Friday, March 21, 2014

ಖುಷ್ವಂತಜ್ಜನ ನೆನಪುಗಳಲ್ಲಿ






             ಪತ್ರಕರ್ತ, ಅಂಕಣಕಾರ, ಸಾಹಿತಿ ಖುಷ್ವಂತ ಸಿಂಗ್ ತಮ್ಮ ೯೯ನೇ ವಯಸ್ಸಿನಲ್ಲಿ ನಿಧನರಾದರು. ಬೆಚ್ಚನೆಯ ಜೀವನ ಪ್ರೀತಿಯನ್ನು ತನ್ನೊಳಗೆ ಬದುಕಿನ ಕೊನೆಯ ದಿನದವರೆಗೂ ಕಾಪಿಟ್ಟುಕೊಂಡು ಬಂದ ಈ ಅಜ್ಜ ಇತರರಲ್ಲೂ ಅದೇ ಜೀವನ ಪ್ರೀತಿಯನ್ನು ತನ್ನ ಬರವಣಿಗೆಯ ಮೂಲಕ ಕಟ್ಟಿಕೊಟ್ಟ. ಖುಷ್ವಂತ ಸಿಂಗರ ಬದುಕು ಮತ್ತು ಬರವಣಿಗೆ ಅಂದಿಗೂ ಮತ್ತು ಇಂದಿಗೂ ಅದೊಂದು ಅಚ್ಚರಿ ಮತ್ತು ಬೆರಗುಗಳ ಸಮ್ಮಿಶ್ರಣ. ಸಾಯುವುದಕ್ಕೆ ಇನ್ನೇನು ಕೆಲವು ತಿಂಗಳುಗಳಿವೆ ಎನ್ನುವವರೆಗೂ ರಾಷ್ಟ್ರದ ಪ್ರಮುಖ ಇಂಗ್ಲಿಷ್ ದೈನಿಕಗಳಲ್ಲಿ ಅವರ ಅಂಕಣ ಬರಹಗಳು  ನಿಯಮಿತವಾಗಿ ಪ್ರಕಟವಾಗುತ್ತಿದ್ದವು.  ಪ್ರತಿ ಶನಿವಾರದಂದು ಡೆಕ್ಕನ್ ಹೆರಾಲ್ಡ್ ದಿನಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ 'Sweet and sour' ಅಂಕಣದ ಓದಿಗಾಗಿ ಓದುಗರು ಅತ್ಯಂತ ಕುತೂಹಲದಿಂದ ಕಾಯುತ್ತಿದ್ದರು. ಪ್ರತಿವಾರ ಒಂದೊಂದು ಹೊಸವಿಷಯ ಲೇಖನದ ಕೊನೆಗೆ ಸಣ್ಣದೊಂದು ಜೋಕು ಅವರ ಆ ಅಂಕಣ ಓದುಗರನ್ನು ಮಂತ್ರ ಮುಗ್ಧರನ್ನಾಗಿಸುತ್ತಿತ್ತು. ಸಾಮಾನ್ಯ ಸಂಗತಿಯನ್ನೂ ನಾವುಗಳೆಲ್ಲ ಅತ್ಯಂತ ಕುತೂಹಲ ಮತ್ತು ಬೆರಗಿನಿಂದ ಓದುವಂತೆ ಬರೆಯುತ್ತಿದ್ದ ಖುಷ್ವಂತ ಸಿಂಗಗೆ ಬರವಣಿಗೆ ಒಲಿಯುವುದರ ಜೊತೆಗೆ ಓದುಗರ ನಾಡಿಮಿಡಿತ ಅರ್ಥವಾಗಿತ್ತು. ಸಣ್ಣ  ಸಣ್ಣ ಸಂಗತಿಗಳಿಗೂ ಹಾಸ್ಯದ ಲೇಪ ಹಚ್ಚಿ  ಅತ್ಯಂತ ಲವಲವಿಕೆಯಿಂದ ಬರೆಯುತ್ತಿದ್ದ ಖುಷ್ವಂತ್ ಸಿಂಗರಿಗೆ ತಮ್ಮ ಸುತ್ತಮುತ್ತಲಿನ ಜನರು, ಮನೆಯ ಸೇವಕ, ಕಸಗುಡಿಸುವವ ಇಂಥ ವ್ಯಕ್ತಿಗಳೇ ಬರವಣಿಗೆಗೆ ಆಹಾರವಾಗುತ್ತಿದ್ದರು.  ಅಚ್ಚರಿಯ ಸಂಗತಿ ಎಂದರೆ ಖುಷ್ವಂತ್ ಸಿಂಗ್ ಬರವಣಿಗೆಯ ಬದುಕನ್ನು ಆಯ್ಕೆಮಾಡಿಕೊಂಡಿದ್ದು ಅದೊಂದು ಆಕಸ್ಮಿಕ ಸನ್ನಿವೇಶದಲ್ಲಿ. ವಕೀಲರಾಗಬೇಕೆಂದು ವೃತ್ತಿಯನ್ನಾರಂಭಿಸಿದ ಆ ದಿನಗಳಲ್ಲಿ ಕೈಯಲ್ಲಿ ಕೆಲಸವಿಲ್ಲದೆ ಖಾಲಿ ಕುಳಿತಾಗ ಖುಷ್ವಂತ್ ಸಿಂಗಗೆ ಓದುವ ಗೀಳು ಅಂಟಿಕೊಂಡಿತು. ಇಂಗ್ಲಿಷ್ ಸಾಹಿತ್ಯವನ್ನು ಓದುತ್ತ ಹೋದಂತೆಲ್ಲ ಅವರೊಳಗೊಬ್ಬ ಬರಹಗಾರ ಹುಟ್ಟಿಕೊಂಡ. ಮುಂದೆ ಬರವಣಿಗೆಯನ್ನೇ ವೃತ್ತಿಯಾಗಿಸಿಕೊಂಡು ಈ ಅಜ್ಜ ಅದ್ಭುತವಾದದ್ದನ್ನು ಸಾಧಿಸಿದ. ಪತ್ರಿಕೆಯ ಸಂಪಾದಕನಾಗಿ, ೮೦ ಕ್ಕೂ ಹೆಚ್ಚು ಪುಸ್ತಕಗಳ ಲೇಖಕನಾಗಿ, ಅಂಕಣಕಾರನಾಗಿ ಅವರು ಭಾರತೀಯ ಇಂಗ್ಲಿಷ್ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅನನ್ಯ.

                     ಖುಷ್ವಂತ್ ಸಿಂಗರ ಬದುಕು ಅದೊಂದು ಅತ್ಯಂತ ವರ್ಣರಂಜಿತ ಬದುಕದು. ನೇರ, ನಿರ್ಭೀತ, ದಿಟ್ಟ ವ್ಯಕ್ತಿತ್ವದ ಜೊತೆಗೆ  ಯಾರ  ಮುಲಾಜು ಹಾಗೂ ಬಿಡೆಗೆ ಸಿಲುಕದ ಬದುಕು ಅವರದಾಗಿತ್ತು. ತಮ್ಮೊಳಗಿನ ದೌರ್ಬಲ್ಯಗಳನ್ನು ಅತ್ಯಂತ ನಿರ್ಭಿಡೆ ಮತ್ತು ನಿಸ್ಸಂಕೋಚವಾಗಿ ಹೇಳಿಕೊಂಡ ಲೇಖಕನೆಂದರೆ ಅದು ಖುಷ್ವಂತ್ ಸಿಂಗ್ ಮಾತ್ರ. ಬರವಣಿಗೆಯ ಬದುಕು ಮತ್ತು ಖಾಸಗಿ ಬದುಕನ್ನು ಪ್ರತ್ಯೇಕವಾಗಿಸಿಕೊಂಡು ಬದುಕುತ್ತಿರುವ ಊಸರವಳ್ಳಿಗಳ ನಡುವೆ ಈ ಖುಷ್ವಂತ್ ಸಿಂಗ್ ತಮ್ಮ ನೇರಾನೇರ ಗುಣಗಳಿಂದ ಇಷ್ಟವಾಗುತ್ತಾರೆ. ಒಂದೊಮ್ಮೆ ಆಹ್ವಾನಿತ ಪ್ರಧಾನಿಯ ಆಗಮನಕ್ಕೂ ಕಾಯದೆ ವೇಳೆಯಾಯಿತೆಂದು ಹುಟ್ಟುಹಬ್ಬವನ್ನು ಆಚರಿಸಿಕೊಂಡ ಹುಂಬನೀತ. ಇಂದಿರಾ ಗಾಂಧಿಯ ತುರ್ತು ಪರಿಸ್ಥಿತಿ ಹೇರಿಕೆಯನ್ನು ಬಲವಾಗಿ ಸಮರ್ಥಿಸಿಕೊಂಡಿದ್ದು ಕೂಡ ಇದೆ ಅಜ್ಜ. ಒಟ್ಟಿನಲ್ಲಿ ಖುಷ್ವಂತ್ ಸಿಂಗರದು ಸುಲಭವಾಗಿ ಅರ್ಥವಾಗುವ ಮತ್ತು ಕೈಗೆ ಸಿಗುವ ವ್ಯಕ್ತಿತ್ವವಲ್ಲ. ಆಧುನಿಕತೆಯನ್ನು ಅತಿಯಾಗಿ ಪ್ರೀತಿಸುತ್ತಿದ್ದ ಮತ್ತು ಹೊಸ ಬದಲಾವಣೆಗಳಿಗೆ ತನ್ನನ್ನು ತಾನು ತೆರೆದುಕೊಳ್ಳುತ್ತಿದ್ದ ಖುಷ್ವಂತ್ ಸಿಂಗ್ ಕೊನೆಯ ಉಸಿರಿನವರೆಗೂ ಸಿಖ್ ಸಂಪ್ರದಾಯದ ವೇಷ ಭೂಷಣಗಳನ್ನು ಕಳಚಿ ಹೊರಬರದಿರುವುದು ಅತ್ಯಂತ ಅಚ್ಚರಿಯ ಸಂಗತಿಗಳಲ್ಲೊಂದು. ಮಗ ರಾಹುಲ್ ಗಡ್ಡ ಬೋಳಿಸಿಕೊಂಡಾಗ ಆತನೊಂದಿಗೆ ಮಾತನಾಡುವುದನ್ನೇ ಬಿಟ್ಟ ಖುಷ್ವಂತ್ ವ್ಯಕ್ತಿತ್ವ ಸಂಪ್ರದಾಯ ಮತ್ತು ಆಧುನಿಕತೆಯ ಸಮ್ಮಿಶ್ರಣದಂತೆ ಕಾಣುತ್ತದೆ.

        ಖುಷವಂತ್ ಸಿಂಗ್ ಬಗ್ಗೆ ಬರೆಯುತ್ತ ಪಿ.ಲಂಕೇಶ್ 'ಭಾರತದಲ್ಲಿ ನೊಬೆಲ್ ಶಾಂತಿ ಪುರಸ್ಕಾರ ಸಿಗಬೇಕಿದ್ದರೆ ಅದು ಖುಷ್ವಂತ್ ಗೆ' ಎಂದು ಹೇಳುತ್ತಾರೆ. ಏಕೆಂದರೆ ಖುಷ್ವಂತ್ ಸಿಂಗ್ ಭಾರತದಲ್ಲಿನ ಎಲ್ಲ ಜಾತಿ ಮತ್ತು ಧರ್ಮದವರನ್ನು ಪ್ರೀತಿಸಿದವರು. ಅವರ 'ಟ್ರೇನ್ ಟು ಪಾಕಿಸ್ತಾನ್' ಕೃತಿಯಲ್ಲಿ ನಾವು ಅವರೊಳಗಿನ ಧರ್ಮಾತೀತ ಮನೋಭಾವವನ್ನು ಕಾಣಬಹುದು. ಏಕಕಾಲಕ್ಕೆ ಮುಸ್ಲಿಂ ಮತ್ತು ಸಿಖ್ ಎರಡೂ ಧರ್ಮಗಳಲ್ಲಿನ ಉತ್ತಮ ಗುಣಗಳನ್ನು ತಮ್ಮ ಈ ಕೃತಿಯಲ್ಲಿ ಪಟ್ಟಿ ಮಾಡುತ್ತಾರೆ. 'ಆತನಂತೆ ಬರೆಯುವವರು, ಛೇಡಿಸುವವರು, ಕುಡಿಯುವವರು, ಕಲ್ಪಿಸಿಕೊಳ್ಳುವವರು ಬರಬಹುದು. ಆದರೆ ಈ ಸರ್ದಾರ್ಜಿಯಂತೆ ಲವಲವಿಕೆ, ದೇಶ ಪ್ರೇಮ, ತುಂಟತನ, ಒಳ್ಳೆಯತನ ಇರುವವರು ಬರುವುದು ಕಷ್ಟ' ಎಂದ ಲಂಕೇಶರ ಮಾತಿನಲ್ಲಿ ಯಾವುದೇ ಉತ್ಪ್ರೇಕ್ಷೆ ಇಲ್ಲ.

                          ಖುಷ್ವಂತ್ ಸಿಂಗ್ ಎಂದಾಕ್ಷಣ ಆ ಕ್ಷಣಕ್ಕೆ ನಮಗೆ ನೆನಪಾಗುವುದು ಅವರು ಹೇಳಿದ ಮತ್ತು ಬರೆದ ಜೋಕುಗಳು. ಟ್ರೇನ್ ಟು ಪಾಕಿಸ್ತಾನ್, ಹಿಸ್ಟರಿ ಆಫ್ ಇಂಡಿಯಾ, ಕಂಪನಿ ವಿಥ್ ವುಮೆನ್ ದಂಥ ಮಹತ್ವದ ಕೃತಿಗಳನ್ನು ಬರೆದ ಖುಷ್ವಂತ್ ಸಿಂಗ್ ಅಷ್ಟೇ ಸಮರ್ಥವಾಗಿ ಸಾವಿರಾರು ಜೋಕುಗಳನ್ನು ಬರೆದಿರುವರು. ಅವರ ಜೋಕುಗಳ ಪುಸ್ತಕಗಳು ಸರಣಿಯೋಪಾದಿಯಲ್ಲಿ ಪ್ರಕಟವಾಗಿವೆ. ಇವತ್ತಿಗೂ ಅನೇಕ ಭಾರತೀಯರ ಮನೆಯ ಪುಸ್ತಕಗಳ ಸಂಗ್ರಹಾಲಯದಲ್ಲಿ ನಾವು ಖುಷ್ವಂತರ ಜೋಕುಗಳ ಪುಸ್ತಕಗಳನ್ನು ಕಾಣಬಹುದು. ತಮ್ಮ ಈ ನಗೆಹನಿಗಳ ಮೂಲಕ ಕೋಟ್ಯಾಂತರ ಭಾರತೀಯರ ಬದುಕಿಗೆ ನವನಾವಿನ್ಯತೆಯ ಲೇಪವನ್ನು ಬಳಿದ ಕಲಾಕಾರನೀತ. ಒಂದಿಷ್ಟು ನಗೆಯುಕ್ಕಿಸಿ ಮನಸ್ಸನ್ನು ಆಹ್ಲಾದಕರವಾಗಿಸಿ ಬದುಕುವ ಚೈತನ್ಯ ನೀಡಿ ಆ ಮೂಲಕ ನಮ್ಮಗಳ ಬದುಕನ್ನು ಸಹನೀಯವಾಗಿಸಿದ ಅವರ ನಗೆಹನಿಗಳು ಅಂದು ಇಂದು ಎಲ್ಲ ಕಾಲಕ್ಕೂ ಪ್ರಸ್ತುತವೆನಿಸುತ್ತವೆ. ತಮ್ಮ ನಗೆಹನಿಗಳ ಪುಸ್ತಕವೊಂದರ ಮುನ್ನುಡಿಯಲ್ಲಿ ಖುಷ್ವಂತ್ ಸಿಂಗ್ ಹೀಗೆ ಹೇಳುತ್ತಾರೆ 'ಈ ಪುಸ್ತಕ ಬರೆಯುತ್ತಿರುವ ಸಂದರ್ಭ ಒಂದು ರಾತ್ರಿ ನಾನೊಂದು ಕನಸು ಕಂಡೆ. ಆಗ ನನಗೆ ವಯಸ್ಸು ೯೨. ನನ್ನ ಹತ್ತಿರ ಬಂದ ದೇವರು ಇನ್ನು ನಿನ್ನ ಭೂಮಿಯ ಋಣ ತೀರಿತು ಬಾ ನನ್ನೊಡನೆ ಎಂದು ಕರೆದ. ನಾನು ಹೇಳಿದೆ ನನ್ನ ಕೆಲವೊಂದು ಹಸ್ತಪ್ರತಿಗಳು ಪ್ರಕಟಣೆಯ ಹಂತದಲ್ಲಿವೆ ಏಕಾಏಕಿ ಅದೆಲ್ಲವನ್ನು ಅರ್ಧಕ್ಕೆ ಬಿಟ್ಟು ಬಂದರೆ ಪ್ರಕಾಶಕರಿಗೆ ತೊಂದರೆಯಾಗುತ್ತದೆ. ದಯವಿಟ್ಟು ನನಗೆ ಇನ್ನೊಂದಿಷ್ಟು ಸಮಯ ಕೊಡು. ದೇವರು ನನ್ನ ಮನವಿಯಿಂದ ಪ್ರಸನ್ನನಾಗಲಿಲ್ಲ. ಜೊತೆಗೆ ಬರುವಂತೆ ಖಡಾಖಂಡಿತವಾಗಿ ಹೇಳಿದ. ಕೊನೆಗೆ ಬೇರೆ ಉಪಾಯವಿಲ್ಲದೆ ಹೇಳಿದೆ ನಾನು ಇನ್ನು ಕೆಲವು ಜೋಕುಗಳ ಪುಸ್ತಕ ಬರೆಯಬೇಕಾಗಿದೆ. ದೇವರಿಗೆ ನನ್ನ ಮಾತುಗಳು ಅರ್ಥವಾಗಲಿಲ್ಲ. ಹಾಗೆಂದರೇನು? ಕೇಳಿದ. ಜೋಕುಗಳನ್ನು ಓದುವುದರಿಂದ ಜನರು ನಗುತ್ತಾರೆ ಇದರಿಂದ ಅವರ ಮನಸ್ಸು ಆಹ್ಲಾದಗೊಳ್ಳುತ್ತದೆ. ದೇವರಿಗೆ ನನ್ನ ಮಾತು ಒಪ್ಪಿಗೆಯಾಯಿತು. ಹೌದು ನಾನು ಸಹ ಜನರು ಆನಂದದಿಂದ ಇರಲೆಂದು ಬಯಸುತ್ತೆನೆ. ಜನರನ್ನು ಸಂತೋಷಗೊಳಿಸುವ ಕೆಲಸ ನೀನು ಮಾಡುವುದಾದರೆ   ಇನ್ನು ಹಲವು ವರ್ಷ ಭೂಮಿಯ ಮೇಲೆ ಇರು ಹೀಗೆ ಹೇಳಿದವನೇ ಅದೃಶ್ಯನಾದ'. ನಿಜಕ್ಕೂ ಖುಷ್ವಂತ್ ಸಿಂಗರ ಈ ಮಾತು ಕಲ್ಪಿತವಾದರೂ  ಅವರ ಜೋಕುಗಳು ಅಸಂಖ್ಯಾತ ಜನರನ್ನು ತಲುಪಿವೆ. ಅಕ್ಷರಸ್ಥರಿಂದ ಅನಕ್ಷರಸ್ಥರವರೆಗೂ, ಮಕ್ಕಳಿಂದ ವೃದ್ಧರವರೆಗೂ, ಪುರುಷ ಮಹಿಳೆ ಎನ್ನುವ ತಾರತಮ್ಯವಿಲ್ಲದೆ ಹಲವು ದಶಕಗಳ ಕಾಲ ಎಲ್ಲರನ್ನೂ ನಕ್ಕು ನಲಿಸಿದ ಈ ಮೋಡಿಗಾರನ ಪೆನ್ನಿನಿಂದ ಹೊರಬಂದ ಜೋಕುಗಳ ಸಂಖ್ಯೆ ಅಗಣಿತ.

     ಅಂಥದ್ದೇ ಅವರ ಕೆಲವೊಂದು ಜೋಕುಗಳು ಇಂಗ್ಲಿಷಿನಿಂದ ಕನ್ನಡಕ್ಕೆ ಖುಷ್ವಂತಜ್ಜನ ನೆನಪುಗಳೊಂದಿಗೆ..........

                ಒಂದು ದಿನ ಸಂತಾ ಪುಣೆಯಿಂದ ಚಂಡೀಘರ್ ಗೆ ವಿಮಾನದಲ್ಲಿ ಪಯಣಿಸುತ್ತಿದ್ದ. ತನಗೆ ಕಾಯ್ದಿರಿಸಲಾಗಿದ್ದ ಮಧ್ಯದ ಸೀಟನ್ನು ಬಿಟ್ಟು ಕಿಟಕಿ  ಹತ್ತಿರದ ಸೀಟಿನಲ್ಲಿ ಹೋಗಿ ಕುಳಿತ. ಸ್ವಲ್ಪ ಸಮಯದ ನಂತರ ಅಲ್ಲಿಗೆ ಬಂದ ವಯಸ್ಸಾದ ಮಹಿಳೆ ಸಂತಾ ಕುಳಿತ ಸೀಟು ತಾನು ಕಾಯ್ದಿರಿಸಿದ್ದೆಂದು ಅಲ್ಲಿಂದ ಏಳುವಂತೆ ಸೂಚಿಸಿದಳು. 'ಕಿಟಕಿ ಹತ್ತಿರ ಕುಳಿತು ಹೊರಗಿನ ದೃಶ್ಯವನ್ನು ವೀಕ್ಷಿಸುತ್ತಿದ್ದೇನೆ' ಎಂದು ಕಾರಣ ನೀಡಿದ ಸಂತಾ ಅಲ್ಲಿಂದ ಏಳಲು ಒಪ್ಪಲಿಲ್ಲ. ಬೇರೆ ದಾರಿಕಾಣದೆ ಮಹಿಳೆ ಅಲ್ಲಿಯೇ ಇದ್ದ ವಿಮಾನ ಪರಿಚಾರಕಿಗೆ  ಈ ವಿಷಯ ತಿಳಿಸಿ ಸಂತಾನನ್ನು ಅಲ್ಲಿಂದ ಎಬ್ಬಿಸುವಂತೆ ಹೇಳಿದಳು. ವಿಮಾನ ಪರಿಚಾರಕಿ  ಎಷ್ಟೇ ಮನವಿ ಮಾಡಿಕೊಂಡರು ಸಂತಾ ಅ ಜಾಗದಿಂದ ಕದಲಲಿಲ್ಲ. ಪರಿಚಾರಕಿ  ಸಹ ಪೈಲೆಟ್ ಗೆ ಈ ವಿಷಯ ತಿಳಿಸಿ ಸಂತಾನನ್ನು ಅಲ್ಲಿಂದ ಎಬ್ಬಿಸಿ ವಯಸ್ಸಾದ ಮಹಿಳೆಗೆ ಆ ಸೀಟನ್ನು ಒದಗಿಸುವಂತೆ ಸೂಚಿಸಿದಳು. ಸಹ ಪೈಲೆಟ್ ಮಾತಿಗೂ ಸಂತಾ ಅಲ್ಲಿಂದ ಸರಿದು ತನಗಾಗಿ ಕಾಯ್ದಿರಿಸಿದ್ದ ಸೀಟಿನಲ್ಲಿ ಕೂಡಲು ನಿರಾಕರಿಸಿದ. ಕೊನೆಗೆ ವಿಮಾನದ ಕ್ಯಾಪ್ಟನ್ ಗೆ  ದೂರು ಕೊಡಲಾಯಿತು. ಸಂತಾ ಕುಳಿತ ಜಾಗಕ್ಕೆ ಬಂದ ಕ್ಯಾಪ್ಟನ್ ಯಾರಿಗೂ ಕೇಳಿಸದಂತೆ ಸಂತಾನ ಕಿವಿಯಲ್ಲಿ ಏನನ್ನೋ ಹೇಳಿದ. ತಕ್ಷಣವೇ ಸಂತಾ ಕಿಟಕಿ ಹತ್ತಿರದ ಸೀಟನ್ನು ಆ ವಯಸ್ಸಾದ ಮಹಿಳೆಗೆ ಬಿಟ್ಟು ತನ್ನ ಮಧ್ಯದ ಸೀಟಿನಲ್ಲಿ ಬಂದು ಕುಳಿತ. ವಿಮಾನ ಪರಿಚಾರಕಿ ಮತ್ತು ಸಹ ಪೈಲೆಟ್ ಗೆ ಆಶ್ಚರ್ಯವಾಯಿತು. ತಾವು ಪರಿಪರಿಯಾಗಿ ಬೇಡಿಕೊಂಡರೂ ಅಲ್ಲಿಂದ ಕದಲದ ಸಂತಾ ನೀವು  ಕಿವಿಯಲ್ಲಿ ಏನನ್ನೋ ಉಸುರಿದ ಮಾತ್ರಕ್ಕೆ ಹೇಗೆ ಸೀಟು ಬಿಟ್ಟುಕೊಟ್ಟ ಎಂದು ಕ್ಯಾಪ್ಟನ್ ನನ್ನು ಪ್ರಶ್ನಿಸಿದರು. ಕ್ಯಾಪ್ಟನ್ ಪ್ರತಿಕ್ರಿಯಿಸಿದ 'ನಾನು ಸಂತಾಗೆ ಹೇಳಿದ್ದು ಇಷ್ಟೇ ವಿಮಾನದಲ್ಲಿನ ಮಧ್ಯದ ಸೀಟುಗಳು ಮಾತ್ರ ಚಂಡೀಘರ್ ಗೆ ಹೋಗುತ್ತವೆ ಉಳಿದ ಸೀಟುಗಳು ಹೋಗುತ್ತಿರುವುದು ಜಲಂಧರ್ ಗೆ'
---೦೦೦---

                      ಭಾರತದಿಂದ ಸಂತಾ, ಅಮೇರಿಕಾದಿಂದ ಮಾರ್ಕ್ ಮತ್ತು ಬ್ರಿಟನ್ ದಿಂದ ಟಾಮ್ ಗೂಢಚಾರ ಸಂಸ್ಥೆಯಲ್ಲಿ ಖಾಲಿಯಿದ್ದ ಪತ್ತೇದಾರ ಕೆಲಸಕ್ಕೆ ಅರ್ಜಿ ಹಾಕಿದ್ದರು. ನಿಗದಿತ ದಿನದಂದು ಈ ಮೂವರನ್ನು ಸಂದರ್ಶನಕ್ಕೆ ಕರೆಯಲಾಯಿತು. ಮೊದಲು ಮಾರ್ಕ್ ನನ್ನು ಸಂದರ್ಶನ ಕೊಠಡಿಗೆ ಕರೆಯಲಾಯಿತು. ಅಲ್ಲಿದ್ದ ಗೂಢಚಾರ ಸಂಸ್ಥೆಯ ಮುಖ್ಯಸ್ಥ 'ಏಸು ಕ್ರಿಸ್ತನನ್ನು ಕೊಲೆ ಮಾಡಿದವರು ಯಾರು?' ಎಂದು ಪ್ರಶ್ನಿಸಿದ. ಮಾರ್ಕ್ ಯಾವ ಅನುಮಾನ ಇಲ್ಲದಂತೆ ತಟ್ಟನೆ ಉತ್ತರಿಸಿದ 'ಏಸುವನ್ನು ಕೊಂದವರು ಬ್ರಿಟಿಷರು'. ಮಾರ್ಕ್ ನಂತರ ಟಾಮ್ ನನ್ನು ಕರೆದು ಅದೇ ಪ್ರಶ್ನೆಯನ್ನು ಕೇಳಲಾಯಿತು. ಟಾಮ್ ಏಸುವನ್ನು ಕೊಂದವರು ಅಮೇರಿಕನ್ನರು ಎಂದು ಉತ್ತರಿಸಿದ. ಕೊನೆಗೆ ಸಂತಾನ ಸರದಿ ಬಂದಿತು. ಮುಖ್ಯಸ್ಥ ಮತ್ತದೇ ಪ್ರಶ್ನೆಯನ್ನು ಪುನರಾವರ್ತಿಸಿದ. ಪ್ರಶ್ನೆ ಕೇಳಿದ ಸಂತಾ ಅರೆಘಳಿಗೆ ಯೋಚನಾಮಗ್ನನಾದ. ಈ ಪ್ರಶ್ನೆಗೆ ಉತ್ತರಿಸಲು ಒಂದಿಷ್ಟು ಕಾಲಾವಕಾಶ ಬೇಡಿದ. ಸಂತಾನ ಮನವಿಗೆ ಸಮ್ಮತಿಸಿದ ಸಂಸ್ಥೆಯ ಮುಖ್ಯಸ್ಥ ನಾಳೆ ಬಂದು ಉತ್ತರ ಕೊಡಲು ಸೂಚಿಸಿದ. ಸಂದರ್ಶನದಿಂದ ಮನೆಗೆ ಮರಳಿದ ಸಂತಾನನ್ನು ಆತನ ಹೆಂಡತಿ ಕೆಲಸದ ವಿಷಯವಾಗಿ ಕೇಳಿದಳು. ಸಂತಾ ಆ ಕೆಲಸ ತನಗೇ ಸಿಕ್ಕಿದೆ ಎಂದು  ನುಡಿದ. ಸಂತಾನ ಮಾತುಗಳಿಂದ ಅಚ್ಚರಿಗೊಂಡ ಪತ್ನಿ ಅದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದಳು. 'ಈಗಾಗಲೇ ನನ್ನನ್ನು ಏಸು ಕ್ರಿಸ್ತನ ಕೊಲೆಗಾರನನ್ನು ಪತ್ತೆ ಹಚ್ಚಲು ನಿಯೋಜಿಸಲಾಗಿದೆ. ಅಂದ ಮೇಲೆ ಕೆಲಸ ನನಗೇ ಸಿಕ್ಕಂತಲ್ಲವೇ' ಸಂತಾ ಉತ್ತರಿಸಿದ.
---೦೦೦---

         ಬಂತಾ ಸಿಂಗ್ ಕಂಪ್ಯೂಟರ್ ಖರೀದಿಸಿದ. ಮನೆಗೆ ತಂದು ಕಂಪ್ಯೂಟರ್ ಎದುರು ಕುಳಿತವನಿಗೆ ಅನೇಕ ಪ್ರಶ್ನೆಗಳು ಕಾಡಲಾರಂಭಿಸಿದವು. ತನ್ನೆಲ್ಲ ಪ್ರಶ್ನೆಗಳಿಗೆ ಉತ್ತರ ತಿಳಿಯಲು ನೇರವಾಗಿ ಬಿಲ್ ಗೇಟ್ ಗೆ ಪತ್ರ ಬರೆಯಲು ನಿರ್ಧಿರಿಸಿದ.

ಡಿಯರ್ ಬಿಲ್ ಗೇಟ್,

ನಿನ್ನೆ ನಾನೊಂದು ಕಂಪ್ಯೂಟರ್ ಖರೀದಿಸಿದೆ. ಕಂಪ್ಯೂಟರ್ ಎದುರು ಕುಳಿತಾಗ ಅನೇಕ ಸಮಸ್ಯೆಗಳು ಎದುರಾದವು. ಆ ಎಲ್ಲ ಸಮಸ್ಯೆಗಳನ್ನು ನಾನು ನಿಮ್ಮ ಗಮನಕ್ಕೆ ತರಲು ಬಯಸುತ್ತೇನೆ ಮತ್ತು ಅವುಗಳಿಗೆ ನಿಮ್ಮಿಂದ ಪರಿಹಾರಗಳನ್ನು ನಿರೀಕ್ಷಿಸುತ್ತೇನೆ.

೧. ಕಂಪ್ಯೂಟರ್ ನಲ್ಲಿ shut down ಎಂದಿದ್ದು ಅದಕ್ಕೆ ಮುಚ್ಚಲು ನೀವು ಬಾಗಿಲುಗಳನ್ನೇ ಮಾಡಿಲ್ಲ.

೨. ಇಲ್ಲಿ START ಎಂದು ಮಾತ್ರವಿದೆ ಆದರೆ STOP ಎಂದಿಲ್ಲ. ದಯವಿಟ್ಟು ಈ ಕುರಿತು ಯೋಚಿಸಿ.

೩. ಮೇನುವಿನಲ್ಲಿ RUN ಎಂದಿದೆ. ನನ್ನೊಬ್ಬ ಗೆಳೆಯ ಕಂಪ್ಯೂಟರ್ ನಲ್ಲಿ ಈ RUN ಶಬ್ದವನ್ನು ನೋಡಿ ಅಮೃತಸರದವರೆಗೂ ಓಡಿದ. ದಯವಿಟ್ಟು RUN ಬದಲು SIT ಎಂದು ಇರಲಿ.

೪. ನಿಮ್ಮ ಈ ಕಂಪ್ಯೂಟರ್ ನಲ್ಲಿ 'Re-cycle' ಎಂದಿದೆ ಅದರ ಬದಲು 'Re-scooter' ಎಂದಿದ್ದರೆ ಚೆನ್ನಾಗಿರುತ್ತಿತ್ತು. ಏಕೆಂದರೆ ನನ್ನ ಮನೆಯಲ್ಲಿ scooter ಇದೆ.

