Monday, February 17, 2014

ಹೀಗೊಂದು ತಲ್ಲಣ

           
         ಆಕೆ ಮಗಳಿಗಾಗಿ ಮನೆ ಬಾಗಿಲಲ್ಲಿ ಕಾಯುತ್ತ  ನಿಂತ ಆ ಘಳಿಗೆ ಪ್ರತಿ ಕ್ಷಣವೂ ಅವಳ ಮನಸ್ಸು ಆತಂಕದಿಂದ ಹೊಯ್ದಾಡುತ್ತಿತ್ತು. ಸೂರ್ಯ  ಪಡುವಣದಲ್ಲಿ ಮುಳುಗಿ ಕತ್ತಲಾಗುವ ಆ ಹೊತ್ತು ಮಗಳಿಗಾಗಿ ದಾರಿ ಕಾಯುತ್ತ ನಿಂತವಳ ಮನದಲ್ಲಿ ಸುಳಿದಾಡಿದ ಸಂಗತಿಗಳು ಅನೇಕ. ಇದೇ ಈಗ ಹೈಸ್ಕೂಲು ಶಿಕ್ಷಣ ಮುಗಿಸಿ ಕಾಲೇಜಿನ ಮೆಟ್ಟಿಲೇರಿದವಳ ವಯಸ್ಸು ಇನ್ನೂ ಹದಿನಾರು ದಾಟಿಲ್ಲ. ಅಪ್ಪ ಅಮ್ಮನ ಒಬ್ಬಳೇ ಮುದ್ದಿನ ಮಗಳು. ಯಾರೊಡನೆಯೂ ಗಟ್ಟಿಯಾಗಿ ಮಾತನಾಡದ ಮೃದು ಸ್ವಭಾವ. ಓದಿನಲ್ಲೂ ಜಾಣೆ. ಹೈಸ್ಕೂಲು ಮುಗಿಯುವವರೆಗೂ ಅಮ್ಮನೇ ಶಾಲೆಯವರೆಗೂ ಕೈಹಿಡಿದು ಕರೆದೊಯ್ದು ಕರೆತರುತ್ತಿದ್ದಳು. ನೋಡಿದವರೆಲ್ಲ ನಕ್ಕು ಹಾಸ್ಯ ಮಾಡಿದರೂ ಅವಳು ಅಂದಿಗೂ ಇಂದಿಗೂ ಆ ತಾಯಿಗೆ ಚಿಕ್ಕ ಮಗುವೇ. ನೆನಪುಗಳಲ್ಲಿ ಕಳೆದು ಹೋದವಳಿಗೆ ಮತ್ತೆ ಮಗಳು ಇನ್ನೂ ಬರಲಿಲ್ಲವಲ್ಲ ಎನ್ನುವ ಆತಂಕ ಕಾಡತೊಡಗಿತು. ದಿನ ಬೆಳಗಾದರೆ ಪತ್ರಿಕೆಗಳಲ್ಲಿ ಟಿ. ವಿ ಚಾನೆಲ್ ಗಳಲ್ಲಿ ಎದುರಾಗುವ ಸುದ್ದಿ ನೆನಪಾಗಿ ಕಾಯುತ್ತ ನಿಂತ ಆ ಪ್ರತಿ ಕ್ಷಣವೊಂದು ಯುಗವೆಂದು ಅನ್ನಿಸುತ್ತಿತ್ತು. ಮಗಳು ಕಾಲೇಜಿಗೆ ಹೋಗಲು ಪ್ರಾರಂಭಿಸಿದ ಆರಂಭದ ದಿನಗಳಲ್ಲಿ ಮಗಳಿಗೆ ಜೊತೆಯಾಗಿ ಒಂದೆರಡು ದಿನ ಹೋಗಿದ್ದುಂಟು. ಆಗೆಲ್ಲ ಅವಳದು ಒಂದೇ ತಕರಾರು 'ಅಮ್ಮ ನೀ ಹೀಂಗ ಜೊತಿಗಿ ಬಂದ್ರ ಎಲ್ಲರೂ ನನ್ನ ಚಿಕ್ಕ ಮಗು ಅಂತ ಹಂಗಿಸ್ತಾರ'. ಆಕೆಗೇನು ಗೊತ್ತು ಹೆತ್ತ ಕರುಳಿನ ಸಂಕಟ. ಅಪ್ಪನೂ  ಮಗಳ ಮಾತಿಗೆ ಧ್ವನಿಗೂಡಿಸಿದಾಗ ಸೋಲುವ ಸರದಿ ಅವಳದಾಯಿತು. 'ಮನೆಗೆ ತಡ ಮಾಡದೇ ಬೇಗನೆ ಬರಬೇಕು ನೋಡು' ಎಂದ ಮಾತಿಗೆ ಮಗಳು ಹೂಂ ಗುಟ್ಟಿದಾಗಲೇ ಒಲ್ಲದ ಮನಸ್ಸಿನಿಂದ ಒಪ್ಪಿಗೆ ನೀಡಿದ್ದು.

