ನಾನು ಚಿಕ್ಕವನಿದ್ದಾಗ ನನ್ನೂರಿನಲ್ಲಿ ಸರ್ಕಾರ ಸುಮಾರು ಒಂದು ಸಾವಿರ ಎಕರೆಗಳಷ್ಟು ಭೂಮಿಗೆ ನೀರಾವರಿ ಸೌಲಭ್ಯ ಒದಗಿಸಲು ಬೃಹತ್ ಕೆರೆಯೊಂದನ್ನು ಕಟ್ಟಲು ಯೋಜನೆ ರೂಪಿಸಿತು. ಅದಕ್ಕೆ ಅಗತ್ಯವಾದ ಭೂಮಿಯನ್ನು ರೈತರಿಂದ ವಶಪಡಿಸಿಕೊಳ್ಳಲಾಯಿತು. ಹಲವು ವರ್ಷಗಳ ನಂತರ ಕಾಮಗಾರಿ ಪೂರ್ಣಗೊಂಡು ಕೆರೆ ತುಂಬಿ ನಿಂತಿತು. ಕೆರೆಯ ನೀರಿನಿಂದ ಅನೇಕ ರೈತರ ಬದುಕು ಹಸಿರಾಯಿತು ಮತ್ತು ಹಸನಾಯಿತು. ವರ್ಷಕ್ಕೆ ಎರಡು ಬೆಳೆ ಮಾತ್ರ ಬೆಳೆಯುತ್ತಿದ್ದ ರೈತರು ನಂತರದ ದಿನಗಳಲ್ಲಿ ಕೆರೆಯ ನೀರನ್ನು ಉಪಯೋಗಿಸಿಕೊಂಡು ಮೂರು ಬೆಳೆಗಳನ್ನು ಬೆಳೆಯಲಾರಂಭಿಸಿದರು. ರೈತರ ಕೈಯಲ್ಲಿ ಹಣ ಹರಿದಾಡಿ ತಕ್ಕ ಮಟ್ಟಿಗೆ ಸ್ಥಿತಿವಂತರಾದರು. ನಿಜವಾಗಿಯೂ ಸಂಕಷ್ಟಕ್ಕೆ ಸಿಲುಕಿದವರು ಯಾರು ಕೆರೆಯ ನಿರ್ಮಾಣಕ್ಕಾಗಿ ತಮ್ಮ ಭೂಮಿಯನ್ನು ಕಳೆದುಕೊಂಡಿದ್ದರೋ ಆ ರೈತರು. ಸರ್ಕಾರವೇನೋ ಭೂಮಿಗೆ ಬದಲಾಗಿ ಅವರಿಗೆ ಪರಿಹಾರ ರೂಪದಲ್ಲಿ ಹಣ ನೀಡಿತ್ತು. ಆದರೆ ಸರ್ಕಾರ ಕೊಟ್ಟ ಪರಿಹಾರದ ಹಣ ನಿಧಾನವಾಗಿ ಕರಗಲಾರಂಭಿಸಿತು. ಒಂದು ಕಾಲದಲ್ಲಿ ರೈತರಾಗಿದ್ದ ಅವರೆಲ್ಲ ಬದುಕಿಗಾಗಿ ಬೇರೆಯವರ ಹೊಲದಲ್ಲಿ ಕೂಲಿಗಳಾಗಿ ದುಡಿಯಬೇಕಾಯಿತು. ಕೆಲವರಂತೂ ತಮ್ಮ ಕುಟುಂಬದೊಂದಿಗೆ ದೂರದ ನಗರ ಪ್ರದೇಶಕ್ಕೆ ವಲಸೆ ಹೋದರು. ಆ ಕೆರೆಯ ನೀರು ಕಾಲುವೆಯ ಮೂಲಕ ಹರಿದು ಬರುವಾಗ ಆ ಸದ್ದಿನಲ್ಲಿ ಇವತ್ತಿಗೂ ಅಲ್ಲಿ ಅನೇಕರ ನೋವಿನ ನಿಟ್ಟುಸಿರು ಕೇಳಿಸುತ್ತದೆ. ಆ ಕೆರೆಯ ಒಡಲಲ್ಲಿ ಅನೇಕ ರೈತರ ಬದುಕು ಮುಳುಗಿ ಹೋಗಿದೆ.
