Thursday, September 14, 2017

ಹೊನ್ನ ಕಣಜ: ವಿಭಿನ್ನ ಕಥೆಗಳ ಓದಿನ ಅಪೂರ್ವ ಅನುಭವ

           

         
           ಕಥಾ ಸಾಹಿತ್ಯದಲ್ಲಿ ‘ಪ್ರಜಾವಾಣಿ’ ಪತ್ರಿಕೆಯದು ಮಹತ್ವದ ಕೊಡುಗೆ. ಪ್ರತಿವರ್ಷ ಕಥಾಸ್ಪರ್ಧೆಯನ್ನು ಏರ್ಪಡಿಸಿ ಕಥೆಗಾರರನ್ನು ಗುರುತಿಸುವ ಪ್ರಜಾವಾಣಿಯ ಪ್ರಯತ್ನ ಶ್ಲಾಘನೀಯ. 1957 ರಿಂದ ಆರಂಭವಾದ ಈ ಪಯಣ ಇವತ್ತಿನವರೆಗೂ ನಿರಂತರವಾಗಿ ಮುನ್ನಡೆದುಕೊಂಡುಬಂದಿದೆ. ಪತ್ರಿಕೆಯ ಕಥಾಸ್ಪರ್ಧೆಯ ಮೂಲಕವೇ ಬೆಳಕಿಗೆ ಬಂದು ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿದ ಕಥೆಗಾರರ ಸಂಖ್ಯೆ ಕಡಿಮೆಯೇನಿಲ್ಲ. ಒಂದುಕಾಲದಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಕಥೆಗಾರರೇ ನಂತರದ ದಿನಗಳಲ್ಲಿ ತೀರ್ಪುಗಾರರಾಗುವ ಮಟ್ಟಕ್ಕೆ ಬೆಳೆದು ನಿಂತಿದ್ದು ಪ್ರತಿಭೆಯನ್ನು ಗುರುತಿಸುವ ಪ್ರಜಾವಾಣಿ ಪತ್ರಿಕೆಯ ಸಾಹಿತ್ಯ ಪ್ರೇಮಕ್ಕೊಂದು ನಿದರ್ಶನ. ಈ ಅರವತ್ತು ವರ್ಷಗಳ ಅವಧಿಯಲ್ಲಿ ಪ್ರಜಾವಾಣಿಯ ದೀಪಾವಳಿ ಕಥಾಸ್ಪರ್ಧೆಯಲ್ಲಿ ಆಯ್ಕೆಗೊಂಡು  ಬಹುಮಾನಿತ ಕಥೆಗಳೆಂಬ ಮಾನ್ಯತೆ ಪಡೆದ ಆ ಎಲ್ಲ ಕಥೆಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿ ಕನ್ನಡದ ಸಾಹಿತ್ಯಾಸಕ್ತರಿಗೆ ನೀಡುವ ಪ್ರಯತ್ನಕ್ಕೆ ಪ್ರಜಾವಾಣಿಯ ಸಂಪಾದಕ ಬಳಗ ಮುಂದಾಗಿದೆ. ಒಟ್ಟು ಮೂರು ಸಂಪುಟಗಳಲ್ಲಿ ಎಲ್ಲ ಕಥೆಗಳನ್ನು ಸಂಗ್ರಹಿಸಿ ಓದುಗರ ಕೈಗಿಡುವ ಆಶಯ ಈ ಸಂಪಾದಕ ಬಳಗದ್ದು. ಪ್ರಥಮ ಪ್ರಯತ್ನವಾಗಿ ‘ಹೊನ್ನ ಕಣಜ’ ಸಂಪುಟ ಒಂದು ಹೊರಬಂದು ಓದುಗರ ಕೈಸೇರಿದೆ. 1957 ರಿಂದ 2016 ರ ಅವಧಿಯಲ್ಲಿ ಪ್ರಕಟವಾದ 50 ಕಥೆಗಳು ಈ ಸಂಪುಟದಲ್ಲಿವೆ. ಪೂರ್ಣಚಂದ್ರ ತೇಜಸ್ವಿ, ಲಂಕೇಶ್, ರಾಮಚಂದ್ರ ಶರ್ಮ, ಭಾರತೀಸುತ, ಶ್ರೀಕೃಷ್ಣ ಆಲನಹಳ್ಳಿ, ವೈದೇಹಿ, ಜಯಂತ ಕಾಯ್ಕಿಣಿ, ವಿವೇಕ ಶಾನಭಾಗ, ಕೆ.ಟಿ.ಗಟ್ಟಿ, ದಿವಾಕರ್ ಅವರಂಥ ಖ್ಯಾತನಾಮರ ಕಥೆಗಳಿರುವುದು ಈ ಸಂಪುಟದ ವೈಶಿಷ್ಟ್ಯ. ಜೊತೆಗೆ ಶಾಂತಿ ಅಪ್ಪಣ್ಣ, ಕೆ.ಎಮ್.ರಶ್ಮಿ, ಟಿ.ಕೆ.ದಯಾನಂದ, ಕೆ.ಅಲಕಾರಂಥ ಯುವ ಕಥೆಗಾರರ ಕಥೆಗಳೂ ನಮ್ಮ ಓದಿಗೆ ದಕ್ಕುತ್ತವೆ. ಒಟ್ಟಿನಲ್ಲಿ ‘ಹೊನ್ನ ಕಣಜ’ದ ಈ ಪ್ರಥಮ ಸಂಪುಟ ನವ್ಯ, ನವೋದಯ, ಬಂಡಾಯ, ದಲಿತ ಈ ಎಲ್ಲ ಪ್ರಜ್ಞೆಗಳ ಪಾತಳಿಯಲ್ಲಿ ರೂಪುಗೊಂಡು ಕಥಾಸಾಹಿತ್ಯಾಸಕ್ತರಿಗೆ ಒಂದು ಅಧ್ಯಯನ ಗ್ರಂಥವಾಗಿಯೂ ಉಪಯೋಗಕ್ಕೆ ಬರುತ್ತದೆ. 

        ಸಂಪುಟದಲ್ಲಿನ ಎಲ್ಲ ಐವತ್ತು ಕಥೆಗಳು ವೈವಿಧ್ಯಮಯವಾಗಿರುವುದರಿಂದ ಒಂದು ಸಮೃದ್ಧ ಓದಿನ ಅನುಭವ ಓದುಗನದಾಗುತ್ತದೆ. ಕಥೆಗಳು ಸೃಷ್ಟಿಗೊಂಡ ಕಾಲಾವಧಿ ಸುಮಾರು ಆರು ದಶಕಗಳಿಗೆ ವಿಸ್ತರಿಸಿರುವುದರಿಂದ ಇಡೀ ಆರು ದಶಕಗಳ ಸಾಮಾಜಿಕ ಬದುಕು ಇಲ್ಲಿನ ಕಥೆಗಳಲ್ಲಿ ರೂಪುತಾಳಿದೆ. ಜೊತೆಗೆ ಇಲ್ಲಿನ ಎಲ್ಲ ಐವತ್ತು ಕಥೆಗಾರರು ನವ್ಯ, ನವೋದಯ, ಬಂಡಾಯ, ದಲಿತ ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಗುರುತಿಸಿಕೊಂಡಿರುವುದರಿಂದ ಕಥೆಗಳು ಒಂದಕ್ಕಿಂತ ಮತ್ತೊಂದು ವಿಭಿನ್ನವಾಗಿವೆ. ಮೊದಲ ಕಥೆ ‘ತಾಯಿ’ಯಿಂದ ಕೊನೆಯ ಕಥೆ ‘ಕತ್ತಲೆ ಮೌನ ಮತ್ತು’ವರೆಗಿನ ಕಥೆಗಳಲ್ಲಿ ಶೈಲಿ ಮತ್ತು ಕಥನ ಕಟ್ಟುವ ಕ್ರಮದಲ್ಲಿ ವೈವಿಧ್ಯತೆಯಿದ್ದರೂ ಎಲ್ಲ ಕಥೆಗಾರರ ಹುಡುಕಾಟ ಮಾತ್ರ ಮನುಷ್ಯ ಪ್ರೀತಿ ಹಾಗೂ ಜೀವನ ಪ್ರೀತಿಯೇ. 1958 ರಲ್ಲಿ ಪ್ರಕಟವಾದ ಪೂರ್ಣಚಂದ್ರ ತೇಜಸ್ವಿ ಅವರ ‘ಲಿಂಗಬಂದ’ ಕಥೆ ಮಲೆನಾಡಿನ ಮಳೆಗಾಲದ ದಟ್ಟ ಅನುಭವವನ್ನು ಕಟ್ಟಿಕೊಡುತ್ತದೆ. ಪ್ರಕೃತಿ ಪ್ರಿಯರಾದ ತೇಜಸ್ವಿ ಅವರ ಕಥೆಗಳಲ್ಲಿ ಪ್ರಕೃತಿ ಕೂಡ ಒಂದು ಪಾತ್ರವಾಗಿ ಕಾಣಿಸಿಕೊಳ್ಳುತ್ತದೆ ಎನ್ನುವುದು ಬಹುತೇಕ ವಿಮರ್ಶಕರ ಅನಿಸಿಕೆ. ಭೋರೆನ್ನುವ ಸದ್ದು ಮಾಡುವ ಗಾಳಿ, ಹೆಚಿಚಿನ ಮೇಲೆ ಸದ್ದು ಮಾಡುವ ಮಳೆ, ನಿರಂತರ ನಿನಾದ ಹುಟ್ಟಿಸುವ ಜೀರುಂಡೆಗಳು, ತೂಗಾಡುವ ತೆಂಗಿನ ಮರ ಹೀಗೆ ಇಡೀ ಪ್ರಕೃತಿಯೇ  ಪಾತ್ರವಾಗಿ ಮೂಡಿದ ಅನುಭವ ಓದುಗನದಾಗುತ್ತದೆ. ಮಲೆನಾಡಿನ ಮಳೆಗಾಲದ ರಾತ್ರಿಯನ್ನು ವರ್ಣಿಸುವಾಗ ತೇಜಸ್ವಿ ಅವರು ಭಾಷೆಯನ್ನು ಅತ್ಯಂತ ಸಶಕ್ತವಾಗಿ ದುಡಿಸಿಕೊಂಡಿರುವರು. ‘ಭರ್ರನೆ ಬೀಸಿದ ಗಾಳಿಗೆ ದೀಪ ತೂರಾಡಿ ಇನ್ನೇನು ಆರಿಯೇ  ಹೋಯಿತು ಎನ್ನುವಚಿತಾಗಿ ಮತ್ತೆ ಕುಣಿ ಕುಣಿದು ಉರಿಯತೊಡಗಿತು’ ಇಂಥ ಸಾಲುಗಳನ್ನು ಓದುವುದೇ ಒಂದು ಅಪೂರ್ವ ಅನುಭವವಾಗಿ ಕಥೆ ಓದುಗನ ಪ್ರಜ್ಞೆಯನ್ನು ಪ್ರವೇಶಿಸುತ್ತದೆ.

          ಪಿ.ಲಂಕೇಶ್ ಅವರ ‘ನಾನಲ್ಲ’ ಕಥೆ ನಾವು ಬದುಕುತ್ತಿರುವ ವ್ಯವಸ್ಥೆಯ ಕ್ರೌರ್ಯವನ್ನು ಅನಾವರಣಗೊಳಿಸುತ್ತದೆ. ಈ ಬದುಕಿನ ಧಾವಂತದಲ್ಲಿ ನಮ್ಮ ನಮ್ಮ ಬದುಕಷ್ಟೇ ಮುಖ್ಯವಾಗುತ್ತಿರುವಾಗ ಮನುಷ್ಯನೆನಿಸಿಕೊಂಡ ಪ್ರಾಣಿ ಮನುಷ್ಯತ್ವವನ್ನು ಕಳೆದುಕೊಂಡು ಮುಖವಾಡ ಧರಿಸಿ ಬದುಕುತ್ತಿರುವ ಎನ್ನುವುದನ್ನು ಕಥೆ ಅರ್ಥಪೂರ್ಣವಾಗಿ ಧ್ವನಿಸುತ್ತದೆ. ರಸ್ತೆಯ ಮೇಲೆ ಅನಾಥವಾಗಿ ಬಿದ್ದ ಹೆಣವನ್ನು ನೋಡದಷ್ಟೂ ಮನುಷ್ಯ ಸಂಬಂಧಗಳು ಜಾಳು ಜಾಳಾಗಿವೆ ಎನ್ನುವುದನ್ನು ಲಂಕೇಶ್ ತಮ್ಮ ಎಂದಿನ ವ್ಯಂಗ್ಯದಲ್ಲಿ ಹೀಗೆ ಹೇಳುತ್ತಾರೆ ‘ಮನೆಯಲ್ಲಿ ಇದ್ದದ್ದು ತಿಂದು, ಆಫೀಸಿನಲ್ಲಿ ವಿಧೇಯವಾಗಿ ದುಡಿದು, ಭಾರತದ ಸತ್ಪ್ರಜೆ ಅನ್ನಿಸಿಕೊಳ್ಳುವುದು ಬಿಟ್ಟು ಆ ಹೆಣದ ಹತ್ತಿರ ಏಕೆ ಹೋಗೋಣ ಎನ್ನುವಂತೆ ಹೋಗುತ್ತಿದ್ದ ಜನ’. 

          ಅಪ್ಪ ಅಮ್ಮನ ತೀರ ಸಂಪ್ರದಾಯ ಮತ್ತು ದೈವಭಕ್ತಿಯ ನಡುವೆ ಸಿಲುಕಿ ನಲುಗುವ ಹೆಣ್ಣೊಬ್ಬಳ ಕಥೆಯನ್ನು ಎಸ್.ದಿವಾಕರರ ‘ಕ್ರೌರ್ಯ’ ಅತ್ಯಂತ ಆರ್ದ್ರವಾಗಿ ಕಟ್ಟಿಕೊಡುತ್ತದೆ. ಮೂವತ್ತಾರು ವರ್ಷವಾದರೂ ಇನ್ನು ಮದುವೆಯಾಗದ ಅಲಮೇಲುಗೆ ಮನೆಯೇ  ಜೈಲಾಗಿದೆ. ಹುಟ್ಟಿದೊಡನೆ ಪೋಲಿಯೊ  ರೋಗಕ್ಕೆ ತುತ್ತಾಗಿ ಹೆಳವಳಾದ ಅಲಮೇಲು ಕಣ್ಮನ ಸೆಳೆಯುವ ಹುಡುಗಿಯೇನೂ ಅಲ್ಲ. ಇಂಥ ಅಲಮೇಲುವೂ ಪ್ರೇಮಪಾಶದಲ್ಲಿ ಸಿಕ್ಕಿಬಿದ್ದಿದ್ದಳು. ಅದು ಒಂದಲ್ಲ ಎರಡು ಸಲ. ಒಮ್ಮೆ ರಾಮಾನುಜ ಇನ್ನೊಮ್ಮೆ ಮೆಳ್ಳುಗಣ್ಣಿನ ಕುಳ್ಳ ಅವಳ ಬದುಕಲ್ಲಿ ಪ್ರವೇಶಿಸಿ ಅಲಮೇಲುವಿನಲ್ಲಿ ಪ್ರೇಮದ ನವಿರು ಭಾವನೆ ಮೂಡಿಸಿದ್ದರು. ನನ್ನನ್ನೂ ಪ್ರೀತಿಸುವವರಿದ್ದಾರೆ ಎನ್ನುವ ಭಾವವೇ ಮೆಳ್ಳುಗಣ್ಣಿನ ಹುಡುಗನನ್ನು ಹುಡುಕಿಕೊಂಡು ಅಲಮೇಲುವನ್ನು ಆ ಕೊಳಚೆಗೇರಿಗೆ ಕರೆದೊಯ್ಯುತ್ತದೆ. ಪ್ರೀತಿಯನ್ನು ಅರಸಿ ಹೋದವಳು ಅನಿರೀಕ್ಷಿತವಾಗಿ ನಡೆದ ಘಟನೆಯೊಂದರಲ್ಲಿ ಚೂರಿ ಇರಿತಕ್ಕೆ ಒಳಗಾಗಿ ನಡು ರಸ್ತೆಯಲ್ಲೇ ಪಳನಿಚಾಮಿಯ ಬತ್ತಲೆದೆಗೆ ಒರಗಿ ಕೂತಿದ್ದಾಳೆ. ಆ ಸಾವಿನ ಘಳಿಗೆಯಲ್ಲೂ ಅಲಮೇಲುಗೆ ಪಳನಿಚಾಮಿಯ ಕಣ್ಣುಗಳಲ್ಲಿ ಕರುಣೆ, ಧ್ವನಿಯಲ್ಲಿ ಅನುಕಂಪ ಕಾಣಿಸುತ್ತದೆ. ಪ್ರೀತಿಯ ಹುಡುಕಾಟದಲ್ಲೇ ಕ್ರೌರ್ಯಕ್ಕೆ ಬಲಿಯಾಗುವ ಅಲಮೇಲುವಿನ ಕಥೆ ಓದುಗರ ಅಂತ:ಕರಣವನ್ನು ತಟ್ಟುತ್ತದೆ. 

           ನಾ.ಮೊಗಸಾಲೆ ಅವರ ‘ಕಿಡ್ನಿ’ಯಲ್ಲಿ ರಾಜಕೀಯದ ಹಿತಾಸಕ್ತಿಗೆ ಬಲಿಯಾಗುವ ದಲಿತ ಯುವಕನೋರ್ವನ ಕಥೆಯಿದೆ. ವಿಡಂಬನೆ ಮತ್ತು ನವಿರು ಹಾಸ್ಯದಿಂದ ಕಥೆ ಓದುಗನಿಗೆ ತೀರ ಆಪ್ತವಾಗುತ್ತದೆ. ಒಂದು ಕಾಲದಲ್ಲಿ ಆಪ್ತರಾಗಿದ್ದ ಹಲಗೆಪ್ಪ ಮತ್ತು ತಗಡಪ್ಪ ರಾಜಕೀಯದ ಚದುರಂಗದಾಟಕ್ಕೆ ಸಿಕ್ಕು ಈಗ ಹಾವು ಮುಂಗೂಸಿಯಂತಾಗಿದ್ದಾರೆ. ಈ ನಡುವೆ ಹಲಗೆಪ್ಪ ತನ್ನ ಮನೆಯ ಜೀತದಾಳು ಹರಿಜನ ಪರ್ದೇಶಿಯ ಮಗ ಗುಡ್ಡನ ಕಿಡ್ನಿಯನ್ನು ಯಾರಿಗೂ ತಿಳಿಯದಂತೆ ತನ್ನ ಹೆಂಡತಿಗೆ ಕಸಿ ಮಾಡಿಸಿದ್ದಾನೆ. ವಿಷಯ ಹೇಗೋ ತಗಡಪ್ಪನಿಗೆ ಗೊತ್ತಾಗಿದೆ. ಹಲಗೆಪ್ಪನನ್ನು ರಾಜಕೀಯವಾಗಿ ಮುಗಿಸಲು ತಗಡಪ್ಪ ದಲಿತ ಹುಡುಗ ಗುಡ್ಡನಿಗಾದ ಅನ್ಯಾಯವನ್ನು ದಾಳವಾಗಿ ಉಪಯೋಗಿಸುತ್ತಾನೆ. ದಲಿತ ಯುವಕ ಸಿದ್ದಪ್ಪನನ್ನು ಮುಂದಿಟ್ಟುಕೊಂಡು ಮೆರವಣಿಗೆ ಮಾಡುವ ತಗಡಪ್ಪನ ಯೋಜನೆಯನ್ನು ಹಲಗೆಪ್ಪ ದಲಿತ ಯುವಕನನ್ನೇ ಮುಂದಿಟ್ಟುಕೊಂಡು ವಿಫಲಗೊಳಿಸುತ್ತಾನೆ. ಒಂದು ಸಮುದಾಯದ ಜನರನ್ನು ದಾಳವಾಗಿ ಬಳಸಿಕೊಂಡು ರಾಜಕೀಯವಾಗಿ ಬೆಳೆಯುವುದನ್ನು ಕಥೆ ವಿಡಂಬನಾತ್ಮಕವಾಗಿ ಹೇಳುತ್ತದೆ. ‘ಥೂ ಗಂಡಸಿನ ಬೀಜವನ್ನು ಹೊಟ್ಟೆಯೊಳಗಿಟ್ಟು ಹೆಂಗಸೇಕೆ ಬದುಕಬೇಕು?’ ಎನ್ನುವ ಹೆಂಗಸರ ಮಾತು, ತನ್ನ ಮಗನ ತರಡುಬೇಳೆಯನ್ನೇ ಕಿತ್ತು ಗುಡ್ಡನ ಪುಂಸತ್ವವನ್ನೇ ಧನಿಗಳು ತೆಗೆದರಲ್ಲ ಎನ್ನುವ ಪರ್ದೇಶಿಯ ಸಿಟ್ಟು ಆ ಕ್ಷಣಕ್ಕೆ ಅನಕ್ಷರಸ್ಥರ ಅಮಾಯಕತೆಯನ್ನು ಪ್ರತಿಬಿಂಬಿಸುತ್ತವೆ. 

           ಮುಖವಾಡವನ್ನು ಕಳಚಿ ಅದರ ಹಿಂದಿನ ನಿಜವಾದ ಮುಖಗಳನ್ನು ಅನಾವರಣಗೊಳಿಸುವ ಬಿ.ಎಲ್.ವೇಣು ಅವರ ‘ಸುಡುಗಾಡು ಸಿದ್ದನ ಪ್ರಸಂಗ’ ಈ ಸಂಪುಟದ ಮಹತ್ವಪೂರ್ಣ ಕಥೆಗಳಲ್ಲೊಂದು. ಮನುಷ್ಯ ಸಂಪರ್ಕದಿಂದ ದೂರಾಗಿ ಸ್ಮಶಾನದಲ್ಲಿ ವಾಸಿಸುತ್ತಿರುವ ಸಿದ್ದನಿಗೆ ಸಂಗಾತಿಯಾಗಿ ಜುಂಜಿ ಎನ್ನುವ ಹೆಣ್ಣುಜೀವವಿದೆ ಮತ್ತು ಅವರಿಬ್ಬರಿಗೂ ಹುಟ್ಟಿದ ಆರುವರ್ಷದ ಮಗುವಿದೆ. ಚಿಕ್ಕವನಿರುವಾಗಲೆ ಮನೆಬಿಟ್ಟು ಓಡಿಬಂದು ಭೈರನ ಪರಿಚಯವಾಗಿ ಸ್ಮಶಾನ ಸೇರಿದ ಸಿದ್ದನದು ಸ್ಥಿತಪ್ರಜ್ಞ ಮನೋಭಾವ. ಬೆಂಕಿಭೈರ ಸತ್ತಮೇಲೆ ಈಗ ಇಡೀ ಸ್ಮಶಾನದ ಉಸ್ತುವಾರಿ ಸಿದ್ದನದೇ. ಸಿದ್ದನಲ್ಲೂ ಒಂದು ನಿಯತ್ತಿದೆ. ಬಡವರ ಮನೆಯ ಶವವೆಂದು ತಿಳಿದಾಗ ಹೆಚ್ಚು ಕಾಸಿಗಾಗಿ ಗುಂಜಾಡುವುದಿಲ್ಲ. ಕಥೆಯ ಕೊನೆಯ ಭಾಗದಲ್ಲಿ ಮೇಷ್ಟ್ರೊಬ್ಬರ ಶವಸಂಸ್ಕಾರದ ಸನ್ನಿವೇಶ ಸಿದ್ದನ ಪೂರ್ವಾಪರವನ್ನು ಓದುಗರಿಗೆ ಪರಿಚಯಿಸುತ್ತದೆ. ಜೊತೆಗೆ ಲೇಖಕರು ಈ ಸಂದರ್ಭ ಮೇಷ್ಟ್ರ ಸುಶಿಕ್ಷಿತ ಮಕ್ಕಳ ಸಂಕುಚಿತ ಮನಸ್ಸುಗಳನ್ನು ಅನಾವರಣಗೊಳಿಸಿ ಮುಖವಾಡಗಳನ್ನು ಕಳಿಚಿ ಹಾಕುತ್ತಾರೆ.  
      ಕೆಲವೊಮ್ಮೆ ಲೇಖಕರು ತಮ್ಮ ಕಥೆ, ಕಾದಂಬರಿಗಳಲ್ಲಿ ಗ್ರಾಂಥಿಕ ಭಾಷೆಗೆ ಬದಲು ಗ್ರಾಮ್ಯಭಾಷೆಯನ್ನು ಬಳಸಿಕೊಳ್ಳುವುದುಂಟು. ರಷ್ಯನ್ ಕಥನಶಾಸ್ತ್ರಜ್ಞರು ವಾದಿಸುವಂತೆ ಗ್ರಾಂಥಿಕ ಭಾಷೆ ಅತಿಯಾದ ಶಿಷ್ಟಾಚಾರದಿಂದಾಗಿ ತನ್ನ ಧ್ವನಿಶಕ್ತಿಯನ್ನು ಕಳೆದುಕೊಂಡಿರುತ್ತದೆ. ಆದ್ದರಿಂದ ಲೇಖಕ ತನ್ನ ಕಥೆ, ಕಾದಂಬರಿಯಲ್ಲಿನ ಭಾಷೆಗೆ ಧ್ವನಿಶಕ್ತಿಯನ್ನು ನೀಡಲು ಭಾಷೆಯನ್ನು ಅಪರಿಚಿತಗೊಳಿಸುತ್ತಾನೆ (defamiliarization). ಆಗ ಆತ ಈ ಗ್ರಾಮ್ಯಭಾಷೆ (regional dialect) ಅಥವಾ ಸಮುದಾಯದ ಭಾಷೆ (caste dialect) ಬಳಸಿಕೊಳ್ಳುತ್ತಾನೆ. ಭೈರಪ್ಪನವರು ತಮ್ಮ ಕಾದಂಬರಿಗಳಲ್ಲಿನ ಪಾತ್ರಗಳ ಸಂಭಾಷಣೆಗಾಗಿ ಹಾಸನ ಸೀಮೆಯ ಭಾಷೆಯನ್ನೇ ಬಳಸಿಕೊಳ್ಳುವುದು ಇದೇ ಕಾರಣದಿಂದ. ಭಾಷೆಗೆ ಧ್ವನಿಶಕ್ತಿಯನ್ನು ನೀಡಲು ದೇವನೂರ ಮಹಾದೇವ ‘ಸಂಬಂಧ ದೊಡ್ಡದು’ ಎನ್ನುವ ಗ್ರಾಂಥಿಕ ಕನ್ನಡವನ್ನು ‘ಸಂಬಂಜ ಅನ್ನೊದು ದೊಡ್ಡದು ಕನಾ’ ಎಂದು ಗ್ರಾಮ್ಯ ಕನ್ನಡವಾಗಿಸುತ್ತಾರೆ. ‘ಹೊನ್ನ ಕಣಜ’ದ ಈ ಸಂಪುಟದಲ್ಲಿ ಅನೇಕ ಕಥೆಗಾರರು ಕಥನ ಕಟ್ಟುವಿಕೆಯಲ್ಲಿ ಗ್ರಾಮೀಣ ಭಾಷೆಯನ್ನು ಸಶಕ್ತವಾಗಿ ದುಡಿಸಿಕೊಂಡಿರುವರು. ಮಲೆನಾಡ ಸೀಮೆಯ, ದಕ್ಷಿಣ ಕನ್ನಡದ, ಕರಾವಳಿ ತೀರದ, ಉತ್ತರ ಕರ್ನಾಟಕದ ಗ್ರಾಮ್ಯ ಭಾಷೆಗಳು ಅನೇಕ ಕಥೆಗಳಲ್ಲಿ ಭಾಷೆಗೆ ಧ್ವನಿಶಕ್ತಿಯನ್ನು ನೀಡಿವೆ. ಕಥೆಗಳಲ್ಲಿನ ಗ್ರಾಮೀಣ ಭಾಷೆಯ ಸೊಗಡು ಈ ಕೆಳಗಿನ ಸಾಲುಗಳನ್ನು ಓದಿದಾಗ ಅನುಭವಕ್ಕೆ ಬರುತ್ತದೆ.

● ನೀ ಎಲ್ಲೆರೆ ಒಗಿ ಆಕಿನ್ನ ಆದರ ನಾ ಕೂತ ಟೊಂಗಿಗೆ ಶಿಕ್ಕೊಳ್ಳಾರಧಂಗ ಮಾಡು. ಈ ಟೊಂಗಿ ಭಾಳ ತ್ರಾಸಿಂದದನೋ ಬಾಳಾ (ಘಟಿತ).
● ಬ್ಯಾಡವ್ವೊ ನಾ ಸತ್ರ ಇಲ್ಲೆ ಸಾಯ್ಬೇಕು. ನೀ ಓಡಿಬುಡು ನಾ ಸತ್ನೆಂತ ತಿಳಕಂಡು ಬುಡು. ಪಾಲಿಗೆ ಬಂದದ್ದು ಯಾರ ತಪ್ಸತಾರ (ಉಡಿಯಲ್ಲಿಯ ಉರಿ).
● ಯಾರ ಏನು ಅನ್ನಲ್ಲಕನ. ಯಾಕಂದಾರೊ ಅಂತೀನಿ? ಯಾರಂಗ್ರಾಣೇಲೂ ಬದುಕ್ತಾ ಇಲ್ಲ (ಸುಗ್ಗಿ).
● ಬಿದ್ದ ನೆಲ ಹಿಡದೇ ಏಳಬೇಕ ಮಗಾ (ಕಡಿತನಕಾ ಕಾಯೋ ಅಭಿಮಾನ).
● ಆಕಾಶದ ಚಿಕ್ಕಿಗಳಿಗೆ ಒಮ್ಮೆಲೇ ಏಣಿ ಹತ್ತಿ ಮುಟ್ಟಲಿಕ್ಕೆ ಆಗತೈತಿ ಏನು? (ದಿಂಡೀ).
● ಹೊತ್ತ ಹೋಪಲ್ಲೆ ಬೇಕಾದ್ರೆ ಒಂದಿಷ್ಟು ಭಸ್ಮ, ಚೀಟು ಮಾಡದು ಕಲಿತ್ಗ. ಗುಡ್ಡೆ ಮೇಲಿಪ್ಪ ಯಾವ್ಯಾವ ನಾರು, ಬೇರು ಎಂತಕ್ಕೆ ಬೇಕು ಹೇಳಿ ತಿಳ್ಕ. ನಾಕು ಜನಕ್ಕೆ ಉಪಕಾರಾದ್ರೂ ಆಗ್ತು (ಎರವಿನೊಡವೆ).

             ಈ ಸಂಪುಟದಲ್ಲಿ ಹನ್ನೆರದು ಲೇಖಕಿಯರು ಬರೆದ ಕಥೆಗಳಿರುವುದು ಕಥಾಸಂಕಲನದ ವಿಶೇಷತೆಗಳಲ್ಲೊಂದು. ಬದಲಾದ ಕಾಲಘಟ್ಟದಲ್ಲಿ ಪುರುಷರಷ್ಟೇ ಮಹಿಳೆಯರೂ ಬರವಣಿಗೆಯನ್ನು ಒಂದು ಅಭಿವ್ಯಕ್ತಿ ಮಾಧ್ಯಮವಾಗಿ ಬಳಸಿಕೊಂಡು ಸಾಹಿತ್ಯ ಕ್ಷೇತ್ರದಲ್ಲಿ ಮುನ್ನೆಲೆಗೆ ಬಂದಿರುವರು. ಮಹಿಳಾ ಸಾಹಿತ್ಯವೆನ್ನುವುದು ಅಡುಗೆ ಮನೆಯ ಸಾಹಿತ್ಯವೆಂದು ಗೇಲಿ ಮಾಡುತ್ತಿದ್ದ ಪುರುಷ ಲೇಖಕ ಬಣದ ತಿರಸ್ಕಾರವನ್ನೇ ಸವಾಲಾಗಿ ತೆಗೆದುಕೊಂಡು ಲೇಖಕಿಯರು ಸಮಾಜದ ಅನೇಕ ಸಮಸ್ಯೆಗಳಿಗೆ ಮುಖಾಮುಖಿಯಾಗುತ್ತ ಪ್ರವರ್ಧಮಾನಕ್ಕೆ ಬಂದದ್ದು ಅದೊಂದು ಆಶಾದಾಯಕ ಬೆಳವಣಿಗೆ ಎನ್ನಬಹುದು. ಈ ಸಂಪುಟದ ಆರಂಭದ ನಾಲ್ಕು ದಶಕಗಳ 33 ಕಥೆಗಳಲ್ಲಿ ಕೇವಲ ಎರಡು ಕಥೆಗಳು ಮಾತ್ರ ಲೇಖಕಿಯರು ಬರೆದವುಗಳಾದರೆ ನಂತರದ ಎರಡು ದಶಕಗಳ (1997-2016) ಹದಿನೇಳು ಕಥೆಗಳಲ್ಲಿ ಹತ್ತು ಲೇಖಕಿಯರ ಕಥೆಗಳಿರುವುದು ಮಹಿಳಾ ಸಾಹಿತ್ಯದ ಸಮೃದ್ಧ ಬೆಳವಣಿಗೆಯನ್ನು ಬಿಂಬಿಸುತ್ತದೆ. ನಾಗವೇಣಿ, ಜಯಶ್ರೀ ದೇಶಪಾಂಡೆ, ಅಲಕ ತೀರ್ಥಹಳ್ಳಿ, ಕಸ್ತೂರಿ ಬಾಯಿರಿ, ಕೆ.ಎ.ಶಾಂತಿ, ಕವಿತಾ ರೈ, ವಿನಯಾ, ಪ್ರಜ್ಞಾ ಮತ್ತಿಹಳ್ಳಿ ಮುಂತಾದ ಲೇಖಕಿಯರು ಮಹಿಳಾ ಸಾಹಿತ್ಯದ ಸಿದ್ಧಸೂತ್ರವನ್ನು ಮುರಿದು ಹೊಸ ಹುಡುಕಾಟದಲ್ಲಿ ತೊಡಗಿರುವುದು ಕನ್ನಡ ಸಾಹಿತ್ಯದ ಮಹತ್ವದ ಬೆಳವಣಿಗೆಗಳಲ್ಲೊಂದು. ಆದರೆ ಈ ಸಂದರ್ಭ ಈ ಕಿರಿಯ ಲೇಖಕಿಯರಿಗೆ ಬದುಕಿನ ಅನೇಕ ಸ್ಥಿತ್ಯಂತರಗಳಿಗೆ ಮುಖಮಾಡಿ ನಿಂತು ಅಭಿವ್ಯಕ್ತಿಸಲು ಒಂದು ವೇದಿಕೆಯನ್ನು ನಿರ್ಮಿಸಿಕೊಟ್ಟಿದ್ದು ಹಿರಿಯ ಲೇಖಕಿಯರಾದ ಗೀತಾ ನಾಗಭೂಷಣ, ವೈದೇಹಿ, ಸಾರಾ ಅಬೂಬಕ್ಕರ ಎನ್ನುವುದನ್ನು ಮರೆಯಬಾರದು. 

        ಹೊನ್ನ ಕಣಜದ ಎಲ್ಲ ಹನ್ನೆರಡು ಲೇಖಕಿಯರ ಕಥೆಗಳಲ್ಲಿ ಎಂಟು ಕಥೆಗಳು ಮಹಿಳಾ ಸಂವೇದನೆಯನ್ನು ಅಭಿವ್ಯಕ್ತಗೊಳಿಸುತ್ತವೆ. ‘ಕೃಷ್ಣಾ ಮೂರ್ತಿ ಕಣ್ಣಾಮುಂದೆ’ಯ ಭಾಗೀರಥಿ, ‘ಘಟಿತ’ದ ಮೀನಾಕ್ಷಿ, ‘ಕಡಿತನಕಾ ಕಾಯೋ ಅಭಿಮಾನ’ದ ಕರಿಯಮ್ಮ, ‘ದಿಂಡೀ’ಯ ದ್ಯಾಮವ್ವ, ‘ನಾಟಿ ಓಟ’ದ ದೇವಣಿ, ‘ಅದು’ವಿನ ಸಾವಿ, ‘ತುದಿ ಬೆಟ್ಟದ ನೀರ ಹಾಡು’ದ ಸುಬೋಧಿನಿ ಇವರೆಲ್ಲ ಒಂದಲ್ಲ ಒಂದು ಹಂತದಲ್ಲಿ ಬದುಕಿನಲ್ಲಿ ಶೋಷಣೆಗೆ ಒಳಗಾದವರೇ. ಆ ಶೋಷಣೆಯನ್ನು ಎದುರಿಸಿ ಹೊರಬಂದು ಹೊಸ ಬದುಕನ್ನು ಕಟ್ಟಿಕೊಳ್ಳುವುದು ಕಥೆ ಮುಂದೆ ಮತ್ತೆಲ್ಲೋ ಬೆಳೆಯುವ ಮುನ್ಸೂಚನೆಯಾಗಿ ಕಾಣಿಸುತ್ತದೆ. ಈ ಕಥಾ ಸಂಕಲನದಲ್ಲಿ ಲೇಖಕಿಯರು ಸೃಷ್ಟಿಸಿದ ಪಾತ್ರಗಳಲ್ಲಿ ದೇವಣಿ, ಕರಿಯಮ್ಮ, ದ್ಯಾಮವ್ವ, ಸುಬೋಧಿನಿ ಪಾತ್ರಗಳು ಸಮಸ್ಯೆಗಳನ್ನು ದಿಟ್ಟವಾಗಿ ಎದುರಿಸುವುದರ ಮೂಲಕ ಓದುಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಗುತ್ತವೆ. ಜಯಶ್ರೀ ದೇಶಪಾಂಡೆ ಅವರ ‘ಘಟಿತ’ದ ಮೀನಾಕ್ಷಿ ಕಥೆಯ ಕೇಂದ್ರ ಪಾತ್ರವಾದರೂ ಆಕೆ ಭೌತಿಕವಾಗಿ ಕಾಣಿಸಿಕೊಳ್ಳುವುದು ಕಡಿಮೆ. ಕಥೆಯ ಮುಖ್ಯ ಸಮಸ್ಯೆ ಮೀನಾಕ್ಷಿ ಸಂಬಂಧಿಸಿದ್ದಾಗಿದ್ದರೂ ಆ ಸಮಸ್ಯೆಯಿಂದ ಅವಳನ್ನು ಬಿಡಿಸುವ ರಾಜಣ್ಣನೇ ಮುನ್ನೆಲೆಗೆ ಬರುವುದು ಕಥೆಯ ತೀವ್ರತೆಯನ್ನು ಸರಳಗೊಳಿಸುತ್ತದೆ. ನಾಗವೇಣಿ, ಶಾಂತಿ ಅಪ್ಪಣ್ಣ, ಅಲಕಾ ತೀರ್ಥಹಳ್ಳಿ ಈ ಕಥೆಗಾರ್ತಿಯರು ಮಹಿಳಾ ಶೋಷಣೆಯ ಪರಿಧಿಯಿಂದ ಹೊರಬಂದು ತಮ್ಮ ಕಥೆಗಳಲ್ಲಿ ಹೊಸ ಅನ್ವೇಷಣೆಗೆ ತೊಡಗುವುದು ಬದಲಾಗುತ್ತಿರುವ ಮಹಿಳಾ ಸಾಹಿತ್ಯಕ್ಕೆ ದಿಕ್ಸೂಚಿಯಾಗಿ ಕಾಣಿಸುತ್ತದೆ. 

     ಕಥೆ ಬರೆಯುತ್ತಿರುವ ಘಳಿಗೆ ಕಥೆಗಾರ ಓದುಗರನ್ನು ಕುತೂಹಲಿಗಳನ್ನಾಗಿಸಲು ತಂತ್ರದ ಮೊರೆ ಹೋಗುವುದು ಅನಿವಾರ್ಯವಾಗುತ್ತದೆ. ಇದೊಂದು ಓದುಗರನ್ನು ಸಂಪೂರ್ಣವಾಗಿ ಕಥೆಯ ಓದಿನಲ್ಲಿ ತಲ್ಲೀನಗೊಳಿಸುವ ಸೃಜನಶೀಲ ಪ್ರಕ್ರಿಯೆ.  ಆದ್ದರಿಂದ ಬಹಳಷ್ಟು ಕಥೆಗಾರರು ಕಥೆಯ ಆರಂಭದಲ್ಲೇ ತಂತ್ರವನ್ನು ಬಳಸಿಕೊಂಡು ಓದುಗರ ಆಸಕ್ತಿ ಕೆರಳಿಸುವಲ್ಲಿ ಯಶಸ್ವಿಯಾಗುತ್ತಾರೆ. ಹೊನ್ನ ಕಣಜದ ಈ ಸಂಪುಟದಲ್ಲಿ ಕೆಲವು ಕಥೆಗಾರರು ಇಂಥ ತಂತ್ರದ ಮೊರೆ ಹೋಗಿರುವುದು ಓದುಗರ ಅನುಭವಕ್ಕೆ ಬರುತ್ತದೆ. ಉದಾಹರಣೆಗೆ ನಾಗವೇಣಿ ಅವರ ‘ಒಡಲು’ ಕಥೆ ಆರಂಭವಾಗುವುದು ಹೀಗೆ ‘ಸೈಯದ್ದಿ ಆ ಊರು ಬಿಡುವ ನಿರ್ಧಾರಕ್ಕೆ ಬಂದೇ ಬಿಟ್ಟ. ಹೆಂಡತಿ ನಫೀಸಮ್ಮ ತನ್ನ ಒಡಲೊಳಗಿನ ಅಸಂಖ್ಯ ಭಾವನೆಗಳನ್ನು ಅದುಮಿಡಲು ಪ್ರಯತ್ನಿಸುತ್ತ ಸೊಂಟದಲ್ಲಿದ್ದ ಕೇಶವನಿಗೆ ಅಕ್ಕಿ ಪುಂಡಿ ತಿನ್ನಿಸುತ್ತಿದ್ದಳು. ಅಮ್ಮನ ದುಖ: ದುಗುಡಗಳ ಅರಿವಿಲ್ಲದ ಉಮ್ಮರ ಸಂಭ್ರಮದಿಂದ ಪುಟ್ಟ ಪುಟ್ಟ ಹೆಜ್ಜೆಯಿಡುತ್ತ ಓಡಾಡುತ್ತಿದ್ದ’. ಹೀಗೆ ಆರಂಭವಾಗುವ ಕಥೆ ಕೇಶವ ಎನ್ನುವ ಹೆಸರಿನೊಂದಿಗೆ ಓದುಗರಲ್ಲಿ ಕಥೆ ಕುರಿತು ಆಸಕ್ತಿಯನ್ನು ಹುಟ್ಟಿಸುತ್ತದೆ. ಶ್ರೀಕೃಷ್ಣ ಆಲನಹಳ್ಳಿ ಅವರ ‘ತೊರೆ ಬತ್ತಿರಲಿಲ್ಲ’ ಕಥೆಯನ್ನೂ ಇಂಥದ್ದೊಂದು ತಂತ್ರಕ್ಕೆ ಉದಾಹರಣೆಯಾಗಿ ಹೇಳಬಹುದು. ‘ಮಸಿ ಹಿಡಿದಿದ್ದ ದೀಪದ ಗಾಜನ್ನು ಬೂದಿಯಿಂದ ಉಜ್ಜಿ ಒರಸುತ್ತಿದ್ದ ಲಕ್ಷ್ಮಿಗೆ ನೆನ್ನೆ ಸಂಜೆ ಭಾವ ಹೇಳಿದ್ದು ಧುತ್ತೆಂದು ನೆನಪಾಯಿತು’ ಎನ್ನುವ ಆರಂಭದ ಸಾಲುಗಳನ್ನು ಓದುತ್ತಿದ್ದಂತೆ ಓದುಗ ಕಥೆಯ ಮುಂದಿನ ಸಾಲುಗಳಿಗೆ ಸಲೀಸಾಗಿ ಪಯಣಿಸುತ್ತಾನೆ. 

