ಸಾದತ್ ಹಸನ್ ಮಟೋ ಉರ್ದು ಸಾಹಿತ್ಯದಲ್ಲಿ ಮಹತ್ವದ ಹೆಸರು. ಮಂಟೋ ನಿಧನ ಹೊಂದಿ ಆರು ದಶಕಗಳೇ ಸರಿದು ಹೋಗಿವೆ. ನಂದಿತಾ ದಾಸ್ ಹಿಂದಿ ಭಾಷೆಯಲ್ಲಿ ನಿರ್ದೇಶಿಸುತ್ತಿರುವ ಮಂಟೋ ಜೀವನ ಆಧಾರಿತ ಸಿನಿಮಾದಿಂದಾಗಿ ಮಂಟೋ ಈಗ ಮತ್ತೆ ನೆನಪಾಗುತ್ತಿದ್ದಾರೆ. ಸಾಮಾನ್ಯವಾಗಿ ಈ ಸಿನಿಮಾ ಮಾಧ್ಯಮದಲ್ಲಿ ಬರಹಗಾರರ ಕುರಿತು ಸಿನಿಮಾಗಳು ನಿರ್ಮಾಣಗೊಂಡಿದ್ದು ನನಗೆ ನೆನಪಿದ್ದಂತೆ ಇಲ್ಲವೇ ಇಲ್ಲ. ಸದಾ ಜನಪ್ರಿಯತೆಯ ಬೆನ್ನು ಹತ್ತುವ ಈ ಸಿನಿಮಾ ಮಾಧ್ಯಮಕ್ಕೆ ಬರಹಗಾರರ ಬದುಕನ್ನು ತನ್ನ ಚೌಕಟ್ಟಿಗೆ ಹೊಂದಿಸಿಕೊಳ್ಳಲು ಕಷ್ಟಸಾಧ್ಯವೇನೋ. ಜೊತೆಗೆ ಬರಹಗಾರನ ಬದುಕು ಪ್ರೇಕ್ಷಕರನ್ನು ಆಕರ್ಷಿಸುವ ಸರಕಲ್ಲ ಎನ್ನುವ ಸಿನಿಮಾದವರ ವ್ಯಾಪಾರೀ ಮನೋಭಾವವೂ ಇದಕ್ಕೆ ಕಾರಣವಾಗಿರಬಹುದು. ಹೀಗಾಗಿ ಕ್ರೀಡಾಪಟುಗಳ, ರಾಜಕಾರಣಿಗಳ ವರ್ಣರಂಜಿತ ಬದುಕನ್ನು ಸೆಲ್ಯೂಲಾಯ್ಡ್ ಪರದೆಯ ಮೇಲೆ ತೋರಿಸಲು ಆಸಕ್ತಿ ತೋರುವ ಈ ಸಿನಿಮಾ ಜನ ಬರಹಗಾರರ ಬದುಕನ್ನು ಸದಾಕಾಲ ನಿರ್ಲಕ್ಷಿಸುತ್ತಲೇ ಬಂದಿದ್ದಾರೆ. ಇಂಥದ್ದೊಂದು ನಿರ್ಲಕ್ಷಿತ ವಾತಾವರಣದಲ್ಲೂ ನಂದಿತಾದಾಸ್ ಆರುದಶಕಗಳ ಹಿಂದೆ ಬದುಕಿದ್ದ ಸಾದತ್ ಹಸನ್ ಮಂಟೋ ಎನ್ನುವ ಬರಹಗಾರನ ಬದುಕಿನ ಕಥೆಯನ್ನು ಸಿನಿಮಾಕ್ಕಾಗಿ ಆಯ್ದುಕೊಂಡಿದ್ದು ಸ್ವಾಗತಾರ್ಹ. ಸಿನಿಮಾ ಪ್ರಿಯರು ಕೂಡ ಇಂಥ ಸಿನಿಮಾಗಳನ್ನು ನೋಡಿ ಉತ್ತೇಜಿಸಬೇಕು. ಮಂಟೋ ಜೀವನಗಾಥೆಯ ಸಿನಿಮಾ ಯಶಸ್ವಿಯಾದಲ್ಲಿ ಮುಂದಿನ ದಿನಗಳಲ್ಲಿ ಇನ್ನೂ ಹಲವಾರು ಬರಹಗಾರರ ಬದುಕು ಸಿನಿಮಾ ಪರದೆಯ ಮೇಲೆ ಕಥೆಯಾಗಿ ಮೂಡಿಬರಬಹುದೆನ್ನುವ ನಿರೀಕ್ಷೆ ಇದೆ.
