Saturday, June 3, 2017

ಹೀಗೊಂದು ಸಾಂಸ್ಕೃತಿಕ ತಳಮಳ

                  ಮೊನ್ನೆ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಹೊಗಿದ್ದೆ. ಅಂದು ಹಲವು ಲೇಖಕರ ಪುಸ್ತಕಗಳನ್ನು ಬಿಡುಗಡೆ ಮಾಡುವ ಸಮಾರಂಭವನ್ನು ಆ ಪ್ರಕಾಶನ ಸಂಸ್ಥೆಯು ಸಾಂಸ್ಕೃತಿಕ ಸಭಾಂಗಣದಲ್ಲಿ ಆಯೋಜಿಸಿತ್ತು. ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿದ ಬರಹಗಾರರೊಬ್ಬರು ಅಂದಿನ ಆ ಸಮಾರಂಭದ ಮುಖ್ಯ ಅತಿಥಿ. ಜೊತೆಗೆ ಒಂದಿಷ್ಟು ಆಕರ್ಷಣೆ ಇರಲಿ ಎಂದು ಓದುವ ಹಾಗೂ ಬರೆಯುವ ಹವ್ಯಾಸವಿರುವ ಸಿನಿಮಾ ಕಲಾವಿದನನ್ನು ಪುಸ್ತಕಗಳ ಬಿಡುಗಡೆಗಾಗಿ ಆಹ್ವಾನಿಸಲಾಗಿತ್ತು. ಆದರೆ ಸಭಾಂಗಣ ಮಾತ್ರ ಪ್ರೇಕ್ಷಕರಿಲ್ಲದೆ ಭಣಗುಟ್ಟುತ್ತಿತ್ತು. ಬಿಡುಗಡೆಯಾಗುತ್ತಿರುವ ಪುಸ್ತಕಗಳ ಲೇಖಕರು ಹಾಗೂ ಅವರೊಡನೆ ಬಂದ ಅವರ ಕುಟುಂಬ ವರ್ಗದವರನ್ನು ಬಿಟ್ಟರೆ ಇಡೀ ಸಭಾಂಗಣ ಖಾಲಿಯಾಗಿತ್ತು. ಸಭಾಂಗಣದ ಒಂದು ಮೂಲೆಯಲ್ಲಿ ಆ ದಿನ ಬಿಡುಗಡೆಯಾಗುತ್ತಿರುವ ಪುಸ್ತಕಗಳನ್ನು ವಿಶೇಷ ರಿಯಾಯಿತಿ ದರದಲ್ಲಿ ಮಾರಾಟ ಮಾಡಲು ಜೋಡಿಸಿಡಲಾಗಿತ್ತು. ಒಂದಿಬ್ಬರು ಆಸಕ್ತರು ಒಂದೆರಡು ಪುಸ್ತಕಗಳನ್ನು ಕೈಯಲ್ಲಿ ಹಿಡಿದು ನೋಡಿದರೆ ವಿನ: ಒಂದೇ ಒಂದು ಪುಸ್ತಕ ಮಾರಾಟವಾಗಲಿಲ್ಲ. ಇನ್ನೊಂದು ಆಸಕ್ತಿಯ ಸಂಗತಿ ಎಂದರೆ ಆ ದಿನದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ವಿಶೇಷ ಊಟದ ವ್ಯವಸ್ಥೆಯನ್ನು ಬಂದ ಅತಿಥಿ ಗಣ್ಯರಿಗಾಗಿ, ಲೇಖಕರಿಗಾಗಿ ಹಾಗೂ ಸಾರ್ವಜನಿಕರಿಗಾಗಿ ಮಾಡಲಾಗಿತ್ತು. ಅತಿಥಿಗಳ ಭಾಷಣ ಮತ್ತು ಪುಸ್ತಕಗಳ ಬಿಡುಗಡೆಯಾಗುತ್ತಿದ್ದಂತೆ ಬಂದವರೆಲ್ಲ ಊಟ ಮಾಡಲು ಧಾವಂತ ಪಡುತ್ತಿದ್ದರೆ ಹೊರತು ಆ ದಿನ ಬಿಡುಗಡೆಯಾದ ಪುಸ್ತಕಗಳತ್ತ ಒಂದು ದೃಷ್ಟಿಯನ್ನೂ ಬೀರಲಿಲ್ಲ.  ಹಣ ಖರ್ಚು ಮಾಡಿ ಪುಸ್ತಕಗಳನ್ನು ಪ್ರಕಟಿಸಿದ ಪ್ರಕಾಶಕರ ಎದುರೇ ಲೇಖಕರಿಂದ  ಪುಸ್ತಕಗಳನ್ನು ಗೌರವ ಪ್ರತಿಯ ರೂಪದಲ್ಲಿ ಪಡೆಯಲು ಹಲವರು ಪ್ರಯತ್ನಿಸುತ್ತಿದ್ದರು.  ಪಾಪ ಬಡಪಾಯಿ ಲೇಖಕರು ಕೆಲವರಾದರೂ ತಮ್ಮ ಪುಸ್ತಕಗಳನ್ನು ಓದಲಿ ಎನ್ನುವ ಆಸೆಯಿಂದ ಪ್ರಕಾಶಕರು ತಮಗೆ ಕೊಟ್ಟ ಗೌರವ ಪ್ರತಿಗಳನ್ನೇ ತಮ್ಮ ಸ್ನೇಹಿತರಿಗೋ ಇಲ್ಲವೇ ಸಂಬಂಧಿಕರಿಗೋ ಹಂಚುತ್ತಿದ್ದರು. ಒಟ್ಟಾರೆ ಆ ದಿನ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ನಾನು ನೋಡಿದ ದೃಶ್ಯಗಳು ಪುಸ್ತಕೋದ್ಯಮದ ಅವನತಿಗೆ ಬಲವಾದ ಪುರಾವೆಯನ್ನು ಒದಗಿಸುವಂತಿದ್ದವು.