        ಒಟ್ಟಾರೆ ‘ಹೊನ್ನ ಕಣಜ’ ವಿಭಿನ್ನ ಕಥೆಗಳ ಓದಿನ ಒಂದು ಅಪೂರ್ವ ಅನುಭವ. ಆರು ದಶಕಗಳ ಅವಧಿಯಲ್ಲಿನ ವಿವಿಧ ಲೇಖಕರ ಕಥೆಗಳನ್ನು ಓದುವುದೇ ಒಂದು ಸಂಭ್ರಮ. ಕಥಾಸಾಹಿತ್ಯವೆನ್ನುವುದು ವಿವಿಧ ಕಾಲಘಟ್ಟದಲ್ಲಿ ಹೊಸ ಹೊಸ ಪ್ರಯೋಗಗಳಿಗೆ ತನ್ನನ್ನು ಒಡ್ಡಿಕೊಳ್ಳುತ್ತಲೇ ಬಂದಿದೆ. ಕಥನ ಕಟ್ಟುವ ಕ್ರಮ, ಶೈಲಿ, ಭಾಷೆಯನ್ನು ದುಡಿಸಿಕೊಳ್ಳುವ ಸೃಜನಶೀಲತೆ, ಕಥಾವಸ್ತುವಿನ ಆಯ್ಕೆ  ಹೀಗೆ ಅನೇಕ ಬದಲಾವಣೆಗಳನ್ನು ನಾವು ಕಥಾಸಾಹಿತ್ಯದಲ್ಲಿ ಕಾಣುತ್ತೇವೆ. ಆ ಎಲ್ಲ ಬದಲಾವಣೆಗಳನ್ನು ಇಡಿಯಾಗಿ ಒಂದೇ ಕೃತಿಯಲ್ಲಿ ಕಟ್ಟಿಕೊಟ್ಟಿರುವುದು ನಿಜವಾಗಿಯೂ ಅದೊಂದು ಸಾರ್ಥಕ ಕೆಲಸ. ಸಾಹಿತ್ಯಾಸಕ್ತರು ಮುಂದಿನ ಎರಡು ಸಂಪುಟಗಳಿಗಾಗಿ ಎದುರು ನೋಡುತ್ತಿರುವುದು ಅದು ಪ್ರಜಾವಾಣಿಯ ಕಥಾಸ್ಪರ್ಧೆಯ ಮಹತ್ವ ಮತ್ತು ಕಾಣ್ಕೆಗೆ ಪುರಾವೆಯಾಗಿದೆ.

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 


Friday, August 4, 2017

ಸಿನಿಮಾ ಮತ್ತು ವಾಸ್ತವಿಕ ಪ್ರಜ್ಞೆ

            ‘ನಿರ್ದೇಶಕ ಮನುಷ್ಯನ ಅನಿರೀಕ್ಷಿತ ಪದರುಗಳಿಗೆ ತನ್ನ ಒಳನೋಟವನ್ನು ಹರಿಸಿದಾಗ ಮಾತ್ರ ಅತ್ಯುತ್ತಮ ಸಿನಿಮಾಗಳ ಕಾಣ್ಕೆ ಸಾಧ್ಯ’ ಎನ್ನುತ್ತಾರೆ ಲಂಕೇಶ್. ಸಿನಿಮಾ ಎನ್ನುವುದು ಬದುಕಿಗೆ ಹತ್ತಿರವಾದ ಮತ್ತು ಫ್ಯಾಂಟಸಿಯಿಂದ ಮುಕ್ತವಾದ ಮಾಧ್ಯಮವಾದಾಗಲೇ ಉತ್ತಮ ಸಿನಿಮಾಗಳು ರೂಪುಗೊಳ್ಳಲು ಸಾಧ್ಯ ಎನ್ನುವುದು ಲಂಕೇಶರ ನಂಬಿಕೆಯಾಗಿತ್ತು. ಒಟ್ಟಾರೆ ಸಿನಿಮಾ ಎನ್ನುವುದು ಮಾನವನ ಮೂಲಭೂತ ದ್ವಂದ್ವ ಮತ್ತು ಅಸಹಾಯಕತೆಗೆ ಕನ್ನಡಿಯಾಗಬೇಕು ಎನ್ನುತ್ತಾರೆ ಲಂಕೇಶ್. ಈ ಕಾರಣದಿಂದಲೇ ಲಂಕೇಶ್ ನಿರ್ದೇಶಕರಾಗಿ ಪಲ್ಲವಿ, ಅನುರೂಪ, ಎಲ್ಲಿಂದಲೋ ಬಂದವರುನಂತಹ ಬದುಕಿಗೆ ಹತ್ತಿರವಾದ ಮತ್ತು ಫ್ಯಾಂಟಸಿಯಿಂದ ಮುಕ್ತವಾದ ಸಿನಿಮಾಗಳನ್ನು ಮಾಡಲು ಸಾಧ್ಯವಾಯಿತು. ಅವಾಸ್ತವಿಕ ನೆಲೆಯಲ್ಲಿ ರೂಪುಗೊಳ್ಳುತ್ತಿರುವ ಸಿನಿಮಾಗಳು ಮತ್ತು ಸಿನಿಮಾ ಮಾಧ್ಯಮವನ್ನು ಹೊಸ ಪರಿವೇಷದಲ್ಲಿ ನಾವು ನೋಡುತ್ತಿರುವ ಈ ಕಾಲಘಟ್ಟದಲ್ಲಿ ಲಂಕೇಶರಂಥ ನಿರ್ದೇಶಕರು ಮತ್ತೆ ಮತ್ತೆ ನೆನಪಾಗುತ್ತಾರೆ. ಸಿನಿಮಾವೊಂದು ಯಶಸ್ವಿಯಾಗಲು ಸಿನಿಮಾದ ಕಥೆಗಿಂತ ದೃಶ್ಯವೇ ಹೆಚ್ಚು ಪ್ರಸ್ತುತ ಎನ್ನುವ ಇವತ್ತಿನ ಸಿನಿಮಾ ಜನರ ಬದಲಾದ ಮನೋಭಾವ ಸಿನಿಮಾ ಅದೊಂದು ದೃಶ್ಯ ಮಾಧ್ಯಮ ಎನ್ನುವ ಮಾತನ್ನು ಮತ್ತೆ ಮತ್ತೆ ಸಾಬಿತು ಪಡಿಸುತ್ತಿದೆ. ಆಧುನಿಕ ತಂತ್ರಜ್ಞಾನ ಕೊಡಮಾಡುತ್ತಿರುವ ಏನೆಲ್ಲ ಸೌಲಭ್ಯಗಳನ್ನು ಬಳಸಿಕೊಂಡು ರೀಲು ಸುತ್ತುತ್ತಿರುವ ಸಿನಿಮಾ ಮಾಧ್ಯಮದವರು ಇಲ್ಲಿ ಕಥೆಗಿಂತ ಮೈನವಿರೆಳಿಸುವ ದೃಶ್ಯಗಳಿಗೇ ಹೆಚ್ಚು ಒತ್ತು ನೀಡುತ್ತಿರುವರು. ಬಾಹುಬಲಿಯಂಥ ಸಿನಿಮಾವೊಂದು ಎರಡು ಭಾಗಗಳಲ್ಲಿ ಮತ್ತು ಬಹುಭಾಷೆಗಳಲ್ಲಿ ನಿರ್ಮಾಣಗೊಂಡು ಭಾರೀ ಯಶಸ್ಸು ಗಳಿಸಲು ಸಾಧ್ಯವಾದದ್ದು ಸಿನಿಮಾದ ಕಥೆಗಿಂತ ಆ ಸಿನಿಮಾದಲ್ಲಿ ಗ್ರಾಫಿಕ್ ತಂತ್ರಜ್ಞಾನದಿಂದ ಬಳಸಿಕೊಂಡ ದೃಶ್ಯಗಳೇ ಮುಖ್ಯ ಕಾರಣ ಎನ್ನುವ ಮಾತು ಸತ್ಯಕ್ಕೆ ಹತ್ತಿರವಾಗಿದೆ. ಸಿನಿಮಾ ಪರದೆಯ ಮೇಲಿನ ಪ್ರೇಕ್ಷಕರ ನೋಟವನ್ನು ಅತ್ತಿತ್ತ ಕದಲದಂತೆ ಎರಡು ಎರಡೂವರೆ ತಾಸುಗಳ ಕಾಲ ಹಿಡಿದಿಟ್ಟರೆ ಯಶಸ್ಸು ಖಂಡಿತ ಎನ್ನುವುದನ್ನು ನಮ್ಮ ಸಿನಿಮಾ ಜನ ಅರ್ಥಮಾಡಿಕೊಂಡಿರುವರು. ಆದ್ದರಿಂದ ಇಲ್ಲಿ ಕಥೆಗಿಂತ ದೃಶ್ಯಗಳನ್ನು ವೈಭವೀಕರಿಸುವುದಕ್ಕೇ ಹೆಚ್ಚಿನ ಆದ್ಯತೆಯನ್ನು ನೀಡಲಾಗುತ್ತದೆ. ಆಕಾಶದೆತ್ತರದ ಬೆಟ್ಟಗಳನ್ನು ಸಲೀಸಾಗಿ ಏರಿಳಿಯುವುದು, ಬೃಹತ್ ಗಾತ್ರದ ಲಿಂಗವನ್ನು ನಿರಾಯಾಸವಾಗಿ ಎತ್ತುವುದು, ಧುಮ್ಮಿಕ್ಕುವ ಜಲಪಾತವನ್ನು ಏಣಿಯಾಗಿಸಿಕೊಂಡು ಅದರ ಮೂಲಕ್ಕೆ ಹೋಗಿ ನಿಲ್ಲುವುದು, ಸಾವಿರಾರು ಸೈನಿಕರನ್ನು ಕ್ಷಣಮಾತ್ರದಲ್ಲಿ ಹೊಡೆದುರುಳಿಸುವುದು ಹೀಗೆ ಕಲ್ಪನೆಗೂ ನಿಲುಕದ ದೃಶ್ಯಗಳನ್ನು ಸಾಕಷ್ಟು ಸಂಖ್ಯೆಯಲ್ಲಿ ಸಿನಿಮಾದಲ್ಲಿ ತುಂಬಿ ಪ್ರೇಕ್ಷಕರನ್ನು ಸಮ್ಮೋಹಿನಿಯಂತೆ ಸಿನಿಮಾ ಮಂದಿರಗಳ ಕಡೆ ಸೆಳೆಯಲಾಗುತ್ತಿದೆ. ಇಂಥ ಅವಾಸ್ತವಿಕ ಮತ್ತು ಅಸಹಜ ದೃಶ್ಯಗಳಿಂದ ಕೂಡಿದ ಸಿನಿಮಾದ ಅಲೆ ಎದುರು ವೃದ್ಧಾಪ್ಯದ ಸಮಸ್ಯೆಗಳನ್ನು ಆಧಾರವಾಗಿಟ್ಟುಕೊಂಡು ಬದುಕಿಗೆ ತೀರ ಹತ್ತಿರವಾದ ಸಿನಿಮಾವೊಂದು ಪ್ರೇಕ್ಷಕರ ಕೊರತೆಯಿಂದ ಸೋಲುವುದು ಸಿನಿಮಾ ಮಾಧ್ಯಮದ ದುರಂತಗಳಲ್ಲೊಂದು. 

ಇದು ಗ್ರಾಫಿಕ್ ಯುಗ


ಆಧುನಿಕ ತಂತ್ರಜ್ಞಾನ ಸಿನಿಮಾ ಮಾಧ್ಯಮದವರ ಕೆಲಸವನ್ನು ಅತ್ಯಂತ ಹಗುರಾಗಿಸಿದೆ. ತಂತ್ರಜ್ಞಾನದ ಸಹಾಯದಿಂದ ಪ್ರೇಕ್ಷರ ಕಲ್ಪನೆಗೂ ನಿಲುಕದ ದೃಶ್ಯಗಳನ್ನು ಸಿನಿಮಾದಲ್ಲಿ ಅಳವಡಿಸಲು ಸಾಧ್ಯವಾಗುತ್ತಿದೆ. ಈ ತಂತ್ರಜ್ಞಾನವನ್ನು ಮೊಟ್ಟ ಮೊದಲು ಅತ್ಯಂತ ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದು ಹಾಲಿವುಡ್ ಎನ್ನುವ ಸಿನಿಮಾ ಉದ್ಯಮ. ಅನಕೊಂಡ, ಜುರಾಸಿಕ್ ಪಾರ್ಕ್, ಟೈಟಾನಿಕ್, ಅವತಾರನಂಥ ಗ್ರಾಫಿಕ್ ಆಧಾರಿತ ಸಿನಿಮಾಗಳಿಗೆ ಪ್ರೇಕ್ಷಕ ವರ್ಗದಿಂದ ದೊರೆತ ಸ್ವಾಗತ ಮತ್ತು ಪಡೆದ ಅಭೂತಪೂರ್ವ ಗೆಲುವು ನಂತರದ ದಿನಗಳಲ್ಲಿ ವಿವಿಧ ಭಾಷೆಗಳ ಸಿನಿಮಾ ಮಾಧ್ಯಮದವರಿಗೆ ಸ್ಪೂರ್ತಿ ಮತ್ತು ಪ್ರೇರಣೆಯಾಯಿತು. ಹಾಲಿವುಡ್‍ನ್ ಈ ಸಿನಿಮಾಗಳನ್ನೇ ಮಾದರಿಯಾಗಿಟ್ಟುಕೊಂಡು ಹಿಂದಿ ಸಿನಿಮಾಗಳ ನಿರ್ದೇಶಕರು ಮತ್ತು ನಿರ್ಮಾಪಕರಗಳು ಗ್ರಾಫಿಕ್ ಆಧಾರಿತ ಹಲವಾರು ಸಿನಿಮಾಗಳನ್ನು ನಿರ್ಮಾಣ ಮಾಡಿ ಜನಪ್ರಿಯತೆಯೊಂದಿಗೆ ಗಲ್ಲಾಪೆಟ್ಟಿಗೆಯನ್ನು ತುಂಬಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಕಟ್ಟಡದಿಂದ ಕಟ್ಟಡಕ್ಕೆ ಸಲೀಸಾಗಿ ಜಿಗಿಯುವ, ಆಕಾಶದಲ್ಲೇ ಶತ್ರುಗಳನ್ನು ಸದೆಬಡಿಯುವ, ಖಳರಿಂದ ಜನಸಾಮಾನ್ಯರನ್ನು ರಕ್ಷಿಸಲು ನಾಯಕ ಕ್ಷಣಮಾತ್ರದಲ್ಲಿ ಪ್ರತ್ಯಕ್ಷನಾಗುವ ಕ್ರಿಶ್ ಸಿನಿಮಾ ಹಲವು ಭಾಗಗಳಲ್ಲಿ ನಿರ್ಮಾಣಗೊಂಡು ಅಪಾರ ಯಶಸ್ಸನ್ನು ಪಡೆಯಲು ಈ ಗ್ರಾಫಿಕ್ ಎನ್ನುವ ಹೊಸ ಅವಿಷ್ಕಾರವನ್ನು ಅತ್ಯಂತ ಸಶಕ್ತವಾಗಿ ದುಡಿಸಿಕೊಂಡ ನಿರ್ದೇಶಕನ ಜಾಣ್ಮೆಯೇ  ಕಾರಣವಾಯಿತು. ಇಲ್ಲಿ ನಾಯಕ ನಟನ ಸಹಜ ಅಭಿನಯದಿಂದ ಚಿತ್ರಿಕರಿಸಲು ಅಸಾಧ್ಯವಾಗುವ ಅನೇಕ ದೃಶ್ಯಗಳನ್ನು ಗ್ರಾಫಿಕ್ ತಂತ್ರಜ್ಞಾನವನ್ನು ಬಳಸಿಕೊಂಡು ಅತೀ ಸುಲಭವಾಗಿ ಮತ್ತು ಸಹಜವೆಂಬಂತೆ ರೂಪಿಸಲು ಸಾಧ್ಯವಾಗುತ್ತದೆ. ಈ ಕಾರಣದಿಂದಲೇ ಇಲ್ಲಿ ನಾಯಕ ನಟರುಗಳಿಗೆ ಪರ್ಯಾಯವಾಗಿ ರೊಬೋಟ್ ಮತ್ತು ರಾ-ವನ್‍ನಂಥ ತಂತ್ರಜ್ಞಾನ ರೂಪಿತ ನಾಯಕರು ಅವತರಿಸುತ್ತಾರೆ. ಕೊಲೆಯಾದ ಪ್ರೇಮಿ ನೊಣವಾಗಿ ಜನ್ಮತೆಳೆದು ಸೇಡು ತೀರಿಸಿಕೊಳ್ಳುವ ‘ಈಗ’ ಸಿನಿಮಾ ತೆಲುಗು ಮಾತ್ರವಲ್ಲದೆ ಹಲವು ಭಾಷೆಗಳಿಗೆ ಡಬ್ಬಿಂಗಾಗಿ ಯಶಸ್ಸನ್ನು ಪಡೆಯುವುದಕ್ಕೆ ಕಾರಣವೇನು ಎನ್ನುವ ಪ್ರಶ್ನೆಗೆ ನಾವು ಮತ್ತೆ ಮೊರೆಹೋಗುವುದು ಈ ಗ್ರಾಫಿಕ್ ತಂತ್ರಜ್ಞಾನವನ್ನೇ. ಇಲ್ಲದ ನೊಣವನ್ನು ಕಲ್ಪಿಸಿಕೊಂಡು ಮನೋಜ್ಞವಾಗಿ ಅಭಿನಯಿಸಿದ ಸುದೀಪ್ ನಟನೆಯ ಹೊರತಾಗಿಯೂ ಈ ಸಿನಿಮಾದ ಯಶಸ್ಸಿನ ಬಹುಪಾಲು ಕೀರ್ತಿ ಸಲ್ಲಬೇಕಾದದ್ದು ಆ ಸಿನಿಮಾದಲ್ಲಿ ಬಳಸಿಕೊಂಡ ತಂತ್ರಜ್ಞಾನಕ್ಕೆ. ತಂತ್ರಜ್ಞಾನ ಆಧಾರಿತ ದೃಶ್ಯಗಳನ್ನೇ ಹೇರಳವಾಗಿ ಬಳಸಿಕೊಂಡು ಯಶಸ್ಸನ್ನು ಪಡೆದ ಬಾಹುಬಲಿ, ರೊಬೋಟ್, ಕ್ರಿಶ್, ರಾ-ವನ್, ಈಗ ಈ ಸಿನಿಮಾಗಳಲ್ಲಿ ಅಭಿನಯಿಸಿದ್ದು ಅತ್ಯಂತ ಬೇಡಿಕೆಯಲ್ಲಿರುವ ತಾರಾಮೌಲ್ಯವುಳ್ಳ ಜನಪ್ರಿಯ ನಾಯಕ ನಟರು ಎನ್ನುವುದು ಗಮನಿಸಬೇಕಾದ ಸಂಗತಿ. ಒಟ್ಟಾರೆ ಯಶಸ್ಸನ್ನು ಹೇಗಾದರೂ ದಕ್ಕಿಸಿಕೊಳ್ಳಬೇಕೆನ್ನುವ ಧಾವಂತ ಮತ್ತು ವಾಂಛೆ ಸಿನಿಮಾ ಎನ್ನುವ ಈ ಮಾಧ್ಯಮವನ್ನು ವಾಸ್ತವಿಕ ಪ್ರಜ್ಞೆಯಿಂದ ಬಹುದೂರ ತಂದು ನಿಲ್ಲಿಸಿದೆ. 

ಆತ್ಮ ಮತ್ತು ಪ್ರೇತಾತ್ಮ


ಪ್ರೇತಾತ್ಮದ ಕಥೆಯುಳ್ಳ ನಾನಿನ್ನ ಬಿಡಲಾರೆ ಸಿನಿಮಾ ನಿರ್ಮಾಣಗೊಂಡ 1980 ರ ದಶಕದಲ್ಲಿ ಆಗಿನ್ನೂ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಈಗಿನಷ್ಟು ಬೆಳವಣಿಗೆಯಾಗಿರಲಿಲ್ಲ ಹಾಗೂ ಇಡೀ ಜಗತ್ತು ನಮ್ಮೆದುರು ತೆರೆದುಕೊಂಡಿರಲಿಲ್ಲ. ಅದೇ ಆಗ ನಗರೀಕರಣ ಮೊಳಕೆಯೊಡೆಯುತ್ತಿದ್ದ ಆ ದಿನಗಳಲ್ಲಿ ಹಳ್ಳಿಗಳಿನ್ನೂ ಜೀವಂತವಾಗಿದ್ದು ಸಮಾಜದಲ್ಲಿ ಮೂಢನಂಬಿಕೆ ಮನೆಮಾಡಿತ್ತು. ಜನರ ಮೂಢನಂಬಿಕೆಗಳನ್ನೇ ಬಂಡವಾಳವಾಗಿಟ್ಟುಕೊಂಡು ನಿರ್ಮಾಣಗೊಂಡ ನಾನಿನ್ನ ಬಿಡಲಾರೆ ಸಿನಿಮಾ ಬುದ್ಧಿಜೀವಿಗಳ ಅನುಮಾನ ಮತ್ತು ಪ್ರಶ್ನೆಗಳನ್ನು ಒಟ್ಟೊಟ್ಟಿಗೆ ಎದುರಿಸಬೇಕಾಯಿತು. ಬರ, ಕಾಡು, ಫಣಿಯಮ್ಮ, ಸಂಸ್ಕಾರದಂಥ ವಾಸ್ತವ ಬದುಕಿಗೆ ಹತ್ತಿರವಾದ ಹೊಸ ಅಲೆಯ ಸಿನಿಮಾಗಳು ನಿರ್ಮಾಣಗೊಂಡು ಅದಾಗಲೇ ಒಂದು ಸಂಚಲನವನ್ನು ಸೃಷ್ಟಿಸಿದ್ದ ಕನ್ನಡ ಸಿನಿಮಾ ಮಾಧ್ಯಮದಲ್ಲಿ ಮೂಢನಂಬಿಕೆಯ ಸಿನಿಮಾವೊಂದು ನಿರ್ಮಾಣಗೊಂಡಿದ್ದು ಅಚ್ಚರಿಗೆ ಕಾರಣವಾಗಿತ್ತು. ನಾನಿನ್ನ ಬಿಡಲಾರೆ ಸಿನಿಮಾದ ಪ್ರಚಂಡ ಯಶಸ್ಸಿಗೆ ಒಂದು ಹೊಸ ಅಲೆಯ ಸಿನಿಮಾಗಳನ್ನು ಸ್ವೀಕರಿಸುವ ಪ್ರೇಕ್ಷಕರ ಕೊರತೆ ಕಾರಣವಾದರೆ ಇನ್ನೊಂದು ಆಗಿನ್ನೂ ಸಮಾಜದಲ್ಲಿ ಮನೆಮಾಡಿದ್ದ ಮೂಢನಂಬಿಕೆ ಸಿನಿಮಾದ ಯಶಸ್ಸಿಗೆ ಅಗತ್ಯವಾದ ಪರಿಸರವನ್ನು ನಿರ್ಮಿಸಿತ್ತು. ಒಟ್ಟಾರೆ ಈ ಸಿನಿಮಾದ ಯಶಸ್ಸು ನಂತರದ ದಿನಗಳಲ್ಲಿ ಕನ್ನಡ ಸಿನಿಮಾ ಮಾಧ್ಯಮದಲ್ಲಿ ಹಲವಾರು ಪ್ರೇತಾತ್ಮದ ಕಥೆಯಾಧಾರಿತ ಸಿನಿಮಾಗಳು ನಿರ್ಮಾಣಗೊಳ್ಳಲು ಒಂದು ವೇದಿಕೆಯನ್ನು ನಿರ್ಮಿಸಿ ಕೊಟ್ಟಿತು. ಪರಿಣಾಮವಾಗಿ ಪುನರ್ಜನ್ಮದ ಮತ್ತು ಸತ್ತ ವ್ಯಕ್ತಿ ಪ್ರೇತವಾಗಿ ಸೇಡು ತೀರಿಸಿಕೊಳ್ಳುವ ಕಥೆಯುಳ್ಳ ಅನೇಕ ಸಿನಿಮಾಗಳು ಕನ್ನಡ ಭಾಷೆಯಲ್ಲಿ ನಿರ್ಮಾಣವಾದವು. ಒಂದು ಹಂತದಲ್ಲಿ ರಾಜಕುಮಾರ ಮತ್ತು ವಿಷ್ಣುವರ್ಧನ ಅವರಂಥ ತಾರಾವರ್ಚಸ್ಸುಳ್ಳ ಜನಪ್ರಿಯ ಕಲಾವಿದರು ಸಹ ಸಿನಿಮಾ ಬದುಕಿನ ಯಶಸ್ಸಿಗಾಗಿ ಕ್ರಮವಾಗಿ ಶ್ರಾವಣ ಬಂತು ಮತ್ತು ಆಪ್ತಮಿತ್ರದಂಥ ಪ್ರೇತಾತ್ಮದ ಕಥೆಯಾಧಾರಿತ ಸಿನಿಮಾಗಳಲ್ಲಿ ಅಭಿನಯಿಸಬೇಕಾದ ಅನಿವಾರ್ಯತೆಗೆ ಒಳಗಾದದ್ದು ಅಚ್ಚರಿಯ ಸಂಗತಿ. ಸತತ ಸೋಲುಗಳಿಂದ ಬಸವಳಿದಿದ್ದ ನೂರು ಸಿನಿಮಾಗಳ ನಾಯಕನಟ ಶಿವರಾಜಕುಮಾರ್‍ಗೆ ಶಿವಲಿಂಗ ಎನ್ನುವ ದೆವ್ವದ ಕಥೆಯಾಧಾರಿತ ಸಿನಿಮಾ ಪುನರ್ಜನ್ಮ ನೀಡಿದ್ದನ್ನು ಇಲ್ಲಿ ಉಲ್ಲೇಖಿಸಲೇ ಬೇಕು. ಕಳೆದ ವರ್ಷ 2016 ರಲ್ಲಿ ಹೊಸಬರ ಸಾಲು ಸಾಲು ಸಿನಿಮಾಗಳು ಯಶಸ್ವಿಯಾಗಿ ಹೊಸದೊಂದು ಭರವಸೆಯನ್ನು ಮೂಡಿಸಿದರೂ ಆ ಯಶಸ್ವಿ ಸಿನಿಮಾಗಳಲ್ಲಿ ರಂಗಿತರಂಗ, ಕರ್ವ, ಲಾಸ್ಟ್ ಬಸ್, ಯೂ ಟರ್ನ್, ಓಂ ನಮೋ ಭೂತಾತ್ಮ ಸಿನಿಮಾಗಳು ಅದೇ ಪ್ರೇತಾತ್ಮದ ಕಥೆಯುಳ್ಳ ಸಿನಿಮಾಗಳು ಎನ್ನುವ ಸಂಗತಿ ಸೃಜನಶೀಲ ಸಿನಿಮಾಗಳ ವೀಕ್ಷಕರಿಗೆ ಜೀರ್ಣಿಸಿಕೊಳ್ಳುವುದು ಕಷ್ಟಸಾಧ್ಯ. ಈ 21 ನೇ ಶತಮಾನದಲ್ಲಿ ಸಾಫ್ಟ್‍ವೇರ್ ಉದ್ಯಮದಿಂದ ಸಿನಿಮಾ ಮಾಧ್ಯಮಕ್ಕೆ ಕಾಲಿಡುತ್ತಿರುವ ಯುವ ಪೀಳಿಗೆ ಮತ್ತದೆ ಆತ್ಮ-ಪ್ರೇತಾತ್ಮದ ಕಥೆಗಳನ್ನು ಹಿಡಿದುಕೊಂಡು ಬರುತ್ತಿರುವುದು ನಾವು ಯಾವ ಕಾಲದಲ್ಲಿ ಬದುಕುತ್ತಿದ್ದೇವೆ ಎನ್ನುವ ಪ್ರಶ್ನೆ ಮತ್ತು ಅನುಮಾನವನ್ನು ಹುಟ್ಟಿಸುತ್ತದೆ. 

ಗೆದ್ದ ಸೂತ್ರದ ಬೆನ್ನು ಹತ್ತಿ


ಬದುಕಿಗೆ ದೂರವಾದ ಮತ್ತು ಅವಾಸ್ತವಿಕ ಕಥೆಯಾಧಾರಿತ ಸಿನಿಮಾಗಳು ಕನ್ನಡದಲ್ಲಿ ಸಾಲು ಸಾಲಾಗಿ ನಿರ್ಮಾಣಗೊಳ್ಳಲು ಈ ಪ್ರಕಾರದ ಸಿನಿಮಾಗಳ ಯಶಸ್ಸೇ ಮೂಲ ಕಾರಣ. ಸಿನಿಮಾ ಮಾಧ್ಯಮ ಯಾವತ್ತೂ ಯಶಸ್ಸಿನ ಸೂತ್ರವನ್ನು ಬೆನ್ನು ಹತ್ತುವ ಮಾಧ್ಯಮ. ಸಿನಿಮಾವೊಂದು ಯಶಸ್ವಿಯಾದರೆ ಅಚಿಥದ್ದೆ ಕಥೆಯುಳ್ಳ ಸಾಲು ಸಾಲು ಸಿನಿಮಾಗಳು ಇಲ್ಲಿ ನಿರ್ಮಾಣಗೊಳ್ಳುತ್ತವೆ. ಕನ್ನಡ ಮಾತ್ರವಲ್ಲದೆ ಇಡೀ ಸಿನಿಮಾರಂಗದಲ್ಲಿ ಇದೊಂದು ಸಂಪ್ರದಾಯದಂತೆ ನಡೆದುಕೊಂಡು ಬಂದಿದೆ. ಹೊಸ ಹೊಸ ಪ್ರಯೋಗಗಳಿಗೆ ಸಿನಿಮಾ ಮಾಧ್ಯಮವನ್ನು ಒಳಗಾಗಿಸುವುದಕ್ಕಿಂತ ಸಿದ್ಧ ಸೂತ್ರವನ್ನೇ ನಂಬಿಕೊಂಡು ಸಿನಿಮಾ ನಿರ್ಮಾಣ ಮಾಡುವವರ ಸಂಖ್ಯೆ ಇಲ್ಲಿ ಹೆಚ್ಚಿದೆ. ಸಮಾಜಕ್ಕೆ ಮತ್ತು ಪ್ರೇಕ್ಷಕರಿಗೆ ಏನನ್ನು ಹೇಳುತ್ತಿದ್ದೇವೆ ಎನ್ನುವುದಕ್ಕಿಂತ ಯಶಸ್ಸೇ ಮುಖ್ಯವಾಗುತ್ತಿರುವುದರಿಂದ ಒಂದು ಯಶಸ್ವಿ ಸಿನಿಮಾದ ಛಾಯೆಯಾಗಿಯೋ ಅಥವಾ ಪ್ರತಿಬಿಂಬವಾಗಿಯೋ ಹಲವು ಸಿನಿಮಾಗಳು ಹುಟ್ಟಿಕೊಳ್ಳುತ್ತವೆ. ಒಂದು ಜುರಾಸಿಕ್ ಪಾರ್ಕ್‍ನ ಯಶಸ್ಸು ಹಲವು ರಾಷ್ಟ್ರಗಳ ಹಲವಾರು ಭಾಷೆಗಳಲ್ಲಿ ಗ್ರಾಫಿಕ್ ತಂತ್ರಜ್ಞಾನ ಆಧಾರಿತ ಸಿನಿಮಾಗಳ ನಿರ್ಮಾಣಕ್ಕೆ ಪ್ರೇರಣೆಯಾದರೆ ಒಂದು ರಾಝ್‍ನಂಥ ಸಿನಿಮಾ ಗಳಿಸಿದ ಪ್ರಚಂಡ ಯಶಸ್ಸು ಹಲವಾರು ಪ್ರೇತಾತ್ಮಗಳ ಕಥೆಯ ಸಿನಿಮಾಗಳಿಗೆ ಸ್ಪೂರ್ತಿಯಾಯಿತು. ವಿಷ್ಣುವರ್ಧನ ಅವರ ವೃತ್ತಿಬದುಕಿನ ಕೊನೆಯ ಸಿನಿಮಾ ಆಪ್ತಮಿತ್ರದ ಮುಂದುವರಿದ ಭಾಗ ಎನ್ನುವುದು ಗೆದ್ದ ಸೂತ್ರದ ಬೆನ್ನುಹತ್ತುವ ಸಿನಿಮಾದವರ ಮನೋಭಾವಕ್ಕೊಂದು ನಿದರ್ಶನ. ಆಪ್ತಮಿತ್ರದ ಯಶಸ್ಸೇ ಪಿ.ವಾಸು ಅವರಂಥ ಅನುಭವಿ ಮತ್ತು ಹಿರಿಯ ನಿರ್ದೇಶಕ ನಂತರದ ದಿನಗಳಲ್ಲಿ ಅಂಥದ್ದೇ ಸೂತ್ರವನ್ನಾಧರಿಸಿದ ಹಲವು ಸಿನಿಮಾಗಳನ್ನು ನಿರ್ದೇಶಿಸಬೇಕಾದದ್ದು ಸಿನಿಮಾ ಮಾಧ್ಯಮದ ವಿಪರ್ಯಾಸಗಳಲ್ಲೊಂದು. 


ಸಿನಿಮಾ ವಾಸ್ತವಿಕ ಪ್ರಜ್ಞೆಯಿಂದ ದೂರವಾಗುತ್ತಿರುವುದಕ್ಕೆ ಇವತ್ತು ಸಿನಿಮಾ ಮಾಧ್ಯಮ ಎನ್ನುವುದು ಸಿನಿಮಾ ಉದ್ಯಮವಾಗಿ ಬದಲಾಗುತ್ತಿರುವುದೇ ಪ್ರಬಲ ಕಾರಣ. ಮಾಧ್ಯಮವೊಂದು ಉದ್ಯಮವಾಗಿ ಬದಲಾದಾಗ ಅಲ್ಲಿ ಬಂಡವಾಳ ಹೂಡಿ ಲಾಭಗಳಿಸಬೇಕೆನ್ನುವ ಮನೋಭಾವ ಬಲವಾಗುತ್ತದೆ. ಹೀಗಾಗಿ ಇಂದು ಸಿನಿಮಾ ಬಂಡವಾಳ ಹೂಡುವ ಉದ್ಯಮವಾಗಿ ಪರಿವರ್ತನೆ ಹೊಂದಿದೆ. ಬೇರೆ ಬೇರೆ ಉದ್ಯಮಗಳಲ್ಲಿ ಹಣಹೂಡಿ ಲಾಭಗಳಿಸಿದವರೆಲ್ಲ ಬಂಡವಾಳ ಹೂಡಲು ಸಿನಿಮಾ ಮಾಧ್ಯಮಕ್ಕೆ ಕಾಲಿಡುತ್ತಿರುವರು. ಒಂದು ಕಾಲದಲ್ಲಿ ಲಾಭ ನಷ್ಟಗಳೆಲ್ಲ ಗೌಣವಾಗಿ ಸೃಜನಶೀಲತೆಯೇ  ಪ್ರಧಾನವಾಗಿದ್ದ ಸಿನಿಮಾ ಮಾಧ್ಯಮದಲ್ಲಿ ಇಂದು ಹಣ ಗಳಿಕೆಯೇ  ಮುನ್ನೆಲೆಗೆ ಬಂದಿರುವುದರಿಂದ ಇಲ್ಲಿ ಚಿತ್ರ ವಿಚಿತ್ರ ಕಥೆಗಳ ಸಿನಿಮಾಗಳು ನಿರ್ಮಾಣಗೊಳ್ಳುತ್ತವೆ ಮತ್ತು ಯಶಸ್ವಿಯಾಗುತ್ತಿವೆ. ಪರಿಣಾಮವಾಗಿ ಸಿನಿಮಾವನ್ನು ಸೃಜನಶೀಲ ಮಾಧ್ಯಮವೆಂದು ನಂಬಿ ಹೊಸ ಹೊಸ ಪ್ರಯೋಗಗಳಿಗೆ ಮುಂದಾಗುತ್ತಿದ್ದ ನಿರ್ದೇಶಕರು, ನಿರ್ಮಾಪಕರು ಮತ್ತು ಕಲಾವಿದರು ನೇಪಥ್ಯಕ್ಕೆ ಸರಿಯುತ್ತಿದ್ದಾರೆ. ಪ್ರೇಕ್ಷಕರು ಕೂಡ ಅದರಲ್ಲೂ ಯುವ ಪೀಳಿಗೆ ಈ ಗ್ರಾಫಿಕ್ ದೃಶ್ಯಗಳಿಂದ ಕೂಡಿದ ಮತ್ತು ಪ್ರೇತಾತ್ಮದ ಕಥೆಗಳುಳ್ಳ ಸಿನಿಮಾಗಳನ್ನೇ ಗೆಲುವಿನ ದಡಕ್ಕೆ ಮುಟ್ಟಿಸುತ್ತಿರುವರು. ಪರಿಸ್ಥಿತಿ ಹೀಗೆ ಮುಂದುವರೆದಲ್ಲಿ ಸಿನಿಮಾಕ್ಕೂ ಮತ್ತು ಕಾರ್ಟೂನ್‍ಗಳಿಗೂ ವ್ಯತ್ಯಾಸವಿರದ ದಿನಗಳು ಬರುವುದೇನೂ ದೂರವಿಲ್ಲ. 

