‘ನಿರ್ದೇಶಕ ಮನುಷ್ಯನ ಅನಿರೀಕ್ಷಿತ ಪದರುಗಳಿಗೆ ತನ್ನ ಒಳನೋಟವನ್ನು ಹರಿಸಿದಾಗ ಮಾತ್ರ ಅತ್ಯುತ್ತಮ ಸಿನಿಮಾಗಳ ಕಾಣ್ಕೆ ಸಾಧ್ಯ’ ಎನ್ನುತ್ತಾರೆ ಲಂಕೇಶ್. ಸಿನಿಮಾ ಎನ್ನುವುದು ಬದುಕಿಗೆ ಹತ್ತಿರವಾದ ಮತ್ತು ಫ್ಯಾಂಟಸಿಯಿಂದ ಮುಕ್ತವಾದ ಮಾಧ್ಯಮವಾದಾಗಲೇ ಉತ್ತಮ ಸಿನಿಮಾಗಳು ರೂಪುಗೊಳ್ಳಲು ಸಾಧ್ಯ ಎನ್ನುವುದು ಲಂಕೇಶರ ನಂಬಿಕೆಯಾಗಿತ್ತು. ಒಟ್ಟಾರೆ ಸಿನಿಮಾ ಎನ್ನುವುದು ಮಾನವನ ಮೂಲಭೂತ ದ್ವಂದ್ವ ಮತ್ತು ಅಸಹಾಯಕತೆಗೆ ಕನ್ನಡಿಯಾಗಬೇಕು ಎನ್ನುತ್ತಾರೆ ಲಂಕೇಶ್. ಈ ಕಾರಣದಿಂದಲೇ ಲಂಕೇಶ್ ನಿರ್ದೇಶಕರಾಗಿ ಪಲ್ಲವಿ, ಅನುರೂಪ, ಎಲ್ಲಿಂದಲೋ ಬಂದವರುನಂತಹ ಬದುಕಿಗೆ ಹತ್ತಿರವಾದ ಮತ್ತು ಫ್ಯಾಂಟಸಿಯಿಂದ ಮುಕ್ತವಾದ ಸಿನಿಮಾಗಳನ್ನು ಮಾಡಲು ಸಾಧ್ಯವಾಯಿತು. ಅವಾಸ್ತವಿಕ ನೆಲೆಯಲ್ಲಿ ರೂಪುಗೊಳ್ಳುತ್ತಿರುವ ಸಿನಿಮಾಗಳು ಮತ್ತು ಸಿನಿಮಾ ಮಾಧ್ಯಮವನ್ನು ಹೊಸ ಪರಿವೇಷದಲ್ಲಿ ನಾವು ನೋಡುತ್ತಿರುವ ಈ ಕಾಲಘಟ್ಟದಲ್ಲಿ ಲಂಕೇಶರಂಥ ನಿರ್ದೇಶಕರು ಮತ್ತೆ ಮತ್ತೆ ನೆನಪಾಗುತ್ತಾರೆ. ಸಿನಿಮಾವೊಂದು ಯಶಸ್ವಿಯಾಗಲು ಸಿನಿಮಾದ ಕಥೆಗಿಂತ ದೃಶ್ಯವೇ ಹೆಚ್ಚು ಪ್ರಸ್ತುತ ಎನ್ನುವ ಇವತ್ತಿನ ಸಿನಿಮಾ ಜನರ ಬದಲಾದ ಮನೋಭಾವ ಸಿನಿಮಾ ಅದೊಂದು ದೃಶ್ಯ ಮಾಧ್ಯಮ ಎನ್ನುವ ಮಾತನ್ನು ಮತ್ತೆ ಮತ್ತೆ ಸಾಬಿತು ಪಡಿಸುತ್ತಿದೆ. ಆಧುನಿಕ ತಂತ್ರಜ್ಞಾನ ಕೊಡಮಾಡುತ್ತಿರುವ ಏನೆಲ್ಲ ಸೌಲಭ್ಯಗಳನ್ನು ಬಳಸಿಕೊಂಡು ರೀಲು ಸುತ್ತುತ್ತಿರುವ ಸಿನಿಮಾ ಮಾಧ್ಯಮದವರು ಇಲ್ಲಿ ಕಥೆಗಿಂತ ಮೈನವಿರೆಳಿಸುವ ದೃಶ್ಯಗಳಿಗೇ ಹೆಚ್ಚು ಒತ್ತು