Saturday, March 2, 2019

ಮಾಧ್ಯಮ ಮತ್ತು ಉದ್ಯಮ

     


         ಹೊಸ ಬದಲಾವಣೆಯ ಕಾಲಘಟ್ಟದಲ್ಲಿ ನಾವು ನಿಂತಿದ್ದೇವೆ. ಜಾಗತೀಕರಣದ ಪ್ರಭಾವಕ್ಕೆ ಒಳಗಾಗಿ ಮಾನವನ ಸಾಧನೆಯ ಕ್ಷೇತ್ರಗಳೆಲ್ಲ ಬದಲಾವಣೆ ಹೊಂದಿ ಅವುಗಳೆಲ್ಲ ಹೊಸ ಪರಿವೇಷದಲ್ಲಿ ನಮಗೆ ಗೋಚರಿಸುತ್ತಿವೆ. ಬದಲಾವಣೆಯನ್ನುವುದು ನಿರಂತರವಾದದ್ದು ಮತ್ತು ಅದು ಬೆಳವಣಿಗೆಯ ಸಂಕೇತ ಕೂಡ ಹೌದು. ಹರಿಯದೇ ನಿಂತ ನೀರು ಕೂಡ ಪಾಚಿಗಟ್ಟಿ ಮಲೀನಗೊಳ್ಳುತ್ತದೆ. ಇನ್ನು ಮಾನವನ ಕಾರ್ಯಕ್ಷೇತ್ರಗಳೂ ಬದಲಾವಣೆಯಿಂದ ಹೊರತಾಗಿಲ್ಲ. ಸದಾ ಹೊಸತನಕ್ಕೆ ತೆರೆದುಕೊಳ್ಳುತ್ತಿರುವುದು ಮಾನವ ಜನಾಂಗದ ಅಭ್ಯುದಯಕ್ಕೆ ಅಗತ್ಯವಾದ ಪ್ರಕ್ರಿಯೆಯಾಗಿದೆ. ಮನುಷ್ಯನ ಸಾಧನೆಯ ಕಾರ್ಯ ಕ್ಷೇತ್ರಗಳಾದ ಶಿಕ್ಷಣ, ಪತ್ರಿಕೆ, ಸಿನಿಮಾ ಮತ್ತು ಬರವಣಿಗೆ ಕಾಲಕಾಲಕ್ಕೆ ಆಧುನಿಕತೆಯನ್ನು ಮೈಗೂಡಿಸಿಕೊಳ್ಳುತ್ತ ಹೊಸ ಹೊಸ ಪರಿವೇಷದಲ್ಲಿ ನಮಗೆ ಗೋಚರಿಸುತ್ತಿವೆ. ಒಂದುಕಾಲದಲ್ಲಿ ಮಾಧ್ಯಮಗಳಾಗಿ ಮಾನವ ಜನಾಂಗದ ಪ್ರಗತಿಯನ್ನೇ ತಮ್ಮ ಮೂಲ ಧ್ಯೇಯವಾಗಿಸಿಕೊಂಡಿದ್ದ ಈ ನಾಲ್ಕು ಮಾಧ್ಯಮ ಕ್ಷೇತ್ರಗಳು ಇಂದು ಉದ್ಯಮದ ಅವತಾರವನ್ನು ಆವಾಹಿಸಿಕೊಂಡು ಬಂಡವಾಳ ಹೂಡಿಕೆದಾರರ ದುರಾಸೆಗೆ ಸಿಲುಕಿ ತಮ್ಮ ಮೂಲ ಅರ್ಥವನ್ನೇ ಕಳೆದುಕೊಂಡು ವಿಕಾರಗೊಳ್ಳುತ್ತಿವೆ. ಮಾಧ್ಯಮವೊಂದು ಉದ್ಯಮವಾಗಿ ರೂಪಾಂತರಗೊಂಡಾಗ ಅಲ್ಲಿ ಹಣಗಳಿಕೆಯೇ  ಮುನ್ನೆಲೆಗೆ ಬಂದು ಸಮಾಜದ ಕಳಕಳಿ ಮತ್ತು ಅಭ್ಯುದಯ ಎನ್ನುವುದು ಹಿನ್ನೆಲೆಗೆ ಸರಿಯುತ್ತದೆ.

