನ್ನು ಕಾಡುವ ಸಂಗತಿಗಳು ಅನೇಕ. ಬರವಣಿಗೆಯು ಲೇಖಕನ ಸ್ವಂತದ ಹಿತಾಸಕ್ತಿಯನ್ನು ಕಾಪಾಡುವ ಕ್ರಿಯೆಯಾಗದೆ ಅದು ಸಮಾಜಮುಖಿಯಾಗಿರಬೇಕು ಎನ್ನುವುದರಲ್ಲಿ ನನಗೆ ಅಚಲವಾದ ನಂಬಿಕೆ. ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಲೇಖಕ ಮಾರಿಯೋ ವರ್ಗಾಸ್ ಯೋಸಾ ಸಾಹಿತ್ಯದ ಮಹತ್ವವನ್ನು ಹೀಗೆ ಹೇಳುತ್ತಾನೆ “ಬಹುಕಾಲ ಬಾಳುವಂಥ ಯಾವುದನ್ನು ರಾಜಕಾರಣ ಮಾಡಲಾಗುವುದಿಲ್ಲವೋ ಅದನ್ನು ಸಾಹಿತ್ಯ ಮಾಡಬೇಕು. ಲೇಖಕ ಕೇವಲ ವರ್ತಮಾನಕ್ಕಾಗಿ ಮಾತ್ರ ಪುಸ್ತಕ ಬರೆಯುವುದಿಲ್ಲ. ಟೀಕಿಸುವ ಮೂಲಕವೋ ತಮ್ಮ ಆಲೋಚನೆಗಳನ್ನು ಬಳಸಿ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಮೂಲಕವೋ ಲೇಖಕರಾದವರು ಕಾರ್ಯಪ್ರವೃತ್ತರಾಗುವುದು ತುಂಬಾ ಮುಖ್ಯ. ಕೆಲವು ಸಂದರ್ಭಗಳಲ್ಲಿ ಸ್ವಾತಂತ್ರ್ಯಕ್ಕಾಗಿ ತ್ಯಾಗ ಮಾಡಬೇಕಾಗಿ ಬರುವಂಥ ಯಾವುದೇ ಅಭಿಪ್ರಾಯಕ್ಕೂ ಲೇಖಕ ಜಗ್ಗ ಕೂಡದು. ಒಂದು ಅಗತ್ಯದಂತೆ ಲೇಖಕರು ತಮ್ಮ ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳಬೇಕು”. ಯೋಸಾನ ಒಟ್ಟು ಹೇಳಿಕೆಯ ಅರ್ಥ ಬರಹಗಾರ ರಾಜಕೀಯ ಅಥವಾ ರಾಜಕಾರಣದೊಂದಿಗೆ ರಾಜೀ ಮಾಡಿಕೊಳ್ಳದೆ ಸಮಾಜವನ್ನು ಭ್ರಷ್ಟ ರಾಜಕಾರಣದಿಂದ ಕಾಯುವ ಕೆಲಸ ಮಾಡಬೇಕು. ಆತಂಕದ ಸಂಗತಿ ಎಂದರೆ ಇವತ್ತು ಬರವಣಿಗೆಯು ರಾಜಕಾರಣಿಗಳನ್ನು ಮತ್ತು ಉಳ್ಳವರನ್ನು ಓಲೈಸುವ  ಒಂದು ಸಾಂಸ್ಕೃತಿಕ ಚಟುವಟಿಕೆಯಾಗಿದೆ.

ಇನ್ನು ಈ ಕೃತಿಯ ವಿಷಯಕ್ಕೆ ಬಂದರೆ ಇಲ್ಲಿ 22 ಸಾಧಕರ ಬದುಕಿನ ಸಾಧನೆಯ ಚಿತ್ರಣವಿದೆ. ಹಾಗೆಂದು ಇದು ಜೀವನ ಚರಿತ್ರೆ ಗ್ರಂಥವಾಗಲಿ ಇಲ್ಲವೇ ಅಭಿನಂದನಾ ಗ್ರಂಥವಾಗಲಿ ಅಲ್ಲ. ಜೊತೆಗೆ ಇಲ್ಲಿ ದಾಖಲಿಸಿದ್ದಷ್ಟೆ ಅವರ ಸಾಧನೆ ಎಂದು ಸೀಮಿತಗೊಳಿಸುವುದೂ ತಪ್ಪು ನಿರ್ಧಾರವಾಗುತ್ತದೆ. ಆಯಾ ಸಂದರ್ಭಕ್ಕನುಗುಣವಾಗಿ ಈ ಕೃತಿಯಲ್ಲಿ ವ್ಯಕ್ತಿ ಚಿತ್ರಣ ರೂಪುಗೊಂಡಿದೆ.


-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 


Monday, January 14, 2019

ಸಂತೆಯಲ್ಲೊಂದು ಮನೆಯ ಮಾಡಿ (ಕಥೆ)

     


         ‘ಶುಡ್ ಐ ಗಿವ್ ಕ್ಲ್ಯಾರಿಫಿಕೇಷನ್ ಟು ದೀಜ್ ಪೀಪಲ್ ಮಿ.ರವಿ. ನಿಮಗೆ ಅನಿಸುತ್ತಾ’ ಪ್ರೊಫೆಸರ್ ರಾಘವ ಧ್ವನಿಯಲ್ಲಿ ಸಿಟ್ಟು, ಆಕ್ರೋಶ ನೋಡಿ ಒಂದು ಕ್ಷಣ ಅವರ ಪಾಡಿಗೆ ಅವರನ್ನು ಬಿಡುವುದು ಒಳಿತೆಂದು ಅನ್ನಿಸಿ ಏನೂ ಮಾತನಾಡದೆ ಸುಮ್ಮನೆ ಕುಳಿತೆ. ‘ಮಿ.ರವಿ ಇವರನ್ನೆಲ್ಲ ನೋಡ್ತಿದ್ರೆ ನನಗೆ ಎಂದೋ ಓದಿದ ಕಥೆಯೊಂದು ನೆನಪಿಗೆ ಬರ್ತಿದೆ. ಮೂರು ಜನ ಸ್ನೇಹಿತರು ಸಾಯಂಕಾಲ ತಿರುಗಾಡಲು ಊರ ಹೊರಗಿನ ಬೆಟ್ಟಕ್ಕೆ ಹೋಗ್ತಾರೆ. ಅಲ್ಲೊಬ್ಬ ಸುಮ್ನೆ ನಿಂತಿದ್ದಾನೆ. ಅವನನ್ನು ನೋಡಿ ಈ ಸ್ನೇಹಿತರು ಆತ ನಿಂತಿರುವುದೇಕೆಂದು ತಮ್ಮ ತಮ್ಮ ನಿರ್ಧಾರಕ್ಕೆ ಬರ್ತಾರೆ. ಒಬ್ಬ ಆ ಮನುಷ್ಯ ಕಳೆದುಹೋದ ತನ್ನ ಹಸು ಹುಡ್ಕೊದಕ್ಕೆ ಬಂದಿದ್ದಾನೆ ಅಂದರೆ ಇನ್ನೊಬ್ಬ ಇಲ್ಲ ಆತ ತನ್ನ ಪ್ರೇಯಸಿಗಾಗಿ ದಾರಿ ಕಾಯ್ತಿದ್ದಾನೆ ಅಂತಾನೆ. ಮೂರನೆಯವನು ಪ್ರಕೃತಿಯ ಸೌಂದರ್ಯ ನೋಡ್ತಿದ್ದಾನೆ ಎಂದು ಹೇಳ್ತಾನೆ. ಕೊನೆಗೆ ಮೂರೂ ಜನ ಅವನ ಹತ್ತಿರ ಹೋಗಿ ಆತನ ಬಗ್ಗೆ ತಾವು ತಾವು ನಿರ್ಧರಿಸಿದ್ದನ್ನ ಹೇಳ್ತಾರೆ. ಆಗ ಆ ಮನುಷ್ಯ ನಾನು ಇಲ್ಲಿ ಸುಮ್ನೆ ನಿಂತಿದ್ದೀನಿ ಅಂತಾನೆ. ನೋಡಿ ನಾವುಗಳೆಲ್ಲ ನಮ್ಮ ನಮ್ಮ ವಿವೇಚನೆಯಲ್ಲೇ ಯೋಚಿಸಿ ನಿರ್ಧಾರಕ್ಕೆ ಬರ್ತೀವಿ. ವಿಶ್ಲೇಷಣೆಯ ಶಕ್ತಿನೇ ಇಲ್ಲ.’ ಪ್ರೊಫೆಸರ್  ಧ್ವನಿಯಲ್ಲಿ ವ್ಯಗ್ರತೆಯಿತ್ತು. ರಾಘವ ಅವರಲ್ಲಿ ಕೋಪ ಎರುತ್ತಿದ್ದಂತೆ ಎದುರುಗಡೆ ಟೇಬಲ್ ಮೇಲಿಟ್ಟ ಕಪ್‍ನಲ್ಲಿದ್ದ ಚಹಾ ತಣ್ಣಗಾಗುತ್ತಿತ್ತು. ಮಾತನಾಡುವ ಲಹರಿಯಲ್ಲಿದ್ದ ಅವರು ಇನ್ನೂ ಚಹಾ ಕಪ್‍ನ್ನು ಕೈಗೆತ್ತಿಕೊಂಡಿಲ್ಲವಾದ್ದರಿಂದ ಅವರನ್ನು ಮಾತಿಗೆ ಬಿಟ್ಟು ನಾನು ಚಹಾ ಕುಡಿಯುವುದು ಸೌಜನ್ಯವಲ್ಲವೆಂದು ಕೈಕಟ್ಟಿ ಕುಳಿತು ರಾಘವ ಅವರ ಮಾತುಗಳನ್ನು ಆಲಿಸುತ್ತಿದ್ದೆ.

