ಆತ್ಮಕಥೆ
-ರಾಜಕುಮಾರ ಕುಲಕರ್ಣಿ
(ಮಾರ್ಚ್ ೨೨, ೨೦೨೬ ಕನ್ನಡಪ್ರಭ ಪತ್ರಿಕೆಯ ಸಾಹಿತ್ಯಪ್ರಭದಲ್ಲಿ ಪ್ರಕಟವಾದ ಕಥೆ)
‘ನೀವು ಹೀಂಗ ಅಂತ ಗೊತ್ತಿರಲಿಲ್ಲ. ಬಂಧು ಬಳಗದವರ ಎದುರು ತಲಿ ತಗ್ಗಿಸುವಂಗ ಮಾಡೀರಿ. ದಾಯಾದಿಗಳು ಆಡಿಕೊಂಡು ನಗಲಿಕತ್ತಾರ. ಬೆಳೆದ ಮಕ್ಕಳು ಮತ್ತು ಸೊಸಿಯಂದಿರಿಗಿ ಹ್ಯಾಂಗ ಮಾರಿತೋರಿಸಬೇಕು ಅನ್ನೋ ಖ್ಯಾಲ ಸ್ವಲ್ಪ ಆದರೂ ನಿಮಗಿದ್ದರ ಹೀಂಗ ಮಾಡತಿದ್ದಿರೇನು. ಅಲ್ಲ ಮುದುಕ ಆಗೀರಿ ಹೀಗೆಲ್ಲ ಮಾಡಿದರ ಛಲೋ ಅನಿಸಲ್ಲ ಅಂತ ಮನಸ್ಸಿಗಿ ಹೊಳಿಲಿಲ್ಲೇನು. ಆ ಪುಣ್ಯಾತಗಿತ್ತಿ ತನ್ನ ಕಥಿ ಬರೆದು ನಿಮ್ಮ ಹೊಲಸು ಪುರಾಣೆಲ್ಲಾ ಇಡೀ ಜಗತ್ತಿಗಿ ಹೇಳಿಬಿಟ್ಟಾಳ. ಇನ್ನು ನಿಮ್ಮ ಜೊತಿಗಿ ಸಂಸಾರ ಮಾಡೋದು ನನ್ನಿಂದ ಸುತಾರಾಂ ಅಂದರ ಆಗಲ್ಲ. ಮಕ್ಕಳ ಮನಿಗಿ ಹೋಗಿ ರಾಮಾ ಕೃಷ್ಣ ಅಂತ ಜೀವನ ಸಾಗಿಸ್ತೀನಿ. ನಿಮ್ಮ ಪಾಲಿಗಿ ಹೆಂಡತಿ ಮಕ್ಕಳು ಸತ್ತಾರ ಅಂತ ತಿಳಿಕೊಂಡು ಇಡೀ ಮನ್ಯಾಗ ಒಂಟಿಗೂಬೆ ಇದ್ದಂಗ ಇರ್ರೀ’ ಎಂದು ಪಾರ್ವತಮ್ಮ ಬಾಗಿಲು ಧಾಟಿ ಮನೆಯಿಂದ ಹೊರನಡೆದರು. ‘ಪಾರ್ವತಿ...’ ಎಂದು ಜೋರಾಗಿ ಕಿರುಚಿ ಕಣ್ಣುಬಿಟ್ಟರು ಪ್ರೊಫೆಸರ್ ಚಂದ್ರಕಾಂತ ಪಾಟೀಲ. ಸುತ್ತಲೂ ಕತ್ತಲು ಗವ್ವೆಂದು ಕಣ್ಣಿಗೆ ರಾಚಿತು. ಎದ್ದು ಲೈಟ್ ಹಾಕಿದರು. ದೊಡ್ಡ ಮಂಚದ ಮೇಲೆ ತಾವೊಬ್ಬರೆ ಇರುವುದು ಅರಿವಾಯಿತು. ಹೆಂಡತಿ ಬೆಂಗಳೂರಿನಲ್ಲಿರುವ ಹಿರಿಮಗನ ಮನೆಗೆ ಹೋಗಿ ಎರಡು ದಿನಗಳಾಯಿತೆಂದು ನೆನಪಾದದ್ದೆ ಇದುವರೆಗೂ ತಾವು ಕಂಡಿದ್ದು ಕನಸು ಎನ್ನುವುದು ಮನಸ್ಸಿಗೆ ಹೊಳೆದು ಹತ್ತಿರದ ಟೇಬಲ್ ಮೇಲಿಟ್ಟಿದ್ದ ತಂಬಿಗೆಯಿಂದ ತಣ್ಣಗಿನ ನೀರನ್ನು ಗಟಗಟಕನೆ ಕುಡಿದು ಮುಖದಲ್ಲಿ ಧಾರಾಕಾರವಾಗಿ ಹರಿಯುತ್ತಿದ್ದ ಬೆವರನ್ನು ಒರೆಸಿಕೊಂಡರು. ಮನಸ್ಸಿಗೆ ಒಂದಿಷ್ಟು ಸಮಾಧಾನ ಎನಿಸಿತು. ಲೈಟ್ ಆರಿಸಿ ಹಾಸಿಗೆಗೆ ಮೈಚಾಚಿದರೂ ನಿದ್ರೆ ಹತ್ತಿರ ಸುಳಿಯಲಿಲ್ಲ. ನಿದ್ದೆ ಬರದೆ ಘಳಿಗೆಗೊಮ್ಮೆ ಎಡ ಬಲ ಹೊರಳಿದರು. ‘ಆತ್ಮಕಥೆ ಬರೀತಾಳಂತೆ. ಬರೀಲಿ. ಎಷ್ಟೆಂದರೂ ನಾನು ಗಂಡಸು. ಮರ್ಯಾದೆ ಹೋಗೊದಾದರೆ ಅವಳದೆ ಹೋಗುತ್ತೆ. ನಿವೃತ್ತನಾಗಿ ಆಗಲೇ ಒಂದು ವರ್ಷ ಆಯಿತು ಇನ್ನೇನು ಹೆದರಿಕೆ’ ಎಂದು ಮನಸ್ಸಿಗೆ ಸಮಾಧಾನ ತಂದುಕೊಂಡರು. ಮೊಬೈಲ್ ಫೆÇೀನ್‍ನಲ್ಲಿ ಟೈಮ್ ಎಷ್ಟಾಗಿದೆಯೆಂದು ನೋಡಿದರು. ರಾತ್ರಿ ಹನ್ನೆರಡು ಗಂಟೆಯಾಗಿತ್ತು. ಇನ್ನು ನಿದ್ದೆ ಹತ್ತುವುದಿಲ್ಲ ಎಂದೆನಿಸಿ ಎದ್ದು ಲೈಟ್ ಹಾಕಿ ಸೆಲ್ಫ್‍ನಲ್ಲಿದ್ದ ಕಾಫ್ಕಾನ ದಿ ಜಡ್ಜ್‍ಮೆಂಟ್ ಪುಸ್ತಕ ಕೈಗೆತ್ತಿಕೊಂಡರು. ಪುಟ ತೆರೆದರೆ ಅವಳದೆ ಪ್ರತಿಬಿಂಬ ಕಾಣಿಸಿದಂತಾಗಿ ಅರೆಕ್ಷಣ ಬೆಚ್ಚಿಬಿದ್ದು ಪುಸ್ತಕ ಮುಚ್ಚಿಟ್ಟು ಮತ್ತೆ ಹಾಸಿಗೆಯಲ್ಲಿ ಅಡ್ಡಾದರು.
