ಭಾಷೆಯ ಮೇಲೆ ಜಾಗತೀಕರಣದ ಪ್ರಭಾವ ಮತ್ತು ಚಳುವಳಿಗಳ ಪಾತ್ರ
ಜಾಗತೀಕರಣ ಎನ್ನುವುದು ಈ ದಿನಗಳಲ್ಲಿ ಇಡೀ ನಾಡಿನ ಸಾಂಸ್ಕೃತಿಕ ಮತ್ತು ಸಾಮಾಜಿಕ ಬದುಕನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಿದೆ. ಜಾಗತೀಕರಣದ ಪರಿಣಾಮವಾಗಿ ಇವತ್ತು ಕನ್ನಡ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಇದಕ್ಕೆ ವಿರುದ್ಧವಾಗಿ ಇಂಗ್ಲಿಷ್ ಮಾಧ್ಯಮ ಶಾಲೆಗಳ ಸಂಖ್ಯೆ ಹೆಚ್ಚುತ್ತಿದೆ. ಇದಕ್ಕೆಲ್ಲ ಕಾರಣವೇನು? ಅದು ಇಂಗ್ಲಿಷ್ ಭಾಷೆಯ ಪರವಾಗಿ ಪಾಲಕರು ತೋರುತ್ತಿರುವ ಒಲವು. ಇಂಗ್ಲಿಷ್ ಭಾಷೆ ಜಾಗತೀಕರಣದ ಪರಿಣಾಮ ಅದು ನಮ್ಮ ಬದುಕಿನ ಭಾಷೆ ಎನ್ನುವ ನಿರ್ಧಾರಕ್ಕೆ ಪಾಲಕರೆಲ್ಲ ಬಂದು ನಿಂತಿರುವರು. ಇಂಗ್ಲಿಷ್ ಭಾಷೆಯಿಂದ ಮಾತ್ರ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯ ಎನ್ನುವ ಮನೋಭಾವ ಬಲಗೊಳ್ಳುತ್ತಿದೆ. ಅದಕ್ಕೆ ತಕ್ಕಂತೆ ಜಾಗತೀಕರಣ ಇಂಗ್ಲಿಷ್ ಮಾಧ್ಯಮ ಶಿಕ್ಷಣಕ್ಕೆ ಪೂರಕವಾದ ವೇದಿಕೆಯನ್ನು ಸಜ್ಜುಗೊಳಿಸುತ್ತಿದೆ.
ಒಂದು ಕಾಲದಲ್ಲಿ ಬೆಂಗಳೂರಿನ ಗಾಂಧಿ ನಗರದಲ್ಲಿ ಕನ್ನಡದಲ್ಲಿ ಮಾತನಾಡುವ ವ್ಯಾಪಾರಿಗಳ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿತ್ತು. ಆದರೆ ಇವತ್ತು ಏನಾಗಿದೆ ಅದೇ ಗಾಂಧಿನಗರದಲ್ಲಿ ಇಂಗ್ಲಿಷ್ ಭಾಷೆ ವ್ಯಾಪಕವಾಗಿ ಬಳಕೆಯಾಗುತ್ತಿದೆ. ಉಪಹಾರ ಮಂದಿರಗಳಲ್ಲಿ ಕೆಲಸ ಮಾಡುವ ಮಾಣಿಗಳೆಲ್ಲ ಇಂಗ್ಲಿಷನಲ್ಲೆ ಮಾತನಾಡುತ್ತಿರುವರು. ಇದು ವ್ಯಂಗ್ಯವಲ್ಲ ಆದರೆ ಸಂವಹನದ ಭಾಷೆಯಾಗಿ ಕನ್ನಡ ಮರೆಯಾಗುತ್ತಿರುವುದರ ದುರಂತಕ್ಕೆ ಇದೊಂದು ನಿದರ್ಶನ.