          'ಇನ್ನೂ ಬರಲಿಲ್ಲವಲ್ಲ' ಆ ಕಡೆ ಈ ಕಡೆ ಕತ್ತು ಹೊರಳಿಸಿ ದೃಷ್ಟಿ ಹಾಯುವವರೆಗೂ ನೋಡಿದ್ದೆ ಬಂತು ಮಗಳು ಕಾಣಿಸುತ್ತಿಲ್ಲ. ಅವಳ ಆತಂಕ ಮತ್ತಷ್ಟು ಹೆಚ್ಚುವಂತೆ ರಾಜಧಾನಿಯಲ್ಲಿ ಕಾಲೇಜು ವಿದ್ಯಾರ್ಥಿನಿಯನ್ನು ಪುಂಡರ ಗುಂಪೊಂದು ಅಪಹರಿಸಿದೆ ಎಂದು   ಟಿ.ವಿ ಯ ಚಾನೆಲ್ ವೊಂದರ ವಾರ್ತಾ ವಾಚಕನ ಧ್ವನಿ ಕಿವಿಯ ಮೇಲೆ ಅಪ್ಪಳಿಸಿತು. ಆತಂಕದೊಂದಿಗೆ ಗಾಬರಿಯೂ ಜೊತೆಗೂಡಿ ಅವಳ ಮುಖ ವಿವರ್ಣವಾಯಿತು. ದೇವರೇ ಮಗಳು ಮನೆಗೆ ಬೇಗ ಬರಲೆಂದು ನಿಂತಲ್ಲಿಯೇ ಆ ಕ್ಷಣಕ್ಕೆ ನೆನಪಾದ ದೇವರುಗಳ ಮೊರೆ ಹೋದಳು. ಫೋನ್ ಮಾಡಿ ಎಲ್ಲಿರುವಳೆಂದು ಕೇಳಬೇಕೆಂದರೆ ತನ್ನ ಮೊಬೈಲ್ ಮನೆಯಲ್ಲೇ ಬಿಟ್ಟು ಹೋಗಿರುವಳು. ಈಗೀಗ ಹೆಣ್ಣು ಮಕ್ಕಳು ಒಬ್ಬಬ್ಬರೇ ಓಡಾಡುವುದು ಕಷ್ಟವಾಗುತ್ತಿದೆ ಅದಕ್ಕೆಂದೇ ಹೊರಗೆ ಹೋಗುವಾಗಲೆಲ್ಲ ಜೊತೆಗೆ ಮಗನನ್ನು ಕಳಿಸುತ್ತೇನೆ ಪಕ್ಕದ ಮನೆಯಾಕೆ ನುಡಿದಾಗ ಮಗಳು ಜೊತೆಗಿಲ್ಲದೆ ಒಬ್ಬಂಟಿ ಎನ್ನುವ ಸಂಗತಿ ಆತಂಕಕ್ಕೆ ಸಂಕಟವನ್ನೂ ಸೇರಿಸಿ ಮತ್ತಷ್ಟು ವೇದನೆ ನೀಡಿತು. ಒಂದಿಷ್ಟು ಹೊರಗಾದರೂ ಹೋಗಿ ನೋಡಿ ಬರಲೇ ಎನ್ನುವ ವಿಷಯ ಹೊಳೆದು ಇನ್ನೇನು ಮನೆಯ ಕಾಂಪೌಂಡ ದಾಟಿ ಹೊರಬರುವಷ್ಟರಲ್ಲಿ ದೂರದಲ್ಲಿ ಮಗಳು ಬರುತ್ತಿರುವುದು ಕಾಣಿಸಿ ಮನಸ್ಸಿಗೆ ಸಮಾಧಾನವಾಯಿತು. ಮಗಳು ಮನೆಯೊಳಗೆ ಬಂದೊಡನೆ ದೇವರಿಗೆ ದೀಪ ಹಚ್ಚಿ ಕೈಮುಗಿದವಳಿಗೆ ಮನದ ತಲ್ಲಣ ಮಾಯವಾಗಿ ಸಮಾಧಾನದ ಭಾವ. ಆದರೆ ಅವಳಿಗೆ ಗೊತ್ತು ಈ ಸಮಾಧಾನ ಈ ರಾತ್ರಿ ಮಾತ್ರವೆಂದು. ನಾಳೆಯ ಬೆಳಗು ಮತ್ತದೇ ಆತಂಕ, ತಲ್ಲಣ, ದುಗುಡಗಳಿಂದ ಎದುರಾಗಲಿದೆ. ಈ ತಲ್ಲಣ ಎಲ್ಲಿಯವರೆಗೆ ಉತ್ತರ ಅವಳಲ್ಲಿಲ್ಲ.

