‘ನಾವು ಪ್ರೇಕ್ಷಕರನ್ನು ಬೆಳೆಸುತ್ತಿಲ್ಲ ಬದಲಾಗಿ ಸಿನಿಮಾಗಳನ್ನು ಬೆಳೆಸುತ್ತಿದ್ದೇವೆ’ ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕ ಸತ್ಯಜೀತ್ ರೇ ಬದಲಾದ ಇಂದಿನ ಸಿನಿಮಾ ಮಾಧ್ಯಮವನ್ನು ಕುರಿತು ಹೇಳಿದ ಮಾತಿದು. ಪಥೇರ್ ಪಾಂಚಾಲಿಯಂಥ ವಿಶಿಷ್ಠ ಸಿನಿಮಾವನ್ನು ಭಾರತೀಯ ಸಿನಿಮಾ ಲೋಕಕ್ಕೆ ಕೊಡುಗೆಯಾಗಿ ನೀಡಿದ ಮತ್ತು ಸಿನಿಮಾವನ್ನು ನಿರ್ದೇಶಕನ ಸೃಜನಶೀಲ ಮಾಧ್ಯಮವೆಂದು ಬಲವಾಗಿ ನಂಬಿದ್ದ ಸತ್ಯಜೀತ್ ರೇ ಅವರ ಈ ಮಾತಿನಲ್ಲಿ ಸತ್ಯಾಂಶವಿದೆ. ಸಿನಿಮಾ ಅದು ಎಂದಿಗೂ ನಿರ್ದೇಶಕನ ಮಾಧ್ಯಮವಾಗಿಯೇ ಉಳಿದು ಬೆಳೆದಲ್ಲಿ ನಾವು ಈ ಮಾಧ್ಯಮದಿಂದ ಸೃಜನಶೀಲ ಸೃಷ್ಟಿಯನ್ನು ನಿರೀಕ್ಷಿಸಬಹುದು. ಒಂದು ಕಾಲದಲ್ಲಿ ಸಿನಿಮಾ ನೂರಕ್ಕೆ ನೂರರಷ್ಟು ನಿರ್ದೇಶಕನ ಮಾಧ್ಯಮ ಎನ್ನುವ ಖ್ಯಾತಿಯೊಂದಿಗೆ ಉತ್ತುಂಗದಲ್ಲಿತ್ತು. ನಿರ್ದೇಶಕ ತನ್ನ ಪ್ರತಿಭೆ ಮತ್ತು ಕೌಶಲ್ಯವನ್ನು ಎರಕಹೊಯ್ದು ರೂಪಿಸುತ್ತಿದ್ದ ಸಿನಿಮಾಗಳು ಸರ್ವಕಾಲಿಕ ಶ್ರೇಷ್ಠ ಎನ್ನುವ ಮೆಚ್ಚುಗೆಗೆ ಪಾತ್ರವಾಗಿವೆ. ಕನ್ನಡ ಸಿನಿಮಾ ರಂಗದಲ್ಲಿ ಬಿ.ಆರ್.ಪಂತಲು, ಪುಟ್ಟಣ್ಣ ಕಣಗಾಲ್, ಜಿ.ವಿ.ಅಯ್ಯರ್ ಅವರಂಥ ಮಹಾನ್ ನಿರ್ದೇಶಕರು ಪ್ರತಿಭಾನ್ವಿತ ಕಲಾವಿದರನ್ನು ತರಬೇತಿಗೊಳಿಸಿ ಕನ್ನಡ ಚಿತ್ರರಂಗಕ್ಕೆ ಕೊಡುಗೆಯಾಗಿ ನೀಡಿದ ಅನೇಕ ಉದಾಹರಣೆಗಳಿವೆ. ಈ ನಿರ್ದೇಶಕರು ಕಥೆಗಾಗಿ ಸಿನಿಮಾ ಮಾಡಿದರೆ ವಿನ: ನಟ ನಟಿಯರಿಗಾಗಿ ಸಿನಿಮಾ ಮಾಡಿದ ಉದಾಹರಣೆಗಳಿಲ್ಲ. ಹೀಗಾಗಿ ಕನ್ನಡ ಸಿನಿಮಾಗಳ ಪ್ರೇಕ್ಷಕರಲ್ಲಿ ಸಿನಿಮಾ ಮಾಧ್ಯಮದ ಕುರಿತು ಒಂದು ಸದಭಿರುಚಿಯನ್ನು ಬೆಳೆಸಿದ ಶ್ರೇಯಸ್ಸು ಈ ನಿರ್ದೇಶಕರಿಗೆ ಸಲ್ಲುತ್ತದೆ. ಒಂದರ್ಥದಲ್ಲಿ ಸಿನಿಮಾಗಳ ವೀಕ್ಷಣೆಗಾಗಿ ಸದಭಿರುಚಿಯ ಪ್ರೇಕ್ಷಕರ ಒಂದು ಸಮೂಹವನ್ನೇ ಈ ನಿರ್ದೇಶಕರು ಕನ್ನಡ ಚಿತ್ರರಂಗದಲ್ಲಿ ಬೆಳೆಸಿ ಸಿನಿಮಾ ಮಾಧ್ಯಮಕ್ಕೊಂದು ಗಟ್ಟಿ ತಳಪಾಯವನ್ನು ಒದಗಿಸಿದರು. ಪುಟ್ಟಣ್ಣ ಕಣಗಾಲ್ ಅವರಂಥ ನಿರ್ದೇಶಕ ತನ್ನ ಪ್ರತಿ ಸಿನಿಮಾದಲ್ಲಿ ಹೊಸ ಹೊಸ ಕಲಾವಿದರನ್ನು ಪರಿಚಯಿಸಿ ಸಿನಿಮಾ ಎನ್ನುವುದು ಗೆದ್ದೆತ್ತಿನ ಬಾಲ ಹಿಡಿಯುವ ಮಾಧ್ಯಮವಲ್ಲ ಅದು ಏನಿದ್ದರೂ ನಿರ್ದೇಶಕನ ಮಾಧ್ಯಮ ಎನ್ನುವುದನ್ನು ಸಾಬಿತುಪಡಿಸಿ ತೋರಿಸಿದರು. ಇವತ್ತಿಗೂ ಕನ್ನಡ ಸಿನಿಮಾ ಮಾಧ್ಯಮ ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ಬೆಳೆಯಲು ಸಾಧ್ಯವಾಗಿರುವುದು ಇಂಥ ಸೃಜನಶೀಲ ನಿರ್ದೇಶಕರು ಹಾಕಿಕೊಟ್ಟ ಗಟ್ಟಿ ತಳಪಾಯವೇ ಎನ್ನುವ ಮಾತಿನಲ್ಲಿ ಯಾವ ಉತ್ಪ್ರೇಕ್ಷವೂ ಇಲ್ಲ.
