Thursday, March 2, 2017

ಉತ್ತರಕಾಂಡ: ಸ್ತ್ರೀ ಸಂವೇದನೆಯ ಅನಾವರಣ




         ಸಾಹಿತ್ಯಕ್ಕೆ ನಮ್ಮ ನಂಬಿಕೆ ಮತ್ತು ಗ್ರಹಿಕೆಯನ್ನು ಮುರಿದು ಹೊಸದನ್ನು ಕಟ್ಟುವ ಭಂಜಕ ಶಕ್ತಿಯಿದೆ. ಹಾಗೆಂದು ಬರಹಗಾರ ತನ್ನ ವೈಯಕ್ತಿಕ ಅನಿಸಿಕೆಯನ್ನು ಓದುಗರ ಮೇಲೆ ಬಲವಂತವಾಗಿ ಹೇರಲು ಹೊರಟು ನಾವು ನಂಬಿದ ಪಾತ್ರಗಳನ್ನು ವಿರೂಪಗೊಳಿಸಿ ಜನರ ಭಾವನೆಗಳಿಗೆ ನೋವಾಗುವಂತೆ ಬರೆಯುವುದು ಸಮರ್ಥನೀಯವಲ್ಲ. ತಮ್ಮ ಉತ್ತರಕಾಂಡ ಕಾದಂಬರಿಯಲ್ಲಿ ಹೊಸ ಪ್ರಯೋಗಕ್ಕೆ (ನಲವತ್ತು ವರ್ಷಗಳ ಹಿಂದೆ ಪರ್ವದಲ್ಲಿ ಇಂಥದ್ದೊಂದು ಪ್ರಯೋಗವನ್ನು ಮಾಡಿದ ನಂತರ) ಮುಂದಾಗಿರುವ ಭೈರಪ್ಪನವರು ಜನರ ನಂಬಿಕೆಗಳನ್ನು ಘಾಸಿಗೊಳಿಸದೆ ರಾಮಾಯಣದ ಪಾತ್ರಗಳನ್ನು ಸಾಮಾನ್ಯ ಮನುಷ್ಯರಂತೆ ಚಿತ್ರಿಸಿರುವರು. ಪುರಾಣ, ಪ್ರವಚನ, ಜನಪದದ ಮೂಲಕ ಅದೆಷ್ಟೋ ಬಾರಿ ಓದಿ ಮತ್ತು ಕೇಳಿ ತಿಳಿದುಕೊಂಡ ಕಥೆ ಇಲ್ಲಿ ಸೀತೆಯ ಸ್ವಗತದಲ್ಲಿ ಬಿಚ್ಚಿಕೊಳ್ಳುತ್ತ ಹೋಗುತ್ತದೆ. ಕಾದಂಬರಿಯ ಕಥೆ ಈಗಾಗಲೇ ನಮಗೆ ಓದಿ ಗೊತ್ತಿರುವುದರಿಂದ ಇಲ್ಲಿ ಕಾದಂಬರಿಯನ್ನು ಓದಿಸಿಕೊಂಡು ಹೋಗುವ ಸಾಮರ್ಥ್ಯ ಇರುವುದು ಭೈರಪ್ಪನವರ ಕಥನ ಕಟ್ಟುವ ಶಕ್ತಿಗೆ ಮತ್ತು ಅವರು ಸೃಷ್ಟಿಸುವ ಭಾವರಸಕ್ಕೆ. ನಾವು ದೇವತೆಗಳೆಂದು ಕಲ್ಪಿಸಿಕೊಂಡ ರಾಮ, ಸೀತೆ ಸಾಮಾನ್ಯರಂತೆ ಸಾಯುವುದು ಕಾದಂಬರಿಯ ಮುಖ್ಯ ಘಟ್ಟಗಳಲ್ಲೊಂದು. ರಾಮನನ್ನು ತ್ಯಜಿಸುವ ಸೀತೆ ಹೆಣ್ಣು ಪರಾವಲಂಬಿಯಲ್ಲ ಎನ್ನುವುದನ್ನು ಧ್ವನಿಸುವುದರ ಜೊತೆಗೆ ಅವಳು ಇಡೀ ಸ್ತ್ರೀ ಸಮುದಾಯದ ಸ್ವಾಭಿಮಾನದ ಸಂಕೇತವಾಗಿ ಕಾಣಿಸುತ್ತಾಳೆ. 

