ಗ್ರಾಮಾಯಣ
-ರಾಜಕುಮಾರ ಕುಲಕರ್ಣಿ
(ಮಾರ್ಚ್ ೨೦೨೬ ರ 'ಮಯೂರ' ಪತ್ರಿಕೆಯಲ್ಲಿ ಪ್ರಕಟವಾದ ಕಥೆ)
ಬಸವರಾಜಪ್ಪ ಆಡಿದ ಮಾತು ಕೇಳಿ ರಾಮಚಂದ್ರಮೇಷ್ಟ್ರಿಗೆ ಎದೆಮೇಲೆ ಮುಷ್ಟಿಯಿಂದ ಗುದ್ದಿದಂಗಾಗಿತ್ತು. ಎಂದೂ ಇಷ್ಟೊಂದು ಬಿರುಸಿನಿಂದ ಬಸವರಾಜಪ್ಪ ಮಾತನಾಡಿದವನಲ್ಲ. ಹತ್ತುವರ್ಷಗಳ ಹಿಂದೆ ಪಕ್ಕದ ಗಣಜಲಖೇಡದಿಂದ ಕುಮಸಿಗೆ ವರ್ಗವಾಗಿ ಬಂದ ರಾಮಚಂದ್ರ ಮೇಷ್ಟ್ರಿಗೆ ಊರಿನಲ್ಲಿ ವಾಸಿಸಲು ಒಂದು ನೆಲೆ ಅಂತ ಸಿಕ್ಕಿದ್ದು ಬಸವರಾಜಪ್ಪನ ಮನೆನಲ್ಲಿ. ಮೇಷ್ಟ್ರ ಸಣ್ಣ ಕುಟುಂಬ ನೆಲೆ ನಿಲ್ಲಲು ಎರಡು ಕೋಣೆಗಳಷ್ಟು ಜಾಗಸಾಕಿತ್ತು. ಬಸವರಾಜಪ್ಪನ ಮನೆಯಲ್ಲಿ ಪಡಸಾಲೆಗೆ ಹತ್ತಿಕೊಂಡಿದ್ದ ಎರಡು ಕೋಣೆಗಳು ಖಾಲಿ ಇದ್ದವು. ತೊಂದರೆ ಅನಿಸದಿದ್ದರೆ ಆ ಕೋಣೆಗಳಲ್ಲಿ ಸಂಸಾರ ಹೂಡಬಹುದೆಂದು ಬಸವರಾಜಪ್ಪ, ರಾಮಚಂದ್ರಮೇಷ್ಟ್ರಿಗೆ ಹೇಳಿದ್ದ. ಮೇಷ್ಟ್ರಿಗೂ ಅಪರಿಚತ ಜಾಗದಲ್ಲಿ ಒಳ್ಳೆಯ ಜನರ ಸಾಂಗತ್ಯದ ಅಗತ್ಯವಿತ್ತು. ಮಗ ಬೆಂಗಳೂರಿನಲ್ಲಿ ಪಿ.ಯು.ಸಿ ಓದುತ್ತಿದ್ದು ತಾವಿಬ್ಬರೆ ಗಂಡ ಹೆಂಡತಿ ಇರುವುದರಿಂದ ಎರಡು ಕೋಣೆಗಳ ಜಾಗ ಸಂಸಾರ ಹೂಡಲು ತಕ್ಕುದಾಗಿತ್ತು. ಹೀಗೆ ಬಸವರಾಜಪ್ಪನ ಮನೆ ಸೇರಿದ ರಾಮಚಂದ್ರಮೇಷ್ಟ್ರು ತಮ್ಮ ನಡೆ ನುಡಿಯಿಂದ ಹತ್ತಿರವಾಗಿ ಅವನ ಮನಸ್ಸು ಸೇರಲು ತಡವಾಗಲಿಲ್ಲ. ಮೇಷ್ಟ್ರ ಪತ್ನಿ ಸೀತಮ್ಮ ಪರಮಸಾಧ್ವಿ ಹೆಣ್ಣುಮಗಳು. ಅವರು ಬಸವರಾಜಪ್ಪನ ಪತ್ನಿ ಪಾರ್ವತಿಗೆ ಬಲುಬೇಗನೆ ಅಕ್ಕನ ಸ್ಥಾನ ತುಂಬಿದರು. ಬಸವರಾಜಪ್ಪನ ಎರಡು ಮಕ್ಕಳು ಕೂಡ ಮೇಷ್ಟ್ರ ಕುಟುಂಬದೊಂದಿಗೆ ಹೊಂದಿಕೊಂಡು ದೊಡ್ಡಪ್ಪ, ದೊಡ್ಡಮ್ಮ ಎಂದು ಬಾಯಿತುಂಬ ಕರೆಯುತ್ತಿದ್ದರು. ಈ ಹತ್ತು ವರ್ಷಗಳಲ್ಲಿ ಎರಡು ಕುಟುಂಬಗಳ ನಡುವೆ ಒಮ್ಮೆಕೂಡ ಅಸಮಾಧಾನ ಅಸಹನೆ ಹಣಿಕಿಕ್ಕಿರಲಿಲ್ಲ. ಇವತ್ತು ಮಾತ್ರ ಬಸವರಾಜಪ್ಪನ ನಿಯಂತ್ರಣ ಮೀರಿ ನಾಲಿಗೆ ಮಾತು ಹೊರಹಾಕಿತ್ತು. ರಾಮಚಂದ್ರಮೇಷ್ಟ್ರಿಗೆ ಕುಳಿತಲ್ಲಿ ನಿಂತಲ್ಲಿ ಬಸವರಾಜಪ್ಪನ ಮಾತುಗಳೇ ಕಿವಿಯಲ್ಲಿ ಪ್ರತಿಧ್ವನಿಸಿದಂತಾಗಿ ಮಕ್ಕಳಿಗೆ ಪಾಠಮಾಡಲು ಆಸಕ್ತಿ ಇಲ್ಲದಂತಾಗಿ ಹೆಡ್‍ಮೇಷ್ಟ್ರಗೆ ಹೇಳಿ ಮನೆಗೆ ಬಂದವರು ಕೋಣೆಯಲ್ಲಿ ಅಡ್ಡಾದರು. ಎಂದೂ ಶಾಲೆಯ ಕೆಲಸದ ನಡುವೆ ಮನೆಗೆ ಬರದ ಪತಿ ಹೀಗೆ ಮನೆಗೆ ಬಂದು ಮಲಗಿರುವುದು ನೋಡಿ ಗಾಬರಿಯಾದ ಸೀತಮ್ಮ ಜ್ವರ ಬಂದಿರಬಹುದೆಂದು ಹಣೆಮುಟ್ಟಿ ನೋಡಿದರು. ಪತ್ನಿಯ ಕೈ ಸ್ಪರ್ಷದಿಂದ ಎಚ್ಚರಾದ ರಾಮಚಂದ್ರಪ್ಪನವರು ಕಣ್ಣುಗಳನ್ನು ತೆರೆದದ್ದೆ ನೀರಧಾರೆ ಕಪೆÇೀಲದ ಮೂಲಕ ಹರಿದು ತಲೆದಿಂಬನ್ನು ತೋಯಿಸಿತು. ಗಂಡನ ದು:ಖಕ್ಕೆ ಇಂದು ಬೆಳಗ್ಗೆ ಬಸವರಾಜಪ್ಪ ಆಡಿದ ಮಾತುಗಳೇ ಕಾರಣ ಎಂದು ಸೀತಮ್ಮನವರಿಗೆ ಅರ್ಥವಾಯಿತು. ಸೂಕ್ಷ್ಮಸ್ವಭಾವದ ಪತಿಯ ಮನಸ್ಸಿಗೆ ಘಾಸಿಯಾಗಿದೆ ಎಂದರಿವಾಗಿ ಹೊಟ್ಟೆಯಲ್ಲಿ ಹುಟ್ಟಿದ ಸಂಕಟ ಕೊರಳ ಮೂಲಕ ಹಾಯ್ದು ಕಣ್ಣುಗಳಲ್ಲಿ ಕಂಬನಿ ಮಿಡಿಸಿತು. ಆ ಕ್ಷಣಕ್ಕೆ ಬಸವರಾಜಪ್ಪನ ಮೇಲೆ ಸೀತಮ್ಮನವರಿಗೆ ಕೋಪ ಬಂದರೂ ಅವನು ಆಡಿದ ಮಾತಿನಲ್ಲಿ ಸತ್ಯವಿದೆ ಎಂದು ಅವರ ಒಳಮನಸ್ಸು ಹೇಳಿತು. ಸಿಟ್ಟಿನ ಭರದಲ್ಲಿ ಬಸವರಾಜಪ್ಪ ಕಠೋರವಾಗಿ ಮಾತನಾಡಿರಬಹುದು, ಹೆಂಗರುಳಿನ ಅವನಿಗೂ ಮೇಷ್ಟ್ರ ಮನಸ್ಸು ನೋಯಿಸಿದ್ದಕ್ಕಾಗಿ ಪಶ್ಚಾತ್ತಾಪವಾಗಿರುತ್ತದೆ ಎನ್ನುವ ಭರವಸೆ ಸೀತಮ್ಮನವರ ಮನಸ್ಸಿಗೆ ಸಮಾಧಾನ ತಂದಿತು.