‘ಸರ್ ಸರೋಜಿನಿ ಆತ್ಮಕಥೆ ಬರೀತಿದ್ದಾಳಂತೆ. ಕೊನೆಯ ಅಧ್ಯಾಯದ ಬರವಣಿಗೆ ಮಾತ್ರ ಬಾಕಿ ಇದೆಯಂತೆ. ಪುಸ್ತಕ ಹೊರಗಬಂದ ಮ್ಯಾಲ ಯಾರ್ಯಾರ ಮರ್ಯಾದಿ ಬೀದಿಪಾಲಾಗುತ್ತೊ ಅಂತ ಭಯ ಶುರುವಾಗಿದೆ’ ಸದಾನಂದ ರಾತ್ರಿ ಫೆÇೀನ್‍ಮಾಡಿ ಹೇಳಿದಾಗ ಪೆÇ್ರಫೆಸರ್ ಚಂದ್ರಕಾಂತರಿಗೆ ಕುಡಿದಿದ್ದ ರಮ್‍ನ ಅಮಲು ಜರ್ರಂತ ಇಳಿದುಹೋಗಿತ್ತು. ಸಾಯಂಕಾಲದ ವಾಕಿಂಗ್ ಮುಗಿಸಿ ಮನೆಗೆಬಂದು ಪಾನಗೋಷ್ಠಿ ಆರಂಭಿಸಿದ್ದವರಿಗೆ ಸದಾನಂದನ ಮಾತು ಕೇಳಿ ಮೆದುಳಿನಲ್ಲಿ ನೀರು ಸುರಿದಂತಾಗಿತ್ತು. ಪತ್ನಿ ಊರಿನಲ್ಲಿ ಇಲ್ಲದಿದ್ದಾಗ ಪ್ರೊಫೆಸರ್ ಚಂದ್ರಕಾಂತ ಮನೆಯಲ್ಲೆ ಪಾನಗೋಷ್ಠಿಗೆ ಶುರುವಿಟ್ಟುಕೊಳ್ಳುತ್ತಿದ್ದರು. ಸಾಯಂಕಾಲದ ವಾಯುವಿಹಾರದಲ್ಲಿ ಎದುರಾದ ಪಕ್ಕದ ಮನೆಯ ಪ್ರೊಫೆಸರ್ ಹೊಸಮನಿ ಅವರನ್ನು ಮನೆಗೆ ಆಹ್ವಾನಿಸಿ ಆಗಷ್ಟೆ ಒಂದು ಗ್ಲಾಸ್ ಮುಗಿಸಿ ಎರಡನೆಯದನ್ನು ಕೈಗೆತ್ತಿಕೊಳ್ಳುತ್ತಿದ್ದವರಿಗೆ ಸರೋಜಿನಿ ಹೆಸರು ಕೇಳಿ ಆ ಕೊರೆಯುವ ಚಳಿಯಲ್ಲೂ ಹಣೆಯ ಮೇಲೆ ಬೆವರೊಡೆಯಿತು. ‘ಯಾಕ್ರಿ ಪ್ರೊಫೆಸರ್ ಏನೂ ಮಾತಾಡದೆ ದೆವ್ವ ಬಡಿದವರಂಗ ಸುಮ್ನೆ ಕುಳಿತಿರಲ್ಲ’ ಎಂದು ಎಚ್ಚರಿಸಿದ ಹೊಸಮನಿ ಅದಾಗಲೇ ಎರಡನೇ ಗ್ಲಾಸ್ ಖಾಲಿಮಾಡಿಯಾಗಿತ್ತು. ಸದಾನಂದನ ಮಾತಿಗೆ ಹೇಗೆ ಪ್ರತಿಕ್ರಿಯಿಸಬೇಕೆಂದು ತಿಳಿಯದೆ ದಿಕ್ಕು ತೋಚದಂತಾಗಿದ್ದ ಚಂದ್ರಕಾಂತ ‘ಹಾಂ ಏನಿಲ್ಲರಿ. ನೀವು ಮುಂದುವರೆಸಿ. ಸ್ವಲ್ಪ ಪರ್ಸನಲ್ ಸಂಗತಿ ಅದಾ. ನಾ ಆಮ್ಯಾಲ ಜಾಯಿನ್ ಆಗತೀನಿ’ ಎಂದು ಹಾಲ್‍ನಿಂದ ಅಂಗಳಕ್ಕೆ ಬಂದರು. ‘ಸರ್ ನೀವೇನು ಹೆದರ ಬ್ಯಾಡರಿ. ಏನು ಬರೀತಾಳ ಬರೀಲಿ. ಮಾನಹಾನಿ ಆಗೋವಂತದ್ದು ಅದರೊಳಗದಾ ಅಂತ ಗೊತ್ತಾದರ ಕೋರ್ಟಿಗಿ ಹೋದರಾಯಿತು’ ಎಂದು ಸದಾನಂದ ಭರವಸೆ ನೀಡಿದನಾದರೂ ಚಂದ್ರಕಾಂತರಿಗೆ ಅವನ ಮಾತಿನಲ್ಲಿ ತನ್ನನ್ನು ಸಮಾಧಾನಪಡಿಸಬೇಕು ಎನ್ನುವುದಕ್ಕಿಂತ ಹೆದರಿಸುವ ಬಯಕೆಯೇ ಅಡಕವಾಗಿರುವಂತೆ ಭಾಸವಾಗಿ ಹೊರಗಿನ ತಣ್ಣನೆ ಚಳಿಗೆ ಮೈ ನಡುಗಿತು. ‘ಸರ್ ನಾಳಿಗಿ ಬಂದು ಭೇಟಿ ಆಗತೀನಿ. ಖುಲ್ಲಂಖುಲ್ಲಾ ಮಾತಾಡಿದರಾಯಿತು’ ಎಂದು ಸದಾನಂದ ಕರೆ ಕತ್ತರಿಸಿದ. ಸದಾನಂದನನ್ನು ಹೇಗೆ ನಂಬುವುದು ಎನ್ನುವ ಆತಂಕ ಶುರುವಾಯಿತು. ಮೂರು ವರ್ಷಗಳಲ್ಲಿ ಪೂರ್ಣಗೊಳಿಸಬೇಕಿದ್ದ ಡಾಕ್ಟರೇಟ್‍ಗಾಗಿ ಸದಾನಂದ ಆರುವರ್ಷಗಳನ್ನು ತೆಗೆದುಕೊಂಡಿದ್ದ. ಈ ವಿಳಂಬದಲ್ಲಿ ತಮ್ಮದೆ ಸಿಂಹಪಾಲು ಎಂದರಿವಾಗಿ ಆ ಸಿಟ್ಟನ್ನು ಈ ರೀತಿಯಾಗಿ ಅವನು ತಿರಿಸಿಕೊಳ್ಳುತ್ತಿರುವನೇನೋ ಎನ್ನುವ ಶಂಕೆ ಚಂದ್ರಕಾಂತರ ಮನಸ್ಸನ್ನು ಹೊಕ್ಕು ಕೊರೆಯತೊಡಗಿತು. ‘ಎಲ್ಲರೂ ಹೇಳುವಂತೆ ನಾನು ಮಾರ್ಗದರ್ಶನ ಮಾಡುತ್ತಿದ್ದುದ್ದು ಮಹಿಳಾ ಸ್ಕಾಲರ್‍ಗಳಿಗೆ ಮಾತ್ರ. ಎಜ್ಯುಕೇಶನ್ ಮಿನಿಸ್ಟರ್ ಹೇಳಿದರೆಂದು ಒಲ್ಲದ ಮನಸ್ಸಿನಿಂದ ಸದಾನಂದನಿಗೆ ಗೈಡ್ ಮಾಡಲು ಒಪ್ಪಿಕೊಂಡಿದ್ದು. ಅಷ್ಟೇನು ಪ್ರತಿಭಾವಂತನಲ್ಲದಿದ್ದರೂ ಕಷ್ಟಪಟ್ಟು ಓದುತ್ತಿದ್ದ. ಆ ಆರು ವರ್ಷಗಳಲ್ಲಿ ಒಮ್ಮೆ ಕೂಡ ಅವನನ್ನು ಕಾನ್ಫರೆನ್ಸ್‍ಗೆ ಜೊತೆಯಲ್ಲಿ ಕರೆದುಕೊಂಡು ಹೋಗಿರಲಿಲ್ಲ’ ಹಿಂದಿನದೆಲ್ಲ ನೆನಪಾಗಿ ಚಂದ್ರಕಾಂತ ಒಳಗೊಳಗೆ ತಪ್ಪುಮಾಡಿದ ಭಾವನೆಯಿಂದ ನರಳಿದರು. ದೇಶದ ವಿವಿಧ ವಿಶ್ವವಿದ್ಯಾಲಯಗಳಲ್ಲಿನ ಕಾನ್ಫರೆನ್ಸ್‍ಗಳಿಗೆ ಹೋದಾಗಲೆಲ್ಲ ಮಹಿಳಾ ಸಂಶೋಧನಾ ಅಭ್ಯರ್ಥಿಗಳು ಜೊತೆಗಿರುತ್ತಿದ್ದರು. ಸರೋಜಿನಿ ಕೂಡ ತಮ್ಮೊಂದಿಗೆ ಹಲವು ಸಲ ಬಂದಿದ್ದಳು ಎನ್ನುವುದು ನೆನಪಾಗಿ ಆ ಕ್ಷಣಕ್ಕೆ ಮಧುರ ಅನುಭವವೊಂದು ಸ್ಮರಣೆಗೆ ಬಂದು ಪ್ರೊಫೆಸರ್ ಮೈ ಬೆಚ್ಚಗಾಯಿತು. ಮಧುರ ನೆನಪಿಗೆ ಮತ್ತಷ್ಟು ಕಾವು ಕೊಡಲು ರಮ್ ಸೇವನೆಗೆಂದು ಒಳಗೆ ಬಂದರು. ಪ್ರೊಫೆಸರ್ ಹೊಸಮನಿ ಅದಾಗಲೇ ಸೋಫಾದ ಮೇಲೆ ಮೈಚೆಲ್ಲಿ ನಿದ್ದೆಗೆ ಜಾರಿದ್ದರು. ಒಬ್ಬರೇ ಕುಳಿತು ಬರಿದಾಗಿದ್ದ ಗ್ಲಾಸಿಗೆ ರಮ್ ಸುರಿದು ಗುಟುಕರಿಸಿದವರಿಗೆ ಇನ್ನು ಸಾಕು ಎಂದೆನಿಸಿ ಬಾಟ್ಲಿ ತೆಗೆದಿಟ್ಟು ಒಂದಿಷ್ಟು ಮೊಸರನ್ನ ತಿಂದು ಊಟದ ಶಾಸ್ತ್ರ ಮುಗಿಸಿ ಹಾಸಿಗೆಗೆ ಮೈತಾಗಿಸಿದರು. ಕಣ್ಮುಚ್ಚಿದರೂ ಸರೋಜಿನಿ ಎದುರು ನಿಂತಂತೆ ಭಾಸವಾಯಿತು. ಸದಾನಂದ ಶಾಂತ ಸರೋವರಕ್ಕೆ ಕಲ್ಲು ಎಸೆದಿದ್ದ. ಅವಳು ನನ್ನ ಬಗ್ಗೆ ಬರಿಲೇ ಬೇಕು. ನಾನಿಲ್ಲದೆ ಅವಳ ಬದುಕಿನ ಅಧ್ಯಾಯ ಪೂರ್ಣಗೊಳ್ಳುವುದಾದರೂ ಹೇಗೆ?. ಏನು ಬರಿದಿರಬಹುದು? ಕುತೂಹಲಕ್ಕೆಂಬಂತೆ ಎದುರಾದ ಪ್ರಶ್ನೆ ಮುಂದೆ ಬೃಹದಾಕಾರವಾಗಿ ಬೆಳೆದು ಕೊರೆಯುವ ಚಿಂತೆಯಾಗಿ ಮಾರ್ಪಟ್ಟಿತು.
ಪೆÇ್ರಫೆಸರ್ ಟೈಮ್ ನೋಡಿಕೊಂಡರು. ರಾತ್ರಿ ಎರಡು ಗಂಟೆಯಾಗಿತ್ತು. ಇದ್ದಕ್ಕಿದ್ದಂತೆ ಅವರಿಗೆ ಊರು, ಮನೆ, ಅಪ್ಪನ ನೆನಪಾಯಿತು. ಹಳ್ಳಿಯ ಸರ್ಕಾರಿ ಕನ್ನಡ ಶಾಲೆಯಲ್ಲಿ ಓದಿದ ಹುಡುಗ ಮುಂದೊಂದು ದಿನ ವಿಶ್ವವಿದ್ಯಾಲಯದ ವಿಭಾಗ ಮುಖ್ಯಸ್ಥನಾಗುವ ಹಂತಕ್ಕೆ ಬೆಳೆದು ನಿಂತಿದ್ದು ಸಣ್ಣ ಸಾಧನೆಯಲ್ಲ ಎಂದು ಚಂದ್ರಕಾಂತರ ಮನಸ್ಸು ಗರ್ವದಿಂದ ಬೀಗಿತು. ‘ವಂಶಪಾರಂಪರ್ಯವಾಗಿ ಬಂದಿದ್ದ ಇಪ್ಪತ್ತು ಎಕರೆ ಜಮೀನಿನಲ್ಲಿ ವ್ಯವಸಾಯ ಮಾಡಿಕೊಂಡು ಊರಿನ ಜನರ ಗೌರವಕ್ಕೆ ಪಾತ್ರರಾಗಿದ್ದ ಅಪ್ಪ ಮಲ್ಲಣ್ಣಗೌಡರಿಗೆ ಮಕ್ಕಳಿಬ್ಬರ ಮೇಲೂ ಪ್ರೀತಿಯಿತ್ತು. ಇಬ್ಬರಲ್ಲಿ ಒಬ್ಬ ಓದುವುದಕ್ಕೆ ಇನ್ನೊಬ್ಬ ವ್ಯವಸಾಯಕ್ಕೆ ಎಂದು ಅಪ್ಪ ನಿರ್ಧರಿಸಿಯಾಗಿತ್ತು. ಸೂರ್ಯಕಾಂತನಿಗೂ ಓದುವ ಆಸೆಯಿತ್ತು. ಮನೆದೇವರಾದ ಗುಡ್ಡದ ಮಲ್ಲಿಕಾರ್ಜುನನ ಮೇಲೆ ಅಪ್ಪನಿಗೆ ಅಪಾರ ಭಕ್ತಿ. ರಾತ್ರಿ ಮಲಗುವಾಗ ದೇವರ ತಲೆಯ ಮೇಲೆ ಹೂವಿಟ್ಟು ಬೆಳಗ್ಗೆ ಬಲಕ್ಕೆ ಬಿದ್ದಿದ್ದರೆ ಚಂದ್ರಕಾಂತನಿಗೆ ಎಡಕ್ಕಾದರೆ ಸೂರ್ಯಕಾಂತನಿಗೆ ದೇವರ ಆಶೀರ್ವಾದ ಎಂದು ಎಲ್ಲ ಭಾರವನ್ನು ಮಲ್ಲಿಕಾರ್ಜುನನ ಮೇಲೆ ಹಾಕಿ ನಿಶ್ಚಿಂತರಾಗಿದ್ದರು. ರಾತ್ರಿ ಎಲ್ಲರೂ ಮಲಗಿರುವಾಗ ಕತ್ತಲಲ್ಲೆ ತೆವಳಿಕೊಂಡು ದೇವರಕೋಣೆ ಹೊಕ್ಕು ಹೂವನ್ನು ಬಲಕ್ಕೆ ಬೀಳಿಸುವಾಗ ಕೈನಡುಗುತ್ತಿತ್ತು. ಅಮಾಯಕರಾದ ಅಪ್ಪ ಮತ್ತು ತಮ್ಮ ದೇವರ ಆಶೀರ್ವಾದ ಎಂದು ನಂಬಿದರು. ಕಲಬುರಗಿಯ ಎಸ್.ಬಿ ಕಾಲೇಜಿನಲ್ಲಿ ಬಿ.ಎ ಪಾಸಾಗಿ ಜ್ಞಾನಗಂಗಾದಲ್ಲಿ ಎಂ.ಎ ಸೊಸಿಯಾಲಜಿ ಮುಗಿಸಿ ಪಿಎಚ್.ಡಿ ಪೂರ್ಣಗೊಳಿಸಿದ ನೆನಪು ಇನ್ನೂ ಹಚ್ಚಹಸಿರಾಗಿದೆ. ಸೂರ್ಯಕಾಂತ ಊರಿನಲ್ಲೆ ಇದ್ದು ವ್ಯವಸಾಯದಲ್ಲಿ ಅಪ್ಪನಿಗೆ ಜೊತೆಯಾದ. ಅವನೂ ಓದು ಮುಂದುವರೆಸಿದ್ದರೆ ನನ್ನಂತೆ ಯಾವುದಾದರೂ ಯೂನಿವರ್ಸಿಟಿನಲ್ಲಿ ಪೆÇ್ರಫೆಸರ್ ಆಗಿರುತ್ತಿದ್ದ’. ವ್ಯವಸಾಯದಲ್ಲಿ ನಷ್ಟವಾಗಿ ಸೂರ್ಯಕಾಂತನ ಹೆಚ್ಚುತ್ತಿರುವ ಸಾಲದಹೊರೆ ನೆನಪಾಗಿ ಪೆÇ್ರಫೆಸರ್ ಎದೆ ಭಾರವಾಯಿತು.
