Friday, August 14, 2026

ದೈವ ನಂಬಿಕೆ ಎಂಬ ಬಂಡವಾಳ ಹೂಡಿಕೆ


-ರಾಜಕುಮಾರ ಕುಲಕರ್ಣಿ 

 (ಪ್ರಜಾವಾಣಿ, 27.04.2026)

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಭಕ್ತರೊಬ್ಬರು ದೇವಿಯ ಕೊಂಡೋತ್ಸವದ ವೇಳೆ ಬೆಂಕಿಕೆಂಡದ ಮೇಲೆ ಬಿದ್ದು ಕೈಕಾಲುಗಳು ಸುಟ್ಟ ಘಟನೆ ಪತ್ರಿಕೆಗಳಲ್ಲಿ ವರದಿಯಾಗಿದೆ. ದೇವರ ರಥದಗಾಲಿಗೆ ಸಿಲುಕಿ ಭಕ್ತರು ಅಸುನೀಗುವುದು, ದೇವಸ್ಥಾನದಲ್ಲಿ ಕಾಲ್ತುಳಿತದ ಪ್ರಕರಣ, ಪುಣ್ಯಕ್ಷೇತ್ರಗಳ ಪಾದಯಾತ್ರಿಗಳ ಮೇಲೆ ವಾಹನಹರಿದು ಉಂಟಾಗುವ ಸಾವು ಇಂತಹ ಘಟನೆಗಳು ವೃತ್ತಪತ್ರಿಕೆಗಳಲ್ಲಿ ನಿರಂತರವಾಗಿ ವರದಿಯಾಗುತ್ತಿರುತ್ತವೆ. ಈ ರೀತಿ ಅನಾಹುತಗಳಾದರೂ ಜನರಲ್ಲಿ ದೈವನಂಬಿಕೆಗೇನೂ ಬರವಿಲ್ಲ. ದುರಂತವೆಂದರೆ ಜನರ ಈ ಮುಗ್ಧ ನಂಬಿಕೆಯನ್ನು ವೈಯಕ್ತಿಕ ಹಿತಾಸಕ್ತಿಗಾಗಿ ಬಳಸಿಕೊಳ್ಳುವವರ ಸಂಖ್ಯೆ ಸಮಾಜದಲ್ಲಿ ಹೆಚ್ಚುತ್ತಿದೆ.

ಹಳ್ಳಿಯಲ್ಲಿ ವಾಸವಾಗಿರುವ ನನ್ನ ಸ್ನೇಹಿತರು ಫೋನ್  ಕರೆಮಾಡಿ ‘ಊರಿನಲ್ಲಿ ಹಳೆಯ ದೇವಸ್ಥಾನದ ಜೀರ್ಣೋದ್ಧಾರದ ಕೆಲಸ ಭರದಿಂದ ಸಾಗಿದೆ. ಗ್ರಾಮದ ಪ್ರಮುಖರು ಮನೆಮನೆಗೆ ತೆರಳಿ ವಂತಿಗೆ ಸಂಗ್ರಹಿಸುತ್ತಿರುವರು. ಪ್ರತಿಮನೆಯವರು ವಂತಿಗೆ ಎಷ್ಟು ಕೊಡಬೇಕೆನ್ನುವುದನ್ನು ಪ್ರಮುಖರೇ ನಿರ್ಧರಿಸುತ್ತಿರುವರು. ದಿನದ ಎರಡು ಹೊತ್ತಿನ ಊಟಕ್ಕೂ ಪರದಾಡುವವರು ಸಾಲಮಾಡಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ವಂತಿಗೆಯನ್ನು ಸಲ್ಲಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ದೇವಸ್ಥಾನದ ಜೀರ್ಣೋದ್ಧಾರದ ಬದಲು ಊರಿನಲ್ಲಿ ಪ್ರಾಥಮಿಕ ಆರೋಗ್ಯಕೇಂದ್ರ ಸ್ಥಾಪಿಸಿದ್ದರೆ ಜನರಿಗೆ ಅನುಕೂಲವಾಗುತ್ತಿತ್ತು’ ಎಂದು ಹೇಳಿದರು. ಅವರ ಇಡೀ ಸಂಭಾಷಣೆಯಲ್ಲಿ ಸಾಮಾಜಿಕ ಕಾಳಜಿ ಧ್ವನಿಸುತ್ತಿತ್ತು.