ಇದೆಲ್ಲ ನೆನಪಾಗಲು ಕಾರಣ ಮೊನ್ನೆ ಮಹಾಲಿಂಗಪುರದಲ್ಲಿ ಏರ್ಪಡಿಸಿದ್ದ ಗ್ರಂಥಪಾಲಕರ ರಾಷ್ಟ್ರೀಯ ಸಮ್ಮೇಳನದಲ್ಲಿ ಪಾಲ್ಗೊಂಡು ಮರಳಿ ಬರುತ್ತಿರುವಾಗ ನಾನು ಕೇಳಿಸಿಕೊಂಡ ಇಬ್ಬರು ಸಹಪ್ರಯಾಣಿಕರ ಸಂಭಾಷಣೆ. ಮಧ್ಯವಯಸ್ಸಿನವರಾಗಿದ್ದ ಅವರಿಬ್ಬರೂ ಬಾಲ್ಯದಿಂದಲೇ ಪರಿಚಿತರು ಎನ್ನುವುದು ಅವರಿಬ್ಬರ ಸಂಭಾಷಣೆಯಿಂದ ತಿಳಿಯುತ್ತಿತ್ತು. ಹತ್ತು ವರ್ಷಗಳ ನಂತರ ಹೀಗೆ ಆಕಸ್ಮಿಕವಾಗಿ ಅವರಿಬ್ಬರೂ ಬಸ್ಸಿನಲ್ಲಿ ಪ್ರಯಾಣದ ಮಧ್ಯೆ ಭೇಟಿಯಾಗುವಂತಹ ಪ್ರಸಂಗ ಎದುರಾಯಿತು. ಬಾಲ್ಯದ ದಿನಗಳು, ಆ ಪರಿಸರ, ಮುಳುಗಡೆಯಾದ ಮನೆಗಳು, ಬೇರೆಡೆಗೆ ಸ್ಥಳಾಂತರಗೊಂಡಿದ್ದು ಹೀಗೆ ಅನೇಕ ವಿಷಯಗಳು ಅವರ ಮಾತಿನ ನಡುವೆ ಸುಳಿದು ಹೋದವು. ಒಬ್ಬರಂತೂ ತಾವು ಈ ಮೊದಲು ವಾಸಿಸುತ್ತಿದ್ದ ಪರಿಸರಕ್ಕೆ ಈಗ ಅಪರಿಚಿತರಾಗಿ ಹೋಗಿದ್ದೆವೆಂದೂ ಅಲ್ಲಿ ಭೇಟಿ ನೀಡಿದಾಗ ಯಾರೊಬ್ಬರೂ ತನ್ನನ್ನು ಗುರುತಿಸಲಿಲ್ಲವೆಂದು ತುಂಬಾ ಭಾವುಕರಾಗಿ ನುಡಿದರು. ಒಟ್ಟಿಗೆ ಒಂದೇ ಪರಿಸರದಲ್ಲಿ ಸಹೋದರ ಸಂಬಂಧಿಗಳಂತೆ ವಾಸಿಸುತ್ತಿದ್ದ ಕುಟುಂಬಗಳೆಲ್ಲ ಈಗ ಹೊಸ ಪರಿಸರದಲ್ಲಿ ತಮ್ಮ ತಮ್ಮ ಅಸ್ತಿತ್ವವನ್ನು ಕಟ್ಟಿಕೊಳ್ಳಲು ಹೆಣಗುತ್ತಿವೆ ಎನ್ನುವ ಬೇಸರ ಅವರಲ್ಲಿತ್ತು. ಬಸ್ಸಿನಿಂದ ಇಳಿಯುವಾಗ ಮತ್ತೆ ಯಾವಾಗ ಈ ಭೇಟಿ ಎನ್ನುವ ನೋವಿನ ಸಣ್ಣ ಎಳೆಯೊಂದು ಅವರ ಮಾತಿನಲ್ಲಿ ಹಾಗೂ ಮುಖದಲ್ಲಿ ಗೋಚರಿಸುತ್ತಿತ್ತು.
