Friday, May 31, 2019

ಅಪ್ಪಣ್ಣನ ಸಮಾಜವಾದ (ಕಥೆ)

    


       

            ಪ್ರತಿ ಎರಡು ತಿಂಗಳಿಗೊಮ್ಮೆ ರವಿವಾರದ ಬೆಳಗ್ಗೆ ಸಲೂನ್‍ಗೆ ಭೇಟಿ ನೀಡಿ ಕ್ಷೌರಕ್ಕೆ ತಲೆಯೊಡ್ಡಿ ಕೂಡುವುದು ಲಾಗಾಯ್ತಿನಿಂದಲೂ ನಾನು ಅನುಸರಿಸಿಕೊಂಡು ಬಂದ ಸಂಪ್ರದಾಯ. ಅದೇಕೋ ಗೊತ್ತಿಲ್ಲ ಮೊದಲಿನಿಂದಲೂ ಈ ಸಲೂನ್, ಟೇಲರ್, ಚಪ್ಪಲಿ ಅಂಗಡಿಗಳನ್ನು ಪದೆ ಪದೆ ಬದಲಿಸುವುದು ನನಗೊಂದುಥರ ಅಲರ್ಜಿ. ಹೀಗಾಗಿ ಈ ಕ್ಷೌರಿಕ, ದರ್ಜಿ, ಚಪ್ಪಲಿ ಮಾಡುವ ಮೋಚಿ ಇವರುಗಳೊಂದಿಗೆ ಪರಿಚಯ ಬೆಳೆದು ಅವರು ನನಗೆ ರಸ್ತೆಯಲ್ಲಿ ಎದುರಾದಾಗಲೆಲ್ಲ ನಮಸ್ಕಾರ ಹೇಳುವುದು, ಹಸ್ತಲಾಘವ ಮಾಡುವುದು, ಅರೆಘಳಿಗೆ ಮಾತನಾಡುತ್ತ ನಿಲ್ಲುವುದು ಸಾಮಾನ್ಯ ಎಂಬಂತಾಗಿದೆ. ನಾನೇನೋ ಒಬ್ಬನೆ ರಸ್ತೆಯಲ್ಲಿ ನಡೆದು ಹೋಗುತ್ತಿರುವಾಗ ಇವರಲ್ಲಿ ಯಾರಾದರೂ ಭೇಟಿ ಆಗಿ ಮಾತನಾಡುತ್ತ ನಿಲ್ಲುವುದರಿಂದ ನನಗೆ ಯಾವ ತೊಂದರೆಯಾಗಲಿ ಸಂಕೋಚವಾಗಲಿ ಇಲ್ಲ. ಕೆಲವೊಮ್ಮೆ ಹೆಂಡತಿ ಮಗಳೊಡನೆ ಮಾರ್ಕೆಟಿಗೆ ಹೋಗುವಾಗಲೊ ಅಥವಾ ಪರಿಚಿತರ, ಬಂಧುಗಳ ಮನೆಯ ಸಮಾರಂಭಕ್ಕೆ ಹೋಗುವಾಗ ಇವರು ಎದರು ಸಿಕ್ಕರೆ ಆಗೆಲ್ಲ ನನಗೆ ತುಂಬ ಇರುಸು ಮುರುಸಾಗುತ್ತದೆ. ನಾನು ಅವರೊಂದಿಗೆ ಮಾತನಾಡುತ್ತ ನಿಂತಿರುವಷ್ಟು ಹೊತ್ತು ಹೆಂಡತಿ ಮತ್ತು ಮಗಳು ದೂರದಲ್ಲಿ ನಿಂತು ಅಸಹನೆಯಿಂದ ನನ್ನ ದಾರಿಕಾಯುತ್ತಿರುತ್ತಾರೆ. ಅವಸರವಸರವಾಗಿ ಮಾತನಾಡಿ ಹೆಂಡತಿ ಮತ್ತು ಮಗಳ ಹತ್ತಿರ ಹೋಗುವಷ್ಟರಲ್ಲಿ ಅವರಿಬ್ಬರ ಮುಖದಲ್ಲಿ ಸಿಟ್ಟು ಮತ್ತು ನನ್ನ ಬಗ್ಗೆ ಜಿಗುಪ್ಸೆ ಜಿನುಗುತ್ತಿರುತ್ತದೆ. ನಾನು ತೀರ ಬಡಕುಟುಂಬದಲ್ಲಿ ಹುಟ್ಟಿ ನಮ್ಮ ಮನೆಯ ಎದುರಿನ ದೊಡ್ಡ ಆಲದ ಮರದಡಿ ವರ್ಷದಲ್ಲಿ ನಾಲ್ಕಾರು ತಿಂಗಳು ಕಾಲ ಬಿಡಾರ ಹೂಡುತ್ತಿದ್ದ ಕಮ್ಮಾರರ ಕುಟುಂಬದಲ್ಲಿನ ಮಕ್ಕಳೊಂದಿಗೆ ಆಡಿ ಬೆಳೆದಿದ್ದೆ ನನ್ನ ಈ ವ್ಯಸನಕ್ಕೆ ಕಾರಣವೆಂದು ಒಮ್ಮೊಮ್ಮೆ ನನ್ನ ಹೆಂಡತಿ ತೀರ್ಮಾನಕ್ಕೆ ಬರುತ್ತಾಳೆ. ಆಗೆಲ್ಲ ನಾನು ಹೆಂಡತಿಯ ಆರೋಪಕ್ಕೆ ಸಿಟ್ಟು ಮಾಡಿಕೊಳ್ಳದೆ ಒಳಗೊಳಗೆ ತುಂಬ ಖುಷಿಯಿಂದ ನನ್ನೊಂದಿಗೆ ಆಡುತ್ತಿದ್ದ ರುಕ್ಮಿ, ಸಂಭ್ಯಾ, ಜೀತ್ಯಾ, ಪೊನ್ನಿ  ಅವರನ್ನು ನೆನಪಿಸಿಕೊಂಡು ಪುಳಕಗೊಳ್ಳುತ್ತೇನೆ. ಅವರೆಲ್ಲ ಈಗ ದೊಡ್ಡವರಾಗಿ ಬೇರೆ ಬೇರೆ ಊರುಗಳಲ್ಲಿ ವಾಸಿಸುತ್ತಿರಬಹುದೆಂದು ಯಾವುದೇ ಊರಿಗೆ ಹೋದರೂ ಕಮ್ಮಾರರ ಟೆಂಟ್‍ಗಳು ಕಣ್ಣಿಗೆ ಕಾಣಿಸಿದ್ದೆ ಈ ರುಕ್ಮಿ, ಸಂಭ್ಯಾರೆಲ್ಲ ಅಲ್ಲಿರಬಹುದೇನೋ ಎನ್ನುವ ಆಸೆಯಿಂದ ಅರೆಘಳಿಗೆ ನಿಂತು ಹುಡುಕುತ್ತೇನೆ. 

    ನೋಡಿ ಹೇಳಬೇಕಾದ ಮುಖ್ಯ ವಿಷಯವನ್ನೆ ಮರೆತು ಬಿಟ್ಟೆ. ಅಂದಹಾಗೆ ನಾನು ನಿಮಗೆ ಹೇಳುತ್ತಿದ್ದದ್ದು ನಾನು ಪ್ರತಿ ಎರಡು ತಿಂಗಳಿಗೊಮ್ಮೆ ರವಿವಾರದ ರಜಾದಿನದಂದು ಸಲೂನಿಗೆ ಹೋಗುವ ವಿಷಯ. ಮೊನ್ನೆ ಸಲೂನ್‍ಗೆ ಹೋದಾಗ ರಜಾದಿನವಾದ್ದರಿಂದ ಕೂಡಲು ಜಾಗವಿಲ್ಲದಷ್ಟು ಗಿರಾಕಿಗಳಿದ್ದರು. ನಾನು ರೆಗ್ಯೂಲರ್ ಗಿರಾಕಿಯಾದ್ದರಿಂದ ಅಂಗಡಿಯಾತ ಪಕ್ಕದ ಅಂಗಡಿಯಿಂದ ಕುರ್ಚಿ ತರಿಸಿ ನನ್ನನ್ನು ಕೂಡುವಂತೆ ವಿನಂತಿಸಿಕೊಂಡ. ಅಲ್ಲಿರುವ ದಿನಪತ್ರಿಕೆಯನ್ನು ಈಗಾಗಲೆ ಹಲವು ಗಿರಾಕಿಗಳು ಹಂಚಿಕೊಂಡಿದ್ದರಿಂದ ಸುಮ್ಮನೆ ಅಂಗಡಿಯ ಮಾಲೀಕ ಕ್ಷೌರ ಮಾಡುವುದನ್ನೇ ನೋಡುತ್ತ ಕೂಡುವುದು ಒಳಿತೆಂಬ ಸಮ್ಮತಿಯ ಭಾವ ಮೂಡಿತು.  ನಾನು ಹಾಗೆ ಕುಳಿತುಕೊಂಡ ಘಳಿಗೆ ಒಂದು ಅನೂಹ್ಯವಾದ ಅನುಭವಕ್ಕೆ ಒಳಗಾದಂತೆ ಭಾಸವಾಗಿ ಅಲ್ಲಿದ್ದ ಕ್ಷೌರಿಕ ನನಗೆ ಹಲವು ವರ್ಷಗಳಿಂದ ಪರಿಚಿತ ಪಾತ್ರದಂತೆಯೂ ಅವನೊಂದಿಗೆ ಒಡನಾಡಿದ ಭಾವ ನನ್ನ ಅನುಭವಕ್ಕೆ ಬರತೊಡಗಿತು. ಕಣ್ಣುಗಳನ್ನು ಒಂದಷ್ಟು ಅಗಲಗೊಳಿಸಿ ನೋಡಿದಾಗ ಅವನು ಥೇಟ್ ನಮ್ಮ ಊರಿನ ಕ್ಷೌರಿಕ ಅಪ್ಪಣ್ಣನಂತೆ ಕಾಣಿಸುತ್ತಿರುವ ರೀತಿಗೆ ನನಗೇ ಅಚ್ಚರಿ ಅನ್ನಿಸತೊಡಗಿತು. 