                     ಲೇಖನದ ಮೂಲ ವಿಷಯಕ್ಕೆ ಹೋಗುವುದಕ್ಕಿಂತ ಮೊದಲು ಇನ್ನೊಂದು ಘಟನೆಯನ್ನು ಹೇಳುತ್ತೇನೆ. ಪ್ರಿಯಾಂಕ ಛೊಪ್ರಾ ಅಭಿನಯದ 'ಮೇರಿ ಕೊಮ್' ಸಿನಿಮಾ ನೋಡಬೇಕೆನ್ನುವುದು ನನ್ನ ಬಹುದಿನಗಳ ಆಸೆಯಾಗಿತ್ತು. ಕ್ರೀಡಾಪುಟುವಿನ ಬದುಕನ್ನಾಧರಿಸಿ ತಯ್ಯಾರಾದ ಸಿನಿಮಾ ನಿಜಕ್ಕೂ ನಮ್ಮ ಯುವಜನಾಂಗಕ್ಕೆ ಸ್ಪೂರ್ತಿ ಮತ್ತು ಪ್ರೇರಣೆ ನೀಡುವಂತಿದ್ದು ಪ್ರತಿಯೊಬ್ಬರೂ ಆ ಸಿನಿಮಾ ನೋಡ ಬೇಕಿತ್ತು. ಟಿಕೇಟ್ ಸಿಗುತ್ತದೋ ಇಲ್ಲವೋ ಎನ್ನುವ ಆತಂಕದಿಂದ ಥೇಟರ್ ಒಳಗಡೆ ಪ್ರವೇಶಿಸಿದರೆ ಅಲ್ಲಿದ್ದದ್ದು ಬೆರಳೆಣಿಕೆಯಷ್ಟು ಪ್ರೇಕ್ಷಕರು ಮಾತ್ರ. ಪಕ್ಕದಲ್ಲೇ ಇದ್ದ ಥೇಟರ್ ನಲ್ಲಿ 'ಡರ್ಟಿ ಪಿಕ್ಚರ್' ಸಿನಿಮಾ ಐವತ್ತು ದಿನಗಳ ಪ್ರದರ್ಶನ ಪೂರ್ಣಗೊಳಿಸಿ ಆ ದಿನವೂ ಅನೇಕ ಜನರು ಟಿಕೇಟ್ ಸಿಗದೆ ನಿರಾಶೆಯಿಂದ ಥೇಟರ್ ಹೊರಗಡೆ ನಂತರದ ಪ್ರದರ್ಶನಕ್ಕಾಗಿ ಕಾಯುತ್ತ ನಿಂತಿದ್ದರು. ಒಂದು ಸಿನಿಮಾ ಸಮಾಜಕ್ಕೆ ಸಂದೇಶ ಸಾರುವಂಥ ಕಥೆ ಇದ್ದೂ ಪ್ರೇಕ್ಷಕರ ಬೆಂಬಲವಿಲ್ಲದೆ ಒಂದೇ ವಾರದಲ್ಲಿ ಸಿನಿಮಾ ಮಂದಿರದಿಂದ ಎತ್ತಂಗಡಿಯಾದರೆ ಇನ್ನೊಂದು ಸಿನಿಮಾ ನಟಿಯೋರ್ವಳ ಮಾದಕ ಅಭಿನಯದಿಂದ ಐವತ್ತು ದಿನಗಳಾದರೂ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿತ್ತು. ಪ್ರಿಯಾಂಕಾ ಛೊಪ್ರಾ 'ಮೇರಿ ಕೊಮ್' ಸಿನಿಮಾದಲ್ಲಿನ ಅಭಿನಯಕ್ಕಾಗಿ ನಟನೆಯಲ್ಲಿ ನೈಜತೆಯನ್ನು ತರಲು ತನ್ನ ತಲೆಯನ್ನು ಸಂಪೂರ್ಣವಾಗಿ ಕ್ಷೌರ ಮಾಡಿಸಿಕೊಂಡಿದ್ದು ಅದು ಆ ಸಿನಿಮಾ ವಾಸ್ತವಿಕತೆಗೆ ಎಷ್ಟೊಂದು ಹತ್ತಿರವಾಗಿತ್ತು ಎನ್ನುವುದಕ್ಕೆ  ಒಂದು ಉತ್ತಮ ಉದಾಹರಣೆ. ಆದರೆ ಪ್ರೇಕ್ಷಕರು ಆಕೆಯ ಅಭಿನಯಕ್ಕೆ ತೀರಾ ನಿರಸವಾಗಿ ಸ್ಪಂದಿಸಿದ್ದು ಮಾತ್ರ ಅತ್ಯಂತ ನೋವಿನ ಸಂಗತಿ. ಮಾದಕ ಸಿನಿಮಾದ ಟಿಕೇಟ್ ಪಡೆಯಲು ವಿಫಲರಾದ ಪ್ರೇಕ್ಷಕರು ಮುಂದಿನ  ಪ್ರದರ್ಶನದ ಟಿಕೇಟ್ ಗಾಗಿ ಕಾಯುತ್ತ ಸರತಿ ಸಾಲಿನಲ್ಲಿ ನಿಂತರೇ ವಿನ: ಅವರು ಪಕ್ಕದ ಥೇಟರ್ ನಲ್ಲೇ ಇರುವ ಬದುಕಿಗೆ ಅತಿ ಹತ್ತಿರವಿರುವ ಸಿನಿಮಾವನ್ನು ವೀಕ್ಷಿಸಲು ಆಸಕ್ತಿ ತೋರಲಿಲ್ಲ.

                   ಈ ಮೇಲಿನ ಎರಡು ಘಟನೆಗಳನ್ನು ನಾನು ಲೇಖನದ ಪ್ರಾರಂಭದಲ್ಲಿ ಉಲ್ಲೇಖಿಸಲು ಮುಖ್ಯ ಕಾರಣ ಇವತ್ತು ಸಾಹಿತ್ಯ ಮತ್ತು ಸಿನಿಮಾದಂಥ ಸಾಂಸ್ಕೃತಿಕ ಕ್ಷೇತ್ರಗಳು ಜನರ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿವೆ ಎನ್ನುವುದನ್ನು ಉದಾಹರಣೆಯೊಂದಿಗೆ ವಿವರಿಸಲು. ಸಾಹಿತ್ಯ ಮತ್ತು ಸಿನಿಮಾ ಒಂದು ನೆಲದ ಎರಡು ಮಹತ್ವದ ಸಾಂಸ್ಕೃತಿಕ ನೆಲೆಗಳು ಎನ್ನುವ ಅಭಿಪ್ರಾಯ ನನ್ನದು. ಜಾಗತೀಕರಣ ಮತ್ತು ತಂತ್ರಜ್ಞಾನದ ಈ ಯುಗದಲ್ಲಿ ನಮ್ಮ ಪೀಳಿಗೆ ಸಾಹಿತ್ಯದ ಓದು ಮತ್ತು ಸದಭಿರುಚಿಯ ಸಿನಿಮಾಗಳ ವೀಕ್ಷಣೆಯಿಂದ ಸಂಪೂರ್ಣವಾಗಿ ವಿಮುಖರಾಗಿರುವರು. ಜೊತೆಗೆ ಈ ತಂತ್ರಜ್ಞಾನದ ಬೆಳವಣಿಗೆಯ  ಕಾಲಘಟ್ಟದಲ್ಲಿ ಹುಟ್ಟಿ ಈಗ ತರುಣ ತರುಣಿಯರಾಗಿ ಬೆಳೆದು ನಿಂತಿರುವ ಯುವಜನಾಂಗವನ್ನು ದೃಷ್ಟಿಯಲ್ಲಿಟ್ಟುಕೊಂಡು ನಮ್ಮ ಬರಹಗಾರರು ಬರೆಯುತ್ತಿರುವುದು ಹಾಗೂ ಸಿನಿಮೊದ್ಯಮದ ಜನ ಸಿನಿಮಾಗಳನ್ನು ತಯ್ಯಾರಿಸುತ್ತಿರುವುದು ಆತಂಕದ ಸಂಗತಿ.

ಸಾಹಿತ್ಯ 


                   ಹಿರಿಯ ಸಾಹಿತಿಗಳೆಲ್ಲ ಈಗ ಬರೆಯುತ್ತಿಲ್ಲ (ಭೈರಪ್ಪನವರಿಗೆ ಈ ಆಪಾದನೆ ಅನ್ವಯಿಸುವುದಿಲ್ಲ) ಎನ್ನುವುದು ನಮ್ಮ ಬಹುಮುಖ್ಯವಾದ ಸಾಂಸ್ಕೃತಿಕ ತಳಮಳಗಳಲ್ಲೊಂದು. ಒಂದು ವಯಸ್ಸಿನವರೆಗೆ ಬರೆದು ಒಂದಿಷ್ಟು ಪ್ರಶಸ್ತಿ, ಪುರಸ್ಕಾರಗಳನ್ನು ಬಾಚಿಕೊಂಡರೆ ಬರವಣಿಗೆಯ ಕೆಲಸ ಪೂರ್ಣಗೊಂಡಂತೆ ಎನ್ನುವ ಸ್ಥಾಪಿತ ಅಭಿಪ್ರಾಯ ಅನೇಕ ಲೇಖಕರದು. ಹೀಗೆ ಬರವಣಿಗೆಯಿಂದ ಸ್ವಯಂ ನಿವೃತ್ತಿ ತೆಗೆದುಕೊಳ್ಳುವ ನಮ್ಮ ಹಿರಿಯ ಲೇಖಕರು ತಮ್ಮ ಬದುಕಿನ ಸಂಧ್ಯಾ ಕಾಲವನ್ನು ಸಭೆ ಸಮಾರಂಭಗಳಲ್ಲಿ ಅತಿಥಿಗಳಾಗಿಯೋ ಇಲ್ಲವೇ ಕಿರಿಯ ಲೇಖಕರ ಪುಸ್ತಕಗಳಿಗೆ ಮುನ್ನುಡಿ ಬೆನ್ನುಡಿ ಬರೆದೋ ಅಷ್ಟಕ್ಕೇ ಸಂತೃಪ್ತರಾಗುವುದುಂಟು. ಇನ್ನು ಕೆಲವು ಹಿರಿಯರು ತಮ್ಮಲ್ಲಿನ ಬರವಣಿಗೆಯ ಕಸುವು ಕಮ್ಮಿಯಾಗುತ್ತಿದ್ದಂತೆ ಚಳವಳಿಯ ವ್ಯಾಧಿಯನ್ನು ಅಂಟಿಸಿಕೊಂಡು ಜಾತಿ ಧರ್ಮದ ಹೆಸರಿನಿಂದ ಸಮಾಜವನ್ನು ಒಡೆಯುವ ಸಾಹಸಕ್ಕೆ ಕೈಹಾಕುವರು. ಬರಹಗಾರನೊಳಗಿನ ಸೃಜನಾತ್ಮಕತೆ ಇಂಗಲು ಬಹುಮುಖ್ಯ ಕಾರಣ ಅನೇಕ ಲೇಖಕರು ತಮ್ಮ ಬರವಣಿಗೆ ಒಂದು ಹಂತಕ್ಕೆ ಬಂದ ಮೇಲೆ ಇತರರ ಕೃತಿಗಳನ್ನು ಓದುವುದನ್ನೇ ನಿಲ್ಲಿಸಿ ಬಿಡುವರು. ಬರವಣಿಗೆಯಂಥ ಸೃಜನಶೀಲ ಕ್ರಿಯೆಗೆ  ನಿರಂತರ ಅಧ್ಯಯನವೇ  ಮೂಲ ಪ್ರೇರಣೆಯಾಗುವುದು  ಮತ್ತು ಅಗತ್ಯವಾದ ಬಂಡವಾಳವನ್ನೊದಗಿಸುವುದು. ಹೀಗಿದ್ದೂ ನಮ್ಮ ಹಿರಿಯ ತಲೆಮಾರಿನ ಬರಹಗಾರರು ಅಧ್ಯಯನದಿಂದ ವಿಮುಖರಾಗಿ ಬರೆಯುವುದನ್ನೇ ನಿಲ್ಲಿಸುತ್ತಿರುವರು. ನಿಜಕ್ಕೂ ಇದು ನಾವುಗಳು ಆತಂಕ ಪಡಬೇಕಾದ ಸಂಗತಿ. ಜೊತೆಗೆ ಬರವಣಿಗೆಯ ಕೆಲಸ ನಿಲ್ಲಿಸಿದ ನಂತರವೂ ಮುಖ್ಯವಾಹಿನಿಯಲ್ಲಿ ಸದಾಕಾಲ ಕಾಣಿಸಿಕೊಳ್ಳಬೇಕೆನ್ನುವ ಹಪಾಹಪಿಯಿಂದ ಈ ಹಿರಿಯ ಬರಹಗಾರರು ದಿನಕ್ಕೊಂದು ವಿವಾದಿತ ಹೇಳಿಕೆಗಳನ್ನು ಕೊಡುತ್ತ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿರುವರು.