    ಇವತ್ತಿನ ರಾಘವ ಅವರ ಇಷ್ಟೆಲ್ಲ ವಿಶ್ಲೇಷಣೆಗೆ ಕಾರಣವಾದದ್ದು ನಾನು ಸ್ಟಾಪ್ ರೂಮಿನಲ್ಲಿ ಯಾರೂ ಇಲ್ಲದ ವೇಳೆ ಕೇಳಿದ ಒಂದೇ ಒಂದು ಪ್ರಶ್ನೆ. ಬಹಳ ದಿನಗಳಿಂದ ಮನಸ್ಸಿನಲ್ಲಿ ಕೊರೆಯುತ್ತಿದ್ದ ವಿಷಯವೊಂದು ತಡೆಹಿಡಿದಷ್ಟೂ ನನ್ನನ್ನು ವ್ಯಾಕುಲಗೊಳಿಸುತ್ತಿದ್ದುದ್ದರಿಂದ ಈ ದಿನ ಪ್ರೊಫೆಸರ್   ಬೇಕಾದರೆ ನನ್ನನ್ನು ಬೈಯಲಿ ಯಾವುದಕ್ಕೂ ಕೇಳಿಯೇ ಬಿಡಬೇಕೆಂದು ನಿರ್ಧರಿಸಿಕೊಂಡೇ ಮನೆ ಬಿಟ್ಟಿದ್ದೆ. ಬೆಳಗ್ಗೆ ಡಿಪಾರ್ಟಮೆಂಟ್‍ನಲ್ಲಿ ಇತರ ಸಹೊದ್ಯೋಗಿಗಳು ಕ್ಲಾಸಿಗೆ ಹೋಗಿದ್ದರಿಂದ ಪ್ರೊಫೆಸರ್   ರಾಘವ ಒಬ್ಬರೇ ತಮ್ಮ ಸೀಟಿನಲ್ಲಿ ಇಂಟರ್‍ನ್ಯಾಷನಲ್ ಜರ್ನಲ್‍ಗೆ ಕಳುಹಿಸಿಬೇಕಾದ ಲೇಖನದ ಮುದ್ರಿತ ಪ್ರತಿಯನ್ನು ತಿದ್ದುತ್ತ ಕುಳಿತಿದ್ದರು. ಅಷ್ಟರಲ್ಲಿ ಡಿಪಾರ್ಟಮೆಂಟ್ ಪ್ಯೂನ್ ರಂಗಪ್ಪ ಎರಡು ಕಪ್‍ಗಳಲ್ಲಿ ಚಹಾ ತಂದು ರಾಘವ ಅವರ ಟೇಬಲ್ ಮೇಲಿಟ್ಟು ಹೋದ. ಬೆಳಗ್ಗೆ ಕಾಲೇಜಿಗೆ ಬಂದ ತಕ್ಷಣ ಚಹಾ ಕುಡಿಯುವುದು ರಾಘವ ಅವರ ನಿತ್ಯದ ದಿನಚರಿಯಾಗಿತ್ತು. ಆ ಸಂದರ್ಭ ಬೇರೆ ಯಾರಾದರೂ ಸ್ಟಾಪ್ ರೂಮಿನಲ್ಲಿದ್ದರೆ ರಾಘವ ಅವರೊಂದಿಗೆ ಅಲ್ಲಿದ್ದವರಿಗೂ ಚಹಾ ಕುಡಿಯಲು ಆಹ್ವಾನವಿರುತ್ತಿತ್ತು. ಇವತ್ತು ನನಗೂ ಬೆಳಗ್ಗೆ ಕ್ಲಾಸ್ ಇಲ್ಲದಿದ್ದದ್ದು ಮತ್ತು ರಾಘವ ಅವರೊಂದಿಗೆ ಮಾತಿಗೆ ಇಳಿಯಬೇಕೆಂದು ನಿರ್ಧರಿಸುತ್ತಿರುವ ಹೊತ್ತಲ್ಲೇ ರಂಗಪ್ಪ ಚಹಾದ ಕಪ್‍ಗಳನ್ನು ತಂದು ಟೇಬಲ್ ಮೇಲಿಟ್ಟು ಹೋಗಿದ್ದು ಮಾತಿಗೊಂದು ಸೂಕ್ತ ಸನ್ನಿವೇಶವನ್ನು ಒದಗಿಸಿತ್ತು. ರಾಘವ ಅವರ ಟೇಬಲ್ ಎದುರಿನ ಖುರ್ಚಿಯಲ್ಲಿ ಕುಳಿತು ಅವರು ತಿದ್ದುತ್ತಿರುವ ಲೇಖನದಿಂದ ತಲೆ ಎತ್ತಿ ನೋಡುವುದನ್ನೇ ಕಾಯುತ್ತ ಮನಸ್ಸಿನಲ್ಲೇ ಕೇಳಬೇಕಾದ ಪ್ರಶ್ನೆಯನ್ನು ಉರು ಹೊಡೆಯುತ್ತಿದ್ದೆ. ರಾಘವ ಕೈಯಲ್ಲಿದ್ದ ಲೇಖನದ ಪ್ರತಿಯನ್ನು ಟೇಬಲ್ ಮೇಲಿಟ್ಟು ಲೋಟದಲ್ಲಿದ್ದ ನೀರನ್ನು ಕುಡಿದು ‘ಮಿ.ರವಿ ಚಹಾ ತೆಗೆದುಕೊಳ್ಳಿ ತಣ್ಣಗಾಗುತ್ತೆ’ ಎಂದು ಉಪಚರಿಸಿದರು. ‘ಸರ್ ಒಂದು ಮಾತು ಬಹಳ ದಿನಗಳಿಂದ ನಿಮಗೆ ಕೇಳಬೇಕು ಅಂತ. ಆದರೆ ಹೇಗೆ ಕೇಳೋದು ಗೊತ್ತಾಗ್ತಿಲ್ಲ’ ಕೇಳಬೇಕಾದ ವಿಷಯ ಸಂಕೋಚದಿಂದ ಹೊರಬರದೆ ಶಬ್ದಗಳಿಗಾಗಿ ತಡಕಾಡಿದೆ. ರಾಘವ ನನ್ನೊಮ್ಮೆ ಪ್ರಶ್ನಾರ್ಥಕವಾಗಿ ನೋಡಿ ಕೈಗೆತ್ತಿಕೊಂಡಿದ್ದ ಚಹಾದ ಕಪ್ಪನ್ನು ಮತ್ತೆ ಟೇಬಲ್ ಮೇಲಿಟ್ಟು ತಮ್ಮ ಎಂದಿನ ಗಂಭೀರ ಮುಖಮುದ್ರೆಯಿಂದ ‘ರವಿ ಕೇಳಲೇ ಬೇಕು ಅಂತ ನಿರ್ಧಾರ ಮಾಡಿದ್ದರೆ ಏನು ಅಂತ ಕೇಳಿ. ಸುಮ್ನೆ ಮನಸ್ಸಿನಲ್ಲಿಟ್ಟುಕೊಂಡು ಅದೇ ವಿಷಯ ಕುರಿತು ಚಿಂತಿಸ್ತಿದ್ದರೆ ಬೇರೆ ಯಾವ ಕೆಲಸದಲ್ಲೂ ತನ್ಮಯತೆ ಸಿಗೊಲ್ಲ’ ನನ್ನನ್ನು ಕ್ಷಣಕಾಲ ಯೋಚಿಸಲು ಬಿಟ್ಟು ಪ್ರೊಫೆಸರ್   ಕಣ್ಮುಚ್ಚಿ ಕುಳಿತರು. ‘ಅದೇ ಸರ್ ಕಾಲೇಜಿನಲ್ಲಿ ಎಲ್ಲರೂ ನಿಮ್ಮ ಮತ್ತು ಮನಸ್ವಿನಿ ಮೇಡಮ್ ಬಗ್ಗೆ ಏನೇನೋ ಮಾತಾಡ್ತಿದ್ದಾರೆ’ ಅಪ್ರಯತ್ನಪೂರ್ವಕವಾಗಿ ಮಾತು ನನ್ನಿಂದ ಹೊರಬಂತು. ಪ್ರೊಫೆಸರ್  ರಾಘವ ಅವರ ಮುಖ ಸಿಟ್ಟಿನಿಂದ ಕೆಂಪಾಗಿ ಉಸಿರಾಟದ ತೀವ್ರತೆಯಿಂದ ಮೂಗಿನ ಹೊಳ್ಳೆಗಳು ಅಗಲವಾಗಿ ತೆರೆದುಕೊಂಡು ಆ ಕ್ಷಣಕ್ಕೆ ಅವರ ತೀಕ್ಷ್ಣ ನೋಟವನ್ನು ಎದುರಿಸಲಾರದೆ ನಾನು ತಲೆತಗ್ಗಿಸಿದೆ. ‘ಓ.ಕೆ ರವಿ ನಮ್ಮಗಳ ಹಿಂದೆ ಮಾತಾಡ್ತಿರೊ ಸಂಗತಿಗಳು ನನ್ನ ಕಿವಿಗೂ ಮುಟ್ಟಿವೆ. ನಿಮ್ಮ ಪ್ರಶ್ನೆ ಸಹಜ ಕೂಡ ಹೌದು. ಶುಡ್ ಐ ಗಿವ್ ಕ್ಲ್ಯಾರಿಫಿಕೇಷನ್ ಟು ದೀಜ್ ಪೀಪಲ್ ಮಿ.ರವಿ. ನಿಮಗೆ ಅನಿಸುತ್ತಾ’ ರಾಘವ ಅವರ ಧ್ವನಿ ಸಹಜವಾಗಿತ್ತಾದರೂ ಅಲ್ಲಿ ಸಿಟ್ಟು ಆಕ್ರೋಶವಿತ್ತು. ರಾಘವ ತಮ್ಮ ಮಾತಿನ ಕೊನೆಯಲ್ಲಿ ‘ನಾಳೆ ಮನಸ್ವಿನಿ ಅವರ ಪುಸ್ತಕ ಬಿಡುಗಡೆ ಇದೆ. ತಮ್ಮ ತೋಟದ ಮನೆನಲ್ಲಿ ಕಾರ್ಯಕ್ರಮ ಇಟ್ಕೊಂಡು ನನ್ನನ್ನ ಮುಖ್ಯ ಅತಿಥಿಯಾಗಿ ಆಹ್ವಾನಿಸಿದ್ದಾರೆ. ಜೊತೆಗೆ ನೀವೂ ಬನ್ನಿ. ದಾರಿಯಲ್ಲಿ ಮಾತಾಡ್ಕೊಂಡು ಹೋಗೋಣ. ಬೇಕಿದ್ರೆ ನನ್ನ ಮತ್ತು ಮನಸ್ವಿನಿ ವಿಷಯ ಕೂಡ ನಮ್ಮ ಪಯಣದಲ್ಲಿ ಚರ್ಚೆಗೆ ಗ್ರಾಸವಾಗಬಹುದು’ ಎಂದು ನುಡಿದು ತಮಗೆ ಬಿ.ಎ ಫೈನಲ್ ಇಯರ್ ಕ್ಲಾಸಿದೆಯೆಂದು ಸ್ಟಾಪ್ ರೂಮಿನಿಂದ ಹೊರನಡೆದರು. ರಾಘವ ಅವರ ಮುಖದಲ್ಲಿ ತುಂಬಿನಿಂತಿದ್ದ ಅಶಾಂತಿಯನ್ನು ನೋಡಿ ಪ್ರಶ್ನೆ ಕೇಳಿ ತಪ್ಪು ಮಾಡಿದೆನೇನೋ ಎಂದೆನಿಸಿತು. ಟೇಬಲ್ ಮೇಲೆ ಕಪ್ಪುಗಳಲ್ಲಿದ್ದ ಚಹಾ ಆರಿ ತಣ್ಣಗಾಗಿ ಕೆನೆಗಟ್ಟಿತ್ತು. 