    ಈ ಅಪ್ಪಣ್ಣ ನನ್ನೂರಿನ ಅತೀ ಸಂಭಾವಿತ ಮನುಷ್ಯ. ಅವನದು ಕ್ಷೌರಿಕ ವೃತ್ತಿ. ಇಡೀ ಊರಿಗೆ ಇರೋದು ಅವನೊಬ್ಬನದೆ ಕ್ಷೌರಿಕರ ಮನೆ. ಈ ಅಪ್ಪಣ್ಣನೇನೂ ನಮ್ಮ ಊರಿನವನಾಗಿರಲಿಲ್ಲ. ಅವನ ಅಕ್ಕನಿಗೆ ನಮ್ಮೂರಿನ ಕ್ಷೌರಿಕರ ತಮ್ಮಣ್ಣನಿಗೆ ಮದುವೆ ಮಾಡಿಕೊಟ್ಟು ಪಕ್ಕದೂರಿನವರು ನಮ್ಮೂರಿನೊಂದಿಗೆ ಬೀಗಸ್ತನ ಬೆಳೆಸಿದ್ದರು. ತಮ್ಮಣ್ಣನಿಗೆ ಮದುವೆಯಾಗಿ ಹತ್ತು ವರ್ಷಗಳು ಮಕ್ಕಳೇ ಆಗಿರಲಿಲ್ಲ. ಆಗೆಲ್ಲ ಮತ್ತೊಂದು ಮದುವೆಗೆ ಎಷ್ಟೇ ಒತ್ತಾಯಿಸಿದರೂ ತಮ್ಮಣ್ಣ ಹೆಂಡತಿಯ ಮೇಲಿನ ಪ್ರೀತಿಯಿಂದ ಮರುಮದುವೆಗೆ ಸಮ್ಮತಿಸಿರಲಿಲ್ಲ. ಅಫಜಲಪುರದ ಹತ್ತಿರದ ಘತ್ತರಗಿಯ ಭಾಗಮ್ಮನಿಗೆ ಹರಕೆ ಕಟ್ಟಿಕೊಂಡ ಮೇಲೆ ತಮ್ಮಣ್ಣನ ಹೆಂಡತಿ ಬಸಿರಾಗಿ ಹೆಣ್ಣುಮಗಳನ್ನು ಹೆತ್ತಿದ್ದೆ ಬಂತು ಮತ್ತೆ ಅವಳ ಒಡಲು ತುಂಬಲೇ ಇಲ್ಲ. ಮಗಳು ಬೆಳೆದು ದೊಡ್ಡವಳಾಗಿ ಮದುವೆ ವಯಸ್ಸಿಗೆ ಬಂದಾಗ ತಮ್ಮಣ್ಣ ಹೆಂಡತಿಯ ತಮ್ಮ ಅಪ್ಪಣ್ಣನನ್ನೆ ಮನೆಅಳಿಯನಾಗಿ ಮಾಡಿಕೊಂಡ. ಗಂಡು ಮಕ್ಕಳಿಲ್ಲದ ತಮ್ಮಣ್ಣ ದಂಪತಿಗಳಿಗೂ ಅಪ್ಪಣ್ಣ ಮನೆಅಳಿಯನಾಗಿ ಬಂದದ್ದು ಆಸರೆಯಾಯಿತು. ಮಾವನ ಜೊತೆಗೆ ಕ್ಷೌರಿಕ ವೃತ್ತಿಯನ್ನು ಆರಂಭಿಸಿದ ಅಪ್ಪಣ್ಣ ಮೊದಮೊದಲು ಚಿಕ್ಕ ಮಕ್ಕಳ ಕ್ಷೌರ ಮಾತ್ರ ಮಾಡುತ್ತಿದ್ದವನು ಕಾಲಕ್ರಮೇಣ ಊರಿನ ಗೌಡ, ಕುಲಕರ್ಣಿ, ಶ್ಯಾನುಭೋಗರಿಗೆಲ್ಲ ಕ್ಷೌರಕ್ಕೆ  ಅಪ್ಪಣ್ಣನೇ ಅನಿವಾರ್ಯವಾದ. ಚುರುಕು ಮಾತಿನ ಎಂಥ ಗಂಭೀರ ಸ್ವಭಾವದವರನ್ನೂ ಮಾತಿಗೆ ಎಳೆಯುತ್ತಿದ್ದ ಅಪ್ಪಣ್ಣ ತನ್ನ ಹಾಸ್ಯಸ್ವಭಾವದಿಂದ ಊರಿನಲ್ಲಿ ಬಲುಬೇಗ ಎಲ್ಲರಿಗೂ ಬೇಕಾದವನಾಗಿ ಬೆಳೆದ. ತಮ್ಮಣ್ಣನ ಆರೋಗ್ಯ ಕ್ಷೀಣಿಸಿ ಅವನು ಕೆಲಸದಿಂದ ದೂರ ಉಳಿಯತೊಡಗಿದ ಮೇಲೆ ಇಡೀ ಊರು ಅಪ್ಪಣ್ಣನ ಸುಪರ್ದಿಗೆ ಬಂತು. ಅಪ್ಪಣ್ಣನ ಹೆಂಡತಿ ಮಾಲಕ್ಷ್ಮಿ ಒಂಟಿಯಾಗಿ ಬೆಳೆದಿದ್ದರಿಂದಲೊ ಅಥವಾ ಘತ್ತರಗಿ ಭಾಗಮ್ಮನ ಹರಕೆ ಈಗ ಫಲಿಸಿದ್ದರಿಂದಲೊ ಆಕೆ ಸಾಲಾಗಿ ಎರಡು ಗಂಡು ಎರಡು ಹೆಣ್ಣು ಮಕ್ಕಳನ್ನು ಹೆತ್ತು ಮನೆತುಂಬ ಮಕ್ಕಳಿಲ್ಲ ಎಂಬ ಅವ್ವ ಅಪ್ಪನ ಕೊರಗನ್ನು ನೀಗಿಸಿದ್ದಳು.