        ಉತ್ತರಕಾಂಡ ಭೈರಪ್ಪನವರ ಇಪ್ಪತ್ತೈದನೆ ಕಾದಂಬರಿ. ಪ್ರಕಟವಾದ ಒಂದು ತಿಂಗಳಲ್ಲೇ ನಾಲ್ಕು ಮುದ್ರಣಗಳನ್ನು ಕಂಡ ಈ ಕಾದಂಬರಿ ಭೈರಪ್ಪನವರ ಜನಪ್ರಿಯತೆಯನ್ನು ಮತ್ತು ಅವರ ಕೃತಿಗಳಿಗಿರುವ  ಅಪಾರ ಓದುಗರ ಸಂಖ್ಯೆಯನ್ನು ಮತ್ತೊಮ್ಮೆ ಸಾಬಿತುಪಡಿಸಿದೆ. ಭೈರಪ್ಪನವರೆ ತಮ್ಮ ಆತ್ಮಕಥೆಯಲ್ಲಿ ಹೇಳಿಕೊಂಡಂತೆ ಕಾದಂಬರಿಯನ್ನು ಬರೆಯುತ್ತಿರುವ ಸಂದರ್ಭ ಅವರ ಮನಸ್ಸನ್ನು ನಿರ್ದೇಶಿಸುವುದು ಅವರು ಬರೆಯುತ್ತಿರುವ ಪಾತ್ರ, ಸನ್ನಿವೇಶ, ಆ ದ್ವಂದ್ವ ತಿಕ್ಕಾಟಗಳ ಒಳಸತ್ಯಗಳು ಮಾತ್ರ. ಓದುಗರಿಗೆ ಯಾವ ಪಾತ್ರ, ಸನ್ನಿವೇಶ ಪರಿಣಾಮ ಬೀರಬಹುದು ಎಂದು ನಾನೆಂದೂ ಯೋಚಿಸುವುದಿಲ್ಲ ಎಂದೆನ್ನುವ ಭೈರಪ್ಪನವರ ಕೃತಿಗಳು ಅಪಾರ ಸಂಖ್ಯೆಯ ಓದುಗರನ್ನು ಹೋಗಿ ಮುಟ್ಟುತ್ತಿರುವುದು ಅದು ಅವರ ಬರವಣಿಗೆಯ ಮಾಂತ್ರಿಕ ಶಕ್ತಿಗೊಂದು ನಿದರ್ಶನ.

          ಉತ್ತರಕಾಂಡ ಕಾದಂಬರಿಯನ್ನು ಭೈರಪ್ಪನವರು ತಮ್ಮ ಸೃಜನಶೀಲ ಸೃಷ್ಟಿ ಎಂದು ಕರೆಯದೆ ಅದನ್ನು ಸೃಜನಶೀಲ ಪ್ರತಿಕ್ರಿಯೆ  ಎನ್ನುತ್ತಾರೆ. ಈ ಕಾದಂಬರಿ ತೀರ ಸಂಶೋಧನಾತ್ಮಕ ಕೃತಿಗಳ ಗುಂಪಿಗೆ ಸೇರದೆ ಇರುವುದರಿಂದ ಕಾದಂಬರಿ ಸರಳವಾಗಿ ಓದಿಸಿಕೊಂಡು ಹೋಗುತ್ತದೆ. ಬೇರೆ ಬೇರೆ ಭಾಷೆಗಳಲ್ಲಿ ರಾಮಾಯಣದ ಎಷ್ಟೋ ರೂಪಗಳು ಹುಟ್ಟಿವೆ, ಸೃಷ್ಟಿಯಾಗಿವೆ. ನಾನು ಅವುಗಳಲ್ಲಿ ಕೆಲವುಗಳ ಬಗೆಗೆ ಸ್ಥೂಲವಾಗಿ ತಿಳಿದಿದ್ದೇನೆಯೇ  ಹೊರತು ಯಾವುದನ್ನೂ ಅಭ್ಯಾಸ ಮಾಡಿಲ್ಲ. ಇದು ವಾಲ್ಮೀಕಿ ರಾಮಾಯಣವನ್ನಲಂಬಿಸಿದ ನನ್ನ ನೇರ ಸೃಜನಶೀಲ ಪ್ರತಿಕ್ರಿಯೆ  ಎಂದು ಭೈರಪ್ಪನವರು ತಮ್ಮ ವಿನಯವನ್ನು ಮೆರೆದಿರುವರು. ರಾಮಾಯಣ ರಾಮನನ್ನೆ ಪ್ರಧಾನವಾಗಿಟ್ಟುಕೊಂಡು ರಚಿತವಾದ ಮಹಾಕಾವ್ಯವಾದರೆ ಭೈರಪ್ಪನವರ ಉತ್ತರಕಾಂಡ ಸೀತೆಯನ್ನು ಪ್ರಧಾನವಾಗಿಟ್ಟುಕೊಂಡು ರಚನೆಯಾದ ಕಾದಂಬರಿ. ಆದ್ದರಿಂದ ಈ ಕೃತಿಯನ್ನು ಸ್ತ್ರೀ ಪ್ರಧಾನ ಕಾದಂಬರಿ ಎಂದೂ ಕರೆಯಬಹುದು. ಆದರೆ ಈ ಮಾತನ್ನು