* * *
ರಾಮಚಂದ್ರಮೇಷ್ಟ್ರ ಮನಸ್ಸಿಗೆ ನೋವಾಗುವಂತೆ ಬಸವರಾಜಪ್ಪ ಮಾತನಾಡಿದ್ದರ ಹಿಂದೆ ಬಲವಾದ ಕಾರಣವಿತ್ತು. ನಡೆದದ್ದಿಷ್ಟು-ಅಂದು ಬೆಳಗ್ಗೆ ಶಾಲೆಗೆ ಹೋಗಲೆಂದು ತಯ್ಯಾರಾಗಿ ಹೊರಬಂದ ರಾಮಚಂದ್ರಮೇಷ್ಟ್ರಿಗೆ ಪಡಸಾಲೆಯಲ್ಲಿ ಕುಳಿತಿದ್ದ ಬಸವರಾಜಪ್ಪ ಕಣ್ಣಿಗೆಬಿದ್ದ. ಕಳೆದ ಎರಡು ದಿನಗಳಿಂದ ಬಸವರಾಜಪ್ಪನೊಂದಿಗೆ ಮಾತನಾಡಬೇಕೆಂದು ಕಾಯುತ್ತಿದ್ದ ಮೇಷ್ಟ್ರಿಗೆ ಆ ಘಳಿಗೆಯೇ ಕೂಡಿಬಂದಿರಲಿಲ್ಲ. ಎರಡು ದಿನಗಳ ಹಿಂದೆ ಯಾವುದೋ ಕೆಲಸಕ್ಕೆಂದು ಕಲಬುರಗಿಗೆ ಹೋಗಿದ್ದ ಬಸವರಾಜಪ್ಪ ನಿನ್ನೆ ತಡರಾತ್ರಿ ಮನೆಗೆ ಬಂದಿದ್ದ. ಬಸವರಾಜಪ್ಪ ಬರುವುದನ್ನೇ ಕಾಯುತ್ತಿದ್ದ ಮೇಷ್ಟ್ರು ಇಂದು ಅವನು ಕಣ್ಣಿಗೆ ಬಿದ್ದದ್ದೆ ಮಾತಿಗಾರಂಭಿಸಿದರು ‘ಬಸವರಾಜಪ್ಪ ಒಂದು ಸುದ್ಧಿ ಕಿವಿಮ್ಯಾಲ ಬಿದ್ದದ. ನಿನ್ನ ನಾಲ್ಕೆಕರೆ ಜಮೀನನ್ಯಾಗ ಸೈಟ್ ಮಾಡಲಿಕತ್ತೀದಿ ಅಂತ ಕೇಳೀನಿ. ಇರೋ ಹೊಲ ಮಾರಿ ಮುಂದೇನು ಮಾಡಬೇಕಂತಿ. ಬಂಗಾರದಂತ ಹೊಲ ಅದಾ. ಭೂಮಿತಾಯಿ ನಿನಗೇನು ಕಡಿಮಿ ಮಾಡ್ಯಾಳಂತ ಮಾರಲಿಕತ್ತಿದಿ. ನಿಮ್ಮಂಥ ರೈತರು ಹೀಂಗ ಕೃಷಿಜಮೀನು ಪರಭಾರೆ ಮಾಡಕೋತ ಹೋದರಿ ಅಂದರ ಜನ ಏನು ಮಣ್ಣು ತಿನ್ನಬೇಕೇನು. ರೈತನನ್ನ ಅನ್ನದಾತ ಅಂತ ಸುಮ್ನೆ ಅಂದಿಲ್ಲ. ಹಸಿದ ಹೊಟ್ಟಿಗೊಳಿಗಿ ತುತ್ತು ನೀಡೋ ಪುಣ್ಯದ ಕೆಲಸ ರೈತ ಮಾಡತಾನ. ನನಗ್ಯಾಕೋ ನೀ ಮಾಡೋ ಕೆಲಸ ಸರಿಕಾಣ್ತಿಲ್ಲ’ ಎಂದ ಮೇಷ್ಟ್ರಿಗೆ ಹಿಂದೆಯೇ ತಾವು ಆಡಿದ್ದು ಸ್ವಲ್ಪ ಬಿರುಸಾಯಿತೇನೋ ಅನಿಸಿತು. ‘ಮೇಷ್ಟ್ರೆ ವ್ಯಾಳಕ್ಕ ಸರಿಯಾಗಿ ಮಳಿ ಆಗವಲ್ದು. ಬೆಳಿಬೆಳದು ರೊಕ್ಕ ಕೈಗಿ ಬರೊದರೊಳಗ ಸಾಲ ಅದರ ಎರಡರಷ್ಟಾಗಿರತದ. ಮಣ್ಣಾಗ ಮಣ್ಣಾಗಿ ದುಡಿಯೋದೆ ಆಯ್ತು ಸುಖಾ ಅನ್ನೋದು ಹಣ್ಯಾಗ ಬರದಿಲ್ಲ. ಈ ಊರಾಗಿನ ದೊಡ್ಡಮಂದಿ ಬ್ಯಾರೆ ರೋಡಿಗಿ ಸಮೀಪದ ಹೊಲ ಅಂತ ಕಣ್ಣ ಹಾಕ್ಯಾರ. ಸುಮ್ಮ ಕೂತರ ಹೊಲ ಕೈಬಿಟ್ಟು ಹೋಗತದ. ದೇವಸ್ಥಾನ ಕಟ್ಟಿಸಬೇಕು ಎರಡು ಎಕರೆ ಹೊಲ ಪುಗ್ಸಟ್ಟೆ ಕೊಡು ಅಂತ ಧೀರೆಂದ್ರಗೌಡ ಮತ್ತ ಅಲ್ದಿ ಮಲಕಾಣಿ ಗಂಟು ಬಿದ್ದಾರ. ಇವರು ಕೇಳೋದು ನೋಡಿ ಮಸೀದಿಗೂ ಬೇಕು ಅಂತ ಬೇಡಲಿಕತ್ತಾರ. ಹೀಂಗ ಪುಗ್ಸಟ್ಟೆ ದಾನ ಮಾಡಕೋತ ಹೋದರ ಬೀದಿಗಿ ಬಿದ್ದು ಹೆಂಡತಿ ಮಕ್ಕಳ ಜೊತಿ ಭಿಕ್ಷಾ ಬೇಡಬೇಕಾಗತದ. ಇದೆಲ್ಲಾ ಉಸಾಬರಿನೇ ಬ್ಯಾಡ ಅಂತ ಹೊಲದಾಗ ಸೈಟ್ ಮಾಡಿ ಮಾರಬೇಕಂತ ವಿಚಾರ ಮಾಡೀನಿ. ಸಿಟ್ಯಾನ ಮಂದಿ ಸೈಟ್ ಖರೀದಿ ಮಾಡಲಿಕ್ಕಿ ತುದಿಗಾಲ ಮ್ಯಾಲ ನಿಂತಾರ. ಬಂದ ರೊಕ್ಕದಾಗ ಸಿಟ್ಯಾಗ ಏನರ ವ್ಯಾಪಾರ ಮಾಡಿ ನಾಲ್ಕು ದುಡ್ಡು ಗಳಿಸಿದರಾಯಿತು’ ಎಂದ ಬಸವರಾಜಪ್ಪನ ಮಾತಿನಲ್ಲಿ ನಿಲುವು ಖಚಿತವಾಗಿರುವಂತೆ ಮೇಷ್ಟ್ರಿಗೆ ತೋರಿತು. ‘ನಿನ್ನಂಗ ಊರಿನ ರೈತರೆಲ್ಲ ವಿಚಾರ ಮಾಡಿದರ ಕೃಷಿ ಜಮೀನುಗೋಳು ಸೈಟು, ಫ್ಯಾಕ್ಟರಿಗಳಾಗಿ ಬದಲಾಗತಾವ. ವರ್ಷದಿಂದ ವರ್ಷಕ್ಕ ಕೃಷಿ ಜಮೀನು ಕಡಿಮಿ ಆಗಲೀಕತ್ತದ. ಅದಕ್ಕೆ ನೋಡು ಕಾಳು ಕಡಿಗಳ ಧಾರಣಿ ಮುಗಿಲು ಮುಟ್ಯಾದ. ನೀ ಮಾಡಿದ ನಿರ್ಧಾರ ಅನ್ನದಾತನ ಹೆಸರಿಗಿ ಮಸಿ ಬಳದಂಗ’ ಎಂದು ರಾಮಚಂದ್ರಮೇಷ್ಟ್ರು ಸಿಟ್ಟಿನಿಂದ ನುಡಿದರು. ಮೇಷ್ಟ್ರ ಮಾತು ಬಸವರಾಜಪ್ಪನನ್ನು ಕೆರಳಿಸಿತು ‘ಅಲ್ರೀ ಮೇಷ್ಟ್ರೆ ರೈತರು ನಾವೇನು ದುಡಿದು ಇಡೀ ಜಗತ್ತಿಗಿ ಅನ್ನ ಉಣ್ಣಕ್ಕ ನೀಡತೀವಿ ಅಂತ ಆಣಿ ಮಾಡಿವೇನು. ಅನ್ನದಾತ, ದೇಶದ ಬೆನ್ನೆಲುಬು ಅಂತ ದೊಡ್ಡ ದೊಡ್ಡ ಮಾತ ಆಡ್ತಿರಿ ಆದರ ಅವನ ಕಷ್ಟ ಏನದಾ ಅಂತ ಕೇಳ್ತಿರೇನು. ನೀವು ಹೀಂಗ ರೈತರ ಬಗ್ಗೆ ಚಿಂತಿ ಮಾಡತಿದ್ದರ ಅವರು ನೇಣುಹಾಕಿಕೊಂಡು ಸಾಯ್ತಿರಲಿಲ್ಲ. ನಿಮಗೇನೋ ಸರ್ಕಾರ ತಿಂಗಳಾ ತಿಂಗಳಾ ಪಗಾರ ಕೊಡತದ. ಆಯ್ತುವಾರ, ಹಬ್ಬಗೊಳು, ಬ್ಯಾಸಿಗಿ ಅಂತ ವರ್ಷನ್ಯಾಗ ಆರು ತಿಂಗಳು ಕೆಲಸ ಮಾಡದೆ ಪಗಾರ ತಗೋತಿರಿ. ರೈತ ಹಗಲ ರಾತ್ರಿ ಭೇದ ಇಲ್ಲದಂಗ ದುಡಿಬೇಕು. ಬಿಸಿಲ, ಮಳಿ, ಚಳಿಗಿ ಮೈಯೊಡ್ಡಬೇಕು. ಇಷ್ಟೆಲ್ಲ ದುಡಿದರ ಏನು ಸಿಗತದ. ಬೆಳೆದ ಬೆಳಿ ಸಾಲಕ್ಕ ಸಾಕಾಗವಲ್ಲದು. ಹೊಟ್ಟಿ ತುಂಬಿದ ನಿಮ್ಮಂಥವರಿಗೆ ಹಸಿದವರ ಸಂಕಟ ಏನು ಗೊತ್ತದ. ಓದಿದವರು ಪಾಠ ಮಾಡ್ತೀರಿ ಅಂತ ನನಗ ಬುದ್ದಿ ಹೇಳಲ್ಲಿಕ್ಕಿ ಬರಬ್ಯಾಡರಿ’ ಎಂದವನೇ ಬಸವರಾಜಪ್ಪ ಎದ್ದು ಹೆಗಲ ಮೇಲಿನ ವಸ್ತ್ರವನ್ನೊಮ್ಮೆ ಝಾಡಿಸಿ ಅಂಗಳ ದಾಟಿ ಹೊರಹೋದ. ರಾಮಚಂದ್ರಮೇಷ್ಟ್ರಿಗೆ ನಿಂತ ನೆಲ ಕುಸಿದಂತಾಯಿತು. ಎಂದೂ ಇಷ್ಟೊಂದು ಸದರದಿಂದ ಬಸವರಾಜಪ್ಪ ಅವರೊಂದಿಗೆ ವರ್ತಿಸಿರಲಿಲ್ಲ. ಅವಮಾನವಾದಂತಾಗಿ ಮೇಷ್ಟ್ರು ತಲೆತಗ್ಗಿಸಿ ಹೊರನಡೆದರು. ಶಾಲೆಯಲ್ಲಿ ಮಕ್ಕಳಿಗೆ ಪಾಠಮಾಡಲೆಂದು ಪುಸ್ತಕ ಕೈಗೆ ತೆಗೆದುಕೊಂಡ ಮೇಷ್ಟ್ರ ಕಿವಿಯಲ್ಲಿ ಬಸವರಾಜಪ್ಪನ ಮಾತುಗಳೇ ಗುಂಯ್‍ಗುಡತೊಡಗಿದವು. ಇನ್ನು ಪಾಠ ಮಾಡುವುದು ಸಾಧ್ಯವಿಲ್ಲ ಎನಿಸಿ ಮನೆಗೆ ಬಂದವರು ಕೋಣೆಯಲ್ಲಿ ಅಡ್ಡಾಗಿದ್ದರು.