ನೀಡುತ್ತಿರುವರು. ಬಾಹುಬಲಿಯಂಥ ಸಿನಿಮಾವೊಂದು ಎರಡು ಭಾಗಗಳಲ್ಲಿ ಮತ್ತು ಬಹುಭಾಷೆಗಳಲ್ಲಿ ನಿರ್ಮಾಣಗೊಂಡು ಭಾರೀ ಯಶಸ್ಸು ಗಳಿಸಲು ಸಾಧ್ಯವಾದದ್ದು ಸಿನಿಮಾದ ಕಥೆಗಿಂತ ಆ ಸಿನಿಮಾದಲ್ಲಿ ಗ್ರಾಫಿಕ್ ತಂತ್ರಜ್ಞಾನದಿಂದ ಬಳಸಿಕೊಂಡ ದೃಶ್ಯಗಳೇ ಮುಖ್ಯ ಕಾರಣ ಎನ್ನುವ ಮಾತು ಸತ್ಯಕ್ಕೆ ಹತ್ತಿರವಾಗಿದೆ. ಸಿನಿಮಾ ಪರದೆಯ ಮೇಲಿನ ಪ್ರೇಕ್ಷಕರ ನೋಟವನ್ನು ಅತ್ತಿತ್ತ ಕದಲದಂತೆ ಎರಡು ಎರಡೂವರೆ ತಾಸುಗಳ ಕಾಲ ಹಿಡಿದಿಟ್ಟರೆ ಯಶಸ್ಸು ಖಂಡಿತ ಎನ್ನುವುದನ್ನು ನಮ್ಮ ಸಿನಿಮಾ ಜನ ಅರ್ಥಮಾಡಿಕೊಂಡಿರುವರು. ಆದ್ದರಿಂದ ಇಲ್ಲಿ ಕಥೆಗಿಂತ ದೃಶ್ಯಗಳನ್ನು ವೈಭವೀಕರಿಸುವುದಕ್ಕೇ ಹೆಚ್ಚಿನ ಆದ್ಯತೆಯನ್ನು ನೀಡಲಾಗುತ್ತದೆ. ಆಕಾಶದೆತ್ತರದ ಬೆಟ್ಟಗಳನ್ನು ಸಲೀಸಾಗಿ ಏರಿಳಿಯುವುದು, ಬೃಹತ್ ಗಾತ್ರದ ಲಿಂಗವನ್ನು ನಿರಾಯಾಸವಾಗಿ ಎತ್ತುವುದು, ಧುಮ್ಮಿಕ್ಕುವ ಜಲಪಾತವನ್ನು ಏಣಿಯಾಗಿಸಿಕೊಂಡು ಅದರ ಮೂಲಕ್ಕೆ ಹೋಗಿ ನಿಲ್ಲುವುದು, ಸಾವಿರಾರು ಸೈನಿಕರನ್ನು ಕ್ಷಣಮಾತ್ರದಲ್ಲಿ ಹೊಡೆದುರುಳಿಸುವುದು ಹೀಗೆ ಕಲ್ಪನೆಗೂ ನಿಲುಕದ ದೃಶ್ಯಗಳನ್ನು ಸಾಕಷ್ಟು ಸಂಖ್ಯೆಯಲ್ಲಿ ಸಿನಿಮಾದಲ್ಲಿ ತುಂಬಿ ಪ್ರೇಕ್ಷಕರನ್ನು ಸಮ್ಮೋಹಿನಿಯಂತೆ ಸಿನಿಮಾ ಮಂದಿರಗಳ ಕಡೆ ಸೆಳೆಯಲಾಗುತ್ತಿದೆ. ಇಂಥ ಅವಾಸ್ತವಿಕ ಮತ್ತು ಅಸಹಜ ದೃಶ್ಯಗಳಿಂದ ಕೂಡಿದ ಸಿನಿಮಾದ ಅಲೆ ಎದುರು ವೃದ್ಧಾಪ್ಯದ ಸಮಸ್ಯೆಗಳನ್ನು ಆಧಾರವಾಗಿಟ್ಟುಕೊಂಡು ಬದುಕಿಗೆ ತೀರ ಹತ್ತಿರವಾದ ಸಿನಿಮಾವೊಂದು ಪ್ರೇಕ್ಷಕರ ಕೊರತೆಯಿಂದ ಸೋಲುವುದು ಸಿನಿಮಾ ಮಾಧ್ಯಮದ ದುರಂತಗಳಲ್ಲೊಂದು.
