Thursday, September 14, 2017

ಹೊನ್ನ ಕಣಜ: ವಿಭಿನ್ನ ಕಥೆಗಳ ಓದಿನ ಅಪೂರ್ವ ಅನುಭವ

           

         
           ಕಥಾ ಸಾಹಿತ್ಯದಲ್ಲಿ ‘ಪ್ರಜಾವಾಣಿ’ ಪತ್ರಿಕೆಯದು ಮಹತ್ವದ ಕೊಡುಗೆ. ಪ್ರತಿವರ್ಷ ಕಥಾಸ್ಪರ್ಧೆಯನ್ನು ಏರ್ಪಡಿಸಿ ಕಥೆಗಾರರನ್ನು ಗುರುತಿಸುವ ಪ್ರಜಾವಾಣಿಯ ಪ್ರಯತ್ನ ಶ್ಲಾಘನೀಯ. 1957 ರಿಂದ ಆರಂಭವಾದ ಈ ಪಯಣ ಇವತ್ತಿನವರೆಗೂ ನಿರಂತರವಾಗಿ ಮುನ್ನಡೆದುಕೊಂಡುಬಂದಿದೆ. ಪತ್ರಿಕೆಯ ಕಥಾಸ್ಪರ್ಧೆಯ ಮೂಲಕವೇ ಬೆಳಕಿಗೆ ಬಂದು ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿದ ಕಥೆಗಾರರ ಸಂಖ್ಯೆ ಕಡಿಮೆಯೇನಿಲ್ಲ. ಒಂದುಕಾಲದಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಕಥೆಗಾರರೇ ನಂತರದ ದಿನಗಳಲ್ಲಿ ತೀರ್ಪುಗಾರರಾಗುವ ಮಟ್ಟಕ್ಕೆ ಬೆಳೆದು ನಿಂತಿದ್ದು ಪ್ರತಿಭೆಯನ್ನು ಗುರುತಿಸುವ ಪ್ರಜಾವಾಣಿ ಪತ್ರಿಕೆಯ ಸಾಹಿತ್ಯ ಪ್ರೇಮಕ್ಕೊಂದು ನಿದರ್ಶನ. ಈ ಅರವತ್ತು ವರ್ಷಗಳ ಅವಧಿಯಲ್ಲಿ ಪ್ರಜಾವಾಣಿಯ ದೀಪಾವಳಿ ಕಥಾಸ್ಪರ್ಧೆಯಲ್ಲಿ ಆಯ್ಕೆಗೊಂಡು  ಬಹುಮಾನಿತ ಕಥೆಗಳೆಂಬ ಮಾನ್ಯತೆ ಪಡೆದ ಆ ಎಲ್ಲ ಕಥೆಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿ ಕನ್ನಡದ ಸಾಹಿತ್ಯಾಸಕ್ತರಿಗೆ ನೀಡುವ ಪ್ರಯತ್ನಕ್ಕೆ ಪ್ರಜಾವಾಣಿಯ ಸಂಪಾದಕ ಬಳಗ ಮುಂದಾಗಿದೆ. ಒಟ್ಟು ಮೂರು ಸಂಪುಟಗಳಲ್ಲಿ ಎಲ್ಲ ಕಥೆಗಳನ್ನು ಸಂಗ್ರಹಿಸಿ ಓದುಗರ ಕೈಗಿಡುವ ಆಶಯ ಈ ಸಂಪಾದಕ ಬಳಗದ್ದು. ಪ್ರಥಮ ಪ್ರಯತ್ನವಾಗಿ ‘ಹೊನ್ನ ಕಣಜ’ ಸಂಪುಟ ಒಂದು ಹೊರಬಂದು ಓದುಗರ ಕೈಸೇರಿದೆ. 1957 ರಿಂದ 2016 ರ ಅವಧಿಯಲ್ಲಿ ಪ್ರಕಟವಾದ 50 ಕಥೆಗಳು ಈ ಸಂಪುಟದಲ್ಲಿವೆ. ಪೂರ್ಣಚಂದ್ರ ತೇಜಸ್ವಿ, ಲಂಕೇಶ್, ರಾಮಚಂದ್ರ ಶರ್ಮ, ಭಾರತೀಸುತ, ಶ್ರೀಕೃಷ್ಣ ಆಲನಹಳ್ಳಿ, ವೈದೇಹಿ, ಜಯಂತ ಕಾಯ್ಕಿಣಿ, ವಿವೇಕ ಶಾನಭಾಗ, ಕೆ.ಟಿ.ಗಟ್ಟಿ, ದಿವಾಕರ್ ಅವರಂಥ ಖ್ಯಾತನಾಮರ ಕಥೆಗಳಿರುವುದು ಈ ಸಂಪುಟದ ವೈಶಿಷ್ಟ್ಯ. ಜೊತೆಗೆ ಶಾಂತಿ ಅಪ್ಪಣ್ಣ, ಕೆ.ಎಮ್.ರಶ್ಮಿ, ಟಿ.ಕೆ.ದಯಾನಂದ, ಕೆ.ಅಲಕಾರಂಥ ಯುವ ಕಥೆಗಾರರ ಕಥೆಗಳೂ ನಮ್ಮ ಓದಿಗೆ ದಕ್ಕುತ್ತವೆ. ಒಟ್ಟಿನಲ್ಲಿ ‘ಹೊನ್ನ ಕಣಜ’ದ ಈ ಪ್ರಥಮ ಸಂಪುಟ ನವ್ಯ, ನವೋದಯ, ಬಂಡಾಯ, ದಲಿತ ಈ ಎಲ್ಲ ಪ್ರಜ್ಞೆಗಳ ಪಾತಳಿಯಲ್ಲಿ ರೂಪುಗೊಂಡು ಕಥಾಸಾಹಿತ್ಯಾಸಕ್ತರಿಗೆ ಒಂದು ಅಧ್ಯಯನ ಗ್ರಂಥವಾಗಿಯೂ ಉಪಯೋಗಕ್ಕೆ ಬರುತ್ತದೆ. 

        ಸಂಪುಟದಲ್ಲಿನ ಎಲ್ಲ ಐವತ್ತು ಕಥೆಗಳು ವೈವಿಧ್ಯಮಯವಾಗಿರುವುದರಿಂದ ಒಂದು ಸಮೃದ್ಧ ಓದಿನ ಅನುಭವ ಓದುಗನದಾಗುತ್ತದೆ. ಕಥೆಗಳು ಸೃಷ್ಟಿಗೊಂಡ ಕಾಲಾವಧಿ ಸುಮಾರು ಆರು ದಶಕಗಳಿಗೆ ವಿಸ್ತರಿಸಿರುವುದರಿಂದ ಇಡೀ ಆರು ದಶಕಗಳ ಸಾಮಾಜಿಕ ಬದುಕು ಇಲ್ಲಿನ ಕಥೆಗಳಲ್ಲಿ ರೂಪುತಾಳಿದೆ. ಜೊತೆಗೆ ಇಲ್ಲಿನ ಎಲ್ಲ ಐವತ್ತು ಕಥೆಗಾರರು ನವ್ಯ, ನವೋದಯ, ಬಂಡಾಯ, ದಲಿತ ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಗುರುತಿಸಿಕೊಂಡಿರುವುದರಿಂದ ಕಥೆಗಳು ಒಂದಕ್ಕಿಂತ ಮತ್ತೊಂದು ವಿಭಿನ್ನವಾಗಿವೆ. ಮೊದಲ ಕಥೆ ‘ತಾಯಿ’ಯಿಂದ ಕೊನೆಯ ಕಥೆ ‘ಕತ್ತಲೆ ಮೌನ ಮತ್ತು’ವರೆಗಿನ ಕಥೆಗಳಲ್ಲಿ ಶೈಲಿ ಮತ್ತು ಕಥನ ಕಟ್ಟುವ ಕ್ರಮದಲ್ಲಿ ವೈವಿಧ್ಯತೆಯಿದ್ದರೂ ಎಲ್ಲ ಕಥೆಗಾರರ ಹುಡುಕಾಟ ಮಾತ್ರ ಮನುಷ್ಯ ಪ್ರೀತಿ ಹಾಗೂ ಜೀವನ ಪ್ರೀತಿಯೇ. 1958 ರಲ್ಲಿ ಪ್ರಕಟವಾದ ಪೂರ್ಣಚಂದ್ರ ತೇಜಸ್ವಿ ಅವರ ‘ಲಿಂಗಬಂದ’ ಕಥೆ ಮಲೆನಾಡಿನ ಮಳೆಗಾಲದ ದಟ್ಟ ಅನುಭವವನ್ನು ಕಟ್ಟಿಕೊಡುತ್ತದೆ. ಪ್ರಕೃತಿ ಪ್ರಿಯರಾದ ತೇಜಸ್ವಿ ಅವರ ಕಥೆಗಳಲ್ಲಿ ಪ್ರಕೃತಿ ಕೂಡ ಒಂದು ಪಾತ್ರವಾಗಿ ಕಾಣಿಸಿಕೊಳ್ಳುತ್ತದೆ ಎನ್ನುವುದು ಬಹುತೇಕ ವಿಮರ್ಶಕರ ಅನಿಸಿಕೆ. ಭೋರೆನ್ನುವ ಸದ್ದು ಮಾಡುವ ಗಾಳಿ, ಹೆಚಿಚಿನ ಮೇಲೆ ಸದ್ದು ಮಾಡುವ ಮಳೆ, ನಿರಂತರ ನಿನಾದ ಹುಟ್ಟಿಸುವ ಜೀರುಂಡೆಗಳು, ತೂಗಾಡುವ ತೆಂಗಿನ ಮರ ಹೀಗೆ ಇಡೀ ಪ್ರಕೃತಿಯೇ  ಪಾತ್ರವಾಗಿ ಮೂಡಿದ ಅನುಭವ ಓದುಗನದಾಗುತ್ತದೆ. ಮಲೆನಾಡಿನ ಮಳೆಗಾಲದ ರಾತ್ರಿಯನ್ನು ವರ್ಣಿಸುವಾಗ ತೇಜಸ್ವಿ ಅವರು ಭಾಷೆಯನ್ನು ಅತ್ಯಂತ ಸಶಕ್ತವಾಗಿ ದುಡಿಸಿಕೊಂಡಿರುವರು. ‘ಭರ್ರನೆ ಬೀಸಿದ ಗಾಳಿಗೆ ದೀಪ ತೂರಾಡಿ ಇನ್ನೇನು ಆರಿಯೇ  ಹೋಯಿತು ಎನ್ನುವಚಿತಾಗಿ ಮತ್ತೆ ಕುಣಿ ಕುಣಿದು ಉರಿಯತೊಡಗಿತು’ ಇಂಥ ಸಾಲುಗಳನ್ನು ಓದುವುದೇ ಒಂದು ಅಪೂರ್ವ ಅನುಭವವಾಗಿ ಕಥೆ ಓದುಗನ ಪ್ರಜ್ಞೆಯನ್ನು ಪ್ರವೇಶಿಸುತ್ತದೆ.