೫. ಕಂಪ್ಯೂಟರ್ ನಲ್ಲಿ 'Find' ಎನ್ನುವ ಪದವಿದೆ ಆದರೆ ಅದು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಮೊನ್ನೆ ನನ್ನ ಹೆಂಡತಿ ಮನೆಯ ಬೀಗದ ಕೈ ಕಳೆದುಕೊಂಡಾಗ ನಾವು ಈ Find ನಿಂದ ಎಷ್ಟು ಹುಡುಕಿದರೂ ಸಿಗಲಿಲ್ಲ. ದಯವಿಟ್ಟು ಇದನ್ನು ತುರ್ತಾಗಿ ಪರಿಶೀಲಿಸಿ.

೬. ಈ ಕಂಪ್ಯೂಟರ್ ಜೊತೆಗಿರುವ mouse ನ್ನು ಬೆಕ್ಕಿನಿಂದ ಕಾಯಲು ನಾನು ರಾತ್ರಿಯೆಲ್ಲ ನಿದ್ದೆ ಇಲ್ಲದೆ ಕಳೆಯಬೇಕಾಗಿದೆ. ಆದ್ದರಿಂದ ಬೆಕ್ಕನ್ನು ಹೊಡೆದೊಡಿಸಲು ಕಂಪ್ಯೂಟರ್ ಜೊತೆಗೆ ನೀವು ನಾಯಿಯೊಂದನ್ನು ಕೊಟ್ಟರೆ ಒಳ್ಳೆಯದು.

೭. ನನ್ನ ಮಗ Microsoft word ಕಲಿತಿರುವನು ಈಗ ಅವನು Microsoft sentence ಕಲಿಯಲು ಬಯಸುತ್ತಿರುವನು. Microsoft sentence ನ್ನು ನೀವು ಯಾವಾಗ ಕೊಡುತ್ತಿರಿ.

ಧನ್ಯವಾದಗಳು

ಬಂತಾ ಸಿಂಗ್

---೦೦೦---

        ಸಂತಾ ಸತ್ತು ಸ್ವರ್ಗದತ್ತ ಪ್ರಯಾಣ ಬೆಳೆಸಿದ. ಸ್ವರ್ಗದ ಬಾಗಿಲಲ್ಲೇ ಅವನನ್ನು ಒಳಗೆ ಪ್ರವೇಶಿಸದಂತೆ ತಡೆಯಲಾಯಿತು. ಬಾಗಿಲ ಬಳಿಯಲ್ಲೇ ಕುಳಿತಿದ್ದ ಚಿತ್ರಗುಪ್ತ ಹೇಳಿದ 'ಈಗ ಸ್ವರ್ಗ ಪ್ರವೇಶಕ್ಕೆ ಕೆಲವೊಂದು ನಿಯಮಗಳನ್ನು ಮಾಡಲಾಗಿದೆ. ನಾನು ನಿನಗೆ ಎರಡು ಪ್ರಶ್ನೆಗಳನ್ನು ಕೇಳುತ್ತೇನೆ ಅವುಗಳಿಗೆ ಸರಿಯಾದ ಉತ್ತರ ನೀಡಿ ನೀನು ಸ್ವರ್ಗವನ್ನು ಪ್ರವೇಶಿಸಬಹುದು'. 

ಪ್ರಶ್ನೆ ಒಂದು:- 'ವಾರದಲ್ಲಿ T ಅಕ್ಷರದಿಂದ ಆರಂಭವಾಗುವ ದಿನಗಳಾವವು?'

ಪ್ರಶ್ನೆ ಎರಡು:- 'ಒಂದು ವರ್ಷದಲ್ಲಿ ಎಷ್ಟು ಸೆಕೆಂಡ್ ಗಳು ಇರುತ್ತವೆ?'

          ಸಂತಾ ಒಂದು ಕ್ಷಣ ಯೋಚಿಸಿ ಉತ್ತರಿಸಿದ 'ವಾರದಲ್ಲಿ T ಅಕ್ಷರದಿಂದ ಆರಂಭವಾಗುವ ದಿನಗಳು ಎರಡು ಅವು Today ಮತ್ತು Tomorrow. ಇನ್ನು ಎರಡನೇ ಪ್ರಶ್ನೆಗೆ ಉತ್ತರ ವರ್ಷದಲ್ಲಿ ೧೨ ಸೆಕೆಂಡ್ ಗಳಿರುತ್ತವೆ' 

ಚಿತ್ರಗುಪ್ತ: 'ಮೊದಲನೇ ಪ್ರಶ್ನೆಗೆ  ಉತ್ತರ ನಾನು ನಿರೀಕ್ಷೆ ಮಾಡಿದ್ದು ಅಲ್ಲವಾದರೂ ಎರಡು ಎಂದಿದ್ದರಿಂದ ಒಪ್ಪಿಕೊಳ್ಳುತ್ತೇನೆ ಆದರೆ ವರ್ಷದಲ್ಲಿ ೧೨ ಸೆಕೆಂಡ್ ಗಳು ಎನ್ನುವ ಉತ್ತರ ಅದು ಹೇಗೆ ಸರಿ?'

ಸಂತಾ: 'ಜನೆವರಿ ಸೆಕೆಂಡ್, ಫೆಬ್ರುವರಿ ಸೆಕೆಂಡ್, ಮಾರ್ಚ್ ಸೆಕೆಂಡ್, ಎಪ್ರಿಲ್ ಸೆಕೆಂಡ್ .......... '

ಚಿತ್ರಗುಪ್ತ  ಮಧ್ಯದಲ್ಲೆ ತಡೆದು ಸಂತಾ ಸ್ವರ್ಗ ಪ್ರವೇಶಿಸಲು ದಾರಿಮಾಡಿ ಕೊಟ್ಟ. 

---೦೦೦---

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 



Monday, March 3, 2014

ಶಿಕ್ಷಣದ ಸಮಸ್ಯೆಗಳೊಂದಿಗೆ ಒಂದು ಅನುಸಂಧಾನ

     


         ಶಿಕ್ಷಣ ಕ್ಷೇತ್ರ ವ್ಯಾಪಕವಾಗಿ ಚರ್ಚೆಗೆ ಮತ್ತು ಪ್ರಯೋಗಕ್ಕೆ  ಒಳಪಡುವ ಕ್ಷೇತ್ರ. ಪತ್ರಿಕೆ, ಪುಸ್ತಕ, ಅಲ್ಲಲ್ಲಿ ನಡೆಸುವ ಸೆಮಿನಾರ್ ಮತ್ತು ಸಮ್ಮೇಳನಗಳ ಮೂಲಕ ಶಿಕ್ಷಣ ಚರ್ಚೆಗೆ ಗ್ರಾಸವಾಗುತ್ತಿದೆ. ಜೊತೆಗೆ ಕಲಿಯುವ ಮಕ್ಕಳಿಗೆ ಶಿಕ್ಷಣ ಹೊರೆಯಾಗದಿರಲಿ ಎನ್ನುವ ಪ್ರಯೋಗಗಳು ಶಿಕ್ಷಣ ಕ್ಷೇತ್ರದಲ್ಲಿ ನಿರಂತರವಾಗಿ  ನಡೆದುಕೊಂಡು ಬರುತ್ತಿವೆ. ಪ್ರತಿಯೊಂದು ಚರ್ಚೆ, ಸಂವಾದ ಮತ್ತು ಪ್ರಯೋಗಗಳ  ಗುರಿಯೊಂದೆ ಅದು ಎಲ್ಲರಿಗೂ ಗುಣಾತ್ಮಕ ಶಿಕ್ಷಣ ದೊರೆಯಬೇಕೆನ್ನುವುದಾಗಿದೆ. ಭಾರತದ ಸ್ವಾತಂತ್ರ್ಯಾ ನಂತರದ ದಿನಗಳಿಂದಲೂ ಗುಣಾತ್ಮಕ ಶಿಕ್ಷಣಕ್ಕಾಗಿ ಮತ್ತು ಸಮಾಜದ ಯಾವ ಮಗುವೂ ಶಿಕ್ಷಣದಿಂದ ವಂಚಿತನಾಗಬಾರದೆನ್ನುವ ಕಾರಣಕ್ಕಾಗಿ ಅನೇಕ ಪ್ರಯತ್ನಗಳನ್ನು ಮಾಡಲಾಗಿದೆ. ಅದು ಕಡ್ಡಾಯ ಶಿಕ್ಷಣವಾಗಿರಬಹುದು ಇಲ್ಲವೇ ಶಿಕ್ಷಣದ ಹಕ್ಕು ಕಾಯ್ದೆಯಾಗಿರಬಹುದು. ಹೀಗೆ ಶಿಕ್ಷಣವನ್ನು ಗುಣಾತ್ಮಕವಾಗಿಸುವ ಪ್ರಯತ್ನವನ್ನು ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದವರೆಗೆ ಕಾಲಕಾಲಕ್ಕೆ ಬಂದ ಸರ್ಕಾರಗಳು ಮಾಡಿರುವುದಕ್ಕೆ ಅನೇಕ ಉದಾಹರಣೆಗಳಿವೆ. ಹೀಗಿದ್ದೂ ಶಿಕ್ಷಣ ಕ್ಷೇತ್ರ ಸಮಸ್ಯೆಗಳಿಂದ ಮುಕ್ತವಾಗಿಲ್ಲ. ಅಂಥ ಕೆಲವು ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನವೇ ಈ ಲೇಖನದ ಉದ್ದೇಶ.

ಒತ್ತಡದ ಪರಿಸರದಲ್ಲಿ ಶಿಕ್ಷಕರು 


           ಸಾಮಾನ್ಯವಾಗಿ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಕೆಲಸ ಮಾಡುತ್ತಿರುವ ಶಿಕ್ಷಕರಿಗೆ ಈ ಮಾತು ಅನ್ವಯವಾಗುತ್ತದೆ.
ನಮಗೆಲ್ಲ ನೆನಪಿರುವಂತೆ ಕೆಲವು ದಿನಗಳ ಹಿಂದೆ ಬಿಹಾರ ರಾಜ್ಯದ ಗ್ರಾಮವೊಂದರ ಶಾಲೆಯಲ್ಲಿ ಮದ್ಯಾಹ್ನದ ಬಿಸಿಯೂಟವನ್ನು ಸೇವಿಸಿದ ಮಕ್ಕಳಲ್ಲಿ ಕೆಲವು ಮಕ್ಕಳು ಅಸುನೀಗಿದವು. ನಿಜಕ್ಕೂ ಅದೊಂದು ಬಹುದೊಡ್ಡ ದುರಂತ. ಅಂಥದ್ದೊಂದು ದುರಂತ ಸಂಭವಿಸಿದಾಗ ಅಲ್ಲಿ ಜನರಾಗಲಿ ಇಲ್ಲವೇ ಮಾಧ್ಯಮದವರಾಗಲಿ ಆರೋಪಿಗಳೆಂದು ಗುರುತಿಸಿದ್ದು ಆ ಶಾಲೆಯಲ್ಲಿ ಕೆಲಸ ಮಾಡುತ್ತಿರುವ  ಶಿಕ್ಷಕರನ್ನು. ಇನ್ನೊಂದು ಘಟನೆ ಹೀಗಿದೆ ಪತ್ರಿಕೆಯೊಂದು ಮಕ್ಕಳು ಶಾಲೆಯಲ್ಲಿ ಶೌಚಾಲಯವನ್ನು ಸ್ವಚ್ಛಗೊಳಿಸುತ್ತಿದ್ದ ಚಿತ್ರವನ್ನು ಪ್ರಕಟಿಸಿ ಆ ಕೃತ್ಯಕ್ಕೆ  ಶಿಕ್ಷಕರನ್ನೇ ಹೊಣೆಗಾರರೆಂಬಂತೆ ವರದಿ ಮಾಡಿತ್ತು. ಈಗ ಕೆಲವು ದಿನಗಳಿಂದ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಹಾಲು ಕೊಡುವ ಮತ್ತು ಪೌಷ್ಥಿಕ ಮಾತ್ರೆಗಳನ್ನು ವಿತರಿಸುವ ಯೋಜನೆಗೆ ಚಾಲನೆ ನೀಡಲಾಗಿದೆ. ಈ ಕಾರ್ಯಗಳ ಜವಾಬ್ದಾರಿಯನ್ನೂ ಆಯಾ ಶಾಲೆಗಳಲ್ಲಿ ಕೆಲಸ ಮಾಡುವ ಶಿಕ್ಷಕರ ಹೆಗಲಿಗೇರಿಸಲಾಗಿದೆ.  ಹಾಗಾದರೆ ಶಾಲೆಯಲ್ಲಿ ಶಿಕ್ಷಕರು ಏನು ಕೆಲಸ ಮಾಡಬೇಕು? ಎನ್ನುವ ಪ್ರಶ್ನೆ ಎದುರಾಗುತ್ತದೆ. ಮಕ್ಕಳ ಮದ್ಯಾಹ್ನದ ಬಿಸಿಯೂಟದ ತಯ್ಯಾರಿ, ಹಾಲು ಕಾಯಿಸುವುದು, ಶೌಚಾಲಯ ಸ್ವಚ್ಛಗೊಳಿಸುವುದು, ಪೌಷ್ಥಿಕ ಮಾತ್ರೆಗಳನ್ನು ನುಂಗಿಸುವುದು ಈ ಕೆಲಸಗಳಲ್ಲಿ ಶಿಕ್ಷಕರು ತಮ್ಮನ್ನು ತೊಡಗಿಸಿಕೊಳ್ಳುವ ಅನಿವಾರ್ಯತೆ ಎದುರಾಗಿದೆ. ಈ ಕೆಲಸಗಳೊಂದಿಗೆ ಜನಗಣತಿ, ಪಶು ಪಕ್ಷಿಗಳ ಗಣತಿ, ಚುನಾವಣಾ ಕೆಲಸ ಈ ಎಲ್ಲ ಕೆಲಸ ಕಾರ್ಯಗಳಿಗೂ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರೇ ಬೇಕು. ಈ ನಡುವೆ ಮಧ್ಯದಲ್ಲೇ ಶಾಲೆ ಬಿಟ್ಟ ಮಕ್ಕಳ ಅಂಕಿ ಸಂಖ್ಯೆಯನ್ನು ಒದಗಿಸುವಂತೆ ಸರ್ಕಾರ ಪ್ರಾಥಮಿಕ ಶಾಲಾ ಶಿಕ್ಷಕರ ಮೇಲೆ ಒತ್ತಡ ತಂದಿದೆ.  ಜೊತೆಗೆ ಪ್ರತಿಯೊಂದು ಸರ್ಕಾರಿ ಪ್ರಾಥಮಿಕ ಶಾಲೆಯ ಆಡಳಿತಕ್ಕೆ ಸಂಬಂಧಿಸಿದಂತೆ ಶಾಲಾ ಸುಧಾರಣಾ ಸಮಿತಿ ಎನ್ನುವ ಅವೈಜ್ಞಾನಿಕ ಸಮಿತಿಯನ್ನು ಸರ್ಕಾರ ರಚಿಸಿದೆ. ಆ ಸಮಿತಿಯವರು ಶಿಕ್ಷಕರಿಗೆ ನೀಡುತ್ತಿರುವ ಕಿರುಕುಳದ ಕುರಿತು ಅನೇಕ ಸಂದರ್ಭಗಳಲ್ಲಿ ಪತ್ರಿಕೆಗಳು ವರದಿ ಪ್ರಕಟಿಸಿವೆ. ಇಂಥ ಒತ್ತಡದ ವಾತಾವರಣದಲ್ಲಿ ಶಿಕ್ಷಕರು ಬೋಧನಾ ಕೆಲಸದಲ್ಲಿ ತಮ್ಮನ್ನು ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳುವುದಾದರೂ ಹೇಗೆ ಸಾಧ್ಯ. ಇದರ ನೇರ ಪರಿಣಾಮ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳ ಕಲಿಕೆಯ ಮೇಲಾಗುತ್ತಿದೆ. ಸರ್ಕಾರಿ ಶಾಲೆಗಳಲ್ಲಿನ ಗುಣಾತ್ಮಕ ಶಿಕ್ಷಣದ ಕೊರತೆಗೆ ಇದು ನೇರವಾಗಿ ಕಾರಣವಾಗುತ್ತಿದೆ.

ಉನ್ನತ ಶಿಕ್ಷಣದಲ್ಲಿ ಸಂಶೋಧನೆ 


          ಅಧ್ಯಯನವೇ ಅಧ್ಯಾಪನದ ಜೀವಾಳ. ನಿರಂತರ ಅಧ್ಯಯನದಲ್ಲಿ ತನ್ನನ್ನು ತೊಡಗಿಸಿಕೊಂಡ ಅಧ್ಯಾಪಕ ಮಾತ್ರ ಒಬ್ಬ ಶ್ರೇಷ್ಠ ಅಧ್ಯಾಪಕನಾಗಲು ಸಾಧ್ಯ. ಇಲ್ಲಿ ನಾನು ಹೇಳುತ್ತಿರುವುದು ಉನ್ನತ ಶಿಕ್ಷಣದಲ್ಲಿ ಪಾಠ ಮಾಡುತ್ತಿರುವ ಅಧ್ಯಾಪಕರ ಕುರಿತಾಗಿರುವುದರಿಂದ ಅವರಿಗೆ ಬಿಸಿಯೂಟ, ಬಿಸಿ ಹಾಲು ತಯ್ಯಾರಿಸುವ ಇಲ್ಲವೇ ಶೌಚಾಲಯ ಸ್ವಚ್ಛಗೊಳಿಸುವ ಸಮಸ್ಯೆ ಇಲ್ಲ ಎನ್ನುವ ನಂಬಿಕೆ ನನ್ನದು. ವಿಷಯಾಂತರಕ್ಕೆ ಕ್ಷಮಿಸಿ. ಉನ್ನತ ಶಿಕ್ಷಣದಲ್ಲಿ ಪಾಠ ಮಾಡುತ್ತಿರುವ ಶಿಕ್ಷಕನ ಅಧ್ಯಯನದ ವ್ಯಾಪ್ತಿ ಕೇವಲ ತಾನು ಬೋಧಿಸುತ್ತಿರುವ  ವಿಷಯಕ್ಕೆ ಮಾತ್ರ ಸೀಮಿತವಾಗಿರದೆ ಪಠ್ಯಕ್ರಮದಾಚೆಯೂ ಅದು ವಿಸ್ತರಿಸಬೇಕು. ಹೀಗಾದಾಗ ಮಾತ್ರ ವಿದ್ಯಾರ್ಥಿಗಣವನ್ನು ಸಮಾಜದ ಸಮಸ್ಯೆಗಳಿಗೆ ಮುಖಾಮುಖಿಯಾಗಿ ನಿಲ್ಲಿಸಲು ಸಾಧ್ಯವಾಗುವುದು. ಇಲ್ಲೊಂದು ಕ್ಲಾಸಿಕ್ ಉದಾಹರಣೆ ಕೊಡಬಯುಸುತ್ತೇನೆ ನಾನು ಈ ಲೇಖನ ಬರೆಯುವ ಪೂರ್ವದಲ್ಲಿ ಭೈರಪ್ಪನವರ ಆತ್ಮಕಥೆ  ' ಭಿತ್ತಿ'   ಯನ್ನು ಓದಿದೆ. ಅವರ ವೃತ್ತಿ ಬದುಕಿನಲ್ಲಿ ಸನ್ನಿವೇಶವೊಂದು ಎದುರಾಗುತ್ತದೆ ಅದು ಭೈರಪ್ಪನವರ  ಬಡ್ತಿಗೆ ಸಂಬಂಧಿಸಿದ ಸಂಗತಿ. ರೀಡರ್ ಹುದ್ದೆಯಲ್ಲಿದ್ದ ಭೈರಪ್ಪನವರಿಗೆ ಪ್ರಾಧ್ಯಾಪಕ ಹುದ್ದೆಗೆ ಬಡ್ತಿ ಹೊಂದುವ ಅವಕಾಶ ಹುಡುಕಿಕೊಂಡು ಬರುತ್ತದೆ. ಆದರೆ ಅವರು ಆ ಅವಕಾಶವನ್ನು ನಿರಾಕರಿಸುತ್ತಾರೆ. ಹೀಗೆ ನಿರಾಕರಿಸಲು ಅವರು ಕೊಡುವ ಕಾರಣ ಪ್ರಾಧ್ಯಾಪಕ ಹುದ್ದೆಯನ್ನು ಒಪ್ಪಿಕೊಂಡಲ್ಲಿ ವಿಭಾಗದ ಮುಖ್ಯಸ್ಥ ನಾಗಬೇಕಾಗುತ್ತದೆ. ಅದು ಆಡಳಿತಾತ್ಮಕ ಹುದ್ದೆಯಾಗುವುದರಿಂದ ತಮ್ಮ ಅಧ್ಯಯನ ಮತ್ತು ಬರವಣಿಗೆಗೆ ಆಗುವ ತೊಂದರೆಯೇ ಹೆಚ್ಚೆಂದು ಅವರು ಬಡ್ತಿಯನ್ನೇ ನಿರಾಕರಿಸುತ್ತಾರೆ. ಇದು ಅಧ್ಯಯನ ಮತ್ತು ಬರವಣಿಗೆಯ ಬಗ್ಗೆ ಅವರಿಗಿದ್ದ ನಿಷ್ಥೆ ಮತ್ತು ಕಾಳಜಿಯನ್ನು ತೋರಿಸುತ್ತದೆ. ಇಂಥದ್ದೊಂದು ಮನೋಭಾವ ಇವತ್ತಿನ ಅಧ್ಯಾಪಕರಲ್ಲಿ ಇರಲು ಸಾಧ್ಯವೇ?

       ಇವತ್ತು  ವಿಶ್ವವಿದ್ಯಾಲಯಗಳಲ್ಲಿನ ಮತ್ತು ಕಾಲೇಜುಗಳಲ್ಲಿನ ಅದೆಷ್ಟೋ  ಅದ್ಯಾಪಕರುಗಳು ಶಿಫಾರಸುಗಳ ಮೂಲಕಆಡಳಿತಾತ್ಮಕ  ಹುದ್ದೆಗಳನ್ನು ಪಡೆಯಲು ಪ್ರಯತ್ನಿಸುತ್ತಿರುವರು. ಇವತ್ತಿಗೂ ಎಷ್ಟೋ ವರ್ಷಗಳ ಹಿಂದೆ ಮಾಡಿಟ್ಟ ಟಿಪ್ಪಣಿಯನ್ನೇ ಹಿಡಿದುಕೊಂಡು ಪಾಠ ಮಾಡುವ ಅಧ್ಯಾಪಕರನ್ನು ನಾವು ವಿಶ್ವವಿದ್ಯಾಲಯಗಳಲ್ಲಿ   ಕಾಣುತ್ತಿದ್ದೇವೆ. ಸಿಂಡಿಕೇಟ್ ಸೆನೆಟ್ ಗಳ ಚುನಾವಣೆ ಅಕಾಡೆಮಿಗಳ ಅಧಿಕಾರ ಈ ಚಟುವಟಿಕೆಗಳಲ್ಲೇ ಅಧ್ಯಾಪಕರ ಹೆಚ್ಚಿನ ಸಮಯ ವಿನಿಯೋಗವಾಗುತ್ತಿದೆ. ವಿಶ್ವವಿದ್ಯಾಲಯ ಧನಸಹಾಯ ಆಯೋಗವು ಕಠಿಣ ನಿಯಮಗಳನ್ನು    ಜಾರಿಗೆ  ತಂದಿರುವುದರಿಂದ ಬಡ್ತಿಗಾಗಿ ಅಧ್ಯಾಪಕರು ಸಂಶೋಧನಾ ಲೇಖನಗಳನ್ನು ಬರೆಯುತ್ತಿರುವರು. ನಿಗದಿಪಡಿಸಿದ ಸಂಖ್ಯೆಯಲ್ಲಿ ಲೇಖನಗಳನ್ನು ಬರೆದು ಬಡ್ತಿ ಹೊಂದಿದ ನಂತರ ಹೆಚ್ಚಿನ ಅಧ್ಯಾಪಕರ ಸಂಶೋಧನಾ  ಕೆಲಸ ಸ್ಥಗಿತಗೊಳ್ಳುತ್ತಿದೆ. ಅಧ್ಯಯನ, ಅಧ್ಯಾಪನ, ಬರವಣಿಗೆ, ಸಂಶೋಧನೆ ಇವುಗಳ ಮೂಲಕ ಗುರುತಿಸಿಕೊಳ್ಳುವುದಕ್ಕಿಂತ ಬೇರೆ ಅಧ್ಯಯನೇತರ ಚಟುವಟಿಕೆಗಳಿಂದ ಗುರುತಿಸಿಕೊಳ್ಳಲು ಅಧ್ಯಾಪಕರು ಬಯಸುತ್ತಿರುವುದು ಸಧ್ಯದ ಮಟ್ಟಿಗೆ ಉನ್ನತ ಶಿಕ್ಷಣದ ಬಹುದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.

            ಜೊತೆಗೆ ಅಧ್ಯಾಪಕರು ವಿದ್ಯಾರ್ಥಿಗಳಲ್ಲಿ ಪ್ರಶ್ನಿಸುವ ಮತ್ತು ಶೋಧಿಸುವ ಮನೋಭಾವವನ್ನೇ ಬೆಳೆಸುತ್ತಿಲ್ಲ. ಪ್ರಶ್ನಿಸುವಿಕೆ ಮತ್ತು ಸಂಘರ್ಷದಿಂದ ಮಾತ್ರ ಹೊಸದನ್ನು ಸೃಷ್ಟಿಸಲು ಸಾಧ್ಯ. ಸಂಘರ್ಷವೆಂದರೆ ಅದು ವೈಚಾರಿಕ ಘರ್ಷಣೆ. ಗುರು  ಶಿಷ್ಯರ ನಡುವೆ ಒಂದು     ವೈಚಾರಿಕ ಸಂಘರ್ಷಕ್ಕೆ ಅವಕಾಶ ಇಲ್ಲದೆ ಹೋದಲ್ಲಿ ವಿದ್ಯಾರ್ಥಿ ಗಣ ನಿಂತ ನೀರಾಗಿ ಕೊಳೆಯುವ ಅಪಾಯ ಎದುರಾಗಬಹುದು. ದಯವಿಟ್ಟು ಕೊಳೆಯುವಿಕೆಯನ್ನು ಮಾಗುವಿಕೆ ಎಂದು ತಪ್ಪಾಗಿ ಅರ್ಥೈಸುವುದು ಬೇಡ. ನಿಂತ ನೀರಿನ ಮನಸ್ಥಿತಿಗೆ ಒಂದು ಉದಾಹರಣೆ ಹೀಗಿದೆ ಸಮ್ಮೇಳನವೊಂದರಲ್ಲಿ ಭೇಟಿಯಾದ ಕನ್ನಡದಲ್ಲಿ ಸಂಶೋಧನೆ ಮಾಡುತ್ತಿರುವ ವಿದ್ಯಾರ್ಥಿಯನ್ನು ದೇವನೂರರ ಇತ್ತೀಚಿನ ಯಾವ ಪುಸ್ತಕವನ್ನು ಓದಿರುವಿರಿ ಎಂದು ಕೇಳಿದಾಗ ಅವನಿಗೆ 'ಎದೆಗೆ ಬಿದ್ದ ಅಕ್ಷರ' ಕುರಿತು ಗೊತ್ತೇ ಇರಲಿಲ್ಲ. ಇದು ಇವತ್ತು ಉನ್ನತ ಶಿಕ್ಷಣದಲ್ಲಿನ ಸಂಶೋಧನೆಯಲ್ಲಿ ನಾವು ಕಾಣುತ್ತಿರುವ ಬಹುದೊಡ್ಡ ಕೊರತೆ. ನಿಜಕ್ಕೂ ಚಿಂತಿಸುವ ಸಂಗತಿ ಇದು. ಏಕೆ ಹೀಗಾಗಿದೆ ಎಂದರೆ ಇದು ಆತನಲ್ಲಿರುವ ಪ್ರಶ್ನಿಸುವಿಕೆ ಮತ್ತು ಶೋಧಿಸುವಿಕೆಯ ಕೊರತೆಯನ್ನು ತೋರಿಸುತ್ತದೆ. ಪರಿಣಾಮವಾಗಿ ತಾನೂ ಬೆಳೆದು ವಿದ್ಯಾರ್ಥಿಗಳನ್ನೂ ಬೆಳೆಸುವ ದ್ವಿಮುಖ ಬೆಳವಣಿಗೆಯನ್ನು ಇವತ್ತು ಉನ್ನತ ಶಿಕ್ಷಣದಲ್ಲಿ ನಾವು ಕಾಣಲು ಸಾಧ್ಯವಾಗುತ್ತಿಲ್ಲ.

ಮಕ್ಕಳ ಶಿಕ್ಷಣದಲ್ಲಿ ತಾರತಮ್ಯ 


          ಮಕ್ಕಳ ಶಿಕ್ಷಣದಲ್ಲಿ ತಾರತಮ್ಯವಾಗುತ್ತಿದೆ ಎಂದಾಗ ನನಗೆ ಥಟ್ಟನೆ ನೆನಪಾಗುವುದು ನನ್ನೂರಿನ ನನ್ನ ಬಾಲ್ಯದ ಗೆಳೆಯ ಹೇಳಿದ ಒಂದು ಸಂಗತಿ. ಕೆಲವು ದಿನಗಳ ಹಿಂದೆ ಆತ ಹೀಗೆ ಆಕಸ್ಮಿಕವಾಗಿ ಭೇಟಿಯಾಗಿದ್ದ. ಬಹಳ ದಿನಗಳ ನಂತರದ ಭೇಟಿಯಾಗಿದ್ದರಿಂದ ಒಂದಿಷ್ಟು ಸಮಯ ಮಾಡಿಕೊಂಡು ಹರಟಿದೆವು. ಮಾತಿನ ನಡುವೆ ಅವನೊಂದು ವಿಷಯ ಹೇಳಿದ. ಅವನು ಹೇಳಿದ ಸಂಗತಿ ಆ ಕ್ಷಣಕ್ಕೆ ಮತ್ತು ಅನಂತರದ ಅನೇಕ ದಿನಗಳವರೆಗೆ ನನ್ನನ್ನು ಕಾಡಿದ್ದು ನಿಜ. ನನ್ನೂರಿಗೆ ಒಂದೆರಡು ಮೈಲಿ ದೂರದಲ್ಲಿ ಇಂಗ್ಲಿಶ್ ಮಾಧ್ಯಮದ ಶಾಲೆಯೊಂದು ತಲೆ ಎತ್ತಿದೆಯಂತೆ. ಅವನು ಹೇಳಿದಂತೆ ಆ ಶಾಲೆಯಲ್ಲಿ ಪ್ರತಿಷ್ಟಿತರ ಮಕ್ಕಳಿಗಾಗಿ ಒಂದು ವಿಭಾಗ ಮತ್ತು ಸಾಮಾನ್ಯ ಕುಟುಂಬಗಳಲ್ಲಿನ ಮಕ್ಕಳಿಗಾಗಿ ಮತ್ತೊಂದು ವಿಭಾಗ ಹೀಗೆ ಪ್ರತ್ಯೇಕ ವಿಭಾಗಗಳಿವೆ. ಶಿಕ್ಷಕರೂ ಸಹ ಪ್ರತಿಷ್ಟಿತರ ಮಕ್ಕಳಿರುವ ತರಗತಿಗಳಲ್ಲಿ ಪರಿಣಾಮಕಾರಿಯಾಗಿ ಪಾಠ ಮಾಡುತ್ತಿದ್ದರೆ  ಸಾಮಾನ್ಯರ ಮಕ್ಕಳಿರುವ ತರಗತಿಗಳಲ್ಲಿ ಅವರ ಬೋಧನಾ ಗುಣಮಟ್ಟ ನಿರೀಕ್ಷಿತ ಮಟ್ಟದಲ್ಲಿಲ್ಲವಂತೆ. ಹಾಗೆಂದು ಶಾಲಾ ಶುಲ್ಕದಲ್ಲಿ ಯಾವುದೇ ರಿಯಾಯಿತಿ ಅಲ್ಲಿಲ್ಲ. ಎಲ್ಲ ಮಕ್ಕಳಿಗೂ ಒಂದೇ ಶುಲ್ಕ ಇದ್ದಾಗೂ ಕೂಡ ಹೀಗೆ ಪ್ರತ್ಯೇಕಿಸಲ್ಪಟ್ಟಿರುವುದು ಸಹಜವಾಗಿಯೇ ಸಾಮಾನ್ಯ ಕುಟುಂಬಗಳಲ್ಲಿನ ಮಕ್ಕಳ ಕಲಿಕೆಯ ಗುಣಮಟ್ಟದ ಕುಸಿತಕ್ಕೆ ಕಾರಣವಾಗುತ್ತಿದೆ. ಪೂರ್ಣ ಶುಲ್ಕವನ್ನು ಭರಿಸಿಯೂ ಸಾಮಾನ್ಯ ಕುಟುಂಬಗಳಲ್ಲಿನ ಮಕ್ಕಳು ಇಂಥದ್ದೊಂದು ತಾರತಮ್ಯಕ್ಕೆ ಒಳಗಾಗುತ್ತಿರಬೇಕಾದರೆ ಶಿಕ್ಷಣ ಹಕ್ಕು ಕಾಯ್ದೆಯಡಿ ವಿನಾಯಿತಿ ಶುಲ್ಕವನ್ನು ಭರಿಸಿ ಪ್ರವೇಶ ಪಡೆದ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಲ್ಲಿನ ಮಕ್ಕಳು ಇನ್ನು ಅದೆಂಥ ಸಮಸ್ಯೆಗಳನ್ನು ಎದುರಿಸುತ್ತಿರಬಹುದು?.