     ಅಪ್ಪಣ್ಣನ ದಿನನಿತ್ಯದ ಕಾಯಕ ಅವನು ಬೆಳಗ್ಗೆ ಎಳುವುದರೊಂದಿಗೇ ಶುರುವಾಗುತ್ತಿತ್ತು. ಮುಂಜಾನೆ ಆರು ಗಂಟೆಗೇ ಅವನ ಮನೆಯ ಎದುರು ಜನರೆಲ್ಲ ಸರತಿಸಾಲಿನಲ್ಲಿ ಕಾಯುತ್ತ ಕೂಡುತ್ತಿದ್ದದ್ದು ಸಾಮಾನ್ಯ ದೃಶ್ಯವಾಗಿತ್ತು. ಹೀಗೆ ಕೂತವರಲ್ಲಿ ಶಾಲೆಗೆ ಹೋಗುವ ಮಕ್ಕಳು ಮತ್ತು ಪಟ್ಟಣಕ್ಕೆ ಕೆಲಸಕ್ಕೆ ಹೋಗುವವರ ಸಂಖ್ಯೆಯೇ ಹೆಚ್ಚಿರುತ್ತಿತ್ತು. ಊರಲ್ಲೇ ಇರುವವರು ಅವಸರವಿರುವವರು ಮೊದಲು ಕ್ಷೌರ ಮಾಡಿಸಿಕೊಳ್ಳಲಿ ನಾವು ನಿಧಾನವಾಗಿ ಮಾಡಿಸಿಕೊಂಡರಾಯ್ತು ಎನ್ನುವ ಅಲಿಖಿತ ಒಪ್ಪಂದಕ್ಕೆ ಬಂದಂತೆ ಕಾಣುತ್ತಿತ್ತು. ಭಾನುವಾರ ಇಲ್ಲವೇ ಯಾವುದೇ ಸರ್ಕಾರಿ ರಜಾದಿನವಾಗಿದ್ದರೆ ಅಪ್ಪಣ್ಣನ ಮನೆಯ ಎದುರಿನ ಸರತಿ ಸಾಲು ಹನುಮಂತನ ಬಾಲದಂತೆ ಬೆಳೆಯುತ್ತಿತ್ತು. ಒಮ್ಮೊಮ್ಮೆ ಬಯಲಿಗೆ ಹೋಗುವವರು ತಮ್ಮ ದಿನನಿತ್ಯದ ಕೆಲಸ ಮುಗಿಸಿಕೊಂಡು ಕೈಯಲ್ಲಿ ತಂಬಿಗೆ ಹಿಡಿದು ನೇರವಾಗಿ ಅಪ್ಪಣ್ಣನ ಮನೆಗೇ ಬರುತ್ತಿದ್ದರು. ಊರ ಮುಂದಿನ ಭಾವಿಯಿಂದ ನೀರು ತರಲು ಹೋಗುವವರು ಹೊಲಕ್ಕೆ ಹೋಗುವವರು ತಮ್ಮ ಮಕ್ಕಳನ್ನು ನಿದ್ದೆಯಿಂದ ಎಬ್ಬಿಸಿ ಅಪ್ಪಣ್ಣನ ಮನೆಗೆ ಕರೆತಂದು ಸರತಿ ಸಾಲಿನಲ್ಲಿ ಕೂಡಿಸಿ ಹೋಗುತ್ತಿದ್ದರು. ಅಪ್ಪಣ್ಣ ಚುಮುಚುಮು ಬೆಳಕಿನಲ್ಲೆ ಪ್ರಾತ:ವಿಧಿಗಳನ್ನು ಮುಗಿಸಿ ಸ್ನಾನ ಮಾಡಿ ವಿಭೂತಿ ಧರಿಸಿ ಬೆಳಗ್ಗಿನ ಚಹಾಸೇವಿಸಿದವನೇ ಕಾಯಕಕ್ಕೆ ನಿಲ್ಲುತ್ತಿದ್ದ. ಮನೆಯ ಎಡಗಡೆ ದನದ ಕೊಟ್ಟಿಗೆಗೆ ಹೊಂದಿಕೊಂಡಂತೆ ಇರುವ ಕಟ್ಟೆಯ ಮೇಲೆ ಕ್ಷೌರ ಸಾಮಗ್ರಿಗಳ ಪೆಟ್ಟಿಗೆಯೊಂದಿಗೆ ಬಂದು ಕುಳಿತು ಪೆಟ್ಟಿಗೆಗೆ ನಮಸ್ಕರಿಸಿ ತನ್ನ ಕಾಯಕ ಶುರು ಮಾಡುವ ಅಪ್ಪಣ್ಣನ ಕೆಲಸ ಮಧ್ಯಾಹ್ನದವರೆಗೂ ಬಿಡುವಿಲ್ಲದಂತೆ ಸಾಗುತ್ತಿತ್ತು. ಅಪ್ಪಣ್ಣನ ಮೊದಲ ಆದ್ಯತೆ ಯಾವತ್ತೂ ಶಾಲೆಗೆ ಹೋಗುವ ಮಕ್ಕಳಿಗೆ. ಮಕ್ಕಳ ಶಾಲೆಗೆ ತಡವಾದರೆ ಮಾಸ್ತರರು ಬೈಯುವರೆಂಬ ಕಳಕಳಿಯಿಂದ ಸರತಿ ಸಾಲಿನಲ್ಲಿ ಎಷ್ಟೇ ಹಿಂದಿದ್ದರೂ ಶಾಲೆಗೆ ಹೋಗುವ ಮಕ್ಕಳನ್ನು ಮುಂದೆ ಕರೆದು ಕ್ಷೌರ ಮಾಡಿ ಸಾಗಹಾಕಿದ ಮೇಲೆಯೇ ಉಳಿದವರ ತಲೆಗೆ ಅವನು ಕೈಹಚ್ಚುತಿದ್ದದ್ದು. ‘ಅಪ್ಪಣ್ಣ ನಸಕಿನ್ಯಾಗೆ ಬಂದು ನಿನ್ನ ಮನಿ ಎದುರು ಕೂತೀನಿ ಆಗ ಇವರ್ಯಾರು ಇನ್ನು ಬಂದಿರಲಿಲ್ಲ. ನನ್ನ ನಂತರ ಬಂದವರಿಗಿ ಕಟಿಂಗ್ ಮಾಡೋದು ತಪ್ಪ ನೋಡು’ ಎಂದು ಯಾರಾದರು ಎದುರಾಡಿದರೆ ‘ಪಾಪ ಸಾಲಿಗಿ ಹೋಗೋ ಮಕ್ಕಳು. ಅವಕ್ಕ ಅವಸರ ಇರ್ತದ. ಮನ್ಯಾಗ ಇರಾವ ನೀ ಸ್ವಲ್ಪ ತಡಿ’ ಎಂದು ಸಮಾಧಾನ ಹೇಳಿ ಅಂಗಳದಲ್ಲಿ ಕಸಗುಡಿಸುತ್ತಿದ್ದ ಹೆಂಡತಿಗೆ ‘ಶಿವರಾಯಣ್ಣಗ ಒಂದೀಟು ಚಹಾ ತಂದು ಕೊಡು’ ಎಂದು ತನ್ನ ಕಾಯಕದಲ್ಲಿ ಮಗ್ನನಾಗುತ್ತಿದ್ದ. ಅಪ್ಪಣ್ಣನ ಹಿರಿಯ ಮಗನಿಗೆ ವಿದ್ಯೆ ತಲೆಗೆ ಹತ್ತದೆ ಅವನು ಅಪ್ಪನ ಕಸುಬಿನಲ್ಲೇ ಮುಂದುವರೆಯುವ ಇಚ್ಛೆಯಿಂದ ಊರಲ್ಲೇ ಉಳಿದರೆ ಎರಡನೆ ಮಗ ಕಲಬುರಗಿಯ ಕಾಲೇಜೊಂದರಲ್ಲಿ ಬಿ.ಎ ಓದುತ್ತಿದ್ದ. ಎರಡು ಹೆಣ್ಣು ಮಕ್ಕಳು ಇನ್ನು ಚಿಕ್ಕವರಿದ್ದು ಊರಲ್ಲೇ ಶಾಲೆಗೆ ಹೋಗುತ್ತಿದ್ದರು. 

    ಅಪ್ಪಣ್ಣನಿಗೆ ಹೇಳಿಕೊಳ್ಳುವಂಥ ಆಸ್ತಿ ಇರಲಿಲ್ಲ. ಅಕ್ಕನ ಗಂಡ ಕಟ್ಟಿಸಿದ ಮನೆಯೊಂದು ಬಿಟ್ಟರೆ ತನ್ನ ದಿನನಿತ್ಯದ ಕ್ಷೌರದ ಕಾಯಕವೇ ಅನ್ನಕ್ಕೆ ಆಸರೆಯಾಗಿತ್ತು. ವರ್ಷಕ್ಕೆ ದವಸಧಾನ್ಯ ಕೊಟ್ಟು ಕ್ಷೌರ ಮಾಡಿಸಿಕೊಳ್ಳುವ ಕುಟುಂಬಗಳೇ ಊರಲ್ಲಿ ಹೆಚ್ಚಿದ್ದುದ್ದರಿಂದ ಹಣಕೊಡುವವರ ಸಂಖ್ಯೆ ತೀರ ಕಡಿಮೆಯಿತ್ತು. ಬೇಸಾಯವಿಲ್ಲದ ಕುಟುಂಬದವರು ಮಾತ್ರ ಹಣಕೊಟ್ಟು ಕ್ಷೌರ ಮಾಡಿಸಿಕೊಳ್ಳುತ್ತಿದ್ದರು. ಸಾಮಾನ್ಯವಾಗಿ ಅಂಥವರು ಅಪ್ಪಣ್ಣನಿಗಿಂತ ಪಟ್ಟಣದ ಸಲೂನ್ ಅಂಗಡಿಗಳಲ್ಲೇ ಕಟಿಂಗ್ ಮಾಡಿಸಿಕೊಳ್ಳುವುದಿತ್ತು. ಮೆತ್ತನೆಯ ಖುರ್ಚಿ, ಎದುರಿಗೆ ಪ್ರತಿಬಿಂಬ ತೋರಿಸುವ ದೊಡ್ಡಗಾತ್ರದ ಕನ್ನಡಿ, ಮುಖಕ್ಕೆ ಲೇಪಿಸುವ ಸುವಾಸನೆಯುಕ್ತ ಪೌಡರ್ ಇವುಗಳಿಂದ ವಂಚಿತರಾಗಿ ಅಪ್ಪಣ್ಣನಿಂದ ಕ್ಷೌರ ಮಾಡಿಸಿಕೊಳ್ಳಲು ಅವರ ಮನ್ನಸ್ಸು ಒಪ್ಪುತ್ತಿರಲಿಲ್ಲ. ಆಗೆಲ್ಲ ಅಪ್ಪಣ್ಣನಿಗೂ ಊರಲ್ಲಿ ಅಂಥದ್ದೊಂದು ಅಂಗಡಿ ತೆರೆಯುವ ಆಸೆಯಾಗುತ್ತಿತ್ತಾದರೂ ಅದಕ್ಕೆ ಬೇಕಾದ ಬಂಡವಾಳವಿಲ್ಲದೆ ಅಂಥದ್ದೆಲ್ಲ ನನ್ನಂಥವರಿಗಲ್ಲ ಎಂದು ಮನಸ್ಸಿಗೆ ಸಮಾಧಾನ ತಂದುಕೊಳ್ಳುತ್ತಿದ್ದ. ವರ್ಷವಿಡೀ ಕ್ಷೌರ ಮಾಡಿಸಿಕೊಳ್ಳುವ ಕುಟುಂಬಗಳು ಕೆಲವೊಮ್ಮೆ ಬೇಸಾಯದಲ್ಲಿ ನಷ್ಟವಾಯಿತೆಂದು ಅಪ್ಪಣ್ಣನಿಗೆ ಕೊಡಬೇಕಾದ ದವಸಧಾನ್ಯದಲ್ಲಿ ಅರ್ಧದಷ್ಟನ್ನೋ ಇಲ್ಲವೇ ಪೂರ್ತಿ ಕೊಡದೆ ಸತಾಯಿಸುತ್ತಿದ್ದರು. ಆಗೆಲ್ಲ ಈ ಹಳ್ಳಿಯ ಸಹವಾಸವೇ ಸಾಕು ಪಟ್ಟಣಕ್ಕೆ ಹೋಗಿ ತಾನೂ ಅಲ್ಲಿನವರಂತೆ ಕ್ಷೌರದ ಅಂಗಡಿಯನ್ನಿಡಬೇಕೆಂಬ ಅಪ್ಪಣ್ಣನ ಆಸೆ ಮತ್ತೆ ಚಿಗುರುತ್ತಿತ್ತು. ವರ್ಷದ ಬಾಬತ್ತನ್ನು ಸರಿಯಾದ ಸಮಯದಲ್ಲಿ ಕೊಡದೆ ಸತಾಯಿಸುವವರನ್ನು ಅಪ್ಪಣ್ಣ ಕೂಡ ಆಟವಾಡಿಸುತ್ತಿದ್ದ. ಕೆಲವು ದಿನಗಳ ಕಾಲ ಕ್ಷೌರದ ಕೆಲಸವನ್ನೇ ನಿಲ್ಲಿಸಿ ಬೇರೆ ಊರುಗಳಲ್ಲಿನ ಬಂಧುಗಳ ಮನೆಗೆ ಹೋಗಿ ಕುಳಿತು ಬಿಡುತ್ತಿದ್ದ. ಇಲ್ಲಿ ಊರಿನಲ್ಲಿ ಮಕ್ಕಳ, ಯುವಕರ, ಮುದುಕರ ತಲೆಕೂದಲು ಬೆಳೆದು ತಲೆಯಲ್ಲಿ ಹೇನುಗಳಾಗಿ ಅಪ್ಪಣ್ಣ ಯಾವಾಗ ಬರುವನೋ ಎಂದು ಇಡೀ ಊರು ಅವನ ದಾರಿ ಕಾಯುತ್ತಿತ್ತು. ಅಪ್ಪಣ್ಣ ಬಂದದ್ದು ಗೊತ್ತಾದದ್ದೆ ವರ್ಷದ ಬಾಬತ್ತಿನಲ್ಲಿ ಒಂದಷ್ಟನ್ನಾದರೂ ಕೊಟ್ಟು ಸಮಾಧಾನಪಡಿಸಿ ತಮ್ಮ ತಲೆಯನ್ನು ನುಣ್ಣಗೆ ಬೋಳಿಸಿಕೊಂಡು ಹೇನುಗಳ ಕಾಟದಿಂದ ಮುಕ್ತರಾಗುತ್ತಿದ್ದರು. 

      ಅಪ್ಪಣ್ಣ ಮಧ್ಯಾಹ್ನದವರೆಗೂ ಮನೆಯ ಎದುರಿನ ಜಗುಲಿಯ ಮೇಲೆ ಕುಳಿತು ಮನೆಗೆ ಬರುವ ಗಿರಾಕಿಗಳ ತಲೆ ಕ್ಷೌರ ಮಾಡಿ ಇನ್ನು ಉಳಿದವರನ್ನು ನಾಳೆ ಬರಲು ಸಾಗಹಾಕಿ ಮತ್ತೊಮ್ಮೆ ಚಹಾ ಕುಡಿದವನೇ ಪೆಟ್ಟಿಗೆಯನ್ನು ಕೈಯಲ್ಲಿ ಹಿಡಿದು ಊರ ಗೌಡರ ಮನೆಗೆ ಹೋಗುತ್ತಿದ್ದ. ಗೌಡರು, ಶ್ಯಾನುಭೋಗರು ಅಪ್ಪಣ್ಣನ ಮನೆಯ ಎದುರಿನ ಜಗುಲಿಯ ಮೇಲೆ ಕುಳಿತು ಕ್ಷೌರ ಮಾಡಿಸಿಕೊಳ್ಳುವುದೆಂದರೆ ಅದು ಅವರಿಗೆ ಮಾತ್ರವಲ್ಲ ಇಡೀ ಊರಿನ ಪ್ರತಿಷ್ಠೆಯ ಪ್ರಶ್ನೆಯಾಗಿತ್ತು. ಊರ ಕ್ಷೌರಿಕ ಗೌಡರ ಮನೆಯಲ್ಲಿ ಒಂದೆರಡು ತಾಸು ಮತ್ತು ಶ್ಯಾನುಭೋಗರ ಮನೆಯಲ್ಲಿ ಒಂದೆರಡು ತಾಸು ಪ್ರತಿದಿನ ಕಳೆಯುವುದು ಮೊದಲಿನಿಂದಲೂ ನಡೆದುಕೊಂಡು ಬಂದ ಪದ್ಧತಿಯಾಗಿತ್ತು. ಅಪ್ಪಣ್ಣನೂ ಚಾಚೂತಪ್ಪದೆ ಆ ಪದ್ಧತಿಯನ್ನು ಪಾಲಿಸಿಕೊಂಡು ಬಂದಿದ್ದ. ಆಗೆಲ್ಲ ಗೌಡರು ಮತ್ತು ಶ್ಯಾನುಭೋಗರಿಗೆ ಮಾತ್ರವಲ್ಲದೆ ಮನೆಯಲ್ಲಿನ ಮಕ್ಕಳಿಗೂ ಈ ವಿಶೇಷ ಸೌಲಭ್ಯ ಸಿಗುತ್ತಿತ್ತು. ಗೌಡರು ಮತ್ತು ಶ್ಯಾನುಭೋಗರಿಗೆ ಕ್ಷೌರ ಮಾಡುವುದರ ಜೊತೆಗೆ ಕೈಕಾಲುಗಳ ಉಗುರು ಕತ್ತರಿಸುವುದು, ತಲೆಗೆ ಎಣ್ಣೆಹಚ್ಚಿ ಮಸಾಜ್ ಮಾಡುವುದು ಇಂಥ ವಿಶೇಷ ಸೇವೆಗಳನ್ನು ಅಪ್ಪಣ್ಣ ಮಾಡಬೇಕಾಗುತ್ತಿತ್ತು. ಆಗೆಲ್ಲ ಅವನಿಗೆ ವರ್ಷದ ಬಾಬತ್ತಿನ ಹೊರತಾಗಿಯೂ ಒಂದಷ್ಟು ಚಿಲ್ಲರೆ ಕಾಸು ಭಕ್ಷಿಸಾಗಿ ಸಿಗುತ್ತಿತ್ತು. ಇದೆಲ್ಲ ಮುಗಿದು ಮನೆಗೆ ಹೋಗುವಷ್ಟರಲ್ಲಿ ಮಧ್ಯಾಹ್ನವಾಗಿರುತ್ತಿತ್ತು. ಮನೆಗೆ ಹೋಗಿ ಮತ್ತೊಮ್ಮೆ ಸ್ನಾನ ಮಾಡಿದ ನಂತರ ಅಪ್ಪಣ್ಣ ಕ್ಷೌರದ ಪೆಟ್ಟಿಗೆಯನ್ನು ಮತ್ತೆ ಮುಟ್ಟುವುದು ಮರುದಿನದ ಬೆಳಗ್ಗೆಯೇ.  