          ಪಿ.ಲಂಕೇಶ್ ಅವರ ‘ನಾನಲ್ಲ’ ಕಥೆ ನಾವು ಬದುಕುತ್ತಿರುವ ವ್ಯವಸ್ಥೆಯ ಕ್ರೌರ್ಯವನ್ನು ಅನಾವರಣಗೊಳಿಸುತ್ತದೆ. ಈ ಬದುಕಿನ ಧಾವಂತದಲ್ಲಿ ನಮ್ಮ ನಮ್ಮ ಬದುಕಷ್ಟೇ ಮುಖ್ಯವಾಗುತ್ತಿರುವಾಗ ಮನುಷ್ಯನೆನಿಸಿಕೊಂಡ ಪ್ರಾಣಿ ಮನುಷ್ಯತ್ವವನ್ನು ಕಳೆದುಕೊಂಡು ಮುಖವಾಡ ಧರಿಸಿ ಬದುಕುತ್ತಿರುವ ಎನ್ನುವುದನ್ನು ಕಥೆ ಅರ್ಥಪೂರ್ಣವಾಗಿ ಧ್ವನಿಸುತ್ತದೆ. ರಸ್ತೆಯ ಮೇಲೆ ಅನಾಥವಾಗಿ ಬಿದ್ದ ಹೆಣವನ್ನು ನೋಡದಷ್ಟೂ ಮನುಷ್ಯ ಸಂಬಂಧಗಳು ಜಾಳು ಜಾಳಾಗಿವೆ ಎನ್ನುವುದನ್ನು ಲಂಕೇಶ್ ತಮ್ಮ ಎಂದಿನ ವ್ಯಂಗ್ಯದಲ್ಲಿ ಹೀಗೆ ಹೇಳುತ್ತಾರೆ ‘ಮನೆಯಲ್ಲಿ ಇದ್ದದ್ದು ತಿಂದು, ಆಫೀಸಿನಲ್ಲಿ ವಿಧೇಯವಾಗಿ ದುಡಿದು, ಭಾರತದ ಸತ್ಪ್ರಜೆ ಅನ್ನಿಸಿಕೊಳ್ಳುವುದು ಬಿಟ್ಟು ಆ ಹೆಣದ ಹತ್ತಿರ ಏಕೆ ಹೋಗೋಣ ಎನ್ನುವಂತೆ ಹೋಗುತ್ತಿದ್ದ ಜನ’. 

          ಅಪ್ಪ ಅಮ್ಮನ ತೀರ ಸಂಪ್ರದಾಯ ಮತ್ತು ದೈವಭಕ್ತಿಯ ನಡುವೆ ಸಿಲುಕಿ ನಲುಗುವ ಹೆಣ್ಣೊಬ್ಬಳ ಕಥೆಯನ್ನು ಎಸ್.ದಿವಾಕರರ ‘ಕ್ರೌರ್ಯ’ ಅತ್ಯಂತ ಆರ್ದ್ರವಾಗಿ ಕಟ್ಟಿಕೊಡುತ್ತದೆ. ಮೂವತ್ತಾರು ವರ್ಷವಾದರೂ ಇನ್ನು ಮದುವೆಯಾಗದ ಅಲಮೇಲುಗೆ ಮನೆಯೇ  ಜೈಲಾಗಿದೆ. ಹುಟ್ಟಿದೊಡನೆ ಪೋಲಿಯೊ  ರೋಗಕ್ಕೆ ತುತ್ತಾಗಿ ಹೆಳವಳಾದ ಅಲಮೇಲು ಕಣ್ಮನ ಸೆಳೆಯುವ ಹುಡುಗಿಯೇನೂ ಅಲ್ಲ. ಇಂಥ ಅಲಮೇಲುವೂ ಪ್ರೇಮಪಾಶದಲ್ಲಿ ಸಿಕ್ಕಿಬಿದ್ದಿದ್ದಳು. ಅದು ಒಂದಲ್ಲ ಎರಡು ಸಲ. ಒಮ್ಮೆ ರಾಮಾನುಜ ಇನ್ನೊಮ್ಮೆ ಮೆಳ್ಳುಗಣ್ಣಿನ ಕುಳ್ಳ ಅವಳ ಬದುಕಲ್ಲಿ ಪ್ರವೇಶಿಸಿ ಅಲಮೇಲುವಿನಲ್ಲಿ ಪ್ರೇಮದ ನವಿರು ಭಾವನೆ ಮೂಡಿಸಿದ್ದರು. ನನ್ನನ್ನೂ ಪ್ರೀತಿಸುವವರಿದ್ದಾರೆ ಎನ್ನುವ ಭಾವವೇ ಮೆಳ್ಳುಗಣ್ಣಿನ ಹುಡುಗನನ್ನು ಹುಡುಕಿಕೊಂಡು ಅಲಮೇಲುವನ್ನು ಆ ಕೊಳಚೆಗೇರಿಗೆ ಕರೆದೊಯ್ಯುತ್ತದೆ. ಪ್ರೀತಿಯನ್ನು ಅರಸಿ ಹೋದವಳು ಅನಿರೀಕ್ಷಿತವಾಗಿ ನಡೆದ ಘಟನೆಯೊಂದರಲ್ಲಿ ಚೂರಿ ಇರಿತಕ್ಕೆ ಒಳಗಾಗಿ ನಡು ರಸ್ತೆಯಲ್ಲೇ ಪಳನಿಚಾಮಿಯ ಬತ್ತಲೆದೆಗೆ ಒರಗಿ ಕೂತಿದ್ದಾಳೆ. ಆ ಸಾವಿನ ಘಳಿಗೆಯಲ್ಲೂ ಅಲಮೇಲುಗೆ ಪಳನಿಚಾಮಿಯ ಕಣ್ಣುಗಳಲ್ಲಿ ಕರುಣೆ, ಧ್ವನಿಯಲ್ಲಿ ಅನುಕಂಪ ಕಾಣಿಸುತ್ತದೆ. ಪ್ರೀತಿಯ ಹುಡುಕಾಟದಲ್ಲೇ ಕ್ರೌರ್ಯಕ್ಕೆ ಬಲಿಯಾಗುವ ಅಲಮೇಲುವಿನ ಕಥೆ ಓದುಗರ ಅಂತ:ಕರಣವನ್ನು ತಟ್ಟುತ್ತದೆ. 