ಪಂಜಾಬಿನ ಸಣ್ಣ ಹಳ್ಳಿಯೊಂದರಲ್ಲಿ ಹುಟ್ಟಿದ ಸಾದತ್ ಹಸನ್ ಮಂಟೋ ಅವರಿಗೆ ಭಾರತ ವಿಭಜನೆಯ ಸಂದರ್ಭ ಮೂವತ್ತೈದು ವರ್ಷ ವಯಸ್ಸು. ತುಂಬ ಯೌವನದ ದಿನಗಳವು. ಅಮೃತಸರದಲ್ಲಿ ವಿದ್ಯಾಭ್ಯಾಸ, ಮುಂಬಯಿಯಲ್ಲಿ ವೃತ್ತಿ. ಬಾಲ್ಯದಿಂದಲೇ ಇದ್ದ ಓದಿನ ಗೀಳು ಮುಂದೆ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿತು. ಮಂಟೋ ಬರೆದದ್ದೆಲ್ಲ ಬದುಕಿನ ಜೀವನಾನುಭವವೆ. ಒಂದು ಕಾದಂಬರಿ, ಏಳು ನಾಟಕಗಳು, ಮೂರು ಪ್ರಬಂಧ ಸಂಕಲನಗಳು, ಇಪ್ಪತ್ತೆರಡು ಕಥಾ ಸಂಕಲನಗಳು ಇದು ಮಂಟೋ ಅವರ ಒಟ್ಟು ಸಾಹಿತ್ಯ ಕೃಷಿಯ ಅಂಕಿಸಂಖ್ಯೆ. ಅವರ ಕಥೆಗಳು ಪ್ರಂಚದ ಹಲವು ಭಾಷೆಗಳಿಗೆ ಭಾಷಾಂತರಗೊಂಡಿದ್ದು ಆ ಕಥೆಗಳ ಶ್ರೇಷ್ಠತೆಗೊಂದು ದೃಷ್ಟಾಂತ. ಮಂಟೋ ಅವರ ಕಥೆಗಳು ಕನ್ನಡಕ್ಕೂ ಅನುವಾದಗೊಂಡು ಇಲ್ಲಿನ ಓದುಗರ ಮನ್ನಣೆಗೆ ಪಾತ್ರವಾಗಿವೆ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಕಟಿಸಿರುವ ಮಂಟೋ ಜೀವನ ಕಥೆಯ ಇಂಗ್ಲಿಷ ಅವತರಣಿಕೆಯನ್ನು ಕೆ.ಹೆಚ್.ಶ್ರೀನಿವಾಸ ಕನ್ನಡಕ್ಕೆ ಅನುವಾದಿಸಿರುವರು. ಕನ್ನಡದ ಮಹತ್ವದ ಕಥೆಗಾರ ಫಕೀರ ಮಹಮ್ಮದ್ ಕಟ್ಪಾಡಿ ಅವರು ಅನುವಾದಿಸಿರುವ ಮಂಟೋ ಅವರ ಹಲವು ಕಥೆಗಳನ್ನು ಸಂಕಲನ ರೂಪದಲ್ಲಿ ನವಕರ್ನಾಟಕ ಪ್ರಕಾಶನದವರು ಪ್ರಕಟಿಸಿರುವರು. ಈ ಇಬ್ಬರು ಲೇಖಕರ ಪ್ರಯತ್ನದಿಂದಾಗಿ ಸಾದತ್ ಹಸನ್ ಮಂಟೋ ಅವರಂಥ ಮಹತ್ವದ ಬರಹಗಾರ ಕನ್ನಡದ ಓದುಗರ ಅರಿವಿನ ವ್ಯಾಪ್ತಿಗೆ ದಕ್ಕುವಂತಾಯಿತು.