---೦೦೦---

       ಪಟ್ಟಣದಲ್ಲಿ ಓದುತ್ತಿರುವ ಪರಿಚಿತರ ಮಗ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಆ ಕ್ಷಣಕ್ಕೆ ಆ ತಂದೆ ತಾಯಿಗಳನ್ನು ತಲ್ಲಣಿಸುವಂತೆ ಮಾಡಿತು. ಅವರ  ಅದೇ ವಯಸ್ಸಿನ ಮಗ ದೂರದ ಪಟ್ಟಣದಲ್ಲಿದ್ದು ಓದುತ್ತಿರುವನು. ಇದೇ ಈಗ ಮೀಸೆ ಚಿಗುರುತ್ತಿರುವ ವಯಸ್ಸು. ಓದಿ ವಿದ್ಯಾವಂತನಾಗಲಿ ಎಂದು ಹೊಟ್ಟೆ ಬಟ್ಟೆ ಕಟ್ಟಿ ಪಟ್ಟಣದ ಕಾಲೇಜಿಗೆ ಸೇರಿಸಿದ್ದಾಯಿತು. ಹಳ್ಳಿಯ ಈ ದುಡಿತದ ಬದುಕು ನಮ್ಮೊಂದಿಗೆ ಮುಗಿದು ಹೋಗಲಿ ಈ ಕಷ್ಟ ಮಗನನ್ನು ಕಾಡದಿರಲೆಂದು  ಇದ್ದ ಸ್ವಲ್ಪ ಜಮೀನನ್ನೂ ಮಾರಿ ಬಂದ ಹಣವನ್ನು ಮಗನ ವಿದ್ಯಾಭ್ಯಾಸಕ್ಕೆಂದು ತೆಗೆದಿಟ್ಟಾಗಿದೆ. ಮುಂದೆ ಸಮಸ್ಯೆ ಎದುರಾಗದಿರಲಿ ಎನ್ನುವ ಮುನ್ನೆಚ್ಚರಿಕೆ ಇದು. ತಿಂಗಳಿಗೋ ಎರಡು ತಿಂಗಳಿಗೋ ಮನೆಗೆ ಬರುವ ಮಗ ಅವರ ಕನಸುಗಳಿಗೆ ನೀರೆರೆಯುತ್ತಿರುವನು. ಹೀಗೆ ನಾಳೆಯ ಕನಸುಗಳೊಂದಿಗೆ ಬದುಕುತ್ತಿರುವವರಿಗೆ ಪರಿಚಿತರ ಮಗನ ಧಿಡೀರ್ ಸಾವು ಆತಂಕವನ್ನುಂಟು ಮಾಡಿದೆ. ಅವರ ಆತಂಕಕ್ಕೂ ಕಾರಣವಿದೆ. ಆ ಹುಡುಗ ಸತ್ತಿದ್ದು ಪ್ರೇಮ ವೈಫಲ್ಯದಿಂದ ಎನ್ನುವುದು ಕೆಲವರ ಮಾತಾದರೆ ಇನ್ನು ಕೆಲವರು ಆತ ಪರೀಕ್ಷೆಯಲ್ಲಿ ಫೇಲಾದದ್ದೇ ಅದಕ್ಕೆ ಕಾರಣವಂತೆ ಎನ್ನುವರು. ಪಟ್ಟಣದಲ್ಲಿ ಯಾವ ಯಾವುದೋ ದುಶ್ಚಟಗಳಿಗೆ ಬಿದ್ದು ಹುಡುಗ ಮೈತುಂಬ ಸಾಲ ಮಾಡಿಕೊಂಡು ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡ ಎಂದು ಉಳಿದವರ ಮಾತು. ಒಟ್ಟಿನಲ್ಲಿ ಯಾವ ಕಾರಣಕ್ಕಾಗಿ ಸತ್ತ ಎನ್ನುವುದು ಯಾರಿಗೂ ಗೊತ್ತಿಲ್ಲ. ಸತ್ತವನ ಬದುಕಿನ ಸುತ್ತ ಅನೇಕ ಕಥೆಗಳು ಹುಟ್ಟಿಕೊಳ್ಳುತ್ತಿರುವಾಗ ಅವನದೇ ವಯಸ್ಸಿನ ಮಗನನ್ನು ದೂರದ ಊರಲ್ಲಿ ಓದಲು ಬಿಟ್ಟ ಈ ಅಪ್ಪ ಅಮ್ಮನಿಗೆ ಅದೇನೋ ಆತಂಕ ಮತ್ತು ತಲ್ಲಣ. ಮಗನೇನಾದರೂ ಪ್ರೇಮದಲ್ಲಿ ಬಿದ್ದಿರಬಹುದೇ, ದುಶ್ಚಟಗಳೇನಾದರೂ ಊಹುಂ ಇರಲಿಕ್ಕಿಲ್ಲ. ಪ್ರತಿ ಸಲದಂತೆ ಈ ಬಾರಿ ಮಗ ಮನೆಗೆ ಬಂದಾಗ ಅವನಲ್ಲಿ ಏನಾದರೂ ಬದಲಾವಣೆಯಾಗಿದೆಯೆ ಎಂದು ಸೂಕ್ಷ್ಮವಾಗಿ ಗಮನಿಸಿದ್ದಾಯಿತು. ಕೇಳಬೇಕೆಂದ ವಿಷಯ ನಾಲಿಗೆಯವರೆಗೂ ಬಂದು ಕೇಳಲಾಗದೆ ಪ್ರಶ್ನೆ ಮನದಲ್ಲೇ ಉಳಿದಿದ್ದು ಅದು ಎಷ್ಟು ಸಲವೋ. ಈಗೀಗ ಊರಿಗೆ ಬಂದರೆ ಮನೆಯಲ್ಲಿ ಹೆಚ್ಚು ಮಾತಿಲ್ಲ ಬೇರೆ ಯಾರೊಂದಿಗೂ ಬೇರೆಯುವುದಿಲ್ಲ. ದಿನಪೂರ್ತಿ ಮೊಬೈಲ್ ನಲ್ಲೇ ಮುಳುಗಿರುತ್ತಾನೆ. ಅದೇ ಅವನ ಪ್ರಪಂಚ. ಈ ಮೊಬೈಲ್ ಗಳಿಂದಲೇ ಈಗಿನ ಮಕ್ಕಳು ಹಾಳಾಗುತ್ತಿರುವರಂತೆ. ಓದಿನ ಬಗ್ಗೆ ಏನಾದರೂ ಕೇಳಿದರೆ ಅರ್ಥವಾಗದ ಮಾತಾಡುತ್ತಾನೆ. ನಿಮಗೆ ಹೇಳಿದರೆ ಗೊತ್ತಾಗುವುದಿಲ್ಲ ಬಿಡಿ ಎಂದು ಸಿಟ್ಟಿಗೆ ಬರುತ್ತಾನೆ. ಹೆಚ್ಚು ಕೇಳಿದರೆ ವಾರಪೂರ್ತಿ ಇರಲು ಬಂದವನು ಎರಡೇ ದಿನಗಳಿಗೆ ಹೊರಟು ನಿಲ್ಲುತ್ತಾನೆ. ಈಗಿನ ಮಕ್ಕಳನ್ನು ಅರ್ಥ ಮಾಡಿಕೊಳ್ಳಲು ಅಪ್ಪ ಅಮ್ಮನಿಗೆ ಸಾಧ್ಯವೇ ಆಗುತ್ತಿಲ್ಲ. ಅವನೇನಾದರೂ ......... ಪ್ರಶ್ನೆಯೊಂದು ಮನದಲ್ಲಿ ಉಳಿದು ಕಾಡತೊಡಗುತ್ತದೆ. ಪಟ್ಟಣದಿಂದ ಅವನ ಬಗ್ಗೆ ಅಂಥದ್ದೇನಾದರೂ ಸುದ್ದಿ ಬರಬಹುದೇ ಜೀವ ತಲ್ಲಣಿಸುತ್ತಿದೆ.