                    ಹಿರಿಯ ಲೇಖಕರೆಲ್ಲ ಸ್ವಯಂ ನಿವೃತ್ತಿ ಪಡೆಯುತ್ತಿರುವ ಈ ಸಂದರ್ಭ ಕೆಲವು ಲೇಖಕರು ವಾಲ್ಮೀಕಿ ಯಾರು? ರಾಮನ ಪ್ರೇಮ ಮತ್ತು ಕಾಮದ ಕಥೆ, ಕೃಷ್ಣನ ಲೀಲೆ ಎನ್ನುವ ವಿವಾದಿತ ಪುಸ್ತಕಗಳನ್ನು ಬರೆದು ಸಮಾಜದ ಸ್ವಾಸ್ಥ್ಯವನ್ನು ಕೆಡಿಸಲು ಪ್ರಯತ್ನಿಸುವರು. ಸಾಹಿತ್ಯ ಹಿಂದೆಯೆಲ್ಲ ಚಳವಳಿಗಳಿಗೆ ಪೂರಕವಾಗಿ ಕೆಲಸ ಮಾಡಿದ ಉದಾಹರಣೆಗಳು ಚರಿತ್ರೆಯಲ್ಲಿವೆ. ಆದರೆ ಆ ಸಂದರ್ಭ ಸಾಹಿತ್ಯ ಸಮಾಜವನ್ನು ಒಂದುಗೂಡಿಸುವ ಇಲ್ಲವೇ ಅಧಿಕಾರಶಾಹಿಯ ವಿರುದ್ಧದ ಹೋರಾಟಕ್ಕೆ ಪ್ರೇರೇಪಿಸುತ್ತಿತ್ತು. ಕುವೆಂಪು ಅವರ ಕಾನೂರು ಹೆಗ್ಗಡತಿ, ಕಾರಂತರ ಚೋಮನ ದುಡಿ ಈ ಕಾದಂಬರಿಗಳು ಒಂದು ಚಳವಳಿ ಅಥವಾ ಹೋರಾಟದ ಹಿನ್ನೆಲೆಯಲ್ಲೇ  ರೂಪುಗೊಂಡ ಕೃತಿಗಳು. ಆದರೆ ಇವತ್ತಿನ ಬರಹಗಾರರು ತಮ್ಮ ಬರವಣಿಗೆಯಿಂದ ಧರ್ಮ ಮತ್ತು ಜಾತಿಗಳ ನಡುವೆ ಕಂದಕವನ್ನು ಸೃಷ್ಟಿಸಿ ಆ ಮೂಲಕ ಸಮಾಜವನ್ನು ಒಡೆಯಲು ಪ್ರಯತ್ನಿಸುತ್ತಿರುವರು. ಇನ್ನೊಂದು ಕಳವಳದ ಸಂಗತಿ ಎಂದರೆ ಈ ಸಾಹಿತಿಗಳಲ್ಲೇ ಎಡ ಮತ್ತು ಬಲಪಂಥಿಯ ಎನ್ನುವ ವರ್ಗಗಳು ಸೃಷ್ಟಿಯಾಗಿದ್ದು ಅವರು ಒಬ್ಬರ ಮೇಲೊಬ್ಬರು ಕೆಸರೆರುಚುತ್ತ ಓದುಗರು ಬರಹಗಾರರೆಂದರೆ ಅಸಹ್ಯ ಪಡುವಂತೆ ವರ್ತಿಸುತ್ತಿರುವರು. ಜೊತೆಗೆ ನಮ್ಮ ಬರಹಗಾರರು  ಬಂಡಾಯ, ನವ್ಯ, ನವೋದಯ, ದಲಿತ, ಅಲ್ಪಸಂಖ್ಯಾತ  ಎಂದು ಹತ್ತು ಹಲವು ಗುಂಪುಗಳಲ್ಲಿ ಹರಿದು ಹಂಚಿಹೋಗಿ  ತಮ್ಮ ತಮ್ಮ ಅಸ್ತಿತ್ವವನ್ನು ಗುರುತಿಸಿಕೊಳ್ಳಲು ಹೆಣಗುತ್ತಿರುವರು. ಇತ್ತೀಚಿನ ದಿನಗಳಲ್ಲಿ ನಮ್ಮ ಬರಹಗಾರರೆಲ್ಲ ಸಂಘಟಿತರಾಗಿ ಚಳವಳಿ ಇಲ್ಲವೇ ಹೋರಾಟವನ್ನು ರೂಪಿಸಿದ ಉದಾಹರಣೆಯೇ ಇಲ್ಲ.