ಭೈರಪ್ಪನವರು ಒಪ್ಪಿಕೊಳ್ಳಲಾರರು. ಸ್ತ್ರೀ ಪ್ರಧಾನ ಕಾದಂಬರಿ ಎಂಬ ವಿಮರ್ಶಾ ಲೋಕದ ನಿಲುವನ್ನೇ ಬುಡಮೇಲು ಮಾಡುವಂತೆ ಭೈರಪ್ಪನವರು ಹೀಗೆ ಹೇಳುತ್ತಾರೆ ‘ಕವಲು ಕಾದಂಬರಿಯಲ್ಲಿ ಆದ ತಪ್ಪನ್ನು ಸರಿ ಮಾಡಲು ಉತ್ತರಕಾಂಡದಲ್ಲಿ ಸ್ತ್ರೀ ಪರ ನಿಲುವು ತೆಗೆದುಕೊಂಡಿದ್ದೇನೆ ಎಂದು ಯೋಚಿಸಿದರೆ ಅದು ಶುದ್ಧ ನಾನ್ಸೆನ್ಸ್. ನನಗೆ ಸ್ತ್ರೀವಾದ ಯಾವುದೇ ಇಸಮ್‍ಗಳಲ್ಲಿ ನಂಬಿಕೆಯಿಲ್ಲ. ಮನುಷ್ಯ ಸ್ವಭಾವದ ಅಂತರಂಗದಲ್ಲಿ ಬರುವ ನೋವು ನಲಿವುಗಳನ್ನು ವರ್ಣನೆ ಮಾಡುವುದು ಅವುಗಳನ್ನು ಓದುಗರ ಅನುಭವಕ್ಕೆ ಬರುವಂತೆ ಬರೆಯುವುದು, ಓದುಗನ ಸಂವೇದನೆಯನ್ನು ಸೂಕ್ಷ್ಮಗೊಳಿಸುವುದು ಇಷ್ಟೇ ಸಾಹಿತ್ಯದ ಉದ್ದೇಶ’. ಹೀಗೆ ಭೈರಪ್ಪನವರು ಹೇಳಿದ ಮಾತ್ರಕ್ಕೆ ಉತ್ತರಕಾಂಡ ಸ್ತ್ರೀ ಪ್ರಧಾನ ಕಾದಂಬರಿ ಎನ್ನುವ ನಿಲುವಿನಿಂದ ಓದುಗ ಬಳಗ ಹಿಂದೆ ಸರಿಯಲಾರದು. ಏಕೆಂದರೆ ಇಡೀ ಕಾದಂಬರಿ ಸೀತೆಯ ಸ್ವಗತದಲ್ಲೇ ತೆರೆದುಕೊಳ್ಳುವುದು, ಸೀತೆ ರಾಮನನ್ನು ತ್ಯಜಿಸಿ ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳುವುದು, ರಾಮನ ಜೊತೆಗಿದ್ದೂ ಸೀತೆ ಸಂದೇಹಕ್ಕೆ ಒಳಗಾಗಿ ರಾಮನಿಂದ ಮಾನಸಿಕವಾಗಿ ದೂರಾಗುವುದು, ಊರ್ಮಿಳೆಯ ಪಾತ್ರಕ್ಕೆ ಹೆಚ್ಚಿನ ಅವಕಾಶ ನೀಡಿರುವುದು ಈ ಎಲ್ಲ ಕಾರಣಗಳು ಉತ್ತರಕಾಂಡ ಕಾದಂಬರಿ ಸ್ತ್ರೀ ಪ್ರಧಾನ ಕೃತಿ ಎನ್ನುವುದಕ್ಕೆ ಕೆಲವು ಪುರಾವೆಗಳು. 

      ರಾಮನ ಹುಟ್ಟಿನಿಂದ ಅವನ ಸಾವಿನವರೆಗೆ ಕಾದಂಬರಿ ಬೆಳೆದಿದೆ. ಹಾಗೆಂದು ತೀರ ಆಳವಾದ ಕೃತಿ ಇದಲ್ಲ. ಸೀತೆಯ ಕಣ್ಣಳತೆಯಲ್ಲೇ ಇಡೀ ಕಥೆ ತೆರೆದುಕೊಳ್ಳುವುದರಿಂದ ಲೇಖಕರಿಗೆ ರಾಮಾಯಣದ ಇಡೀ ಕಥೆಯನ್ನು ಸಂಕ್ಷಿಪ್ತಗೊಳಿಸಲು ಸುಲಭವಾಗಿದೆ. ಸಾಮಾನ್ಯವಾಗಿ ನಾವು ಓದಿದ ರಾಮಾಯಣದ ಕಥೆಗಳಲ್ಲಿ ಓದುಗನ ಊಹೆಗೂ ಮೀರಿದ ಸಂಗತಿಗಳು ಘಟಿಸುತ್ತವೆ. ರಾಮ ವಿಷ್ಣುವಿನ ಅವತಾರ, ರಾಕ್ಷಸರ ಸಂಹಾರಕ್ಕಾಗಿ ಜನಿಸಿದ ಅವತಾರ ಪುರುಷ, ಸಮುದ್ರದೊಳಗೆ ಕಟ್ಟುವ ಸೇತುವೆ, ವನವಾಸದ ದಿನಗಳ ಸುಂದರಾನುಭೂತಿ, ಹತ್ತು ತಲೆಗಳ ರಾವಣ, ಲವಕುಶರೊಂದಿಗಿನ ಕಾಳಗ, ಭೂಮಾತೆಯ ಒಡಲು ಸೇರುವ ಸೀತೆ ಹೀಗೆ ರಾಮಾಯಣದ ಕಥೆಗಳಲ್ಲಿ ಊಹಾತೀತವಾದ ಕಲ್ಪನೆಗಳಿವೆ. ಆದರೆ ಉತ್ತರಕಾಂಡ ಕಾದಂಬರಿ ನಮ್ಮೆಲ್ಲ ಕಲ್ಪನೆಗಳನ್ನು, ನಂಬಿಕೆಗಳನ್ನು ಬುಡಮೇಲು ಮಾಡುತ್ತದೆ. ಇಲ್ಲಿ ರಾಮಾಯಣದ ಪ್ರತಿಯೊಂದು ಪಾತ್ರ ರಾಮ ಮತ್ತು ಸೀತೆಯನ್ನೊಳಗೊಂಡಂತೆ ತೀರ ಸಾಮಾನ್ಯ ಮನುಷ್ಯರಂತೆ ರೂಪುಗೊಂಡಿರುವರು. ಅವರಿಗೂ ಮನುಷ್ಯ ಸಹಜವಾದ ಕೋಪ, ಸಿಟ್ಟು, ತಾಮಸದ ಗುಣಗಳಿವೆ. ಇಲ್ಲಿನ ಪಾತ್ರಗಳು ಸಹ ನಮ್ಮಂತೆಯೇ  ಬೈಗಳನ್ನು ಬೈಯಬಲ್ಲರು. ಹಸಿವು, ನಿದ್ರೆ, ಮೈಥುನದಂಥ ಮಾನವ ಸಹಜ ಬಯಕೆಗಳು ರಾಮ, ಸೀತೆ, ಲಕ್ಷ್ಮಣರನ್ನೂ ಕಾಡುತ್ತವೆ. ಹದಿನಾಲ್ಕು ವರ್ಷಗಳ ವನವಾಸದ ಸಂದರ್ಭ ಅವರು ಎದುರಿಸುವ ಸಂಕಷ್ಟಗಳು, ಹೊಟ್ಟೆ ಹಸಿವನ್ನು ನೀಗಿಸಿಕೊಳ್ಳಲು ಪಡುವ ಪಡಿಪಾಟಲು, ಲಕ್ಷ್ಮಣನ ರೈತಾಪಿ ಬದುಕು, ಬರಿಗಾಲಿನಲ್ಲಿ ನಡೆಯುವಾಗ ಕಲ್ಲು ಮುಳ್ಳುಗಳಿಂದಾಗುವ ಗಾಯ ಹೀಗೆ ನಮ್ಮ ಅನುಭವಕ್ಕೆ ದಕ್ಕದ ಈ ಎಲ್ಲ ಸಂಗತಿಗಳನ್ನು ಭೈರಪ್ಪನವರು ಉತ್ತರಕಾಂಡದಲ್ಲಿ ಉಲ್ಲೇಖಿಸುತ್ತಾರೆ. ‘ಲಕ್ಷ್ಮಣನು ಕಾಡಿನಲ್ಲಿ ದೊರೆಯುತ್ತಿದ್ದ ಧಾನ್ಯಗಳನ್ನು ಹುಡುಕಿ ಬಿಡಿಸಿ ತಂದು ಕಲ್ಲು ಚಪ್ಪಡಿಯ ಮೇಲೆ ಅರೆದು ಹಿಟ್ಟು ಮಾಡಿ ಅವನೇ ದಾರಿಯುದ್ದಕ್ಕೂ ಹೊತ್ತು ತರುತ್ತಿದ್ದ ಪಾತ್ರೆಯಲ್ಲಿ ಬೇಯಿಸಿ ಕಾಡಿನಲ್ಲಿ ದೊರೆಯುತ್ತಿದ್ದ ಮೆಣಸಿನ ಕಾಳುಗಳನ್ನು ಅರೆದು ಬೆರೆಸಿ ನಿಂಬೆ ಹುಣಸೆಗಳಂಥ ಹುಳಿ ಹಣ್ಣುಗಳ ರಸವನ್ನು ಹಿಂಡಿ ತಿನ್ನಲು ಅರ್ಹವಾಗುವಂತೆ ಮಾಡಲು ಆರಂಭಿಸಿದ ನಂತರ ಹೊಟ್ಟೆ ತುಂಬತೊಡಗಿತು. ಕೈಕಾಲುಗಳಲ್ಲಿ ಶಕ್ತಿ ಕೂಡಿಕೊಂಡಿತು’ ಸೀತೆಯ ಈ ಸ್ವಗತದ ಸಂಭಾಷಣೆ ಇಡೀ ರಾಮಾಯಣದ ಕಥೆಯನ್ನು ಭೈರಪ್ಪನವರು ಹೇಗೆ ಸರಳವಾಗಿ ಚಿತ್ರಿಸಿರುವರು ಎನ್ನುವುದಕ್ಕೆ ದೃಷ್ಟಾಂತವಾಗಿದೆ. 