    ಯಾವ ತಂಟೆ ತಕರಾರುಗಳಿಲ್ಲದೆ ಅಪ್ಪಣ್ಣನ ಬದುಕಿನ ಬಂಡಿ ಸಲೀಸಾಗಿ ನಡೆದುಕೊಂಡು ಹೋಗುತ್ತಿರುವಾಗ ಇದ್ದಕ್ಕಿದ್ದಂತೆ ಒಂದು ದಿನ ಅಪ್ಪಣ್ಣ ತಳೆದ ನಿಲುವು ಆ ಊರಿನಲ್ಲಿ ಬಹುದೊಡ್ಡ ಸಾಮಾಜಿಕ ಸ್ಥಿತ್ಯಂತರಕ್ಕೆ ಕಾರಣವಾಗಬಹುದೆಂದು ಯಾರೂ ಊಹಿಸಿರಲಿಲ್ಲ. ಅಪ್ಪಣ್ಣನ ಕಿರಿಯ ಮಗ ಆನಂದ ಪಟ್ಟಣದ ಕಾಲೇಜಿನಲ್ಲಿ ಓದುತ್ತಿದ್ದು ಊರಿಗೆ ಬರುವಾಗಲೆಲ್ಲ ದೊಡ್ಡ ದೊಡ್ಡ ಪುಸ್ತಕಗಳನ್ನು ಹಿಡಿದುಕೊಂಡು ಮನೆಗೆ ಬರುತ್ತಿದ್ದ. ಆಗೆಲ್ಲ ಅಪ್ಪಣ್ಣನಿಗೆ ತನಗೂ ನಾಲ್ಕಕ್ಷರ ಗೊತ್ತಿದ್ದರೆ ಮಗ ಮನೆಗೆ ತರುತ್ತಿದ್ದ ಆ ದಪ್ಪ ಪುಸ್ತಕಗಳನ್ನು ಓದಿ ಅದರಲ್ಲಿರುವುದನ್ನು ತಿಳಿದುಕೊಳ್ಳುತ್ತಿದ್ದೆ ಎಂದೆನಿಸುತ್ತಿತ್ತು. ಮಗನಿಂದ ಆ ಪುಸ್ತಕದಲ್ಲಿರುವುದನ್ನು ಕೇಳಿ ತಿಳಿದುಕೊಳ್ಳುವ ಮೂಲಕ ಅಪ್ಪಣ್ಣ ತನಗಾಗುವ ನಿರಾಸೆಯನ್ನು ಮರೆಯುತ್ತಿದ್ದ. ಮಗನ ಪುಸ್ತಕಗಳಲ್ಲಿದ್ದ ಗಾಂಧಿ, ಅಂಬೇಡ್ಕರ್, ಲೋಹಿಯಾ, ಕಾರ್ಲ್ ಮಾರ್ಕ್ಸ್ ಹೀಗೆ ಒಬ್ಬೊಬ್ಬರಾಗಿ ಅಪ್ಪಣ್ಣನ ಭಾವದಲ್ಲಿ ಸೇರತೊಡಗಿದಂತೆ ತನ್ನ ಸುತ್ತಲಿನ ಜಗತ್ತನ್ನು ಅಪ್ಪಣ್ಣ ಹೊಸ ರೀತಿಯಲ್ಲಿ ಗ್ರಹಿಸತೊಡಗಿದ. ಹೀಗೆ ಅಪ್ಪಣ್ಣನ ಬದುಕಿನಲ್ಲಿ ಬದಲಾವಣೆಯ ಹೊಸಗಾಳಿ ಬೀಸುತ್ತಿರುವ ಘಳಿಗೆ ಅವನ ಮಗನೊಂದಿಗೆ ಪಟ್ಟಣದ ಕಾಲೇಜಿನಲ್ಲಿ ಓದುತ್ತಿದ್ದ ಹರಿಜನ ಕೇರಿಯ ಚೆನ್ನ ಆನಂದನನ್ನು ಹುಡುಕಿಕೊಂಡು ಒಂದು ಬೆಳಗ್ಗೆ ಮನೆ ಎದುರು ಬಂದು ನಿಲ್ಲುವುದಕ್ಕೂ ಅಪ್ಪಣ್ಣ ಎರ್ರಾಬಿರ್ರಿ ಕೂದಲು ಬೆಳೆದ ಚೆನ್ನನ ತಲೆಯನ್ನು ನೋಡುವುದಕ್ಕೂ ಸರಿಹೋಯಿತು. ‘ಯಾಕ್ಲ ಚೆನ್ನ ಯಾಪರಿ ಕೂದ್ಲು ಬೆಳೆಸಿದ್ದಿ. ಹೇನಾದ್ರ ನಿಂಗೆ ಕಷ್ಟ ನೋಡು’ ಅಪ್ಪಣ್ಣ ಲೊಚಗುಟ್ಟಿದ. ‘ಏನ್ಮಾಡ್ಲಿ ಕಣಣ್ಣೊ ಕಾಲೇಜಿಗಿ ರಜೆ ಅಂತ ಪಟ್ಟಣಕ ಹೋಗದೆ ಎರಡು ತಿಂಗಳಾಯ್ತು’ ಚೆನ್ನ ತನ್ನ ಅಸಹಾಯಕತೆ ತೋಡಿಕೊಂಡ. ‘ಕೂಡು ಮತ್ತೆ ತಲೆ ಬೋಳುಸ್ತೀನಿ’ ಅಪ್ಪಣ್ಣ ತನ್ನೆದುರು ಕುಳಿತ ಸಾಲನ್ನು ಲಕ್ಷಕ್ಕೆ ತೆಗೆದುಕೊಳ್ಳದೆ ಪೆಟ್ಟಿಗೆಯೊಳಗಿನ ಕ್ಷೌರದ ಸಾಮಗ್ರಿಗಳನ್ನು ಹೊರತೆಗೆದವನೇ ಚೆನ್ನನ ತಲೆಗೆ ಕೈ ಹಚ್ಚಿದ. ನೋಡು ನೋಡುವಷ್ಟರಲ್ಲಿ ಅಪ್ಪಣ್ಣನ ಕೈಯೊಳಗಿನ ಕತ್ತರಿ ಚೆನ್ನನ ತಲೆಯಲ್ಲಿ ಸಲೀಸಾಗಿ ಆಡಿ ಕೂದಲನ್ನೆಲ್ಲ ಧರೆಗಿಳಿಸಿ ನುಣ್ಣಗೆ ಹೊಳೆಯುವಂತೆ ಮಾಡಿತು. ಅಪ್ಪಣ್ಣನ ಮನೆ ಎದುರು ಕ್ಷೌರಕ್ಕಾಗಿ ಕಾದು ಕುಳಿತಿದ್ದ ಊರ ಜನ ದಂಗಾಗಿ ಹೋದರು. ಕ್ಷೌರಕ್ಕಾಗಿ ಕಾದು ಕುಳಿತವರೆಲ್ಲ ಒಬ್ಬೊಬ್ಬರಾಗಿ ಎದ್ದು ಹೋಗುತ್ತಿದ್ದಂತೆ ಅಪ್ಪಣ್ಣನ ಮನೆ ಎದುರಿನ ಸಾಲು ಕರಗತೊಡಗಿತು.

