‘ಮೇರಾ ಪಾಸ್ ಗಾಡಿ ಹೈ, ಬಂಗ್ಲಾ ಹೈ, ದೌಲತ್ ಹೈ. ತೇರಾ ಪಾಸ್ ಕ್ಯಾ ಹೈ’ ಅಮಿತಾಬ ಬಚ್ಚನ್‍ನ ತಣ್ಣನೆಯ ಕ್ರೌರ್ಯ ತುಂಬಿದ ಪ್ರಶ್ನೆಗೆ ಶಶಿಕಪೂರ್ ಎದೆಯುಬ್ಬಿಸಿ ಅಭಿಮಾನದಿಂದ ಉತ್ತರಿಸುತ್ತಾನೆ ‘ಮೇರಾ ಪಾಸ್ ಮಾ ಹೈ’. ಆಗ ಇಡೀ ಸಿನಿಮಾ ಮಂದಿರದ ತುಂಬ ಕಿವಿಗಡಚಿಕ್ಕುವ ಚಪ್ಪಾಳೆಯ ಶಬ್ದ ಮೊಳಗುತ್ತದೆ. 1980 ರ ದಶಕದ ಹಿಂದಿ ಸಿನಿಮಾವೊಂದರ ಈ ಸಂಭಾಷಣೆ ಅಂದಿನ ಸಿನಿಮಾ ಪ್ರೇಕ್ಷಕರ ನೆನಪಿನಂಗಳದಲ್ಲಿ ಹಚ್ಚ ಹಸಿರಾಗಿ ಉಳಿದುಕೊಂಡಿದೆ. ನಾಯಕ, ನಾಯಕಿಯರೆ ಪ್ರಧಾನ ಭೂಮಿಕೆಯಲ್ಲಿರುವ ಭಾರತೀಯ ಚಿತ್ರರಂಗದ ಸಿನಿಮಾಗಳಲ್ಲಿ ಆಗಾಗ ತಾಯಿ ಪ್ರಧಾನ ಸಿನಿಮಾಗಳೂ ತೆರೆಕಂಡು ಜನಪ್ರಿಯವಾಗಿವೆ. ಕನ್ನಡ ಸಿನಿಮಾ ರಂಗದಲ್ಲಿ ರಾಜಕುಮಾರ ಅವರಿಂದ ಇಂದಿನ ಯುವ ನಾಯಕ ನಟರವರೆಗೆ ಪ್ರತಿಯೊಬ್ಬರು ತಮ್ಮ ವೃತ್ತಿ ಬದುಕಿನಲ್ಲಿ ಒಂದಲ್ಲ ಒಂದು ಸಂದರ್ಭ ಮಾತೃ ಪ್ರಧಾನ ಸಿನಿಮಾಗಳಲ್ಲಿ ಅಭಿನಯಿಸಿದ ಅನೇಕ ಉದಾಹರಣೆಗಳಿವೆ.
ಕನ್ನಡ ಸಿನಿಮಾರಂಗದಲ್ಲಿ ತಾಯಿ ಪ್ರಧಾನ ಸಿನಿಮಾಗಳ ಕುರಿತು ಚರ್ಚಿಸುವಾಗ ಪಂಢರಿಬಾಯಿ ಅವರ ಹೆಸರು ಮುಂಚೂಣಿಯಲ್ಲಿ ಬರುತ್ತದೆ. ಕನ್ನಡ ಸಿನಿಮಾ ಮಾಧ್ಯಮದಲ್ಲಿ ದೀರ್ಘಕಾಲ ಅಮ್ಮನ ಪಾತ್ರದಲ್ಲಿ ಅಭಿನಯಿಸಿದ ಹೆಗ್ಗಳಿಕೆ ಅವರದು. ಒಂದುಕಾಲದಲ್ಲಿ ನಾಯಕ ನಟಿಯಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಪಂಢರಿಬಾಯಿ ಜನಮಾನಸದಲ್ಲಿ ಶಾಶ್ವತವಾಗಿ ನೆಲೆ ನಿಂತಿದ್ದು ತಮ್ಮ ತಾಯಿ ಪಾತ್ರದ ಅಭಿನಯದ ಮೂಲಕವೇ. ರಾಜಕುಮಾರ ಅವರೊಂದಿಗೆ ನಾಯಕಿಯಾಗಿ ಅಭಿನಯಿಸಿದ ಪಂಢರಿಬಾಯಿ ಕಾಲಾನಂತರದಲ್ಲಿ ಅದೇ ರಾಜಕುಮಾರ ಅವರಿಗೆ ತಾಯಿಯಾಗಿ ಅಭಿನಯಿಸ ಬೇಕಾಗಿಬಂದದ್ದು ಸಿನಿಮಾ ಮಾಧ್ಯಮದಲ್ಲಿ ಮಹಿಳಾ ಕಲಾವಿದರ ವೃತ್ತಿ ಬದುಕಿನ ಅನಿಶ್ಚಿತತೆಗೊಂದು ದೃಷ್ಟಾಂತ. ರಾಜಕುಮಾರ ಮಾತ್ರವಲ್ಲದೆ ವಿಷ್ಣುವರ್ಧನ್ ಅವರ ಸಮಕಾಲಿನ ಎಲ್ಲ ನಾಯಕ ನಟರಿಗೆ ಅಮ್ಮನಾಗಿ ಅಭಿನಯಿಸಿದ ಈ ಕಲಾವಿದೆ ತಮ್ಮ ಅಭಿನಯದ ಮೂಲಕ ತಾಯಿ ಪಾತ್ರಕ್ಕೊಂದು ವಿಶಿಷ್ಠ ಮೆರುಗು ನೀಡಿದ್ದು ಕನ್ನಡ ಸಿನಿಮಾ ರಂಗದ ಮಹತ್ವಗಳಲ್ಲೊಂದು.