ಆದರೆ ಕಾಲ ಬದಲಾದಂತೆ ನಮ್ಮ ಈ ಕನ್ನಡ ಸಿನಿಮಾ ಮಾಧ್ಯಮ ಅನೇಕ ಹೊಸ ಸ್ಥಿತ್ಯಂತರಗಳಿಗೆ ತನ್ನನ್ನು ತಾನು ತೆರೆದುಕೊಂಡು ಹೊಸ ಹೊಸ ಬದಲಾವಣೆಗಳೊಂದಿಗೆ ನಿರ್ದೇಶಕನಿಂದ ಬಿಡಿಸಿಕೊಂಡು ಅದು ನಟ ನಟಿಯರ ಮಾಧ್ಯಮವಾಗಿ ರೂಪಾಂತರಗೊಂಡಿತು. ನಿರ್ದೇಶಕ ನೇಪಥ್ಯಕ್ಕೆ ಸರಿದು ಸಿನಿಮಾದ ನಾಯಕಿ ನಾಯಕಿಯರು ಪ್ರವರ್ಧಮಾನಕ್ಕೆ ಬರತೊಡಗಿದರು. ನಿರ್ಮಾಪಕರು ಮೊದಲು ನಾಯಕ ನಾಯಕಿಯರ ಕಾಲಶೀಟ್ ಪಡೆದು ನಂತರ ನಿರ್ದೇಶಕರನ್ನು ಹಾಗೂ ಉಳಿದ ತಂತ್ರಜ್ಞರನ್ನು ಆಯ್ಕೆ ಮಾಡುವ ಪರಿಪಾಠ ಆರಂಭವಾಯಿತು. ನಾಯಕ ನಟನ ಇಮೇಜಿಗೆ ಸರಿಹೊಂದುವ ಕಥೆ ಹೆಣೆಯುವ, ಸಂಭಾಷಣೆ ಮತ್ತು ಹಾಡುಗಳನ್ನು ಬರೆಯುವ, ನಾಯಕಿ ನಟಿಯನ್ನು ಹಾಗೂ ಉಳಿದ ಪೋಷಕ ಪಾತ್ರಗಳನ್ನು ಆಯ್ಕೆ ಮಾಡುವ ಪರಿಸ್ಥಿತಿ ನಿರ್ಮಾಣಗೊಂಡಿತು. ಇನ್ನು ಜನಪ್ರಿಯ ನಾಯಕ ನಟನಿದ್ದಲ್ಲಿ ನಿರ್ದೇಶಕನ ಕೆಲಸ action-cut ಗಳಿಗಷ್ಟೇ ಸೀಮಿತವಾಗತೊಡಗಿತು. ಕನ್ನಡ ಭಾಷೆಯೇ ಬರದ ನಾಯಕಿಯರನ್ನು ಬೇರೆ ಬಾಷೆಗಳಿಂದ ಆಮದು ಮಾಡಿಕೊಂಡು ಅವರ ಅಂಗಾಂಗ ಪ್ರದರ್ಶನದಿಂದ ಅನೇಕ ನಿರ್ಮಾಪಕರು ತಮ್ಮ ಹಣದ ಥೈಲಿ ತುಂಬಿಕೊಳ್ಳತೊಡಗಿದರು. ಜೊತೆಗೆ ಅನ್ಯ ಭಾಷೆಗಳಲ್ಲಿ ಯಶಸ್ಸುಗೊಂಡ ಸಿನಿಮಾಗಳನ್ನು ಕನ್ನಡಕ್ಕೆ ಎರವಲು ತಂದು ರೀಮೇಕ್ ಹೆಸರಲ್ಲಿ ನಮ್ಮ ನೆಟಿವೀಟಿಗೆ ಒಗ್ಗಿಸಿ ಹಳಸಲು ಕಥೆಯನ್ನೇ ಪ್ರೇಕ್ಷಕರಿಗೆ ನೀಡಿದ್ದು ಕನ್ನಡ ಸಿನಿಮಾ ಮಾಧ್ಯಮದ ದುರಂತಗಳಲ್ಲೊಂದು. ಇನ್ನು ಕೆಲವು ನಿರ್ಮಾಪಕರು ಅನ್ಯ ಭಾಷೆಯ ಸಿನಿಮಾಗಳನ್ನೇ ನೇರವಾಗಿ ನಮ್ಮ ಭಾಷೆಗೆ ಡಬ್ ಮಾಡಿ ಪ್ರೇಕ್ಷಕರ ಅಭಿರುಚಿಯನ್ನೇ ದಾರಿತಪ್ಪಿಸಿದರು. ಹೀಗೆ ಕನ್ನಡ ಭಾಷೆಯಲ್ಲಿ ವರ್ಷದಿಂದ ವರ್ಷಕ್ಕೆ ನಿರ್ಮಾಣಗೊಳ್ಳುವ ಸಿನಿಮಾಗಳ ಸಂಖ್ಯೆ, ಸಿನಿಮಾ ಮಾಧ್ಯಮಕ್ಕೆ ಕಾಲಿಡುವ ನಟ ನಟಿಯರ ಮತ್ತು ತಂತ್ರಜ್ಞರ ಸಂಖ್ಯೆ ವೃದ್ಧಿಸುತ್ತ ಕನ್ನಡ ಸಿನಿಮಾ ಮಾಧ್ಯಮ ಅಂತರಾಷ್ಟ್ರೀಯ ಮಾರುಕಟ್ಟೆಗೆ ತನ್ನ ವ್ಯವಹಾರವನ್ನು ವಿಸ್ತರಿಸಿಕೊಂಡಿತು. ಒಂದರ್ಥದಲ್ಲಿ ಸಿನಿಮಾಗಳು ಸಾವಿರಾರು ಸಂಖ್ಯೆಯಲ್ಲಿ ನಿರ್ಮಾಣಗೊಂಡು ಸಿನಿಮಾಗಳ ಸಂಖ್ಯೆ ವೃದ್ಧಿಸಿತೆ ವಿನ: ಅದಕ್ಕೆ ಪರ್ಯಾಯವಾಗಿ ಪ್ರೇಕ್ಷಕರನ್ನು ಬೆಳೆಸಲು ನಮ್ಮ ಸಿನಿಮಾ ಮಾಧ್ಯಮದ ಜನ ಆಸಕ್ತಿ ತೋರಿಸಲಿಲ್ಲ. ಇದು ಕನ್ನಡ ಚಿತ್ರರಂಗ ಮಾಡಿಕೊಂಡ ಬಹುದೊಡ್ಡ ಎಡವಟ್ಟು.
ಗುಣಮಟ್ಟದ ಕೊರತೆ
2016 ರಲ್ಲಿ ಅನೇಕ ಸಿನಿಮಾಗಳು ಕನ್ನಡ ಭಾಷೆಯಲ್ಲಿ ಯಶಸ್ಸನ್ನು ಪಡೆದು ಕನ್ನಡ ಸಿನಿಮಾ ಮಾಧ್ಯಮ ಒಂದಿಷ್ಟು ಚೇತರಿಸಿಕೊಂಡಿತಾದರೂ ಯಶಸ್ವಿಯಾದ ಸಿನಿಮಾಗಳಲ್ಲಿ ಬಹುಪಾಲು ಸಿನಿಮಾಗಳಲ್ಲಿನ ಕಥೆ ಮಾಟ, ಮಂತ್ರ, ಭೂತ ಮತ್ತು ದೈವಿಕ ಶಕ್ತಿಯನ್ನೆ ಕೇಂದ್ರವಾಗಿಟ್ಟು ಹೆಣೆಯಲಾಗಿತ್ತು ಎನ್ನುವ ಮಾತನ್ನು ನಾವು ನಿರ್ಲಕ್ಷಿಸುವಂತಿಲ್ಲ. ಹೊಸ ನಿರ್ದೇಶಕರು ಮತ್ತು ಹೊಸ ನಟ ನಟಿಯರ ಈ ಯಶಸ್ವಿ ಸಿನಿಮಾಗಳು ಕನ್ನಡ ಸಿನಿಮಾರಂಗದ ಗತಿಯನ್ನೇ ಬದಲಿಸುವ ಒಂದು ನಿರೀಕ್ಷೆಯನ್ನು ಹುಟ್ಟಿಸುವಲ್ಲಿ ಸಂಪೂರ್ಣವಾಗಿ ವಿಫಲವಾದವು. ಫಸ್ಟ್ ರ್ಯಾಂಕ್ ರಾಜು ಮತ್ತು ಗೋಧಿಬಣ್ಣ ಸಾಧಾರಣ ಮೈಕಟ್ಟು ಸಿನಿಮಾಗಳನ್ನು ಹೊರತು ಪಡಿಸಿ ಕರ್ವ, ಯೂ ಟರ್ನ್, ಲಾಸ್ಟ್ ಬಸ್ ಇತ್ಯಾದಿ ಯಶಸ್ವಿಯಾದ ಈ ಸಿನಿಮಾಗಳ ಕಥೆ ವಾಸ್ತವಿಕತೆಯಿಂದ ದೂರವಾಗಿತ್ತು. ಹಾಗಾದರೆ ಇಂಥ ಕಥೆಗಳ ಮೂಲಕ ನಮ್ಮ ಯುವ ಮತ್ತು ಪ್ರತಿಭಾನ್ವಿತ ನಿರ್ದೇಶಕರು ಪ್ರೇಕ್ಷಕರಿಗೆ ಹೇಳಲು ಹೊರಟಿರುವುದಾದರೂ ಏನು? ಎನ್ನುವ ಪ್ರಶ್ನೆ ಇಲ್ಲಿ ನಮಗೆ ಎದುರಾಗುತ್ತದೆ. ತಂತ್ರಜ್ಞಾನದ ಈ 21ನೇ ಶತಮಾನದಲ್ಲಿ ಮಾಟ, ಮಂತ್ರ, ದೆವ್ವದಂಥ ವಾಸ್ತವಿಕತೆಗೆ ದೂರವಾದ ಕಥೆಗಳನ್ನೇ ಈ ನಿರ್ದೇಶಕರು ಆಯ್ಕೆ ಮಾಡಿಕೊಳ್ಳಲು ಕಾರಣ ಪ್ರೇಕ್ಷಕರಿಗೆ ಸಿನಿಮಾದ ಮೂಲಕ ಮನರಂಜನೆ ನೀಡುವುದೇ ಅವರ ಗುರಿಯಾಗಿದೆ. ಹೀಗೆ ಸಾಲು ಸಾಲು ಒಂದೇ ರೀತಿಯ ಕಥೆಗಳನ್ನು ಆಧರಿಸಿ ಸಿನಿಮಾಗಳನ್ನು