ಸಾದತ್ ಹಸನ್ ಮಂಟೋ ಬದುಕಿದ್ದದ್ದು ಕೇವಲ 43 ವರ್ಷಗಳು. ಮುಂಬಯಿಯಲ್ಲಿ ಚಿತ್ರಕಥೆ ಮತ್ತು ಸಂಭಾಷಣೆಕಾರರಾಗಿ ಹಿಂದಿ ಸಿನಿಮಾರಂಗದಲ್ಲಿ ಉತ್ತುಂಗದಲ್ಲಿದ್ದ ಸಂದರ್ಭದಲ್ಲೇ ದೇಶ ವಿಭಜನೆಯ ಬಿಸಿ ತಟ್ಟಿತು. ಪರಿಣಾಮವಾಗಿ ಮಂಟೋ ಮುಂಬಯಿ ತೊರೆದು ಪಾಕಿಸ್ತಾನಕ್ಕೆ ವಲಸೆ ಹೋಗಿ ಲಾಹೋರಿನಲ್ಲಿ ನೆಲೆಸಬೇಕಾಯಿತು. ತೀರ ಧಾರ್ಮಿಕ ನೆಲೆಯ ಪಾಕಿಸ್ತಾನದಲ್ಲಿ ಮಂಟೋ ಅವರ ಕಥೆಗಳು ಧರ್ಮಾಂಧರ ಟೀಕೆಗಳಿಗೆ ಗುರಿಯಾದವು. ಒಬ್ಬ ಮಹತ್ವದ ಬರಹಗಾರನಿಗೆ ತನ್ನ ಜೀವಿತಾವಧಿಯಲ್ಲಿ ದೊರೆಯಬೇಕಿದ್ದ ಗೌರವ-ಮನ್ನಣೆ ದೊರೆಯಲಿಲ್ಲ. ವೈಯಕ್ತಿಕ ಬದುಕಿನಲ್ಲೂ ಹಲವು ಸಮಸ್ಯೆಗಳು ಮಂಟೋ ಅವರನ್ನು ಹಣ್ಣು ಮಾಡಿದವು. ಒಂದೆಡೆ ಸಾಹಿತ್ಯ ಲೋಕ ಮಂಟೋ ಅವರ ಬರವಣಿಗೆಯನ್ನು ಕ್ರೂರವಾಗಿ ವಿಮರ್ಶಿಸುತ್ತ ಗೇಲಿ ಮಾಡಿದರೆ ಇನ್ನೊಂದೆಡೆ ವೈಯಕ್ತಿಕ ಬದುಕಿನ ನೋವುಗಳು ಅವರನ್ನು ಜರ್ಜರಿತಗೊಳಿಸಿದವು. ಬದುಕಿನ ಕೊನೆಯ ದಿನಗಳಲ್ಲಿ ಆರೋಗ್ಯ ತೀರ ಹದಗೆಟ್ಟು 1955 ರಲ್ಲಿ ಮಂಟೋ ನಿಧನರಾದಾಗ ಅವರಿಗೆ ಆಗ ಕೇವಲ 43 ವರ್ಷ ವಯಸ್ಸು. ಪಾಕಿಸ್ತಾನದ ನೆಲದಲ್ಲಿ ಅವರು ಬದುಕಿದ್ದದ್ದು ಕೇವಲ ಏಳು ವರ್ಷಗಳು ಮಾತ್ರ. ತಮ್ಮ ಬದುಕಿನ ಮೊದಲ ಮೂವತ್ತೈದು ವರ್ಷಗಳನ್ನು ಮಂಟೋ ಕಳೆದದ್ದು ಪಂಜಾಬ್ ಮತ್ತು ಮುಂಬಯಿಯಲ್ಲಿ. ವೃತ್ತಿಬದುಕನ್ನು ಕಟ್ಟಿಕೊಟ್ಟ ಮುಂಬಯಿ ಅವರ ಸಾಹಿತ್ಯ ಕೃಷಿಗೂ ನೀರೆರೆಯಿತು. ಈ ಕಾರಣಕ್ಕಾಗಿಯೇ ಮಂಟೋ ಪಾಕಿಸ್ತಾನದಲ್ಲಿ ನೆಲೆನಿಂತರೂ ‘ನಾನು ಮೂಲತ: ಮುಂಬಯಿಯವನೇ ಆಗಿದ್ದೇನೆ’ ಎನ್ನುತ್ತಿದ್ದರು.