                ಕೆಲವು ದಿನಗಳ ಹಿಂದೆ ನಾಡಿನ ಪ್ರಸಿದ್ಧ ಸಾಹಿತಿಯೋರ್ವರು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ನಿಮ್ಮ ಪ್ರಕಾಶನ ಸಂಸ್ಥೆಯಿಂದ ಪ್ರಕಟವಾದ ಎಷ್ಟು ಕೃತಿಗಳಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ ಎಂದು ನೇರವಾಗಿ ಪ್ರಕಾಶಕರನ್ನೇ ಪ್ರಶ್ನಿಸಿದರು. ಪ್ರಶಸ್ತಿ ಪುರಸ್ಕಾರಗಳೆಲ್ಲ ತಮ್ಮ ಮೌಲ್ಯವನ್ನು ಕಳೆದುಕೊಳ್ಳುತ್ತಿರುವ ದಿನಗಳಲ್ಲಿ ಆ ಮಹನೀಯರು ಹೀಗೆ ಪ್ರಶ್ನಿಸಿದ್ದು ತೀರ ಅಸಂಗತವಾಗಿತ್ತು. ಪ್ರಶಸ್ತಿ ಪಡೆದ ಕೃತಿಗಳೆಲ್ಲ ಮೌಲಿಕ ಕೃತಿಗಳು ಎನ್ನುವುದು ಅವರ ನಂಬಿಕೆಯಾದರೆ ಪ್ರತಿ ವರ್ಷ ಪ್ರಕಟವಾಗುವ ಎಲ್ಲ ಪುಸ್ತಕಗಳಿಗೂ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಕೊಡಲು ಸಾಧ್ಯವೇ ಎನ್ನುವ ಪ್ರಶ್ನೆ ಇಲ್ಲಿ ಎದುರಾಗುತ್ತದೆ. ಜೊತೆಗೆ ಪ್ರಶಸ್ತಿಯ ಮಾನದಂಡಗಳು ಯಾವುವು ಎನ್ನುವ ಇನ್ನೊಂದು ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಪ್ರಶಸ್ತಿ ಮಾತ್ರ ಒಂದು ಕೃತಿಯ ಮೌಲ್ಯವನ್ನು ನಿರ್ಧರಿಸುತ್ತದೆ ಎನ್ನುವುದಾದರೆ ಕನ್ನಡಕ್ಕೆ ಇದುವರೆಗೆ ದೊರೆತಿದ್ದು ಕೇವಲ ಎಂಟು ಜ್ಞಾನಪೀಠ ಮಾತ್ರ. ಈ ಅರ್ಥದಲ್ಲಿ ಜ್ಞಾನಪೀಠ ಪುರಸ್ಕೃತರಿಂದ ಮಾತ್ರ ಕನ್ನಡದಲ್ಲಿ ಮೌಲಿಕ ಸಾಹಿತ್ಯ ಸೃಷ್ಟಿಯಾಗಿದೆ ಉಳಿದದ್ದು 'ಭೂಸಾ' ಸಾಹಿತ್ಯ ಎನ್ನಬೇಕೆ? ಕಣವಿ, ಜಿಎಸ್ಸೆಸ್, ದೇವನೂರ ಮಹಾದೇವ, ತೇಜಸ್ವಿ, ಲಂಕೇಶ್, ತರಾಸು, ಕಟ್ಟಿಮನಿ, ಇಂದಿರಾ, ತ್ರಿವೇಣಿ, ಅನುಪಮಾ ಇವರೆಲ್ಲ ಜ್ಞಾನಪೀಠ ಪುರಸ್ಕೃತರಿಗೆ ಸಮಾನದ ಕೃತಿಗಳನ್ನು ಬರೆಯಲಿಲ್ಲವೇ? (ನಮ್ಮ ಕುಂವೀ ಸಮಾರಂಭವೊಂದರಲ್ಲಿ ಜ್ಞಾನಪೀಠ ನಾನ್ಸೆನ್ಸ್ ಎಂದು ಸಿಟ್ಟಿನಿಂದ ಬೈದಿದ್ದರು) ಪ್ರಶಸ್ತಿಯೇ ಕೃತಿಯ ಗುಣಮಟ್ಟದ ಮಾನದಂಡ ಎನ್ನುವುದಾದರೆ ನಮ್ಮ ಬರಹಗಾರರೆಲ್ಲ ಬರವಣಿಗೆಯನ್ನೇ ನಿಲ್ಲಿಸಬೇಕಾಗುತ್ತದೆ. ಈಗಾಗಲೇ ಹಿರಿಯ ಲೇಖಕರು ಬರವಣಿಗೆಯಿಂದ ಸ್ವಯಂ ನಿವೃತ್ತಿ ತೆಗೆದುಕೊಂಡಿರುವ ಘಳಿಗೆ ಪ್ರಶಸ್ತಿಯ ಬರದಿಂದ ನಮ್ಮ ಯುವ ಬರಹಗಾರರು ಬರವಣಿಗೆಯನ್ನು ನಿಲ್ಲಿಸಿದಲ್ಲಿ ನಾಡಿನಲ್ಲಿ ಸಾಂಸ್ಕೃತಿಕ ದಾರಿದ್ರ್ಯ ಕಾಣಿಸಿಕೊಳ್ಳುವ ಅಪಾಯ ಎದುರಾಗುತ್ತದೆ.

                   ಈ ನಡುವೆ ಲೇಖಕರೇ ಪ್ರಕಾಶಕರಾಗಿ ಪುಸ್ತಕಗಳನ್ನು ಪ್ರಕಟಿಸುವ ಜವಾಬ್ದಾರಿಯನ್ನು ನಿರ್ವಹಿಸುತ್ತಿರುವರು. ಪರಿಣಾಮವಾಗಿ ಕನ್ನಡದಲ್ಲಿ ಪ್ರತಿವರ್ಷ ಅಸಂಖ್ಯಾತ ಪುಸ್ತಕಗಳು ಪ್ರಕಟಗೊಳ್ಳುತ್ತಿವೆಯೆಂದೂ ಮತ್ತು ಅವುಗಳಲ್ಲಿ ಅರ್ಧಕ್ಕಿಂತ ಹೆಚ್ಚು ಪುಸ್ತಕಗಳು ಓದಲು ಯೋಗ್ಯವಾಗಿರುವುದಿಲ್ಲ ಎನ್ನುವ ಅಪವಾದ ಕೇಳಿಬರುತ್ತಿದೆ. ಇದು ಸತ್ಯಕ್ಕೆ ಹತ್ತಿರವಾದ ಮಾತು. ಏಕೆಂದರೆ ಪುಸ್ತಕಗಳನ್ನು ಪ್ರಕಟಿಸುವ ಮಹತ್ವದ ಜವಾಬ್ದಾರಿ ಪ್ರಕಾಶಕರದೇ ಹೊರತು ಲೇಖಕರದಲ್ಲ. ವಿವರವಾಗಿ ಹೇಳುವುದಾದರೆ ಪ್ರಕಾಶಕರು  ಪುಸ್ತಕವೊಂದನ್ನು ಪ್ರಕಟಿಸಲು ನಿರ್ಧಿಷ್ಟ ಮಾನದಂಡಗಳಿವೆ. ಪ್ರಕಟಣೆಗೂ ಮೊದಲು ಕೃತಿಯೊಂದರ ಗುಣಮಟ್ಟವನ್ನು ನಿರ್ಧರಿಸಲು ಅಲ್ಲಿ ಹಸ್ತಪ್ರತಿ ಪರಿಶೀಲನಾ ಸಮತಿ ಇದ್ದು  ಈ ಸಮತಿಯು ಪ್ರಕಟಣೆಗೂ ಮೊದಲು ಹಸ್ತಪ್ರತಿಯನ್ನು ಅಮೂಲಾಗ್ರವಾಗಿ ಓದಿ ಅದರ  ಮೌಲಿಕತೆಯನ್ನು ಗುರುತಿಸಿ ಪ್ರಕಟಣೆಗೆ ಒಪ್ಪಿಗೆ ಸೂಚಿಸುತ್ತದೆ. ಆದರೆ ಲೇಖಕನೇ ಪ್ರಕಾಶಕನಾದಾಗ ಕೃತಿಯ ಮೌಲ್ಯ ಪರೀಕ್ಷೆಗೆ ಒಳಪಡುವುದಿಲ್ಲ. ಇನ್ನೊಂದು ಕೆಟ್ಟ ಬೆಳವಣಿಗೆ ಎಂದರೆ ಕೆಲವರು ತಮ್ಮ ಸಂಶೋಧನಾ ಪ್ರಬಂಧವನ್ನು   ತಾವೇ ಪ್ರಕಾಶಕರಾಗಿ ಪುಸ್ತಕ ರೂಪದಲ್ಲಿ ಪ್ರಕಟಿಸುವುದುಂಟು. ಸಾಮಾನ್ಯವಾಗಿ ಸಂಶೋಧನಾ ಪ್ರಬಂಧಗಳಲ್ಲಿ ಅಂಕಿ ಸಂಖ್ಯೆಯ ಮಾಹಿತಿಯೇ  ಹೆಚ್ಚಿರುವುದರಿಂದ ಅಂಥ ಕೃತಿಗಳು ವರದಿ ಎಂದೆನಿಸಿಕೊಳ್ಳುತ್ತವೆಯೋ ವಿನ: ಅವು  ಮೌಲಿಕ ಕೃತಿಗಳ ಗುಂಪಿಗೆ ಸೇರಲಾರವು.

