ನಿನ್ನೆ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಮತ್ತು ಜಿಲ್ಲಾ ಅಧ್ಯಕ್ಷ ಸ್ಥಾನಗಳಿಗಾಗಿ ಚುನಾವಣೆ ನಡೆಯಿತು. ಮತದಾನ ಮಾಡಿ ಮರಳಿ ಮನೆಗೆ ಬರುತ್ತಿರುವಾಗ ಇಂಥದ್ದೊಂದು ಅವಕಾಶ ಮಾಡಿಕೊಟ್ಟ ಮಹನೀಯರ ನೆನಪಾಯಿತು. ಆ ಹಿರಿಯರ ಹೆಸರು ಶ್ರೀ ಅನ್ನದಾನಿ ಹಿರೇಮಠ ಎಂದು. ಶಿಕ್ಷಕ ವೃತ್ತಿಯಿಂದ ನಿವೃತ್ತರಾಗಿ ವಿಶ್ರಾಂತ ಜೀವನ ಬದುಕುತ್ತಿರುವ ಶ್ರೀ ಹಿರೇಮಠರು ಈ ಎಂಬತ್ತರ ಇಳಿ ವಯಸ್ಸಿನಲ್ಲೂ ಪಾದರಸದಷ್ಟು ಚುರುಕಾಗಿರುವರು. ಕನ್ನಡಕ್ಕಾಗಿ ಅವರು ಮಾಡುತ್ತಿರುವ ಕೆಲಸ ಇಡೀ ನಾಡೇ ಮೆಚ್ಚುವಂಥದ್ದು.
ನಾನು ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯನಾಗಿದ್ದೆ ಶ್ರೀ ಹಿರೇಮಠರ ಪ್ರಯತ್ನದಿಂದ. ಹೀಗೆ ಹೇಳಿಕೊಳ್ಳುವುದರಲ್ಲಿ ನನಗೆ ಯಾವ ಮುಜುಗರವೂ ಇಲ್ಲ. ನನ್ನ ಒಂದೆರಡು ಬಿಡಿ ಲೇಖನಗಳನ್ನು ಓದಿ ಮೆಚ್ಚಿಕೊಂಡ ಶ್ರೀ ಹಿರೇಮಠರು ಒಂದು ದಿನ ನನ್ನನ್ನು ಭೇಟಿ ಮಾಡಲು ನಾನಿದ್ದ ಸ್ಥಳಕ್ಕೆ ಬಂದರು. ಮಾತಿನ ನಡುವೆ ನಾನು ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯನಾಗಿಲ್ಲದಿರುವುದು ಗೊತ್ತಾಗಿ ಬೇಸರ ವ್ಯಕ್ತಪಡಿಸಿದ ಶ್ರೀಯುತರು ಪರಿಷತ್ತಿನ ಸದಸ್ಯರ ಸಂಖ್ಯೆ ವೃದ್ಧಿಸಬೇಕೆಂದು ಹೇಳಿದರು. ನನ್ನ ಮತ್ತು ಅವರ ಈ ಮೊದಲ ಭೇಟಿ ಕೆಲವೇ ನಿಮಿಷಗಳಲ್ಲಿ ಮುಗಿದು ಹೋದರೂ ಅವರ ಮಾತುಗಳು ನನ್ನ ಮೇಲೆ ಹೆಚ್ಚಿನ ಪ್ರಭಾವ ಬೀರಿದವು.
ನಾನು ಶ್ರೀ ಅನ್ನದಾನಿ ಹಿರೇಮಠ ಅವರೊಡನೆ ಆಡಿದ ಮಾತುಗಳು ಕೆಲಸದ ಒತ್ತಡದ ನಡುವೆ ನನಗೆ ಮರತೇ ಹೋಗಿದ್ದವು. ಇದ್ದಕ್ಕಿದ್ದಂತೆ ಒಂದು ದಿನ ಪ್ರತ್ಯಕ್ಷರಾದ ಅವರು ಕೈಯಲ್ಲಿ ಸಾಹಿತ್ಯ ಪರಿಷತ್ತಿನ ಸದಸ್ಯತ್ವದ ಅರ್ಜಿಯನ್ನು ಹಿಡಿದುಕೊಂಡೆ ಬಂದಿದ್ದರು. ನಿವೃತ್ತಿಯ ನಂತರ ಪರಿಷತ್ತಿಗೆ ಸದಸ್ಯರ ಸಂಖ್ಯೆಯನ್ನು ಹೆಚ್ಸಿಸುವುದೇ ಅವರಿಗೆ ಖಾಯಂ ಕೆಲಸವಾಗಿದೆ. ಬದಾಮಿಯಲ್ಲಿ ವಾಸಿಸುತ್ತಿರುವ ಅವರು ತಮ್ಮ ಸ್ವಂತ ಖರ್ಚಿನಲ್ಲಿ ಬಾಗಲಕೋಟೆ ಜಿಲ್ಲೆಯಾದ್ಯಂತ ಸಂಚರಿಸುತ್ತ್ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರ ಸಂಖ್ಯೆಯನ್ನು ವೃದ್ಧಿಸುತ್ತಿರುವರು. ನನ್ನಿಂದ ಅರ್ಜಿ ತುಂಬಿಸಿಕೊಂಡು ಒಂದು ತಿಂಗಳೊಳಗಾಗಿ ಬರುವುದಾಗಿ ಹೇಳಿ ಹೋದ ಅವರು ನನಗೆ ಅಚ್ಚರಿಯ ವ್ಯಕ್ತಿಯಾಗಿ ಕಾಣಿಸಿದರು.