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 


Saturday, June 3, 2017

ಹೀಗೊಂದು ಸಾಂಸ್ಕೃತಿಕ ತಳಮಳ

                  ಮೊನ್ನೆ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಹೊಗಿದ್ದೆ. ಅಂದು ಹಲವು ಲೇಖಕರ ಪುಸ್ತಕಗಳನ್ನು ಬಿಡುಗಡೆ ಮಾಡುವ ಸಮಾರಂಭವನ್ನು ಆ ಪ್ರಕಾಶನ ಸಂಸ್ಥೆಯು ಸಾಂಸ್ಕೃತಿಕ ಸಭಾಂಗಣದಲ್ಲಿ ಆಯೋಜಿಸಿತ್ತು. ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿದ ಬರಹಗಾರರೊಬ್ಬರು ಅಂದಿನ ಆ ಸಮಾರಂಭದ ಮುಖ್ಯ ಅತಿಥಿ. ಜೊತೆಗೆ ಒಂದಿಷ್ಟು ಆಕರ್ಷಣೆ ಇರಲಿ ಎಂದು ಓದುವ ಹಾಗೂ ಬರೆಯುವ ಹವ್ಯಾಸವಿರುವ ಸಿನಿಮಾ ಕಲಾವಿದನನ್ನು ಪುಸ್ತಕಗಳ ಬಿಡುಗಡೆಗಾಗಿ ಆಹ್ವಾನಿಸಲಾಗಿತ್ತು. ಆದರೆ ಸಭಾಂಗಣ ಮಾತ್ರ ಪ್ರೇಕ್ಷಕರಿಲ್ಲದೆ ಭಣಗುಟ್ಟುತ್ತಿತ್ತು. ಬಿಡುಗಡೆಯಾಗುತ್ತಿರುವ ಪುಸ್ತಕಗಳ ಲೇಖಕರು ಹಾಗೂ ಅವರೊಡನೆ ಬಂದ ಅವರ ಕುಟುಂಬ ವರ್ಗದವರನ್ನು ಬಿಟ್ಟರೆ ಇಡೀ ಸಭಾಂಗಣ ಖಾಲಿಯಾಗಿತ್ತು. ಸಭಾಂಗಣದ ಒಂದು ಮೂಲೆಯಲ್ಲಿ ಆ ದಿನ ಬಿಡುಗಡೆಯಾಗುತ್ತಿರುವ ಪುಸ್ತಕಗಳನ್ನು ವಿಶೇಷ ರಿಯಾಯಿತಿ ದರದಲ್ಲಿ ಮಾರಾಟ ಮಾಡಲು ಜೋಡಿಸಿಡಲಾಗಿತ್ತು. ಒಂದಿಬ್ಬರು ಆಸಕ್ತರು ಒಂದೆರಡು ಪುಸ್ತಕಗಳನ್ನು ಕೈಯಲ್ಲಿ ಹಿಡಿದು ನೋಡಿದರೆ ವಿನ: ಒಂದೇ ಒಂದು ಪುಸ್ತಕ ಮಾರಾಟವಾಗಲಿಲ್ಲ. ಇನ್ನೊಂದು ಆಸಕ್ತಿಯ ಸಂಗತಿ ಎಂದರೆ ಆ ದಿನದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ವಿಶೇಷ ಊಟದ ವ್ಯವಸ್ಥೆಯನ್ನು ಬಂದ ಅತಿಥಿ ಗಣ್ಯರಿಗಾಗಿ, ಲೇಖಕರಿಗಾಗಿ ಹಾಗೂ ಸಾರ್ವಜನಿಕರಿಗಾಗಿ ಮಾಡಲಾಗಿತ್ತು. ಅತಿಥಿಗಳ ಭಾಷಣ ಮತ್ತು ಪುಸ್ತಕಗಳ ಬಿಡುಗಡೆಯಾಗುತ್ತಿದ್ದಂತೆ ಬಂದವರೆಲ್ಲ ಊಟ ಮಾಡಲು ಧಾವಂತ ಪಡುತ್ತಿದ್ದರೆ ಹೊರತು ಆ ದಿನ ಬಿಡುಗಡೆಯಾದ ಪುಸ್ತಕಗಳತ್ತ ಒಂದು ದೃಷ್ಟಿಯನ್ನೂ ಬೀರಲಿಲ್ಲ.  ಹಣ ಖರ್ಚು ಮಾಡಿ ಪುಸ್ತಕಗಳನ್ನು ಪ್ರಕಟಿಸಿದ ಪ್ರಕಾಶಕರ ಎದುರೇ ಲೇಖಕರಿಂದ  ಪುಸ್ತಕಗಳನ್ನು ಗೌರವ ಪ್ರತಿಯ ರೂಪದಲ್ಲಿ ಪಡೆಯಲು ಹಲವರು ಪ್ರಯತ್ನಿಸುತ್ತಿದ್ದರು.  ಪಾಪ ಬಡಪಾಯಿ ಲೇಖಕರು ಕೆಲವರಾದರೂ ತಮ್ಮ ಪುಸ್ತಕಗಳನ್ನು ಓದಲಿ ಎನ್ನುವ ಆಸೆಯಿಂದ ಪ್ರಕಾಶಕರು ತಮಗೆ ಕೊಟ್ಟ ಗೌರವ ಪ್ರತಿಗಳನ್ನೇ ತಮ್ಮ ಸ್ನೇಹಿತರಿಗೋ ಇಲ್ಲವೇ ಸಂಬಂಧಿಕರಿಗೋ ಹಂಚುತ್ತಿದ್ದರು. ಒಟ್ಟಾರೆ ಆ ದಿನ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ನಾನು ನೋಡಿದ ದೃಶ್ಯಗಳು ಪುಸ್ತಕೋದ್ಯಮದ ಅವನತಿಗೆ ಬಲವಾದ ಪುರಾವೆಯನ್ನು ಒದಗಿಸುವಂತಿದ್ದವು.

                     ಲೇಖನದ ಮೂಲ ವಿಷಯಕ್ಕೆ ಹೋಗುವುದಕ್ಕಿಂತ ಮೊದಲು ಇನ್ನೊಂದು ಘಟನೆಯನ್ನು ಹೇಳುತ್ತೇನೆ. ಪ್ರಿಯಾಂಕ ಛೊಪ್ರಾ ಅಭಿನಯದ 'ಮೇರಿ ಕೊಮ್' ಸಿನಿಮಾ ನೋಡಬೇಕೆನ್ನುವುದು ನನ್ನ ಬಹುದಿನಗಳ ಆಸೆಯಾಗಿತ್ತು. ಕ್ರೀಡಾಪುಟುವಿನ ಬದುಕನ್ನಾಧರಿಸಿ ತಯ್ಯಾರಾದ ಸಿನಿಮಾ ನಿಜಕ್ಕೂ ನಮ್ಮ ಯುವಜನಾಂಗಕ್ಕೆ ಸ್ಪೂರ್ತಿ ಮತ್ತು ಪ್ರೇರಣೆ ನೀಡುವಂತಿದ್ದು ಪ್ರತಿಯೊಬ್ಬರೂ ಆ ಸಿನಿಮಾ ನೋಡ ಬೇಕಿತ್ತು. ಟಿಕೇಟ್ ಸಿಗುತ್ತದೋ ಇಲ್ಲವೋ ಎನ್ನುವ ಆತಂಕದಿಂದ ಥೇಟರ್ ಒಳಗಡೆ ಪ್ರವೇಶಿಸಿದರೆ ಅಲ್ಲಿದ್ದದ್ದು ಬೆರಳೆಣಿಕೆಯಷ್ಟು ಪ್ರೇಕ್ಷಕರು ಮಾತ್ರ. ಪಕ್ಕದಲ್ಲೇ ಇದ್ದ ಥೇಟರ್ ನಲ್ಲಿ 'ಡರ್ಟಿ ಪಿಕ್ಚರ್' ಸಿನಿಮಾ ಐವತ್ತು ದಿನಗಳ ಪ್ರದರ್ಶನ ಪೂರ್ಣಗೊಳಿಸಿ ಆ ದಿನವೂ ಅನೇಕ ಜನರು ಟಿಕೇಟ್ ಸಿಗದೆ ನಿರಾಶೆಯಿಂದ ಥೇಟರ್ ಹೊರಗಡೆ ನಂತರದ ಪ್ರದರ್ಶನಕ್ಕಾಗಿ ಕಾಯುತ್ತ ನಿಂತಿದ್ದರು. ಒಂದು ಸಿನಿಮಾ ಸಮಾಜಕ್ಕೆ ಸಂದೇಶ ಸಾರುವಂಥ ಕಥೆ ಇದ್ದೂ ಪ್ರೇಕ್ಷಕರ ಬೆಂಬಲವಿಲ್ಲದೆ ಒಂದೇ ವಾರದಲ್ಲಿ ಸಿನಿಮಾ ಮಂದಿರದಿಂದ ಎತ್ತಂಗಡಿಯಾದರೆ ಇನ್ನೊಂದು ಸಿನಿಮಾ ನಟಿಯೋರ್ವಳ ಮಾದಕ ಅಭಿನಯದಿಂದ ಐವತ್ತು ದಿನಗಳಾದರೂ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿತ್ತು. ಪ್ರಿಯಾಂಕಾ ಛೊಪ್ರಾ 'ಮೇರಿ ಕೊಮ್' ಸಿನಿಮಾದಲ್ಲಿನ ಅಭಿನಯಕ್ಕಾಗಿ ನಟನೆಯಲ್ಲಿ ನೈಜತೆಯನ್ನು ತರಲು ತನ್ನ ತಲೆಯನ್ನು ಸಂಪೂರ್ಣವಾಗಿ ಕ್ಷೌರ ಮಾಡಿಸಿಕೊಂಡಿದ್ದು ಅದು ಆ ಸಿನಿಮಾ ವಾಸ್ತವಿಕತೆಗೆ ಎಷ್ಟೊಂದು ಹತ್ತಿರವಾಗಿತ್ತು ಎನ್ನುವುದಕ್ಕೆ  ಒಂದು ಉತ್ತಮ ಉದಾಹರಣೆ. ಆದರೆ ಪ್ರೇಕ್ಷಕರು ಆಕೆಯ ಅಭಿನಯಕ್ಕೆ ತೀರಾ ನಿರಸವಾಗಿ ಸ್ಪಂದಿಸಿದ್ದು ಮಾತ್ರ ಅತ್ಯಂತ ನೋವಿನ ಸಂಗತಿ. ಮಾದಕ ಸಿನಿಮಾದ ಟಿಕೇಟ್ ಪಡೆಯಲು ವಿಫಲರಾದ ಪ್ರೇಕ್ಷಕರು ಮುಂದಿನ  ಪ್ರದರ್ಶನದ ಟಿಕೇಟ್ ಗಾಗಿ ಕಾಯುತ್ತ ಸರತಿ ಸಾಲಿನಲ್ಲಿ ನಿಂತರೇ ವಿನ: ಅವರು ಪಕ್ಕದ ಥೇಟರ್ ನಲ್ಲೇ ಇರುವ ಬದುಕಿಗೆ ಅತಿ ಹತ್ತಿರವಿರುವ ಸಿನಿಮಾವನ್ನು ವೀಕ್ಷಿಸಲು ಆಸಕ್ತಿ ತೋರಲಿಲ್ಲ.

                   ಈ ಮೇಲಿನ ಎರಡು ಘಟನೆಗಳನ್ನು ನಾನು ಲೇಖನದ ಪ್ರಾರಂಭದಲ್ಲಿ ಉಲ್ಲೇಖಿಸಲು ಮುಖ್ಯ ಕಾರಣ ಇವತ್ತು ಸಾಹಿತ್ಯ ಮತ್ತು ಸಿನಿಮಾದಂಥ ಸಾಂಸ್ಕೃತಿಕ ಕ್ಷೇತ್ರಗಳು ಜನರ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿವೆ ಎನ್ನುವುದನ್ನು ಉದಾಹರಣೆಯೊಂದಿಗೆ ವಿವರಿಸಲು. ಸಾಹಿತ್ಯ ಮತ್ತು ಸಿನಿಮಾ ಒಂದು ನೆಲದ ಎರಡು ಮಹತ್ವದ ಸಾಂಸ್ಕೃತಿಕ ನೆಲೆಗಳು ಎನ್ನುವ ಅಭಿಪ್ರಾಯ ನನ್ನದು. ಜಾಗತೀಕರಣ ಮತ್ತು ತಂತ್ರಜ್ಞಾನದ ಈ ಯುಗದಲ್ಲಿ ನಮ್ಮ ಪೀಳಿಗೆ ಸಾಹಿತ್ಯದ ಓದು ಮತ್ತು ಸದಭಿರುಚಿಯ ಸಿನಿಮಾಗಳ ವೀಕ್ಷಣೆಯಿಂದ ಸಂಪೂರ್ಣವಾಗಿ ವಿಮುಖರಾಗಿರುವರು. ಜೊತೆಗೆ ಈ ತಂತ್ರಜ್ಞಾನದ ಬೆಳವಣಿಗೆಯ  ಕಾಲಘಟ್ಟದಲ್ಲಿ ಹುಟ್ಟಿ ಈಗ ತರುಣ ತರುಣಿಯರಾಗಿ ಬೆಳೆದು ನಿಂತಿರುವ ಯುವಜನಾಂಗವನ್ನು ದೃಷ್ಟಿಯಲ್ಲಿಟ್ಟುಕೊಂಡು ನಮ್ಮ ಬರಹಗಾರರು ಬರೆಯುತ್ತಿರುವುದು ಹಾಗೂ ಸಿನಿಮೊದ್ಯಮದ ಜನ ಸಿನಿಮಾಗಳನ್ನು ತಯ್ಯಾರಿಸುತ್ತಿರುವುದು ಆತಂಕದ ಸಂಗತಿ.

ಸಾಹಿತ್ಯ 


                   ಹಿರಿಯ ಸಾಹಿತಿಗಳೆಲ್ಲ ಈಗ ಬರೆಯುತ್ತಿಲ್ಲ (ಭೈರಪ್ಪನವರಿಗೆ ಈ ಆಪಾದನೆ ಅನ್ವಯಿಸುವುದಿಲ್ಲ) ಎನ್ನುವುದು ನಮ್ಮ ಬಹುಮುಖ್ಯವಾದ ಸಾಂಸ್ಕೃತಿಕ ತಳಮಳಗಳಲ್ಲೊಂದು. ಒಂದು ವಯಸ್ಸಿನವರೆಗೆ ಬರೆದು ಒಂದಿಷ್ಟು ಪ್ರಶಸ್ತಿ, ಪುರಸ್ಕಾರಗಳನ್ನು ಬಾಚಿಕೊಂಡರೆ ಬರವಣಿಗೆಯ ಕೆಲಸ ಪೂರ್ಣಗೊಂಡಂತೆ ಎನ್ನುವ ಸ್ಥಾಪಿತ ಅಭಿಪ್ರಾಯ ಅನೇಕ ಲೇಖಕರದು. ಹೀಗೆ ಬರವಣಿಗೆಯಿಂದ ಸ್ವಯಂ ನಿವೃತ್ತಿ ತೆಗೆದುಕೊಳ್ಳುವ ನಮ್ಮ ಹಿರಿಯ ಲೇಖಕರು ತಮ್ಮ ಬದುಕಿನ ಸಂಧ್ಯಾ ಕಾಲವನ್ನು ಸಭೆ ಸಮಾರಂಭಗಳಲ್ಲಿ ಅತಿಥಿಗಳಾಗಿಯೋ ಇಲ್ಲವೇ ಕಿರಿಯ ಲೇಖಕರ ಪುಸ್ತಕಗಳಿಗೆ ಮುನ್ನುಡಿ ಬೆನ್ನುಡಿ ಬರೆದೋ ಅಷ್ಟಕ್ಕೇ ಸಂತೃಪ್ತರಾಗುವುದುಂಟು. ಇನ್ನು ಕೆಲವು ಹಿರಿಯರು ತಮ್ಮಲ್ಲಿನ ಬರವಣಿಗೆಯ ಕಸುವು ಕಮ್ಮಿಯಾಗುತ್ತಿದ್ದಂತೆ ಚಳವಳಿಯ ವ್ಯಾಧಿಯನ್ನು ಅಂಟಿಸಿಕೊಂಡು ಜಾತಿ ಧರ್ಮದ ಹೆಸರಿನಿಂದ ಸಮಾಜವನ್ನು ಒಡೆಯುವ ಸಾಹಸಕ್ಕೆ ಕೈಹಾಕುವರು. ಬರಹಗಾರನೊಳಗಿನ ಸೃಜನಾತ್ಮಕತೆ ಇಂಗಲು ಬಹುಮುಖ್ಯ ಕಾರಣ ಅನೇಕ ಲೇಖಕರು ತಮ್ಮ ಬರವಣಿಗೆ ಒಂದು ಹಂತಕ್ಕೆ ಬಂದ ಮೇಲೆ ಇತರರ ಕೃತಿಗಳನ್ನು ಓದುವುದನ್ನೇ ನಿಲ್ಲಿಸಿ ಬಿಡುವರು. ಬರವಣಿಗೆಯಂಥ ಸೃಜನಶೀಲ ಕ್ರಿಯೆಗೆ  ನಿರಂತರ ಅಧ್ಯಯನವೇ  ಮೂಲ ಪ್ರೇರಣೆಯಾಗುವುದು  ಮತ್ತು ಅಗತ್ಯವಾದ ಬಂಡವಾಳವನ್ನೊದಗಿಸುವುದು. ಹೀಗಿದ್ದೂ ನಮ್ಮ ಹಿರಿಯ ತಲೆಮಾರಿನ ಬರಹಗಾರರು ಅಧ್ಯಯನದಿಂದ ವಿಮುಖರಾಗಿ ಬರೆಯುವುದನ್ನೇ ನಿಲ್ಲಿಸುತ್ತಿರುವರು. ನಿಜಕ್ಕೂ ಇದು ನಾವುಗಳು ಆತಂಕ ಪಡಬೇಕಾದ ಸಂಗತಿ. ಜೊತೆಗೆ ಬರವಣಿಗೆಯ ಕೆಲಸ ನಿಲ್ಲಿಸಿದ ನಂತರವೂ ಮುಖ್ಯವಾಹಿನಿಯಲ್ಲಿ ಸದಾಕಾಲ ಕಾಣಿಸಿಕೊಳ್ಳಬೇಕೆನ್ನುವ ಹಪಾಹಪಿಯಿಂದ ಈ ಹಿರಿಯ ಬರಹಗಾರರು ದಿನಕ್ಕೊಂದು ವಿವಾದಿತ ಹೇಳಿಕೆಗಳನ್ನು ಕೊಡುತ್ತ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿರುವರು.

                    ಹಿರಿಯ ಲೇಖಕರೆಲ್ಲ ಸ್ವಯಂ ನಿವೃತ್ತಿ ಪಡೆಯುತ್ತಿರುವ ಈ ಸಂದರ್ಭ ಕೆಲವು ಲೇಖಕರು ವಾಲ್ಮೀಕಿ ಯಾರು? ರಾಮನ ಪ್ರೇಮ ಮತ್ತು ಕಾಮದ ಕಥೆ, ಕೃಷ್ಣನ ಲೀಲೆ ಎನ್ನುವ ವಿವಾದಿತ ಪುಸ್ತಕಗಳನ್ನು ಬರೆದು ಸಮಾಜದ ಸ್ವಾಸ್ಥ್ಯವನ್ನು ಕೆಡಿಸಲು ಪ್ರಯತ್ನಿಸುವರು. ಸಾಹಿತ್ಯ ಹಿಂದೆಯೆಲ್ಲ ಚಳವಳಿಗಳಿಗೆ ಪೂರಕವಾಗಿ ಕೆಲಸ ಮಾಡಿದ ಉದಾಹರಣೆಗಳು ಚರಿತ್ರೆಯಲ್ಲಿವೆ. ಆದರೆ ಆ ಸಂದರ್ಭ ಸಾಹಿತ್ಯ ಸಮಾಜವನ್ನು ಒಂದುಗೂಡಿಸುವ ಇಲ್ಲವೇ ಅಧಿಕಾರಶಾಹಿಯ ವಿರುದ್ಧದ ಹೋರಾಟಕ್ಕೆ ಪ್ರೇರೇಪಿಸುತ್ತಿತ್ತು. ಕುವೆಂಪು ಅವರ ಕಾನೂರು ಹೆಗ್ಗಡತಿ, ಕಾರಂತರ ಚೋಮನ ದುಡಿ ಈ ಕಾದಂಬರಿಗಳು ಒಂದು ಚಳವಳಿ ಅಥವಾ ಹೋರಾಟದ ಹಿನ್ನೆಲೆಯಲ್ಲೇ  ರೂಪುಗೊಂಡ ಕೃತಿಗಳು. ಆದರೆ ಇವತ್ತಿನ ಬರಹಗಾರರು ತಮ್ಮ ಬರವಣಿಗೆಯಿಂದ ಧರ್ಮ ಮತ್ತು ಜಾತಿಗಳ ನಡುವೆ ಕಂದಕವನ್ನು ಸೃಷ್ಟಿಸಿ ಆ ಮೂಲಕ ಸಮಾಜವನ್ನು ಒಡೆಯಲು ಪ್ರಯತ್ನಿಸುತ್ತಿರುವರು. ಇನ್ನೊಂದು ಕಳವಳದ ಸಂಗತಿ ಎಂದರೆ ಈ ಸಾಹಿತಿಗಳಲ್ಲೇ ಎಡ ಮತ್ತು ಬಲಪಂಥಿಯ ಎನ್ನುವ ವರ್ಗಗಳು ಸೃಷ್ಟಿಯಾಗಿದ್ದು ಅವರು ಒಬ್ಬರ ಮೇಲೊಬ್ಬರು ಕೆಸರೆರುಚುತ್ತ ಓದುಗರು ಬರಹಗಾರರೆಂದರೆ ಅಸಹ್ಯ ಪಡುವಂತೆ ವರ್ತಿಸುತ್ತಿರುವರು. ಜೊತೆಗೆ ನಮ್ಮ ಬರಹಗಾರರು  ಬಂಡಾಯ, ನವ್ಯ, ನವೋದಯ, ದಲಿತ, ಅಲ್ಪಸಂಖ್ಯಾತ  ಎಂದು ಹತ್ತು ಹಲವು ಗುಂಪುಗಳಲ್ಲಿ ಹರಿದು ಹಂಚಿಹೋಗಿ  ತಮ್ಮ ತಮ್ಮ ಅಸ್ತಿತ್ವವನ್ನು ಗುರುತಿಸಿಕೊಳ್ಳಲು ಹೆಣಗುತ್ತಿರುವರು. ಇತ್ತೀಚಿನ ದಿನಗಳಲ್ಲಿ ನಮ್ಮ ಬರಹಗಾರರೆಲ್ಲ ಸಂಘಟಿತರಾಗಿ ಚಳವಳಿ ಇಲ್ಲವೇ ಹೋರಾಟವನ್ನು ರೂಪಿಸಿದ ಉದಾಹರಣೆಯೇ ಇಲ್ಲ.

                ಕೆಲವು ದಿನಗಳ ಹಿಂದೆ ನಾಡಿನ ಪ್ರಸಿದ್ಧ ಸಾಹಿತಿಯೋರ್ವರು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ನಿಮ್ಮ ಪ್ರಕಾಶನ ಸಂಸ್ಥೆಯಿಂದ ಪ್ರಕಟವಾದ ಎಷ್ಟು ಕೃತಿಗಳಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ ಎಂದು ನೇರವಾಗಿ ಪ್ರಕಾಶಕರನ್ನೇ ಪ್ರಶ್ನಿಸಿದರು. ಪ್ರಶಸ್ತಿ ಪುರಸ್ಕಾರಗಳೆಲ್ಲ ತಮ್ಮ ಮೌಲ್ಯವನ್ನು ಕಳೆದುಕೊಳ್ಳುತ್ತಿರುವ ದಿನಗಳಲ್ಲಿ ಆ ಮಹನೀಯರು ಹೀಗೆ ಪ್ರಶ್ನಿಸಿದ್ದು ತೀರ ಅಸಂಗತವಾಗಿತ್ತು. ಪ್ರಶಸ್ತಿ ಪಡೆದ ಕೃತಿಗಳೆಲ್ಲ ಮೌಲಿಕ ಕೃತಿಗಳು ಎನ್ನುವುದು ಅವರ ನಂಬಿಕೆಯಾದರೆ ಪ್ರತಿ ವರ್ಷ ಪ್ರಕಟವಾಗುವ ಎಲ್ಲ ಪುಸ್ತಕಗಳಿಗೂ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಕೊಡಲು ಸಾಧ್ಯವೇ ಎನ್ನುವ ಪ್ರಶ್ನೆ ಇಲ್ಲಿ ಎದುರಾಗುತ್ತದೆ. ಜೊತೆಗೆ ಪ್ರಶಸ್ತಿಯ ಮಾನದಂಡಗಳು ಯಾವುವು ಎನ್ನುವ ಇನ್ನೊಂದು ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಪ್ರಶಸ್ತಿ ಮಾತ್ರ ಒಂದು ಕೃತಿಯ ಮೌಲ್ಯವನ್ನು ನಿರ್ಧರಿಸುತ್ತದೆ ಎನ್ನುವುದಾದರೆ ಕನ್ನಡಕ್ಕೆ ಇದುವರೆಗೆ ದೊರೆತಿದ್ದು ಕೇವಲ ಎಂಟು ಜ್ಞಾನಪೀಠ ಮಾತ್ರ. ಈ ಅರ್ಥದಲ್ಲಿ ಜ್ಞಾನಪೀಠ ಪುರಸ್ಕೃತರಿಂದ ಮಾತ್ರ ಕನ್ನಡದಲ್ಲಿ ಮೌಲಿಕ ಸಾಹಿತ್ಯ ಸೃಷ್ಟಿಯಾಗಿದೆ ಉಳಿದದ್ದು 'ಭೂಸಾ' ಸಾಹಿತ್ಯ ಎನ್ನಬೇಕೆ? ಕಣವಿ, ಜಿಎಸ್ಸೆಸ್, ದೇವನೂರ ಮಹಾದೇವ, ತೇಜಸ್ವಿ, ಲಂಕೇಶ್, ತರಾಸು, ಕಟ್ಟಿಮನಿ, ಇಂದಿರಾ, ತ್ರಿವೇಣಿ, ಅನುಪಮಾ ಇವರೆಲ್ಲ ಜ್ಞಾನಪೀಠ ಪುರಸ್ಕೃತರಿಗೆ ಸಮಾನದ ಕೃತಿಗಳನ್ನು ಬರೆಯಲಿಲ್ಲವೇ? (ನಮ್ಮ ಕುಂವೀ ಸಮಾರಂಭವೊಂದರಲ್ಲಿ ಜ್ಞಾನಪೀಠ ನಾನ್ಸೆನ್ಸ್ ಎಂದು ಸಿಟ್ಟಿನಿಂದ ಬೈದಿದ್ದರು) ಪ್ರಶಸ್ತಿಯೇ ಕೃತಿಯ ಗುಣಮಟ್ಟದ ಮಾನದಂಡ ಎನ್ನುವುದಾದರೆ ನಮ್ಮ ಬರಹಗಾರರೆಲ್ಲ ಬರವಣಿಗೆಯನ್ನೇ ನಿಲ್ಲಿಸಬೇಕಾಗುತ್ತದೆ. ಈಗಾಗಲೇ ಹಿರಿಯ ಲೇಖಕರು ಬರವಣಿಗೆಯಿಂದ ಸ್ವಯಂ ನಿವೃತ್ತಿ ತೆಗೆದುಕೊಂಡಿರುವ ಘಳಿಗೆ ಪ್ರಶಸ್ತಿಯ ಬರದಿಂದ ನಮ್ಮ ಯುವ ಬರಹಗಾರರು ಬರವಣಿಗೆಯನ್ನು ನಿಲ್ಲಿಸಿದಲ್ಲಿ ನಾಡಿನಲ್ಲಿ ಸಾಂಸ್ಕೃತಿಕ ದಾರಿದ್ರ್ಯ ಕಾಣಿಸಿಕೊಳ್ಳುವ ಅಪಾಯ ಎದುರಾಗುತ್ತದೆ.

                   ಈ ನಡುವೆ ಲೇಖಕರೇ ಪ್ರಕಾಶಕರಾಗಿ ಪುಸ್ತಕಗಳನ್ನು ಪ್ರಕಟಿಸುವ ಜವಾಬ್ದಾರಿಯನ್ನು ನಿರ್ವಹಿಸುತ್ತಿರುವರು. ಪರಿಣಾಮವಾಗಿ ಕನ್ನಡದಲ್ಲಿ ಪ್ರತಿವರ್ಷ ಅಸಂಖ್ಯಾತ ಪುಸ್ತಕಗಳು ಪ್ರಕಟಗೊಳ್ಳುತ್ತಿವೆಯೆಂದೂ ಮತ್ತು ಅವುಗಳಲ್ಲಿ ಅರ್ಧಕ್ಕಿಂತ ಹೆಚ್ಚು ಪುಸ್ತಕಗಳು ಓದಲು ಯೋಗ್ಯವಾಗಿರುವುದಿಲ್ಲ ಎನ್ನುವ ಅಪವಾದ ಕೇಳಿಬರುತ್ತಿದೆ. ಇದು ಸತ್ಯಕ್ಕೆ ಹತ್ತಿರವಾದ ಮಾತು. ಏಕೆಂದರೆ ಪುಸ್ತಕಗಳನ್ನು ಪ್ರಕಟಿಸುವ ಮಹತ್ವದ ಜವಾಬ್ದಾರಿ ಪ್ರಕಾಶಕರದೇ ಹೊರತು ಲೇಖಕರದಲ್ಲ. ವಿವರವಾಗಿ ಹೇಳುವುದಾದರೆ ಪ್ರಕಾಶಕರು  ಪುಸ್ತಕವೊಂದನ್ನು ಪ್ರಕಟಿಸಲು ನಿರ್ಧಿಷ್ಟ ಮಾನದಂಡಗಳಿವೆ. ಪ್ರಕಟಣೆಗೂ ಮೊದಲು ಕೃತಿಯೊಂದರ ಗುಣಮಟ್ಟವನ್ನು ನಿರ್ಧರಿಸಲು ಅಲ್ಲಿ ಹಸ್ತಪ್ರತಿ ಪರಿಶೀಲನಾ ಸಮತಿ ಇದ್ದು  ಈ ಸಮತಿಯು ಪ್ರಕಟಣೆಗೂ ಮೊದಲು ಹಸ್ತಪ್ರತಿಯನ್ನು ಅಮೂಲಾಗ್ರವಾಗಿ ಓದಿ ಅದರ  ಮೌಲಿಕತೆಯನ್ನು ಗುರುತಿಸಿ ಪ್ರಕಟಣೆಗೆ ಒಪ್ಪಿಗೆ ಸೂಚಿಸುತ್ತದೆ. ಆದರೆ ಲೇಖಕನೇ ಪ್ರಕಾಶಕನಾದಾಗ ಕೃತಿಯ ಮೌಲ್ಯ ಪರೀಕ್ಷೆಗೆ ಒಳಪಡುವುದಿಲ್ಲ. ಇನ್ನೊಂದು ಕೆಟ್ಟ ಬೆಳವಣಿಗೆ ಎಂದರೆ ಕೆಲವರು ತಮ್ಮ ಸಂಶೋಧನಾ ಪ್ರಬಂಧವನ್ನು   ತಾವೇ ಪ್ರಕಾಶಕರಾಗಿ ಪುಸ್ತಕ ರೂಪದಲ್ಲಿ ಪ್ರಕಟಿಸುವುದುಂಟು. ಸಾಮಾನ್ಯವಾಗಿ ಸಂಶೋಧನಾ ಪ್ರಬಂಧಗಳಲ್ಲಿ ಅಂಕಿ ಸಂಖ್ಯೆಯ ಮಾಹಿತಿಯೇ  ಹೆಚ್ಚಿರುವುದರಿಂದ ಅಂಥ ಕೃತಿಗಳು ವರದಿ ಎಂದೆನಿಸಿಕೊಳ್ಳುತ್ತವೆಯೋ ವಿನ: ಅವು  ಮೌಲಿಕ ಕೃತಿಗಳ ಗುಂಪಿಗೆ ಸೇರಲಾರವು.

                          ಓದುಗರು ಕನ್ನಡ ಪುಸ್ತಕಗಳ ಓದಿನಿಂದ ವಿಮುಖರಾಗುತ್ತಿರುವುದು ನನ್ನನ್ನು ಹೆಚ್ಚು ಚಿಂತಿಸುವಂತೆ ಮಾಡುತ್ತಿರುವ ಸಾಂಸ್ಕೃತಿಕ ತಳಮಳಗಳಲ್ಲೊಂದು. ಇಂಗ್ಲಿಷ್ ಮಾಧ್ಯಮದ ಶಿಕ್ಷಣ, ಜಾಗತೀಕರಣದ ಭರಾಟೆ, ಮನೋರಂಜನಾ ಮಾಧ್ಯಮಗಳ ಹಾವಳಿ ಇತ್ಯಾದಿ ಕಾರಣಗಳಿಂದ ನಮ್ಮ ಯುವ ಪೀಳಿಗೆಗೆ ಕನ್ನಡ ಪುಸ್ತಕಗಳ ಓದು ರುಚಿಸುತ್ತಿಲ್ಲ. ಆದರೆ ಮನೆಯ ಹಿರಿಯರೂ ಸಹ ತಮ್ಮ ಅಭಿರುಚಿಯನ್ನು ಪುಸ್ತಕಗಳ ಓದಿನಿಂದ ಟಿ ವಿ ಚಾನೆಲ್ ಗಳ ವೀಕ್ಷಣೆಗೆ ರೂಪಾಂತರಿಸಿಕೊಂಡಿರುವರು. ಒಂದು ಕಾಲದಲ್ಲಿ ಮನೆಯ ಕೆಲಸದ ಬಿಡುವಿನ ನಡುವೆ ಕನ್ನಡದ ಕಥೆ, ಕಾದಂಬರಿಗಳನ್ನು ಓದುತ್ತಿದ್ದ ಗೃಹಿಣಿಯರು ಈಗ ಧಾರಾವಾಹಿಗಳ ಪುಲ್ ಟೈಮ್ ನೋಡುಗರಾಗಿ ಬದಲಾಗಿರುವರು. ಪೊಗೊ, ಕಾರ್ಟೂನ್ ನೆಟ್ ವರ್ಕ್ ಗಳನ್ನು ನೋಡುತ್ತಿರುವ ಮಕ್ಕಳಿಗೆ ಚಂದಾಮಾಮ ನೋಡಲು ವ್ಯವಧಾನವಿಲ್ಲವಾಗಿದೆ (ಚಂದಾಮಾಮ ಈಗಲೂ ಪ್ರಕಟವಾಗುತ್ತಿರುವದು ಅಚ್ಚರಿಯ ವಿಷಯ).  ಈ ನಡುವೆ ಚೇತನ್ ಭಗತ್, ಅರುಧಂತಿ ರಾಯ್, ವಿಕ್ರಮ್ ಸೇಠ ಅವರಂಥ  ಲೇಖಕರು ಕನ್ನಡದ ಯುವ ಓದುಗರನ್ನು ಇಂಗ್ಲಿಷ್ ಕಾದಂಬರಿಗಳ ಓದಿನೆಡೆ ಸೆಳೆದುಕೊಂಡಿರುವರು. ವಿಶೇಷವಾಗಿ ನಮ್ಮ ಯುವ ಜನತೆಯಲ್ಲಿ ಓದಿನ ಅಭಿರುಚಿಯಿದೆಯಾದರೂ ಅವರದು ಕಾರ್ಪೊರೇಟ್ ಸಂಸ್ಕೃತಿಯಾಗಿರುವುದರಿಂದ ಅವರು ಕನ್ನಡ ಪುಸ್ತಕಗಳ ಓದನ್ನು ಅಷ್ಟೊಂದು ಗಂಭೀರವಾಗಿ ಪರಿಗಣಿಸಿಲ್ಲ. ಆದ್ದರಿಂದ ಈ ಪ್ರಕಾರದ ಓದುಗರನ್ನು (ಸಾಪ್ಟ್ ವೇರ್ ಟೆಕ್ಕಿಗಳು) ಗಂಭೀರ ಓದುಗರೆಂದು ಕರೆಯುವ ಹಾಗಿಲ್ಲ. ಜೊತೆಗೆ ಕರ್ನಾಟಕದಲ್ಲಿ ಇಂಗ್ಲಿಷ್ ಮಾಧ್ಯದಲ್ಲಿ ಕಲಿಯುತ್ತಿರುವ ಮಕ್ಕಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ವೃದ್ಧಿಸುತ್ತಿರುವುದರಿಂದ ಮುಂದೊಂದು ದಿನ ಕನ್ನಡ ಪುಸ್ತಕಗಳಿಗೆ ಓದುಗರೇ ಇಲ್ಲದಂಥ ಪರಿಸ್ಥಿತಿ ನಿರ್ಮಾಣವಾಗಲಿದೆ ಎನ್ನುವ ಆತಂಕ ಅನೇಕ ಲೇಖಕರದು.

ಸಿನಿಮಾ


                     ಲೇಖನದ ಪ್ರಾರಂಭದಲ್ಲಿ ಹೇಳಿದ 'ಮೇರಿ ಕೊಮ್' ಸಿನಿಮಾದ ಘಟನೆಯನ್ನೇ ಆಧಾರವಾಗಿಟ್ಟುಕೊಂಡು ನಾನು ಸಿನಿಮಾ ಎನ್ನುವ ಸಂಸ್ಕೃತಿಯ ಕುರಿತಾದ ನನ್ನ ತಳಮಳವನ್ನು ಅಕ್ಷರ ರೂಪಕ್ಕಿಳಿಸುತ್ತಿದ್ದೇನೆ. ಮೇರಿ ಕೋಮ್ ನಂಥ ಸಂದೇಶ ಸಾರುವ ಸಿನಿಮಾ ನಮ್ಮ ಪ್ರೇಕ್ಷಕರಿಗೆ ಬೇಕಾಗಿಲ್ಲವೆಂದರೆ ಅವರೆಂಥ ಸಿನಿಮಾಗಳನ್ನು ನಿರೀಕ್ಷಿಸುತ್ತಿರುವರು ಎನ್ನುವ ಪ್ರಶ್ನೆ ನನ್ನದು. ಹೀಗೆ ಪ್ರಶ್ನಿಸುತ್ತಿರುವ ಹೊತ್ತಿನಲ್ಲೇ ನಮ್ಮ ಪ್ರೇಕ್ಷರೆದುರು ಎರಡು ಆಯ್ಕೆಗಳಿವೆ ಎನ್ನುವ ಸಂಗತಿಯೂ ನನಗೆ ತಿಳಿದಿದೆ. ಒಂದು ಕಡೆ  ಸಮಾಜಮುಖಿ ಕಥೆಯಾಧರಿಸಿ ನಿರ್ಮಾಣಗೊಳ್ಳುತ್ತಿರುವ ಸಿನಿಮಾಗಳಿದ್ದರೆ ಇವುಗಳಿಗೆ ವಿರುದ್ಧವಾಗಿ ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವ ಮತ್ತು ಪ್ರೇಕ್ಷಕರನ್ನು ಹೆಚ್ಚು ಹೆಚ್ಚು ತಮ್ಮತ್ತ ಸೆಳೆಯುತ್ತಿರುವ ಸಿನಿಮಾಗಳಿವೆ. ಆದರೆ ನಮ್ಮ ಪ್ರೇಕ್ಷಕರು ಸಮಾಜಮುಖಿ ಕಥೆಯಾಧಾರಿತ ಸಿನಿಮಾಗಳನ್ನು ಕಲಾತ್ಮಕ ಎನ್ನುವ ಹಣೆಪಟ್ಟಿ ಕಟ್ಟಿ ಅವುಗಳನ್ನು ಸಿನಿಮಾ ಮಾಧ್ಯಮದ ಮೇನ್ ಸ್ಟ್ರಿಂ ನಿಂದ ದೂರವೇ ಇಟ್ಟಿರುವರು. ಅದಕ್ಕೆಂದೇ ಹಗ್ಗದ ಕೊನೆ, ಪುಟ್ಟಕ್ಕನ ಹೈವೇ, ಭಾರತ ಸ್ಟೋರ್ಸ್ ನಂಥ ಗಂಭೀರ ಕಥಾವಸ್ತುವಿನ ಸಿನಿಮಾಗಳನ್ನು ದೊಡ್ಡ ಪರದೆಯ ಮೇಲೆ ನೋಡಲು ಸಾಧ್ಯವಾಗುತ್ತಿಲ್ಲ. ಜೊತೆಗೆ ಸಿನಿಮಾ ರಂಗದ ಬಹುತೇಕ ನಟ ನಟಿಯರು ಮತ್ತು ನಿರ್ದೇಶಕರು ಈ ಕಲಾತ್ಮಕ ಸಿನಿಮಾಗಳಲ್ಲಿ ಕೆಲಸ ಮಾಡಲು ಇಚ್ಛಿಸುತ್ತಿಲ್ಲದಿರುವುದು ಬಹುದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಪ್ರಕಾಶ್ ರೈ ನಂಥ ಕಮರ್ಷಿಯಲ್ ಸಿನಿಮಾಗಳ ಖಳನಾಯಕ ಕನ್ನಡದಲ್ಲಿ 'ಅತಿಥಿ' ಎನ್ನುವ ಕಲಾತ್ಮಕ ಸಿನಿಮಾದಲ್ಲಿ ಹಣ ಪಡೆಯದೆ ಅಭಿನಯಿಸಿ ಇಂಥ ಸಿನಿಮಾಗಳಿಗೆ ಒತ್ತಾಸೆಯಾಗಿ ನಿಂತರು. ಆದರೆ ಇದೇ ಮನೋಭಾವವನ್ನು ನಾವು  ಇತರ ಜನಪ್ರಿಯ ಕಲಾವಿದರಿಂದ ನಿರೀಕ್ಷಿಸುವುದು ಶುದ್ಧ ಮೂರ್ಖತನವಾಗುತ್ತದೆ. ಇತ್ತೀಚಿಗೆ 'ಮೈತ್ರಿ' ಎನ್ನುವ ಮಕ್ಕಳ ಸಿನಿಮಾದಲ್ಲಿ ಸ್ಟಾರ್ ಕಲಾವಿದ ಪುನೀತ್ ಹಿರೊಯಿಜಮ್ ನ ಯಾವ ನಖರಾಗಳಿಗೂ ಆಸ್ಪದ ಕೊಡದೆ ಅಭಿನಯಿಸಿದ್ದು ಎಲ್ಲೋ ಒಂದು ಹೊಸ ಬೆಳವಣಿಗೆ ಎನ್ನಬಹುದು. ಆದರೆ ಪುನೀತ್ ಮತ್ತು ಪ್ರಕಾಶ್ ರೈ ಅವರ ಕೆಲಸವನ್ನು ಸಿನಿಮಾ ರಂಗವಾಗಲಿ ಇಲ್ಲವೇ ಮಾಧ್ಯಮಗಳಾಗಲಿ ಗುರುತಿಸಿದ್ದು ಬಹಳ ಕಡಿಮೆ. ಆದರೆ ಇದೆ ಪ್ರಕಾಶ್ ರೈ ನಾನು ನನ್ನ ಕನಸು, ಒಗ್ಗರಣೆ ಸಿನಿಮಾಗಳನ್ನು ಕನ್ನಡದಲ್ಲಿ ನಿರ್ದೇಶಿಸಿ ಅಭಿನಯಿಸಿದಾಗ ಸಿನಿಮಾ ವಿಮರ್ಶಕರು ಮತ್ತು ಮಾಧ್ಯಮಗಳು ಹಳಸಲು, ರೀಮೇಕ್ ಎಂದೆಲ್ಲ ಶರಾ ಬರೆದರು. ತೀರ ಅಂಗಾಂಗ ಪ್ರದರ್ಶನ, ಅಶ್ಲೀಲ ಸಂಭಾಷಣೆ, ಹೊಡೆದಾಟಗಳ ಸಿನಿಮಾಗಳಿಗಿಂತ ಈ ಪ್ರಕಾಶ್ ರೈ ನಿರ್ದೇಶನದ ಸಿನಿಮಾಗಳು ಉತ್ತಮ ಕಥೆಯಿಂದಾಗಿ ಕುಟುಂಬದ ಸದಸ್ಯರೆಲ್ಲ ಒಟ್ಟಾಗಿ ಕುಳಿತು ನೋಡುವಂತಿದ್ದವು ಎನ್ನುವ ಮಾತನ್ನು ತಳ್ಳಿ ಹಾಕುವಂತಿಲ್ಲ.

