Tuesday, May 22, 2012

ಮನುಷ್ಯನಾಗುವುದೆಂದರೇನು?

     ಮೊನ್ನೆ ನನ್ನೂರಿಗೆ ಹೋಗಿದ್ದೆ. ಊರ ಹೆಬ್ಬಾಗಿಲಲ್ಲಿ ಪರಿಚಿತರೋರ್ವರು ಭೇಟಿಯಾದರು. ಅದು ಇದು ಮಾತನಾಡುತ್ತ ತಮ್ಮ ಅಣ್ಣನ ಮಗನಿಗೆ ಸರ್ಕಾರಿ ಕೆಲಸ ಸಿಕ್ಕ ವಿಷಯ ತಿಳಿಸಿದರು. ಬಾಲ್ಯದಿಂದಲೂ ಬಡತನದಲ್ಲೇ ಬೆಳೆದ ಹುಡುಗ ಪರಿಶ್ರಮ ಪಟ್ಟು ಓದಿ ಡಿಪ್ಲೊಮಾ ಡಿಗ್ರಿ ಸಂಪಾದಿಸಿದ್ದ. ಆತನ ಅರ್ಹತೆಗೆ ತಕ್ಕುದಾದ ಹುದ್ಧೆ ಲೋಕೋಪಯೋಗಿ ಇಲಾಖೆಯಲ್ಲಿ ಲಭಿಸಿತ್ತು. ನನ್ನ ಪರಿಚಿತರು ತಮ್ಮ ಅಣ್ಣನ ಮಗನ ಕುರಿತು ಅಭಿಮಾನದಿಂದ ಮಾತನಾಡಿದರು. 'ನೋಡ್ರಿ ಅವ್ನಿಗಿ ಭಾಳ ಛಲೋ ಡಿಪಾರ್ಟ್ಮೆಂಟ್ ಸಿಕ್ಕಾದ. ಇನ್ನ ಮುಂದ ಅವ್ನಿಗಿ ಯಾರೂ ಹಿಡಿಯೊ ಹಂಗಿಲ್ಲ. ಯಾಕಂದ್ರ ಮುಂದ ಸುರಿಯೊದೆಲ್ಲ ರೊಕ್ಕದ ಮಳಿನಾ. ಬ್ಯಾಡ ಅಂದ್ರೂ ಮಂದಿ ಮನಿಗಿ ಬಂದು ರೊಕ್ಕ ಕೊಡ್ತಾರ. ರೊಕ್ಕ ಎಣಿಸಾಕ ಅಂವ ಒಂದು ಆಳ ಇಟ್ಕೋಬೇಕಾಗ್ತದ. ಎರಡು ವರ್ಷದಾಗ ಅಂವ ಹ್ಯಾಂಗ ಮನಷ್ಯಾ ಆಗ್ತಾನ ನೋಡ್ರಿ'
      ಒಂದು ಕ್ಷಣ ನಾನು ತಬ್ಬಿಬ್ಬಾದೆ. ಹಾಗಾದರೆ ಅವರ ದೃಷ್ಟಿಯಲ್ಲಿ ಮನುಷ್ಯನಾಗುವುದೆಂದರೆ ಸರ್ಕಾರಿ ನೌಕರಿಗೆ ಸೇರಿ ಲಂಚ ಹೊಡೆಯುತ್ತ, ಬಂಗಲೆ ಮೇಲೆ ಬಂಗಲೆ ಕಟ್ಟಿಸಿ, ಹವಾನಿಯಂತ್ರಿತ ಕಾರುಗಳಲ್ಲಿ ಓಡಾಡುತ್ತ ಐಶಾರಾಮಿ ಬದುಕು ನಡೆಸುವುದೇ ನಿಜವಾದ ಮನುಷ್ಯ ಎನ್ನುವ ಬಗ್ಗೆ ಅವರ ಯೋಚನಾ ಲಹರಿ ಅರೇ ಕ್ಷಣ ನನ್ನನ್ನು ನಾನು ಯಾರು ಎನ್ನುವ ಯೋಚನೆಗೆ ಹಚ್ಚಿತು. ಒಂದಿಷ್ಟು ಶೃದ್ಧೆ, ನಿಷ್ಟೆ, ಪ್ರಾಮಾಣಿಕತೆಯ ನೆರಳಲ್ಲಿ ಬದುಕು ನೂಕುತ್ತಿರುವ ಜನ ಮನುಷ್ಯರೇ ಅಲ್ಲ ಎನ್ನುವ ಅಭಿಪ್ರಾಯ ಅವರ ಮಾತಿನುದ್ದಕ್ಕೂ ಇಣುಕುತ್ತಿತ್ತು.