ಶಿಕ್ಷಣ

    ಇವತ್ತು ರಾಷ್ಟ್ರದಲ್ಲಿ ಸಾರ್ವಜನಿಕರಿಗೆ ಅಗತ್ಯವಾದ ಶಿಕ್ಷಣವು ಬೃಹತ್ ಉದ್ಯಮದ ರೂಪವನ್ನು ತಾಳಿ ಸಾಮಾನ್ಯ ಜನರಿಗೆ ಕೈಗೆಟುಕದಷ್ಟು ದುಬಾರಿಯಾಗಿದೆ. ಶಿಕ್ಷಣ ಮನುಷ್ಯನ ಮೂಲಭೂತ ಅಗತ್ಯಗಳಲ್ಲೊಂದು. ಹೀಗಾಗಿ ಈ ರಾಷ್ಟ್ರದಲ್ಲಿ ಬದುಕುತ್ತಿರುವ ಪ್ರತಿಯೊಬ್ಬ ವ್ಯಕ್ತಿಗೂ ಶಿಕ್ಷಣ ಉಚಿತವಾಗಿ ಮತ್ತು ಗುಣಾತ್ಮಕವಾಗಿ ದೊರೆಯಬೇಕು. ಜೊತೆಗೆ ಉಚಿತ ಮತ್ತು ಗುಣಾತ್ಮಕ ಶಿಕ್ಷಣವನ್ನು ತನ್ನದಾಗಿಸಿಕೊಳ್ಳುವುದು ಇಲ್ಲಿರುವ ಪ್ರತಿಯೊಬ್ಬ ಪ್ರಜೆಯ ಹಕ್ಕು ಕೂಡ ಹೌದು. ಹಾಗೆಂದು ಸರ್ಕಾರವನ್ನಾಗಲಿ ಮತ್ತು ಜನಪ್ರತಿನಿಧಿಗಳನ್ನಾಗಲಿ ನೇರವಾಗಿ ಆರೋಪಿಗಳನ್ನಾಗಿಸುವುದು ತುಂಬ ಕಷ್ಟವಾದ ಕೆಲಸ. ಏಕೆಂದರೆ ಈ ರಾಷ್ಟ್ರದಲ್ಲಿ ಉಚಿತ ಶಿಕ್ಷಣಕ್ಕಾಗಿ ನಮ್ಮ ಸರ್ಕಾರ ಕಾನೂನನ್ನೇ ಮಾಡಿದೆ. ಪ್ರತಿಯೊಂದು ಮಗು ಹತ್ತು ವರ್ಷಗಳವರೆಗಿನ ಶಿಕ್ಷಣವನ್ನು ಉಚಿತವಾಗಿ ಪಡೆಯುವ ಎಲ್ಲ ಅವಕಾಶಗಳನ್ನು ರೂಪಿಸಲಾಗಿದೆ. ಹೀಗೆ ಸರ್ಕಾರ ಕಾನೂನನ್ನು ರೂಪಿಸಿದ್ದೆ ತಪ್ಪಾಯೊತೇನೋ ಎನ್ನುವಂತೆ ಬಂಡವಾಳ ಹೂಡಿಕೆದಾರರಿಗೆ ಮತ್ತು ಉದ್ಯಮಪತಿಗಳಿಗೆ ಶಿಕ್ಷಣ ಎನ್ನುವುದು ಮನುಷ್ಯನ ಮೂಲಭೂತ ಅಗತ್ಯಗಳಲ್ಲೊಂದು ಎನ್ನುವ ಅರಿವು ಮೂಡಿ ಶಿಕ್ಷಣವನ್ನು ಕೂಡ ಅವರು ಬಂಡವಾಳ ಹೂಡಿಕೆಗೆ ತುಂಬ ಫಲವತ್ತಾದ ಕ್ಷೇತ್ರವೆಂದು ಪರಿಭಾವಿಸಲಾರಂಭಿಸಿದರು. ಪರಿಣಾಮವಾಗಿ ಉದ್ಯಮಿಗಳು ಬೇರೆ ಬೇರೆ ಉದ್ಯಮದಲ್ಲಿ ತಾವು ಗಳಿಸಿದ್ದನ್ನು ಶಿಕ್ಷಣ ಕ್ಷೇತ್ರದಲ್ಲಿ ಬಂಡವಾಳ ಹೂಡತೊಡಗಿದರು. ಪಾಲಕರನ್ನು ಮತ್ತು ವಿದ್ಯಾರ್ಥಿಗಳನ್ನು ಆಕರ್ಷಿಸಲು ಮಗುವಿನ ಶಿಕ್ಷಣ ಮಾಧ್ಯಮವನ್ನು ಇಂಗ್ಲಿಷಾಗಿ ಪರಿವರ್ತಿಸಿ ಬೃಹದಾಕಾರದ ಕಟ್ಟಡಗಳು, ಆಧುನಿಕ ತಂತ್ರಜ್ಞಾನದಡಿ ನಿರ್ಮಾಣಗೊಂಡ ಪಾಠದ ಕೊಠಡಿಗಳು, ಡಿಜಿಟಲ್ ಗ್ರಂಥಾಲಯಗಳು, ವಿಶಾಲವಾದ ಆಟದ ಆವರಣ, ಸುಸಜ್ಜಿತ ಪ್ರಯೋಗಾಲಯಗಳು, ಅರಳು ಹುರಿದಂತೆ ಮಾತನಾಡುವ ಶಿಕ್ಷಕರು ಹೀಗೆ ಒಟ್ಟಿನಲ್ಲಿ ಉದ್ಯಮಕ್ಕೆ ಅಗತ್ಯವಾದ ಎಲ್ಲ ಸಿದ್ಧತೆಗಳೊಂದಿಗೆ ಶಿಕ್ಷಣ ಕ್ಷೇತ್ರಕ್ಕೆ ಉದ್ಯಮಪತಿಗಳು ಕಾಲಿಟ್ಟರು. ಒಟ್ಟಾರೆ ಅದುವರೆಗಿನ ಸರ್ಕಾರಿ ಶಾಲೆಗಳಲ್ಲಿನ ಕೊರತೆಗಳನ್ನೇ ತಮ್ಮ ಲಾಭಕ್ಕೆ ಪರಿವರ್ತಿಸಿಕೊಂಡ ಉದ್ಯಮಪತಿಗಳು ಪಾಲಕರ ಮತ್ತು ವಿದ್ಯಾರ್ಥಿಗಳ ಮೂಗಿಗೆ ಗುಣಾತ್ಮಕ ಶಿಕ್ಷಣ ಎನ್ನುವ ತುಪ್ಪ ಸವರಿದ್ದು ಮಾತ್ರ ಸತ್ಯವಾದ ಸಂಗತಿ.
    ಹೀಗೆ ಪ್ರತಿ ಮಗುವಿಗೂ ಅಗತ್ಯವಾದ ಶಿಕ್ಷಣವು ಉದ್ಯಮಪತಿಗಳ ನೇರ ಪ್ರವೇಶದಿಂದಾಗಿ ಖಾಸಗೀಕರಣವಾಗಿ ರೂಪಾಂತರಗೊಂಡಿತ್ತು. ಅಚ್ಚರಿಯ ಸಂಗತಿ ಎಂದರೆ ಈ ನೆಲದಲ್ಲಿ ಶಿಕ್ಷಣವನ್ನು ಆರಂಭದಲ್ಲಿ ಖಾಸಗೀಕರಣಗೊಳಿಸಿದ್ದು ಧಾರ್ಮಿಕ ಕೇಂದ್ರಗಳಾದ ಮಠಗಳು. ಎಲ್ಲಿ ಸರ್ಕಾರಕ್ಕೆ ಉಚಿತ ಮತ್ತು ಪರಿಣಾಮಕಾರಿಯಾದ ಶಿಕ್ಷಣವನ್ನು ಒದಗಿಸಲು ಸಾಧ್ಯವಾಗುತ್ತಿರಲಿಲ್ಲವೋ ಅಲ್ಲೆಲ್ಲ ಮಠಗಳು ಸರ್ಕಾರದ ಅನುಮತಿಯೊಂದಿಗೆ ಖಾಸಗಿ ಶಾಲೆಗಳನ್ನು ಸ್ಥಾಪಿಸಲಾರಂಭಿಸಿದವು. ಮಠಗಳು ಸ್ಥಾಪಿಸುತ್ತಿದ್ದ ಖಾಸಗಿ ಶಾಲೆಗಳಲ್ಲೂ ಕೂಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಾಗುತ್ತಿತ್ತು ಎನ್ನುವುದು ಗಮನಿಸಬೇಕಾದ ಸಂಗತಿ. ಸರ್ಕಾರ ಕೂಡ ತನ್ನ ಹೊರೆ ಅಥವಾ ಜವಾಬ್ದಾರಿಯನ್ನು ಮಠಗಳು ನಿರ್ವಹಿಸಲು ಮುಂದೆ ಬಂದಾಗ ಅದು ಸಹಜವಾಗಿಯೇ  ಒಪ್ಪಿಗೆ ನೀಡಿತು. ಮಠಗಳ ಉದ್ದೇಶ ಕೂಡ ಶಿಕ್ಷಣದ ಮೂಲಕವೇ ನಿರ್ಲಕ್ಷಿತ ತಳಸಮುದಾಯಗಳನ್ನು ಸಮಾಜದ ಮುಖ್ಯವಾಹಿನಿಗೆ ತಂದು ನಿಲ್ಲಿಸಬೇಕೆನ್ನುವ ಒಂದು ಕಳಕಳಿ ಇದ್ದುದ್ದರಿಂದ ಇಲ್ಲಿ ಧಾರ್ಮಿಕ ಮಠಗಳ ನಡೆಯನ್ನು ಅನುಮಾನಿಸುವಂತಿರಲಿಲ್ಲ. ಮಠಗಳು ಸಹ ಶಿಕ್ಷಣವನ್ನು ಸಮಾಜದ ಅಭಿವೃದ್ಧಿಗಾಗಿ ತುಂಬ ಪರಿಣಾಮಕಾರಿಯಾಗಿ ಸದ್ಬಳಕೆ ಮಾಡಿಕೊಂಡವು ಎನ್ನುವುದು ಗಮನಾರ್ಹ ಸಂಗತಿ.  
   ಶಿಕ್ಷಣದ ಖಾಸಗೀಕರಣ ಉದ್ಯಮದ ರೂಪವನ್ನು ತಳೆಯಲು ಜಾಗತೀಕರಣದ ಪ್ರಭಾವ ಮತ್ತು ಪಾತ್ರ ಗಣನೀಯವಾಗಿದೆ. ಇಂಗ್ಲಿಷ್ ಮಾಧ್ಯಮದ ಮೂಲಕ ಶಿಕ್ಷಣ ಪಡೆದ ನಮ್ಮ ಯುವ ಪೀಳಿಗೆ ಜಾಗತೀಕರಣದ ಕಾರಣ ನಾಲ್ಕಂಕಿ ಸಂಬಳ ಪಡೆಯುವ ಉದ್ಯೋಗವನ್ನು ದಕ್ಕಿಸಿಕೊಳತೊಡಗಿದರು. ಜೊತೆಗೆ ಇದೇ ವಿದ್ಯಾವಂತ ಪೀಳಿಗೆಗೆ ಸಲೀಸಾಗಿ ವಿದೇಶಗಳಿಗೆ ಉದ್ಯೋಗದ ನೆಪದಲ್ಲಿ ವಲಸೆಹೋಗಲು ಜಾಗತೀಕರಣ ಅನುವು ಮಾಡಿಕೊಟ್ಟಿತು. ಪರಿಣಾಮವಾಗಿ ಪಾಲಕರೆಲ್ಲ ಸರ್ಕಾರದ ಕನ್ನಡ ಶಾಲೆಗಳಿಗೆ ಬದಲಾಗಿ ಖಾಸಗಿ ಇಂಗ್ಲಿಷ್ ಮಾಧ್ಯಮದ ಶಾಲೆಗಳಲ್ಲಿ ತಮ್ಮ ಮಕ್ಕಳಿಗೆ ಪ್ರವೇಶ ದೊರಕಿಸಿಕೊಡಲು ಆರಂಭಿಸಿದರು. ಇದು ಎಷ್ಟರ ಮಟ್ಟಿಗೆ ಬೆಳೆಯಿತೆಂದರೆ ಹಳ್ಳಿಗಳಲ್ಲಿನ ಕೃಷಿಕರು ಕೂಡ ತಮ್ಮ ಮಕ್ಕಳಿಗೂ ಇಂಗ್ಲಿಷ್ ಮಾಧ್ಯಮದ ಶಿಕ್ಷಣ ಕೊಡಿಸಲು ನಗರ ಪ್ರದೇಶಗಳಿಗೆ ವಲಸೆ ಬರಲಾರಂಭಿಸಿದರು. ಪಾಲಕರ ಈ ಮಹತ್ವಾಕಾಂಕ್ಷೆಯನ್ನೇ ತಮ್ಮ ಬಂಡವಾಳವಾಗಿಸಿಕೊಂಡ ಖಾಸಗಿ ಶಿಕ್ಷಣ ಸಂಸ್ಥೆಗಳು ಲಕ್ಷಾಂತರ ರೂಪಾಯಿಗಳ ಶುಲ್ಕವನ್ನು ವಸೂಲು ಮಾಡುತ್ತ ಬೆಳೆಯತೊಡಗಿದವು. ಸರ್ಕಾರ ಕೂಡ ಖಾಸಗಿ ಶಿಕ್ಷಣ ಸಂಸ್ಥೆಗಳ ನಡೆಗೆ ಸಮ್ಮತಿ ಸೂಚಿಸಿ ಒಂದರ್ಥದಲ್ಲಿ ಶಿಕ್ಷಣ ಮಾಧ್ಯಮವನ್ನು ಉದ್ಯಮವಾಗಿಸಲು ಉದ್ಯಮ ಪತಿಗಳೊಂದಿಗೆ ಕೈಜೋಡಿಸಿತು. ಇವತ್ತು ನಾವುಗಳೆಲ್ಲ ಬಹುದೂರ ಸಾಗಿ ಬಂದಿದ್ದೇವೆ. ಒಂದೆಡೆ ಅನೇಕ ಸಮ್ಸ್ಯೆಗಳು ಮತ್ತು ಕೊರತೆಗಳಿಂದ ಕುಂಟುತ್ತ ಸಾಗಿರುವ ಸರ್ಕಾರದ ಕನ್ನಡ ಶಾಲೆಗಳು ಇನ್ನೊಂದೆಡೆ ಲಕ್ಷಾಂತರ ರೂಪಾಯಿಗಳ ಶುಲ್ಕವನ್ನು ವಸೂಲಿ ಮಾಡುತ್ತ ಶಿಕ್ಷಣವನ್ನು ವ್ಯಾಪಾರದ ಮಟ್ಟಕ್ಕಿಳಿಸಿರುವ ಖಾಸಗಿ ಇಂಗ್ಲಿಷ್ ಮಾಧ್ಯಮದ ಶಾಲೆಗಳು. ಮೊದಲಿನದನ್ನು ನೆಚ್ಚಿಕೊಂಡು ಕೂಡುವಂತಿಲ್ಲ ಮತ್ತು ಎರಡನೆಯದನ್ನು ನಿಭಾಯಿಸುವಷ್ಟು ಆರ್ಥಿಕ ಸಾಮರ್ಥ್ಯವಿಲ್ಲ. ಇಂಥ ವಾತಾವರಣದಲ್ಲಿ ಬಡವರ ಮಕ್ಕಳ ಗೋಳು ಕೇಳುವವರಿಲ್ಲದಂತಾಗಿದೆ. ಸರ್ಕಾರದ ಉಚಿತ ಮತ್ತು ಕಡ್ಡಾಯ ಶಿಕ್ಷಣ ತನ್ನ ಅರ್ಥವನ್ನು ಕಳೆದುಕೊಂಡು ಸಾರ್ವಜನಿಕರ ಕಣ್ಣೊರೆಸುವ ಒಂದು ತಂತ್ರವಾಗಿ ಗೋಚರಿಸುತ್ತದೆ. ಈಗ ಆಗಬೇಕಾಗಿರುವುದು ಶಿಕ್ಷಣವನ್ನು ಉದ್ಯಮದ ಸ್ವರೂಪದಿಂದ ಹೊರತಂದು ಅದನ್ನು ಮೊದಲಿನಂತೆ ಮಾಧ್ಯಮವಾಗಿ ರೂಪಾಂತರಿಸಬೇಕಾಗಿದೆ. 