       ಭಾನುವಾರ ಸ್ವಲ್ಪ ತಡವಾಗಿ ಎದ್ದರಾಯ್ತೆಂದು ಇನ್ನು ಮುಸುಕು ಹಾಕಿ ಮಲಗಿದ್ದ ನನಗೆ ರಾಘವ ಅವರ ಫೋನ್   ಕರೆಯಿಂದ ಎಚ್ಚರವಾಯಿತು. ಅದಾಗಲೇ ದೇವರ ಮನೆಯಲ್ಲಿ ಹೆಂಡತಿಯ ವಾತಾಪಿ ಗಣಪತಿ ಶ್ಲೋಕ ಕೇಳಿಸಿ ಗಡಿಯಾರ ನೋಡಿದಾಗ ಗಂಟೆ ಏಳು ತೋರಿಸುತ್ತಿತ್ತು. ಕರೆ ಸ್ವೀಕರಿಸಿದವನಿಗೆ ಆ ಕಡೆಯಿಂದ ‘ಏನು ಮಹಾನುಭಾವರು ನಿದ್ದೆ ಮಾಡುತ್ತ ರಜಾದಿನವನ್ನು ಸದುಪಯೋಗಪಡಿಸಿಕೊಳ್ತಿರುವಂತಿದೆ. ನಿನ್ನೆ ನಾನು ಹೇಳಿದ ವಿಷಯ ನೆನಪಿದೆಯೋ ಹೇಗೆ. ಇನ್ನು ಒಂದು ಗಂಟೆಯಲ್ಲಿ ನನ್ನ ಕಾರು ನಿಮ್ಮ ಮನೆ ಮುಂದಿರುತ್ತೆ. ಗೆಟ್ ಅಪ್ ಬೇಗ ರೆಡಿಯಾಗಿ’ ರಾಘವ ಅವರ ಧ್ವನಿ ಕೇಳಿ ಬಾತ್ ರೂಮಿಗೆ ಓಡಿದೆ. ಸ್ನಾನ ಮಾಡಿ ಬಾತ್ ರೂಮಿನಿಂದ ಹೊರಬರುವಷ್ಟರಲ್ಲಿ ಹೊರಗೆ ಕಾರಿನ ಹಾರ್ನ್ ಕೇಳಿಸಿ ಹೆಂಡತಿಗೆ ಅವರನ್ನು ಸ್ವಾಗತಿಸಲು ಹೇಳಿ ಅವಸರವಸರವಾಗಿ ಬಟ್ಟೆ ಧರಿಸಿ ಹೊರಬಂದಾಗ ರಾಘವ ಹಾಲ್‍ನಲ್ಲಿ ಕುಳಿತು ಕಾಫಿ ಕುಡಿಯುತ್ತಿದ್ದರು. ‘ಏನಯ್ಯಾ ಸ್ವಲ್ಪಾನೂ ಸಿರಿಯಸ್ನೆಸ್ ಇಲ್ಲ ನೋಡು. ನಿನ್ನೆ ಹೇಳಿದ ವಿಷಯ ಬೆಳಗಾಗುವಷ್ಟರಲ್ಲಿ ಮರೆತು ಬಿಟ್ರೆ ಇನ್ನು ಪಾಠ ಹೇಗೆ ಮಾಡ್ತೀರಿ’ ರಾಘವ ಆಗಾಗ ಇಂಥ ಮಾತುಗಳಿಂದ ನನ್ನನ್ನು ಛೇಡಿಸುತ್ತಿದ್ದುದ್ದರಿಂದ ನಾನಾಗಲಿ ನನ್ನ ಹೆಂಡತಿಯಾಗಲಿ ಅವರ ಮಾತನ್ನು ಸಿರಿಯಸ್ಸಾಗಿ ತೆಗೆದುಕೊಳ್ಳಲಿಲ್ಲ. ‘ನೋಡಮ್ಮ ನಿನ್ನ ಗಂಡನ್ನ ಇವತ್ತೊಂದಿನ ನಿನ್ನಿಂದ ಕಸಿದುಕೊಳ್ತಿದ್ದೀನಿ. ಯಾವುದೇ ಪ್ರಾಬ್ಲಮ್ ಇಲ್ಲಾ ತಾನೆ’ ನನ್ನ ಹೆಂಡತಿಗೆ ಹೇಳಿ ಹೊರನಡೆದ ರಾಘವ ಅವರನ್ನು ನಾನು ಹಿಂಬಾಲಿಸಿದೆ. 

      ಮನಸ್ವಿನಿ ಅವರ ತೋಟದ ಮನೆ ಇರುವುದು ನಗರದಿಂದ ಸುಮಾರು ಇಪ್ಪತ್ತು ಕಿಲೋ ಮೀಟರ್ ದೂರದ ಹೊರವಲಯದಲ್ಲಿ. ಸಮಾಜಶಾಸ್ತ್ರದ ಪ್ರಾಧ್ಯಾಪಕಿಯಾದರೂ ಸಾಹಿತ್ಯದಲ್ಲಿ ಅಭಿರುಚಿ ಅವರಿಗೆ. ನಾಡಿನ ಹಲವಾರು ಪತ್ರಿಕೆಗಳಲ್ಲಿ ಅವರ ಲೇಖನ, ಕಥೆಗಳು ಪ್ರಕಟವಾಗಿವೆ. ರಾಘವ ಅವರಿಗೂ ಸಾಹಿತ್ಯದಲ್ಲಿ ಆಸಕ್ತಿ ಇರುವುದರಿಂದ ಅವರನ್ನೇ ಇವತ್ತಿನ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಹ್ವಾನಿಸಿ ಸನ್ಮಾನಿಸುವ ಆಸೆ. ರಾಘವ ಕಾರು ಓಡಿಸುತ್ತ ಎಫ್.ಎಮ್ ನಲ್ಲಿ ಬಿತ್ತರವಾಗುತ್ತಿದ್ದ ಹಳೆಯ ಕನ್ನಡ ಹಾಡಿಗೆ ತಮ್ಮ ಧ್ವನಿಗೂಡಿಸುತ್ತಿದ್ದರು. ಡಿಸೆಂಬರ್ ತಿಂಗಳ ಚಳಿಗಾಲದ ಆಹ್ಲಾದಕರ ವಾತಾವರಣದಲ್ಲಿ ರಸ್ತೆಯ ಪಕ್ಕದ ಹೊಲಗಳಲ್ಲಿ ದೃಷ್ಟಿ ಹಾಯುವವರೆಗೆ ತುಂಬಿ ನಿಂತ ಹಸಿರು ಪೈರಿನಿಂದ ವಸುಂಧರೆ ಕಂಗೊಳಿಸುತ್ತಿದ್ದಳು. ‘ನೋಡಿ ರವಿ ಎಲ್ಲವೂ ನಮ್ಮ ನಮ್ಮ ನೋಡುವ ದೃಷ್ಟಿಕೋನವನ್ನು ಅವಲಂಬಿಸಿರುತ್ತೆ. ಅಲ್ಲಿ ನೋಡಿ ದೂರದಲ್ಲಿ ಬೆಟ್ಟ ಕಾಣ್ತಿದೆಯಲ್ಲ ಅದನ್ನು ನಾವು ಯಾವ ಭಾವದಿಂದ ನೋಡ್ತೀವಿ ಆ ಅರ್ಥದಲ್ಲಿ ಅದು ನಮಗೆ ಭಾಸವಾಗುತ್ತೆ. ಅದೇ ರೀತಿ ಗಂಡು ಹೆಣ್ಣಿನ ಸಂಬಂಧ ಕೂಡ. ಎಲ್ಲವನ್ನೂ ತಪ್ಪು ಎನ್ನುವ ಗ್ರಹಿಕೆಯಿಂದ ನೋಡಿದರೆ ಎಲ್ಲ ಸಂಬಂಧಗಳೂ ನಮಗೆ ತಪ್ಪಾಗಿಯೇ ಕಾಣಿಸ್ತವೆ’ ತಮ್ಮ ಮತ್ತು ಮನಸ್ವಿನಿ ಅವರ ಸಂಬಂಧದ ಕುರಿತು ಮಾತನಾಡಲು ಪೀಠಿಕೆ ಹಾಕುವಂತೆ ರಾಘವ ನುಡಿದರು. ‘ಸರ್ ಹಾಗೆಂದು ಎಲ್ಲವೂ ಪರಿಶುದ್ಧ ಮತ್ತು ಪಾವಿತ್ರ್ಯವೇ ಎಂದು ನಂಬಿದರೆ ಮುಂದೊಂದು ದಿನ ನಮ್ಮ ನಂಬಿಕೆಗಳೇ ಸಡಿಲಾಗುವ ಸಾಧ್ಯತೆಯೂ ಇರಬಹುದಲ್ಲ’ ನನ್ನ ಪ್ರಶ್ನೆಯಿಂದ ಸ್ವಲ್ಪ ವಿಚಲಿತರಾದಂತೆ ಕಂಡ ರಾಘವ ಪ್ರತಿಕ್ರಿಯಿಸದೆ ಮೌನವಾದರು. ನಾವು ಕುಳಿತಿದ್ದ ಕಾರು ರಸ್ತೆಯನ್ನು ಸೀಳಿಕೊಂಡು ಓಡುತ್ತಿತ್ತು. ‘ಸರ್ ನಾನು ಕೇಳಿದ್ದರಲ್ಲಿ ತಪ್ಪಿದ್ದರೆ ದಯವಿಟ್ಟು ಕ್ಷಮಿಸಿ’ ರಾಘವ ಅವರ ಚಿಂತೆ ತುಂಬಿದ ಮುಖ ನೋಡಿ ಹೊರಬಂದ ನನ್ನ ಧ್ವನಿಯಲ್ಲಿ ಪಶ್ಚಾತ್ತಾಪವಿತ್ತು. ‘ನೋ ರವಿ ಹಾಗಲ್ಲ. ಪ್ರತಿಯೊಂದು ಸಂಬಂಧಕ್ಕೆ ಸಮಾಜದ ನಂಬಿಕೆ ಎನ್ನುವ ಮುದ್ರೆ ಬೇಕೆ ಎನ್ನುವುದಾದರೆ ಮನುಷ್ಯ ಸಂಬಂಧಗಳು ಎಷ್ಟೊಂದು ಕೃತಕವಾಗಿರುತ್ತವೆ ನೀವೇ ಯೋಚಿಸಿ’ ರಾಘವ ಅವರ ಮಾತು ನನ್ನ ಪ್ರಶ್ನೆಗೆ ಪ್ರತ್ಯುತ್ತರ ಎನ್ನುವುದಕ್ಕಿಂತ ಆಳವಾದ ಅನುಭವದಿಂದ ಅವರು ತಳೆದ ನಿಲುವಾಗಿತ್ತದು. ‘ತಾಯಿ-ಮಗುವಿನ ಪ್ರೀತಿ, ಗಂಡ-ಹೆಂಡತಿಯ ಪ್ರೇಮ, ಭಾತೃತ್ವ, ಗೆಳೆತನ ಇವೆಲ್ಲ ವ್ಯಕ್ತಿಗತವಾಗಿ ರೂಪುಗೊಳ್ಳುವ ಸಂಬಂಧಗಳು. ಪ್ರತಿ ಸಂಬಂಧವನ್ನು ನಾವು ನಮ್ಮದೆ ತರ್ಕ, ಸಿದ್ಧಾಂತದ ನೆಲೆಯಲ್ಲಿ ವಿಶ್ಲೇಷಿಸಲು ಹೊರಟರೆ ಅಲ್ಲಿ ನಾವು ಅಪೇಕ್ಷಿಸುವುದು ನಮಗೆ ಅನುಕೂಲವಾಗುವ ಫಲಿತಾಂಶವನ್ನೆ. ನನ್ನ ಮತ್ತು ಮನಸ್ವಿನಿ ಅವರ ಕುರಿತು ನೀವೆಲ್ಲ ಯೋಚಿಸಿದ್ದು ಕೂಡ ಇದು ಇಂಥದ್ದೆ ಸಂಬಂಧ ಎನ್ನುವ ಪೂರ್ವ ಗ್ರಹಿಕೆಯಲ್ಲೆ’ ರಾಘವ ಕಾಲೇಜಿನ ಸಹೊದ್ಯೋಗಿಗಳನ್ನು ಆರೋಪಿಸುವ ಭರದಲ್ಲಿ ನೀವೆಲ್ಲ ಎಂದು ನನ್ನನ್ನೂ ಸೇರಿಸಿದ್ದು ಮನಸ್ಸಿಗೆ ಕೊಂಚ ನೋವಾಯಿತು. ಅರ್ಥವಾದವರಂತೆ ‘ಸಾರಿ ಮಿ.ರವಿ’ ರಾಘವ ನನ್ನ ಬಲಗೈಯನ್ನೊಮ್ಮೆ ಅದುಮಿದರು.

