‘ಶುಡ್ ಐ ಗಿವ್ ಕ್ಲ್ಯಾರಿಫಿಕೇಷನ್ ಟು ದೀಜ್ ಪೀಪಲ್ ಮಿ.ರವಿ. ನಿಮಗೆ ಅನಿಸುತ್ತಾ’ ಪ್ರೊಫೆಸರ್ ರಾಘವ ಧ್ವನಿಯಲ್ಲಿ ಸಿಟ್ಟು, ಆಕ್ರೋಶ ನೋಡಿ ಒಂದು ಕ್ಷಣ ಅವರ ಪಾಡಿಗೆ ಅವರನ್ನು ಬಿಡುವುದು ಒಳಿತೆಂದು ಅನ್ನಿಸಿ ಏನೂ ಮಾತನಾಡದೆ ಸುಮ್ಮನೆ ಕುಳಿತೆ. ‘ಮಿ.ರವಿ ಇವರನ್ನೆಲ್ಲ ನೋಡ್ತಿದ್ರೆ ನನಗೆ ಎಂದೋ ಓದಿದ ಕಥೆಯೊಂದು ನೆನಪಿಗೆ ಬರ್ತಿದೆ. ಮೂರು ಜನ ಸ್ನೇಹಿತರು ಸಾಯಂಕಾಲ ತಿರುಗಾಡಲು ಊರ ಹೊರಗಿನ ಬೆಟ್ಟಕ್ಕೆ ಹೋಗ್ತಾರೆ. ಅಲ್ಲೊಬ್ಬ ಸುಮ್ನೆ ನಿಂತಿದ್ದಾನೆ. ಅವನನ್ನು ನೋಡಿ ಈ ಸ್ನೇಹಿತರು ಆತ ನಿಂತಿರುವುದೇಕೆಂದು ತಮ್ಮ ತಮ್ಮ ನಿರ್ಧಾರಕ್ಕೆ ಬರ್ತಾರೆ. ಒಬ್ಬ ಆ ಮನುಷ್ಯ ಕಳೆದುಹೋದ ತನ್ನ ಹಸು ಹುಡ್ಕೊದಕ್ಕೆ ಬಂದಿದ್ದಾನೆ ಅಂದರೆ ಇನ್ನೊಬ್ಬ ಇಲ್ಲ ಆತ ತನ್ನ ಪ್ರೇಯಸಿಗಾಗಿ ದಾರಿ ಕಾಯ್ತಿದ್ದಾನೆ ಅಂತಾನೆ. ಮೂರನೆಯವನು ಪ್ರಕೃತಿಯ ಸೌಂದರ್ಯ ನೋಡ್ತಿದ್ದಾನೆ ಎಂದು ಹೇಳ್ತಾನೆ. ಕೊನೆಗೆ ಮೂರೂ ಜನ ಅವನ ಹತ್ತಿರ ಹೋಗಿ ಆತನ ಬಗ್ಗೆ ತಾವು ತಾವು ನಿರ್ಧರಿಸಿದ್ದನ್ನ ಹೇಳ್ತಾರೆ. ಆಗ ಆ ಮನುಷ್ಯ ನಾನು ಇಲ್ಲಿ ಸುಮ್ನೆ ನಿಂತಿದ್ದೀನಿ ಅಂತಾನೆ. ನೋಡಿ ನಾವುಗಳೆಲ್ಲ ನಮ್ಮ ನಮ್ಮ ವಿವೇಚನೆಯಲ್ಲೇ ಯೋಚಿಸಿ ನಿರ್ಧಾರಕ್ಕೆ ಬರ್ತೀವಿ. ವಿಶ್ಲೇಷಣೆಯ ಶಕ್ತಿನೇ ಇಲ್ಲ.’ ಪ್ರೊಫೆಸರ್ ಧ್ವನಿಯಲ್ಲಿ ವ್ಯಗ್ರತೆಯಿತ್ತು. ರಾಘವ ಅವರಲ್ಲಿ ಕೋಪ ಎರುತ್ತಿದ್ದಂತೆ ಎದುರುಗಡೆ ಟೇಬಲ್ ಮೇಲಿಟ್ಟ ಕಪ್ನಲ್ಲಿದ್ದ ಚಹಾ ತಣ್ಣಗಾಗುತ್ತಿತ್ತು. ಮಾತನಾಡುವ ಲಹರಿಯಲ್ಲಿದ್ದ ಅವರು ಇನ್ನೂ ಚಹಾ ಕಪ್ನ್ನು ಕೈಗೆತ್ತಿಕೊಂಡಿಲ್ಲವಾದ್ದರಿಂದ ಅವರನ್ನು ಮಾತಿಗೆ ಬಿಟ್ಟು ನಾನು ಚಹಾ ಕುಡಿಯುವುದು ಸೌಜನ್ಯವಲ್ಲವೆಂದು ಕೈಕಟ್ಟಿ ಕುಳಿತು ರಾಘವ ಅವರ ಮಾತುಗಳನ್ನು ಆಲಿಸುತ್ತಿದ್ದೆ.