ಲೀಲಾವತಿ, ಸಾಹುಕಾರ್ ಜಾನಕಿ, ಆದವಾನಿ ಲಕ್ಷ್ಮಿದೇವಮ್ಮ, ಶಾಂತಮ್ಮ ಇತ್ಯಾದಿ ಕಲಾವಿದೆಯರು ಕೂಡ ಕನ್ನಡ ಸಿನಿಮಾರಂಗದಲ್ಲಿ ಅಮ್ಮನ ಪಾತ್ರದಲ್ಲಿ ಅಭಿನಯಿಸಿ ತಮ್ಮದೇ ಛಾಪು ಮೂಡಿಸಿರುವರು. ಲೀಲಾವತಿ ಕೂಡ ಒಂದು ಕಾಲದಲ್ಲಿ ರಾಜಕುಮಾರ ಹಾಗೂ ಅವರ ಸಮಕಾಲಿನ ಕಲಾವಿದರೊಂದಿಗೆ ನಾಯಕಿಯಾಗಿ ಅಭಿನಯಿಸಿ ಜನಪ್ರಿಯ ತಾರೆಯಾಗಿ ಗುರುತಿಸಿಕೊಂಡವರು. ರಾಜಕುಮಾರ ಮತ್ತು ಲೀಲಾವತಿ ಅವರದು ಅತ್ಯಂತ ಜನಪ್ರಿಯ ಜೋಡಿ ಎಂದೇ ಹೆಸರಾಗಿತ್ತು. ಕಾಲಕ್ರಮೇಣ ಭಾರತಿ, ಜಯಂತಿ, ಲಕ್ಷ್ಮಿ, ಆರತಿ, ಮಂಜುಳಾ ಅವರ ಆಗಮನದಿಂದ ಅತ್ತೆ, ಅಮ್ಮನ ಇತ್ಯಾದಿ ಪೋಷಕ ಪಾತ್ರಗಳಿಗೆ ಬಡ್ತಿ ಪಡೆದ ಲೀಲಾವತಿ ನಂತರದ ದಿನಗಳಲ್ಲಿ ಹಲವಾರು ಸಿನಿಮಾಗಳಲ್ಲಿ ತಮ್ಮ ಮನೋಜ್ಞ ಅಭಿನಯದ ಮೂಲಕ ತಾಯಿ ಪಾತ್ರಕ್ಕೆ ಜೀವ ತುಂಬಿದರು. ಒಂದು ಕಾಲದಲ್ಲಿ ತಮ್ಮ ಆಗಮನದಿಂದ ಹಿರಿಯ ನಾಯಕಿ ನಟಿಯರಿಗೆ ಪೋಷಕ ಪಾತ್ರಗಳೆಡೆ ವಲಸೆ ಹೋಗುವಂತ ಸನ್ನಿವೇಶ ಸೃಷ್ಟಿಸಿದ್ದ ಭಾರತಿ, ಜಯಂತಿ, ಲಕ್ಷ್ಮಿ, ಜಯಮಾಲ, ಬಿ.ಸರೋಜಾದೇವಿ ಮುಂದೊಂದು ದಿನ ತಾವು ಕೂಡ ತಾಯಿಯ ಪಾತ್ರದಲ್ಲಿ ಅಭಿನಯಿಸಬೇಕಾದ ಅನಿವಾರ್ಯತೆ ಎದುರಾಯಿತು. ಸಿನಿಮಾ ಮಾಧ್ಯಮವೆ ಹಾಗೆ ಸದಾಕಾಲ ಅನಿಶ್ಚಿತತೆಯ ನಡುವೆ ತೂಗುಯ್ಯಾಲೆಯಾಡುವ ಬದುಕದು. ಕಲಾವಿದೆಯೋರ್ವಳು ದೀರ್ಘಕಾಲ ಇಲ್ಲಿ ನಾಯಕಿ ನಟಿಯಾಗಿ ನೆಲೆ ನಿಂತ ಉದಾಹರಣೆಗಳಿಲ್ಲ. ನಾಯಕಿಯನ್ನು ಕಾಮ ಮತ್ತು ಶೃಂಗಾರದ ಹಿನ್ನೆಲೆಯಲ್ಲೇ ಚಿತ್ರಿಸಲು ಬಯಸುವ ಸಿನಿಮಾ ಮಾಧ್ಯಮ ಯುವ ಕಲಾವಿದೆಯರಿಗೆ ಮಣೆಹಾಕಲು ಹಾತೊರೆಯುತ್ತದೆ. ವಯಸ್ಸು ಮತ್ತು ದೇಹ ಸೌಂದರ್ಯವಿರುವವರೆಗೆ ಮಾತ್ರ ಇಲ್ಲಿ ಕಲಾವಿದೆ ನಾಯಕಿ ನಟಿಯಾಗಿ ಚಲಾವಣೆಯಲ್ಲಿರಲು ಸಾಧ್ಯ. ದೇಹದ ಸೌಂದರ್ಯ ಮಾಸಿದಂತೆ ಕಲಾವಿದೆ ನೇಪಥ್ಯಕ್ಕೆ ಸರಿಯುವುದು ಅನಿವಾರ್ಯವಾಗಿರುವ ಸಿನಿಮಾ ಮಾಧ್ಯಮದಲ್ಲಿ ಅನೇಕ ಕಲಾವಿದೆಯರು ಪೋಷಕ ಪಾತ್ರಗಳಿಗೆ ಜೀವ ತುಂಬಿ ನಾಯಕಿಗೆ ಸಮನಾದ ಪಾತ್ರಗಳಲ್ಲಿ ಅಭಿನಯಿಸುತ್ತಿರುವರು. ಒಂದುಕಾಲದಲ್ಲಿ ದ್ವಂದ್ವಾರ್ಥ ಸಂಭಾಷಣೆ ಹೇಳುವ ಗಯ್ಯಾಳಿ ಪಾತ್ರಗಳಲ್ಲಿ ಅಭಿನಯಿಸಿ ಜನಪ್ರಿಯರಾಗಿದ್ದ ಉಮಾಶ್ರೀ ವಯಸ್ಸಾದಂತೆ ಪೋಷಕ ಪಾತ್ರಗಳಿಗೆ ಬಡ್ತಿ ಪಡೆದು ‘ಪುಟ್ನಂಜ’, ‘ದಿಗ್ಗಜರು’, ‘ವೀರಪ್ಪ ನಾಯ್ಕ’ ಸಿನಿಮಾಗಳಲ್ಲಿ ಅಮ್ಮನ ಪಾತ್ರದಲ್ಲಿ ಅವಿಸ್ಮರಣೀಯ ಅಭಿನಯ ನೀಡಿದರು.
ಕನ್ನಡ ಸಿನಿಮಾಗಳಲ್ಲಿ ತಾಯಿಯನ್ನು ತ್ಯಾಗ ಮತ್ತು ಸಹನಾ ಮೂರ್ತಿಯಾಗಿ ಬಿಂಬಿಸಿದ್ದೇ ಹೆಚ್ಚು. ಕುಟುಂಬದ ಆಧಾರ ಸ್ತಂಬವಾಗಿ ಪತಿ, ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳೊಂದಿಗೆ ಏಗುತ್ತ ಸಂಸಾರದ ನೌಕೆಯನ್ನು ದಡಕ್ಕೆ ಮುಟ್ಟಿಸುವ ಅಮ್ಮನ ಪಾತ್ರದಲ್ಲಿ ಅನೇಕ ಕಲಾವಿದೆಯರು ಸಶಕ್ತವಾಗಿ ಅಭಿನಯಿಸಿ ಪಾತ್ರಗಳಿಗೆ ಜೀವಕಳೆ ತುಂಬಿರುವರು. ಮಗಳನ್ನು ಸಮಾಜದ ಕ್ರೂರ ದೃಷ್ಟಿಯಿಂದ ರಕ್ಷಿಸಿ ಅವಳಿಗೊಂದು ನೆಮ್ಮದಿಯ ಬದುಕನ್ನು ಕಟ್ಟಿಕೊಡಲು ಪ್ರಯತ್ನಿಸುವ ತಾಯಿಯಾಗಿ ‘ಹೂವು ಹಣ್ಣು’ ಸಿನಿಮಾದಲ್ಲಿ ಲಕ್ಷ್ಮಿ ಅವರದು ಮನೋಜ್ಞ ಅಭಿನಯ. ಪತಿ ಮತ್ತು ಮಕ್ಕಳ ಹೋರಾಟದ ನಡುವೆ ಮೂಕವೇದನೆ ಅನುಭವಿಸುತ್ತ ನಲುಗುವ ತಾಯಿಯ ಪಾತ್ರ ‘ಪ್ರೀತಿ ವಾತ್ಸಲ್ಯ’, ‘ಭಾಗ್ಯವಂತರು’, ‘ಲಯನ್ ಜಗಪತಿರಾವ್’ ಇತ್ಯಾದಿ ಸಿನಿಮಾಗಳಲ್ಲಿ ಮೂಡಿ ಬಂದಿದೆ. ಒಂದೆಡೆ ಕನೂನು ರಕ್ಷಿಸುವ ಪತಿ ಇನ್ನೊಂದೆಡೆ ಸಮಾಜ ಕಂಟಕ ಮಗ ಇವರಿಬ್ಬರ ನಡುವೆ ಪತ್ನಿ ಮತ್ತು ತಾಯಿಯಾಗಿ ಕಾಂಚನಾ ಅವರದು ‘ನಾನೊಬ್ಬ ಕಳ್ಳ’ ಸಿನಿಮಾದಲ್ಲಿ ಬಹುಕಾಲ ನೆನಪಿನಲ್ಲುಳಿಯುವ ಅಭಿನಯ.