           ನಾ.ಮೊಗಸಾಲೆ ಅವರ ‘ಕಿಡ್ನಿ’ಯಲ್ಲಿ ರಾಜಕೀಯದ ಹಿತಾಸಕ್ತಿಗೆ ಬಲಿಯಾಗುವ ದಲಿತ ಯುವಕನೋರ್ವನ ಕಥೆಯಿದೆ. ವಿಡಂಬನೆ ಮತ್ತು ನವಿರು ಹಾಸ್ಯದಿಂದ ಕಥೆ ಓದುಗನಿಗೆ ತೀರ ಆಪ್ತವಾಗುತ್ತದೆ. ಒಂದು ಕಾಲದಲ್ಲಿ ಆಪ್ತರಾಗಿದ್ದ ಹಲಗೆಪ್ಪ ಮತ್ತು ತಗಡಪ್ಪ ರಾಜಕೀಯದ ಚದುರಂಗದಾಟಕ್ಕೆ ಸಿಕ್ಕು ಈಗ ಹಾವು ಮುಂಗೂಸಿಯಂತಾಗಿದ್ದಾರೆ. ಈ ನಡುವೆ ಹಲಗೆಪ್ಪ ತನ್ನ ಮನೆಯ ಜೀತದಾಳು ಹರಿಜನ ಪರ್ದೇಶಿಯ ಮಗ ಗುಡ್ಡನ ಕಿಡ್ನಿಯನ್ನು ಯಾರಿಗೂ ತಿಳಿಯದಂತೆ ತನ್ನ ಹೆಂಡತಿಗೆ ಕಸಿ ಮಾಡಿಸಿದ್ದಾನೆ. ವಿಷಯ ಹೇಗೋ ತಗಡಪ್ಪನಿಗೆ ಗೊತ್ತಾಗಿದೆ. ಹಲಗೆಪ್ಪನನ್ನು ರಾಜಕೀಯವಾಗಿ ಮುಗಿಸಲು ತಗಡಪ್ಪ ದಲಿತ ಹುಡುಗ ಗುಡ್ಡನಿಗಾದ ಅನ್ಯಾಯವನ್ನು ದಾಳವಾಗಿ ಉಪಯೋಗಿಸುತ್ತಾನೆ. ದಲಿತ ಯುವಕ ಸಿದ್ದಪ್ಪನನ್ನು ಮುಂದಿಟ್ಟುಕೊಂಡು ಮೆರವಣಿಗೆ ಮಾಡುವ ತಗಡಪ್ಪನ ಯೋಜನೆಯನ್ನು ಹಲಗೆಪ್ಪ ದಲಿತ ಯುವಕನನ್ನೇ ಮುಂದಿಟ್ಟುಕೊಂಡು ವಿಫಲಗೊಳಿಸುತ್ತಾನೆ. ಒಂದು ಸಮುದಾಯದ ಜನರನ್ನು ದಾಳವಾಗಿ ಬಳಸಿಕೊಂಡು ರಾಜಕೀಯವಾಗಿ ಬೆಳೆಯುವುದನ್ನು ಕಥೆ ವಿಡಂಬನಾತ್ಮಕವಾಗಿ ಹೇಳುತ್ತದೆ. ‘ಥೂ ಗಂಡಸಿನ ಬೀಜವನ್ನು ಹೊಟ್ಟೆಯೊಳಗಿಟ್ಟು ಹೆಂಗಸೇಕೆ ಬದುಕಬೇಕು?’ ಎನ್ನುವ ಹೆಂಗಸರ ಮಾತು, ತನ್ನ ಮಗನ ತರಡುಬೇಳೆಯನ್ನೇ ಕಿತ್ತು ಗುಡ್ಡನ ಪುಂಸತ್ವವನ್ನೇ ಧನಿಗಳು ತೆಗೆದರಲ್ಲ ಎನ್ನುವ ಪರ್ದೇಶಿಯ ಸಿಟ್ಟು ಆ ಕ್ಷಣಕ್ಕೆ ಅನಕ್ಷರಸ್ಥರ ಅಮಾಯಕತೆಯನ್ನು ಪ್ರತಿಬಿಂಬಿಸುತ್ತವೆ. 

