ಆಕೆಗಿನ್ನೂ ಹದಿನಾಲ್ಕು ವರ್ಷ ವಯಸ್ಸು. ಆಟ ಆಡುತ್ತ, ಗೆಳತಿಯರೊಂದಿಗೆ ಚೇಷ್ಟೆ ಮಾಡುತ್ತ, ಮನೆಯಲ್ಲಿ ಅಪ್ಪ ಅಮ್ಮನೊಂದಿಗೆ ಹಠ ಮಾಡುತ್ತ, ತಮ್ಮಂದಿರೊಂದಿಗೆ ಜಗಳವಾಡುತ್ತ ಕಾಲ ಕಳೆಯಬೇಕಾದ ಪುಟ್ಟ ಹುಡುಗಿ ಅವಳು. ಅಂಥ ಹುಡುಗಿ ಅಕ್ಟೋಬರ್ 9 ರಂದು ಶಾಲೆಯಿಂದ ಮರಳುತ್ತಿರುವ ಹೊತ್ತು ಅವಳಿದ್ದ ಶಾಲಾವಾಹನವನ್ನು ತಡೆಗಟ್ಟಿದ ಕ್ರೂರ ತಾಲಿಬಾನಿಗಳು ಅವಳ ಮೇಲೆ ಗುಂಡು ಹಾರಿಸಿ ಹತ್ಯೆಗೈಯಲು ಪ್ರಯತ್ನಿಸಿದರು. ಉಗ್ರರ ಒಂದು ಗುಂಡು ತೆಲೆಯನ್ನು ಮತ್ತು ಇನ್ನೊಂದು ಕುತ್ತಿಗೆಯನ್ನು ಹೊಕ್ಕು ಅವಳ ಪರಿಸ್ಥಿತಿ ಚಿಂತಾಜನಕವಾಗಿದೆ. ಇಂಗ್ಲೆಂಡಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆ ಹುಡುಗಿಯನ್ನು ಉಳಿಸಿಕೊಳ್ಳಲು ಅಲ್ಲಿನ ವೈದ್ಯರು ಹರಸಾಹಸ ಮಾಡುತ್ತಿರುವರು. ಆಸ್ಪತ್ರೆಯ ವೈದ್ಯರ ಪ್ರಕಾರ ಅವಳು ಬದುಕುಳಿಯುವ ಸಾಧ್ಯತೆ ಪ್ರತಿಶತ 70 ರಷ್ಟಿದೆ. ಇಡೀ ಜಗತ್ತು ಅವಳಿಗಾಗಿ ಪ್ರಾರ್ಥಿಸುತ್ತಿದೆ. ಬದುಕಿ ಬರಲೆಂದು ಅವಳ ವಯಸ್ಸಿನ ಪುಟ್ಟ ಮಕ್ಕಳೆಲ್ಲ ಆಸೆ ಕಂಗಳಿಂದ ನಿರೀಕ್ಷಿಸುತ್ತಿದ್ದಾರೆ. ಕೋಟ್ಯಾಂತರ ಜನರ ಹರಕೆ ಹಾರೈಕೆಗಳೆಲ್ಲ ನಿಜವಾಗಲಿವೆ ಎನ್ನುವ ಸಣ್ಣ ಆಸೆ ಎಲ್ಲರಲ್ಲೂ ಇದೆ (ಈ ಲೇಖನ ಬರೆದು ಮುಗಿಸುವ ವೇಳೆಗೆ ಆ ಪುಟ್ಟ ಹುಡುಗಿ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾಳೆ).