ತ್ಯಾಗ ಮತ್ತು ಸಹನೆಗೆ ವಿರುದ್ಧವಾಗಿ ತನ್ನ ಮಕ್ಕಳ ಮೂಲಕ ಪ್ರತಿಕಾರ ತೀರಿಸಿಕೊಳ್ಳುವ ತಾಯಿ ಪಾತ್ರ ಹಲವು ಸಂದರ್ಭಗಳಲ್ಲಿ ಸಿನಿಮಾ ಪರದೆಯ ಮೇಲೆ ಕಾಣಿಸಿಕೊಂಡಿದೆ. ತನ್ನ ಪತಿಯಿಂದಾದ ಅನ್ಯಾಯಕ್ಕೆ ಮಗನ ಮೂಲಕ ಪ್ರತಿಕಾರ ತೀರಿಸಿಕೊಳ್ಳುವ ಪಾತ್ರದಲ್ಲಿ ಜಯಂತಿ ಅಭಿನಯಿಸಿದ ‘ಆನಂದ’, ಊರ ಜಮೀನ್ದಾರನನ್ನು ಮಗನಿಂದ ಸದೆಬಡಿದು ಸೇಡು ತೀರಿಸಿಕೊಳ್ಳುವ ಅಮ್ಮನಾಗಿ ಭಾರತಿ ಅಭಿನಯಿಸಿದ ‘ದೊರೆ’ ಈ ಸಿನಿಮಾಗಳು ಅಮ್ಮನ ಹೋರಾಟದ ಮುಖವನ್ನು ಪರಿಚಯಿಸಿದವು. ಸಂದರ್ಭದ ಸುಳಿಗೆ ಸಿಲುಕಿ ರೌಡಿಯಾದ ಮಗನನ್ನು ತಾಯಿಯೇ ವಿಷ ಹಾಕಿ ಕೊಲ್ಲಲು ಪ್ರಯತ್ನಿಸುವ ‘ವಂಶಿ’ ಸಿನಿಮಾದ ಮೂಲಕ ಕನ್ನಡ ಸಿನಿಮಾ ಮಾಧ್ಯಮದಲ್ಲಿ ಅಮ್ಮನನ್ನು ಹೊಸ ಪರಿವೇಷದಲ್ಲಿ ನೋಡುವಂತಾಯಿತು. ಕಾಶಿನಾಥ ಅಭಿನಯದ ಅನೇಕ ಸಿನಿಮಾಗಳಲ್ಲಿ ತಾಯಿಯ ಪಾತ್ರವನ್ನು ಹಾಸ್ಯದ ಹಿನ್ನೆಲೆಯಲ್ಲಿ ಚಿತ್ರಿಸಲಾಗಿದೆ. ಇಲ್ಲಿ ವರದಕ್ಷಿಣೆಗಾಗಿ ಆಸೆ ಪಡುವ ಜೀಪುಣ ಹೆಣ್ಣಾಗಿ ತಾಯಿಯ ಇನ್ನೊಂದು ಮುಖ ಅನಾವರಣಗೊಂಡಿದೆ.
