Wednesday, September 9, 2026

ರಾಜಕಾರಣದ ಕೊಳೆ ಮತ್ತು ವಿದ್ಯಾರ್ಥಿಶಕ್ತಿ

 



-ರಾಜಕುಮಾರ ಕುಲಕರ್ಣಿ 

(ಪ್ರಜಾವಾಣಿ, 06.05.2026)

ರಾಜ್ಯದಲ್ಲಿ ನಿಷೇಧಗೊಂಡಿದ್ದ ವಿದ್ಯಾರ್ಥಿ ಸಂಘದ ಚುನಾವಣೆಯನ್ನು ಈಗ ಮತ್ತೆ ಪುನರಾರಂಭಿಸಲು ಸರ್ಕಾರ ಮುಂದಾಗಿದೆ. ಈಗಾಗಲೇ ಕರ್ನಾಟಕ ರಾಜ್ಯಸರ್ಕಾರದಿಂದ 2026-27 ನೇ ಸಾಲಿನ ಬಜೆಟ್‍ನಲ್ಲಿ ಸರ್ಕಾರಿ ಕಾಲೇಜುಗಳಲ್ಲಿ ವಿದ್ಯಾರ್ಥಿ ಚುನಾವಣೆ ಆರಂಭಿಸುವ ಕುರಿತು ಘೋಷಣೆ ಹೊರಡಿಸಲಾಗಿದೆ. ರಾಜ್ಯದ  ಉನ್ನತ ಶಿಕ್ಷಣ ಮತ್ತು ವೈದ್ಯಕೀಯ ಶಿಕ್ಷಣ ಸಚಿವರು ಜೊತೆಗೂಡಿ ವಿವಿಧ ಪಕ್ಷಗಳ ವಿದ್ಯಾರ್ಥಿ ಪ್ರತಿನಿಧಿಗಳು, ವಿದ್ಯಾರ್ಥಿ ಘಟಕಗಳು ಮತ್ತು ಕಾಲೇಜುಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿರುವರು. ಪ್ರಸ್ತಕ ಶೈಕ್ಷಣಿಕ ವರ್ಷದಿಂದಲೇ ಚುನಾವಣೆ ನಡೆಸುವಂತೆ ವಿದ್ಯಾರ್ಥಿ ಸಂಘಗಳು ಒತ್ತಾಯಿಸಿರುವುದಾಗಿ ಪತ್ರಿಕೆಗಳಲ್ಲಿ ವರದಿಯಾಗಿದೆ. ಮಾಧ್ಯಮಗಳಲ್ಲಿ ಈ ಕುರಿತು ಪರ-ವಿರೋಧ ಚರ್ಚೆ ಶುರುವಾಗಿದೆ. 

ಕರ್ನಾಟಕದಲ್ಲಿ ವಿದ್ಯಾರ್ಥಿ ಚುನಾವಣೆಯನ್ನು 1980 ರ ದಶಕದ ಕೊನೆಯಲ್ಲಿ ನಿಷೇಧಿಸಲಾಯಿತು. ವಿದ್ಯಾರ್ಥಿ ಚುನಾವಣಾ ಕಣದಲ್ಲಿ ಹಣದ ಹರಿದಾಟ, ವಿದ್ಯಾರ್ಥಿ ಗುಂಪುಗಳ ಮಧ್ಯೆ ಹೊಡೆದಾಟ, ಸಾವು ಇಂತಹ ಅಹಿತಕರ ಘಟನೆಗಳು ಸಂಭವಿಸಿದ್ದರ ಹಿನ್ನೆಲೆಯಲ್ಲಿ ಚುನಾವಣೆಯನ್ನು ಸ್ಥಗಿತಗೊಳಿಸಲಾಯಿತು. ಈ ನಾಲ್ಕು ದಶಕಗಳಲ್ಲಿ ರಾಜಕಾರಣ ಮತ್ತು ಶಿಕ್ಷಣಕ್ಷೇತ್ರ ಎರಡರಲ್ಲೂ ಸಾಕಷ್ಟು ನೀರು ಹರಿದುಹೋಗಿದೆ. ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಚುನಾವಣಾ ವಾತಾವರಣ ಇಲ್ಲದ ಪರಿಣಾಮ ವಿದ್ಯಾರ್ಥಿ ಸಮೂಹದಲ್ಲಿ ರಾಜಕೀಯ ಪ್ರಜ್ಞೆ ಕುಂಠಿತಗೊಂಡಿದೆ. ಒಂದು ಕಾಲದಲ್ಲಿ ಕಾಲೇಜು ಮತ್ತು ವಿಶ್ವವಿದ್ಯಾಲಯಗಳು ಭವಿಷ್ಯದ ರಾಜಕೀಯ ನಾಯಕರುಗಳನ್ನು ರೂಪಿಸಿರುವುದಕ್ಕೆ ಸಾಕಷ್ಟು ಉದಾಹರಣೆಗಳಿವೆ.