       ಈ ಮೇಲಿನ ಪರಿಚಿತರು ಹೇಳಿದ ರೀತಿಯಲ್ಲಿ ಬದುಕಬೇಕೆನ್ನುವ ಧಾವಂತಕ್ಕೆ ಕಟ್ಟುಬಿದ್ದ ವಿದ್ಯಾವಂತರು ತಮ್ಮ ಕನಸನ್ನು ನನಸಾಗಿಸಿಕೊಳ್ಳಲು ಸರ್ಕಾರಿ ಕೆಲಸವನ್ನು ಆಶ್ರಯಿಸುತ್ತಿರುವುದು ಸಾಮಾನ್ಯ. ಕಡಿಮೆ ಕೆಲಸ, ಕೈತುಂಬ ಸಂಬಳ, ವಿಶೇಷ ಸೌಲಭ್ಯಗಳು, ಆದಾಯದ ಅನೇಕ ಮೂಲಗಳು ಈ ಎಲ್ಲ ಕಾರಣಗಳಿಂದ ಸರ್ಕಾರಿ ಉದ್ಯೋಗಕ್ಕೆ ಸೇರುವ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಿದೆ. ಇವರ ದೃಷ್ಟಿಯಲ್ಲಿ ಸರ್ಕಾರಿ ನೌಕರಿ ಎಂದರೆ ಅದು ಸಾರ್ವಜನಿಕ ಸೇವೆಯಲ್ಲ. ಆ ಹುದ್ಧೆಯ ಮೂಲಕ ಅಪಾರ ಸಂಪತ್ತು ಗಳಿಸಿ ಸಮಾಜದ ದೃಷ್ಟಿಯಲ್ಲಿ ಮನುಷ್ಯರೆಂದು ಕರೆಯಿಸಿಕೊಳ್ಳುವ ತುಡಿತ. ಸರ್ಕಾರಿ ನೌಕರಿ ದೊರೆತರೆ ಜೀವನ ಪಾವನವಾದಂತೆ. ಸರ್ಕಾರಿ ಹುದ್ಧೆಯ ನೇಮಕಾತಿಗಾಗಿ ಲಕ್ಷಾಂತರ ರೂಪಾಯಿಗಳ ಲಂಚ ನೀಡಿ ಜೊತೆಗೆ ನಿರ್ಧಿಷ್ಟ ಇಲಾಖೆಗೆ ಸೇರಲು ಮತ್ತಷ್ಟು ಕೈ ಬೆಚ್ಚಗೆ ಮಾಡಿ ಆಯಕಟ್ಟಿನ ಜಾಗದಲ್ಲಿ ಕುಳಿತರೆ ಭವಿಷ್ಯ ಬಂಗಾರವಾದಂತೆ. ಹೀಗೆ ಲಕ್ಷಾಂತರ ರುಪಾಯಿಗಳನ್ನು ಸುರಿದು ಸರ್ಕಾರಿ ಕೆಲಸಕ್ಕೆ ಸೇರುವ ನಮ್ಮ ವಿದ್ಯಾವಂತ ಯುವಕರು ಅದಕ್ಕೆ ನೂರರಷ್ಟು ಸಂಪತ್ತನ್ನು ಕೊಳ್ಳೆ ಹೊಡೆಯುವರು. ಲೋಕಾಯುಕ್ತರು ದಾಳಿಮಾಡಿದಾಗ ಗುಮಾಸ್ತನೋರ್ವನ ಮನೆಯಲ್ಲಿ ಕೋಟಿಗಟ್ಟಲೆ ಹಣ, ಕೇಜಿಗಟ್ಟಲೆ ಚಿನ್ನ, ಬೆಳ್ಳಿ ದೊರೆಯುತ್ತಿರುವುದು ಇದೆ ಕಾರಣದಿಂದ. ಸರ್ಕಾರಿ ನೌಕರಿ ದೆಸೆಯಿಂದ ಅಕ್ರಮವಾಗಿ ಸಂಪತ್ತು ಗಳಿಸುವುದು ನಮ್ಮ ವಿದ್ಯಾವಂತರಿಗೆ ತಪ್ಪಾಗಿ ಕಾಣಿಸುವುದಿಲ್ಲ.