       ಮನಸ್ವಿನಿ ಅವರ ತೋಟದ ಮನೆ ತಲುಪಿದಾಗ ಅದಾಗಲೇ ಅತಿಥಿಗಳೆಲ್ಲ ಬಂದಾಗಿತ್ತು. ಮನೆಯ ಎದುರಿನ ರಸ್ತೆಯಲ್ಲಿ ಮನಸ್ವಿನಿ ನಮಗಾಗಿ ಕಾಯುತ್ತಿದ್ದರು. ಸಮಾರಂಭದಲ್ಲಿ ರಾಘವ ಅವರ ಉಪಸ್ಥಿತಿಯಿಂದ ಮನಸ್ವಿನಿಗೆ ಖುಷಿಯಾಗಿದೆಯೆಂದು ಅವರ ಮುಖದ ಭಾವವೇ ಹೇಳುತ್ತಿತ್ತು. ಪತಿ ಮತ್ತು ಮಕ್ಕಳನ್ನು ಪರಿಚಯಿಸಿ ನಮ್ಮನ್ನು ವೇದಿಕೆಯ ಮುಂಭಾಗದಲ್ಲಿ ಕರೆದೊಯ್ದು ಕುಳ್ಳಿರಿಸಿದರು. ಇಡೀ ಸಮಾರಂಭದ ಮೇಲುಸ್ತುವಾರಿ ಮನಸ್ವಿನಿ ಅವರ ಪತಿ ಪ್ರದೀಪ ಅವರದಾಗಿತ್ತು. ತುಂಬ ಅಚ್ಚುಕಟ್ಟಾಗಿ ಆಯೋಜಿಸಿದ್ದ ಸಮಾರಂಭದಲ್ಲಿ ಅವರ ಹೆಣ್ಣು ಮಕ್ಕಳಿಬ್ಬರೂ ಅತಿಥಿಗಳನ್ನು ಉಪಚರಿಸುತ್ತ ಸಂಭ್ರಮದಿಂದ ಓಡಾಡುತ್ತಿದ್ದರು. ಅತಿಥಿಗಳೇನೂ ಹೆಚ್ಚಿನ ಸಂಖ್ಯೆಯಲ್ಲಿರಲಿಲ್ಲ. ಮನಸ್ವಿನಿ ತಮ್ಮ ಆಪ್ತರನ್ನಷ್ಟೇ ಆಹ್ವಾನಿಸಿದ್ದರು. ನಮ್ಮ ಕಾಲೇಜಿನಿಂದ ಆಹ್ವಾನಿತರಾದವರಲ್ಲಿ ರಾಘವ ಅವರೊಬ್ಬರೆ. ಅನಿರೀಕ್ಷಿತ ಅತಿಥಿಯಾಗಿದ್ದ ನನ್ನನ್ನು ಮನಸ್ವಿನಿ ತುಂಬ ಆದರದಿಂದಲೇ ಸ್ವಾಗತಿಸಿದ್ದರು. ರಾಘವ ಅವರ ಆತ್ಮೀಯ ಎನ್ನುವ ಕಾರಣವೂ ಇರಬಹುದು. ಮನಸ್ವಿನಿ ಅವರ ಪ್ರಾರ್ಥನೆಯೊಂದಿಗೆ ಆರಂಭವಾದ ಸಮಾರಂಭದಲ್ಲಿ ರಾಘವ ‘ಸಾಂಗತ್ಯ’ ಕಥಾಸಂಕಲನವನ್ನು ಬಿಡುಗಡೆ ಮಾಡಿ ಅತಿಥಿಗಳಿಗೆ ಒಂದೊಂದು ಪ್ರತಿ ನೀಡಿದರು. ಸಾಹಿತ್ಯದ ಕುರಿತು ಮಾತನಾಡುವಂತೆ ಮನಸ್ವಿನಿಯೇ ರಾಘವ ಅವರನ್ನು ಒತ್ತಾಯಿಸಿದರು. ರಾಘವ ತಮ್ಮ ಎಂದಿನ ಗಂಭೀರ ಮುಖಮುದ್ರೆಯಿಂದ ಅಲ್ಲಿ ಕುಳಿತಿದ್ದವರನ್ನೊಮ್ಮೆ ದೃಷ್ಟಿಸಿ ಮಾತು ಶುರು ಮಾಡಿದರು. ‘ನಾನೇನೂ ಸಾಹಿತ್ಯದ ವಿದ್ಯಾರ್ಥಿಯಲ್ಲ. ಸಾಹಿತ್ಯವನ್ನು ಶಿಸ್ತಿನಿಂದ ಅಭ್ಯಸಿಸಿದವನೂ ಅಲ್ಲ. ಆದರೆ ಸಾಹಿತ್ಯದ ಕುರಿತು ನನಗೆ ಒಂದಿಷ್ಟು ಅಭಿರುಚಿ ಇದೆ. ಮನಸ್ವಿನಿ ಅವರ ‘ಸಾಂಗತ್ಯ’ ಕಥಾಸಂಕಲನವನ್ನು ಅದು ಹಸ್ತಪ್ರತಿ ರೂಪದಲ್ಲಿರುವಾಗಲೇ ಓದಿದ್ದೀನಿ. ಸಾಹಿತ್ಯದ ಮೂಲಕವೇ ಮನುಷ್ಯ ಸಂಬಂಧಗಳಿಗೊಂದು ಹೊಸ ವ್ಯಾಖ್ಯಾನ ಕೊಡಲು ಹೊರಟಿರುವ ಮನಸ್ವಿನಿ ಅವರ ಪ್ರಯತ್ನವನ್ನು ನಾನು ಮೆಚ್ಚುತ್ತೇನೆ. ಇಲ್ಲಿನ ಕಥೆಗಳ ಮೂಲಕ ಕಥೆಗಾರ್ತಿ ಪ್ರಶ್ನಿಸಲು ಹೊರಟಿರುವುದು ಸಂಬಂಧಗಳನ್ನು ಸೀಮಿತ ಚೌಕಟ್ಟಿನಲ್ಲೇ ನಾವು ನೋಡಬೇಕೆ ಎಂದು. ಸಂಬಂಧಗಳಿಗೆ ಸಮಾಜದ ಒಪ್ಪಿಗೆ ಅಥವಾ ನಂಬಿಕೆ ಎನ್ನುವ ಮುದ್ರೆಯ ಅಗತ್ಯವಿದೆಯೇ ಎನ್ನುವ ಪ್ರಶ್ನೆ ಸಹ ಈ ಕಥೆಗಳಲ್ಲಿ ಅಡಗಿದೆ. ಸ್ಥಾಪಿತ ನಂಬಿಕೆಗಳನ್ನು ಮುರಿದು ಹೊಸ ನಂಬಿಕೆಯನ್ನು ಕಟ್ಟಲು ಹೊರಟಿರುವ ಲೇಖಕಿಯ ಪ್ರಯತ್ನಕ್ಕೆ ಓದುಗರ ವಲಯದಿಂದ ಬೆಂಬಲ ಸಿಗಬೇಕು. ಅಂದರೆ ಮಾತ್ರ ಇಂಥ ಗಟ್ಟಿಧೈರ್ಯದ ಬರಹಗಾರ್ತಿಯಿಂದ ಇನ್ನಷ್ಟು ಕೃತಿಗಳು ಹೊರಬರಬಹುದೆನ್ನುವ ನಿರೀಕ್ಷೆಯಿದೆ’ ರಾಘವ ಅವರ ಮಾತುಗಳಿಗೆ ಅಲ್ಲಿ ನೆರೆದಿದ್ದ ಆಮಂತ್ರಿತರು ಚಪ್ಪಾಳೆಯ ಮೂಲಕ ಮೆಚ್ಚುಗೆ ಸೂಚಿಸಿದರು. ರಾಘವ ಪೂರ್ಣವಾಗಿ ತೆರೆದುಕೊಳ್ಳಬಹುದೆಂದು ನಿರೀಕ್ಷಿಸಿದ್ದ ನನಗೆ ಅವರು ಮಾತನ್ನು ಬೇಗನೆ ಮುಗಿಸಿದ್ದು ನಿರಾಸೆ ಮೂಡಿಸಿತು. 

     ಸಮಾರಂಭದ ಕೊನೆಯಲ್ಲಿ ಅತಿಥಿಗಳಿಗೆ ರುಚಿಕಟ್ಟಾದ ಊಟದ ವ್ಯವಸ್ಥೆಯಿತ್ತು. ಪ್ರದೀಪ ಸ್ವತ: ಮುಂದೆ ನಿಂತು ಎಲ್ಲರಿಗೂ ಉಪಚರಿಸುತ್ತಿದ್ದರು. ಪ್ರದೀಪ ಮಾತುಗಳಿಂದಲೇ ತಿಳಿಯುತ್ತಿತ್ತು ಅವರಿಗೆ ಸಾಹಿತ್ಯದ ಬಗ್ಗೆ ಆಸಕ್ತಿಯಾಗಲಿ ಅಭಿರುಚಿಯಾಗಲಿ ಇಲ್ಲವೆಂದು. ಆದರೆ ಹೆಂಡತಿಯನ್ನು ಪ್ರೀತಿಸುವ ಅವರು ಆಕೆಯ ಸಾಹಿತ್ಯಾಸಕ್ತಿಗೂ ಆಸರೆಯಾಗಿ ನಿಂತಿದ್ದು ಅಭಿಮಾನವೆನಿಸಿತು. ಮರಳಿ ಬರುವಾಗ ಕಾರಿನವರೆಗೂ ಬಂದು ಬಿಳ್ಕೊಟ್ಟ ಮನಸ್ವಿನಿ ‘ಸರ್ ನಿಮ್ಮ ಅಭಿಮಾನದ ಮಾತುಗಳಿಗೆ ತುಂಬಾ ಥ್ಯಾಂಕ್ಸ್. ನನ್ನ ಬರವಣಿಗೆಗೆ ಮತ್ತು ಇವತ್ತಿನ ಈ ಕಥಾಸಂಕಲನಕ್ಕೆ ನೀವೆ ಸ್ಪೂರ್ತಿ ಸರ್’ ಕೊರಳುಬ್ಬಿ ಕಣ್ಣಂಚಿನಲ್ಲಿ ನೀರೊಡೆದು ಮಾತಿಗಾಗಿ ತಡವರಿಸಿದರು. ರಾಘವ ಅವರ ಮನಸ್ಥಿತಿ ಕೂಡ ಭಿನ್ನವಾಗಿರಲಿಲ್ಲ. ಪ್ರದೀಪ ಹತ್ತಿರ ಬಂದು ಕೈಕುಲುಕಿ ಧನ್ಯವಾದ ಹೇಳುವಾಗ ಅವರ ಮುಖದಲ್ಲಿ ಧನ್ಯತೆಯ ಭಾವವಿತ್ತು. ಮಕ್ಕಳಿಬ್ಬರೂ ರಾಘವ ಅವರ ಕಾಲಿಗೆರಗಿ ಆಶಿರ್ವಾದ ಪಡೆದರು. ಇಡೀ ವಾತವರಣದಲ್ಲಿ ಆ ಕ್ಷಣ ಭಾವ ಲಯವೊಂದು ಪ್ರವಹಿಸುತ್ತಿರುವ ಅನುಭವವಾಗಿ ಮೈ ಜುಮ್ಮೆಂದಿತು. 