             ಇದು ತಾರತಮ್ಯದ ಒಂದು ಮುಖವಾದರೆ ಇನ್ನೊಂದು ಅದು ಮಕ್ಕಳ ಶಿಕ್ಷಣ ಮಾಧ್ಯಮಕ್ಕೆ ಸಂಬಂಧಿಸಿದ್ದು. ಇವತ್ತು ಸಹಜವಾಗಿಯೇ ಹೆಚ್ಚಿನ ಪಾಲಕರು ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಇಂಗ್ಲಿಷ್ ಶಾಲೆಗಳತ್ತ ವಲಸೆ ಹೋಗುತ್ತಿರುವರು. ಇಂಗ್ಲಿಷ್ ಬದುಕಿನ ಭಾಷೆಯಾಗಿ ಮಹತ್ವ ಪಡೆಯುತ್ತಿರುವುದರಿಂದ ಅವರ ವಲಸೆಯನ್ನು ನಾವು ತಪ್ಪು ಎಂದು ಹೇಳುವಂತಿಲ್ಲ ಜೊತೆಗೆ ಶಿಕ್ಷಣ ಅದು ಎಲ್ಲರ ಹಕ್ಕಾಗಿರುವುದರಿಂದ ಮಾಧ್ಯಮದ ಆಯ್ಕೆ ಪಾಲಕರ ಮತ್ತು ವಿದ್ಯಾರ್ಥಿಗಳ ಇಷ್ಟಕ್ಕೆ ಬಿಟ್ಟ ವಿಷಯ. ಆದರೆ ಇಲ್ಲಿರುವ ಮುಖ್ಯ ಸಮಸ್ಯೆಎಂದರೆ ಅದು ಇಂಗ್ಲಿಷ್ ಶಾಲೆಗಳ ಅಂಕಿ ಸಂಖ್ಯೆಗೆ ಸಂಬಂಧಿಸಿದ್ದು. ನಗರ ಪ್ರದೇಶಗಳಲ್ಲಿ ಇಂಗ್ಲಿಷ್ ಮಾಧ್ಯಮದ ಶಾಲೆಗಳು ಕನ್ನಡ ಶಾಲೆಗಳಿಗಿಂತ ಅಧಿಕವಾಗಿವೆ ಮತ್ತು ಅಲ್ಲಿ ಗುಣಾತ್ಮಕ ಶಿಕ್ಷಣ ನಮ್ಮ ನಗರ ಪ್ರದೇಶಗಳಲ್ಲಿ ವಾಸಿಸುತ್ತಿರುವ ಮಕ್ಕಳಿಗೆ ದೊರೆಯುತ್ತಿದೆ ಎನ್ನುವುದನ್ನು ಒಪ್ಪಿಕೊಳ್ಳೋಣ. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಅದು ವ್ಯವಸಾಯವನ್ನೇ ನಂಬಿಕೊಂಡು ಬದುಕುತ್ತಿರುವ ಕುಟುಂಬಗಳಲ್ಲಿನ ಮಕ್ಕಳಿಗೆ ಇಂಗ್ಲಿಷ್ ಶಾಲೆಗಳಲ್ಲಿ ಪ್ರವೇಶ ಪಡೆಯಲು ಸಾಧ್ಯವಾಗುತ್ತಿದೆಯೇ? ಏಕೆಂದರೆ  ಹಳ್ಳಿಗಳಲ್ಲಿ ಕೇವಲ ಸರ್ಕಾರದ ಕನ್ನಡ ಶಾಲೆಗಳು ಮಾತ್ರ ಇರುವುದರಿಂದ ಹಾಗೂ ಆ ಶಾಲೆಗಳಲ್ಲಿ ಇಂಗ್ಲಿಷನ್ನು ಒಂದು ಭಾಷೆಯಾಗಿ ಮಾತ್ರ ಕಳಿಸುತ್ತಿರುವುದರಿಂದ (ಅದು ಐದನೇ ತರಗತಿಯಿಂದ) ನಮ್ಮ ಹಳ್ಳಿಯ ಮಕ್ಕಳು ಇಂಗ್ಲಿಷ್ ಭಾಷೆಯಲ್ಲಿ ಪ್ರಭುತ್ವವನ್ನು ಸಾಧಿಸಲು ಸಾಧ್ಯವಾಗುತ್ತಿಲ್ಲ. ಇಂಥದ್ದೊಂದು ಪರಿಸರದಲ್ಲಿ ಕಲಿತು ಬರುತ್ತಿರುವ ಮಕ್ಕಳು ನಗರ ಪ್ರದೇಶಗಳಲ್ಲಿನ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತ ಮಕ್ಕಳು ಒಡ್ಡುತ್ತಿರುವ ಪ್ರಬಲ ಸ್ಪರ್ಧೆಯಲ್ಲಿ ಸಹಜವಾಗಿಯೇ ಹಿಂದೆ ಉಳಿಯುತ್ತಿರುವರು. ಪರಿಣಾಮವಾಗಿ ಶಿಕ್ಷಣ ಬದುಕನ್ನು ರೂಪಿಸುತ್ತಿಲ್ಲ ಎನ್ನುವ ಭಾವನೆ ಗ್ರಾಮೀಣ ಪ್ರದೇಶಗಳ ಜನರಲ್ಲಿ ಬಲವಾಗುತ್ತಿದೆ. ಈ ಒಂದು ಸಮಸ್ಯೆಯ ನಡುವೆಯೂ ಸರ್ಕಾರವೇ ಮುಂದಾಗಿ ಇಂಗ್ಲಿಷ್ ಶಾಲೆಗಳನ್ನು ಪ್ರಾರಂಭಿಸಲು ಯೋಜನೆ ರೂಪಿಸಿದಾಗ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೂ ಇಂಗ್ಲಿಷ್ ಮಾಧ್ಯಮದ ಶಿಕ್ಷಣ ಲಭ್ಯವಾಗಿ ಮುಂದೊಂದು ದಿನ ಈ ಯೋಜನೆ ಹಳ್ಳಿಗಳಿಗೂ ವಿಸ್ತರಿಸಿ ಗ್ರಾಮೀಣ ಪ್ರದೇಶಗಳಲ್ಲಿನ ಮಕ್ಕಳ ಬದುಕನ್ನು ಶಿಕ್ಷಣ ಕಟ್ಟಿಕೊಡಬಹುದೆನ್ನುವ ಆಶಯ ಎಲ್ಲರದಾಗಿತ್ತು. ಆದರೆ ಈ ಯೋಜನೆ ಅನೇಕ ವರ್ಷಗಳು ಕಳೆದರೂ ಕಾರ್ಯ ರೂಪಕ್ಕೆ ಬರದಿರುವುದು ಸರ್ಕಾರದ ಅಸಹಾಯಕತೆಗೆ ಹಿಡಿದ ಕೈಗನ್ನಡಿಯಾಗಿದೆ. ಆದ್ದರಿಂದ ನನ್ನೂರಿನ ತಿಮ್ಮ,  ರುಕ್ಮ್ಯಾ ನಂಥ ಮಕ್ಕಳು ಇಂಗ್ಲಿಷ್ ಶಾಲೆಗಳಿಲ್ಲದ ಪರಿಣಾಮ  ಅವರು  ಮನೆಯ ಹಿರಿಕರೊಂದಿಗೆ ಹೊಲಗಳಲ್ಲಿಯೋ ಇಲ್ಲವೇ ಸರ್ಕಾರದ ಕಾಳಿಗಾಗಿ ಕೂಲಿ ಯೋಜನೆಯಡಿಯಲ್ಲೋ  ದುಡಿಯುತ್ತಿರುವರು.

ಕೊನೆಯ ಮಾತು 


           ಶಿಕ್ಷಣ ಬದುಕನ್ನು ರೂಪಿಸುವ ಮಹತ್ವದ ಕಲಿಕೆಯಾಗಬೇಕು. ಸಧ್ಯದ ಪರಿಸ್ಥಿತಿಯಲ್ಲಿ ನಮ್ಮ ಮಕ್ಕಳು ಸ್ಪರ್ಧಾತ್ಮಕ ಯುಗದಲ್ಲಿ ಬದುಕುತ್ತಿರುವುದರಿಂದ ಅವರನ್ನು ಸ್ಪರ್ಧೆಗೆ ಅಣಿಗೊಳಿಸುವ ಶಿಕ್ಷಣದ ಅಗತ್ಯವಿದೆ. ಜೊತೆಗೆ ಇಂದಿನ ಶಿಕ್ಷಕರು   ನಿರಂತರ ಅಧ್ಯಯನ ಮತ್ತು ಸಂಶೋಧನೆಯಲ್ಲಿ ತೊಡಗಿಸಿಕೊಳ್ಳುವುದು ಗುಣಾತ್ಮಕ ಶಿಕ್ಷಣದ ಅಗತ್ಯಗಳಲ್ಲೊಂದಾಗಿದೆ. ಈ ಸಂದರ್ಭ ನಾವೆಲ್ಲಾ ನೆನಪಿನಲ್ಲಿಟ್ಟುಕೊಳ್ಳಬೇಕಾದ ಸಂಗತಿಯೊಂದಿದೆ ಅದು ಶಿಕ್ಷಣದ ಮಾಧ್ಯಮಕ್ಕೆ ಸಂಬಂಧಿಸಿದ್ದು. ಕನ್ನಡವನ್ನು ಹೃದಯದ ಭಾಷೆಯಾಗಿಸಿಕೊಂಡು ಕನ್ನಡ ಪ್ರೇಮವನ್ನು ಮೆರೆಯೋಣ ಆದರೆ ಜಾಗತೀಕರಣಕ್ಕೆ ನಮ್ಮ  ಮಕ್ಕಳನ್ನು ಮುಖಾಮುಖಿಯಾಗಿ ನಿಲ್ಲಿಸಬೇಕಾದ ಪರಿಸ್ಥಿತಿ ಎದುರಾಗಿರುವುದರಿಂದ ಇಂಗ್ಲಿಷ್ ಮಾಧ್ಯಮದ ಶಿಕ್ಷಣದ ಆಯ್ಕೆ ಅನಿವಾರ್ಯವಾಗುತ್ತಿದೆ ಮತ್ತು ಅದು ಈ ಸಂದರ್ಭದ ತುರ್ತು ಅಗತ್ಯವೂ  ಹೌದು.

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 

Monday, February 17, 2014

ಹೀಗೊಂದು ತಲ್ಲಣ

           
         ಆಕೆ ಮಗಳಿಗಾಗಿ ಮನೆ ಬಾಗಿಲಲ್ಲಿ ಕಾಯುತ್ತ  ನಿಂತ ಆ ಘಳಿಗೆ ಪ್ರತಿ ಕ್ಷಣವೂ ಅವಳ ಮನಸ್ಸು ಆತಂಕದಿಂದ ಹೊಯ್ದಾಡುತ್ತಿತ್ತು. ಸೂರ್ಯ  ಪಡುವಣದಲ್ಲಿ ಮುಳುಗಿ ಕತ್ತಲಾಗುವ ಆ ಹೊತ್ತು ಮಗಳಿಗಾಗಿ ದಾರಿ ಕಾಯುತ್ತ ನಿಂತವಳ ಮನದಲ್ಲಿ ಸುಳಿದಾಡಿದ ಸಂಗತಿಗಳು ಅನೇಕ. ಇದೇ ಈಗ ಹೈಸ್ಕೂಲು ಶಿಕ್ಷಣ ಮುಗಿಸಿ ಕಾಲೇಜಿನ ಮೆಟ್ಟಿಲೇರಿದವಳ ವಯಸ್ಸು ಇನ್ನೂ ಹದಿನಾರು ದಾಟಿಲ್ಲ. ಅಪ್ಪ ಅಮ್ಮನ ಒಬ್ಬಳೇ ಮುದ್ದಿನ ಮಗಳು. ಯಾರೊಡನೆಯೂ ಗಟ್ಟಿಯಾಗಿ ಮಾತನಾಡದ ಮೃದು ಸ್ವಭಾವ. ಓದಿನಲ್ಲೂ ಜಾಣೆ. ಹೈಸ್ಕೂಲು ಮುಗಿಯುವವರೆಗೂ ಅಮ್ಮನೇ ಶಾಲೆಯವರೆಗೂ ಕೈಹಿಡಿದು ಕರೆದೊಯ್ದು ಕರೆತರುತ್ತಿದ್ದಳು. ನೋಡಿದವರೆಲ್ಲ ನಕ್ಕು ಹಾಸ್ಯ ಮಾಡಿದರೂ ಅವಳು ಅಂದಿಗೂ ಇಂದಿಗೂ ಆ ತಾಯಿಗೆ ಚಿಕ್ಕ ಮಗುವೇ. ನೆನಪುಗಳಲ್ಲಿ ಕಳೆದು ಹೋದವಳಿಗೆ ಮತ್ತೆ ಮಗಳು ಇನ್ನೂ ಬರಲಿಲ್ಲವಲ್ಲ ಎನ್ನುವ ಆತಂಕ ಕಾಡತೊಡಗಿತು. ದಿನ ಬೆಳಗಾದರೆ ಪತ್ರಿಕೆಗಳಲ್ಲಿ ಟಿ. ವಿ ಚಾನೆಲ್ ಗಳಲ್ಲಿ ಎದುರಾಗುವ ಸುದ್ದಿ ನೆನಪಾಗಿ ಕಾಯುತ್ತ ನಿಂತ ಆ ಪ್ರತಿ ಕ್ಷಣವೊಂದು ಯುಗವೆಂದು ಅನ್ನಿಸುತ್ತಿತ್ತು. ಮಗಳು ಕಾಲೇಜಿಗೆ ಹೋಗಲು ಪ್ರಾರಂಭಿಸಿದ ಆರಂಭದ ದಿನಗಳಲ್ಲಿ ಮಗಳಿಗೆ ಜೊತೆಯಾಗಿ ಒಂದೆರಡು ದಿನ ಹೋಗಿದ್ದುಂಟು. ಆಗೆಲ್ಲ ಅವಳದು ಒಂದೇ ತಕರಾರು 'ಅಮ್ಮ ನೀ ಹೀಂಗ ಜೊತಿಗಿ ಬಂದ್ರ ಎಲ್ಲರೂ ನನ್ನ ಚಿಕ್ಕ ಮಗು ಅಂತ ಹಂಗಿಸ್ತಾರ'. ಆಕೆಗೇನು ಗೊತ್ತು ಹೆತ್ತ ಕರುಳಿನ ಸಂಕಟ. ಅಪ್ಪನೂ  ಮಗಳ ಮಾತಿಗೆ ಧ್ವನಿಗೂಡಿಸಿದಾಗ ಸೋಲುವ ಸರದಿ ಅವಳದಾಯಿತು. 'ಮನೆಗೆ ತಡ ಮಾಡದೇ ಬೇಗನೆ ಬರಬೇಕು ನೋಡು' ಎಂದ ಮಾತಿಗೆ ಮಗಳು ಹೂಂ ಗುಟ್ಟಿದಾಗಲೇ ಒಲ್ಲದ ಮನಸ್ಸಿನಿಂದ ಒಪ್ಪಿಗೆ ನೀಡಿದ್ದು.

          'ಇನ್ನೂ ಬರಲಿಲ್ಲವಲ್ಲ' ಆ ಕಡೆ ಈ ಕಡೆ ಕತ್ತು ಹೊರಳಿಸಿ ದೃಷ್ಟಿ ಹಾಯುವವರೆಗೂ ನೋಡಿದ್ದೆ ಬಂತು ಮಗಳು ಕಾಣಿಸುತ್ತಿಲ್ಲ. ಅವಳ ಆತಂಕ ಮತ್ತಷ್ಟು ಹೆಚ್ಚುವಂತೆ ರಾಜಧಾನಿಯಲ್ಲಿ ಕಾಲೇಜು ವಿದ್ಯಾರ್ಥಿನಿಯನ್ನು ಪುಂಡರ ಗುಂಪೊಂದು ಅಪಹರಿಸಿದೆ ಎಂದು   ಟಿ.ವಿ ಯ ಚಾನೆಲ್ ವೊಂದರ ವಾರ್ತಾ ವಾಚಕನ ಧ್ವನಿ ಕಿವಿಯ ಮೇಲೆ ಅಪ್ಪಳಿಸಿತು. ಆತಂಕದೊಂದಿಗೆ ಗಾಬರಿಯೂ ಜೊತೆಗೂಡಿ ಅವಳ ಮುಖ ವಿವರ್ಣವಾಯಿತು. ದೇವರೇ ಮಗಳು ಮನೆಗೆ ಬೇಗ ಬರಲೆಂದು ನಿಂತಲ್ಲಿಯೇ ಆ ಕ್ಷಣಕ್ಕೆ ನೆನಪಾದ ದೇವರುಗಳ ಮೊರೆ ಹೋದಳು. ಫೋನ್ ಮಾಡಿ ಎಲ್ಲಿರುವಳೆಂದು ಕೇಳಬೇಕೆಂದರೆ ತನ್ನ ಮೊಬೈಲ್ ಮನೆಯಲ್ಲೇ ಬಿಟ್ಟು ಹೋಗಿರುವಳು. ಈಗೀಗ ಹೆಣ್ಣು ಮಕ್ಕಳು ಒಬ್ಬಬ್ಬರೇ ಓಡಾಡುವುದು ಕಷ್ಟವಾಗುತ್ತಿದೆ ಅದಕ್ಕೆಂದೇ ಹೊರಗೆ ಹೋಗುವಾಗಲೆಲ್ಲ ಜೊತೆಗೆ ಮಗನನ್ನು ಕಳಿಸುತ್ತೇನೆ ಪಕ್ಕದ ಮನೆಯಾಕೆ ನುಡಿದಾಗ ಮಗಳು ಜೊತೆಗಿಲ್ಲದೆ ಒಬ್ಬಂಟಿ ಎನ್ನುವ ಸಂಗತಿ ಆತಂಕಕ್ಕೆ ಸಂಕಟವನ್ನೂ ಸೇರಿಸಿ ಮತ್ತಷ್ಟು ವೇದನೆ ನೀಡಿತು. ಒಂದಿಷ್ಟು ಹೊರಗಾದರೂ ಹೋಗಿ ನೋಡಿ ಬರಲೇ ಎನ್ನುವ ವಿಷಯ ಹೊಳೆದು ಇನ್ನೇನು ಮನೆಯ ಕಾಂಪೌಂಡ ದಾಟಿ ಹೊರಬರುವಷ್ಟರಲ್ಲಿ ದೂರದಲ್ಲಿ ಮಗಳು ಬರುತ್ತಿರುವುದು ಕಾಣಿಸಿ ಮನಸ್ಸಿಗೆ ಸಮಾಧಾನವಾಯಿತು. ಮಗಳು ಮನೆಯೊಳಗೆ ಬಂದೊಡನೆ ದೇವರಿಗೆ ದೀಪ ಹಚ್ಚಿ ಕೈಮುಗಿದವಳಿಗೆ ಮನದ ತಲ್ಲಣ ಮಾಯವಾಗಿ ಸಮಾಧಾನದ ಭಾವ. ಆದರೆ ಅವಳಿಗೆ ಗೊತ್ತು ಈ ಸಮಾಧಾನ ಈ ರಾತ್ರಿ ಮಾತ್ರವೆಂದು. ನಾಳೆಯ ಬೆಳಗು ಮತ್ತದೇ ಆತಂಕ, ತಲ್ಲಣ, ದುಗುಡಗಳಿಂದ ಎದುರಾಗಲಿದೆ. ಈ ತಲ್ಲಣ ಎಲ್ಲಿಯವರೆಗೆ ಉತ್ತರ ಅವಳಲ್ಲಿಲ್ಲ.

---೦೦೦---

       ಪಟ್ಟಣದಲ್ಲಿ ಓದುತ್ತಿರುವ ಪರಿಚಿತರ ಮಗ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಆ ಕ್ಷಣಕ್ಕೆ ಆ ತಂದೆ ತಾಯಿಗಳನ್ನು ತಲ್ಲಣಿಸುವಂತೆ ಮಾಡಿತು. ಅವರ  ಅದೇ ವಯಸ್ಸಿನ ಮಗ ದೂರದ ಪಟ್ಟಣದಲ್ಲಿದ್ದು ಓದುತ್ತಿರುವನು. ಇದೇ ಈಗ ಮೀಸೆ ಚಿಗುರುತ್ತಿರುವ ವಯಸ್ಸು. ಓದಿ ವಿದ್ಯಾವಂತನಾಗಲಿ ಎಂದು ಹೊಟ್ಟೆ ಬಟ್ಟೆ ಕಟ್ಟಿ ಪಟ್ಟಣದ ಕಾಲೇಜಿಗೆ ಸೇರಿಸಿದ್ದಾಯಿತು. ಹಳ್ಳಿಯ ಈ ದುಡಿತದ ಬದುಕು ನಮ್ಮೊಂದಿಗೆ ಮುಗಿದು ಹೋಗಲಿ ಈ ಕಷ್ಟ ಮಗನನ್ನು ಕಾಡದಿರಲೆಂದು  ಇದ್ದ ಸ್ವಲ್ಪ ಜಮೀನನ್ನೂ ಮಾರಿ ಬಂದ ಹಣವನ್ನು ಮಗನ ವಿದ್ಯಾಭ್ಯಾಸಕ್ಕೆಂದು ತೆಗೆದಿಟ್ಟಾಗಿದೆ. ಮುಂದೆ ಸಮಸ್ಯೆ ಎದುರಾಗದಿರಲಿ ಎನ್ನುವ ಮುನ್ನೆಚ್ಚರಿಕೆ ಇದು. ತಿಂಗಳಿಗೋ ಎರಡು ತಿಂಗಳಿಗೋ ಮನೆಗೆ ಬರುವ ಮಗ ಅವರ ಕನಸುಗಳಿಗೆ ನೀರೆರೆಯುತ್ತಿರುವನು. ಹೀಗೆ ನಾಳೆಯ ಕನಸುಗಳೊಂದಿಗೆ ಬದುಕುತ್ತಿರುವವರಿಗೆ ಪರಿಚಿತರ ಮಗನ ಧಿಡೀರ್ ಸಾವು ಆತಂಕವನ್ನುಂಟು ಮಾಡಿದೆ. ಅವರ ಆತಂಕಕ್ಕೂ ಕಾರಣವಿದೆ. ಆ ಹುಡುಗ ಸತ್ತಿದ್ದು ಪ್ರೇಮ ವೈಫಲ್ಯದಿಂದ ಎನ್ನುವುದು ಕೆಲವರ ಮಾತಾದರೆ ಇನ್ನು ಕೆಲವರು ಆತ ಪರೀಕ್ಷೆಯಲ್ಲಿ ಫೇಲಾದದ್ದೇ ಅದಕ್ಕೆ ಕಾರಣವಂತೆ ಎನ್ನುವರು. ಪಟ್ಟಣದಲ್ಲಿ ಯಾವ ಯಾವುದೋ ದುಶ್ಚಟಗಳಿಗೆ ಬಿದ್ದು ಹುಡುಗ ಮೈತುಂಬ ಸಾಲ ಮಾಡಿಕೊಂಡು ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡ ಎಂದು ಉಳಿದವರ ಮಾತು. ಒಟ್ಟಿನಲ್ಲಿ ಯಾವ ಕಾರಣಕ್ಕಾಗಿ ಸತ್ತ ಎನ್ನುವುದು ಯಾರಿಗೂ ಗೊತ್ತಿಲ್ಲ. ಸತ್ತವನ ಬದುಕಿನ ಸುತ್ತ ಅನೇಕ ಕಥೆಗಳು ಹುಟ್ಟಿಕೊಳ್ಳುತ್ತಿರುವಾಗ ಅವನದೇ ವಯಸ್ಸಿನ ಮಗನನ್ನು ದೂರದ ಊರಲ್ಲಿ ಓದಲು ಬಿಟ್ಟ ಈ ಅಪ್ಪ ಅಮ್ಮನಿಗೆ ಅದೇನೋ ಆತಂಕ ಮತ್ತು ತಲ್ಲಣ. ಮಗನೇನಾದರೂ ಪ್ರೇಮದಲ್ಲಿ ಬಿದ್ದಿರಬಹುದೇ, ದುಶ್ಚಟಗಳೇನಾದರೂ ಊಹುಂ ಇರಲಿಕ್ಕಿಲ್ಲ. ಪ್ರತಿ ಸಲದಂತೆ ಈ ಬಾರಿ ಮಗ ಮನೆಗೆ ಬಂದಾಗ ಅವನಲ್ಲಿ ಏನಾದರೂ ಬದಲಾವಣೆಯಾಗಿದೆಯೆ ಎಂದು ಸೂಕ್ಷ್ಮವಾಗಿ ಗಮನಿಸಿದ್ದಾಯಿತು. ಕೇಳಬೇಕೆಂದ ವಿಷಯ ನಾಲಿಗೆಯವರೆಗೂ ಬಂದು ಕೇಳಲಾಗದೆ ಪ್ರಶ್ನೆ ಮನದಲ್ಲೇ ಉಳಿದಿದ್ದು ಅದು ಎಷ್ಟು ಸಲವೋ. ಈಗೀಗ ಊರಿಗೆ ಬಂದರೆ ಮನೆಯಲ್ಲಿ ಹೆಚ್ಚು ಮಾತಿಲ್ಲ ಬೇರೆ ಯಾರೊಂದಿಗೂ ಬೇರೆಯುವುದಿಲ್ಲ. ದಿನಪೂರ್ತಿ ಮೊಬೈಲ್ ನಲ್ಲೇ ಮುಳುಗಿರುತ್ತಾನೆ. ಅದೇ ಅವನ ಪ್ರಪಂಚ. ಈ ಮೊಬೈಲ್ ಗಳಿಂದಲೇ ಈಗಿನ ಮಕ್ಕಳು ಹಾಳಾಗುತ್ತಿರುವರಂತೆ. ಓದಿನ ಬಗ್ಗೆ ಏನಾದರೂ ಕೇಳಿದರೆ ಅರ್ಥವಾಗದ ಮಾತಾಡುತ್ತಾನೆ. ನಿಮಗೆ ಹೇಳಿದರೆ ಗೊತ್ತಾಗುವುದಿಲ್ಲ ಬಿಡಿ ಎಂದು ಸಿಟ್ಟಿಗೆ ಬರುತ್ತಾನೆ. ಹೆಚ್ಚು ಕೇಳಿದರೆ ವಾರಪೂರ್ತಿ ಇರಲು ಬಂದವನು ಎರಡೇ ದಿನಗಳಿಗೆ ಹೊರಟು ನಿಲ್ಲುತ್ತಾನೆ. ಈಗಿನ ಮಕ್ಕಳನ್ನು ಅರ್ಥ ಮಾಡಿಕೊಳ್ಳಲು ಅಪ್ಪ ಅಮ್ಮನಿಗೆ ಸಾಧ್ಯವೇ ಆಗುತ್ತಿಲ್ಲ. ಅವನೇನಾದರೂ ......... ಪ್ರಶ್ನೆಯೊಂದು ಮನದಲ್ಲಿ ಉಳಿದು ಕಾಡತೊಡಗುತ್ತದೆ. ಪಟ್ಟಣದಿಂದ ಅವನ ಬಗ್ಗೆ ಅಂಥದ್ದೇನಾದರೂ ಸುದ್ದಿ ಬರಬಹುದೇ ಜೀವ ತಲ್ಲಣಿಸುತ್ತಿದೆ.

---೦೦೦---

       ಸರ್ಕಾರ   ಕಣ್ತೆರೆಯದೆ ಹೋದರೆ  ಕನ್ನಡ ಭಾಷೆ ಮೂಲೆ ಗುಂಪಾಗುವುದು ಖಂಡಿತ. ಹೀಗೆಂದು ಹೇಳಿ ನಿಟ್ಟುಸಿರು ಬಿಟ್ಟವನು ನನ್ನೂರಿನ ನನ್ನ ಬಾಲ್ಯದ ಗೆಳೆಯ. ಅವನು ಹೇಳುವುದರಲ್ಲೂ ನಿಜವಿದೆ. ನಾಯಿ ಕೊಡೆಗಳಂತೆ ಇಂಗ್ಲಿಷ್ ಶಾಲೆಗಳು ತಲೆ  ಎತ್ತುತ್ತಿರುವಾಗ ಇನ್ನು ಕನ್ನಡ ಭಾಷೆಯನ್ನು ಉಳಿಸಿಕೊಳ್ಳುವುದು ಅತ್ಯಂತ ಕಷ್ಟದ ಕೆಲಸ. ಮೊನ್ನೆ ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ ಬೆಂಬಲಿತ ಸದಸ್ಯ ಕನ್ನಡದ ಬಗ್ಗೆ ಹೀನಾಯವಾಗಿ ಮಾತನಾಡಿದಾಗ ಕೇಳಿಯೂ  ಸುಮ್ಮನಿದ್ದ ಸರ್ಕಾರ ಇನ್ನು ಇಂಗ್ಲಿಷ್ ಶಾಲೆಗಳನ್ನು ಮುಚ್ಚಿಸಲು ಮುಂದಾಗುವುದು ದೂರದ ಮಾತು. ಇವತ್ತು ಶಿಕ್ಷಣದ ಬಗ್ಗೆ ಕಾಳಜಿ ಇರುವ  ಜನರು  ಶಾಲೆಗಳನ್ನು ಸ್ಥಾಪಿಸಲು ಮುಂದೆ ಬರುತ್ತಿಲ್ಲ. ಆದರೆ ಯಾರು  ಶಾಲೆಗಳನ್ನು ಸ್ಥಾಪಿಸಲು ಮುಂದೆ ಬರುತ್ತಿರುವರೋ ಅವರು  ಶಿಕ್ಷಣವನ್ನು ಉದ್ದಿಮೆ ಎಂದೇ ಪರಿಭಾವಿಸುತ್ತಿರುವರು. ಸಮಸ್ಯೆ ಇರುವುದೇ ಇಲ್ಲಿ. ಯಾವಾಗ ಶಾಲೆಗಳ ಸ್ಥಾಪಕರು ಶಿಕ್ಷಣದ ಮೇಲೆ ಕೋಟ್ಯಾಂತರ ರುಪಾಯಿಗಳನ್ನು ಬಂಡಾವಳ ಹೂಡುತ್ತಾರೋ ಆಗ ಅವರು ಸಹಜವಾಗಿಯೇ ಅದರಿಂದ ಲಾಭವನ್ನು ನಿರೀಕ್ಷಿಸುತ್ತಾರೆ. ಸರ್ಕಾರ ಮಾಡಬೇಕಾದ ಕೆಲಸವನ್ನು ಖಾಸಗಿಯವರಿಗೆ ವಹಿಸಿದಾಗ ಆಗುವುದೇ ಹೀಗೆ. ಹೀಗೆ ಕೋಟ್ಯಾಂತರ ರುಪಾಯಿಗಳನ್ನು ಖರ್ಚು ಮಾಡುವ ಬಂಡವಾಳದಾರರು ಅದಕ್ಕೆ ಲಾಭದ ರೂಪವಾಗಿ  ವಿದ್ಯಾರ್ಥಿಗಳಿಂದ ಲಕ್ಷಾಂತರ ರುಪಾಯಿಗಳನ್ನು ಶುಲ್ಕವಾಗಿ ಪಡೆಯುವರು. ಜೊತೆಗೆ ಈ ಖಾಸಗಿ ವಲಯದಿಂದ ಶಿಕ್ಷಣಕ್ಕೆ ಎದುರಾಗುತ್ತಿರುವ ಇನ್ನೊಂದು ಬಹುದೊಡ್ಡ ಅಪಾಯವೆಂದರೆ ಅದು ಕನ್ನಡ ಶಾಲೆಗಳು ಮೂಲೆಗುಂಪಾಗುತ್ತಿರುವುದು.  ಹೀಗೆ ಶಿಕ್ಷಣ ಒಂದು ಉದ್ದಿಮೆಯಾಗಿ ಬದಲಾಗುತ್ತಿರುವುದು ಮತ್ತು ಕನ್ನಡ ಮಾಧ್ಯಮದ ಶಿಕ್ಷಣ ನೇಪಥ್ಯಕ್ಕೆ ಸರಿಯುತ್ತಿರುವುದು ಇವತ್ತು ಶಿಕ್ಷಣ ಕ್ಷೇತ್ರದ ಮುಖ್ಯ ಸವಾಲುಗಳಾಗಿವೆ.