ಇದು ಗ್ರಾಫಿಕ್ ಯುಗ
ಆಧುನಿಕ ತಂತ್ರಜ್ಞಾನ ಸಿನಿಮಾ ಮಾಧ್ಯಮದವರ ಕೆಲಸವನ್ನು ಅತ್ಯಂತ ಹಗುರಾಗಿಸಿದೆ. ತಂತ್ರಜ್ಞಾನದ ಸಹಾಯದಿಂದ ಪ್ರೇಕ್ಷರ ಕಲ್ಪನೆಗೂ ನಿಲುಕದ ದೃಶ್ಯಗಳನ್ನು ಸಿನಿಮಾದಲ್ಲಿ ಅಳವಡಿಸಲು ಸಾಧ್ಯವಾಗುತ್ತಿದೆ. ಈ ತಂತ್ರಜ್ಞಾನವನ್ನು ಮೊಟ್ಟ ಮೊದಲು ಅತ್ಯಂತ ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದು ಹಾಲಿವುಡ್ ಎನ್ನುವ ಸಿನಿಮಾ ಉದ್ಯಮ. ಅನಕೊಂಡ, ಜುರಾಸಿಕ್ ಪಾರ್ಕ್, ಟೈಟಾನಿಕ್, ಅವತಾರನಂಥ ಗ್ರಾಫಿಕ್ ಆಧಾರಿತ ಸಿನಿಮಾಗಳಿಗೆ ಪ್ರೇಕ್ಷಕ ವರ್ಗದಿಂದ ದೊರೆತ ಸ್ವಾಗತ ಮತ್ತು ಪಡೆದ ಅಭೂತಪೂರ್ವ ಗೆಲುವು ನಂತರದ ದಿನಗಳಲ್ಲಿ ವಿವಿಧ ಭಾಷೆಗಳ ಸಿನಿಮಾ ಮಾಧ್ಯಮದವರಿಗೆ ಸ್ಪೂರ್ತಿ ಮತ್ತು ಪ್ರೇರಣೆಯಾಯಿತು. ಹಾಲಿವುಡ್‍ನ್ ಈ ಸಿನಿಮಾಗಳನ್ನೇ ಮಾದರಿಯಾಗಿಟ್ಟುಕೊಂಡು ಹಿಂದಿ ಸಿನಿಮಾಗಳ ನಿರ್ದೇಶಕರು ಮತ್ತು ನಿರ್ಮಾಪಕರಗಳು ಗ್ರಾಫಿಕ್ ಆಧಾರಿತ ಹಲವಾರು ಸಿನಿಮಾಗಳನ್ನು ನಿರ್ಮಾಣ ಮಾಡಿ ಜನಪ್ರಿಯತೆಯೊಂದಿಗೆ ಗಲ್ಲಾಪೆಟ್ಟಿಗೆಯನ್ನು ತುಂಬಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಕಟ್ಟಡದಿಂದ ಕಟ್ಟಡಕ್ಕೆ ಸಲೀಸಾಗಿ ಜಿಗಿಯುವ, ಆಕಾಶದಲ್ಲೇ ಶತ್ರುಗಳನ್ನು ಸದೆಬಡಿಯುವ, ಖಳರಿಂದ ಜನಸಾಮಾನ್ಯರನ್ನು ರಕ್ಷಿಸಲು ನಾಯಕ ಕ್ಷಣಮಾತ್ರದಲ್ಲಿ ಪ್ರತ್ಯಕ್ಷನಾಗುವ ಕ್ರಿಶ್ ಸಿನಿಮಾ ಹಲವು ಭಾಗಗಳಲ್ಲಿ ನಿರ್ಮಾಣಗೊಂಡು ಅಪಾರ ಯಶಸ್ಸನ್ನು ಪಡೆಯಲು ಈ ಗ್ರಾಫಿಕ್ ಎನ್ನುವ ಹೊಸ ಅವಿಷ್ಕಾರವನ್ನು ಅತ್ಯಂತ ಸಶಕ್ತವಾಗಿ ದುಡಿಸಿಕೊಂಡ ನಿರ್ದೇಶಕನ ಜಾಣ್ಮೆಯೇ ಕಾರಣವಾಯಿತು. ಇಲ್ಲಿ ನಾಯಕ ನಟನ ಸಹಜ ಅಭಿನಯದಿಂದ ಚಿತ್ರಿಕರಿಸಲು ಅಸಾಧ್ಯವಾಗುವ ಅನೇಕ ದೃಶ್ಯಗಳನ್ನು ಗ್ರಾಫಿಕ್ ತಂತ್ರಜ್ಞಾನವನ್ನು ಬಳಸಿಕೊಂಡು ಅತೀ ಸುಲಭವಾಗಿ ಮತ್ತು ಸಹಜವೆಂಬಂತೆ ರೂಪಿಸಲು ಸಾಧ್ಯವಾಗುತ್ತದೆ. ಈ ಕಾರಣದಿಂದಲೇ ಇಲ್ಲಿ ನಾಯಕ ನಟರುಗಳಿಗೆ ಪರ್ಯಾಯವಾಗಿ ರೊಬೋಟ್ ಮತ್ತು ರಾ-ವನ್‍ನಂಥ ತಂತ್ರಜ್ಞಾನ ರೂಪಿತ ನಾಯಕರು ಅವತರಿಸುತ್ತಾರೆ. ಕೊಲೆಯಾದ ಪ್ರೇಮಿ ನೊಣವಾಗಿ ಜನ್ಮತೆಳೆದು ಸೇಡು ತೀರಿಸಿಕೊಳ್ಳುವ ‘ಈಗ’ ಸಿನಿಮಾ ತೆಲುಗು ಮಾತ್ರವಲ್ಲದೆ ಹಲವು ಭಾಷೆಗಳಿಗೆ ಡಬ್ಬಿಂಗಾಗಿ ಯಶಸ್ಸನ್ನು ಪಡೆಯುವುದಕ್ಕೆ ಕಾರಣವೇನು ಎನ್ನುವ ಪ್ರಶ್ನೆಗೆ ನಾವು ಮತ್ತೆ ಮೊರೆಹೋಗುವುದು ಈ ಗ್ರಾಫಿಕ್ ತಂತ್ರಜ್ಞಾನವನ್ನೇ. ಇಲ್ಲದ ನೊಣವನ್ನು ಕಲ್ಪಿಸಿಕೊಂಡು ಮನೋಜ್ಞವಾಗಿ ಅಭಿನಯಿಸಿದ ಸುದೀಪ್ ನಟನೆಯ ಹೊರತಾಗಿಯೂ ಈ ಸಿನಿಮಾದ ಯಶಸ್ಸಿನ ಬಹುಪಾಲು ಕೀರ್ತಿ ಸಲ್ಲಬೇಕಾದದ್ದು ಆ ಸಿನಿಮಾದಲ್ಲಿ ಬಳಸಿಕೊಂಡ ತಂತ್ರಜ್ಞಾನಕ್ಕೆ. ತಂತ್ರಜ್ಞಾನ ಆಧಾರಿತ ದೃಶ್ಯಗಳನ್ನೇ ಹೇರಳವಾಗಿ ಬಳಸಿಕೊಂಡು ಯಶಸ್ಸನ್ನು ಪಡೆದ ಬಾಹುಬಲಿ, ರೊಬೋಟ್, ಕ್ರಿಶ್, ರಾ-ವನ್, ಈಗ ಈ ಸಿನಿಮಾಗಳಲ್ಲಿ ಅಭಿನಯಿಸಿದ್ದು ಅತ್ಯಂತ ಬೇಡಿಕೆಯಲ್ಲಿರುವ ತಾರಾಮೌಲ್ಯವುಳ್ಳ ಜನಪ್ರಿಯ ನಾಯಕ ನಟರು ಎನ್ನುವುದು ಗಮನಿಸಬೇಕಾದ ಸಂಗತಿ. ಒಟ್ಟಾರೆ ಯಶಸ್ಸನ್ನು ಹೇಗಾದರೂ ದಕ್ಕಿಸಿಕೊಳ್ಳಬೇಕೆನ್ನುವ ಧಾವಂತ ಮತ್ತು ವಾಂಛೆ ಸಿನಿಮಾ ಎನ್ನುವ ಈ ಮಾಧ್ಯಮವನ್ನು ವಾಸ್ತವಿಕ ಪ್ರಜ್ಞೆಯಿಂದ ಬಹುದೂರ ತಂದು ನಿಲ್ಲಿಸಿದೆ.