                ಹಿಂದೆಯೆಲ್ಲ ನಾಯಕನಟನ ಅಭಿನಯ  ಸಿನಿಮಾವೊಂದರ ಮೂಲ ಪಾತ್ರಕ್ಕೆ ಮಾತ್ರ ಸೀಮಿತವಾಗಿರುತ್ತಿತ್ತು. ಹಾಸ್ಯ ಮತ್ತು ಖಳ ಪಾತ್ರಗಳ ಅಭಿನಯಕ್ಕೆ ಬೇರೆ ಕಲಾವಿದರ ಪಾತ್ರ ವರ್ಗವಿರುತ್ತಿತ್ತು.   ಒಂದೊಮ್ಮೆ  ಖಳ ಅಥವಾ ಹಾಸ್ಯ ಪಾತ್ರ ಸಿನಿಮಾ ಕಥೆಯ ಬಹುಭಾಗವನ್ನು ಆವರಿಸುವಂತಿದ್ದರೆ ಆಗ ನಟ ನಾಯಕನಾಗಿಯೂ ಮತ್ತು ಖಳ ನಾಯಕ ಇಲ್ಲವೇ  ಹಾಸ್ಯ ನಟನಾಗಿಯೂ ದ್ವಿಪಾತ್ರದಲ್ಲಿ ಅಭಿನಯಿಸುತ್ತಿದ್ದ. ಹೀಗೆ ನಾಯಕ ಮತ್ತು ಖಳ ಎರಡೂ ಪಾತ್ರಗಳಲ್ಲಿ ಅಭಿನಯಿಸುವಾಗ ಕೆಟ್ಟ ಪಾತ್ರಕ್ಕೆ ನ್ಯಾಯದ ಚೌಕಟ್ಟಿನಲ್ಲಿ  ಶಿಕ್ಷೆ ದೊರೆಯುತ್ತಿತ್ತು. ದಾರಿ ತಪ್ಪಿದ ಮಗ, ನಾನೊಬ್ಬ ಕಳ್ಳ, ವಿಜಯ ವಿಕ್ರಮ್ ಈ ಸಿನಿಮಾಗಳನ್ನು ನಾಯಕ  ನಟರ ದ್ವಿಪಾತ್ರಕ್ಕೆ ಉದಾಹರಣೆಯಾಗಿ ಹೇಳಬಹುದು. ಕಾಲಾನಂತರದಲ್ಲಿ ಸಿನಿಮಾ ರಂಗದ ಚಿತ್ರಕಥೆಯಲ್ಲಿ ಸಾಕಷ್ಟು ಬದಲಾವಣೆಗಳಾಗಿ ನಾಯಕ  ನಟನನ್ನೇ ವಿವಿಧ ಪಾತ್ರಗಳಲ್ಲಿ ತೋರಿಸುವ  ಪ್ರಯೋಗಗಳಾದವು. ಪರಿಣಾಮವಾಗಿ ಈಗಿನ ನಾಯಕ ನಟರೆಲ್ಲ ಸಕಲ ಕಲಾವಲ್ಲಭರಾಗಿ ಯಾವ ಪಾತ್ರಕ್ಕೂ ಸೈ ಎಂದು ಅಭಿನಯಿಸತೊಡಗಿದರು. ಈ ಕಾರಣದಿಂದಲೇ ಜಗ್ಗೇಶ್, ಶರಣ್, ಕೋಮಲ್  ರಂಥ ಹಾಸ್ಯ ಕಲಾವಿದರು ತಮ್ಮ ವಿಚಿತ್ರ ಮ್ಯಾನರಿಜಂ ನಿಂದ ಇಲ್ಲಿ ನಾಯಕ ನಟರಾಗಿ ರೂಪುಗೊಂಡರು. ಪ್ರಭಾಕರ್, ದೇವರಾಜ್, ಶಶಿಕುಮಾರ್ ಇತ್ಯಾದಿ ಖಳ ನಟರು ನಾಯಕ ನಟರಾಗಿ ಬಡ್ತಿ ಪಡೆದರು. ಕಲಾವಿದರು ಹೀಗೆ ರೂಪಾಂತರಗೊಳ್ಳುವುದನ್ನು ನಾನು ವಿರೋಧಿಸುತ್ತಿಲ್ಲವಾದರೂ ಈ ಬೆಳವಣಿಗೆಯಿಂದ ನಾಯಕ ನಟ ಹೇಗಿರಬೇಕೆನ್ನುವ ಪ್ರೇಕ್ಷಕರ ಕಲ್ಪನೆಯನ್ನೇ ಬುಡಮೇಲು ಮಾಡುವಂಥ ಸಿನಿಮಾಗಳು ತಯ್ಯಾರಾಗತೊಡಗಿದವು. ನಾಯಕನನ್ನು ರೌಡಿ, ಕಳ್ಳ, ಕೊಲೆಗಾರನಾಗಿ ತೋರಿಸುವ ಸಾಲು ಸಾಲು ಸಿನಿಮಾಗಳು ಬೆಳ್ಳಿ ಪರದೆಯನ್ನು ಅಲಂಕರಿಸಿದವು. ಕೊಲೆ, ಕಳ್ಳತನ, ರಕ್ತಪಾತದ ವೈಭವೀಕರಣದಲ್ಲಿ ಸಿನಿಮಾದ ನಾಯಕ  ನಟನ ಇಮೇಜ್ ಸಂಪೂರ್ಣ ಬದಲಾಯಿತು. ನಾನೇ ರಾಜ, ಪ್ರಳಯಾಂತಕ, ಖದೀಮ ಕಳ್ಳರುನಂಥ ಸಾಲು ಸಾಲು ಕೊಲೆಗಳನ್ನು ಮಾಡುವ ಮತ್ತು ನ್ಯಾಯಾಲಯಕ್ಕೆ ಚಳ್ಳೆ ಹಣ್ಣು ತಿನ್ನಿಸುವ ಕಥಾವಸ್ತುವಿರುವ ಸಿನಿಮಾಗಳ ನಾಯಕರು ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಪ್ರೇಕ್ಷಕರ ಆರಾಧ್ಯ ದೈವವಾದರು. ಅದುವರೆಗೂ ಸದಭಿರುಚಿಯ ಸಿನಿಮಾಗಳ ನಿರ್ಮಾಣಕ್ಕೆ ಹೆಸರಾಗಿದ್ದ ರಾಜಕುಮಾರ್ ನಿರ್ಮಾಣ   ಸಂಸ್ಥೆ ಸಹ ಇಂಥದ್ದೊಂದು ಬದಲಾವಣೆಗೆ ಅನಿವಾರ್ಯವಾಗಿ ತೆರೆದುಕೊಳ್ಳಬೇಕಾಯಿತು. ಪರಿಣಾಮವಾಗಿ ಅದೇ ಆಗ ಪ್ರವರ್ಧಮಾನಕ್ಕೆ ಬರುತ್ತಿದ್ದ ಶಿವಣ್ಣನನ್ನು ರೌಡಿ ಪಾತ್ರದಲ್ಲಿ ಚಿತ್ರಿಸಿದ  ಭೂಗತ ಲೋಕದ ಪಾತಕಿಗಳ ಕಥೆಯುಳ್ಳ 'ಓಂ' ಸಿನಿಮಾ ರಾಜ್ ಬ್ಯಾನರಿನಲ್ಲಿ ನಿರ್ಮಾಣಗೊಂಡಿತು. ವಿಪರ್ಯಾಸವೆಂದರ ಕನ್ನಡ ಚಿತ್ರರಂಗ ಕಳೆದೆರಡು ದಶಕಗಳಿಂದ ಈ ನಟನನ್ನು ರೌಡಿ ಪಾತ್ರಗಳ ಇಮೇಜಿಗೆ ಬ್ರ್ಯಾಂಡ್ ಮಾಡಿ  ಬಿಟ್ಟಿದೆ. ಸಿನಿಮಾ ನಾಯಕ ರೌಡಿಯಾಗುವುದು, ಸಾಲು ಸಾಲು ಕೊಲೆಗಳನ್ನು ಮಾಡುವುದು ಸಿನಿಮಾದ ಕೊನೆಯಲ್ಲಿ ನಿರಪರಾಧಿ ಎಂದು ಬಿಡುಗಡೆಯಾಗುವ ಇಂಥದ್ದೇ ಕಥೆಯ ನೂರಾರು ಸಿನಿಮಾಗಳು ಪ್ರತಿವರ್ಷ ಬಿಡುಗಡೆಯಾಗುತ್ತಿವೆ. ರೌಡಿಜಂ ಕಥೆಯ  ಸಿನಿಮಾಗಳ ನಾಯಕರನ್ನೇ ಆದರ್ಶವಾಗಿಟ್ಟುಕೊಳ್ಳುವ ನಮ್ಮ ಯುವ ಪೀಳಿಗೆ ಸತ್ಯ, ಮಸ್ತಿ, ಕಿಚ್ಚ, ಹುಚ್ಚರನ್ನು ತಮ್ಮೊಳಗೆ ಅಂತರ್ಗತಗೊಳಿಸಿಕೊಂಡು ಆ ಪಾತ್ರಗಳಂತೆಯೇ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುತ್ತಿರುವರು. ಹೀಗೆ ಸಿನಿಮಾ ಎನ್ನುವ ಸೃಜನಶೀಲ ಮಾಧ್ಯಮದ  ತಳಮಳದ ಕುರಿತು ಬರೆಯುತ್ತಿರುವ ಹೊತ್ತಿನಲ್ಲೇ ಒಂದು ಪ್ರೇಕ್ಷಕ ಗಣ ನನಗೆ ಸವಾಲಿನ ಪ್ರಶ್ನೆಯನ್ನು ಹಾಕಿ ನಾನು ಮತ್ತಷ್ಟು ಚಿಂತಿಸುವಂತೆ ಮಾಡುತ್ತಿರುವರು. ಅವರು ಹೀಗೆ ಪ್ರಶ್ನಿಸುತ್ತಿರುವುದರಲ್ಲೂ ನ್ಯಾಯವಿದೆ ಎನ್ನುವ ನಂಬಿಕೆ ನನ್ನದು. ಮೊನ್ನೆ ಟಿ ವಿ ಯಲ್ಲಿ 'ದೃಶ್ಯ' ಸಿನಿಮಾ ವೀಕ್ಷಿಸಿದ ಹಿರಿಯರೊಬ್ಬರು ಆ ಸಿನಿಮಾದ ನಾಯಕ ಪತ್ನಿ ಮತ್ತು ಮಗಳು ಮಾಡಿದ ಕೊಲೆಯನ್ನು ಮುಚ್ಚಿಡಲು ಮಾಡುವ ಪ್ರಯತ್ನ ಮತ್ತು ಆ ಒಂದು ಅಪವಾದದಿಂದ ಬಚಾವಾಗುವುದು ಅದು ಇಡೀ ನ್ಯಾಯಾಂಗ ವ್ಯವಸ್ಥೆಯನ್ನೇ ಅಣಕಿಸುವಂತಿತ್ತು ಇದು ಸರಿಯೇ ಎಂದು ಪ್ರಶ್ನಿಸಿದರು. ಸಿನಿಮಾ ಮಾಧ್ಯಮ ಇಡೀ ವ್ಯವಸ್ಥೆಯನ್ನೇ ಅತ್ಯಂತ ಸರಳಿಕೃತಗೊಳಿಸಿರುವದರಿಂದ ಇಲ್ಲಿ ಏನೆಲ್ಲ ಸಂಭವಿಸಬಹುದು ಹೀಗಾಗಿ ಆ ವೃದ್ಧರ ಪ್ರಶ್ನೆಗೆ ನನ್ನಲ್ಲಿ ಉತ್ತರವಿರಲಿಲ್ಲ.

                   ಇನ್ನು ಸಿನಿಮಾದಲ್ಲಿನ ಹಾಡುಗಳ ವಿಷಯಕ್ಕೆ ಬಂದರೆ ಹಿಂದೆಯೆಲ್ಲ ಸಿನಿಮಾ ಹಾಡುಗಳು ದೇವರ ಮನೆಯಲ್ಲಿ ಭಕ್ತಿ ಹಾಡಾಗಿ ಮತ್ತು ಶಾಲೆಗಳಲ್ಲಿ ಪ್ರಾರ್ಥನಾ ಗೀತೆಯಾಗಿ ಬಳಕೆಯಾದ ಸಾಕಷ್ಟು ಉದಾಹರಣೆಗಳಿವೆ. ಆಗೆಲ್ಲ ಸಿನಿಮಾ ಹಾಡುಗಳಲ್ಲಿ ಒಂದು ಸಂದೇಶವಿರುತ್ತಿತ್ತು. ಬಂಗಾರದ ಮನುಷ್ಯ ಸಿನಿಮಾದ "ಕೈಲಾಗದು ಎಂದು ಕೈಕಟ್ಟಿ ಕುಳಿತರೆ ಆಗದು ಕೆಲಸವು ಎಂದೂ" ಎನ್ನುವ ಹಾಡು ಆ ದಿನಗಳ  ಕೃಷಿಕರ ಬದುಕಿನಲ್ಲಿ ಭರವಸೆಯ ಆಶಾಕಿರಣವನ್ನು ಮೂಡಿಸಿತು. "ಸ್ವಾಮಿ ದೇವನೆ ಲೋಕ ಪಾಲನೆ" ಎನ್ನುವ ಸಿನಿಮಾ ಗೀತೆ ಶಾಲೆಗಳಲ್ಲಿ ಪ್ರಾರ್ಥನಾ ಗೀತೆಯಾಯಿತು. "ಪೂಜಿಸಲೆಂದು ಹೂಗಳ ತಂದೆ" ಹಾಡನ್ನು ದೇವರ ಮನೆಯಲ್ಲಿ ಅದೆಷ್ಟೋ ಕಂಠಗಳು ದೇವರ ನಾಮವಾಗಿ ಹಾಡಿದ್ದುಂಟು. ಕನ್ನಡ ನೆಲದ ಚರಿತ್ರೆ ಮತ್ತದರ ವೈಭವ ರಾಜಕುಮಾರ ಅವರ ಕಂಠಸಿರಿಯಲ್ಲಿ ಹಾಡಿನ ರೂಪದಲ್ಲಿ  ಅನೇಕ ಸಿನಿಮಾಗಳಲ್ಲಿ ಕಾಣಿಸಿಕೊಂಡಿದೆ. ಕುವೆಂಪು, ಬೇಂದ್ರೆ, ಕೆ. ಎಸ್. ನರಸಿಂಹಸ್ವಾಮಿ ಅವರ ಹಾಡುಗಳನ್ನೂ ಸಂದರ್ಭಕ್ಕನುಸಾರವಾಗಿ ಸಿನಿಮಾಗಳಲ್ಲಿ ಬಳಸಿಕೊಂಡಿದ್ದುಂಟು.  ಆದರೆ ಕಾಲ ಬದಲಾದಂತೆ ಕನ್ನಡ ಸಿನಿಮಾಗಳ ಹಾಡುಗಳು ಸಹ ಹೊಸ ರೂಪಾಂತರ ಹೊಂದಿ ಅಪ್ಪಾ ಲೂಜು, ಹಳೆ ಕಬ್ಣ, ಸೊಂಟದ ವಿಷಯ ಹೀಗೆ ಅಸಂಬದ್ಧ ಮತ್ತು ಅಶ್ಲೀಲ ಪದಗಳು ನಮ್ಮ ಸಿನಿಮಾ ಹಾಡುಗಳಲ್ಲಿ ಹೆಚ್ಚು ಹೆಚ್ಚು ಜಾಗ ಪಡೆಯತೊಡಗಿದವು. ಒಂದು ಕಾಲದಲ್ಲಿ ಶಾಲೆಗಳಿಗೆ ಪ್ರಾರ್ಥನಾ ಗೀತೆಯನ್ನು ಕೊಟ್ಟ ಸಿನಿಮಾರಂಗ ಮುಂದಿನ ದಿನಗಳಲ್ಲಿ ಶಿಕ್ಷಕಿ ಪಾತ್ರದಿಂದ "ಅ ಆ ಇ ಈ........ ಅಂ ಆ:" ಎಂದು ಅತ್ಯಂತ ಮಾದಕವಾಗಿ ಹಾಡಿಸಿತು. ಇವತ್ತಿನ ಸಿನಿಮಾಗಳಲ್ಲಿ ಹಾಡುಗಳನ್ನು ಕೇವಲ ಪ್ರೇಕ್ಷಕರನ್ನು ಸಿನಿಮಾ ಮಂದಿರಗಳತ್ತ ಸೆಳೆಯುವ ತಂತ್ರವಾಗಿ ಮಾತ್ರ ಬಳಸಿಕೊಳ್ಳಲಾಗುತ್ತಿದೆ. ಈ ಕಾರಣದಿಂದಾಗಿ ಸಿನಿಮಾವೊಂದರ ಹಾಡುಗಳಿಗೂ ಮತ್ತು ಸಿನಿಮಾ ಕಥೆಗೂ ಯಾವುದೇ ಸಂಬಂಧವಿರುವುದಿಲ್ಲ. ಹೀಗೆ ಹಾಡನ್ನು ಸಿನಿಮಾದಲ್ಲಿ ತಂತ್ರ ಇಲ್ಲವೇ ಸಾಧನವಾಗಿ ಬಳಸಿಕೊಂಡಾಗ ಅಲ್ಲಿ ಅಶ್ಲೀಲತೆ ಮತ್ತು ಅಸಹಜತೆ ಹೆಚ್ಚು ಪಾರುಪತ್ಯ ಸಾಧಿಸಿ ಸಹಜತೆ ಎನ್ನುವುದು ಗೌಣವಾಗುತ್ತದೆ.

ಕೊನೆಯ ಮಾತು 


                ಓದಿದ ಪುಸ್ತಕ ಮತ್ತು  ನೋಡಿದ ಸಿನಿಮಾ ನಮ್ಮನ್ನು ಅನೇಕ ದಿನಗಳವರೆಗೆ ಕಾಡಬೇಕು. ಜೊತೆಗೆ ಸಾಹಿತ್ಯ ಮತ್ತು ಸಿನಿಮಾ ಸಮಾಜಮುಖಿ ಆಗಿರಬೇಕಾದ ಅಗತ್ಯ ಬಹಳಷ್ಟಿದೆ. ಸಮಾಜವೊಂದರ ಪರಿವರ್ತನೆಗೆ ಈ ಎರಡು ಮಾಧ್ಯಮಗಳು ಕಾರಣವಾಗಬೇಕು. ಹಿಂದೆಯೆಲ್ಲ ಸಾಹಿತ್ಯ ಮತ್ತು ಸಿನಿಮಾದಿಂದ ಉತ್ತಮ ಸಮಾಜ ನಿರ್ಮಾಣಗೊಂಡಿದ್ದಕ್ಕೆ ಇತಿಹಾಸದಲ್ಲಿ ಸಾಕಷ್ಟು ಉದಾಹರಣೆಗಳಿವೆ. ರಾಜಕುಮಾರ ಅವರಂಥ ಕಲಾವಿದ ಸದಭಿರುಚಿಯ ಮತ್ತು ಸಮಾಜಮುಖಿ ಸಿನಿಮಾಗಳಿಂದ ಪ್ರೇಕ್ಷಕರ ಆರಾಧ್ಯ ದೈವವಾಗಿ ಬೆಳೆದು ನಿಂತರು. ಕುವೆಂಪು, ಬೇಂದ್ರೆ, ಕಾರಂತ ಈ ನೆಲದ ಜನರ ಬದುಕನ್ನೇ ಅಕ್ಷರ ರೂಪಕ್ಕಿಳಿಸಿ ಸಾಹಿತ್ಯವನ್ನು ಸಮಾಜಮುಖಿಯಾಗಿಸಿದರು. ಆದರೆ ಇವತ್ತು ಅಭಿವ್ಯಕ್ತಿ ಮಾಧ್ಯಮಗಳಾದ  ಸಾಹಿತ್ಯ ಮತ್ತು ಸಿನಿಮಾ  ಜಾಗತೀಕರಣದ ಸುಳಿಗೆ ಸಿಲುಕಿ ಸಾಕಷ್ಟು ಬದಲಾವಣೆಗೊಂಡಿವೆ. ಈ ತಂತ್ರಜ್ಞಾನದ ಯುಗದಲ್ಲಿ ಓದುಗ ಮತ್ತು ಪ್ರೇಕ್ಷಕನ ಮನೋಭಾವದಲ್ಲೂ ಬಹುದೊಡ್ಡ ಪರಿವರ್ತನೆಯಾಗಿದೆ. ಪುಸ್ತಕ ಹಾಗೂ ಸಿನಿಮಾ ಮನೋರಂಜನೆಯ ಸರಕೆಂಬ ಭಾವನೆ ಬಲವಾಗುತ್ತಿರುವ ಹೊತ್ತಿನಲ್ಲೇ ಕೆಲವು ಸೃಜನಶೀಲ ಮನಸ್ಸುಗಳು ಸಾಂಸ್ಕೃತಿಕ ವಲಯವೊಂದು ಹೀಗೆ ರೂಪಾಂತರಗೊಳ್ಳುತ್ತಿರುವುದನ್ನು ನೋಡಿ ತಲ್ಲಣಗೊಳ್ಳುತ್ತಿವೆ.

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 


     

      

Thursday, May 4, 2017

ಇದು ನನ್ನದು ಆದರೆ ನನ್ನದು ಮಾತ್ರವಲ್ಲ

            ಬ್ಲೇಕ್ ತನ್ನ ಬರವಣಿಗೆಯನ್ನು ಕುರಿತು ಹೀಗೆ ಹೇಳುತ್ತಾನೆ ‘ಇದು ನನ್ನದು ಆದರೆ ನನ್ನದು ಮಾತ್ರವಲ್ಲ’. ತನ್ನ ಬರವಣಿಗೆಯ ಕೃಷಿಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಕಾರಣರಾದವರನ್ನು ಬ್ಲೇಕ್ ನೆನಪಿಸಿಕೊಳ್ಳುವ ರೀತಿ ಇದು. ಏಕೆಂದರೆ ಕಥೆ, ಕಾವ್ಯ, ಕಾದಂಬರಿ ಲೇಖಕನ ಸೃಜನಶೀಲ ಸೃಷ್ಟಿಯಾದರೂ ಆ ಸೃಷ್ಟಿಯ ಹಿಂದೆ ಅವನಿಗರಿವಿದ್ದೊ ಇಲ್ಲದೆಯೋ ಅನೇಕ ಪಾತ್ರಗಳು ಆ ಸೃಜನಶೀಲ ಸೃಷ್ಟಿಯ ಪ್ರಕ್ರಿಯೆಯಲ್ಲಿ ಭಾಗವಹಿಸಿರುತ್ತವೆ. ಲೇಖಕನಾದವನು ನೋಡಿದ, ಕೇಳಿದ ಘಟನೆಗಳಿಗೆ ತನ್ನ ಕಲ್ಪನೆಯನ್ನು ಸೇರಿಸಿ ಕಥೆಯನ್ನೋ ಕಾದಂಬರಿಯನ್ನೋ ಬರೆಯುತ್ತಾನೆ. ಹೀಗೆ ಬರೆದದ್ದು ಲೇಖಕನ ಸೃಜನಶೀಲ ಸೃಷ್ಟಿಯಾದರೂ ಆ ಪ್ರಕ್ರಿಯೆಗೆ  ಸ್ಪೂರ್ತಿ ನೀಡಿದ ಪಾತ್ರಗಳು ಹಲವು ಎನ್ನುವುದನ್ನು ಪ್ರತಿಯೊಬ್ಬ ಬರಹಗಾರ ಒಪ್ಪಿಕೊಳ್ಳುತ್ತಾನೆ. ಕುವೆಂಪು ಅವರ ಹೂವಯ್ಯ, ಕಾರಂತರ ಚೋಮ, ಚಿತ್ತಾಲರ ನಾಗಪ್ಪ, ಭೈರಪ್ಪನವರ ವಿಶ್ವನಾಥ ಹೀಗೆ ಈ ಎಲ್ಲ ಪಾತ್ರಗಳ ರಚನೆಯ ಹಿಂದೆ ನಿರ್ಧಿಷ್ಟ ಪಾತ್ರಗಳ ಪ್ರಭಾವವಿದೆ. ಈ ಅನುಭವ ಓದುಗರದೂ ಹೌದು. ಕೆಲವೊಮ್ಮೆ ಕೃತಿಯೊಂದನ್ನು ಓದುತ್ತಿರುವ ಘಳಿಗೆ ಅದರಲ್ಲಿನ ಸನ್ನಿವೇಶ ಇಲ್ಲವೇ ಪಾತ್ರವನ್ನು ಎಲ್ಲೋ ನೋಡಿದ ಮತ್ತು ಅದಕ್ಕೆ ಸಾಕ್ಷಿಯಾದ ಅನುಭವ ದುತ್ತೆಂದು ಎದುರಾಗುವುದುಂಟು. ಹೀಗೆ ಲೇಖಕ ಓದುಗರನ್ನು ಅವರು ಬದುಕುತ್ತಿರುವ ಪರಿಸರಕ್ಕೆ ಸದಾಕಾಲ ಮುಖಾಮುಖಿಯಾಗಿಸುತ್ತಲೇ ಹೋಗುತ್ತಾನೆ. ಏಕೆಂದರೆ ಲೇಖಕನ ಸೃಜನಶೀಲ ಸೃಷ್ಟಿ ಕೂಡ ತಾನು ಬದುಕುತ್ತಿರುವ ಪರಿಸರದಿಂದಲೇ ಎತ್ತಿಕೊಂಡ ಅನುಭವದ ಎಳೆಗೆ ಕಲ್ಪನೆಯ ಎರಕ ಹೊಯ್ದ ಕಲಾಸೃಷ್ಟಿ ತಾನೆ. ಆದ್ದರಿಂದ ಲೇಖಕನಾಗಲಿ ಮತ್ತು ಓದುಗನಾಗಲಿ ಆ ಕಲಾಸೃಷ್ಟಿಯಿಂದ ದೊರೆತ ಅನುಭವವನ್ನು ತನ್ನದು ಮಾತ್ರವೆಂದು ಬೀಗದೆ ಬ್ಲೇಕ್‍ನಂತೆ ಇದು ನನ್ನದು ಆದರೆ ನನ್ನದು ಮಾತ್ರವಲ್ಲ ಎನ್ನುವ ಔದಾರ್ಯವನ್ನು ಮೆರೆಯಬೇಕು. ಕಲಾಸೃಷ್ಟಿಯ ಓದಿನ ರಸಾನುಭವವನ್ನು ಓದುಗ ಅನೇಕ ಮನಸ್ಸುಗಳಿಗೆ ದಾಟಿಸುವ ಕೆಲಸ ಮಾಡಬೇಕು. ಹೀಗೆ ಓದಿದ, ಓದಿನ ನಂತರ ಅನುಭವವಾಗಿ ಮನಸ್ಸಿನಲ್ಲಿ ಕುಳಿತು ಕಂಗೆಡಿಸಿದ, ಹಗಲಿರುಳು ಚಿಂತಿಸುವಂತೆ ಮಾಡಿದ ಒಂದಿಷ್ಟು ಚಿಂತನೆಗಳನ್ನು ಓದುಗರಿಗೆ ದಾಟಿಸುವ ಪ್ರಯತ್ನವಾಗಿ ಈ ಪುಟ್ಟ ಲೇಖನ. ಹೀಗೆ ಓದಿನ ಅನುಭವವನ್ನು ಓದುಗರಿಗೆ ದಾಟಿಸುವ ಈ ಪ್ರಯತ್ನ ನನ್ನದು ಆದರೆ ನನ್ನದು ಮಾತ್ರವಲ್ಲ ಎನ್ನುವ ವಿನಮೃತೆಯೂ ನನ್ನ ಅಂತಪ್ರಜ್ಞೆಯೊಳಗೆ ಜಾಗೃತವಾಗಿದೆ. 

       ಕನ್ನಡ ಸಾಹಿತ್ಯದಲ್ಲಿ ಯಶವಂತ ಚಿತ್ತಾಲರದು ಜೀವನ್ಮುಖಿ ಸಾಹಿತ್ಯ. ಅವರ ಕಥೆ, ಕಾದಂಬರಿಗಳಲ್ಲಿ ಮನುಷ್ಯನ ಮನಸ್ಸು ಮತ್ತು ಮಾನವೀಯತೆಯ ತುಡಿತವೇ ಮುಖ್ಯ ವಸ್ತು. ಮನುಷ್ಯನ ಮನಸ್ಸನ್ನು ಮನಶಾಸ್ತ್ರದ ಹಿನ್ನೆಲೆಯಲ್ಲಿ ಚಿತ್ತಲರದು ವಿಶ್ಲೇಷಿಸಿದಷ್ಟು ಕನ್ನಡದ ಬೇರೆ ಬರಹಗಾರರು ವಿಶ್ಲೇಷಿಸಿದ್ದು ಕಡಿಮೆ. ಮನುಷ್ಯನ ಆಂತರಿಕ ತೊಳಲಾಟ, ದ್ವಂದ್ವ, ಖಿನ್ನತೆ, ಪ್ರೀತಿಯ ಹಂಬಲವನ್ನು ಚಿತ್ತಾಲರು ತಮ್ಮ ಕಥೆ ಕಾದಂಬರಿಗಳ ಪಾತ್ರಗಳ ಮೂಲಕ ಅತ್ಯಂತ ಪರಿಣಾಮಕಾರಿಯಾಗಿ ಅಭಿವ್ಯಕ್ತಿಗೊಳಿಸಿರುವರು. ಒಟ್ಟಾರೆ ಚಿತ್ತಾಲರ ದೃಷ್ಟಿಯಲ್ಲಿ ಮನುಷ್ಯನನ್ನು ಮನುಷ್ಯನನ್ನಾಗಿಸುವ ಪ್ರಕ್ರಿಯೆಗೆ ಒಳಪಡಿಸುವುದೇ ಸಾಹಿತ್ಯದ ಮೂಲ ಉದ್ದೇಶವಾಗಿದೆ. ಸಾಹಿತ್ಯದ ಈ ಉದ್ದೇಶವನ್ನು ಕುರಿತು ಅವರು ತಮ್ಮ ನಾನೇಕೆ ಬರೆಯುತ್ತೇನೆ ಲೇಖನದಲ್ಲಿ ಹೀಗೆ ಹೇಳುತ್ತಾರೆ “ನಾವು ವಿಚಾರ ಮಾಡುವ, ಭಾವಿಸುವ ಮತ್ತು ನೋಡುವ ಮಟ್ಟಗಳು ಎತ್ತರಗೊಂಡು ನಾವು ಮನುಷ್ಯರಾಗಿ ಅರಳುವ ಸಾಧ್ಯತೆಯೇ  ಸಾಹಿತ್ಯ ಸಮಾಜಕ್ಕೆ ನೀಡುವ ದೊಡ್ಡ ಕೊಡುಗೆ. ಬದುಕಿನ ಬಗ್ಗೆ ನಾವು ಬೆಳೆಸಿಕೊಂಡ ತಪ್ಪು ಅಪೇಕ್ಷೆಗಳಿಂದಾಗಿ ಮನುಷ್ಯ ಜೀವನಕ್ಕೆ ಅರ್ಥ ತಂದುಕೊಡಬಹುದಾದಂಥ ಗಂಭೀರ ಭಾವನೆಗಳೇ ಭ್ರಷ್ಟವಾಗುತ್ತಿವೆ. ಇಂಥ ಸನ್ನಿವೇಶದಲ್ಲಿ ಮಾನವನ ಮೂಲಭೂತವಾದ ಭಾವನೆಗಳು ಕೆಡದಂತೆ, ಸಾಯದಂತೆ ಅವುಗಳನ್ನು ಕಾಪಾಡಿಕೊಳ್ಳುವುದರಲ್ಲಿ ಸಾಹಿತ್ಯದ ಪಾತ್ರ ಬಹು ದೊಡ್ಡದು. ಸಾಹಿತ್ಯ ಕಮಿಟ್ ಆಗಬೇಕಾದದ್ದು ಈ ದಿಕ್ಕಿನಲ್ಲೆಂದು ನಾನು ಭಾವಿಸುತ್ತೇನೆ’.

        ಚಿತ್ತಾಲರಿಗೆ ಸಾಹಿತ್ಯವೆನ್ನುವುದು ಮನರಂಜನೆಯ ಮಾಧ್ಯಮವಲ್ಲ. ಸಾಹಿತ್ಯ ನಾವು ಮನುಷ್ಯರಾಗಿ ರೂಪುಗೊಳ್ಳುವುದಕ್ಕೆ ಅಗತ್ಯವಾದ ನೈತಿಕ ಶಕ್ತಿ ನೀಡುವ ಸೃಜನಶೀಲ ಸೃಷ್ಟಿ ಎನ್ನುವುದರಲ್ಲಿ ಅವರಿಗೆ ಅಚಲವಾದ ನಂಬಿಕೆ. ಇಂಥದ್ದೊಂದು ನಂಬಿಕೆಯಿಂದಲೇ ಓದುಗನ ಮೇಲೆ ಗಾಢ ಪ್ರಭಾವ ಬೀರುವ ಆ ಮೂಲಕ ಬದುಕಿನಲ್ಲಿ ಮಹತ್ವದ ಬದಲಾವಣೆಗೆ ಕಾರಣವಾಗುವ ಮಂಜುನಾಥ, ನಾಗಪ್ಪ, ಪುರುಷೋತ್ತಮನಂಥ ಪಾತ್ರಗಳು ಚಿತ್ತಾಲರಿಂದ ಸೃಷ್ಟಿಯಾದವು. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆಯುವ ವೇಳೆ ಚಿತ್ತಾಲರು ತಮ್ಮ ಭಾಷಣದಲ್ಲಿ ಸಾಹಿತ್ಯದ ಮಹತ್ವವನ್ನು ಕುರಿತು ಹೀಗೆ ನುಡಿಯುತ್ತಾರೆ “ಸಾಹಿತ್ಯದ ಮುಖಾಂತರ ನಾವು ಮೊದಲಿನಿಂದಲೂ ತೊಡಗಿಸಿಕೊಂಡದ್ದು ಮನುಷ್ಯರಾಗಿ ಅರಳುವ ಪ್ರಕ್ರಿಯೆಯಲ್ಲಿ ಎನ್ನುವ ನಂಬಿಕೆ ನನ್ನದು. ಇಂದಿನ ಸಮಾಜದಲ್ಲಿ ನಾವು ಮನುಷ್ಯರಾಗಿ ಬಿಚ್ಚಿಕೊಳ್ಳಲು ಆರಿಸಿಕೊಳ್ಳಬಹುದಾದ ಜೀವಂತ ಮಾಧ್ಯಮಗಳಲ್ಲಿ ಸಾಹಿತ್ಯವೂ ಒಂದು. ಮನುಷ್ಯ ತನ್ನ ಬದುಕಿನ ನಕಾಶೆಯಲ್ಲಿ ಮೂಡಿಸಿಕೊಳ್ಳಲೇಬೇಕಾದ ಅತ್ಯಂತ ಮೌಲಿಕ ಸಂಗತಿಗಳಲ್ಲಿ ಕೆಲವು ಸಂಗತಿಗಳು ಸಾಹಿತ್ಯದಿಂದ ಮಾತ್ರ ಒದಗಬಲ್ಲಂಥವುಗಳಾಗಿವೆ. ಸಾಹಿತ್ಯ ಹೃದಯವುಳ್ಳ ಹಾದಿಯಾಗಿದೆ ಎನ್ನುವ ನಂಬಿಕೆಯಿಂದಲೇ ಓದುವ ಮತ್ತು ಬರೆಯುವ ಪ್ರಕ್ರಿಯೆಯಲ್ಲಿ ನನ್ನನ್ನು ತೊಡಗಿಸಿಕೊಳ್ಳುತ್ತೇನೆ”.

        ಬದುಕಿನ ಈ ಏನೆಲ್ಲ ಜಂಜಾಟಗಳ ನಡುವೆಯೂ ಮನುಷ್ಯ ತನ್ನ ಮನುಷ್ಯತ್ವದ ಅಸ್ಮಿತೆಗಾಗಿ ಆತ ತನ್ನನ್ನು ಒಂದಲ್ಲ ಒಂದು ಸೃಜನಶೀಲ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಬೇಕೆನ್ನುವುದು ಯಶವಂತ ಚಿತ್ತಾಲರ ಇಡೀ ಬರವಣಿಗೆಯ ಮತ್ತು ಚಿಂತನೆಯ ಕೇಂದ್ರವಾಗಿದೆ. ಕಥೆಯಲ್ಲಿ ಬಂದಾತ ಮನೆಗೂ ಬಂದು ಬಾಗಿಲು ಬಡಿದ ಎಂದೆನ್ನುವ ಚಿತ್ತಾಲರು ತಾವು ಸೃಷ್ಟಿಸಿದ ಪಾತ್ರಗಳೊಂದಿಗೆ ಮುಖಾಮುಖಿಯಾಗುತ್ತಲೇ ಮನುಷ್ಯತ್ವದ ಹುಡುಕಾಟಕ್ಕೆ ತೊಡಗುತ್ತಾರೆ. ಸೃಜನಶೀಲತೆಯಿಂದ ಮನುಷ್ಯ ದೂರವಾದಾಗ ಎದುರಾಗುವ ಅಪಾಯವನ್ನು ಕುರಿತು ಅವರು ಎಚ್ಚರಿಸುತ್ತಾರೆ. ‘ಸಾಹಿತ್ಯ, ಸೃಜನಶೀಲತೆ ಮತ್ತು ನಾನು’ ಕೃತಿಯಲ್ಲಿ ಚಿತ್ತಾಲರು ಮನುಷ್ಯನ ಬದ್ಧತೆಯನ್ನು ಕುರಿತು ಹೇಳುವ ಮಾತು ಹೀಗಿದೆ “ಸ್ಪಿನೋಝಾ ನೈತಿಕ ನಡುವಳಿಕೆಯ ಬಗ್ಗೆ ಹೇಳಿದ ಮಾತನ್ನು ಮನಸ್ಸಿನಲ್ಲಿಟ್ಟುಕೊಂಡು ಹೇಳುವುದಾದರೆ ಗುಲಾಬಿ ಗಿಡ ಬದ್ಧವಾದದ್ದು ಗುಲಾಬಿ ಹೂಗಳನ್ನು ಬಿಡುವುದಕ್ಕೆ. ನಾವು ಬದ್ಧರಾಗಬೇಕಾದದ್ದು ಮನುಷ್ಯರ ಹಾಗೆ ಸ್ಪಂದಿಸುವುದಕ್ಕೆ, ಮನುಷ್ಯರ ಹಾಗೆ ಬದುಕುವುದಕ್ಕೆ ಮತ್ತು ಮನುಷ್ಯರಾಗುವುದಕ್ಕೆ. ಸೃಜನಶೀಲನಾಗುವುದು, ಪ್ರೀತಿಸುವ ಸಾಮರ್ಥ್ಯ ಉಳ್ಳವನಾಗುವುದು, ಮನುಷ್ಯನಾಗುವುದು ಈ ಎಲ್ಲ ಪ್ರಕ್ರಿಯೆಗಳ ಅರ್ಥ ಒಂದೇ. ಸೃಜನಶೀಲನಾಗುವುದರಲ್ಲಿ ಸೋತಲ್ಲೆಲ್ಲ ಮನುಷ್ಯ ಮನುಷ್ಯನನ್ನೇ ಉಪಯೋಗಿಸಿಕೊಳ್ಳುವ ಕ್ರೂರತೆ ಕಾಣಿಸಿಕೊಳ್ಳುತ್ತದೆ”. ದೃಷ್ಟಿ ಮಾಗಿದಂತೆ, ಅನುಭವ ವಿಸ್ತಾರವಾದಂತೆ ಜೀವನ ಅದರ ಹಲವು ಸಾಧ್ಯತೆಗಳಲ್ಲಿ ಕಾಣಿಸಿಕೊಳ್ಳುತ್ತದೆ ಎನ್ನುವ ಮಾತಿದೆ. ಅನುಭವ ಎನ್ನುವುದು ನಮ್ಮ ಮನಸ್ಸನ್ನು ಮಾಗಿಸಿ ವ್ಯಕ್ತಿತ್ವಕ್ಕೊಂದು ಹೊಸ ಅರ್ಥ ತಂದುಕೊಡಬೇಕು. ಚಿತ್ತಾಲರು ಜೀವನಾನುಭವದ ಕುರಿತು ಮಾರ್ಮಿಕವಾಗಿ ಹೀಗೆ ನುಡಿಯುತ್ತಾರೆ “ಪಚನೇಂದ್ರಿಯಗಳ ಎಲ್ಲ ರಸಗಳೊಡನೆ ಬೆರೆತು ಕರಗಿದಾಗಲೇ ರಕ್ತವಾಗಿ ದೇಹಕ್ಕೆ ಪೋಷಕವಾಗುವ  ಅನ್ನದಂತೆ ನಮ್ಮ ಅನುಭವ ಕೂಡ. ಅನುಭವ ಎನ್ನುವುದು ಸಮಗ್ರ ವ್ಯಕ್ತಿತ್ವದ ಜಠರಾಗ್ನಿಯಲ್ಲಿ ಕರಗಿದಾಗಲೇ, ರಸಪಾಕ ಹೊಂದಿದಾಗಲೇ ಅನುಭವವು ವ್ಯಕ್ತಿತ್ವಕ್ಕೆ ಹೊಸ ಮೆರುಗು ತಂದು ಕೊಟ್ಟೀತು. ಅನುಭವವನ್ನು ಅರಗಿಸಿಕೊಳ್ಳುವ ತಾಕತ್ತು ನಮ್ಮ ವ್ಯಕ್ತಿತ್ವಕ್ಕೆ ಇಲ್ಲದಿದ್ದರೆ ಬಂದ ಅನುಭವ ವಿಷವಾದೀತು”.