* * *
‘ಮೇಷ್ಟ್ರ ಎದುರು ಅಷ್ಟೊಂದು ಒರಟಾಗಿ ಮಾತಾಡಬಾರದಿತ್ತು. ಪಾಪ ತುಂಬ ನೊಂದಕೊಂಡಂಗ ಕಾಣತದ. ಅವರು ಹೇಳಿದರಾಗ ಏನು ತಪ್ಪ ಅದಾ. ಜಮೀನು ಮಾರಿದರ ನಾಲ್ಕು ದುಡ್ಡು ಕೈಗಿ ಬರಬಹುದು. ಆದರ ಕೂತು ಉಂಡರ ಕುಡುಕೆ ಹೊನ್ನು ಸಾಲದು ಅಂತ ತಿಳಿದವರು ಹೇಳ್ಯಾರ. ಕೈಯಾಗಿನ ರೊಕ್ಕ ಖರ್ಚಾದ ಮ್ಯಾಲ ಕೂಲಿ ಮಾಡಬೇಕಾಗತದ. ಇನ್ನು ಮಗಳ ಬಸರ ಬಾಣಂತನ ಅಂತ ಖರ್ಚುಗೋಳು ಅವಾ. ಮಗನ ಮದಿ ಮಾಡಬೇಕು. ಓದು ಬ್ಯಾಡ ಅಂತ ಅವನಿಗೂ ಒಕ್ಕಲುತನಾನೇ ಬದುಕಿನ ದಾರಿ ಮಾಡೀರಿ. ಇನ್ನು ಅವನಿಗಿ ಎಲ್ಲಿ ಕೆಲಸ ಸಿಗತದ. ಮೇಷ್ಟ್ರು ನಮ್ಮ ಒಳ್ಳೆದಕ್ಕೆ ಹೇಳ್ಯಾರ. ಜಮೀನು ಪರಭಾರೆ ಮಾಡೋ ವಿಚಾರ ಬ್ಯಾಡ. ಬಾವಿನೋ ಬೋರೋ ತೆಗಸಿದರಾಯಿತು. ನೀರಾದರ ಅನುಕೂಲ ಆಗತದ. ಮೇಷ್ಟ್ರಿಗಿ ಹೋಗಿ ಆಡಿದ್ದು ತಪ್ಪಾಯಿತು ಅಂತ ಕೇಳರಿ. ಕ್ಷಮಿಸುವಂಥ ದೊಡ್ಡ ಗುಣ ಅವರದು ಅದಾ’ ಊಟ ಬಡಿಸುವಾಗ ಹೆಂಡತಿ ಪಾರ್ವತಿ ಹೇಳಿದ ಮಾತು ಕೇಳಿ ಬಸವರಾಜಪ್ಪನಿಗೆ ಅವಳ ಮಾತಿನಲ್ಲೂ ಸತ್ಯವಿದೆ ಎನಿಸಿತು.
ಕಲಬುರಗಿಗೆ ಸಮೀಪದ ಕುಮಸಿ ಗ್ರಾಮದಲ್ಲಿ ಪಿತ್ರಾರ್ಜಿತವಾಗಿ ಬಂದ ನಾಲ್ಕೆಕರೆ ಜಮೀನಿನಲ್ಲಿ ವ್ಯವಸಾಯ ಮಾಡುತ್ತ ಉಡಲು ಉಣ್ಣಲು ಕಡಿಮೆ ಇಲ್ಲದಂತೆ ಸಂಸಾರದ ಬಂಡಿ ಎಳೆಯುತ್ತಿದ್ದ ಬಸವರಾಜಪ್ಪ ಒಂದುಕಾಲದಲ್ಲಿ ಪ್ರಗತಿಪರ ರೈತನೆಂದು ಸುತ್ತಲಿನ ಫಾಸಲೆಯಲ್ಲಿ ಹೆಸರುಗಳಿಸಿದ್ದ. ಜಮೀನಿನ ಮೇಲ್ಭಾಗದಲ್ಲಿದ್ದ ಕೆರೆಯಿಂದ ಕಾಲುವೆಯ ಮೂಲಕ ಹರಿದು ಬರುತ್ತಿದ್ದ ನೀರಿನಿಂದ ವರ್ಷದಲ್ಲಿ ಮೂರು ಬೆಳೆಗಳನ್ನು ಬೆಳೆಯಲು ಅನುಕೂಲವಿತ್ತು. ತೊಗರಿ, ಜೋಳ, ಕಡಲೆ ಜೊತೆಗೆ ಬೇಸಿಗೆಯಲ್ಲಿ ತರಕಾರಿ, ಗೋದಿ ಬೆಳೆದು ಬಸವರಾಜಪ್ಪ ತಕ್ಕಮಟ್ಟಿಗೆ ಸ್ಥಿತಿವಂತನೆನಸಿದ್ದ. ಇಡೀ ಕುಟುಂಬ ಹೊಲದಲ್ಲಿ ದುಡಿಯುತ್ತಿದ್ದುದ್ದರಿಂದ ಆದಾಯದ ಮೂಲ ಹೆಚ್ಚಾಗಿತ್ತು. ಪಿ.ಯು.ಸಿ ಓದು ಮುಗಿದದ್ದೆ ಮಗಳನ್ನು ಪಕ್ಕದೂರಿನ ಕಲ್ಲಹಂಗರಗಾ ಗ್ರಾಮದಲ್ಲಿ ಪ್ರಗತಿಪರ ರೈತನೆಂದು ಹೆಸರಾಗಿದ್ದ ಯುವಕನಿಗೆ ಮದುವೆ ಮಾಡಿಕೊಟ್ಟಿದ್ದ. ಮಗಳು ಕೃಷಿಕುಟುಂಬಕ್ಕೆ ಸೇರಿ ಅನ್ನದಾತನ ಅನನ್ಯ ಕಾಯಕದಲ್ಲಿ ಕೈಜೋಡಿಸಲಿ ಎನ್ನುವುದು ಬಸವರಾಜಪ್ಪನ ಬಲವಾದ ಆಸೆಯಾಗಿತ್ತು. ಅವನ ಆಸೆಗೆ ಇಂಬುಕೊಡುವಂತೆ ಕೃಷಿಕುಟುಂಬದ ಸಂಬಂಧ ಬಂದದ್ದೆ ವಿಳಂಬಮಾಡದೆ ಖುಷಿಯಿಂದ ಮದುವೆಮಾಡಿದ್ದ. ಇದ್ದೊಬ್ಬಮಗನ ತಲೆಗೆ ವಿದ್ಯೆ ಹತ್ತದೆ ಮ್ಯಾಟ್ರಿಕ್ ಫೇಲಾದಾಗ ತನ್ನೊಂದಿಗೆ ಹೊಲದ ಕೆಲಸದಲ್ಲಿ ಜೊತೆಯಾಗಿಸಿಕೊಂಡಿದ್ದ. ಊರಿನಲ್ಲಿ ಹೆಚ್ಚಿನ ಕೃಷಿಕರು ತಮ್ಮ ಗಂಡುಮಕ್ಕಳನ್ನು ಕಲಬುರಗಿಯಲ್ಲಿಟ್ಟು ಓದಿಸುತ್ತ ಈ ಒಕ್ಕಲುತನ ತಮ್ಮೊಂದಿಗೇ ಕೊನೆಗೊಳ್ಳಲೆಂದು ಬಯಸುತ್ತಿದ್ದರೆ ಬಸವರಾಜಪ್ಪನ ನಡೆ ಮಾತ್ರ ವಿರುದ್ಧ ದಿಕ್ಕಿಗಿತ್ತು. ತನ್ನ ನಂತರ ಒಕ್ಕಲುತನಕ್ಕೆ ಮಗನೇ ವಾರಸುದಾರನಾಗಬೇಕೆಂದು ಇಚ್ಛಿಸುತ್ತಿದ್ದವನಿಗೆ ಮಗ ಫೇಲಾದದ್ದು ಅವನಿಗೆ ರೋಗಿ ಬಯಸಿದ್ದು ವೈದ್ಯರು ಹೇಳಿದ್ದು ಒಂದೇ ಎನ್ನುವಂತಾಗಿತ್ತು. ಸಾವಯವ ಕೃಷಿಗೆ ಆದ್ಯತೆ ನೀಡುತ್ತಿದ್ದ ಬಸವರಾಜಪ್ಪನಿಗೆ ಭೂಮಿತಾಯಿ ಎಂದೂ ಮೋಸಮಾಡಿರಲಿಲ್ಲ. ಎರಡುಬಾರಿ ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾಲಯದಿಂದ ಪ್ರಗತಿಪರ ರೈತನೆಂದು ಗೌರವಕ್ಕೆ ಪಾತ್ರನಾಗಿದ್ದ. ಕೆಲವೊಮ್ಮೆ ಕಷ್ಟಗಳು ಹುಡುಕಿಕೊಂಡು ಬರುವಂತೆ ಕಳೆದ ಎರಡು ವರ್ಷಗಳಿಂದ ಮಳೆ ಇಲ್ಲದೆ ಕೆರೆ ಒಣಗಿತ್ತು. ನೀರಿನ ಕೊರತೆಯಿಂದ ಕೃಷಿಕೆಲಸ ಕುಂಠಿತಗೊಂಡಿತ್ತು. ಗಾಯದ ಮೇಲೆ ಉಪ್ಪು ಸವರಿದಂತೆ ಊರಿನಲ್ಲಿ ಕರಟಕ ದಮನಕರೆಂದೇ ಖ್ಯಾತರಾಗಿದ್ದ ಧೀರೇಂದ್ರಗೌಡ ಮತ್ತು ಅಲ್ದಿ ಮಲಕಾಣಿ ಮುಖ್ಯರಸ್ತೆಗೆ ಹೊಂದಿಕೊಂಡಿದ್ದ ಬಸವರಾಜಪ್ಪನ ಹೊಲದ ಮೇಲೆ ಕಣ್ಣುಹಾಕಿದ್ದರು.