ಕನ್ನಡ ಚಿತ್ರರಂಗದಲ್ಲಿ ತಾಯಿ ಪದಕ್ಕೆ ಹೆಚ್ಚಿನ ಮಹತ್ವ ನೀಡಿದ ನಿರ್ಮಾಪಕರಲ್ಲಿ ಅಬ್ಬಯ್ಯ ನಾಯ್ಡು ಮೊದಲಿಗರು. ಅವರ ಬ್ಯಾನರ್‍ನಲ್ಲಿ ನಿರ್ಮಾಣಗೊಂಡ ಬಹುತೇಕ ಸಿನಿಮಾಗಳ ಶೀರ್ಷಿಕೆಯಲ್ಲಿ ತಾಯಿ ಪದ ಹೆಚ್ಚು ಹೆಚ್ಚು ಬಳಕೆಯಾಗಿದೆ. ತಾಯವ್ವ, ತಾಯಿಯ ಆಸೆ, ತಾಯಿಗೊಬ್ಬ ಕರ್ಣ, ಭೂಮಿ ತಾಯಾಣೆ, ತಾಯಿಯ ಮಡಿಲಲ್ಲಿ, ತಾಯಿ ಕನಸು, ತಾಯಿಯ ಹೊಣೆ, ತಾಯಿಯ ನುಡಿ, ಮಾತೃ ಭೂಮಿ ಹೀಗೆ ತಾಯಿಯ ಮಹತ್ವವನ್ನು ಸಾರುವ ಹಲವಾರು ಸಿನಿಮಾಗಳನ್ನು ನಿರ್ಮಾಣ ಮಾಡಿದ ಹೆಗ್ಗಳಿಕೆ ಅಬ್ಬಯ್ಯ ನಾಯ್ಡು ಅವರದು.
ಗ್ಲಾಮರ್ ಅಮ್ಮ
ರಾಜಕುಮಾರ ಮತ್ತು ವಿಷ್ಣುವರ್ಧನ್ ಅವರ ಸಮಕಾಲಿನ ನಾಯಕ ನಟರ ಬಹುತೇಕ ಸಿನಿಮಾಗಳಲ್ಲಿ ಪಂಢರೀಬಾಯಿ, ಲೀಲಾವತಿ, ಶಾಂತಮ್ಮ, ಸಾಹುಕಾರ್ ಜಾನಕಿ ಶಾಶ್ವತ ಅಮ್ಮಂದಿರಾಗಿ ಅಭಿನಯಿಸಿದರು. ಆದರೆ ನಂತರದ ಯುವ ನಾಯಕ ನಟರ ಸಿನಿಮಾಗಳಲ್ಲಿ ತಾಯಿ ಪಾತ್ರದ ಅಭಿನಯಕ್ಕಾಗಿ ಕಲಾವಿದೆಯರ ಕೊರತೆ ಎದುರಾಯಿತು. ಈಗಾಗಲೇ ಅಮ್ಮನ ಪಾತ್ರದಲ್ಲಿ ತಮ್ಮ ವಿಶಿಷ್ಠ ಛಾಪು ಮೂಡಿಸಿದ್ದ ಹಿರಿಯ ಕಲಾವಿದೆಯರನ್ನು ಯುವ ಪೀಳಿಗೆಯ ನಾಯಕ ನಟರ ಸಿನಿಮಾಗಳಲ್ಲಿ ಅಮ್ಮಂದಿರಾಗಿ ತೋರಿಸಲು ಸಿನಿಮಾ ಮಾಧ್ಯಮ ಆಸಕ್ತಿ ತೋರಿಸಲಿಲ್ಲ. ರವಿಚಂದ್ರನ್ ಅಭಿನಯದ ‘ಯುದ್ಧಕಾಂಡ’ ಸಿನಿಮಾದಲ್ಲಿ ಭಾರತಿ ಅಮ್ಮನಾಗಿ ಅಭಿನಯಿಸುವುದರೊಂದಿಗೆ ಕನ್ನಡ ಚಿತ್ರರಂಗದಲ್ಲಿ ಅಮ್ಮನ ಪಾತ್ರಕ್ಕೆ ಗ್ಲಾಮರ್ ಕಳೆ ಬಂದಿತು. ಒಂದು ಕಾಲದಲ್ಲಿ ನಾಯಕ ನಟಿಯರಾಗಿದ್ದ ಜಯಂತಿ, ಭಾರತಿ, ಜಯಮಾಲ, ಲಕ್ಷ್ಮಿ ಯುವ ನಟ ನಟಿಯರ ಅಮ್ಮಂದಿರಾಗಿ ಅಭಿನಯಿಸುವುದರ ಮೂಲಕ ಗ್ಲಾಮರ್ ಅಮ್ಮಂದಿರಾಗಿ ಬಡ್ತಿ ಪಡೆದರು.