         ಯಶವಂತ ಚಿತ್ತಾಲರಂತೆ ಎಸ್.ಎಲ್.ಭೈರಪ್ಪನವರದು ಕೂಡ ಜೀವನ್ಮುಖಿ ಸಾಹಿತ್ಯ. ಯಾವುದೇ ಸಿದ್ಧಾಂತ ಮತ್ತು ವಿಚಾರಗಳನ್ನು ಓದುಗರ ಮೇಲೆ ಬಲವಂತವಾಗಿ ಹೇರುವ ಮನೋಭಾವ ನನ್ನ ಬರವಣಿಗೆಯದಲ್ಲ ಎಂದೆನ್ನುವ ಭೈರಪ್ಪನವರ ಕೃತಿಗಳಲ್ಲಿ ಜೀವನದ ನೈತಿಕ ಮೌಲ್ಯಗಳು ಅಗಾಧವಾಗಿ ಓದುಗನ ಅನುಭವಕ್ಕೆ ದಕ್ಕುತ್ತವೆ. ಒಂದರ್ಥದಲ್ಲಿ ಭೈರಪ್ಪನವರ ಕಾದಂಬರಿಗಳು ಸಹ ಮನುಷ್ಯನನ್ನು ಮನುಷ್ಯನನ್ನಾಗಿಸುವ ಪ್ರಕ್ರಿಯೆಗೆ  ಒಳಪಡಿಸುತ್ತವೆ. ಮಂದ್ರದ ಮಧುಮಿತಾ, ಸಾಕ್ಷಿಯ ಪರಮೇಶ್ವರಯ್ಯ, ಅನ್ವೇಷಣದ ವಿಶ್ವನಾಥ, ನಿರಾಕರಣದ ನರಹರಿ ಈ ಎಲ್ಲ ಪಾತ್ರಗಳು ಓದುಗನ ಅಂತ:ಸಾಕ್ಷಿಯನ್ನು ಪ್ರವೇಶಿಸಿ ಅವನನ್ನು ಮೌಲೀಕ ಬದುಕಿನೆಡೆ ಮುಖಮಾಡಿ ನಿಲ್ಲಿಸುತ್ತವೆ. ಮನುಷ್ಯನ ಮನಸ್ಸಿನೊಡನೆ ಮತ್ತು ಮನುಷ್ಯತ್ವದೊಡನೆ ಸಾಹಿತ್ಯ ವ್ಯವಹರಿಸುತ್ತಿರುವುದರಿಂದ ಸಾಹಿತ್ಯ ಕೂಡ ಉದಾತ್ತ ಧ್ಯೇಯಗಳನ್ನು ಹೊಂದಿರಬೇಕೆನ್ನುವುದು ಭೈರಪ್ಪನವರ ಅಭಿಮತ. ಕೃತಿಯೊಂದನ್ನು ಸೃಷ್ಟಿಸುತ್ತಿರುವಾಗ ಬರಹಗಾರ ತನ್ನೆಲ್ಲ ವೈಯಕ್ತಿಕ ರಾಗ ದ್ವೇಷಗಳಿಂದ ಮುಕ್ತನಾಗಿ ಆ ಸೃಜನಶೀಲ ಸೃಷ್ಟಿಯ ಕ್ರಿಯೆಯಲ್ಲಿ  ತೊಡಗಿಸಿಕೊಳ್ಳಬೇಕೆನ್ನುವುದನ್ನು ಭೈರಪ್ಪನವರು ತಮ್ಮ ಮಾತುಗಳಲ್ಲಿ ಹೀಗೆ ಹೇಳುತ್ತಾರೆ “ಸಾಹಿತ್ಯದ ಕೆಲಸವೆಂದರೆ ಮನುಷ್ಯನ ಅಂತರಾಳಕ್ಕೆ ಪ್ರವೇಶ ದೊರಕಿಸಿಕೊಡುವುದು ಮತ್ತು ಪ್ರೀತಿ, ಅನುಕಂಪ, ಕರುಣೆಗಳನ್ನು ಹುಟ್ಟಿಸುವುದು. ನಮ್ಮ ಕಹಿ ಅನುಭವ ಏನೇ ಇರಲಿ ಪ್ರತಿಯೊಂದು ಪಾತ್ರದ ಅಂತರಂಗವನ್ನು ಹೊಕ್ಕು ಅನುಕಂಪದಿಂದ ಬಿಚ್ಚಿಡದಿದ್ದರೆ ಅದು ಮೇಲ್ಮಟ್ಟದ ಸಾಹಿತ್ಯವಾಗುವುದಿಲ್ಲ. ಇಡೀ ರಾಷ್ಟ್ರವನ್ನು ಜೈಲಾಗಿ ಪರಿವರ್ತಿಸಿದ್ದ ಸ್ಟಾಲಿನ್ನನ ಪಾತ್ರವನ್ನು ಚಿತ್ರಿಸುವಾಗ ಕೂಡ ಸೊಲ್ಜನಿಟ್ಸಿನ್ ಅನುಕಂಪ, ಅರಿವು ಮತ್ತು ಅಂತರ್ನೋಟವನ್ನು ಸಾಧಿಸದೆ ಹೋಗಿದ್ದರೆ ಅವನು ಇಷ್ಟೊಂದು ದೊಡ್ಡ ಲೇಖಕನಾಗುತ್ತಿರಲಿಲ್ಲ. ಬರವಣಿಗೆ ಸೃಜನಶೀಲವಾದಾಗ ಅದು ಲೇಖಕನ ಜಾತಿ, ಮತ, ವರ್ಗ, ಲಿಂಗ, ದೇಶ ಮೊದಲಾದ ಭೇದಗಳನ್ನು ಮೀರುತ್ತದೆ”.

          ಹೀಗೆ ರಾಗ ದ್ವೇಷಗಳ ಚೌಕಟ್ಟಿನಿಂದ ಹೊರಬಂದು ಲೇಖಕ ಕಟ್ಟಿಕೊಡುವ ಅನುಭವದಲ್ಲಿ ಲೇಖಕನೇ ತನ್ನನ್ನು ತಾನು ಕಾಣುವುದು ಸಾಹಿತ್ಯದ ಅಗಾಧತೆಗಳಲ್ಲಿ ಒಂದು. ಅನುಭವ ಯಾರದಾದರೇನು ಆ ಅನುಭವದ ಎಳೆಯೊಂದು ಹಠಾತ್ತನೆ ಮನಸ್ಸನ್ನು ಪ್ರವೇಶಿಸಿ ಆ ಕ್ಷಣಕ್ಕೆ ಕೃತಿಗೂ ಮತ್ತು ಓದುಗನಿಗೂ ಮುಖಾಮುಖಿಯಾಗಿಸುವಲ್ಲೇ ಸಾಹಿತ್ಯದ ಸಾಫಲ್ಯವಿದೆ. ಓದುಗನನ್ನು ಕೃತಿಗೆ ಮುಖಾಮುಖಿಯಾಗಿಸುವ ಲೇಖಕನದು ಬರವಣಿಗೆಯ ಆ ಎಲ್ಲ ನೋವು ನಲಿವುಗಳಿಂದ ಬಿಡುಗಡೆಯ ಭಾವ. ಬರವಣಿಗೆ ನೀಡುವ ಸಂತಸವನ್ನು ಚದುರಂಗರು ತಮ್ಮ ‘ವೈಶಾಖ’ ಕಾದಂಬರಿಯ ಮುನ್ನುಡಿಯಲ್ಲಿ ಹೀಗೆ ವಿವರಿಸುತ್ತಾರೆ “ಈ ಬರೆಯುವ ಪ್ರಕ್ರಿಯೆಯಲ್ಲಿ ನೋವು, ನೋವಿನಿಂದ ಮೂಡಿದ ನಲಿವು ಎಲ್ಲವನ್ನೂ ಅನುಭವಿಸಿದ್ದೇನೆ. ನನ್ನ ಒಳಗನ್ನು ತೋಡಿಕೊಳ್ಳುತ್ತಿರುವೆ ಎನ್ನುವ ತೃಪ್ತಿಯ ಜೊತೆಗೆ ಈವರೆಗೆ ಗುರುತಿಸಿಕೊಂಡಿರದೇ ಇದ್ದದ್ದನ್ನು ಹಠಾತ್ತನೆ ಕಂಡಂತಾಗಿ ಚಕಿತಗೊಂಡಿದ್ದೇನೆ. ಈ ರೀತಿಯಲ್ಲಿ ಪಡೆದ ಸಂತೋಷ ಒಂದು ಅನನ್ಯವಾದ ಬಿಡುಗಡೆಯ ಭಾವನೆಯನ್ನು ನನಗೆ ತಂದು ಕೊಟ್ಟಿದೆ. ನನ್ನ ಬರವಣಿಗೆಯನ್ನು ಇಡಿಯಾಗಿ ನೋಡಿದಾಗ ನನ್ನನ್ನು ನಾನೇ ಇಲ್ಲಿ ಕಂಡುಕೊಳ್ಳುತ್ತಿದ್ದೇನೆ ಎಂದು ಅನಿಸಿದ್ದುಂಟು. ಬರಹಗಾರನಾದ ನನಗೆ ಇದಕ್ಕಿಂತ ಮಿಗಿಲಾದ ಆತ್ಮಸುಖ ಬೇರೆ ಏನೂ ಕಾಣದು”.

         ಬರವಣಿಗೆಗೆ ಲೇಖಕ ಬದುಕುತ್ತಿರುವ ಪರಿಸರದ ಬದುಕು ಸ್ಪೂರ್ತಿಯಾದರೂ ಸೃಜನಶೀಲ ಸೃಷ್ಟಿಯು ಬರಹಗಾರನ ಅಂತರಾಳದಿಂದಲೇ ಕುಡಿಯೊಡೆದು ಬೆಳೆಯಬೇಕು. ತಾನು ಕಂಡು ಅನುಭವಿಸಿದ್ದನ್ನು ಸೃಜನಶೀಲವಾಗಿ ಅಭಿವ್ಯಕ್ತಿಗೊಳಿಸುವ ಸೃಜನಾತ್ಮಕ ಶಕ್ತಿ ಇದ್ದರೆ ಮಾತ್ರ ಬರಹಗಾರನಾಗಲು ಸಾಧ್ಯ. ಗೋಪಾಲಕೃಷ್ಣ ಅಡಿಗರು ತಾವು ಬರಹಗಾರನಾದ ರೀತಿಯನ್ನು ಸಂದರ್ಶನವೊಂದರಲ್ಲಿ ಹೀಗೆ ಹೇಳಿರುವರು “ಮೊದಲಿನಿಂದಲೂ ನಾನು ಅಂತರ್ಮುಖಿ. ನನ್ನಲ್ಲೇ ನಾನು ಲೀನನಾಗುವ ಸ್ವಭಾವ. ಯಾವಾಗಲೂ ನಾನು ಏಕಾಂಗಿ ಅನ್ನುವ ಭಾವನೆ. ಯಾವುದೋ ರೀತಿಯಿಂದ ಜಗತ್ತಿನಿಂದ ಉಳಿದ ಮನುಷ್ಯ ಸಂಬಂಧಗಳಿಂದ ಪ್ರತ್ಯೇಕನಾದವನು ಎನ್ನುವ ಭಾವನೆ. ಎಲ್ಲವನ್ನೂ ಕೊಂಚ ದೂರನಿಂತು ನೋಡಬೇಕು ಎನ್ನುವ ಭಾವನೆ. ಸಾಮಾನ್ಯವಾಗಿ ಮಾತನಾಡುವುದು ಬಹಳ ಕಡಿಮೆ. ಮಾತು ಕಡಿಮೆಯಾದ್ದರಿಂದ ಒಳಗಡೆ ನಾನು ಅನುಭವಿಸಿದ್ದು, ಭಾವಿಸಿದ್ದು, ಚಿಂತಿಸಿದ್ದು ಇವೆಲ್ಲಾ ಸೇರಿಕೊಂಡು ಅಭಿವ್ಯಕ್ತಿಯನ್ನು ಬಯಸುತ್ತಾ ಇರುತ್ತವೆ. ಹಾಗಾಗಿ ನಾನು ಬರಹಗಾರನಾದೆ”. 

    ಜೊತೆಗೆ ಗೋಪಾಲಕೃಷ್ಣ ಅಡಿಗರು ಬರಹಗಾರನ ಮನಸ್ಸು ಸದಾಕಾಲ ಹೊಸತನಕ್ಕೆ ತುಡಿಯುತ್ತಿದ್ದರೆ ಮಾತ್ರ ಲೇಖಕ ಹೊಸದನ್ನು ಸೃಷ್ಟಿಸಲು ಸಾಧ್ಯ ಎನ್ನುತ್ತಾರೆ. ಹೀಗಾಗಿ ಬರಹಗಾರನಲ್ಲಿ ಆತನ ವಿಚಾರಗಳು ಮತ್ತೆ ಮತ್ತೆ ಮರುಹುಟ್ಟು ಪಡೆಯುತ್ತಿರಬೇಕು. ದೇಹದ ಮೇಲಿನ ಚರ್ಮದಂತೆ ಆಲೋಚನೆಗಳು ಮತ್ತು ವಿಚಾರಗಳು ಕಾಲಕಾಲಕ್ಕೆ ಹೊಸತನವನ್ನು ಹೊಂದಬೇಕು. ಪೂರ್ವಾಗ್ರಹ ಪೀಡೆಗೆ ನಮ್ಮ ಆಲೋಚನೆಗಳು ಒಳಗಾದಲ್ಲಿ ಲೇಖಕನಿಂದ ಹೊಸ ಸೃಜನಶೀಲ ಸೃಷ್ಟಿಯ ಸಾಧ್ಯತೆ ಅಸಾಧ್ಯವಾದದ್ದು. ಮನುಷ್ಯನ ಆಲೋಚನೆಗಳ ಮರುಹುಟ್ಟನ್ನು ಕುರಿತು ಅಡಿಗರು ಹೀಗೆ ಹೇಳುತ್ತಾರೆ “ಬದುಕಿರುವಾಗಲೇ ಮತ್ತೆ ಮತ್ತೆ ಸಾಯದೇ ಹೋದ ಪಕ್ಷದಲ್ಲಿ ಹೊಸ ಸೃಷ್ಟಿ ಸಾಧ್ಯ ಆಗೋದಿಲ್ಲ. ಇಲ್ಲಿ ನಾನು ಸಾಯುವುದನ್ನು ಭೌತಿಕ ಅರ್ಥದಲ್ಲಿ ಹೇಳುತ್ತಿಲ್ಲ ಅದು ಮನಸ್ಸಿಗೆ ಸಂಬಂಧಿಸಿದ್ದು. ಮನುಷ್ಯನ ಆಲೋಚನೆಗಳು, ವಿಚಾರಗಳು ಕಾಲಕಾಲಕ್ಕೆ ಮರುಹುಟ್ಟು ಪಡೆಯುತ್ತಿರಬೇಕು. ಇಲ್ಲದೆ ಹೋದರೆ ಅವನಿಗೆ ಬೆಳೆಯೋಕಾಗೋದಿಲ್ಲ. ಇನ್ನು ನಾನು ಬರೆಯಲಾರೆ ಎನ್ನುವುದು ನನಗೆ ಸಾವಿನಂತೆ ಕಾಣಿಸುತ್ತದೆ. ಮತ್ತೆ ನಾನು ಹೊಸ ಮನುಷ್ಯನಾಗಿ ಹೊಸ ಸೃಷ್ಟಿಗಾಗಿ ಹಂಬಲಿಸುತ್ತೇನೆ. ಅದಕ್ಕೆಂದೇ ಕೀಟ್ಸ್ ಹೇಳುತ್ತಾನೆ dying in to a new life  ಎಂದು”.

     ಇನ್ನು ಸಾಹಿತ್ಯದಂಥ ಸೃಜನಶೀಲ ಸೃಷ್ಟಿಯನ್ನು ಒಂದು ಧರ್ಮದಂತೆ, ವ್ರತದಂತೆ ಅಪರಿಮಿತವಾಗಿ ಪ್ರೀತಿಸಿದ ಬರಹಗಾರರ ಸಂಖ್ಯೆ ಏನೂ ವಿರಳವಾಗಿಲ್ಲ. ಇವರ ದೃಷ್ಟಿಯಲ್ಲಿ ಸಾಹಿತ್ಯ ಸಮಾಜಿಕ ಸ್ಥಿತ್ಯಂತರಗಳಿಗೆ ಕಾರಣವಾಗುವ ಬಹುದೊಡ್ಡ ಸೃಜನಶೀಲ ಪ್ರಕ್ರಿಯೆ. ಈ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಬರಹಗಾರ ತನ್ನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಜತನದಿಂದ ಕಾಪಾಡಿಕೊಂಡಲ್ಲಿ ಸಾಹಿತ್ಯದಿಂದ ದೊಡ್ಡ ದೊಡ್ಡ ಜಿಗಿತಗಳು ಮತ್ತು ಪಲ್ಲಟಗಳಾಗಲಿವೆ ಎನ್ನುವ ನಂಬಿಕೆ ಅನೇಕ ಬರಹಗಾರರದು. ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಲೇಖಕ ಮಾರಿಯೋ ವರ್ಗಾಸ್ ಯೋಸಾ ಸಾಹಿತ್ಯದ ಮಹತ್ವವನ್ನು ಹೀಗೆ ಹೇಳುತ್ತಾನೆ “ಬಹುಕಾಲ ಬಾಳುವಂಥ ಯಾವುದನ್ನು ರಾಜಕಾರಣ ಮಾಡಲಾಗುವುದಿಲ್ಲವೋ ಅದನ್ನು  ಸಾಹಿತ್ಯ ಮಾಡಬೇಕು. ಲೇಖಕ ಕೇವಲ ವರ್ತಮಾನಕ್ಕಾಗಿ ಮಾತ್ರ ಪುಸ್ತಕ ಬರೆಯುವುದಿಲ್ಲ. ಟೀಕಿಸುವ ಮೂಲಕವೋ ತಮ್ಮ ಆಲೋಚನೆಗಳನ್ನು ಬಳಸಿ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಮೂಲಕವೋ ಲೇಖಕರಾದವರು ಕಾರ್ಯಪ್ರವೃತ್ತರಾಗುವುದು ತುಂಬಾ ಮುಖ್ಯ. ಕೆಲವು ಸಂದರ್ಭಗಳಲ್ಲಿ ಸ್ವಾತಂತ್ರ್ಯಕ್ಕಾಗಿ ತ್ಯಾಗ ಮಾಡಬೇಕಾಗಿ ಬರುವಂಥ ಯಾವುದೇ ಅಭಿಪ್ರಾಯಕ್ಕೂ ಲೇಖಕ ಜಗ್ಗ ಕೂಡದು. ಒಂದು ಅಗತ್ಯದಂತೆ ಲೇಖಕರು ತಮ್ಮ ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳಬೇಕು. ನನ್ನ ಅಂತ:ಸಾಕ್ಷಿ ತುಂಬಾ ಗಡಸಾದದ್ದು. ಸಾಯುವ ಕೊನೆಯ ದಿನದವರೆಗೂ ನಾನು ಬರೆಯಬಲ್ಲೆ ಅನ್ನೊದು ನನಗೆ ಗೊತ್ತು. ಬರವಣಿಗೆಯೇ ನನ್ನ ಧರ್ಮ ಬರವಣಿಗೆಯೇ  ನನ್ನ ಬದುಕು”.

     ಯೋಸಾನ ಸಾಯುವ ಕೊನೆಯ ದಿನದವರೆಗೂ ನಾನು ಬರೆಯಬಲ್ಲೆ ಎನ್ನುವ ಮಾತು ನನಗೆ ಸಾವನ್ನು ಕುರಿತು ಫ್ರೆಂಚ್ ಲೇಖಕ ಸಾರ್ತ್ರೆ ಹೇಳಿದ ಮಾತುಗಳನ್ನು ನೆನಪಿಸುತ್ತಿದೆ. ಸಾರ್ತ್ರೆಯ ಪ್ರಕಾರ ಮನುಷ್ಯ ಸತ್ತ ನಂತರವೂ ಜೀವಿಸುತ್ತಾನೆ ಅದು ಬದುಕಿರುವವರ ಕೈಯಲ್ಲಿ. ಬದುಕಿರುವವರ ಕೈಯಲ್ಲಿ ಸತ್ತವನ ಬದುಕು ಹೊಗಳಿಕೆಯಾಗಿಯೋ ಇಲ್ಲವೇ ದಂಡನೆಗೆ ಒಳಗಾಗಿಯೋ ಮತ್ತೆ ಮರುಹುಟ್ಟು ಪಡೆಯುತ್ತದೆ ಎಂದು ಸಾರ್ತ್ರೆ ನುಡಿಯುತ್ತಾನೆ. ಅವನ ಪ್ರಕಾರ ಒಂದರ್ಥದಲ್ಲಿ ಸಾವೆನ್ನುವುದು ಸತ್ತ ವ್ಯಕ್ತಿಯ ಬಾಳನ್ನು ದಂಡನೆಗೆ ಒಳಪಡಿಸಿದಂತೆ. ಸಾವನ್ನು ಸಾರ್ತ್ರೆ ಕಾಣುವ ರೀತಿ ಹೀಗಿದೆ “ಸಾವು ವ್ಯಕ್ತಿಯ ಬಾಳಿನ ಹಿಂದಿನ ದಿನಗಳನ್ನು ಬದಲಾಯಿಸಲು ಒಂದು ನಿರ್ಧಿಷ್ಟತೆ ತಂದು ಬಿಡುತ್ತದೆ. ಸತ್ತ ನಂತರದ ಬಾಳು ಬದುಕಿರುವವರ ಸ್ವತ್ತಾಗುತ್ತದೆ. ಸತ್ತವರ ಬದುಕನ್ನು ನಂತರದ ಪೀಳಿಗೆ ಉಳಿಸಿಕೊಳ್ಳಬಹುದು ಅಥವಾ ಕತ್ತಲೆಗೆ ತಳ್ಳಬಹುದು. ಸತ್ತವರ ಅದೃಷ್ಟ ಬದುಕಿರುವವರ ಕೈಯಲ್ಲಿ. ಆದ್ದರಿಂದ ಸಾಯುವುದೆಂದರೆ ಬೇರೆಯವರ ಮೂಲಕ ದಂಡನೆಗೆ ಒಳಗಾದಂತೆ”.

      ಸಾಹಿತ್ಯದ ಓದು ಕಟ್ಟಿ ಕೊಡುವ ಅನುಭವ ಅನನ್ಯವಾದದ್ದು. ನಮ್ಮ ಅಂತ:ಸಾಕ್ಷಿಯನ್ನು ಪ್ರವೇಶಿಸಿ ಆತ್ಮವಿಮರ್ಶೆಗೆ ದಾರಿಮಾಡಿಕೊಡುವ ಸಾಹಿತ್ಯ ಮನುಷ್ಯನನ್ನು ಮನುಷ್ಯನನ್ನಾಗಿಸುವ ಪ್ರಕ್ರಿಯೆಗೆ  ಒಳಪಡಿಸುತ್ತದೆ. ನಮಗೆ ನಾವು ಸತ್ಯ ಹೇಳಿಕೊಳ್ಳುವ ಸಾಮರ್ಥ್ಯವನ್ನು ಪಡೆದಲ್ಲಿ ನಾವು ಮನುಷ್ಯರಾದಂತೆ ಎಂದು ಲೇಖಕರೊಬ್ಬರು ನುಡಿಯುತ್ತಾರೆ. ಇದು ಸಾಧ್ಯವಾಗುವುದು ಸಾಹಿತ್ಯದಂಥ ಸೃಜನಶೀಲ ಪ್ರಕ್ರಿಯೆಯಲ್ಲಿ ಮನುಷ್ಯ ಪಾಲ್ಗೊಂಡಾಗ ಮಾತ್ರ. ಏಕೆಂದರೆ ಸಾಹಿತ್ಯದಲ್ಲಿ ಜೀವಂತ ಮನುಷ್ಯನೊಬ್ಬನ ಬಗ್ಗೆ ಜೀವಂತ ಮನುಷ್ಯನೊಬ್ಬ ಕಿವಿಗೊಟ್ಟು ಕೇಳಿಸಿಕೊಳ್ಳಬೇಕಾದ ಜೀವನ ದರ್ಶನವಿದೆ.

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 


Tuesday, April 4, 2017

ನಾವು ಪ್ರೇಕ್ಷಕರನ್ನು ಬೆಳೆಸುತ್ತಿಲ್ಲ


           


     ‘ನಾವು ಪ್ರೇಕ್ಷಕರನ್ನು ಬೆಳೆಸುತ್ತಿಲ್ಲ ಬದಲಾಗಿ ಸಿನಿಮಾಗಳನ್ನು ಬೆಳೆಸುತ್ತಿದ್ದೇವೆ’ ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕ ಸತ್ಯಜೀತ್ ರೇ ಬದಲಾದ ಇಂದಿನ ಸಿನಿಮಾ ಮಾಧ್ಯಮವನ್ನು ಕುರಿತು ಹೇಳಿದ ಮಾತಿದು. ಪಥೇರ್ ಪಾಂಚಾಲಿಯಂಥ ವಿಶಿಷ್ಠ ಸಿನಿಮಾವನ್ನು ಭಾರತೀಯ ಸಿನಿಮಾ ಲೋಕಕ್ಕೆ ಕೊಡುಗೆಯಾಗಿ ನೀಡಿದ ಮತ್ತು ಸಿನಿಮಾವನ್ನು ನಿರ್ದೇಶಕನ ಸೃಜನಶೀಲ ಮಾಧ್ಯಮವೆಂದು ಬಲವಾಗಿ ನಂಬಿದ್ದ ಸತ್ಯಜೀತ್ ರೇ ಅವರ ಈ ಮಾತಿನಲ್ಲಿ ಸತ್ಯಾಂಶವಿದೆ. ಸಿನಿಮಾ ಅದು ಎಂದಿಗೂ ನಿರ್ದೇಶಕನ ಮಾಧ್ಯಮವಾಗಿಯೇ  ಉಳಿದು ಬೆಳೆದಲ್ಲಿ ನಾವು ಈ ಮಾಧ್ಯಮದಿಂದ ಸೃಜನಶೀಲ ಸೃಷ್ಟಿಯನ್ನು ನಿರೀಕ್ಷಿಸಬಹುದು. ಒಂದು ಕಾಲದಲ್ಲಿ ಸಿನಿಮಾ ನೂರಕ್ಕೆ ನೂರರಷ್ಟು ನಿರ್ದೇಶಕನ ಮಾಧ್ಯಮ ಎನ್ನುವ ಖ್ಯಾತಿಯೊಂದಿಗೆ ಉತ್ತುಂಗದಲ್ಲಿತ್ತು. ನಿರ್ದೇಶಕ ತನ್ನ ಪ್ರತಿಭೆ ಮತ್ತು ಕೌಶಲ್ಯವನ್ನು ಎರಕಹೊಯ್ದು ರೂಪಿಸುತ್ತಿದ್ದ ಸಿನಿಮಾಗಳು ಸರ್ವಕಾಲಿಕ ಶ್ರೇಷ್ಠ ಎನ್ನುವ ಮೆಚ್ಚುಗೆಗೆ ಪಾತ್ರವಾಗಿವೆ. ಕನ್ನಡ ಸಿನಿಮಾ ರಂಗದಲ್ಲಿ ಬಿ.ಆರ್.ಪಂತಲು, ಪುಟ್ಟಣ್ಣ ಕಣಗಾಲ್, ಜಿ.ವಿ.ಅಯ್ಯರ್ ಅವರಂಥ ಮಹಾನ್ ನಿರ್ದೇಶಕರು ಪ್ರತಿಭಾನ್ವಿತ ಕಲಾವಿದರನ್ನು ತರಬೇತಿಗೊಳಿಸಿ ಕನ್ನಡ ಚಿತ್ರರಂಗಕ್ಕೆ ಕೊಡುಗೆಯಾಗಿ ನೀಡಿದ ಅನೇಕ ಉದಾಹರಣೆಗಳಿವೆ. ಈ ನಿರ್ದೇಶಕರು ಕಥೆಗಾಗಿ ಸಿನಿಮಾ ಮಾಡಿದರೆ ವಿನ: ನಟ ನಟಿಯರಿಗಾಗಿ ಸಿನಿಮಾ ಮಾಡಿದ ಉದಾಹರಣೆಗಳಿಲ್ಲ. ಹೀಗಾಗಿ ಕನ್ನಡ ಸಿನಿಮಾಗಳ ಪ್ರೇಕ್ಷಕರಲ್ಲಿ ಸಿನಿಮಾ ಮಾಧ್ಯಮದ ಕುರಿತು ಒಂದು ಸದಭಿರುಚಿಯನ್ನು ಬೆಳೆಸಿದ ಶ್ರೇಯಸ್ಸು ಈ ನಿರ್ದೇಶಕರಿಗೆ ಸಲ್ಲುತ್ತದೆ. ಒಂದರ್ಥದಲ್ಲಿ ಸಿನಿಮಾಗಳ ವೀಕ್ಷಣೆಗಾಗಿ ಸದಭಿರುಚಿಯ ಪ್ರೇಕ್ಷಕರ ಒಂದು ಸಮೂಹವನ್ನೇ ಈ ನಿರ್ದೇಶಕರು ಕನ್ನಡ ಚಿತ್ರರಂಗದಲ್ಲಿ ಬೆಳೆಸಿ ಸಿನಿಮಾ ಮಾಧ್ಯಮಕ್ಕೊಂದು ಗಟ್ಟಿ ತಳಪಾಯವನ್ನು ಒದಗಿಸಿದರು. ಪುಟ್ಟಣ್ಣ ಕಣಗಾಲ್ ಅವರಂಥ ನಿರ್ದೇಶಕ ತನ್ನ ಪ್ರತಿ ಸಿನಿಮಾದಲ್ಲಿ ಹೊಸ ಹೊಸ ಕಲಾವಿದರನ್ನು ಪರಿಚಯಿಸಿ ಸಿನಿಮಾ ಎನ್ನುವುದು ಗೆದ್ದೆತ್ತಿನ ಬಾಲ ಹಿಡಿಯುವ ಮಾಧ್ಯಮವಲ್ಲ ಅದು ಏನಿದ್ದರೂ ನಿರ್ದೇಶಕನ ಮಾಧ್ಯಮ ಎನ್ನುವುದನ್ನು ಸಾಬಿತುಪಡಿಸಿ ತೋರಿಸಿದರು. ಇವತ್ತಿಗೂ ಕನ್ನಡ ಸಿನಿಮಾ ಮಾಧ್ಯಮ ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ಬೆಳೆಯಲು ಸಾಧ್ಯವಾಗಿರುವುದು  ಇಂಥ ಸೃಜನಶೀಲ ನಿರ್ದೇಶಕರು ಹಾಕಿಕೊಟ್ಟ ಗಟ್ಟಿ ತಳಪಾಯವೇ ಎನ್ನುವ ಮಾತಿನಲ್ಲಿ ಯಾವ ಉತ್ಪ್ರೇಕ್ಷವೂ ಇಲ್ಲ.

ಆದರೆ ಕಾಲ ಬದಲಾದಂತೆ ನಮ್ಮ ಈ ಕನ್ನಡ ಸಿನಿಮಾ ಮಾಧ್ಯಮ ಅನೇಕ ಹೊಸ ಸ್ಥಿತ್ಯಂತರಗಳಿಗೆ ತನ್ನನ್ನು ತಾನು ತೆರೆದುಕೊಂಡು ಹೊಸ ಹೊಸ ಬದಲಾವಣೆಗಳೊಂದಿಗೆ ನಿರ್ದೇಶಕನಿಂದ ಬಿಡಿಸಿಕೊಂಡು ಅದು ನಟ ನಟಿಯರ ಮಾಧ್ಯಮವಾಗಿ ರೂಪಾಂತರಗೊಂಡಿತು. ನಿರ್ದೇಶಕ ನೇಪಥ್ಯಕ್ಕೆ ಸರಿದು ಸಿನಿಮಾದ ನಾಯಕಿ ನಾಯಕಿಯರು ಪ್ರವರ್ಧಮಾನಕ್ಕೆ ಬರತೊಡಗಿದರು. ನಿರ್ಮಾಪಕರು ಮೊದಲು ನಾಯಕ ನಾಯಕಿಯರ ಕಾಲಶೀಟ್ ಪಡೆದು ನಂತರ ನಿರ್ದೇಶಕರನ್ನು ಹಾಗೂ ಉಳಿದ ತಂತ್ರಜ್ಞರನ್ನು ಆಯ್ಕೆ  ಮಾಡುವ ಪರಿಪಾಠ ಆರಂಭವಾಯಿತು. ನಾಯಕ ನಟನ ಇಮೇಜಿಗೆ ಸರಿಹೊಂದುವ ಕಥೆ ಹೆಣೆಯುವ, ಸಂಭಾಷಣೆ ಮತ್ತು ಹಾಡುಗಳನ್ನು ಬರೆಯುವ, ನಾಯಕಿ ನಟಿಯನ್ನು ಹಾಗೂ ಉಳಿದ ಪೋಷಕ  ಪಾತ್ರಗಳನ್ನು ಆಯ್ಕೆ  ಮಾಡುವ ಪರಿಸ್ಥಿತಿ ನಿರ್ಮಾಣಗೊಂಡಿತು. ಇನ್ನು ಜನಪ್ರಿಯ ನಾಯಕ ನಟನಿದ್ದಲ್ಲಿ ನಿರ್ದೇಶಕನ ಕೆಲಸ action-cut ಗಳಿಗಷ್ಟೇ ಸೀಮಿತವಾಗತೊಡಗಿತು. ಕನ್ನಡ ಭಾಷೆಯೇ  ಬರದ ನಾಯಕಿಯರನ್ನು ಬೇರೆ ಬಾಷೆಗಳಿಂದ ಆಮದು ಮಾಡಿಕೊಂಡು ಅವರ ಅಂಗಾಂಗ ಪ್ರದರ್ಶನದಿಂದ ಅನೇಕ ನಿರ್ಮಾಪಕರು ತಮ್ಮ ಹಣದ ಥೈಲಿ ತುಂಬಿಕೊಳ್ಳತೊಡಗಿದರು. ಜೊತೆಗೆ ಅನ್ಯ ಭಾಷೆಗಳಲ್ಲಿ ಯಶಸ್ಸುಗೊಂಡ ಸಿನಿಮಾಗಳನ್ನು ಕನ್ನಡಕ್ಕೆ ಎರವಲು ತಂದು ರೀಮೇಕ್ ಹೆಸರಲ್ಲಿ ನಮ್ಮ ನೆಟಿವೀಟಿಗೆ ಒಗ್ಗಿಸಿ ಹಳಸಲು ಕಥೆಯನ್ನೇ ಪ್ರೇಕ್ಷಕರಿಗೆ ನೀಡಿದ್ದು ಕನ್ನಡ ಸಿನಿಮಾ ಮಾಧ್ಯಮದ ದುರಂತಗಳಲ್ಲೊಂದು. ಇನ್ನು ಕೆಲವು ನಿರ್ಮಾಪಕರು ಅನ್ಯ ಭಾಷೆಯ ಸಿನಿಮಾಗಳನ್ನೇ ನೇರವಾಗಿ ನಮ್ಮ ಭಾಷೆಗೆ ಡಬ್ ಮಾಡಿ ಪ್ರೇಕ್ಷಕರ ಅಭಿರುಚಿಯನ್ನೇ ದಾರಿತಪ್ಪಿಸಿದರು. ಹೀಗೆ ಕನ್ನಡ ಭಾಷೆಯಲ್ಲಿ ವರ್ಷದಿಂದ ವರ್ಷಕ್ಕೆ ನಿರ್ಮಾಣಗೊಳ್ಳುವ ಸಿನಿಮಾಗಳ ಸಂಖ್ಯೆ, ಸಿನಿಮಾ ಮಾಧ್ಯಮಕ್ಕೆ ಕಾಲಿಡುವ ನಟ ನಟಿಯರ ಮತ್ತು ತಂತ್ರಜ್ಞರ ಸಂಖ್ಯೆ ವೃದ್ಧಿಸುತ್ತ ಕನ್ನಡ ಸಿನಿಮಾ ಮಾಧ್ಯಮ ಅಂತರಾಷ್ಟ್ರೀಯ ಮಾರುಕಟ್ಟೆಗೆ ತನ್ನ ವ್ಯವಹಾರವನ್ನು ವಿಸ್ತರಿಸಿಕೊಂಡಿತು. ಒಂದರ್ಥದಲ್ಲಿ ಸಿನಿಮಾಗಳು ಸಾವಿರಾರು ಸಂಖ್ಯೆಯಲ್ಲಿ ನಿರ್ಮಾಣಗೊಂಡು ಸಿನಿಮಾಗಳ ಸಂಖ್ಯೆ ವೃದ್ಧಿಸಿತೆ ವಿನ: ಅದಕ್ಕೆ ಪರ್ಯಾಯವಾಗಿ ಪ್ರೇಕ್ಷಕರನ್ನು ಬೆಳೆಸಲು ನಮ್ಮ ಸಿನಿಮಾ ಮಾಧ್ಯಮದ ಜನ ಆಸಕ್ತಿ ತೋರಿಸಲಿಲ್ಲ. ಇದು ಕನ್ನಡ ಚಿತ್ರರಂಗ ಮಾಡಿಕೊಂಡ ಬಹುದೊಡ್ಡ ಎಡವಟ್ಟು.