                          ಓದುಗರು ಕನ್ನಡ ಪುಸ್ತಕಗಳ ಓದಿನಿಂದ ವಿಮುಖರಾಗುತ್ತಿರುವುದು ನನ್ನನ್ನು ಹೆಚ್ಚು ಚಿಂತಿಸುವಂತೆ ಮಾಡುತ್ತಿರುವ ಸಾಂಸ್ಕೃತಿಕ ತಳಮಳಗಳಲ್ಲೊಂದು. ಇಂಗ್ಲಿಷ್ ಮಾಧ್ಯಮದ ಶಿಕ್ಷಣ, ಜಾಗತೀಕರಣದ ಭರಾಟೆ, ಮನೋರಂಜನಾ ಮಾಧ್ಯಮಗಳ ಹಾವಳಿ ಇತ್ಯಾದಿ ಕಾರಣಗಳಿಂದ ನಮ್ಮ ಯುವ ಪೀಳಿಗೆಗೆ ಕನ್ನಡ ಪುಸ್ತಕಗಳ ಓದು ರುಚಿಸುತ್ತಿಲ್ಲ. ಆದರೆ ಮನೆಯ ಹಿರಿಯರೂ ಸಹ ತಮ್ಮ ಅಭಿರುಚಿಯನ್ನು ಪುಸ್ತಕಗಳ ಓದಿನಿಂದ ಟಿ ವಿ ಚಾನೆಲ್ ಗಳ ವೀಕ್ಷಣೆಗೆ ರೂಪಾಂತರಿಸಿಕೊಂಡಿರುವರು. ಒಂದು ಕಾಲದಲ್ಲಿ ಮನೆಯ ಕೆಲಸದ ಬಿಡುವಿನ ನಡುವೆ ಕನ್ನಡದ ಕಥೆ, ಕಾದಂಬರಿಗಳನ್ನು ಓದುತ್ತಿದ್ದ ಗೃಹಿಣಿಯರು ಈಗ ಧಾರಾವಾಹಿಗಳ ಪುಲ್ ಟೈಮ್ ನೋಡುಗರಾಗಿ ಬದಲಾಗಿರುವರು. ಪೊಗೊ, ಕಾರ್ಟೂನ್ ನೆಟ್ ವರ್ಕ್ ಗಳನ್ನು ನೋಡುತ್ತಿರುವ ಮಕ್ಕಳಿಗೆ ಚಂದಾಮಾಮ ನೋಡಲು ವ್ಯವಧಾನವಿಲ್ಲವಾಗಿದೆ (ಚಂದಾಮಾಮ ಈಗಲೂ ಪ್ರಕಟವಾಗುತ್ತಿರುವದು ಅಚ್ಚರಿಯ ವಿಷಯ).  ಈ ನಡುವೆ ಚೇತನ್ ಭಗತ್, ಅರುಧಂತಿ ರಾಯ್, ವಿಕ್ರಮ್ ಸೇಠ ಅವರಂಥ  ಲೇಖಕರು ಕನ್ನಡದ ಯುವ ಓದುಗರನ್ನು ಇಂಗ್ಲಿಷ್ ಕಾದಂಬರಿಗಳ ಓದಿನೆಡೆ ಸೆಳೆದುಕೊಂಡಿರುವರು. ವಿಶೇಷವಾಗಿ ನಮ್ಮ ಯುವ ಜನತೆಯಲ್ಲಿ ಓದಿನ ಅಭಿರುಚಿಯಿದೆಯಾದರೂ ಅವರದು ಕಾರ್ಪೊರೇಟ್ ಸಂಸ್ಕೃತಿಯಾಗಿರುವುದರಿಂದ ಅವರು ಕನ್ನಡ ಪುಸ್ತಕಗಳ ಓದನ್ನು ಅಷ್ಟೊಂದು ಗಂಭೀರವಾಗಿ ಪರಿಗಣಿಸಿಲ್ಲ. ಆದ್ದರಿಂದ ಈ ಪ್ರಕಾರದ ಓದುಗರನ್ನು (ಸಾಪ್ಟ್ ವೇರ್ ಟೆಕ್ಕಿಗಳು) ಗಂಭೀರ ಓದುಗರೆಂದು ಕರೆಯುವ ಹಾಗಿಲ್ಲ. ಜೊತೆಗೆ ಕರ್ನಾಟಕದಲ್ಲಿ ಇಂಗ್ಲಿಷ್ ಮಾಧ್ಯದಲ್ಲಿ ಕಲಿಯುತ್ತಿರುವ ಮಕ್ಕಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ವೃದ್ಧಿಸುತ್ತಿರುವುದರಿಂದ ಮುಂದೊಂದು ದಿನ ಕನ್ನಡ ಪುಸ್ತಕಗಳಿಗೆ ಓದುಗರೇ ಇಲ್ಲದಂಥ ಪರಿಸ್ಥಿತಿ ನಿರ್ಮಾಣವಾಗಲಿದೆ ಎನ್ನುವ ಆತಂಕ ಅನೇಕ ಲೇಖಕರದು.

ಸಿನಿಮಾ


                     ಲೇಖನದ ಪ್ರಾರಂಭದಲ್ಲಿ ಹೇಳಿದ 'ಮೇರಿ ಕೊಮ್' ಸಿನಿಮಾದ ಘಟನೆಯನ್ನೇ ಆಧಾರವಾಗಿಟ್ಟುಕೊಂಡು ನಾನು ಸಿನಿಮಾ ಎನ್ನುವ ಸಂಸ್ಕೃತಿಯ ಕುರಿತಾದ ನನ್ನ ತಳಮಳವನ್ನು ಅಕ್ಷರ ರೂಪಕ್ಕಿಳಿಸುತ್ತಿದ್ದೇನೆ. ಮೇರಿ ಕೋಮ್ ನಂಥ ಸಂದೇಶ ಸಾರುವ ಸಿನಿಮಾ ನಮ್ಮ ಪ್ರೇಕ್ಷಕರಿಗೆ ಬೇಕಾಗಿಲ್ಲವೆಂದರೆ ಅವರೆಂಥ ಸಿನಿಮಾಗಳನ್ನು ನಿರೀಕ್ಷಿಸುತ್ತಿರುವರು ಎನ್ನುವ ಪ್ರಶ್ನೆ ನನ್ನದು. ಹೀಗೆ ಪ್ರಶ್ನಿಸುತ್ತಿರುವ ಹೊತ್ತಿನಲ್ಲೇ ನಮ್ಮ ಪ್ರೇಕ್ಷರೆದುರು ಎರಡು ಆಯ್ಕೆಗಳಿವೆ ಎನ್ನುವ ಸಂಗತಿಯೂ ನನಗೆ ತಿಳಿದಿದೆ. ಒಂದು ಕಡೆ  ಸಮಾಜಮುಖಿ ಕಥೆಯಾಧರಿಸಿ ನಿರ್ಮಾಣಗೊಳ್ಳುತ್ತಿರುವ ಸಿನಿಮಾಗಳಿದ್ದರೆ ಇವುಗಳಿಗೆ ವಿರುದ್ಧವಾಗಿ ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವ ಮತ್ತು ಪ್ರೇಕ್ಷಕರನ್ನು ಹೆಚ್ಚು ಹೆಚ್ಚು ತಮ್ಮತ್ತ ಸೆಳೆಯುತ್ತಿರುವ ಸಿನಿಮಾಗಳಿವೆ. ಆದರೆ ನಮ್ಮ ಪ್ರೇಕ್ಷಕರು ಸಮಾಜಮುಖಿ ಕಥೆಯಾಧಾರಿತ ಸಿನಿಮಾಗಳನ್ನು ಕಲಾತ್ಮಕ ಎನ್ನುವ ಹಣೆಪಟ್ಟಿ ಕಟ್ಟಿ ಅವುಗಳನ್ನು ಸಿನಿಮಾ ಮಾಧ್ಯಮದ ಮೇನ್ ಸ್ಟ್ರಿಂ ನಿಂದ ದೂರವೇ ಇಟ್ಟಿರುವರು. ಅದಕ್ಕೆಂದೇ ಹಗ್ಗದ ಕೊನೆ, ಪುಟ್ಟಕ್ಕನ ಹೈವೇ, ಭಾರತ ಸ್ಟೋರ್ಸ್ ನಂಥ ಗಂಭೀರ ಕಥಾವಸ್ತುವಿನ ಸಿನಿಮಾಗಳನ್ನು ದೊಡ್ಡ ಪರದೆಯ ಮೇಲೆ ನೋಡಲು ಸಾಧ್ಯವಾಗುತ್ತಿಲ್ಲ. ಜೊತೆಗೆ ಸಿನಿಮಾ ರಂಗದ ಬಹುತೇಕ ನಟ ನಟಿಯರು ಮತ್ತು ನಿರ್ದೇಶಕರು ಈ ಕಲಾತ್ಮಕ ಸಿನಿಮಾಗಳಲ್ಲಿ ಕೆಲಸ ಮಾಡಲು ಇಚ್ಛಿಸುತ್ತಿಲ್ಲದಿರುವುದು ಬಹುದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಪ್ರಕಾಶ್ ರೈ ನಂಥ ಕಮರ್ಷಿಯಲ್ ಸಿನಿಮಾಗಳ ಖಳನಾಯಕ ಕನ್ನಡದಲ್ಲಿ 'ಅತಿಥಿ' ಎನ್ನುವ ಕಲಾತ್ಮಕ ಸಿನಿಮಾದಲ್ಲಿ ಹಣ ಪಡೆಯದೆ ಅಭಿನಯಿಸಿ ಇಂಥ ಸಿನಿಮಾಗಳಿಗೆ ಒತ್ತಾಸೆಯಾಗಿ ನಿಂತರು. ಆದರೆ ಇದೇ ಮನೋಭಾವವನ್ನು ನಾವು  ಇತರ ಜನಪ್ರಿಯ ಕಲಾವಿದರಿಂದ ನಿರೀಕ್ಷಿಸುವುದು ಶುದ್ಧ ಮೂರ್ಖತನವಾಗುತ್ತದೆ. ಇತ್ತೀಚಿಗೆ 'ಮೈತ್ರಿ' ಎನ್ನುವ ಮಕ್ಕಳ ಸಿನಿಮಾದಲ್ಲಿ ಸ್ಟಾರ್ ಕಲಾವಿದ ಪುನೀತ್ ಹಿರೊಯಿಜಮ್ ನ ಯಾವ ನಖರಾಗಳಿಗೂ ಆಸ್ಪದ ಕೊಡದೆ ಅಭಿನಯಿಸಿದ್ದು ಎಲ್ಲೋ ಒಂದು ಹೊಸ ಬೆಳವಣಿಗೆ ಎನ್ನಬಹುದು. ಆದರೆ ಪುನೀತ್ ಮತ್ತು ಪ್ರಕಾಶ್ ರೈ ಅವರ ಕೆಲಸವನ್ನು ಸಿನಿಮಾ ರಂಗವಾಗಲಿ ಇಲ್ಲವೇ ಮಾಧ್ಯಮಗಳಾಗಲಿ ಗುರುತಿಸಿದ್ದು ಬಹಳ ಕಡಿಮೆ. ಆದರೆ ಇದೆ ಪ್ರಕಾಶ್ ರೈ ನಾನು ನನ್ನ ಕನಸು, ಒಗ್ಗರಣೆ ಸಿನಿಮಾಗಳನ್ನು ಕನ್ನಡದಲ್ಲಿ ನಿರ್ದೇಶಿಸಿ ಅಭಿನಯಿಸಿದಾಗ ಸಿನಿಮಾ ವಿಮರ್ಶಕರು ಮತ್ತು ಮಾಧ್ಯಮಗಳು ಹಳಸಲು, ರೀಮೇಕ್ ಎಂದೆಲ್ಲ ಶರಾ ಬರೆದರು. ತೀರ ಅಂಗಾಂಗ ಪ್ರದರ್ಶನ, ಅಶ್ಲೀಲ ಸಂಭಾಷಣೆ, ಹೊಡೆದಾಟಗಳ ಸಿನಿಮಾಗಳಿಗಿಂತ ಈ ಪ್ರಕಾಶ್ ರೈ ನಿರ್ದೇಶನದ ಸಿನಿಮಾಗಳು ಉತ್ತಮ ಕಥೆಯಿಂದಾಗಿ ಕುಟುಂಬದ ಸದಸ್ಯರೆಲ್ಲ ಒಟ್ಟಾಗಿ ಕುಳಿತು ನೋಡುವಂತಿದ್ದವು ಎನ್ನುವ ಮಾತನ್ನು ತಳ್ಳಿ ಹಾಕುವಂತಿಲ್ಲ.