ಕೇವಲ ನಾಯಕ ನಟಿ ಮಾತ್ರವಲ್ಲದೆ ತಾಯಿ ಪಾತ್ರಕ್ಕೂ ಬೇರೆ ಭಾಷೆಯ ಕಲಾವಿದೆಯರು ಕನ್ನಡ ಸಿನಿಮಾರಂಗಕ್ಕೆ ಆಮದಾದದ್ದು ಕನ್ನಡ ಸಿನಿಮಾ ಮಾಧ್ಯಮದ ಮಹತ್ವದ ಬೆಳವಣಿಗೆಗಳಲ್ಲೊಂದು. ಇಲ್ಲಿ ಕೂಡ ಗ್ಲಾಮರ್ ಅಂಶವೇ ಮುಖ್ಯ ಕಾರಣವಾಯಿತು. ಜಯಸುಧಾ, ರೋಜಾ ಇತ್ಯಾದಿ ಪರಭಾಷಾ ನಾಯಕಿಯರು ಕನ್ನಡದ ಸಿನಿಮಾಗಳಲ್ಲಿ ಅಮ್ಮನಾಗಿ ಅಭಿನಯಿಸಿದರು. ಅಣ್ಣಯ್ಯ ಸಿನಿಮಾದ ತಾಯಿ ಪಾತ್ರಕ್ಕಾಗಿ ಅದರ ಮೂಲ ಹಿಂದಿ ಸಿನಿಮಾದಲ್ಲಿ ಅಭಿನಯಿಸಿದ್ದ ಅರುಣಾ ಇರಾನಿ ಅವರನ್ನು ಕರೆ ತಂದದ್ದು ಸಿನಿಮಾದ ಯಶಸ್ಸಿಗೂ ಕಾರಣವಾಯಿತು. ಇದೇ ಸಿನಿಮಾದಲ್ಲಿ ನಾಯಕಿಯಾಗಿ ಮುದ್ದು ಮುದ್ದಾಗಿ ಕಾಣಿಸುತ್ತಿದ್ದ ನಟಿ ಮಧುಬಾಲ ಮುಂದೊಂದು ದಿನ ತಮ್ಮ ಗ್ಲಾಮರ್ ಕಾರಣದಿಂದಾಗಿಯೇ ಅಮ್ಮನಾಗಿ ಅಭಿನಯಿಸುವ ಅವಕಾಶ ಪಡೆದರು.
ಸಿನಿಮಾ ಹಾಡುಗಳಲ್ಲಿ ಅಮ್ಮ
ಕನ್ನಡ ಸಿನಿಮಾಗಳಲ್ಲಿ ಅಮ್ಮನ ಮಹತ್ವವನ್ನು ಸಾರುವ ಅನೇಕ ಹಾಡುಗಳು ರಚನೆಯಾಗಿವೆ. ‘ಅಮ್ಮ ನಿನ್ನ ತೋಳಿನಲ್ಲಿ ಕಂದ ನಾನು’, ‘ಅಮ್ಮ ಎಂದರೆ ಏನೋ ಹರುಷವು ನಮ್ಮ ಪಾಲಿಗೆ ಅವಳೆ ದೈವವು’, ‘ಅಮ್ಮ ನೀನು ನಮಗಾಗಿ’, ‘ಕೈ ತುತ್ತು ಕೊಟ್ಟವಳೆ ಮೈ ಮದರ್ ಇಂಡಿಯಾ’, ‘ಕಣ್ಣಿಗೆ ಕಾಣುವ ದೇವರು ಎಂದರೆ ಅಮ್ಮನು ತಾನೆ’ ಹೀಗೆ ಹಲವಾರು ಸಿನಿಮಾ ಹಾಡುಗಳಲ್ಲಿ ತ್ಯಾಗ ಮತ್ತು ಸಹನಾ ಮೂರ್ತಿ ಅಮ್ಮ ಕಾಣಿಸಿಕೊಂಡಿದ್ದಾಳೆ. ‘ಅಲ್ಲೊಂದು ಲೋಕವುಂಟು ಇಲ್ಲೊಂದು ದಾರಿಯುಂಟು’ ಹಾಡಿನಲ್ಲಿ ಬಡತನದ ಬೆಗೆಯಲ್ಲಿ ನೊಂದ ಮಕ್ಕಳು ಅಗಲಿದ ಅಮ್ಮನ ಮಡಿಲು ಸೇರುವ ಕರುಣಾಜನಕ ಕಥೆಯಿದೆ. ಅನುರಾಗ ಅರಳಿತು ಚಿತ್ರದ ‘ಶ್ರೀಕಂಠ ವಿಷಕಂಠ’ ಹಾಡಿನಲ್ಲಿ ರಾಜಕುಮಾರ ಭಕ್ತಿ ಪರವಶರಾಗಿ ಅಮ್ಮನ ಸೇವೆ ಮಾಡುವ ದೃಶ್ಯ ಸಿನಿಮಾದ ಪ್ರಮುಖ ಭಾಗವಾಗಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಇದೇ ರಾಜಕುಮಾರ ಅವರ ಕಂಠಸಿರಿಯಲ್ಲಿ ಮೂಡಿಬಂದ ವಂಶಿ ಚಿತ್ರದ ‘ತಾಯಿ ತಾಯಿ ಲಾಲಿ ಹಾಡೋ ಭೂಮಿತಾಯಿಗೆ’ ಹಾಡಿನಲ್ಲಿ ಅಮ್ಮನಿಗೆ ಜೋಗುಳ ಹಾಡುವ ದೃಶ್ಯದಲ್ಲಿ ಲಕ್ಷ್ಮಿ ಮತ್ತು ಪುನಿತ್ ಅಭಿನಯ ಅತ್ಯಂತ ಹೃದಯಸ್ಪರ್ಷಿಯಾಗಿತ್ತು. ಜೋಗಿ ಚಿತ್ರದ ‘ಬೇಡುವೆನು ವರವನ್ನು ಕೊಡು ತಾಯೆ ಜನ್ಮವನು’ ಮತ್ತು ಎಕ್ಸ್‍ಕ್ಯೂಜ್ ಮಿ ಸಿನಿಮಾದ ‘ಬೃಹ್ಮ ವಿಷ್ಣು ಶಿವ ಎದೆ ಹಾಲು ಕುಡಿದರೊ’ ಅಮ್ಮನ ಮಹತ್ವವನ್ನು ವಿವರಿಸುವ ಈ ಎರಡು ಸಿನಿಮಾ ಹಾಡುಗಳು ಇವತ್ತಿಗೂ ಜನಪ್ರಿಯ ಹಾಡುಗಳಾಗಿ ಜನಮನ್ನಣೆಗೆ ಪಾತ್ರವಾಗಿವೆ. ಈ ಎರಡೂ ಸಿನಿಮಾಗಳ ನಿರ್ದೇಶಕ ಪ್ರೇಮ ಎನ್ನುವುದು ಆ ನಿರ್ದೇಶಕನಿಗೆ ತಾಯಿ ಪಾತ್ರದ ಬಗೆಗಿರುವ ಗೌರವಕ್ಕೆ ಒಂದು ದೃಷ್ಟಾಂತ.