ನಿರ್ಮಿಸುವ ಈ ನಿರ್ದೇಶಕರು ಮತ್ತು ನಿರ್ಮಾಪಕರು ಪ್ರೇಕ್ಷರ ಅಭಿರುಚಿಗೆ ಮಹತ್ವ ನೀಡುತ್ತಿಲ್ಲ. ಬದಲಾಗಿ ಈ ಸಿನಿಮಾ ಜನ ತಮಗೆ ಇಷ್ಟವಾದ ಮತ್ತು ಹಣ ಕೊಳ್ಳೆ ಹೊಡೆಯುವಂಥ ಕಥೆಯಾಧಾರಿತ ಸಿನಿಮಾಗಳನ್ನು ಬಲವಂತವಾಗಿ ಪ್ರೇಕ್ಷಕರ ಮುಂದಿಡುತ್ತಿರುವರು. ಆಯ್ಕೆಗೆ ಅವಕಾಶವೇ ಇಲ್ಲದೇ ಪ್ರೇಕ್ಷಕ ಮಹಾಶಯ ಹೊಸಬರನ್ನು ಹುರುದುಂಬಿಸಲು ಒಂದೇ ರೀತಿಯ ಸಿನಿಮಾಗಳನ್ನೇ ಮತ್ತೆ ಮತ್ತೆ ನೋಡುತ್ತ ಅವುಗಳನ್ನು ಯಶಸ್ವಿ ಸಿನಿಮಾಗಳ ಸಾಲಿನಲ್ಲಿ ನಿಲ್ಲಿಸುತ್ತಿರುವನು. ಹೊಸಬರನ್ನಿಟ್ಟುಕೊಂಡು ತನ್ನ ಇಮೇಜನ್ನೇ ಪಕ್ಕಕ್ಕಿಟ್ಟು ಕುಸ್ತಿ ಆಟದಂಥ ಸರಳ ಕಥಾವಸ್ತುವನ್ನು ಆಧರಿಸಿ ಸಿನಿಮಾ ಮಾಡಿ ಗೆಲ್ಲುವ ಒಬ್ಬ ಅಮೀರ್ ಖಾನ್‍ನಂಥ ಕಲಾವಿದ ಮಾಡುವ ಪ್ರಯೋಗ ಕನ್ನಡ ಸಿನಿಮಾರಂಗದಲ್ಲಿ ಇದುವರೆಗೂ ಯಾವ ಕಲಾವಿದರಿಗೂ ಮಾಡಲು ಮತ್ತು ಯಶಸ್ಸನ್ನು ಪಡೆಯಲು ಸಾಧ್ಯವಾಗದಿರುವುದು ನಮ್ಮ ಉದ್ಯಮದ ಬಹುದೊಡ್ಡ ದುರಂತ. ಗಮನಿಸಬೇಕಾದ ಸಂಗತಿ ಎಂದರೆ ಈ ಹೊಸ ಕಲಾವಿದರು ಮತ್ತು ನಿರ್ದೇಶಕರು ತಾವು ತೊಡೆತಟ್ಟಿದರೆ ಮಾತ್ರ ಸಿನಿಮಾಗಳ ಯಶಸ್ಸು ಸಾಧ್ಯವೆಂದು ಇದುವರೆಗೂ ನಂಬಿದ್ದ ಜನಪ್ರಿಯ ನಾಯಕ ನಟರನ್ನು ಪಕ್ಕಕ್ಕೆ ಸರಿಸಿ ತಮ್ಮ ಸಿನಿಮಾಗಳಿಗೆ ಯಶಸ್ಸನ್ನು ದಕ್ಕಿಸಿಕೊಂಡದ್ದು. ಆದರೆ ಹೀಗೆ ಯಶಸ್ಸನ್ನು ದಕ್ಕಿಸಿಕೊಳ್ಳುವ ಅವಸರದಲ್ಲಿ ವಾಸ್ತವಿಕತೆಯಿಂದ ದೂರವಾದ ಮತ್ತು ಓಬಿರಾಯನ ಕಾಲದ ಕಥೆಯನ್ನೇ ಪ್ರೇಕ್ಷಕರಿಗೆ ಮತ್ತೆ ಮತ್ತೆ ನೀಡಿದ್ದು ಈ ಹೊಸಬರು ಮಾಡಿದ ಬಹುದೊಡ್ಡ ತಪ್ಪು.ಜನಪ್ರಿಯ ಕಲಾವಿದರು
ತಮಿಳು ಮತ್ತು ಮಲೆಯಾಳಂ ಭಾಷೆಗಳಲ್ಲಿ ಜನಪ್ರಿಯ ಕಲಾವಿದರು ಸ್ವತ: ಬಂಡವಾಳ ಹೂಡಿ ಹೊಸ ಅಲೆಯ ಸಿನಿಮಾಗಳನ್ನು ನಿರ್ಮಿಸಿದ ಕೆಲವೊಮ್ಮೆ ನಿರ್ದೇಶಿಸಿದ ಅನೇಕ ಉದಾಹರಣೆಗಳಿವೆ. ಮೋಹನ್ ಲಾಲ್, ಕಮಲ್ ಹಾಸನ್, ಮಮ್ಮುಟ್ಟಿ ಇವರೆಲ್ಲ ಜನಪ್ರಿಯ ಕಲಾವಿದರಾಗಿದ್ದೂ ತಮ್ಮ ಇಮೇಜಿಗೆ ಹೊರತಾದ ಪಾತ್ರಗಳಲ್ಲಿಯೂ ಕಾಣಿಸಿಕೊಂಡು ಹೊಸ ಅಲೆಯ ಸಿನಿಮಾಗಳ ಮೂಲಕ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ತಮ್ಮನ್ನು ಗುರುತಿಸಿಕೊಂಡಿರುವರು. ಕನ್ನಡದವರೆ ಆದ ಪ್ರಕಾಶ್ ರೈ ಅನೇಕ ಹೊಸ ನಮೂನೆಯ ಸಿನಿಮಾಗಳನ್ನು ನಿರ್ದೇಶಿಸಿ ಅಭಿನಯಿಸಿದ ದೃಷ್ಟಾಂತ ನಮ್ಮ ಕಣ್ಣೆದುರೇ ಇದೆ. ಆದರೆ ಕನ್ನಡ ಸಿನಿಮಾರಂಗದಲ್ಲಿ ಒಂದು ಇಮೇಜಿಗೆ ಅಂಟಿಕೊಳ್ಳುವ ನಾಯಕ ನಟರಾಗಲಿ ಇಲ್ಲವೇ ನಾಯಕಿ ನಟಿಯರಾಗಲಿ ಆ ಒಂದು ಇಮೇಜಿನಿಂದ ಹೊರಬಂದು ಹೊಸ ಅಲೆಯ ಸಿನಿಮಾಗಳಲ್ಲಿ ಅಭಿನಯಿಸಿದ ಉದಾಹರಣೆಗಳಿಲ್ಲ. ಸದಾಕಾಲ ಕನ್ನಡ ಸಿನಿಮಾ ಕಲಾವಿದರಿಗೆ ಆದರ್ಶವೂ ಮತ್ತು ಮಾದರಿಯೂ ಆಗುಳಿದ ರಾಜಕುಮಾರ ಮತ್ತು ವಿಷ್ಣುವರ್ಧನ್ ಅವರಂಥ ಜನಪ್ರಿಯ ನಟರು ಒಂದೇ ಒಂದು ಕಲಾತ್ಮಕ ಸಿನಿಮಾದಲ್ಲಿ ಅಭಿನಯಿಸದೇ ಹೋದದ್ದು ಅವರ ನಂತರದ ಪೀಳಿಗೆಯ ನಟರಿಗೆ ಅದೊಂದು ಅನುಕರಣಿಯವಾಗಿ ಉಳಿದಿದೆ. ಒಂದರ್ಥದಲ್ಲಿ ರಾಜಕುಮಾರ ಮತ್ತು ವಿಷ್ಣುವರ್ಧನ್ ತಮ್ಮ ಸದಭಿರುಚಿಯ ಸಿನಿಮಾಗಳ ಮೂಲಕ ಒಂದು ಪ್ರಕಾರದ ಪ್ರೇಕ್ಷಕರನ್ನು ಬೆಳೆಸಿದರೇ ವಿನ: ಸಿನಿಮಾವನ್ನೇ ಉತ್ಕಟವಾಗಿ ಪ್ರೀತಿಸುವಂಥ ವಿಭಿನ್ನ ಅಭಿರುಚಿಯ ಪ್ರೇಕ್ಷಕರು ಈ ಇಬ್ಬರೂ ಕಲಾವಿದರಿಂದ ಕನ್ನಡ ಸಿನಿಮಾ ಮಾಧ್ಯಮದಲ್ಲಿ ರೂಪುಗೊಳ್ಳಲೇ ಇಲ್ಲ. ಇನ್ನು ಕೆಲವು ಕಲಾವಿದರು ತಮ್ಮನ್ನು ಕೇವಲ ಅಭಿನಯಕ್ಕೆ ಮಾತ್ರ ಸೀಮಿತಗೊಳಿಸಿಕೊಂಡು ಸಿನಿಮಾ ಮಾಧ್ಯಮದಿಂದ ಗಳಿಸಿದ್ದರಲ್ಲಿ ಒಂದಷ್ಟು ಪಾಲನ್ನಾದರೂ ಹೊಸ ಅಲೆಯ ಸಿನಿಮಾಗಳ ನಿರ್ಮಾಣಕ್ಕೆ ತೊಡಗಿಸಲಿಲ್ಲ. ಈ ವಿಷಯವಾಗಿ ಕನ್ನಡ ಚಿತ್ರರಂಗ ಶಂಕರ್ ನಾಗ್ ಅವರಂಥ ಮೇರು ಪ್ರತಿಭೆಯನ್ನು ಇವತ್ತಿಗೂ ಸ್ಮರಿಸಿಕೊಳ್ಳಬೇಕು. ಒಬ್ಬ ಜನಪ್ರಿಯ ಮತ್ತು ಇಮೇಜಿಗೆ ಅಂಟಿಕೊಂಡ ಕಲಾವಿದನಾಗಿದ್ದರೂ ಶಂಕರ್ ನಾಗ್ 1980 ರ ದಶಕದಲ್ಲೇ ಅನೇಕ ಹೊಸ ಅಲೆಯ ಸಿನಿಮಾಗಳ ನಿರ್ಮಾಣದ ಪ್ರಯೋಗದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಅನಂತನಾಗ್ ಸಿನಿಮಾಗಳನ್ನು ನಿರ್ಮಾಣ ಮಾಡದೇ ಇದ್ದರೂ ಸಿನಿಮಾದಿಂದ ಸಿನಿಮಾಕ್ಕೆ ಹೊಸ ಹೊಸ ಪಾತ್ರಗಳಿಗೆ ತಮ್ಮನ್ನು ಪರೀಕ್ಷೆಗೆ ಒಡ್ಡುತ್ತಲೇ ಇರುವರು. ಆದರೆ ನೂರಾರು ಸಿನಿಮಾಗಳಲ್ಲಿ ನಾಯಕ ನಟರಾಗಿ ಅಭಿನಯಿಸಿಯೂ ಇವತ್ತಿಗೂ ನಾಯಕಿ ನಟಿಯರೊಂದಿಗೆ ಹಾಡಿ ಕುಣಿಯುವ ದೃಶ್ಯಗಳಲ್ಲೇ ಅಭಿನಯಿಸುತ್ತಿರುವ ಅನೇಕ ಜನಪ್ರಿಯ ಕಲಾವಿದರು ಪ್ರೇಕ್ಷಕರಿಗೆ ಹೊಸದನ್ನು ನೀಡುವಲ್ಲಿ ಸೋಲುತ್ತಿರುವರು.ಜಾಗತೀಕರಣದ ಪರಿಣಾಮ ಸಿನಿಮಾ ಮಾರುಕಟ್ಟೆ ವಿಸ್ತರಿಸಿರುವುದರಿಂದ ಈಗ ಸಿನಿಮಾ ಪ್ರೇಕ್ಷಕ ಬಹುಭಾಷಾ ಸಿನಿಮಾಗಳ ಪ್ರೇಕ್ಷಕನಾಗಿ ಬದಲಾಗಿರುವನು. ಕನ್ನಡದ ಹೊರತಾದ ಭಾರತದ ಅನ್ಯಭಾಷೆಗಳ ಸಿನಿಮಾಮಾತ್ರವಲ್ಲದೆ ಇಂಗ್ಲಿಷ್, ಫ್ರೆಂಚ್, ಜಪಾನ್, ಜರ್ಮನಿ, ಕೊರಿಯಾ ಹೀಗೆ ಪ್ರಪಂಚದ ವಿವಿಧ ಭಾಷೆಗಳ ಸಿನಿಮಾಗಳನ್ನು ನೋಡುವ ಮುಕ್ತ ಅವಕಾಶ ಕನ್ನಡದ ಪ್ರೇಕ್ಷಕನಿಗೆ ಎದುರಾಗುತ್ತಿದೆ. ಇಂಥ ಅವಕಾಶವನ್ನು ಸೂಕ್ತವಾಗಿಯೇ ಬಳಸಿಕೊಳ್ಳುತ್ತಿರುವ ಕನ್ನಡ ಸಿನಿಮಾಗಳ ಪ್ರೇಕ್ಷಕ ಈ ವಿದೇಶಿ ಭಾಷೆಗಳ ಸಿನಿಮಾಗಳೊಂದಿಗೆ ತನ್ನದೇ ನೆಲದ ಸಿನಿಮಾಗಳನ್ನು ಹೋಲಿಸಿ ನೋಡುತ್ತಿರುವನು. ಪ್ರಯೋಗಶಿಲತೆಗೆ ಯಾವತ್ತೂ ಪ್ರಾಧಾನ್ಯತೆ ಕೊಡುವ ಅಂತರಾಷ್ಟ್ರೀಯ ಸಿನಿಮಾಗಳೆದುರು ಆತನಿಗೆ ಕನ್ನಡ ಸಿನಿಮಾಗಳಲ್ಲಿನ ಕೊರತೆಗಳು ಎದ್ದುಕಾಣುತ್ತಿವೆ. ಕನ್ನಡ ಸಿನಿಮಾ ಮಧ್ಯಮದ ರೀಮೇಕ್, ಡಬ್ಬಿಂಗ್, ಲಾಂಗು, ಮಚ್ಚು, ದೇವರು, ಭೂತ, ಮಾಟ, ಮಂತ್ರ ಈ ಏಕತಾನತೆಯಿಂದ ಬೇಸರಗೊಂಡ ಹೊಸತನಕ್ಕಾಗಿ ತುಡಿಯುವ ಒಂದು ಇಡೀ ಪ್ರೇಕ್ಷಕ ಸಮೂಹ ಅಂತರಾಷ್ಟ್ರೀಯ ಸಿನಿಮಾಗಳೆಡೆ ವಲಸೆ ಹೋಗಿದೆ. ಹೀಗಾಗಿ ಆ ಪ್ರೇಕ್ಷಕರನ್ನು ಮತ್ತೆ ಕನ್ನಡ ಸಿನಿಮಾಗಳೆಡೆ ಕರೆತಂದು ಅಂಥ ಪ್ರೇಕ್ಷಕರನ್ನು ಬೆಳೆಸುವ ಜವಬ್ದಾರಿ ನಮ್ಮ ಸಿನಿಮಾ ಮಾಧ್ಯಮದ ಮೇಲಿದೆ.