     ರಾಘವ ಮೌನದ ಚಿಪ್ಪಿನೊಳಗೆ ಹುದುಗಿಹೋಗಿದ್ದರು. ಅವರನ್ನು ಮಾತನಾಡಿಸುವ ಧೈರ್ಯ ನನಗಿರಲಿಲ್ಲ. ಕಾರಿನ ಸದ್ದು ಮತ್ತು ಎಫ್.ಎಮ್ ನಲ್ಲಿ ಬರುತ್ತಿದ್ದ ಲತಾಮಂಗೇಶ್ಕರ್ ಹಾಡೊಂದು ಬಿಟ್ಟರೆ ನಮ್ಮಿಬ್ಬರ ನಡುವೆ ಮೌನ ಮನೆಮಾಡಿತ್ತು. ಸ್ವಲ್ಪ ದೂರ ಕ್ರಮಿಸಿದ ನಂತರ ರಾಘವ ಮೌನ ಮುರಿದು ಮಾತಿಗಿಳಿದರು ‘ಮಿ.ರವಿ ನೀವೆ ನೋಡಿದ್ದೀರಿ. ಈಗ ಹೇಳಿ ನನ್ನ ಮತ್ತು ಮನಸ್ವಿನಿಯ ಸಂಬಂಧವನ್ನು ನೀವು ಯಾವ ಹೆಸರಿನಿಂದ ಕರಿತೀರಿ?’. ನನ್ನಲ್ಲಿ ಉತ್ತರವಿರಲಿಲ್ಲ. ನಾಚಿಕೆಯಿಂದ ತಲೆತಗ್ಗಿಸಿದೆ. ‘ನಿಮ್ಮನ್ನ ನೋಯಿಸಬೇಕು ಅಂತಲ್ಲ ರವಿ. ಸತ್ಯಾಸತ್ಯತೆಗಳನ್ನು ನೋಡದೆ ನಾವು ಒಂದು ನಿರ್ಧಾರಕ್ಕೆ ಬರ್ತೀವಿ ನೋಡಿ ಅದೇ ನಾವು ಮಾಡೋ ತಪ್ಪು. ನಾಗರಿಕರಾಗ್ತಾ ಆಗ್ತಾ ನಾವು ವಿವೇಚನೆಯನ್ನೇ ಕಳೆದುಕೊಳ್ತಿದ್ದೀವಿ ಅಂತ ನನಗೆ ಭಯವಾಗುತ್ತೆ’ ರಾಘವ ಮಾತನಾಡುವ ಲಹರಿಯಲ್ಲಿದ್ದರು. ಅವರ ಮಾತನ್ನು ಆಲಿಸುವುದಷ್ಟೇ ಆ ಕ್ಷಣಕ್ಕೆ ನನ್ನ ಪ್ರತಿಕ್ರಿಯೆಯಾಗಿತ್ತು. ‘ಈ ದೇಶದಲ್ಲಿ ನೇಣುಗಂಬಕ್ಕೆ ಏರಿಸುವ ಅಪರಾಧಿಯನ್ನು ಕೂಡ ಅವನ ಕೊನೆಯ ಆಸೆ ಏನು ಅಂತ ಕೇಳ್ತಾರೆ. ತಪ್ಪು ಮಾಡಿದವನಿಗೂ ಸಹ ಕೋರ್ಟಿನಲ್ಲಿ ವಾದಿಸೋಕೆ ಅವಕಾಶವಿದೆ. ಇಂಥ ಸಹನೆಯ ಸಂಸ್ಕೃತಿಯ ನಡುವೆಯೂ ನಾವು ಮಾತ್ರ ಬೇರೆಯವರ ವ್ಯಕ್ತಿತ್ವವನ್ನು ನಮ್ಮದೇ ಆದ ದೃಷ್ಟಿಕೋನದಲ್ಲಿ ನಿರ್ಧರಿಸಿ ಬಿಡ್ತಿವಿ. ಇಲ್ಲಿ ಒಂದು ಗಂಡು ಮತ್ತು ಹೆಣ್ಣು ತಮ್ಮಲ್ಲಿನ ಸಮಾನ ಅಭಿರುಚಿಯಿಂದ ಹತ್ತಿರವಾಗಿ ಗೆಳೆತನ ಬೆಳೆಸೋದೆ ತಪ್ಪು ಅಂತ ನಿರ್ಧರಿಸಿ ಬಿಡ್ತಿವಲ್ಲ ರವಿ ಇದೆಂಥ ಸಮಾಜ. ಒಮ್ಮೊಮ್ಮೆ ಎಂಥವರ ನಡುವೆ ಬದುಕುತ್ತಿದ್ದೀನಿ ಅಂತ ಹೇಸಿಗೆಯಾಗುತ್ತೆ’ ರಾಘವ ಅವರ ಧ್ವನಿಯಲ್ಲಿ ಸಿಟ್ಟಿಗಿಂತ ವೇದನೆಯಿತ್ತು. ‘ಮದುವೆಯಾದ ನಂತರ ಒಂದು ಗಂಡು ಮತ್ತು ಹೆಣ್ಣು ಸ್ನೇಹಕ್ಕೆ ಚಾಚಿಕೊಳ್ಳಬಾರದು ಅಂತ ಇಲ್ಲೇನಾದರೂ ನಿಯಮ ಇದೇನಾ. ಗಂಡು ಹೆಣ್ಣಿನ ನಡುವಣ  ಸ್ನೇಹ ಎಂದರೆ ಅದು ಕೇವಲ ಕಾಮಕ್ಕೆ ಮಾತ್ರ ಸೀಮಿತಗೊಳಿಸ್ತೀವಿ. ರವಿ ನನಗೂ ಮದುವೆಯಾಗಿ ಹೆಂಡತಿ ಮತ್ತು ಮಕ್ಕಳಿದ್ದಾರೆ ಮನಸ್ವಿನಿದೂ ನನ್ನದೆ ಸ್ಥಿತಿ. ಇಲ್ಲಿ ಯಾಕೆ ನಮ್ಮಿಬ್ಬರ ನಡುವೆ ಸ್ನೇಹ ಬೆಳೀತು ಎನ್ನುವುದನ್ನು ನೀವು ಎಂದಾದರೂ ನಮ್ಮ ಜಾಗದಲ್ಲಿ ನಿಂತು ಯೋಚಿಸಿದ್ದರೆ ಹೀಗೆ ತಪ್ಪು ಕಲ್ಪನೆ ಆಗ್ತಿರಲಿಲ್ಲ. ಮನಸ್ವಿನಿಗೆ ಸಾಹಿತ್ಯದ ಅಭಿರುಚಿ ಇದೆ. ತಾನು ಓದಿದ ಪುಸ್ತಕಗಳ ಕುರಿತು ಹಂಚಿಕೊಳ್ಳೊಕೆ ಅವರಿಗೊಂದು ಜೊತೆಯ ಅಗತ್ಯವಿದೆ. ಪ್ರದೀಪ ಬಿಜಿನೆಸ್ ಮ್ಯಾನ್. ಅವರಿಗೆ ಸಾಹಿತ್ಯದಲ್ಲಿ ಆಸಕ್ತಿ ಇಲ್ಲ. ಸಮಾನ ಆಸಕ್ತಿ ಇರುವವರ ಗೆಳೆತನಕ್ಕಾಗಿ ಹುಡುಕ್ತಿದ್ದಾಗ ಅವರಿಗೆ ನಾನು ಸಿಕ್ಕೆ. ನನಗೂ ಸಾಹಿತ್ಯದ ಒಲುವಿದೆ ಎಂದು ಗೊತ್ತಾದದ್ದೆ ಮನಸ್ವಿನಿ ನನ್ನೊಡನೆ ಗಂಟೆಗಟ್ಟಲೆ ಚರ್ಚೆ ಮಾಡೋರು. ನಿಜ ಹೇಳ್ತಿದ್ದೀನಿ ರವಿ ನಾವು ಎಂದೂ ನಮ್ಮ ಸಂಸಾರದ್ದಾಗಲಿ ಬೇರೆಯವರ ಬಗ್ಗೆಯಾಗಲಿ ಮಾತಾಡಿಲ್ಲ. ನಮ್ಮ ಮಾತುಕತೆ, ಗೆಳೆತನ ಅದು ಸಾಹಿತ್ಯದ ವಿಷಯಕ್ಕಷ್ಟೆ ಸೀಮಿತ. ಕಾಲೇಜಿನ ಕ್ಯಾಂಟಿನಿನಲ್ಲೊ ಡಿಪಾರ್ಟ್‍ಮೆಂಟ್‍ನಲ್ಲೊ ಜೊತೆಯಾಗಿ ಕುಳಿತು ಮಾತಾಡಿದ್ದನ್ನೇ ದೊಡ್ಡ ವಿಷಯವಾಗಿಸಿ ಅದಕ್ಕೆ ನಿಮ್ಮ ನಿಮ್ಮ ಕಲ್ಪನೆಯ ರೆಕ್ಕೆ ಪುಕ್ಕ ಕಟ್ಟಿ ಕಥೆಯಾಗಿಸ್ತಿರಲ್ಲ ಇದರಿಂದ ಇನ್ನೊಬ್ಬರಿಗೆ ಹರ್ಟ್ ಆಗುತ್ತೆ ಅನ್ನೊ ಕಿಂಚಿತ್ ಪ್ರಜ್ಞೆಯೂ ಬೇಡ ಅಂದರೆ ನಾವು ಎಲ್ಲಿ ಇದ್ದೀವಿ ರವಿ’ ರಾಘವ ಅವರ ಮುಖದಲ್ಲಿ ನೋವು ತುಂಬಿತ್ತು. ರಾಘವ ಅವರ ಮಾತಿಗೆ ಹೇಗೆ ಪ್ರತಿಕ್ರಿಯಿಸಬೇಕೆನ್ನುವುದಾಗಲಿ ಅವರನ್ನು ಸಮಾಧಾನ ಪಡಿಸುವುದಾಗಲಿ ತೋಚದೆ ನಾನು ಸುಮ್ಮನೆ ಕುಳಿತೆ. 

    ಮನೆ ಸಮೀಪಿಸುವವರೆಗೂ ಇಬ್ಬರೂ ಮಾತನಾಡಲಿಲ್ಲ. ಮನೆ ಎದುರು ಕಾರು ನಿಂತಾಗ ‘ಸರ್ ಬನ್ನಿ ಕಾಫಿ ಕುಡಿಯುವಿರಂತೆ’ ಆಹ್ವಾನಿಸಿದೆ. ನನ್ನ ಆಹ್ವಾನವನ್ನು ನಯವಾಗಿ ನಿರಾಕರಿಸಿದ ರಾಘವ ‘ರವಿ ಇನ್ನೊಮ್ಮೆ ಸಮಯ ಮಾಡಿಕೊಂಡು ಬರ್ತೀನಿ. ಮನಸ್ಸಿನ ಭಾರವನ್ನು ಯಾರೊಂದಿಗಾದರೂ ಹಂಚಿಕೊಳ್ಳಬೇಕಿತ್ತು. ಅದಕ್ಕೆ ಇವತ್ತು ನಿಮ್ಮೊಂದಿಗೆ ಸ್ವಲ್ಪ ಒರಟಾಗಿ ಮಾತಾಡ್ದೆ ಅಂತ ಅನಿಸುತ್ತೆ. ದಯವಿಟ್ಟು ಕ್ಷಮಿಸಿ. ಬೇರೆಯವರ ಬಗ್ಗೆ ಕಥೆ ಕಟ್ಟೋರು ಅವರೆಲ್ಲ ಮುಖವಾಡ ಧರಿಸಿ ತಾವು ಮಾತ್ರ ಪರಮ ಸಾಚಾಗಳು ಅನ್ನೋ ಥರ ಬದುಕೊದನ್ನ ನೋಡಿದ್ದೀನಿ. ಮುಖವಾಡದ ಹಿಂದೆ ಅದೆಂಥ ಕ್ರೂರ ಮನಸ್ಸಿದೆ ಅಂದರೆ ಅಂಥವರ ನಡುವಿದ್ದೂ ನಮ್ಮಂಥವರು ಇನ್ನೂ ಸೆನ್ಸಿಟಿವ್ ಆಗಿ ಉಳಿದಿದ್ದಿವಲ್ಲ ಅಂತ ಆಶ್ಚರ್ಯ ಆಗುತ್ತೆ’ ರಾಘವ ಮಾತು ನಿಲ್ಲಿಸಿ ಕಾರನ್ನು ಮುಂದೊಡಿಸಿದರು. ಕಾರು ಕಣ್ಮರೆಯಾಗುವವರೆಗೂ ನೋಡುತ್ತ ನಿಂತವನನ್ನು ಹೆಂಡತಿಯ ಧ್ವನಿ ಎಚ್ಚರಿಸಿ ವಾಸ್ತವಕ್ಕೆ ಮರಳಿದೆ.