     ಗೌತಮ ಮಹರ್ಷಿಯ ಶಾಪದಿಂದ ಕಲ್ಲಾದ ಅಹಲ್ಯೆ ರಾಮನ ಪಾದ ಸ್ಪರ್ಷದಿಂದ ಮತ್ತೆ ಮನುಷ್ಯ ರೂಪವನ್ನು ಪಡೆಯುತ್ತಾಳೆನ್ನುವ ನಂಬಿಕೆ ಸಹಜವೆಂಬಂತೆ ಬೆಳೆದುಬಂದಿದೆ. ಆದರೆ ಭೈರಪ್ಪನವರ ಉತ್ತರಕಾಂಡದಲ್ಲಿ ಅಹಲ್ಯೆ ಕಲ್ಲಾಗದೆ ಮಾಡಿದ ತಪ್ಪಿಗೆ ಪ್ರಾಯಶ್ಚಿತವನ್ನನುಭವಿಸುತ್ತಾಳೆ. ಯಾರಿಗೂ ಮುಖ ತೋರಿಸದೆ ಏಕಾಂತಕ್ಕೆ ಸರಿದು ಹೋಗುವ ಅಹಲ್ಯೆ ಆಹಾರವನ್ನು ತ್ಯಜಿಸಿ ಕೃಶಳಾಗುತ್ತಾಳೆ. ಅಹಲ್ಯೆಯನ್ನು ನೋಡಿದ ಕ್ಷಣ ರಾಮನಿಗೆ ಅವಳು ಕೆದರಿದ ಬಿಳಿ ಕೂದಲಿನ, ಅನಾರೋಗ್ಯದಿಂದ ಅರಿಸಿನ ಬಣ್ಣಕ್ಕೆ ತಿರುಗಿದ ಮೈಚರ್ಮದ, ಒಣಗಿದ ಕಡ್ಡಿಯಂಥ ಕೈಕಾಲುಗಳ, ಗುಳಿಬಿದ್ದು ಜೀವ ಕಳೆದುಕೊಂಡ ಪಾಪೆಯ ಕಣ್ಣುಗಳ ಹೆಣ್ಣು ಪ್ರೇತದಂತೆ ಗೋಚರಿಸುತ್ತಾಳೆ. ಹೀಗೆ ಇಡೀ ರಾಮಾಯಣದ ಕಥೆಯನ್ನು ಒಂದು ಕಲ್ಪನೆಯ ಚೌಕಟ್ಟಿನಿಂದ ಹೊರತಂದು ಭೈರಪ್ಪನವರು ಅದನ್ನೊಂದು ಸಾಮಾನ್ಯರ ಕಥೆಯಂತೆ, ನಮ್ಮ ಬದುಕಿನ ಭಾಗವೆನ್ನುವಂತೆ ಕಟ್ಟಿಕೊಡುತ್ತಾರೆ. 

     ಸೀತೆಯನ್ನು ಹುಡುಕುತ್ತ ರಾಮ ಲಕ್ಷ್ಮಣ ಕಿಷ್ಕಿಂಧೆಗೆ ಬರುವುದು ರಾಮಾಯಣದ ಮಹತ್ವದ ಘಟನೆಗಳಲ್ಲೊಂದು. ಕಿಷ್ಕಿಂಧೆಯ ಸುಗ್ರೀವ, ಹನುಮಂತ, ಜಾಂಬವಂತ ಈ ಎಲ್ಲ ಪಾತ್ರಗಳ ಕುರಿತು ಓದುಗರಿಗೆ ನಿರ್ಧಿಷ್ಟ ಕಲ್ಪನೆಯಿದೆ. ಇವರೆಲ್ಲ ಅತಿಮಾನುಷ ಜೀವಿಗಳೆಂಬ ಭಾವನೆ ನಮ್ಮದು. ಉತ್ತರಕಾಂಡದಲ್ಲಿ ಸೀತೆಯನ್ನು ಹುಡುಕಿಕೊಂಡು ಅಶೋಕವನವನ್ನು ಪ್ರವೇಶಿಸುವ ಹನುಮಂತ ಒಬ್ಬ ವಯೋವೃದ್ಧ. ಒಂದೇ ಜಿಗಿತಕ್ಕೆ ಸಾಗರವನ್ನು ದಾಟುವ ಶಕ್ತಿ ಈ ಹನುಮಂತನಿಗಿಲ್ಲ. ‘ಈ ಶಖೆ ಕಾಲದ ಮಧ್ಯಾಹ್ನದಲ್ಲಿ ಇಲ್ಲಿಯ ಜನಗಳೆಲ್ಲ ನಿದ್ದೆ ಮಾಡ್ತಿದ್ದಾರೆ. ಬೇಗ ಹೊರಟು ಬಿಡಿ. ಗುರುತು ಮುಚ್ಚಲು ನನ್ನ ಉತ್ತರೀಯ ಕೊಡ್ತೀನಿ. ಹೊದೆದು ನನ್ನ ಹಿಂದೆ ಸರಸರನೆ ನಡೆಯಿರಿ. ಜನಸಂಚಾರವಿಲ್ಲದ ಕಡೆಯಲ್ಲಿ ನಿಮ್ಮನ್ನ ನನ್ನ ಹೆಗಲ ಮೇಲೆ ಕೂರಿಸಿಕೊಂಡು ಧಡ ಧಡನೆ ಓಡ್ತೀನಿ. ಸಮುದ್ರ ದಾಟಿಸುವ ಉಪಾಯವೂ ನನಗೆ ಗೊತ್ತಿದೆ’ ಎಂದು ನುಡಿಯುವಾಗ ಹನುಮಂತ ನಮಗೆ ಅವನೊಬ್ಬ ಸಾಧಾರಣ ಮನುಷ್ಯನಂತೆ ಕಾಣಿಸುತ್ತಾನೆ. ಕಾದಂಬರಿಯಲ್ಲಿ ಹನುಮಂತ ಲಂಕೆಯನ್ನು ಸುಟ್ಟ ಉಲ್ಲೇಖವಿಲ್ಲ. 