ಅಧ್ಯಯನದ ವಿಷಯವಾಗಿ ಸಿನಿಮಾ
ಕನ್ನಡ ಭಾಷೆ ಮಾತ್ರವಲ್ಲದೆ ಭಾರತದ ಯಾವುದೇ ಭಾಷೆಯ ಪಠ್ಯಕ್ರಮದಲ್ಲಿ ಸಿನಿಮಾವನ್ನು ಅಧ್ಯಯನದ ವಿಷಯವಾಗಿ ಸೇರಿಸಿದ ಉದಾಹರಣೆಯೇ ಇಲ್ಲ. ಪುಣೆಯ ಫಿಲ್ಮ್ ಇನ್ಸ್‍ಟಿಟ್ಯೂಟ್, ದೆಹಲಿಯ ರಾಷ್ಟ್ರೀಯ ನಾಟಕ ತರಬೇತಿ, ಕರ್ನಾಟಕದ ರಂಗಾಯಣ ಮತ್ತು ನೀನಾಸಂ ಈ ಸಂಸ್ಥೆಗಳಲ್ಲಿ ಅಭಿನಯ ಮತ್ತು ನಿರ್ದೇಶನದ ತರಬೇತಿಗೆ ಅವಕಾಶವಿದೆಯಾದರೂ ಶಾಲಾ ಕಾಲೇಜುಗಳ ಪಠ್ಯಕ್ರಮದಲ್ಲಿ ಸಿನಿಮಾ ಅಧ್ಯಯನಕ್ಕೆ ಅವಕಾಶವಿಲ್ಲ. ಸಾಹಿತ್ಯ, ವಿಜ್ಞಾನ, ಕೈಗಾರಿಕೆ, ಪತ್ರಿಕೋದ್ಯಮ ಈ ವಿಷಯಗಳನ್ನೆಲ್ಲ ಶಾಸ್ತ್ರಿಯವಾಗಿ ಅಭ್ಯಾಸ ಮಾಡಲು ಅವಕಾಶ ಮಾಡಿಕೊಟ್ಟ ನಮ್ಮ ಶಿಕ್ಷಣ ಮಾಧ್ಯಮ ಸಿನಿಮಾ ಮಾಧ್ಯಮವನ್ನು ದೂರವೇ ಇಟ್ಟಿದೆ. ಸಿನಿಮಾ ಕೂಡ ನಾವು ಬದುಕುತ್ತಿರುವ ವ್ಯವಸ್ಥೆಯ ಒಂದು ಭಾಗ ಮತ್ತು ಅದು ಅಧ್ಯಯನಕ್ಕೆ ಯೋಗ್ಯವೂ ಹೌದು. ಕೊನೆ ಪಕ್ಷ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಸಿನಿಮಾವನ್ನು ವಿಶ್ಲೇಷಿಸುವ ಮತ್ತು ಆ ಮೂಲಕ ಉತ್ತಮ ಪ್ರೇಕ್ಷಕರನ್ನು ರೂಪಿಸುವಂಥ ಪಠ್ಯಕ್ರಮಕ್ಕೆ ಅವಕಾಶ ಮಾಡಿಕೊಡಬೇಕು. ಸಿನಿಮಾ ಕೂಡ ಅದೊಂದು ಸಾಂಸ್ಕೃತಿಕ ಉತ್ಪಾದನೆ. ಉತ್ಪಾದಿತ ವಸ್ತು ಮಾರುಕಟ್ಟೆಯಲ್ಲಿ ಬಿಕರಿಯಾಗಲು ಅಥವಾ ಜನಪ್ರಿಯತೆ ಹೊಂದಲು ಅದರ ಗುಣಾವಗುಣಗಳನ್ನು ವಿಶ್ಲೇಷಿಸುವುದಕ್ಕಾಗಿ ಒಂದು ನಿರ್ಧಿಷ್ಟ ಮಾನದಂಡಬೇಕು. ಈ ವಿಮರ್ಶೆ ಮತ್ತು ವಿಶ್ಲೇಷಣಾತ್ಮಕ ಗುಣ ಶಿಕ್ಷಣದಿಂದ ಮಾತ್ರ ನಮಗೆ ದಕ್ಕುವಂಥದ್ದು. ಈಗ ಕನ್ನಡ ಸಿನಿಮಾದ (ಒಟ್ಟಾರೆ ಇಡೀ ಭಾರತೀಯ ಸಿನಿಮಾ ಎನ್ನಬಹುದು) ವಿಷಯವನ್ನೇ ತೆಗೆದುಕೊಂಡರೆ ಇಲ್ಲಿ ಜನಪ್ರಿಯವಾಗುತ್ತಿರುವ ಸಿನಿಮಾಗಳ ಪ್ರೇಕ್ಷಕರು ಯಾರು ಎನ್ನುವ ಪ್ರಶ್ನೆ ಎದುರಾಗುತ್ತದೆ. ಮಧ್ಯಮ ವರ್ಗದ ಮತ್ತು ಶಿಕ್ಷಣವೇ ಇಲ್ಲದ ಕೆಳವರ್ಗದ ಪ್ರೇಕ್ಷಕರು ಸಿನಿಮಾವೊಂದರ ಗೆಲುವು