ದೇವಸ್ಥಾನಗಳಿಗೆ ದೇಣಿಗೆ ನೀಡುವ ಇದೇ ಜನರು ಶಾಲೆ, ಶುದ್ಧ ಕುಡಿಯುವನೀರು, ಆರೋಗ್ಯಕೇಂದ್ರ, ಸಾರಿಗೆ ವ್ಯವಸ್ಥೆ, ಗ್ರಂಥಾಲಯ ಮತ್ತು ಶೌಚಾಲಯದಂತಹ ಮೂಲಬೇಡಿಕೆಗಳ ಕುರಿತು ಯೋಚಿಸುವುದು ಕಡಿಮೆ. ಜನರ ಈ ದಿವ್ಯ ನಿರ್ಲಕ್ಷ್ಯದ ಪರಿಣಾಮ ಅದೆಷ್ಟೋ ಹಳ್ಳಿಗಳಲ್ಲಿ ಸುಸಜ್ಜಿತ ಶಾಲೆಗಳಿಲ್ಲ. ಶುದ್ಧ ಕುಡಿಯುವ ನೀರು ಲಭ್ಯವಿಲ್ಲದೆ ಅಶುದ್ಧ ನೀರು ದೇಹವನ್ನು ಸೇರುತ್ತಿದೆ. ಪ್ರಾಥಮಿಕ ಆರೋಗ್ಯ ಕೇಂದ್ರದ ಕೊರತೆಯಿಂದ ಸಕಾಲದಲ್ಲಿ ಅಗತ್ಯದ ಚಿಕಿತ್ಸೆ ದೊರೆಯದೆ ಸಾವುಗಳು ಸಂಭವಿಸುತ್ತಿವೆ. ಗ್ರಂಥಾಲಯ ಮತ್ತು ಶೌಚಾಲಯ ಇಂದಿಗೂ ಗ್ರಾಮೀಣ ಭಾಗದಲ್ಲಿ ಅಗತ್ಯದ ಸಂಗತಿಗಳಾಗಿಲ್ಲ. 

ಮೂಲಭೂತ ಸೌಕರ್ಯಗಳ ಕೊರತೆ ಇದ್ದರೂ ಜನರಲ್ಲಿ ದೈವಶ್ರದ್ಧೆಗೆ ಬರವಿಲ್ಲ. ರಸ್ತೆಯ ಪಕ್ಕದ ಕಲ್ಲಿಗೆ ಒಂದಿಷ್ಟು ಕುಂಕುಮ ಲೇಪಿಸಿದರೂ ಭಕ್ತಿಯಿಂದ ನಿಂತು ನಮಸ್ಕರಿಸುವರು. ದೇವರ ಹೆಸರಿನಲ್ಲಿ ದೇಹಕ್ಕೆ ಬಗೆಬಗೆಯ ಹಿಂಸೆಯನ್ನು ನೀಡುವ ಭಕ್ತರ ಸಂಖ್ಯೆ ಸಮಾಜದಲ್ಲಿ ಬಹಳಷ್ಟಿದೆ. ಕೆಂಡದ ಮೇಲೆ ನಡೆಯುವುದು, ಅಂಗೈಯಲ್ಲಿ ಕರ್ಪೂರದಾರತಿ ಬೆಳಗುವುದು, ಮುಳ್ಳಿನ ಪಾದುಕೆಗಳ ಮೇಲೆ ನಿಲ್ಲುವುದು, ರಕ್ತಜಿನುಗುವಂತೆ ಚಾಟಿಯಿಂದ ಮೈಮೇಲೆ ಹೊಡೆದುಕೊಳ್ಳುವುದು, ಬೆನ್ನಿಗೆ ಕಬ್ಬಿಣದಕೊಂಡಿ ಸಿಕ್ಕಿಸಿಕೊಂಡು ಗಾಳಿಯಲ್ಲಿ ತೇಲಾಡುವುದು, ನಾಲಗೆಗೆ ಕಬ್ಬಿಣದ ಸಲಾಕೆ ಚುಚ್ಚಿಕೊಳ್ಳುವುದು ಹೀಗೆ ಭಕ್ತಗಣ ದೈಹಿಕ ಹಿಂಸೆಗೆ ಒಳಗಾಗುವರು. 