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 


Tuesday, January 1, 2019

ಮಂಟೋ ಕಥೆಗಳಲ್ಲಿ ದೇಶವಿಭಜನೆಯ ನೋವಿನ ವ್ಯಥೆ








           ಸಾದತ್ ಹಸನ್ ಮಟೋ ಉರ್ದು ಸಾಹಿತ್ಯದಲ್ಲಿ ಮಹತ್ವದ ಹೆಸರು. ಮಂಟೋ ನಿಧನ ಹೊಂದಿ ಆರು ದಶಕಗಳೇ ಸರಿದು ಹೋಗಿವೆ. ನಂದಿತಾ ದಾಸ್ ಹಿಂದಿ ಭಾಷೆಯಲ್ಲಿ ನಿರ್ದೇಶಿಸುತ್ತಿರುವ ಮಂಟೋ ಜೀವನ ಆಧಾರಿತ ಸಿನಿಮಾದಿಂದಾಗಿ ಮಂಟೋ ಈಗ ಮತ್ತೆ ನೆನಪಾಗುತ್ತಿದ್ದಾರೆ. ಸಾಮಾನ್ಯವಾಗಿ ಈ ಸಿನಿಮಾ ಮಾಧ್ಯಮದಲ್ಲಿ ಬರಹಗಾರರ ಕುರಿತು ಸಿನಿಮಾಗಳು ನಿರ್ಮಾಣಗೊಂಡಿದ್ದು ನನಗೆ ನೆನಪಿದ್ದಂತೆ ಇಲ್ಲವೇ ಇಲ್ಲ. ಸದಾ ಜನಪ್ರಿಯತೆಯ ಬೆನ್ನು ಹತ್ತುವ ಈ ಸಿನಿಮಾ ಮಾಧ್ಯಮಕ್ಕೆ ಬರಹಗಾರರ ಬದುಕನ್ನು ತನ್ನ ಚೌಕಟ್ಟಿಗೆ ಹೊಂದಿಸಿಕೊಳ್ಳಲು ಕಷ್ಟಸಾಧ್ಯವೇನೋ. ಜೊತೆಗೆ ಬರಹಗಾರನ ಬದುಕು ಪ್ರೇಕ್ಷಕರನ್ನು ಆಕರ್ಷಿಸುವ ಸರಕಲ್ಲ ಎನ್ನುವ ಸಿನಿಮಾದವರ ವ್ಯಾಪಾರೀ ಮನೋಭಾವವೂ ಇದಕ್ಕೆ ಕಾರಣವಾಗಿರಬಹುದು. ಹೀಗಾಗಿ ಕ್ರೀಡಾಪಟುಗಳ, ರಾಜಕಾರಣಿಗಳ ವರ್ಣರಂಜಿತ ಬದುಕನ್ನು ಸೆಲ್ಯೂಲಾಯ್ಡ್  ಪರದೆಯ ಮೇಲೆ ತೋರಿಸಲು ಆಸಕ್ತಿ ತೋರುವ ಈ ಸಿನಿಮಾ ಜನ ಬರಹಗಾರರ ಬದುಕನ್ನು ಸದಾಕಾಲ ನಿರ್ಲಕ್ಷಿಸುತ್ತಲೇ ಬಂದಿದ್ದಾರೆ. ಇಂಥದ್ದೊಂದು ನಿರ್ಲಕ್ಷಿತ ವಾತಾವರಣದಲ್ಲೂ ನಂದಿತಾದಾಸ್ ಆರುದಶಕಗಳ ಹಿಂದೆ ಬದುಕಿದ್ದ ಸಾದತ್ ಹಸನ್ ಮಂಟೋ ಎನ್ನುವ ಬರಹಗಾರನ ಬದುಕಿನ ಕಥೆಯನ್ನು ಸಿನಿಮಾಕ್ಕಾಗಿ ಆಯ್ದುಕೊಂಡಿದ್ದು ಸ್ವಾಗತಾರ್ಹ. ಸಿನಿಮಾ ಪ್ರಿಯರು ಕೂಡ ಇಂಥ ಸಿನಿಮಾಗಳನ್ನು ನೋಡಿ ಉತ್ತೇಜಿಸಬೇಕು. ಮಂಟೋ ಜೀವನಗಾಥೆಯ ಸಿನಿಮಾ ಯಶಸ್ವಿಯಾದಲ್ಲಿ ಮುಂದಿನ ದಿನಗಳಲ್ಲಿ ಇನ್ನೂ ಹಲವಾರು ಬರಹಗಾರರ ಬದುಕು ಸಿನಿಮಾ ಪರದೆಯ ಮೇಲೆ ಕಥೆಯಾಗಿ ಮೂಡಿಬರಬಹುದೆನ್ನುವ ನಿರೀಕ್ಷೆ ಇದೆ.

         ಪಂಜಾಬಿನ ಸಣ್ಣ ಹಳ್ಳಿಯೊಂದರಲ್ಲಿ ಹುಟ್ಟಿದ ಸಾದತ್ ಹಸನ್ ಮಂಟೋ ಅವರಿಗೆ ಭಾರತ ವಿಭಜನೆಯ ಸಂದರ್ಭ ಮೂವತ್ತೈದು ವರ್ಷ ವಯಸ್ಸು. ತುಂಬ ಯೌವನದ  ದಿನಗಳವು. ಅಮೃತಸರದಲ್ಲಿ ವಿದ್ಯಾಭ್ಯಾಸ, ಮುಂಬಯಿಯಲ್ಲಿ ವೃತ್ತಿ. ಬಾಲ್ಯದಿಂದಲೇ ಇದ್ದ ಓದಿನ ಗೀಳು ಮುಂದೆ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿತು. ಮಂಟೋ ಬರೆದದ್ದೆಲ್ಲ ಬದುಕಿನ ಜೀವನಾನುಭವವೆ. ಒಂದು ಕಾದಂಬರಿ, ಏಳು ನಾಟಕಗಳು, ಮೂರು ಪ್ರಬಂಧ ಸಂಕಲನಗಳು, ಇಪ್ಪತ್ತೆರಡು ಕಥಾ ಸಂಕಲನಗಳು ಇದು ಮಂಟೋ ಅವರ ಒಟ್ಟು ಸಾಹಿತ್ಯ ಕೃಷಿಯ ಅಂಕಿಸಂಖ್ಯೆ. ಅವರ ಕಥೆಗಳು ಪ್ರಂಚದ ಹಲವು ಭಾಷೆಗಳಿಗೆ ಭಾಷಾಂತರಗೊಂಡಿದ್ದು ಆ ಕಥೆಗಳ ಶ್ರೇಷ್ಠತೆಗೊಂದು ದೃಷ್ಟಾಂತ. ಮಂಟೋ ಅವರ ಕಥೆಗಳು ಕನ್ನಡಕ್ಕೂ ಅನುವಾದಗೊಂಡು ಇಲ್ಲಿನ ಓದುಗರ ಮನ್ನಣೆಗೆ ಪಾತ್ರವಾಗಿವೆ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಕಟಿಸಿರುವ ಮಂಟೋ ಜೀವನ ಕಥೆಯ ಇಂಗ್ಲಿಷ ಅವತರಣಿಕೆಯನ್ನು ಕೆ.ಹೆಚ್.ಶ್ರೀನಿವಾಸ ಕನ್ನಡಕ್ಕೆ ಅನುವಾದಿಸಿರುವರು. ಕನ್ನಡದ ಮಹತ್ವದ ಕಥೆಗಾರ ಫಕೀರ ಮಹಮ್ಮದ್ ಕಟ್ಪಾಡಿ ಅವರು ಅನುವಾದಿಸಿರುವ ಮಂಟೋ ಅವರ ಹಲವು ಕಥೆಗಳನ್ನು ಸಂಕಲನ ರೂಪದಲ್ಲಿ ನವಕರ್ನಾಟಕ ಪ್ರಕಾಶನದವರು ಪ್ರಕಟಿಸಿರುವರು. ಈ ಇಬ್ಬರು ಲೇಖಕರ ಪ್ರಯತ್ನದಿಂದಾಗಿ ಸಾದತ್ ಹಸನ್ ಮಂಟೋ ಅವರಂಥ ಮಹತ್ವದ ಬರಹಗಾರ ಕನ್ನಡದ ಓದುಗರ ಅರಿವಿನ ವ್ಯಾಪ್ತಿಗೆ ದಕ್ಕುವಂತಾಯಿತು.

        ಸಾದತ್ ಹಸನ್ ಮಂಟೋ ಬದುಕಿದ್ದದ್ದು ಕೇವಲ 43 ವರ್ಷಗಳು. ಮುಂಬಯಿಯಲ್ಲಿ ಚಿತ್ರಕಥೆ ಮತ್ತು ಸಂಭಾಷಣೆಕಾರರಾಗಿ ಹಿಂದಿ ಸಿನಿಮಾರಂಗದಲ್ಲಿ ಉತ್ತುಂಗದಲ್ಲಿದ್ದ ಸಂದರ್ಭದಲ್ಲೇ ದೇಶ ವಿಭಜನೆಯ ಬಿಸಿ ತಟ್ಟಿತು. ಪರಿಣಾಮವಾಗಿ ಮಂಟೋ ಮುಂಬಯಿ ತೊರೆದು ಪಾಕಿಸ್ತಾನಕ್ಕೆ ವಲಸೆ ಹೋಗಿ ಲಾಹೋರಿನಲ್ಲಿ ನೆಲೆಸಬೇಕಾಯಿತು. ತೀರ ಧಾರ್ಮಿಕ ನೆಲೆಯ ಪಾಕಿಸ್ತಾನದಲ್ಲಿ ಮಂಟೋ ಅವರ ಕಥೆಗಳು ಧರ್ಮಾಂಧರ ಟೀಕೆಗಳಿಗೆ ಗುರಿಯಾದವು. ಒಬ್ಬ ಮಹತ್ವದ ಬರಹಗಾರನಿಗೆ ತನ್ನ ಜೀವಿತಾವಧಿಯಲ್ಲಿ ದೊರೆಯಬೇಕಿದ್ದ ಗೌರವ-ಮನ್ನಣೆ ದೊರೆಯಲಿಲ್ಲ. ವೈಯಕ್ತಿಕ ಬದುಕಿನಲ್ಲೂ ಹಲವು ಸಮಸ್ಯೆಗಳು ಮಂಟೋ ಅವರನ್ನು ಹಣ್ಣು ಮಾಡಿದವು. ಒಂದೆಡೆ ಸಾಹಿತ್ಯ ಲೋಕ ಮಂಟೋ ಅವರ ಬರವಣಿಗೆಯನ್ನು ಕ್ರೂರವಾಗಿ ವಿಮರ್ಶಿಸುತ್ತ ಗೇಲಿ ಮಾಡಿದರೆ ಇನ್ನೊಂದೆಡೆ ವೈಯಕ್ತಿಕ ಬದುಕಿನ ನೋವುಗಳು ಅವರನ್ನು ಜರ್ಜರಿತಗೊಳಿಸಿದವು. ಬದುಕಿನ ಕೊನೆಯ ದಿನಗಳಲ್ಲಿ ಆರೋಗ್ಯ ತೀರ ಹದಗೆಟ್ಟು 1955 ರಲ್ಲಿ ಮಂಟೋ ನಿಧನರಾದಾಗ ಅವರಿಗೆ ಆಗ ಕೇವಲ 43 ವರ್ಷ ವಯಸ್ಸು. ಪಾಕಿಸ್ತಾನದ ನೆಲದಲ್ಲಿ ಅವರು ಬದುಕಿದ್ದದ್ದು ಕೇವಲ ಏಳು ವರ್ಷಗಳು ಮಾತ್ರ. ತಮ್ಮ ಬದುಕಿನ ಮೊದಲ ಮೂವತ್ತೈದು ವರ್ಷಗಳನ್ನು ಮಂಟೋ ಕಳೆದದ್ದು ಪಂಜಾಬ್ ಮತ್ತು ಮುಂಬಯಿಯಲ್ಲಿ. ವೃತ್ತಿಬದುಕನ್ನು ಕಟ್ಟಿಕೊಟ್ಟ ಮುಂಬಯಿ ಅವರ ಸಾಹಿತ್ಯ ಕೃಷಿಗೂ ನೀರೆರೆಯಿತು. ಈ ಕಾರಣಕ್ಕಾಗಿಯೇ  ಮಂಟೋ ಪಾಕಿಸ್ತಾನದಲ್ಲಿ ನೆಲೆನಿಂತರೂ ‘ನಾನು ಮೂಲತ: ಮುಂಬಯಿಯವನೇ ಆಗಿದ್ದೇನೆ’ ಎನ್ನುತ್ತಿದ್ದರು.