1947 ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಗುವುದರ ಜೊತೆಗೆ ದೇಶವಿಭಜನೆ ಕೂಡ ನಡೆದು ಹೋಯಿತು. ಒಂದೇ ನೆಲದಲ್ಲಿ ವಾಸಿಸುತ್ತಿದ್ದ ಜನರು ಹಿಂದುಸ್ತಾನ ಮತ್ತು ಪಾಕಿಸ್ತಾನ ಎನ್ನುವ ಎರಡು ದೇಶಗಳ ನಡುವೆ ಹಂಚಿ ಹೋದರು. ಇತಿಹಾಸಕಾರರು ಈ ಘಟನೆಯನ್ನು ನೆಲದೊಂದಿಗೆ ಜನರನ್ನೂ ಹಂಚಿಕೊಂಡ ಇತಿಹಾಸ ಕಂಡು ಕೇಳರಿಯದ ವೈಚಿತ್ರಗಳಲ್ಲೊಂದು ಎಂದು ಉಲ್ಲೇಖಿಸಿರುವರು. ದೇಶ ವಿಭಜನೆ ಲಕ್ಷಾಂತರ ಜನರನ್ನು ಬಲಿ ತೆಗೆದುಕೊಂಡಿತು. ವೃದ್ಧರು, ಹಸುಳೆಗಳು, ಮಹಿಳೆಯರೆನ್ನದೆ ಎಲ್ಲ ವಯೋಮಾನದವರು ಧರ್ಮಾಂಧರ ಕಾಕದೃಷ್ಟಿಗೆ ಬಿದ್ದು ಜೀವಕಳೆದುಕೊಂಡರು. ಸಾದತ್ ಹಸನ್ ಮಂಟೋ ಅವರ ಕಥೆಗಳು ಆ ದಿನಗಳ ವಾಸ್ತವ ಚಿತ್ರಣವನ್ನು ತುಂಬ ಮನೋಜ್ಞವಾಗಿ ಕಟ್ಟಿಕೊಡುತ್ತವೆ. ಇತಿಹಾಸದ ಘಟನೆಗೆ ಸಾಕ್ಷಿಯಾದ ಮಂಟೋ ದೇಶ ವಿಭಜನೆಯ ಕರಾಳ ಕಥೆಯನ್ನೇ ಬರವಣಿಗೆಯಾಗಿಸುತ್ತಾರೆ. ದೇಶ ವಿಭಜನೆಯ ಕರಾಳ ಘಟನೆಗಳನ್ನಾಧರಿಸಿ ಕಥೆಗಳನ್ನು ಬರೆಯುವಾಗ ಮಂಟೋ ಅವರಲ್ಲಿ ಒಂದು ಪ್ರಾಮಾಣಿಕತೆಯ ನೋಟವಿತ್ತು. ಈ ಕಾರಣದಿಂದ ಅವರ ಕಥೆಗಳು ಒಂದು ಧರ್ಮದ ಪರ ನಿಲ್ಲುವುದಿಲ್ಲ. ಅವರ ಕಥೆಗಳಲ್ಲಿ ಎರಡೂ ಧರ್ಮದವರು ಕ್ರೂರವಾಗಿ ಚಿತ್ರಿತವಾದಂತೆ ದಯೆ, ಅನುಕಂಪ, ಕಾರುಣ್ಯವುಳ್ಳ ವ್ಯಕ್ತಿಗಳಾಗಿಯೂ ಕಾಣಸಿಗುತ್ತಾರೆ. ‘ದೇಶವಿಭಜನೆಯ ಚಿತ್ರಣವನ್ನು ನೀಡುವಾಗ ನನಗೆ ಜನ ಏನು ಮಾಡುತ್ತಾರೆ ಎನ್ನುವುದು ಮುಖ್ಯವೇ ಹೊರತು ಯಾವ ಧರ್ಮಕ್ಕೆ, ಸಂಪ್ರದಾಯಕ್ಕೆ ಸೇರಿದವರೆನ್ನುವುದು ಮುಖ್ಯವಲ್ಲ’ ಎನ್ನುತ್ತಾರೆ ಮಂಟೋ. ಬರಹಗಾರನ ಈ ಮನೋಭಾವದಿಂದಲೇ ಮಂಟೋ ಅವರ ಕಥೆಗಳು ಭಾಷೆ, ಪ್ರದೇಶ ಮತ್ತು ಕಾಲವನ್ನು ಮೀರಿ ಬೆಳೆದು ನಮ್ಮೆಲ್ಲರ ಕಥೆಗಳಾಗುತ್ತವೆ.