ಇವತ್ತಿನ ರಾಘವ ಅವರ ಇಷ್ಟೆಲ್ಲ ವಿಶ್ಲೇಷಣೆಗೆ ಕಾರಣವಾದದ್ದು ನಾನು ಸ್ಟಾಪ್ ರೂಮಿನಲ್ಲಿ ಯಾರೂ ಇಲ್ಲದ ವೇಳೆ ಕೇಳಿದ ಒಂದೇ ಒಂದು ಪ್ರಶ್ನೆ. ಬಹಳ ದಿನಗಳಿಂದ ಮನಸ್ಸಿನಲ್ಲಿ ಕೊರೆಯುತ್ತಿದ್ದ ವಿಷಯವೊಂದು ತಡೆಹಿಡಿದಷ್ಟೂ ನನ್ನನ್ನು ವ್ಯಾಕುಲಗೊಳಿಸುತ್ತಿದ್ದುದ್ದರಿಂದ ಈ ದಿನ ಪ್ರೊಫೆಸರ್ ಬೇಕಾದರೆ ನನ್ನನ್ನು ಬೈಯಲಿ ಯಾವುದಕ್ಕೂ ಕೇಳಿಯೇ ಬಿಡಬೇಕೆಂದು ನಿರ್ಧರಿಸಿಕೊಂಡೇ ಮನೆ ಬಿಟ್ಟಿದ್ದೆ. ಬೆಳಗ್ಗೆ ಡಿಪಾರ್ಟಮೆಂಟ್ನಲ್ಲಿ ಇತರ ಸಹೊದ್ಯೋಗಿಗಳು ಕ್ಲಾಸಿಗೆ ಹೋಗಿದ್ದರಿಂದ ಪ್ರೊಫೆಸರ್ ರಾಘವ ಒಬ್ಬರೇ ತಮ್ಮ ಸೀಟಿನಲ್ಲಿ ಇಂಟರ್ನ್ಯಾಷನಲ್ ಜರ್ನಲ್ಗೆ ಕಳುಹಿಸಿಬೇಕಾದ ಲೇಖನದ ಮುದ್ರಿತ ಪ್ರತಿಯನ್ನು ತಿದ್ದುತ್ತ ಕುಳಿತಿದ್ದರು. ಅಷ್ಟರಲ್ಲಿ ಡಿಪಾರ್ಟಮೆಂಟ್ ಪ್ಯೂನ್ ರಂಗಪ್ಪ ಎರಡು ಕಪ್ಗಳಲ್ಲಿ ಚಹಾ ತಂದು ರಾಘವ ಅವರ ಟೇಬಲ್ ಮೇಲಿಟ್ಟು ಹೋದ. ಬೆಳಗ್ಗೆ ಕಾಲೇಜಿಗೆ ಬಂದ ತಕ್ಷಣ ಚಹಾ ಕುಡಿಯುವುದು ರಾಘವ ಅವರ ನಿತ್ಯದ ದಿನಚರಿಯಾಗಿತ್ತು. ಆ ಸಂದರ್ಭ ಬೇರೆ ಯಾರಾದರೂ ಸ್ಟಾಪ್ ರೂಮಿನಲ್ಲಿದ್ದರೆ ರಾಘವ ಅವರೊಂದಿಗೆ ಅಲ್ಲಿದ್ದವರಿಗೂ ಚಹಾ ಕುಡಿಯಲು ಆಹ್ವಾನವಿರುತ್ತಿತ್ತು. ಇವತ್ತು ನನಗೂ ಬೆಳಗ್ಗೆ ಕ್ಲಾಸ್ ಇಲ್ಲದಿದ್ದದ್ದು ಮತ್ತು ರಾಘವ ಅವರೊಂದಿಗೆ ಮಾತಿಗೆ ಇಳಿಯಬೇಕೆಂದು ನಿರ್ಧರಿಸುತ್ತಿರುವ ಹೊತ್ತಲ್ಲೇ ರಂಗಪ್ಪ ಚಹಾದ ಕಪ್ಗಳನ್ನು ತಂದು ಟೇಬಲ್ ಮೇಲಿಟ್ಟು ಹೋಗಿದ್ದು ಮಾತಿಗೊಂದು ಸೂಕ್ತ ಸನ್ನಿವೇಶವನ್ನು ಒದಗಿಸಿತ್ತು. ರಾಘವ ಅವರ ಟೇಬಲ್ ಎದುರಿನ ಖುರ್ಚಿಯಲ್ಲಿ ಕುಳಿತು ಅವರು ತಿದ್ದುತ್ತಿರುವ ಲೇಖನದಿಂದ ತಲೆ ಎತ್ತಿ ನೋಡುವುದನ್ನೇ ಕಾಯುತ್ತ ಮನಸ್ಸಿನಲ್ಲೇ ಕೇಳಬೇಕಾದ ಪ್ರಶ್ನೆಯನ್ನು ಉರು ಹೊಡೆಯುತ್ತಿದ್ದೆ. ರಾಘವ ಕೈಯಲ್ಲಿದ್ದ ಲೇಖನದ ಪ್ರತಿಯನ್ನು ಟೇಬಲ್ ಮೇಲಿಟ್ಟು ಲೋಟದಲ್ಲಿದ್ದ ನೀರನ್ನು ಕುಡಿದು ‘ಮಿ.ರವಿ ಚಹಾ ತೆಗೆದುಕೊಳ್ಳಿ ತಣ್ಣಗಾಗುತ್ತೆ’ ಎಂದು ಉಪಚರಿಸಿದರು. ‘ಸರ್ ಒಂದು ಮಾತು ಬಹಳ ದಿನಗಳಿಂದ ನಿಮಗೆ ಕೇಳಬೇಕು ಅಂತ. ಆದರೆ ಹೇಗೆ ಕೇಳೋದು ಗೊತ್ತಾಗ್ತಿಲ್ಲ’ ಕೇಳಬೇಕಾದ ವಿಷಯ ಸಂಕೋಚದಿಂದ ಹೊರಬರದೆ ಶಬ್ದಗಳಿಗಾಗಿ ತಡಕಾಡಿದೆ. ರಾಘವ ನನ್ನೊಮ್ಮೆ ಪ್ರಶ್ನಾರ್ಥಕವಾಗಿ ನೋಡಿ ಕೈಗೆತ್ತಿಕೊಂಡಿದ್ದ ಚಹಾದ ಕಪ್ಪನ್ನು ಮತ್ತೆ ಟೇಬಲ್ ಮೇಲಿಟ್ಟು ತಮ್ಮ ಎಂದಿನ ಗಂಭೀರ ಮುಖಮುದ್ರೆಯಿಂದ ‘ರವಿ ಕೇಳಲೇ ಬೇಕು ಅಂತ ನಿರ್ಧಾರ ಮಾಡಿದ್ದರೆ ಏನು ಅಂತ ಕೇಳಿ. ಸುಮ್ನೆ ಮನಸ್ಸಿನಲ್ಲಿಟ್ಟುಕೊಂಡು ಅದೇ ವಿಷಯ ಕುರಿತು ಚಿಂತಿಸ್ತಿದ್ದರೆ ಬೇರೆ ಯಾವ ಕೆಲಸದಲ್ಲೂ ತನ್ಮಯತೆ ಸಿಗೊಲ್ಲ’ ನನ್ನನ್ನು ಕ್ಷಣಕಾಲ ಯೋಚಿಸಲು ಬಿಟ್ಟು ಪ್ರೊಫೆಸರ್ ಕಣ್ಮುಚ್ಚಿ ಕುಳಿತರು. ‘ಅದೇ ಸರ್ ಕಾಲೇಜಿನಲ್ಲಿ ಎಲ್ಲರೂ ನಿಮ್ಮ ಮತ್ತು ಮನಸ್ವಿನಿ ಮೇಡಮ್ ಬಗ್ಗೆ ಏನೇನೋ ಮಾತಾಡ್ತಿದ್ದಾರೆ’ ಅಪ್ರಯತ್ನಪೂರ್ವಕವಾಗಿ ಮಾತು ನನ್ನಿಂದ ಹೊರಬಂತು. ಪ್ರೊಫೆಸರ್ ರಾಘವ ಅವರ ಮುಖ ಸಿಟ್ಟಿನಿಂದ ಕೆಂಪಾಗಿ ಉಸಿರಾಟದ ತೀವ್ರತೆಯಿಂದ ಮೂಗಿನ ಹೊಳ್ಳೆಗಳು ಅಗಲವಾಗಿ ತೆರೆದುಕೊಂಡು ಆ ಕ್ಷಣಕ್ಕೆ ಅವರ ತೀಕ್ಷ್ಣ ನೋಟವನ್ನು ಎದುರಿಸಲಾರದೆ ನಾನು ತಲೆತಗ್ಗಿಸಿದೆ. ‘ಓ.