Thursday, May 10, 2012

ಲಂಕೇಶ್ ಎಂಬ ಬೋಧಿ ವೃಕ್ಷದ ಕೆಳಗೆ

   
      ಲಂಕೇಶ್ ನಿಧನದ ಸಂದರ್ಭ 'ಸುಧಾ'ಪತ್ರಿಕೆಯಲ್ಲಿ ಅಂಕಣ ಬರೆಯುತ್ತಿದ್ದ ಪ್ರಸಿದ್ಧ ಸಾಹಿತಿಯೊಬ್ಬರು ಲಂಕೇಶರ ಬಗ್ಗೆ ಬರೆದ ಶ್ರದ್ಧಾಂಜಲಿ ರೂಪದ ಲೇಖನದಲ್ಲಿ 'ಲಂಕೇಶ್ ಹಾಗೂ ತಮ್ಮ ನಡುವೆ ವೈಮನಸ್ಸಿತ್ತೆಂದು ಮತ್ತು ಲಂಕೇಶ್ ಪತ್ರಕರ್ತನಾಗಿ ಯಶಸ್ವಿಯಾಗಲಿಲ್ಲ.ಕೆಲವು ಮೂರ್ಖ ಕನ್ನಡಿಗರಿಂದ ಲಂಕೇಶ್ ಪತ್ರಿಕೆ ಜನಪ್ರಿಯವಾಯಿತು' ಎಂದು ಬರೆದಿದ್ದರು. ಆ ಲೇಖನ ಓದಿದ ನಂತರ ಬಹಳ ಕೆಡುಕೆನಿಸಿತು. ತಕ್ಷಣ ಲಂಕೇಶ ಪತ್ರಿಕೆಗೆ ನನ್ನದೊಂದು ಸಣ್ಣ ಅಭಿಪ್ರಾಯ ಬರೆದು ಕಳುಹಿಸಿದೆ. ಅದು ಪತ್ರಿಕೆಯಲ್ಲಿ ಪ್ರಕಟವಾಯಿತು. 'ಈ ಲೇಖಕರ ಮಾನಸಿಕ ಆರೋಗ್ಯ ಸರಿ ಇಲ್ಲದ್ದರಿಂದ ಲಂಕೇಶರನ್ನು ಟೀಕಿಸಿರುವರೆಂದು' ನನ್ನ ಸ್ಪಷ್ಟ ಅಭಿಪ್ರಾಯ ಅದರಲ್ಲಿತ್ತು.
    ನಾನಾಗ ಕೆಲಸ ಮಾಡುತ್ತಿದ್ದ ಗುಲಬರ್ಗಾದ ಕಾಲೇಜಿನಲ್ಲಿ ಪ್ರಸಿದ್ಧ ಲೇಖಕಿ ಗೀತಾ ನಾಗಭೂಷಣ ಪ್ರಾಂಶುಪಾಲರಾಗಿದ್ದರು. ನನ್ನ ಸಹೋದ್ಯೋಗಿಯಿಂದ ಈ ವಿಷಯ ತಿಳಿದು ಅವರು ಬಹುವಾಗಿ ನೊಂದುಕೊಂಡರು. ನನ್ನನ್ನು ಕರೆದು 'ಅಲ್ರೀ ರಾಜಕುಮಾರ ಅಂಥ  ಗೌರವಾನ್ವಿತ ಸಾಹಿತಿಗಳನ್ನು ಈ ರೀತಿ ಟೀಕಿಸಿದ್ದರಲ್ಲ ಇದು ಸರಿ ಏನ್ರಿ' ಎಂದು ಕೇಳಿದರು. ನನ್ನ ವಯೋಮಾನದವರನ್ನು ಲಂಕೇಶ್ ಇಡಿಯಾಗಿ ಆವರಿಸಿಕೊಂಡಿದ್ದ ಕಾಲವದು.
     ಲಂಕೇಶ್ ಇನ್ನಿಲ್ಲ ಎನ್ನುವುದನ್ನು ಒಪ್ಪಲು ಸಿದ್ಧವಿಲ್ಲದ ಮನಸ್ಸು ಬೇರೆ. ಅಂಥ ಪರಿಸ್ಥಿಯಲ್ಲಿ ಈ ರೀತಿಯ ಲೇಖನ ಪ್ರಕಟಗೊಂಡಿದ್ದು ಬೇಸರ ತರಿಸಿತ್ತು. ಲೇಖನ ಬರೆದ ಹಿರಿಯ ಸಾಹಿತಿಗಳ ಬಗ್ಗೆ ನನಗೆ ಯಾವತ್ತಿಗೂ ಗೌರವ ಭಾವನೆ ಇದ್ದದ್ದೆ. ಆದರೆ ಆ ದಿನ ಒರಟಾಗಿ ವರ್ತಿಸಲು ಕಾರಣವಿಷ್ಟೇ. ಲಂಕೇಶರನ್ನು ಟೀಕಿಸಿದಾಗ ಪ್ರತಿಭಟಿಸಲು ಇಂಥದ್ದೇ ಕಾರಣ ಮತ್ತು ಇಂಥ ವ್ಯಕ್ತಿಗಳು ಎಂದಿರಲಿಲ್ಲ. ವೈಚಾರಿಕ ಕ್ರಾಂತಿಗಾಗಿ ಹಂಬಲಿಸುತ್ತಿದ್ದ ಒಂದು ವರ್ಗದ ಕನ್ನಡಿಗರು ಲಂಕೇಶರ ಸಮ್ಮೋಹಿನಿಗೆ ಒಳಗಾದ ಕಾಲಘಟ್ಟವದು.