ತೋಬಾ ತೇಕ್ ಸಿಂಗ್ ಎನ್ನುವ ಕಥೆ ಸಾದತ್ ಹಸನ್ ಮಂಟೋ ಅವರ ದೇಶ ವಿಭಜನೆಯ ಕಥೆಗಳಲ್ಲೆ ತುಂಬ ಮಹತ್ವದ ಕಥೆಯಿದು. ವಿಭಜನೆಯ ಎರಡು ವರ್ಷಗಳ ನಂತರ ಭಾರತ ಮತ್ತು ಪಾಕಿಸ್ತಾನ ಸರ್ಕಾರಗಳು ತಮ್ಮ ತಮ್ಮ ದೇಶದ ಹುಚ್ಚಾಸ್ಪತ್ರೆಗಳಲ್ಲಿದ್ದ ಹುಚ್ಚರನ್ನು ವಿನಿಮಯ ಮಾಡಿಕೊಳ್ಳಲು ಯೋಜನೆ ರೂಪಿಸುತ್ತವೆ. ಅಂದರೆ ಭಾರತದ ಹುಚ್ಚಾಸ್ಪತ್ರೆಗಳಲ್ಲಿದ್ದ ಮುಸ್ಲಿಂ ಹುಚ್ಚರನ್ನು ಪಾಕಿಸ್ತಾನಕ್ಕೂ ಮತ್ತು ಪಾಕಿಸ್ತಾನದ ಹುಚ್ಚಾಸ್ಪತ್ರೆಗಳಲ್ಲಿದ್ದ ಹಿಂದು-ಸಿಖ್ ಹುಚ್ಚರನ್ನು ಭಾರತಕ್ಕೂ ವರ್ಗಾಯಿಸುವ ಯೋಜನೆ ಅದು. ಪಾಕಿಸ್ತಾನದ ಹುಚ್ಚಾಸ್ಪತ್ರೆಯಲ್ಲಿ ಬಿಷನ್ ಸಿಂಗ್ ಎನ್ನುವ ಹುಚ್ಚನಿದ್ದು ಅವನು ತೋಬಾ ತೇಕ್ ಸಿಂಗ್ ಎನ್ನುವ ಹಳ್ಳಿಯವನು. ಬಿಷನ್ ಸಿಂಗನಿಗೆ ಪಾಕಿಸ್ತಾನ, ಹಿಂದುಸ್ತಾನಗಳು ಮುಖ್ಯವಲ್ಲ. ಅವನಿಗೆ ತನ್ನ ಊರು ತೋಬಾ ತೇಕ್ ಸಿಂಗ್‍ಗೆ ಹೋಗಬೇಕಿದೆ. ಆಸ್ಪತ್ರೆಗೆ ಬಂದವರಿಗೆಲ್ಲ ಅವನು ಕೇಳುವುದು ಒಂದೇ ಪ್ರಶ್ನೆ ‘ತೋಬಾ ತೇಕ್ ಸಿಂಗ್ ಯಾವ ದೇಶದಲ್ಲಿದೆ’ ಎಂದು. ಹಿಂದು-ಸಿಖ್ ಹುಚ್ಚರನ್ನು ಭಾರತಕ್ಕೆ ಸ್ಥಳಾಂತರಿಸಲು ಗಡಿರೇಖೆಯ ಬಳಿ ಕರೆತಂದಾಗ ಅಲ್ಲಿದ್ದ ಅಧಿಕಾರಿಯನ್ನು ತೋಬಾ ತೇಕ್ ಸಿಂಗ್ ಎಲ್ಲಿದೆ ಎಂದು ಬಿಷನ್ ಸಿಂಗ್ ಕೇಳುತ್ತಾನೆ. ಪಾಕಿಸ್ತಾನದಲ್ಲಿದೆ ಎಂದು ಅಧಿಕಾರಿ ನುಡಿಯುತ್ತಿದ್ದಂತೆ ನನ್ನೂರಿಗೆ ಕಳುಹಿಸಿ ಎಂದು ಹಟ ಹಿಡಿಯುವ ಬಿಷನ್ ಸಿಂಗ್ ಅವರಿಂದ ತಪ್ಪಿಸಿಕೊಂಡು ಎರಡೂ ದೇಶಗಳ ನಡುವಣ ಗಡಿರೇಖೆಯ ಮೇಲೆ ಬಿದ್ದು ಪ್ರಾಣ ಬಿಡುತ್ತಾನೆ. ದೇಶದ ಕಲ್ಪನೆಯೇ ಇಲ್ಲಿ ತೀರ ಅವಾಸ್ತವಿಕ ಎನಿಸಿ ಬಿಡುತ್ತದೆ.