ಹಿಂದೆಯೇ ಗಿರಿಜಾಳ ನೆನಪಾಯಿತು. ‘ಸಂಬಂಧದಲ್ಲಿ ಸೊದರತ್ತೆ ಮಗಳು. ಊರಿನಲ್ಲೆ ಮೆಟ್ರಿಕ್‍ವರೆಗೆ ಓದಿದ್ದ ಗಿರಿಜಾ ಬೆಳ್ಳಗೆ ತೆಳ್ಳಗೆ ಸುಂದರಳಾಗಿದ್ದಳು. ಯೂನಿವರ್ಸಿಟಿನಲ್ಲಿ ಓದುತ್ತಿದ್ದ ನಾನೆಂದರೆ ಅವಳಿಗೆ ಅಭಿಮಾನ ಪ್ರೀತಿಯಿತ್ತು. ಕಲಬುರಗಿಯಲ್ಲಿ ಗೆಳೆಯರೊಡಗೂಡಿ ನೋಡಿದ ನೀಲಿ ಸಿನಿಮಾಗಳು ಮನದಲ್ಲಿ ಕಾಮನೆಯ ಭಾವವನ್ನು ಉದ್ದೀಪನಗೊಳಿಸುತ್ತಿದ್ದವು. ಬೇಸಿಗೆ ರಜೆಯಲ್ಲಿ ಊರಿಗೆ ಹೋಗಿದ್ದಾಗ ಬಯಕೆ ಕೆರಳಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಸಮಾಗಮಕ್ಕಾಗಿ ಒತ್ತಾಯಿಸಿದ್ದೆ. ಮದುವೆಯಾಗುವ ಅಭಯನೀಡಿ ಬಲವಂತಪಡಿಸಿದಾಗ ಒಪ್ಪಿದಳು. ಊರಿಗೆ ಹೋದಾಗಲೆಲ್ಲ ಕದ್ದುಮುಚ್ಚಿ ಅವಳನ್ನು ಸೇರುತ್ತಿದ್ದೆ’ ಪ್ರೊಫೆಸರ್ ಅರೆಕ್ಷಣ ಹಿಂದಿನ ನೆನಪಿನಲ್ಲಿ ಕಳೆದುಹೋದರು. ‘ಯೂನಿವರ್ಸಿಟಿನಲ್ಲಿ ಅಸಿಸ್ಟಂಟ್ ಪ್ರೊಫೆಸರ್ ಹುದ್ದೆಗೆ ಸಂದರ್ಶನಕ್ಕೆ ಕರೆಬಂದಾಗ ನನ್ನ ಬದುಕಿನ ಗತಿಯೇ ಬದಲಾಯಿತು. ಸಂದರ್ಶನ ಸಮಿತಿಯಲ್ಲಿದ್ದ ಪೆÇ್ರಫೆಸರ್ ವಿರುಪಾಕ್ಷಪ್ಪಗೌಡರು ತಮ್ಮ ಬಳಕೆಯವನೆಂದು ಸಂದರ್ಶನಕ್ಕೆ ಮೊದಲೇ ಸಂಪರ್ಕಿಸಿ ಮಗಳು ಪಾರ್ವತಿಯ ಕೈಹಿಡಿದರೆ ನೌಕರಿ ಕೊಡಿಸುವ ಭರವಸೆ ನೀಡಿದರು. ಗಿರಿಜಾಳಿಗಿಂತ ಯೂನಿವರ್ಸಿಟಿನಲ್ಲಿ ಮೇಷ್ಟ್ರಾಗುವುದೆ ದೊಡ್ಡದು ಎನಿಸಿತು. ಅಪ್ಪ ಜಗಳ ತೆಗೆದ. ತಂಗಿಗೆ ಮಾತು ಕೊಟ್ಟಿದ್ದು ತನ್ನನ್ನು ವಚನಭ್ರಷ್ಟನಾಗಿಸಬೇಡ ಎಂದು ಕೈಮುಗಿದು ಬೇಡಿಕೊಂಡ. ನನಗೆ ನೌಕರಿಯೇ ಮುಖ್ಯವಾಗಿತ್ತು. ಹಠಕ್ಕೆಬಿದ್ದ ಅಪ್ಪ ತನ್ನ ಮಾತು ಉಳಿಸಿಕೊಳ್ಳಲು ಗಿರಿಜಾಳನ್ನು ಸೂರ್ಯಕಾಂತನಿಗೆ ತಂದುಕೊಳ್ಳಲು ನಿಶ್ಚಯಿಸಿದ. ಆ ಸಂದರ್ಭ ನನಗೇಕೋ ತಮ್ಮನ ಹೆಂಡತಿಯಾಗಿ ಅವಳನ್ನು ನೋಡಲು ಮನಸ್ಸಿಗೆ ಹಿಂಸೆ ಎನಿಸಿತು. ಗಿರಿಜಾ, ಸೂರ್ಯಕಾಂತನ ಕೈಹಿಡಿಯಲು ನಿರಾಕರಿಸಿದಳು. ಅವಳ ಅಪ್ಪ ತನ್ನ ದೂರದ ಸಂಬಂಧದಲ್ಲೆ ಅವಳಿಗೆ ಗಂಡುನೋಡಿ ಮದುವೆ ಮಾಡಿದ. ಮದುವೆಯಾದ ವರ್ಷಕ್ಕೆ ಗಂಡ ತೀರಿಕೊಂಡ. ಬಡತನ ಮತ್ತು ವೈಧವ್ಯ ತಂದ ಅಕಾಲಿಕ ಮುಪ್ಪಿನಿಂದ ಈಗ ಗುರುತುಸಿಗದಷ್ಟು ಹಣ್ಣಾಗಿರುವಳು’ ಗಿರಿಜಾಳ ನೆನಪಾಗಿ ಚಂದ್ರಕಾಂತರ ಮನಸ್ಸು ಕ್ಷೋಭೆಗೊಂಡಿತು. ಹಿಂದೆಯೇ ಸರೋಜಿನಿಗೆ ಗಿರಿಜಾ ಮತ್ತು ತಮ್ಮ ಸಂಬಂಧದ ಬಗ್ಗೆ ಹೇಳಿದ್ದು ಸ್ಮರಣೆಗೆ ಬಂತು. ‘ಸರೋಜಿನಿಯನ್ನು ಕೂಡುವಾಗಲೆಲ್ಲ ನಾನು ಬರೀ ದೈಹಿಕವಾಗಿ ಮಾತ್ರ ಬೆತ್ತಲಾಗಿಲ್ಲ. ನನ್ನೊಳಗನ್ನು ಅವಳೆದುರು ತೆರೆದಿಟ್ಟು ಅಂತರಂಗದಿಂದಲೂ ಬೆತ್ತಲಾಗಿದ್ದೇನೆ. ಸರೋಜಿನಿ ತನ್ನ ಆತ್ಮಕಥೆಯಲ್ಲಿ ಗಿರಿಜಾಳ ಸಂಗತಿ ಕೂಡ ಬರೀಬಹುದೇನೋ’ ತನ್ನೊಳಗನ್ನು ಅವಳೆದುರು ತೆರೆದಿಟ್ಟು ತಪ್ಪು ಮಾಡಿದೆನೇನೊ ಎಂದೆನಿಸಿ ಮೊದಲ ಬಾರಿಗೆ ಪೆÇ್ರಫೆಸರ್ ಚಂದ್ರಕಾಂತರಿಗೆ ಎದೆಯಲ್ಲಿ ಮುಳ್ಳು ಆಡಿಸಿದಂತೆ ನೋವಾಯಿತು.