---೦೦೦---

       ಸರ್ಕಾರ   ಕಣ್ತೆರೆಯದೆ ಹೋದರೆ  ಕನ್ನಡ ಭಾಷೆ ಮೂಲೆ ಗುಂಪಾಗುವುದು ಖಂಡಿತ. ಹೀಗೆಂದು ಹೇಳಿ ನಿಟ್ಟುಸಿರು ಬಿಟ್ಟವನು ನನ್ನೂರಿನ ನನ್ನ ಬಾಲ್ಯದ ಗೆಳೆಯ. ಅವನು ಹೇಳುವುದರಲ್ಲೂ ನಿಜವಿದೆ. ನಾಯಿ ಕೊಡೆಗಳಂತೆ ಇಂಗ್ಲಿಷ್ ಶಾಲೆಗಳು ತಲೆ  ಎತ್ತುತ್ತಿರುವಾಗ ಇನ್ನು ಕನ್ನಡ ಭಾಷೆಯನ್ನು ಉಳಿಸಿಕೊಳ್ಳುವುದು ಅತ್ಯಂತ ಕಷ್ಟದ ಕೆಲಸ. ಮೊನ್ನೆ ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ ಬೆಂಬಲಿತ ಸದಸ್ಯ ಕನ್ನಡದ ಬಗ್ಗೆ ಹೀನಾಯವಾಗಿ ಮಾತನಾಡಿದಾಗ ಕೇಳಿಯೂ  ಸುಮ್ಮನಿದ್ದ ಸರ್ಕಾರ ಇನ್ನು ಇಂಗ್ಲಿಷ್ ಶಾಲೆಗಳನ್ನು ಮುಚ್ಚಿಸಲು ಮುಂದಾಗುವುದು ದೂರದ ಮಾತು. ಇವತ್ತು ಶಿಕ್ಷಣದ ಬಗ್ಗೆ ಕಾಳಜಿ ಇರುವ  ಜನರು  ಶಾಲೆಗಳನ್ನು ಸ್ಥಾಪಿಸಲು ಮುಂದೆ ಬರುತ್ತಿಲ್ಲ. ಆದರೆ ಯಾರು  ಶಾಲೆಗಳನ್ನು ಸ್ಥಾಪಿಸಲು ಮುಂದೆ ಬರುತ್ತಿರುವರೋ ಅವರು  ಶಿಕ್ಷಣವನ್ನು ಉದ್ದಿಮೆ ಎಂದೇ ಪರಿಭಾವಿಸುತ್ತಿರುವರು. ಸಮಸ್ಯೆ ಇರುವುದೇ ಇಲ್ಲಿ. ಯಾವಾಗ ಶಾಲೆಗಳ ಸ್ಥಾಪಕರು ಶಿಕ್ಷಣದ ಮೇಲೆ ಕೋಟ್ಯಾಂತರ ರುಪಾಯಿಗಳನ್ನು ಬಂಡಾವಳ ಹೂಡುತ್ತಾರೋ ಆಗ ಅವರು ಸಹಜವಾಗಿಯೇ ಅದರಿಂದ ಲಾಭವನ್ನು ನಿರೀಕ್ಷಿಸುತ್ತಾರೆ. ಸರ್ಕಾರ ಮಾಡಬೇಕಾದ ಕೆಲಸವನ್ನು ಖಾಸಗಿಯವರಿಗೆ ವಹಿಸಿದಾಗ ಆಗುವುದೇ ಹೀಗೆ. ಹೀಗೆ ಕೋಟ್ಯಾಂತರ ರುಪಾಯಿಗಳನ್ನು ಖರ್ಚು ಮಾಡುವ ಬಂಡವಾಳದಾರರು ಅದಕ್ಕೆ ಲಾಭದ ರೂಪವಾಗಿ  ವಿದ್ಯಾರ್ಥಿಗಳಿಂದ ಲಕ್ಷಾಂತರ ರುಪಾಯಿಗಳನ್ನು ಶುಲ್ಕವಾಗಿ ಪಡೆಯುವರು. ಜೊತೆಗೆ ಈ ಖಾಸಗಿ ವಲಯದಿಂದ ಶಿಕ್ಷಣಕ್ಕೆ ಎದುರಾಗುತ್ತಿರುವ ಇನ್ನೊಂದು ಬಹುದೊಡ್ಡ ಅಪಾಯವೆಂದರೆ ಅದು ಕನ್ನಡ ಶಾಲೆಗಳು ಮೂಲೆಗುಂಪಾಗುತ್ತಿರುವುದು.  ಹೀಗೆ ಶಿಕ್ಷಣ ಒಂದು ಉದ್ದಿಮೆಯಾಗಿ ಬದಲಾಗುತ್ತಿರುವುದು ಮತ್ತು ಕನ್ನಡ ಮಾಧ್ಯಮದ ಶಿಕ್ಷಣ ನೇಪಥ್ಯಕ್ಕೆ ಸರಿಯುತ್ತಿರುವುದು ಇವತ್ತು ಶಿಕ್ಷಣ ಕ್ಷೇತ್ರದ ಮುಖ್ಯ ಸವಾಲುಗಳಾಗಿವೆ.