ದೇಶ ವಿಭಜನೆಯಾಗಿ ಒಂದು ನೆಲದಿಂದ ಇನ್ನೊಂದು ನೆಲಕ್ಕೆ ವಲಸೆ ಬಂದರೂ ಕ್ರೂರ ಬದುಕು ತನ್ನ ಕರಾಳ ಹಸ್ತವನ್ನು ಚಾಚಿ ನಸೀಮ್ ಅಖ್ತರಳನ್ನು ಅಸಹಾಯಕಳನ್ನಾಗಿಸುವ ಕಥೆ ‘ದೆಹಲಿ ಹುಡುಗಿ’. ದೆಹಲಿಯ ಕೆಂಪು ದೀಪದ ಓಣಿಯಲ್ಲಿ ನೃತ್ಯಗಾತಿಯಾಗಿ ಬದುಕುತ್ತಿರುವ ನಸೀಮ್ ಅಖ್ತರಳಿಗೂ ದೇಶ ವಿಭಜನೆಯ ಬಿಸಿ ತಟ್ಟಿದೆ. ಹಲವು ಅಮಾಯಕರ ಕೊಲೆಗಳನ್ನು ನೋಡಿದವಳಿಗೆ ಇನ್ನು ಈ ನೆಲದಲ್ಲಿ ತನ ಬದುಕು ಕಷ್ಟ ಸಾಧ್ಯವೆನಿಸಿ ತಾಯಿಗೂ ಹೇಳದೆ ಪಾಕಿಸ್ತಾನಕ್ಕೆ ವಲಸೆ ಬಂದು ಲಾಹೋರಿನಲ್ಲಿ ನೆಲೆಸುತ್ತಾಳೆ. ಹೀಗೆ ವಲಸೆ ಬಂದವಳಿಗೆ ಹಿಂದಿನ ಬದುಕಿಗೆ ಮರಳುವ ಆಸೆಯಿಲ್ಲ. ಹೊಸ ನೆಲದಲ್ಲಿ ಹೊಸ ಬದುಕನ್ನು ಕಟ್ಟಿಕೊಳ್ಳಬೇಕೆನ್ನುವ ಹಂಬಲ ಅವಳದು. ನೆಲ ಬೇರೆಯಾದರೇನಂತೆ ಮನುಷ್ಯ ಸ್ವಭಾವ ಒಂದೇ. ಲಾಹೋರಿನಲ್ಲಿ ಜನ್ನತಿ ಎನ್ನುವ ಮುದುಕಿಯ ಮೋಸಕ್ಕೆ ಬಲಿಯಾಗುವ ನಸೀಮ್ ಅಖ್ತರ್ ವೈಶ್ಯಾಗೃಹವನ್ನು ಸೇರುತ್ತಾಳೆ. ಹೊಸ ಬದುಕನ್ನು ಅರಸಿ ಬಂದವಳಿಗೆ ಕ್ರೂರ ವಿಧಿ ಮತ್ತದೇ ನರಕಕ್ಕೆ ದೂಡುತ್ತದೆ.