ಸಾಹಿತ್ಯದಿಂದ ಸಿನಿಮಾಗೆ
ತಾಯಿ ಪ್ರಧಾನ ಕನ್ನಡದ ಕಾದಂಬರಿಗಳು ಸಿನಿಮಾಗಳಾಗಿ ಬೆಳ್ಳಿತೆರೆಯ ಮೇಲೆ ಮೂಡಿಬಂದಿವೆ. ಆದರೆ ಹೀಗೆ ನಿರ್ಮಾಣವಾದ ಚಿತ್ರಗಳ ಸಂಖ್ಯೆ ಕನ್ನಡದ ಸಿನಿಮಾ ಪ್ರೇಕ್ಷಕರು ಹೆಮ್ಮೆಪಡುವಷ್ಟೆನಿಲ್ಲ. ಒಟ್ಟಾರೆ ಕನ್ನಡ ಸಿನಿಮಾ ಮಾಧ್ಯಮದಲ್ಲಿ ಕಾದಂಬರಿ ಆಧಾರಿತ ಸಿನಿಮಾಗಳ ಸಂಖ್ಯೆ ಬಹಳಷ್ಟು ಕಡಿಮೆ. ಅದರಲ್ಲೂ ಕಾದಂಬರಿ ಆಧಾರಿತಿ ಸಿನಿಮಾಗಳಲ್ಲಿ ನಾಯಕ ಇಲ್ಲವೆ ನಾಯಕಿ ಪ್ರಧಾನ ಚಿತ್ರಗಳದೆ ಸಿಂಹಪಾಲು. ಜೊತೆಗೆ ಪೋಷಕ ಕಲಾವಿದೆಯನ್ನು ಪ್ರಧಾನ ಭೂಮಿಕೆಯಲ್ಲಿ ಚಿತ್ರಿಸಿ ಸಿನಿಮಾ ಮಾಡಿ ಗೆಲ್ಲುವುದು ಅತ್ಯಂತ ಕಷ್ಟದ ಸಂಗತಿ. ಈ ಕಾರಣದಿಂದ ಎಲ್ಲೋ ಒಂದು ಕಡೆ ಅಭಿರುಚಿ ಇರುವ ನಿರ್ಮಾಪಕ ಮತ್ತು ನಿರ್ದೇಶಕರು ತಾಯಿ ಪ್ರಧಾನ ಕಾದಂಬರಿಗಳನ್ನು ಸಿನಿಮಾ ರೂಪದಲ್ಲಿ ಬೆಳ್ಳಿತೆರೆಗೆ ತಂದಿದ್ದುಂಟು. ಹೀಗೆ ನಿರ್ಮಾಣವಾದ ಸಿನಿಮಾಗಳಲ್ಲಿ ತಾಯಿಸಾಹೇಬ, ಗೆಜ್ಜೆಪೂಜೆ, ಹೂವು ಹಣ್ಣು, ಋಣಮುಕ್ತಳು ಪ್ರಮುಖವಾದವುಗಳು. ಲೀಲಾವತಿ ಅಭಿನಯದ ಪುಟ್ಟಣ್ಣ ಕಣಗಾಲ್ ನಿರ್ದೇಶನದಲ್ಲಿ 1980 ರಲ್ಲಿ ತೆರೆಕಂಡ ಗೆಜ್ಜೆಪೂಜೆ ಎಂ.ಕೆ.ಇಂದಿರಾರ ಅದೇ ಹೆಸರಿನ ಕಾದಂಬರಿ ಆಧಾರಿತ ಸಿನಿಮಾ. ವೈಶ್ಯೆಯಾದ ತಾಯಿ ತನ್ನ ಮಗಳು ತನ್ನಂತೆ ನೋವಿನ ಮತ್ತು ಬಹಿಷ್ಕೃತ ಬದುಕಿಗೆ ಪ್ರವೇಶಿಸುವುದನ್ನು ತಪ್ಪಿಸುವ ಅಮ್ಮನ ಪಾತ್ರದಲ್ಲಿ ಲೀಲಾವತಿ ಅವರ ಅಭಿನಯ ಹೃದಯಸ್ಪರ್ಷಿಯಾಗಿತ್ತು. ಹೂವುಹಣ್ಣು ಚಿತ್ರದಲ್ಲೂ ವೈಶ್ಯೆಯಾದ ತಾಯಿ ಮಗಳಿಗೆ ಸುಂದರ ಬಾಳನ್ನು ಕಟ್ಟಿಕೊಟ್ಟು ಮುಂದೊಂದು ದಿನ ಅದೇ ಮಗಳಿಂದ ಅವಮಾನಕ್ಕೆ ಒಳಗಾಗುವ ಕಥೆಯಿದೆ. ತಾಯಿ ಸಾಹೇಬ ಸಿನಿಮಾದಲ್ಲಿ ಬಾಳಾಸಾಹೇಬರ ಎರಡನೆ ಹೆಂಡತಿಯಾಗಿ ಬರುವ ನರ್ಮದೆ ಗಂಡನ ಸಾವಿನ ನಂತರ ಸವತಿಯ ಮಕ್ಕಳಿಗಾಗಿ ಇಡೀ ಜಗತ್ತನ್ನು ಎದುರುಹಾಕಿಕೊಳ್ಳುವ ಪಾತ್ರದಲ್ಲಿ ಜಯಮಾಲಾ ಅವರದು ಮನೋಜ್ಞ ಅಭಿನಯ. ಭಾರತಿ ಪ್ರಧಾನ ಭೂಮಿಕೆಯಲ್ಲಿ ಕಾಣಿಸಿಕೊಂಡ ಪುಟ್ಟಣ್ಣ ಕಣಗಾಲ ನಿರ್ದೇಶನದ ಋಣಮುಕ್ತಳು ಅನುಪಮ ನಿರಂಜನರ ತಾಯಿ ಪ್ರಧಾನ ಕಾದಂಬರಿ ಆಧಾರಿತ ಸಿನಿಮಾ.
ಕನ್ನಡ ಸಿನಿಮಾಗಳಲ್ಲಿ ಅಮ್ಮ ಪ್ರಧಾನ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಕ್ಕಿಂತ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದೆ ಹೆಚ್ಚು. ಹಾಗೆ ನೋಡಿದಲ್ಲಿ ತಾಯಿ ಪ್ರಧಾನ ಪಾತ್ರದ ಸಿನಿಮಾಗಳ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ. ಕುಟುಂಬದ ಸದಸ್ಯರೆಲ್ಲ ಒಟ್ಟಾಗಿ ಕುಳಿತು ನೋಡುವಂಥ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದ ರಾಜಕುಮಾರ ಮತ್ತು ವಿಷ್ಣುವರ್ಧನ್ ಅವರಂಥ ಕೆಲವೇ ಕಲಾವಿದರ ಸಿನಿಮಾಗಳಲ್ಲಿ ಮಾತ್ರ ತಾಯಿ ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ ಎನ್ನುವ ಮಾತು ಸತ್ಯಕ್ಕೆ ಹತ್ತಿರವಾಗಿದೆ. ಇನ್ನು ಕೆಲವು ನಟರ ಸಿನಿಮಾಗಳಲ್ಲಿ ತಾಯಿ ಪಾತ್ರವನ್ನು ಗಯ್ಯಾಳಿಯಾಗಿಯೋ ಇಲ್ಲವೆ ಸೊಸೆಯ ಜೀವ ಹಿಂಡುವ ದುಷ್ಟ ಅತ್ತೆಯಾಗಿಯೋ ಚಿತ್ರಿತವಾದ ಉದಾಹರಣೆ ಇದೆ. ಇತ್ತೀಚಿನ ದಿನಗಳಲ್ಲಿ ಹಣಗಳಿಕೆಯೇ ಮುನ್ನೆಲೆಗೆ ಬರುತ್ತಿರುವುದರಿಂದ ನಾಯಕ ಪ್ರಧಾನ ಸಿನಿಮಾಗಳ ಅಬ್ಬರದ ನಡುವೆ ತಾಯಿ ಪಾತ್ರ ತನ್ನ ಮಹತ್ವವನ್ನು ಕಳೆದುಕೊಂಡು ಸಾಮಾನ್ಯ ಪೋಷಕ ಪಾತ್ರದಂತೆ ಚಿತ್ರಿತವಾಗುತ್ತಿದೆ.
No comments:
Post a Comment