ಪತ್ರಿಕೋದ್ಯಮ


     ಆರಂಭದಲ್ಲೇ ಒಂದು ವಿಷಯವನ್ನು ಹೇಳುವುದೊಳಿತು. ಕನ್ನಡಿಗರಾದ ಶಾರದಾ ಪ್ರಸಾದ ಇಪ್ಪತ್ತು ವರ್ಷಗಳಷ್ಟು ದೀರ್ಘಕಾಲ ಪ್ರಧಾನ ಮಂತ್ರಿಗಳ ಮಾಧ್ಯಮ ಸಲಹೆಗಾರರಾಗಿ ಕಾರ್ಯನಿರ್ವಹಿಸಿದವರು. ನಾಲ್ಕು ಜನ ಪ್ರಧಾನ ಮಂತ್ರಿಗಳನ್ನು ತೀರ ಹತ್ತಿರದಿಂದ ಕಂಡವರು. ಅವರು ಮನಸ್ಸು ಮಾಡಿದಿದ್ದರೆ ಪ್ರಧಾನ ಮಂತ್ರಿಗಳನ್ನು ಕುರಿತು ಹಲವಾರು ಪುಸ್ತಕಗಳನ್ನು ಬರೆಯಬಹುದಿತ್ತು. ಅವರ ಎದೆಗೂಡಲ್ಲಿ ಅದೆಷ್ಟು ರಹಸ್ಯಗಳು ಅಡಕವಾಗಿದ್ದವೋ ಬಲ್ಲವರಾರು. ಆದರೆ ಅವರೆಂದು ನಂಬಿಕೆಯನ್ನು ಕಳೆದುಕೊಳ್ಳಲಿಲ್ಲ. ಮಾಧ್ಯಮ ಸಲಹೆಗಾರರಾಗಿದ್ದ ಅವರಲ್ಲಿ ಒಂದು ಎಥಿಕ್ಸ್ ಇತ್ತು. ನಿಮಗೆಲ್ಲ ನೆನಪಿರುವಂತೆ ಇತ್ತೀಚಿಗೆ ‘The Accidental Primeminister’   ಎನ್ನುವ ಹೆಸರಿನ ಸಿನಿಮಾ ಬಿಡುಗಡೆಗೆ ಮೊದಲೇ ಸ್ವಲ್ಪ ಹೆಚ್ಚೆ ಎನ್ನುವಂತೆ ಸುದ್ದಿ ಮಾಡಿತು. ಇದು ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರ ಕುರಿತು ತಯ್ಯಾರಾದ ಸಿನಿಮಾ. ಈ ಸಿನಿಮಾಕ್ಕೆ ‘The Accidental Primeminister’ ಎನ್ನುವ ಹೆಸರಿನ ಪುಸ್ತಕ ಆಧಾರವಾಗಿತ್ತು. ಈ ಪುಸ್ತಕದ ಲೇಖಕ ಮನಮೋಹನ ಸಿಂಗ್ ಪ್ರಧಾನ ಮಂತ್ರಿಯಾಗಿದ್ದಾಗ ನಾಲ್ಕು ವರ್ಷಗಳ ಕಾಲ ಅವರ ಮಾಧ್ಯಮ ಸಲಹೆಗಾರರಾಗಿದ್ದ ಸಂಜಯ ಬಾರು. ಮನಮೋಹನ ಸಿಂಗ್ ಅವರ ಅಧಿಕಾರವಧಿ ಕೊನೆಗೊಂಡ ತಕ್ಷಣ ಈ ಕೃತಿ ಪ್ರಕಟವಾಗಿ ಹೊರಬಂತು. ಸಹಜವಾಗಿಯೇ  ಪುಸ್ತಕ ಸಾರ್ವಜನಿಕ ವಲಯದಲ್ಲಿ ಕುತೂಹಲ ಹುಟ್ಟಿಸಿತು. ಕೊನೆಗೆ ಸಿನಿಮಾ ಆಗಿ ದೇಶದ ಹೆಚ್ಚಿನ ಜನರನ್ನು ತಲುಪಿತು. ಈ ಪುಸ್ತಕ ಮತ್ತು ಸಿನಿಮಾದಿಂದ ಕೆಲವರ ವ್ಯಕ್ತಿತ್ವಕ್ಕೆ ಅಪಚಾರವಾದರೂ ಲೇಖಕರಿಗೆ ಸಾಕಷ್ಟು ಖ್ಯಾತಿಯನ್ನು ತಂದುಕೊಟ್ಟಿತು. ಇನ್ನು ಮುಂದೆ ಭವಿಷ್ಯದಲ್ಲಿ ಮಾಧ್ಯಮ ಸಲಹೆಗಾರರನ್ನು ಆಯ್ಕೆ  ಮಾಡುವಾಗ ಪ್ರಧಾನ ಮಂತ್ರಿ ಸಾವಿರಾರು ಸಲ ಯೋಚಿಸಬಹುದು. ಕೊನೆಗೂ ಇಲ್ಲಿ ಮಾಧ್ಯಮವು ಉದ್ಯಮವಾಗಿ ಎಥಿಕ್ಸ್ ಎನ್ನುವುದು ಗಾಳಿಗೆ ತೂರಿ ಹೋಯಿತು. 
     ಈ ಮೇಲಿನ ಉದಾಹರಣೆ ಹೇಳಲು ಕಾರಣವಿಷ್ಟೇ ಇವತ್ತು ದೇಶದಲ್ಲಿ ಪತ್ರಿಕಾ ಮಾಧ್ಯಮ ಎನ್ನುವುದು ಉದ್ಯಮದ ರೂಪವನ್ನು ತಾಳಿದೆ. ದೇಶದ ಸ್ವಾತಂತ್ರ್ಯ ಚಳವಳಿಯ ಕಾಲಘಟ್ಟದಲ್ಲಿ ಹೋರಾಟಕ್ಕೆ ಲೇಖನಗಳ ಮೂಲಕವೇ ಸಕಾರಾತ್ಮಕವಾಗಿ ಸ್ಪಂದಿಸಿದ ಪತ್ರಿಕಾ ಮಾಧ್ಯಮ ನಂತರದ ದಿನಗಳಲ್ಲಿ ಉದ್ಯಮಪತಿಗಳ ಮತ್ತು  ರಾಜಕಾರಣಿಗಳ ಸ್ವಹಿತಾಸಕ್ತಿಗೆ ಬಲಿಯಾಯಿತು. ಅಕ್ಷರಗಳ ಪ್ರಾಮುಖ್ಯತೆಯ ಅರಿವಿಲ್ಲದ ರಾಜಕಾರಣಿಗಳು ಮತ್ತು ಉದ್ಯಮಪತಿಗಳು ಇವತ್ತು ತಮ್ಮ ರಕ್ಷಣೆಗಾಗಿ ಪತ್ರಿಕಾ ಮಾಧ್ಯಮವನ್ನು ಬೆಂಗಾವಲು ಪಡೆಯಂತೆ ಉಪಯೋಗಿಸುತ್ತಿರುವರು. ಪತ್ರಿಕಾ ಮಾಧ್ಯಮವರು ಕೂಡ ಆಸ್ಥಾನದ ಹೊಗಳು ಭಟ್ಟರಾಗಿ ರಾಜಕಾರಣಿಗಳನ್ನು ಮತ್ತು ಉಳ್ಳವರನ್ನು ಓಲೈಸುತ್ತ ತಮ್ಮ ತಮ್ಮ ಬದುಕನ್ನು ಹಸನಾಗಿಸಿಕೊಳ್ಳುತ್ತಿರುವರು. ಆಧುನಿಕ ತಂತ್ರಜ್ಞಾನದ ಈ ದಿನಗಳಲ್ಲಿ ಪತ್ರಿಕಾ ಮಾಧ್ಯಮ ತಂತ್ರಜ್ಞಾನದ ಛದ್ಮವೇಷದಲ್ಲಿ ಇಡೀ ಮಾಧ್ಯಮವನ್ನು ಉದ್ಯಮದ ಸ್ವರೂಪಕ್ಕೆ ಕೊಂಡೊಯ್ದಿದೆ. ಹಣವಿರುವವರು ಬಂಡವಾಳ ಹೂಡಲು ಪತ್ರಿಕಾ ಮಾಧ್ಯಮಕ್ಕೆ ಕಾಲಿಡುತ್ತಿರುವುದರಿಂದ ಇಲ್ಲಿ ಲಾಭ-ನಷ್ಟಗಳ ಸಂಗತಿ ಮೇಲುಗೈ ಸಾಧಿಸುತ್ತಿದೆ. ಪತ್ರಿಕಾ ಧರ್ಮ ಮತ್ತು ಪತ್ರಿಕಾ ಸ್ವಾತಂತ್ರ್ಯ ತೆರೆಮರೆಗೆ ಸರಿದಿವೆ. ಇಂಥದ್ದೊಂದು ವಿಪ್ಲವದ ನಡುವೆಯೂ ಪಿ.ಸಾಯಿನಾಥ ಅವರಂಥ ಪ್ರಾಮಾಣಿಕ ಮತ್ತು ಸಾಮಾಜಿಕ ಕಳಕಳಿಯುಳ್ಳ ಪತ್ರಕರ್ತರು ಪತ್ರಿಕಾ ಧರ್ಮವನ್ನು ಮತ್ತೆ ಮರು ಸ್ಥಾಪಿಸಲು ಪ್ರಯತ್ನಿಸುತ್ತಿರುವುರಾದರೂ ಅಂಥವರ ಸಂಖ್ಯೆ ಆಶಾದಾಯಕವಾಗೇನೂ ಇಲ್ಲ ಎನ್ನುವುದು ಆತಂಕದ ಸಂಗತಿ.