      ಊರ ಗೌಡರಿಗೆ ಸುದ್ದಿ ಮುಟ್ಟಿತು. ಊರವರೆಲ್ಲ ಸಭೆ ಸೇರಿ ಪಂಚಾಯಿತಿ ಕಟ್ಟೆಗೆ ಅಪ್ಪಣ್ಣನನ್ನು ಕರೆಕಳಿಸಿದರು. ಪಂಚಾಯಿತಿ ತೀರ್ಪು ತಿಳಿಯಲು ಇಡೀ ಊರು ಅಲ್ಲಿ ನೆರೆದಿತ್ತು. ಮಗ ಆನಂದನ ಜೊತೆಗೂಡಿ ಅಪ್ಪಣ್ಣ ಪಂಚಾಯ್ತಿ ಕಟ್ಟೆಗೆ ಬಂದಾಗ ಸಭೆಯಲ್ಲಿ ಗುಸುಗುಸು ಮಾತುಗಳಿಂದ ಗದ್ದಲ ಮೂಡಿ ಒಬ್ಬರ ಮಾತು ಇನ್ನೊಬ್ಬರಿಗೆ ಕೇಳಿಸದಾಯಿತು. ಪಂಚಾಯಿತಿ ಕಟ್ಟೆಯ ಮೇಲೆ ಕುಳಿತಿದ್ದ ಊರ ಪ್ರಮುಖರನ್ನು ನಮಸ್ಕರಿಸಿ ಅಪ್ಪಣ್ಣ ಕಟ್ಟೆಯ ಎಡಬದಿಗೆ ಹೋಗಿ ಕೈಕಟ್ಟಿ ನಿಂತುಕೊಂಡ. ‘ಏನು ಅಪ್ಪಣ್ಣ ಇವತ್ತು ಬೆಳಗ್ಗೆ ಕೇರಿಯ ಮಾದನ ಮಗ ಚೆನ್ನನಿಗೆ ನೀನು ಊರಿನವರೆದುರೇ ಅದು ಹಾಡ ಹಗಲು ಕ್ಷೌರ ಮಾಡಿದಿಯಂತೆ ನಿಜಾನಾ’ ನ್ಯಾಯಸ್ಥರ ಮಧ್ಯದಲ್ಲಿ ಕುಳಿತಿದ್ದ ಶಾಂತಪ್ಪಗೌಡರು ತಮ್ಮ ಎಂದಿನ ಗಂಭೀರ ಧ್ವನಿಯಲ್ಲಿ ಮಾತಿಗೆ ಪೀಠಿಕೆ ಹಾಕಿದರು. ‘ನಾನು ಮಾಡಿದ್ದರಲ್ಲಿ ತಪ್ಪೆನಿದೆ ಗೌಡ್ರೆ’ ಅಪ್ಪಣ್ಣ ಸಮಾಧಾನದ ಸ್ವರದಲ್ಲೇ ಉತ್ತರಿಸಿದ. ಸಭೆಯಲ್ಲಿ ಮತ್ತೊಮ್ಮೆ ಗುಸುಗುಸು ಮಾತುಗಳಿಂದ ಗದ್ದಲ ಶುರುವಾಯಿತು. ಶಾಂತಪ್ಪಗೌಡರು ಎಲ್ಲರಿಗೂ ಸುಮ್ಮನಿರುವಂತೆ ಹೇಳಿ ‘ತಲತಲಾಂತರದಿಂದ ನಡೆದುಕೊಂಡು ಬಂದ ಸಂಪ್ರದಾಯ ಕಡೆಗಣಿಸಿದರೆ ಊರಿಗೆ ಕೇಡು ತಪ್ಪಿದ್ದಲ್ಲ ಅಪ್ಪಣ್ಣ’ ಈ ಸಲ ಗೌಡರ ಧ್ವನಿಯಲ್ಲಿ ಬೆದರಿಸುವ ಗಡಸುತನವಿತ್ತು. ‘ಪ್ಯಾಟಿನ್ಯಾಗ ಕಟಿಂಗ್ ಮಾಡಿಸಿಕೊಳ್ಳೊರಿಗಿ ಕೇಳ್ರಿ. ಅಲ್ಲಿ ಊರವರು ಕೇರಿಯವರು ಅಂತ ಭೇದ ಇರಲ್ಲ. ಪ್ಯಾಟ್ಯಾಗ ಇಲ್ಲದ್ದು ಈ ಊರಿನ್ಯಾಗ್ಯಾಕೆ’ ಅಪ್ಪಣ್ಣ ತಾನು ಮಾಡಿದ್ದಕ್ಕೆ ಸಮಜಾಯಿಷಿ ಕೊಡುತ್ತಿರುವನೋ ಅಥವಾ ಪ್ರಶ್ನಿಸುತ್ತಿರುವನೋ ಎನ್ನುವ ಗೊಂದಲ ಅಲ್ಲಿ ನೆರೆದಿದ್ದವರಲ್ಲಿ ಮೂಡಿತು. ‘ಅಪ್ಪಣ್ಣ ಎದುರುತ್ತರಾ ಬ್ಯಾಡ. ಪಂಚಾಯಿತಿ ಕಠಿಣ ತೀರ್ಮಾನ ತಗೊಬೇಕಾಗ್ತದ’ ವಾಡ್ಯಾದ ಶಿವನಿಂಗೇಗೌಡ ಅದುಮಿಟ್ಟುಕೊಂಡ ಸಿಟ್ಟು ಹೊರಹಾಕಿದ. ‘ಗೌಡ ಕೈಯಾಗ ಅಧಿಕಾರ ಅದ ಅಂತ ಏನು ಬೇಕಾದ್ರ ಮಾಡ್ತೀನಿ ಅಂದ್ರ ಈಗ ಕಾನೂನು ಕೇಳಂಗಿಲ್ಲ. ಸರ್ಕಾರನೇ ಸಮಾನತೆ ಬರಬೇಕು ಅಂತ ಹೇಳ್ಯಾದಂತ. ಗಾಂಧೀಜಿ ಅಂಥ ದೊಡ್ಡ ವ್ಯಕ್ತಿನೇ ಕೇರಿ ಕೇರಿಗಿ ಹೋಗಿ ಹೇಲ ಬಳದಮ್ಯಾಲ ನಮ್ಮ ನಿಮ್ಮಂಥೊರು ಯಾವ ಲೆಕ್ಕಕ್ಕ. ನಾನು ಇನ್ಮುಂದ ಯಾರೇ ಬರಲಿ ಕಟಿಂಗ್ ಮಾಡೋನೆ. ನೀವು ಏನ್ ಬೇಕಾದ್ರೂ ಮಾಡಿ’ ಅಪ್ಪಣ್ಣ ಎದ್ದುನಿಂತು ಮಗನ ಕೈಹಿಡಿದು ಸೇರಿದ್ದ ಜನರ ನಡುವಿನಿಂದ ದಾರಿ ಮಾಡಿಕೊಂಡು ಮನೆಯಕಡೆ ಹೆಜ್ಜೆ ಹಾಕಿದ. ಮತ್ತೆ ಸಭೆಯಲ್ಲಿ ಗದ್ದಲ ಶುರುವಾಯಿತು. ಪಂಚಾಯಿತಿ ಕಟ್ಟೆಯಲ್ಲಿನ ನ್ಯಾಯಸ್ಥರು ತಮ್ಮ ತಮ್ಮಲ್ಲೆ ಮಾತನಾಡಿಕೊಂಡು ಒಂದು ತೀರ್ಮಾನಕ್ಕೆ ಬಂದವರಂತೆ ಶಾಂತಪ್ಪಗೌಡರನ್ನು ಮಾತನಾಡಲು ಅನುವು ಮಾಡಿಕೊಟ್ಟರು. ಶಾಂತಪ್ಪಗೌಡರು ನೆರೆದಿದ್ದ ಜನಸ್ತೋಮದತ್ತ ಒಮ್ಮೆ ದೃಷ್ಟಿ ಹರಿಸಿ ಕೆಮ್ಮಿ ಗಂಟಲನ್ನು ಸರಿಮಾಡಿಕೊಂಡು ಎಂದಿನ ತಮ್ಮ ಸಹಜ ಗಂಭೀರ ಧ್ವನಿಯಲ್ಲಿ ಪಂಚಾಯಿತಿ ತೀರ್ಮಾನ ಹೇಳಿದರು ‘ನೋಡಿ ನಾವು ನ್ಯಾಯಸ್ಥರೆಲ್ಲ ಕೂಡಿ ತೀರ್ಮಾನ ತೆಗೆದುಕೊಂಡಿದ್ದೀವಿ. ಆ ಪ್ರಕಾರ ಇನ್ಮುಂದೆ ಊರಿನ ಯಾವ ನರಪಿಳ್ಳೆಯೂ ಕ್ಷೌರಕ್ಕಾಗಿ ಅಪ್ಪಣ್ಣನ ಮನೆಗೆ ಹೋಗುವಂತಿಲ್ಲ. ಬೇರೆ ಊರಿಂದ ಕ್ಷೌರಿಕನನ್ನು ಊರಿಗೆ ಕರೆತಂದರಾಯ್ತು. ಅಲ್ಲಿವರೆಗೂ ಎಲ್ಲರೂ ಪಂಚಾಯಿತಿ ನ್ಯಾಯಕ್ಕೆ ಚ್ಯುತಿ ಬರದಂಗ ನಡ್ಕೊಳ್ಳಬೇಕು’. ಸಭೆ ಮುಗಿದು ಒಬ್ಬಬ್ಬೊರಾಗಿ ಎಲ್ಲರೂ ತಮ್ಮ ತಮ್ಮ ಮನೆಗಳಿಗೆ ತೆರಳಿದರು.