* * *
ಧೀರೇಂದ್ರಗೌಡ ಮತ್ತು ಅಲ್ದಿ ಮಲಕಾಣಿ ಅವರೇನೂ ಗಳಸ್ಯಕಂಠಸ್ಯ ಗೆಳೆಯರಾಗಿರಲಿಲ್ಲ. ತಮಗೆ ಲಾಭವಾಗುವುದಾದರೆ ಅದು ಎಂಥ ಹೀನಕೆಲಸವಾದರೂ ಇಬ್ಬರೂ ಒಂದಾಗುತ್ತಿದ್ದರು. ಪ್ರತಿಬಾರಿ ಗ್ರಾಮಪಂಚಾಯಿತಿ ಚುನಾವಣೆಯಲ್ಲಿ ತಮ್ಮ ತಮ್ಮ ಗುಂಪು ಕಟ್ಟಿಕೊಂಡು ಪ್ರತಿಸ್ಪರ್ಧಿಗಳಾಗುತ್ತಿದ್ದರು. ಮೇಲ್ನೋಟಕ್ಕೆ ಅವರಿಬ್ಬರ ನಡುವೆ ಶತ್ರುತ್ವ ಇದೆ ಎಂದು ಊರಿನವರಿಗೆ ಅನ್ನಿಸುತ್ತಿದ್ದರೂ ಆಂತರ್ಯದಲ್ಲಿ ಇಬ್ಬರ ನಡೆ ಒಂದೇ ಆಗಿತ್ತು. ಯಾರದೇ ಗುಂಪು ಪಂಚಾಯಿತಿಯ ಗದ್ದುಗೆ ಏರಿದರೂ ಲಾಭವನ್ನು ಇಬ್ಬರೂ ಸಮನಾಗಿ ಹಂಚಿಕೊಳ್ಳುತ್ತಿದ್ದರು. ಬಡರೈತರ ಜಮೀನಿನ ಮೇಲೆ ಬ್ಯಾಂಕ್‍ನಿಂದ ಸಾಲ ಪಡೆದು ಜಮೀನಿನ ನಿಜವಾದ ಯಜಮಾನರಿಗೆ ದಕ್ಕದಂತೆ ಯೋಜನೆ ಹೆಣೆಯುತ್ತಿದ್ದರು. ಅದೆಷ್ಟೋ ರೈತರಿಗೆ ಸಾಲ ಕೊಟ್ಟು ಜಮೀನು ಬರೆಸಿಕೊಂಡು ಬಡ್ಡಿ ಚಕ್ರಬಡ್ಡಿ ಲೆಕ್ಕ ಬರೆದು ಕೃಷಿಭೂಮಿಯನ್ನು ತಮ್ಮ ಕೈವಶಮಾಡಿಕೊಳ್ಳುವಲ್ಲಿ ಇಬ್ಬರೂ ಸಿದ್ದಹಸ್ತರಾಗಿದ್ದರು.
ಧೀರೇಂದ್ರಗೌಡ ಮತ್ತು ಮಲಕಾಣಿಗೆ ರೊಕ್ಕಕ್ಕಿಂತ ಯಾವುದೂ ಮುಖ್ಯವಾಗಿರಲಿಲ್ಲ. ಹೇಲಿನಲ್ಲಿ ರೊಕ್ಕ ಬಿದ್ದರೂ ನಾಲಿಗೆಯಿಂದ ಎತ್ತುವರು ಎಂದು ಅವರಿಬ್ಬರ ಬಗ್ಗೆ ಊರಿನ ಜನ ಮಾತನಾಡಿಕೊಳ್ಳುತ್ತಿದ್ದರು. ಧೀರೇಂದ್ರಗೌಡನ ಮಗಳು ಹೆರಿಗೆಯಲ್ಲಿ ರಕ್ತಸ್ರಾವವಾಗಿ ಸಾವನ್ನಪ್ಪಿದಾಗ ಗೌಡ ಬೀಗರಿಗೆ ಪೆÇಲೀಸ್ ಕಂಪ್ಲೇಂಟ್ ಕೊಡುವುದಾಗಿ ಹೆದರಿಸಿದ್ದ. ಮರ್ಯಾದೆಗೆ ಅಂಜಿದ ಅಳಿಯನ ಮನೆಯವರು ಐವತ್ತು ಲಕ್ಷ ರೂಪಾಯಿಗಳನ್ನು ಕೊಟ್ಟು ರಾಜಿ ಮಾಡಿಕೊಂಡಿದ್ದರು. ಗೌಡ ಮಗಳ ಹೆಣ ಮುಂದಿಟ್ಟುಕೊಂಡು ವ್ಯವಹಾರ ಮಾಡಿದನೆಂದು ಇಡೀ ಊರು ಅಸಹ್ಯಪಟ್ಟುಕೊಂಡಿತ್ತು. ಇದೇ ಧೀರೇಂದ್ರಗೌಡನ ಮಗ ಶರಣಗೌಡ ತಮ್ಮ ಹೊಲದ ಕೆಲಸದಾಳು ಮಾದನ ಮಗಳನ್ನು ಪ್ರಿತಿಸುವ ನಾಟಕವಾಡಿ ಅವಳು ಬಸಿರಾದದ್ದೆ ತಿರುಗಿಬಿದ್ದಿದ್ದ. ಧೀರೇಂದ್ರಗೌಡ ಹಣಕೊಟ್ಟು ಮಾದನ ಕುಟುಂಬವನ್ನು ಊರಿನಿಂದ ಒಕ್ಕಲೆಬ್ಬಿಸಿ ಪ್ರಕರಣವನ್ನು ಮುಚ್ಚಿಹಾಕುವ ಹುನ್ನಾರಮಾಡಿದ್ದ. ಬಸವರಾಜಪ್ಪ ಮಧ್ಯಪ್ರವೇಶಿಸಿದ್ದರಿಂದ ಧೀರೇಂದ್ರಗೌಡನ ಲೆಕ್ಕಾಚಾರ ತಲೆಕೆಳಗಾಗಿ ಮಾದನಿಗೆ ನ್ಯಾಯ ಸಿಕ್ಕಿತ್ತು. ಗೌಡ ಒಲ್ಲದ ಮನಸ್ಸಿನಿಂದ ಮಾದನ ಮಗಳನ್ನು ಸಣ್ಣಗೌಡನಿಗೆ ತಂದುಕೊಂಡು ಸಂಬಂಧಿಕರಲ್ಲಿ ಮರ್ಯಾದೆ ಹೋಯಿತೆಂದು ಮಗ ಸೊಸೆ ಇಬ್ಬರನ್ನೂ ಕಲಬುರಗಿಯಲ್ಲಿ ಮನೆಮಾಡಿ ಇಟ್ಟಿದ್ದ. ಬಸವರಾಜಪ್ಪನ ಮುಖ ನೋಡಿದಾಗಲೆಲ್ಲ ಧೀರೇಂದ್ರಗೌಡನಿಗೆ ಮಾದ ತನ್ನ ಸಂಬಂಧಿ ಎನ್ನುವುದು ನೆನಪಾಗಿ ಹೊಟ್ಟೆಯಲ್ಲಿ ಬೆಂಕಿಸುರಿದಂತಾಗುತ್ತಿತ್ತು.