         ಈ ಸವಾಲುಗಳ ನಡುವೆಯೂ ಜಾಗತೀಕರಣಕ್ಕೆ ನಮ್ಮ ಮಕ್ಕಳನ್ನು ಮುಖಾಮುಖಿಯಾಗಿ ನಿಲ್ಲಿಸಲು ಈ ಖಾಸಗಿಯವರ ಶಾಲೆಗಳು ನೆರವಾಗುತ್ತಿವೆ ಎನ್ನುವ ಮಾತುಗಳೂ ಕೇಳಿಬರುತ್ತಿವೆ. ನಮ್ಮ ಮಕ್ಕಳು ಬದುಕನ್ನು ರೂಪಿಸಿಕೊಳ್ಳುವುದಾದರೆ ಶಿಕ್ಷಣವನ್ನು ಒಂದು ಉದ್ದಿಮೆಯಾಗಿ ಅದರೊಂದಿಗೆ ಇಂಗ್ಲಿಷ್ ಶಿಕ್ಷಣವನ್ನೂ ನಾವೆಲ್ಲರೂ ಒಟ್ಟಾಗಿಯೇ ಸ್ವಾಗತಿಸೋಣ. ಆದರೆ ಇಲ್ಲಿರುವ ಬಹುಮುಖ್ಯ ಪ್ರಶ್ನೆ ಎಂದರೆ ಖಾಸಗಿಯವರು ಅಪೇಕ್ಷಿಸುತ್ತಿರುವ ದುಬಾರಿ ಶುಲ್ಕವನ್ನು ಪಾವತಿಸುವವರಾರು? ಸರ್ಕಾರವೇನಾದರೂ ಪಾಲಕರ ಬದಲಾಗಿ ಶುಲ್ಕವನ್ನು ಪಾವತಿಸಲು ಮುಂದಾಗುತ್ತಿದೆಯೇ? ಹೀಗೆ ದುಬಾರಿ ಶುಲ್ಕವನ್ನು ಸಮಾಜದಲ್ಲಿನ ಶ್ರೀಮಂತ ವರ್ಗ ಮಾತ್ರ ಪಾವತಿಸುವ ಶಕ್ತಿ ಮತ್ತು ಸಾಮರ್ಥ್ಯ  ಹೊಂದಿರುವುದರಿಂದ ಬಡಕುಟುಂಬಗಳಲ್ಲಿನ ಮಕ್ಕಳು ಏನು ಮಾಡಬೇಕು. ಆಗ ಸರ್ಕಾರ ಅವರು ಸರ್ಕಾರಿ ಸ್ವಾಮ್ಯದ ಕನ್ನಡ ಶಾಲೆಗಳಲ್ಲಿ ಪ್ರವೇಶ ಪಡೆಯಲಿ ಎಂದು ಉತ್ತರ ನೀಡುತ್ತದೆ. ಯಾವಾಗ ಇಂಗ್ಲಿಷ್ ಶಿಕ್ಷಣ ಎನ್ನುವ ಉದ್ದಿಮೆ  ನಮ್ಮ ಬಡ ಮಕ್ಕಳ ಬದುಕನ್ನು ರೂಪಿಸಲು ಮುಂದಾಗುತ್ತಿಲ್ಲ ಎಂದಾದರೆ ನಾವುಗಳೆಲ್ಲ ಏಕೆ ಈ ಖಾಸಗಿ ಶಿಕ್ಷಣದ ಉದ್ಯಮವನ್ನು ಸ್ವಾಗತಿಸಬೇಕು ಎನ್ನುವ ವ್ಯವಹಾರಿಕ ಪ್ರಶ್ನೆ ಎದುರಾಗುತ್ತದೆ. ಆದರೆ ಸರ್ಕಾರ ಮಾತ್ರ ಬಡ ಕುಟುಂಬಗಳಲ್ಲಿನ ಮಕ್ಕಳ ಗೋಳನ್ನು ಅರ್ಥಮಾಡಿಕೊಳ್ಳದೆ ಶಿಕ್ಷಣವನ್ನು ಚಿನ್ನದ ಹರಿವಾಣದಲ್ಲಿಟ್ಟು ಖಾಸಗಿಯವರ ಸುಪರ್ದಿಗೆ ಒಪ್ಪಿಸಿ ಬಿಟ್ಟಿದೆ. ಹಾಗಾಗಿ ಇವತ್ತು ರಾಜ್ಯದಲ್ಲಿ ಶ್ರೀಮಂತರ ಮಕ್ಕಳಿಗಾಗಿ ಒಂದು ವ್ಯವಸ್ಥೆ ಮತ್ತು ಬಡವರ ಮಕ್ಕಳಿಗಾಗಿ ಇನ್ನೊಂದು ವ್ಯವಸ್ಥೆ ಎಂದು ಶಿಕ್ಷಣ ಎರಡು ವರ್ಗಗಳಾಗಿ ವಿಂಗಡಣೆಗೊಂಡಿದೆ. ಶ್ರೀಮಂತರ ಮಕ್ಕಳೆಲ್ಲ ಖಾಸಗಿ ಶಾಲೆಗಳ ಇಂಗ್ಲಿಷ್ ಶಿಕ್ಷಣದಿಂದ ಬದುಕನ್ನು ಕಟ್ಟಿಕೊಳ್ಳುತ್ತಿದ್ದರೆ ಬಡವರ ಮಕ್ಕಳು ಸರ್ಕಾರದ ಕನ್ನಡ ಶಾಲೆಗಳಲ್ಲಿ ಕಲಿತು ನಿರುದ್ಯೋಗಿಗಳಾಗುತ್ತಿರುವರು. ಪರಿಸ್ಥಿತಿ ಹೀಗೆ ಮುಂದುವರಿದರೆ ಸಮಾಜದಲ್ಲಿ ಅಸಮಾನತೆ ಮೂಡಿ ಅದು ಸಮಾಜದ ಆರೋಗ್ಯವನ್ನು ಹಾಳುಗೆಡುವುದು ಎನ್ನುವುದು ಸಾಮಾಜಿಕ ಕಳಕಳಿಯುಳ್ಳವರ ತಲ್ಲಣ.

---೦೦೦---

            ೧೯೯೦ ರ ದಶಕದ ಕೊನೆಯಲ್ಲಿ ಭಾರತದ ಅಷ್ಟೆ ಏಕೆ ಇಡೀ ಪ್ರಪಂಚದ ಕ್ರಿಕೆಟ್ ಆಟಕ್ಕೆ ಮ್ಯಾಚ್ ಫಿಕ್ಸಿಂಗ್ ನ ಕಳಂಕ ಅಂಟಿಕೊಂಡಿತ್ತು. ಈ ಪ್ರಕರಣದಲ್ಲಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ಟೀಂ ನ್ನು ಯಶಸ್ವಿಯಾಗಿ ಮುನ್ನಡೆಸಿದ್ದ ನಾಯಕ ಹ್ಯಾನ್ಸಿ ಕ್ರೋನಿ ಹೆಸರು ಕೇಳಿ ಬಂದು ಆತನನ್ನು ಟೀಂನಿಂದ ವಜಾಗೊಳಿಸಲಾಯಿತು. ನೆನಪಿರಲಿ ದಕ್ಷಿಣ ಆಫ್ರಿಕಾ ಅಂತರಾಷ್ಟ್ರೀಯ ಕ್ರಿಕೆಟಿಗೆ ಮರಳಿದ ನಂತರ ಅತ್ಯಂತ ಸಂದಿಗ್ಧ ಪರಿಸ್ಥಿತಿಯಲ್ಲಿ ನಾಯಕನ ಸ್ಥಾನ ವಹಿಸಿಕೊಂಡ ಕ್ರೋನಿ ತನ್ನ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿ ದಕ್ಷಿಣ ಆಫ್ರಿಕಾವನ್ನು ಕ್ರಿಕೆಟಿನ ಉತ್ತುಂಗಕ್ಕೆ ಕೊಂಡೊಯ್ದ. ಆದರೆ ಹಣದ ಮೇಲಿನ ದುರಾಸೆ ಅವನ ಕ್ರಿಕೆಟ್ ಬದುಕನ್ನೇ ನುಂಗಿ ಹಾಕಿತು ಜೊತೆಗೆ ಕ್ರಿಕೆಟಿಗೂ ಕಳಂಕ ಅಂಟಿಕೊಂಡಿತು. ಭಾರತದಲ್ಲೂ ಅನೇಕ ಆಟಗಾರರು ಮ್ಯಾಚ್ ಫಿಕ್ಸಿಂಗ್ ಪರಿಣಾಮ ಕ್ರಿಕೆಟ್ ಆಟದಿಂದ ವಜಾಗೊಂಡರು. ಹೀಗೆ ಅವರು ವಜಾಗೊಂಡರು ಎನ್ನುವುದಕ್ಕಿಂತ ಕ್ರಿಕೆಟ್ ನಂಥ ಜನಪ್ರಿಯ ಆಟಕ್ಕೆ ಹಚ್ಚಿ ಹೋದ ಕಪ್ಪು ಮಸಿ ಮಾತ್ರ ಅಳಿಸಲು ಅನೇಕ ವರ್ಷಗಳೇ ಬೇಕಾದವು. ಭಾರತದ ಕ್ರಿಕೆಟ್ ಅಭಿಮಾನಿಗಳಿಗಂತೂ ಇದು ಮರೆಯಲಾರದ ನೋವು ನೀಡಿತು. ಅನೇಕರು ಆ ಆಟದ ಮೇಲಿನ ಆಸಕ್ತಿಯನ್ನೇ ಕಳೆದುಕೊಂಡರು. ಆಟಗಾರನೊಬ್ಬ ಔಟಾದಾಗಲೆಲ್ಲ ಪ್ರೇಕ್ಷಕರ ಮನಸ್ಸಿನ ಮೂಲೆಯಲ್ಲಿ ಸಣ್ಣದೊಂದು ಸಂಶಯ ಹೊಗೆಯಾಡುತ್ತಿತ್ತು. ಆಟಗಾರನೊಬ್ಬ ಎಷ್ಟು ರನ್ ಗಳಿಸಿದ ಎಷ್ಟು ವಿಕೆಟ್ ಉರುಳಿಸಿದ ಎನ್ನುವುದಕ್ಕಿಂತ ಮ್ಯಾಚ್ ಫಿಕ್ಸಿಂಗ್ ಮೂಲಕ ಆತ ಪಡೆದ ಹಣ ಎಷ್ಟಿರಬಹುದು ಎನ್ನುವ ಚರ್ಚೆಯೇ ಎಲ್ಲ ಕಡೆ ಕೇಳಿ ಬರುತ್ತಿತ್ತು. ಆಗೆಲ್ಲ ಹುಟ್ಟಿರುವುದೇ ಕ್ರಿಕೆಟ್ ಆಟಕ್ಕಾಗಿ ಎನ್ನುವಂತೆ ಅದನ್ನು ಕಡು ವ್ಯಾಮೋಹಿಯಂತೆ  ಪ್ರೀತಿಸುತ್ತಿದ್ದ ಸಚಿನ್ ನಂಥ ಅಪ್ಪಟ ಕ್ರೀಡಾಭಿಮಾನಿ ಆಟಗಾರರ ಮನಸ್ಸು ತಲ್ಲಣಿಸಿದ್ದು ಅದೆಷ್ಟು ಬಾರಿಯೋ.  ದಲ್ಲಾಳಿಗಳಿಂದ ಹಣ ಪಡೆದ ಆಟಗಾರರೆಲ್ಲ ವಿಕೆಟ್ ಒಪ್ಪಿಸಿ ಪೆವಿಲಿಯನ್ ಗೆ ಹಿಂತಿರುಗುತ್ತಿದ್ದರೆ ಸಚಿನ್ ಅಸಾಹಾಯಕನಾಗಿ ನೋಡುತ್ತ ನಿಂತಿರುತ್ತಿದ್ದ. ಕ್ರಿಕೆಟ್ ಆಟದ ಭವಿಷ್ಯವೇ ಮಣ್ಣಾಗಲಿದೆ ಎನ್ನುವ ಆತಂಕವೊಂದು ಕಪ್ಪು ಕಾರ್ಮೊಡಿನಂತೆ ಕ್ರಿಕೆಟ್ ಆಟವನ್ನು ಆವರಿಸಿಕೊಂಡ ಆ ಘಳಿಗೆ ಸಚಿನ್ ನಂಥ ಆಟಗಾರನ ಮನಸ್ಸು ತಲ್ಲಣಿಸುತ್ತಿತ್ತು. ಇದೇ ಪರಿಸ್ಥಿತಿ ಐಪಿಎಲ್ ನಲ್ಲಿ ರಾಜಸ್ಥಾನದ ಸಾರಥ್ಯವಹಿಸಿದ್ದ ದ್ರಾವಿಡ್ ಗೂ ಎದುರಾಗಿತ್ತು. ತನ್ನ ಕ್ರೀಡಾ ಮತ್ತು ಸಂಘಟಿತ ಮನೋಭಾವದಿಂದ ಅಷ್ಟೇನು ಖ್ಯಾತರಲ್ಲದ ದೇಶಿಯ ಆಟಗಾರರನ್ನು ಕಟ್ಟಿಕೊಂಡು ಟೀಂ ನ್ನು ಯಶಸ್ಸಿನ ಹತ್ತಿರಕ್ಕೆ ಕೊಂಡೊಯ್ದ ದ್ರಾವಿಡ್ ಗೆ ಅವನದೇ  ಸಹ ಆಟಗಾರರು ಮಾಡಿದ ಮೋಸ ಆ ಕ್ಷಣಕ್ಕೆ ನೀಡಿದ ನೋವು ಮತ್ತು ಮಾಡಿದ ನಿರಾಸೆ ಅಷ್ಟಿಷ್ಟಲ್ಲ. ತನ್ನ ನಿಷ್ಕಳಂಕ ಆಟ ಮತ್ತು ವ್ಯಕ್ತಿತ್ವದಿಂದ ಕ್ರಿಕೆಟ್ ಕ್ರೀಡೆಗೆ ಹೊಸ ವ್ಯಾಖ್ಯಾನ ಬರೆದ ಆಟಗಾರ ಈ ರಾಹುಲ್ ದ್ರಾವಿಡ್. ೨೦೦೭ ರ ವಿಶ್ವಕಪ್ ನಲ್ಲಿ ಬಾಂಗ್ಲಾ ದೇಶದೆದುರು ಸೋತು ಭಾರತ ಲೀಗ್ ಹಂತದಲ್ಲೇ ಹೊರಬಿದ್ದಾಗ ಇದೇ ದ್ರಾವಿಡ್ ಡ್ರೆಸಿಂಗ್ ರೂಮಿನಲ್ಲಿ ಕುಳಿತು ಗಳಗಳನೆ ಅತ್ತಿದ್ದ. ಅದು ಆತನ ಆಟದ ಬದ್ಧತೆಗೆ ಸಾಕ್ಷಿಯಾಗಿತ್ತು. ಟೆಸ್ಟ್ ಆಟದಲ್ಲಿ ಲಕ್ಷ್ಮಣ ಜೊತೆಗೂಡಿ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾಗಳಂಥ ಘಟಾನುಘಟಿ ತಂಡಗಳಿಗೆ ಸೋಲಿನ ರುಚಿ ತೋರಿಸಿದ್ದೂ ಇದೇ ದ್ರಾವಿಡ್. ಅಂಥ ದ್ರಾವಿಡನನ್ನು ಅವನದೇ ತಂಡದ  ಕಳಂಕಿತ ಆಟಗಾರರ ಕುರಿತು ಪತ್ರಕರ್ತರು ಪ್ರಶ್ನಿಸಿದಾಗ ಅಕ್ಷರಶ: ಆತ ಭೂಮಿಗಿಳಿದು ಹೋಗಿದ್ದ. ಪ್ರೆಸ್ ಮಿಟ್ ನಲ್ಲಿ ಕುಳಿತಿದ್ದ ಆತನ ಕಂಗಳು ತುಂಬಿ ಬಂದಿದ್ದವು. ಮನಸ್ಸು ತಲ್ಲಣಿಸಿತ್ತು.

---೦೦೦---

        ೧೯೯೦ ರ ದಶಕದಿಂದ ಅಭಿವ್ಯಕ್ತಿ ಮಾಧ್ಯಮವಾದ ಸಿನಿಮಾ ಮಾಧ್ಯಮದಲ್ಲಿ ಅನೇಕ ಬದಲಾವಣೆಗಳು ಕಾಣಿಸಿಕೊಂಡವು. ಜನರ ಅಭಿರುಚಿ ಬದಲಾಯಿತೋ ಅಥವಾ ಸಿನಿಮಾದ ಮಾರುಕಟ್ಟೆ ವಿಸ್ತರಿಸಿತೋ ಒಟ್ಟಿನಲ್ಲಿ ಸಿನಿಮಾ ರಂಗದಲ್ಲಿ ಬದಲಾವಣೆಯ ಗಾಳಿ ಬೀಸಿತು. ನಾವು ಬದುಕುತ್ತಿದ್ದ ಸಮಾಜವನ್ನು ಪ್ರತಿಬಿಂಬಿಸುತ್ತಿದ್ದ ಸಿನಿಮಾಗಳ ಕಥೆ ನಂತರದ ದಿನಗಳಲ್ಲಿ ಬದಲಾವಣೆಯ ಒಳ ಸುಳಿಗೆ ಸಿಕ್ಕು ಸಮಾಜದಿಂದ ವಿಮುಖವಾಗತೊಡಗಿತು. ಅದಕ್ಕೆ ಉತ್ತರವಾಗಿ ನಾವು ಸಿನಿಮಾಕ್ಕೆ ಕಥೆಯಾಗುವುದಕ್ಕಿಂತ ಸಿನಿಮಾಗಳ ಕಥೆಯೇ ನಮ್ಮ ಬದುಕಿನ ಮೇಲೆ ಪ್ರಭಾವ ಬೀರಲಾರಂಭಿಸಿತು. ಹೀಗೆ ಸಿನಿಮಾ ಮಾಧ್ಯಮ ನಮ್ಮ ಅಭಿರುಚಿಯನ್ನು ಮಾತ್ರವಲ್ಲದೆ ನಮ್ಮ ಬದುಕನ್ನೇ ತನ್ನ ಕಥೆಗನುಗುಣವಾಗಿ ಬದಲಾಯಿಸಲಾರಂಭಿಸಿತು. ಪರಿಣಾಮವಾಗಿ  ಸಿನಿಮಾದ ಪ್ರಭಾವದಿಂದ  ಸಮಾಜದಲ್ಲಿ ಸಾಕಷ್ಟು  ಪರಿವರ್ತನೆಯಾಯಿತು. ಈ ರೌಡಿಸಂ, ಭಯೋತ್ಪಾದನೆ, ಪಾಶ್ಚಾತ್ಯ ಸಂಸ್ಕೃತಿ ಇವುಗಳೆಲ್ಲ ಸಿನಿಮಾದಿಂದ ಪಡೆದ ಬಳುವಳಿಗಳು. ಒಂದು ಕಾಲದಲ್ಲಿ 'ಕುಲ ಕುಲವೆಂದು ಏಕೆ ಹೊಡೆದಾಡುವಿರಿ' ಎಂದು ನೀತಿ ಹೇಳಿದ ಸಿನಿಮಾ ಮಾಧ್ಯಮ ಮುಂದೊಂದು ದಿನ 'ಹೊಡಿ ಮಗ ಹೊಡಿ ಮಗ ಬಿಡಬೇಡ ಅವನ್ನ' ಎಂದು ಪಾಠ ಹೇಳಿದ್ದು ಸಿನಿಮಾದ ಬದಲಾದ ಅಭಿವ್ಯಕ್ತಿಗೆ ಸ್ಪಷ್ಟ ದೃಷ್ಟಾಂತ. 'ಸ್ವಾಮಿ ದೇವನೆ ಲೋಕ ಪಾಲನೆ' ಎನ್ನುವ ಹಾಡನ್ನು  ಶಾಲೆಗಳಲ್ಲಿ ಪ್ರಾರ್ಥನಾ ಗೀತೆಯಾಗಿಸಿದ ಅದೇ ಸಿನಿಮಾ ಮಾಧ್ಯಮ ನಂತರದ ದಿನಗಳಲ್ಲಿ 'ಹಳ್ಳಿ ಮೇಷ್ಟ್ರೆ ಹಳ್ಳಿ ಮೇಷ್ಟ್ರೆ ಪ್ರೀತಿ ಮಾಡಿ ಬನ್ನಿ' ಎಂದು ಅತ್ಯಂತ ಅಶ್ಲೀಲವಾಗಿ ಮತ್ತು ಮಾದಕವಾಗಿ ಹಾಡಿಸಿತು.

           ಬದಲಾದ ಸಿನಿಮಾ ಮಾಧ್ಯಮದ ಈ ವರಸೆಯನ್ನು ಸಂಭ್ರಮದಿಂದ ಸ್ವಾಗತಿಸಿದವರು ಅನೇಕರಿರಬಹುದು ಅವರ ನಡುವೆಯೂ ಈ ಪರಿವರ್ತನೆಯಿಂದ ತಲ್ಲಣಿಸಿದ ಅನೇಕ ಮನಸ್ಸುಗಳಿದ್ದವು. ಸಿನಿಮಾ ಬದಲಾವಣೆಯ ದಾರಿ ತುಳಿದಾಗ ಅಶ್ವತ್ಥರಂಥ ಸಾಮಾಜಿಕ ಕಳಕಳಿಯ ನಟ ಸಿನಿಮಾ ನಟನೆಯಿಂದಲೇ ನಿವೃತ್ತರಾದರು. ರಾಜಕುಮಾರರಂಥ ಸದಭಿರುಚಿಯ ಸಿನಿಮಾಗಳ ಪ್ರತಿನಿಧಿ ಒಂದಿಷ್ಟು ಕಾಲ ಅಜ್ಞಾತಕ್ಕೆ ತೆರಳಿದರು. ಅನೇಕ ಪ್ರತಿಭಾವಂತ ನಿರ್ದೇಶಕರು ಪರಿಸ್ಥಿತಿಯೊಂದಿಗೆ ರಾಜಿ ಮಾಡಿಕೊಳ್ಳಲು ಮನಸ್ಸಿಲ್ಲದೆ ತಮ್ಮ ಸಿನಿಮಾ ಕಸುಬನ್ನೇ ಕೈಬಿಟ್ಟರು. ಇಂಥದ್ದೊಂದು ಸೃಜನಶೀಲ ಹಾನಿಯಿಂದ ನಿಜಕ್ಕೂ ಆಘಾತಕ್ಕೊಳಗಾಗಿದ್ದು ಸಿನಿಮಾಗಳನ್ನು ಉತ್ಕಟವಾಗಿ ಪ್ರೀತಿಸುತ್ತಿದ್ದ ಒಂದು ವರ್ಗದ ಪ್ರೇಕ್ಷಕರು. ಅವರಿಗೆ ಸಿನಿಮಾದ ಈ ಹೊಸ ಬದಲಾವಣೆಯನ್ನು ಒಪ್ಪಿಕೊಳ್ಳಲು ಸಾಧ್ಯವಾಗಲೇ ಇಲ್ಲ. ಜೊತೆಗೆ ಸಿನಿಮಾದಿಂದ ಸಮಾಜದ ಮೇಲಾಗುತ್ತಿದ್ದ  ಕೆಟ್ಟ  ಪರಿಣಾಮಗಳಿಂದ ಅವರು ಆತಂಕಕ್ಕೊಳಗಾದರು. ಜಾಕಿ, ಜಾನಿ, ಹುಚ್ಚ, ಮೆಂಟಲ್ ಮಂಜರ ಪ್ರವಾಹದಲ್ಲಿ ಸಿಕ್ಕು ಸಿನಿಮಾ ಎನ್ನುವ ಮಾಧ್ಯಮ ತನ್ನ ಗತಿಶೀಲತೆಯನ್ನು ಬದಲಿಸಿ ಸೃಜನಶೀಲತೆಯ ಹೊಳಪನ್ನು ಕಳೆದುಕೊಳ್ಳುತ್ತಿರುವ ಈ ಕ್ಷಣ ಸದಭಿರುಚಿಯ ಪ್ರೇಕ್ಷಕ ವರ್ಗ ಅಸಹಾಯಕತೆಯಿಂದ ನೋಡುತ್ತ ನಿಂತಿದೆ. ಹಳೆ ಬಾಟ್ಲಿ ಹಳೆ ಕಬ್ಬಿಣದಂಥ ಹಾಡುಗಳು ಜನಪ್ರಿಯವಾಗುತ್ತಿರುವ ಈ ಹೊತ್ತು ಅದೇ ಸದಭಿರುಚಿಯ ಪ್ರೇಕ್ಷಕ ವರ್ಗಕ್ಕೆ ಸಿನಿಮಾ ತನ್ನ ಮೊದಲ ವೈಭವಕ್ಕೆ ಮರಳಲಾರದು ಎನ್ನುವ ಸತ್ಯ ಅರಗಿಸಿಕೊಳ್ಳಲು ಆಗುತ್ತಿಲ್ಲ. ಅವರದೇನಿದ್ದರೂ ವಾಸ್ತವವನ್ನು ಎದುರಿಸಲಾಗದ ಆತಂಕ ಮತ್ತು ತಲ್ಲಣ.

---೦೦೦---

-ರಾಜಕುಮಾರ.ವ್ಹಿ.ಕುಲಕರ್ಣಿ (ಕುಮಸಿ), ಬಾಗಲಕೋಟೆ 




Wednesday, February 5, 2014

ನನ್ನೂರಲ್ಲಿ ಕೊಲೆಯಾದ ಗಾಂಧಿ

             ಮೊನ್ನೆ ಮೊನ್ನೆ ನನ್ನೂರಲ್ಲಿ ಗಾಂಧಿ ಕೊಲೆಯಾಯ್ತು. ನಡೆದ ಘಟನೆ ಹೇಳದೆ ಹೋದರೆ ೧೯೪೮ ರಲ್ಲೇ ಕೊಲೆಯಾದ ಗಾಂಧಿ ಅದು ಹೇಗೆ ಮತ್ತೊಮ್ಮೆ ಕೊಲೆಯಾಗಲು ಸಾಧ್ಯ ಎನ್ನುವ ಗೊಂದಲ ನಿಮ್ಮಲ್ಲಿ ಉಂಟಾಗಬಹುದು. ಗೊಂದಲ ಉಂಟಾಗದಿರಲೆಂದೇ ಹೇಳುತ್ತಿದ್ದೇನೆ ಕೇಳಿ. ನನ್ನೂರಿನ ಶಾಲೆಯ ಪಕ್ಕದಲ್ಲಿ ವಿಶಾಲವಾದ ಬಯಲಿದೆ. ಅದು ಸರ್ಕಾರಕ್ಕೆ ಸೇರಿದ ಜಾಗ. ಆ ಬಯಲು ಜಾಗದಲ್ಲಿ ಊರ ಮಕ್ಕಳು ಆಡಿಕೊಂಡು ಮತ್ತು ಜಾನುವಾರುಗಳು ಅಲೆದಾಡಿಕೊಂಡು ಇರುತ್ತಿದ್ದವು. ಒಟ್ಟಿನಲ್ಲಿ ಯಾವುದೋ ಒಂದು ರೀತಿಯಲ್ಲಿ ಆ ಜಾಗ ಊರಿನವರ ಉಪಯೋಗಕ್ಕೆ ಬರುತ್ತಿತ್ತು. ಕೆಲವೊಮ್ಮೆ ಅದು ಊರಿನವರ ಮದುವೆಗೆ ಛತ್ರವಾಗಿಯೋ ಇಲ್ಲವೇ ಸರ್ಕಾರಿ ಕಾರ್ಯಕ್ರಮಗಳಿಗಾಗಿಯೋ ಉಪಯೋಗವಾಗುತ್ತಿದ್ದದ್ದುಂಟು. ಹೀಗೆ ಅನೇಕ ವರ್ಷಗಳ ಕಾಲ  ಯಾವ ಅಡೆತಡೆಯೂ ಇಲ್ಲದೆ ಊರಿನ ಎಲ್ಲ ಜಾತಿ ಧರ್ಮದವರು ತಮಗೆ ಅಗತ್ಯವೆನಿಸಿದಾಗಲೆಲ್ಲ ಆ ಜಾಗವನ್ನು ಬಳಸಿಕೊಳ್ಳುತ್ತಿದ್ದರು. ಇಷ್ಟು ದಿನ ಅದಕ್ಕೆ ಯಾರ ತಂಟೆ ತಕರಾರು ಇರಲಿಲ್ಲ. ಆದರೆ ಇದ್ದಕ್ಕಿದ್ದಂತೆ ಒಂದು ದಿನ ಒಂದು ಜಾತಿಯ ಜನ ತಮ್ಮ ಇಷ್ಟ ದೈವದ ಗುಡಿಯನ್ನು ಆ ಜಾಗದಲ್ಲಿ ಕಟ್ಟಲು ನಿರ್ಧರಿಸಿದರು. ಅದಕ್ಕೆ ಪೂರಕವಾಗಿ ತಮ್ಮ ದೇವರ ಹೆಸರಿರುವ ಫಲಕವನ್ನು ಅಲ್ಲಿ ನೆಟ್ಟು ಅದಕ್ಕೆ ಪೂಜೆ ಮಾಡಿ ಹೂಹಾರ ಹಾಕಿ ಅಲಂಕರಿಸಿದರು. ಇನ್ನು ಮುಂದೆ ಸರ್ಕಾರದ ಆ  ಬಯಲು ಜಾಗ ಒಂದು ನಿರ್ಧಿಷ್ಟ ಜಾತಿಯ ಸುಪರ್ದಿಗೆ ಸೇರಿತು ಎಂದು ಜನ ಮಾತನಾಡಿಕೊಂಡರು. ಕೆಲವರಂತೂ ತಮಗೇಕೆ ಈ ರಗಳೆ  ಎಂದು ಸುಮ್ಮನೆ ಕುಳಿತರೆ ಇನ್ನು ಕೆಲವರು ಊರಿನಲ್ಲಿ ಮುಂದೆ ಏನೋ ಅನಾಹುತವಾಗಲಿದೆ ಎಂದು ಭವಿಷ್ಯ ನುಡಿದರು. ಈ ನಡುವೆ ಊರಿನ ಇನ್ನೊಂದು ಜಾತಿಗೆ ಸೇರಿದ ಜನ ಆ ಜಾಗ ತಮಗೆ ಸೇರಬೇಕೆಂದು ತಕರಾರು ತೆಗೆದರು. ತಮ್ಮ ಜಾತಿಗೆ ಸೇರಿದ ಪ್ರಬಲ ನಾಯಕನ ಹೆಸರಿನಲ್ಲಿ ಅಲ್ಲೊಂದು ಸಮುದಾಯ ಭವನ ಸ್ಥಾಪಿಸಿ ಆ ಜಾಗವನ್ನು ತಮ್ಮ ಒಡೆತನಕ್ಕೆ ತೆಗೆದುಕೊಳ್ಳಬೇಕೆಂಬ ಇರಾದೆ ಅವರದಾಗಿತ್ತು. ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಅಲ್ಲಿದ್ದ ದೇವರ ಹೆಸರಿನ ಫಲಕ ಮಾಯವಾಗಿ ಅಲ್ಲಿ ಪ್ರಭಾವಿ ನಾಯಕನ ಹೆಸರಿನ ಫಲಕ ಎದ್ದು ನಿಂತಿತು. ತಮ್ಮ ದೇವರಿಗೆ ಅವಮಾನವಾಯಿತೆಂದು ಭಾವಿಸಿದ ಇನ್ನೊಂದು ಗುಂಪು ರಾತ್ರೋರಾತ್ರಿ ಆ ಫಲಕವನ್ನು ನೆಲಸಮಗೊಳಿಸಿತು. ಅವರು ತಂದು ನೆಟ್ಟಿದ್ದನ್ನು ಇವರು, ಇವರು ತಂದು ನೆಟ್ಟಿದ್ದನ್ನು ಅವರು ಕಿತ್ತೆಸೆಯುವ ಈ ಪ್ರಕ್ರಿಯೆ ಅನೇಕ ದಿನಗಳಕಾಲ ಪುನರಾವರ್ತನೆಯಾಯಿತು. ಕೊನೆಗೊಂದು ದಿನ ಆ ಎರಡೂ ಗುಂಪುಗಳ ನಡುವೆ ಕಲ್ಲು ತೂರಾಟವಾಗಿ ಅನೇಕರಿಗೆ ಗಾಯಗಳಾದವು. ಕೆಲವರನ್ನು ಆಸ್ಪತ್ರೆಗೂ ಸೇರಿಸಲಾಯಿತು. ಬಿಕ್ಕಟ್ಟು ಉಲ್ಬಣಿಸಿದಾಗ ಪೊಲೀಸರು ಮಧ್ಯ ಪ್ರವೇಶಿಸಬೇಕಾಯಿತು. ಎರಡೂ ಗುಂಪಿನ ಪ್ರಮುಖರನ್ನು ಬಂಧಿಸಿ ಕರೆದೊಯ್ದು ಜೈಲಿನಲ್ಲಿಟ್ಟರು. ಆಯಾ ಜಾತಿಯವರು ಹಣ ಸೇರಿಸಿ ತಮ್ಮವರನ್ನು ಜೈಲಿನಿಂದ ಬಿಡಿಸಿಕೊಂಡು ಬರಬೇಕಾಯಿತು. ಊರಿನ ಈ ಸಮಸ್ಯೆ ಕೋರ್ಟ್ ಮೆಟ್ಟಿಲೇರಿದೆ. ಇನ್ನು ಇತ್ಯರ್ಥವಾಗಿಲ್ಲ. ಒಂದು ಕಾಲದಲ್ಲಿ ಸಹಬಾಳ್ವೆಯಿಂದ ಬದುಕಿ ಬಾಳಿದ ಊರು ಈಗ ತನ್ನ ಮಡಿಲಲ್ಲಿ ದ್ವೇಷದ ಕೆಂಡ ಇಟ್ಟುಕೊಂಡು ತಣ್ಣಗೆ ಮಲಗಿದೆ. ಒಬ್ಬರ ಮುಖ ಕಂಡರೆ ಇನ್ನೊಬ್ಬರಿಗೆ ಆಗುತ್ತಿಲ್ಲ. ಮಕ್ಕಳ ಆಟಕ್ಕೆ, ಜಾನುವಾರಗಳ ಓಡಾಟಕ್ಕೆ, ಊರಿನ ಮದುವೆ ಕಾರ್ಯಗಳಿಗೆ ಪ್ರಶಸ್ತವಾಗಿದ್ದ ಆ ಜಾಗ ಈಗ ನಿಷೇಧಿತ ಪ್ರದೇಶವಾಗಿ ಸುತ್ತಲೂ ಮುಳ್ಳು ಬೇಲಿಯನ್ನು ಕಟ್ಟಿಕೊಂಡು ನಿಂತಿದೆ. ಆ ಜಾಗದ ಎದುರು ನಿಂತಾಗಲೆಲ್ಲ ಗಾಂಧಿ ನೆನಪಾಗುತ್ತಾರೆ. ನನ್ನೂರಿನ ಜನರ ತಣ್ಣನೆಯ ಕ್ರೌರ್ಯ ಆ ಜಾಗದಲ್ಲಿ ಗಾಂಧಿಯನ್ನು ಕೊಲೆ ಮಾಡಿ ಮಲಗಿಸಿದಂತೆ ಭಾಸವಾಗುತ್ತದೆ.

             ಹೀಗೆ ನನ್ನೂರಲ್ಲಿ ಗಾಂಧಿಯನ್ನು ಕೊಲೆ ಮಾಡಿದ್ದು ಇದೆ ಮೊದಲೇನಲ್ಲ. ೧೯೯೧-೯೨ ರ ಸಮಯದಲ್ಲೂ ಆಗೊಮ್ಮೆ ಗಾಂಧಿಯನ್ನು ಕೊಲೆ ಮಾಡಲಾಗಿತ್ತು. ಅದು ಬಾಬರಿ ಮಸೀದಿ ನೆಲಸಮವಾದ ಘಳಿಗೆ. ಆಗಿನ್ನೂ ಈಗಿನಂತೆ ನೂರಾರು ಚಾನೆಲ್ ಗಳಿರಲಿಲ್ಲ. ಇದ್ದದ್ದು ಸರ್ಕಾರಿ ಸ್ವಾಮ್ಯದ ದೂರದರ್ಶನವೊಂದೆ. ದೂರದ ಉತ್ತರ ಪ್ರದೇಶದಲ್ಲಿ ಮಸೀದಿ ನೆಲಸಮವಾಯಿತೆಂಬ ಸುದ್ದಿ ದೂರದರ್ಶನದ ವಾರ್ತೆಯ ಮೂಲಕ ಬಂದು ತಲುಪುತ್ತಿದ್ದಂತೆಯೇ ಇಲ್ಲಿಯೂ ಒಂದಿಷ್ಟು ಆತಂಕ ಸೃಷ್ಟಿಯಾಯಿತು. ಜನರೆಲ್ಲ ತಮ್ಮ ತಮ್ಮ ಮನೆ ಸೇರಿದ ಪರಿಣಾಮ ರಸ್ತೆಗಳೆಲ್ಲ ನಿರ್ಜನವಾದವು. ಆ ಸಮಯ ಮನೆಯ ಹೊರಗೆ ಕಾಲಿಡಲೂ ಹೆದರಿಕೆ. ನಂತರದ ದಿನಗಳ ಬದುಕು ನಿಜಕ್ಕೂ ಅದೊಂದು ನರಕ ಸದೃಶ್ಯ ಯಾತನೆ. ಯಾವುದೋ ಊರಲ್ಲಿ ಮುಸ್ಲಿಂ ಹುಡುಗನನ್ನು ಹಿಂದೂ ಯುವಕರು ಕೊಲೆ ಮಾಡಿದರಂತೆ, ಇಲ್ಲೇ ಪಕ್ಕದೂರಲ್ಲಿ ಹಿಂದೂ ಯುವತಿಯನ್ನು ಮುಸ್ಲಿಂ ಹುಡುಗರು ಅತ್ಯಾಚಾರವೆಸಗಿ ಕೊಲೆ ಮಾಡಿದರಂತೆ, ಮುಸ್ಲಿಮರೇ ಹೆಚ್ಚಿನ ಸಂಖ್ಯೆಯಲ್ಲಿರುವ ಪ್ರದೇಶದಲ್ಲಿನ ಹಿಂದೂಗಳ ಮನೆಯನ್ನು ಸುಟ್ಟುಹಾಕಲಾಗಿದೆಯಂತೆ, ಅನೇಕ ಮುಸ್ಲಿಂ ಕುಟುಂಬಗಳು ಊರು ಬಿಟ್ಟು ಪಲಾಯನಗೈದಿವೆಯಂತೆ ಹೀಗೆ ದಿನಕ್ಕೊಂದು ಬಗೆಯ ಸುದ್ದಿಗಳು ದಿನನಿತ್ಯದ ಬದುಕನ್ನು ಅಸಹನೀಯವಾಗಿಸಿದವು. ಹೀಗೆ ದೂರದಲ್ಲೆಲ್ಲೋ ನಡೆದ ಘಟನೆಗಳು ನನ್ನೂರಿನ ಚಿತ್ರಣವನ್ನೇ ಬದಲಿಸಿದವು. ಒಂದೇ ಊರಲ್ಲಿ ಅಕ್ಕಪಕ್ಕದ ಮನೆಗಳಲ್ಲಿ ವಾಸಿಸುತ್ತಿದ್ದ ಹಿಂದೂ ಮುಸ್ಲಿಂ ಕುಟುಂಬಗಳು ಪರಸ್ಪರ ಅನುಮಾನದಿಂದ ನೋಡುವಂತಾಯಿತು. ಪಕ್ಕದ ಮನೆಯ ಖಾದೀರ ಎಲ್ಲಿ ಬಂದು ತನ್ನನ್ನು  ಕೊಲೆ ಮಾಡುವನೋ ಎಂದು ಹಿಂದೂ ಧರ್ಮದ ಹಣಮಂತ ನಿದ್ದೆಯಿಲ್ಲದ ರಾತ್ರಿಯನ್ನು ಕಳೆಯುತ್ತಿದ್ದರೆ, ಹಣಮಂತ ನನ್ನ ಕುಟುಂಬವನ್ನೇ ಮುಗಿಸಲು ಹೊಂಚು ಹಾಕಿರಬಹುದೆಂಬ ಅನುಮಾನ ಖಾದೀರನನ್ನು ಕಾಡುತ್ತಿತ್ತು. ಈ ಪರಸ್ಪರ ಅನುಮಾನದಿಂದ ನೋಡುವ ಪ್ರಕ್ರಿಯೆ ದಿನದಿಂದ ದಿನಕ್ಕೆ ದಟ್ಟವಾಗಿ ಬೆಳೆಯುತ್ತಲೇ ಹೋಯಿತು. ಖಾದೀರ ಈ ನೆಲದವನೇ ಅಲ್ಲ ಎನ್ನುವ ಭ್ರಮೆ ಹಣಮಂತನಲ್ಲೂ ಮತ್ತು ಹಣಮಂತನಿಂದ ತನ್ನ ಧರ್ಮೀಯರಿಗೆ ಅನ್ಯಾಯವಾಗಿದೆ ಎನ್ನುವ ಅನುಮಾನ ಖಾದೀರನಲ್ಲೂ ಮೊಳಕೆಯೊಡೆದು ಅದು ನಂತರದ ಪೀಳಿಗೆಗೂ ಹರಿದು ಹೆಮ್ಮರವಾಗಿ ಬೆಳೆಯಿತು. ಖಾದೀರನ ಮಕ್ಕಳು ಊರಿನಲ್ಲಿದ್ದು ಊರಿನವರಾಗಿಲ್ಲ. ಈ ನೆಲ ನಮ್ಮದಲ್ಲ ಎನ್ನುವ ಭಾವನೆ ಅವರಲ್ಲಿ ದಟ್ಟವಾಗಿ ಬೆಳೆದು ಅವರನ್ನು ಪರಕೀಯರನ್ನಾಗಿಸಿದೆ. ಇವತ್ತಲ್ಲ ನಾಳೆ ನಾವು ನಮ್ಮವರನ್ನು ಸೇರಲು ನಮ್ಮದೇ ನೆಲದಲ್ಲಿ ಬದುಕು ಕಟ್ಟಿಕೊಳ್ಳಲು ಹೋಗಲಿದ್ದೇವೆ ಎನ್ನುವ ಭ್ರಮೆಯಲ್ಲೇ ಅವರು ಬದುಕುತ್ತಿರುವರು. ಈ ಕಡೆ ಹಣಮಂತನ ಮಕ್ಕಳಲ್ಲಿ ಬೇರೆ ಇನ್ನಾರೋ ಪರಕೀಯರು ನಮ್ಮ ಅವಕಾಶಗಳನ್ನು ಕಸಿದು ಕೊಳ್ಳುತ್ತಿರುವರೆನ್ನುವ ದ್ವೇಷ ಮನೆಮಾಡಿದೆ. ಪರಸ್ಪರ ದ್ವೇಷ ಹಗೆತನದ ಪರಿಣಾಮ ಅನ್ಯೋನ್ಯತೆ ಮರೆಯಾಗಿದೆ. ಪ್ರೀತಿ ಸ್ನೇಹಗಳ ಜಾಗದಲ್ಲಿ ಸೇಡು ದ್ವೇಷ ಮನೆಮಾಡಿವೆ. ಗಾಂಧಿ ಹೇಳಿದ್ದ ತತ್ವಗಳ ಕತ್ತು ಹಿಚುಕಿ ಸಾಯಿಸಿದ್ದೇವೆ. ಹೀಗೆ ಹಗೆತನವನ್ನು ಅನಾವರಣಗೊಳಿಸುವ ಭರದಲ್ಲಿ ನಾವು ನೇರವಾಗಿ ಕೈಹಾಕಿದ್ದು ಗಾಂಧಿಯ ಕುತ್ತಿಗೆಗೆ. ಗಾಂಧಿ ನನ್ನೂರಲ್ಲಿ ಮತ್ತೊಮ್ಮೆ ಕೊಲೆಯಾಗಿದ್ದಾರೆ. ಕೊಲೆ ಮಾಡಿದ್ದು ನಾವುಗಳೆ.

          ಮತ್ತೊಮ್ಮೆ ನನ್ನೂರಲ್ಲಿ ಗಾಂಧಿ ಕೊಲೆಯಾಯ್ತು. ಹೀಗೆ ಆಗುತ್ತಿರುವುದು ಅದು ಎಷ್ಟನೆ ಸಲವೋ ಗೊತ್ತಿಲ್ಲ. ಆದರೆ ಕೊಲೆಯಾದದ್ದಂತೂ ನಿಜ. ಹೇಗೆ ಕೊಲೆಯಾಯ್ತು ಎಂದು ಹೇಳುತ್ತೇನೆ ಅದೊಂದು ದಿನ ಇದ್ದಕ್ಕಿದ್ದಂತೆ ಊರಿನ ನಡುವೆಯೇ ಅದು ಹಗಲೆಂಬ ಹಗಲು ಹೊತ್ತಿನಲ್ಲೇ ಸರಾಯಿ ಅಂಗಡಿಯೊಂದು ತಲೆ ಎತ್ತಿ ನಿಂತಿತು. ಸರಾಯಿ ಅಂಗಡಿ ಇರುವ ಜಾಗ ಅದು ಅತ್ಯಂತ ಜನನಿಬಿಡ ಜಾಗವದು. ಊರಿನ ಜನ ತಮ್ಮ ದೈನಂದಿನ ಬಹುಪಾಲು ಕೆಲಸಗಳಿಗಾಗಿ ಆ ಸರಾಯಿ ಅಂಗಡಿಯ ಮುಂದಿನಿಂದಲೇ ಹಾದು  ಹೋಗಬೇಕು. ಶಾಲೆಗೆ ಹೋಗುವ ಮಕ್ಕಳು, ಹೆಣ್ಣುಮಕ್ಕಳು ನೀರು ತರಲು, ಬಸ್ ನಿಲ್ದಾಣಕ್ಕೆ, ಹೊಲದ ಕೆಲಸಗಳಿಗೆ ಹೀಗೆ ಅನೇಕ ಸಂದರ್ಭಗಳಲ್ಲಿ ಸರಾಯಿ ಅಂಗಡಿಯ ಎದುರಿನಿಂದಲೇ ನಡೆದು ಹೋಗಬೇಕು. ಆ ದಾರಿಯಲ್ಲಿ ಹೋಗುವಾಗಲೆಲ್ಲ ಅದರಲ್ಲೂ ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಹೆಚ್ಚು ಮುಜುಗರವಾಗುತ್ತಿತ್ತು. ಶಾಲಾ ಮಕ್ಕಳಂತೂ ಅತ್ಯಂತ ಕುತೂಹಲದಿಂದ ಆ ಅಂಗಡಿಯಕಡೆ ನೋಡುತ್ತಿದ್ದರು. ಕೆಲವರಂತೂ ತಮ್ಮ ಮನಸ್ಸನ್ನು ನಿಗ್ರಹಿಸಿಕೊಳ್ಳಲು ಸೋತು ಒಂದಿಷ್ಟು ಸರಾಯಿ ಸೇವಿಸಿಯೇ ಮನೆಗೆ ಹೋಗುತ್ತಿದ್ದರು. ಹಣವಿರುವ ಹಣವಂತರು ಕುಡಿದು ಕುಡಿದು ಬರಗೈ ದಾಸರಾದರೆ ಹಣವಿಲ್ಲದ ಬಡವರು ಕುಡಿತದ ಚಟಕ್ಕೆ ಸಾಲಮಾಡಿ ಆಸ್ತಿಯನ್ನು ಕಳೆದುಕೊಂಡು ಬೀದಿಗೆ ಬಂದರು. ಹೀಗಿದ್ದೂ ಸರಾಯಿ ಅಂಗಡಿಯನ್ನು ಸ್ಥಳಾಂತರಿಸಲು ಯಾರೂ ಮುಂದೆ ಬರಲಿಲ್ಲ. ಕೆಲವರು ಪ್ರಯತ್ನಿಸಿದರೂ ಊರಿನವರ ಬೆಂಬಲ ದೊರೆಯದೆ ಅದು ಪ್ರಯತ್ನವಾಗಿಯೇ ಉಳಿಯಿತು. ಮುಂದೊಂದು ದಿನ ಸರಾಯಿ ವ್ಯಸನಕ್ಕೆ ಬಲಿಯಾಗಿ ಊರಿನಲ್ಲಿ ಒಂದೆರಡು ಸಾವುಗಳೂ ಸಂಭವಿಸಿದವು. ಆಗಲೂ ಜನ ಎಚ್ಚೆತ್ತುಕೊಳ್ಳಲಿಲ್ಲ. ಸರಾಯಿ ಅಂಗಡಿಯ ಮಾಲೀಕ ಮಾತ್ರ ಜನರ ಚಟವನ್ನೇ ತನ್ನ ಅನುಕೂಲಕ್ಕೆ ಬಳಸಿಕೊಂಡು ದಿನದಿಂದ ದಿನಕ್ಕೆ ತನ್ನ ಸಂಪತ್ತನ್ನು ವೃದ್ಧಿಸಿಕೊಂಡ. ಸಾಲ ಕೊಟ್ಟು ಕುಡಿಸಿ ಬೇರೆಯವರ ಆಸ್ತಿಯನ್ನು ಕಬಳಿಸಿ ಕುಬೇರನಾದ.  ರಾಜಕೀಯ ಪ್ರವೇಶಿಸಿ ಮಂತ್ರಿಯಾಗುವ ಮಹತ್ವಾಕಾಂಕ್ಷೆಯನ್ನು ಬೆಳೆಸಿಕೊಂಡ. ಆದರೆ ಊರು ಮಾತ್ರ ಕುಡುಕರ ಗೂಡಾಯಿತು. ಅಬಾಲವೃದ್ಧರಾದಿಯಾಗಿ ಎಲ್ಲರೂ ಕುಡಿತದ ಚಟಕ್ಕೆ ಬಲಿಯಾದರು. ದುರಂತವೆಂದರೆ ಸರಾಯಿ ಅಂಗಡಿಯ ಎದುರಿಗಿರುವ ಗಾಂಧಿಯ ಪ್ರತಿಮೆ ಇದೆಲ್ಲದಕ್ಕೂ  ಮೂಕ ಸಾಕ್ಷಿಯಾಗಿ ನಿಂತಿದೆ. ಗಾಂಧಿಯನ್ನು ನನ್ನೂರಲ್ಲಿ ಮತ್ತೊಮ್ಮೆ ಕೊಲೆ ಮಾಡಲಾಗಿದೆ.

             ಗಾಂಧಿಯನ್ನು ನನ್ನೂರಿನ ಜನ ಮತ್ತೊಮ್ಮೆ ಸಾಯಿಸಿದರು. ಇದೇನೂ ಆಶ್ಚರ್ಯದ ವಿಷಯವಲ್ಲ. ಹೀಗೆ ಗಾಂಧಿಯನ್ನು ನನ್ನೂರಲ್ಲಿ ಅನೇಕ ಸಲ ಸಾಯಿಸಲಾಗಿದೆ. ಈ ಸಲ ಗಾಂಧಿಯನ್ನು ಸಾಯಿಸಿದವರು ಈ ಗುಡಿಕೈಗಾರಿಕೆಗಳ ಜನ. ಕೆಲವು ವರ್ಷಗಳ ಹಿಂದೆ ನನ್ನೂರಿನ ಈ ಕಂಬಾರ, ಕುಂಬಾರ, ನೇಕಾರ, ಬಡಿಗ ಇವರೆಲ್ಲ ಹಠಾತ್ತನೆ ಇನ್ನು ಮುಂದೆ ನಮ್ಮ ನಮ್ಮ ಕುಲದ ಕೆಲಸವನ್ನು ಮಾಡುವುದಿಲ್ಲವೆನ್ನುವ ನಿರ್ಧಾರಕ್ಕೆ ಬಂದರು. ಅವರ ಆ ನಿರ್ಧಾರಕ್ಕೆ ಊರಿಗೆ ಸಮೀಪದಲ್ಲಿ ಕಾರ್ಖಾನೆಯೊಂದು ತಲೆ ಎತ್ತಿದ್ದೆ ಕಾರಣವಾಗಿತ್ತು. ಕಾರ್ಖಾನೆಯ ಕೆಲಸ ಮತ್ತು ತಿಂಗಳ ಸಂಬಳದ ಆಮಿಷ ಅವರನ್ನು ಹೀಗೆ ಮಾಡುವಂತೆ ಪ್ರಚೋದಿಸಿತ್ತು. ಅವರ ಆ ನಿರ್ಧಾರ ನೇರವಾಗಿ ಪರಿಣಾಮ ಬೀರಿದ್ದು ರೈತರ ಕೃಷಿ ಕಾರ್ಯದ ಮೇಲೆ. ತಮ್ಮ ದೈನಂದಿನ ಕೆಲಸಗಳಿಗಾಗಿ ಕಂಬಾರ, ಬಡಿಗರಂಥ ವೃತ್ತಿ ಪರಿಣಿತರನ್ನು ಅವಲಂಬಿಸಿದ್ದ ರೈತಾಪಿ ವರ್ಗ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಯಿತು. ದೊಡ್ಡ ರೈತರು ಯಂತ್ರೋಪಕರಣಗಳ ಮೊರೆ ಹೋದರೆ ಸಣ್ಣ ರೈತರಿಗೆ ವ್ಯವಸಾಯ ಬಹುದೊಡ್ಡ ಹೊರೆಯಾಗಿ ಕಾಣತೊಡಗಿತು. ಪರಿಣಾಮವಾಗಿ ಅವರೆಲ್ಲ ತಮ್ಮ ಕೃಷಿ ಭೂಮಿಯನ್ನು ವಿಲೇವಾರಿ ಮಾಡಿ ಕೃಷಿ ಕೆಲಸದಿಂದ ನಿವೃತ್ತರಾದರು. ರೈತರ ಮಕ್ಕಳು ಈ ಬಡಿಗ, ಕುಂಬಾರ, ಕಂಬಾರರ ಮಕ್ಕಳಂತೆ ತಾವುಸಹ ಕಾರ್ಖಾನೆಯಲ್ಲಿ ದಿನಗೂಲಿಗಳಾಗಿ ದುಡಿಯಲಾರಂಭಿಸಿದರು. ಒಂದು ಕಾಲದಲ್ಲಿ ಸ್ವಉದ್ಯೋಗಗಳಿಂದ ಸ್ವಾವಲಂಬಿಗಳಾಗಿ ಬದುಕುತ್ತಿದ್ದ ನನ್ನೂರಿನ ಜನ ಕಾಲಾನಂತರದಲ್ಲಿ ಪರಾವಲಂಬಿಗಳಾದರು. ಮುಂದೊಂದು ದಿನ ಕಾರ್ಖಾನೆಯೂ ಉತ್ಪಾದನೆ ಇಲ್ಲದೆ ಬಾಗಿಲು ಮುಚ್ಚಿತು. ಆಗ ನಿಜಕ್ಕೂ ಸಂಕಷ್ಟಕ್ಕೆ ಸಿಲುಕಿದವರು ಇದೇ ರೈತರು ಮತ್ತು ಸಣ್ಣ ಸಣ್ಣ ವೃತ್ತಿಯವರು. ಗಾಂಧಿಯ ಕೊಲೆಗೈದ ಪರಿಣಾಮವಿದು. ಗಾಂಧಿ ಆ ಕಾಲಕ್ಕೆ ಹೇಳಿದ್ದ ಗುಡಿಕೈಗಾರಿಕೆಗಳಿಂದ ಸ್ವಾವಲಂಬಿ ಬದುಕು ಸಾಧ್ಯವೆಂದು. ಆದರೆ ಗಾಂಧಿಯ ಮಾತನ್ನು  ಕೇಳದೆ ಇವರೆಲ್ಲ ಆತನ ಕೊಲೆ ಮಾಡಿದರು.

ಕೊನೆಯ ಮಾತು 


        ಗಾಂಧಿಯವರ ತತ್ವ, ಆದರ್ಶ ಮತ್ತು ಸಿದ್ದಾಂತಗಳು ಮರೆಯಾಗುತ್ತಿವೆ ಎನ್ನುವುದನ್ನು ನಾನು ಗಾಂಧಿ ಕೊಲೆಯಾಯ್ತು ಎನ್ನುವ ಧಾಟಿಯಲ್ಲಿ ಹೇಳಿದ್ದೇನೆ. ಹಾಗೆಯೇ ನನ್ನೂರು ಎನ್ನುವುದು ಇಲ್ಲಿ ಅದೊಂದು ರೂಪಕ ಮಾತ್ರ. ಅದು ಯಾವ ಊರಾದರೂ ಆಗಿರಬಹುದು. ಗಾಂಧಿ ಕಂಡ ಸ್ವಾಭಿಮಾನ ಮತ್ತು ರಾಮರಾಜ್ಯದ ಕನಸು ಭಗ್ನಗೊಂಡಿದೆ. ನಮ್ಮೊಳಗಿನ ದ್ವೇಷ, ಅಸೂಯೆ, ಹಗೆತನ ಮತ್ತು ದುಷ್ಟ ಗುಣಗಳ ಮೂಲಕ ಗಾಂಧಿಯನ್ನು ಅದೆಷ್ಟೋ ಸಲ ಕೊಲೆ ಮಾಡಿದ್ದೇವೆ. ಗಾಂಧಿಯನ್ನು ಭೌತಿಕವಾಗಿ ಕೊಲೆ ಮಾಡಿದ್ದು ಒಂದೇ ಸಲವಾದರೂ ಸೈದ್ದಾಂತಿಕವಾಗಿ ಕೊಲೆ ಮಾಡಿದ ಅನೇಕ ಸಂದರ್ಭಗಳಿವೆ. ಹೀಗೆ ಸ್ವತಂತ್ರ ಭಾರತದಲ್ಲಿ ಗಾಂಧಿ ನಿರಂತರವಾಗಿ ಕೊಲೆಯಾಗುತ್ತಿರುವರು.

-ರಾಜಕುಮಾರ.ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 

Thursday, January 16, 2014

ಸಾಹಿತ್ಯ ಸಮ್ಮೇಳನ ಮತ್ತು ಪ್ರಚಲಿತ ಸವಾಲುಗಳು




(ಚಿತ್ರ ಕೃಪೆ: www.oneindia.com)



           ೮೦ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತೆರೆ ಬಿದ್ದಾಯಿತು. ಮೂರು ದಿನಗಳ ಕಾಲ ಅದ್ದೂರಿಯಾಗಿ ನಡೆದ ಸಮ್ಮೇಳನದ ಫಲಶ್ರುತಿ ಅದು ಎಷ್ಟರ ಮಟ್ಟಿಗೆ ನಾಡು ನುಡಿಯ ಬೆಳವಣಿಗೆಗೆ ಸಹಾಯವಾಗಲಿದೆಯೋ ಗೊತ್ತಿಲ್ಲ. ಪ್ರತಿವರ್ಷ ಸಮ್ಮೇಳನ ಏರ್ಪಡಿಸಿದಾಗ ಕೊನೆಯ ದಿನ ಒಂದಿಷ್ಟು ನಿರ್ಣಯಗಳನ್ನು ತೆಗೆದುಕೊಂಡು ಅವುಗಳನ್ನು ಕಾರ್ಯರೂಪಕ್ಕೆ ತರುವ ಹೊಣೆಗಾರಿಕೆಯನ್ನು ಸರ್ಕಾರದ ಹೆಗಲಿಗೇರಿಸಿ ನಮ್ಮ ಸಾಹಿತಿಗಳು ತಮ್ಮ ಕೆಲಸ ಇಷ್ಟಕ್ಕೇ ಮುಗಿಯಿತು ಎಂದು ಕೈತೊಳೆದುಕೊಳ್ಳುವುದು ಪರಂಪರಾಗತವಾದ  ರೂಢಿಯಾಗಿ ಬಿಟ್ಟಿದೆ. ಹೀಗೆ ತೆಗೆದುಕೊಂಡ ನಿರ್ಣಯಗಳು ನಂತರದ ದಿನಗಳಲ್ಲಿ ಕಾರ್ಯರೂಪಕ್ಕೆ ಬಂದಿವೆಯೋ ಇಲ್ಲವೋ ಎಂದು ತಿಳಿದುಕೊಳ್ಳಲು ಯಾರೂ ಹೋಗಲಾರರು. ಮತ್ತೊಂದು ಸಮ್ಮೇಳನ ಮತ್ತೊಂದಿಷ್ಟು ನಿರ್ಣಯಗಳು ಇದು ಪ್ರತಿವರ್ಷ ಪುನರಾವರ್ತನೆಯಾಗುತ್ತಿದೆ. ನಮ್ಮನ್ನಾಳುವ ಪ್ರಭುಗಳಿಗೂ ಹೀಗೆ ಸಮ್ಮೇಳನಗಳಲ್ಲಿ ನಿರ್ಣಯಗಳನ್ನು ತೆಗೆದುಕೊಳ್ಳುವುದು ಅದೊಂದು ಸಾಹಿತಿಗಳ ಚಟ ಎನ್ನುವಷ್ಟು ಸಹಜವಾಗಿದೆ. ಜೊತೆಗೆ ದುರಂತದ ಸಂಗತಿ ಎಂದರೆ ನಮ್ಮ ಸಾಹಿತಿ ಗಣ್ಯರು ಸಾಹಿತ್ಯ ಸಮ್ಮೇಳನದಲ್ಲಿ ತೆಗೆದುಕೊಳ್ಳುವ ನಿರ್ಣಯಗಳೆಲ್ಲ ಭಾಷೆಯ ಸುತ್ತಲೇ ಗಿರಕಿ ಹೊಡೆಯುತ್ತವೆ. ಕನ್ನಡ ಶಾಲೆಗಳನ್ನು ಮುಚ್ಚ ಬೇಡಿ, ಕೋರ್ಟಿನಲ್ಲಿ ಕನ್ನಡ ಬಳಸಿ, ಆಡಳಿತದಲ್ಲಿ ಕನ್ನಡ ಬಳಸಿ, ಮಕ್ಕಳಿಂದ ನಾಡಗೀತೆ ಹಾಡಿಸಿ ಹೀಗೆ ಇಂಥದ್ದೇ ಹತ್ತು ಹಲವು ಸಲಹೆಗಳನ್ನು ನೀಡಿ ಕೃತಾರ್ಥರಾಗುವರು. ನಿಜಕ್ಕೂ ಸಾಹಿತ್ಯ ಸಮ್ಮೇಳನದ ವೇದಿಕೆ ಕನ್ನಡ ಭಾಷೆಯ ಜೊತೆಗೆ ಸಮಾಜದ ಸಮಸ್ಯೆಗಳಿಗೂ ಮುಖಾಮುಖಿಯಾಗಬೇಕು.