ನಮಗೆಲ್ಲ ಗೊತ್ತಿರುವಂತೆ ಇಡೀ ಜಗತ್ತಿನ ಗಮನ ಸೆಳೆದ ಈ ಘಟನೆ ನಡೆದದ್ದು ನಮ್ಮ ನೆರೆಯ ರಾಷ್ಟ್ರ ಪಾಕಿಸ್ತಾನದಲ್ಲಿ. ತಾಲಿಬಾನಿಗಳ ಗುಂಡಿಗೆ ಬಲಿಯಾಗಿ ಇವತ್ತು ಜೀವನ್ಮರಣದ ನಡುವೆ ಹೋರಾಡುತ್ತಿರುವ ಆ ಪುಟ್ಟ ಬಾಲಕಿಯ ಹೆಸರು ಮಲಾಲಾ. ಪಾಕಿಸ್ತಾನದ ಸ್ವಾತ್ ಕಣಿವೆಯ ಮೇಲೆ ಉಗ್ರರು ಮಾಡುತ್ತಿರುವ ಹೀನ ಕೃತ್ಯವನ್ನು ಹೊರ ಪ್ರಪಂಚಕ್ಕೆ ತಿಳಿಸಿ ಕೊಟ್ಟಿದ್ದೆ ಮಲಾಲಾ ಮಾಡಿದ ಬಹುದೊಡ್ಡ ತಪ್ಪು. ಒಂದು ಮಾನವೀಯ ನೆಲೆಯಲ್ಲಿ ಚಿಂತಿಸಿ ಜನರ ಕಲ್ಯಾಣಕ್ಕಾಗಿ ಪ್ರಯತ್ನಿಸಿದ ಮಲಾಲಾಳ ಕಾರ್ಯ ತಾಲಿಬಾನಿಗಳಿಗೆ ಸರಿ ಕಾಣಲಿಲ್ಲ. ಈ ವಿಜ್ಞಾನ ಮತ್ತು ತಂತ್ರಜ್ಞಾನದ ಯುಗದಲ್ಲೂ ಅತೀ ಮತಾಂಧರಂತೆ ವರ್ತಿಸುವ ಆ ಉಗ್ರರಿಗೆ ದೇಶಾಭಿಮಾನಕ್ಕಿಂತ ಧರ್ಮಾಭಿಮಾನವೇ ಅಧಿಕ. ದೇಶದ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಬದುಕು ಅಧ:ಪತನಕ್ಕಿಳಿದರೂ ಸರಿ ಧರ್ಮ ಮಾತ್ರ ಉಚ್ಚ ಸ್ಥಾನದಲ್ಲಿರಲಿ ಎನ್ನುವ ಕರ್ಮಠ ಮನಸ್ಸು ಅವರದು.
ಅಂಥದ್ದೊಂದು ಧರ್ಮಾಂಧತೆಯ ಪರಿಣಾಮ ದೇಶದಲ್ಲಿ ಹೆಚ್ಚುತ್ತಿರುವ ಸಮಸ್ಯೆಗಳನ್ನು ಜನರಿಗೆ ಮನಗಾಣಿಸಲು ಪ್ರಯತ್ನಿಸಿದ ಮಲಾಲಾಳ ವರ್ತನೆ ಉಗ್ರರಿಗೆ ಸರಿಕಾಣಿಸಲಿಲ್ಲ. ಅದಕ್ಕೆಂದೆ ಅವಳನ್ನು ಹತ್ಯೆಗೈಯಲು ಸಂಚು ರೂಪಿಸಿದರು. ಪುಟ್ಟ ಹುಡುಗಿ ಎನ್ನುವುದನ್ನೂ ಯೋಚಿಸದೆ ನಿರ್ದಯವಾಗಿ ಗುಂಡಿನ ಮಳೆಗರೆದರು.
ಮಲಾಲಾ ಜನಿಸಿದ್ದು ಪಾಕಿಸ್ತಾನದ ಸ್ವಾತ್ ಜಿಲ್ಲೆಯ ಮುಸ್ಲಿಂ ಕುಟುಂಬದಲ್ಲಿ ಜುಲೈ 1997 ರಲ್ಲಿ. ಪಾಕಿಸ್ತಾನದ ಕವಿಯಿತ್ರಿ ಮತ್ತು ವೀರ ವನಿತೆ ಮಲಾಲಾಳ ಹೆಸರನ್ನೇ ಆಕೆಗಿಡಲಾಯಿತು. ಮಲಾಲಾಳ ತಂದೆ ಜಿಯಾವುದ್ದೀನ್ ಯೂಸುಪ್ ಝೈ ಸ್ವಾತ್ ಕಣಿವೆಯಲ್ಲಿ ಕೆಲವು ಶಾಲೆಗಳನ್ನು ನಡೆಸುತ್ತಿದ್ದರು. ಕವಿ, ವಿಚಾರವಾದಿ, ಶಿಕ್ಷಣ ಪ್ರೇಮಿಯಾಗಿದ್ದ ಜಿಯಾವುದ್ದೀನ್ ವ್ಯಕ್ತಿತ್ವ ಮಗಳನ್ನು ತುಂಬ ಪ್ರಭಾವಿಸಿತ್ತು. ಸುಶಿಕ್ಷಿತ ತಂದೆ ತಾಯಿ, ನಲ್ಮೆಯ ತಮ್ಮಂದಿರಿಂದ ಕೂಡಿದ ಅತ್ಯಂತ ಸುಖಿ ಕುಟುಂಬದಲ್ಲಿ ಬೆಳೆದ ಹುಡುಗಿ ಅವಳು. ಆ ಕುಟುಂಬದಲ್ಲಿ ಪ್ರೀತಿಯ ಒರತೆಗೆ ಕೊರತೆಯಿರಲಿಲ್ಲ. ಜೊತೆಗೆ ಆತ್ಮಾಭಿಮಾನ ಮತ್ತು ರಾಷ್ಟ್ರ ಭಕ್ತಿ ಅವರುಗಳ ಕಣ ಕಣದಲ್ಲೂ ತುಂಬಿ ಕೊಂಡಿದ್ದವು. ಗೆಳತಿಯರೊಂದಿಗೆ ಆಟವಾಡಿಕೊಂಡಿರಬೇಕಾದ ಆ ವಯಸ್ಸಿನಲ್ಲೇ ಮಲಾಲಾ ತನ್ನ ತಂದೆಯೊಡನೆ ರಾಷ್ಟ್ರದ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸ್ಥಿತಿಗತಿಯ ಕುರಿತು ಚರ್ಚಿಸುತ್ತಿದ್ದಳು.
ಅಂಥದ್ದೊಂದು ಕೌಟಂಬಿಕ ಹಿನ್ನೆಲೆಯೇ ಮಲಾಲಾಳಿಗೆ ಬರೆಯಲು ಪ್ರೇರಣೆ ನೀಡಿತು. ಅದು ಆರಂಭಗೊಂಡಿದ್ದು 2009 ರ ಪ್ರಾರಂಭದಲ್ಲಿ. ಆ ಸಂದರ್ಭ ಮೌಲಾನಾ ಫಜ್ಲುಲ್ಲಾ ನೇತೃತ್ವದ ತಾಲಿಬಾನಿಗಳ ತಂಡ ಇಡೀ ಸ್ವಾತ್ ಕಣಿವೆಯ ಮೇಲೆ ತನ್ನ ನಿಯಂತ್ರಣ ಹೊಂದಿತ್ತು. ದಿನದಿಂದ ದಿನಕ್ಕೆ ಅಲ್ಲಿ ಉಗ್ರರ ಉಪಟಳ ಹೆಚ್ಚುತ್ತಿತ್ತು. ತಾಲಿಬಾನಿಗಳು ಆ ಇಡೀ ಪ್ರದೇಶದಲ್ಲಿ ಮನೋರಂಜನಾ ಕಾರ್ಯಕ್ರಮಗಳು ಬಿತ್ತರವಾಗದಂತೆ ತಡೆ ಹಿಡಿದಿದ್ದರು. ದೂರದರ್ಶನ ತನ್ನ ಪ್ರಸರಣಾ ಕಾರ್ಯಕ್ರಮವನ್ನು ನಿಲ್ಲಿಸಿತ್ತು. ಸಿನಿಮಾ ಮಂದಿರಗಳು ಬಾಗಿಲು ಹಾಕಿದ್ದವು. ಹೆಣ್ಣು ಮಕ್ಕಳು ಶಾಲೆಗೆ ಹೋಗುವುದನ್ನು ನಿಷೇಧಿಸಲಾಗಿತ್ತು. ಈ ಸಂದರ್ಭದಲ್ಲೇ ಬಿಬಿಸಿಯ ಉರ್ದು ಚಾನೆಲ್ ಎಚ್ಚೆತ್ತುಕೊಂಡಿತು. ಉಗ್ರರ ಅಟ್ಟಹಾಸ ಸಹಿಸಲಸಾಧ್ಯವಾದಾಗ ಅವರ ವಿರುದ್ಧ ಸಾರ್ವಜನಿಕರನ್ನು ಒಂದುಗೂಡಿಸಲು ಯೋಜನೆಯೊಂದನ್ನು ರೂಪಿಸಿತು. ಪಾಕಿಸ್ತಾನದಲ್ಲಿರುವ ತನ್ನ ವರದಿಗಾರ ಅಬ್ದುಲ್ ಹೈ ಕಕ್ಕರ್ ನನ್ನು ಈ ಕೆಲಸಕ್ಕಾಗಿ ನಿಯೋಜಿಸಿತು. ಕಕ್ಕರ್ ನೇರವಾಗಿ ಹೋಗಿ ಭೇಟಿ ಮಾಡಿದ್ದು ಸ್ವಾತ್ ಕಣಿವೆಯಲ್ಲಿ ಶಾಲೆಗಳನ್ನು ಪ್ರಾರಂಭಿಸಿ ಒಂದಿಷ್ಟು ಹೆಸರು ಮಾಡಿದ್ದ ಜಿಯಾವುದ್ದೀನ್ ಅವರನ್ನು. ಅಂಥದ್ದೊಂದು ಅಗತ್ಯವನ್ನು ಅವರಿಗೆ ಮನಗಾಣಿಸಿಕೊಟ್ಟ ನಂತರವೇ ಜಿಯಾವುದ್ದೀನ್ ತಮ್ಮ ಮಗಳು ಮಲಾಲಾಳನ್ನು ಬರೆಯುವಂತೆ ಹೇಳಿದ್ದು. ಸ್ವಾತ್ ಕಣಿವೆಯಲ್ಲಿನ ಒಬ್ಬ ಪುಟ್ಟ ಹುಡುಗಿಗೆ ಬರೆಯಲು ಒಪ್ಪಿಸಿದ ಕೆಲಸವನ್ನು ಬಿಬಿಸಿ ಉರ್ದು ಚಾನೆಲ್ ಮುಖ್ಯಸ್ಥ ಮಿರ್ಜಾ ವಾಹಿದ್ ಹೀಗೆ ಸಮರ್ಥಿಸಿಕೊಳ್ಳುತ್ತಾರೆ 'ಸ್ವಾತ್ ಕಣಿವೆಯಲ್ಲಿನ ಹಿಂಸೆ ಮತ್ತು ರಾಜಕೀಯವನ್ನು ಬಿಬಿಸಿ ಉರ್ದು ಚಾನೆಲ್ ಈಗಾಗಲೇ ಸಾಕಷ್ಟು ವರದಿ ಮಾಡಿದೆ. ಆದರೆ ತಾಲಿಬಾನಿಗಳ ಹಿಡಿತದಲ್ಲಿ ಸಾಮಾನ್ಯ ಜನರು ಹೇಗೆ ಬದುಕುತ್ತಿರುವರು ಎನ್ನುವ ವಿಷಯವಾಗಿ ನಾವು ಇನ್ನಷ್ಟು ವರದಿ ಮಾಡಬೇಕಿದೆ. ಅದು ಸಾಧ್ಯವಾಗುವುದು ಸ್ವಾತ್ ಕಣಿವೆಯಲ್ಲೇ ವಾಸಿಸುತ್ತಿರುವ ಸಾರ್ವಜನಿಕರಿಂದ ಮಾತ್ರ ಸಾಧ್ಯ. ಅದಕ್ಕೆಂದೇ ಈ ಒಂದು ಕೆಲಸವನ್ನು ನಾವು ಮಲಾಲಾಳಿಗೆ ಒಪ್ಪಿಸಿದ್ದು'. ಇದರಿಂದ ಮಲಾಲಾಳ ಜೀವಕ್ಕೆ ಆಪತ್ತಿದೆ ಎನ್ನುವ ಆತಂಕ ಬಿಬಿಸಿಗೆ ಇದ್ದುದ್ದರಿಂದಲೇ ಗುಲ್ ಮಕಾಯ್ ಎನ್ನುವ ಗುಪ್ತನಾಮದಿಂದ ಮಲಾಲಾಳ ಲೇಖನಗಳು ಪ್ರಕಟವಾಗತೊಡಗಿದವು.
ಬಿಬಿಸಿ ಉರ್ದು ಚಾನೆಲ್ ನಲ್ಲಿ ಮಲಾಲಾಳ ಬರವಣಿಗೆಗೆ ವ್ಯಾಪಕ ಪ್ರಚಾರ ದೊರೆಯತೊಡಗಿತು. ತಾಲಿಬಾನ್ ಉಗ್ರರ ಅಟ್ಟಹಾಸ ಮತ್ತು ಸಾರ್ವಜನಿಕರು ದಿನನಿತ್ಯ ಎದುರಿಸುತ್ತಿರುವ ಸಮಸ್ಯೆಗಳನ್ನು ಲೇಖನಗಳ ಮೂಲಕ ಒಂದೊಂದಾಗಿ ಬಿಚ್ಚಿಡತೊಡಗಿದಳು. ದೇಶದ ಮೂಲೆ ಮೂಲೆಗಳಿಂದ ಉತ್ತಮ ಪ್ರತಿಕ್ರಿಯೆ ಬರತೊಡಗಿತು. ಅನೇಕರು ಮಲಾಲಾಳ ಲೇಖನಗಳನ್ನು ಓದಿ ಮೆಚ್ಚುಗೆ ವ್ಯಕ್ತಪಡಿಸಿದರು. ಈ ನಡುವೆ ಮಲಾಲಾ ಮತ್ತು ಅವಳ ತಂದೆ ನ್ಯೂಯಾರ್ಕ್ ಟೈಮ್ಸ್ ವರದಿಗಾರ ಎಲ್ಲಿಕ್ ನನ್ನು ಸಂಪರ್ಕಿಸಿ ಸ್ವಾತ್ ಕಣಿವೆ ಕುರಿತು ಡಾಕ್ಯುಮೆಂಟರಿ ಸಿದ್ಧಪಡಿಸುವಂತೆ ಕೇಳಿಕೊಂಡರು. ಹೀಗೆ ಅವರುಗಳ ಪ್ರಯತ್ನದಿಂದ ತಯ್ಯಾರಾದ ಡಾಕ್ಯುಮೆಂಟರಿ ಅಲ್ಲಿನ ಜನಜೀವನವನ್ನು ವಿವರವಾಗಿ ಸೆರೆಹಿಡಿದು ಪ್ರದರ್ಶಿಸಿತು. 2009ರ ಕೊನೆಯಲ್ಲಿ ಯುನಿಸೆಫ್ ನ ಸಹಕಾರದೊಂದಿಗೆ ಕೆ.ಕೆ.ಫೌಂಡೆಶನ್ ಅಣಕು ಶಾಸನ ಸಭೆಯನ್ನು ನಿರ್ಮಿಸಿ ಸ್ವಾತ್ ಕಣಿವೆಯಲ್ಲಿನ ಮಕ್ಕಳನ್ನೆಲ್ಲ ಚರ್ಚೆಗೆ ಆಹ್ವಾನಿಸಿತು. ಶಾಸನ ಸಭೆಯ ಅಧ್ಯಕ್ಷತೆಯನ್ನು ವಹಿಸಿಕೊಂಡ ಮಲಾಲಾ ಸ್ತ್ರೀ ಶಿಕ್ಷಣ ಮತ್ತು ಮಕ್ಕಳ ಹಕ್ಕುಗಳನ್ನು ಕುರಿತು ವಿವರವಾಗಿ ಮಾತನಾಡಿದಳು. ತಾನು ರಾಜಕೀಯಕ್ಕೆ ಸೇರುವ ಇಚ್ಛೆಯನ್ನು ವ್ಯಕ್ತಪಡಿಸಿ ಬೆನಜಿರ್ ಭುಟ್ಟೊ ತನಗೆ ಸ್ಫೂರ್ತಿ ಎಂದು ಹೇಳಿದಳು. ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದರ ಮೂಲಕ ತಾಲಿಬಾನ್ ವಿರುದ್ಧದ ತನ್ನ ಹೋರಾಟವನ್ನು ಮತ್ತಷ್ಟು ತೀವೃಗೊಳಿಸಿದಳು. ನಂತರದ ದಿನಗಳಲ್ಲಿ ಇನ್ಸ್ಟಿಟ್ಯೂಟ್ ಆಫ್ ವಾರ್ ಆಯಿಂಡ್ ಪೀಸ್ ಪ್ರಾರಂಭಿಸಿದ ಮುಕ್ತ ಮನಸ್ಸು ಯೋಜನೆಯಲ್ಲಿ ಮಲಾಲಾ ಪಾಲ್ಗೊಳ್ಳಲಾರಂಭಿಸಿದ ಪರಿಣಾಮ ಪಾಕಿಸ್ತಾನದ 42 ಶಾಲೆಗಳಲ್ಲಿ ಪತ್ರಿಕೋದ್ಯಮದ ತರಬೇತಿ ಪ್ರಾರಂಭವಾಯಿತು. ಮಲಾಲಾಳ ಬರವಣಿಗೆಯಿಂದ ಸ್ಫೂರ್ತಿಗೊಂಡ ಅನೇಕ ವಿದ್ಯಾರ್ಥಿನಿಯರು ಬರವಣಿಗೆಯ ತರಬೇತಿಯನ್ನು ಪಡೆಯಲು ಬಯಸಿದರು. 2012 ರ ಎಫ್ರಿಲ್ ನಲ್ಲಿ ಮಲಾಲಾ 'ಮಲಾಲಾ ಎಜ್ಯುಕೇಶನ್ ಫೌಂಡೆಶನ್' ಸ್ಥಾಪಿಸಿ ಬಡ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಅಗತ್ಯವಾದ ನೆರವು ನೀಡಲಾರಂಭಿಸಿದಳು. ಮಲಾಲಾ ತನ್ನ ಹೋರಾಟ ಮತ್ತು ಸಾಮಾಜಿಕ ಕಳಕಳಿಯಿಂದಾಗಿ ಬಹುಬೇಗ ಜನಪ್ರಿಯಳಾದಳು. ಅಂತರಾಷ್ಟ್ರೀಯ ಮಕ್ಕಳ ಶಾಂತಿ ಪ್ರಶಸ್ತಿಗೆ ಮಲಾಲಾಳ ಹೆಸರನ್ನು ಸೂಚಿಸಲಾಯಿತು. ಇದಾದ ಎರಡು ತಿಂಗಳುಗಳ ನಂತರ ಪಾಕಿಸ್ತಾನ ರಾಷ್ಟ್ರದ ಪ್ರಥಮ ರಾಷ್ಟ್ರೀಯ ಯುವ ಶಾಂತಿ ಪ್ರಶಸ್ತಿಗೆ ಭಾಜನಳಾದಳು.