ಧೀರೇಂದ್ರಗೌಡ ಚಾಪೆಯಡಿ ತೂರಿದರೆ ಅಲ್ದಿ ಮಲಕಾಣಿ ರಂಗೋಲಿ ಕೆಳಗೆ ನುಸುಳುವಷ್ಟು ನಿಸ್ಸೀಮನಾಗಿದ್ದ. ವಾಸಪ್ಪ ಕುಲಕರ್ಣಿ ತಬ್ಬಿಕೊ ಪ್ರಕರಣದಲ್ಲಿ ಇಡೀ ಐದುಲಕ್ಷ ರೂಪಾಯಿಗಳ ಗಂಟನ್ನು ನುಂಗಿ ನೀರುಕುಡಿದಿರುವನೆಂದು ಊರಲ್ಲಿ ಜನ ಗುಸುಗುಸು ಮಾತನಾಡುತ್ತಿದ್ದರಾದರೂ ಯಾರೊಬ್ಬರಿಗೂ ಬಾಯಿಬಿಟ್ಟು ಹೇಳುವ ಧೈರ್ಯವಿರಲಿಲ್ಲ. ಮಲಕಾಣಿಯ ಅಣ್ಣನ ಮಗಳನ್ನು ತಬ್ಬಿಕೊಂಡಿದ್ದೆ ಎಡವಟ್ಟಾಗಿ ವಾಸಪ್ಪ ಕುಲಕರ್ಣಿ ಐದು ಲಕ್ಷ ರೂಪಾಯಿಗಳ ದಂಡತೆತ್ತಿದ್ದ. ಹದಿಮೂರರ ವಯಸ್ಸಿನ ಕಲಾವತಿ ಅದ್ಯಾವ ಘಳಿಗೆಯಲ್ಲಿ ಅರವತ್ತರ ಮುದುಕ ವಾಸಪ್ಪನ ಕಾಮವನ್ನು ಕೆರಳಿಸಿದಳೋ ವೇಳೆಯಲ್ಲದ ವೇಳೆಯಲ್ಲಿ ಅಲ್ದಿ ಶಿವಣ್ಣನ ಮನೆಗೆಹೋಗಿ ಹರೆಯದ ಪೆÇೀರಿಯನ್ನು ತಬ್ಬಿಹಿಡಿದು ಎದೆಯ ಮೇಲೆ ಕೈಯಾಡಿಸಿದ್ದ. ಆಗಷ್ಟೆ ಕಲಾವತಿ ಮೈನೆರೆದು ಎಂಟು ದಿನಗಳಾಗಿತ್ತು. ಆಗಾಗ ಕೈಹಿಡಿದು ಮುದ್ದಿಸುತ್ತಿದ್ದನಾದರೂ ಅಜ್ಜನಪ್ರೀತಿ ಎಂದು ಮನೆಯವರೂ ತಲೆಕೆಡಿಸಿಕೊಂಡಿರಲಿಲ್ಲ. ಪೆÇೀರಿ ಮೈನೆರೆಯುವುದನ್ನೇ ಕಾಯುತ್ತಿದ್ದ ಮುದುಕ ಮೊಮ್ಮಗಳ ವಯಸ್ಸಿನವಳೆಂದು ನೋಡದೆ ತಬ್ಬಿಕೊಂಡು ಅವಳೆದುರು ಬೆತ್ತಲಾಗಿದ್ದ. ಮುದುಕನ ವಿಶ್ವರೂಪಕ್ಕೆ ಹೆದರಿ ಕಿಟಾರನೆ ಕಿರುಚಿದ ಕಲಾವತಿ ಒಂದೇ ಹೆಜ್ಜೆಗೆ ಕೋಣೆಯಿಂದ ಹೊರಗೆ ಜಿಗಿದಿದ್ದಳು. ಶಿವಣ್ಣನ ಅವ್ವ ಮತ್ತು ಹೆಂಡತಿ ಕೋಣೆಹೊಕ್ಕು ಚಪ್ಪಲಿಯಿಂದ ವಾಸಪ್ಪನಿಗೆ ತಕ್ಕಶಾಸ್ತಿ ಮಾಡಿ ಹೊರಹಾಕಿದ್ದರು. ಮಕ್ಕಳಿಗೆ ಸುದ್ದಿ ತಿಳಿಯುವುದಕ್ಕಿಂತ ಮೊದಲೇ ವಾಸಪ್ಪ ಕುಲಕರ್ಣಿ ಊರುಬಿಟ್ಟು ಪರಾರಿಯಾಗಿದ್ದ. ಸ್ವಂತ ಅಣ್ಣನ ಮಗಳ ಮಾನಹರಾಜಾಗುತ್ತದೆ ಎಂದು ಲೆಕ್ಕಿಸದೆ ವಾಸಪ್ಪನ ಪ್ರಕರಣವನ್ನು ಇಡೀ ಊರಿನ ತುಂಬ ಹರಡುವಂತೆ ಮಲಕಾಣಿ ನೋಡಿಕೊಂಡಿದ್ದ. ಕಲಬುರಗಿ ಸಮೀಪದ ಯಾತ್ರಾಸ್ಥಳದಲ್ಲಿ ತಲೆಮರೆಸಿಕೊಂಡಿದ್ದ ವಾಸಪ್ಪನಿಗೆ ಊರಿನ ವಿದ್ಯಮಾನಗಳು ತಿಳಿಯುವ ವ್ಯವಸ್ಥೆಮಾಡಿ ಊರಿಗೆ ಕಾಲಿಟ್ಟರೆ ಅಲ್ದಿ ಶಿವಪ್ಪ ತನ್ನ ಪ್ರಾಣತೆಗೆಯುವುದು ನಿಶ್ಚಿತ ಎನ್ನುವ ಭಯ ಅವನಲ್ಲಿ ಹುಟ್ಟಿಸಿದ್ದ. ಊರಜನ ಮರೆತು ಇಡೀ ಪ್ರಕರಣ ತಣ್ಣಗಾದ ಮೇಲೆ ವಾಸಪ್ಪನನ್ನು ಸಂಪರ್ಕಿಸಿ ಊರಿಗೆ ಕರೆತರಲು ಐದುಲಕ್ಷ ರೂಪಾಯಿಗಳ ಬೇಡಿಕೆ ಇಟ್ಟಿದ್ದ. ಊರನ್ನು ಯಾವಾಗ ಸೇರುವೇನೋ ಎನ್ನುವ ತವಕದಲ್ಲಿದ್ದ ವಾಸಪ್ಪ ಐದುಲಕ್ಷ ರೂಪಾಯಿಗಳನ್ನು ಮಲಕಾಣಿಗೆ ಕೊಟ್ಟು ಊರಿಗೆ ಬಂದಿದ್ದ. ವಾಸಪ್ಪನಿಂದ ಪಡೆದ ಹಣದ ವಾಸನೆ ಬೇರೆಯವರಿಗಿರಲಿ ಸ್ವತ: ತನ್ನ ಕುಟುಂಬದವರ ಮೂಗಿಗೂ ಬಡಿಯದಂತೆ ಮಲಕಾಣಿ ಎಷ್ಟೆ ಎಚ್ಚರ ವಹಿಸಿದ್ದರೂ ಬಸವರಾಜಪ್ಪನಿಗೆ ಈ ಎಲ್ಲ ಹಕೀಕತ್ತು ಮನದಟ್ಟಾಗಿತ್ತು. ಶಿವಣ್ಣನಿಗೆ ವಿಷಯ ತಿಳಿಸಿ ಮಲಕಾಣಿ ಬಗ್ಗೆ ಎಚ್ಚರದಿಂದಿರುವಂತೆ ಹೇಳಿದ್ದ. ವಾಸಪ್ಪನ ಪ್ರಕರಣದ ನಂತರ ಶಿವಣ್ಣ ತನ್ನ ತಮ್ಮ ಮಲಕಾಣಿಯನ್ನು ದೂರವೇ ಇಟ್ಟಿದ್ದ. ಇದು ಮಲಕಾಣಿಗೆ ಬಸವರಾಜಪ್ಪನ ಮೇಲೆ ಕೋಪಗೊಳ್ಳಲು ಕಾರಣವಾಗಿತ್ತು.
ಧೀರೇಂದ್ರಗೌಡ ಮತ್ತು ಮಲಕಾಣಿ ತಮಗಾದ ಅಪಮಾನಕ್ಕಾಗಿ ಬಸವರಾಜಪ್ಪನ ಮೇಲೆ ಹಗೆತೀರಿಸಿಕೊಳ್ಳಲು ಹೊಂಚುಹಾಕುತ್ತಿದ್ದರು. ಕತ್ತಲಲ್ಲಿ ತಡುಕಾಡುವವನಿಗೆ ಮಿಣುಕು ದೀಪ ಎದುರಾದಂತೆ ಕಲಬುರಗಿಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಹೊಂದಿಕೊಂಡಿದ್ದ ಬಸವರಾಜಪ್ಪನ ಜಮೀನು ಕಣ್ಣಿಗೆ ಬಿದ್ದದ್ದೆ ಇಬ್ಬರೂ ಕಾರ್ಯಪ್ರವರ್ತರಾದರು. ತಲೆಯ ಮೇಲೊಂದು ಸೂರಿಲ್ಲದೆ ಬಿಸಿಲಲ್ಲಿ ನಿಂತಿದ್ದ ಊರ ದೇವರಾದ ಮಲಕಣ್ಣಪ್ಪನಿಗೆ ನೆರಳಿನಾಶ್ರಯ ನೀಡದಿದ್ದರೆ ಊರಿಗೆ ಕೆಟ್ಟದಾಗುತ್ತದೆಂದು ಸುದ್ದಿ ಹಬ್ಬಿಸಿದರು. ಗುಡಿಕಟ್ಟಲು ಬಸವರಾಜಪ್ಪನಿಗೆ ಎರಡೆಕರೆ ಜಮೀನಿನ ದಾನಪತ್ರ ಬರೆದುಕೊಡುವಂತೆ ಕಾಡತೊಡಗಿದರು. ಶಾಲೆಯ ಹಿಂದೆ ಸರ್ಕಾರದ ಲೆಕ್ಕದಲ್ಲಿದ್ದ ಬರಡು ಭೂಮಿ ಇದ್ದರೂ ಅದು ದೂರಾಗುತ್ತದೆಂದು ಬಸವರಾಜಪ್ಪನ ಜಮೀನು ದೇವಸ್ಥಾನ ನಿರ್ಮಾಣಕ್ಕೆ ಪ್ರಶಸ್ತವಾಗಿದೆ ಎಂದು ಪಂಚಾಯಿತಿ ಮೀಟಿಂಗ್‍ನಲ್ಲಿ ಊರ ಜನರ ಮನವೊಲಿಸಿ ದಾನಪತ್ರ ಬರೆದುಕೊಡುವಂತೆ ಒತ್ತಡ ತಂದಿದ್ದರು. ಊರಿನವನೇ ಆಗಿದ್ದ ಗಾಳಿಸಂಗಣ್ಣನಿಗೆ ಹೇಳಿ ಅವನ ‘ಸುಂಟರಗಾಳಿ’ ಪತ್ರಿಕೆಯಲ್ಲಿ ದೇವಸ್ಥಾನದ ಸ್ಥಾಪನೆಯಿಂದ ಊರಿನ ಅಭಿವೃದ್ಧಿಯಾಗುತ್ತದೆಂದು ಪುಟಗಟ್ಟಲೇ ವರದಿ ಪ್ರಕಟವಾಗುವಂತೆ ವ್ಯವಸ್ಥೆ ಮಾಡಿದ್ದರು.
* * *
ಗಾಳಿಸಂಗಣ್ಣನಿಗೂ ಬಸವರಾಜಪ್ಪನ ಮೇಲೆ ಹಳೆಯ ಸೇಡೊಂದು ಬಾಕಿಯಿತ್ತು. ಹಿಂದೊಮ್ಮೆ ಧೀರೇಂದ್ರಗೌಡನ ಮಗನ ಪ್ರಕರಣದಲ್ಲಿ ಬಸವರಾಜಪ್ಪನಿಂದ ಅವಮಾನಿತನಾದದ್ದು ಅವನು ಮರೆತಿರಲಿಲ್ಲ. ಮೂಲಿಮನಿ ಗುರುಲಿಂಗನ ನಾಲ್ಕು ಮಕ್ಕಳಲ್ಲಿ ಸಂಗಣ್ಣ ಕೊನೆಯವನಾಗಿದ್ದ. ಮೊದಲಿನ ಮೂರು ಮಕ್ಕಳು ವಿದ್ಯಾಭ್ಯಾಸಕ್ಕೆ ಎಳ್ಳುನೀರುಬಿಟ್ಟು ವ್ಯವಸಾಯದಲ್ಲಿ ಅಪ್ಪನಿಗೆ ಜೊತೆಯಾಗಿದ್ದರು. ಅಷ್ಟಿಷ್ಟು ಓದು ತಲೆಗೆ ಹತ್ತಿದ್ದ ಸಂಗಣ್ಣನಿಗೆ ಹೊಲದಲ್ಲಿ ಚಾಕರಿ ಮಾಡುವುದು ಇಷ್ಟವಿರಲಿಲ್ಲ. ಪಿ.ಯು.ಸಿ ನಲ್ಲಿ ಆರ್ಡಿನರಿ ಪಾಸಾಗಿ ಕಾಲೇಜಿಗೆ ಕೈಮುಗಿದು ‘ಕ್ರಾಂತಿ’ ಪತ್ರಿಕೆ ಸೇರಿಕೊಂಡಿದ್ದ. ಕಂಪ್ಯೂಟರ್ ಪತ್ರಿಕಾಕ್ಷೇತ್ರಕ್ಕೆ ಕಾಲಿಟ್ಟಿರದ ಆ ದಿನಗಳಲ್ಲಿ ಹತ್ತುವರ್ಷಗಳ ಕಾಲ ಅಕ್ಷರಗಳ ಮೊಳೆ ಜೋಡಿಸುತ್ತ ಪತ್ರಿಕಾ ಬರವಣಿಗೆಯ ಎಲ್ಲ ಪಟ್ಟುಗಳನ್ನು ಕರಗತ ಮಾಡಿಕೊಂಡಿದ್ದ. ಮುಂದೆ ಕರೆಸ್ಪಾಂಡೆನ್ಸ್‍ನಲ್ಲಿ ಜರ್ನಲಿಸಂ ಶಿಕ್ಷಣಪಡೆದು ಕ್ರಾಂತಿಯಿಂದ ಹೊರಬಂದು ತನ್ನದೇ ‘ಸುಂಟರಗಾಳಿ’ ಪತ್ರಿಕೆ ಆರಂಭಿಸಿದ. ಅಂದಿನಿಂದ ಅವನು ಗಾಳಿಸಂಗಣ್ಣ ಎಂದೇ ಖ್ಯಾತನಾದ. ಸುಂಟರಗಾಳಿಯ ಪ್ರತಿಯನ್ನು ಬಗಲಲ್ಲಿಟ್ಟುಕೊಂಡು ಸರ್ಕಾರಿ ಕಚೇರಿಗಳಿಗೆ ಅಲೆಯುವುದನ್ನು ಗಾಳಿಸಂಗಣ್ಣ ದಿನನಿತ್ಯದ ಕಾಯಕ ಮಾಡಿಕೊಂಡಿದ್ದ. ಅವನ ಬಗಲಲ್ಲಿರುತ್ತಿದ್ದ ಪತ್ರಿಕೆಗೆ ಅಂಜಿ ಸರ್ಕಾರಿ ಅಧಿಕಾರಿಗಳು ಒಂದಿಷ್ಟು ಚೆಂದಾ ಎತ್ತಿ ಕೊಡುತ್ತಿದ್ದರು. ಗಾಳಿಸಂಗಣ್ಣ ಸುಂಟರಗಾಳಿ ಎದುರಿಗಿಟ್ಟುಕೊಂಡು ಹಪ್ತಾವಸೂಲಿ ಮಾಡುತ್ತಿದ್ದ ಸಂಗತಿ ಗುಟ್ಟಾಗೇನೂ ಉಳಿದಿರಲಿಲ್ಲ. ಊರಿಗೆ ಬಂದಾಗಲೆಲ್ಲ ಮಠಕ್ಕ ಭೇಟಿನೀಡಿ ಅಪಗೊಳ ಪಾದಕ್ಕ ಹಣೆಹಚ್ಚಿ ‘ಬುದ್ದಿ ಬಾಂಬೆ ಪ್ರವಚನ ಯಾವಾಗ’ ಎಂದು ಕುಚೇಷ್ಟೆ ಮಾಡುತ್ತಿದ್ದ. ಅಪಗೊಳಿಗಿ ಅರ್ಥ ಆಗಿ ತಮ್ಮ ಖಾಸಗಿ ಕೋಣೆಯಲ್ಲಿದ್ದ ತಿಜೋರಿಯಿಂದ ಐನೂರರ ಹತ್ತೋ ಇಪ್ಪತ್ತೋ ನೋಟುಗಳನ್ನು ಕಲ್ಲುಸಕ್ಕರೆ ಮತ್ತು ಎರಡು ಸೇವಂತಗಿ ಹೂವಿನ ಜೊತೆ ಸೇರಿಸಿ ಆಶೀರ್ವಾದದ ರೂಪದಲ್ಲಿ ಗಾಳಿಸಂಗಣ್ಣನ ಕೈಗೆ ಹಾಕುತ್ತಿದ್ದರು. ಮುಂಬೈನಲ್ಲಿ ಅಪಗೊಳು ಆಡಿದ ಆಟದ ಎಲ್ಲ ಭಂಗಿಗಳನ್ನು ಗಾಳಿಸಂಗಣ್ಣನ ಕ್ಯಾಮೆರಾ ಸೆರೆಹಿಡಿದಿತ್ತು. ಸರ್ಕಾರಿ ಅಧಿಕಾರಿಗಳನ್ನು ಮಠಾಧಿಪತಿಗಳನ್ನು ಹೆದರಿಸಿ ಹಣ ವಸೂಲಿಮಾಡಿ ಗಾಳಿಸಂಗಣ್ಣ ಊರಿನಲ್ಲಿ ದೊಡ್ಡಮನೆ ಕಟ್ಟಿಸಿದ್ದ.
ಬಿರುಗಾಳಿಯಂತಿದ್ದ ಗಾಳಿಸಂಗಣ್ಣ ಧೀರೇಂದ್ರಗೌಡನ ಮಗನ ಪ್ರೇಮಪ್ರಕರಣದ ವರದಿ ಪ್ರಕಟಿಸಿ ತುಸು ಮೆತ್ತಗಾಗಿದ್ದ. ಧೀರೇಂದ್ರಗೌಡನ ಮಗನಿಂದ ತನ್ನ ಮಗಳಿಗಾದ ಅನ್ಯಾಯಕ್ಕಾಗಿ ನ್ಯಾಯ ಕೊಡಿಸುವಂತೆ ಮಾದ, ಬಸವರಾಜಪ್ಪನಲ್ಲಿ ಮೊರೆಹೋಗಿದ್ದ. ಮಾದನ ಮಗಳಿಗೆ ನ್ಯಾಯಕೊಡಿಸುವಂತೆ ಬಸವರಾಜಪ್ಪ, ಗಾಳಿಸಂಗಣ್ಣನಲ್ಲಿ ಕೇಳಿಕೊಂಡಿದ್ದ. ತನ್ನ ಪತ್ರಿಕೆಯಲ್ಲಿ ವಿವರವಾಗಿ ವರದಿ ಪ್ರಕಟಿಸುವುದಾಗಿ ಗಾಳಿಸಂಗಣ್ಣ ಭರವಸೆಕೊಟ್ಟಿದ್ದ. ಮರುದಿನ ಪತ್ರಿಕೆಯಲ್ಲಿ ಪ್ರಕಟವಾದ ವರದಿಯಲ್ಲಿ ಎಲ್ಲಾ ಉಲ್ಟಾ ಆಗಿತ್ತು. ಹಣದೋಚುವುದಕ್ಕಾಗಿ ಮಾದ ಮತ್ತು ಅವನ ಮಗಳು ಹೂಡಿದ ನಾಟಕ ಇದೆಂದು ಬರೆದಿದ್ದ. ‘ಪ್ರೇಮ್ ಕಹಾನಿ: ಹಣದೋಚುವ ಮೋಹಿನಿ’ ಎಂದು ವರದಿಗೆ ಥೇಟ್ ಕಂಪನಿ ನಾಟಕಗಳ ಹೆಸರಿನಂತೆ ಹೆಡ್ಡಿಂಗ್ ನೀಡಿದ್ದ. ಧೀರೇಂದ್ರಗೌಡ ಕುಮಸಿ ಮತ್ತು ಸುತ್ತಮುತ್ತಲಿನ ಎಲ್ಲ ಹತ್ತು ಹಳ್ಳಿಗಳಿಗೆ ಪತ್ರಿಕೆಯ ಪ್ರತಿಗಳನ್ನು ಪುಕ್ಕಟ್ಟೆ ಹಂಚಿದ್ದ. ವರದಿ ಓದಿದ್ದೆ ಬಸವರಾಜಪ್ಪನಿಗೆ ಗಾಳಿಸಂಗಣ್ಣನ ಮೇಲೆ ನಖಾಶಿಖಾಂತ ಸಿಟ್ಟು ಬಂತು. ನೇರ ಪತ್ರಿಕೆಯ ಕಚೇರಿಗೆ ಹೋಗಿ ಮಾನನಷ್ಟ ಮೊಕುದ್ದಮೆ ಹೂಡುವುದಾಗಿ ಬೆದರಿಸಿದ. ಹೆದರಿದ ಗಾಳಿಸಂಗಣ್ಣ ಮರುದಿನದ ಪತ್ರಿಕೆಯಲ್ಲಿ ಮಾದನ ಕ್ಷಮೆಕೋರಿ ತನ್ನ ಹೇಳಿಕೆ ಪ್ರಕಟಿಸಿದ್ದ. ತನಗಾದ ಅವಮಾನಕ್ಕಾಗಿ ಬಸವರಾಜಪ್ಪನ ಮೇಲೆ ಸೇಡು ತೀರಿಸಿಕೊಳ್ಳಲು ಸಮಯ ಸಂದರ್ಭಕ್ಕಾಗಿ ಕಾಯುತ್ತಿದ್ದವನಿಗೆ ದೇವಸ್ಥಾನದ ಸ್ಥಾಪನೆ ಸುವರ್ಣ ಅವಕಾಶವನ್ನೇ ಒದಗಿಸಿತ್ತು. ಅದಕ್ಕೆಂದೇ ಸುಂಟರಗಾಳಿಯಲ್ಲಿ ಊರಿನ ಅಭಿವೃದ್ಧಿಗೆ ಗುಡಿ ಮತ್ತು ಕಲ್ಯಾಣಮಂಟಪದ ಅಗತ್ಯ ಕುರಿತು ವಿವರಿಸಿ ಬರೆದಿದ್ದ. ಎಮ್.ಎಲ್.ಎ ಅಂದಾನಪ್ಪಗೌಡರು ಶಾಸಕರ ನಿಧಿಯಿಂದ ದೇವಸ್ಥಾನ ಹಾಗೂ ಕಲ್ಯಾಣಮಂಟಪದ ನಿರ್ಮಾಣಕ್ಕೆ ಹಣ ಮಂಜೂರು ಮಾಡಲಿದ್ದಾರೆಂದು ವರದಿಯಲ್ಲಿ ಬಾಕ್ಸ್ ಐಟೆಮ್ಮಾಗಿ ಪ್ರಕಟಿಸಿದ್ದ. ಅಂದಾನಪ್ಪಗೌಡರು ವರದಿ ಓದಿ ಧೀರೇಂದ್ರಗೌಡ ಮತ್ತು ಮಲಕಾಣಿಯನ್ನು ಕಲಬುರಗಿಯ ಓಕಳಿಕ್ಯಾಂಪ್‍ನಲ್ಲಿದ್ದ ತಮ್ಮ ಮನೆಗೆ ಬರಮಾಡಿಕೊಂಡು ಮುಂದುವರೆಯುವಂತೆ ಹಸಿರು ನಿಶಾನೆ ತೋರಿಸಿದ್ದರು. ಸಾಧ್ಯವಾದರೆ ಇನ್ನೊಂದು ಎಕರೆ ಜಮೀನು ಮಸೀದಿ ನಿರ್ಮಾಣಕ್ಕೆ ಬರೆದುಕೊಡುವಂತೆ ಬಸವರಾಜಪ್ಪನ ಮೇಲೆ ಒತ್ತಡಹಾಕಿ ಎಂದಿದ್ದರು. ಸಾಹೇಬರು ಬರುವ ಚುನಾವಣೆ ನಜರನಲ್ಲಿಟ್ಟುಕೊಂಡು ದೇವಸ್ಥಾನ ಮತ್ತು ಮಸೀದಿ ಕಟ್ಟಿಸಲು ಸ್ವತ: ತಾವೇ ಅಖಾಡಕ್ಕೆ ಇಳಿಯುತ್ತಿರುವಂತೆ ಧೀರೇಂದ್ರಗೌಡನಿಗೆ ಭಾಸವಾಯಿತು. ಊರಿಗೆ ಮರಳಿದ ಮಲಕಾಣಿ ರಾತ್ರೋರಾತ್ರಿ ನಜೀರಸಾಬರ ಮನೆಗೆ ಭೇಟಿಕೊಟ್ಟು ಅಂದಾನಪ್ಪಗೌಡರ ವಿಚಾರವನ್ನು ಸಾಧ್ಯಂತವಾಗಿ ವಿವರಿಸಿದ. ವಿಷಯ ತಿಳಿದದ್ದೆ ನಜೀರಸಾಬರು ತಮ್ಮ ಪಟಾಲಂ ಕಟ್ಟಿಕೊಂಡು ಬಸವರಾಜಪ್ಪನನ್ನು ಕಂಡು ಮಸೀದಿ ನಿರ್ಮಾಣಕ್ಕಾಗಿ ಒಂದು ಎಕರೆ ಜಮೀನಿನ ಬೇಡಿಕೆ ಮುಂದಿಟ್ಟರು.