                ಹಿಂದೆಯೆಲ್ಲ ನಾಯಕನಟನ ಅಭಿನಯ  ಸಿನಿಮಾವೊಂದರ ಮೂಲ ಪಾತ್ರಕ್ಕೆ ಮಾತ್ರ ಸೀಮಿತವಾಗಿರುತ್ತಿತ್ತು. ಹಾಸ್ಯ ಮತ್ತು ಖಳ ಪಾತ್ರಗಳ ಅಭಿನಯಕ್ಕೆ ಬೇರೆ ಕಲಾವಿದರ ಪಾತ್ರ ವರ್ಗವಿರುತ್ತಿತ್ತು.   ಒಂದೊಮ್ಮೆ  ಖಳ ಅಥವಾ ಹಾಸ್ಯ ಪಾತ್ರ ಸಿನಿಮಾ ಕಥೆಯ ಬಹುಭಾಗವನ್ನು ಆವರಿಸುವಂತಿದ್ದರೆ ಆಗ ನಟ ನಾಯಕನಾಗಿಯೂ ಮತ್ತು ಖಳ ನಾಯಕ ಇಲ್ಲವೇ  ಹಾಸ್ಯ ನಟನಾಗಿಯೂ ದ್ವಿಪಾತ್ರದಲ್ಲಿ ಅಭಿನಯಿಸುತ್ತಿದ್ದ. ಹೀಗೆ ನಾಯಕ ಮತ್ತು ಖಳ ಎರಡೂ ಪಾತ್ರಗಳಲ್ಲಿ ಅಭಿನಯಿಸುವಾಗ ಕೆಟ್ಟ ಪಾತ್ರಕ್ಕೆ ನ್ಯಾಯದ ಚೌಕಟ್ಟಿನಲ್ಲಿ  ಶಿಕ್ಷೆ ದೊರೆಯುತ್ತಿತ್ತು. ದಾರಿ ತಪ್ಪಿದ ಮಗ, ನಾನೊಬ್ಬ ಕಳ್ಳ, ವಿಜಯ ವಿಕ್ರಮ್ ಈ ಸಿನಿಮಾಗಳನ್ನು ನಾಯಕ  ನಟರ ದ್ವಿಪಾತ್ರಕ್ಕೆ ಉದಾಹರಣೆಯಾಗಿ ಹೇಳಬಹುದು. ಕಾಲಾನಂತರದಲ್ಲಿ ಸಿನಿಮಾ ರಂಗದ ಚಿತ್ರಕಥೆಯಲ್ಲಿ ಸಾಕಷ್ಟು ಬದಲಾವಣೆಗಳಾಗಿ ನಾಯಕ  ನಟನನ್ನೇ ವಿವಿಧ ಪಾತ್ರಗಳಲ್ಲಿ ತೋರಿಸುವ  ಪ್ರಯೋಗಗಳಾದವು. ಪರಿಣಾಮವಾಗಿ ಈಗಿನ ನಾಯಕ ನಟರೆಲ್ಲ ಸಕಲ ಕಲಾವಲ್ಲಭರಾಗಿ ಯಾವ ಪಾತ್ರಕ್ಕೂ ಸೈ ಎಂದು ಅಭಿನಯಿಸತೊಡಗಿದರು. ಈ ಕಾರಣದಿಂದಲೇ ಜಗ್ಗೇಶ್, ಶರಣ್, ಕೋಮಲ್  ರಂಥ ಹಾಸ್ಯ ಕಲಾವಿದರು ತಮ್ಮ ವಿಚಿತ್ರ ಮ್ಯಾನರಿಜಂ ನಿಂದ ಇಲ್ಲಿ ನಾಯಕ ನಟರಾಗಿ ರೂಪುಗೊಂಡರು. ಪ್ರಭಾಕರ್, ದೇವರಾಜ್, ಶಶಿಕುಮಾರ್ ಇತ್ಯಾದಿ ಖಳ ನಟರು ನಾಯಕ ನಟರಾಗಿ ಬಡ್ತಿ ಪಡೆದರು. ಕಲಾವಿದರು ಹೀಗೆ ರೂಪಾಂತರಗೊಳ್ಳುವುದನ್ನು ನಾನು ವಿರೋಧಿಸುತ್ತಿಲ್ಲವಾದರೂ ಈ ಬೆಳವಣಿಗೆಯಿಂದ ನಾಯಕ ನಟ ಹೇಗಿರಬೇಕೆನ್ನುವ ಪ್ರೇಕ್ಷಕರ ಕಲ್ಪನೆಯನ್ನೇ ಬುಡಮೇಲು ಮಾಡುವಂಥ ಸಿನಿಮಾಗಳು ತಯ್ಯಾರಾಗತೊಡಗಿದವು. ನಾಯಕನನ್ನು ರೌಡಿ, ಕಳ್ಳ, ಕೊಲೆಗಾರನಾಗಿ ತೋರಿಸುವ ಸಾಲು ಸಾಲು ಸಿನಿಮಾಗಳು ಬೆಳ್ಳಿ ಪರದೆಯನ್ನು ಅಲಂಕರಿಸಿದವು. ಕೊಲೆ, ಕಳ್ಳತನ, ರಕ್ತಪಾತದ ವೈಭವೀಕರಣದಲ್ಲಿ ಸಿನಿಮಾದ ನಾಯಕ  ನಟನ ಇಮೇಜ್ ಸಂಪೂರ್ಣ ಬದಲಾಯಿತು. ನಾನೇ ರಾಜ, ಪ್ರಳಯಾಂತಕ, ಖದೀಮ ಕಳ್ಳರುನಂಥ ಸಾಲು ಸಾಲು ಕೊಲೆಗಳನ್ನು ಮಾಡುವ ಮತ್ತು ನ್ಯಾಯಾಲಯಕ್ಕೆ ಚಳ್ಳೆ ಹಣ್ಣು ತಿನ್ನಿಸುವ ಕಥಾವಸ್ತುವಿರುವ ಸಿನಿಮಾಗಳ ನಾಯಕರು ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಪ್ರೇಕ್ಷಕರ ಆರಾಧ್ಯ ದೈವವಾದರು. ಅದುವರೆಗೂ ಸದಭಿರುಚಿಯ ಸಿನಿಮಾಗಳ ನಿರ್ಮಾಣಕ್ಕೆ ಹೆಸರಾಗಿದ್ದ ರಾಜಕುಮಾರ್ ನಿರ್ಮಾಣ   ಸಂಸ್ಥೆ ಸಹ ಇಂಥದ್ದೊಂದು ಬದಲಾವಣೆಗೆ ಅನಿವಾರ್ಯವಾಗಿ ತೆರೆದುಕೊಳ್ಳಬೇಕಾಯಿತು. ಪರಿಣಾಮವಾಗಿ ಅದೇ ಆಗ ಪ್ರವರ್ಧಮಾನಕ್ಕೆ ಬರುತ್ತಿದ್ದ ಶಿವಣ್ಣನನ್ನು ರೌಡಿ ಪಾತ್ರದಲ್ಲಿ ಚಿತ್ರಿಸಿದ  ಭೂಗತ ಲೋಕದ ಪಾತಕಿಗಳ ಕಥೆಯುಳ್ಳ 'ಓಂ' ಸಿನಿಮಾ ರಾಜ್ ಬ್ಯಾನರಿನಲ್ಲಿ ನಿರ್ಮಾಣಗೊಂಡಿತು. ವಿಪರ್ಯಾಸವೆಂದರ ಕನ್ನಡ ಚಿತ್ರರಂಗ ಕಳೆದೆರಡು ದಶಕಗಳಿಂದ ಈ ನಟನನ್ನು ರೌಡಿ ಪಾತ್ರಗಳ ಇಮೇಜಿಗೆ ಬ್ರ್ಯಾಂಡ್ ಮಾಡಿ  ಬಿಟ್ಟಿದೆ. ಸಿನಿಮಾ ನಾಯಕ ರೌಡಿಯಾಗುವುದು, ಸಾಲು ಸಾಲು ಕೊಲೆಗಳನ್ನು ಮಾಡುವುದು ಸಿನಿಮಾದ ಕೊನೆಯಲ್ಲಿ ನಿರಪರಾಧಿ ಎಂದು ಬಿಡುಗಡೆಯಾಗುವ ಇಂಥದ್ದೇ ಕಥೆಯ ನೂರಾರು ಸಿನಿಮಾಗಳು ಪ್ರತಿವರ್ಷ ಬಿಡುಗಡೆಯಾಗುತ್ತಿವೆ. ರೌಡಿಜಂ ಕಥೆಯ  ಸಿನಿಮಾಗಳ ನಾಯಕರನ್ನೇ ಆದರ್ಶವಾಗಿಟ್ಟುಕೊಳ್ಳುವ ನಮ್ಮ ಯುವ ಪೀಳಿಗೆ ಸತ್ಯ, ಮಸ್ತಿ, ಕಿಚ್ಚ, ಹುಚ್ಚರನ್ನು ತಮ್ಮೊಳಗೆ ಅಂತರ್ಗತಗೊಳಿಸಿಕೊಂಡು ಆ ಪಾತ್ರಗಳಂತೆಯೇ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುತ್ತಿರುವರು. ಹೀಗೆ ಸಿನಿಮಾ ಎನ್ನುವ ಸೃಜನಶೀಲ ಮಾಧ್ಯಮದ  ತಳಮಳದ ಕುರಿತು ಬರೆಯುತ್ತಿರುವ ಹೊತ್ತಿನಲ್ಲೇ ಒಂದು ಪ್ರೇಕ್ಷಕ ಗಣ ನನಗೆ ಸವಾಲಿನ ಪ್ರಶ್ನೆಯನ್ನು ಹಾಕಿ ನಾನು ಮತ್ತಷ್ಟು ಚಿಂತಿಸುವಂತೆ ಮಾಡುತ್ತಿರುವರು. ಅವರು ಹೀಗೆ ಪ್ರಶ್ನಿಸುತ್ತಿರುವುದರಲ್ಲೂ ನ್ಯಾಯವಿದೆ ಎನ್ನುವ ನಂಬಿಕೆ ನನ್ನದು. ಮೊನ್ನೆ ಟಿ ವಿ ಯಲ್ಲಿ 'ದೃಶ್ಯ' ಸಿನಿಮಾ ವೀಕ್ಷಿಸಿದ ಹಿರಿಯರೊಬ್ಬರು ಆ ಸಿನಿಮಾದ ನಾಯಕ ಪತ್ನಿ ಮತ್ತು ಮಗಳು ಮಾಡಿದ ಕೊಲೆಯನ್ನು ಮುಚ್ಚಿಡಲು ಮಾಡುವ ಪ್ರಯತ್ನ ಮತ್ತು ಆ ಒಂದು ಅಪವಾದದಿಂದ ಬಚಾವಾಗುವುದು ಅದು ಇಡೀ ನ್ಯಾಯಾಂಗ ವ್ಯವಸ್ಥೆಯನ್ನೇ ಅಣಕಿಸುವಂತಿತ್ತು ಇದು ಸರಿಯೇ ಎಂದು ಪ್ರಶ್ನಿಸಿದರು. ಸಿನಿಮಾ ಮಾಧ್ಯಮ ಇಡೀ ವ್ಯವಸ್ಥೆಯನ್ನೇ ಅತ್ಯಂತ ಸರಳಿಕೃತಗೊಳಿಸಿರುವದರಿಂದ ಇಲ್ಲಿ ಏನೆಲ್ಲ ಸಂಭವಿಸಬಹುದು ಹೀಗಾಗಿ ಆ ವೃದ್ಧರ ಪ್ರಶ್ನೆಗೆ ನನ್ನಲ್ಲಿ ಉತ್ತರವಿರಲಿಲ್ಲ.