ಹೌದು ಮುಳುಗಡೆ ತಂದೊಡ್ಡುವ ಸಮಸ್ಯೆ ಮತ್ತದರ ಭೀಕರತೆ ಅದು ಅನುಭವಿಸಿದವರಿಗೆ ಮಾತ್ರ ಗೊತ್ತು. ನದಿ ಪಾತ್ರವೊಂದಕ್ಕೆ ಅಣೆಕಟ್ಟು ಕಟ್ಟಿ ಅದರಿಂದ ಅನೇಕರ ಬದುಕಿಗೆ ಆಸರೆಯೊದಗಿಸುವುದರ ಹಿಂದೆ ಹಲವಾರು ಜನರ ತ್ಯಾಗ ಮತ್ತು ಬಲಿದಾನದ ಕಥೆಗಳು ಅಡಕವಾಗಿವೆ. ಸರ್ಕಾರವೇನೋ ಸೂಕ್ತ ಹಣಕಾಸಿನ ನೆರವು ನೀಡಿ ಸಂತ್ರಸ್ತರ ಬದುಕಿಗೆ ಅಗತ್ಯವಾದ ನೆಲೆ ಒದಗಿಸಲಾಗುವುದು ಎಂದು ಹೇಳಿ ತನ್ನ ಕಾರ್ಯವನ್ನು ಸಮರ್ಥಿಸಿಕೊಳ್ಳಬಹುದು. ಆದರೆ ಒಂದು ಸಾಮಾಜಿಕ ಮತ್ತು ಸಾಂಸ್ಕೃತಿಕ ಬದುಕಿನಿಂದ ಸಂಪೂರ್ಣವಾಗಿ ಬೇರು ಸಮೇತ ಕಿತ್ತು ಬೇರೊಂದು ಸಾಮಾಜಿಕ ಮತ್ತು ಸಾಂಸ್ಕೃತಿಕ ತಾಣದಲ್ಲಿ ಬದುಕನ್ನು ಕಟ್ಟಿಕೊಳ್ಳುವುದು ಸಣ್ಣ ಸಂಗತಿಯಲ್ಲ. ಒಂದೆಡೆ ಒಂದೇ ನೆಲದಲ್ಲಿ ಭಾತೃತ್ವದ ಭಾವನೆಯಿಂದ ಹಲವು ತೆಲೆಮಾರುಗಳಿಂದ ಬದುಕಿ ಬಾಳಿದ ಕುಟುಂಬಗಳು ತಮ್ಮ ನೆಲದ ಸಂಬಂಧವನ್ನೇ ಕಡಿದುಕೊಂಡು ಅಪರಿಚಿತ ಪ್ರದೇಶದಲ್ಲಿ ಬದುಕುವಾಗ ಕಾಡುವ ಅನಾಥ ಪ್ರಜ್ಞೆ ನಿಜಕ್ಕೂ ಸಂತ್ರಸ್ತರ ಬದುಕಿಗೆ ಎದುರಾಗುವ ಬಹುದೊಡ್ಡ ಸವಾಲು. ಮುಳುಗಡೆ ಎನ್ನುವುದು ಕೇವಲ ಮನೆ ಎನ್ನುವ ಭೌತಿಕ ವಸ್ತುವನ್ನು ಮಾತ್ರ ತನ್ನ ತೆಕ್ಕೆಗೆ ತೆಗೆದುಕೊಳ್ಳುವುದಿಲ್ಲ. ಅದು ಒಂದು ಇಡೀ ಸಾಂಸ್ಕೃತಿಕ ಬದುಕನ್ನೇ ತನ್ನ ಮಡಲಿಗೆಳೆದುಕೊಳ್ಳುತ್ತದೆ. ಒಂದು ಭೌಗೋಳಿಕ ಪ್ರದೇಶದ ಮುಳುಗಡೆಯಿಂದ ಅಲ್ಲಿನ ಸಾಮಾಜಿಕ ಜನಜೀವನ, ಅಲ್ಲಿನ ಸಂಪ್ರದಾಯಗಳು, ಅಲ್ಲಿ ಆಚರಿಸುವ ಹಬ್ಬಗಳು, ಧಾರ್ಮಿಕ ವಿಧಿ ವಿಧಾನಗಳು, ನಾಟಕ, ಬಯಲಾಟ, ಕೋಲಾಟಗಳಂಥ ಸಾಂಸ್ಕೃತಿಕ ಚಟುವಟಿಕೆಗಳು ಇವುಗಳೆಲ್ಲವನ್ನೂ ಮೀರಿದ ಮನುಷ್ಯ ಸಂಬಂಧಗಳು ಹೀಗೆ ಒಂದು ಸಾಮಾಜಿಕ ಮತ್ತು ಸಾಂಸ್ಕೃತಿಕ ಬದುಕೇ ಮುಳುಗಿ ಹೋಗುತ್ತದೆ.
ಪ್ರತಿವಾರದ ಸಂತೆಗೆ ತರಕಾರಿ ಮಾರಲು ಬರುವ ನಿಂಗಜ್ಜಿ ಮುಳುಗಡೆ ತಂದೊಡ್ಡುವ ಮತ್ತೊಂದು ಭೀಕರತೆಯನ್ನು ಅನಾವರಣಗೊಳಿಸುತ್ತಾಳೆ. ಅವಳು ಹೇಳುವಂತೆ ಹಳ್ಳಿಯಲ್ಲಿದ್ದ ಹತ್ತೆಕ್ಕರೆ ಜಮೀನು ಮತ್ತು ಮೂರು ತೆಲೆಮಾರುಗಳಿಂದ ವಾಸಿಸುತ್ತಿದ್ದ ಮನೆ ಜಲಾಶಯದ ಒಡಲು ಸೇರಿವೆ. ಸರ್ಕಾರ ನೀಡಿದ ಪರಿಹಾರದ ಹಣವನ್ನು ಅವಳ ನಾಲ್ಕು ಮಕ್ಕಳೂ ಸಮನಾಗಿ ಹಂಚಿಕೊಂಡಿದ್ದಾರೆ. ಜೀವನದಲ್ಲಿ ಒಮ್ಮೆಯೂ ಅಷ್ಟೊಂದು ದೊಡ್ಡ ಮೊತ್ತದ ಹಣ ಕಾಣದಿದ್ದ ಅವರಿಗೆ ಮಂಗನ ಕೈಗೆ ಮಾಣಿಕ್ಯ ಸಿಕ್ಕಂತಾಯಿತು. ಕೈಯಲ್ಲಿನ ಹಣದ ಪರಿಣಾಮ ವಿಲಾಸಿ ಜೀವನ ಅವರನ್ನು ಕೈ ಬೀಸಿ ಕರೆಯಿತು. ದ್ವಿಚಕ್ರ ವಾಹನ, ಮೋಜು ಮಸ್ತಿಗಾಗಿ ಹಣವೆಲ್ಲ ಖರ್ಚಾಗಿ ಈಗ ಕೈ ಬರಿದಾಗಿದೆ. ಮನೆಯೂ ಮುಳುಗಿ ಹೋಗಿರುವುದರಿಂದ ಹಾಗೂ ಪುನರ್ವಸತಿ ಕೇಂದ್ರದಲ್ಲಿ ಸರ್ಕಾರ ನೀಡಿದ ಜಾಗದಲ್ಲಿ ಮನೆ ಕಟ್ಟಿಸಿಕೊಳ್ಳಲು ಹಣವೂ ಇಲ್ಲದಿರುವುದರಿಂದ ಅವರ ಇಡೀ ಕುಟುಂಬ ನಗರಕ್ಕೆ ಗುಳೆ ಬಂದಿದೆ. ಎರಡು ಕೋಣೆಗಳ ಸಣ್ಣ ಬಾಡಿಗೆ ಮನೆಯೊಂದರಲ್ಲಿ ಮಕ್ಕಳು ಮೊಮ್ಮಕ್ಕಳೊಂದಿಗೆ ದಿನದೂಡುತ್ತಿರುವ ನಿಂಗಜ್ಜಿ ಈ ಇಳಿವಯಸ್ಸಿನಲ್ಲೂ ದುಡಿಯುತ್ತಿರುವಳು. ಆಕೆ ಹೇಳುವಂತೆ ಇದು ಕೇವಲ ನಿಂಗಜ್ಜಿಯ ಕುಟುಂಬವೊಂದರ ಕಥೆಯಲ್ಲ. ಮುಳುಗಿ ಹೋಗಿರುವ ಅನೇಕ ಹಳ್ಳಿಗಳಲ್ಲಿನ ಕುಟುಂಬಗಳ ಕಥೆಯಿದು.