      ಅಪ್ಪಣ್ಣನ ಹೆಂಡತಿ ಮಾಲಕ್ಷ್ಮಿಗೆ ತನ್ನ ಗಂಡ ಮಾಡಿದ್ದು ಸರಿ ಅನಿಸಲಿಲ್ಲ. ಅಪ್ಪಣ್ಣನಿಗೂ ಆರಂಭದಲ್ಲಿ ಊರವರನ್ನು ಎದುರುಹಾಕಿಕೊಂಡೆನೇನೋ ಎನ್ನುವ ಭಯ ಕಾಡಿದರೂ ಮನೆಯಲ್ಲಿ ತೂಗು ಹಾಕಿದ್ದ ಗಾಂಧೀಜಿ ಫೆÇೀಟೋ ನೋಡುವಾಗಲೆಲ್ಲ ತಾನು ಮಾಡಿದ್ದು ಸರಿ ಅನಿಸತೊಡಗಿತು. ಊರಲ್ಲಿ ಜನರು ಕೂತಲ್ಲಿ ನಿಂತಲ್ಲಿ ಇದೇ ಮಾತನ್ನು ಆಡಿಕೊಂಡು ಕೆಲವರು ಅಪ್ಪಣ್ಣನ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರೆ ಇನ್ನು ಕೆಲವರು ಅಪ್ಪಣ್ಣನಿಗೆ ಕೇಡು ಸಮೀಪಿಸಿದೆಯೆಂದೂ ಇದರಿಂದ ಊರಿಗೆ ಒಳ್ಳೆಯದಾಗುವುದಿಲ್ಲವೆಂದು ಆತಂಕಪಟ್ಟರು. ಒಂದೆರಡು ದಿನ ಮನೆಯಲ್ಲಿ ಸುಮ್ಮನೆ ಕುಳಿತಿದ್ದ ಅಪ್ಪಣ್ಣ ಒಂದು ದಿನ ಬೆಳಗ್ಗೆ ಎದ್ದವನೇ ಸ್ನಾನ ಮಾಡಿ ಕ್ಷೌರದ ಪೆಟ್ಟಿಗೆ ಹಿಡಿದು ಊರ ಹೊರಗಿನ ಕೇರಿಯ ಕಡೆ ನಡೆದ. ಗಂಡನನ್ನು ತಡೆಯಬೇಕೆಂದ ಮಾಲಕ್ಷ್ಮಿಗೆ ಧೈರ್ಯ ಸಾಲದೆ ಆತ ಹೋಗುವುದನ್ನೇ ನೋಡುತ್ತ ನಿಂತವಳಿಗೆ ಕೊಟ್ಟಿಗೆಯ ಕಸ ಹಾಗೇ ಇರುವುದು ನೆನಪಾಗಿ ಕೈಯಲ್ಲಿ ಕಸಬಾರಿಗೆ ಹಿಡಿದು ಗುಡಿಸತೊಡಗಿದಳು. ಅಪ್ಪಣ್ಣ ಊರಿನ ಮುಖ್ಯ ಬೀದಿಗಳನ್ನು ಹಾದು ಆಂಜನೇಯ ಗುಡಿಯನ್ನು ದಾಟಿ ಕೇರಿಯನ್ನು ಪ್ರವೇಶಿಸಿ ಮಾದನ ಮನೆಯ ಎದುರಿನ ದೊಡ್ಡ ಆಲದ ಮರದ ಕೆಳಗೆ ಕೂತು ಪೆಟ್ಟಿಗೆ ಕೆಳಗಿಟ್ಟು ಬೀಡಿ ಹೊತ್ತಿಸಿದ. ಜನ ಒಬ್ಬೊಬ್ಬರಾಗಿ ಮನೆಯೊಳಗಿಂದ ಹೊರಬಂದು ಅಪ್ಪಣ್ಣನನ್ನು ವಿಚಿತ್ರವಾಗಿ ನೋಡುತ್ತ ಕ್ಷಣಕಾಲ ನಿಂತು ಮತ್ತೆ ಮನೆ ಸೇರತೊಡಗಿದರು. ಕೊನೆಗೆ ಮಾದ ಮನೆಯಿಂದ ಹೊರಬಂದವನೆ ಅಪ್ಪಣ್ಣನ ಎದುರು ಕುಳಿತು ತಲೆ ಬಗ್ಗಿಸಿದ. ಅಪ್ಪಣ್ಣ ಬೀಡಿಯ ತುಂಡನ್ನು ನೆಲಕ್ಕೆ ಒರಸಿ ದೂರ ಒಗೆದು ಬಟ್ಟಲಲ್ಲಿದ್ದ ನೀರನಲ್ಲಿ ಕೈ ಅದ್ದಿ ಮಾದನ ತಲೆಗೆ ರಪರಪನೆ ಬಡಿಯತೊಡಗಿದ. 

    ಅಪ್ಪಣ್ಣನ ಬದುಕು ಮತ್ತೆ ನಿರಾತಂಕವಾಗಿ ಸಾಗತೊಡಗಿತು. ಅವನ ಹಿರಿಮಗ ಪ್ರತಿನಿತ್ಯ ಪಟ್ಟಣಕ್ಕೆ ಹೋಗಿ ಅಲ್ಲಿನ ಸಲೂನ್ ಅಂಗಡಿಗಳಲ್ಲಿ ದುಡಿಯತೊಡಗಿದ್ದರಿಂದ ಈಗ ಮನೆಯಲ್ಲಿ ಯಾವ ಆರ್ಥಿಕ ಅಡಚಣೆಗಳೂ ಇರಲಿಲ್ಲ. ಕೇರಿಯ ಜನ ಕೂಡ ಹಣ ಕೊಟ್ಟು ಅಪ್ಪಣ್ಣನಿಂದ ಕ್ಷೌರ ಮಾಡಿಸಿಕೊಳ್ಳುತ್ತಿದ್ದರಿಂದ ಒಂದಷ್ಟು ಕಾಸು ಕೂಡತೊಡಗಿತು. ಸಮಸ್ಯೆ ಎದುರಾದದ್ದು ಊರಿನವರಿಗೆ. ಪಂಚಾಯಿತಿಯಲ್ಲೇನೋ ತೀರ್ಮಾನ ತೆಗೆದುಕೊಂಡಾಗಿತ್ತು. ಆದರೆ ಒಂದೆರಡು ತಿಂಗಳಲ್ಲಿ ಅಪ್ಪಣ್ಣನ ಅನಿವಾರ್ಯತೆ ಎಲ್ಲರಿಗೂ ಅರ್ಥವಾಗತೊಡಗಿತು. ವರ್ಷಕ್ಕೊಮ್ಮೆ ಕಾಳುಕಡಿ ನೀಡಿ ಕ್ಷೌರ ಮಾಡಿಸಿಕೊಳ್ಳುತ್ತಿದ್ದವರಿಗೆ ಪಟ್ಟಣದ ಸಲೂನ್‍ಗಳಲ್ಲಿ ಅವರು ಹೇಳಿದಷ್ಟು ಹಣ ಕೊಡುವುದು ದುಬಾರಿ ಅನಿಸಲಾರಂಭಿಸಿತು. ಒಮ್ಮೊಮ್ಮೆ ಸಲೂನ್ ಅಂಗಡಿಯಲ್ಲಿ ಊರಿನವರು ಮತ್ತು ಕೇರಿಯವರು ಜೊತೆಯಾಗಿಯೇ ಕೂಡುವುದಿತ್ತು. ಆಗೆಲ್ಲ ಒಂದೇ ಕತ್ತರಿ ಇಬ್ಬರ ತಲೆಯಲ್ಲೂ ಆಡುತ್ತಿತ್ತು. ಈ ವಿಷಯವಾಗಿ ರುಕ್ಮೋಜಿ ಊರ ಪಟೇಲರಾದ ಶಾಂತಪ್ಪಗೌಡರ ಎದುರು ತನ್ನ ಅಸಮಾಧಾನವನ್ನು ತೋಡಿಕೊಂಡಿದ್ದ ‘ಗೌಡ್ರೆ ಇಲ್ಲಿ ಊರಾಗೇನೋ ಅಪ್ಪಣ್ಣ ಮಾಡಿದ್ದು ತಪ್ಪು ಅಂತೀರಿ. ಮೊನ್ನೆ ಶಹರದಾಗ ಸಲೂನ್ ಅಂಗಡ್ಯಾಗ ಮಾದರ ಲಕ್ಕ್ಯಾ ನನ್ನ ಪಕ್ಕದಾಗೆ ಕೂತಿದ್ದ. ಲಕ್ಕ್ಯಾಗ ಮಾಡಿದ ಕತ್ತರಿನಿಂದೇ ನನಗೂ ಕಟಿಂಗ್ ಮಾಡ್ದ ಆ ಅಂಗಡಿಯವ. ಆಗ ನಮಗ ಇಲ್ಲಿ ಮಾಡದಂಗ ಜಬರ್ದಸ್ತಿ ಮಾಡ್ಲಿಕ್ಕಿ ಬರ್ತಿತ್ತೇನು’. ಗೌಡರಿಗೂ ಸಮಸ್ಯೆಯ ಬಿಸಿ ತಟ್ಟಿತ್ತು. ಅವರೂ ಕಳೆದ ಎರಡು ವಾರಗಳಿಂದ ಅಕ್ಕಪಕ್ಕದ ಊರುಗಳಲ್ಲಿದ್ದ ತಮ್ಮ ನೆಂಟರಿಷ್ಟರನ್ನು ಸಂಪರ್ಕಿಸಿ ಒಬ್ಬ ಕ್ಷೌರಿಕನನ್ನು ತಮ್ಮೂರಿಗೆ ಕಳುಹಿಸಿಕೊಡಲು ವಿನಂತಿಸಿಕೊಂಡಿದ್ದರು. ಸುತ್ತಮುತ್ತಲಿನ ಫಾಸಲೆಯಲ್ಲೆಲ್ಲ ಅಪ್ಪಣ್ಣನ ಸಂಬಂಧಿಕರೇ ಇದ್ದುದ್ದರಿಂದ ಯಾರೂ ಬರಲು ತಯ್ಯಾರಿರಲಿಲ್ಲ. 