ಕೆ ರವಿ ನಮ್ಮಗಳ ಹಿಂದೆ ಮಾತಾಡ್ತಿರೊ ಸಂಗತಿಗಳು ನನ್ನ ಕಿವಿಗೂ ಮುಟ್ಟಿವೆ. ನಿಮ್ಮ ಪ್ರಶ್ನೆ ಸಹಜ ಕೂಡ ಹೌದು. ಶುಡ್ ಐ ಗಿವ್ ಕ್ಲ್ಯಾರಿಫಿಕೇಷನ್ ಟು ದೀಜ್ ಪೀಪಲ್ ಮಿ.ರವಿ. ನಿಮಗೆ ಅನಿಸುತ್ತಾ’ ರಾಘವ ಅವರ ಧ್ವನಿ ಸಹಜವಾಗಿತ್ತಾದರೂ ಅಲ್ಲಿ ಸಿಟ್ಟು ಆಕ್ರೋಶವಿತ್ತು. ರಾಘವ ತಮ್ಮ ಮಾತಿನ ಕೊನೆಯಲ್ಲಿ ‘ನಾಳೆ ಮನಸ್ವಿನಿ ಅವರ ಪುಸ್ತಕ ಬಿಡುಗಡೆ ಇದೆ. ತಮ್ಮ ತೋಟದ ಮನೆನಲ್ಲಿ ಕಾರ್ಯಕ್ರಮ ಇಟ್ಕೊಂಡು ನನ್ನನ್ನ ಮುಖ್ಯ ಅತಿಥಿಯಾಗಿ ಆಹ್ವಾನಿಸಿದ್ದಾರೆ. ಜೊತೆಗೆ ನೀವೂ ಬನ್ನಿ. ದಾರಿಯಲ್ಲಿ ಮಾತಾಡ್ಕೊಂಡು ಹೋಗೋಣ. ಬೇಕಿದ್ರೆ ನನ್ನ ಮತ್ತು ಮನಸ್ವಿನಿ ವಿಷಯ ಕೂಡ ನಮ್ಮ ಪಯಣದಲ್ಲಿ ಚರ್ಚೆಗೆ ಗ್ರಾಸವಾಗಬಹುದು’ ಎಂದು ನುಡಿದು ತಮಗೆ ಬಿ.ಎ ಫೈನಲ್ ಇಯರ್ ಕ್ಲಾಸಿದೆಯೆಂದು ಸ್ಟಾಪ್ ರೂಮಿನಿಂದ ಹೊರನಡೆದರು. ರಾಘವ ಅವರ ಮುಖದಲ್ಲಿ ತುಂಬಿನಿಂತಿದ್ದ ಅಶಾಂತಿಯನ್ನು ನೋಡಿ ಪ್ರಶ್ನೆ ಕೇಳಿ ತಪ್ಪು ಮಾಡಿದೆನೇನೋ ಎಂದೆನಿಸಿತು. ಟೇಬಲ್ ಮೇಲೆ ಕಪ್ಪುಗಳಲ್ಲಿದ್ದ ಚಹಾ ಆರಿ ತಣ್ಣಗಾಗಿ ಕೆನೆಗಟ್ಟಿತ್ತು.
ಭಾನುವಾರ ಸ್ವಲ್ಪ ತಡವಾಗಿ ಎದ್ದರಾಯ್ತೆಂದು ಇನ್ನು ಮುಸುಕು ಹಾಕಿ ಮಲಗಿದ್ದ ನನಗೆ ರಾಘವ ಅವರ ಫೋನ್ ಕರೆಯಿಂದ ಎಚ್ಚರವಾಯಿತು. ಅದಾಗಲೇ ದೇವರ ಮನೆಯಲ್ಲಿ ಹೆಂಡತಿಯ ವಾತಾಪಿ ಗಣಪತಿ ಶ್ಲೋಕ ಕೇಳಿಸಿ ಗಡಿಯಾರ ನೋಡಿದಾಗ ಗಂಟೆ ಏಳು ತೋರಿಸುತ್ತಿತ್ತು. ಕರೆ ಸ್ವೀಕರಿಸಿದವನಿಗೆ ಆ ಕಡೆಯಿಂದ ‘ಏನು ಮಹಾನುಭಾವರು ನಿದ್ದೆ ಮಾಡುತ್ತ ರಜಾದಿನವನ್ನು ಸದುಪಯೋಗಪಡಿಸಿಕೊಳ್ತಿರುವಂತಿದೆ. ನಿನ್ನೆ ನಾನು ಹೇಳಿದ ವಿಷಯ ನೆನಪಿದೆಯೋ ಹೇಗೆ. ಇನ್ನು ಒಂದು ಗಂಟೆಯಲ್ಲಿ ನನ್ನ ಕಾರು ನಿಮ್ಮ ಮನೆ ಮುಂದಿರುತ್ತೆ. ಗೆಟ್ ಅಪ್ ಬೇಗ ರೆಡಿಯಾಗಿ’ ರಾಘವ ಅವರ ಧ್ವನಿ ಕೇಳಿ ಬಾತ್ ರೂಮಿಗೆ ಓಡಿದೆ. ಸ್ನಾನ ಮಾಡಿ ಬಾತ್ ರೂಮಿನಿಂದ ಹೊರಬರುವಷ್ಟರಲ್ಲಿ ಹೊರಗೆ ಕಾರಿನ ಹಾರ್ನ್ ಕೇಳಿಸಿ ಹೆಂಡತಿಗೆ ಅವರನ್ನು ಸ್ವಾಗತಿಸಲು ಹೇಳಿ ಅವಸರವಸರವಾಗಿ ಬಟ್ಟೆ ಧರಿಸಿ ಹೊರಬಂದಾಗ ರಾಘವ ಹಾಲ್ನಲ್ಲಿ ಕುಳಿತು ಕಾಫಿ ಕುಡಿಯುತ್ತಿದ್ದರು. ‘ಏನಯ್ಯಾ ಸ್ವಲ್ಪಾನೂ ಸಿರಿಯಸ್ನೆಸ್ ಇಲ್ಲ ನೋಡು. ನಿನ್ನೆ ಹೇಳಿದ ವಿಷಯ ಬೆಳಗಾಗುವಷ್ಟರಲ್ಲಿ ಮರೆತು ಬಿಟ್ರೆ ಇನ್ನು ಪಾಠ ಹೇಗೆ ಮಾಡ್ತೀರಿ’ ರಾಘವ ಆಗಾಗ ಇಂಥ ಮಾತುಗಳಿಂದ ನನ್ನನ್ನು ಛೇಡಿಸುತ್ತಿದ್ದುದ್ದರಿಂದ ನಾನಾಗಲಿ ನನ್ನ ಹೆಂಡತಿಯಾಗಲಿ ಅವರ ಮಾತನ್ನು ಸಿರಿಯಸ್ಸಾಗಿ ತೆಗೆದುಕೊಳ್ಳಲಿಲ್ಲ. ‘ನೋಡಮ್ಮ ನಿನ್ನ ಗಂಡನ್ನ ಇವತ್ತೊಂದಿನ ನಿನ್ನಿಂದ ಕಸಿದುಕೊಳ್ತಿದ್ದೀನಿ. ಯಾವುದೇ ಪ್ರಾಬ್ಲಮ್ ಇಲ್ಲಾ ತಾನೆ’ ನನ್ನ ಹೆಂಡತಿಗೆ ಹೇಳಿ ಹೊರನಡೆದ ರಾಘವ ಅವರನ್ನು ನಾನು ಹಿಂಬಾಲಿಸಿದೆ.