ಮುಳುಗಡೆಯಾದವರು ಹೊಸ ಪರಿಸರದಲ್ಲಿ ಹೊಸ ಬದುಕನ್ನು ಕಟ್ಟಿಕೊಳ್ಳಲು ಸ್ಥಳಾಂತರಗೊಂಡರು. ಆದರೆ ಮುಳುಗಡೆಯಾಗದೆಯೂ ಮುಳುಗಿ ಹೋಗುವ ಕುಟುಂಬಗಳದ್ದು ಇನ್ನೊಂದು ರೀತಿಯ ದುರ್ಗತಿ. ಜಲಾಶಯಗಳ ಹಿನ್ನೀರಿನ ಸಮೀಪದಲ್ಲಿ ವಾಸಿಸುವ ಕುಟುಂಬಗಳದ್ದು ಅಕ್ಷರಶ: ನರಕಯಾತನೆ. ಹಿನ್ನೀರಿನಿಂದ ಹೊರಸೂಸುವ ದುರ್ಗಂಧ, ಹಾವು ಚೇಳುಗಳ ಹರಿದಾಟ, ಸೊಳ್ಳೆಗಳ ಕಾಟದಿಂದ ದಿನನಿತ್ಯದ ಬದುಕು ಅಸಹನೀಯ ಎಂದೆನಿಸುತ್ತದೆ. ಇಡೀ ಮನೆ ರೋಗ ರುಜಿನಗಳ ಕೊಂಪೆಯಾಗುತ್ತದೆ. ಕತ್ತಲಾಗುತ್ತಿದ್ದಂತೆ ಚಿತ್ರ ವಿಚಿತ್ರ ಕ್ರಿಮಿ ಕೀಟಗಳ ಹಾವಳಿಯಿಂದ ಅವರಿಗೆ ಪ್ರತಿ ರಾತ್ರಿಯೂ ಸುದೀರ್ಘ ಎನಿಸುತ್ತದೆ. ಜೊತೆಗೆ ಸಾಮಾಜಿಕ ಜೀವನವೊಂದು ಚದುರಿ ಹೋಗುವುದರಿಂದ ಅನಾಥ ಪ್ರಜ್ಞೆ ಇನ್ನಿಲ್ಲದಂತೆ ಕಾಡಲಾರಂಭಿಸುತ್ತದೆ. ಹಣವಿರುವ ಸ್ಥಿತಿವಂತರು ಅಂಥದ್ದೊಂದು ಅಸಹನೀಯ ಬದುಕಿನಿಂದ ದೂರಾಗಿ ಹೊಸ ಬದುಕನ್ನು ಕಟ್ಟಿ ಕೊಳ್ಳಬಹುದು. ಆದರೆ ಬಡವರಿಗೆ ಮತ್ತು ಮಧ್ಯಮ ವರ್ಗದವರಿಗೆ ಆ ಒಂದು ಪರಿಸರದಲ್ಲೇ ಬದುಕುವ ಅನಿವಾರ್ಯತೆಯಿಂದ ದಿನನಿತ್ಯದ ಬದುಕು ಘೋರವಾಗುತ್ತದೆ.