      ಮತ್ತೊಂದು ನಿದರ್ಶನ- ಆತನೊಬ್ಬ ಸಾಹಿತ್ಯದ ಪರಮ ಭಕ್ತ. ತನ್ನ ಕಾಲೇಜು ದಿನಗಳಲ್ಲಿ ಅನ್ಯಾಯ, ಅಕ್ರಮ, ಅನೀತಿಯನ್ನು ಉಗ್ರವಾಗಿ ಖಂಡಿಸುತ್ತಾ ಸಾಹಿತ್ಯ ರಚಿಸುತ್ತಿದ್ದ. ಊರೂರು ಅಲೆಯುತ್ತ ಜನರ ಮನಸ್ಸಿನಲ್ಲಿ ಬಂಡಾಯದ ಬೀಜ ಬಿತ್ತುತ್ತಿದ್ದ. ದೇಹಕ್ಕೆ ವಯಸ್ಸಾದಂತೆ ಆತನ ಮನಸ್ಸೂ ಪಕ್ವಗೊಂಡಿದೆ. ಸಾಹಿತ್ಯ ಸಮಾಜ ತಿದ್ದುವುದಕ್ಕಲ್ಲ ಎಂದು ಅರ್ಥ ಮಾಡಿಕೊಂಡವನಂತೆ ವರ್ತಿಸುತ್ತಿದ್ದಾನೆ. ಬರವಣಿಗೆಯಿಂದಲೂ ಸಂಪತ್ತು ಗಳಿಸಬಹುದೆಂದು ತೋರಿಸಿಕೊಟ್ಟಿದ್ದಾನೆ. ಹೊಡಿ ಬಡಿ ಎಂದೆಲ್ಲ ಬರೆಯುತ್ತಿದ್ದವನು ಈಗ ವ್ಯವಸ್ಥೆಯನ್ನೇ ಹೊಗಳಲು ಪ್ರಾರಂಭಿಸಿದ್ದಾನೆ. ದಿನದ ಹೆಚ್ಚಿನ ಸಮಯ ಶ್ರೀಮಂತ ಕುಳಗಳ ಇಲ್ಲವೇ ರಾಜಕಾರಣಿಗಳ ಸಹವಾಸದಲ್ಲಿ ಕಳೆಯುತ್ತಿದ್ದಾನೆ. ಒಂದರ್ಥದಲ್ಲಿ ಆಸ್ಥಾನದ ಹೊಗಳು ಭಟ್ಟನಾಗಿ ತನ್ನನ್ನು ತಾನು ಬದಲಾಯಿಸಿ ಕೊಂಡಿದ್ದಾನೆಂದರೂ ಅಡ್ಡಿಯಿಲ್ಲ. ಪ್ರಶಸ್ತಿ, ಗೌರವಗಳೆಂದರೆ ಮಾರು ದೂರ ಸರಿದು ನಿಲ್ಲುತ್ತಿದ್ದವನ ಮನೆಯ ಶೋಕೆಸಿನಲ್ಲಿ ಈಗ ಹಲವಾರು ಪ್ರಶಸ್ತಿ ಫಲಕಗಳು ರಾರಾಜಿಸುತ್ತಿವೆ. ಅಕಾಡೆಮಿಗಳ ಸದಸ್ಯತ್ವಕ್ಕಾಗಿ, ಸಮ್ಮೇಳನದ ಅಧ್ಯಕ್ಷಗಿರಿಗಾಗಿ ದಿನಗಟ್ಟಲೆ ಪ್ರಭಾವಿಗಳ ಎದುರು ಕೈ ಕಟ್ಟಿ ನಿಲ್ಲುತ್ತಾನೆ.