        1947 ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಗುವುದರ ಜೊತೆಗೆ ದೇಶವಿಭಜನೆ ಕೂಡ ನಡೆದು ಹೋಯಿತು. ಒಂದೇ ನೆಲದಲ್ಲಿ ವಾಸಿಸುತ್ತಿದ್ದ ಜನರು ಹಿಂದುಸ್ತಾನ ಮತ್ತು ಪಾಕಿಸ್ತಾನ ಎನ್ನುವ ಎರಡು ದೇಶಗಳ ನಡುವೆ ಹಂಚಿ ಹೋದರು. ಇತಿಹಾಸಕಾರರು ಈ ಘಟನೆಯನ್ನು ನೆಲದೊಂದಿಗೆ ಜನರನ್ನೂ ಹಂಚಿಕೊಂಡ ಇತಿಹಾಸ ಕಂಡು ಕೇಳರಿಯದ ವೈಚಿತ್ರಗಳಲ್ಲೊಂದು ಎಂದು ಉಲ್ಲೇಖಿಸಿರುವರು. ದೇಶ ವಿಭಜನೆ ಲಕ್ಷಾಂತರ ಜನರನ್ನು ಬಲಿ ತೆಗೆದುಕೊಂಡಿತು. ವೃದ್ಧರು, ಹಸುಳೆಗಳು, ಮಹಿಳೆಯರೆನ್ನದೆ ಎಲ್ಲ ವಯೋಮಾನದವರು ಧರ್ಮಾಂಧರ ಕಾಕದೃಷ್ಟಿಗೆ ಬಿದ್ದು ಜೀವಕಳೆದುಕೊಂಡರು. ಸಾದತ್ ಹಸನ್ ಮಂಟೋ ಅವರ ಕಥೆಗಳು ಆ ದಿನಗಳ ವಾಸ್ತವ ಚಿತ್ರಣವನ್ನು ತುಂಬ ಮನೋಜ್ಞವಾಗಿ ಕಟ್ಟಿಕೊಡುತ್ತವೆ. ಇತಿಹಾಸದ ಘಟನೆಗೆ ಸಾಕ್ಷಿಯಾದ ಮಂಟೋ ದೇಶ ವಿಭಜನೆಯ ಕರಾಳ ಕಥೆಯನ್ನೇ ಬರವಣಿಗೆಯಾಗಿಸುತ್ತಾರೆ. ದೇಶ ವಿಭಜನೆಯ ಕರಾಳ ಘಟನೆಗಳನ್ನಾಧರಿಸಿ ಕಥೆಗಳನ್ನು ಬರೆಯುವಾಗ ಮಂಟೋ ಅವರಲ್ಲಿ ಒಂದು ಪ್ರಾಮಾಣಿಕತೆಯ ನೋಟವಿತ್ತು. ಈ ಕಾರಣದಿಂದ ಅವರ ಕಥೆಗಳು ಒಂದು ಧರ್ಮದ ಪರ ನಿಲ್ಲುವುದಿಲ್ಲ. ಅವರ ಕಥೆಗಳಲ್ಲಿ ಎರಡೂ ಧರ್ಮದವರು ಕ್ರೂರವಾಗಿ ಚಿತ್ರಿತವಾದಂತೆ ದಯೆ, ಅನುಕಂಪ, ಕಾರುಣ್ಯವುಳ್ಳ ವ್ಯಕ್ತಿಗಳಾಗಿಯೂ ಕಾಣಸಿಗುತ್ತಾರೆ. ‘ದೇಶವಿಭಜನೆಯ ಚಿತ್ರಣವನ್ನು ನೀಡುವಾಗ ನನಗೆ ಜನ ಏನು ಮಾಡುತ್ತಾರೆ ಎನ್ನುವುದು ಮುಖ್ಯವೇ ಹೊರತು ಯಾವ ಧರ್ಮಕ್ಕೆ, ಸಂಪ್ರದಾಯಕ್ಕೆ ಸೇರಿದವರೆನ್ನುವುದು ಮುಖ್ಯವಲ್ಲ’ ಎನ್ನುತ್ತಾರೆ ಮಂಟೋ. ಬರಹಗಾರನ ಈ ಮನೋಭಾವದಿಂದಲೇ ಮಂಟೋ ಅವರ ಕಥೆಗಳು ಭಾಷೆ, ಪ್ರದೇಶ ಮತ್ತು ಕಾಲವನ್ನು ಮೀರಿ ಬೆಳೆದು ನಮ್ಮೆಲ್ಲರ ಕಥೆಗಳಾಗುತ್ತವೆ. 

         ತೋಬಾ ತೇಕ್ ಸಿಂಗ್ ಎನ್ನುವ ಕಥೆ ಸಾದತ್ ಹಸನ್ ಮಂಟೋ ಅವರ ದೇಶ ವಿಭಜನೆಯ ಕಥೆಗಳಲ್ಲೆ ತುಂಬ ಮಹತ್ವದ ಕಥೆಯಿದು. ವಿಭಜನೆಯ ಎರಡು ವರ್ಷಗಳ ನಂತರ ಭಾರತ ಮತ್ತು ಪಾಕಿಸ್ತಾನ ಸರ್ಕಾರಗಳು ತಮ್ಮ ತಮ್ಮ ದೇಶದ ಹುಚ್ಚಾಸ್ಪತ್ರೆಗಳಲ್ಲಿದ್ದ ಹುಚ್ಚರನ್ನು ವಿನಿಮಯ ಮಾಡಿಕೊಳ್ಳಲು ಯೋಜನೆ ರೂಪಿಸುತ್ತವೆ. ಅಂದರೆ ಭಾರತದ ಹುಚ್ಚಾಸ್ಪತ್ರೆಗಳಲ್ಲಿದ್ದ ಮುಸ್ಲಿಂ ಹುಚ್ಚರನ್ನು ಪಾಕಿಸ್ತಾನಕ್ಕೂ ಮತ್ತು ಪಾಕಿಸ್ತಾನದ ಹುಚ್ಚಾಸ್ಪತ್ರೆಗಳಲ್ಲಿದ್ದ ಹಿಂದು-ಸಿಖ್ ಹುಚ್ಚರನ್ನು ಭಾರತಕ್ಕೂ ವರ್ಗಾಯಿಸುವ ಯೋಜನೆ ಅದು. ಪಾಕಿಸ್ತಾನದ ಹುಚ್ಚಾಸ್ಪತ್ರೆಯಲ್ಲಿ ಬಿಷನ್ ಸಿಂಗ್ ಎನ್ನುವ ಹುಚ್ಚನಿದ್ದು ಅವನು ತೋಬಾ ತೇಕ್ ಸಿಂಗ್ ಎನ್ನುವ ಹಳ್ಳಿಯವನು. ಬಿಷನ್ ಸಿಂಗನಿಗೆ ಪಾಕಿಸ್ತಾನ, ಹಿಂದುಸ್ತಾನಗಳು ಮುಖ್ಯವಲ್ಲ. ಅವನಿಗೆ ತನ್ನ ಊರು ತೋಬಾ ತೇಕ್ ಸಿಂಗ್‍ಗೆ ಹೋಗಬೇಕಿದೆ. ಆಸ್ಪತ್ರೆಗೆ ಬಂದವರಿಗೆಲ್ಲ ಅವನು ಕೇಳುವುದು ಒಂದೇ ಪ್ರಶ್ನೆ ‘ತೋಬಾ ತೇಕ್ ಸಿಂಗ್ ಯಾವ ದೇಶದಲ್ಲಿದೆ’ ಎಂದು. ಹಿಂದು-ಸಿಖ್ ಹುಚ್ಚರನ್ನು ಭಾರತಕ್ಕೆ ಸ್ಥಳಾಂತರಿಸಲು ಗಡಿರೇಖೆಯ ಬಳಿ ಕರೆತಂದಾಗ ಅಲ್ಲಿದ್ದ ಅಧಿಕಾರಿಯನ್ನು ತೋಬಾ ತೇಕ್ ಸಿಂಗ್ ಎಲ್ಲಿದೆ ಎಂದು ಬಿಷನ್ ಸಿಂಗ್ ಕೇಳುತ್ತಾನೆ. ಪಾಕಿಸ್ತಾನದಲ್ಲಿದೆ ಎಂದು ಅಧಿಕಾರಿ ನುಡಿಯುತ್ತಿದ್ದಂತೆ ನನ್ನೂರಿಗೆ ಕಳುಹಿಸಿ ಎಂದು ಹಟ ಹಿಡಿಯುವ ಬಿಷನ್ ಸಿಂಗ್ ಅವರಿಂದ ತಪ್ಪಿಸಿಕೊಂಡು ಎರಡೂ ದೇಶಗಳ ನಡುವಣ ಗಡಿರೇಖೆಯ ಮೇಲೆ ಬಿದ್ದು ಪ್ರಾಣ ಬಿಡುತ್ತಾನೆ. ದೇಶದ ಕಲ್ಪನೆಯೇ  ಇಲ್ಲಿ ತೀರ ಅವಾಸ್ತವಿಕ ಎನಿಸಿ ಬಿಡುತ್ತದೆ.