         ಈ ಸವಾಲುಗಳ ನಡುವೆಯೂ ಜಾಗತೀಕರಣಕ್ಕೆ ನಮ್ಮ ಮಕ್ಕಳನ್ನು ಮುಖಾಮುಖಿಯಾಗಿ ನಿಲ್ಲಿಸಲು ಈ ಖಾಸಗಿಯವರ ಶಾಲೆಗಳು ನೆರವಾಗುತ್ತಿವೆ ಎನ್ನುವ ಮಾತುಗಳೂ ಕೇಳಿಬರುತ್ತಿವೆ. ನಮ್ಮ ಮಕ್ಕಳು ಬದುಕನ್ನು ರೂಪಿಸಿಕೊಳ್ಳುವುದಾದರೆ ಶಿಕ್ಷಣವನ್ನು ಒಂದು ಉದ್ದಿಮೆಯಾಗಿ ಅದರೊಂದಿಗೆ ಇಂಗ್ಲಿಷ್ ಶಿಕ್ಷಣವನ್ನೂ ನಾವೆಲ್ಲರೂ ಒಟ್ಟಾಗಿಯೇ ಸ್ವಾಗತಿಸೋಣ. ಆದರೆ ಇಲ್ಲಿರುವ ಬಹುಮುಖ್ಯ ಪ್ರಶ್ನೆ ಎಂದರೆ ಖಾಸಗಿಯವರು ಅಪೇಕ್ಷಿಸುತ್ತಿರುವ ದುಬಾರಿ ಶುಲ್ಕವನ್ನು ಪಾವತಿಸುವವರಾರು? ಸರ್ಕಾರವೇನಾದರೂ ಪಾಲಕರ ಬದಲಾಗಿ ಶುಲ್ಕವನ್ನು ಪಾವತಿಸಲು ಮುಂದಾಗುತ್ತಿದೆಯೇ? ಹೀಗೆ ದುಬಾರಿ ಶುಲ್ಕವನ್ನು ಸಮಾಜದಲ್ಲಿನ ಶ್ರೀಮಂತ ವರ್ಗ ಮಾತ್ರ ಪಾವತಿಸುವ ಶಕ್ತಿ ಮತ್ತು ಸಾಮರ್ಥ್ಯ  ಹೊಂದಿರುವುದರಿಂದ ಬಡಕುಟುಂಬಗಳಲ್ಲಿನ ಮಕ್ಕಳು ಏನು ಮಾಡಬೇಕು. ಆಗ ಸರ್ಕಾರ ಅವರು ಸರ್ಕಾರಿ ಸ್ವಾಮ್ಯದ ಕನ್ನಡ ಶಾಲೆಗಳಲ್ಲಿ ಪ್ರವೇಶ ಪಡೆಯಲಿ ಎಂದು ಉತ್ತರ ನೀಡುತ್ತದೆ. ಯಾವಾಗ ಇಂಗ್ಲಿಷ್ ಶಿಕ್ಷಣ ಎನ್ನುವ ಉದ್ದಿಮೆ  ನಮ್ಮ ಬಡ ಮಕ್ಕಳ ಬದುಕನ್ನು ರೂಪಿಸಲು ಮುಂದಾಗುತ್ತಿಲ್ಲ ಎಂದಾದರೆ ನಾವುಗಳೆಲ್ಲ ಏಕೆ ಈ ಖಾಸಗಿ ಶಿಕ್ಷಣದ ಉದ್ಯಮವನ್ನು ಸ್ವಾಗತಿಸಬೇಕು ಎನ್ನುವ ವ್ಯವಹಾರಿಕ ಪ್ರಶ್ನೆ ಎದುರಾಗುತ್ತದೆ. ಆದರೆ ಸರ್ಕಾರ ಮಾತ್ರ ಬಡ ಕುಟುಂಬಗಳಲ್ಲಿನ ಮಕ್ಕಳ ಗೋಳನ್ನು ಅರ್ಥಮಾಡಿಕೊಳ್ಳದೆ ಶಿಕ್ಷಣವನ್ನು ಚಿನ್ನದ ಹರಿವಾಣದಲ್ಲಿಟ್ಟು ಖಾಸಗಿಯವರ ಸುಪರ್ದಿಗೆ ಒಪ್ಪಿಸಿ ಬಿಟ್ಟಿದೆ. ಹಾಗಾಗಿ ಇವತ್ತು ರಾಜ್ಯದಲ್ಲಿ ಶ್ರೀಮಂತರ ಮಕ್ಕಳಿಗಾಗಿ ಒಂದು ವ್ಯವಸ್ಥೆ ಮತ್ತು ಬಡವರ ಮಕ್ಕಳಿಗಾಗಿ ಇನ್ನೊಂದು ವ್ಯವಸ್ಥೆ ಎಂದು ಶಿಕ್ಷಣ ಎರಡು ವರ್ಗಗಳಾಗಿ ವಿಂಗಡಣೆಗೊಂಡಿದೆ. ಶ್ರೀಮಂತರ ಮಕ್ಕಳೆಲ್ಲ ಖಾಸಗಿ ಶಾಲೆಗಳ ಇಂಗ್ಲಿಷ್ ಶಿಕ್ಷಣದಿಂದ ಬದುಕನ್ನು ಕಟ್ಟಿಕೊಳ್ಳುತ್ತಿದ್ದರೆ ಬಡವರ ಮಕ್ಕಳು ಸರ್ಕಾರದ ಕನ್ನಡ ಶಾಲೆಗಳಲ್ಲಿ ಕಲಿತು ನಿರುದ್ಯೋಗಿಗಳಾಗುತ್ತಿರುವರು. ಪರಿಸ್ಥಿತಿ ಹೀಗೆ ಮುಂದುವರಿದರೆ ಸಮಾಜದಲ್ಲಿ ಅಸಮಾನತೆ ಮೂಡಿ ಅದು ಸಮಾಜದ ಆರೋಗ್ಯವನ್ನು ಹಾಳುಗೆಡುವುದು ಎನ್ನುವುದು ಸಾಮಾಜಿಕ ಕಳಕಳಿಯುಳ್ಳವರ ತಲ್ಲಣ.

---೦೦೦---

            ೧೯೯೦ ರ ದಶಕದ ಕೊನೆಯಲ್ಲಿ ಭಾರತದ ಅಷ್ಟೆ ಏಕೆ ಇಡೀ ಪ್ರಪಂಚದ ಕ್ರಿಕೆಟ್ ಆಟಕ್ಕೆ ಮ್ಯಾಚ್ ಫಿಕ್ಸಿಂಗ್ ನ ಕಳಂಕ ಅಂಟಿಕೊಂಡಿತ್ತು. ಈ ಪ್ರಕರಣದಲ್ಲಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ಟೀಂ ನ್ನು ಯಶಸ್ವಿಯಾಗಿ ಮುನ್ನಡೆಸಿದ್ದ ನಾಯಕ ಹ್ಯಾನ್ಸಿ ಕ್ರೋನಿ ಹೆಸರು ಕೇಳಿ ಬಂದು ಆತನನ್ನು ಟೀಂನಿಂದ ವಜಾಗೊಳಿಸಲಾಯಿತು. ನೆನಪಿರಲಿ ದಕ್ಷಿಣ ಆಫ್ರಿಕಾ ಅಂತರಾಷ್ಟ್ರೀಯ ಕ್ರಿಕೆಟಿಗೆ ಮರಳಿದ ನಂತರ ಅತ್ಯಂತ ಸಂದಿಗ್ಧ ಪರಿಸ್ಥಿತಿಯಲ್ಲಿ ನಾಯಕನ ಸ್ಥಾನ ವಹಿಸಿಕೊಂಡ ಕ್ರೋನಿ ತನ್ನ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿ ದಕ್ಷಿಣ ಆಫ್ರಿಕಾವನ್ನು ಕ್ರಿಕೆಟಿನ ಉತ್ತುಂಗಕ್ಕೆ ಕೊಂಡೊಯ್ದ. ಆದರೆ ಹಣದ ಮೇಲಿನ ದುರಾಸೆ ಅವನ ಕ್ರಿಕೆಟ್ ಬದುಕನ್ನೇ ನುಂಗಿ ಹಾಕಿತು ಜೊತೆಗೆ ಕ್ರಿಕೆಟಿಗೂ ಕಳಂಕ ಅಂಟಿಕೊಂಡಿತು. ಭಾರತದಲ್ಲೂ ಅನೇಕ ಆಟಗಾರರು ಮ್ಯಾಚ್ ಫಿಕ್ಸಿಂಗ್ ಪರಿಣಾಮ ಕ್ರಿಕೆಟ್ ಆಟದಿಂದ ವಜಾಗೊಂಡರು. ಹೀಗೆ ಅವರು ವಜಾಗೊಂಡರು ಎನ್ನುವುದಕ್ಕಿಂತ ಕ್ರಿಕೆಟ್ ನಂಥ ಜನಪ್ರಿಯ ಆಟಕ್ಕೆ ಹಚ್ಚಿ ಹೋದ ಕಪ್ಪು ಮಸಿ ಮಾತ್ರ ಅಳಿಸಲು ಅನೇಕ ವರ್ಷಗಳೇ ಬೇಕಾದವು. ಭಾರತದ ಕ್ರಿಕೆಟ್ ಅಭಿಮಾನಿಗಳಿಗಂತೂ ಇದು ಮರೆಯಲಾರದ ನೋವು ನೀಡಿತು. ಅನೇಕರು ಆ ಆಟದ ಮೇಲಿನ ಆಸಕ್ತಿಯನ್ನೇ ಕಳೆದುಕೊಂಡರು. ಆಟಗಾರನೊಬ್ಬ ಔಟಾದಾಗಲೆಲ್ಲ ಪ್ರೇಕ್ಷಕರ ಮನಸ್ಸಿನ ಮೂಲೆಯಲ್ಲಿ ಸಣ್ಣದೊಂದು ಸಂಶಯ ಹೊಗೆಯಾಡುತ್ತಿತ್ತು. ಆಟಗಾರನೊಬ್ಬ ಎಷ್ಟು ರನ್ ಗಳಿಸಿದ ಎಷ್ಟು ವಿಕೆಟ್ ಉರುಳಿಸಿದ ಎನ್ನುವುದಕ್ಕಿಂತ ಮ್ಯಾಚ್ ಫಿಕ್ಸಿಂಗ್ ಮೂಲಕ ಆತ ಪಡೆದ ಹಣ ಎಷ್ಟಿರಬಹುದು ಎನ್ನುವ ಚರ್ಚೆಯೇ ಎಲ್ಲ ಕಡೆ ಕೇಳಿ ಬರುತ್ತಿತ್ತು. ಆಗೆಲ್ಲ ಹುಟ್ಟಿರುವುದೇ ಕ್ರಿಕೆಟ್ ಆಟಕ್ಕಾಗಿ ಎನ್ನುವಂತೆ ಅದನ್ನು ಕಡು ವ್ಯಾಮೋಹಿಯಂತೆ  ಪ್ರೀತಿಸುತ್ತಿದ್ದ ಸಚಿನ್ ನಂಥ ಅಪ್ಪಟ ಕ್ರೀಡಾಭಿಮಾನಿ ಆಟಗಾರರ ಮನಸ್ಸು ತಲ್ಲಣಿಸಿದ್ದು ಅದೆಷ್ಟು ಬಾರಿಯೋ.  ದಲ್ಲಾಳಿಗಳಿಂದ ಹಣ ಪಡೆದ ಆಟಗಾರರೆಲ್ಲ ವಿಕೆಟ್ ಒಪ್ಪಿಸಿ ಪೆವಿಲಿಯನ್ ಗೆ ಹಿಂತಿರುಗುತ್ತಿದ್ದರೆ ಸಚಿನ್ ಅಸಾಹಾಯಕನಾಗಿ ನೋಡುತ್ತ ನಿಂತಿರುತ್ತಿದ್ದ. ಕ್ರಿಕೆಟ್ ಆಟದ ಭವಿಷ್ಯವೇ ಮಣ್ಣಾಗಲಿದೆ ಎನ್ನುವ ಆತಂಕವೊಂದು ಕಪ್ಪು ಕಾರ್ಮೊಡಿನಂತೆ ಕ್ರಿಕೆಟ್ ಆಟವನ್ನು ಆವರಿಸಿಕೊಂಡ ಆ ಘಳಿಗೆ ಸಚಿನ್ ನಂಥ ಆಟಗಾರನ ಮನಸ್ಸು ತಲ್ಲಣಿಸುತ್ತಿತ್ತು. ಇದೇ ಪರಿಸ್ಥಿತಿ ಐಪಿಎಲ್ ನಲ್ಲಿ ರಾಜಸ್ಥಾನದ ಸಾರಥ್ಯವಹಿಸಿದ್ದ ದ್ರಾವಿಡ್ ಗೂ ಎದುರಾಗಿತ್ತು. ತನ್ನ ಕ್ರೀಡಾ ಮತ್ತು ಸಂಘಟಿತ ಮನೋಭಾವದಿಂದ ಅಷ್ಟೇನು ಖ್ಯಾತರಲ್ಲದ ದೇಶಿಯ ಆಟಗಾರರನ್ನು ಕಟ್ಟಿಕೊಂಡು ಟೀಂ ನ್ನು ಯಶಸ್ಸಿನ ಹತ್ತಿರಕ್ಕೆ ಕೊಂಡೊಯ್ದ ದ್ರಾವಿಡ್ ಗೆ ಅವನದೇ  ಸಹ ಆಟಗಾರರು ಮಾಡಿದ ಮೋಸ ಆ ಕ್ಷಣಕ್ಕೆ ನೀಡಿದ ನೋವು ಮತ್ತು ಮಾಡಿದ ನಿರಾಸೆ ಅಷ್ಟಿಷ್ಟಲ್ಲ. ತನ್ನ ನಿಷ್ಕಳಂಕ ಆಟ ಮತ್ತು ವ್ಯಕ್ತಿತ್ವದಿಂದ ಕ್ರಿಕೆಟ್ ಕ್ರೀಡೆಗೆ ಹೊಸ ವ್ಯಾಖ್ಯಾನ ಬರೆದ ಆಟಗಾರ ಈ ರಾಹುಲ್ ದ್ರಾವಿಡ್. ೨೦೦೭ ರ ವಿಶ್ವಕಪ್ ನಲ್ಲಿ ಬಾಂಗ್ಲಾ ದೇಶದೆದುರು ಸೋತು ಭಾರತ ಲೀಗ್ ಹಂತದಲ್ಲೇ ಹೊರಬಿದ್ದಾಗ ಇದೇ ದ್ರಾವಿಡ್ ಡ್ರೆಸಿಂಗ್ ರೂಮಿನಲ್ಲಿ ಕುಳಿತು ಗಳಗಳನೆ ಅತ್ತಿದ್ದ. ಅದು ಆತನ ಆಟದ ಬದ್ಧತೆಗೆ ಸಾಕ್ಷಿಯಾಗಿತ್ತು. ಟೆಸ್ಟ್ ಆಟದಲ್ಲಿ ಲಕ್ಷ್ಮಣ ಜೊತೆಗೂಡಿ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾಗಳಂಥ ಘಟಾನುಘಟಿ ತಂಡಗಳಿಗೆ ಸೋಲಿನ ರುಚಿ ತೋರಿಸಿದ್ದೂ ಇದೇ ದ್ರಾವಿಡ್. ಅಂಥ ದ್ರಾವಿಡನನ್ನು ಅವನದೇ ತಂಡದ  ಕಳಂಕಿತ ಆಟಗಾರರ ಕುರಿತು ಪತ್ರಕರ್ತರು ಪ್ರಶ್ನಿಸಿದಾಗ ಅಕ್ಷರಶ: ಆತ ಭೂಮಿಗಿಳಿದು ಹೋಗಿದ್ದ. ಪ್ರೆಸ್ ಮಿಟ್ ನಲ್ಲಿ ಕುಳಿತಿದ್ದ ಆತನ ಕಂಗಳು ತುಂಬಿ ಬಂದಿದ್ದವು. ಮನಸ್ಸು ತಲ್ಲಣಿಸಿತ್ತು.