ಆತ್ಮ ಮತ್ತು ಪ್ರೇತಾತ್ಮ
ಪ್ರೇತಾತ್ಮದ ಕಥೆಯುಳ್ಳ ನಾನಿನ್ನ ಬಿಡಲಾರೆ ಸಿನಿಮಾ ನಿರ್ಮಾಣಗೊಂಡ 1980 ರ ದಶಕದಲ್ಲಿ ಆಗಿನ್ನೂ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಈಗಿನಷ್ಟು ಬೆಳವಣಿಗೆಯಾಗಿರಲಿಲ್ಲ ಹಾಗೂ ಇಡೀ ಜಗತ್ತು ನಮ್ಮೆದುರು ತೆರೆದುಕೊಂಡಿರಲಿಲ್ಲ. ಅದೇ ಆಗ ನಗರೀಕರಣ ಮೊಳಕೆಯೊಡೆಯುತ್ತಿದ್ದ ಆ ದಿನಗಳಲ್ಲಿ ಹಳ್ಳಿಗಳಿನ್ನೂ ಜೀವಂತವಾಗಿದ್ದು ಸಮಾಜದಲ್ಲಿ ಮೂಢನಂಬಿಕೆ ಮನೆಮಾಡಿತ್ತು. ಜನರ ಮೂಢನಂಬಿಕೆಗಳನ್ನೇ ಬಂಡವಾಳವಾಗಿಟ್ಟುಕೊಂಡು ನಿರ್ಮಾಣಗೊಂಡ ನಾನಿನ್ನ ಬಿಡಲಾರೆ ಸಿನಿಮಾ ಬುದ್ಧಿಜೀವಿಗಳ ಅನುಮಾನ ಮತ್ತು ಪ್ರಶ್ನೆಗಳನ್ನು ಒಟ್ಟೊಟ್ಟಿಗೆ ಎದುರಿಸಬೇಕಾಯಿತು. ಬರ, ಕಾಡು, ಫಣಿಯಮ್ಮ, ಸಂಸ್ಕಾರದಂಥ ವಾಸ್ತವ ಬದುಕಿಗೆ ಹತ್ತಿರವಾದ ಹೊಸ ಅಲೆಯ ಸಿನಿಮಾಗಳು ನಿರ್ಮಾಣಗೊಂಡು ಅದಾಗಲೇ ಒಂದು ಸಂಚಲನವನ್ನು ಸೃಷ್ಟಿಸಿದ್ದ ಕನ್ನಡ ಸಿನಿಮಾ ಮಾಧ್ಯಮದಲ್ಲಿ ಮೂಢನಂಬಿಕೆಯ ಸಿನಿಮಾವೊಂದು ನಿರ್ಮಾಣಗೊಂಡಿದ್ದು ಅಚ್ಚರಿಗೆ ಕಾರಣವಾಗಿತ್ತು. ನಾನಿನ್ನ ಬಿಡಲಾರೆ ಸಿನಿಮಾದ ಪ್ರಚಂಡ ಯಶಸ್ಸಿಗೆ ಒಂದು ಹೊಸ ಅಲೆಯ ಸಿನಿಮಾಗಳನ್ನು ಸ್ವೀಕರಿಸುವ ಪ್ರೇಕ್ಷಕರ ಕೊರತೆ ಕಾರಣವಾದರೆ ಇನ್ನೊಂದು ಆಗಿನ್ನೂ ಸಮಾಜದಲ್ಲಿ ಮನೆಮಾಡಿದ್ದ ಮೂಢನಂಬಿಕೆ ಸಿನಿಮಾದ ಯಶಸ್ಸಿಗೆ ಅಗತ್ಯವಾದ ಪರಿಸರವನ್ನು ನಿರ್ಮಿಸಿತ್ತು. ಒಟ್ಟಾರೆ ಈ ಸಿನಿಮಾದ ಯಶಸ್ಸು ನಂತರದ ದಿನಗಳಲ್ಲಿ ಕನ್ನಡ ಸಿನಿಮಾ ಮಾಧ್ಯಮದಲ್ಲಿ ಹಲವಾರು ಪ್ರೇತಾತ್ಮದ ಕಥೆಯಾಧಾರಿತ ಸಿನಿಮಾಗಳು ನಿರ್ಮಾಣಗೊಳ್ಳಲು ಒಂದು ವೇದಿಕೆಯನ್ನು