ತಣ್ಣಗಿನ ನೀರು ಕುಡಿದು ಎದೆಯನ್ನು ಹಗುರಾಗಿ ನೀವಿಕೊಂಡರು. ಒಂದಿಷ್ಟು ಸಮಾಧಾನ ಎನಿಸಿತು. ‘ಪ್ರೊಫೆಸರ್ ಎಂದು ಬಡ್ತಿಹೊಂದಲು ಬಹಳಕಾಲ ಕಾಯಲಿಲ್ಲ. ಮಾವ ಪ್ರೊಫೆಸರ್ ವಿರುಪಾಕ್ಷಪ್ಪಗೌಡರ ಪ್ರಭಾವ ಬಳಸಿ ಪೆÇ್ರಫೆಸರ್ ಹುದ್ದೆಗೆ ಬಡ್ತಿಹೊಂದಿದಾಗ ಮುಂದಿದ್ದದ್ದು ಡಿಪಾರ್ಟಮೆಂಟ್ ಮುಖ್ಯಸ್ಥ ಆಗಬೇಕೆನ್ನುವ ಗುರಿ. ಒಂದು ಹೆಜ್ಜೆಯಷ್ಟೆ ಬಾಕಿಯಿತ್ತು. ಆದರೆ ಅದಕ್ಕಾಗಿ ದೀರ್ಘಕಾಲ ಕಾಯುವ ತಾಳ್ಮೆ ಇರಲಿಲ್ಲ. ವಿಭಾಗದ ಮುಖ್ಯಸ್ಥರಾಗಿದ್ದ ಪೆÇ್ರಫೆಸರ್ ಲಕ್ಕಪ್ಪ ಅವರ ಮೇಲ್ವಿಚಾರಣೆಯಲ್ಲಿ ಕೆಲಸ ಮಾಡಲು ಅಹಂ ಅಡ್ಡ ಬರುತ್ತಿತ್ತು. ಎಷ್ಟೆಂದರೂ ನಮ್ಮ ಹೊಲಗಳಲ್ಲಿ ದುಡಿಯುತ್ತಿದ್ದ ಆಳು ಮಾದನ ಕುಲಬಳಕೆಯವರು. ವಯಸ್ಸಿನಲ್ಲಿ ತಮಗಿಂತ ಎರಡುವರ್ಷ ದೊಡ್ಡವರು. ಅವರ ನಿವೃತ್ತಿಯ ನಂತರ ಮುಖ್ಯಸ್ಥನ ಪೀಠದಲ್ಲಿ ತಾವು ಆಸೀನರಾಗುವುದು ಎರಡು ವರ್ಷಗಳು ಮಾತ್ರ ಎನ್ನುವ ಹತಾಶೆ ಪ್ರೊಫೆಸರ್ ಲಕ್ಕಪ್ಪ ಅವರ ವಿರುದ್ಧ ಸಂಚು ರೂಪಿಸಲು ಪ್ರೇರೇಪಿಸಿತು’. ಪೆÇ್ರಫೆಸರ್ ಲಕ್ಕಪ್ಪ ಅವರಿಗೆ ತಾವು ಮಾಡಿದ ಮೋಸದ ನೆನಪಾಗಿ ಪೆÇ್ರಫೆಸರ್ ಚಂದ್ರಕಾಂತ ಖಿನ್ನರಾದರು.
‘ಸರೋಜಿನಿ ಆಗಿನ್ನೂ ಎಂ.ಎ ಮೊದಲ ವರ್ಷದ ವಿದ್ಯಾರ್ಥಿನಿ. ಓದಿನಲ್ಲಿ ಜಾಣೆ. ಮುಂದೊಂದು ದಿನ ಪಿಎಚ್.ಡಿ ಪ್ರಾಡಕ್ಟೆಂದು ಇಡೀ ಡಿಪಾರ್ಟಮೆಂಟಿನ ಪ್ರಾಧ್ಯಾಪಕರು ಅವಳನ್ನು ಗುರುತಿಸಿದ್ದರು. ನಾನೆಂದರೆ ವಿಶೇಷ ಗೌರವ ಅವಳಿಗೆ. ಅವಳಿಗೂ ಪಿಎಚ್.ಡಿ ಮಾಡಬೇಕೆನ್ನುವ ಕನಸಿತ್ತು. ಪೆÇ್ರಫೆಸರ್ ಲಕ್ಕಪ್ಪ ಅವರ ದಮನಕ್ಕೆ ಸರೋಜಿನಿ ಅಸ್ತ್ರವಾದಳು. ಮೊದಮೊದಲು ಸರೋಜಿನಿ ಸಹಕರಿಸಲು ಹಿಂದೇಟು ಹಾಕಿದಳು. ವಿಭಾಗ ಮುಖ್ಯಸ್ಥನಾದರೆ ಪಿಎಚ್.ಡಿ ಅಭ್ಯರ್ಥಿಯಾಗಿ ನಿನ್ನನ್ನು ಸುಲಭವಾಗಿ ಆಯ್ಕೆ ಮಾಡಬಹುದೆಂದು ಆಸೆ ಹುಟ್ಟಿಸಿದಾಗ ಒಲ್ಲದ ಮನಸ್ಸಿನಿಂದಲೇ ಒಪ್ಪಿದಳು. ಪೆÇ್ರಫೆಸರ್ ಲಕ್ಕಪ್ಪ ರಜಾದಿನದಂದು ಕೂಡ ವಿಭಾಗಕ್ಕೆ ಬಂದು ತಮ್ಮ ಚೇಂಬರ್‍ನಲ್ಲಿ ಸಂಶೋಧನಾ ಲೇಖನಗಳ ಓದು ಮತ್ತು ಬರವಣಿಗೆಯಲ್ಲಿ ನಿರತರಾಗುತ್ತಿದ್ದರು. ಅದೇ ಅವರಿಗೆ ಮುಳುವಾಯಿತು. ಸುಲಭವಾಗಿ ಖೆಡ್ಡಾಕ್ಕೆ ಬಿದ್ದರು. ಅದೊಂದು ಭಾನುವಾರ ಮಧ್ಯಾಹ್ನದ ಹೊತ್ತು ಇಡೀ ಯೂನಿವರ್ಸಿಟಿ ಕ್ಯಾಂಪಸ್ ಬೆಚ್ಚಿಬೀಳುವಂತೆ ಸರೋಜಿನಿ ಕೂಗುಹಾಕಿದಳು. ಅವಳ ಅಸ್ತವ್ಯಸ್ತವಾಗಿದ್ದ ಸೀರೆ ಕೆದರಿದ ತಲೆಗೂದಲು ಅಲ್ಲಲ್ಲಿ ಹರಿದಿದ್ದ ರವಿಕೆ ಕಥೆಗೆ ಕಳೆಕಟ್ಟಿದವು. ತನ್ನ ಪುಂಡಗೆಳೆಯರೊಂದಿಗೆ ಅಡಗಿಕುಳಿತಿದ್ದ ಸದಾನಂದ ಘಟಿಸದ ಕಥೆಗೆ ಸಾಕ್ಷಿಯಾದ. ಮಾವನ ಪ್ರಭಾವದಿಂದ ಯೂನಿವರ್ಸಿಟಿ ರಚಿಸಿದ ವಿಚಾರಣಾ ಸಮಿತಿಯಲ್ಲಿ ನಾನು ಕೂಡ ಸದಸ್ಯನಾಗಿದ್ದೆ. ಸಮಿತಿ ಒಪ್ಪಿಸಿದ ವರದಿಯಲ್ಲಿ ಪೆÇ್ರಫೆಸರ್ ಲಕ್ಕಪ್ಪ ತಪ್ಪಿತಸ್ಥರೆಂದು ನಮೂದಾಗಿತ್ತು. ಶಿಕ್ಷೆ ಪ್ರಕಟವಾಗುವ ಮೊದಲೆ ವಿಷಕುಡಿದು ಆತ್ಮಹತ್ಯೆ ಮಾಡಿಕೊಂಡರು. ಸೇವಾಹಿರಿತನದ ಮೇಲೆ ವಿಭಾಗದ ಮುಖ್ಯಸ್ಥನೆಂದು ವಿಶ್ವವಿದ್ಯಾಲಯ ಬಡ್ತಿನೀಡಿತು. ಅವಳು ಆತ್ಮಕಥೆಯಲ್ಲಿ ಇದನ್ನೆಲ್ಲ ಬರಿಬಹುದೇನೋ. ನನ್ನ ಮರ್ಯಾದೆ ಮಾತ್ರವಲ್ಲ ಅವಳ ಮರ್ಯಾದೆನೂ ಹೋಗುತ್ತೆ. ಮರ್ಯಾದೆಗೆ ಅಂಜಿ ಇದನ್ನೆಲ್ಲ ಬರೀಲಿಕ್ಕಿಲ್ಲ’ ಒಂದಿಷ್ಟು ಸಮಾಧಾನ ಮನಸ್ಸಿನಲ್ಲಿ ಮೂಡಿ ಪ್ರೊಫೆಸರ್ ಚಂದ್ರಕಾಂತರಿಗೆ ನಿರಾಳವೆನಿಸಿತು.
ಮನಸ್ಸಿಗೆ ನಿರಾಳವೆನಿಸಿದ್ದು ಅರೆಘಳಿಗೆ ಮಾತ್ರ. ಹಿಂದೆಯೇ ಹೆಂಡತಿ ಮಕ್ಕಳ ನೆನಪಾಯಿತು. ಅವಳ ಆತ್ಮಕಥೆ ಮನೆಯವರ ಕೈಗೆ ಸಿಕ್ಕರೆ ಏನೆಲ್ಲ ರಂಪಾಟವಾಗಬಹುದೆಂಬ ಕಲ್ಪನೆ ಮನಸ್ಸಿನಲ್ಲಿ ಮೂಡಿ ಹಾಸಿಗೆಯಲ್ಲಿ ಧಗ್ಗನೆ ಎದ್ದು ಕುಳಿತರು. ‘ಮುಳ್ಳುಗಿಡದಲ್ಲೊಂದು ಗುಲಾಬಿ ಹೂವು, ಸದಾನಂದ ಹೇಳಿದ ಇದು ಅವಳ ಆತ್ಮವೃತ್ತಾಂತದ ಶೀರ್ಷಿಕೆಯಂತೆ’ ಮುಳ್ಳುಗಿಡ ತಾವೆ ಆಗಿರಬಹುದೆನ್ನುವ ಊಹೆಯಿಂದಲೇ ಪೆÇ್ರಫೆಸರ್ ಹಣೆಯ ಮೇಲೆ ಬೆವರು ಹನಿಗಳು ಮೂಡಿದವು. ‘ಅವಳು ಪಿಎಚ್.ಡಿ ಸಂಶೋಧನೆಗೆ ಸೇರಿದ ಮೊದಲ ವರ್ಷವೇ ಶಿಮ್ಲಾದಲ್ಲಿ ಆಯೋಜಿಸಿದ್ದ ಸಮಾಜಶಾಸ್ತ್ರಜ್ಞರ ಅಂತರರಾಷ್ಟ್ರೀಯ ಸಮ್ಮೇಳನಕ್ಕೆ ತಮ್ಮನ್ನು ವಿಶೇಷ ಉಪನ್ಯಾಸಕ್ಕಾಗಿ ಆಹ್ವಾನ ಬಂದಿತ್ತು. ಸರೋಜಿನಿ ತನ್ನ ಥಿಸೀಸ್ ಟಾಪಿಕ್ ಮೇಲೆ ಸಂಶೋಧನಾ ಲೇಖನ ಸಿದ್ಧಪಡಿಸಿದ್ದಳು. ನನ್ನ ವಿಶೇಷ ಉಪನ್ಯಾಸ ಸರೋಜಿನಿಯ ಲೇಖನಮಂಡನೆ ಇಡೀ ಸಮ್ಮೇಳನದ ವಿಶೇಷ ಆಕರ್ಷಣೆಯಾಗಿತ್ತು. ಪ್ರಶ್ನೆಗಳಿಗೆ ಸರೋಜಿನಿ ಉತ್ತರಿಸುತ್ತಿದ್ದ ರೀತಿಗೆ ಎಲ್ಲರೂ ಬೆರಗಾಗಿದ್ದರು. ವೇದಿಕೆಯ ಮೇಲಿಂದ ಸರೋಜಿನಿ ತಮ್ಮನ್ನು ಹೆಮ್ಮೆಯಿಂದ ನೋಡಿದ್ದಳು. ಸರಳ ಅಲಂಕಾರದಲ್ಲಿ ಸುಂದರಳಾಗಿ ಕಾಣಿಸುತ್ತಿದ್ದಳು’ ಸರೋಜಿನಿ ರೂಪ ಕಣ್ಣೆದುರು ಸುಳಿದು ಚಂದ್ರಕಾಂತರ ಮನಸ್ಸು ಮುದಗೊಂಡಿತು.