ಸಧ್ಯದ ಸಂದರ್ಭದ ರಾಜಕೀಯ ವಾತಾವರಣವನ್ನು ಗಮನಿಸಿದರೆ ವಿದ್ಯಾರ್ಥಿ ಚುನಾವಣೆಯ ಅಗತ್ಯದ ಅರಿವಾಗುತ್ತದೆ. ಹಣಬಲ, ತೋಳ್ಬಲ ಮತ್ತು ಜಾತಿಬಲದಿಂದ ಕಲುಷಿತಗೊಂಡಿರುವ ರಾಜಕಾರಣವನ್ನು ಶುದ್ಧಗೊಳಿಸುವುದು ತುರ್ತು ಅಗತ್ಯವಾಗಿದೆ. ರಾಜಕಾರಣ ಎನ್ನುವುದು ಈಗ ಸಮಾಜ ಸೇವೆಯಾಗಿ ಉಳಿದಿಲ್ಲ. ಅದೊಂದು ಬಂಡವಾಳ ಹೂಡಿ ಲಾಭಗಳಿಸುವ ಕ್ಷೇತ್ರ ಎನ್ನುವ ಭಾವನೆ ಬಲವಾಗಿದೆ. ಅದಕ್ಕೆಂದೆ ಚುನಾವಣೆಯಲ್ಲಿ ಹಣದ ಹೊಳೆ ಹರಿಯುತ್ತದೆ. ಪ್ರತಿ ಅಭ್ಯರ್ಥಿ ಕೋಟ್ಯಾಂತರ ರೂಪಾಯಿಗಳನ್ನು ಚುನಾವಣೆಗಾಗಿ ಖರ್ಚು ಮಾಡುತ್ತಾರೆ. ಆರ್ಥಿಕವಾಗಿ ಬಲಾಢ್ಯರಿರುವವರು ಮಾತ್ರ ಚುನಾವಣೆಗೆ ಸ್ಪರ್ಧಿಸುವಂಥ ವಾತಾವರಣ ಸೃಷ್ಟಿಯಾಗಿದೆ. ರಾಜಕಾರಣಿಗಳ ಸ್ವಜನಪಕ್ಷಪಾತ ಮತ್ತು ಕುಟುಂಬ ರಾಜಕಾರಣದಿಂದ ಪ್ರಜಾಪ್ರಭುತ್ವ ವ್ಯವಸ್ಥೆಯು ಅರಸೊತ್ತಿಗೆಯಂತೆ ಭಾಸವಾಗುತ್ತಿದೆ. ಇಂಥ ವಿಷಮ ಸನ್ನಿವೇಶದಲ್ಲಿ ವಿದ್ಯಾವಂತರು, ವೈಚಾರಿಕ ಪ್ರಜ್ಞೆ ಉಳ್ಳವರು, ಸಾಮಾಜಿಕ ಕಾಳಜಿ ಇರುವವರು ಹೆಚ್ಚಿನ ಸಂಖ್ಯೆಯಲ್ಲಿ ರಾಜಕಾರಣವನ್ನು ಪ್ರವೇಶಿಸಿ ಕಲುಷಿತಗೊಂಡಿರುವ ವಾತಾವರಣವನ್ನು ತಿಳಿಗೊಳಿಸಬೇಕಾಗಿದೆ. 