ಶಿಕ್ಷಣೋದ್ಯಮದ ವಿರುದ್ಧ ಆಕ್ರೋಶವಿಲ್ಲ 


            ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಶಾಲೆಗಳನ್ನು ಮುಚ್ಚಬೇಡಿ ಎಂದು ಸರ್ಕಾರದೆದುರು ಅಲವತ್ತುಕೊಳ್ಳುವ  ಸಾಹಿತ್ಯ ವಲಯ ಇವತ್ತು ಶಿಕ್ಷಣ ಕ್ಷೇತ್ರ ಒಂದು ಉದ್ಯಮವಾಗಿ ಬದಲಾಗುತ್ತಿರುವುದರ ವಿರುದ್ಧ ಆಕ್ರೋಶದ ಮಾತುಗಳನ್ನಾಡಲು ಸಿದ್ಧರಿಲ್ಲ. ೮೦ನೇ ಸಾಹಿತ್ಯ ಸಮ್ಮೇಳನ ನಡೆದ ಕೊಡಗಿನ ಆ ನೆಲದಲ್ಲೇ ಇವತ್ತು ಅನೇಕ ಕುಟುಂಬಗಳು ಶಿಕ್ಷಣವನ್ನು ಕುಟುಂಬದ ಖಾಸಗಿ ಉದಮ್ಯವನ್ನಾಗಿ ಮಾಡಿಕೊಂಡಿರುವರು. ಕರ್ನಾಟಕ ರಾಜ್ಯದಲ್ಲಿ ಶಿಕ್ಷಣ ಕ್ಷೇತ್ರ ಖಾಸಗಿಯವರ ಸುಪರ್ದಿಗೆ ಒಳಪಟ್ಟು ಅನೇಕ ದಶಕಗಳಾದವು. ಈ ಶಿಕ್ಷಣದ ಖಾಸಗೀಕರಣ ಇಂಗ್ಲಿಷ್ ಮಾಧ್ಯಮದ ಶಾಲೆಗಳ ಸ್ಥಾಪನೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತ ಇನ್ನೊಂದೆಡೆ ಕನ್ನಡ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣದ ಕೊರತೆಯನ್ನು ಹುಟ್ಟುಹಾಕುತ್ತಿದೆ. ಕನ್ನಡ ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯುತ್ತಿಲ್ಲ ಎಂದರಿತ ಬಹುಪಾಲು ಪಾಲಕರು ಖಾಸಗಿ ಇಂಗ್ಲಿಶ್ ಶಾಲೆಗಳತ್ತ ವಲಸೆ ಹೋಗುತ್ತಿರುವರು. ಗುಣಾತ್ಮಕ ಶಿಕ್ಷಣದ ಮೂಲಕ ಮಕ್ಕಳ ಬದುಕನ್ನು ಕಟ್ಟಿಕೊಡಬೇಕೆನ್ನುವ ಪಾಲಕರ ಈ ಮನೋಭಾವವನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳು ಲಕ್ಷಾಂತರ ರುಪಾಯಿಗಳನ್ನು ಶುಲ್ಕದ ರೂಪದಲ್ಲಿ ಪಡೆಯುತ್ತಿರುವರು. ಇವತ್ತು ನಾಡಿನ ಉದ್ಯಮಿಗಳು ಮತ್ತು ರಾಜಕಾರಣಿಗಳು ಮಾತ್ರವಲ್ಲದೆ ನೆರೆಯ ರಾಜ್ಯಗಳ ಉದ್ಯಮಿಗಳೂ ಸಹ ರಾಜ್ಯಕ್ಕೆ ಬಂದು ಶಿಕ್ಷಣದ ಮೇಲೆ ಬಂಡವಾಳ ಹೂಡುತ್ತಿರುವರು. ಒಂದು ಕಾಲದಲ್ಲಿ ಶಾಲೆಗಳ ಸ್ಥಾಪನೆ ಎನ್ನುವುದು ಸಾಮಾಜಿಕ ಸೇವೆ ಎಂದೇ ಪರಿಗಣಿಸಲ್ಪಟ್ಟಿದ್ದ ನಾಡಿನಲ್ಲಿ ಇವತ್ತು ಶಿಕ್ಷಣ ಲಾಭತರುವ ಬೃಹತ್ ಉದ್ಯಮವಾಗಿ ಬದಲಾಗಿದೆ. ಮಠ ಮಾನ್ಯಗಳು ಮತ್ತು ಸಂಘ ಸಂಸ್ಥೆಗಳು  ಮಾತ್ರವಲ್ಲದೆ ಶ್ರೀಮಂತ ಕುಟುಂಬಗಳು ಇವತ್ತು ಶಾಲಾ ಕಾಲೇಜುಗಳನ್ನು ಸ್ಥಾಪಿಸಿ ಶಿಕ್ಷಣವನ್ನು ಕುಟುಂಬದ ಬಂಡವಾಳ ಹೂಡಿ ಲಾಭ ಮಾಡಿಕೊಳ್ಳುವ ಉದ್ದಿಮೆಯಾಗಿ ಪರಿವರ್ತಿಸಿರುವರು. ಪರಿಸ್ಥಿತಿ ಹೀಗಿರುವಾಗ ಇವತ್ತು ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಶಾಲೆಗಳನ್ನು ಮುಚ್ಚಬೇಡಿ, ಇಂಗ್ಲಿಷ್ ಶಾಲೆಗಳಲ್ಲಿಯೂ ನಾಡಗೀತೆ ಹಾಡಿಸಿ ಎನ್ನುವ ನಿರ್ಣಯಗಳನ್ನು ತೆಗೆದುಕೊಳ್ಳುವುದರಿಂದ ಯಾವುದೇ ಪ್ರಯೋಜನವಾಗಲಾರದು. ಬದಲಾಗಿ ಹತ್ತನೇ ತರಗತಿಯವರೆಗೂ ಇಂಗ್ಲಿಷ್ ಶಾಲೆಗಳನ್ನು ಮುಚ್ಚಿಸಿ ಎನ್ನುವ ಆಕ್ರೋಶದ ಮಾತುಗಳು ಕೇಳಿಬರಬೇಕು. ಏಕೆಂದರೆ  ಶಿಕ್ಷಣವನ್ನು ಉದ್ಯಮದ ಸ್ವರೂಪದಿಂದ ಬಿಡುಗಡೆಗೊಳಿಸುವುದು ಇವತ್ತಿನ ತುರ್ತು ಅಗತ್ಯಗಳಲ್ಲೊಂದು.

ಮಹಿಳಾ ಗೋಷ್ಠಿ ಮತ್ತು ಸ್ತ್ರೀ ಸಮಸ್ಯೆ 


              ಪ್ರತಿವರ್ಷ ಸಾಹಿತ್ಯ ಸಮ್ಮೇಳನದಲ್ಲಿ ಮಹಿಳಾ ಸಮಸ್ಯೆಗಳನ್ನು ಚರ್ಚಿಸಲು ಹಾಗೂ ಪರಿಹಾರಗಳನ್ನು ಸೂಚಿಸಲು ಪ್ರತ್ಯೇಕ ಮಹಿಳಾ ಗೋಷ್ಠಿಯನ್ನು ಏರ್ಪಡಿಸುವುದು ಒಂದು ಸಂಪ್ರದಾಯದಂತೆ ನಡೆದುಕೊಂಡು ಬಂದಿದೆ. ಮಹಿಳಾ ಲೇಖಕಿಯರನ್ನು ಒಂದುಗೂಡಿಸಿ ಆ ಮೂಲಕ ಮಹಿಳೆಯರ ಪ್ರಚಲಿತ ಸಮಸ್ಯೆಗಳಿಗೆ ಕನ್ನಡಿ ಹಿಡಿಯುವ ಈ ಪ್ರಯತ್ನ ನಿಜಕ್ಕೂ ಶ್ಲಾಘನೀಯ. ಆದರೆ ಸಮ್ಮೇಳನದ ವೇದಿಕೆಯಲ್ಲಿ ಹೀಗೆ ಒಂದೆಡೆ ಸೇರುವ ಮಹಿಳಾ ಲೇಖಕಿಯರ ಬಹುಪಾಲು ಚರ್ಚೆ ಮಹಿಳಾ ಸಾಹಿತ್ಯಕ್ಷೆತ್ರಕ್ಕಷ್ಟೇ ಸೀಮಿತವಾಗುತ್ತಿದೆ. ಸಾಹಿತ್ಯಕ್ಕೆ ಮಹಿಳೆಯರ ಕೊಡುಗೆ, ಸಾಹಿತ್ಯ ವಲಯದಲ್ಲಿನ ಲಿಂಗ ತಾರತಮ್ಯ, ಅನುವಾದಕಿಯಾಗಿ ಸ್ತ್ರೀ, ಲೇಖಕಿಯಾಗಿ ಸ್ತ್ರೀ ಹೀಗೆ ಸಾಹಿತ್ಯ ಸಮ್ಮೇಳನಗಳಲ್ಲಿ  ಮಹಿಳಾ ಲೇಖಕಿಯರ ಮಹಿಳಾಪರ ಚರ್ಚೆ ಯಲ್ಲಿ ಹೆಣ್ಣನ್ನು  ಕೇವಲ ಲೇಖಕಿಯಾಗಿ ಮಾತ್ರ ನೋಡಲಾಗುತ್ತಿದೆ. ಅವರುಗಳ ಚರ್ಚೆ  ಸಾಹಿತ್ಯವಲಯವನ್ನು ದಾಟಿ ಹೋಗುತ್ತಿಲ್ಲ. ದೇವದಾಸಿಯರ ಬಗ್ಗೆ, ಶೋಷಿತ ಹೆಣ್ಣಿನ ಬಗ್ಗೆ ತಮ್ಮ ಕಥೆ, ಕಾವ್ಯ, ಕಾದಂಬರಿಗಳಲ್ಲಿ ಪುಂಖಾನುಪುಂಖವಾಗಿ ಬರೆಯುವ ಮಹಿಳಾ ಲೇಖಕಿಯರು ಯಾವತ್ತೂ ಸಾಹಿತ್ಯ ಸಮ್ಮೇಳನದ ಚರ್ಚಾ ವೇದಿಕೆಗೆ ತಮ್ಮ ಬರವಣಿಗೆಗೆ ವಸ್ತುವಾಗುವ ಹೆಣ್ಣಿನ ಸಮಸ್ಯೆಗಳನ್ನು ತೆಗೆದುಕೊಂಡು ಹೋಗುತ್ತಿಲ್ಲ.

ದಲಿತ ಸಾಹಿತ್ಯ ಗೋಷ್ಠಿ 


          ದಲಿತ ಸಾಹಿತ್ಯ ಚರ್ಚೆಗೆ ಸಾಹಿತ್ಯ ಸಮ್ಮೇಳನದಲ್ಲಿ ಪ್ರತ್ಯೇಕ ಗೋಷ್ಠಿಗೆ ಅವಕಾಶ ಒದಗಿಸಬೇಕೆನ್ನುವುದು ಬಹುವರ್ಷಗಳ ಬೇಡಿಕೆಯಾಗಿತ್ತು. ಕೆಲವು ಸಂದರ್ಭಗಳಲ್ಲಿ ಸಾಹಿತ್ಯ ಸಮ್ಮೇಳನಕ್ಕೆ ಪರ್ಯಾಯವಾಗಿ ದಲಿತ ಸಾಹಿತ್ಯ ಸಮ್ಮೇಳನವನ್ನು ಏರ್ಪಡಿಸಿದ ಉದಾಹರಣೆಯೂ ಉಂಟು. ಈ ವರ್ಷದ ೮೦ನೇ ಸಾಹಿತ್ಯ ಸಮ್ಮೇಳನದಲ್ಲಿ ದಲಿತ ಸಾಹಿತ್ಯ  ಗೋಷ್ಠಿಗೆ ವೇದಿಕೆ ಒದಗಿಸಿದ್ದು ನಿಜಕ್ಕೂ ಅದೊಂದು ಉತ್ತಮ ಪ್ರಯತ್ನ. ಅಧ್ಯಕ್ಷತೆ ವಹಿಸಿ ಮಾತನಾಡಿದ ಸಿದ್ದಲಿಂಗಯ್ಯನವರು ದಲಿತರ ಸಮಸ್ಯೆಗಳನ್ನು ವೈಯಕ್ತಿಕ ನೆಲೆಯಲ್ಲಿ ನೋಡದೆ ಸಾಮಾಜಿಕ ನೆಲೆಯಲ್ಲಿ ನೋಡುವಂತಾಗಬೇಕೆನ್ನುವ ಆಶಯ ವ್ಯಕ್ತಪಡಿಸಿದರು. ಹೀಗೆ ತಳ ಸಮುದಾಯದ ಸಮಸ್ಯೆಗಳನ್ನು ಚರ್ಚಿಸುವಾಗಲೆಲ್ಲ ನಮ್ಮ ದಲಿತ ಸಾಹಿತಿಗಳು ತಮ್ಮ ಚರ್ಚೆಯನ್ನು ಅಂಬೇಡ್ಕರ್ ವಿಚಾರಗಳಿಗೆ ಮತ್ತು ಮೇಲ್ವರ್ಗದವರನ್ನು ತೆಗಳುವುದಕ್ಕೆ ಸೀಮಿತಗೊಳಿಸುತ್ತಿರುವರು. ಯಾವ ದಲಿತ ಬರಹಗಾರರೂ ದಲಿತ ಸಮುದಾಯವನ್ನು ಆರ್ಥಿಕವಾಗಿ ಪ್ರಬಲರಾದ ಮತ್ತು ದುರ್ಬಲರಾದ ಎಂದು ಎರಡು ಬಣಗಳಾಗಿ ವಿಂಗಡಿಸಿ ಚರ್ಚಿಸಲು ಮುಂದೆ ಬರುತ್ತಿಲ್ಲ. ಆರ್ಥಿಕವಾಗಿ ಪ್ರಬಲರಾದ ದಲಿತರು ಇವತ್ತಿಗೂ ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಳ್ಳುತ್ತಿರುವುದು ಒಂದರ್ಥದಲ್ಲಿ ಅದು ಆರ್ಥಿಕವಾಗಿ ದುರ್ಬಲರಾದ ದಲಿತರಿಗೆ ಮಾಡುತ್ತಿರುವ ಅನ್ಯಾಯ. ದಲಿತ ರಾಜಕಾರಣಿಗಳ ಮತ್ತು ದಲಿತ ಅಧಿಕಾರಿಗಳ ಮಕ್ಕಳು ಸರ್ಕಾರ ಕೊಡಮಾಡುತ್ತಿರುವ ಸೌಲಭ್ಯಗಳನ್ನು ಬಳಸಿಕೊಳ್ಳುವುದನ್ನು ನಿಲ್ಲಿಸಿದಲ್ಲಿ ಆರ್ಥಿಕವಾಗಿ ಹಿಂದುಳಿದ ದಲಿತರಿಗೆ ಇನ್ನು ಹೆಚ್ಚಿನ ಸವಲತ್ತುಗಳನ್ನು  ಒದಗಿಸಲು ಸರ್ಕಾರಕ್ಕೆ ಸಾಧ್ಯವಾಗುವುದು. ಇಂಥದ್ದೊಂದು ಚರ್ಚೆಗೆ ಸಾಹಿತ್ಯ ಸಮ್ಮೇಳನದ ದಲಿತ ಸಾಹಿತ್ಯ ಗೋಷ್ಠಿ ಮುನ್ನುಡಿ ಬರೆಯಬೇಕು. ಆದರೆ ವೇದಿಕೆಯಲ್ಲಿ ನಿಂತು ಮಾತನಾಡುವ ನಮ್ಮ ಬಹುಪಾಲು ದಲಿತ ಸಾಹಿತಿಗಳಿಗೆ ಸರ್ಕಾರದ ಸೌಲಭ್ಯಗಳಿಂದ ತಮ್ಮ ಮಕ್ಕಳನ್ನು ವಂಚಿತರನ್ನಾಗಿಸುವ ಇಚ್ಛೆ ಇಲ್ಲದಿರುವುದರಿಂದ ಅವರಿಂದ ಅಂಥದ್ದೊಂದು ಪ್ರಾಮಾಣಿಕ ಪ್ರಯತ್ನವನ್ನು ನಿರೀಕ್ಷಿಸುವುದು ಅಸಾಧ್ಯದ ಸಂಗತಿ.

ರೈತಪರ ದನಿ ಮೊಳಗುತ್ತಿಲ್ಲ 


               ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆಯಲ್ಲಿ ರೈತಪರ ದನಿ ಮೊಳಗಿದ ಉದಾಹರಣೆಯೇ ಇಲ್ಲ. ನಮ್ಮ ಸಾಹಿತಿಗಳು ಯಾವತ್ತೂ ರೈತನ ಸಮಸ್ಯೆಗಳನ್ನು ಕುರಿತು ಮಾತನಾಡಲಾರರು. ಬೆಳೆಯುತ್ತಿರುವ ನಗರೀಕರಣ ಮತ್ತು ಕ್ಷಿಣೀಸುತ್ತಿರುವ ಕೃಷಿ ಭೂಮಿ ಇವತ್ತು ನಾವು ಎದುರಿಸುತ್ತಿರುವ ಸವಾಲುಗಳಲ್ಲಿ ಬಹುಮುಖ್ಯವಾದವುಗಳು. ಇವುಗಳನ್ನು ಕೇವಲ ರೈತನ ಸಮಸ್ಯೆಗಳೆಂದು ಉದಾಸಿನ ತೋರದೆ ಅವುಗಳನ್ನು ಸಾರ್ವತ್ರಿಕ ನೆಲೆಯಲ್ಲಿ ಚರ್ಚಿಸಬೇಕಾದ ಅಗತ್ಯ ಎದುರಾಗಿದೆ. ಆ ಕೆಲಸವನ್ನು ಮಾಡಬೇಕಾದ ಮಹತ್ವದ ಜವಾಬ್ದಾರಿ ಸಾಹಿತ್ಯದ ಮೇಲಿದೆ. ಆದ್ದರಿಂದ ಬರಹಗಾರನು ತನ್ನ ನೆಲದ ಸಮಸ್ಯೆಗೂ ದನಿಯಾಗಬೇಕು. ದುರಂತವೆಂದರೆ ರೈತನ ಸಮಸ್ಯೆಗಳನ್ನು ಸಮಾಜದ ಸಮಸ್ಯೆಗಳೆಂದು ತೆಗೆದುಕೊಂಡು ಬರೆದ ಬರಹಗಾರರ ಸಂಖ್ಯೆ ಕನ್ನಡದಲ್ಲಿ ಬಹಳಷ್ಟು ಕಡಿಮೆ. ಈ ವಿಷಯದಲ್ಲಿ ನಾವು ಪೂರ್ಣಚಂದ್ರ ತೇಜಸ್ವಿ ಮತ್ತು ಶಿವರಾಮ ಕಾರಂತರನ್ನು ಅಭಿನಂದಿಸಲೇ ಬೇಕು. ಆದರೆ ಇವರುಗಳ ನಂತರ ರೈತಪರವಾದ ಸಾಹಿತ್ಯ ಸಂಪೂರ್ಣವಾಗಿ ಕ್ಷಿಣೀಸಿದೆ. ಯಾವ ಲೇಖಕನೂ ರೈತರ ಪರವಾಗಿ ಬರೆಯಲು ಮನಸ್ಸು ಮಾಡುತ್ತಿಲ್ಲ. ಗತಕಾಲದ ನೆನಪುಗಳೊಂದಿಗೆ ಬದುಕುತ್ತ ಆ ನೆನಪುಗಳಿಗೆ ಅಕ್ಷರ ರೂಪ ಕೊಡುತ್ತಿರುವ ನಮ್ಮ ಬರಹಗಾರರು ಪ್ರಚಲಿತ ಸಮಸ್ಯೆಗಳಿಗೆ ಮುಖಾಮುಖಿಯಾಗಿ ನಿಲ್ಲುತ್ತಿಲ್ಲ. ನಿಜಕ್ಕೂ ಇದು ಯೋಚಿಸಬೇಕಾದ ಸಂಗತಿ. ಸಾಹಿತ್ಯ ಸಮ್ಮೇಳನದಲ್ಲಿ ಇಂಥ ಸಮಸ್ಯೆಗಳು ಚರ್ಚೆಗೆ ಬರಬೇಕು.

ಸ್ವಜಾತಿ ಮತ್ತು ಪ್ರಾದೇಶಿಕ ಪ್ರೇಮ


            ಸಾಹಿತ್ಯ ವಲಯವನ್ನು ಆವರಿಸಿಕೊಂಡಿರುವ ಬಹುದೊಡ್ಡ ಪಿಡುಗಿದು. ಯಾವ ವರ್ಣ ವ್ಯವಸ್ಥೆಯನ್ನು ವಿರೋಧಿಸಿ  ನಮ್ಮ ಸಾಹಿತಿಗಳು ಆಕ್ರೋಶದಿಂದ ಬರೆಯುವರೋ ಅವರು ತಮ್ಮ ಆಂತರ್ಯದಲ್ಲಿ ಆ ವ್ಯವಸ್ಥೆಯನ್ನು ಅಷ್ಟೇ ಗಾಢವಾಗಿ ಪ್ರೀತಿಸುತ್ತಿರುವುದು ನಿಜಕ್ಕೂ ಬಹುದೊಡ್ಡ ವಿಪರ್ಯಾಸ. ಈ ಸ್ವಜಾತಿ ಪ್ರೇಮ ಮತ್ತು ಪ್ರಾದೇಶಿಕ ಪ್ರೇಮದ ಬಿಸಿ ಸಾಹಿತ್ಯ ಸಮ್ಮೇಳನಕ್ಕೂ ತಟ್ಟಿದೆ. ಮೊನ್ನೆ ಕೊಡಗಿನಲ್ಲಿ ನಡೆದ ಸಮ್ಮೇಳನದಲ್ಲಿ ಒಂದು ಕವಿಗೋಷ್ಠಿಯ ಬದಲಾಗಿ ಎರಡು ಕವಿಗೋಷ್ಠಿಗಳನ್ನು ಆಯೋಜಿಸಲಾಗಿತ್ತು. ಇದಕ್ಕೆ ಕವಿತೆಗಳನ್ನು ವಾಚಿಸುವ ಕವಿಗಳ ಸಂಖ್ಯೆ ಬಹಳಷ್ಟಿದ್ದದ್ದೆ ಕಾರಣವಾಗಿತ್ತು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತ ಅಧ್ಯಕ್ಷರು  ಸ್ವಜಾತಿ ಮತ್ತು ಪ್ರಾದೇಶಿಕ ಪ್ರೇಮ ಮೆರೆದು ತಮ್ಮ ತಮ್ಮ ಕೋಟಾದಲ್ಲಿ ಅನೇಕ ಕವಿಗಳಿಗೆ ಅವಕಾಶ ಮಾಡಿಕೊಟ್ಟಿದ್ದರ ಪರಿಣಾಮವಿದು. ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಬರಹಗಾರ ಅಬ್ದುಲ್ ರಶೀದ ಈ ಬೆಳವಣಿಗೆಗೆ ವೇದಿಕೆಯಲ್ಲೇ ಖಾರವಾಗಿ ಪ್ರತಿಕ್ರಿಯಿಸಿದರು. ಮುಂದಿನ ದಿನಗಳಲ್ಲಿ ಸಾಹಿತ್ಯ ಮತ್ತು ಸಾಹಿತ್ಯ ಸಮ್ಮೇಳನ ಇಂಥದ್ದೊಂದು ದುರಂತದಿಂದ ಮುಕ್ತವಾಗಲಿ ಎನ್ನುವ ಕಿವಿಮಾತು ಹೇಳಿದರು. ಆದ್ದರಿಂದ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತ್ಯ ವಲಯವನ್ನು ಜಾತಿ ಮತ್ತು ಪ್ರಾದೇಶಿಕ ಪ್ರೇಮದಿಂದ ಮುಕ್ತಗೊಳಿಸಿ ಅದನ್ನು ಪರಿಶುದ್ಧಗೊಳಿಸುವ ಕೆಲಸವಾಗಬೇಕು. ಇಂಥದ್ದೊಂದು ಸವಾಲಿಗೆ ಪರಿಹಾರ ಕಂಡುಕೊಳ್ಳಬೇಕಿರುವುದು ಸಾಹಿತ್ಯವನ್ನು ಅದರ ಮೂಲ ಉದ್ದೇಶದಿಂದ ಬೇರ್ಪಡಿಸದೆ ಇರುವ ಕಾರಣದಿಂದ  ಇವತ್ತಿನ ತುರ್ತು ಅಗತ್ಯವಾಗಿದೆ.

ನಾನ್ ಅಕಾಡೆಮಿಕ್  ಎನ್ನುವ ಅಸ್ಪೃಶ್ಯತೆ


          ಕನ್ನಡ ಸಾಹಿತ್ಯ ವಲಯದಲ್ಲಿ ಬಹುಕಾಲದಿಂದ ನಡೆದುಕೊಂಡು ಬಂದ ಸಂಸ್ಕೃತಿ ಇದು. ಇಡೀ ಕನ್ನಡ ಸಾಹಿತ್ಯವಲಯವನ್ನು ನಮ್ಮ ಪ್ರಜ್ಞಾವಂತ ಬರಹಗಾರರು ಅಕಾಡೆಮಿಕ್ ಮತ್ತು ನಾನ್ ಅಕಾಡೆಮಿಕ್ ಎಂದು ವಿಭಜಿಸಿ ನಾನ್ ಅಕಾಡೆಮಿಕ್ ಬರಹಗಾರರನ್ನು ಅಸ್ಪೃಶ್ಯರಂತೆ ನಡೆಸಿಕೊಳ್ಳುತ್ತಿರುವರು. ೮೦ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ    ನಾ. ಡಿಸೋಜಾ ಅವರನ್ನು ಆಯ್ಕೆ ಮಾಡಿದಾಗಲೇ ಅವರು ನಾನ್ ಅಕಾಡೆಮಿಕ್ ಬರಹಗಾರ ಎನ್ನುವ ಅಪಸ್ವರದ ಮಾತುಗಳು ಅಲ್ಲಲ್ಲಿ ಕೇಳಿ ಬಂದವು. ಜೊತೆಗೆ ಅವರನ್ನು ಆಯ್ಕೆಮಾಡುವ ಮೂಲಕ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಿಗೆ ತಮ್ಮ ಜಾತ್ಯಾತೀತ ಮನೋಭಾವವನ್ನು ಪ್ರದರ್ಶಿಸುವ ಆಕಾಂಕ್ಷೆ ದಟ್ಟವಾಗಿತ್ತು. ಹೀಗೆ ನಾ. ಡಿಸೋಜಾ ಅವರನ್ನು ನಾನ್ ಅಕಾಡೆಮಿಕ್ ಮತ್ತು ಅನ್ಯ ಧರ್ಮೀಯ ಎಂದು ಬಿಂಬಿಸುವ ನಮ್ಮ ಸಾಹಿತ್ಯ ವಲಯದ ಹುನ್ನಾರ ಅತ್ಯಂತ ವ್ಯವಸ್ಥಿತವಾಗಿ ಕೆಲಸ ಮಾಡಿತು. ಇವರ ನಾನ್ ಅಕಾಡೆಮಿಕ್ ಹಿನ್ನೆಲೆಯನ್ನು ಸರಿಯಾಗಿಯೇ ಬಳಸಿಕೊಂಡ ಪರಿಷತ್ತಿನ ಅಧ್ಯಕ್ಷರು ಸಮ್ಮೇಳನದ ಅಧ್ಯಕ್ಷರಿಗೆ ಭಾಷಣದ ಮಧ್ಯದಲ್ಲೇ ಮೊಟಕುಗೊಳಿಸುವಂತೆ ಚೀಟಿ ಕಳುಹಿಸುವರು. ಒಂದು ಗುಂಪು ವೇದಿಕೆಯನ್ನೇರಿ ಸಮ್ಮೇಳನದ ಅಧ್ಯಕ್ಷರನ್ನು ತರಾಟೆಗೆ ತೆಗೆದುಕೊಳ್ಳುತ್ತದೆ. ಬೇಸರದ ಸಂಗತಿ ಎಂದರೆ ಈ ಎರಡೂ ಘಟನೆಗಳಿಗೆ ನಮ್ಮ ಅಕಾಡೆಮಿಕ್ ಸಾಹಿತ್ಯದ ವಲಯದಿಂದ ಒಂದೇ ಒಂದು ವಿರೋಧದ ಮಾತುಗಳು ಕೇಳಿ ಬರದಿರುವುದು. ಇಂಥದ್ದೊಂದು ಘಟನೆಗಾಗಿ ಕಾದವರಂತೆ ಅವರೆಲ್ಲ ಸಂಭ್ರಮಿಸುತ್ತಾರೆ. ಇಂಥದ್ದೊಂದು ಕೆಟ್ಟ ಸಂಪ್ರದಾಯದಿಂದ ಕನ್ನಡ ಸಾಹಿತ್ಯ ವಲಯ ಮುಕ್ತವಾಗಬೇಕು. ಈ ಮುಕ್ತಿಗೊಳಿಸುವ ಕೆಲಸ ಸಾಹಿತ್ಯ ಸಮ್ಮೇಳನದ ವೇದಿಕೆಯಲ್ಲಾಗಬೇಕು.

ಸಿನಿಮಾ ಎಂದರೆ ಮಾರು ದೂರ 


                ಸಿನಿಮಾ ಮಾಧ್ಯಮ ಕನ್ನಡ ಸಂಸ್ಕೃತಿಯನ್ನು ಶ್ರೀಮಂತಗೊಳಿಸುವಲ್ಲಿ ಕನ್ನಡ ಸಾಹಿತ್ಯಕ್ಕೆ ಸಮಾನಾಂತರವಾಗಿ ಕೆಲಸ ಮಾಡಿದೆ. ರಾಜಕುಮಾರ, ಬಾಲಕೃಷ್ಣ, ಪಂಢರೀಬಾಯಿ ಅವರಂಥ ಪ್ರತಿಭಾನ್ವಿತ ಕಲಾವಿದರು ಮತ್ತು ನಾಗೇಂದ್ರರಾಯರು,  ಅಯ್ಯರ, ಪುಟ್ಟಣ್ಣ ಕಣಗಾಲ್ ಅವರಂಥ ಸೃಜನಶೀಲ ನಿರ್ದೇಶಕರು ಕನ್ನಡ ಸಿನಿಮಾಗಳ ಮೂಲಕ ನಾಡಿನ ಭವ್ಯ ಪರಂಪರೆಯನ್ನು ಇಡೀ ದೇಶಕ್ಕೆ ಪರಿಚಯಿಸಿದರು. ಬಂಗಾರದ ಮನುಷ್ಯ, ಭೂದಾನ, ಭೂತಯ್ಯನ ಮಗು ಅಯ್ಯು, ಚೋಮನ ದುಡಿಯಂಥ ಸಿನಿಮಾಗಳಲ್ಲಿ ಸಾಮಾಜಿಕ ಕಾಳಜಿ ಅನಾವರಣಗೊಂಡಿದೆ. ಅನೇಕ ಕಾದಂಬರಿಗಳನ್ನು ಸಿನಿಮಾ ಚೌಕಟ್ಟಿಗೆ ಒಗ್ಗಿಸಿ ಒಂದರ್ಥದಲ್ಲಿ ಕನ್ನಡ ಸಾಹಿತ್ಯವನ್ನು ಈ ಸಿನಿಮಾ ಮಾಧ್ಯಮ ಜನಪ್ರಿಯಗೊಳಿಸಿತು. ತರಾಸು, ಶಿವರಾಮ ಕಾರಂತ, ಅನಂತಮೂರ್ತಿ, ಭೈರಪ್ಪನವರ ಕಾದಂಬರಿಗಳನ್ನು ಸಿನಿಮಾ ಪರದೆಯ ಮೇಲೆ ನೋಡುವ ಭಾಗ್ಯ ಕನ್ನಡಿಗರಿಗೆ ಸಿಕ್ಕಿದ್ದು ಈ ಸಿನಿಮಾ ಮಾಧ್ಯಮದ ಮೂಲಕವೇ. ಕನ್ನಡಕ್ಕೆ ಅನ್ಯಾಯವಾದಾಗಲೆಲ್ಲ ಕನ್ನಡ ಚಿತ್ರರಂಗ ಸಾಹಿತ್ಯ ವಲಯದೊಡನೆ ದನಿಗೂಡಿಸಿದೆ. ಚಳುವಳಿಯ ಸಂದರ್ಭ ಸಿನಿಮಾ ಕಲಾವಿದರೆಲ್ಲ ಮುಂಚೂಣಿಯಲ್ಲಿ ನಿಂತು ಹೋರಾಡಿದ ಉದಾಹರಣೆಗಳಿವೆ. ಗೋಕಾಕ ಚಳುವಳಿಯೇ ಅದಕ್ಕೆ ಪ್ರತ್ಯಕ್ಷ ಸಾಕ್ಷಿ. ಹೀಗಿದ್ದೂ ನಮ್ಮ ಸಾಹಿತ್ಯ ವಲಯ ಸಿನಿಮಾ ಮಾಧ್ಯಮವನ್ನು ಈ ನೆಲದ ಸೃಜನಶೀಲ ಹಿರಿಮೆಯಂದು ಪರಿಗಣಿಸಿಯೇ ಇಲ್ಲ. ಸಿನಿಮಾ, ಸಿನಿಮಾ ಕಲಾವಿದರು ಮತ್ತು ಸಿನಿಮಾ ಸಾಹಿತಿಗಳನ್ನು ನಮ್ಮ ಸಾಹಿತ್ಯ ವಲಯ ಎಂದಿಗೂ ಅಸ್ಪೃಶ್ಯತೆಯ ಭಾವನೆಯಿಂದಲೇ ಕಾಣುತ್ತ ಬಂದಿದೆ. ಅದಕ್ಕೆಂದೇ ಸಿನಿಮಾ ಮಾಧ್ಯಮದ ಕುರಿತಾದ ಚರ್ಚೆಗೆ ಸಾಹಿತ್ಯ ಸಮ್ಮೇಳನದಲ್ಲಿ ವೇದಿಕೆ ಲಭ್ಯವಾಗಿಲ್ಲ (ಒಂದೆರಡು ಸಮ್ಮೇಳನಗಳಲ್ಲಿ ಪರಭಾಷೆಗಳಿಂದ ಕನ್ನಡಕ್ಕೆ ಸಿನಿಮಾ ಡಬ್ಬಿಂಗ್ ನ್ನು ನಿಲ್ಲಿಸಬೇಕೆನ್ನುವ ನಿರ್ಣಯ ಕೈಗೊಳ್ಳಲಾಗಿತ್ತು ಆದರೆ ಈ ವಿಷಯ ಚರ್ಚೆಗೆ ಒಳಗಾಗಿರಲಿಲ್ಲ). ಸಿನಿಮಾ ಮಾಧ್ಯಮವನ್ನು ಒಂದು ಸೃಜನಶೀಲತೆಯ ನೆಲೆಯಲ್ಲಿ ನೋಡುವ ಮತ್ತು ಅದರ ಕೊಡುಗೆಯನ್ನು ಸ್ಮರಿಸುವ ಜೊತೆಗೆ ಸಮಾಜದ ಮೇಲೆ ಅದರಿಂದಾಗುವ ಪರಿಣಾಮಗಳನ್ನು ಕುರಿತು ಚರ್ಚಿಸಲು ಸಾಹಿತ್ಯ ಸಮ್ಮೇಳಗಳು ಅವಕಾಶ ಒದಗಿಸಬೇಕು. ಸಾಂಸ್ಕೃತಿಕ ಸಂಕ್ರಮಣದ ಈ ಕಾಲಘಟ್ಟದಲ್ಲಿ ಸಿನಿಮಾ ಮಾಧ್ಯಮ ತನ್ನ ಮೂಲ ಆಶಯದಿಂದ ಬಹುದೂರ ಸಾಗಿಬಂದಿದೆ. ಅದಕ್ಕೆಂದೇ ಇಲ್ಲಿ ಚಿತ್ರ ವಿಚಿತ್ರ ಸಿನಿಮಾಗಳು ಈಗ ನಿರ್ಮಾಣವಾಗುತ್ತಿವೆ.  ಸಾಹಿತ್ಯ ವಲಯ ತನ್ನ ಸುತ್ತಲಿನ ಈ ಎಲ್ಲ ರೂಪಾಂತರಗಳಿಗೆ  ಕಣ್ಣಾದಲ್ಲಿ ಒಂದಿಷ್ಟು ಭರವಸೆಯ ಹೊಸ ಗಾಳಿ ಬೀಸಬಹುದು. ಆದ್ದರಿಂದ ಸಿನಿಮಾ ಮಾಧ್ಯಮವನ್ನು ಸಾಹಿತ್ಯ ಸಮ್ಮೇಳನಗಳು ತಮ್ಮ ಚರ್ಚಾ ವೇದಿಕೆಗೆ ಎಳೆದುಕೊಳ್ಳುವುದು ಸಮಾಜದ ಆರೋಗ್ಯದ ದೃಷ್ಟಿಯಿಂದ ಅಗತ್ಯವಾಗಿದೆ.