ಸಿನಿಮೋದ್ಯಮ


     ಆ ಕಾಲವೊಂದಿತ್ತು. ಆಗ ಸಿನಿಮಾ ಮಾಧ್ಯಮವಾಗಿತ್ತು ಮತ್ತು ಸಮಾಜದ ಜ್ವಲಂತ ಸಮಸ್ಯೆಗಳು ಸಿನಿಮಾ ಪರದೆಯ ಮೇಲೆ ಪ್ರತಿಫಲಿಸುತ್ತಿದ್ದವು. ಸಿನಿಮಾದ ಮೂಲಕವೇ ಸಮಾಜದಲ್ಲಿ ಬಹುದೊಡ್ಡ ಪರಿವರ್ತನೆಗಳಾದ ಅನೇಕ ಉದಾಹರಣೆಗಳಿವೆ. ಬಾಲ್ಯವಿವಾಹ ಮತ್ತು ಸತಿಸಗಮನ ಪದ್ಧತಿಯ ವಿರುದ್ಧದ ಹೋರಾಟ, ಮಧ್ಯಪಾನ ವಿರೋಧಿ ಚಳವಳಿ, ಸಾಕ್ಷರತೆಯ ಮಹತ್ವ, ವರದಕ್ಷಿಣೆಯ ಸಮಸ್ಯೆ, ಮಹಿಳಾ ಸಮಸ್ಯೆಗಳು, ರೈತರ ಬದುಕಿನ ಸಮಸ್ಯೆಗಳು ಹೀಗೆ ಸಿನಿಮಾ ಮಾಧ್ಯಮ ಸಮಾಜದ ಇಂಥ ಹಲವಾರು ಸಮಸ್ಯೆಗಳಿಗೆ ಧ್ವನಿಯಾಗಿತ್ತು. ಸಮಾಜ ಕೂಡ ಅಂಥ ಸಿನಿಮಾಗಳನ್ನು ಸ್ವೀಕರಿಸಿ ಬದಲಾವಣೆಗೆ ತನ್ನನ್ನು ತಾನು ತೆರೆದುಕೊಳ್ಳುತ್ತಿತ್ತು. ರಾಜಕುಮಾರರಂಥ ಕಲಾವಿದ ನಾವು ಬದುಕುತ್ತಿರುವ ಇಡೀ ಸಮಾಜದ ಪ್ರತಿನಿಧಿ ಎನ್ನುವಂತೆ ಆಗೆಲ್ಲ ಸಿನಿಮಾಗಳನ್ನು ವೀಕ್ಷಿಸಿದಾಗ ಭಾಸವಾಗುತ್ತಿತ್ತು. ಕಮರ್ಷಿಯಲ್ ಸಿನಿಮಾಗಳ ಉದ್ದೇಶ ಹಣ ಗಳಿಕೆಯೇ  ಆಗಿದ್ದರೂ ಆ ಸಿನಿಮಾಗಳಲ್ಲಿ ಸಮಾಜಕ್ಕೆ ಒಂದು ಸಂದೇಶವಿರುತ್ತಿತ್ತು. ಕಮರ್ಷಿಯಲ್ ಸಿನಿಮಾಗಳ ಮೂಲಕ ಹೇಳಲು ಸಾಧ್ಯವಾಗದೆ ಇದ್ದದ್ದನ್ನು ಕಲಾತ್ಮಕ ಸಿನಿಮಾಗಳು ಅಭಿವ್ಯಕ್ತಿಸುತ್ತಿದ್ದವು. ಕಾಡು, ಬರ, ಫಣಿಯಮ್ಮ ಇತ್ಯಾದಿ ಕಲಾತ್ಮಕ ಸಿನಿಮಾಗಳು ಸಮಾಜದಲ್ಲಿನ ಜ್ವಲಂತ ಸಮಸ್ಯೆಗಳನ್ನು ಸಿನಿಮಾ ಪರದೆಯ ಮೂಲಕ ಜನರನ್ನು ತಲುಪಿಸುವಲ್ಲಿ ಯಶಸ್ವಿಯಾದವು. ಮನೋರಂಜನೆ ಮತ್ತು ನಾಯಕ ಪ್ರಧಾನ ಸಿನಿಮಾಗಳ ಮಧ್ಯೆಯೂ ಆಗ ಸಿನಿಮಾ ಮಾಧ್ಯಮ ತನ್ನ ಮೂಲ ಉದ್ದೇಶಕ್ಕೆ ಬದ್ಧವಾಗಿತ್ತು. 
       ಸಿನಿಮಾ ಮಾಧ್ಯಮ ಉದ್ಯಮವಾಗಿ ರೂಪಾಂತರ ಹೊಂದಲು ಕಾರಣವೇನು ಎನ್ನುವ ಪ್ರಶ್ನೆ ಎದುರಾದಾಗ ನಾವು ಮತ್ತೆ ಮುಖ ಮಾಡುವುದು ಜಾಗತೀಕರಣದತ್ತಲೆ. ಜಾಗತೀಕರಣದ ಕಾರಣ ಇಲ್ಲಿನ ಪ್ರೇಕ್ಷಕನಿಗೆ ವಿದೇಶಿ ಸಿನಿಮಾಗಳನ್ನು ನೋಡುವ ಹೇರಳ ಅವಕಾಶ ಮುಕ್ತವಾಗಿ ದೊರೆಯಲಾರಂಭಿಸಿತು. ಆಗೆಲ್ಲ ಅವನ ಮನಸ್ಸು ಇಲ್ಲಿನ ಸಿನಿಮಾಗಳನ್ನು ಬೇರೆ ರಾಷ್ಟ್ರಗಳ ಸಿನಿಮಾಗಳೊಂದಿಗೆ ತುಲನಾತ್ಮಕವಾಗಿ ನೋಡಲು ಆರಂಭಿಸಿತು. ಪ್ರೇಕ್ಷಕರಲ್ಲಾದ ಬದಲಾವಣೆ ಮತ್ತು ಅವರಲ್ಲಿ ಒಡಮೂಡಿದ ಹೊಸ ಅಭಿರುಚಿಯನ್ನು ಗುರುತಿಸಿದ ಕನ್ನಡ ಸಿನಿಮಾ ಮಾಧ್ಯಮದವರು ತಾವು ಕೂಡ ಹೊಸದೊಂದು ಬದಲಾವಣೆಗೆ ತೆರೆದುಕೊಳ್ಳತೊಡಗಿದರು. ಜೊತೆಗೆ ಅದೇ ಆಗ ಕಾಲಿಟ್ಟ ತಂತ್ರಜ್ಞಾನದ ಬಿಸಿ ಸಿನಿಮಾ ಮಾಧ್ಯಮಕ್ಕೂ ತಟ್ಟಿತು. ಅಷ್ಟೊತ್ತಿಗಾಗಲೇ ಇಂಗ್ಲಿಷ್ ಭಾಷೆಯಲ್ಲಿ ವಿಜ್ಞಾನದ ಅನ್ವೇಷಣೆಯಾದ ಗ್ರಾಫಿಕ್ ತಂತ್ರಜ್ಞಾನವನ್ನು ಅತ್ಯಂತ ಸಶಕ್ತವಾಗಿ ದುಡಿಸಿಕೊಂಡು ನಿರ್ಮಾಣವಾದ ಹಲವಾರು ಸಿನಿಮಾಗಳು ತೆರೆಗೆ ಬಂದು ಪ್ರೇಕ್ಷಕರನ್ನು ಸಮ್ಮೋಹಿನಿಯಂತೆ ಆಕರ್ಷಿಸುವಲ್ಲಿ ಯಶಸ್ವಿಯಾಗಿದ್ದವು. ಪರಿಣಾಮವಾಗಿ ಕನ್ನಡ ಸಿನಿಮಾ ಮಾಧ್ಯಮದೆದುರು ಜಾಗತಿಕ ಮಟ್ಟದ ಪ್ರೇಕ್ಷಕರಿಗೆ ಒಪ್ಪಿಗೆಯಾಗುವ ಸಿನಿಮಾಗಳನ್ನು ನಿರ್ಮಿಸುವ ಸವಾಲು ಎದುರಾಯಿತು. ಒಟ್ಟಾರೆ ದೇಶ ಭಾಷೆಗಳ ಗಡಿಯನ್ನು ಮೀರಿ ಅಸಂಖ್ಯಾತ ಪ್ರೇಕ್ಷಕರಿಗೆ ತಮ್ಮ ಸಿನಿಮಾಗಳನ್ನು ತೋರಿಸಬೇಕೆನ್ನುವ ಇಲ್ಲಿನ ನಿರ್ದೇಶಕರು ಮತ್ತು ನಿರ್ಮಾಪಕರ ಹಂಬಲದಿಂದಾಗಿ ಕನ್ನಡ ಸಿನಿಮಾ ಮಾಧ್ಯಮದ ಮಾರುಕಟ್ಟೆ ಅಚಿತರರಾಷ್ಟ್ರೀಯ ಮಟ್ಟಕ್ಕೆ ವಿಸ್ತರಿಸಿತು. ಇಲ್ಲಿ ಸವಾಲು ಸ್ವೀಕರಿಸಿ ಗೆಲುವು ಸಾಧಿಸಿದವರು ಉಳಿದುಕೊಂಡರು ಮತ್ತು ಹೊಸ ಸವಾಲಿಗೆ ಎದೆಗುಂದಿದವರು ಸಿನಿಮಾ ಮಾಧ್ಯಮದಿಂದ ದೂರಸರಿದರು. ಹೀಗೆ ದೂರ ಸರಿದವರಲ್ಲಿ ಸಿನಿಮಾ ಕುರಿತು ಅಪಾರ ಪ್ರೀತಿ ಮತ್ತು ಪ್ರತಿಭೆ ಹೊಂದಿದವರ ಸಂಖ್ಯೆಯೇ  ಬಹಳಷ್ಟು ಎನ್ನುವುದು ಗಮನಿಸಬೇಕಾದ ವಿಷಯ. 
     ಈಗ ಸಿನಿಮಾ ಮಾಧ್ಯಮದಲ್ಲಿ ಅದೇನಿದ್ದರೂ ಹೊಸಬರ ಭರಾಟೆ0iÉು. ಆಧುನಿಕ ತಂತ್ರಜ್ಞಾನದ ಈ ಯುಗದಲ್ಲಿ ಹುಟ್ಟಿದ ಈ ನವ ನಾಗರಿಕರಿಗೆ ಸಿನಿಮಾ ಅದೇನಿದ್ದರೂ ಉದ್ಯಮವೇ ವಿನ: ಮಾಧ್ಯಮವಲ್ಲ. ಎಲ್ಲವೂ ಲಾಭ ಮತ್ತು ನಷ್ಟದ ಲೆಕ್ಕಾಚಾರದಲ್ಲೇ ತೂಗಿ ನೋಡುವ ಮನೋಭಾವ. ಪರಿಣಾಮವಾಗಿ ಇಲ್ಲಿ ಪ್ರೇಕ್ಷಕರನ್ನು ಸಮ್ಮೋಹಿನಿಯಂತೆ ಹಿಡಿದಿಟ್ಟು ಕಾಸು ಮಾಡಿಕೊಳ್ಳುವ ಲೆಕ್ಕಾಚಾರ ಈ ಸಿನಿಮಾ ಜನಗಳದ್ದು. ಆದ್ದರಿಂದ ಸಿನಿಮಾ ಎನ್ನುವುದು ವಾಸ್ತವಿಕತೆಗೆ ಹತ್ತಿರವಾಗಿರಬೇಕು ಎನ್ನುವುದಾಗಲಿ ಅಥವಾ ಸಿನಿಮಾವನ್ನು ಹೀಗೆ ತೆಗೆಯಬೇಕೆನ್ನುವ ಆ ಒಂದುಕಾಲದ ಫಾರ್ಮುಲಾ ಆಗಲಿ ಈಗಿಲ್ಲ. ಏನಿದ್ದರೂ ಮನೋರಂಜನೆಯೇ  ಪ್ರಧಾನ ಮತ್ತು ಗ್ರಾಫಿಕ್ ತಂತ್ರಜ್ಞಾನವೇ ಮೂಲ ಬಂಡವಾಳ. 