ಮನಸ್ವಿನಿ ಅವರ ತೋಟದ ಮನೆ ಇರುವುದು ನಗರದಿಂದ ಸುಮಾರು ಇಪ್ಪತ್ತು ಕಿಲೋ ಮೀಟರ್ ದೂರದ ಹೊರವಲಯದಲ್ಲಿ. ಸಮಾಜಶಾಸ್ತ್ರದ ಪ್ರಾಧ್ಯಾಪಕಿಯಾದರೂ ಸಾಹಿತ್ಯದಲ್ಲಿ ಅಭಿರುಚಿ ಅವರಿಗೆ. ನಾಡಿನ ಹಲವಾರು ಪತ್ರಿಕೆಗಳಲ್ಲಿ ಅವರ ಲೇಖನ, ಕಥೆಗಳು ಪ್ರಕಟವಾಗಿವೆ. ರಾಘವ ಅವರಿಗೂ ಸಾಹಿತ್ಯದಲ್ಲಿ ಆಸಕ್ತಿ ಇರುವುದರಿಂದ ಅವರನ್ನೇ ಇವತ್ತಿನ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಹ್ವಾನಿಸಿ ಸನ್ಮಾನಿಸುವ ಆಸೆ. ರಾಘವ ಕಾರು ಓಡಿಸುತ್ತ ಎಫ್.ಎಮ್ ನಲ್ಲಿ ಬಿತ್ತರವಾಗುತ್ತಿದ್ದ ಹಳೆಯ ಕನ್ನಡ ಹಾಡಿಗೆ ತಮ್ಮ ಧ್ವನಿಗೂಡಿಸುತ್ತಿದ್ದರು. ಡಿಸೆಂಬರ್ ತಿಂಗಳ ಚಳಿಗಾಲದ ಆಹ್ಲಾದಕರ ವಾತಾವರಣದಲ್ಲಿ ರಸ್ತೆಯ ಪಕ್ಕದ ಹೊಲಗಳಲ್ಲಿ ದೃಷ್ಟಿ ಹಾಯುವವರೆಗೆ ತುಂಬಿ ನಿಂತ ಹಸಿರು ಪೈರಿನಿಂದ ವಸುಂಧರೆ ಕಂಗೊಳಿಸುತ್ತಿದ್ದಳು. ‘ನೋಡಿ ರವಿ ಎಲ್ಲವೂ ನಮ್ಮ ನಮ್ಮ ನೋಡುವ ದೃಷ್ಟಿಕೋನವನ್ನು ಅವಲಂಬಿಸಿರುತ್ತೆ. ಅಲ್ಲಿ ನೋಡಿ ದೂರದಲ್ಲಿ ಬೆಟ್ಟ ಕಾಣ್ತಿದೆಯಲ್ಲ ಅದನ್ನು ನಾವು ಯಾವ ಭಾವದಿಂದ ನೋಡ್ತೀವಿ ಆ ಅರ್ಥದಲ್ಲಿ ಅದು ನಮಗೆ ಭಾಸವಾಗುತ್ತೆ. ಅದೇ ರೀತಿ ಗಂಡು ಹೆಣ್ಣಿನ ಸಂಬಂಧ ಕೂಡ. ಎಲ್ಲವನ್ನೂ ತಪ್ಪು ಎನ್ನುವ ಗ್ರಹಿಕೆಯಿಂದ ನೋಡಿದರೆ ಎಲ್ಲ ಸಂಬಂಧಗಳೂ ನಮಗೆ ತಪ್ಪಾಗಿಯೇ ಕಾಣಿಸ್ತವೆ’ ತಮ್ಮ ಮತ್ತು ಮನಸ್ವಿನಿ ಅವರ ಸಂಬಂಧದ ಕುರಿತು ಮಾತನಾಡಲು ಪೀಠಿಕೆ ಹಾಕುವಂತೆ ರಾಘವ ನುಡಿದರು. ‘ಸರ್ ಹಾಗೆಂದು ಎಲ್ಲವೂ ಪರಿಶುದ್ಧ ಮತ್ತು ಪಾವಿತ್ರ್ಯವೇ ಎಂದು ನಂಬಿದರೆ ಮುಂದೊಂದು ದಿನ ನಮ್ಮ ನಂಬಿಕೆಗಳೇ ಸಡಿಲಾಗುವ ಸಾಧ್ಯತೆಯೂ ಇರಬಹುದಲ್ಲ’ ನನ್ನ ಪ್ರಶ್ನೆಯಿಂದ ಸ್ವಲ್ಪ ವಿಚಲಿತರಾದಂತೆ ಕಂಡ ರಾಘವ ಪ್ರತಿಕ್ರಿಯಿಸದೆ ಮೌನವಾದರು. ನಾವು ಕುಳಿತಿದ್ದ ಕಾರು ರಸ್ತೆಯನ್ನು ಸೀಳಿಕೊಂಡು ಓಡುತ್ತಿತ್ತು. ‘ಸರ್ ನಾನು ಕೇಳಿದ್ದರಲ್ಲಿ ತಪ್ಪಿದ್ದರೆ ದಯವಿಟ್ಟು ಕ್ಷಮಿಸಿ’ ರಾಘವ ಅವರ ಚಿಂತೆ ತುಂಬಿದ ಮುಖ ನೋಡಿ ಹೊರಬಂದ ನನ್ನ ಧ್ವನಿಯಲ್ಲಿ ಪಶ್ಚಾತ್ತಾಪವಿತ್ತು. ‘ನೋ ರವಿ ಹಾಗಲ್ಲ. ಪ್ರತಿಯೊಂದು ಸಂಬಂಧಕ್ಕೆ ಸಮಾಜದ ನಂಬಿಕೆ ಎನ್ನುವ ಮುದ್ರೆ ಬೇಕೆ ಎನ್ನುವುದಾದರೆ ಮನುಷ್ಯ ಸಂಬಂಧಗಳು ಎಷ್ಟೊಂದು ಕೃತಕವಾಗಿರುತ್ತವೆ ನೀವೇ ಯೋಚಿಸಿ’ ರಾಘವ ಅವರ ಮಾತು ನನ್ನ ಪ್ರಶ್ನೆಗೆ ಪ್ರತ್ಯುತ್ತರ ಎನ್ನುವುದಕ್ಕಿಂತ ಆಳವಾದ ಅನುಭವದಿಂದ ಅವರು ತಳೆದ ನಿಲುವಾಗಿತ್ತದು. ‘ತಾಯಿ-ಮಗುವಿನ ಪ್ರೀತಿ, ಗಂಡ-ಹೆಂಡತಿಯ ಪ್ರೇಮ, ಭಾತೃತ್ವ, ಗೆಳೆತನ ಇವೆಲ್ಲ ವ್ಯಕ್ತಿಗತವಾಗಿ ರೂಪುಗೊಳ್ಳುವ ಸಂಬಂಧಗಳು. ಪ್ರತಿ ಸಂಬಂಧವನ್ನು ನಾವು ನಮ್ಮದೆ ತರ್ಕ, ಸಿದ್ಧಾಂತದ ನೆಲೆಯಲ್ಲಿ ವಿಶ್ಲೇಷಿಸಲು ಹೊರಟರೆ ಅಲ್ಲಿ ನಾವು ಅಪೇಕ್ಷಿಸುವುದು ನಮಗೆ ಅನುಕೂಲವಾಗುವ ಫಲಿತಾಂಶವನ್ನೆ. ನನ್ನ ಮತ್ತು ಮನಸ್ವಿನಿ ಅವರ ಕುರಿತು ನೀವೆಲ್ಲ ಯೋಚಿಸಿದ್ದು ಕೂಡ ಇದು ಇಂಥದ್ದೆ ಸಂಬಂಧ ಎನ್ನುವ ಪೂರ್ವ ಗ್ರಹಿಕೆಯಲ್ಲೆ’ ರಾಘವ ಕಾಲೇಜಿನ ಸಹೊದ್ಯೋಗಿಗಳನ್ನು ಆರೋಪಿಸುವ ಭರದಲ್ಲಿ ನೀವೆಲ್ಲ ಎಂದು ನನ್ನನ್ನೂ ಸೇರಿಸಿದ್ದು ಮನಸ್ಸಿಗೆ ಕೊಂಚ ನೋವಾಯಿತು. ಅರ್ಥವಾದವರಂತೆ ‘ಸಾರಿ ಮಿ.ರವಿ’ ರಾಘವ ನನ್ನ ಬಲಗೈಯನ್ನೊಮ್ಮೆ ಅದುಮಿದರು.
ಮನಸ್ವಿನಿ ಅವರ ತೋಟದ ಮನೆ ತಲುಪಿದಾಗ ಅದಾಗಲೇ ಅತಿಥಿಗಳೆಲ್ಲ ಬಂದಾಗಿತ್ತು. ಮನೆಯ ಎದುರಿನ ರಸ್ತೆಯಲ್ಲಿ ಮನಸ್ವಿನಿ ನಮಗಾಗಿ ಕಾಯುತ್ತಿದ್ದರು. ಸಮಾರಂಭದಲ್ಲಿ ರಾಘವ ಅವರ ಉಪಸ್ಥಿತಿಯಿಂದ ಮನಸ್ವಿನಿಗೆ ಖುಷಿಯಾಗಿದೆಯೆಂದು ಅವರ ಮುಖದ ಭಾವವೇ ಹೇಳುತ್ತಿತ್ತು. ಪತಿ ಮತ್ತು ಮಕ್ಕಳನ್ನು ಪರಿಚಯಿಸಿ ನಮ್ಮನ್ನು ವೇದಿಕೆಯ ಮುಂಭಾಗದಲ್ಲಿ ಕರೆದೊಯ್ದು ಕುಳ್ಳಿರಿಸಿದರು. ಇಡೀ ಸಮಾರಂಭದ ಮೇಲುಸ್ತುವಾರಿ ಮನಸ್ವಿನಿ ಅವರ ಪತಿ ಪ್ರದೀಪ ಅವರದಾಗಿತ್ತು. ತುಂಬ ಅಚ್ಚುಕಟ್ಟಾಗಿ ಆಯೋಜಿಸಿದ್ದ ಸಮಾರಂಭದಲ್ಲಿ ಅವರ ಹೆಣ್ಣು ಮಕ್ಕಳಿಬ್ಬರೂ ಅತಿಥಿಗಳನ್ನು ಉಪಚರಿಸುತ್ತ ಸಂಭ್ರಮದಿಂದ ಓಡಾಡುತ್ತಿದ್ದರು. ಅತಿಥಿಗಳೇನೂ ಹೆಚ್ಚಿನ ಸಂಖ್ಯೆಯಲ್ಲಿರಲಿಲ್ಲ. ಮನಸ್ವಿನಿ ತಮ್ಮ ಆಪ್ತರನ್ನಷ್ಟೇ ಆಹ್ವಾನಿಸಿದ್ದರು. ನಮ್ಮ ಕಾಲೇಜಿನಿಂದ ಆಹ್ವಾನಿತರಾದವರಲ್ಲಿ ರಾಘವ ಅವರೊಬ್ಬರೆ. ಅನಿರೀಕ್ಷಿತ ಅತಿಥಿಯಾಗಿದ್ದ ನನ್ನನ್ನು ಮನಸ್ವಿನಿ ತುಂಬ ಆದರದಿಂದಲೇ ಸ್ವಾಗತಿಸಿದ್ದರು. ರಾಘವ ಅವರ ಆತ್ಮೀಯ ಎನ್ನುವ ಕಾರಣವೂ ಇರಬಹುದು. ಮನಸ್ವಿನಿ ಅವರ ಪ್ರಾರ್ಥನೆಯೊಂದಿಗೆ ಆರಂಭವಾದ ಸಮಾರಂಭದಲ್ಲಿ ರಾಘವ ‘ಸಾಂಗತ್ಯ’ ಕಥಾಸಂಕಲನವನ್ನು ಬಿಡುಗಡೆ ಮಾಡಿ ಅತಿಥಿಗಳಿಗೆ ಒಂದೊಂದು ಪ್ರತಿ ನೀಡಿದರು. ಸಾಹಿತ್ಯದ ಕುರಿತು ಮಾತನಾಡುವಂತೆ ಮನಸ್ವಿನಿಯೇ ರಾಘವ ಅವರನ್ನು ಒತ್ತಾಯಿಸಿದರು. ರಾಘವ ತಮ್ಮ ಎಂದಿನ ಗಂಭೀರ ಮುಖಮುದ್ರೆಯಿಂದ ಅಲ್ಲಿ ಕುಳಿತಿದ್ದವರನ್ನೊಮ್ಮೆ ದೃಷ್ಟಿಸಿ ಮಾತು ಶುರು ಮಾಡಿದರು. ‘ನಾನೇನೂ ಸಾಹಿತ್ಯದ ವಿದ್ಯಾರ್ಥಿಯಲ್ಲ. ಸಾಹಿತ್ಯವನ್ನು ಶಿಸ್ತಿನಿಂದ ಅಭ್ಯಸಿಸಿದವನೂ ಅಲ್ಲ. ಆದರೆ ಸಾಹಿತ್ಯದ ಕುರಿತು ನನಗೆ ಒಂದಿಷ್ಟು ಅಭಿರುಚಿ ಇದೆ. ಮನಸ್ವಿನಿ ಅವರ ‘ಸಾಂಗತ್ಯ’ ಕಥಾಸಂಕಲನವನ್ನು ಅದು ಹಸ್ತಪ್ರತಿ ರೂಪದಲ್ಲಿರುವಾಗಲೇ ಓದಿದ್ದೀನಿ. ಸಾಹಿತ್ಯದ ಮೂಲಕವೇ ಮನುಷ್ಯ ಸಂಬಂಧಗಳಿಗೊಂದು ಹೊಸ ವ್ಯಾಖ್ಯಾನ ಕೊಡಲು ಹೊರಟಿರುವ ಮನಸ್ವಿನಿ ಅವರ ಪ್ರಯತ್ನವನ್ನು ನಾನು ಮೆಚ್ಚುತ್ತೇನೆ. ಇಲ್ಲಿನ ಕಥೆಗಳ ಮೂಲಕ ಕಥೆಗಾರ್ತಿ ಪ್ರಶ್ನಿಸಲು ಹೊರಟಿರುವುದು ಸಂಬಂಧಗಳನ್ನು ಸೀಮಿತ ಚೌಕಟ್ಟಿನಲ್ಲೇ ನಾವು ನೋಡಬೇಕೆ ಎಂದು. ಸಂಬಂಧಗಳಿಗೆ ಸಮಾಜದ ಒಪ್ಪಿಗೆ ಅಥವಾ ನಂಬಿಕೆ ಎನ್ನುವ ಮುದ್ರೆಯ ಅಗತ್ಯವಿದೆಯೇ ಎನ್ನುವ ಪ್ರಶ್ನೆ ಸಹ ಈ ಕಥೆಗಳಲ್ಲಿ ಅಡಗಿದೆ. ಸ್ಥಾಪಿತ ನಂಬಿಕೆಗಳನ್ನು ಮುರಿದು ಹೊಸ ನಂಬಿಕೆಯನ್ನು ಕಟ್ಟಲು ಹೊರಟಿರುವ ಲೇಖಕಿಯ ಪ್ರಯತ್ನಕ್ಕೆ ಓದುಗರ ವಲಯದಿಂದ ಬೆಂಬಲ ಸಿಗಬೇಕು. ಅಂದರೆ ಮಾತ್ರ ಇಂಥ ಗಟ್ಟಿಧೈರ್ಯದ ಬರಹಗಾರ್ತಿಯಿಂದ ಇನ್ನಷ್ಟು ಕೃತಿಗಳು ಹೊರಬರಬಹುದೆನ್ನುವ ನಿರೀಕ್ಷೆಯಿದೆ’ ರಾಘವ ಅವರ ಮಾತುಗಳಿಗೆ ಅಲ್ಲಿ ನೆರೆದಿದ್ದ ಆಮಂತ್ರಿತರು ಚಪ್ಪಾಳೆಯ ಮೂಲಕ ಮೆಚ್ಚುಗೆ ಸೂಚಿಸಿದರು. ರಾಘವ ಪೂರ್ಣವಾಗಿ ತೆರೆದುಕೊಳ್ಳಬಹುದೆಂದು ನಿರೀಕ್ಷಿಸಿದ್ದ ನನಗೆ ಅವರು ಮಾತನ್ನು ಬೇಗನೆ ಮುಗಿಸಿದ್ದು ನಿರಾಸೆ ಮೂಡಿಸಿತು.
ಸಮಾರಂಭದ ಕೊನೆಯಲ್ಲಿ ಅತಿಥಿಗಳಿಗೆ ರುಚಿಕಟ್ಟಾದ ಊಟದ ವ್ಯವಸ್ಥೆಯಿತ್ತು. ಪ್ರದೀಪ ಸ್ವತ: ಮುಂದೆ ನಿಂತು ಎಲ್ಲರಿಗೂ ಉಪಚರಿಸುತ್ತಿದ್ದರು. ಪ್ರದೀಪ ಮಾತುಗಳಿಂದಲೇ ತಿಳಿಯುತ್ತಿತ್ತು ಅವರಿಗೆ ಸಾಹಿತ್ಯದ ಬಗ್ಗೆ ಆಸಕ್ತಿಯಾಗಲಿ ಅಭಿರುಚಿಯಾಗಲಿ ಇಲ್ಲವೆಂದು. ಆದರೆ ಹೆಂಡತಿಯನ್ನು ಪ್ರೀತಿಸುವ ಅವರು ಆಕೆಯ ಸಾಹಿತ್ಯಾಸಕ್ತಿಗೂ ಆಸರೆಯಾಗಿ ನಿಂತಿದ್ದು ಅಭಿಮಾನವೆನಿಸಿತು. ಮರಳಿ ಬರುವಾಗ ಕಾರಿನವರೆಗೂ ಬಂದು ಬಿಳ್ಕೊಟ್ಟ ಮನಸ್ವಿನಿ ‘ಸರ್ ನಿಮ್ಮ ಅಭಿಮಾನದ ಮಾತುಗಳಿಗೆ ತುಂಬಾ ಥ್ಯಾಂಕ್ಸ್. ನನ್ನ ಬರವಣಿಗೆಗೆ ಮತ್ತು ಇವತ್ತಿನ ಈ ಕಥಾಸಂಕಲನಕ್ಕೆ ನೀವೆ ಸ್ಪೂರ್ತಿ ಸರ್’ ಕೊರಳುಬ್ಬಿ ಕಣ್ಣಂಚಿನಲ್ಲಿ ನೀರೊಡೆದು ಮಾತಿಗಾಗಿ ತಡವರಿಸಿದರು. ರಾಘವ ಅವರ ಮನಸ್ಥಿತಿ ಕೂಡ ಭಿನ್ನವಾಗಿರಲಿಲ್ಲ. ಪ್ರದೀಪ ಹತ್ತಿರ ಬಂದು ಕೈಕುಲುಕಿ ಧನ್ಯವಾದ ಹೇಳುವಾಗ ಅವರ ಮುಖದಲ್ಲಿ ಧನ್ಯತೆಯ ಭಾವವಿತ್ತು. ಮಕ್ಕಳಿಬ್ಬರೂ ರಾಘವ ಅವರ ಕಾಲಿಗೆರಗಿ ಆಶಿರ್ವಾದ ಪಡೆದರು. ಇಡೀ ವಾತವರಣದಲ್ಲಿ ಆ ಕ್ಷಣ ಭಾವ ಲಯವೊಂದು ಪ್ರವಹಿಸುತ್ತಿರುವ ಅನುಭವವಾಗಿ ಮೈ ಜುಮ್ಮೆಂದಿತು.