    ಸಾಮಾನ್ಯ ಮನುಷ್ಯರಲ್ಲಿ ಕಾಣಿಸಿಕೊಳ್ಳುವ ಮನೋದೌರ್ಬಲ್ಯ ರಾಮನಲ್ಲೂ ಕಾಣಸಿಗುತ್ತದೆ. ರಾವಣನ ಅಧೀನದಲ್ಲಿದ್ದ ಸೀತೆಯನ್ನು ಸಂದೇಹದಿಂದ ನೋಡುವ ರಾಮ ಇಲ್ಲಿ ಸಾಮಾನ್ಯ ನರರಿಗಿಂತ ಭಿನ್ನವಾಗಿ ಕಾಣಿಸುವುದಿಲ್ಲ. ಲಂಕೆಯ ಯುದ್ಧದ ನಂತರ ರಾಮ ಸೀತೆ ಒಂದಾದರೂ ಅವರ ನಡುವೆ ಬಹುದೊಡ್ಡ ಕಂದಕವೊಂದು ನಿರ್ಮಾಣವಾಗುತ್ತದೆ. ಪ್ರಜೆಗಳ ಮಾತಿಗೆ ಹೆದರಿ ಸೀತೆಯನ್ನು ತ್ಯಜಿಸುವ ರಾಮ ಮತ್ತೆ ಒಂದಾಗುವ ಆಸೆ ವ್ಯಕ್ತಪಡಿಸಿದಾಗ ಸೀತೆಯೇ  ರಾಮನನ್ನು ತ್ಯಜಿಸಿ ಮತ್ತೆ ಕಾಡಿಗೆ ಮರಳುವುದು ಕಾದಂಬರಿಯ ಮುಖ್ಯ ಘಟ್ಟ. ಸೀತೆಯ ಅಗಲಿಕೆಯಿಂದ ನೊಂದ ರಾಮ ನದಿಯಲ್ಲಿ ಮುಳುಗಿ ಸಾಯುತ್ತಾನೆ. ರಾಮನ ಸಾವಿನ ಸುದ್ದಿ ಕೇಳಿದ ಸೀತೆ ತನ್ನ ಕೃಷಿಭೂಮಿಯಲ್ಲಿ ನೇಗಿಲು ಗೆರೆಯ ಮಧ್ಯದಲ್ಲಿ ಮಲಗಿ ಪ್ರಾಣ ಬಿಡುತ್ತಾಳೆ.

    ಉತ್ತರಕಾಂಡ ಸ್ತ್ರೀ ಪ್ರಧಾನ ಕಾದಂಬರಿ ಮತ್ತು ಇಲ್ಲಿ ಲೇಖಕರು ಸ್ತ್ರೀಪರ ನಿಲುವು ತೆಗೆದುಕೊಂಡಿರುವರು ಎನ್ನುವುದಕ್ಕೆ ಕಾದಂಬರಿಯಲ್ಲಿನ ಅನೇಕ ಸಂಭಾಷಣೆಗಳು ಪುರಾವೆ ಒದಗಿಸುತ್ತವೆ. ಉದಾಹರಣೆಯಾಗಿ ಈ ಕೆಳಗಿನ ಸಂಭಾಷಣೆಗಳನ್ನು ಗಮನಿಸಬಹುದು.

● ಗಂಡನಿಂದ ಅನ್ಯಾಯವಾಗಿದೆ ಅಂತ ನಾನು ಮಕ್ಕಳಿಗೆ ಅನ್ಯಾಯ ಮಾಡುವುದು ಯಾವ ನ್ಯಾಯ?