        ದೇಶ ವಿಭಜನೆಯಾಗಿ ಒಂದು ನೆಲದಿಂದ ಇನ್ನೊಂದು ನೆಲಕ್ಕೆ ವಲಸೆ ಬಂದರೂ ಕ್ರೂರ ಬದುಕು ತನ್ನ ಕರಾಳ ಹಸ್ತವನ್ನು ಚಾಚಿ ನಸೀಮ್ ಅಖ್ತರಳನ್ನು ಅಸಹಾಯಕಳನ್ನಾಗಿಸುವ ಕಥೆ ‘ದೆಹಲಿ ಹುಡುಗಿ’. ದೆಹಲಿಯ ಕೆಂಪು ದೀಪದ ಓಣಿಯಲ್ಲಿ ನೃತ್ಯಗಾತಿಯಾಗಿ ಬದುಕುತ್ತಿರುವ ನಸೀಮ್ ಅಖ್ತರಳಿಗೂ ದೇಶ ವಿಭಜನೆಯ ಬಿಸಿ ತಟ್ಟಿದೆ. ಹಲವು ಅಮಾಯಕರ ಕೊಲೆಗಳನ್ನು ನೋಡಿದವಳಿಗೆ ಇನ್ನು ಈ ನೆಲದಲ್ಲಿ ತನ ಬದುಕು ಕಷ್ಟ ಸಾಧ್ಯವೆನಿಸಿ ತಾಯಿಗೂ ಹೇಳದೆ ಪಾಕಿಸ್ತಾನಕ್ಕೆ ವಲಸೆ ಬಂದು ಲಾಹೋರಿನಲ್ಲಿ ನೆಲೆಸುತ್ತಾಳೆ. ಹೀಗೆ ವಲಸೆ ಬಂದವಳಿಗೆ ಹಿಂದಿನ ಬದುಕಿಗೆ ಮರಳುವ ಆಸೆಯಿಲ್ಲ. ಹೊಸ ನೆಲದಲ್ಲಿ ಹೊಸ ಬದುಕನ್ನು ಕಟ್ಟಿಕೊಳ್ಳಬೇಕೆನ್ನುವ ಹಂಬಲ ಅವಳದು. ನೆಲ ಬೇರೆಯಾದರೇನಂತೆ ಮನುಷ್ಯ ಸ್ವಭಾವ ಒಂದೇ. ಲಾಹೋರಿನಲ್ಲಿ ಜನ್ನತಿ ಎನ್ನುವ ಮುದುಕಿಯ ಮೋಸಕ್ಕೆ ಬಲಿಯಾಗುವ ನಸೀಮ್ ಅಖ್ತರ್ ವೈಶ್ಯಾಗೃಹವನ್ನು ಸೇರುತ್ತಾಳೆ. ಹೊಸ ಬದುಕನ್ನು ಅರಸಿ ಬಂದವಳಿಗೆ ಕ್ರೂರ ವಿಧಿ ಮತ್ತದೇ ನರಕಕ್ಕೆ ದೂಡುತ್ತದೆ.

        ‘ವಿಷದ ಬೆಳೆ’ಯಲ್ಲಿ ಹಲವು ವರ್ಷಗಳಿಂದ ಸೌಹಾರ್ದತೆಯಿಂದ ಬದುಕುತ್ತಿದ್ದ ಎರಡು ಕುಟುಂಬಗಳು ಪರಸ್ಪರ ದ್ವೇಷದಿಂದ ನಾಶವಾಗುವ ಕಥೆಯಿದೆ. ಕಾಸಿಮನ ತೊಡೆಗೆ ಗುಂಡಿನ ಗಾಯವಾಗಿದೆ. ಹೆಂಡತಿಯ ಶವ ಮನೆಯ ಅಂಗಳದಲ್ಲಿದ್ದರೆ ಕೋಣೆಯಲ್ಲಿ ಮುದ್ದಿನ ಮಗಳು ಷರೀಫನ್ ದುರುಳರ ದ್ವೇಷಕ್ಕೆ ಬಲಿಯಾಗಿ ಸತ್ತು ನಗ್ನವಾಗಿ ಮಲಗಿದ್ದಳು. ಹೆಂಡತಿ ಮತ್ತು ಮಗಳ ಸಾವು ಕಾಸಿಮನಲ್ಲಿ ದ್ವೇಷದ ಅಟ್ಟಹಾಸಕ್ಕೆ ಕಾರಣವಾಗಿದೆ. ಪ್ರತಿಕಾರಕ್ಕಾಗಿ ಅವನು ತಹತಹಿಸುತ್ತಿದ್ದಾನೆ. ಕೊಡಲಿ ಹಿಡು ಹೊರಗೆ ಹೋದವನ ಆಕ್ರೋಶಕ್ಕೆ ನಾಲ್ಕಾರು ತಲೆಗಳು ಉರುಳುತ್ತವೆ. ಮುಚ್ಚಿದ ಮನೆಯ ಬಾಗಿಲನ್ನು ಮುರಿದು ಒಳಗೆ ಹೋದವನ ದೃಷ್ಟಿಗೆ ಹದಿನೈದರ ಹರೆಯದ ಬಾಲೆ ಕಾಣಿಸುತ್ತಾಳೆ. ಹಿಂಸ್ರಪಶುವಿನಂತೆ ಅವಳ ಮೇಲೆ ಹಾರಿ ನೆಲಕ್ಕೆ ಕೆಡವಿ ಬಟ್ಟೆಯನ್ನು ಹರಿಯತೊಡಗುತ್ತಾನೆ. ಮುಗ್ಧ ಹುಡುಗಿ ಪ್ರಜ್ಞಾಹೀನಳಾಗುತ್ತಾಳೆ. ಒಂದು ಕ್ಷಣ ತನ್ನ ಮುದ್ದಿನ ಮಗಳು ಶವವಾಗಿ ತನ್ನ ಮುಂದೆ ಮಲಗಿದಂತೆ ಭಾಸವಾಗಿ ‘ಷರೀಫನ್’ ಎಂದು ನಡಗುವ ಸ್ವರದಿಂದ ಕಾಸಿಮ್ ಚೀರುತ್ತಾನೆ.

      ಮಂಟೋ ಅವರ ಕೆಲವು ಕಥೆಗಳಂತೂ ಕೇವಲ ಒಂದೆರಡು ವಾಕ್ಯಗಳಲ್ಲೇ ಕೊನೆಗೊಳ್ಳುತ್ತವೆ. ಹೀಗಾಗಿ ಈ ಅತಿ ಸಣ್ಣ ಕಥೆಗಳಲ್ಲಿ ಪಾತ್ರಗಳ ಹೆಸರು, ಧರ್ಮ, ಜಾತಿ, ಸಂಪ್ರದಾಯಗಳೆಲ್ಲ ಅಪ್ರಸ್ತುತವಾಗಿ ಸಂದರ್ಭ, ಸನ್ನಿವೇಶಗಳು ಮಾತ್ರ ಪ್ರಸ್ತುತವಾಗುತ್ತವೆ.

ಮಂಟೋ ಅವರ ಕೆಲವು ಸಣ್ಣ ಕಥೆಗಳು ಹೀಗಿವೆ,

1. ಮಿಷ್ಟೀಕು:

ಹೊಟ್ಟೆಗೆ ಇರಿದ ಚೂರಿ ನೇರವಾಗಿ ಕೆಳಗಡೆ ಎಳೆದಾಗ ಪೈಜಾಮದ ಲಾಡಿಯನ್ನು ಕತ್ತರಿಸಿ ಪೈಜಾಮ ಮತ್ತು ಒಳಚಡ್ಡಿ ಕಳಚಿ ಕೆಳಗೆ ಬಿದ್ದವು.
ಇರಿಯುತ್ತಿದ್ದವನು ಅದನ್ನು ಕಂಡು ಚೀರಿದ ‘ಛೇ ಎಂಥ ಮಿಷ್ಟೀಕಾಯ್ತು’.

2. ವಿಶ್ರಾಂತಿ:

‘ಅವನಿನ್ನೂ ಸತ್ತಿಲ್ಲ. ಇನ್ನೂ ಜೀವ ಇದ್ದ ಹಾಗಿದೆ.
‘ಸ್ವಲ್ಪ ಸುಮ್ನಿರಯ್ಯ. ನನಗೆ ಸುಸ್ತಾಗಿ ಬಿಟ್ತು. ನನಗಿನ್ನು ಸಾಧ್ಯವಿಲ್ಲ. ಸ್ವಲ್ಪ ವಿಶ್ರಾಂತಿ ಬೇಕು’.

3. ಅನ್ಯಾಯ:

‘ನೋಡಯ್ಯ ಇದು ನ್ಯಾಯವಲ್ಲ. ನೀನು ನನಗೆ ಕಲಬೆರಕೆ ಮಾಡಿದ ಪೆಟ್ರೋಲನ್ನು ದುಬಾರಿ ಬೆಲೆಗೆ ಮಾರಾಟ ಮಾಡಿದೆ. ಈ ಕೆಟ್ಟ ಪೆಟ್ರೋಲಿನಿಂದ ಒಂದು ಅಂಗಡಿಯನ್ನೂ ಸುಡಲಾಗಲಿಲ್ಲ’.

          ಒಟ್ಟಾರೆ ಸಾದತ್ ಹಸನ್ ಮಂಟೋ ದೇಶ ವಿಭಜನೆಯ ಸಂದರ್ಭದ  ಘೋರ ಕೃತ್ಯಗಳನ್ನು ತಮ್ಮ ಕಥೆಗಳ ಮೂಲಕ ಓದುಗರಿಗೆ ಮುಟ್ಟಿಸುತ್ತಾರೆ. ಯಾವುದೇ ಧರ್ಮ ಅಥವಾ ಸಂಪ್ರದಾಯವನ್ನು ಗೇಲಿ ಮಾಡುವುದು, ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವುದು ಮಂಟೋ ಅವರ ಕಥೆಗಳ ಉದ್ದೇಶವಲ್ಲ. ಅವರು ಇಡೀ ದೇಶವಿಭಜನೆಯ ಸಂದರ್ಭದಲ್ಲಿನ ಘಟನೆಗಳನ್ನು ನೋಡುವುದು ಮಾನವೀಯ ಪ್ರಜ್ಞೆಯ ಹಿನ್ನೆಲೆಯಲ್ಲಿ. ಅದಕ್ಕೆಂದೇ ‘ಧರ್ಮ, ಸಂಪ್ರದಾಯ ನನ್ನ ಕಥೆಗಳಲ್ಲಿ ಗೌಣವಾಗಿ ಕಾಣುತ್ತವೆ. ಆ ಹೀನ ಕೃತ್ಯಗಳಲ್ಲಿ ಭಾಗಿಗಳಾಗಿದ್ದ ಜನರಷ್ಟೇ ನನಗೆ ಮುಖ್ಯ’ ಎನ್ನುತ್ತಾರೆ ಮಂಟೋ. 
   
            ‘ಕೋಮುವಾದಿಗಳಿಗೆ, ಮೂಲಭೂತವಾದಿಗಳಿಗೆ, ಉಗ್ರಗಾಮಿಗಳಿಗೆ ಹಿಂಸೆಯೇ  ಗುರಿ. ಅದೇ ಅವರ ಮಾರ್ಗ ಕೂಡ. ಮನುಷ್ಯ ತನ್ನ ವಿವೇಕವನ್ನು ಕಳೆದುಕೊಂಡಾಗ ನರಕ ಇಲ್ಲೇ ಸೃಷ್ಟಿಯಾಗುತ್ತದೆ. ಎಷ್ಟೋ ವರ್ಷಗಳ ಹಿಂದೆ ಮಂಟೋ ಬರೆದ ಕಥೆಗಳು ಸಮಕಾಲೀನ ಸಂದರ್ಭಕ್ಕೆ ಹಿಡಿದ ಕನ್ನಡಿಗಳೂ ಆಗಿವೆ’ ಸಾದತ್ ಹಸನ್ ಮಂಟೋ ಅವರ ಕಥೆಗಳನ್ನು ಕುರಿತು ವಿಮರ್ಶಕ ಟಿ.ಪಿ.ಅಶೋಕ ಅವರು ಹೇಳುವ ಮಾತಿದು.

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