ಗುಣಮಟ್ಟದ ಕೊರತೆ

2016 ರಲ್ಲಿ ಅನೇಕ ಸಿನಿಮಾಗಳು ಕನ್ನಡ ಭಾಷೆಯಲ್ಲಿ ಯಶಸ್ಸನ್ನು ಪಡೆದು ಕನ್ನಡ ಸಿನಿಮಾ ಮಾಧ್ಯಮ ಒಂದಿಷ್ಟು ಚೇತರಿಸಿಕೊಂಡಿತಾದರೂ ಯಶಸ್ವಿಯಾದ ಸಿನಿಮಾಗಳಲ್ಲಿ ಬಹುಪಾಲು ಸಿನಿಮಾಗಳಲ್ಲಿನ ಕಥೆ ಮಾಟ, ಮಂತ್ರ, ಭೂತ ಮತ್ತು ದೈವಿಕ ಶಕ್ತಿಯನ್ನೆ ಕೇಂದ್ರವಾಗಿಟ್ಟು ಹೆಣೆಯಲಾಗಿತ್ತು ಎನ್ನುವ ಮಾತನ್ನು ನಾವು ನಿರ್ಲಕ್ಷಿಸುವಂತಿಲ್ಲ. ಹೊಸ ನಿರ್ದೇಶಕರು ಮತ್ತು ಹೊಸ ನಟ ನಟಿಯರ ಈ ಯಶಸ್ವಿ ಸಿನಿಮಾಗಳು ಕನ್ನಡ ಸಿನಿಮಾರಂಗದ ಗತಿಯನ್ನೇ ಬದಲಿಸುವ ಒಂದು ನಿರೀಕ್ಷೆಯನ್ನು ಹುಟ್ಟಿಸುವಲ್ಲಿ ಸಂಪೂರ್ಣವಾಗಿ ವಿಫಲವಾದವು. ಫಸ್ಟ್ ರ್ಯಾಂಕ್ ರಾಜು ಮತ್ತು ಗೋಧಿಬಣ್ಣ ಸಾಧಾರಣ ಮೈಕಟ್ಟು ಸಿನಿಮಾಗಳನ್ನು ಹೊರತು ಪಡಿಸಿ ಕರ್ವ, ಯೂ ಟರ್ನ್, ಲಾಸ್ಟ್ ಬಸ್ ಇತ್ಯಾದಿ ಯಶಸ್ವಿಯಾದ ಈ ಸಿನಿಮಾಗಳ ಕಥೆ ವಾಸ್ತವಿಕತೆಯಿಂದ ದೂರವಾಗಿತ್ತು. ಹಾಗಾದರೆ ಇಂಥ ಕಥೆಗಳ ಮೂಲಕ ನಮ್ಮ ಯುವ ಮತ್ತು ಪ್ರತಿಭಾನ್ವಿತ ನಿರ್ದೇಶಕರು ಪ್ರೇಕ್ಷಕರಿಗೆ ಹೇಳಲು ಹೊರಟಿರುವುದಾದರೂ ಏನು? ಎನ್ನುವ ಪ್ರಶ್ನೆ ಇಲ್ಲಿ ನಮಗೆ ಎದುರಾಗುತ್ತದೆ. ತಂತ್ರಜ್ಞಾನದ ಈ 21ನೇ ಶತಮಾನದಲ್ಲಿ ಮಾಟ, ಮಂತ್ರ, ದೆವ್ವದಂಥ ವಾಸ್ತವಿಕತೆಗೆ ದೂರವಾದ ಕಥೆಗಳನ್ನೇ ಈ ನಿರ್ದೇಶಕರು ಆಯ್ಕೆ  ಮಾಡಿಕೊಳ್ಳಲು ಕಾರಣ ಪ್ರೇಕ್ಷಕರಿಗೆ ಸಿನಿಮಾದ ಮೂಲಕ ಮನರಂಜನೆ ನೀಡುವುದೇ ಅವರ ಗುರಿಯಾಗಿದೆ. ಹೀಗೆ ಸಾಲು ಸಾಲು ಒಂದೇ ರೀತಿಯ ಕಥೆಗಳನ್ನು ಆಧರಿಸಿ ಸಿನಿಮಾಗಳನ್ನು ನಿರ್ಮಿಸುವ ಈ ನಿರ್ದೇಶಕರು ಮತ್ತು ನಿರ್ಮಾಪಕರು ಪ್ರೇಕ್ಷರ ಅಭಿರುಚಿಗೆ ಮಹತ್ವ ನೀಡುತ್ತಿಲ್ಲ. ಬದಲಾಗಿ ಈ ಸಿನಿಮಾ ಜನ ತಮಗೆ ಇಷ್ಟವಾದ ಮತ್ತು ಹಣ ಕೊಳ್ಳೆ ಹೊಡೆಯುವಂಥ ಕಥೆಯಾಧಾರಿತ ಸಿನಿಮಾಗಳನ್ನು ಬಲವಂತವಾಗಿ ಪ್ರೇಕ್ಷಕರ ಮುಂದಿಡುತ್ತಿರುವರು. ಆಯ್ಕೆಗೆ  ಅವಕಾಶವೇ ಇಲ್ಲದೇ ಪ್ರೇಕ್ಷಕ ಮಹಾಶಯ ಹೊಸಬರನ್ನು ಹುರುದುಂಬಿಸಲು ಒಂದೇ ರೀತಿಯ ಸಿನಿಮಾಗಳನ್ನೇ ಮತ್ತೆ ಮತ್ತೆ ನೋಡುತ್ತ ಅವುಗಳನ್ನು ಯಶಸ್ವಿ ಸಿನಿಮಾಗಳ ಸಾಲಿನಲ್ಲಿ ನಿಲ್ಲಿಸುತ್ತಿರುವನು. ಹೊಸಬರನ್ನಿಟ್ಟುಕೊಂಡು ತನ್ನ ಇಮೇಜನ್ನೇ ಪಕ್ಕಕ್ಕಿಟ್ಟು ಕುಸ್ತಿ ಆಟದಂಥ ಸರಳ ಕಥಾವಸ್ತುವನ್ನು ಆಧರಿಸಿ ಸಿನಿಮಾ ಮಾಡಿ ಗೆಲ್ಲುವ ಒಬ್ಬ ಅಮೀರ್ ಖಾನ್‍ನಂಥ ಕಲಾವಿದ ಮಾಡುವ ಪ್ರಯೋಗ ಕನ್ನಡ ಸಿನಿಮಾರಂಗದಲ್ಲಿ ಇದುವರೆಗೂ ಯಾವ ಕಲಾವಿದರಿಗೂ ಮಾಡಲು ಮತ್ತು ಯಶಸ್ಸನ್ನು ಪಡೆಯಲು ಸಾಧ್ಯವಾಗದಿರುವುದು ನಮ್ಮ ಉದ್ಯಮದ ಬಹುದೊಡ್ಡ ದುರಂತ. ಗಮನಿಸಬೇಕಾದ ಸಂಗತಿ ಎಂದರೆ ಈ ಹೊಸ ಕಲಾವಿದರು ಮತ್ತು ನಿರ್ದೇಶಕರು ತಾವು ತೊಡೆತಟ್ಟಿದರೆ ಮಾತ್ರ ಸಿನಿಮಾಗಳ ಯಶಸ್ಸು ಸಾಧ್ಯವೆಂದು ಇದುವರೆಗೂ ನಂಬಿದ್ದ ಜನಪ್ರಿಯ ನಾಯಕ ನಟರನ್ನು ಪಕ್ಕಕ್ಕೆ ಸರಿಸಿ ತಮ್ಮ ಸಿನಿಮಾಗಳಿಗೆ ಯಶಸ್ಸನ್ನು ದಕ್ಕಿಸಿಕೊಂಡದ್ದು.  ಆದರೆ ಹೀಗೆ ಯಶಸ್ಸನ್ನು ದಕ್ಕಿಸಿಕೊಳ್ಳುವ ಅವಸರದಲ್ಲಿ ವಾಸ್ತವಿಕತೆಯಿಂದ ದೂರವಾದ ಮತ್ತು ಓಬಿರಾಯನ ಕಾಲದ ಕಥೆಯನ್ನೇ ಪ್ರೇಕ್ಷಕರಿಗೆ ಮತ್ತೆ ಮತ್ತೆ ನೀಡಿದ್ದು ಈ ಹೊಸಬರು ಮಾಡಿದ ಬಹುದೊಡ್ಡ ತಪ್ಪು.

ಜನಪ್ರಿಯ ಕಲಾವಿದರು

ತಮಿಳು ಮತ್ತು ಮಲೆಯಾಳಂ ಭಾಷೆಗಳಲ್ಲಿ ಜನಪ್ರಿಯ ಕಲಾವಿದರು ಸ್ವತ: ಬಂಡವಾಳ ಹೂಡಿ ಹೊಸ ಅಲೆಯ ಸಿನಿಮಾಗಳನ್ನು ನಿರ್ಮಿಸಿದ ಕೆಲವೊಮ್ಮೆ ನಿರ್ದೇಶಿಸಿದ ಅನೇಕ ಉದಾಹರಣೆಗಳಿವೆ. ಮೋಹನ್ ಲಾಲ್, ಕಮಲ್ ಹಾಸನ್, ಮಮ್ಮುಟ್ಟಿ ಇವರೆಲ್ಲ ಜನಪ್ರಿಯ ಕಲಾವಿದರಾಗಿದ್ದೂ ತಮ್ಮ ಇಮೇಜಿಗೆ ಹೊರತಾದ ಪಾತ್ರಗಳಲ್ಲಿಯೂ ಕಾಣಿಸಿಕೊಂಡು ಹೊಸ ಅಲೆಯ ಸಿನಿಮಾಗಳ ಮೂಲಕ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ತಮ್ಮನ್ನು ಗುರುತಿಸಿಕೊಂಡಿರುವರು. ಕನ್ನಡದವರೆ ಆದ ಪ್ರಕಾಶ್ ರೈ ಅನೇಕ ಹೊಸ ನಮೂನೆಯ ಸಿನಿಮಾಗಳನ್ನು ನಿರ್ದೇಶಿಸಿ ಅಭಿನಯಿಸಿದ ದೃಷ್ಟಾಂತ ನಮ್ಮ ಕಣ್ಣೆದುರೇ ಇದೆ. ಆದರೆ ಕನ್ನಡ ಸಿನಿಮಾರಂಗದಲ್ಲಿ ಒಂದು ಇಮೇಜಿಗೆ ಅಂಟಿಕೊಳ್ಳುವ ನಾಯಕ ನಟರಾಗಲಿ ಇಲ್ಲವೇ ನಾಯಕಿ ನಟಿಯರಾಗಲಿ ಆ ಒಂದು ಇಮೇಜಿನಿಂದ ಹೊರಬಂದು ಹೊಸ ಅಲೆಯ ಸಿನಿಮಾಗಳಲ್ಲಿ ಅಭಿನಯಿಸಿದ ಉದಾಹರಣೆಗಳಿಲ್ಲ. ಸದಾಕಾಲ ಕನ್ನಡ ಸಿನಿಮಾ ಕಲಾವಿದರಿಗೆ ಆದರ್ಶವೂ ಮತ್ತು ಮಾದರಿಯೂ ಆಗುಳಿದ ರಾಜಕುಮಾರ ಮತ್ತು ವಿಷ್ಣುವರ್ಧನ್ ಅವರಂಥ ಜನಪ್ರಿಯ ನಟರು ಒಂದೇ ಒಂದು ಕಲಾತ್ಮಕ ಸಿನಿಮಾದಲ್ಲಿ ಅಭಿನಯಿಸದೇ ಹೋದದ್ದು ಅವರ ನಂತರದ ಪೀಳಿಗೆಯ ನಟರಿಗೆ ಅದೊಂದು ಅನುಕರಣಿಯವಾಗಿ ಉಳಿದಿದೆ. ಒಂದರ್ಥದಲ್ಲಿ ರಾಜಕುಮಾರ ಮತ್ತು ವಿಷ್ಣುವರ್ಧನ್ ತಮ್ಮ ಸದಭಿರುಚಿಯ ಸಿನಿಮಾಗಳ ಮೂಲಕ ಒಂದು ಪ್ರಕಾರದ ಪ್ರೇಕ್ಷಕರನ್ನು ಬೆಳೆಸಿದರೇ ವಿನ: ಸಿನಿಮಾವನ್ನೇ ಉತ್ಕಟವಾಗಿ ಪ್ರೀತಿಸುವಂಥ ವಿಭಿನ್ನ ಅಭಿರುಚಿಯ ಪ್ರೇಕ್ಷಕರು ಈ ಇಬ್ಬರೂ ಕಲಾವಿದರಿಂದ ಕನ್ನಡ ಸಿನಿಮಾ ಮಾಧ್ಯಮದಲ್ಲಿ ರೂಪುಗೊಳ್ಳಲೇ ಇಲ್ಲ. ಇನ್ನು ಕೆಲವು ಕಲಾವಿದರು ತಮ್ಮನ್ನು ಕೇವಲ ಅಭಿನಯಕ್ಕೆ ಮಾತ್ರ ಸೀಮಿತಗೊಳಿಸಿಕೊಂಡು ಸಿನಿಮಾ ಮಾಧ್ಯಮದಿಂದ ಗಳಿಸಿದ್ದರಲ್ಲಿ ಒಂದಷ್ಟು ಪಾಲನ್ನಾದರೂ ಹೊಸ ಅಲೆಯ ಸಿನಿಮಾಗಳ ನಿರ್ಮಾಣಕ್ಕೆ ತೊಡಗಿಸಲಿಲ್ಲ. ಈ ವಿಷಯವಾಗಿ ಕನ್ನಡ ಚಿತ್ರರಂಗ ಶಂಕರ್ ನಾಗ್ ಅವರಂಥ ಮೇರು ಪ್ರತಿಭೆಯನ್ನು ಇವತ್ತಿಗೂ ಸ್ಮರಿಸಿಕೊಳ್ಳಬೇಕು. ಒಬ್ಬ ಜನಪ್ರಿಯ ಮತ್ತು ಇಮೇಜಿಗೆ ಅಂಟಿಕೊಂಡ ಕಲಾವಿದನಾಗಿದ್ದರೂ ಶಂಕರ್ ನಾಗ್ 1980 ರ ದಶಕದಲ್ಲೇ ಅನೇಕ ಹೊಸ ಅಲೆಯ ಸಿನಿಮಾಗಳ ನಿರ್ಮಾಣದ ಪ್ರಯೋಗದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಅನಂತನಾಗ್ ಸಿನಿಮಾಗಳನ್ನು ನಿರ್ಮಾಣ ಮಾಡದೇ ಇದ್ದರೂ ಸಿನಿಮಾದಿಂದ ಸಿನಿಮಾಕ್ಕೆ ಹೊಸ ಹೊಸ ಪಾತ್ರಗಳಿಗೆ ತಮ್ಮನ್ನು ಪರೀಕ್ಷೆಗೆ ಒಡ್ಡುತ್ತಲೇ ಇರುವರು. ಆದರೆ ನೂರಾರು ಸಿನಿಮಾಗಳಲ್ಲಿ ನಾಯಕ ನಟರಾಗಿ ಅಭಿನಯಿಸಿಯೂ ಇವತ್ತಿಗೂ ನಾಯಕಿ ನಟಿಯರೊಂದಿಗೆ ಹಾಡಿ ಕುಣಿಯುವ ದೃಶ್ಯಗಳಲ್ಲೇ ಅಭಿನಯಿಸುತ್ತಿರುವ ಅನೇಕ ಜನಪ್ರಿಯ ಕಲಾವಿದರು ಪ್ರೇಕ್ಷಕರಿಗೆ ಹೊಸದನ್ನು ನೀಡುವಲ್ಲಿ ಸೋಲುತ್ತಿರುವರು.

ಜಾಗತೀಕರಣದ ಪರಿಣಾಮ ಸಿನಿಮಾ ಮಾರುಕಟ್ಟೆ ವಿಸ್ತರಿಸಿರುವುದರಿಂದ ಈಗ ಸಿನಿಮಾ ಪ್ರೇಕ್ಷಕ ಬಹುಭಾಷಾ ಸಿನಿಮಾಗಳ ಪ್ರೇಕ್ಷಕನಾಗಿ ಬದಲಾಗಿರುವನು. ಕನ್ನಡದ ಹೊರತಾದ ಭಾರತದ ಅನ್ಯಭಾಷೆಗಳ ಸಿನಿಮಾಮಾತ್ರವಲ್ಲದೆ ಇಂಗ್ಲಿಷ್, ಫ್ರೆಂಚ್, ಜಪಾನ್, ಜರ್ಮನಿ, ಕೊರಿಯಾ ಹೀಗೆ ಪ್ರಪಂಚದ ವಿವಿಧ ಭಾಷೆಗಳ ಸಿನಿಮಾಗಳನ್ನು ನೋಡುವ ಮುಕ್ತ ಅವಕಾಶ ಕನ್ನಡದ ಪ್ರೇಕ್ಷಕನಿಗೆ ಎದುರಾಗುತ್ತಿದೆ. ಇಂಥ ಅವಕಾಶವನ್ನು ಸೂಕ್ತವಾಗಿಯೇ  ಬಳಸಿಕೊಳ್ಳುತ್ತಿರುವ ಕನ್ನಡ ಸಿನಿಮಾಗಳ ಪ್ರೇಕ್ಷಕ ಈ ವಿದೇಶಿ ಭಾಷೆಗಳ ಸಿನಿಮಾಗಳೊಂದಿಗೆ ತನ್ನದೇ ನೆಲದ ಸಿನಿಮಾಗಳನ್ನು ಹೋಲಿಸಿ ನೋಡುತ್ತಿರುವನು. ಪ್ರಯೋಗಶಿಲತೆಗೆ ಯಾವತ್ತೂ ಪ್ರಾಧಾನ್ಯತೆ ಕೊಡುವ ಅಂತರಾಷ್ಟ್ರೀಯ ಸಿನಿಮಾಗಳೆದುರು ಆತನಿಗೆ ಕನ್ನಡ ಸಿನಿಮಾಗಳಲ್ಲಿನ ಕೊರತೆಗಳು ಎದ್ದುಕಾಣುತ್ತಿವೆ. ಕನ್ನಡ ಸಿನಿಮಾ ಮಧ್ಯಮದ ರೀಮೇಕ್, ಡಬ್ಬಿಂಗ್, ಲಾಂಗು, ಮಚ್ಚು, ದೇವರು, ಭೂತ, ಮಾಟ, ಮಂತ್ರ ಈ ಏಕತಾನತೆಯಿಂದ ಬೇಸರಗೊಂಡ ಹೊಸತನಕ್ಕಾಗಿ ತುಡಿಯುವ ಒಂದು ಇಡೀ ಪ್ರೇಕ್ಷಕ ಸಮೂಹ ಅಂತರಾಷ್ಟ್ರೀಯ ಸಿನಿಮಾಗಳೆಡೆ ವಲಸೆ ಹೋಗಿದೆ. ಹೀಗಾಗಿ ಆ ಪ್ರೇಕ್ಷಕರನ್ನು ಮತ್ತೆ ಕನ್ನಡ ಸಿನಿಮಾಗಳೆಡೆ ಕರೆತಂದು ಅಂಥ ಪ್ರೇಕ್ಷಕರನ್ನು ಬೆಳೆಸುವ ಜವಬ್ದಾರಿ ನಮ್ಮ ಸಿನಿಮಾ ಮಾಧ್ಯಮದ ಮೇಲಿದೆ.

ಅಧ್ಯಯನದ ವಿಷಯವಾಗಿ ಸಿನಿಮಾ

ಕನ್ನಡ ಭಾಷೆ ಮಾತ್ರವಲ್ಲದೆ ಭಾರತದ ಯಾವುದೇ ಭಾಷೆಯ ಪಠ್ಯಕ್ರಮದಲ್ಲಿ  ಸಿನಿಮಾವನ್ನು ಅಧ್ಯಯನದ ವಿಷಯವಾಗಿ ಸೇರಿಸಿದ ಉದಾಹರಣೆಯೇ  ಇಲ್ಲ. ಪುಣೆಯ ಫಿಲ್ಮ್ ಇನ್ಸ್‍ಟಿಟ್ಯೂಟ್, ದೆಹಲಿಯ ರಾಷ್ಟ್ರೀಯ ನಾಟಕ ತರಬೇತಿ, ಕರ್ನಾಟಕದ ರಂಗಾಯಣ ಮತ್ತು ನೀನಾಸಂ ಈ ಸಂಸ್ಥೆಗಳಲ್ಲಿ ಅಭಿನಯ ಮತ್ತು ನಿರ್ದೇಶನದ ತರಬೇತಿಗೆ ಅವಕಾಶವಿದೆಯಾದರೂ ಶಾಲಾ ಕಾಲೇಜುಗಳ ಪಠ್ಯಕ್ರಮದಲ್ಲಿ ಸಿನಿಮಾ ಅಧ್ಯಯನಕ್ಕೆ ಅವಕಾಶವಿಲ್ಲ. ಸಾಹಿತ್ಯ, ವಿಜ್ಞಾನ, ಕೈಗಾರಿಕೆ, ಪತ್ರಿಕೋದ್ಯಮ ಈ ವಿಷಯಗಳನ್ನೆಲ್ಲ ಶಾಸ್ತ್ರಿಯವಾಗಿ ಅಭ್ಯಾಸ ಮಾಡಲು ಅವಕಾಶ ಮಾಡಿಕೊಟ್ಟ ನಮ್ಮ ಶಿಕ್ಷಣ ಮಾಧ್ಯಮ ಸಿನಿಮಾ ಮಾಧ್ಯಮವನ್ನು ದೂರವೇ ಇಟ್ಟಿದೆ. ಸಿನಿಮಾ ಕೂಡ ನಾವು ಬದುಕುತ್ತಿರುವ ವ್ಯವಸ್ಥೆಯ ಒಂದು ಭಾಗ ಮತ್ತು ಅದು ಅಧ್ಯಯನಕ್ಕೆ ಯೋಗ್ಯವೂ ಹೌದು. ಕೊನೆ ಪಕ್ಷ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಸಿನಿಮಾವನ್ನು ವಿಶ್ಲೇಷಿಸುವ ಮತ್ತು ಆ ಮೂಲಕ ಉತ್ತಮ ಪ್ರೇಕ್ಷಕರನ್ನು ರೂಪಿಸುವಂಥ ಪಠ್ಯಕ್ರಮಕ್ಕೆ ಅವಕಾಶ ಮಾಡಿಕೊಡಬೇಕು. ಸಿನಿಮಾ ಕೂಡ ಅದೊಂದು ಸಾಂಸ್ಕೃತಿಕ ಉತ್ಪಾದನೆ. ಉತ್ಪಾದಿತ ವಸ್ತು ಮಾರುಕಟ್ಟೆಯಲ್ಲಿ ಬಿಕರಿಯಾಗಲು ಅಥವಾ ಜನಪ್ರಿಯತೆ ಹೊಂದಲು ಅದರ ಗುಣಾವಗುಣಗಳನ್ನು ವಿಶ್ಲೇಷಿಸುವುದಕ್ಕಾಗಿ ಒಂದು ನಿರ್ಧಿಷ್ಟ ಮಾನದಂಡಬೇಕು. ಈ ವಿಮರ್ಶೆ ಮತ್ತು ವಿಶ್ಲೇಷಣಾತ್ಮಕ ಗುಣ ಶಿಕ್ಷಣದಿಂದ ಮಾತ್ರ ನಮಗೆ ದಕ್ಕುವಂಥದ್ದು. ಈಗ ಕನ್ನಡ ಸಿನಿಮಾದ (ಒಟ್ಟಾರೆ ಇಡೀ ಭಾರತೀಯ ಸಿನಿಮಾ ಎನ್ನಬಹುದು) ವಿಷಯವನ್ನೇ ತೆಗೆದುಕೊಂಡರೆ ಇಲ್ಲಿ ಜನಪ್ರಿಯವಾಗುತ್ತಿರುವ ಸಿನಿಮಾಗಳ ಪ್ರೇಕ್ಷಕರು ಯಾರು ಎನ್ನುವ ಪ್ರಶ್ನೆ ಎದುರಾಗುತ್ತದೆ. ಮಧ್ಯಮ ವರ್ಗದ ಮತ್ತು ಶಿಕ್ಷಣವೇ ಇಲ್ಲದ ಕೆಳವರ್ಗದ ಪ್ರೇಕ್ಷಕರು ಸಿನಿಮಾವೊಂದರ ಗೆಲುವು ಮತ್ತು ಸೋಲಿನಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿರುವರು. ರಾಜಕುಮಾರ, ವಿಷ್ಣುವರ್ಧನ್ ಇತ್ಯಾದಿ ನಾಯಕ ನಟರು ಹಲವು ದಶಕಗಳ ಕಾಲ ಜನಪ್ರಿಯ ಕಲಾವಿದರಾಗಿ ಉಳಿಯಲು ಸಾಧ್ಯವಾದದ್ದು ಇದೇ ಪ್ರೇಕ್ಷಕರಿಂದ. ಜೊತೆಗೆ ಇದೇ ಪ್ರೇಕ್ಷಕರು ಅಭಿನಯವೇ ಗೊತ್ತಿಲ್ಲದ ಕೇವಲ ತಮ್ಮ ಆಂಗಿಕ ಅಭಿನಯವನ್ನೇ ಬಂಡವಾಳವಾಗಿಟ್ಟುಕೊಂಡ ಅನೇಕ ಕಲಾವಿದರನ್ನು ಖ್ಯಾತಿಯ ಉತ್ತುಂಗಕ್ಕೆರಿಸಿದರು. ಹೀಗಾಗಿ ಇಂಥ ಪ್ರೇಕ್ಷಕರ ಉತ್ತೇಜನವನ್ನು ಆಧಾರವಾಗಿಟ್ಟುಕೊಂಡು ಕನ್ನಡ ಸಿನಿಮಾರಂಗದಲ್ಲಿ ಸಿನಿಮಾಗಳ ಸಂಖ್ಯೆ ವೃದ್ಧಿಸಿದವೇ ವಿನ: ಉತ್ತಮ ಅಭಿರುಚಿಯ ವಿಮರ್ಶಾತ್ಮಕ ಪ್ರೇಕ್ಷಕರ ಸಂಖ್ಯೆ ಬೆಳೆಯಲಿಲ್ಲ.

ಈ ಒಂದು ಸಮಸ್ಯೆಯಿಂದ ಹೊರಬರಲು ಈಗ ನಮ್ಮೆದುರಿಗಿರುವ ಏಕೈಕ ಪರಿಹಾರವೆಂದರೆ ಸಿನಿಮಾಮಾಧ್ಯಮವನ್ನು ಅಧಯ್ಯನದ ವಿಷಯವಾಗಿ ನಮ್ಮ ಪಠ್ಯಕ್ರಮಕ್ಕೆ ಒಳಪಡಿಸುವುದು. ಶಾಲಾ ಕಾಲೇಜುಗಳಲ್ಲಿ ನಿರ್ಮಾಣವಾಗುತ್ತಿರುವ ಸಿನಿಮಾಗಳ ಕುರಿತು ಚರ್ಚೆ, ಸಂವಾದ, ಗೋಷ್ಟಿಗಳು ಏರ್ಪಡಾಗಬೇಕು. ಕನ್ನಡ ಭಾಷೆಯ ಸಿನಿಮಾಗಳನ್ನು ನಮ್ಮ ಮಕ್ಕಳು ಅನ್ಯಭಾಷೆಯ ಸಿನಿಮಾಗಳೊಂದಿಗೆ ಹೋಲಿಸಿ ಅಧ್ಯಯನ ಮಾಡುವ ವಾತಾವರಣ ನಿರ್ಮಾಣವಾಗಬೇಕು. ಸಿನಿಮಾವನ್ನು ವಿಮರ್ಶಾ ದೃಷ್ಟಿಕೋನದಿಂದ ನೋಡುವ ಬಗೆಯನ್ನು ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಕಲಿಸಿಕೊಡುವಂತಾಗಬೇಕು. ಒಂದೆಡೆ ಸಿನಿಮಾಗಳು ನಿರ್ಮಾಣಗೊಳ್ಳುತ್ತಿದ್ದರೆ ಅದಕ್ಕೆ ಪರ್ಯಾಯವಾಗಿ ಶಾಲೆ, ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಪ್ರೇಕ್ಷಕರು ಹುಟ್ಟಿಕೊಳ್ಳಬೇಕು. ಇಂಥ ಕಲಿಕೆಯ ವಾತಾವರಣ ನಿರ್ಮಾಣ ಮಾಡುವುದರಿಂದ ಕನ್ನಡ ಸಿನಿಮಾ ಮಾಧ್ಯಮದಲ್ಲಿ ಪ್ರೇಕ್ಷಕರನ್ನು ಬೆಳೆಸಲು ಸಾಧ್ಯವಾಗುವುದು.


ಕಲಾವಿದರು ಬೆಳೆಯಬೇಕು

ಕನ್ನಡ ಸಿನಿಮಾ ಮಾಧ್ಯಮದಲ್ಲಿ ನಾಯಕ ನಟರು, ನಾಯಕಿ ನಟಿಯರು, ಪೋಷಕ  ನಟ/ನಟಿಯರು ಹುಟ್ಟಿಕೊಳ್ಳುತ್ತಿರುವರೇ ವಿನ: ಕಲಾವಿದರು ಬೆಳೆಯುತ್ತಿರುವುದು ತೀರ ಕಡಿಮೆ. ಒಂದೇ ರೀತಿಯ ಪಾತ್ರಗಳಿಗೆ ಮತ್ತು ಇಮೇಜಿಗೆ ಅಂಟಿಕೊಳ್ಳುತ್ತಿರುವ ಈ ನಟ ನಟಿಯರು ಪರಿಪೂರ್ಣ ಕಲಾವಿದರಾಗುವ ಅವಕಾಶದಿಂದ ವಂಚಿತರಾಗುತ್ತಿರುವರು. ಸದಾಕಾಲ ಮೇನ್ ಸ್ಟ್ರೀಮ್‍ನಲ್ಲೇ ಕಾಣಿಸಿಕೊಳ್ಳಬೇಕೆಂಬ ಹಂಬಲ ನಮ್ಮ ಅನೇಕ ಸಿನಿಮಾ ನಟ ನಟಿಯರದ್ದು. ಹೀಗಾಗಿ ಅವರದು ಎಂದಿಗೂ ಏಕತಾನತೆಯ ಅಭಿನಯ. ಕಲಾವಿದನಾದವನು ಆತ ಯಾವ ಪಾತ್ರವನ್ನೂ ಅಭಿನಯಿಸಲು ಸಿದ್ಧನಿರಬೇಕು. ನಾಯಕ, ಖಳ, ಹಾಸ್ಯ, ಶೃಂಗಾರ ಹೀಗೆ ನವರಸಗಳನ್ನೂ ಮೈಗೂಡಿಸಿಕೊಂಡಾಗಲೇ ಒಬ್ಬ ಕಲಾವಿದ ರೂಪುಗೊಳ್ಳಲು ಸಾಧ್ಯ. ದುರಂತದ ಸಂಗತಿ ಎಂದರೆ ನಮ್ಮ ಕನ್ನಡ ಸಿನಿಮಾ ರಂಗದಲ್ಲಿ ಬಹುತೇಕ ಜನಪ್ರಿಯ ನಟ ನಟಿಯರು ಕಲಾವಿದರಾಗಲೂ ಪ್ರಯತ್ನಿಸಲೇ ಇಲ್ಲ. ಎಲ್ಲೋ ಒಂದು ಕಡೆ ಅನಂತನಾಗ್ ಮತ್ತು ರಮೇಶ್ ಅವರಂಥ ಬೆರಳೆಣಿಕೆಯ ನಟರನ್ನು ಮಾತ್ರ ನಾವು ಪರಿಪೂರ್ಣ ಕಲಾವಿದರೆಂದು ಉದಾಹರಿಸಬಹುದು. ಹೀಗೆ ಕನ್ನಡ ಸಿನಿಮಾ ರಂಗದಲ್ಲಿ ನಮ್ಮ ನಟ ನಟಿಯರೇ ನಿಂತ ನೀರಾಗಿರುವಾಗ ಅವರಿಂದ ಸಿನಿಮಾ ಪ್ರೇಕ್ಷಕರನ್ನು ಬೆಳೆಸುವ ಹೊಣೆಗಾರಿಕೆ ನಿರೀಕ್ಷಿಸುವುದು ಶುದ್ಧ ಮೂರ್ಖತನವಾಗುತ್ತದೆ.

ಕೊನೆಯ ಮಾತು

ಸಿನಿಮಾ ಎನ್ನುವುದು ನಿರ್ದೇಶಕ, ನಿರ್ಮಾಪಕ ಮತ್ತು ಕಲಾವಿದರ ಕುಸುರಿ ಕೆಲಸವಾದರೂ ಕೊನೆಗೆ ಅದರ ಸೋಲು ಗೆಲುವಿನಲ್ಲಿ ಪ್ರೇಕ್ಷಕನದೇ ನಿರ್ಣಾಯಕ ಪಾತ್ರ. ಪ್ರೇಕ್ಷಕ ಮನಸ್ಸು ಮಾಡಿದಲ್ಲಿ ನಿರೀಕ್ಷೆಯೇ  ಇಲ್ಲದ ಸಿನಿಮಾವನ್ನೂ ಗೆಲುವಿನ ದಡ ಸೇರಿಸಬಲ್ಲ. ಭಾರೀ ನಿರೀಕ್ಷೆಯ ಸಿನಿಮಾಗಳಿಗೆ ಸೋಲಿನ ರುಚಿ ಉಣಿಸಬಲ್ಲ. ದುರಂತದ ಸಂಗತಿ ಎಂದರೆ ಸಿನಿಮಾಗಳಿಗೆ ಯಶಸ್ಸು ತಂದುಕೊಡುತ್ತಿರುವ ಬಹುಪಾಲು ಪ್ರೇಕ್ಷಕರಿಗೆ ಸಿನಿಮಾ ಎನ್ನುವುದು ಅದೊಂದು ಕೇವಲ ಮನರಂಜನೆಯ ಮಾಧ್ಯಮ ಮಾತ್ರವಾಗಿದೆ. ಹೀಗಾಗಿ ಇಂಥ ಮನೋಭಾವದ ಪ್ರೇಕ್ಷಕರನ್ನೇ ಕೇಂದ್ರವಾಗಿಟ್ಟುಕೊಂಡು ನಮ್ಮ ಸಿನಿಮಾ ಉದ್ಯಮದ ಜನ ತರಾತುರಿಯಲ್ಲಿ ರೀಲುಗಳನ್ನು ಸುತ್ತಿ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿರುವರು. ಅದಕ್ಕೆಂದೇ ಅಭಿನಯವೇ ಗೊತ್ತಿಲ್ಲದ ನಟ ನಟಿಯರು, ಮಾತನ್ನೇ ಬಂಡವಾಳ ಮಾಡಿಕೊಂಡ ನಿರ್ದೇಶಕರು, ಸೃಜನಶೀಲತೆಯೇ  ಇಲ್ಲದ ವ್ಯಾಪಾರಿ ಮನೋಭಾವದ ನಿರ್ಮಾಪಕರು ಈ ಸಿನಿಮಾ ಮಾಧ್ಯಮದಲ್ಲಿ ಜನಪ್ರಿಯರಾಗುತ್ತಾರೆ. ಇನ್ನೊಂದೆಡೆ ಮಾಟ, ಮಂತ್ರ, ಭೂತ ಇಂಥ ಅವಾಸ್ತವಿಕ ಕಥೆಯಾಧಾರಿತ ಸಿನಿಮಾಗಳು ಯಶಸ್ವಿಯಾಗಿ ಹಣ ಕೊಳ್ಳೆಹೊಡೆಯುತ್ತವೆ. ಇದಕ್ಕೆಲ್ಲ ವಿಮರ್ಶಾತ್ಮಕ ಮನೋಭಾವದ ಪ್ರೇಕ್ಷಕರ ಕೊರತೆಯೇ  ಮುಖ್ಯ ಕಾರಣ. ಆದ್ದರಿಂದ ಸಿನಿಮಾ ಮಾಧ್ಯಮ ಸೃಜನಶೀಲ ಮಾಧ್ಯಮವಾಗಿ ಉಳಿದು ಬೆಳೆಯಲು ಇಲ್ಲಿ ಸದಭಿರುಚಿಯ ಪ್ರೇಕ್ಷಕರ ಸಂಖ್ಯೆ ಬೆಳೆಯಬೇಕಿದೆ.

-ರಾಜಕುಮಾರ ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 


Thursday, March 2, 2017

ಉತ್ತರಕಾಂಡ: ಸ್ತ್ರೀ ಸಂವೇದನೆಯ ಅನಾವರಣ




         ಸಾಹಿತ್ಯಕ್ಕೆ ನಮ್ಮ ನಂಬಿಕೆ ಮತ್ತು ಗ್ರಹಿಕೆಯನ್ನು ಮುರಿದು ಹೊಸದನ್ನು ಕಟ್ಟುವ ಭಂಜಕ ಶಕ್ತಿಯಿದೆ. ಹಾಗೆಂದು ಬರಹಗಾರ ತನ್ನ ವೈಯಕ್ತಿಕ ಅನಿಸಿಕೆಯನ್ನು ಓದುಗರ ಮೇಲೆ ಬಲವಂತವಾಗಿ ಹೇರಲು ಹೊರಟು ನಾವು ನಂಬಿದ ಪಾತ್ರಗಳನ್ನು ವಿರೂಪಗೊಳಿಸಿ ಜನರ ಭಾವನೆಗಳಿಗೆ ನೋವಾಗುವಂತೆ ಬರೆಯುವುದು ಸಮರ್ಥನೀಯವಲ್ಲ. ತಮ್ಮ ಉತ್ತರಕಾಂಡ ಕಾದಂಬರಿಯಲ್ಲಿ ಹೊಸ ಪ್ರಯೋಗಕ್ಕೆ (ನಲವತ್ತು ವರ್ಷಗಳ ಹಿಂದೆ ಪರ್ವದಲ್ಲಿ ಇಂಥದ್ದೊಂದು ಪ್ರಯೋಗವನ್ನು ಮಾಡಿದ ನಂತರ) ಮುಂದಾಗಿರುವ ಭೈರಪ್ಪನವರು ಜನರ ನಂಬಿಕೆಗಳನ್ನು ಘಾಸಿಗೊಳಿಸದೆ ರಾಮಾಯಣದ ಪಾತ್ರಗಳನ್ನು ಸಾಮಾನ್ಯ ಮನುಷ್ಯರಂತೆ ಚಿತ್ರಿಸಿರುವರು. ಪುರಾಣ, ಪ್ರವಚನ, ಜನಪದದ ಮೂಲಕ ಅದೆಷ್ಟೋ ಬಾರಿ ಓದಿ ಮತ್ತು ಕೇಳಿ ತಿಳಿದುಕೊಂಡ ಕಥೆ ಇಲ್ಲಿ ಸೀತೆಯ ಸ್ವಗತದಲ್ಲಿ ಬಿಚ್ಚಿಕೊಳ್ಳುತ್ತ ಹೋಗುತ್ತದೆ. ಕಾದಂಬರಿಯ ಕಥೆ ಈಗಾಗಲೇ ನಮಗೆ ಓದಿ ಗೊತ್ತಿರುವುದರಿಂದ ಇಲ್ಲಿ ಕಾದಂಬರಿಯನ್ನು ಓದಿಸಿಕೊಂಡು ಹೋಗುವ ಸಾಮರ್ಥ್ಯ ಇರುವುದು ಭೈರಪ್ಪನವರ ಕಥನ ಕಟ್ಟುವ ಶಕ್ತಿಗೆ ಮತ್ತು ಅವರು ಸೃಷ್ಟಿಸುವ ಭಾವರಸಕ್ಕೆ. ನಾವು ದೇವತೆಗಳೆಂದು ಕಲ್ಪಿಸಿಕೊಂಡ ರಾಮ, ಸೀತೆ ಸಾಮಾನ್ಯರಂತೆ ಸಾಯುವುದು ಕಾದಂಬರಿಯ ಮುಖ್ಯ ಘಟ್ಟಗಳಲ್ಲೊಂದು. ರಾಮನನ್ನು ತ್ಯಜಿಸುವ ಸೀತೆ ಹೆಣ್ಣು ಪರಾವಲಂಬಿಯಲ್ಲ ಎನ್ನುವುದನ್ನು ಧ್ವನಿಸುವುದರ ಜೊತೆಗೆ ಅವಳು ಇಡೀ ಸ್ತ್ರೀ ಸಮುದಾಯದ ಸ್ವಾಭಿಮಾನದ ಸಂಕೇತವಾಗಿ ಕಾಣಿಸುತ್ತಾಳೆ. 

        ಉತ್ತರಕಾಂಡ ಭೈರಪ್ಪನವರ ಇಪ್ಪತ್ತೈದನೆ ಕಾದಂಬರಿ. ಪ್ರಕಟವಾದ ಒಂದು ತಿಂಗಳಲ್ಲೇ ನಾಲ್ಕು ಮುದ್ರಣಗಳನ್ನು ಕಂಡ ಈ ಕಾದಂಬರಿ ಭೈರಪ್ಪನವರ ಜನಪ್ರಿಯತೆಯನ್ನು ಮತ್ತು ಅವರ ಕೃತಿಗಳಿಗಿರುವ  ಅಪಾರ ಓದುಗರ ಸಂಖ್ಯೆಯನ್ನು ಮತ್ತೊಮ್ಮೆ ಸಾಬಿತುಪಡಿಸಿದೆ. ಭೈರಪ್ಪನವರೆ ತಮ್ಮ ಆತ್ಮಕಥೆಯಲ್ಲಿ ಹೇಳಿಕೊಂಡಂತೆ ಕಾದಂಬರಿಯನ್ನು ಬರೆಯುತ್ತಿರುವ ಸಂದರ್ಭ ಅವರ ಮನಸ್ಸನ್ನು ನಿರ್ದೇಶಿಸುವುದು ಅವರು ಬರೆಯುತ್ತಿರುವ ಪಾತ್ರ, ಸನ್ನಿವೇಶ, ಆ ದ್ವಂದ್ವ ತಿಕ್ಕಾಟಗಳ ಒಳಸತ್ಯಗಳು ಮಾತ್ರ. ಓದುಗರಿಗೆ ಯಾವ ಪಾತ್ರ, ಸನ್ನಿವೇಶ ಪರಿಣಾಮ ಬೀರಬಹುದು ಎಂದು ನಾನೆಂದೂ ಯೋಚಿಸುವುದಿಲ್ಲ ಎಂದೆನ್ನುವ ಭೈರಪ್ಪನವರ ಕೃತಿಗಳು ಅಪಾರ ಸಂಖ್ಯೆಯ ಓದುಗರನ್ನು ಹೋಗಿ ಮುಟ್ಟುತ್ತಿರುವುದು ಅದು ಅವರ ಬರವಣಿಗೆಯ ಮಾಂತ್ರಿಕ ಶಕ್ತಿಗೊಂದು ನಿದರ್ಶನ.

          ಉತ್ತರಕಾಂಡ ಕಾದಂಬರಿಯನ್ನು ಭೈರಪ್ಪನವರು ತಮ್ಮ ಸೃಜನಶೀಲ ಸೃಷ್ಟಿ ಎಂದು ಕರೆಯದೆ ಅದನ್ನು ಸೃಜನಶೀಲ ಪ್ರತಿಕ್ರಿಯೆ  ಎನ್ನುತ್ತಾರೆ. ಈ ಕಾದಂಬರಿ ತೀರ ಸಂಶೋಧನಾತ್ಮಕ ಕೃತಿಗಳ ಗುಂಪಿಗೆ ಸೇರದೆ ಇರುವುದರಿಂದ ಕಾದಂಬರಿ ಸರಳವಾಗಿ ಓದಿಸಿಕೊಂಡು ಹೋಗುತ್ತದೆ. ಬೇರೆ ಬೇರೆ ಭಾಷೆಗಳಲ್ಲಿ ರಾಮಾಯಣದ ಎಷ್ಟೋ ರೂಪಗಳು ಹುಟ್ಟಿವೆ, ಸೃಷ್ಟಿಯಾಗಿವೆ. ನಾನು ಅವುಗಳಲ್ಲಿ ಕೆಲವುಗಳ ಬಗೆಗೆ ಸ್ಥೂಲವಾಗಿ ತಿಳಿದಿದ್ದೇನೆಯೇ  ಹೊರತು ಯಾವುದನ್ನೂ ಅಭ್ಯಾಸ ಮಾಡಿಲ್ಲ. ಇದು ವಾಲ್ಮೀಕಿ ರಾಮಾಯಣವನ್ನಲಂಬಿಸಿದ ನನ್ನ ನೇರ ಸೃಜನಶೀಲ ಪ್ರತಿಕ್ರಿಯೆ  ಎಂದು ಭೈರಪ್ಪನವರು ತಮ್ಮ ವಿನಯವನ್ನು ಮೆರೆದಿರುವರು. ರಾಮಾಯಣ ರಾಮನನ್ನೆ ಪ್ರಧಾನವಾಗಿಟ್ಟುಕೊಂಡು ರಚಿತವಾದ ಮಹಾಕಾವ್ಯವಾದರೆ ಭೈರಪ್ಪನವರ ಉತ್ತರಕಾಂಡ ಸೀತೆಯನ್ನು ಪ್ರಧಾನವಾಗಿಟ್ಟುಕೊಂಡು ರಚನೆಯಾದ ಕಾದಂಬರಿ. ಆದ್ದರಿಂದ ಈ ಕೃತಿಯನ್ನು ಸ್ತ್ರೀ ಪ್ರಧಾನ ಕಾದಂಬರಿ ಎಂದೂ ಕರೆಯಬಹುದು. ಆದರೆ ಈ ಮಾತನ್ನು ಭೈರಪ್ಪನವರು ಒಪ್ಪಿಕೊಳ್ಳಲಾರರು. ಸ್ತ್ರೀ ಪ್ರಧಾನ ಕಾದಂಬರಿ ಎಂಬ ವಿಮರ್ಶಾ ಲೋಕದ ನಿಲುವನ್ನೇ ಬುಡಮೇಲು ಮಾಡುವಂತೆ ಭೈರಪ್ಪನವರು ಹೀಗೆ ಹೇಳುತ್ತಾರೆ ‘ಕವಲು ಕಾದಂಬರಿಯಲ್ಲಿ ಆದ ತಪ್ಪನ್ನು ಸರಿ ಮಾಡಲು ಉತ್ತರಕಾಂಡದಲ್ಲಿ ಸ್ತ್ರೀ ಪರ ನಿಲುವು ತೆಗೆದುಕೊಂಡಿದ್ದೇನೆ ಎಂದು ಯೋಚಿಸಿದರೆ ಅದು ಶುದ್ಧ ನಾನ್ಸೆನ್ಸ್. ನನಗೆ ಸ್ತ್ರೀವಾದ ಯಾವುದೇ ಇಸಮ್‍ಗಳಲ್ಲಿ ನಂಬಿಕೆಯಿಲ್ಲ. ಮನುಷ್ಯ ಸ್ವಭಾವದ ಅಂತರಂಗದಲ್ಲಿ ಬರುವ ನೋವು ನಲಿವುಗಳನ್ನು ವರ್ಣನೆ ಮಾಡುವುದು ಅವುಗಳನ್ನು ಓದುಗರ ಅನುಭವಕ್ಕೆ ಬರುವಂತೆ ಬರೆಯುವುದು, ಓದುಗನ ಸಂವೇದನೆಯನ್ನು ಸೂಕ್ಷ್ಮಗೊಳಿಸುವುದು ಇಷ್ಟೇ ಸಾಹಿತ್ಯದ ಉದ್ದೇಶ’. ಹೀಗೆ ಭೈರಪ್ಪನವರು ಹೇಳಿದ ಮಾತ್ರಕ್ಕೆ ಉತ್ತರಕಾಂಡ ಸ್ತ್ರೀ ಪ್ರಧಾನ ಕಾದಂಬರಿ ಎನ್ನುವ ನಿಲುವಿನಿಂದ ಓದುಗ ಬಳಗ ಹಿಂದೆ ಸರಿಯಲಾರದು. ಏಕೆಂದರೆ ಇಡೀ ಕಾದಂಬರಿ ಸೀತೆಯ ಸ್ವಗತದಲ್ಲೇ ತೆರೆದುಕೊಳ್ಳುವುದು, ಸೀತೆ ರಾಮನನ್ನು ತ್ಯಜಿಸಿ ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳುವುದು, ರಾಮನ ಜೊತೆಗಿದ್ದೂ ಸೀತೆ ಸಂದೇಹಕ್ಕೆ ಒಳಗಾಗಿ ರಾಮನಿಂದ ಮಾನಸಿಕವಾಗಿ ದೂರಾಗುವುದು, ಊರ್ಮಿಳೆಯ ಪಾತ್ರಕ್ಕೆ ಹೆಚ್ಚಿನ ಅವಕಾಶ ನೀಡಿರುವುದು ಈ ಎಲ್ಲ ಕಾರಣಗಳು ಉತ್ತರಕಾಂಡ ಕಾದಂಬರಿ ಸ್ತ್ರೀ ಪ್ರಧಾನ ಕೃತಿ ಎನ್ನುವುದಕ್ಕೆ ಕೆಲವು ಪುರಾವೆಗಳು. 

      ರಾಮನ ಹುಟ್ಟಿನಿಂದ ಅವನ ಸಾವಿನವರೆಗೆ ಕಾದಂಬರಿ ಬೆಳೆದಿದೆ. ಹಾಗೆಂದು ತೀರ ಆಳವಾದ ಕೃತಿ ಇದಲ್ಲ. ಸೀತೆಯ ಕಣ್ಣಳತೆಯಲ್ಲೇ ಇಡೀ ಕಥೆ ತೆರೆದುಕೊಳ್ಳುವುದರಿಂದ ಲೇಖಕರಿಗೆ ರಾಮಾಯಣದ ಇಡೀ ಕಥೆಯನ್ನು ಸಂಕ್ಷಿಪ್ತಗೊಳಿಸಲು ಸುಲಭವಾಗಿದೆ. ಸಾಮಾನ್ಯವಾಗಿ ನಾವು ಓದಿದ ರಾಮಾಯಣದ ಕಥೆಗಳಲ್ಲಿ ಓದುಗನ ಊಹೆಗೂ ಮೀರಿದ ಸಂಗತಿಗಳು ಘಟಿಸುತ್ತವೆ. ರಾಮ ವಿಷ್ಣುವಿನ ಅವತಾರ, ರಾಕ್ಷಸರ ಸಂಹಾರಕ್ಕಾಗಿ ಜನಿಸಿದ ಅವತಾರ ಪುರುಷ, ಸಮುದ್ರದೊಳಗೆ ಕಟ್ಟುವ ಸೇತುವೆ, ವನವಾಸದ ದಿನಗಳ ಸುಂದರಾನುಭೂತಿ, ಹತ್ತು ತಲೆಗಳ ರಾವಣ, ಲವಕುಶರೊಂದಿಗಿನ ಕಾಳಗ, ಭೂಮಾತೆಯ ಒಡಲು ಸೇರುವ ಸೀತೆ ಹೀಗೆ ರಾಮಾಯಣದ ಕಥೆಗಳಲ್ಲಿ ಊಹಾತೀತವಾದ ಕಲ್ಪನೆಗಳಿವೆ. ಆದರೆ ಉತ್ತರಕಾಂಡ ಕಾದಂಬರಿ ನಮ್ಮೆಲ್ಲ ಕಲ್ಪನೆಗಳನ್ನು, ನಂಬಿಕೆಗಳನ್ನು ಬುಡಮೇಲು ಮಾಡುತ್ತದೆ. ಇಲ್ಲಿ ರಾಮಾಯಣದ ಪ್ರತಿಯೊಂದು ಪಾತ್ರ ರಾಮ ಮತ್ತು ಸೀತೆಯನ್ನೊಳಗೊಂಡಂತೆ ತೀರ ಸಾಮಾನ್ಯ ಮನುಷ್ಯರಂತೆ ರೂಪುಗೊಂಡಿರುವರು. ಅವರಿಗೂ ಮನುಷ್ಯ ಸಹಜವಾದ ಕೋಪ, ಸಿಟ್ಟು, ತಾಮಸದ ಗುಣಗಳಿವೆ. ಇಲ್ಲಿನ ಪಾತ್ರಗಳು ಸಹ ನಮ್ಮಂತೆಯೇ  ಬೈಗಳನ್ನು ಬೈಯಬಲ್ಲರು. ಹಸಿವು, ನಿದ್ರೆ, ಮೈಥುನದಂಥ ಮಾನವ ಸಹಜ ಬಯಕೆಗಳು ರಾಮ, ಸೀತೆ, ಲಕ್ಷ್ಮಣರನ್ನೂ ಕಾಡುತ್ತವೆ. ಹದಿನಾಲ್ಕು ವರ್ಷಗಳ ವನವಾಸದ ಸಂದರ್ಭ ಅವರು ಎದುರಿಸುವ ಸಂಕಷ್ಟಗಳು, ಹೊಟ್ಟೆ ಹಸಿವನ್ನು ನೀಗಿಸಿಕೊಳ್ಳಲು ಪಡುವ ಪಡಿಪಾಟಲು, ಲಕ್ಷ್ಮಣನ ರೈತಾಪಿ ಬದುಕು, ಬರಿಗಾಲಿನಲ್ಲಿ ನಡೆಯುವಾಗ ಕಲ್ಲು ಮುಳ್ಳುಗಳಿಂದಾಗುವ ಗಾಯ ಹೀಗೆ ನಮ್ಮ ಅನುಭವಕ್ಕೆ ದಕ್ಕದ ಈ ಎಲ್ಲ ಸಂಗತಿಗಳನ್ನು ಭೈರಪ್ಪನವರು ಉತ್ತರಕಾಂಡದಲ್ಲಿ ಉಲ್ಲೇಖಿಸುತ್ತಾರೆ. ‘ಲಕ್ಷ್ಮಣನು ಕಾಡಿನಲ್ಲಿ ದೊರೆಯುತ್ತಿದ್ದ ಧಾನ್ಯಗಳನ್ನು ಹುಡುಕಿ ಬಿಡಿಸಿ ತಂದು ಕಲ್ಲು ಚಪ್ಪಡಿಯ ಮೇಲೆ ಅರೆದು ಹಿಟ್ಟು ಮಾಡಿ ಅವನೇ ದಾರಿಯುದ್ದಕ್ಕೂ ಹೊತ್ತು ತರುತ್ತಿದ್ದ ಪಾತ್ರೆಯಲ್ಲಿ ಬೇಯಿಸಿ ಕಾಡಿನಲ್ಲಿ ದೊರೆಯುತ್ತಿದ್ದ ಮೆಣಸಿನ ಕಾಳುಗಳನ್ನು ಅರೆದು ಬೆರೆಸಿ ನಿಂಬೆ ಹುಣಸೆಗಳಂಥ ಹುಳಿ ಹಣ್ಣುಗಳ ರಸವನ್ನು ಹಿಂಡಿ ತಿನ್ನಲು ಅರ್ಹವಾಗುವಂತೆ ಮಾಡಲು ಆರಂಭಿಸಿದ ನಂತರ ಹೊಟ್ಟೆ ತುಂಬತೊಡಗಿತು. ಕೈಕಾಲುಗಳಲ್ಲಿ ಶಕ್ತಿ ಕೂಡಿಕೊಂಡಿತು’ ಸೀತೆಯ ಈ ಸ್ವಗತದ ಸಂಭಾಷಣೆ ಇಡೀ ರಾಮಾಯಣದ ಕಥೆಯನ್ನು ಭೈರಪ್ಪನವರು ಹೇಗೆ ಸರಳವಾಗಿ ಚಿತ್ರಿಸಿರುವರು ಎನ್ನುವುದಕ್ಕೆ ದೃಷ್ಟಾಂತವಾಗಿದೆ. 

     ಗೌತಮ ಮಹರ್ಷಿಯ ಶಾಪದಿಂದ ಕಲ್ಲಾದ ಅಹಲ್ಯೆ ರಾಮನ ಪಾದ ಸ್ಪರ್ಷದಿಂದ ಮತ್ತೆ ಮನುಷ್ಯ ರೂಪವನ್ನು ಪಡೆಯುತ್ತಾಳೆನ್ನುವ ನಂಬಿಕೆ ಸಹಜವೆಂಬಂತೆ ಬೆಳೆದುಬಂದಿದೆ. ಆದರೆ ಭೈರಪ್ಪನವರ ಉತ್ತರಕಾಂಡದಲ್ಲಿ ಅಹಲ್ಯೆ ಕಲ್ಲಾಗದೆ ಮಾಡಿದ ತಪ್ಪಿಗೆ ಪ್ರಾಯಶ್ಚಿತವನ್ನನುಭವಿಸುತ್ತಾಳೆ. ಯಾರಿಗೂ ಮುಖ ತೋರಿಸದೆ ಏಕಾಂತಕ್ಕೆ ಸರಿದು ಹೋಗುವ ಅಹಲ್ಯೆ ಆಹಾರವನ್ನು ತ್ಯಜಿಸಿ ಕೃಶಳಾಗುತ್ತಾಳೆ. ಅಹಲ್ಯೆಯನ್ನು ನೋಡಿದ ಕ್ಷಣ ರಾಮನಿಗೆ ಅವಳು ಕೆದರಿದ ಬಿಳಿ ಕೂದಲಿನ, ಅನಾರೋಗ್ಯದಿಂದ ಅರಿಸಿನ ಬಣ್ಣಕ್ಕೆ ತಿರುಗಿದ ಮೈಚರ್ಮದ, ಒಣಗಿದ ಕಡ್ಡಿಯಂಥ ಕೈಕಾಲುಗಳ, ಗುಳಿಬಿದ್ದು ಜೀವ ಕಳೆದುಕೊಂಡ ಪಾಪೆಯ ಕಣ್ಣುಗಳ ಹೆಣ್ಣು ಪ್ರೇತದಂತೆ ಗೋಚರಿಸುತ್ತಾಳೆ. ಹೀಗೆ ಇಡೀ ರಾಮಾಯಣದ ಕಥೆಯನ್ನು ಒಂದು ಕಲ್ಪನೆಯ ಚೌಕಟ್ಟಿನಿಂದ ಹೊರತಂದು ಭೈರಪ್ಪನವರು ಅದನ್ನೊಂದು ಸಾಮಾನ್ಯರ ಕಥೆಯಂತೆ, ನಮ್ಮ ಬದುಕಿನ ಭಾಗವೆನ್ನುವಂತೆ ಕಟ್ಟಿಕೊಡುತ್ತಾರೆ. 

     ಸೀತೆಯನ್ನು ಹುಡುಕುತ್ತ ರಾಮ ಲಕ್ಷ್ಮಣ ಕಿಷ್ಕಿಂಧೆಗೆ ಬರುವುದು ರಾಮಾಯಣದ ಮಹತ್ವದ ಘಟನೆಗಳಲ್ಲೊಂದು. ಕಿಷ್ಕಿಂಧೆಯ ಸುಗ್ರೀವ, ಹನುಮಂತ, ಜಾಂಬವಂತ ಈ ಎಲ್ಲ ಪಾತ್ರಗಳ ಕುರಿತು ಓದುಗರಿಗೆ ನಿರ್ಧಿಷ್ಟ ಕಲ್ಪನೆಯಿದೆ. ಇವರೆಲ್ಲ ಅತಿಮಾನುಷ ಜೀವಿಗಳೆಂಬ ಭಾವನೆ ನಮ್ಮದು. ಉತ್ತರಕಾಂಡದಲ್ಲಿ ಸೀತೆಯನ್ನು ಹುಡುಕಿಕೊಂಡು ಅಶೋಕವನವನ್ನು ಪ್ರವೇಶಿಸುವ ಹನುಮಂತ ಒಬ್ಬ ವಯೋವೃದ್ಧ. ಒಂದೇ ಜಿಗಿತಕ್ಕೆ ಸಾಗರವನ್ನು ದಾಟುವ ಶಕ್ತಿ ಈ ಹನುಮಂತನಿಗಿಲ್ಲ. ‘ಈ ಶಖೆ ಕಾಲದ ಮಧ್ಯಾಹ್ನದಲ್ಲಿ ಇಲ್ಲಿಯ ಜನಗಳೆಲ್ಲ ನಿದ್ದೆ ಮಾಡ್ತಿದ್ದಾರೆ. ಬೇಗ ಹೊರಟು ಬಿಡಿ. ಗುರುತು ಮುಚ್ಚಲು ನನ್ನ ಉತ್ತರೀಯ ಕೊಡ್ತೀನಿ. ಹೊದೆದು ನನ್ನ ಹಿಂದೆ ಸರಸರನೆ ನಡೆಯಿರಿ. ಜನಸಂಚಾರವಿಲ್ಲದ ಕಡೆಯಲ್ಲಿ ನಿಮ್ಮನ್ನ ನನ್ನ ಹೆಗಲ ಮೇಲೆ ಕೂರಿಸಿಕೊಂಡು ಧಡ ಧಡನೆ ಓಡ್ತೀನಿ. ಸಮುದ್ರ ದಾಟಿಸುವ ಉಪಾಯವೂ ನನಗೆ ಗೊತ್ತಿದೆ’ ಎಂದು ನುಡಿಯುವಾಗ ಹನುಮಂತ ನಮಗೆ ಅವನೊಬ್ಬ ಸಾಧಾರಣ ಮನುಷ್ಯನಂತೆ ಕಾಣಿಸುತ್ತಾನೆ. ಕಾದಂಬರಿಯಲ್ಲಿ ಹನುಮಂತ ಲಂಕೆಯನ್ನು ಸುಟ್ಟ ಉಲ್ಲೇಖವಿಲ್ಲ. 

    ಸಾಮಾನ್ಯ ಮನುಷ್ಯರಲ್ಲಿ ಕಾಣಿಸಿಕೊಳ್ಳುವ ಮನೋದೌರ್ಬಲ್ಯ ರಾಮನಲ್ಲೂ ಕಾಣಸಿಗುತ್ತದೆ. ರಾವಣನ ಅಧೀನದಲ್ಲಿದ್ದ ಸೀತೆಯನ್ನು ಸಂದೇಹದಿಂದ ನೋಡುವ ರಾಮ ಇಲ್ಲಿ ಸಾಮಾನ್ಯ ನರರಿಗಿಂತ ಭಿನ್ನವಾಗಿ ಕಾಣಿಸುವುದಿಲ್ಲ. ಲಂಕೆಯ ಯುದ್ಧದ ನಂತರ ರಾಮ ಸೀತೆ ಒಂದಾದರೂ ಅವರ ನಡುವೆ ಬಹುದೊಡ್ಡ ಕಂದಕವೊಂದು ನಿರ್ಮಾಣವಾಗುತ್ತದೆ. ಪ್ರಜೆಗಳ ಮಾತಿಗೆ ಹೆದರಿ ಸೀತೆಯನ್ನು ತ್ಯಜಿಸುವ ರಾಮ ಮತ್ತೆ ಒಂದಾಗುವ ಆಸೆ ವ್ಯಕ್ತಪಡಿಸಿದಾಗ ಸೀತೆಯೇ  ರಾಮನನ್ನು ತ್ಯಜಿಸಿ ಮತ್ತೆ ಕಾಡಿಗೆ ಮರಳುವುದು ಕಾದಂಬರಿಯ ಮುಖ್ಯ ಘಟ್ಟ. ಸೀತೆಯ ಅಗಲಿಕೆಯಿಂದ ನೊಂದ ರಾಮ ನದಿಯಲ್ಲಿ ಮುಳುಗಿ ಸಾಯುತ್ತಾನೆ. ರಾಮನ ಸಾವಿನ ಸುದ್ದಿ ಕೇಳಿದ ಸೀತೆ ತನ್ನ ಕೃಷಿಭೂಮಿಯಲ್ಲಿ ನೇಗಿಲು ಗೆರೆಯ ಮಧ್ಯದಲ್ಲಿ ಮಲಗಿ ಪ್ರಾಣ ಬಿಡುತ್ತಾಳೆ.

    ಉತ್ತರಕಾಂಡ ಸ್ತ್ರೀ ಪ್ರಧಾನ ಕಾದಂಬರಿ ಮತ್ತು ಇಲ್ಲಿ ಲೇಖಕರು ಸ್ತ್ರೀಪರ ನಿಲುವು ತೆಗೆದುಕೊಂಡಿರುವರು ಎನ್ನುವುದಕ್ಕೆ ಕಾದಂಬರಿಯಲ್ಲಿನ ಅನೇಕ ಸಂಭಾಷಣೆಗಳು ಪುರಾವೆ ಒದಗಿಸುತ್ತವೆ. ಉದಾಹರಣೆಯಾಗಿ ಈ ಕೆಳಗಿನ ಸಂಭಾಷಣೆಗಳನ್ನು ಗಮನಿಸಬಹುದು.

● ಗಂಡನಿಂದ ಅನ್ಯಾಯವಾಗಿದೆ ಅಂತ ನಾನು ಮಕ್ಕಳಿಗೆ ಅನ್ಯಾಯ ಮಾಡುವುದು ಯಾವ ನ್ಯಾಯ?
● ನಾನು ಸ್ನಾನ ಮಾಡಿ ಶುಭ್ರಳಾಗಿ ಅಲಂಕರಿಸಿಕೊಂಡು ಹೋಗಿ ಎದುರಿಗೆ ನಿಂತಾಗ ಪರಪುರುಷನ ಅದರಲ್ಲೂ ರಾವಣನಂಥ ಲಂಪಟನ ವಶದಲ್ಲಿ ವರ್ಷ ಪರ್ಯಂತ ಇದ್ದ ನಿನ್ನನ್ನು ಸ್ವೀಕರಿಸುವುದು ನಮ್ಮ ವಂಶಕ್ಕೆ ಶೋಭಿಸುವುದಿಲ್ಲ. ನಾನು ನಿನ್ನನ್ನು ಸ್ವೀಕರಿಸುವುದಿಲ್ಲ ಎಲ್ಲಿಗೆ ಬೇಕಾದರೂ ಹೋಗು ಎಂಬ ಕಟುಕ ಮಾತುಗಳನ್ನು ಯಾವ ಪರಿಗಣನೆಯೂ ಇಲ್ಲದೆ ಆಡಿಬಿಟ್ಟನಲ್ಲ. 
● ಕೋಪ ಬರುತ್ತೆ. ನನ್ನೆಲ್ಲ ಸಂಕಟಗಳಿಗೆ ನನ್ನ ಮಕ್ಕಳ ಅನಾಥ ಸ್ಥಿತಿಗೆ ಕಾರಣನಾದವನ ಮೇಲೆ ಬೇರೆ ಯಾವ ಭಾವನೆ ಸಾಧ್ಯ? ಶಾಪ ಹಾಕುವಷ್ಟು ಕೋಪ.
● ನಾನು ಈ ಆಶ್ರಮದಲ್ಲೇ ಅಥವಾ ಅದರ ಹತ್ತಿರವೇ ಎಲ್ಲಾದರೂ ಇರಬೇಕು. ಹತ್ತಿರವೇ ಅಂದರೆ ಅವನ ಆಜ್ಞೆಯ ಪರಿಧಿಯಲ್ಲೇ ಇರಬೇಕು ಅಂತಲ್ಲವೇ ಅರ್ಥ. ಅವನ ಆಜ್ಞೆಯನ್ನು ಪಾಲಿಸುವ ದಾಸ್ಯ ಯಾಕೆ? 
● ಹೆಣ್ಣಿನ ಒಂಟಿತನದ ಕಾರಣವನ್ನು ನಿನ್ನಂಥ ಸಂವೇದನಾರಹಿತನಿಗೆ ಹೇಗೆ ಅರ್ಥವಾಗಬೇಕು?

    ಒಟ್ಟಾರೆ ಈ ಕಾದಂಬರಿ ರಚನೆಯ ಮೂಲಕ ಭೈರಪ್ಪನವರು ಹೇಳ ಹೊರಟಿರುವುದೇನು ಎನ್ನುವ ಪ್ರಶ್ನೆ ಓದುಗರನ್ನು ಸಹಜವಾಗಿಯೇ  ಕಾಡುತ್ತದೆ. ಪುರಾಣ ಪುಣ್ಯಕಥೆಗಳಲ್ಲಿ ವ್ಯಕ್ತಿ ಚಿತ್ರಣವು ಅಸಹಜವಾಗಿಯೂ ಮತ್ತು ಊಹಾತೀತವಾಗಿಯೂ ಚಿತ್ರಣಗೊಂಡಿದೆ. ಪುರಾಣಗಳಲ್ಲಿ ಪಾತ್ರಗಳನ್ನು ಅವತಾರ ಪುರುಷರೆಂದು ಬಿಂಬಿಸಲಾಗಿದೆ. ಆದರೆ ಇಲ್ಲಿ ಭೈರಪ್ಪನವರು ಆ ಎಲ್ಲ ಕಲ್ಪನೆಗಳನ್ನು ಒಡೆದು ರಾಮಾಯಣದ ಪಾತ್ರಗಳನ್ನು ಸಹಜತೆಯ ನೆಲೆಗೆ ಕರೆತರುತ್ತಾರೆ. ಇಲ್ಲಿ ನಾರಮಡಿ ಉಟ್ಟ, ಜಿಡ್ಡುಗಟ್ಟಿದ ಕೂದಲಿನ ಗಡ್ಡ ಬಿಟ್ಟ ರಾಮ ಒಬ್ಬ ಶ್ರೀಸಾಮಾನ್ಯನಂತೆ ನಮ್ಮ ಕಣ್ಮುಂದೆ ಬಂದು ನಿಲ್ಲುತ್ತಾನೆ. ಶ್ರೀಸಾಮಾನ್ಯನಾಗಿಯೂ ರಾಮ ಏಕಪತ್ನಿ ವ್ರತಸ್ಥ, ಸತ್ಯಸಂಧ, ಕರುಣಾಮಯಿ, ವಚನ ಪಾಲಕನಾಗಿರುವನು. ಒಟ್ಟಾರೆ ಸಾಮಾನ್ಯನಾಗಿಯೂ ಮನುಷ್ಯ ಒಂದು ನೈತಿಕ ಚೌಕಟ್ಟಿನಲ್ಲಿ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯ ಎಂದು ನಿರೂಪಿಸುವುದೇ ಕಾದಂಬರಿಯ ಮತ್ತು ಲೇಖಕರ ಆಶಯವಾಗಿದೆ. ಜೊತೆಗೆ ತಮ್ಮ ಬಗೆಗಿನ ಎಡಪಂಥಿಯರ ಪೂರ್ವಾಗ್ರಹಪೀಡಿತ ವಿಮರ್ಶೆಯನ್ನು ಮತ್ತು ಬಲಪಂಥಿಯರ ಅತಿಯಾದ ಅಭಿಮಾನವನ್ನು ಭೈರಪ್ಪನವರು ಏಕಕಾಲಕ್ಕೆ ಹೊಡೆದುರುಳಿಸಿರುವರು ಎನ್ನುವ ಅಭಿಪ್ರಾಯ ನನ್ನದು. ಭೈರಪ್ಪನವರು ತಮ್ಮ ಕಾದಂಬರಿಗಳ ಪಾತ್ರಗಳನ್ನು ವಿರೂಪಗೊಳಿಸುವರು ಎನ್ನುವುದು ಅವರ ಮೇಲಿರುವ ಎಡಪಂಥಿಯ ವಿಮರ್ಶಕರ ಸಹಜ ಆಪಾದನೆಯಾಗಿದೆ. ಆದರೆ ಉತ್ತರಕಾಂಡದಲ್ಲಿ ಭೈರಪ್ಪನವರು ಯಾವ ಪಾತ್ರವನ್ನೂ ವಿರೂಪಗೊಳಿಸದೆ ಸಹಜವೆಂಬಂತೆ ಚಿತ್ರಿಸಿರುವುದು ಓದುಗನಿಗೆ ಆಪ್ತವಾಗುತ್ತದೆ. ರಾವಣನ ಪಾತ್ರವನ್ನು ಚಿತ್ರಿಸುವಾಗಲೂ ಅವರು ಯಾವ ಮನೋವಿಕಾರಕ್ಕೆ ಒಳಗಾಗದೆ ಇರುವುದು ಕಾದಂಬರಿಯ ಘನತೆಯನ್ನು ಹೆಚ್ಚಿಸಿದೆ. ಆದರೂ ರಾಮಾಯಣ ಹಿಂದುಗಳ ಪವಿತ್ರ ಪುರಾಣವಾಗಿರುವುದರಿಂದ ಭೈರಪ್ಪನವರು ಪಾತ್ರಗಳನ್ನು ವಿರೂಪಗೊಳಿಸುವ ಕೆಲಸಕ್ಕೆ ಕೈ ಹಾಕಿಲ್ಲವೆಂದು ಎಡಪಂಥಿಯ ವಿಮರ್ಶಕರು ಆರೋಪಿಸುವ ಸಾಧ್ಯತೆಗಳು ನಿಚ್ಚಳವಾಗಿವೆ. ಇದೇ ಸಂದರ್ಭ ತಮ್ಮ ಪವಿತ್ರ ಪುರಾಣದ ಅವತಾರ ಪುರುಷ ರಾಮನನ್ನು ಭೈರಪ್ಪನವರು ಸಾಮಾನ್ಯ ಮನುಷ್ಯನಂತೆ ಚಿತ್ರಿಸಿರುವರೆಂದು ಅವರ ಅಭಿಮಾನಿಗಳು ಬೇಸರ ಮಾಡಿಕೊಳ್ಳುವ ಮತ್ತು ಲೇಖಕರ ಮೇಲಿನ ಅಭಿಮಾನ ಒಂದಿಷ್ಟು ಕ್ಷೀಣಿಸುವ ಸಾಧ್ಯತೆಗಳೂ ಇವೆ. ಆದರೆ ಓದುಗರ ಅತಿಯಾದ ಅಭಿಮಾನ ಮತ್ತು ವಿಮರ್ಶಕರ ಕಟುಟೀಕೆಗಳು ಬರಹಗಾರನ ಸೃಜನಶೀಲತೆಯನ್ನು ಮುಕ್ಕಾಗಿಸಬಾರದು. ಭೈರಪ್ಪನವರು ಹೇಳುವ ‘ಕಾದಂಬರಿಯನ್ನು ಬರೆಯುತ್ತಿರುವ ಸಂದರ್ಭ ನನ್ನ ಮನಸ್ಸನ್ನು ನಿರ್ದೇಶಿಸುವುದು ಕಾದಂಬರಿಯಲ್ಲಿನ ಪಾತ್ರ, ಸನ್ನಿವೇಶ, ಆ ದ್ವಂದ್ವ ಮತ್ತು ತಿಕ್ಕಾಟಗಳ ಒಳಸತ್ಯಗಳು ಮಾತ್ರ. ಓದುಗರನ್ನು ದೃಷ್ಟಿಯಲ್ಲಿಟ್ಟುಕೊಂಡು ನಾನು ಕಾದಂಬರಿ ರಚನೆಗೆ ಕೈ ಹಾಕುವುದಿಲ್ಲ’ ಎನ್ನುವ ಮಾತನ್ನು ನಮ್ಮ ವಿಮರ್ಶಕರು ಮತ್ತು ಓದುಗರು ಅರ್ಥಮಾಡಿಕೊಳ್ಳಬೇಕಿದೆ.

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 


Wednesday, February 1, 2017

ಭೈರಪ್ಪನವರ ಬದುಕು ನಮಗೇಕೆ ಮಾದರಿ

       



          ‘ಚಿಕ್ಕ ಹುಡುಗನಾದ್ದರಿಂದ ಚಟ್ಟದ ಅಗತ್ಯವಿರಲಿಲ್ಲ. ನಾನೇ ಎತ್ತಿ ಎಡ ಹೆಗಲ ಮೇಲೆ ಹೊತ್ತುಕೊಂಡು ಬಲಗೈಲಿ ಬೆಂಕಿಯ ಮಡಕೆ ಹಿಡಿದು ಹೋಗುವುದೆಂದು ತೀರ್ಮಾನವಾಯಿತು. ಹೆಣ ಎತ್ತುವ ಮೊದಲು ಒಂದೊಂದು ಹಿಡಿಯಂತೆ ಒಟ್ಟು ಮೂರು ಹಿಡಿ ಅಕ್ಕಿ ಕಾಳು ನಾನು, ಅಜ್ಜಿ, ಲಲಿತ ಹೆಣದ ಬಾಯಿ ಮೇಲೆ ಸುರಿದ ನಂತರ ನಾನು ಮುಕ್ಕಿರಿದು ಎತ್ತಿ ಹೆಣವನ್ನು ಎಡ ಹೆಗಲ ಮೇಲೆ ಹಾಕಿಕೊಂಡು ಕೆಂಪು ಸೀರೆಯ ತುಂಡನ್ನು ಹೊದಿಸಿ ಮಡಕೆಯ ಬೆಂಕಿಯನ್ನು ಬಲಗೈಲಿ ಹಿಡಿದು ಬೀದಿಯಲ್ಲಿ ಹೊರಟೆ. ಏಳು ವರ್ಷದ ಹುಡುಗನ ಹೆಣದ ಭಾರಕ್ಕೆ ಎಡ ಹೆಗಲು ಸೇದಿ ನುಲಿಯತೊಡಗಿತು. ಅತ್ತಿತ್ತ ಹೊರಳಿಸಿ ಭಾರದ ಸ್ಥಾನವನ್ನು ಬದಲಿಸಿಕೊಳ್ಳಲು ಬಲಗೈ ಮುಕ್ತವಾಗಿರಲಿಲ್ಲ. ಅದಕ್ಕೆ ಕೂಡ ಬೆಂಕಿಯ ರಾವು ಹೊಡೆಯುತ್ತಿತ್ತು. ಸುಸ್ತಾಯಿತೆಂದು ಪದೇ ಪದೇ ಕೆಳಗಿಳಿಸಿ ಸುಧಾರಿಸಿಕೊಂಡು ಪಯಣವನ್ನು ಮುಂದುವರೆಸುವಂತೆಯೂ ಇಲ್ಲ. ಸ್ಮಶಾನಕ್ಕೆ ಹೋಗುವಷ್ಟರಲ್ಲಿ ನನ್ನ ಭುಜ ಮತ್ತು ಎದೆಗೂಡುಗಳು ಸತ್ತು ಹೋಗಿದ್ದವು. ನನ್ನ ಕಣ್ಣುದುರಿಗೇ ಕೃಷ್ಣಮೂರ್ತಿಯ ಹೆಣ ಕಪ್ಪು ತಿರುಗಿ ಚರ್ಮ ಸುಲಿದು ಬಿಳಿಯ ನೆಣ ಬಾ0iÉ್ದುರೆದು ತೊಟ್ಟಿಕ್ಕಿ ಅದೇ ಇಂಧನವಾಗಿ ಹೆಣವೇ ಹೊತ್ತಿಕೊಂಡಿತು’. ಓದಿದ ಆ ಕ್ಷಣ ಬುದ್ದಿಯನ್ನೇ ಮಂಕಾಗಿಸಿ ಮನಸ್ಸನ್ನು ಆರ್ದ್ರಗೊಳಿಸುವ ಈ ಸಾಲುಗಳು ಭೈರಪ್ಪನವರು ಬದುಕಿನಲ್ಲಿ ಎದುರಿಸಿದ  ಸಂಕಷ್ಟಕ್ಕೊಂದು ಸಣ್ಣ ಉದಾಹರಣೆ. ಬಾಲ್ಯದಲ್ಲೇ ಕಂಡ ಸಾಲು ಸಾಲು ಸಾವುಗಳು ಭೈರಪ್ಪನವರ ಮನಸ್ಸಿನ ಮೇಲೆ ಗಾಢ ಪರಿಣಾಮವನ್ನುಂಟು ಮಾಡುತ್ತವೆ. ಅಮ್ಮ, ಅಕ್ಕ, ರಾಮಣ್ಣ, ಸುಶೀಲ, ಕೃಷ್ಣಮೂರ್ತಿ ಈ ಎಲ್ಲ ಸಾವುಗಳನ್ನು ಕಂಡ ಆ ಘಳಿಗೆ ಭೈರಪ್ಪನವರಿಗಿನ್ನೂ ಹದಿನೈದು ವರ್ಷ ವಯಸ್ಸು. ಈ ಸೂತಕದ ಛಾಯೆ  ಸಹಜವಾಗಿಯೇ  ಅವರಲ್ಲಿ ಧರ್ಮ, ಕರ್ಮ, ನ್ಯಾಯ, ನೀತಿ, ಸರಿತಪ್ಪು ಇತ್ಯಾದಿ ಆಧ್ಯಾತ್ಮ ಗುಣದ ಪ್ರಶ್ನೆಗಳು ಸ್ಪುಟವಾಗಲು ಕಾರಣವಾಯಿತು. ನಂತರದ ದಿನಗಳಲ್ಲಿ ಭೈರಪ್ಪನವರು ತತ್ವಶಾಸ್ತ್ರವನ್ನು ತಮ್ಮ ಅಧ್ಯಯನಕ್ಕೆ ಆಯ್ಕೆ  ಮಾಡಿಕೊಳ್ಳಲು ಅವರು ಬದುಕಿನಲ್ಲಿ ಎದುರಿಸಿದ ಅನೇಕ ಸವಾಲುಗಳು ಮತ್ತು ಸಮಸ್ಯೆಗಳೇ ಮುಖ್ಯ ಕಾರಣವಾಗುತ್ತವೆ.

ಎಸ್.ಎಲ್. ಭೈರಪ್ಪ ಕನ್ನಡದ ಪ್ರಮುಖ ಬರಹಗಾರರಲ್ಲೊಬ್ಬರು. ಇಪ್ಪತ್ತೈದು ಕಾದಂಬರಿಗಳು, ಆತ್ಮವೃತ್ತಾಂತ, ನಾಲ್ಕು ಸಾಹಿತ್ಯ ಚಿಂತನ ಗ್ರಂಥಗಳು ಮತ್ತು ಎರಡು ಸಂಪಾದಿತ ಕೃತಿಗಳ ಲೇಖಕರಾದ ಎಸ್.ಎಲ್.ಭೈರಪ್ಪನವರು ಕನ್ನಡ ಮಾತ್ರವಲ್ಲದೆ ಇತರ ಭಾಷೆಗಳಲ್ಲೂ ಓದುಗರ ದೊಡ್ಡ ಸಮೂಹವನ್ನು ಹೊಂದಿರುವ ವಿಶಿಷ್ಟ ಬರಹಗಾರ. ಭೈರಪ್ಪನವರ ಕಾದಂಬರಿಗಳು ತೆಲುಗು, ಮರಾಠಿ, ಹಿಂದಿ ಭಾಷೆಗಳೂ ಸೇರಿ ಭಾರತದ ಎಲ್ಲ 14 ಭಾಷೆಗಳಿಗೂ ಅನುವಾದಗೊಂಡಿವೆ. ಭೈರಪ್ಪನವರ ಬದುಕು ಮತ್ತು ಸಾಹಿತ್ಯ ಕುರಿತೇ ಇಪ್ಪತ್ತಕ್ಕೂ ಹೆಚ್ಚು ಕೃತಿಗಳು ಬೇರೆ ಬೇರೆ ಲೇಖಕರಿಂದ ರಚನೆಗೊಂಡಿರುವುದು ಇನ್ನೊಂದು ವಿಶೇಷ. ಕಾಲಕಾಲಕ್ಕೆ ತಮ್ಮ ಬರವಣಿಗೆಯಿಂದ ಭೈರಪ್ಪನವರು ಕನ್ನಡದ ಓದುಗರನ್ನು ಚಿಂತನೆಗೆ ಹಚ್ಚುತ್ತಲೇ ಬಂದಿರುವರು. ಅವರ ಕೃತಿಗಳು ಮನೋರಂಜನೆಗಾಗಿಯೋ ಇಲ್ಲವೇ ಸಮಯ ಕಳೆಯುವುದಕ್ಕಾಗಿಯೋ ಓದುವಂಥ ಪುಸ್ತಕಗಳ ಸಾಲಿನಲ್ಲಿ ನಿಲ್ಲುವ ಕೃತಿಗಳಲ್ಲ. ಭೈರಪ್ಪನವರ ಕಾದಂಬರಿಯೊಂದನ್ನು ಓದಿದ ನಂತರ ಅದು ಓದುಗನ ಮನಸ್ಸನ್ನು ಅನೇಕ ದಿನಗಳವರೆಗೆ ಕಾಡುತ್ತ ಹೊಸ ಚಿಂತನೆಯನ್ನು ಸೃಷ್ಟಿಸಿ ಬದುಕಿನ ಪರಿವರ್ತನೆಗೆ ಕಾರಣವಾಗುತ್ತದೆ.