‘ರಾತ್ರಿ ವಿಶೇಷ ಔತಣಕೂಟದಿಂದ ಅತಿಥಿಗೃಹಕ್ಕೆ ಬಂದು ನೇರವಾಗಿ ರೂಮು ಸೇರಿದ್ದೇವು. ಆ ದಿನ ಸರೋಜಿನಿಯ ಸಾಂಗತ್ಯದಲ್ಲಿ ನನ್ನಲ್ಲಿ ಯೌವನ ಮತ್ತೆ ಚಿಗುರಿತ್ತು. ಶಿಮ್ಲಾ ನಂತರ ದೆಹಲಿ, ಮುಂಬೈ, ಜಯಪುರ, ಹೈದರಾಬಾದ ಸಮ್ಮೇಳನಗಳು ನಮ್ಮಿಬ್ಬರ ಮಿಲನಮಹೋತ್ಸವಕ್ಕೆ ಸಾಕ್ಷಿಯಾದವು’ ಅವಳೊಡನೆ ಕೊನೆಯಸಲ ಸೇರಿದ್ದು ಎಲ್ಲಿ ಎಂದು ಚಂದ್ರಕಾಂತರ ಮನಸ್ಸು ಯೋಚಿಸಲು ತೊಡಗಿತು. ಅವಳ ಪಿಎಚ್.ಡಿ ಪರೀಕ್ಷೆಯ ಸಂದರ್ಶನದ ಹಿಂದಿನ ರಾತ್ರಿ ಎಂದು ಥಟ್ಟನೆ ನೆನಪಾಯಿತು. ಅಂದು ಮಿಲನದ ಖುಷಿಗಿಂತ ಸಂದರ್ಶನದಲ್ಲಿ ಕೇಳಬಹುದಾದ ಪ್ರಶ್ನೆಗಳ ಕುರಿತೆ ಅವಳು ಹೆಚ್ಚು ಮಾತನಾಡಿದ್ದು ನೆನಪಾಗಿ ಸುಂದರ ಘಳಿಗೆಯೊಂದು ವ್ಯರ್ಥವಾಗಿ ಕಳೆದುಹೋಯಿತೆಂದು ಚಂದ್ರಕಾಂತರಿಗೆ ಹಳಹಳಿಯಾಯಿತು. ‘ಅದೇಕೋ ಆ ರಾತ್ರಿಯ ನಮ್ಮಿಬ್ಬರ ಸಮಾಗಮ ದೀರ್ಘಕಾಲ ನೆನಪಿನಲ್ಲಿ ಉಳಿಯುವಂತಾಗಲಿಲ್ಲ. ಆ ದಿನದ ನಂತರ ಅವಳೆಂದೂ ಕೈಗೆ ಸಿಗಲೇ ಇಲ್ಲ. ತಾನು ಹಲವು ಸಲ ಪ್ರಯತ್ನಿಸಿದರೂ ಅವಳು ಕೈಜಾರುತ್ತಲೇ ಹೋದಳು. ಈ ನಡುವೆ ಇಷ್ಟಪಟ್ಟ ಹುಡುಗನನ್ನು ಮದುವೆಯಾಗಿ ಇದೇ ಊರಿನ ಖಾಸಗಿ ಕಾಲೇಜಿನಲ್ಲಿ ಅರೆಕಾಲಿಕ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿರುವಳೆಂದು ಸದಾನಂದ ಹೇಳಿದ. ನನ್ನನ್ನು ಮದುವೆಗೂ ಕರೆದಿರಲಿಲ್ಲ. ಆತ್ಮಕಥೆಯಲ್ಲಿ ನಮ್ಮಿಬ್ಬರ ಸಂಬಂಧದ ಕುರಿತು ಬರೆದಿರಬಹುದು. ಈ ವಿಷಯ ಹೆಂಡತಿ ಮಕ್ಕಳಿಗೆ ಗೊತ್ತಾದರೆ ಆಗ ನನ್ನ ಗೌರವದ ಗತಿ ಏನು?’ ಪ್ರೊಫೆಸರ್ ಚಂದ್ರಕಾಂತರಿಗೆ ಈಗ ಎದೆಯಲ್ಲಿ ಈ ಮೊದಲಿಗಿಂತ ಹೆಚ್ಚು ನೋವಿದೆ ಎನಿಸಿ ಎದೆಯನ್ನು ಗಟ್ಟಿಯಾಗಿ ನೀವಿಕೊಂಡರು.
‘ಸರ್ ಅಸಿಸ್ಟಂಟ್ ಪ್ರೊಫೆಸರ್ ಹುದ್ದೆಯ ಸಂದರ್ಶನಕ್ಕೆ ಹಾಜರಾಗುತ್ತಿದ್ದೀನಿ. ಸಮಿತಿಯಲ್ಲಿ ನೀವು ಇದ್ದೆ ಇರ್ತೀರಿ. ಯೂನಿವರ್ಸಿಟಿನಲ್ಲಿ ಪಾಠ ಮಾಡಬೇಕು ಅಂತ ನನಗೂ ಆಸೆ ಇದೆ. ಜೊತೆಗೆ ಯೋಗ್ಯತೆನೂ ಇದೆ. ನನ್ನ ನೇಮಕಾತಿಗೆ ಅಡ್ಡಬರಬೇಡಿ’ ಆ ದಿನ ಸರೋಜಿನಿ ಆಡಿದ ಮಾತು ನೆನಪಾಗಿ ಚಂದ್ರಕಾಂತರಿಗೆ ಒಂದು ಕ್ಷಣ ಸಿಟ್ಟು ಬಂತು. ‘ಸಹಾಯಮಾಡಿ ಅಂತ ಕೇಳಿದ್ದರೆ ನೆರವಾಗುತ್ತಿದ್ದೆನೇನೋ. ಅಡ್ಡಬರಬೇಡಿ ಅಂತ ಮುಖಕ್ಕೆ ಹೊಡೆದಂತೆ ಹೇಳಿಹೋದಳು. ಭೇಟಿಯಾಗದೆ ಸುಮಾರು ಒಂದುವರ್ಷ ಆಗಿತ್ತು. ಮದುವೆಯಾಗಿ ಈಗ ಮೊದಲಿಗಿಂತ ಕಳೆಕಳೆಯಾಗಿದ್ದಳು. ಮದುವೆಯಾದರೇನಂತೆ ನೋಡಿದ ಕ್ಷಣ ಅವಳನ್ನು ಸೇರಬೇಕು ಅನ್ನೋ ಬಯಕೆ ಉತ್ಕಟವಾಗಿತ್ತು. ಸಹಕರಿಸಿದಿದ್ದರೆ ಯೂನಿವರ್ಸಿಟಿನಲ್ಲಿ ಸುಲಭವಾಗಿ ಕೆಲಸ ಸಿಗುತ್ತಿತ್ತು. ತನ್ನ ಕಾಲು ಮೇಲೆ ತಾನೇ ಕಲ್ಲು ಹಾಕಿಕೊಂಡಳು. ನೌಕರಿ ಬೇರೆಯವರ ಪಾಲಾಯಿತು. ಅದಕ್ಕೆ ನಾನೇ ಕಾರಣ ಎಂದು ಆರೋಪಿಸಿದಳೆಂದು ಸದಾನಂದ ಹೇಳಿದ. ಈ ಸದಾನಂದ ಹೇಳೊದರಲ್ಲಿ ಎಷ್ಟು ನಿಜವಿರುತ್ತೋ ಎಷ್ಟು ಸುಳ್ಳು ಇರುತ್ತೋ ಯಾರಿಗೆ ಗೊತ್ತು. ನನ್ನನ್ನು ಮೆಚ್ಚಿಸಬೇಕೆಂದು ಅವನು ಇಲ್ಲಸಲ್ಲದ್ದನ್ನೆಲ್ಲ ಹೇಳುತ್ತಿರುತ್ತಾನೆ ಅಂತ ಆಗಾಗ ಮನಸ್ಸಿಗೆ ಅನಿಸುತ್ತದೆ. ನನ್ನನ್ನು ಹೆದರಿಸುವ ತಂತ್ರವೂ ಇದರ ಹಿಂದಿರಬಹುದು. ಇನ್ನುಮುಂದೆ ಅವನ ವಿಷಯದಲ್ಲಿ ಸಾಧ್ಯವಾದಷ್ಟು ಎಚ್ಚರದಿಂದ ಇರಬೇಕು’.