ಈ ಜಾಗತೀಕರಣವನ್ನು ನಾವುಗಳೆಲ್ಲ ನಮ್ಮ ಮನೆಯೊಳಗೂ ಬಿಟ್ಟು ಕೊಂಡಿದ್ದೇವೆ. ನಮ್ಮ ಬಾಲ್ಯದ ದಿನಗಳಲ್ಲಿ ನಮಗೆಲ್ಲ ಪಾಶ್ಚಾತ್ಯ ಕಲಾವಿದರಿರಲಿ ನಮ್ಮ ನೆರೆಯ ರಾಜ್ಯಗಳ ಭಾಷೆಗಳಲ್ಲಿನ ಸಿನಿಮಾಗಳ ಹೆಸರುಗಳು ಕೂಡ ಅಪರಿಚಿತವಾಗಿದ್ದವು. ಇವತ್ತಿನ ಮಕ್ಕಳನ್ನು ಕೇಳಿ ನೋಡಿ ಅವರಿಗೆ ಇಂಗ್ಲಿಷ್, ಜರ್ಮನ್, ಫ್ರೆಂಚ್ ಭಾಷೆಗಳ ಕಲಾವಿದರೆಲ್ಲ ಗೊತ್ತು. ಜಾಗತೀಕರಣದ ಪರಿಣಾಮ ವಿದೇಶಿ ಸಿನಿಮಾಗಳೆಲ್ಲ ನಮ್ಮ ನೆಲದಲ್ಲಿ ಪ್ರದರ್ಶನಗೊಳ್ಳುತ್ತಿವೆ. ಒಂದರ್ಥದಲ್ಲಿ ವಿದೇಶಿ ಸಿನಿಮಾಗಳ ಪ್ರಭಾವದಿಂದಾಗಿ ನಮ್ಮ ಮಕ್ಕಳು ನಮ್ಮ ನೆಲದ ಸಂಸ್ಕೃತಿಯಿಂದ ದೂರವಾಗಿ ನಮ್ಮದಲ್ಲದ ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳುತ್ತಿರುವರು. ಅವರಿಗೆಲ್ಲ ಕನ್ನಡ ಎನ್ನುವುದು ಅದು ಕೇವಲ ಕಿಚನ್ ಭಾಷೆ ಎನ್ನುವ ಅಸಡ್ಡೆ. ಇದನ್ನೇ ವಿಪರ್ಯಾಸ ಎನ್ನುವುದು. ಜಾಗತೀಕರಣದಿಂದಾಗಿ ನಾವುಗಳೆಲ್ಲ ಜಗತ್ತಿನ ಎಲ್ಲ ಆಗು ಹೋಗುಗಳಿಗೆ ಮುಖಾಮುಖಿಯಾಗಿ ನಿಂತಿರುವ ಹೊತ್ತಿನಲ್ಲೇ ನಮ್ಮದೇ ನೆಲದ ಸಾವಿರಾರು ವರ್ಷಗಳ ಇತಿಹಾಸವಿರುವ ಭಾಷೆಯನ್ನು ನಾಲ್ಕು ಗೋಡೆಗಳ ಅಡುಗೆ ಕೋಣೆಗೆ ಸೀಮಿತಗೊಳಿಸುತ್ತಿರುವೆವು.
ಇನ್ನು ಕನ್ನಡ ಚಳುವಳಿಗಳ ಕುರಿತು ಹೇಳುವುದಾದರೆ ಜಾಗತೀಕರಣಕ್ಕೂ ಮತ್ತು ಚಳುವಳಿಗೂ ಒಂದು ರೀತಿಯ ನಿಕಟ ಸಂಬಂಧವಿದೆ. ಜಾಗತೀಕರಣದಿಂದ ಒಂದು ನೆಲದ ಸಂಸ್ಕೃತಿ ಮತ್ತು ಭಾಷೆ ತಲ್ಲಣಗೊಳ್ಳುತ್ತಿರುವ ಸಂದರ್ಭದಲ್ಲೇ ಚಳುವಳಿಗಳು ರೂಪಗೊಳ್ಳಬೇಕು. ಆ ಚಳುವಳಿಗಳು ಜಾಗತೀಕರಣಕ್ಕೆ ಮುಖಾಮುಖಿಯಾಗಿ ನಿಂತು ಈ ನೆಲದ ಸಂಸ್ಕೃತಿ ಮತ್ತು ಭಾಷೆಯನ್ನು ಕಾಯ್ದುಕೊಳ್ಳಬೇಕು. ಆದರೆ ಈ ದಿನಗಳಲ್ಲಿ ಕನ್ನಡ ಪರ ಚಳುವಳಿಗಳು ಯಾವ ಮಟ್ಟದಲ್ಲಿ ಕೆಲಸ ಮಾಡಬೇಕಿತ್ತೋ ಆ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿಲ್ಲ.