ನಿರ್ಮಿಸಿ ಕೊಟ್ಟಿತು. ಪರಿಣಾಮವಾಗಿ ಪುನರ್ಜನ್ಮದ ಮತ್ತು ಸತ್ತ ವ್ಯಕ್ತಿ ಪ್ರೇತವಾಗಿ ಸೇಡು ತೀರಿಸಿಕೊಳ್ಳುವ ಕಥೆಯುಳ್ಳ ಅನೇಕ ಸಿನಿಮಾಗಳು ಕನ್ನಡ ಭಾಷೆಯಲ್ಲಿ ನಿರ್ಮಾಣವಾದವು. ಒಂದು ಹಂತದಲ್ಲಿ ರಾಜಕುಮಾರ ಮತ್ತು ವಿಷ್ಣುವರ್ಧನ ಅವರಂಥ ತಾರಾವರ್ಚಸ್ಸುಳ್ಳ ಜನಪ್ರಿಯ ಕಲಾವಿದರು ಸಹ ಸಿನಿಮಾ ಬದುಕಿನ ಯಶಸ್ಸಿಗಾಗಿ ಕ್ರಮವಾಗಿ ಶ್ರಾವಣ ಬಂತು ಮತ್ತು ಆಪ್ತಮಿತ್ರದಂಥ ಪ್ರೇತಾತ್ಮದ ಕಥೆಯಾಧಾರಿತ ಸಿನಿಮಾಗಳಲ್ಲಿ ಅಭಿನಯಿಸಬೇಕಾದ ಅನಿವಾರ್ಯತೆಗೆ ಒಳಗಾದದ್ದು ಅಚ್ಚರಿಯ ಸಂಗತಿ. ಸತತ ಸೋಲುಗಳಿಂದ ಬಸವಳಿದಿದ್ದ ನೂರು ಸಿನಿಮಾಗಳ ನಾಯಕನಟ ಶಿವರಾಜಕುಮಾರ್‍ಗೆ ಶಿವಲಿಂಗ ಎನ್ನುವ ದೆವ್ವದ ಕಥೆಯಾಧಾರಿತ ಸಿನಿಮಾ ಪುನರ್ಜನ್ಮ ನೀಡಿದ್ದನ್ನು ಇಲ್ಲಿ ಉಲ್ಲೇಖಿಸಲೇ ಬೇಕು. ಕಳೆದ ವರ್ಷ 2016 ರಲ್ಲಿ ಹೊಸಬರ ಸಾಲು ಸಾಲು ಸಿನಿಮಾಗಳು ಯಶಸ್ವಿಯಾಗಿ ಹೊಸದೊಂದು ಭರವಸೆಯನ್ನು ಮೂಡಿಸಿದರೂ ಆ ಯಶಸ್ವಿ ಸಿನಿಮಾಗಳಲ್ಲಿ ರಂಗಿತರಂಗ, ಕರ್ವ, ಲಾಸ್ಟ್ ಬಸ್, ಯೂ ಟರ್ನ್, ಓಂ ನಮೋ ಭೂತಾತ್ಮ ಸಿನಿಮಾಗಳು ಅದೇ ಪ್ರೇತಾತ್ಮದ ಕಥೆಯುಳ್ಳ ಸಿನಿಮಾಗಳು ಎನ್ನುವ ಸಂಗತಿ ಸೃಜನಶೀಲ ಸಿನಿಮಾಗಳ ವೀಕ್ಷಕರಿಗೆ ಜೀರ್ಣಿಸಿಕೊಳ್ಳುವುದು ಕಷ್ಟಸಾಧ್ಯ. ಈ 21 ನೇ ಶತಮಾನದಲ್ಲಿ ಸಾಫ್ಟ್‍ವೇರ್ ಉದ್ಯಮದಿಂದ ಸಿನಿಮಾ ಮಾಧ್ಯಮಕ್ಕೆ ಕಾಲಿಡುತ್ತಿರುವ ಯುವ ಪೀಳಿಗೆ ಮತ್ತದೆ ಆತ್ಮ-ಪ್ರೇತಾತ್ಮದ ಕಥೆಗಳನ್ನು ಹಿಡಿದುಕೊಂಡು ಬರುತ್ತಿರುವುದು ನಾವು ಯಾವ ಕಾಲದಲ್ಲಿ ಬದುಕುತ್ತಿದ್ದೇವೆ ಎನ್ನುವ ಪ್ರಶ್ನೆ ಮತ್ತು ಅನುಮಾನವನ್ನು ಹುಟ್ಟಿಸುತ್ತದೆ.