ಮುಳುಗಡೆ ನಾಡಿನಲ್ಲಿ ಸೂರಿದ್ದವರದು ಒಂದು ಕಥೆಯಾದರೆ ಸ್ವಂತ ಸೂರಿಲ್ಲದೆ ಬಾಡಿಗೆ ಮನೆಗಳಲ್ಲಿ ವಾಸಿಸುವ ಕುಟುಂಬಗಳದ್ದು ಇನ್ನೊಂದು ರೀತಿಯ ವ್ಯಥೆ. ನಗರ ಪ್ರದೇಶಗಳಲ್ಲಿ ವಸತಿ ಪ್ರದೇಶ ಜಲಾಶಯದ ಒಡಲು ಸೇರುತ್ತಿದ್ದಂತೆ ಇರುವ ಅತ್ಯಲ್ಪ ಮನೆಗಳ ಬೇಡಿಕೆ ಹೆಚ್ಚಲಾರಂಭಿಸುತ್ತದೆ. ಬೇಡಿಕೆ ಹೆಚ್ಚಿದಂತೆ ಮನೆ ಬಾಡಿಗೆ ಗಗನಕ್ಕೆರುತ್ತದೆ. ಬಡವರಿಗೆ ಮತ್ತು ಮಧ್ಯಮ ವರ್ಗದವರಿಗೆ ವಾಸಿಸಲು ಸೂರೊಂದನ್ನು ಹೊಂದಿಸುವುದೇ ಬಹುದೊಡ್ಡ ಸಮಸ್ಯೆಯಾಗುತ್ತದೆ. ಈ ಸಮಸ್ಯೆಯನ್ನು ತಮ್ಮ ಲಾಭಕ್ಕೆ ಉಪಯೋಗಿಸಿಕೊಳ್ಳುವ ಮನೆ ಮಾಲೀಕರುಗಳು ವ್ಯಾಪಾರಕ್ಕಿಳಿಯುತ್ತಾರೆ. ವ್ಯಾಪಾರ ಮತ್ತು ವ್ಯವಹಾರಗಳೆದುರು ಮನುಷ್ಯ ಸಂಬಂಧಗಳು ಅರ್ಥ ಕಳೆದುಕೊಳ್ಳುತ್ತವೆ. ಒಂದೆಡೆ ಮುಳುಗಡೆ ಅನೇಕರ ಬದುಕನ್ನು ಮುಳುಗಿಸಿದರೆ ಅದೇ ಮುಳುಗಡೆ ಇನ್ನೊಂದೆಡೆ ಕೆಲವರನ್ನು ಲಾಭಕ್ಕಾಗಿ ವ್ಯಾಪಾರಕ್ಕಿಳಿಸುತ್ತದೆ. ಜೊತೆಗೆ ಹಳ್ಳಿಗಳೆಲ್ಲ ಮುಳುಗಡೆಯಾಗುತ್ತಿದ್ದಂತೆ ಅನೇಕ ಕುಟುಂಬಗಳು ಹಳ್ಳಿಗಳಿಂದ ನಗರ ಪ್ರದೇಶಗಳಿಗೆ ವಲಸೆ ಬರುತ್ತಿವೆ. ಪರಿಣಾಮವಾಗಿ ಮನೆ ಬಾಡಿಗೆ ಎನ್ನುವ ಬಿಸಿಯ ದಳ್ಳುರಿಯಲ್ಲಿ ಬಡ ಮತ್ತು ಮಧ್ಯಮ ವರ್ಗದವರ ಬದುಕು ಬೆಂದು ಹೋಗುತ್ತದೆ. ದುಡಿಮೆಯ ಬಹುಪಾಲು ಹಣವನ್ನು ವಸತಿ ವ್ಯವಸ್ಥೆಗಾಗಿ ವಿನಿಯೋಗಿಸುವ ಪರಿಸ್ಥಿತಿ ಎದುರಾದಾಗ ಮಕ್ಕಳ ಶಿಕ್ಷಣ ಹಾಗೂ ಇನ್ನಿತರ ಸೌಲಭ್ಯಗಳೆಲ್ಲ ಮರೀಚಿಕೆಯಾಗುತ್ತವೆ.