ನಮಗೆಲ್ಲ ಗೊತ್ತಿರುವಂತೆ 25 ವರ್ಷಗಳ ಹಿಂದೆ ಕನ್ನಡದ ಪರವಾಗಿ ಸಂಘಟಿಸಿದ್ದ ಗೋಕಾಕ ಚಳುವಳಿ ಅಭೂತಪೂರ್ವ ಯಶಸ್ಸು ಕಂಡಿತು. ಸಾಹಿತಿಗಳು, ಸಿನಿಮಾ ಕಲಾವಿದರು ಮತ್ತು ಜನಸಾಮಾನ್ಯರೆಲ್ಲ ಒಂದಾಗಿ ಈ ನಾಡಿನ ಪರ ಹೋರಾಟ ಮಾಡಿದರು. ಆ ಚಳುವಳಿಯ ತೀವೃತೆಗೆ ಮಣಿದ ಅಂದಿನ ಸರ್ಕಾರ ಎಲ್ಲ ಶಿಫಾರಸುಗಳನ್ನು ಅನುಷ್ಠಾನಕ್ಕೆ ತರುವ ಭರವಸೆ ನೀಡಿತು. ಅಂದಿನ ಚಳುವಳಿಗಾರರಲ್ಲಿ ಸ್ವಹಿತಾಸಕ್ತಿಗಿಂತ ನಾಡಿನ ರಕ್ಷಣೆ ಮುಖ್ಯವಾಗಿತ್ತು. ಆದರೆ ಈ ದಿನಗಳಲ್ಲಿ ಏನಾಗುತ್ತಿದೆ. ಚಳುವಳಿ ಎನ್ನುವುದು ನಾಡಿನ ರಕ್ಷಣೆಗಾಗಿ ಮಾಡುವ ಹೋರಾಟ ಎನ್ನುವುದಕ್ಕಿಂತ ಅದೊಂದು ಉದ್ಯೋಗವಾಗಿ ಪರಿವರ್ತಿತವಾಗುತ್ತಿದೆ. ನಿರುದ್ಯೋಗಿಗಳೆಲ್ಲ ಒಂದು ಗುಂಪು ಕಟ್ಟಿಕೊಂಡು ಅದಕ್ಕೊಂದು ಹೆಸರಿಟ್ಟು ಬೀದಿಗಿಳಿದರೆ ಇಂಥವರಿಂದ ಕನ್ನಡದ ರಕ್ಷಣೆ ಸಾಧ್ಯವೇ?. ಇನ್ನು ಕೆಲವರಿಗೆ ಈ ಚಳುವಳಿ ಎನ್ನುವುದು ರಾಜಕೀಯ ಪ್ರವೇಶಕ್ಕೆ ವೇದಿಕೆಯಾಗಿ ಬಳಕೆಯಾಗುತ್ತಿರುವುದು ದುರ್ದೈವದ ಸಂಗತಿ. ಅನೇಕರು ಕನ್ನಡ ಪರ ಹೋರಾಟದ ಹೆಸರಿನಲ್ಲಿ ತಮ್ಮ ತಮ್ಮ ಬದುಕನ್ನು ಸಮೃದ್ಧವಾಗಿ ಕಟ್ಟಿಕೊಂಡರೆ ವಿನಃ ಅಂಥವರಿಂದ ನಾಡು ನುಡಿಗೆ ಸಂಬಂಧಿಸಿದಂತೆ ಯಾವ ಕೆಲಸಗಳೂ ಆಗುತ್ತಿಲ್ಲ. ಇದಕ್ಕೆಲ್ಲ ಕಾರಣ ನಮ್ಮ ಚಳುವಳಿಗಾರರಲ್ಲಿ ವೈಯಕ್ತಿಕ ಹಿತಾಸಕ್ತಿ ಬಹು ಮುಖ್ಯವಾಗಿ ಕೆಲಸಮಾಡುತ್ತಿದೆ.