---೦೦೦---

        ೧೯೯೦ ರ ದಶಕದಿಂದ ಅಭಿವ್ಯಕ್ತಿ ಮಾಧ್ಯಮವಾದ ಸಿನಿಮಾ ಮಾಧ್ಯಮದಲ್ಲಿ ಅನೇಕ ಬದಲಾವಣೆಗಳು ಕಾಣಿಸಿಕೊಂಡವು. ಜನರ ಅಭಿರುಚಿ ಬದಲಾಯಿತೋ ಅಥವಾ ಸಿನಿಮಾದ ಮಾರುಕಟ್ಟೆ ವಿಸ್ತರಿಸಿತೋ ಒಟ್ಟಿನಲ್ಲಿ ಸಿನಿಮಾ ರಂಗದಲ್ಲಿ ಬದಲಾವಣೆಯ ಗಾಳಿ ಬೀಸಿತು. ನಾವು ಬದುಕುತ್ತಿದ್ದ ಸಮಾಜವನ್ನು ಪ್ರತಿಬಿಂಬಿಸುತ್ತಿದ್ದ ಸಿನಿಮಾಗಳ ಕಥೆ ನಂತರದ ದಿನಗಳಲ್ಲಿ ಬದಲಾವಣೆಯ ಒಳ ಸುಳಿಗೆ ಸಿಕ್ಕು ಸಮಾಜದಿಂದ ವಿಮುಖವಾಗತೊಡಗಿತು. ಅದಕ್ಕೆ ಉತ್ತರವಾಗಿ ನಾವು ಸಿನಿಮಾಕ್ಕೆ ಕಥೆಯಾಗುವುದಕ್ಕಿಂತ ಸಿನಿಮಾಗಳ ಕಥೆಯೇ ನಮ್ಮ ಬದುಕಿನ ಮೇಲೆ ಪ್ರಭಾವ ಬೀರಲಾರಂಭಿಸಿತು. ಹೀಗೆ ಸಿನಿಮಾ ಮಾಧ್ಯಮ ನಮ್ಮ ಅಭಿರುಚಿಯನ್ನು ಮಾತ್ರವಲ್ಲದೆ ನಮ್ಮ ಬದುಕನ್ನೇ ತನ್ನ ಕಥೆಗನುಗುಣವಾಗಿ ಬದಲಾಯಿಸಲಾರಂಭಿಸಿತು. ಪರಿಣಾಮವಾಗಿ  ಸಿನಿಮಾದ ಪ್ರಭಾವದಿಂದ  ಸಮಾಜದಲ್ಲಿ ಸಾಕಷ್ಟು  ಪರಿವರ್ತನೆಯಾಯಿತು. ಈ ರೌಡಿಸಂ, ಭಯೋತ್ಪಾದನೆ, ಪಾಶ್ಚಾತ್ಯ ಸಂಸ್ಕೃತಿ ಇವುಗಳೆಲ್ಲ ಸಿನಿಮಾದಿಂದ ಪಡೆದ ಬಳುವಳಿಗಳು. ಒಂದು ಕಾಲದಲ್ಲಿ 'ಕುಲ ಕುಲವೆಂದು ಏಕೆ ಹೊಡೆದಾಡುವಿರಿ' ಎಂದು ನೀತಿ ಹೇಳಿದ ಸಿನಿಮಾ ಮಾಧ್ಯಮ ಮುಂದೊಂದು ದಿನ 'ಹೊಡಿ ಮಗ ಹೊಡಿ ಮಗ ಬಿಡಬೇಡ ಅವನ್ನ' ಎಂದು ಪಾಠ ಹೇಳಿದ್ದು ಸಿನಿಮಾದ ಬದಲಾದ ಅಭಿವ್ಯಕ್ತಿಗೆ ಸ್ಪಷ್ಟ ದೃಷ್ಟಾಂತ. 'ಸ್ವಾಮಿ ದೇವನೆ ಲೋಕ ಪಾಲನೆ' ಎನ್ನುವ ಹಾಡನ್ನು  ಶಾಲೆಗಳಲ್ಲಿ ಪ್ರಾರ್ಥನಾ ಗೀತೆಯಾಗಿಸಿದ ಅದೇ ಸಿನಿಮಾ ಮಾಧ್ಯಮ ನಂತರದ ದಿನಗಳಲ್ಲಿ 'ಹಳ್ಳಿ ಮೇಷ್ಟ್ರೆ ಹಳ್ಳಿ ಮೇಷ್ಟ್ರೆ ಪ್ರೀತಿ ಮಾಡಿ ಬನ್ನಿ' ಎಂದು ಅತ್ಯಂತ ಅಶ್ಲೀಲವಾಗಿ ಮತ್ತು ಮಾದಕವಾಗಿ ಹಾಡಿಸಿತು.