ರಾಘವ ಮೌನದ ಚಿಪ್ಪಿನೊಳಗೆ ಹುದುಗಿಹೋಗಿದ್ದರು. ಅವರನ್ನು ಮಾತನಾಡಿಸುವ ಧೈರ್ಯ ನನಗಿರಲಿಲ್ಲ. ಕಾರಿನ ಸದ್ದು ಮತ್ತು ಎಫ್.ಎಮ್ ನಲ್ಲಿ ಬರುತ್ತಿದ್ದ ಲತಾಮಂಗೇಶ್ಕರ್ ಹಾಡೊಂದು ಬಿಟ್ಟರೆ ನಮ್ಮಿಬ್ಬರ ನಡುವೆ ಮೌನ ಮನೆಮಾಡಿತ್ತು. ಸ್ವಲ್ಪ ದೂರ ಕ್ರಮಿಸಿದ ನಂತರ ರಾಘವ ಮೌನ ಮುರಿದು ಮಾತಿಗಿಳಿದರು ‘ಮಿ.ರವಿ ನೀವೆ ನೋಡಿದ್ದೀರಿ. ಈಗ ಹೇಳಿ ನನ್ನ ಮತ್ತು ಮನಸ್ವಿನಿಯ ಸಂಬಂಧವನ್ನು ನೀವು ಯಾವ ಹೆಸರಿನಿಂದ ಕರಿತೀರಿ?’. ನನ್ನಲ್ಲಿ ಉತ್ತರವಿರಲಿಲ್ಲ. ನಾಚಿಕೆಯಿಂದ ತಲೆತಗ್ಗಿಸಿದೆ. ‘ನಿಮ್ಮನ್ನ ನೋಯಿಸಬೇಕು ಅಂತಲ್ಲ ರವಿ. ಸತ್ಯಾಸತ್ಯತೆಗಳನ್ನು ನೋಡದೆ ನಾವು ಒಂದು ನಿರ್ಧಾರಕ್ಕೆ ಬರ್ತೀವಿ ನೋಡಿ ಅದೇ ನಾವು ಮಾಡೋ ತಪ್ಪು. ನಾಗರಿಕರಾಗ್ತಾ ಆಗ್ತಾ ನಾವು ವಿವೇಚನೆಯನ್ನೇ ಕಳೆದುಕೊಳ್ತಿದ್ದೀವಿ ಅಂತ ನನಗೆ ಭಯವಾಗುತ್ತೆ’ ರಾಘವ ಮಾತನಾಡುವ ಲಹರಿಯಲ್ಲಿದ್ದರು. ಅವರ ಮಾತನ್ನು ಆಲಿಸುವುದಷ್ಟೇ ಆ ಕ್ಷಣಕ್ಕೆ ನನ್ನ ಪ್ರತಿಕ್ರಿಯೆಯಾಗಿತ್ತು. ‘ಈ ದೇಶದಲ್ಲಿ ನೇಣುಗಂಬಕ್ಕೆ ಏರಿಸುವ ಅಪರಾಧಿಯನ್ನು ಕೂಡ ಅವನ ಕೊನೆಯ ಆಸೆ ಏನು ಅಂತ ಕೇಳ್ತಾರೆ. ತಪ್ಪು ಮಾಡಿದವನಿಗೂ ಸಹ ಕೋರ್ಟಿನಲ್ಲಿ ವಾದಿಸೋಕೆ ಅವಕಾಶವಿದೆ. ಇಂಥ ಸಹನೆಯ ಸಂಸ್ಕೃತಿಯ ನಡುವೆಯೂ ನಾವು ಮಾತ್ರ ಬೇರೆಯವರ ವ್ಯಕ್ತಿತ್ವವನ್ನು ನಮ್ಮದೇ ಆದ ದೃಷ್ಟಿಕೋನದಲ್ಲಿ ನಿರ್ಧರಿಸಿ ಬಿಡ್ತಿವಿ. ಇಲ್ಲಿ ಒಂದು ಗಂಡು ಮತ್ತು ಹೆಣ್ಣು ತಮ್ಮಲ್ಲಿನ ಸಮಾನ ಅಭಿರುಚಿಯಿಂದ ಹತ್ತಿರವಾಗಿ ಗೆಳೆತನ ಬೆಳೆಸೋದೆ ತಪ್ಪು ಅಂತ ನಿರ್ಧರಿಸಿ ಬಿಡ್ತಿವಲ್ಲ ರವಿ ಇದೆಂಥ ಸಮಾಜ. ಒಮ್ಮೊಮ್ಮೆ ಎಂಥವರ ನಡುವೆ ಬದುಕುತ್ತಿದ್ದೀನಿ ಅಂತ ಹೇಸಿಗೆಯಾಗುತ್ತೆ’ ರಾಘವ ಅವರ ಧ್ವನಿಯಲ್ಲಿ ಸಿಟ್ಟಿಗಿಂತ ವೇದನೆಯಿತ್ತು. ‘ಮದುವೆಯಾದ ನಂತರ ಒಂದು ಗಂಡು ಮತ್ತು ಹೆಣ್ಣು ಸ್ನೇಹಕ್ಕೆ ಚಾಚಿಕೊಳ್ಳಬಾರದು ಅಂತ ಇಲ್ಲೇನಾದರೂ ನಿಯಮ ಇದೇನಾ. ಗಂಡು ಹೆಣ್ಣಿನ ನಡುವಣ ಸ್ನೇಹ ಎಂದರೆ ಅದು ಕೇವಲ ಕಾಮಕ್ಕೆ ಮಾತ್ರ ಸೀಮಿತಗೊಳಿಸ್ತೀವಿ. ರವಿ ನನಗೂ ಮದುವೆಯಾಗಿ ಹೆಂಡತಿ ಮತ್ತು ಮಕ್ಕಳಿದ್ದಾರೆ ಮನಸ್ವಿನಿದೂ ನನ್ನದೆ ಸ್ಥಿತಿ. ಇಲ್ಲಿ ಯಾಕೆ ನಮ್ಮಿಬ್ಬರ ನಡುವೆ ಸ್ನೇಹ ಬೆಳೀತು ಎನ್ನುವುದನ್ನು ನೀವು ಎಂದಾದರೂ ನಮ್ಮ ಜಾಗದಲ್ಲಿ ನಿಂತು ಯೋಚಿಸಿದ್ದರೆ ಹೀಗೆ ತಪ್ಪು ಕಲ್ಪನೆ ಆಗ್ತಿರಲಿಲ್ಲ. ಮನಸ್ವಿನಿಗೆ ಸಾಹಿತ್ಯದ ಅಭಿರುಚಿ ಇದೆ. ತಾನು ಓದಿದ ಪುಸ್ತಕಗಳ ಕುರಿತು ಹಂಚಿಕೊಳ್ಳೊಕೆ ಅವರಿಗೊಂದು ಜೊತೆಯ ಅಗತ್ಯವಿದೆ. ಪ್ರದೀಪ ಬಿಜಿನೆಸ್ ಮ್ಯಾನ್. ಅವರಿಗೆ ಸಾಹಿತ್ಯದಲ್ಲಿ ಆಸಕ್ತಿ ಇಲ್ಲ. ಸಮಾನ ಆಸಕ್ತಿ ಇರುವವರ ಗೆಳೆತನಕ್ಕಾಗಿ ಹುಡುಕ್ತಿದ್ದಾಗ ಅವರಿಗೆ ನಾನು ಸಿಕ್ಕೆ. ನನಗೂ ಸಾಹಿತ್ಯದ ಒಲುವಿದೆ ಎಂದು ಗೊತ್ತಾದದ್ದೆ ಮನಸ್ವಿನಿ ನನ್ನೊಡನೆ ಗಂಟೆಗಟ್ಟಲೆ ಚರ್ಚೆ ಮಾಡೋರು. ನಿಜ ಹೇಳ್ತಿದ್ದೀನಿ ರವಿ ನಾವು ಎಂದೂ ನಮ್ಮ ಸಂಸಾರದ್ದಾಗಲಿ ಬೇರೆಯವರ ಬಗ್ಗೆಯಾಗಲಿ ಮಾತಾಡಿಲ್ಲ. ನಮ್ಮ ಮಾತುಕತೆ, ಗೆಳೆತನ ಅದು ಸಾಹಿತ್ಯದ ವಿಷಯಕ್ಕಷ್ಟೆ ಸೀಮಿತ. ಕಾಲೇಜಿನ ಕ್ಯಾಂಟಿನಿನಲ್ಲೊ ಡಿಪಾರ್ಟ್ಮೆಂಟ್ನಲ್ಲೊ ಜೊತೆಯಾಗಿ ಕುಳಿತು ಮಾತಾಡಿದ್ದನ್ನೇ ದೊಡ್ಡ ವಿಷಯವಾಗಿಸಿ ಅದಕ್ಕೆ ನಿಮ್ಮ ನಿಮ್ಮ ಕಲ್ಪನೆಯ ರೆಕ್ಕೆ ಪುಕ್ಕ ಕಟ್ಟಿ ಕಥೆಯಾಗಿಸ್ತಿರಲ್ಲ ಇದರಿಂದ ಇನ್ನೊಬ್ಬರಿಗೆ ಹರ್ಟ್ ಆಗುತ್ತೆ ಅನ್ನೊ ಕಿಂಚಿತ್ ಪ್ರಜ್ಞೆಯೂ ಬೇಡ ಅಂದರೆ ನಾವು ಎಲ್ಲಿ ಇದ್ದೀವಿ ರವಿ’ ರಾಘವ ಅವರ ಮುಖದಲ್ಲಿ ನೋವು ತುಂಬಿತ್ತು. ರಾಘವ ಅವರ ಮಾತಿಗೆ ಹೇಗೆ ಪ್ರತಿಕ್ರಿಯಿಸಬೇಕೆನ್ನುವುದಾಗಲಿ ಅವರನ್ನು ಸಮಾಧಾನ ಪಡಿಸುವುದಾಗಲಿ ತೋಚದೆ ನಾನು ಸುಮ್ಮನೆ ಕುಳಿತೆ.
ಮನೆ ಸಮೀಪಿಸುವವರೆಗೂ ಇಬ್ಬರೂ ಮಾತನಾಡಲಿಲ್ಲ. ಮನೆ ಎದುರು ಕಾರು ನಿಂತಾಗ ‘ಸರ್ ಬನ್ನಿ ಕಾಫಿ ಕುಡಿಯುವಿರಂತೆ’ ಆಹ್ವಾನಿಸಿದೆ. ನನ್ನ ಆಹ್ವಾನವನ್ನು ನಯವಾಗಿ ನಿರಾಕರಿಸಿದ ರಾಘವ ‘ರವಿ ಇನ್ನೊಮ್ಮೆ ಸಮಯ ಮಾಡಿಕೊಂಡು ಬರ್ತೀನಿ. ಮನಸ್ಸಿನ ಭಾರವನ್ನು ಯಾರೊಂದಿಗಾದರೂ ಹಂಚಿಕೊಳ್ಳಬೇಕಿತ್ತು. ಅದಕ್ಕೆ ಇವತ್ತು ನಿಮ್ಮೊಂದಿಗೆ ಸ್ವಲ್ಪ ಒರಟಾಗಿ ಮಾತಾಡ್ದೆ ಅಂತ ಅನಿಸುತ್ತೆ. ದಯವಿಟ್ಟು ಕ್ಷಮಿಸಿ. ಬೇರೆಯವರ ಬಗ್ಗೆ ಕಥೆ ಕಟ್ಟೋರು ಅವರೆಲ್ಲ ಮುಖವಾಡ ಧರಿಸಿ ತಾವು ಮಾತ್ರ ಪರಮ ಸಾಚಾಗಳು ಅನ್ನೋ ಥರ ಬದುಕೊದನ್ನ ನೋಡಿದ್ದೀನಿ. ಮುಖವಾಡದ ಹಿಂದೆ ಅದೆಂಥ ಕ್ರೂರ ಮನಸ್ಸಿದೆ ಅಂದರೆ ಅಂಥವರ ನಡುವಿದ್ದೂ ನಮ್ಮಂಥವರು ಇನ್ನೂ ಸೆನ್ಸಿಟಿವ್ ಆಗಿ ಉಳಿದಿದ್ದಿವಲ್ಲ ಅಂತ ಆಶ್ಚರ್ಯ ಆಗುತ್ತೆ’ ರಾಘವ ಮಾತು ನಿಲ್ಲಿಸಿ ಕಾರನ್ನು ಮುಂದೊಡಿಸಿದರು. ಕಾರು ಕಣ್ಮರೆಯಾಗುವವರೆಗೂ ನೋಡುತ್ತ ನಿಂತವನನ್ನು ಹೆಂಡತಿಯ ಧ್ವನಿ ಎಚ್ಚರಿಸಿ ವಾಸ್ತವಕ್ಕೆ ಮರಳಿದೆ.
No comments:
Post a Comment