ಆಯಾ ಕಾಲಘಟ್ಟದಲ್ಲಿ ಒಂದು ನೆಲದ ಸಾಂಸ್ಕೃತಿಕ ಬದುಕಾಗಲಿ ಮತ್ತು ಭಾಷೆಯಾಗಲಿ ಸಮಸ್ಯೆಗಳನ್ನೆದುರಿಸುವುದು ಸಹಜ. ಆದರೆ ಆ ಎಲ್ಲ ಸಮಸ್ಯೆಗಳು ಮತ್ತು ತಲ್ಲಣಗಳ ನಡುವೆಯೂ ನೆಲದ ಸಂಸ್ಕೃತಿ ಮತ್ತು ಭಾಷೆ ತನ್ನ ಮೂಲ ಗುಣವನ್ನು ಮತ್ತು ಸಹಜತೆಯನ್ನು ಕಾಯ್ದುಕೊಂಡು ಬರಬೇಕು. ಇದು ಚಳುವಳಿಗಳಿಂದ ಸಾಧ್ಯ. ಸಧ್ಯದ ಪರಿಸ್ಥಿತಿಯಲ್ಲಿ ನಮ್ಮ ನಾಡಿನ ಚಳುವಳಿಗಳಿಂದ ಇಂಥದ್ದೊಂದು ಆಶಾದಾಯಕ ಬೆಳವಣಿಗೆ ಕಾಣಿಸುತ್ತಿಲ್ಲ.
ಕನ್ನಡ ಭಾಷೆಯ ಬೆಳವಣಿಗೆಗೆ ಸಿನಿಮಾ ಮಾಧ್ಯಮದ ಕೊಡುಗೆ
ಸಿನಿಮಾ ಎನ್ನುವುದು ಅತ್ಯಂತ ಪರಿಣಾಮಕಾರಿಯಾದ ಅಭಿವ್ಯಕ್ತಿ ಮಾಧ್ಯಮ. ಆದ್ದರಿಂದ ಸಿನಿಮಾವನ್ನು ಒಂದು ನೆಲದ ಸಾಂಸ್ಕೃತಿಕ ಮಾಧ್ಯಮವಾಗಿ ಪರಿಗಣಿಸಬೇಕಾದ ಅಗತ್ಯತೆ ಇದೆ. ಸಿನಿಮಾ ಮಾಧ್ಯಮ ಅನೇಕ ಸಂದರ್ಭಗಳಲ್ಲಿ ತನ್ನ ನೆಲದ ಇಡೀ ಸಾಂಸ್ಕೃತಿಕ ಬದುಕನ್ನು ಅತ್ಯಂತ ಪರಿಣಾಮಕಾರಿಯಾಗಿ ಪ್ರತಿಬಿಂಬಿಸಿದೆ. ಕನ್ನಡ ಭಾಷೆಯನ್ನೇ ತೆಗೆದುಕೊಳ್ಳಿ ಸರ್ವಕಾಲಿಕ ಶ್ರೇಷ್ಠ ಎನ್ನುವ ಮೆಚ್ಚುಗೆಗೆ ಪಾತ್ರವಾದ ಸಿನಿಮಾಗಳು ಈ ನೆಲದಲ್ಲಿ ನಿರ್ಮಾಣಗೊಂಡಿವೆ. ನಾಂದಿ, ಸ್ಕೂಲ್ ಮೇಷ್ಟ್ರು, ಬಂಗಾರದ ಮನುಷ್ಯ, ಅಮರಶಿಲ್ಪಿ ಜಕಣಾಚಾರಿಯಂಥ ಚಿತ್ರಗಳು ಈ ನೆಲದ ಹಿರಿಮೆಯನ್ನು ಇಡೀ ದೇಶಕ್ಕೆ ಪರಿಚಯಿಸಿದವು. ತಬರನ ಕಥೆ, ದ್ವೀಪ, ಘಟಶ್ರಾದ್ಧದಂಥ ಕಲಾತ್ಮಕ ಚಿತ್ರಗಳು ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡ ಪರಿಣಾಮ ವಿದೇಶಿಯರಿಗೂ ಈ ನಾಡಿನ ಸಂಸ್ಕೃತಿಯ ಪರಿಚಯವಾಯಿತು.