ಗೆದ್ದ ಸೂತ್ರದ ಬೆನ್ನು ಹತ್ತಿ
ಬದುಕಿಗೆ ದೂರವಾದ ಮತ್ತು ಅವಾಸ್ತವಿಕ ಕಥೆಯಾಧಾರಿತ ಸಿನಿಮಾಗಳು ಕನ್ನಡದಲ್ಲಿ ಸಾಲು ಸಾಲಾಗಿ ನಿರ್ಮಾಣಗೊಳ್ಳಲು ಈ ಪ್ರಕಾರದ ಸಿನಿಮಾಗಳ ಯಶಸ್ಸೇ ಮೂಲ ಕಾರಣ. ಸಿನಿಮಾ ಮಾಧ್ಯಮ ಯಾವತ್ತೂ ಯಶಸ್ಸಿನ ಸೂತ್ರವನ್ನು ಬೆನ್ನು ಹತ್ತುವ ಮಾಧ್ಯಮ. ಸಿನಿಮಾವೊಂದು ಯಶಸ್ವಿಯಾದರೆ ಅಚಿಥದ್ದೆ ಕಥೆಯುಳ್ಳ ಸಾಲು ಸಾಲು ಸಿನಿಮಾಗಳು ಇಲ್ಲಿ ನಿರ್ಮಾಣಗೊಳ್ಳುತ್ತವೆ. ಕನ್ನಡ ಮಾತ್ರವಲ್ಲದೆ ಇಡೀ ಸಿನಿಮಾರಂಗದಲ್ಲಿ ಇದೊಂದು ಸಂಪ್ರದಾಯದಂತೆ ನಡೆದುಕೊಂಡು ಬಂದಿದೆ. ಹೊಸ ಹೊಸ ಪ್ರಯೋಗಗಳಿಗೆ ಸಿನಿಮಾ ಮಾಧ್ಯಮವನ್ನು ಒಳಗಾಗಿಸುವುದಕ್ಕಿಂತ ಸಿದ್ಧ ಸೂತ್ರವನ್ನೇ ನಂಬಿಕೊಂಡು ಸಿನಿಮಾ ನಿರ್ಮಾಣ ಮಾಡುವವರ ಸಂಖ್ಯೆ ಇಲ್ಲಿ ಹೆಚ್ಚಿದೆ. ಸಮಾಜಕ್ಕೆ ಮತ್ತು ಪ್ರೇಕ್ಷಕರಿಗೆ ಏನನ್ನು ಹೇಳುತ್ತಿದ್ದೇವೆ ಎನ್ನುವುದಕ್ಕಿಂತ ಯಶಸ್ಸೇ ಮುಖ್ಯವಾಗುತ್ತಿರುವುದರಿಂದ ಒಂದು ಯಶಸ್ವಿ ಸಿನಿಮಾದ ಛಾಯೆಯಾಗಿಯೋ ಅಥವಾ ಪ್ರತಿಬಿಂಬವಾಗಿಯೋ ಹಲವು ಸಿನಿಮಾಗಳು ಹುಟ್ಟಿಕೊಳ್ಳುತ್ತವೆ. ಒಂದು ಜುರಾಸಿಕ್ ಪಾರ್ಕ್‍ನ ಯಶಸ್ಸು ಹಲವು ರಾಷ್ಟ್ರಗಳ ಹಲವಾರು ಭಾಷೆಗಳಲ್ಲಿ ಗ್ರಾಫಿಕ್ ತಂತ್ರಜ್ಞಾನ ಆಧಾರಿತ ಸಿನಿಮಾಗಳ ನಿರ್ಮಾಣಕ್ಕೆ ಪ್ರೇರಣೆಯಾದರೆ ಒಂದು ರಾಝ್‍ನಂಥ ಸಿನಿಮಾ ಗಳಿಸಿದ ಪ್ರಚಂಡ ಯಶಸ್ಸು ಹಲವಾರು ಪ್ರೇತಾತ್ಮಗಳ ಕಥೆಯ ಸಿನಿಮಾಗಳಿಗೆ ಸ್ಪೂರ್ತಿಯಾಯಿತು. ವಿಷ್ಣುವರ್ಧನ ಅವರ ವೃತ್ತಿಬದುಕಿನ ಕೊನೆಯ ಸಿನಿಮಾ ಆಪ್ತಮಿತ್ರದ ಮುಂದುವರಿದ ಭಾಗ ಎನ್ನುವುದು ಗೆದ್ದ ಸೂತ್ರದ ಬೆನ್ನುಹತ್ತುವ ಸಿನಿಮಾದವರ ಮನೋಭಾವಕ್ಕೊಂದು ನಿದರ್ಶನ. ಆಪ್ತಮಿತ್ರದ ಯಶಸ್ಸೇ ಪಿ.ವಾಸು ಅವರಂಥ ಅನುಭವಿ ಮತ್ತು ಹಿರಿಯ ನಿರ್ದೇಶಕ ನಂತರದ ದಿನಗಳಲ್ಲಿ ಅಂಥದ್ದೇ ಸೂತ್ರವನ್ನಾಧರಿಸಿದ ಹಲವು ಸಿನಿಮಾಗಳನ್ನು ನಿರ್ದೇಶಿಸಬೇಕಾದದ್ದು ಸಿನಿಮಾ ಮಾಧ್ಯಮದ ವಿಪರ್ಯಾಸಗಳಲ್ಲೊಂದು.