           ಮುಖವಾಡವನ್ನು ಕಳಚಿ ಅದರ ಹಿಂದಿನ ನಿಜವಾದ ಮುಖಗಳನ್ನು ಅನಾವರಣಗೊಳಿಸುವ ಬಿ.ಎಲ್.ವೇಣು ಅವರ ‘ಸುಡುಗಾಡು ಸಿದ್ದನ ಪ್ರಸಂಗ’ ಈ ಸಂಪುಟದ ಮಹತ್ವಪೂರ್ಣ ಕಥೆಗಳಲ್ಲೊಂದು. ಮನುಷ್ಯ ಸಂಪರ್ಕದಿಂದ ದೂರಾಗಿ ಸ್ಮಶಾನದಲ್ಲಿ ವಾಸಿಸುತ್ತಿರುವ ಸಿದ್ದನಿಗೆ ಸಂಗಾತಿಯಾಗಿ ಜುಂಜಿ ಎನ್ನುವ ಹೆಣ್ಣುಜೀವವಿದೆ ಮತ್ತು ಅವರಿಬ್ಬರಿಗೂ ಹುಟ್ಟಿದ ಆರುವರ್ಷದ ಮಗುವಿದೆ. ಚಿಕ್ಕವನಿರುವಾಗಲೆ ಮನೆಬಿಟ್ಟು ಓಡಿಬಂದು ಭೈರನ ಪರಿಚಯವಾಗಿ ಸ್ಮಶಾನ ಸೇರಿದ ಸಿದ್ದನದು ಸ್ಥಿತಪ್ರಜ್ಞ ಮನೋಭಾವ. ಬೆಂಕಿಭೈರ ಸತ್ತಮೇಲೆ ಈಗ ಇಡೀ ಸ್ಮಶಾನದ ಉಸ್ತುವಾರಿ ಸಿದ್ದನದೇ. ಸಿದ್ದನಲ್ಲೂ ಒಂದು ನಿಯತ್ತಿದೆ. ಬಡವರ ಮನೆಯ ಶವವೆಂದು ತಿಳಿದಾಗ ಹೆಚ್ಚು ಕಾಸಿಗಾಗಿ ಗುಂಜಾಡುವುದಿಲ್ಲ. ಕಥೆಯ ಕೊನೆಯ ಭಾಗದಲ್ಲಿ ಮೇಷ್ಟ್ರೊಬ್ಬರ ಶವಸಂಸ್ಕಾರದ ಸನ್ನಿವೇಶ ಸಿದ್ದನ ಪೂರ್ವಾಪರವನ್ನು ಓದುಗರಿಗೆ ಪರಿಚಯಿಸುತ್ತದೆ. ಜೊತೆಗೆ ಲೇಖಕರು ಈ ಸಂದರ್ಭ ಮೇಷ್ಟ್ರ ಸುಶಿಕ್ಷಿತ ಮಕ್ಕಳ ಸಂಕುಚಿತ ಮನಸ್ಸುಗಳನ್ನು ಅನಾವರಣಗೊಳಿಸಿ ಮುಖವಾಡಗಳನ್ನು ಕಳಿಚಿ ಹಾಕುತ್ತಾರೆ.  
      ಕೆಲವೊಮ್ಮೆ ಲೇಖಕರು ತಮ್ಮ ಕಥೆ, ಕಾದಂಬರಿಗಳಲ್ಲಿ ಗ್ರಾಂಥಿಕ ಭಾಷೆಗೆ ಬದಲು ಗ್ರಾಮ್ಯಭಾಷೆಯನ್ನು ಬಳಸಿಕೊಳ್ಳುವುದುಂಟು. ರಷ್ಯನ್ ಕಥನಶಾಸ್ತ್ರಜ್ಞರು ವಾದಿಸುವಂತೆ ಗ್ರಾಂಥಿಕ ಭಾಷೆ ಅತಿಯಾದ ಶಿಷ್ಟಾಚಾರದಿಂದಾಗಿ ತನ್ನ ಧ್ವನಿಶಕ್ತಿಯನ್ನು ಕಳೆದುಕೊಂಡಿರುತ್ತದೆ. ಆದ್ದರಿಂದ ಲೇಖಕ ತನ್ನ ಕಥೆ, ಕಾದಂಬರಿಯಲ್ಲಿನ ಭಾಷೆಗೆ ಧ್ವನಿಶಕ್ತಿಯನ್ನು ನೀಡಲು ಭಾಷೆಯನ್ನು ಅಪರಿಚಿತಗೊಳಿಸುತ್ತಾನೆ (defamiliarization). ಆಗ ಆತ ಈ ಗ್ರಾಮ್ಯಭಾಷೆ (regional dialect) ಅಥವಾ ಸಮುದಾಯದ ಭಾಷೆ (caste dialect) ಬಳಸಿಕೊಳ್ಳುತ್ತಾನೆ. ಭೈರಪ್ಪನವರು ತಮ್ಮ ಕಾದಂಬರಿಗಳಲ್ಲಿನ ಪಾತ್ರಗಳ ಸಂಭಾಷಣೆಗಾಗಿ ಹಾಸನ ಸೀಮೆಯ ಭಾಷೆಯನ್ನೇ ಬಳಸಿಕೊಳ್ಳುವುದು ಇದೇ ಕಾರಣದಿಂದ. ಭಾಷೆಗೆ ಧ್ವನಿಶಕ್ತಿಯನ್ನು ನೀಡಲು ದೇವನೂರ ಮಹಾದೇವ ‘ಸಂಬಂಧ ದೊಡ್ಡದು’ ಎನ್ನುವ ಗ್ರಾಂಥಿಕ ಕನ್ನಡವನ್ನು ‘ಸಂಬಂಜ ಅನ್ನೊದು ದೊಡ್ಡದು ಕನಾ’ ಎಂದು ಗ್ರಾಮ್ಯ ಕನ್ನಡವಾಗಿಸುತ್ತಾರೆ. ‘ಹೊನ್ನ ಕಣಜ’ದ ಈ ಸಂಪುಟದಲ್ಲಿ ಅನೇಕ ಕಥೆಗಾರರು ಕಥನ ಕಟ್ಟುವಿಕೆಯಲ್ಲಿ ಗ್ರಾಮೀಣ ಭಾಷೆಯನ್ನು ಸಶಕ್ತವಾಗಿ ದುಡಿಸಿಕೊಂಡಿರುವರು. ಮಲೆನಾಡ ಸೀಮೆಯ, ದಕ್ಷಿಣ ಕನ್ನಡದ, ಕರಾವಳಿ ತೀರದ, ಉತ್ತರ ಕರ್ನಾಟಕದ ಗ್ರಾಮ್ಯ ಭಾಷೆಗಳು ಅನೇಕ ಕಥೆಗಳಲ್ಲಿ ಭಾಷೆಗೆ ಧ್ವನಿಶಕ್ತಿಯನ್ನು ನೀಡಿವೆ. ಕಥೆಗಳಲ್ಲಿನ ಗ್ರಾಮೀಣ ಭಾಷೆಯ ಸೊಗಡು ಈ ಕೆಳಗಿನ ಸಾಲುಗಳನ್ನು ಓದಿದಾಗ ಅನುಭವಕ್ಕೆ ಬರುತ್ತದೆ.

● ನೀ ಎಲ್ಲೆರೆ ಒಗಿ ಆಕಿನ್ನ ಆದರ ನಾ ಕೂತ ಟೊಂಗಿಗೆ ಶಿಕ್ಕೊಳ್ಳಾರಧಂಗ ಮಾಡು. ಈ ಟೊಂಗಿ ಭಾಳ ತ್ರಾಸಿಂದದನೋ ಬಾಳಾ (ಘಟಿತ).
● ಬ್ಯಾಡವ್ವೊ ನಾ ಸತ್ರ ಇಲ್ಲೆ ಸಾಯ್ಬೇಕು. ನೀ ಓಡಿಬುಡು ನಾ ಸತ್ನೆಂತ ತಿಳಕಂಡು ಬುಡು. ಪಾಲಿಗೆ ಬಂದದ್ದು ಯಾರ ತಪ್ಸತಾರ (ಉಡಿಯಲ್ಲಿಯ ಉರಿ).
● ಯಾರ ಏನು ಅನ್ನಲ್ಲಕನ. ಯಾಕಂದಾರೊ ಅಂತೀನಿ? ಯಾರಂಗ್ರಾಣೇಲೂ ಬದುಕ್ತಾ ಇಲ್ಲ (ಸುಗ್ಗಿ).
● ಬಿದ್ದ ನೆಲ ಹಿಡದೇ ಏಳಬೇಕ ಮಗಾ (ಕಡಿತನಕಾ ಕಾಯೋ ಅಭಿಮಾನ).
● ಆಕಾಶದ ಚಿಕ್ಕಿಗಳಿಗೆ ಒಮ್ಮೆಲೇ ಏಣಿ ಹತ್ತಿ ಮುಟ್ಟಲಿಕ್ಕೆ ಆಗತೈತಿ ಏನು? (ದಿಂಡೀ).
● ಹೊತ್ತ ಹೋಪಲ್ಲೆ ಬೇಕಾದ್ರೆ ಒಂದಿಷ್ಟು ಭಸ್ಮ, ಚೀಟು ಮಾಡದು ಕಲಿತ್ಗ. ಗುಡ್ಡೆ ಮೇಲಿಪ್ಪ ಯಾವ್ಯಾವ ನಾರು, ಬೇರು ಎಂತಕ್ಕೆ ಬೇಕು ಹೇಳಿ ತಿಳ್ಕ. ನಾಕು ಜನಕ್ಕೆ ಉಪಕಾರಾದ್ರೂ ಆಗ್ತು (ಎರವಿನೊಡವೆ).

             ಈ ಸಂಪುಟದಲ್ಲಿ ಹನ್ನೆರದು ಲೇಖಕಿಯರು ಬರೆದ ಕಥೆಗಳಿರುವುದು ಕಥಾಸಂಕಲನದ ವಿಶೇಷತೆಗಳಲ್ಲೊಂದು. ಬದಲಾದ ಕಾಲಘಟ್ಟದಲ್ಲಿ ಪುರುಷರಷ್ಟೇ ಮಹಿಳೆಯರೂ ಬರವಣಿಗೆಯನ್ನು ಒಂದು ಅಭಿವ್ಯಕ್ತಿ ಮಾಧ್ಯಮವಾಗಿ ಬಳಸಿಕೊಂಡು ಸಾಹಿತ್ಯ ಕ್ಷೇತ್ರದಲ್ಲಿ ಮುನ್ನೆಲೆಗೆ ಬಂದಿರುವರು. ಮಹಿಳಾ ಸಾಹಿತ್ಯವೆನ್ನುವುದು ಅಡುಗೆ ಮನೆಯ ಸಾಹಿತ್ಯವೆಂದು ಗೇಲಿ ಮಾಡುತ್ತಿದ್ದ ಪುರುಷ ಲೇಖಕ ಬಣದ ತಿರಸ್ಕಾರವನ್ನೇ ಸವಾಲಾಗಿ ತೆಗೆದುಕೊಂಡು ಲೇಖಕಿಯರು ಸಮಾಜದ ಅನೇಕ ಸಮಸ್ಯೆಗಳಿಗೆ ಮುಖಾಮುಖಿಯಾಗುತ್ತ ಪ್ರವರ್ಧಮಾನಕ್ಕೆ ಬಂದದ್ದು ಅದೊಂದು ಆಶಾದಾಯಕ ಬೆಳವಣಿಗೆ ಎನ್ನಬಹುದು. ಈ ಸಂಪುಟದ ಆರಂಭದ ನಾಲ್ಕು ದಶಕಗಳ 33 ಕಥೆಗಳಲ್ಲಿ ಕೇವಲ ಎರಡು ಕಥೆಗಳು ಮಾತ್ರ ಲೇಖಕಿಯರು ಬರೆದವುಗಳಾದರೆ ನಂತರದ ಎರಡು ದಶಕಗಳ (1997-2016) ಹದಿನೇಳು ಕಥೆಗಳಲ್ಲಿ ಹತ್ತು ಲೇಖಕಿಯರ ಕಥೆಗಳಿರುವುದು ಮಹಿಳಾ ಸಾಹಿತ್ಯದ ಸಮೃದ್ಧ ಬೆಳವಣಿಗೆಯನ್ನು ಬಿಂಬಿಸುತ್ತದೆ. ನಾಗವೇಣಿ, ಜಯಶ್ರೀ ದೇಶಪಾಂಡೆ, ಅಲಕ ತೀರ್ಥಹಳ್ಳಿ, ಕಸ್ತೂರಿ ಬಾಯಿರಿ, ಕೆ.ಎ.ಶಾಂತಿ, ಕವಿತಾ ರೈ, ವಿನಯಾ, ಪ್ರಜ್ಞಾ ಮತ್ತಿಹಳ್ಳಿ ಮುಂತಾದ ಲೇಖಕಿಯರು ಮಹಿಳಾ ಸಾಹಿತ್ಯದ ಸಿದ್ಧಸೂತ್ರವನ್ನು ಮುರಿದು ಹೊಸ ಹುಡುಕಾಟದಲ್ಲಿ ತೊಡಗಿರುವುದು ಕನ್ನಡ ಸಾಹಿತ್ಯದ ಮಹತ್ವದ ಬೆಳವಣಿಗೆಗಳಲ್ಲೊಂದು. ಆದರೆ ಈ ಸಂದರ್ಭ ಈ ಕಿರಿಯ ಲೇಖಕಿಯರಿಗೆ ಬದುಕಿನ ಅನೇಕ ಸ್ಥಿತ್ಯಂತರಗಳಿಗೆ ಮುಖಮಾಡಿ ನಿಂತು ಅಭಿವ್ಯಕ್ತಿಸಲು ಒಂದು ವೇದಿಕೆಯನ್ನು ನಿರ್ಮಿಸಿಕೊಟ್ಟಿದ್ದು ಹಿರಿಯ ಲೇಖಕಿಯರಾದ ಗೀತಾ ನಾಗಭೂಷಣ, ವೈದೇಹಿ, ಸಾರಾ ಅಬೂಬಕ್ಕರ ಎನ್ನುವುದನ್ನು ಮರೆಯಬಾರದು. 