           ಬದಲಾದ ಸಿನಿಮಾ ಮಾಧ್ಯಮದ ಈ ವರಸೆಯನ್ನು ಸಂಭ್ರಮದಿಂದ ಸ್ವಾಗತಿಸಿದವರು ಅನೇಕರಿರಬಹುದು ಅವರ ನಡುವೆಯೂ ಈ ಪರಿವರ್ತನೆಯಿಂದ ತಲ್ಲಣಿಸಿದ ಅನೇಕ ಮನಸ್ಸುಗಳಿದ್ದವು. ಸಿನಿಮಾ ಬದಲಾವಣೆಯ ದಾರಿ ತುಳಿದಾಗ ಅಶ್ವತ್ಥರಂಥ ಸಾಮಾಜಿಕ ಕಳಕಳಿಯ ನಟ ಸಿನಿಮಾ ನಟನೆಯಿಂದಲೇ ನಿವೃತ್ತರಾದರು. ರಾಜಕುಮಾರರಂಥ ಸದಭಿರುಚಿಯ ಸಿನಿಮಾಗಳ ಪ್ರತಿನಿಧಿ ಒಂದಿಷ್ಟು ಕಾಲ ಅಜ್ಞಾತಕ್ಕೆ ತೆರಳಿದರು. ಅನೇಕ ಪ್ರತಿಭಾವಂತ ನಿರ್ದೇಶಕರು ಪರಿಸ್ಥಿತಿಯೊಂದಿಗೆ ರಾಜಿ ಮಾಡಿಕೊಳ್ಳಲು ಮನಸ್ಸಿಲ್ಲದೆ ತಮ್ಮ ಸಿನಿಮಾ ಕಸುಬನ್ನೇ ಕೈಬಿಟ್ಟರು. ಇಂಥದ್ದೊಂದು ಸೃಜನಶೀಲ ಹಾನಿಯಿಂದ ನಿಜಕ್ಕೂ ಆಘಾತಕ್ಕೊಳಗಾಗಿದ್ದು ಸಿನಿಮಾಗಳನ್ನು ಉತ್ಕಟವಾಗಿ ಪ್ರೀತಿಸುತ್ತಿದ್ದ ಒಂದು ವರ್ಗದ ಪ್ರೇಕ್ಷಕರು. ಅವರಿಗೆ ಸಿನಿಮಾದ ಈ ಹೊಸ ಬದಲಾವಣೆಯನ್ನು ಒಪ್ಪಿಕೊಳ್ಳಲು ಸಾಧ್ಯವಾಗಲೇ ಇಲ್ಲ. ಜೊತೆಗೆ ಸಿನಿಮಾದಿಂದ ಸಮಾಜದ ಮೇಲಾಗುತ್ತಿದ್ದ  ಕೆಟ್ಟ  ಪರಿಣಾಮಗಳಿಂದ ಅವರು ಆತಂಕಕ್ಕೊಳಗಾದರು. ಜಾಕಿ, ಜಾನಿ, ಹುಚ್ಚ, ಮೆಂಟಲ್ ಮಂಜರ ಪ್ರವಾಹದಲ್ಲಿ ಸಿಕ್ಕು ಸಿನಿಮಾ ಎನ್ನುವ ಮಾಧ್ಯಮ ತನ್ನ ಗತಿಶೀಲತೆಯನ್ನು ಬದಲಿಸಿ ಸೃಜನಶೀಲತೆಯ ಹೊಳಪನ್ನು ಕಳೆದುಕೊಳ್ಳುತ್ತಿರುವ ಈ ಕ್ಷಣ ಸದಭಿರುಚಿಯ ಪ್ರೇಕ್ಷಕ ವರ್ಗ ಅಸಹಾಯಕತೆಯಿಂದ ನೋಡುತ್ತ ನಿಂತಿದೆ. ಹಳೆ ಬಾಟ್ಲಿ ಹಳೆ ಕಬ್ಬಿಣದಂಥ ಹಾಡುಗಳು ಜನಪ್ರಿಯವಾಗುತ್ತಿರುವ ಈ ಹೊತ್ತು ಅದೇ ಸದಭಿರುಚಿಯ ಪ್ರೇಕ್ಷಕ ವರ್ಗಕ್ಕೆ ಸಿನಿಮಾ ತನ್ನ ಮೊದಲ ವೈಭವಕ್ಕೆ ಮರಳಲಾರದು ಎನ್ನುವ ಸತ್ಯ ಅರಗಿಸಿಕೊಳ್ಳಲು ಆಗುತ್ತಿಲ್ಲ. ಅವರದೇನಿದ್ದರೂ ವಾಸ್ತವವನ್ನು ಎದುರಿಸಲಾಗದ ಆತಂಕ ಮತ್ತು ತಲ್ಲಣ.

---೦೦೦---

-ರಾಜಕುಮಾರ.ವ್ಹಿ.ಕುಲಕರ್ಣಿ (ಕುಮಸಿ), ಬಾಗಲಕೋಟೆ 




No comments:

Post a Comment