ಸಿನಿಮಾ ವಾಸ್ತವಿಕ ಪ್ರಜ್ಞೆಯಿಂದ ದೂರವಾಗುತ್ತಿರುವುದಕ್ಕೆ ಇವತ್ತು ಸಿನಿಮಾ ಮಾಧ್ಯಮ ಎನ್ನುವುದು ಸಿನಿಮಾ ಉದ್ಯಮವಾಗಿ ಬದಲಾಗುತ್ತಿರುವುದೇ ಪ್ರಬಲ ಕಾರಣ. ಮಾಧ್ಯಮವೊಂದು ಉದ್ಯಮವಾಗಿ ಬದಲಾದಾಗ ಅಲ್ಲಿ ಬಂಡವಾಳ ಹೂಡಿ ಲಾಭಗಳಿಸಬೇಕೆನ್ನುವ ಮನೋಭಾವ ಬಲವಾಗುತ್ತದೆ. ಹೀಗಾಗಿ ಇಂದು ಸಿನಿಮಾ ಬಂಡವಾಳ ಹೂಡುವ ಉದ್ಯಮವಾಗಿ ಪರಿವರ್ತನೆ ಹೊಂದಿದೆ. ಬೇರೆ ಬೇರೆ ಉದ್ಯಮಗಳಲ್ಲಿ ಹಣಹೂಡಿ ಲಾಭಗಳಿಸಿದವರೆಲ್ಲ ಬಂಡವಾಳ ಹೂಡಲು ಸಿನಿಮಾ ಮಾಧ್ಯಮಕ್ಕೆ ಕಾಲಿಡುತ್ತಿರುವರು. ಒಂದು ಕಾಲದಲ್ಲಿ ಲಾಭ ನಷ್ಟಗಳೆಲ್ಲ ಗೌಣವಾಗಿ ಸೃಜನಶೀಲತೆಯೇ ಪ್ರಧಾನವಾಗಿದ್ದ ಸಿನಿಮಾ ಮಾಧ್ಯಮದಲ್ಲಿ ಇಂದು ಹಣ ಗಳಿಕೆಯೇ ಮುನ್ನೆಲೆಗೆ ಬಂದಿರುವುದರಿಂದ ಇಲ್ಲಿ ಚಿತ್ರ ವಿಚಿತ್ರ ಕಥೆಗಳ ಸಿನಿಮಾಗಳು ನಿರ್ಮಾಣಗೊಳ್ಳುತ್ತವೆ ಮತ್ತು ಯಶಸ್ವಿಯಾಗುತ್ತಿವೆ. ಪರಿಣಾಮವಾಗಿ ಸಿನಿಮಾವನ್ನು ಸೃಜನಶೀಲ ಮಾಧ್ಯಮವೆಂದು ನಂಬಿ ಹೊಸ ಹೊಸ ಪ್ರಯೋಗಗಳಿಗೆ ಮುಂದಾಗುತ್ತಿದ್ದ ನಿರ್ದೇಶಕರು, ನಿರ್ಮಾಪಕರು ಮತ್ತು ಕಲಾವಿದರು ನೇಪಥ್ಯಕ್ಕೆ ಸರಿಯುತ್ತಿದ್ದಾರೆ. ಪ್ರೇಕ್ಷಕರು ಕೂಡ ಅದರಲ್ಲೂ ಯುವ ಪೀಳಿಗೆ ಈ ಗ್ರಾಫಿಕ್ ದೃಶ್ಯಗಳಿಂದ ಕೂಡಿದ ಮತ್ತು ಪ್ರೇತಾತ್ಮದ ಕಥೆಗಳುಳ್ಳ ಸಿನಿಮಾಗಳನ್ನೇ ಗೆಲುವಿನ ದಡಕ್ಕೆ ಮುಟ್ಟಿಸುತ್ತಿರುವರು. ಪರಿಸ್ಥಿತಿ ಹೀಗೆ ಮುಂದುವರೆದಲ್ಲಿ ಸಿನಿಮಾಕ್ಕೂ ಮತ್ತು ಕಾರ್ಟೂನ್‍ಗಳಿಗೂ ವ್ಯತ್ಯಾಸವಿರದ ದಿನಗಳು ಬರುವುದೇನೂ ದೂರವಿಲ್ಲ.
No comments:
Post a Comment