ಕೊನೆಯ ಮಾತು 


         ಸಾಹಿತ್ಯ ಸಮ್ಮೇಳನ ನಮ್ಮ ಸಾಹಿತಿಗಳ ಒಣ ಪ್ರತಿಷ್ಠೆ ಮತ್ತು ಅವರವರ ಅನುಕೂಲಸಿಂಧುವಿಗೆ ವೇದಿಕೆಯಾಗುತ್ತಿರುವುದು ಅದು ಎಲ್ಲರಿಗೂ ತಿಳಿದಿರುವ ಸಂಗತಿ. ಅದಕ್ಕೆಂದೇ ವೇದಿಕೆಯಲ್ಲಿ ಸಾಹಿತಿಗಳು ಸಮಾಜದ ಸಮಸ್ಯೆಗಳನ್ನು ಮೂಲೆಗುಂಪಾಗಿಸಿ ವೈಯಕ್ತಿಕ ನಿಂದನೆಗೆ ತೊಡಗುವರು. ಜೊತೆಗೆ ಸಾಹಿತ್ಯದ ಉದ್ದೇಶ ಕೇವಲ ಭಾಷಾಭಿವೃದ್ಧಿ ಮಾತ್ರವಲ್ಲ ಅದು ಸಮಾಜದ ಎಲ್ಲ ಸಮಸ್ಯೆಗಳಿಗೂ ಮುಖಾಮುಖಿಯಾಗಬೇಕು. ಬರಹಗಾರರನ್ನು ಮತ್ತು ಸಾರ್ವಜನಿಕರನ್ನು ಸಮ್ಮೇಳನ, ವಿಚಾರ ಸಂಕೀರಣಗಳ ಮೂಲಕ ಒಂದು ವೇದಿಕೆಗೆ ಕರೆತಂದಾಗ ಅಲ್ಲಿ ಭಾಷೆಯೊಂದು ಎದುರಿಸುತ್ತಿರುವ ಸಮಸ್ಯೆಗಳ ಜೊತೆಗೆ ಸಾಮಾಜಿಕ ಸಮಸ್ಯೆಗಳೂ ಚರ್ಚೆಗೆ ಒಳಪಡಬೇಕು. ಎಲ್ಲವನ್ನೂ ಭಾಷೆ ಮತ್ತು ಸಾಹಿತ್ಯದ ನೆಲೆಯಲ್ಲಿ ಮಾತ್ರ ನೋಡಿದರೆ ಸಾಹಿತ್ಯ ಸಮ್ಮೇಳನಗಳು ಜನರಿಗೆ ಹತ್ತಿರವಾಗಲಾರವು. ಹಳೆಗನ್ನಡ, ನಡುಗನ್ನಡಗಳ  ಕುರಿತು ಚರ್ಚಿಸುವುದಕ್ಕಿಂತ ಸಮಾಜದ ಜ್ವಲಂತ ಸಮಸ್ಯೆಗಳಿಗೆ ಸಾಹಿತ್ಯ ಸಮ್ಮೇಳನಗಳು ವೇದಿಕೆಯಾಗಲಿ. ಮುಂದಿನ ದಿನಗಳಲ್ಲಾದರೂ ಇಂಥದ್ದೊಂದು ಬದಲಾವಣೆಗೆ  ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು  ಮತ್ತು ನಮ್ಮ ಅಕಾಡೆಮಿಕ್ ಬರಹಗಾರರು ತಮ್ಮನ್ನು ತಾವು ತೆರೆದುಕೊಳ್ಳಲಿ.

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 


Saturday, January 4, 2014

ಲೂಯಿ ಬ್ರೈಲ್: ಅಂಧರ ಬದುಕಿನ ಆಶಾಕಿರಣ

     

                                                       ( ಲೂಯಿ ಬ್ರೈಲ್ : ೧೮೦೯- ೧೮೫೨)


     (ಇಂದು ಲೂಯಿ ಬ್ರೈಲ್ ಜನ್ಮದಿನ ಅದಕ್ಕಾಗಿ ಒಂದಿಷ್ಟು ಸ್ಮರಣೆ)

        ಅಂಧತ್ವ ಅದು ಬದುಕಿನ ಬಹುದೊಡ್ಡ ಸಮಸ್ಯೆ. ಎರಡೂ ಕಣ್ಣುಗಳ ದೃಷ್ಟಿಯನ್ನು ಕಳೆದುಕೊಂಡು ಬದುಕುವ ರೀತಿ ನಿಜಕ್ಕೂ ಅದೊಂದು ಹೋರಾಟದ ಬದುಕು. ಎಲ್ಲ ಅಂಗಗಳು ಸರಿಯಿದ್ದೂ ಸಮಾಜಕ್ಕೆ ಹೊರೆಯಾಗಿ ಬದುಕುವವರ ನಡುವೆ ಅಂಧರು ಇಂದು ಸಮಾಜದಿಂದ ಯಾವುದೇ ರೀತಿಯ ಅನುಕಂಪ ನಿರೀಕ್ಷಿಸದೆ ಸಹಜ ರೀತಿಯಿಂದ ಬದುಕು ನಡೆಸುತ್ತಿರುವರು. ಅಂಗವೈಕಲ್ಯವನ್ನು ಮರೆತು ಅನೇಕ ಕ್ಷೇತ್ರಗಳಲ್ಲಿ ಸಾಧನೆ ಮೆರೆಯುತ್ತಿರುವರು. ಬದುಕು ಅವರಿಗೆ ಯಾವತ್ತಿಗೂ ಹೊರೆಯಾಗಿಲ್ಲ. ಅಮೇರಿಕ ದೇಶದ ಲೇಖಕಿ ಹೆಲನ್ ಕೆಲ್ಲರ್, ತನ್ನ ೪೩ ನೇ ವಯಸ್ಸಿನಲ್ಲಿ ಅಂಧನಾದ ಕವಿ ಜಾನ್ ಮಿಲ್ಟನ್,  ಕಾರ್ಟೂನಿಸ್ಟ್ ಜೆಮ್ಸ್  ಟರ್ಬರ್, ಹುಟ್ಟು ಅಂಧರಾಗಿ ಸಂಗೀತ ಕ್ಷೇತ್ರದಲ್ಲಿ ಬಹುದೊಡ್ಡ ಸಾಧನೆ ಮಾಡಿದ ಪುಟ್ಟರಾಜ ಗವಾಯಿಗಳು ಈ ಎಲ್ಲ ಮಹನೀಯರು ತಮ್ಮ ದೈಹಿಕ ವೈಕಲ್ಯವನ್ನು ಮರೆತು ಮಾಡಿದ ಸಾಧನೆ ಮತ್ತು ಪಡೆದ ಯಶಸ್ಸು ಅಪಾರ.  ಅಂಧರ ಬದುಕಿನ ಇವತ್ತಿನ ಆತ್ಮವಿಶ್ವಾಸ ಮತ್ತು ಅವರ ಸಾಧನೆಗಳ ಹಿಂದೆ ಲೂಯಿ ಬ್ರೈಲ್ ಎನ್ನುವ ಸಾಧಕನ ಪರಿಶ್ರಮವಿದೆ. ಬ್ರೈಲ್ ನ ಬದುಕು ಮತ್ತು ಆತ ಮಾಡಿದ ಸಾಧನೆ ಅದೊಂದು ಯಶೋಗಾಥೆ. ತನ್ನ ಅಂಗವೈಕಲ್ಯತೆಯನ್ನು ಮೆಟ್ಟಿ ನಿಂತು ಆತ  ಮಾಡಿದ ಸಾಧನೆ ಅದು ಅನೇಕ ದೃಷ್ಟಿಹೀನರ ಬದುಕಿಗೆ ಸ್ಪೂರ್ತಿಯ ಸೆಲೆಯಾಗಿದೆ.

ಬಾಲ್ಯ ಮತ್ತು ಎದುರಾದ ಸಂಕಷ್ಟ 


        ಜನವರಿ ೪, ೧೮೦೯ ರಂದು ಪ್ಯಾರಿಸ್ ಸಮೀಪದ ಗ್ರಾಮವೊಂದರಲ್ಲಿ ಜನಸಿದ ಲೂಯಿ ಬ್ರೈಲ್ ಹುಟ್ಟು ಕುರುಡನಾಗಿರಲಿಲ್ಲ. ಜನಿಸಿದಾಗ ಅವನು ಸಾಮಾನ್ಯ ಮಕ್ಕಳಂತೆಯೇ ಇದ್ದ. ಲೂಯಿಯದು ತಂದೆ ತಾಯಿ ಮತ್ತು ನಾಲ್ಕು ಜನ ಸಹೋದರರಿಂದ ಕೂಡಿದ  ದೊಡ್ಡ ಕುಟುಂಬ.  ಲೂಯಿಯ ತಂದೆ ಅತ್ಯಂತ ಬಡವನಾಗಿದ್ದು ಪಾದರಕ್ಷೆಗಳನ್ನು ತಯ್ಯಾರಿಸುವ ಒಂದು ಸಣ್ಣ ಅಂಗಡಿಯೇ ಅವರ ಕುಟುಂಬದ ಜೀವನ ನಿರ್ವಹಣೆಗೆ ಆಧಾರವಾಗಿತ್ತು. ಚಿಕ್ಕ ಮಗುವಾಗಿದ್ದ ಲೂಯಿ ತನ್ನ ದಿನದ ಬಹುಪಾಲು ಸಮಯವನ್ನು ತಂದೆಯೊಂದಿಗೆ ಪಾದರಕ್ಷೆಗಳ ಅಂಗಡಿಯಲ್ಲೇ ಕಳೆಯುತ್ತಿದ್ದ. ಬದುಕಿನಲ್ಲಿ ನಡೆಯುವ ಆಕಸ್ಮಿಕ ಘಟನೆಗಳು ಬದುಕಿನ ದಿಕ್ಕನ್ನೇ ಬದಲಿಸುವಂತೆ ಲೂಯಿ ಬ್ರೈಲ್ ಚಿಕ್ಕವನಾಗಿದ್ದಾಗ ನಡೆದ ಒಂದು ಘಟನೆ ಶಾಶ್ವತವಾಗಿ ಆತ ತನ್ನ ದೃಷ್ಟಿಯನ್ನು ಕಳೆದುಕೊಳ್ಳುವಂತೆ ಮಾಡಿತು. ಒಮ್ಮೆ ತಂದೆ ತಯ್ಯಾರಿಸುತ್ತಿದ್ದ ಚಪ್ಪಲಿ ಅಂಗಡಿಗೆ ಹೋದ ಲೂಯಿ ಬ್ರೈಲ್ ಒಂದು ದಪ್ಪ ಚರ್ಮವನ್ನು ತೆಗೆದುಕೊಂಡು ಸೂಜಿಯಿಂದ ಹೊಲಿಯ ತೊಡಗಿದ. ಹೀಗೆ ಚರ್ಮದ ಮೇಲೆ ದಾರದಿಂದ ಚಿತ್ರ ಬಿಡಿಸುತ್ತಿದ್ದ ಆ ಘಳಿಗೆ ಆಕಸ್ಮಿಕವಾಗಿ ಸೂಜಿ ಲೂಯಿಯ ಬಲ  ಕಣ್ಣಿಗೆ ತಾಗಿತು. ಶಸ್ತ್ರ ಚಿಕಿತ್ಸೆಯ ನಂತರವೂ ಗಾಯ ಗುಣವಾಗುವ ಲಕ್ಷಣ ಕಂಡುಬರಲಿಲ್ಲ. ಒಂದು ಕಣ್ಣಿಗೆ ಆದ ಗಾಯದ ಸೋಂಕು ಮತ್ತೊಂದು ಕಣ್ಣಿಗೆ ತಗುಲಿತು. ಪರಿಣಾಮವಾಗಿ  ಲೂಯಿ ಬ್ರೈಲ್ ತನ್ನ ಎರಡೂ ಕಣ್ಣುಗಳ ದೃಷ್ಟಿಯನ್ನು ಕಳೆದುಕೊಂಡ. ಹೀಗೆ ದೃಷ್ಟಿಹೀನನಾದ ಆ ಹೊತ್ತು ಲೂಯಿಗೆ ಆಗಿನ್ನೂ ಕೇವಲ ೪ ವರ್ಷ ವಯಸ್ಸು. ಪಾಲಕರಿಗೆ ಲೂಯಿಯ ಬದುಕು ಒಂದು ಸಮಸ್ಯೆಯಾಗಿ ಕಾಡತೊಡಗಿತು. ಆತನನ್ನು ಬೇರೆ ಮಕ್ಕಳಂತೆ ಶಾಲೆಗೆ ಕಳುಹಿಸಲಾಯಿತಾದರೂ ಅಲ್ಲಿ ಅನೇಕ ಸಮಸ್ಯೆಗಳು ಎದುರಾದವು. ಶಿಕ್ಷಕರಿಗೂ ಆ ಅಂಧ ಮಗುವಿಗೆ ಪಾಠ ಮಾಡುವುದೇ ದೊಡ್ಡ ಸವಾಲಾಗಿ ಪರಿಣಮಿಸಿತು. ಅಂಥ ಸಮಸ್ಯೆಗಳ ನಡುವೆಯೂ ಲೂಯಿ ಬ್ರೈಲ್ ಆ ಶಾಲೆಯಲ್ಲಿ  ಕೆಲವು ವರ್ಷ ಅಭ್ಯಾಸ ಮಾಡಿದ. ಆದರೆ ಆ ಶಾಲೆಯಲ್ಲಿ ಅಂಧ ಮಕ್ಕಳಿಗಾಗಿ ಓದಲು ಪುಸ್ತಕಗಳಿರಲಿಲ್ಲ.  ತನ್ನ ಅಂಧತ್ವದಿಂದಾಗಿ ಲೂಯಿಗೆ ಶಾಲೆಯಲ್ಲಿ ಏನನ್ನೂ ಕಲಿಯಲು ಸಾಧ್ಯವಾಗಲಿಲ್ಲ. ಇನ್ನು ಅದೇ ಶಾಲೆಯಲ್ಲಿ ಮುಂದುವರಿದರೆ ಶಿಕ್ಷಣ ಪಡೆಯುವುದು ಅಸಾಧ್ಯ ಎಂದರಿತ ಲೂಯಿಯ ತಂದೆ ತನ್ನ ಮಗನಿಗಾಗಿ ಹೊಸ ಶಾಲೆಯನ್ನು ಹುಡುಕತೊಡಗಿದ.

ಪ್ಯಾರಿಸ್ ನಡೆಗೆ ಪಯಣ   


            ಲೂಯಿಗೆ ಉತ್ತಮ ಶಿಕ್ಷಣ ಒದಗಿಸಿ ಆತನನ್ನು ಸ್ವಾವಲಂಬಿಯಾಗಿಸಬೇಕೆನ್ನುವುದು ಆತನ ತಂದೆಯ ಬಯಕೆಯಾಗಿತ್ತು. ಆ ದಿನಗಳಲ್ಲಿ ಅಂಧ ಮಕ್ಕಳು ಪ್ಯಾರಿಸ್  ಬೀದಿಗಳಲ್ಲಿ ಬಿಕ್ಷೆ ಬೇಡುವುದು ಸಾಮಾನ್ಯ ದೃಶ್ಯವಾಗಿತ್ತು. ಲೂಯಿ ಬ್ರೈಲ್ ನ   ತಂದೆಗೆ ತನ್ನ ಮಗ ಬಿಕ್ಷೆ ಬೇಡುವ ಚಿತ್ರವನ್ನು ಕಲ್ಪಿಸಿಕೊಳ್ಳುವುದೂ ಕಷ್ಟದ ಸಂಗತಿಯಾಗಿತ್ತು. ಸ್ವತಹ ಅಕ್ಷರಸ್ಥನಾದ ಲೂಯಿಯ  ತಂದೆಗೆ ಶಿಕ್ಷಣದ ಮಹತ್ವದ ಅರಿವಿತ್ತು. ಆತ ತನ್ನ ಕುರುಡು ಮಗನ ಭವಿಷ್ಯವನ್ನು ಉಜ್ವಲಗೊಳಿಸಲು ಶಿಕ್ಷಣದ ಮೊರೆ ಹೋದ.   ಸಾಮಾನ್ಯ ಮಕ್ಕಳ ಶಾಲೆಯಲ್ಲಿ  ಲೂಯಿಗೆ ಸಮಸ್ಯೆ ಎದುರಾದಾಗ ಆತನ ತಂದೆ ಅವನನ್ನು ಪ್ಯಾರಿಸ್ ನಲ್ಲಿರುವ ವಿಶ್ವದ ಪ್ರಥಮ ಅಂಧರ ಶಾಲೆಯಾದ 'ರಾಯಲ್ ಇನ್ಸ್ಟಿಟ್ಯೂಟ್ ಆಫ್ ಬ್ಲೈಂಡ್ ಯುಥ್' ಎನ್ನುವ  ಅಂಧರ ಶಾಲೆಗೆ ಸೇರಿಸಿದ. ಲೂಯಿ ಬ್ರೈಲ್ ಗೆ ಎರಡನೇ ಆಯ್ಕೆಯೇ ಇರಲಿಲ್ಲ. ಉತ್ತಮ ಶಿಕ್ಷಣ ಪಡೆಯಬೇಕೆನ್ನುವ ಅವನೊಳಗಿನ ಮಹತ್ವಾಕಾಂಕ್ಷೆ ಆತನನ್ನು ಪ್ಯಾರಿಸ್ ನಲ್ಲಿರುವ ಅಂಧರ ಶಾಲೆಗೆ ಕರೆದೊಯ್ಯಿತು. ಪ್ಯಾರಿಸ್ ನಡೆಗಿನ ಆ ಪಯಣ ನಂತರದ  ದಿನಗಳಲ್ಲಿ ಲೂಯಿ ಬ್ರೈಲ್ ನ ಬದುಕಿನ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿತು. ೧೭೮೬ ರಲ್ಲಿ ಸ್ಥಾಪನೆಯಾದ ಈ ಶಾಲೆ ಪ್ರಥಮ ಅಂಧ ಮಕ್ಕಳ ಶಾಲೆ ಎನ್ನುವ ಕೀರ್ತಿಗೆ ಪಾತ್ರವಾಗಿದೆ.  ಆ ಶಾಲೆಯ ಸ್ಥಾಪಕನಾದ ವಾಲೆಂಟಿನ್ ಹೂಯಿ ಅಂಧ ಮಕ್ಕಳು ಓದಲು ಮತ್ತು ಬರೆಯಲು ತನ್ನದೇ ವಿಧಾನವನ್ನು ಅನುಸರಿಸುತ್ತಿದ್ದ. ಅಂಧನಾಗಿರದ ವಾಲೆಂಟಿನ್ ಗೆ ಅಂಧ ಮಕ್ಕಳ ಸಮಸ್ಯೆಯನ್ನು ಸಹಜವಾಗಿ ಗುರುತಿಸಿ ಅದಕ್ಕೆ ಪರಿಹಾರ ಕಂಡುಹಿಡಿಯುವುದು ಅಸಾಧ್ಯದ ಸಂಗತಿಯಾಗಿತ್ತು. ಅಂಧ ಮಕ್ಕಳಿಗೆ ಸಹಾಯ ಮಾಡಬೇಕೆನ್ನುವ ಅವನೊಳಗಿನ ಇಂಗಿತ ಅವನನ್ನು ಅಂಧ ಮಕ್ಕಳ ಶಾಲೆ ತೆರೆಯಲು ಪ್ರೇರೇಪಿಸಿತ್ತು.  ಆದರೆ ಆ ಶಾಲೆಯಲ್ಲಿನ ಪುಸ್ತಕಗಳನ್ನು ಅಂಧ ಮಕ್ಕಳು ಸರಾಗವಾಗಿ ಓದಲು ಸಾಧ್ಯವಾಗುತ್ತಿರಲಿಲ್ಲ. ಜೊತೆಗೆ ಪುಸ್ತಕಗಳ ಗಾತ್ರ ಮತ್ತು ಭಾರ ಮಕ್ಕಳಿಗೆ ಹೊಂದಾಣಿಕೆಯಾಗುತ್ತಿರಲಿಲ್ಲ. ಆ ಸಂದರ್ಭ ಶಾಲೆಯಲ್ಲಿನ ಅದೆಷ್ಟೋ ಅಂಧ ವಿದ್ಯಾರ್ಥಿಗಳು ಶಿಕ್ಷಣವನ್ನು ಅರ್ಧಕ್ಕೆ ಬಿಟ್ಟು ಹೋಗುತ್ತಿದ್ದದುಂಟು. ಆಗೆಲ್ಲ ಆ ಶಾಲೆಯ ಸಂಸ್ಥಾಪಕನಾದ ವಾಲೆಂಟಿನ್ ಹೂಯಿಗೆ ನಿರಾಶೆ ಎದುರಾಗುತ್ತಿತ್ತು. ಲೂಯಿ ಬ್ರೈಲ್ ಮಾತ್ರ ಎಂಥ ಕಷ್ಟದ ಪರಿಸ್ಥಿತಿಯಲ್ಲೂ ಅತ್ಯಂತ ಶ್ರದ್ಧೆಯಿಂದ ಓದುತ್ತಿದ್ದ. ಆ ಶಾಲೆಯಲ್ಲಿದ್ದ ಅಂಧ ಮಕ್ಕಳಿಗೆಂದೇ  ಪ್ರಕಟವಾಗಿದ್ದ ಎಲ್ಲ ೧೪ ಪುಸ್ತಕಗಳನ್ನೂ ಓದಿ ಮುಗಿಸಿದ. ತನ್ನ ಬದುಕನ್ನು ಕವಿದ ಕಾರ್ಮೋಡದಿಂದ ಹೊರಬರಬೇಕೆನ್ನುವ ಮಹತ್ವಾಕಾಂಕ್ಷೆ ಆತನದಾಗಿತ್ತು. ಪರೀಕ್ಷೆಯಲ್ಲಿ ಉತ್ತಿರ್ಣನಾದ ಲೂಯಿ ಬ್ರೈಲ್ ತನ್ನ ಗುರುವಿನ ಆಸೆಯಂತೆ ತಾನೊದಿದ ಶಾಲೆಯಲ್ಲೇ ಶಿಕ್ಷಕನಾಗಿ ವೃತ್ತಿಯನ್ನಾರಂಭಿಸಿದ.

ಬ್ರೈಲ್ ಲಿಪಿಯ ಅವಿಷ್ಕಾರ 


          ಅಂಧ ಮಕ್ಕಳಿಗಾಗಿ ಏನಾದರೂ ಉಪಯುಕ್ತವಾದದ್ದನ್ನು ಮಾಡಬೇಕೆನ್ನುವ ಆಸೆಯೊಂದಿಗೇ ಲೂಯಿ ಬ್ರೈಲ್ ಆ ಶಾಲೆಯಲ್ಲಿ ಶಿಕ್ಷಕನಾಗಿ ಸೇರಿದ. ಆತನ ಮೊದಲ ಆದ್ಯತೆ ಮಕ್ಕಳು  ಓದಲು ಮತ್ತು ಬರೆಯಲು ಅನುಕೂಲವಾಗುವಂತೆ ಹೊಸ ಬರವಣಿಗೆಯ ವಿಧಾನವೊಂದನ್ನು ಕಂಡು ಹಿಡಿಯ ಬೇಕೆನ್ನುವುದಾಗಿತ್ತು. ಆ ಶಾಲೆಯಲ್ಲಿ ಅಂಧ ಮಕ್ಕಳಿಗಾಗಿ  ಪುಸ್ತಕಗಳಿದ್ದರೂ ಅಕ್ಷರಗಳನ್ನು ಬೇಗನೆ ಗುರುತಿಸಿ ಸಾಮಾನ್ಯ ಮಕ್ಕಳಂತೆ ವೇಗವಾಗಿ ಓದಲು ಸಾಧ್ಯವಾಗುತ್ತಿರಲಿಲ್ಲ. ಅಕ್ಷರಗಳನ್ನು ಗುರುತಿಸಿ ವಾಕ್ಯಗಳನ್ನು ಓದುವುದು  ಕಷ್ಟದ ಕೆಲಸವಾಗಿತ್ತು.  ಆದ್ದರಿಂದ ಅಕ್ಷರಗಳನ್ನು ಬಲುಬೇಗನೆ ಗುರುತಿಸಿ ವೇಗವಾಗಿ ಓದಲು   ಸಹಾಯವಾಗುವಂಥ ಲಿಪಿಯನ್ನು ಕಂಡು ಹಿಡಿಯಬೇಕೆನ್ನುವುದು ಲೂಯಿ ಬ್ರೈಲ್ ನ ಉದ್ದೇಶವಾಗಿತ್ತು.   ಅವನು ವಿದ್ಯಾರ್ಥಿಯಾಗಿದ್ದ ಸಂದರ್ಭ  ಆ ಶಾಲೆಯಲ್ಲಿ ನಡೆದ ಒಂದು ಘಟನೆ ಲೂಯಿ ಬ್ರೈಲ್ ನ ಸಮಸ್ಯೆಗೆ ಶಾಶ್ವತ ಪರಿಹಾರವನ್ನೊದಗಿಸಿತು. ಆ ಘಟನೆ ಹೀಗಿದೆ ೧೮೨೧ ರಲ್ಲಿ  ಚಾರ್ಲ್ಸ್ ಬಾರ್ಬೈರ್ ಎನ್ನುವ ಸೈನಿಕ ಲೂಯಿ ಓದುತ್ತಿದ್ದ ಅಂಧರ ಶಾಲೆಗೆ ಭೇಟಿ ನೀಡಿ ತಾನು ಕಂಡುಹಿಡಿದಿದ್ದ 'ನೈಟ್ ರೈಟಿಂಗ್' ಎನ್ನುವ ಯಂತ್ರದ ಕುರಿತು ವಿವರಿಸಿದನು. ನೈಟ್ ರೈಟಿಂಗ್ ಸೈನಿಕರು ದೂರದಿಂದಲೇ ಪರಸ್ಪರ ಸಂದೇಶಗಳನ್ನು ರವಾನಿಸುವ ಒಂದು ಯಂತ್ರವಾಗಿದ್ದು ಅದು ೧೨ ರಂಧ್ರಗಳನ್ನೊಳಗೊಂಡಿತ್ತು. ಆ ಎಲ್ಲ ೧೨ ರಂಧ್ರಗಳು ವಿಭಿನ್ನ ಶಬ್ದಗಳನ್ನು ಹೊರಡಿಸುತ್ತಿದ್ದವು. ದುರದೃಷ್ಟವಶಾತ್ ಸೈನಿಕರು ಈ ಯಂತ್ರವನ್ನು ಉಪಯೋಗಿಸಲು ವಿಫಲರಾದ ಕಾರಣ ಅದರ ಉಪಯೋಗವನ್ನು ತಿರಸ್ಕರಿಸಲಾಯಿತು. 

            ನೈಟ್ ರೈಟಿಂಗ್ ಯಂತ್ರದ ಪ್ರಾತ್ಯಕ್ಷಿಕತೆ ಲೂಯಿ ಬ್ರೈಲ್ ಮೇಲೆ ತುಂಬ ಪ್ರಭಾವ ಬೀರಿತು. ಈ ಯಂತ್ರ ಅಂಧ ಮಕ್ಕಳ ಓದಿಗೆ ಅನುಕೂಲವಾಗಬಹುದೆನ್ನುವ ಮಹತ್ವಾಕಾಂಕ್ಷೆ ಅವನಲ್ಲಿ ಚಿಗುರೊಡೆಯಿತು. ಪರಿಣಾಮವಾಗಿ ಲೂಯಿ ಬ್ರೈಲ್ ರಂಧ್ರಗಳ ಸಹಾಯದಿಂದ ಬರೆಯುವ ಮತ್ತು ಓದುವ ವಿಧಾನವನ್ನು ಕಂಡು ಹಿಡಿಯಲು ಪ್ರಯತ್ನಿಸಿದ. ಲೂಯಿ  ಹಗಲಿರುಳೆನ್ನದೆ ಶ್ರಮಿಸಿದ.ಕೊನೆಗೂ ತನ್ನ ಪ್ರಯತ್ನದಲ್ಲಿ ಯಶಸ್ವಿಯಾಗಿ ಆತ ಬ್ರೈಲ್ ಲಿಪಿಯನ್ನು ಅವಿಷ್ಕರಿಸಿದ ಆ ಸಂದರ್ಭ ಅವನಿಗಿನ್ನೂ ೧೫ ವರ್ಷ ವಯಸ್ಸು. ಲೂಯಿ ಬ್ರೈಲ್ ಪ್ರಾರಂಭದಲ್ಲಿ ಗಣಿತ ಮತ್ತು ಸಂಗೀತ ವಿಷಯಗಳನ್ನು ಓದಲು ಮತ್ತು ಬರೆಯಲು ಸಂಕೇತಗಳನ್ನು ಕಂಡುಹಿಡಿದ. ೧೮೨೭ ರಲ್ಲಿ ಪ್ರಥಮ ಬಾರಿಗೆ ಬ್ರೈಲ್ ಲಿಪಿಯಲ್ಲಿ ಪುಸ್ತಕ ಪ್ರಕಟವಾಯಿತು. ಆದರೆ ಆಗ ಲೂಯಿ ಬ್ರೈಲ್ ಗೆ ದೊರೆಯಬೇಕಾದ ಸೂಕ್ತ ಪ್ರೋತ್ಸಾಹ ದೊರೆಯಲಿಲ್ಲ. ಅವನು ಪಾಠ ಮಾಡುತ್ತಿದ್ದ ಶಾಲೆಯಲ್ಲಿ ಬ್ರೈಲ್ ಲಿಪಿಯನ್ನು ಬಳಸಲು  ಅವಕಾಶ ನೀಡಲಿಲ್ಲ. ಇದರಿಂದ ಆತ ನಿರಾಶನಾಗದೆ  ಬ್ರೈಲ್ ಲಿಪಿಯಲ್ಲಿ ಅನೇಕ ಪುಸ್ತಕಗಳನ್ನು ಪ್ರಕಟಿಸಿ ಆ  ಮೂಲಕ ಅಂಧರ ಬದುಕಿಗೆ ಬೆಳಕು ನೀಡಲು ಪ್ರಯತ್ನಿಸಿದ. ಲೂಯಿ ಬದುಕಿರುವ ಅವಧಿಯಲ್ಲಿ ಆತನ ಪ್ರಯೋಗ ನಿರೀಕ್ಷಿತ ಮಟ್ಟದ ಯಶಸ್ಸು ಕಾಣಲಿಲ್ಲ. ಸತತ ಅನಾರೋಗ್ಯದಿಂದ ಬಳಲುತ್ತಿದ್ದ ಲೂಯಿ ಬ್ರೈಲ್ ಕ್ಷಯರೋಗದಿಂದ ೧೮೫೨ ರಲ್ಲಿ ಅಸುನೀಗಿದಾಗ ಅವನ ವಯಸ್ಸು ೪೩ ವರ್ಷಗಳು. ತನ್ನ ಮರಣದ ನಂತರ ಆತ ತನ್ನಲ್ಲಿದ್ದ ಹಣವನ್ನೆಲ್ಲ ಅಂಧರ ಸಂಘಗಳಿಗೆ ದೇಣಿಯಾಗಿ ಕೊಡುವಂತೆ ಸೂಚಿಸಿದ್ದ.