      ನಿರ್ಜೀವಗೊಂಡಿದ್ದ ಸಮಾಜಕ್ಕೆ ತಮ್ಮ ಹರಿತ ಲೇಖನಗಳಿಂದ ಜೀವಕಳೆ ನೀಡಿದ ಲಂಕೇಶರನ್ನು ನನ್ನಂತೆ ಲಕ್ಷಾಂತರ ಕನ್ನಡಿಗರು ಮಾನಸಿಕವಾಗಿ ಗುರುವಾಗಿ ಸ್ವಿಕರಿಸಿದ್ದರು. ಅದೊಂದು ರೀತಿಯ ಲಂಕೇಶ್ ಮತ್ತು ಲಂಕೇಶ್ ಪತ್ರಿಕೆ ಇಲ್ಲದ ಕರ್ನಾಟಕವನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲದಂಥ ಲಂಕೇಶ್ ಮೇನಿಯಾ. ಅಷ್ಟರಮಟ್ಟಿಗೆ ಲಂಕೇಶ್ ಕನ್ನಡ ಜಾಣ ಜಾಣೆಯರನ್ನು ಆವರಿಸಿಕೊಂಡಿದ್ದರು. ತಮ್ಮ ಟೀಕೆ ಟಿಪ್ಪಣೆ ಮತ್ತು ನೀಲು ಕವನಗಳ ಮೂಲಕ ಪ್ರತಿವಾರ ಪತ್ರಿಕೆಗಾಗಿ ಕಾಯುವಂತೆ ಮಾಡುತ್ತಿದ್ದ ಲಂಕೇಶ್ ಅಪರೋಕ್ಷವಾಗಿ ಅನೇಕ ಯುವ ಬರಹಗಾರರಿಗೆ ಪತ್ರಕರ್ತನ ದೀಕ್ಷೆ ನೀಡಿದವರು. ಬಂ, ಗುಂ, ಚಡ್ಡಿಯಂಥ ಹೊಸ ಹೊಸ ಪದಗಳನ್ನು ಪತ್ರಿಕಾ ಪ್ರಪಂಚಕ್ಕೆ ಪರಿಚಯಿಸಿದ ಲಂಕೇಶ್ ತಮ್ಮ ನೇರ ಮತ್ತು ನಿಷ್ಟೂರ ಬರಹಗಳಿಂದ ಕರ್ನಾಟಕದ ರಾಜಕೀಯದಲ್ಲಿ ಅನೇಕ ಪ್ರಗತಿಪರ ಬೆಳವಣಿಗೆಗಳಿಗೆ ಕಾರಣರಾದರು. ಪತ್ರಿಕೆಯೊಂದು ಚುನಾವಣಾ ಸಂದರ್ಭದಲ್ಲಿ ರಾಜಕೀಯ ಪಕ್ಷಗಳ ಹಣೆಬರಹವನ್ನು ನಿರ್ಧರಿಸುವ ಮಟ್ಟಕ್ಕೆ ಅವರು ಪತ್ರಿಕೆಯನ್ನು ಕಟ್ಟಿ ಬೆಳೆಸಿದರು. ಲಂಕೇಶ್ ಗತಿಸಿದ ಹನ್ನೆರಡು ವರ್ಷಗಳ ನಂತರವೂ ಅವರು ಮತ್ತೆ ಮತ್ತೆ ನೆನಪಾಗುತ್ತಾರೆ. ಅವರ ಕುರಿತು ಪ್ರಕಟವಾಗುವ ಲೇಖನಗಳನ್ನು ಓದಿದಾಗ ಹೊಸದನ್ನು ತಿಳಿದುಕೊಂಡ ಅನುಭವ ಜೊತೆಗೆ ಲಂಕೇಶರನ್ನು ಸಂಪೂರ್ಣವಾಗಿ ತಿಳಿದುಕೊಂಡಿಲ್ಲವಲ್ಲ ಎನ್ನುವ ಕ್ಷೋಭೆ ಮನಸ್ಸನ್ನು ಆವರಿಸಿ ಒಂದು ರೀತಿಯ ಶೂನ್ಯ ಸ್ಥಿತಿಗೆ ನೂಕುತ್ತದೆ.
       ಲಂಕೇಶ್ ನಮ್ಮೊಡನೆ ಇಲ್ಲದಿರಬಹುದು. ಆದರೆ ಅವರು ಬಿಟ್ಟು ಹೋದ ಸಿಟ್ಟು, ಸೆಡವು, ಕೋಪ, ಆಕ್ರೋಶ, ಅಸಹನೆ, ಜಿಗುಟುತನ, ಹುಂಬತನ, ನಿರ್ಲಕ್ಷ ಭಾವ, ಎದೆಗಾರಿಕೆ ಈ ಎಲ್ಲ ಗುಣಗಳು ನಮ್ಮೊಡನಿವೆ. ದುರದೃಷ್ಟವಶಾತ್ ಇಂದು ಈ ಎಲ್ಲ ಗುಣಗಳು ರಾಜಕೀಯ ನಾಯಕರುಗಳ ಹಾಗೂ ಅಧಿಕಾರಸ್ಥರ ಮನೆಯ ಅಂಗಳದಲ್ಲಿ ಮಲಗಿ ನಿದ್ರಿಸುತ್ತಿರುವುದು ಲಂಕೇಶ್ ಯುಗದ ವೈಚಾರಿಕ ಪ್ರಜ್ಞೆಯ ಘೋರ ದುರಂತ.
      ಲಂಕೇಶರ ಕುರಿತ 'ಲಂಕೇಶ್ ವಿಶೇಷಾಂಕ'ದಲ್ಲಿನ ಲೇಖನಗಳನ್ನು ಓದಿದಾಗ ಈ ಮೇಲಿನದೆಲ್ಲ ನೆನಪಾಯಿತು.