ಹರಿಯುವ ನೀರಿಗೆ ಕಟ್ಟುವ ಅಣೆಕಟ್ಟು ಎಲ್ಲೋ ಕೆಲವರ ಬದುಕನ್ನು ಸಮೃದ್ಧಗೊಳಿಸಬಹುದು. ಆದರೆ ಅದು ಕೊಡಮಾಡುವ ಸಮೃದ್ಧತೆಯ ಹಿಂದಿನ ಕರಾಳ ಮುಖ ಮಾತ್ರ ಅತ್ಯಂತ ಭೀಕರ. ಹೀಗೆ ಜಲಾಶಯಗಳ ಒಡಲನ್ನು ಸೇರುವ ಮುಳುಗಡೆಯ ನಾಡಿನಲ್ಲಿ ಒಂದೆರಡು ಹೆಜ್ಜೆ ನಡೆದು ಬಂದರೆ ಕಣ್ಣೆದುರು ಅಲ್ಲಿನ ದುರಂತ ಬದುಕು ಅನಾವರಣಗೊಳ್ಳುತ್ತ ಹೋಗುತ್ತದೆ. ಅನೇಕರ ನಿಟ್ಟುಸಿರು, ನಿಸ್ಸಾಹಯಕ ಕೂಗು, ಆಕ್ರಂದನ ಕಿವಿಗಪ್ಪಳಿಸುತ್ತವೆ.
ಮುಗಿಸುವ ಮುನ್ನ:
ಬಾಗಲಕೋಟೆಯಲ್ಲೊಂದು ವಿಶಿಷ್ಟ ಮ್ಯೂಜಿಯಂ ಇದೆ. ಅಲ್ಲಿ ಗ್ರಾಮೀಣ ಪರಿಸರದ ಸಾಮಾಜಿಕ ಮತ್ತು ಸಾಂಸ್ಕೃತಿಕ ಜೀವನವನ್ನು ಅತ್ಯಂತ ಸುಂದರವಾಗಿ ಮತ್ತು ಅಷ್ಟೇ ಆಕರ್ಷಕವಾಗಿ ಚಿತ್ರಿಸಲಾಗಿದೆ. ಅಲ್ಲಿ ಗೌಡರ ಮನೆಯಿದೆ, ದನಗಳ ಕೊಟ್ಟಿಗೆ ಇದೆ, ಊರ ನಡುವಿನ ಭಾವಿಯಿದೆ, ಅರಳಿ ಮರದ ಕೆಳಗೆ ಹರಟೆಯಲ್ಲಿ ತೊಡಗಿರುವ ಜನರ ಗುಂಪಿದೆ, ಕಮ್ಮಾರ, ಕುಂಬಾರ, ನೇಕಾರ, ಬಡಿಗ, ಬಳೆಗಾರ ಇತ್ಯಾದಿ ಕಸುಬುದಾರರ ಪ್ರತಿಕೃತಿಗಳಿವೆ. ಹಬ್ಬ ಹರಿದಿನಗಳ ಚಿತ್ರಗಳಿವೆ. ಒಟ್ಟಾರೆ ಗ್ರಾಮೀಣ ಪರಿಸರದಲ್ಲಿ ನಡೆದಾಡಿ ಬಂದ ಅನುಭವ ನೋಡುಗನದಾಗುತ್ತದೆ. ಮುಳುಗಡೆ ನಾಡಿನ ಇಡೀ ಸಾಮಾಜಿಕ ಮತ್ತು ಸಾಂಸ್ಕೃತಿಕ ಬದುಕನ್ನು ಇಲ್ಲಿ ನಾಲ್ಕು ಗೋಡೆಗಳ ನಡುವೆ ಬಂಧಿಸಿಟ್ಟಿರುವರೇನೋ ಎನ್ನುವ ಪ್ರಶ್ನೆ ಮನದಲ್ಲಿ ಉಳಿದು ಕಾಡುತ್ತದೆ.
-ರಾಜಕುಮಾರ.ವ್ಹಿ.ಕುಲಕರ್ಣಿ (ಕುಮಸಿ), ಬಾಗಲಕೋಟೆ

No comments:
Post a Comment