* * *
ದೇವಸ್ಥಾನ ನಿರ್ಮಾಣದ ಕುರಿತು ಚರ್ಚಿಸಲು ಮಠದ ಅಪಗೊಳ ನೇತೃತ್ವದಲ್ಲಿ ಧೀರೇಂದ್ರಗೌಡನ ಮನೆಯಲ್ಲಿ ಊರಮುಖಂಡರ ಸಭೆ ಕರೆಯಲಾಗಿತ್ತು. ಬಸವರಾಜಪ್ಪನೂ ಸಭೆಗೆ ಹಾಜರಾಗಿದ್ದ. ‘ಬಸವರಾಜಪ್ಪ ಊರದೇವರ ಸೇವಾ ಅಂದರ ಅದೇನು ಸಣ್ಣ ಮಾತಲ್ಲ. ಈ ಭಾಗ್ಯ ನಿನಗ ಸಿಗಬೇಕಂದರ ಅದು ನಿನ್ನ ಪೂರ್ವಜನ್ಮದ ಪುಣ್ಯ ಅಂತ ಕಾಣತದ. ಹೊಲ, ಮನಿ, ಸಂಸಾರ ಅನ್ನೊದೆಲ್ಲ ಲೌಕಿಕದ ಮಾತು. ಇಹಲೋಕದಾಗ ಒಳ್ಳೆಯ ಕೆಲಸ ಮಾಡಿದರ ಪರಲೋಕದಾಗ ಸದ್ಗತಿ ದೊರಿತದ. ದೇವರ ಆರ್ಶೀವಾದ ಒಂದು ತಲಿಮ್ಯಾಲಿದ್ದರ ಇಂಥ ನೂರು ಎಕರೆ ನಿಂದಾಗಬಹುದು. ದೇವರ ಸೇವಾ ಅಂತ ಹಿಂದಮುಂದ ವಿಚಾರಮಾಡದೆ ಒಪ್ಪಿಕೊಂಡುಬಿಡು. ಗುಡಿ, ಕಲ್ಯಾಣಮಂಟಪ ಕಟ್ಟಿಸಿದರ ಊರು ಅಭಿವೃದ್ಧಿ ಕಾಣತದ’ ಎಂದು ಅಪಗೊಳು ಆಧ್ಯಾತ್ಮದ ಜೊತೆಗೆ ವ್ಯವಾಹಾರಿಕ ಮಾತನಾಡಿ ಮನವೊಲಿಸಲು ನೋಡಿದರು. ಬಸವರಾಜಪ್ಪ ತಲೆ ಎತ್ತಿ ಅಪಗೊಳ ಮುಖ ನೋಡಿದ. ಆ ಮುಖದಲ್ಲಿ ಕುಣಿಯುತ್ತಿದ್ದ ಅರಿಷಡ್ವರ್ಗಗಳು ಕಣ್ಣಿಗೆ ರಾಚಿದಂತಾಗಿ ಅಪಗೊಳ ಬಗ್ಗೆ ಹೇಸಿಗೆ ಎನಿಸಿತು. ಅಪಗೊಳೇನು ನೀತಿವಂತರಾಗಿರಲಿಲ್ಲ. ಅವರ ಕಚ್ಚೆ ಬಿಗಿಯಿಲ್ಲ ಅನ್ನೋದು ಇಡೀ ಊರಿಗೇ ತಿಳಿದಿತ್ತು. ಆಗಾಗ ಪ್ರವಚನದ ನೆಪಮಾಡಿಕೊಂಡು ಸೋಲಾಪುರ, ಮುಂಬೈಗೆ ಹೋಗಿ ಮೈಭಾರ ಹಗುರಾಗಿಸುತ್ತಿದ್ದದ್ದು ಗುಟ್ಟಾಗೇನೂ ಉಳಿದಿರಲಿಲ್ಲ. ‘ಶಾಲೆ, ಆಸ್ಪತ್ರೆ ಕಟ್ಟಿಸ್ತೀವಿ ಅಂದರ ಜಮೀನು ಕೊಡಬಹುದಿತ್ತು. ಈ ಗುಡಿ ಗುಂಡಾರದ ಮ್ಯಾಲ ನನಗ ನಂಬಿಕೆ ಇಲ್ಲ. ನೀವು ಕೇಳಲಿಕತ್ತಿರಂತ ಮಸೀದಿಗೂ ಜಾಗ ಬೇಕಂತ ಅವರು ಕೇಳಲಿಕತ್ತಾರ. ನನ್ನ ಹೊಲ ಅಂದರ ಯಾರದೋ ರೊಕ್ಕ ಎಲ್ಲಮ್ಮನ ಜಾತ್ರಿ ಆದಂಗ ಆಗ್ಯಾದ. ಬಿಸಿಲಾಗ ನಿಂತ ಮಲಕಣ್ಣಪ್ಪ ಮತ್ತ ಪೀರದೇವರು ಇಬ್ಬರೂ ಕೂಡಿ ಎದ್ದುಬಂದು ಕೇಳಿದರೂ ಒಂದಿಂಚು ಜಾಗ ಕೊಡೊಲ್ಲ’ ಎಂದು ದುರ್ದಾನ ತೆಗೆದುಕೊಂಡವನಂತೆ ಸಭೆಯ ಮಧ್ಯದಲ್ಲೇ ಎದ್ದು ಬಸವರಾಜಪ್ಪ ಹೊರನಡೆದ. ಬಸವರಾಜಪ್ಪನ ಮಾತು ಕೇಳಿ ಹಾಲಿನಂತೆ ಬೆಳ್ಳಗಿದ್ದ ಅಪಗೊಳ ಮುಖ ಕಪ್ಪಿಟ್ಟಿತು. ‘ಸಾಮ, ದಾನ, ದಂಡ, ಭೇದ ಪ್ರಯೋಗಿಸಿ ನೋಡಿ. ಕೊನಿಗಿ ಬಹಿಷ್ಕಾರ ಅಂತೂ ಇದ್ದದ್ದೆ’ ಎಂದು ಅಪಗೊಳು ತಮ್ಮ ತೀರ್ಮಾನ ಪ್ರಕಟಿಸಿದರು. ಸಭೆಯಲ್ಲಿನ ಎಲ್ಲರೂ ಅಪಗೊಳ ನಿರ್ಧಾರವನ್ನು ಒಕ್ಕೊರಳಿನಿಂದ ಅನುಮೋದಿಸಿದರು. ಚುರುಮುರಿ ವಗ್ಗರಣೆ ಮತ್ತು ಚಹಾ ಸೇವನೆಯ ನಂತರ ಸಭೆ ಬರ್ಖಾಸ್ತುಗೊಂಡಿತು.