ಸಣ್ಣ ವಯಸ್ಸಿನಲ್ಲೆ ತಾಯಿಯನ್ನು ಕಳೆದುಕೊಂಡು, ಸಾಲು ಸಾಲು ಸಾವುಗಳಿಗೆ ಸಾಕ್ಷಿಯಾಗಿ, ಬಡ ಕುಟುಂಬದಲ್ಲಿ ಹುಟ್ಟಿ ಬೆಳೆದ ಹುಡುಗನೊಬ್ಬ ತನ್ನ ಪರಿಶ್ರಮ ಮತ್ತು ವ್ಯಕ್ತಿತ್ವದಿಂದ ಕನ್ನಡದ ಮೇರು ಸಾಹಿತಿಯಾಗಿ ಬೆಳೆದ ಕಥೆ ತುಂಬ ಅನನ್ಯವಾದದ್ದು. ಕನ್ನಡ ಸಾಹಿತ್ಯ ಲೋಕದಲ್ಲಿ ಬಹುದೊಡ್ಡ ಓದುಗರ ಸಮೂಹವನ್ನು ತನ್ನ ಕಾದಂಬರಿಗಳಿಗೆ ದಕ್ಕಿಸಿಕೊಂಡ ಎಸ್.ಎಲ್.ಭೈರಪ್ಪನವರು ತಾವು ಚಿತ್ರಿಸಿದ ಪಾತ್ರಗಳಂತೆಯೇ  ಘನವಾದ ವ್ಯಕ್ತಿತ್ವವನ್ನು ರೂಪಿಸಿಕೊಂಡವರು. ವ್ಯಕ್ತಿತ್ವದಿಂದ ಮಾತ್ರ ವ್ಯಕ್ತಿ ದೊಡ್ಡವನಾಗಬಲ್ಲ ಎನ್ನುವುದಕ್ಕೆ ಅವರ ಬದುಕಿನ ಪ್ರಸಂಗವೊಂದು ಹೀಗಿದೆ ‘ನಾನು ಮೈಸೂರು ಸೇರಿದ ಮೇಲೆ ಭೈರಪ್ಪ ಎಂಬ ಹೆಸರು ತೀರ ಹಳ್ಳಿಯದು ತುಸು ನವೀನವಾಗಿರುವ ಹೆಸರಿಗೆ ಬದಲಿಸಿಕೊಳ್ಳಬೇಕೆಂದು ಒಬ್ಬ ಸ್ನೇಹಿತ ಸೂಚಿಸಿದ. ನನಗೂ ಅದು ನಿಜವೆನ್ನಿಸಿತು. ಉದ್ದಕ್ಕೂ ಇದ್ದ ಹಣದ ಅಡಚಣೆಯಲ್ಲಿ ತಿಂಗಳು ತಿಂಗಳಿಗೆ ವರ್ಷ ವರ್ಷಕ್ಕೆ ಅದು ಮುಂದೆ ಹೋಗಿ ಕೊನೆಗೆ ತತ್ವಶಾಸ್ತ್ರದಲ್ಲಿ ಆನರ್ಸ್ ಓದುವ ಹೊತ್ತಿಗೆ ಇನ್ನೊಂದು ವಿಚಾರ ಬಂತು. ನನ್ನ ಸ್ನೇಹಿತನೇ ಆಗಿದ್ದ ಒಬ್ಬ ಅಮಾಸೆಗೌಡ ಅಮರನಾಥನೆಂದು ಮಾಡಿಕೊಂಡಿದ್ದನ್ನು ನೋಡಿದೆ. ಕರಿಯಪ್ಪ ಎಂಬ ಇನ್ನೊಬ್ಬನು ಕನಕರಾಜನಾದ. ಶಿವಪ್ಪನು ಶಿವಪ್ರಸಾದನಾದ. ಇವರೆಲ್ಲ ಹಳ್ಳಿಯವರು ನಗರಕ್ಕೆ ಬಂದವರು. ಕಾಲೇಜು ಸೇರಿರುವರು. ತಮ್ಮ ಹೆಸರಿನ ಬಗೆಗೆ ಆ ಹೆಸರು ಸೂಚಿಸುವ ಹಿನ್ನೆಲೆಯ ಬಗೆಗೆ ಹೀನಾಯಭಾವ ಬೆಳೆದು ಹೀಗೆ ಬದಲಿಸಿಕೊಳ್ಳುತ್ತಿದ್ದಾರೆಂದು ಅರ್ಥವಾಯಿತು. ಆದರೆ ಹೆಸರಿನಲ್ಲೇನಿದೆ? ಅಮರನಾಥನೆನ್ನಿಸಿಕೊಂಡದ್ದರಿಂದ ಅಮಾಸೆಗೌಡನ ಬಣ್ಣ ಬಿಳಿಪಾಗಲಿಲ್ಲ. ಹೆಸರಿಗೆ ಮಹತ್ವ ತಂದುಕೊಂಡುವುದು ವ್ಯಕ್ತಿತ್ವವೇ ಹೊರತು ಹೆಸರು ವ್ಯಕ್ತಿತ್ವಕ್ಕೆ ಮೆರುಗು ಕೊಡುವುದಿಲ್ಲ ಎಂಬ ವಿಚಾರಗಳು ಮನಸ್ಸಿನಲ್ಲಿ ಹುಟ್ಟಿ ನನ್ನ ಹೆಸರನ್ನು ಬದಲಿಸಲಿಲ್ಲ. ಭೈರಪ್ಪ ಎನ್ನುವ ಹೆಸರನ್ನೇ ಉಳಿಸಿಕೊಂಡೆ’.

ಭೈರಪ್ಪನವರು ತತ್ವಶಾಸ್ತ್ರದ ವಿದ್ಯಾರ್ಥಿ ಮತ್ತು ತತ್ವಶಾಸ್ತ್ರದ ಬೋಧನೆಯನ್ನೇ ವೃತ್ತಿಯನ್ನಾಗಿ ಮಾಡಿಕೊಂಡವರು. ವೃತ್ತಿ ನಿಮಿತ್ಯ ದೂರದ ಗುಜರಾತನಲ್ಲಿದ್ದು ಭೀಮಕಾಯ ಮತ್ತು ವಂಶವೃಕ್ಷ ಕಾದಂಬರಿಗಳನ್ನು ಬರೆದು ಲೇಖಕರಾಗಿ ಗುರುತಿಸಿಕೊಂಡಿದ್ದ ಭೈರಪ್ಪನವರಿಗೆ ಸಾಹಿತ್ಯ ಕ್ಷೇತ್ರದಲ್ಲೂ ಕೃಷಿ ಮಾಡುವ ಆಕಾಂಕ್ಷೆ. ತತ್ವಶಾಸ್ತ್ರ ವೃತ್ತಿಯ ಬೆಳವಣಿಗೆಗಾದರೆ ಸಾಹಿತ್ಯ ಆತ್ಮ ಸಂತೋಷಕ್ಕೆ ಎನ್ನುವ ಭಾವನೆ ಅವರದಾಗಿತ್ತು. ಒಂದು ಹಂತದಲ್ಲಿ ಎರಡೂ ಕ್ಷೇತ್ರಗಳಲ್ಲಿ ಬರವಣಿಗೆಯ ಕೃಷಿಯನ್ನು ಮುಂದುವರೆಸುವುದು ಅವರಿಗೆ ಸವಾಲಿನ ಕೆಲಸವಾಗುತ್ತದೆ. ಆಗ ಅವರೆದುರು ತತ್ವಶಾಸ್ತ್ರ ಇಲ್ಲವೇ ಸಾಹಿತ್ಯ ಎರಡರಲ್ಲಿ ಒಂದನ್ನು ಆಯ್ಕೆ  ಮಾಡಿಕೊಳ್ಳುವ ಅನಿವಾರ್ಯತೆ ಎದುರಾಗುತ್ತದೆ. ಇಂಥದ್ದೊಂದು ದ್ವಂದ್ವ ಮತ್ತು ತಲ್ಲಣಗಳ ನಡುವೆ ತಾವು ಸಾಹಿತ್ಯವನ್ನು ಆಯ್ಕೆ ಮಾಡಿಕೊಂಡ  ಘಟನೆಯನ್ನು ಭೈರಪ್ಪನವರು ಹೀಗೆ ವಿವರಿಸುತ್ತಾರೆ ‘ಸುಮಾರು ಒಂದು ತಿಂಗಳಿನಲ್ಲಿ ಹೊಳೆಯತೊಡಗಿತು. ಕಲೆಯ ಹುಟ್ಟು, ಗುರಿ, ಸ್ವರೂಪ, ವಿಧಾನಗಳ ಬಗೆಗೆ ಸುಮಾರು ಹತ್ತು ವರ್ಷದಿಂದ ಒಂದೇ ಸಮನೆ ಓದುತ್ತಿದ್ದೀನಿ. ಪಿಎಚ್.ಡಿ ಈಗ ಡಿ.ಲಿಟ್ ಎಂದು ಅದನ್ನೇ ಬರೆಯುತ್ತಿದ್ದೀನಿ. ಅದು ಬೌದ್ಧಿಕ ಪ್ರಚೋದನೆ ಕೊಟ್ಟಿದೆ. ಡಿಗ್ರಿ ಕೊಟ್ಟಿದೆ. ರೀಡರ್ ಹುದ್ದೆಯ ಅವಕಾಶವನ್ನೂ ಅದು ಹೆಚ್ಚಿಸಿದೆ. ಆದರೆ ಅದರಲ್ಲಿ ರಸವಿರಲಿಲ್ಲ. ‘ವಂಶವೃಕ್ಷ’ದ ಮೂಲಕ ನಾನು ರಸವನ್ನು ಸೃಷ್ಟಿಸಿದ್ದೇನೆ. ಸೃಷ್ಟಿಯ ಆನಂದವನ್ನು ಅನುಭವಿಸಿದ್ದೇನೆ. ನಾನು ಸೃಜನಶೀಲ ಕಲಾವಿದನಾಗಬೇಕೋ ಅಥವಾ ಕಲಾಮೀಮಾಂಸಕನಾಗಬೇಕೋ? ಅವರಿವರ ಕಲಾಸಿದ್ಧಾಂತಗಳನ್ನು ಅಧ್ಯಯನ ಮಾಡಿ ಒಂದನ್ನು ಇನ್ನೊಂದರೊಡನೆ ಹೊಲಿಸಿ ವಿಮರ್ಶಿಸಿ ಥೀಸಿಸ್ ಬರೆದು ಇವೆಲ್ಲ ತೃತೀಯ, ಚತುರ್ಥ ದರ್ಜೆಯ ಕಸರತ್ತುಗಳು. ಬರೀ ಬರೆದು ಹೊರಹಾಕುವುದಲ್ಲ. ವಿಧಾನದಲ್ಲಿಯೂ ಸೂಕ್ಷ್ಮತೆ ಇರುವ ಕುಸರಿಗೆಲಸವಿರುವ ಪಾತ್ರಗಳ ಒಳಗನ್ನು ಪದರಪದರವಾಗಿ ತೋರಿಸುವ ರೀತಿಯಲ್ಲಿ ಬರೆಯಬೇಕು. ಬರವಣಿಗೆಯು ಕಲೆಯಾಗಬೇಕು ಎಂಬ ಬಯಕೆ ಹುಟ್ಟಿತು. ಆಳವಾದ ಚಿಂತನೆಗಳನ್ನೊಳಗೊಂಡ ಪ್ರತಿಯೊಬ್ಬ ಸಾಹಿತಿಗೂ ತತ್ವಶಾಸ್ತ್ರದ ಪರಿಚಯವಿದ್ದೇ ಇರುತ್ತದೆ. ನನಗೆ ತುಸು ವೃತ್ತಿಯ ಮಟ್ಟದಲ್ಲಿ ಆಗಿದೆ ಅಷ್ಟೆ. ನಾನು ತತ್ವಶಾಸ್ತ್ರದಲ್ಲಿ ಸೃಜನಾತ್ಮಕವಾಗಿ ಸೃಷ್ಟಿಸುವುದು ನನ್ನ ಮನೋಧರ್ಮದಲ್ಲಿಲ್ಲ. ನನ್ನದು ಭಾವ ಪ್ರಧಾನ ವ್ಯಕ್ತಿತ್ವ. ನಾನು ಸೃಜನಾತ್ಮಕವಾಗಬಹುದಾದದ್ದು ಸಾಹಿತ್ಯದಲ್ಲಿ ಮಾತ್ರ ಎಂಬುದನ್ನು ಒಂದು ಘಟ್ಟದಲ್ಲಿ ಅರ್ಥಮಾಡಿಕೊಂಡೆ. ಸಾಹಿತ್ಯವು ನನ್ನ ಸೃಜನಶೀಲ ಅಭಿವ್ಯಕ್ತಿಯ ಮಾಧ್ಯಮವಾಯಿತು. ಅದು ಅಪೇಕ್ಷಿಸಿದಂತೆ ನನ್ನ ಕಾಲ, ಚಿಂತನೆ, ವ್ಯವಸಾಯಗಳನ್ನೆಲ್ಲ ಬದಲಿಸಿಕೊಂಡೆ’.

ಹೀಗೆ ಕಾದಂಬರಿ ರಚನೆಯ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರವನ್ನು ಪ್ರವೇಶಿಸಿದ ಬೈರಪ್ಪನವರಿಗೆ ತಮ್ಮ ಬರವಣಿಗೆ ಕುರಿತು ಸ್ವವ್ಯಾಮೋಹವಾಗಲಿ ಇಲ್ಲವೇ ಪಕ್ಷಪಾತದ ಗುಣವಾಗಲಿ ಇಲ್ಲ. ಕನ್ನಡ ಸಾಹಿತ್ಯದಲ್ಲಿ ಬಹುದೊಡ್ಡ ಓದುಗರ ಸಮೂಹವನ್ನು ಹೊಂದಿರುವ ಅವರು ತಮ್ಮ ಬರವಣಿಗೆಯ ಮಿತಿಯನ್ನು ಕೂಡ ಯಾವ ಸಂಕೋಚಗಳಿಲ್ಲದೆ ಹಂಚಿಕೊಳ್ಳುತ್ತಾರೆ. ಜೊತೆಗೆ ಎಲ್ಲವನ್ನೂ ನಾನು ಸೃಷ್ಟಿಸಬಲ್ಲೆ ಎನ್ನುವ ಅಹಂಕಾರವೂ ಭೈರಪ್ಪನವರದಲ್ಲ. ಬರಹಗಾರ ತನ್ನೆಲ್ಲ ಮಿತಿಗಳನ್ನು ಅರಿತಾಗ ಮಾತ್ರ ಸಾಹಿತ್ಯದಲ್ಲಿ ತುಂಬ ಅನನ್ಯವಾದದ್ದನ್ನು ಸೃಷ್ಟಿಸಲು ಸಾಧ್ಯ ಎನ್ನುವುದಕ್ಕೆ ಭೈರಪ್ಪನವರು ಬರಹಗಾರರಿಗೊಂದು ಆದರ್ಶವಾಗಿ ನಿಲ್ಲುತ್ತಾರೆ. ಅವರು ತಮ್ಮ ಬರವಣಿಗೆಯ ಮಿತಿಯನ್ನು ಹೀಗೆ ಹೇಳುತ್ತಾರೆ ‘ನನ್ನ ಬರವಣಿಗೆಯಲ್ಲಿ ಹಳ್ಳಿಯ ಚಿತ್ರಣವಾಗಿ ಚನ್ನರಾಯಪಟ್ಟಣ, ಅರಸೀಕೆರೆ, ತಿಪಟೂರು ತಾಲ್ಲೂಕುಗಳೇ ಪದೇ ಪದೇ ಬರುವ ಕಾರಣವೆಂದರೆ ಈ ಪ್ರದೇಶದ ಅನುಭವವೇ ನನಗೆ ದಟ್ಟವಾಗಿ ಆಗಿರುವುದು. ಹುಬ್ಬಳ್ಳಿ ಧಾರವಾಡ ಕಡೆಯ ಕೆಲವು ಹಳ್ಳಿಗಳನ್ನೂ ನಾನು ನೋಡಿದ್ದೇನೆ. ಅಲ್ಲಿ ಸಂಚರಿಸಿದ್ದೇನೆ. ಹಾಗೆ ಗುಜರಾತ, ಬಿಹಾರಗಳ ಕೆಲವು ಹಳ್ಳಿಗಳನ್ನೂ ನೋಡಿಬಲ್ಲೆ. ಆದರೆ ಜೀವನ ವಿವರ, ಭಾಷೆ ಮತ್ತು ಪಾತ್ರದ ಅರಿವುಗಳ ದೃಷ್ಟಿಯಿಂದ ಯಾವ ಅನುಮಾನ ಹಿಂಜರಿಕೆಗಳೂ ಇಲ್ಲದೆ ನಮ್ಮ ಈ ತೆಂಗಿನ ಸೀಮೆಯ ಜೀವನ ಗೊತ್ತಿರುವಷ್ಟು ದಟ್ಟವಾಗಿ ಬೇರೆಯವು ಗೊತ್ತಿಲ್ಲ. ಹಳ್ಳಿಯ ಕನ್ನಡವೆಂದರೆ ನನ್ನ ಹಿಡಿತಕ್ಕೆ ಬರುವುದು ಈ ನನ್ನ ಸೀಮೆಯದೇ. ಕೋಪ, ತಾಪ, ಪ್ರೀತಿ, ಖುಷಿ, ಸಜ್ಜನಿಕೆ ಮೊದಲಾದ ಸಂದರ್ಭಗಳಲ್ಲಿ ಬೈಗುಳಗಳಲ್ಲಿ ಈ ಪ್ರದೇಶದ ಕನ್ನಡವು ಹೇಗೆ ಬಾಗಿ ಬಳುಕಿ ಚಿತ್ರಶಕ್ತಿಯಿಂದ ಬಳಕೆಯಾಗುತ್ತದೆಂಬುದು ನನಗೆ ಜೀವನಾನುಭವದಿಂದ ಗೊತ್ತು. ಮೂಲ ಭಾಷೆಯೇ  ಮುಷ್ಟಿಗ್ರಾಹ್ಯವಾಗದೆ ಅದನ್ನು ಸೃಜನಾತ್ಮಕವಾಗಿ ಬಳಸುವುದು ಹೇಗೆ?. ಮೈಸೂರು ನಗರದ ಸನ್ನಿವೇಶಗಳನ್ನು, ಪಾತ್ರಗಳನ್ನು, ಸಂಭಾಷಣೆಯನ್ನು, ಭಾಷೆಯನ್ನು ಸಹಜವಾಗಿ ಸೃಷ್ಟಿಸುತ್ತೇನೆ. ಆದರೆ ಮೈಸೂರಿನ ಪಕ್ಕದಲ್ಲಿರುವ ಒಂದು ಹಳ್ಳಿಯ ಪಾತ್ರವನ್ನು ಅಷ್ಟೇ ಸಹಜ ಸುಲಭವಾಗಿ ತರಲಾರೆ. ಮೈಸೂರು, ಬೆಂಗಳೂರು, ಬೊಂಬಾಯಿ, ದಿಲ್ಲಿಗಳನ್ನು ನಗರವಾಗಿ ಮಾಡಿಕೊಂಡರೂ ಅಲ್ಲಿಗೆ ಬರುವ ಹಳ್ಳಿಯ ಪಾತ್ರವನ್ನು ನನ್ನ ತೆಂಗಿನ ಸೀಮೆಯಿಂದಲೇ ತರದೆ ಬೇರೆ ದಾರಿ ನನಗಿಲ್ಲ. ಹಳ್ಳಿಯೇ  ಗೊತ್ತಿಲ್ಲದ ಕೆಲವು ಲೇಖಕರು ಧಾರವಾಡ, ಬೀದರ್, ಹಾಸನ, ತುಮಕೂರು ಹೀಗೆ ಯಾವ ಜಿಲ್ಲೆಯ ಹಳ್ಳಿಗರ ಪಾತ್ರವನ್ನು ಬೇಕಾದರೂ ಚಿತ್ರಿಸುವ ಸಾಹಸ ಮಾಡುವುದನ್ನು ನಾನು ಬಲ್ಲೆ. ಆದರೆ ಕಲೆಯ ಒಳವರ್ಮದ ಸಹಜತೆಯು ಇಂಥ ಸಾಹಸದಿಂದ ಸಾಧಿತವಾಗುವುದಿಲ್ಲ’.

ಭೈರಪ್ಪನವರ ಸಾಹಿತ್ಯ ಸೃಷ್ಟಿಯ ಸೃಜನಶೀಲತೆ ಕಾದಂಬರಿ ಪ್ರಕಾರಕ್ಕೆ ಮಾತ್ರ ನಿಷ್ಠವಾದದ್ದು. ಅವರೇ ಹೇಳುವಂತೆ ಅವರು ಬರೆದಿರುವುದು ಎರಡೇ ಎರಡು ಸಣ್ಣ ಕಥೆಗಳನ್ನು. ಬೃಹತ್ ಗಾತ್ರದ ಪುಸ್ತಕಗಳ ಓದಿನಿಂದ ಓದುಗರು ವಿಮುಖರಾಗುತ್ತಿರುವರು ಎನ್ನುವ ತಕರಾರು ಇವತ್ತಿನ ಅನೇಕ ಲೇಖಕರದಾಗಿದೆ. ಅದಕ್ಕೆಂದೇ ಎಷ್ಟೋ ಲೇಖಕರು ಓದುಗರನ್ನು ಬಹುಬೇಗ ಹೋಗಿ ತಲುಪಲು ಕಾದಂಬರಿ ಪ್ರಕಾರಗಳಿಂದ ಸಣ್ಣಕಥೆಗಳಿಗೆ ತಮ್ಮ ಬರವಣಿಗೆಯ ವ್ಯವಸಾಯವನ್ನು ಬದಲಿಸಿಕೊಂಡ ಅನೇಕ ಉದಾಹರಣೆಗಳಿವೆ. ಜೊತೆಗೆ ಓದುಗರ ಆಸಕ್ತಿಯೇ  ಲೇಖಕರ ಬರವಣಿಗೆಯ ಬಂಡವಾಳವಾಗುತ್ತಿರುವ ದಿನಗಳಲ್ಲಿ ಕೂಡ ಭೈರಪ್ಪನವರ ನಿಷ್ಠೆ ಮತ್ತು ಓದುಗರನ್ನು ದಕ್ಕಿಸಿಕೊಳ್ಳುತ್ತಿರುವ ಪರಿ ಅಚ್ಚರಿಯ ಸಂಗತಿಗಳಲ್ಲೊಂದು. ಬರವಣಿಗೆಯಲ್ಲಿ ತೊಡಗಿಸಿಕೊಂಡ ಸಂದರ್ಭ ತಮ್ಮನ್ನು ಪ್ರಭಾವಿಸುವುದು ಕಾದಂಬರಿಯ ವಿಷಯ ವಸ್ತುವೆ ವಿನ: ಓದುಗರಲ್ಲ ಎನ್ನುವುದನ್ನು ಭೈರಪ್ಪನವರು ಹೀಗೆ ವಿವರಿಸುತ್ತಾರೆ ‘ನಾನು ಬರೆಯುವ ವಸ್ತು ಮನೋಧರ್ಮದಿಂದಲೇ ಕಾದಂಬರಿಯ ಹರಹನ್ನು ಪಡೆಯುತ್ತದೆ. ಸಣ್ಣ ಕಥೆಯು ನನ್ನ ಮನೋಧರ್ಮಕ್ಕೆ ಹೇಳಿಸಿದ್ದಲ್ಲ. ಹಾಸ್ಟೆಲಿನ ಮ್ಯಾಗಜೀನಿಗೆ ಬರೆದಿದ್ದ ಒಂದೆರಡು ಕತೆಗಳನ್ನು ಬಿಟ್ಟರೆ ನನ್ನ ಮೊಟ್ಟ ಮೊದಲ ಬರವಣಿಗೆಯೇ  ಕಾದಂಬರಿ. ಅನಂತರ ಕೂಡ ನಾನು ಬರೆದಿರುವುದು ಎರಡೇ ಎರಡು ಸಣ್ಣ ಕಥೆಗಳು. ನಾನು ಹಲವು ಬಾರಿ ನನ್ನ ಮತ್ತು ನನ್ನ ಓದುಗರ ನಡುವಣ ಸಂಬಂಧವನ್ನು ಚಿಂತಿಸಿದ್ದೇನೆ. ಆರಂಭದ ಧರ್ಮಶ್ರೀ, ದೂರ ಸರಿದರು ಬರೆಯುವಾಗ ನನಗೆ ಓದುಗರ ಮೇಲೆ ಈ ಭಾಗ, ಈ ಸಂಭಾಷಣೆ, ಈ ಪಾತ್ರವರ್ತನೆ ಯಾವ ಪರಿಣಾಮ ಮಾಡುತ್ತದೆಂಬ ಪ್ರಜ್ಞೆ ಇತ್ತು. ಅನಂತರ ಹೊರಟು ಹೋಯಿತು. ನಾನು ಬರೆಯುವಾಗ ನನ್ನ ಮನಸ್ಸನ್ನು ನಿರ್ದೇಶಿಸುವುದು ಆ ಪಾತ್ರ ಆ ಸನ್ನಿವೇಶ ಆ ದ್ವಂದ್ವ ತಿಕ್ಕಾಟಗಳ ಒಳಸತ್ಯಗಳು ಮಾತ್ರ. ಕಾದಂಬರಿಯ ಉದ್ದ ಗಾತ್ರಗಳನ್ನು ನಿರ್ಧರಿಸುವುದು ಅದರ ವಸ್ತುವಿನ ಪೂರ್ಣಾಭಿವ್ಯಕ್ತಿ ಮಾತ್ರ. ಬೇರೆ ಯಾವ ಪರಿಗಣನೆಯೂ ನನಗಿರುವುದಿಲ್ಲ. ಇಂಥ ಕಲೆಯ ಏಕಮೇವ ನಿಷ್ಠೆಯಿಂದ ಬರೆದದ್ದು ಓದುಗರನ್ನು ತಟ್ಟಿಯೇ  ತಟ್ಟುತ್ತದೆ ಎಂಬುದು ಅನಂತರದ ಮಾತು’.

ಭೈರಪ್ಪನವರಲ್ಲಿ ನಾವು ಮೆಚ್ಚುವ ಇನ್ನೊಂದು ಗುಣ ಅವರೊಳಗಿನ ಕಲಿಯುವ ಮತ್ತು ಹೊಸ ಸಂಗತಿಗಳನ್ನು ತಿಳಿದುಕೊಳ್ಳುವ ಕುರಿತಾದ ಶ್ರದ್ಧೆ. ಅದು ಸಂಗೀತವಿರಬಹುದು, ಚಿತ್ರಕಲೆಯಾಗಿರಬಹುದು, ಧರ್ಮವೊಂದರ ಆಳ ಅಗಲವನ್ನು ಅಭ್ಯಾಸ ಮಾಡುವ ಗುಣವಾಗಿರಬಹುದು, ವಿಜ್ಞಾನದ ಕುತೂಹಲಕ್ಕೆ ಹುಡುಕುವ ಉತ್ತರವಾಗಿರಬಹುದು, ಭಾಷೆಯೊಂದನ್ನು ಕಲಿಯುವ ಆಸಕ್ತಿಯಾಗಿರಬಹುದು. ಸಂಗೀತ  ಪ್ರಧಾನ ಕಾದಂಬರಿ ‘ಮಂದ್ರ’, ಧರ್ಮ ಪ್ರಧಾನ ಕಾದಂಬರಿ ‘ಸಾರ್ಥ’ ಮತ್ತು ವೈಜ್ಞಾನಿಕ ಕಾದಂಬರಿ ‘ಯಾನ’ ಕಲಿಕೆಯ ಬಗೆಗಿನ ಭೈರಪ್ಪನವರೊಳಗಿನ ಶ್ರದ್ಧೆ ಮತ್ತು ನಿಷ್ಠೆಗೆ ಮಹತ್ವದ ದೃಷ್ಟಾಂತಗಳು.  ಸಂಸ್ಕೃತ ಭಾಷೆಯ ಕಲಿಕೆಗೆ ಕಾರಣವಾದ ಘಟನೆಯನ್ನು ಭೈರಪ್ಪನವರು ತಮ್ಮ  ಆತ್ಮಕಥೆಯಲ್ಲಿ ಹೀಗೆ ವಿವರಿಸಿರುವರು ‘ಶಾಲೆಯಲ್ಲಾಗಲಿ ಕಾಲೇಜಿನಲ್ಲಾಗಲಿ ನಾನು ಸಂಸ್ಕೃತ ಕಲಿತಿರಲಿಲ್ಲ. ನಾನು ಓದಿದ್ದ ಹಳ್ಳಿಯ ಶಾಲೆಗಳಲ್ಲಿ ಸಂಸ್ಕೃತವು ಒಂದು ವಿಷಯವಾಗಿ ಇರಲಿಲ್ಲ. ಆದರೂ ಸಂಸ್ಕೃತ ವ್ಯಾಕರಣ ಗೊತ್ತಿಲ್ಲದೆಯೂ ಕೆಲವು ಉಪನಿಷತ್ತುಗಳನ್ನು ಕನ್ನಡಾನುವಾದದೊಡನೆ ಓದಿದ್ದೆ. ಹಲವಾರು ಶ್ಲೋಕಗಳನ್ನು ಬಾಯಿಪಾಠ ಮಾಡಿದ್ದೆ. ಒಮ್ಮೆ ಗದುಗಿನಲ್ಲಿ ನನ್ನನ್ನು ಒಂದು ಉಪನ್ಯಾಸಕ್ಕೆ ಕರೆಸಿದ್ದರು. ಸಭಿಕರ ಮೆಚ್ಚುಗೆ ಮತ್ತು ತನ್ಮಯತೆ ನನಗೆ ಅಮಲೇರಿಸಿ ತುಂಬ ಓಘವಾಗಿ ಮಾತನಾಡಿದೆ. ಎಲ್ಲರೂ ಮೆಚ್ಚಿದರು ಹೊಗಳಿದರು. ಇಷ್ಟು ವಯಸ್ಸಿಗೇ ತತ್ವಶಾಸ್ತ್ರದಲ್ಲಿ ಏನು ತಿಳುವಳಿಕೆ ಎಂದು ಕೆಲವರು ಉದ್ಗರಿಸಿದರು. ಆದರೆ ಕೊನೆಗೆ ಒಬ್ಬ ವೃದ್ಧರು ನನ್ನನ್ನು ಒಂದು ಮೂಲೆಗೆ ಕರೆದೊಯ್ದು ‘ರಾಯರೆ ನೀವು ತುಸು ಸಂಸ್ಕೃತ ಪಾಠ ಹೇಳಿಸಿಕೊಳ್ಳೊದು ಒಳ್ಳೆಯದು. ಶಂಕರಾಚಾರ್ಯರು ಕಬ್ಬಿಣವನ್ನು ಕಾಯಿಸುತ್ತಿದ್ದ ಕಮ್ಮಾರನ ಮುಂದೆ ನಿಂತು ಭವತಿ ಭಿಕ್ಷಾನ್ ದೇಹಿ ಅಂದರು ಅಂತ ಹೇಳಿದಿರಿ. ಹೆಂಗಸನ್ನು ಭವತಿ ಭಿಕ್ಷಾನ್ ದೇಹಿ ಅನ್ನೊದು ಸರಿ. ಆದರೆ ಕಮ್ಮಾರ ಗಂಡಸು. ಗಂಡಸನ್ನು ಬೇಡುವಾಗ ಭವಾನ್ ಭಿಕ್ಷಾನ್ ದದಾತು ಅನ್ನಬೇಕು. ಶಂಕರಾಚಾರ್ಯರಿಗೆ ಸಂಸ್ಕೃತದ ಇಂಥ ವ್ಯಾಕರಣ ತಪ್ಪು ತಿಳೀತಿತ್ತು ಅಂತ ನನ್ನ ಭಾವನೆ’ ಎಂದರು. ನನಗೆ ನಾಚಿಕೆಯಾಯಿತು. ಇಡೀ ಸಭೆಯನ್ನಲ್ಲದೆ ನನ್ನನ್ನೂ ತೇಲಿಸಿಬಿಟ್ಟಿದ್ದ ಓಘದ ಗುಂಗು ಸರಕ್ಕನೆ ಇಳಿದು ಬುರುಡೆಯ ಒಳಗೆ ತಣ್ಣೀರು ತುಂಬಿಕೊಂಡಂತೆ ಆಯಿತು. ಅದು ಬರೀ ನಾಚಿಕೆಯಲ್ಲ ಧೃತಿನಷ್ಟ. ಆ ವೃದ್ಧರಲ್ಲಿ ಕ್ಷಮೆ ಬೇಡಿದೆ. ಭಾಷಣ ಮೊದಲಾದುವನ್ನು ಮಾಡುವುದನ್ನು ನಿಲ್ಲಿಸಬೇಕೆಂದು ತಕ್ಷಣ ನಿರ್ಧರಿಸಿದೆ. ಅಂದಿನಿಂದಲೇ ಸಂಸ್ಕೃತದ ಕಲಿಕೆ ಆರಂಭಿಸಿದೆ’.

ಭೈರಪ್ಪನವರ ದೃಷ್ಟಿಯಲ್ಲಿ ಸಾಹಿತ್ಯವೆಂದರೆ ಅದೊಂದು ಶುದ್ಧ ಸೃಜನಶೀಲತೆ. ಸಾಹಿತ್ಯದಲ್ಲಿ ಈ ಎಡ, ಬಲ, ಬಂಡಾಯ, ಸ್ತ್ರೀ ಸಾಹಿತ್ಯ ಎನ್ನುವ ವಿಂಗಡಣೆಯನ್ನು ಅವರು ವಿರೋಧಿಸುತ್ತಾರೆ. ಲೇಖಕರು ಯಾವುದೋ ಒಂದು ಗುಂಪಿಗೆ ನಿಷ್ಠರಾಗಿ ಹಣೆಪಟ್ಟಿಯನ್ನಂಟಿಸಿಕೊಂಡಲ್ಲಿ ಅವರೊಳಗಿನ ಸೃಜನಶೀಲ ಸೃಷ್ಟಿಯ ಬೆಳವಣಿಗೆ ನಿಂತುಹೋಗುತ್ತದೆ ಎನ್ನುವ ಅಭಿಪ್ರಾಯ ಅವರದು. ಆದ್ದರಿಂದ ಲೇಖಕನಾದವನು ಶುದ್ಧ ಸಾಹಿತ್ಯಕ್ಕೆ ನಿಷ್ಠನಾಗಿರಬೇಕೆ ವಿನ: ಯಾವುದೋ ಒಂದು ವರ್ಗ ಅಥವಾ ವಿಂಗಡಣೆಗಲ್ಲ. ಭೈರಪ್ಪನವರ ದೃಷ್ಟಿಯಲ್ಲಿ ಸಾಹಿತ್ಯವೆನ್ನುವುದು ‘ಸಾಹಿತ್ಯದ ಕೆಲಸವೆಂದರೆ ಮನುಷ್ಯನ ಅಂತರಾಳಕ್ಕೆ ಪ್ರವೇಶ ದೊರಕಿಸಿಕೊಡುವುದು. ಪ್ರೀತಿ ಅನುಕಂಪ ಕರುಣೆಗಳನ್ನು ಹುಟ್ಟಿಸುವುದು. ನಮ್ಮ ಕಹಿ ಅನುಭವವು ಏನೇ ಇರಲಿ ಪ್ರತಿಯೊಂದು ಪಾತ್ರದ ಅಂತರಂಗವನ್ನು ಹೊಕ್ಕು ಅನುಕಂಪದಿಂದ ಬಿಚ್ಚಿಡದಿದ್ದರೆ ಅದು ಮೇಲ್ಮಟ್ಟದ ಸಾಹಿತ್ಯವಾಗುವುದಿಲ್ಲ. ಇಡೀ ರಾಷ್ಟ್ರವನ್ನು ಜೈಲಾಗಿ ಪರಿವರ್ತಿಸಿದ್ದ ಸ್ಟಾಲಿನ್ನನ ಪ್ರತೀಕವಾಗಿ ಚಿತ್ರಿಸಿರುವ ಅಬಕುಮೋಘನ ಪಾತ್ರದಲ್ಲಿ ಕೂಡ ಸೊಲ್ಜನಿಟ್ಸಿನ್ ಎಷ್ಟು ಅನುಕಂಪ ಅರಿವು ಮತ್ತು ಅಂತರ್ನೋಟವನ್ನು ಸಾಧಿಸಿದ್ದಾನೆ. ಇಲ್ಲದಿದ್ದರೆ ಅವನು ದೊಡ್ಡ ಲೇಖಕನಾಗುತ್ತಿರಲಿಲ್ಲ. ಸೃಜನಶೀಲತೆಗೆ ಹೆಣ್ಣುಗಂಡೆಂಬ ವ್ಯತ್ಯಾಸವೇ ಇಲ್ಲ. ಅದು ಶುದ್ಧ ಸೃಜನಶೀಲತೆ. ಲೇಖಕನು ತಾನು ಕಂಡು ಅನುಭವಿಸಿದ ಜೀವನಾನುಭವವನ್ನೇ ಕುರಿತು ಬರೆಯುವುದು ಸಹಜ. ಆದರೆ ಬರವಣಿಗೆ ಸೃಜನಶೀಲವಾದಾಗ ತನ್ನ ಅನುಭವದ ಸೀಮಿತತೆಯನ್ನು ದಾಟಿ ತನ್ನ ಜಾತಿ, ಮತ, ವರ್ಗ, ಲಿಂಗ, ದೇಶ ಮೊದಲಾದ ಭೇದಗಳನ್ನು ಮೀರಿರುತ್ತದೆ’.

ಸುಮಾರು ಮೂರು ದಶಕಗಳ ಕಾಲ ವಿದ್ಯಾರ್ಥಿಗಳಿಗೆ ತತ್ವಶಾಸ್ತ್ರವನ್ನು  ಬೋಧಿಸಿದ ಭೈರಪ್ಪನವರು ಅಧ್ಯಾಪನ ವೃತ್ತಿಯನ್ನು ಅತ್ಯಂತ ನಿಷ್ಠೆಯಿಂದ ನಿರ್ವಹಿಸಿದವರು. ವಿದ್ಯಾರ್ಥಿ ದೆಸೆಯಲ್ಲಿ ಯಮುನಾಚಾರ್ಯರಂಥ ಅಧ್ಯಾಪಕರ ಪ್ರಭಾವಕ್ಕೊಳಗಾದ ಭೈರಪ್ಪನವರಿಗೆ ಗುರುವಾದವನು ವಿದ್ಯಾರ್ಥಿಗಳ ಬುದ್ಧಿ ಮಾತ್ರವಲ್ಲ ಮನಸ್ಸು ಬಾವನೆಗಳನ್ನು ಅರಿತು ತಿದ್ದಬೇಕು ಎನ್ನುವುದರಲ್ಲಿ ಅಪಾರ ನಂಬಿಕೆ. ಬರವಣಿಗೆಯ ಪರಿಣಾಮ ವಿದ್ಯಾರ್ಥಿಗಳೊಂದಿಗೆ ಹೆಚ್ಚಿನ ಸಮಯ ಕಳೆಯಲು ಸಾಧ್ಯವಾಗದೇ ಹೋಯಿತಾದರೂ ತರಗತಿಯೊಳಗೆ ನಾನು ಉತ್ತಮ ದರ್ಜೆಯ ಅಧ್ಯಾಪಕನಾಗಿದ್ದೆ ಎನ್ನುತ್ತಾರೆ ಭೈರಪ್ಪನವರು. ಶಿಕ್ಷಕನ ವ್ಯಕ್ತಿತ್ವವನ್ನು ಭೈರಪ್ಪನವರು ಹೀಗೆ ಕಟ್ಟಿಕೊಡುತ್ತಾರೆ ‘ಅಧ್ಯಾಪಕತನವೂ ಒಂದು ವೃತ್ತಿ ನಿಜ. ಬ್ಯಾಂಕ್ ನೌಕರನು, ರೈಲ್ವೆ ನೌಕರನು, ಫ್ಯಾಕ್ಟರಿ ಎಂಜಿನಿಯರನು ನನ್ನ ಕೆಲಸದ ವೇಳೆಯ ನಂತರ ನಾನೇನು ಮಾಡುತ್ತೇನೆಂದು ಕೇಳುವ ಅಧಿಕಾರ ನಿನಗಿಲ್ಲ ಎಂದರೂ ನಡೆದೀತು. ಆದರೆ ಇದೇ ಮಾತನ್ನು ಹೇಳುವ ಅಧಿಕಾರ ಅಧ್ಯಾಪಕನಿಗಿಲ್ಲ. ವಿದ್ಯಾರ್ಥಿಗಳಿಗೆ ಪರೋಕ್ಷವಾಗಿಯಾದರೂ ತಿಳಿದು ಅವರ ಚಾರಿತ್ರ್ಯಕ್ಕೆ ಕೆಟ್ಟ ಮಾದರಿಯಾಗುವ ಯಾವ ಕೆಲಸವನ್ನೂ ಖಾಸಗಿಯಲ್ಲಿ ಕೂಡ ಮಾಡುವುದು ಅಧ್ಯಾಪಕನಿಗೆ ಸಲ್ಲುವುದಿಲ್ಲ. ಅಂಥವನು ಆ ವೃತ್ತಿಯನ್ನು ಬಿಟ್ಟುಬಿಡಬೇಕು ಎಂದು ನಾನು ದೃಢವಾಗಿ ನಂಬಿದವನು. ಉಪಾಧ್ಯಾಯನ ಘನತೆ ಇರುವುದು ಅವನ ಸಂಬಳದಿಂದಲ್ಲ. ವಿದ್ವತ್ತು, ಚಾರಿತ್ರ್ಯದಿಂದ ಕೂಡಿದ ಸ್ವಾತಂತ್ರ್ಯ ಮತ್ತು ಬೋಧನಾ ಶಕ್ತಿಗಳಿಂದ’. 

ಹೀಗೆ ಭೈರಪ್ಪನವರ ವ್ಯಕ್ತಿತ್ವ ನಮಗೆ ಮಾದರಿಯಾಗಲು ಅನೇಕ ದೃಷ್ಟಾಂತಗಳಿವೆ. ಈ ಎಂಬತ್ತರ ಇಳಿವಯಸ್ಸಿನಲ್ಲೂ ಭೈರಪ್ಪನವರು ಬರವಣಿಗೆಯಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿರುವರು. ಕಾದಂಬರಿಯಿಂದ ಕಾದಂಬರಿಗೆ ಅವರ ಬರವಣಿಗೆಯ ವಿಷಯ ವಸ್ತು ವೈವಿಧ್ಯಮಯವಾಗಿ ಬೆಳೆದು ನಿಂತಿದೆ. ವಿಜ್ಞಾನದಂಥ ವಿಷಯ ವಸ್ತುವನ್ನೂ ಅತ್ಯಂತ ಸಲೀಸಾಗಿ ಕಾದಂಬರಿಗೆ ಒಗ್ಗಿಸಿಕೊಳ್ಳುವ ಭೈರಪ್ಪನವರ ಸೃಜನಶೀಲತೆ ಕನ್ನಡ ಸಾಹಿತ್ಯ ಲೋಕದ ಅಚ್ಚರಿಗಳಲ್ಲೊಂದು. ಪ್ರಶಸ್ತಿ-ಸನ್ಮಾನ-ಗೌರವಗಳಿಗಾಗಿ ಬರೆಯದೆ, ಅಕಾಡೆಮಿಕ್ ವಲಯದ ಉದ್ದೇಶಪೂರಿತ ಕಟುಟೀಕೆಗಳಿಂದ ಕಂಗಾಲುಗೊಳ್ಳದೆ, ಓದುಗರನ್ನು ಓಲೈಸಬೇಕೆನ್ನುವ ದರ್ದಿಗೆ ಸಿಕ್ಕುಕೊಳ್ಳದೆ ಸೃಜನಶೀಲ ಸಾಹಿತ್ಯದ ಸೃಷ್ಟಿಯಲ್ಲಿ ತೋಡಗಿಸಿಕೊಂಡಿರುವ ಭೈರಪ್ಪನವರು ಕನ್ನಡ ಸಾಹಿತ್ಯ ಲೋಕದ ಅನನ್ಯ ಮತ್ತು ಅಪೂರ್ವ ಬರಹಗಾರ. 

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