ವಿದ್ಯಾರ್ಥಿ ಚುನಾವಣೆಯನ್ನು ಮತ್ತೆ ಪುನರಾರಂಭಿಸುತ್ತಿರುವ ಹೊತ್ತಿನಲ್ಲಿ ವಿದ್ಯಾರ್ಥಿ ಸಮೂಹ ಈ ಹೊಸ ಬೆಳವಣಿಗೆಗೆ ಹೇಗೆ ಸ್ಪಂದಿಸಬಲ್ಲದು ಎನ್ನುವುದು ಬಹುಮುಖ್ಯವಾದ ಪ್ರಶ್ನೆಯಾಗಿದೆ. ಕಳೆದ ಮೂರುವರೆ ದಶಕಗಳಿಂದ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಚುನಾವಣಾ ವಾತಾವರಣವಿಲ್ಲ. 1980 ರ ದಶಕದ ಶೈಕ್ಷಣಿಕ ಪರಿಸರಕ್ಕೂ ಮತ್ತು ಸಧ್ಯದ ವಾತಾವರಣಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಈಗ ಇತಿಹಾಸ, ರಾಜ್ಯಶಾಸ್ತ್ರ ಮತ್ತು ಸಮಾಜಶಾಸ್ತ್ರದಂತಹ ಒಟ್ಟಾರೆ ಮಾನವಿಕ ಜ್ಞಾನಶಿಸ್ತುಗಳನ್ನು ಅಭ್ಯಸಿಸುವ ವಿದ್ಯಾರ್ಥಿಗಳಸಂಖ್ಯೆ ಗಮನಾರ್ಹ ಕುಸಿತ ಕಂಡಿದೆ. ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿರುವ ಇಂದಿನ ವಿದ್ಯಾರ್ಥಿಗಳಲ್ಲಿ ರಾಜಕಾರಣದ ಕುರಿತು ಆಸಕ್ತಿ ಇಲ್ಲ. ವೈದ್ಯರು ಇಲ್ಲವೇ ಎಂಜಿನಿಯರರಾಗಿ ಒಂದು ಕಂಫರ್ಟ್ ಝೋನ್‍ನಲ್ಲಿ ಬದುಕಲು ಇಚ್ಛಿಸುವ ವಿದ್ಯಾರ್ಥಿಗಳು ಸಮಾಜದಲ್ಲಿನ ಆಗುಹೋಗುಗಳಿಗೆ ಕಣ್ಣಿದ್ದೂ ಕುರುಡಾಗಿರುವರು. 

ಮಾನವಿಕ ವಿಷಯಗಳಿಗಿಂತ ವೃತ್ತಿಪರ ಕೋರ್ಸ್‍ಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿರುವ ಪರಿಣಾಮ ನ್ಯಾಯಾಂಗ, ಕಾರ್ಯಾಂಗ ಮತ್ತು ಶಾಸಕಾಂಗಗಳ ಅರಿವು ವಿದ್ಯಾರ್ಥಿಗಳಲ್ಲಿ ಇಲ್ಲವಾಗುತ್ತಿದೆ. ಈ ಕ್ಷೇತ್ರಗಳ ಅರಿವು ವಿದ್ಯಾರ್ಥಿಗಳಲ್ಲಿ ಮೂಡಿಸಲು ವಿಜ್ಞಾನ, ವಾಣಿಜ್ಯ, ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಕೋರ್ಸ್‍ಗಳಲ್ಲಿ ಸಂವಿಧಾನವನ್ನು ಒಂದು ಅಧ್ಯಯನದ ವಿಷಯವಾಗಿಸಿ ಪಠ್ಯಕ್ರಮವನ್ನು ರೂಪಿಸಲಾಗಿದೆ. ದುರಂತವೆಂದರೆ ವೃತ್ತಿಪರ ಕೋರ್ಸ್‍ಗಳಲ್ಲಿ ಸಂವಿಧಾನ ವಿಷಯದ ಬೋಧನೆ ಮತ್ತು ಅಧ್ಯಯನ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ. ವೃತ್ತಿಪರ ಕೋರ್ಸ್‍ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಸಮೂಹದಲ್ಲಿ ರಾಜಕೀಯ ಮತ್ತು ಸಾಮಾಜಿಕ ಪ್ರಜ್ಞೆಯನ್ನು ಮೂಡಿಸಲು ಮಾಡುತ್ತಿರುವ ಪ್ರಯತ್ನಗಳು ವಿಫಲಗೊಂಡಿವೆ. ಪರಿಣಾಮವಾಗಿ ಶಿಕ್ಷಣದಲ್ಲಿ ಯಶಸ್ಸು ಸಾಧಿಸದವರು ರಾಜಕಾರಣಿಗಳಾಗುತ್ತಾರೆ ಎನ್ನುವ ಮಾತು ದಿಟವಾಗಿದೆ. ಅದಕ್ಕೆಂದೆ ರಾಜಕಾರಣ ವಿದ್ಯಾವಂತರಲ್ಲದವರ ಒಡ್ಡೋಲಗವಾಗಿದೆ.

ವಿದ್ಯಾರ್ಥಿಗಳಲ್ಲಿ ರಾಜಕೀಯ ಮತ್ತು ಸಾಮಾಜಿಕ ಪ್ರಜ್ಞೆ ಕ್ಷೀಣಿಸುತ್ತಿರುವ ಸಂದರ್ಭದಲ್ಲಿ ಸರ್ಕಾರ ವಿದ್ಯಾರ್ಥಿ ಚುನಾವಣೆಯನ್ನು ಮತ್ತೆ ಪುನರಾರಂಭಿಸಲು ಮುಂದಾಗಿರುವುದು ಸ್ವಾಗತಾರ್ಹ ಬೆಳವಣಿಗೆ. ಈ ವಿಷಯದಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಡುವುದು ಅಗತ್ಯವಾಗಿದೆ. ಚುನಾವಣೆಯಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಕುಂಠಿತಗೊಳ್ಳಬಾರದು. ಚುನಾವಣೆಯನ್ನು ಕ್ರೀಡೆ ಮತ್ತು ಓದಿನಂತೆ ಅದನ್ನೊಂದು ಶೈಕ್ಷಣಿಕ ಚಟುವಟಿಕೆಯ ಭಾಗವಾಗಿ ಪರಿಗಣಿಸುವುದು ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಒಳ್ಳೆಯದು. ಚುನಾವಣೆ ಮುಕ್ತವಾಗಿ ಮತ್ತು ಪಾರದರ್ಶಕವಾಗಿ ನಡೆಯಬೇಕು. ವಿದ್ಯಾರ್ಥಿ ಚುನಾವಣೆ ಧನಬಲ, ತೋಳ್ಬಲ ಮತ್ತು ಜಾತಿಬಲದ ಪ್ರಭಾವಕ್ಕೆ ಒಳಗಾಗದಂತೆ ನೋಡಿಕೊಳ್ಳಬೇಕು. ರಾಜಕೀಯ ಪಕ್ಷಗಳ ಚುನಾವಣೆ ಖದರು ವಿದ್ಯಾರ್ಥಿ ಸಂಘಗಳ ಚುನಾವಣೆಗೆ ಪ್ರಾಪ್ತವಾಗಬಾರದು. ಒಟ್ಟಿನಲ್ಲಿ ವಿದ್ಯಾರ್ಥಿ ಚುನಾವಣೆಯಿಂದ ಭವಿಷ್ಯದ ರಾಜಕೀಯ ನೇತಾರರು ರೂಪುಗೊಳ್ಳಬೇಕೆ ವಿನಾ ರಾಜಕೀಯ ಪಕ್ಷಗಳ ಅನುಯಾಯಿಗಳು ಅಥವಾ ಮತಬ್ಯಾಂಕ್ ಸೃಷ್ಟಿಯಾಗಬಾರದು.  