ಈ ಸಿನಿಮಾ ಎನ್ನುವ ಮಾಧ್ಯಮವನ್ನು ನಾಡು-ನುಡಿಯ ಬೆಳವಣಿಗೆಗೆ ಪೂರಕವಾಗುವಂತೆ ಹೇಗೆ ಪರಿಣಾಮಕಾರಿಯಾಗಿ ದುಡಿಸಿಕೊಳ್ಳಬೇಕು ಎನ್ನುವ ಪ್ರಶ್ನೆ ಎದುರಾದಾಗ ನಮಗೆ ತಟ್ಟನೆ ನೆನಪಾಗುವುದು ಈ ಬೆಂಗಾಲಿಗಳು ಮತ್ತು ಮಲೆಯಾಳಿಗಳು. ಈ ಜಾಗತೀಕರಣದ ಯುಗದಲ್ಲೂ ಅವರುಗಳು ಸಿನಿಮಾವನ್ನು ತಮ್ಮ ನೆಲದ ಸಂಸ್ಕೃತಿಗೆ ಪೂರಕವಾಗಿ ಬಳಸಿಕೊಳ್ಳುತ್ತಿರುವರು. ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳುವ ಬಹುತೇಕ ಸಿನಿಮಾಗಳಲ್ಲಿ ಈ ಬಂಗಾಳಿ ಮತ್ತು ಮಲೆಯಾಳಂ ಭಾಷೆಗಳದ್ದೆ ಸಿಂಹಪಾಲು. ಇವತ್ತಿಗೂ ಅವರ ಸಿನಿಮಾಗಳು ತಮ್ಮ ಮೂಲ ಭಾಷೆ ಮತ್ತು ಸಂಸ್ಕೃತಿಯಿಂದ ದೂರವಾಗಿಲ್ಲ.
ಕನ್ನಡ ಭಾಷೆಯಲ್ಲಿ ಏನಾಗುತ್ತಿದೆ? ಕಳೆದ ಎರಡು ದಶಕಗಳ ನಮ್ಮ ಸಿನಿಮಾ ಮಾಧ್ಯಮದ ಬೆಳವಣಿಗೆಯನ್ನು ಅವಲೋಕಿಸಿದರೆ ವಸ್ತುಸ್ಥಿತಿಯ ಅರಿವಾಗುತ್ತದೆ. ಒಂದು ಕಾಲದಲ್ಲಿ ಈ ನೆಲದ ಸಂಸ್ಕೃತಿ ಮತ್ತು ಹಿರಿಮೆಯನ್ನು ಎತ್ತಿ ಹಿಡಿದ ಸಿನಿಮಾ ಮಾಧ್ಯಮ ಕಾಲಾನಂತರದಲ್ಲಿ ಅನೇಕ ಬದಲಾವಣೆಗಳನ್ನು ಕಂಡಿದೆ. ಜಾಗತೀಕರಣ ಎನ್ನುವುದು ನಮ್ಮ ಈ ಸಿನಿಮಾ ಮಾಧ್ಯಮವನ್ನು ವಿನಾಶದಂಚಿಗೆ ತಳ್ಳಿದೆ. ಈ ದಿನಗಳಲ್ಲಿ ನಿರ್ಮಾಣಗೊಳ್ಳುತ್ತಿರುವ ಬಹುತೇಕ ಸಿನಿಮಾಗಳಲ್ಲಿ ನಮ್ಮ ನೆಲದ ಸೊಗಡು ಕಾಣಿಸುತ್ತಿಲ್ಲ. ಅಲ್ಲಿ ಬಳಕೆಯಾಗುತ್ತಿರುವ ಭಾಷೆಯ ಬಗ್ಗೆ ಅನೇಕ ತಕರಾರುಗಳಿವೆ. ಸಿನಿಮಾಕ್ಕೆ ಅದರದೇ ಆದ ಭಾಷೆಯಿದೆ ಎಂದು ಯಾರು ಹೇಳಿದರೋ ಗೊತ್ತಿಲ್ಲ. ಅದನ್ನೇ ಆಧಾರವಾಗಿಟ್ಟುಕೊಂಡು ಈ ಸಿನಿಮಾ ಜನ ಪ್ರತ್ಯೇಕವಾದ ಸಿನಿಮಾ ಭಾಷೆಯೊಂದನ್ನು ಸೃಷ್ಟಿಸುತ್ತಿರುವರು.