ಮತ್ತು ಸೋಲಿನಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿರುವರು. ರಾಜಕುಮಾರ, ವಿಷ್ಣುವರ್ಧನ್ ಇತ್ಯಾದಿ ನಾಯಕ ನಟರು ಹಲವು ದಶಕಗಳ ಕಾಲ ಜನಪ್ರಿಯ ಕಲಾವಿದರಾಗಿ ಉಳಿಯಲು ಸಾಧ್ಯವಾದದ್ದು ಇದೇ ಪ್ರೇಕ್ಷಕರಿಂದ. ಜೊತೆಗೆ ಇದೇ ಪ್ರೇಕ್ಷಕರು ಅಭಿನಯವೇ ಗೊತ್ತಿಲ್ಲದ ಕೇವಲ ತಮ್ಮ ಆಂಗಿಕ ಅಭಿನಯವನ್ನೇ ಬಂಡವಾಳವಾಗಿಟ್ಟುಕೊಂಡ ಅನೇಕ ಕಲಾವಿದರನ್ನು ಖ್ಯಾತಿಯ ಉತ್ತುಂಗಕ್ಕೆರಿಸಿದರು. ಹೀಗಾಗಿ ಇಂಥ ಪ್ರೇಕ್ಷಕರ ಉತ್ತೇಜನವನ್ನು ಆಧಾರವಾಗಿಟ್ಟುಕೊಂಡು ಕನ್ನಡ ಸಿನಿಮಾರಂಗದಲ್ಲಿ ಸಿನಿಮಾಗಳ ಸಂಖ್ಯೆ ವೃದ್ಧಿಸಿದವೇ ವಿನ: ಉತ್ತಮ ಅಭಿರುಚಿಯ ವಿಮರ್ಶಾತ್ಮಕ ಪ್ರೇಕ್ಷಕರ ಸಂಖ್ಯೆ ಬೆಳೆಯಲಿಲ್ಲ.ಈ ಒಂದು ಸಮಸ್ಯೆಯಿಂದ ಹೊರಬರಲು ಈಗ ನಮ್ಮೆದುರಿಗಿರುವ ಏಕೈಕ ಪರಿಹಾರವೆಂದರೆ ಸಿನಿಮಾಮಾಧ್ಯಮವನ್ನು ಅಧಯ್ಯನದ ವಿಷಯವಾಗಿ ನಮ್ಮ ಪಠ್ಯಕ್ರಮಕ್ಕೆ ಒಳಪಡಿಸುವುದು. ಶಾಲಾ ಕಾಲೇಜುಗಳಲ್ಲಿ ನಿರ್ಮಾಣವಾಗುತ್ತಿರುವ ಸಿನಿಮಾಗಳ ಕುರಿತು ಚರ್ಚೆ, ಸಂವಾದ, ಗೋಷ್ಟಿಗಳು ಏರ್ಪಡಾಗಬೇಕು. ಕನ್ನಡ ಭಾಷೆಯ ಸಿನಿಮಾಗಳನ್ನು ನಮ್ಮ ಮಕ್ಕಳು ಅನ್ಯಭಾಷೆಯ ಸಿನಿಮಾಗಳೊಂದಿಗೆ ಹೋಲಿಸಿ ಅಧ್ಯಯನ ಮಾಡುವ ವಾತಾವರಣ ನಿರ್ಮಾಣವಾಗಬೇಕು. ಸಿನಿಮಾವನ್ನು ವಿಮರ್ಶಾ ದೃಷ್ಟಿಕೋನದಿಂದ ನೋಡುವ ಬಗೆಯನ್ನು ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಕಲಿಸಿಕೊಡುವಂತಾಗಬೇಕು. ಒಂದೆಡೆ ಸಿನಿಮಾಗಳು ನಿರ್ಮಾಣಗೊಳ್ಳುತ್ತಿದ್ದರೆ ಅದಕ್ಕೆ ಪರ್ಯಾಯವಾಗಿ ಶಾಲೆ, ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಪ್ರೇಕ್ಷಕರು ಹುಟ್ಟಿಕೊಳ್ಳಬೇಕು. ಇಂಥ ಕಲಿಕೆಯ ವಾತಾವರಣ ನಿರ್ಮಾಣ ಮಾಡುವುದರಿಂದ ಕನ್ನಡ ಸಿನಿಮಾ ಮಾಧ್ಯಮದಲ್ಲಿ ಪ್ರೇಕ್ಷಕರನ್ನು ಬೆಳೆಸಲು ಸಾಧ್ಯವಾಗುವುದು.
No comments:
Post a Comment