ಪ್ರೊಫೆಸರ್ ಚಂದ್ರಕಾಂತ ಟೈಮ್ ನೋಡಿಕೊಂಡರು. ನಸುಕಿನಜಾವ ನಾಲ್ಕುಗಂಟೆಯಾಗಿತ್ತು. ಇಡೀರಾತ್ರಿ ನಿದ್ದೆ ಇಲ್ಲದೆ ಕಣ್ಣುಗಳು ಉರಿಯುತ್ತಿದ್ದವು. ಹಾಲ್‍ನಿಂದ ಪ್ರೊಫೆಸರ್ ಹೊಸಮನಿ ಅವರ ಗೊರಕೆ ಸದ್ದು ಜೋರಾಗಿ ಕೇಳಿಸುತ್ತಿತ್ತು. ಹೆಂಡತಿ ಮಕ್ಕಳು ಸಂಸಾರವೆಂದು ತೀರ ಸಪ್ಪೆಯಾಗಿ ಬದುಕು ಸವೆಸಿದ ಜೀವವಿದು ಎಂದೆನಿಸಿ ಪೆÇ್ರಫೆಸರ್ ಹೊಸಮನಿ ಅವರ ಬಗ್ಗೆ ಚಂದ್ರಕಾಂತರಲ್ಲಿ ಮರುಕ ಹುಟ್ಟಿತು. ತಮ್ಮ ವರ್ಣಮಯ ಬದುಕು ನೆನೆದು ಹೆಮ್ಮೆಪಟ್ಟರು. ತಾನೂ ಏಕೆ ಅನುಭವವನ್ನು ಆತ್ಮಕಥೆಯಾಗಿಸಬಾರದು ಎನ್ನುವ ವಿಚಾರ ಹೊಳೆದು ಮನಸ್ಸಿನಲ್ಲಿ ಹೊಳೆದ ಆ ವಿಚಾರದಿಂದ ಖುಷಿಗೊಂಡರು. ಪೆನ್ನು ಕಾಗದ ತೆಗೆದುಕೊಂಡು ಬರೆಯಲು ಕುಳಿತರು. ಎಷ್ಟು ಯೋಚಿಸಿದರೂ ಆತ್ಮಕಥೆಯ ಮೊದಲ ಸಾಲು ಹೊಳೆಯದೆ ಕಂಗಾಲಾದರು. ಯೋಚಿಸಿ ಯೋಚಿಸಿ ಹೈರಾಣಾದರು. ‘ಅಪ್ಪ ಮತ್ತು ತಮ್ಮನಿಗೆ ಮಾಡಿದ ಮೋಸ, ಗಿರಿಜಾಳಿಗಾದ ಅನ್ಯಾಯ, ಪ್ರೊಫೆಸರ್ ಲಕ್ಕಪ್ಪ ಅವರನ್ನು ಬಲಿತೆಗೆದುಕೊಂಡಿದ್ದು, ಪಿಎಚ್.ಡಿ ಆಸೆ ತೋರಿಸಿ ಸರೋಜಿನಿಯನ್ನು ದೇಹಬಯಕೆಗಾಗಿ ಕಾಡಿದ್ದು, ತಾನಿಟ್ಟ ತಪ್ಪು ಹೆಜ್ಜೆಗಳಿಗಾಗಿ ಸದಾನಂದನನ್ನು ಬಳಸಿಕೊಂಡಿದ್ದು ಇದೇ ಅನುಭವಗಳನ್ನು ಆತ್ಮವೃತ್ತಾಂತವಾಗಿಸಬೇಕು. ಹಣ, ವಿದ್ಯೆ, ಅಧಿಕಾರ ಇದೆ ಎಂದು ಬದುಕಿನಲ್ಲಿ ತಪ್ಪು ಮಾಡಿದೆ’ ಯೋಚಿಸಿದಷ್ಟೂ ಚಂದ್ರಕಾಂತರಿಗೆ ತಮ್ಮ ಅನುಭವಗಳೆಲ್ಲ ಬರೆಯಲು ಯೋಗ್ಯತೆ ಇಲ್ಲದ ಗಲೀಜು ಸಂಗತಿಗಳು ಎನಿಸಿತು. ಬರೆಯುವುದು ಬೇಡವೆಂದೆನಿಸಿ ಪೆನ್ನು ಹಾಳೆ ತೆಗೆದಿಟ್ಟು ಇನ್ನೇನು ಬೆಳಗಾಗುವ ಹೊತ್ತು ಘಳಿಗೆ ನಿದ್ದೆಮಾಡಿದರಾಯಿತೆಂದು ಹಾಸಿಗೆಗೆ ಮೈತಾಗಿಸಿದರು. ಮಂಚದ ಮೇಲೆ ಮೈಚಾಚಿದ್ದೆ ತಡ ಕಣ್ಣುಗಳನ್ನು ನಿದ್ದೆ ಆವರಿಸಿತು. ‘ಆತ್ಮಕಥೆ ಬರೀತಾಳಂತೆ. ಬರೆದು ನನ್ನ ಮಾನ ಹರಾಜು ಹಾಕಬೇಕಂತ ಅನಕೊಂಡಿದ್ದಾಳೆ. ಇದಕ್ಕೆಲ್ಲ ಸದಾನಂದನ ಕುಮ್ಮಕ್ಕು ಇರಬೇಕು’ ನಿದ್ದೆಯಲ್ಲೆ ಪೆÇ್ರಫೆಸರ್ ಚಂದ್ರಕಾಂತ ಕನವರಿಸಿದರು.
ಬೆಳಗ್ಗೆ ನಿದ್ದೆಯಿಂದ ಎಚ್ಚೆತ್ತ ಪ್ರೊಫೆಸರ್ ಹೊಸಮನಿ ಅವರಿಗೆ ತಾವು ಪ್ರೊಫೆಸರ್ ಚಂದ್ರಕಾಂತರ ಮನೆಯಲ್ಲಿ ಮಲಗಿರುವ ಸಂಗತಿ ಸ್ವಲ್ಪ ತಡವಾಗಿ ಮನಸ್ಸಿಗೆ ಹೊಳೆಯಿತು. ಮನೆಗೆ ಹೊರಡುವ ಮೊದಲು ಚಂದ್ರಕಾಂತರಿಗೆ ಹೇಳಿಹೋದರಾಯಿತೆಂದು ಅವರ ಕೊಠಡಿಯತ್ತ ತೆರಳಿದರು. ಕೊಠಡಿಯ ಬಾಗಿಲುಗಳು ತೆರೆದೆ ಇದ್ದವು. ಚಂದ್ರಕಾಂತ ಮಲಗಿದ್ದರು. ಕೈಹಿಡಿದು ಎಬ್ಬಿಸಲು ನೋಡಿದರು. ಪೆÇ್ರಫೆಸರ್ ಚಂದ್ರಕಾಂತರ ದೇಹ ತಣ್ಣಗೆ ಕೊರೆಯುತ್ತಿತ್ತು. ಅನುಮಾನ ಬಂದು ಕಾಲೋನಿಯಲ್ಲೆ ವಾಸಿಸುತ್ತಿದ್ದ ಪರಿಚಿತ ಡಾಕ್ಟರ್ ನ್ನು ಫೋನ್ ಮಾಡಿ ಕರೆಸಿಕೊಂಡರು. ಪರೀಕ್ಷಿಸಿದ ವೈದ್ಯರು ನಿದ್ದೆಯಲ್ಲೇ ಹೃದಯಾಘಾತವಾಗಿ ಪ್ರೊಫೆಸರ್ ಚಂದ್ರಕಾಂತ ನಿಧನರಾಗಿರುವರೆಂದು ಹೇಳಿದರು. ಅವರ ಶವದ ಪಕ್ಕದಲ್ಲಿ ಕಾಫ್ಕಾನ ದಿ ಜಡ್ಜ್‍ಮೆಂಟ್ ಪುಸ್ತಕದ ಪುಟಗಳು ಫ್ಯಾನಿನ ಗಾಳಿಗೆ ಜೀವಪಡೆದುಕೊಂಡು ತೊನೆದಾಡುತ್ತಿದ್ದವು.
* * *

No comments:
Post a Comment