ಸಿನಿಮಾ ನಿಜಕ್ಕೂ ಅದು ನಮ್ಮ ಸಾಮಾಜಿಕ ಮತ್ತು ಸಾಂಸ್ಕೃತಿಕ ಬದುಕಿನ ಪ್ರತಿಬಿಂಬ. ಅದು ನಮ್ಮ ಭಾಷೆಯ ಹಿರಿಮೆ. ಆತಂಕದ ಸಂಗತಿ ಎಂದರೆ ಸಂಸ್ಕೃತಿ, ಸಮಾಜ, ಭಾಷೆ ಎಲ್ಲವನ್ನೂ ಮೀರಿ ಅಲ್ಲಿ ವ್ಯಾಪಾರಿ ಮನೋಭಾವ ಪ್ರಮುಖ ಪಾತ್ರವಹಿಸುತ್ತಿದೆ. ಜಾಗತೀಕರಣಕ್ಕೆ ಈ ಸಿನಿಮಾ ಮಾಧ್ಯಮವನ್ನು ಮುಖ ಮಾಡಿ ನಿಲ್ಲಿಸುವ ಹುನ್ನಾರ ಅನೇಕರದು. ತಮ್ಮ ಸಿನಿಮಾವೊಂದು ಅನ್ಯ ರಾಜ್ಯಗಳಲ್ಲಿ, ಅನ್ಯ ರಾಷ್ಟ್ರಗಳಲ್ಲಿ ಪ್ರದರ್ಶನಗೊಂಡು ಹಣಗಳಿಸಬೇಕೆನ್ನುವ ಇಚ್ಛಾಶಕ್ತಿ ಪ್ರಬಲವಾದಾಗ ಅಲ್ಲಿ ನಾಡು ನುಡಿಯ ಹಿತಾಸಕ್ತಿ ಮೂಲೆಗುಂಪಾಗುತ್ತದೆ. ಒಂದು ಕಾಲದಲ್ಲಿ ತನ್ನ ಸೃಜನಶೀಲತೆಯ ಮೂಲಕ ಕನ್ನಡ ಭಾಷೆಯ ಹಿರಿಮೆಯನ್ನು ಎತ್ತಿ ಹಿಡಿದ ನಮ್ಮ ಸಿನಿಮಾ ಮಾಧ್ಯಮದ ಸಧ್ಯದ ಪರಿಸ್ಥಿತಿ ಇದು.
ಭಾಷೆಯೊಂದರ ಬೆಳವಣಿಗೆ ಹಾಗೂ ಮತ್ತದರ ಹಿರಿಮೆ ಅದನ್ನು ನಾವು ಹೇಗೆ ಬಳಸುತ್ತಿರುವೆವು ಎನ್ನುವುದನ್ನು ಅವಲಂಬಿಸಿದೆ. ಜಾಗತೀಕರಣದ ಪರಿಣಾಮ ಇಂಗ್ಲಿಷ್ ಮಾಧ್ಯಮದ ಶಿಕ್ಷಣ ಅನಿವಾರ್ಯವಾದರೂ ಕನ್ನಡವನ್ನು ನಮ್ಮ ನಮ್ಮ ಮನೆಗಳಲ್ಲಿ ಹೃದಯದ ಭಾಷೆಯಾಗಿ ನೆಲೆಗೊಳಿಸುವ ಕೆಲಸವಾಗಬೇಕು. ಕುವೆಂಪು, ಬೇಂದ್ರೆ ಅವರಿಂದ ದೂರವಾಗಿ ಹ್ಯಾರಿ ಪಾಟರ್ ಗೆ ನಮ್ಮ ಮಕ್ಕಳು ಹತ್ತಿರವಾಗುತ್ತಿರುವುದು ಸಧ್ಯದ ಮಟ್ಟಿಗೆ ಅದು ಕನ್ನಡ ಭಾಷೆಯ ಬಹುದೊಡ್ಡ ಸೋಲು. ಇಂಥದ್ದೊಂದು ಸೋಲಿನ ವಾತಾವರಣದ ನಡುವೆಯೂ ಕನ್ನಡ ಪುಸ್ತಕಗಳ ಓದು ಮತ್ತು ಸದಭಿರುಚಿಯ ಕನ್ನಡ ಸಿನಿಮಾಗಳ ವೀಕ್ಷಣೆ ನನಗೆ ಅತ್ಯಂತ ಖುಷಿಕೊಡುವ ಸಂಗತಿಗಳಲ್ಲೊಂದು.
-ರಾಜಕುಮಾರ.ವ್ಹಿ.ಕುಲಕರ್ಣಿ (ಕುಮಸಿ), ಬಾಗಲಕೋಟೆ

No comments:
Post a Comment