ಒಂದು ತಿಂಗಳೊಳಗಾಗಿ ಅತ್ಯಂತ ಕರಾರುವಕ್ಕಾಗಿ ಖುದ್ದಾಗಿ ತಾವೇ ಬಂದು ನನ್ನ ಗುರುತಿನ ಪತ್ರ ತಂದು ಕೊಟ್ಟರು. ಜೊತೆಗೆ ಅವರ ಕೈ ಚೀಲದಲ್ಲಿ ಒಂದಿಷ್ಟು ಅರ್ಜಿಗಳೂ ಇದ್ದವು. ನಾಡು ನುಡಿಯ ಬಗ್ಗೆ ಆಸಕ್ತಿ ಇರುವ ವ್ಯಕ್ತಿಗಳು ಭೇಟಿಯಾದರೆ ಅವರನ್ನು ಪರಿಷತ್ತಿನ ಸದಸ್ಯರಾಗಿ ಮಾಡಲು ಇರಲಿ ಎನ್ನುವ ಮುಂದಾಲೋಚನೆ ಅವರದು. ಸಂಭಾಷಣೆ ವೇಳೆ ಅವರು ಹೇಳಿದ ಒಂದೆರಡು ಮಾತುಗಳು ನನಗೆ ಬಹಳ ಮೆಚ್ಚುಗೆಯಾದವು. 'ನೋಡ್ರಿ ಈ ನೆಲ ನನಗ ಜನ್ಮ ನಿಡ್ಯಾದ. ಅಕ್ಷರ ಕಲಿಸಿ ಉದ್ಯೋಗ ಕೊಟ್ಟು ಬದುಕು ರೂಪಿಸ್ಯಾದ. ನಾನು ನನ್ನ ಬದುಕನ್ನಲ್ದ ನನ್ನ ಮಕ್ಕಳ ಬದುಕನ್ನು ಕಟ್ಟಿ ಕೊಟ್ಟಿನಿ. ಇಷ್ಟೆಲ್ಲಾ ಕೊಟ್ಟ ನಾಡಿಗಿ ನಾವೂ ಒಂದಿಷ್ಟಾದ್ರೂ ಉಪಕಾರ ಮಾಡಬೇಕಲ್ಲ. ಅದಕ್ಕಾ ನಾ ಈ ಕೆಲಸ ಶುರು ಹಚ್ಚಿನಿ. ಈ ಕೆಲಸದಾಗ ನನಗ ಭಾಳ ತೃಪ್ತಿ ಸಿಕ್ಕದ'. ಹೀಗೆ ಹೇಳಿ ಹೋದವರು ಹತ್ತಿರ ಹತ್ತಿರ ಮೂರು ವರ್ಷಗಳಾಗಿ ಹೋದವು ಇವತ್ತಿಗೂ ಭೇಟಿಯಾಗಿಲ್ಲ. ನಾನೊಂದು ದೊಡ್ಡ ಕೆಲಸ ಮಾಡುತ್ತಿದ್ದೇನೆ ಎನ್ನುವ ಅಹಂಕಾರವೂ ಅವರಿಗಿಲ್ಲ.
ಇವತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಗೆ ರಾಜಕೀಯ ಬಣ್ಣ ಬಂದಿದೆ. ಕನ್ನಡದ ಗಂಧ ಗಾಳಿಯೂ ಗೊತ್ತಿಲ್ಲದ ಜನ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವರು. ಈ ಅದ್ದೂರಿ, ಅಬ್ಬರ, ಆಡಂಬರದ ನಡುವೆ ಸದ್ದಿಲ್ಲದೆ ಕನ್ನಡದ ಕೆಲಸ ಮಾಡುತ್ತಿರುವ ಶ್ರೀ ಅನ್ನದಾನಿ ಹಿರೇಮಠರಂಥ ಸುಸಂಸ್ಕೃತ ಮನಸ್ಸುಗಳು ಕಳೆದು ಹೋಗಬಾರದು.
-ರಾಜಕುಮಾರ ವ್ಹಿ.ಕುಲಕರ್ಣಿ (ಕುಮಸಿ), ಬಾಗಲಕೋಟೆ
No comments:
Post a Comment