(ವಿಕ್ರಾಂತ ಕರ್ನಾಟಕದಲ್ಲಿ ಪ್ರಕಟವಾದ ನನ್ನ ಲೇಖನ)

-ರಾಜಕುಮಾರ ವಿ. ಕುಲಕರ್ಣಿ, ಬಾಗಲಕೋಟೆ 

1 comment:

  1. ನಿಮ್ಮಲ್ಲಿ ಲಂಕೇಶ್ ಪತ್ರಿಕೆಯ ಎಲ್ಲಾ ಸಂಚಿಕೆಗಳಿವೆಯೆ? 1982 ಮೇ, ಜೂನ್ ಜುಲೈ ತಿಂಗಳ ಸಂಚಿಕೆಗಳ ಅಗತ್ಯವಿದೆ. ಅವುಗಳಲ್ಲಿ ತೇಜಸ್ವಿಯವರು ಬರೆದಿರುವ ಒಂದು ಲೇಖನದ ನಾಲ್ಕು ಭಾಗಗಳಿವೆ. ಅದಲ್ಲದೆ. 1975-80 ರ ನಡುವೆ ತೇಜಸ್ವಿಯವರು ಬರೆದಿರುವ ತರುಣ ತರುಣಿಯರೇ.......... ಎಂಬ ಲೇಖನದ ಅಗತ್ಯವಿದೆ. ಇವೆರಡೂ ಇನ್ನೂ ಅಪ್ರಕಟವಾಗಿವೆ. ನಿಮ್ಮಲ್ಲಿ ಇದ್ದರೆ ದಯಮಾಡಿ ಮಾಹಿತಿ ಕೊಡಿ. - ಡಾ.ಬಿ.ಆರ್.ಸತ್ಯನಾರಾಯಣ

    ReplyDelete