ಜನರಿಗಿರುವ ದೇವರ ಮೇಲಿನ ನಂಬಿಕೆ ಮತ್ತು ಭಕ್ತಿ, ರಾಜಕಾರಣಕ್ಕೆ ಉಪಯುಕ್ತ ಬಂಡವಾಳವಾಗಿದೆ. ಕಾಲಕಾಲಕ್ಕೆ ಅಧಿಕಾರಹಿಡಿದ ಪಕ್ಷಗಳು ದೇವಸ್ಥಾನಗಳು, ಮಸೀದಿಗಳು ಮತ್ತು ಮಠಗಳಿಗೆ ಕೋಟ್ಯಾಂತರ ರೂಪಾಯಿಗಳ ಅನುದಾನ ನೀಡಿ ಓಲೈಕೆ ರಾಜಕಾರಣ ಮಾಡಿದ್ದು ಸುಳ್ಳಲ್ಲ. ರಾಜಕೀಯ ನಾಯಕರು ತಮ್ಮ ಮತ ಕ್ಷೇತ್ರಗಳಲ್ಲಿ ದೇವಸ್ಥಾನಗಳನ್ನು ಮತ್ತು ಮಸೀದಿಗಳನ್ನು ಸ್ಥಾಪಿಸಲು ಪೈಪೆÇೀಟಿಗಿಳಿಯುವರು. ಪರಿಣಾಮವಾಗಿ ಧಾರ್ಮಿಕ ಕೇಂದ್ರಗಳು ಮತಬ್ಯಾಂಕ್‍ಗಳಾಗಿ ರೂಪಾಂತರಗೊಂಡಿವೆ. ಮಂದಿರ, ಮಸೀದಿಗಳ ಮುಖ್ಯಸ್ಥರು ಸರ್ಕಾರದ ಮಟ್ಟದಲ್ಲಿ ತಮ್ಮ ತಮ್ಮ ಸಮುದಾಯಗಳ ನಾಯಕರನ್ನು ಸಚಿವರನ್ನಾಗಿಸಲು ಲಾಬಿ ನಡೆಸುವುದು ಸಾಮಾನ್ಯವಾಗಿದೆ. ಸಚಿವಾಲಯದಲ್ಲಿನ ಸಚಿವರ ಕೊಠಡಿಗಳು ವಾಸ್ತುಪ್ರಕಾರ ನವೀಕರಣಗೊಳ್ಳುತ್ತವೆ. ಅಧಿಕಾರಗ್ರಹಣದ ಸಂದರ್ಭ ಸಚಿವರುಗಳಿಂದ ದೇವರಪೂಜೆ ಭರ್ಜರಿಯಾಗಿ ನೆರವೆರುತ್ತದೆ. 