                   ಇನ್ನು ಸಿನಿಮಾದಲ್ಲಿನ ಹಾಡುಗಳ ವಿಷಯಕ್ಕೆ ಬಂದರೆ ಹಿಂದೆಯೆಲ್ಲ ಸಿನಿಮಾ ಹಾಡುಗಳು ದೇವರ ಮನೆಯಲ್ಲಿ ಭಕ್ತಿ ಹಾಡಾಗಿ ಮತ್ತು ಶಾಲೆಗಳಲ್ಲಿ ಪ್ರಾರ್ಥನಾ ಗೀತೆಯಾಗಿ ಬಳಕೆಯಾದ ಸಾಕಷ್ಟು ಉದಾಹರಣೆಗಳಿವೆ. ಆಗೆಲ್ಲ ಸಿನಿಮಾ ಹಾಡುಗಳಲ್ಲಿ ಒಂದು ಸಂದೇಶವಿರುತ್ತಿತ್ತು. ಬಂಗಾರದ ಮನುಷ್ಯ ಸಿನಿಮಾದ "ಕೈಲಾಗದು ಎಂದು ಕೈಕಟ್ಟಿ ಕುಳಿತರೆ ಆಗದು ಕೆಲಸವು ಎಂದೂ" ಎನ್ನುವ ಹಾಡು ಆ ದಿನಗಳ  ಕೃಷಿಕರ ಬದುಕಿನಲ್ಲಿ ಭರವಸೆಯ ಆಶಾಕಿರಣವನ್ನು ಮೂಡಿಸಿತು. "ಸ್ವಾಮಿ ದೇವನೆ ಲೋಕ ಪಾಲನೆ" ಎನ್ನುವ ಸಿನಿಮಾ ಗೀತೆ ಶಾಲೆಗಳಲ್ಲಿ ಪ್ರಾರ್ಥನಾ ಗೀತೆಯಾಯಿತು. "ಪೂಜಿಸಲೆಂದು ಹೂಗಳ ತಂದೆ" ಹಾಡನ್ನು ದೇವರ ಮನೆಯಲ್ಲಿ ಅದೆಷ್ಟೋ ಕಂಠಗಳು ದೇವರ ನಾಮವಾಗಿ ಹಾಡಿದ್ದುಂಟು. ಕನ್ನಡ ನೆಲದ ಚರಿತ್ರೆ ಮತ್ತದರ ವೈಭವ ರಾಜಕುಮಾರ ಅವರ ಕಂಠಸಿರಿಯಲ್ಲಿ ಹಾಡಿನ ರೂಪದಲ್ಲಿ  ಅನೇಕ ಸಿನಿಮಾಗಳಲ್ಲಿ ಕಾಣಿಸಿಕೊಂಡಿದೆ. ಕುವೆಂಪು, ಬೇಂದ್ರೆ, ಕೆ. ಎಸ್. ನರಸಿಂಹಸ್ವಾಮಿ ಅವರ ಹಾಡುಗಳನ್ನೂ ಸಂದರ್ಭಕ್ಕನುಸಾರವಾಗಿ ಸಿನಿಮಾಗಳಲ್ಲಿ ಬಳಸಿಕೊಂಡಿದ್ದುಂಟು.  ಆದರೆ ಕಾಲ ಬದಲಾದಂತೆ ಕನ್ನಡ ಸಿನಿಮಾಗಳ ಹಾಡುಗಳು ಸಹ ಹೊಸ ರೂಪಾಂತರ ಹೊಂದಿ ಅಪ್ಪಾ ಲೂಜು, ಹಳೆ ಕಬ್ಣ, ಸೊಂಟದ ವಿಷಯ ಹೀಗೆ ಅಸಂಬದ್ಧ ಮತ್ತು ಅಶ್ಲೀಲ ಪದಗಳು ನಮ್ಮ ಸಿನಿಮಾ ಹಾಡುಗಳಲ್ಲಿ ಹೆಚ್ಚು ಹೆಚ್ಚು ಜಾಗ ಪಡೆಯತೊಡಗಿದವು. ಒಂದು ಕಾಲದಲ್ಲಿ ಶಾಲೆಗಳಿಗೆ ಪ್ರಾರ್ಥನಾ ಗೀತೆಯನ್ನು ಕೊಟ್ಟ ಸಿನಿಮಾರಂಗ ಮುಂದಿನ ದಿನಗಳಲ್ಲಿ ಶಿಕ್ಷಕಿ ಪಾತ್ರದಿಂದ "ಅ ಆ ಇ ಈ........ ಅಂ ಆ:" ಎಂದು ಅತ್ಯಂತ ಮಾದಕವಾಗಿ ಹಾಡಿಸಿತು. ಇವತ್ತಿನ ಸಿನಿಮಾಗಳಲ್ಲಿ ಹಾಡುಗಳನ್ನು ಕೇವಲ ಪ್ರೇಕ್ಷಕರನ್ನು ಸಿನಿಮಾ ಮಂದಿರಗಳತ್ತ ಸೆಳೆಯುವ ತಂತ್ರವಾಗಿ ಮಾತ್ರ ಬಳಸಿಕೊಳ್ಳಲಾಗುತ್ತಿದೆ. ಈ ಕಾರಣದಿಂದಾಗಿ ಸಿನಿಮಾವೊಂದರ ಹಾಡುಗಳಿಗೂ ಮತ್ತು ಸಿನಿಮಾ ಕಥೆಗೂ ಯಾವುದೇ ಸಂಬಂಧವಿರುವುದಿಲ್ಲ. ಹೀಗೆ ಹಾಡನ್ನು ಸಿನಿಮಾದಲ್ಲಿ ತಂತ್ರ ಇಲ್ಲವೇ ಸಾಧನವಾಗಿ ಬಳಸಿಕೊಂಡಾಗ ಅಲ್ಲಿ ಅಶ್ಲೀಲತೆ ಮತ್ತು ಅಸಹಜತೆ ಹೆಚ್ಚು ಪಾರುಪತ್ಯ ಸಾಧಿಸಿ ಸಹಜತೆ ಎನ್ನುವುದು ಗೌಣವಾಗುತ್ತದೆ.