ಈ ಎಲ್ಲ ವಿದ್ಯಮಾನ ನಡೆಯುತ್ತಿರುವ ಹೊತ್ತಿನಲ್ಲೇ ಕಲಬುರಗಿಯಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ಮಾಡಿಕೊಂಡಿದ್ದ ರಿಯಾಜ್ ಅಹ್ಮದ್ ಬಸವರಾಜಪ್ಪನನ್ನು ಸಂಪರ್ಕಿಸಿ ನಿನ್ನ ಹೊಲ ರಸ್ತೆಗೆ ಸಮೀಪದಲ್ಲಿರುವುದರಿಂದ ಸೈಟ್‍ಗಳನ್ನು ನಿರ್ಮಿಸಲು ತಕ್ಕುದಾಗಿದೆ ಪ್ರತಿಸೈಟ್‍ಗೆ ಹತ್ತು ಲಕ್ಷ ರೂಪಾಯಿಗಳಂತೆ ವ್ಯಾಪಾರ ಕುದರಿಸಲು ತಾನು ಸಿದ್ಧನಿರುವುದಾಗಿ ಹೇಳಿದ್ದು ಊರ ಮುಖಂಡರಿಗೆ ತಿರುಗೇಟು ನೀಡಲು ಬಸವರಾಜಪ್ಪನಿಗೆ ಹತಾರವೊಂದು ಸಿಕ್ಕಂತಾಗಿತ್ತು. ಬಸವರಾಜಪ್ಪನ ಸೈಟ್ ನಿರ್ಮಾಣದ ಯೋಜನೆ ಅವನ ಅಕ್ಕಪಕ್ಕದ ಹೊಲಗಳ ರೈತರಲ್ಲೂ ಆಸೆ ಹುಟ್ಟಿಸಿ ಅವರು ಕೂಡ ರಿಯಾಜ್ ಅಹ್ಮದ್‍ನನ್ನು ಸಂಪರ್ಕಿಸಿ ವ್ಯವಹಾರ ಕುದುರಿಸತೊಡಗಿದರು.
* * *
ರಾಮಚಂದ್ರಮೇಷ್ಟ್ರು ಹಲವು ಬಗೆಯಲ್ಲಿ ಬಸವರಾಜಪ್ಪನಿಗೆ ತಿಳಿಹೇಳಲು ಪ್ರಯತ್ನಿಸಿದರೂ ಬಸವರಾಜಪ್ಪನದು ಒಂದೇ ಹಠ. ತನ್ನ ಕೃಷಿಭೂಮಿಯನ್ನು ಪುಕ್ಕಟ್ಟೆಯಾಗಿ ಕಬಳಿಸಲು ಹೊಂಚುಹಾಕಿದವರಿಗೆ ಬುದ್ದಿಕಲಿಸಲೆಂದೇ ಸೈಟುಗಳನ್ನು ನಿರ್ಮಿಸಲು ಪಣತೊಟ್ಟ. ದೇವಸ್ಥಾನಕ್ಕೆ ಬೇಕಾದರೆ ಶಾಲೆ ಹಿಂದಿನ ಸರ್ಕಾರದ ಪಾಳುಭೂಮಿ ಒದಗಿಸುವ ವ್ಯವಸ್ಥೆ ಮಾಡುವುದಾಗಿ ಮೇಷ್ಟ್ರು ಮಾತುಕೊಟ್ಟರೂ ಬಸವರಾಜಪ್ಪ ತನ್ನ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ಬಸವರಾಜಪ್ಪನ ಜಮೀನಿನ ಅಕ್ಕಪಕ್ಕದ ರೈತರು ಕೂಡ ಆಸ್ಥೆತಾಳಿದ್ದು ಕ್ರಮೇಣ ಗ್ರಾಮದ ಕೃಷಿಭೂಮಿ ಕ್ಷೀಣಿಸುವ ಮುನ್ಸೂಚನೆಯಾಗಿ ತೋರಿತು. ವ್ಯವಸಾಯಯೋಗ್ಯ ಭೂಮಿ ಕ್ಷಯಿಸುತ್ತಿರುವುದು ರಾಮಚಂದ್ರಮೇಷ್ಟ್ರ ಆತಂಕವನ್ನು ಹೆಚ್ಚಿಸಿತು. ಊರಿನ ಕೆಲವು ವಿಚಾರವಂತರನ್ನು ಮತ್ತು ಜಮೀನು ಮಾರಾಟಕ್ಕೆ ಮುಂದಾದ ರೈತರ ಕುಟುಂಬದವರನ್ನು ಒಂದುಗೂಡಿಸಿ ಕೃಷಿಭೂಮಿ ಉಳಿಸಿಕೊಳ್ಳಲು ಮೇಷ್ಟ್ರು ಮುಷ್ಕರ ಆರಂಭಿಸಿದರು. ಊರಿನ ಕೆಲವರಿಗೆ ಮೇಷ್ಟ್ರ ಹೋರಾಟ ವ್ಯರ್ಥಪ್ರಯತ್ನದಂತೆ ತೋರಿತು. ಮೇಷ್ಟ್ರ ಮುಷ್ಕರದ ಸುದ್ದಿ ಟಿ.ವಿ ಚಾನೆಲ್ಲುಗಳು ಮತ್ತು ಪತ್ರಿಕೆಗಳ ಮೂಲಕ ರಾಜ್ಯದಾದ್ಯಂತ ಸಾರ್ವಜನಿಕರ ಗಮನ ಸೆಳೆಯಿತು. ವಿರೋಧಪಕ್ಷಗಳು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡವು. ಪ್ರತಿಸ್ಪರ್ಧಿಗಳಿಗೆ ಚುನಾವಣೆಯಲ್ಲಿ ತಮ್ಮನ್ನು ಹಣಿಯಲು ಇದೊಂದು ಹತಾರ ಆಗಬಹುದೆಂದು ಹೆದರಿದ ಅಂದಾನಪ್ಪಗೌಡರು ದೇವಸ್ಥಾನ ನಿರ್ಮಾಣದ ಯೋಜನೆಯನ್ನು ಹಿಂತೆಗೆದುಕೊಂಡಿರುವುದಾಗಿ ಹೇಳಿಕೆ ನೀಡಿದರು. ಈ ನಡುವೆ ಬಸವರಾಜಪ್ಪನ ಮಗಳು ಸರಸ್ವತಿ ಹೆರಿಗೆಗೆಂದು ತವರಿಗೆ ಬಂದವಳು ಊರಿನ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಇಡೀ ರಾತ್ರಿ ಪ್ರಸವ ವೇದನೆಯಿಂದ ನರಳಿ ನಸುಕಿನ ಜಾವ ಮಗುವಿಗೆ ಜನ್ಮ ನೀಡಿದಳು. ಹೆರಿಗೆಕೋಣೆಯ ಹೊರಗೆ ಶತಪಥ ಹೆಜ್ಜೆಹಾಕುತ್ತಿದ್ದ ಬಸವರಾಜಪ್ಪನಿಗೆ ಕೋಣೆ ಒಳಗಿನಿಂದ ಮಗಳ ನರಳುವಿಕೆ ಕೇಳಿ ಕರಳು ಕತ್ತರಿಸಿದಂಥ ಯಾತನೆಯಾಗಿತ್ತು. ಮಗುವಿನ ಅಳುವಿನ ಧ್ವನಿ ಕಿವಿಗೆ ಬಿದ್ದದ್ದೆ ಅವನ ಮನಸ್ಸಿಗೆ ಸಮಾಧಾನ ಎನಿಸಿತು. ಅಮ್ಮನ ಮಗ್ಗುಲಲ್ಲಿ ಮಲಗಿದ್ದ ಮಗುವನ್ನು ಮುದ್ದಿಸಿ ‘ಭಾಳ ತ್ರಾಸಾಯ್ತೇನು ಕೂಸು’ ಎಂದು ಕಕ್ಕುಲಾತಿಯಿಂದ ಮಗಳ ತಲೆ ಸವರಿದ. ಇಡೀ ರಾತ್ರಿ ಅನುಭವಿಸಿದ ನೋವಿನ ಛಾಯೆಯ ಒಂದೆಳೆಯೂ ಕಾಣಿಸದೆ ನಿನ್ನೆವರೆಗೂ ಚೆಲ್ಲಾಟದ ಹುಡುಗಿಯ ಕಳೆಯಿದ್ದ ಮುಖದಲ್ಲಿ ಈಗ ಮಾತೃತ್ವದ ಭಾವ ಮನೆಮಾಡಿತ್ತು. ‘ಅಪ್ಪಾ ನೋವು ಅಂತ ಹೆಣ್ಣು ಹೆರೊದನ್ನ ನಿಲ್ಲಿಸಿದರ ಈ ಜಗತ್ತು ಹ್ಯಾಂಗ ಮುಂದುವರಿಬೇಕು. ಭೂಮಿ ತಾಯಿ ನೋವು ಅಂತ ಬೆಳಿ ಬೆಳೆಯೊದನ್ನ ನಿಲ್ಲಿಸಿದಳಂದರ ಉಣ್ಣೊ ಬಾಯಿಗಳ ಗತಿ ಏನು. ಅವಳ ನೋವಿನ ಮುಂದ ನನ್ನ ನೋವೇನೂ ದೊಡ್ಡದಲ್ಲ’ ಮಗಳ ಮಾತು ಕೇಳಿ ಬಸವರಾಜಪ್ಪನಿಗೆ ತನ್ನ ತಪ್ಪಿನ ಅರಿವಾಯಿತು. ‘ಕೂಸು ನೀ ನನ್ನ ಮಗಳಲ್ಲವ, ನನಗ ನನ್ನ ತಪ್ಪು ತೋರಿಸಿಕೊಟ್ಟ ನನ್ನ ಹಡೆದವ್ವ ನೀ’ ಎಂದವನೆ ಮಗುವನ್ನು ಇನ್ನೊಮ್ಮೆ ಮುದ್ದಿಸಿ ರಾಮಚಂದ್ರಮೇಷ್ಟ್ರು ಮುಷ್ಕರ ಕುಳಿತಿದ್ದ ಸ್ಥಳದತ್ತ ಹೊರಟ. ಆಗಷ್ಟೇ ವೈಷ್ಣವ ಜನತೋ ಭಜನೆಹಾಡಿ ಮೂಡಣದಲ್ಲಿ ಉದಯಿಸುತ್ತಿದ್ದ ಸೂರ್ಯನಿಗೆ ನಮಸ್ಕರಿಸುತ್ತಿದ್ದ ರಾಮಚಂದ್ರಮೇಷ್ಟ್ರಿಗೆ ದೂರದಲ್ಲಿ ಬರುತ್ತಿರುವ ಬಸವರಾಜಪ್ಪ ಕಣ್ಣಿಗೆ ಬಿದ್ದದ್ದೆ ಅವರು ಗೆಲುವಾದರು. ಮೇಷ್ಟ್ರ ಗೆಲುವಿಗೆ ಸಾಕ್ಷಿಯಾಗಲೆಂಬಂತೆ ಸೂರ್ಯ ಕೂಡ ಆತುರಾತುರವಾಗಿ ಮೇಲೆರತೊಡಗಿದ.
* * *
No comments:
Post a Comment