ಪುಸ್ತಕೋದ್ಯಮ  


     ಪುಸ್ತಕ ಪ್ರಕಟಣೆ ಕೂಡ ಇವತ್ತು ಬಂಡವಾಳ ಹೂಡಿ ಲಾಭ ಗಳಿಸುವ ಉದ್ದಿಮೆಯಾಗಿ ಪರಿವರ್ತಿತಗೊಂಡಿದೆ. ಪುಸ್ತಕ ಎನ್ನುವುದು ಕೂಡ ಬರಹಗಾರ ತನ್ನ ಅಭಿವ್ಯಕ್ತಿಗಾಗಿ ಆಯ್ಕೆ  ಮಾಡಿಕೊಳ್ಳುವ ಮಾಧ್ಯಮ. ಆಗೆಲ್ಲ ಪುಸ್ತಕ ಪ್ರಕಟಣೆ ಎನ್ನುವುದು ಈಗಿನಷ್ಟು ಸುಲಭವಾಗಿರಲಿಲ್ಲ. ಲೇಖಕರಂತೂ ಸ್ವತ: ಪ್ರಕಾಶಕರಾಗಿ ಪುಸ್ತಕಗಳನ್ನು ಪ್ರಕಟಿಸಲು ಆಗ ಮುಂದಾಗುತ್ತಿರಲಿಲ್ಲ. ಪುಸ್ತಕಗಳ ಪ್ರಕಟಣೆಗಾಗಿಯೇ  ಪ್ರಕಾಶನ ಸಂಸ್ಥೆಗಳಿದ್ದವು. ಜಿ.ಬಿ.ಜೋಷಿ ಅಂಥವರು ಪುಸ್ತಕಗಳ ಪ್ರಕಟಣೆಯನ್ನು ಒಂದು ತಪಸ್ಸಿನಂತೆ ಪಾಲಿಸಿಕೊಂಡು ಬಂದರು. ಪುಸ್ತಕಗಳ ಪ್ರಕಟಣೆ ಎನ್ನುವುದು ಆರ್ಥಿಕ ಹೊರೆಯಾಗಿದ್ದ ಆ ದಿನಗಳಲ್ಲಿ ಮನೋಹರ ಗ್ರಂಥಮಾಲೆಯವರು ಓದುಗರಿಂದ ಚಂದಾ ಹಣವನ್ನು ಪಡೆದು ಪುಸ್ತಕಗಳನ್ನು ಪ್ರಕಟಿಸುತ್ತಿದ್ದರು. ಮನೋಹರ ಗ್ರಂಥಮಾಲೆಯ ಪ್ರಕಾಶಕರಾಗಿದ್ದ ಜಿ.ಬಿ.ಜೋಷಿ ಅವರು ಪ್ರಕಟಿತ ಪುಸ್ತಕಗಳ ಗಂಟನ್ನು ತಲೆಯ ಮೇಲೆ ಹೊತ್ತೊಯ್ದು ಮಾರಾಟ ಮಾಡುತ್ತಿದ್ದರು. ಪುಸ್ತಕ ಓದುವವರ ಸಂಖ್ಯೆ ಅಪಾರ ಪ್ರಮಾಣದಲ್ಲಿದ್ದ ದಿನಗಳಲ್ಲೂ ಪುಸ್ತಕಗಳ ಪ್ರಕಟಣೆ ಎನ್ನುವುದು ಪ್ರಕಾಶಕರಿಗೆ ಹೊರೆಯಾಗುತ್ತಿತ್ತು. ಅದೆಷ್ಟೋ ಪ್ರತಿಭಾನ್ವಿತ ಲೇಖಕರು ತಮ್ಮ ಕೃತಿಗಳು ಬೆಳಕು ಕಾಣದ ಕಾರಣ ತೆರೆಮರೆಗೆ ಸರಿದು ಹೋದರು. 
       ಪುಸ್ತಕ ಪ್ರಕಾಶಕರ ಸಮಸ್ಯೆಯನ್ನು ಅರಿತು ಸರ್ಕಾರ ಸಾರ್ವಜನಿಕ ಗ್ರಂಥಾಲಯಗಳಿಗೆ ಪುಸ್ತಕಗಳನ್ನು ಖರೀದಿಸುವ ಕಾಯ್ದೆ  ತಂದ ನಂತರ ಪುಸ್ತಕ ಮಾಧ್ಯಮದಲ್ಲಿ ಸಾಕಷ್ಟು ಬದಲಾವಣೆಗಳು ಕಂಡುಬಂದವು. ಈಗ ಪುಸ್ತಕ ಪ್ರಕಟಣೆ ಎನ್ನುವುದು ಪ್ರಕಾಶಕರಿಗೆ ಲಾಭ ತರುವ ಉದ್ದಿಮೆಯಾಗಿ ಬೆಳೆದು ನಿಂತಿದೆ. ಪರಿಣಾಮವಾಗಿ ಅಸಂಖ್ಯಾತ ಪ್ರಕಾಶನ ಸಂಸ್ಥೆಗಳು ಹುಟ್ಟಿಕೊಂಡಿವೆ. ಲಾಭದ ಆಸೆಯಿಂದ ಲೇಖಕರೇ ಪ್ರಕಾಶಕರಾಗಿ ಪುಸ್ತಕಗಳನ್ನು ಪ್ರಕಟಿಸುತ್ತಿರುವರು. ಕೆಲವರಂತೂ ತಮ್ಮ ಪಿ.ಹೆಚ್.ಡಿ ಪ್ರಬಂಧಗಳನ್ನೇ ಪುಸ್ತಕ ರೂಪದಲ್ಲಿ ಪ್ರಕಟಿಸಿ ಸಾರ್ವಜನಿಕ ಗ್ರಂಥಾಲಯಗಳಿಗೆ ಮಾರಾಟ ಮಾಡುತ್ತಿರುವರು. ಕೆಲವು ವರ್ಷಗಳ ಹಿಂದೆ ರಾಜ್ಯದ ಮಂತ್ರಿಯೋರ್ವರು ತಮ್ಮ ಸಂಬಂಧಿಕರ ಪ್ರಕಾಶನ ಸಂಸ್ಥೆಯಿಂದಲೇ ಪುಸ್ತಕಗಳನ್ನು ಖರೀದಿಸುವಂತೆ ಒತ್ತಡ ತಂದು ಕೋಟ್ಯಾಂತರ ರೂಪಾಯಿಗಳ ವಹಿವಾಟು ನಡೆಸಿದರು. ಹೀಗೆ ಲಾಭದ ಆಸೆಯಿಂದ ಪುಸ್ತಕಗಳನ್ನು ಪ್ರಕಟಿಸುವುದರಿಂದ ಸಾಹಿತ್ಯದ ಗುಣಮಟ್ಟ ಕುಸಿಯುತ್ತದೆ ಎನ್ನುವ ಆತಂಕ ಹಲವರದು. ಬರವಣಿಗೆ ಎನ್ನುವುದು ಅದೊಂದು ಸೃಜನಶೀಲ ಸೃಷ್ಟಿ. ಸಮಾಜದ ಹಿತವೇ ಬರವಣಿಗೆಯ ಉದ್ದೇಶ. ಆದರೆ ಲಾಭದ ಆಸೆಯಿಂದ ಈಗ ಕನ್ನಡ ಸಾಹಿತ್ಯದಲ್ಲಿ ಪ್ರಕಟವಾಗುತ್ತಿರುವ ಪುಸ್ತಕಗಳನ್ನು ಗಮನಿಸಿದಾಗ ಹೆಚ್ಚಿನ ಪುಸ್ತಕಗಳು ಕಾಟಾಚಾರಕ್ಕೆಂಬಂತೆ ಪ್ರಕಟವಾಗುತ್ತಿವೆ. ಧನದಾಹ ಮತ್ತು ವ್ಯಾಪಾರಿ ಮನೋಭಾವದ ಲೇಖಕರು ಹಾಗೂ ಪ್ರಕಾಶಕರಿಂದಾಗಿ ಸಾಹಿತ್ಯ ಇಲ್ಲಿ ಮಾರಾಟವಾಗುತ್ತಿದೆ. 