ಕೊನೆಯ ಮಾತು 


                ಓದಿದ ಪುಸ್ತಕ ಮತ್ತು  ನೋಡಿದ ಸಿನಿಮಾ ನಮ್ಮನ್ನು ಅನೇಕ ದಿನಗಳವರೆಗೆ ಕಾಡಬೇಕು. ಜೊತೆಗೆ ಸಾಹಿತ್ಯ ಮತ್ತು ಸಿನಿಮಾ ಸಮಾಜಮುಖಿ ಆಗಿರಬೇಕಾದ ಅಗತ್ಯ ಬಹಳಷ್ಟಿದೆ. ಸಮಾಜವೊಂದರ ಪರಿವರ್ತನೆಗೆ ಈ ಎರಡು ಮಾಧ್ಯಮಗಳು ಕಾರಣವಾಗಬೇಕು. ಹಿಂದೆಯೆಲ್ಲ ಸಾಹಿತ್ಯ ಮತ್ತು ಸಿನಿಮಾದಿಂದ ಉತ್ತಮ ಸಮಾಜ ನಿರ್ಮಾಣಗೊಂಡಿದ್ದಕ್ಕೆ ಇತಿಹಾಸದಲ್ಲಿ ಸಾಕಷ್ಟು ಉದಾಹರಣೆಗಳಿವೆ. ರಾಜಕುಮಾರ ಅವರಂಥ ಕಲಾವಿದ ಸದಭಿರುಚಿಯ ಮತ್ತು ಸಮಾಜಮುಖಿ ಸಿನಿಮಾಗಳಿಂದ ಪ್ರೇಕ್ಷಕರ ಆರಾಧ್ಯ ದೈವವಾಗಿ ಬೆಳೆದು ನಿಂತರು. ಕುವೆಂಪು, ಬೇಂದ್ರೆ, ಕಾರಂತ ಈ ನೆಲದ ಜನರ ಬದುಕನ್ನೇ ಅಕ್ಷರ ರೂಪಕ್ಕಿಳಿಸಿ ಸಾಹಿತ್ಯವನ್ನು ಸಮಾಜಮುಖಿಯಾಗಿಸಿದರು. ಆದರೆ ಇವತ್ತು ಅಭಿವ್ಯಕ್ತಿ ಮಾಧ್ಯಮಗಳಾದ  ಸಾಹಿತ್ಯ ಮತ್ತು ಸಿನಿಮಾ  ಜಾಗತೀಕರಣದ ಸುಳಿಗೆ ಸಿಲುಕಿ ಸಾಕಷ್ಟು ಬದಲಾವಣೆಗೊಂಡಿವೆ. ಈ ತಂತ್ರಜ್ಞಾನದ ಯುಗದಲ್ಲಿ ಓದುಗ ಮತ್ತು ಪ್ರೇಕ್ಷಕನ ಮನೋಭಾವದಲ್ಲೂ ಬಹುದೊಡ್ಡ ಪರಿವರ್ತನೆಯಾಗಿದೆ. ಪುಸ್ತಕ ಹಾಗೂ ಸಿನಿಮಾ ಮನೋರಂಜನೆಯ ಸರಕೆಂಬ ಭಾವನೆ ಬಲವಾಗುತ್ತಿರುವ ಹೊತ್ತಿನಲ್ಲೇ ಕೆಲವು ಸೃಜನಶೀಲ ಮನಸ್ಸುಗಳು ಸಾಂಸ್ಕೃತಿಕ ವಲಯವೊಂದು ಹೀಗೆ ರೂಪಾಂತರಗೊಳ್ಳುತ್ತಿರುವುದನ್ನು ನೋಡಿ ತಲ್ಲಣಗೊಳ್ಳುತ್ತಿವೆ.

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 


     

      

No comments:

Post a Comment