ಇತ್ತೀಚೆಗೆ ಬಸ್ ನಿಲ್ದಾಣದಲ್ಲಿ ಪರಿಚಯವಾದ ವ್ಯಕ್ತಿಯೊಬ್ಬರು ಮಾತಿನ ನಡುವೆ ತಮ್ಮ ಕುಟುಂಬದ ಎರಡು ದೇವಸ್ಥಾನಗಳಿದ್ದು ಅವುಗಳ ಮೇಲ್ವಿಚಾರಣೆಯೇ ತಮ್ಮ ಉದ್ಯೋಗವಾಗಿದೆ ಮತ್ತು ಆದಾಯ ಸಾಕಷ್ಟಿದೆ ಎಂದರು. ದೇವಸ್ಥಾನ ಕುಟುಂಬದ ಆಸ್ತಿಯಾಗಿ ಅದೊಂದು ಆದಾಯದ ಮೂಲವಾಗಿರುವುದಕ್ಕೆ ಜನರಲ್ಲಿರುವ ದೈವಶ್ರದ್ಧೆಯೇ ಕಾರಣವಾಗಿದೆ. ದೇವರ ಮೇಲಿರುವ ಜನರ ನಂಬಿಕೆ ಕೆಲವರಿಗೆ ಹಣಗಳಿಕೆಗಾಗಿ ಬಂಡವಾಳ ಹೂಡಿಕೆಯ ಮಾರ್ಗವಾಗಿದೆ. ಅದಕ್ಕೆಂದೇ ಇಲ್ಲಿ ಢೊಂಗಿಬಾಬಾಗಳು, ಜ್ಯೋತಿಷಿಗಳು, ವಾಸ್ತುಹೇಳುವವರು, ಹುಟ್ಟಿಕೊಳ್ಳುತ್ತಿರುವರು. 

ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆಯ ನಡುವೆಯೂ ದೈವನಂಬಿಕೆಯ ಸಿನಿಮಾಗಳು ಚಿತ್ರರಂಗದಲ್ಲಿ ನಿರ್ಮಾಣಗೊಳ್ಳುತ್ತಿವೆ. ಕನ್ನಡ ಮಾತ್ರವಲ್ಲದೆ ಭಾರತದ ಎಲ್ಲ ಭಾಷೆಗಳಲ್ಲಿ ದೇವರು-ದೇವತೆಗಳ ವಿಷಯವಸ್ತು ಆಧಾರಿತ ಸಿನಿಮಾಗಳು ತಯ್ಯಾರಾಗಿ ಜನಪ್ರಿಯಗೊಳ್ಳುತ್ತಿವೆ. ಜನರಲ್ಲಿರುವ ದೈವಶ್ರದ್ಧೆಯನ್ನು ಬಂಡವಾಳವಾಗಿಸಿಕೊಳ್ಳುವ ಸಿನಿಮಾ ಮಾಧ್ಯಮದಜನ ದೈವಭಕ್ತಿ ಸಾರುವ ಸಿನಿಮಾಗಳನ್ನು ನಿರ್ಮಿಸುತ್ತಿರುವರು. ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ಗ್ರಾಫಿಕ್ ಮೂಲಕ ದೇವರ ಸಾಹಸ ಸಿನಿಮಾ ಪರದೆಯ ಮೇಲೆ ಅನಾವರಣಗೊಳ್ಳುತ್ತಿದೆ. ದೈವ ಮತ್ತು ದೆವ್ವ ಎರಡನ್ನೂ ತಂತ್ರಜ್ಞಾನದ ನೆರವಿನಿಂದ ಕಲಾತ್ಮಕವಾಗಿ ತೋರಿಸುವುದರಲ್ಲೇ ನಮ್ಮ ನಿರ್ದೇಶಕರು ತಮ್ಮೊಳಗಿನ ಕ್ರಿಯಾಶೀಲತೆಯನ್ನು ವ್ಯರ್ಥಗೊಳಿಸುತ್ತಿರುವರು. 