        ಹೊನ್ನ ಕಣಜದ ಎಲ್ಲ ಹನ್ನೆರಡು ಲೇಖಕಿಯರ ಕಥೆಗಳಲ್ಲಿ ಎಂಟು ಕಥೆಗಳು ಮಹಿಳಾ ಸಂವೇದನೆಯನ್ನು ಅಭಿವ್ಯಕ್ತಗೊಳಿಸುತ್ತವೆ. ‘ಕೃಷ್ಣಾ ಮೂರ್ತಿ ಕಣ್ಣಾಮುಂದೆ’ಯ ಭಾಗೀರಥಿ, ‘ಘಟಿತ’ದ ಮೀನಾಕ್ಷಿ, ‘ಕಡಿತನಕಾ ಕಾಯೋ ಅಭಿಮಾನ’ದ ಕರಿಯಮ್ಮ, ‘ದಿಂಡೀ’ಯ ದ್ಯಾಮವ್ವ, ‘ನಾಟಿ ಓಟ’ದ ದೇವಣಿ, ‘ಅದು’ವಿನ ಸಾವಿ, ‘ತುದಿ ಬೆಟ್ಟದ ನೀರ ಹಾಡು’ದ ಸುಬೋಧಿನಿ ಇವರೆಲ್ಲ ಒಂದಲ್ಲ ಒಂದು ಹಂತದಲ್ಲಿ ಬದುಕಿನಲ್ಲಿ ಶೋಷಣೆಗೆ ಒಳಗಾದವರೇ. ಆ ಶೋಷಣೆಯನ್ನು ಎದುರಿಸಿ ಹೊರಬಂದು ಹೊಸ ಬದುಕನ್ನು ಕಟ್ಟಿಕೊಳ್ಳುವುದು ಕಥೆ ಮುಂದೆ ಮತ್ತೆಲ್ಲೋ ಬೆಳೆಯುವ ಮುನ್ಸೂಚನೆಯಾಗಿ ಕಾಣಿಸುತ್ತದೆ. ಈ ಕಥಾ ಸಂಕಲನದಲ್ಲಿ ಲೇಖಕಿಯರು ಸೃಷ್ಟಿಸಿದ ಪಾತ್ರಗಳಲ್ಲಿ ದೇವಣಿ, ಕರಿಯಮ್ಮ, ದ್ಯಾಮವ್ವ, ಸುಬೋಧಿನಿ ಪಾತ್ರಗಳು ಸಮಸ್ಯೆಗಳನ್ನು ದಿಟ್ಟವಾಗಿ ಎದುರಿಸುವುದರ ಮೂಲಕ ಓದುಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಗುತ್ತವೆ. ಜಯಶ್ರೀ ದೇಶಪಾಂಡೆ ಅವರ ‘ಘಟಿತ’ದ ಮೀನಾಕ್ಷಿ ಕಥೆಯ ಕೇಂದ್ರ ಪಾತ್ರವಾದರೂ ಆಕೆ ಭೌತಿಕವಾಗಿ ಕಾಣಿಸಿಕೊಳ್ಳುವುದು ಕಡಿಮೆ. ಕಥೆಯ ಮುಖ್ಯ ಸಮಸ್ಯೆ ಮೀನಾಕ್ಷಿ ಸಂಬಂಧಿಸಿದ್ದಾಗಿದ್ದರೂ ಆ ಸಮಸ್ಯೆಯಿಂದ ಅವಳನ್ನು ಬಿಡಿಸುವ ರಾಜಣ್ಣನೇ ಮುನ್ನೆಲೆಗೆ ಬರುವುದು ಕಥೆಯ ತೀವ್ರತೆಯನ್ನು ಸರಳಗೊಳಿಸುತ್ತದೆ. ನಾಗವೇಣಿ, ಶಾಂತಿ ಅಪ್ಪಣ್ಣ, ಅಲಕಾ ತೀರ್ಥಹಳ್ಳಿ ಈ ಕಥೆಗಾರ್ತಿಯರು ಮಹಿಳಾ ಶೋಷಣೆಯ ಪರಿಧಿಯಿಂದ ಹೊರಬಂದು ತಮ್ಮ ಕಥೆಗಳಲ್ಲಿ ಹೊಸ ಅನ್ವೇಷಣೆಗೆ ತೊಡಗುವುದು ಬದಲಾಗುತ್ತಿರುವ ಮಹಿಳಾ ಸಾಹಿತ್ಯಕ್ಕೆ ದಿಕ್ಸೂಚಿಯಾಗಿ ಕಾಣಿಸುತ್ತದೆ. 