ಕೊನೆಯ ಮಾತು


     ಹಿರಿಯ ಬರಹಗಾರರಾದ ಬರಗೂರು ರಾಮಚಂದ್ರಪ್ಪನವರು ಮಾದ್ಯಮ ಮತ್ತು ಉದ್ಯಮದ ನಡುವಣ ವ್ಯತ್ಯಾಸವನ್ನು ಬಹಳ ಅರ್ಥಪೂರ್ಣವಾಗಿ ಗುರುತಿಸುತ್ತಾರೆ. ಅವರ ದೃಷ್ಟಿಯಲ್ಲಿ ಮಾಧ್ಯಮದಲ್ಲಿ ಸಂವೇದನೆಯೆ   ಮುಖ್ಯವಾಗಿದ್ದರೆ ಉದ್ಯಮದಲ್ಲಿ ಲಾಭದ ಹಿತಾಸಕ್ತಿ ಮುಖ್ಯವಾಗಿರುತ್ತದೆ. ಶ್ರೀಯುತರ ಚಿಂತನೆ ಸತ್ಯಕ್ಕೆ ಹತ್ತಿರವಾಗಿದೆ. ಮಾಧ್ಯಮ ಸಂವೇದನಾಶೀಲವಾಗಿದ್ದಾಗ ಮಾತ್ರ ಬದುಕುತ್ತಿರುವ ವ್ಯವಸ್ಥೆ ಕುರಿತು ಅದಕ್ಕೆ ಸಹಜವಾದ ಕಾಳಜಿ ಇರಲು ಸಾಧ್ಯ. ಉದ್ಯಮವಾದಾಗ ಬಂಡವಾಳ ಮತ್ತು ಲಾಭ-ನಷ್ಟಗಳೇ ಮುನ್ನೆಲೆಗೆ ಬಂದು ಸಮಾಜದ ಕುರಿತಾದ ಕಳಕಳಿ ಹಿನ್ನೆಲೆಗೆ ಸರಿಯುತ್ತದೆ. ಜಾಗತೀಕರಣದ ಈ ಯುಗದಲ್ಲಿ ಪುಸ್ತಕ, ಪತ್ರಿಕೆ, ಸಿನಿಮಾ ಮತ್ತು ಶಿಕ್ಷಣ ಮಾಧ್ಯಮಗಳು ಉದ್ಯಮಗಳಾಗಿ ಬದಲಾಗುತ್ತಿರುವುದು ತುಂಬ ಆತಂಕದ ಸಂಗತಿ. ಹೀಗೆ ಸಮಾಜದ ಪ್ರಮುಖ ಮಾಧ್ಯಮಗಳು ಉದ್ಯಮದ ರೂಪವನ್ನು ತಾಳುತ್ತಿರುವುದರಿಂದ ಇಲ್ಲಿ ಬದುಕುತ್ತಿರುವ ಮನುಷ್ಯರು ಕೂಡ ಸಂವೇದನೆಯನ್ನು ಕಳೆದುಕೊಂಡು ಕ್ರೂರರಾಗುತ್ತಿರುವರು. ನಾವುಗಳೆಲ್ಲ ತುಂಬ ಆತಂಕ ಪಡುವ ವಿಷಯವಿದು.

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 


No comments:

Post a Comment