ಈ ಹಿಂದೆ ಅನೇಕ ರಾಜಕಾರಣಿಗಳು ತಮ್ಮ ವಿದ್ವತ್ತಪೂರ್ಣ ಮಾತುಗಳಿಂದ ಬೌದ್ಧಿಕ ರಾಜಕಾರಣಿಗಳೆಂಬ ಗೌರವಕ್ಕೆ ಪಾತ್ರರಾಗಿದ್ದರು. ತಮ್ಮ ಓದಿನ ಹರವು, ಚಿಂತನೆ, ವಿಶಾಲ ದೃಷ್ಟಿಕೋನ ಮತ್ತು ಸಮಾಜದ ಕುರಿತಾದ ಕಾಳಜಿಯಿಂದ ರಾಜಕಾರಣಕ್ಕೆ ಹೊಸ ಅರ್ಥ ತಂದುಕೊಟ್ಟಿರುವರು. ಶಾಸನ ಸಭೆಯಲ್ಲಿನ ಭಾಷಣಗಳು ಐತಿಹಾಸಿಕ ದಾಖಲೆಗಳಾಗಿ ಉಳಿದುಕೊಂಡಿರುವುದರ ಹಿಂದೆ ಅಂದಿನ ರಾಜಕಾರಣಿಗಳಲ್ಲಿದ್ದ ಬೌದ್ಧಿಕ ಪ್ರಜ್ಞೆಯೇ ಕಾರಣ. ಸಮಾಜದ ಸ್ವಾಸ್ಥ್ಯಕ್ಕಾಗಿ ರಾಜಕಾರಣದಲ್ಲಿ ಬೌದ್ಧಿಕ ನಾಯಕರ ಅಗತ್ಯವಿದೆ. ಸಧ್ಯದ ಸಂದರ್ಭದಲ್ಲಿ ವಾಚಾಳಿತನವೇ ಬಂಡವಾಳವಾಗಿರುವ ರಾಜಕಾರಣದಲ್ಲಿ ಬೌದ್ಧಿಕಪ್ರಜ್ಞೆ ಗೋಚರಿಸುತ್ತಿಲ್ಲ. ವಿದ್ಯಾರ್ಥಿ ಚುನಾವಣೆಯ ಮೂಲಕವಾದರೂ ರಾಜಕಾರಣಕ್ಕೆ ಬೌದ್ಧಿಕ ನಾಯಕರು ದಕ್ಕುವಂತಾಗಲಿ. 

ನೊಬೆಲ್ ಬಹುಮಾನ ಸ್ವೀಕರಿಸುವಾಗ ಕವಿ ಬ್ರಾಡ್‍ಸ್ಕೀ ಹೇಳಿದ್ದು ಹೀಗೆ-‘ನಾವು ನಮ್ಮ ನಾಯಕರುಗಳನ್ನು ಅವರ ರಾಜಕೀಯ ಕಾರ್ಯಸೂಚಿಗಿಂತ ಅವರ ಓದಿನ ಅನುಭವವನ್ನು ಆಧರಿಸಿ ಆಯ್ಕೆ ಮಾಡಿದ್ದಲ್ಲಿ ಭೂಮಿಯ ಮೇಲೆ ಅತ್ಯಂತ ಕಡಿಮೆ ದು:ಖವಿರುತ್ತಿತ್ತು’. ಈ ಮಾತು ರಾಜಕಾರಣದಲ್ಲಿರುವ ಬೌದ್ಧಿಕ ಕೊರತೆಯನ್ನು ಸ್ಪಷ್ಟವಾಗಿ ಧ್ವನಿಸುತ್ತದೆ. ಇಂಥ ಸಂದಿಗ್ಧ ಸನ್ನಿವೇಶದಲ್ಲಿ ಭವಿಷ್ಯದ ನೇತಾರರನ್ನು ರೂಪಿಸಿ ಆ ಮೂಲಕ ರಾಜಕಾರಣಕ್ಕೆ ಬೌದ್ಧಿಕದೀಕ್ಷೆ ನೀಡಲು ವಿದ್ಯಾರ್ಥಿ ಚುನಾವಣೆಯನ್ನು ಪುನರಾರಂಭಿಸಲು ಮುಂದಾಗಿರುವುದು ಸ್ವಾಗತಾರ್ಹ. ಆದರೆ ಚುನಾವಣೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾಗಬಾರದು ಎನ್ನುವುದು ಈ ನಿಲುವನ್ನು ಬೆಂಬಲಿಸುವುದರ ಹಿಂದಿರುವ ಕಾಳಜಿಯಾಗಿದೆ.

---000---

No comments:

Post a Comment