   ನಾಲ್ಕಾರು ತಿಂಗಳಲ್ಲಿ ಊರಿನ ಅರ್ಧದಷ್ಟು ಜನರ ತಲೆ ಕೂದಲು ಸಿಕ್ಕಾಪಟ್ಟೆ ಬೆಳೆದು ಅವರೆಲ್ಲ ನೋಡಲು ನಾಟಕಗಳಲ್ಲಿನ ಋಷಿಮುನಿಗಳಂತೆ ಕಾಣಿಸತೊಡಗಿದರು. ಮಕ್ಕಳ ಕೂದಲೂ ಬೆಳೆದು ಅವುಗಳು ಬಾಲಮುನಿಗಳಂತೆ ಗೋಚರಿಸತೊಡಗಿದವು.  ತಲೆಯಲ್ಲಿ ಹೇನುಗಳಾಗಿ ಕುಳಿತಲ್ಲಿ ನಿಂತಲ್ಲಿ ತಲೆ ಕೆರೆದುಕೊಳ್ಳುತ್ತ ಇಡೀ ಊರು ವಿಚಿತ್ರವಾಗಿಯೂ ಮತ್ತು ನಿಗೂಢವಾದ ಸಮಸ್ಯೆಯಲ್ಲಿ ಸಿಲುಕಿರುವಂತೆ ಅನುಭವಕ್ಕೆ ಬರತೊಡಗಿತು. ಗಡ್ಡ ಮತ್ತು ತಲೆ ಕೂದಲು ಬೆಳೆದು ಅಸಹ್ಯವಾಗಿ ಕಾಣುತ್ತಿದ್ದ ತಮ್ಮ ಗಂಡಂದಿರನ್ನು ಹೆಣ್ಣುಮಕ್ಕಳು ರಾತ್ರಿ ತಮ್ಮ ಪಕ್ಕದಲ್ಲಿ ಮಲಗಲು ಬಿಡದೆ ಇರುವುದರಿಂದ ಊರ ಹರೆಯದ ಗಂಡುಗಳೆಲ್ಲ ಮನೆಯ ಅಂಗಳದಲ್ಲೊ ಇಲ್ಲವೇ ಊರಗುಡಿಯ ಪ್ರಾಂಗಣದಲ್ಲೊ ಮಲಗಿ ಊರ ನ್ಯಾಯಸ್ಥರಿಗೆ ಹಿಡಿಶಾಪ ಹಾಕತೊಡಗಿದರು.  ಊರಿನಲ್ಲಿ ಮದುವೆಗೆ ಬೆಳೆದುನಿಂತ ಗಂಡುಗಳಿಗೆ ಬೇರೆ ಊರಿನವರು ತಮ್ಮ ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಡಲು ಹಿಂದೇಟು ಹಾಕತೊಡಗಿದರು. ಮಕ್ಕಳ ತಲೆಯಿಂದ ಹೇನುಗಳು ತಮ್ಮ ತಲೆಗೆ ಸೇರಿ ಎಲ್ಲಿ ಆರೋಗ್ಯ ಹಾಳಾಗುವುದೋ ಎಂದು ಹೆದರಿ ಊರಿನಲ್ಲಿದ್ದ ಒಂದೇ ಒಂದು ಸರ್ಕಾರಿ ಶಾಲೆಗೆ ಪಟ್ಟಣದಿಂದ ಬರುತ್ತಿದ್ದ ಶಿಕ್ಷಕರು ಯಾವುದ್ಯಾವುದೋ ಸಬೂಬು ಹೇಳಿ ಗೈರುಹಾಜರಾಗತೊಡಗಿದ್ದರಿಂದ ಮಕ್ಕಳು ಅಂಕೆಗೆ ಸಿಗದೆ ಉಡಾಳರಂತೆ ವರ್ತಿಸಲಾರಂಭಿಸಿದವು. ಮಕ್ಕಳ ಕಷ್ಟ ಮತ್ತು ಅವುಗಳ ಉಡಾಳತನ ನೋಡಲಾಗದೆ ಊರ ಕೆಲವು ಸೊಸೆಯಂದಿರು ಊರಿಗೆ ಕ್ಷೌರಿಕನನ್ನು ಕರೆತಂದ ಮೇಲಷ್ಟೆ ಮರಳಿ ಬರುವುದಾಗಿ  ಹೇಳಿ  ಮಕ್ಕಳನ್ನು ಕಟ್ಟಿಕೊಂಡು ತಮ್ಮ ತಮ್ಮ ತವರುಮನೆಯ ಹಾದಿ ಹಿಡಿದರು. ಊರು ತನ್ನ ಮೊದಲಿನ ಹೊಳಪನ್ನು ಕಳೆದುಕೊಂಡು ಸೂತಕದ ಛಾಯೆ ಇಡೀ ಊರನ್ನು ಆವರಿಸಿದಂತೆಯೂ ಮತ್ತು ಅಲ್ಲಿ ವಾಸಿಸುತ್ತಿದ್ದ ಜನ ಯಾವುದೋ ಅನ್ಯಗ್ರಹದಿಂದ ಬಂದ ಜೀವಿಗಳಂತೆ ನೋಡುವ ಕಣ್ಣುಗಳಿಗೆ ಗೋಚರಿಸತೊಡಗಿದರು.

   ಒಂದು ಬೆಳಗ್ಗೆ ಅಪ್ಪಣ್ಣ ಕ್ಷೌರದ ಪೆಟ್ಟಿಗೆ ಕೈಯಲ್ಲಿ ಹಿಡಿದು ಬಾಗಿಲು ತೆರೆದು ಹೊರಬಂದಾಗ ಮನೆಯ ಎದುರು ಊರಿನ ಜನ ಉದ್ದನೆಯ ಸರತಿ ಸಾಲಿನಲ್ಲಿ ನಿಂತಿರುವುದು ಕಾಣಿಸಿತು. ಮಕ್ಕಳು, ವಯಸ್ಕರು, ವೃದ್ಧರು ಮಾತ್ರವಲ್ಲದೆ ಊರ ಗೌಡರು, ಶ್ಯಾನುಭೋಗರು, ಪಟೇಲರು ಎಲ್ಲರೂ ಅಪ್ಪಣ್ಣ ಬಾಗಿಲು ತೆರೆದು ಹೊರಬರುವುದನ್ನೇ ಕಾಯುತ್ತ ನಿಂತಿದ್ದರು. ಅಪ್ಪಣ್ಣ ಕಟ್ಟೆಯನ್ನು ಏರಿ ಕುಳಿತು ಕ್ಷೌರದ ಪೆಟ್ಟಿಗೆಗೆ ನಮಸ್ಕರಿಸಿ ಬಟ್ಟಲಲ್ಲಿ ನೀರು ಹುಯ್ದು ನೀರಿನಲ್ಲಿ ಕೈ ಅದ್ದಿ ತನ್ನೆದುರು ಕುಳಿತ ಶಾಂತಪ್ಪಗೌಡರ ತಲೆಗೆ ರಪರಪನೆ ಬಡಿಯತೊಡಗಿದ. ಅಪ್ಪಣ್ಣನ ಕೈಯ ತಾಳಕ್ಕೆ ಗೌಡರಿಗೆ ವಿಚಿತ್ರ ಅಮಲೇರಿದಂತಾಗಿ ಅವರ ಮುಖದಲ್ಲಿ ಒಂದು ರೀತಿಯ ನೆಮ್ಮದಿ ಮತ್ತು ಸಮಾಧಾನದ ಭಾವ ಮೂಡತೊಡಗಿತು. ಆ ಕ್ಷಣಕ್ಕೆ ಇಡೀ ಊರು ಆ ಒಂದು ನೆಮ್ಮದಿಗಾಗಿ ಅಪ್ಪಣ್ಣನ ಮನೆ ಎದುರು ಕಾದು ಕುಳಿತಂತೆ ಭಾಸವಾಗತೊಡಗಿತು.

(ಜೂನ್ ೬, ೨೦೧೯ ರ  'ತರಂಗ' ವಾರಪತ್ರಿಕೆಯಲ್ಲಿ ಪ್ರಕಟವಾಗಿದೆ)


-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟ 


No comments:

Post a Comment