ಮಹಾತ್ಮ ಗಾಂಧಿ ಅವರ ಪ್ರಕಾರ ‘ಸತ್ಯವೇ’ ದೇವರು. ಅವರು ಸತ್ಯ, ಪ್ರೀತಿ ಮತ್ತು ಅಂಹಿಸೆಯಲ್ಲಿ ದೇವರನ್ನು ಸಾಕ್ಷಾತ್ಕರಿಸಿಕೊಂಡರು. ಸತ್ಯದ ಅನ್ವೇಷಣೆಯೇ ಗಾಂಧೀಜಿಗೆ ದೇವರ ಸಾಕ್ಷಾತ್ಕಾರವಾಗಿತ್ತು. ಡಾ.ಬಿ.ಆರ್.ಅಂಬೇಡ್ಕರ್ ಅವರು ಮನುಷ್ಯನ ಗೌರವ ಮತ್ತು ಸಮಾನತೆ ಮುಖ್ಯವೇ ವಿನಾ ದೇವರ ಮೇಲಿನ ಅಂಧಶ್ರದ್ಧೆಯಲ್ಲ ಎಂದು ನಂಬಿದ್ದರು. ಜನರನ್ನು ಮೂಢನಂಬಿಕೆಯಿಂದ ಹೊರತರಲು ದೇವಾಲಯಗಳಿಗಿಂತ ಗ್ರಂಥಾಲಯಗಳನ್ನು ಹೆಚ್ಚು ಸ್ಥಾಪಿಸಿ ಎಂದು ಅವರು ಕರೆನೀಡಿದ್ದರು. ಕರುನಾಡಿನ ಶಿಲ್ಪಕಲಾ ವೈಭವವನ್ನು ವರ್ಣಿಸುತ್ತ ಕುವೆಂಪು ‘ಗಂಟೆಗಳ ದನಿಯಿಲ್ಲ, ಜಾಗಟೆಗಳಿಲ್ಲಿಲ್ಲ, ಕರ್ಪೂರದಾರತಿಯ ಜ್ಯೋತಿಯಿಲ್ಲ’ ಎಂದಿರುವರು. ದೇವಾಲಯದ ಪರಿಕಲ್ಪನೆಯನ್ನೇ ಅವರು ನಿರಾಕರಿಸುವ ಬಗೆಯಿದು.

ಮನುಷ್ಯರಲ್ಲಿನ ವೈಚಾರಿಕಪ್ರಜ್ಞೆಯ ಕೊರತೆಯಿಂದಾಗಿ ಅಂಧಶ್ರದ್ಧೆ ಮತ್ತು ಮೂಢನಂಬಿಕೆಗಳು ಸಮಾಜದಲ್ಲಿ ಹೆಚ್ಚುತ್ತಿವೆ. ಮನುಷ್ಯನ ಅಂಧಶ್ರದ್ಧೆಯಲ್ಲಿ ದೇವರ ಮೇಲಿನ ಅತಿಯಾದ ನಂಬಿಕೆಯೂ ಒಂದು. ಕಾಯವೇ ದೇಗುಲವೆಂದ ಬಸವಣ್ಣನವರು ಕಾಯಕವೇ ಕೈಲಾಸ ಎಂದರು. ಆದರೆ ಮನುಷ್ಯ ಅಂಧಶ್ರದ್ಧೆಯಿಂದ ದೇವರ ಹೆಸರಿನಲ್ಲಿ ದೇಹವನ್ನು ಯಾತನೆಗೆ ಒಳಪಡಿಸುತ್ತಿರುವನು. ದೇವರನ್ನೇ ನೆಚ್ಚಿಕೊಂಡು ಕಾಯಕಕ್ಕೆ ವಿಮುಖನಾಗಿರುವನು. ಮನುಷ್ಯರಲ್ಲಿ ಅಂಧಶ್ರದ್ಧೆ ಅಳಿದು ವೈಚಾರಿಕಪ್ರಜ್ಞೆ ಮೂಡಬೇಕು. ದೈವಶ್ರದ್ಧೆಯು ಅಂಧಶ್ರದ್ಧೆಯಾದಾಗ ಮನುಷ್ಯನ ಈ ದೌರ್ಬಲ್ಯವನ್ನು ಬಂಡವಾಳ ಆಗಿಸಿಕೊಳ್ಳುವವರ ಸಂಖ್ಯೆ ಸಮಾಜದಲ್ಲಿ ವೃದ್ಧಿಸುವ ಅಪಾಯವಿದೆ. 

---000---

No comments:

Post a Comment