                                                                  (ಬ್ರೈಲ್ ಲಿಪಿಯ ಮಾದರಿ)


ದೊರೆತ ಗೌರವ 


               ಲೂಯಿ ಬ್ರೈಲ್ ನ ಸಾವಿನ ನಂತರ ಅನೇಕ ವರ್ಷಗಳವರೆಗೆ ಬ್ರೈಲ್ ಲಿಪಿ ಜನರ ನೆನಪಿನಿಂದ ಮರೆಯಾಯಿತು. ಆದರೆ ೧೮೬೮ ರಲ್ಲಿ ಡಾ. ಥಾಮಸ್ ಆರ್ಮಿಟೆಜ್ ಫ್ರಾನ್ಸ್ ನಲ್ಲಿ ಅಂಧರ ಒಂದು ಸಂಘವನ್ನು ಸ್ಥಾಪಿಸಿ ಬ್ರೈಲ್ ಲಿಪಿಯ ಸಹಾಯದಿಂದ ಅನೇಕ ಪುಸ್ತಕಗಳನ್ನು ಪ್ರಕಟಿಸಿದರು. ಥಾಮಸ್ ಆರ್ಮಿಟೆಜ್ ಅವರ ನಿರಂತರ  ಪ್ರಯತ್ನದ ಪರಿಣಾಮ ಅಂತರಾಷ್ಟ್ರೀಯ ಮಟ್ಟದಲ್ಲಿ ಬ್ರೈಲ್ ಲಿಪಿಯ ಬಳಕೆ ಹೆಚ್ಚಿತು. ೧೯೯೦ ರ ಹೊತ್ತಿಗೆ ಪ್ರತಿಯೊಂದು ರಾಷ್ಟ್ರದಲ್ಲಿನ ಎಲ್ಲ ಪ್ರಮುಖ ಭಾಷೆಗಳಲ್ಲಿ ಬ್ರೈಲ್ ಲಿಪಿಯಲ್ಲಿ ಪುಸ್ತಕಗಳು ಪ್ರಕಟವಾದವು. ಇದೇ ವೇಳೆ 'ಬ್ರೈಲ್ ಲಿಪಿಯನ್ನು ಬಳಸದೇ ಇರುವ ಅಂಧರ ಶಾಲೆ ಜಗತ್ತಿನ  ಯಾವ ದೇಶದಲ್ಲೂ  ಇಲ್ಲ' ಎಂದು ಥಾಮಸ್ ಆರ್ಮಿಟೆಜ್ ಘೋಷಿಸಿದರು.  ಇಂದು ಜಗತ್ತಿನ ಆಲ್ಬೇನಿಯನ್ (Albanian) ಭಾಷೆಯಿಂದ ಝುಲು (Zulu) ಭಾಷೆಯವರೆಗೆ ಎಲ್ಲ ಭಾಷೆಗಳಲ್ಲಿ ಬ್ರೈಲ್ ಲಿಪಿ ಬಳಕೆಯಲ್ಲಿದೆ. 

            ನಂತರದ ವರ್ಷಗಳಲ್ಲಿ ಬ್ರೈಲ್ ಲಿಪಿಯ ಯಶಸ್ಸು, ಜನಪ್ರಿಯತೆ ಮತ್ತು ಅದರ ಉಪಯುಕ್ತತೆಯನ್ನು ಪರಿಗಣಿಸಿ ಫ್ರಾನ್ಸ್ ರಾಷ್ಟ್ರದಲ್ಲಿ ಲೂಯಿ ಬ್ರೈಲ್ ಗೆ ದೊರೆಯಬೇಕಾದ ಮನ್ನಣೆ ಮತ್ತು ಗೌರವ ದೊರೆತವು. ವಿಪರ್ಯಾಸದ ಸಂಗತಿ ಎಂದರೆ ಆ ಹೊತ್ತಿಗೆ ಪ್ರಶಸ್ತಿ ಪುರಸ್ಕಾರಗಳನ್ನು ಸ್ವೀಕರಿಸಲು ಲೂಯಿ ಬ್ರೈಲ್ ಬದುಕಿರಲಿಲ್ಲ. ಬದುಕಿನುದ್ದಕ್ಕೂ ಸಂಕಷ್ಟಗಳ ಮಧ್ಯೆಯೇ ಜೀವನ ಸಾಗಿಸಿದ ಲೂಯಿ ಬ್ರೈಲ್ ಸಾವಿನ ನಂತರವೂ ನೆನಪಿನಲ್ಲುಳಿಯುವಂಥ ಮಹತ್ವದ ಕಾಣಿಕೆಯನ್ನು ಪ್ರಪಂಚಕ್ಕೆ ನೀಡಿ ಫ್ರಾನ್ಸ್ ದೇಶದ ಮಹಾನ್ ನಾಯಕನೆನಸಿಕೊಂಡ. ಲೂಯಿಯ ಸಾವಿನ ನಂತರ ಆತ ಜನಿಸಿದ ಮನೆಯನ್ನು ಐತಿಹಾಸಿಕ ಸ್ಥಳವಾಗಿ ಪರಿವರ್ತಿಸಲಾಯಿತು.  ೧೯೫೨ ರಲ್ಲಿ ಲೂಯಿ ಬ್ರೈಲ್ ನ ಸಮಾಧಿಯನ್ನು ಫ್ರಾನ್ಸ್ ದೇಶದ ರಾಷ್ಟ್ರೀಯ ನಾಯಕರ ಸಮಾಧಿ ಸ್ಥಳವಾದ ಪ್ಯಾಂಥೆನ್ (Pantheon) ರುದ್ರಭೂಮಿಗೆ ಸ್ಥಳಾಂತರಿಸಿ ಆತನ ಸಾಧನೆಯನ್ನು ಗೌರವಿಸಲಾಯಿತು. ೨೦೦೯ ರಲ್ಲಿ ಲೂಯಿ ಬ್ರೈಲ್ ನ ೨೦೦ನೇ ಜನ್ಮದಿನದ ಸ್ಮರಣಾರ್ಥ ಅಮೇರಿಕ, ಭಾರತ, ಇಟಲಿ ಮತ್ತು ಬೆಲ್ಜಿಯಂ ದೇಶಗಳಲ್ಲಿ ಲೂಯಿ ಚಿತ್ರವಿರುವ ನಾಣ್ಯಗಳನ್ನು ಹೊರತರಲಾಯಿತು. ಜರ್ಮನ್ ರಾಷ್ಟ್ರವು ಲೂಯಿ ಬ್ರೈಲ್ ಭಾವಚಿತ್ರವಿರುವ ಅಂಚೆ ಚೀಟಿಯನ್ನು ಬಿಡುಗಡೆಮಾಡಿ ಆ ಸಾಧಕನನ್ನು ಗೌರವಿಸಿತು. ಜೊತೆಗೆ ಲೂಯಿ ಬ್ರೈಲ್ ನ ಸಾಧನೆ ಕುರಿತು ಅನೇಕ ಭಾಷೆಗಳಲ್ಲಿ ಮಕ್ಕಳ ಪುಸ್ತಕಗಳು ಪ್ರಕಟವಾಗಿವೆ. ಫ್ರಾನ್ಸ್  ದೇಶದಲ್ಲಿ ಲೂಯಿ ಬ್ರೈಲ್ ನ  ಸಾಧನೆಯ ಮೇಲೆ ಬೆಳಕು ಚೆಲ್ಲುವ ನಾಟಕಗಳು ಅಲ್ಲಲ್ಲಿ ಪ್ರದರ್ಶನಗೊಂಡವು ಮತ್ತು ೨೦೦೮ ರಲ್ಲಿ ಫ್ರಾನ್ಸ್ ಭಾಷೆಯಲ್ಲಿ ಸಿನಿಮಾ ಕೂಡ ತಯ್ಯಾರಾಯಿತು. 

ಕೊನೆಯ ಮಾತು 


ರಸಲ್ ಫ್ರೀಡಮನ್ ಬರೆದ 'ಔಟ್ ಆಫ್ ಡಾರ್ಕ್ ನೆಸ್' (Out of Darkness) ಪುಸ್ತಕದಲ್ಲಿನ ಪ್ರಾರಂಭದ ಈ ಕೆಳಗಿನ ಸಾಲುಗಳು ಲೂಯಿ ಬ್ರೈಲ್ ನೊಳಗಿನ ಮಹತ್ವಾಕಾಂಕ್ಷೆ ಮತ್ತು ತಹತಹಿಕೆಗೆ ಕನ್ನಡಿ ಹಿಡಿಯುತ್ತವೆ.

'More than anything else Louis Braille wanted to read. He could not accept the fact that as a blind boy, in the year 1821 he was unable to communicate by the written word. So each night in the darkness of his dormitory room he punched tiny holes in paper. His friends told him he was wasting his time, but Braille's experiment with dots became a system that as the plaque on the front of Braille's house reads, 'Open the doors of knowledge to all those who cannot see'.


-ರಾಜಕುಮಾರ.ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ  



Tuesday, December 24, 2013

ಹಚ್ಚಿದರು ಹಣತೆ

              






            ಕನ್ನಡದ ಹಿರಿಯ ಸಾಹಿತಿ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರು ನಿನ್ನೆ ಅಸ್ತಂಗತರಾದರು. ಇದು ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ  ನಷ್ಟ. ಜಿಎಸ್ಎಸ್ ಕನ್ನಡ ನಾಡಿನ ಸಮನ್ವಯ ಕವಿ. ತಮ್ಮ ಭಾವ ಗೀತೆಗಳ ಮೂಲಕ ಇಡೀ ನಾಡಿನ ಜನರ ಮನಸ್ಸುಗಳನ್ನು ಭಾವಲೋಕಕ್ಕೆ ಕೊಂಡೊಯ್ದ ಗಾರುಡಿಗ. ಯಾವ ನವ್ಯ, ನವೋದಯ, ಬಂಡಾಯಗಳ ಬೇಲಿಯನ್ನು ತಮ್ಮ ಸುತ್ತ ಕಟ್ಟಿಕೊಳ್ಳದೆ ತಮ್ಮೊಳಗಿನ ಸೃಜನಶೀಲತೆಯು  ಮುಕ್ಕಾಗದಂತೆ ಕಾಪಾಡಿಕೊಂಡು ಬಂದ ಕನ್ನಡದ ಅನನ್ಯ ಬರಹಗಾರ. ಅಪ್ರಮಾಣಿಕತೆ, ಭ್ರಷ್ಟಾಚಾರವೇ ನಮ್ಮ ಸುತ್ತ ಕುಣಿದು ಕೇಕೆ ಹಾಕುತ್ತಿರುವ ಹೊತ್ತು ಇದೇ ಜಿಎಸ್ಎಸ್ ಅವರ ಭಾವಗಿತೆಗಳು ನಮ್ಮ ಬದುಕನ್ನು ಸಹನೀಯವಾಗಿಸಿದವು.  ಬದುಕಿನ  ನಿಜಾರ್ಥ ನಮ್ಮೆದುರು ಅನಾವರಣಗೊಂಡಿದ್ದು ಅವರದೇ ಭಾವಗೀತೆಗಳ ಮೂಲಕ. ಒಂದರ್ಥದಲ್ಲಿ ಜಿಎಸ್ಎಸ್ ಅವರ ಭಾವಗೀತೆಗಳಿಗೆ ಬದುಕನ್ನೇ  ಬದಲಿಸುವ ಶಕ್ತಿಯಿದೆ. ಅದಕ್ಕೆಂದೇ ಅವು ಎಲ್ಲ ಕಾಲಕ್ಕೂ ಸಲ್ಲುವ ಗೀತೆಗಳು.

       ಜಿಎಸ್ಎಸ್ ಅವರದು ಜಾಗೃತಿ ಮತ್ತು ಚಿಂತನೆಗಳನ್ನು ಓದುಗರಲ್ಲಿ ಒಡಮೂಡಿಸುವ ಕಾವ್ಯ. ಅವರ ಕವಿತೆಗಳಲ್ಲಿ ಸಾಮಾಜಿಕ ಆಯಾಮ ಅನಾವರಣಗೊಂಡಿದೆ. ಕಾವ್ಯರಚನೆ ಅವರಿಗೆ ಅದೊಂದು ಸಾಮಾಜಿಕ ಬದುಕನ್ನು ಕಟ್ಟಿಕೊಡುವ ಪ್ರಕ್ರಿಯೆ. ಇಂಥ ಮನೋಭಾವವಿರುವ ಅವರ ಕವಿ ಮನಸ್ಸು 'ಕಾವ್ಯ ಬರೀ ಶಬ್ದ ಸೇರಿಸುವ ಕ್ರಿಯೆಯಲ್ಲ. ಬರೀ ಪದಕ್ಕೆ ಪದ ಜತೆಗಿದ್ದ ಮಾತ್ರಕ್ಕೆ ಪದ್ಯವಾದೀತು ಹೇಗೆ?' ಎಂದು ಪ್ರಶ್ನಿಸುತ್ತದೆ. ಅದಕ್ಕೆಂದೇ ಅವರು ತಮ್ಮ ಕಾವ್ಯ ರಚನೆಯನ್ನು ಹೀಗೆ ಹೇಳುತ್ತಾರೆ

          ನಾನು ಬರೆಯುತ್ತೇನೆ
          ಖುಷಿಗೆ, ನೋವಿಗೆ
          ರೊಚ್ಚಿಗೆ ಮತ್ತು ಹುಚ್ಚಿಗೆ
          ಅಥವಾ ನಂದಿಸಲಾರದ ಕಿಚ್ಚಿಗೆ

    ಸಮಾಜದ ಸಮಸ್ಯೆಗಳಿಗೆ ದನಿಯಾಗುವಲ್ಲಿ ಕವಿಯ ಸಾಫಲ್ಯವಡಗಿದೆ. ಕವಿಯಾದವನು ವೈಯಕ್ತಿಕವಾದದ್ದನ್ನು ಸಾರ್ವತ್ರಿಕರಿಸುತ್ತ ಹೋಗುತ್ತಾನೆ. ಜಿಎಸ್ಎಸ್ ಅವರ ಹೆಚ್ಚಿನ ಕವಿತೆಗಳಲ್ಲಿ ಶೋಷಿತರ ದನಿ ಅನುರಣಿಸಿದೆ.

          ಸುತ್ತ ಮುತ್ತ ಮನೆ ಮಠಗಳು
          ಹೊತ್ತಿಕೊಂಡು ಉರಿಯುವಲ್ಲಿ
          ಸೋತು ಮೂಕವಾದ ಬದುಕು
          ನಿಟ್ಟುಸಿರೊಳು ತೇಲುವಲ್ಲಿ
          ಯಾವ ಹಾಡ ಹಾಡಲಿ?

           ಉರಿವ ಕಣ್ಣ ಚಿತೆಗಳಲ್ಲಿ
           ಇರುವ ಕನಸು ಸೀಯುವಲ್ಲಿ
           ಎದೆ ಎದೆಗಳ ಜ್ವಾಲಾಮುಖಿ
           ಹೊಗೆ  ಬೆಂಕಿ ಕಾರುವಲ್ಲಿ
           ಯಾವ ಹಾಡ ಹಾಡಲಿ?

     ಹೀಗೆ ಸೋತ ಸಮಾಜಕ್ಕೆ ದನಿಯಾಗುವ ಕವಿಯಲ್ಲಿ ನಂಬಿಕೆಯೂ ಇದೆ. ಶೋಷಿತರ ಸಮಸ್ಯೆಗಳನ್ನು ತನ್ನ ಹೃದಯಕ್ಕೆ ತೆಗೆದುಕೊಂಡು ಅವುಗಳನ್ನು ಪರಿಹರಿಸುವ ಆತ್ಮವಿಶ್ವಾಸವೂ  ಅವರದಾಗಿತ್ತು. ನಂಬಿಕೆ ಮತ್ತು ಆತ್ಮವಿಶ್ವಾಸಗಳೇ ಬರಹಗಾರನ ಬಹುಮುಖ್ಯವಾದ ಆಸ್ತಿಗಳು. ಜೊತೆಗೆ ಇದರೊಂದಿಗೆ ತಾಯ್ತನದ ಅಂತ:ಕರಣವೂ  ಸೇರಿದರೆ ಬರಹಗಾರ ಎಲ್ಲ ಸಾಮಾಜಿಕ ವೈರುಧ್ಯಗಳಿಗೂ ಮುಖಾಮುಖಿಯಾಗಿ ನಿಲ್ಲಬಲ್ಲ.

        ದೀಪವಿರದ ದಾರಿಯಲ್ಲಿ
        ತಡವರಿಸುವ ನುಡಿಗಳೇ
         ಕಂಬನಿಗಳ ತಲಾತಲದಿ
         ನಂದುತಿರುವ ಕಿಡಿಗಳೇ
         ಉಸಿರನಿಡುವೆ
         ಹೆಸರ ಕೊಡುವೆ
         ಬನ್ನಿ ನನ್ನ ಹೃದಯಕೆ

       ಜಿಎಸ್ಎಸ್ ಅವರಲ್ಲಿ ತಾಯ್ತನದ ಅಂತ:ಕಾರಣದ ಜೊತೆಗೆ ಆ ತಾಯ್ತನಕ್ಕೆ ಸಂಕೇತಳಾದ ಹೆಣ್ಣನ್ನು ಗೌರವಿಸುವ ವಿಶಾಲ ಮನೋಭಾವವೂ ಇತ್ತು. ಅವರ 'ಸ್ತ್ರೀ' ಕವಿತೆ ಹೆಣ್ಣನ್ನು ಪೂಜ್ಯನೀಯ ದೃಷ್ಟಿಯಿಂದ ಕಾಣುವ ಅವರ ಮನೋಭಾವಕ್ಕೊಂದು ದೃಷ್ಟಾಂತ. ಅವರೊಳಗಿನ ಸ್ತ್ರೀ ಸಂವೇದನೆಯ ಗುಣ ಈ ರೀತಿಯಾಗಿ ಅನಾವರಣಗೊಂಡಿದೆ

          ಆಕಾಶದ ನೀಲಿಯಲ್ಲಿ
          ಚಂದ್ರ ತಾರೆ ತೊಟ್ಟಿಲಲ್ಲಿ
          ಬೆಳಕನಿಟ್ಟು ತೂಗಿದಾಕೆ
          ನಿನಗೆ ಬೇರೆ ಹೆಸರು ಬೇಕೆ
          ಸ್ತ್ರೀ ಅಂದರೆ ಅಷ್ಟೆ ಸಾಕೇ ?

           ಮನೆಮನೆಯಲಿ ದೀಪ ಮುಡಿಸಿ
           ಹೊತ್ತು ಹೊತ್ತಿಗನ್ನ ಉಣಿಸಿ
           ತಂದೆ ಮಗುವ ತಬ್ಬಿದಾಕೆ
           ನಿನಗೆ ಬೇರೆ ಹೆಸರು ಬೇಕೆ
           ಸ್ತ್ರೀ ಅಂದರೆ ಅಷ್ಟೆ ಸಾಕೇ ?

    ಜಿಎಸ್ಎಸ್ ಅವರಲ್ಲಿ ಬಹುಮುಖ್ಯವಾಗಿ ನಾವು ಕಾಣುವ ಇನ್ನೊಂದು ಗುಣ ಅದು ಅವರೊಳಗಿನ ನಿರ್ಲಿಪ್ತತೆ. ಯಾವ ಬಿರುದು, ಪ್ರಶಸ್ತಿಗಳ ಬೆನ್ನು ಹತ್ತಿ ಹೋದವರಲ್ಲ. ಅವುಗಳು ಅವರನ್ನು ಅರಸಿ ಬಂದಾಗಲೂ ಈ ಕವಿಯದು ಅದೇ ದಿವ್ಯ ನಿರ್ಲಿಪ್ತತೆ. ಕಲಾವಿದನಲ್ಲಿ ಇರಲೇ ಬೇಕಾದ ಗುಣವಿದು. ನಿರೀಕ್ಷೆ ಮತ್ತು ಅಹಂಕಾರಗಳನ್ನು ಮೀರಿ ನಿಂತಾಗಲೇ ಬರಹಗಾರನಲ್ಲಿ ಸೃಜನಶೀಲತೆ ಸೃಷ್ಟಿಯಾಗಬಲ್ಲದು. ಅಂಥದ್ದೊಂದು ಆಶಯವನ್ನು ಜಿಎಸ್ಎಸ್ ತಮ್ಮ 'ಎದೆ ತುಂಬಿ ಹಾಡಿದೆನು' ಕವಿತೆಯಲ್ಲಿ ವ್ಯಕ್ತಪಡಿಸಿರುವರು.

           ಎಲ್ಲ ಕೇಳಲಿ ಎಂದು
           ನಾನು ಹಾಡುವುದಿಲ್ಲ
           ಹಾಡುವುದು ಅನಿವಾರ್ಯ
           ಕರ್ಮ ನನಗೆ

           ಕೇಳುವವರಿಹರೆಂದು
           ನಾ ಬಲ್ಲೆ ಅದರಿಂದ
           ಹಾಡುವೇನು ಮೈದುಂಬಿ
           ಎಂದಿನಂತೆ ಯಾರು
           ಕಿವಿ ಮುಚ್ಚಿದರೂ ನನಗಿಲ್ಲ ಚಿಂತೆ


         ವೈಚಾರಿಕತೆ ಜಿಎಸ್ಎಸ್ ಕಾವ್ಯದ ಇನ್ನೊಂದು ಬಹುಮುಖ್ಯವಾದ ಗುಣ. ಜಿಎಸ್ಎಸ್ ವ್ಯಕ್ತಿತ್ವ ಜಾತಿ, ಧರ್ಮಗಳ ಸಂಕೋಲೆಯಿಂದ ಮುಕ್ತವಾದದ್ದು. ಅವರ ಕವಿ ಮನಸ್ಸು ಅದನ್ನೇ ಸಮಾಜದಿಂದಲೂ ನಿರೀಕ್ಷಿಸುತ್ತದೆ (ಇಲ್ಲಿ ನಿರೀಕ್ಷೆ ವೈಯಕ್ತಿಕ ನೆಲೆಯಲ್ಲಲ್ಲ. ಅದು ಸಮಾಜಮುಖಿ ನಿರೀಕ್ಷೆ). ವೈಚಾರಿಕ ಪ್ರಜ್ಞೆಯೊಂದು ನಮ್ಮಲ್ಲಿ ಒಡಮೂಡಲು ಅದಕ್ಕೆ ಧರ್ಮನಿರಪೇಕ್ಷಿತ ದೃಷ್ಟಿಕೊನವೇ ದಾರಿ. ಹಲವು ದೇವರನ್ನು ದೂರ ನೂಕಿ ಪ್ರೀತಿ, ಸ್ನೇಹವೇ ನಮ್ಮ ದೇವರಾಗಬೇಕೆನ್ನುವ ವೈಚಾರಿಕ ಪ್ರಜ್ಞೆ ಅವರದಾಗಿತ್ತು.

          ಎಲ್ಲೋ ಹುಡುಕಿದೆ ಇಲ್ಲದ ದೇವರ
          ಕಲ್ಲು ಮಣ್ಣುಗಳ ಗುಡಿಯೊಳಗೆ
          ಇಲ್ಲೇ ಇರುವ ಪ್ರೀತಿ ಸ್ನೇಹಗಳ
          ಗುರುತಿಸದಾದೆನು ನಮ್ಮೊಳಗೆ

          ಎಲ್ಲಿದೆ ನಂದನ ಎಲ್ಲಿದೆ ಬಂಧನ
          ಎಲ್ಲಾ ಇದೆ ಈ ನಮ್ಮೊಳಗೆ
          ಒಳಗಿನ ತಿಳಿಯನು ಕಲಕದೆ ಇದ್ದರೆ
          ಅಮೃತದ ಸವಿಯಿದೆ ನಾಲಿಗೆಗೆ

     
          ಹೀಗೆ ವೈಚಾರಿಕ ಪ್ರಜ್ಞೆಗೊಳಗಾದ ಕವಿ ಸಮಾಜದಲ್ಲಿ ಜನರ ದುಷ್ಟತನವನ್ನು ಕಂಡು ಸಂಕಟಪಡುತ್ತಾರೆ. ಮನುಷ್ಯರೊಳಗಿನ ಕೆಟ್ಟತನ ಅವರನ್ನು ಯಾತನೆಗೊಳಿಸುತ್ತದೆ. ದುಷ್ಟರ ದುಷ್ಟತನವನ್ನು ಪ್ರಶ್ನಿಸುತ್ತಲೇ ಸಮಾಜದೊಂದಿಗಿನ ತಮ್ಮ ಸಂಬಂಧವೇನು ಎನ್ನುವ ವಿವೇಚನೆಗೆ ಮುಂದಾಗುತ್ತಾರೆ.

          ದು:ಖ ಅವಮಾನ ಸಂಕಟಗಳಲ್ಲಿ ನಾನು
          ಒಬ್ಬಂಟಿಯಾಗುತ್ತೇನೆ. ಅದುವರೆಗು ಜತೆಗೆ
          ನಿಂತವರೊಬ್ಬರೂ ಇರದ ದ್ವೀಪವಾಗುತ್ತೇನೆ
          ಹಬ್ಬಿರುವ ಮಬ್ಬಿನ ಮಧ್ಯೆ ಒಬ್ಬನೇ ಕೂತು
          ಯೋಚಿಸುತ್ತೇನೆ ಯಾಕಿಷ್ಟು ದುಷ್ಟರಾಗುತ್ತಾರೆ
          ಜನ ಕೊಂಬೆಗಳ ಕಡಿದು ಹೂವುಗಳ
          ಹೊಸಕಿ ಹಕ್ಕಿಗಳ ಕೊರಳು ಹಿಸುಕುತ್ತಾರೆ
          ನಿಷ್ಕಾರಣ? ಈ ಹೊತ್ತಿನಲ್ಲಿ ಮತ್ತೆ ಕಾಡುವುದು
          ಪ್ರಶ್ನೆ ಈ ಇವರಿಗೂ ನನಗೂ ಏನು ಸಂಬಂಧ?


          ಒಟ್ಟಿನಲ್ಲಿ ಜಿಎಸ್ಎಸ್ ಅವರ ಕವಿತೆಗಳು ಕಾಲ ಮತ್ತು ದೇಶಾತೀತವಾದವುಗಳು. ಅವರು ತಮ್ಮ ಭಾವಗೀತೆಗಳ ಮೂಲಕ ನಮ್ಮನ್ನು ಭಾವಲೋಕಕ್ಕೆ ಕರೆದೊಯ್ದು ನಮ್ಮಗಳ ಬದುಕನ್ನು ಒಂದಿಷ್ಟು ಸಹನೀಯವಾಗಿಸಿದ್ದು ಎಷ್ಟು ಸತ್ಯವೋ  ನಮ್ಮಲ್ಲಿ ವೈಚಾರಿಕ ಪ್ರಜ್ಞೆಯನ್ನು ಮೂಡಿಸಿದ್ದು ಕೂಡ ಅಷ್ಟೆ ಸತ್ಯ. ಕುವೆಂಪು ನಂತರ ನಮಗೆ ಜಿಎಸ್ಎಸ್ ಇದ್ದರು ಈಗ ಜಿಎಸ್ಎಸ್ ನಂತರ _________ ಎನ್ನುವ ಪ್ರಶ್ನೆಯೊಂದು ನಮ್ಮ ಮನದಲ್ಲಿ ಮೂಡುವುದು ಸಹಜ. ಜಿಎಸ್ಎಸ್ ಕೂಡ ತಮ್ಮ ಗುರು ಕುವೆಂಪು ಅವರಂತೆ ಕನ್ನಡ ಸಾಹಿತ್ಯ ಲೋಕದಲ್ಲಿ ಒಂದು ಉತ್ಕೃಷ್ಟ ಗುರು-ಶಿಷ್ಯ ಪರಂಪರೆಯನ್ನೇ ಬೆಳೆಸಿದರು. ಅದಕ್ಕೆಂದೇ ಯು. ಆರ್. ಅನಂತಮೂರ್ತಿ ಅವರು ಜಿಎಸ್ ಎಸ್ ಅವರನ್ನು 'ನಮ್ಮ ಕಾಲದ ದ್ರೋಣ' ಎಂದು ಕರೆಯುತ್ತಾರೆ. ಜಿಎಸ್ಎಸ್ ಕನ್ನಡ ಸಾಹಿತ್ಯದಲ್ಲಿ ತಮ್ಮೊಂದಿಗೆ ಒಂದು ದೊಡ್ಡ ಶಿಷ್ಯ ಸಮೂಹವನ್ನೇ ಕಟ್ಟಿ ಬೆಳೆಸಿದರು. ಜಿಎಸ್ಎಸ್ ಅವರ ಈ ಗುಣವನ್ನು ದುಂಡಿರಾಜ್ ತಮ್ಮ 'ತೆಂಗಿನ ಮರ' ಕವಿತೆಯಲ್ಲಿ ಬಹು ವಿಶಿಷ್ಟವಾಗಿ ಕಟ್ಟಿಕೊಟ್ಟಿರುವರು.


          ಮರಗಳಲ್ಲಿ
          ತೆಂಗಿನ ಮರ
          ಕವಿಗಳಲ್ಲಿ ಇವರು
          ಅದೇ ಥರ
          ಎತ್ತರ
          ಸರಳ, ನೇರ

          ನೆಲದ ಸಾರವನ್ನೆಲ್ಲ ಒಬ್ಬರೇ
          ಹೊಟ್ಟೆ ಬಾಕನಂತೆ ಹೀರಿ
          ಅಡ್ಡಾದಿಡ್ಡಿ ಬೆಳೆದು
          ಎಲ್ಲ ಕಡೆಗೂ ಗೆಲ್ಲು
          ಚಾಚಿದವರಲ್ಲ

          ಗಾಳಿ ಬೆಳಕು
          ತಾವಷ್ಟೇ ಕುಡಿದು
          ಬೇರೆ ಕುಡಿ ಚಿಗುರದಂತೆ
          ನೆರಳು ರಾಚಿದವರಲ್ಲ
       
          ಬೆಳೆಯುವಂತೆ ತೆಂಗಿನ
          ತೋಟದಲ್ಲಿ ಬಾಳೆ,
          ಕೋಕೋ, ಅಡಿಕೆ, ವೀಳ್ಯದೆಲೆ
          ಬೆಳೆಸಿದರು ನೂರಾರು
          ಸಾಹಿತಿಗಳನ್ನು ತಮ್ಮ
          ಜೊತೆ ಜೊತೆಯಲ್ಲೆ 

      ಜಿಎಸ್ಎಸ್ ಭೌತಿಕವಾಗಿ  ನಮ್ಮಿಂದ  ದೂರಾದರೂ ತಮ್ಮ ಕವಿತೆಗಳ ಮೂಲಕ ಅವರು ಎಂದಿಗೂ ನಮ್ಮೊಂದಿಗಿರುತ್ತಾರೆ. ಈ ಸಮನ್ವಯದ ಕವಿಗೆ ಒಂದು ಪುಟ್ಟ ಕವನದ ಮೂಲಕ ಭಾವಪೂರ್ಣ ನಮನಗಳು. 

                             ಹಚ್ಚಿದರು ಹಣತೆ 


                                     ಸಿಡಿದು ಬಂತೊಂದು 
                                     ಬೆಂಕಿಯ ಕಿಡಿ 
                                     ರಸಋಷಿ  (ಕುವೆಂಪು) ಯ 
                                     ಯಜ್ಞ ಕುಂಡದಿಂದ 


                                    ಗುರು ಹಚ್ಚಿದ  ಹಣತೆಯಲಿ 
                                    ಬೆಳಗಿದವರು ನೀವು 
                                    ಗುರುವಿನಂತೆ ಶಿಷ್ಯ 
                                    ಕಂಡಿತು ಈ ಜಗವು 


                                    ಸುತ್ತಲೂ ಕತ್ತಲೆಯೊಳಗೆ 
                                    ಪ್ರೀತಿಯ ಹಣತೆ ಹಚ್ಚಿ 
                                    ಉಣಬಡಿಸಿದಿರಿ ಸಾಹಿತ್ಯದೂಟ 
                                    ಅನುಭವದ ಜೋಳಿಗೆ ಬಿಚ್ಚಿ 


                                    ಭೋರ್ಗರೆಯುತ್ತಿತ್ತು  ನಿಮ್ಮಲ್ಲಿ 
                                    ಕನ್ನಡದ ಅಭಿಮಾನ 
                                    ಮುಗ್ಧ ನಗುವಿನ ಹಿಂದೆ 
                                    ಜಗವ ಮಣಿಸುವ ಸ್ವಾಭಿಮಾನ 


                                    ನವ್ಯ ನವೋದಯ 
                                    ಬಂಡಾಯದ ಹಣೆಪಟ್ಟಿ 
                                    ಹಚ್ಚಿಕೊಂಡವರಲ್ಲ 
                                    ಅದಕ್ಕೆಂದೇ ರಾಷ್ಟ್ರಕವಿಯ ಪಟ್ಟ 


                                    ಕಳಚಿಕೊಂಡವರು ನೀವು 
                                    ಹಮ್ಮು ಬಿಮ್ಮಿನ ಸಂಕೋಲೆ 
                                    ಕೊನೆ ಉಸಿರಿನಲ್ಲೂ  
                                    ಕನ್ನಡದ  ಪ್ರೇಮ ಬತ್ತದ ಸೆಲೆ 


                                     ರಾಷ್ಟ್ರಕವಿಯಾದರೂ 
                                     ಅದೇ ನಿರ್ಲಿಪ್ತ ಮನ 
                                     ಹಾಡು ಹಕ್ಕಿಗೆ ಬೇಕೇ 
                                     ಬಿರುದು ಸನ್ಮಾನ 


                                     ಗುರುವಿನಂತೆ ನೀವು 
                                     ಹಚ್ಚಿದಿರಿ ಹಣತೆ ನೂರಾರು 
                                     ಸದ್ದುಗದ್ದಲದಾಚೆ ನಿಂತು 
                                     ನಿಮ್ಮ ನೆನೆಯುವ ನಾವು ಧನ್ಯರು 

                                                       -ರಾಜಕುಮಾರ.ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