● ನಾನು ಸ್ನಾನ ಮಾಡಿ ಶುಭ್ರಳಾಗಿ ಅಲಂಕರಿಸಿಕೊಂಡು ಹೋಗಿ ಎದುರಿಗೆ ನಿಂತಾಗ ಪರಪುರುಷನ ಅದರಲ್ಲೂ ರಾವಣನಂಥ ಲಂಪಟನ ವಶದಲ್ಲಿ ವರ್ಷ ಪರ್ಯಂತ ಇದ್ದ ನಿನ್ನನ್ನು ಸ್ವೀಕರಿಸುವುದು ನಮ್ಮ ವಂಶಕ್ಕೆ ಶೋಭಿಸುವುದಿಲ್ಲ. ನಾನು ನಿನ್ನನ್ನು ಸ್ವೀಕರಿಸುವುದಿಲ್ಲ ಎಲ್ಲಿಗೆ ಬೇಕಾದರೂ ಹೋಗು ಎಂಬ ಕಟುಕ ಮಾತುಗಳನ್ನು ಯಾವ ಪರಿಗಣನೆಯೂ ಇಲ್ಲದೆ ಆಡಿಬಿಟ್ಟನಲ್ಲ. 
● ಕೋಪ ಬರುತ್ತೆ. ನನ್ನೆಲ್ಲ ಸಂಕಟಗಳಿಗೆ ನನ್ನ ಮಕ್ಕಳ ಅನಾಥ ಸ್ಥಿತಿಗೆ ಕಾರಣನಾದವನ ಮೇಲೆ ಬೇರೆ ಯಾವ ಭಾವನೆ ಸಾಧ್ಯ? ಶಾಪ ಹಾಕುವಷ್ಟು ಕೋಪ.
● ನಾನು ಈ ಆಶ್ರಮದಲ್ಲೇ ಅಥವಾ ಅದರ ಹತ್ತಿರವೇ ಎಲ್ಲಾದರೂ ಇರಬೇಕು. ಹತ್ತಿರವೇ ಅಂದರೆ ಅವನ ಆಜ್ಞೆಯ ಪರಿಧಿಯಲ್ಲೇ ಇರಬೇಕು ಅಂತಲ್ಲವೇ ಅರ್ಥ. ಅವನ ಆಜ್ಞೆಯನ್ನು ಪಾಲಿಸುವ ದಾಸ್ಯ ಯಾಕೆ? 
● ಹೆಣ್ಣಿನ ಒಂಟಿತನದ ಕಾರಣವನ್ನು ನಿನ್ನಂಥ ಸಂವೇದನಾರಹಿತನಿಗೆ ಹೇಗೆ ಅರ್ಥವಾಗಬೇಕು?

    ಒಟ್ಟಾರೆ ಈ ಕಾದಂಬರಿ ರಚನೆಯ ಮೂಲಕ ಭೈರಪ್ಪನವರು ಹೇಳ ಹೊರಟಿರುವುದೇನು ಎನ್ನುವ ಪ್ರಶ್ನೆ ಓದುಗರನ್ನು ಸಹಜವಾಗಿಯೇ  ಕಾಡುತ್ತದೆ. ಪುರಾಣ ಪುಣ್ಯಕಥೆಗಳಲ್ಲಿ ವ್ಯಕ್ತಿ ಚಿತ್ರಣವು ಅಸಹಜವಾಗಿಯೂ ಮತ್ತು ಊಹಾತೀತವಾಗಿಯೂ ಚಿತ್ರಣಗೊಂಡಿದೆ. ಪುರಾಣಗಳಲ್ಲಿ ಪಾತ್ರಗಳನ್ನು ಅವತಾರ ಪುರುಷರೆಂದು ಬಿಂಬಿಸಲಾಗಿದೆ. ಆದರೆ ಇಲ್ಲಿ ಭೈರಪ್ಪನವರು ಆ ಎಲ್ಲ ಕಲ್ಪನೆಗಳನ್ನು ಒಡೆದು ರಾಮಾಯಣದ ಪಾತ್ರಗಳನ್ನು ಸಹಜತೆಯ ನೆಲೆಗೆ ಕರೆತರುತ್ತಾರೆ. ಇಲ್ಲಿ ನಾರಮಡಿ ಉಟ್ಟ, ಜಿಡ್ಡುಗಟ್ಟಿದ ಕೂದಲಿನ ಗಡ್ಡ ಬಿಟ್ಟ ರಾಮ ಒಬ್ಬ ಶ್ರೀಸಾಮಾನ್ಯನಂತೆ ನಮ್ಮ ಕಣ್ಮುಂದೆ ಬಂದು ನಿಲ್ಲುತ್ತಾನೆ. ಶ್ರೀಸಾಮಾನ್ಯನಾಗಿಯೂ ರಾಮ ಏಕಪತ್ನಿ ವ್ರತಸ್ಥ, ಸತ್ಯಸಂಧ, ಕರುಣಾಮಯಿ, ವಚನ ಪಾಲಕನಾಗಿರುವನು. ಒಟ್ಟಾರೆ ಸಾಮಾನ್ಯನಾಗಿಯೂ ಮನುಷ್ಯ ಒಂದು ನೈತಿಕ ಚೌಕಟ್ಟಿನಲ್ಲಿ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯ ಎಂದು ನಿರೂಪಿಸುವುದೇ ಕಾದಂಬರಿಯ ಮತ್ತು ಲೇಖಕರ ಆಶಯವಾಗಿದೆ. ಜೊತೆಗೆ ತಮ್ಮ ಬಗೆಗಿನ ಎಡಪಂಥಿಯರ ಪೂರ್ವಾಗ್ರಹಪೀಡಿತ ವಿಮರ್ಶೆಯನ್ನು ಮತ್ತು ಬಲಪಂಥಿಯರ ಅತಿಯಾದ ಅಭಿಮಾನವನ್ನು ಭೈರಪ್ಪನವರು ಏಕಕಾಲಕ್ಕೆ ಹೊಡೆದುರುಳಿಸಿರುವರು ಎನ್ನುವ ಅಭಿಪ್ರಾಯ ನನ್ನದು. ಭೈರಪ್ಪನವರು ತಮ್ಮ ಕಾದಂಬರಿಗಳ ಪಾತ್ರಗಳನ್ನು ವಿರೂಪಗೊಳಿಸುವರು ಎನ್ನುವುದು ಅವರ ಮೇಲಿರುವ ಎಡಪಂಥಿಯ ವಿಮರ್ಶಕರ ಸಹಜ ಆಪಾದನೆಯಾಗಿದೆ. ಆದರೆ ಉತ್ತರಕಾಂಡದಲ್ಲಿ ಭೈರಪ್ಪನವರು ಯಾವ ಪಾತ್ರವನ್ನೂ ವಿರೂಪಗೊಳಿಸದೆ ಸಹಜವೆಂಬಂತೆ ಚಿತ್ರಿಸಿರುವುದು ಓದುಗನಿಗೆ ಆಪ್ತವಾಗುತ್ತದೆ. ರಾವಣನ ಪಾತ್ರವನ್ನು ಚಿತ್ರಿಸುವಾಗಲೂ ಅವರು ಯಾವ ಮನೋವಿಕಾರಕ್ಕೆ ಒಳಗಾಗದೆ ಇರುವುದು ಕಾದಂಬರಿಯ ಘನತೆಯನ್ನು ಹೆಚ್ಚಿಸಿದೆ. ಆದರೂ ರಾಮಾಯಣ ಹಿಂದುಗಳ ಪವಿತ್ರ ಪುರಾಣವಾಗಿರುವುದರಿಂದ ಭೈರಪ್ಪನವರು ಪಾತ್ರಗಳನ್ನು ವಿರೂಪಗೊಳಿಸುವ ಕೆಲಸಕ್ಕೆ ಕೈ ಹಾಕಿಲ್ಲವೆಂದು ಎಡಪಂಥಿಯ ವಿಮರ್ಶಕರು ಆರೋಪಿಸುವ ಸಾಧ್ಯತೆಗಳು ನಿಚ್ಚಳವಾಗಿವೆ. ಇದೇ ಸಂದರ್ಭ ತಮ್ಮ ಪವಿತ್ರ ಪುರಾಣದ ಅವತಾರ ಪುರುಷ ರಾಮನನ್ನು ಭೈರಪ್ಪನವರು ಸಾಮಾನ್ಯ ಮನುಷ್ಯನಂತೆ ಚಿತ್ರಿಸಿರುವರೆಂದು ಅವರ ಅಭಿಮಾನಿಗಳು ಬೇಸರ ಮಾಡಿಕೊಳ್ಳುವ ಮತ್ತು ಲೇಖಕರ ಮೇಲಿನ ಅಭಿಮಾನ ಒಂದಿಷ್ಟು ಕ್ಷೀಣಿಸುವ ಸಾಧ್ಯತೆಗಳೂ ಇವೆ. ಆದರೆ ಓದುಗರ ಅತಿಯಾದ ಅಭಿಮಾನ ಮತ್ತು ವಿಮರ್ಶಕರ ಕಟುಟೀಕೆಗಳು ಬರಹಗಾರನ ಸೃಜನಶೀಲತೆಯನ್ನು ಮುಕ್ಕಾಗಿಸಬಾರದು. ಭೈರಪ್ಪನವರು ಹೇಳುವ ‘ಕಾದಂಬರಿಯನ್ನು ಬರೆಯುತ್ತಿರುವ ಸಂದರ್ಭ ನನ್ನ ಮನಸ್ಸನ್ನು ನಿರ್ದೇಶಿಸುವುದು ಕಾದಂಬರಿಯಲ್ಲಿನ ಪಾತ್ರ, ಸನ್ನಿವೇಶ, ಆ ದ್ವಂದ್ವ ಮತ್ತು ತಿಕ್ಕಾಟಗಳ ಒಳಸತ್ಯಗಳು ಮಾತ್ರ. ಓದುಗರನ್ನು ದೃಷ್ಟಿಯಲ್ಲಿಟ್ಟುಕೊಂಡು ನಾನು ಕಾದಂಬರಿ ರಚನೆಗೆ ಕೈ ಹಾಕುವುದಿಲ್ಲ’ ಎನ್ನುವ ಮಾತನ್ನು ನಮ್ಮ ವಿಮರ್ಶಕರು ಮತ್ತು ಓದುಗರು ಅರ್ಥಮಾಡಿಕೊಳ್ಳಬೇಕಿದೆ.

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 


No comments:

Post a Comment