     ಕಥೆ ಬರೆಯುತ್ತಿರುವ ಘಳಿಗೆ ಕಥೆಗಾರ ಓದುಗರನ್ನು ಕುತೂಹಲಿಗಳನ್ನಾಗಿಸಲು ತಂತ್ರದ ಮೊರೆ ಹೋಗುವುದು ಅನಿವಾರ್ಯವಾಗುತ್ತದೆ. ಇದೊಂದು ಓದುಗರನ್ನು ಸಂಪೂರ್ಣವಾಗಿ ಕಥೆಯ ಓದಿನಲ್ಲಿ ತಲ್ಲೀನಗೊಳಿಸುವ ಸೃಜನಶೀಲ ಪ್ರಕ್ರಿಯೆ.  ಆದ್ದರಿಂದ ಬಹಳಷ್ಟು ಕಥೆಗಾರರು ಕಥೆಯ ಆರಂಭದಲ್ಲೇ ತಂತ್ರವನ್ನು ಬಳಸಿಕೊಂಡು ಓದುಗರ ಆಸಕ್ತಿ ಕೆರಳಿಸುವಲ್ಲಿ ಯಶಸ್ವಿಯಾಗುತ್ತಾರೆ. ಹೊನ್ನ ಕಣಜದ ಈ ಸಂಪುಟದಲ್ಲಿ ಕೆಲವು ಕಥೆಗಾರರು ಇಂಥ ತಂತ್ರದ ಮೊರೆ ಹೋಗಿರುವುದು ಓದುಗರ ಅನುಭವಕ್ಕೆ ಬರುತ್ತದೆ. ಉದಾಹರಣೆಗೆ ನಾಗವೇಣಿ ಅವರ ‘ಒಡಲು’ ಕಥೆ ಆರಂಭವಾಗುವುದು ಹೀಗೆ ‘ಸೈಯದ್ದಿ ಆ ಊರು ಬಿಡುವ ನಿರ್ಧಾರಕ್ಕೆ ಬಂದೇ ಬಿಟ್ಟ. ಹೆಂಡತಿ ನಫೀಸಮ್ಮ ತನ್ನ ಒಡಲೊಳಗಿನ ಅಸಂಖ್ಯ ಭಾವನೆಗಳನ್ನು ಅದುಮಿಡಲು ಪ್ರಯತ್ನಿಸುತ್ತ ಸೊಂಟದಲ್ಲಿದ್ದ ಕೇಶವನಿಗೆ ಅಕ್ಕಿ ಪುಂಡಿ ತಿನ್ನಿಸುತ್ತಿದ್ದಳು. ಅಮ್ಮನ ದುಖ: ದುಗುಡಗಳ ಅರಿವಿಲ್ಲದ ಉಮ್ಮರ ಸಂಭ್ರಮದಿಂದ ಪುಟ್ಟ ಪುಟ್ಟ ಹೆಜ್ಜೆಯಿಡುತ್ತ ಓಡಾಡುತ್ತಿದ್ದ’. ಹೀಗೆ ಆರಂಭವಾಗುವ ಕಥೆ ಕೇಶವ ಎನ್ನುವ ಹೆಸರಿನೊಂದಿಗೆ ಓದುಗರಲ್ಲಿ ಕಥೆ ಕುರಿತು ಆಸಕ್ತಿಯನ್ನು ಹುಟ್ಟಿಸುತ್ತದೆ. ಶ್ರೀಕೃಷ್ಣ ಆಲನಹಳ್ಳಿ ಅವರ ‘ತೊರೆ ಬತ್ತಿರಲಿಲ್ಲ’ ಕಥೆಯನ್ನೂ ಇಂಥದ್ದೊಂದು ತಂತ್ರಕ್ಕೆ ಉದಾಹರಣೆಯಾಗಿ ಹೇಳಬಹುದು. ‘ಮಸಿ ಹಿಡಿದಿದ್ದ ದೀಪದ ಗಾಜನ್ನು ಬೂದಿಯಿಂದ ಉಜ್ಜಿ ಒರಸುತ್ತಿದ್ದ ಲಕ್ಷ್ಮಿಗೆ ನೆನ್ನೆ ಸಂಜೆ ಭಾವ ಹೇಳಿದ್ದು ಧುತ್ತೆಂದು ನೆನಪಾಯಿತು’ ಎನ್ನುವ ಆರಂಭದ ಸಾಲುಗಳನ್ನು ಓದುತ್ತಿದ್ದಂತೆ ಓದುಗ ಕಥೆಯ ಮುಂದಿನ ಸಾಲುಗಳಿಗೆ ಸಲೀಸಾಗಿ ಪಯಣಿಸುತ್ತಾನೆ. 

        ಒಟ್ಟಾರೆ ‘ಹೊನ್ನ ಕಣಜ’ ವಿಭಿನ್ನ ಕಥೆಗಳ ಓದಿನ ಒಂದು ಅಪೂರ್ವ ಅನುಭವ. ಆರು ದಶಕಗಳ ಅವಧಿಯಲ್ಲಿನ ವಿವಿಧ ಲೇಖಕರ ಕಥೆಗಳನ್ನು ಓದುವುದೇ ಒಂದು ಸಂಭ್ರಮ. ಕಥಾಸಾಹಿತ್ಯವೆನ್ನುವುದು ವಿವಿಧ ಕಾಲಘಟ್ಟದಲ್ಲಿ ಹೊಸ ಹೊಸ ಪ್ರಯೋಗಗಳಿಗೆ ತನ್ನನ್ನು ಒಡ್ಡಿಕೊಳ್ಳುತ್ತಲೇ ಬಂದಿದೆ. ಕಥನ ಕಟ್ಟುವ ಕ್ರಮ, ಶೈಲಿ, ಭಾಷೆಯನ್ನು ದುಡಿಸಿಕೊಳ್ಳುವ ಸೃಜನಶೀಲತೆ, ಕಥಾವಸ್ತುವಿನ ಆಯ್ಕೆ  ಹೀಗೆ ಅನೇಕ ಬದಲಾವಣೆಗಳನ್ನು ನಾವು ಕಥಾಸಾಹಿತ್ಯದಲ್ಲಿ ಕಾಣುತ್ತೇವೆ. ಆ ಎಲ್ಲ ಬದಲಾವಣೆಗಳನ್ನು ಇಡಿಯಾಗಿ ಒಂದೇ ಕೃತಿಯಲ್ಲಿ ಕಟ್ಟಿಕೊಟ್ಟಿರುವುದು ನಿಜವಾಗಿಯೂ ಅದೊಂದು ಸಾರ್ಥಕ ಕೆಲಸ. ಸಾಹಿತ್ಯಾಸಕ್ತರು ಮುಂದಿನ ಎರಡು ಸಂಪುಟಗಳಿಗಾಗಿ ಎದುರು ನೋಡುತ್ತಿರುವುದು ಅದು ಪ್ರಜಾವಾಣಿಯ ಕಥಾಸ್ಪರ್ಧೆಯ ಮಹತ್ವ ಮತ್ತು ಕಾಣ್ಕೆಗೆ ಪುರಾವೆಯಾಗಿದೆ.

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 


No comments:

Post a Comment