      ಇಲ್ಲಿ ನಮ್ಮದೂ ನೂರೆಂಟು ತಪ್ಪುಗಳಿವೆ. ಮನುಷ್ಯರನ್ನು ಗುರುತಿಸುವಲ್ಲಿ ನಾವುಗಳು ಎಡವುತ್ತಿದ್ದೇವೆ. ವ್ಯಕ್ತಿತ್ವ ಮತ್ತು ಸಾಧನೆಗಳಿಗಿಂತ ಒಣ ಪ್ರತಿಷ್ಠೆ ಮತ್ತು ಆಡಂಬರಕ್ಕೆ ಪ್ರಾಮುಖ್ಯ ನಿಡುತ್ತಿದ್ದೇವೆ. ವೈಯಕ್ತಿಕ ಬದುಕನ್ನು ಪಕ್ಕಕ್ಕೆ ತಳ್ಳಿ ದೇಶಕ್ಕಾಗಿ ಕಾರ್ಯನಿರ್ವಹಿಸುತ್ತಿರುವ ಉಜ್ವಲ್ ನಿಕ್ಕಂ ಅವರಂಥ ವ್ಯಕ್ತಿಗಳು ನಮಗೆ ಯಾವತ್ತೂ ಸೆಲಿಬ್ರಿಟಿಯಾಗಿ ಕಾಣಿಸುವುದೇ ಇಲ್ಲ. ಹಲವರ ದೃಷ್ಟಿಯಲ್ಲಿ ಅಕ್ರಮವಾಗಿ ಸಂಪಾದನೆ ಮಾಡಿ ಸ್ವಂತಕ್ಕೆ ಎಲ್ಲ ವ್ಯವಸ್ಥೆ ಮಾಡಿಕೊಂಡವರೆ ನಿಜವಾದ ಮನುಷ್ಯರು. ನಿಸ್ವಾರ್ಥದಿಂದ ಸೇವೆ ಸಲ್ಲಿಸುವ ಸಮಾಜ ಸೇವಕನಿಗೆ ಇಲ್ಲಿ ಕವಡೆ ಕಾಸಿನ ಕಿಮ್ಮತ್ತೂ ಇಲ್ಲ. ಅದೇ ಒಬ್ಬ ಅಪ್ರಾಮಾಣಿಕ ರಾಜಕಾರಣಿ ಹತ್ತಿರ ಕರೆದು ಹೆಗಲ ಮೇಲೆ ಕೈ ಹಾಕಿ ಮಾತನಾಡಿಸಿದರೆ ಪುಳಕಗೊಳ್ಳುತ್ತೇವೆ. ಮೈ ಮನಗಳಲ್ಲಿ ರೋಮಾಂಚನವಾಗುತ್ತದೆ. ಅದನ್ನೇ ದೊಡ್ಡ ವಿಷಯ ಮಹತ್ಸಾಧನೆ ಎನ್ನುವಂತೆ ಇತರರ ಎದುರು ಹೇಳಿ ಸುಖಿಸುತ್ತೇವೆ. ಏಕೆಂದರೆ ಅಪ್ರಾಮಾಣಿಕತೆಯಿಂದ ಅಪಾರ ಸಂಪತ್ತು ಗಳಿಸಿದವನೇ ನಮ್ಮ ದೃಷ್ಟಿಯಲ್ಲಿ ನಿಜವಾದ ಮನುಷ್ಯ. ಇಲ್ಲಿ ಬದುಕುವ ರೀತಿಗಿಂತ ಬದುಕುವ ಕಲೆ ಮುಖ್ಯ ಎನಿಸಿಕೊಳ್ಳುತ್ತದೆ. ಹೀಗೆ ಬದುಕ ಬೇಕೆನ್ನುವುದಕ್ಕಿಂತ ಹೇಗಾದರೂ ಸರಿ ಬದುಕ ಬೇಕೆನ್ನುವುದು ನಿಯಮವಾಗುತ್ತದೆ. ಬದುಕುವ ಕಲೆ ಗೊತ್ತಿರುವಾತ ಸಮಾಜದ ಮೆಚ್ಚುಗೆಗೆ ಪಾತ್ರನಾಗುತ್ತಾನೆ. ಹೀಗೇ ಬದುಕಬೇಕೆಂದು ಹೊರಡುವವನು ಸಮಾಜದ ಅವಕೃಪೆಗೆ ಮತ್ತು ನಿಂದನೆಗೆ ಒಳಗಾಗಿ ಶತಮೂರ್ಖನೆಂದು ಕರೆಯಿಸಿಕೊಳ್ಳುತ್ತಾನೆ. ಹಾಗಾದರೆ ಮನುಷ್ಯನಾಗುವುದೆಂದರೇನು? ಇಂಥದ್ದೊಂದು ಜಿಜ್ಞಾಸೆ ಬದುಕುವ ಕಲೆ ಗೊತ್ತಿಲ್ಲದವರನ್ನು ಅವರ ಬದುಕಿನುದ್ದಕ್ಕೂ ಕಾಡುತ್ತಲೇ ಇರುವ ಯಕ್ಷ ಪ್ರಶ್ನೆಯಾಗಿಯೇ ಉಳಿಯುತ್ತದೆ.
(20.05.2010 ರ ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟ)

-ರಾಜಕುಮಾರ ವ್ಹಿ.ಕುಲಕರ್ಣಿ (ಕುಮಸಿ), ಬಾಗಲಕೋಟೆ 

No comments:

Post a Comment