‘ವಿಷದ ಬೆಳೆ’ಯಲ್ಲಿ ಹಲವು ವರ್ಷಗಳಿಂದ ಸೌಹಾರ್ದತೆಯಿಂದ ಬದುಕುತ್ತಿದ್ದ ಎರಡು ಕುಟುಂಬಗಳು ಪರಸ್ಪರ ದ್ವೇಷದಿಂದ ನಾಶವಾಗುವ ಕಥೆಯಿದೆ. ಕಾಸಿಮನ ತೊಡೆಗೆ ಗುಂಡಿನ ಗಾಯವಾಗಿದೆ. ಹೆಂಡತಿಯ ಶವ ಮನೆಯ ಅಂಗಳದಲ್ಲಿದ್ದರೆ ಕೋಣೆಯಲ್ಲಿ ಮುದ್ದಿನ ಮಗಳು ಷರೀಫನ್ ದುರುಳರ ದ್ವೇಷಕ್ಕೆ ಬಲಿಯಾಗಿ ಸತ್ತು ನಗ್ನವಾಗಿ ಮಲಗಿದ್ದಳು. ಹೆಂಡತಿ ಮತ್ತು ಮಗಳ ಸಾವು ಕಾಸಿಮನಲ್ಲಿ ದ್ವೇಷದ ಅಟ್ಟಹಾಸಕ್ಕೆ ಕಾರಣವಾಗಿದೆ. ಪ್ರತಿಕಾರಕ್ಕಾಗಿ ಅವನು ತಹತಹಿಸುತ್ತಿದ್ದಾನೆ. ಕೊಡಲಿ ಹಿಡು ಹೊರಗೆ ಹೋದವನ ಆಕ್ರೋಶಕ್ಕೆ ನಾಲ್ಕಾರು ತಲೆಗಳು ಉರುಳುತ್ತವೆ. ಮುಚ್ಚಿದ ಮನೆಯ ಬಾಗಿಲನ್ನು ಮುರಿದು ಒಳಗೆ ಹೋದವನ ದೃಷ್ಟಿಗೆ ಹದಿನೈದರ ಹರೆಯದ ಬಾಲೆ ಕಾಣಿಸುತ್ತಾಳೆ. ಹಿಂಸ್ರಪಶುವಿನಂತೆ ಅವಳ ಮೇಲೆ ಹಾರಿ ನೆಲಕ್ಕೆ ಕೆಡವಿ ಬಟ್ಟೆಯನ್ನು ಹರಿಯತೊಡಗುತ್ತಾನೆ. ಮುಗ್ಧ ಹುಡುಗಿ ಪ್ರಜ್ಞಾಹೀನಳಾಗುತ್ತಾಳೆ. ಒಂದು ಕ್ಷಣ ತನ್ನ ಮುದ್ದಿನ ಮಗಳು ಶವವಾಗಿ ತನ್ನ ಮುಂದೆ ಮಲಗಿದಂತೆ ಭಾಸವಾಗಿ ‘ಷರೀಫನ್’ ಎಂದು ನಡಗುವ ಸ್ವರದಿಂದ ಕಾಸಿಮ್ ಚೀರುತ್ತಾನೆ.
ಮಂಟೋ ಅವರ ಕೆಲವು ಕಥೆಗಳಂತೂ ಕೇವಲ ಒಂದೆರಡು ವಾಕ್ಯಗಳಲ್ಲೇ ಕೊನೆಗೊಳ್ಳುತ್ತವೆ. ಹೀಗಾಗಿ ಈ ಅತಿ ಸಣ್ಣ ಕಥೆಗಳಲ್ಲಿ ಪಾತ್ರಗಳ ಹೆಸರು, ಧರ್ಮ, ಜಾತಿ, ಸಂಪ್ರದಾಯಗಳೆಲ್ಲ ಅಪ್ರಸ್ತುತವಾಗಿ ಸಂದರ್ಭ, ಸನ್ನಿವೇಶಗಳು ಮಾತ್ರ ಪ್ರಸ್ತುತವಾಗುತ್ತವೆ.
ಮಂಟೋ ಅವರ ಕೆಲವು ಸಣ್ಣ ಕಥೆಗಳು ಹೀಗಿವೆ,
1. ಮಿಷ್ಟೀಕು:
ಹೊಟ್ಟೆಗೆ ಇರಿದ ಚೂರಿ ನೇರವಾಗಿ ಕೆಳಗಡೆ ಎಳೆದಾಗ ಪೈಜಾಮದ ಲಾಡಿಯನ್ನು ಕತ್ತರಿಸಿ ಪೈಜಾಮ ಮತ್ತು ಒಳಚಡ್ಡಿ ಕಳಚಿ ಕೆಳಗೆ ಬಿದ್ದವು.
ಇರಿಯುತ್ತಿದ್ದವನು ಅದನ್ನು ಕಂಡು ಚೀರಿದ ‘ಛೇ ಎಂಥ ಮಿಷ್ಟೀಕಾಯ್ತು’.
2. ವಿಶ್ರಾಂತಿ:
‘ಅವನಿನ್ನೂ ಸತ್ತಿಲ್ಲ. ಇನ್ನೂ ಜೀವ ಇದ್ದ ಹಾಗಿದೆ.
‘ಸ್ವಲ್ಪ ಸುಮ್ನಿರಯ್ಯ. ನನಗೆ ಸುಸ್ತಾಗಿ ಬಿಟ್ತು. ನನಗಿನ್ನು ಸಾಧ್ಯವಿಲ್ಲ. ಸ್ವಲ್ಪ ವಿಶ್ರಾಂತಿ ಬೇಕು’.
3. ಅನ್ಯಾಯ:
‘ನೋಡಯ್ಯ ಇದು ನ್ಯಾಯವಲ್ಲ. ನೀನು ನನಗೆ ಕಲಬೆರಕೆ ಮಾಡಿದ ಪೆಟ್ರೋಲನ್ನು ದುಬಾರಿ ಬೆಲೆಗೆ ಮಾರಾಟ ಮಾಡಿದೆ. ಈ ಕೆಟ್ಟ ಪೆಟ್ರೋಲಿನಿಂದ ಒಂದು ಅಂಗಡಿಯನ್ನೂ ಸುಡಲಾಗಲಿಲ್ಲ’.
ಒಟ್ಟಾರೆ ಸಾದತ್ ಹಸನ್ ಮಂಟೋ ದೇಶ ವಿಭಜನೆಯ ಸಂದರ್ಭದ ಘೋರ ಕೃತ್ಯಗಳನ್ನು ತಮ್ಮ ಕಥೆಗಳ ಮೂಲಕ ಓದುಗರಿಗೆ ಮುಟ್ಟಿಸುತ್ತಾರೆ. ಯಾವುದೇ ಧರ್ಮ ಅಥವಾ ಸಂಪ್ರದಾಯವನ್ನು ಗೇಲಿ ಮಾಡುವುದು, ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವುದು ಮಂಟೋ ಅವರ ಕಥೆಗಳ ಉದ್ದೇಶವಲ್ಲ. ಅವರು ಇಡೀ ದೇಶವಿಭಜನೆಯ ಸಂದರ್ಭದಲ್ಲಿನ ಘಟನೆಗಳನ್ನು ನೋಡುವುದು ಮಾನವೀಯ ಪ್ರಜ್ಞೆಯ ಹಿನ್ನೆಲೆಯಲ್ಲಿ. ಅದಕ್ಕೆಂದೇ ‘ಧರ್ಮ, ಸಂಪ್ರದಾಯ ನನ್ನ ಕಥೆಗಳಲ್ಲಿ ಗೌಣವಾಗಿ ಕಾಣುತ್ತವೆ. ಆ ಹೀನ ಕೃತ್ಯಗಳಲ್ಲಿ ಭಾಗಿಗಳಾಗಿದ್ದ ಜನರಷ್ಟೇ ನನಗೆ ಮುಖ್ಯ’ ಎನ್ನುತ್ತಾರೆ ಮಂಟೋ.
‘ಕೋಮುವಾದಿಗಳಿಗೆ, ಮೂಲಭೂತವಾದಿಗಳಿಗೆ, ಉಗ್ರಗಾಮಿಗಳಿಗೆ ಹಿಂಸೆಯೇ ಗುರಿ. ಅದೇ ಅವರ ಮಾರ್ಗ ಕೂಡ. ಮನುಷ್ಯ ತನ್ನ ವಿವೇಕವನ್ನು ಕಳೆದುಕೊಂಡಾಗ ನರಕ ಇಲ್ಲೇ ಸೃಷ್ಟಿಯಾಗುತ್ತದೆ. ಎಷ್ಟೋ ವರ್ಷಗಳ ಹಿಂದೆ ಮಂಟೋ ಬರೆದ ಕಥೆಗಳು ಸಮಕಾಲೀನ ಸಂದರ್ಭಕ್ಕೆ ಹಿಡಿದ ಕನ್ನಡಿಗಳೂ ಆಗಿವೆ’ ಸಾದತ್ ಹಸನ್ ಮಂಟೋ ಅವರ ಕಥೆಗಳನ್ನು ಕುರಿತು ವಿಮರ್ಶಕ ಟಿ.ಪಿ.ಅಶೋಕ ಅವರು ಹೇಳುವ ಮಾತಿದು.
No comments:
Post a Comment