ಮಲಾಲಾ ಬರೆಯುತ್ತಾಳೆ
ಮಲಾಲಾಳ ಬರವಣಿಗೆಯ ಒಂದಿಷ್ಟು ಸ್ಯಾಂಪಲ್ ಗಳು
# ನನ್ನ ಶಿಕ್ಷಣದ ಮೂಲಭೂತ ಹಕ್ಕನ್ನು ಕಸಿದುಕೊಳ್ಳಲು ತಾಲಿಬಾನಿಗಳಿಗೆ ಅದೆಷ್ಟು ಧೈರ್ಯ.
# ನಿನ್ನೆ ನಾನೊಂದು ಭಯಾನಕ ಕನಸು ಕಂಡೆ. ಸ್ವಾತ್ ಕಣಿವೆಯಲ್ಲಿ ಮಿಲ್ಟ್ರಿ ಕಾರ್ಯಾಚರಣೆ ಪ್ರಾರಂಭವಾದ ದಿನದಿಂದ ನಾನು ಈ ರೀತಿಯ ಕನಸು ಕಾಣಲಾರಂಭಿಸಿದ್ದೇನೆ. ಆ ಕನಸಿನಲ್ಲಿ ನಾನು ಶಾಲೆಗೆ ಹೋಗಲು ಹೆದರುತ್ತಿದ್ದೇನೆ. ಏಕೆಂದರೆ ತಾಲಿಬಾನಿಗಳು ಹುಡುಗಿಯರು ಶಾಲೆಗೆ ಹೋಗದಿರುವಂತೆ ರಾಜಾಜ್ಞೆ ವಿಧಿಸಿರುವರು.
# 27 ವಿದ್ಯಾರ್ಥಿನಿಯರಲ್ಲಿ ಕೇವಲ 11 ಹುಡುಗಿಯರು ಮಾತ್ರ ಶಾಲೆಗೆ ಹಾಜರಾಗಿದ್ದರು. ಉಗ್ರರ ಅಟ್ಟಹಾಸಕ್ಕೆ ನನ್ನ ಮೂವರು ಗೆಳತಿಯರು ಪೇಶಾವರ, ಲಾಹೋರ ಮತ್ತು ರಾವಲ್ಪಿಂಡಿಗೆ ತಮ್ಮ ಪೋಷಕರೊಂದಿಗೆ ವಲಸೆ ಹೋಗಿರುವರು.
# ನಾನು ನನ್ನ ಇಷ್ಟದ ಪಿಂಕ್ ಬಣ್ಣದ ಉಡುಪು ಧರಿಸಲು ನಿರ್ಧರಿಸಿದೆ. ಉಳಿದ ವಿದ್ಯಾರ್ಥಿನಿಯರೂ ಬಣ್ಣ ಬಣ್ಣದ ಬಟ್ಟೆಗಳನ್ನು ಧರಿಸಿ ಬಂದಿದ್ದರು.
# ಇನ್ನು ಐದು ಶಾಲೆಗಳನ್ನು ನಾಶ ಪಡಿಸಿದರು. ಅವುಗಳಲ್ಲಿ ಒಂದು ಶಾಲೆ ನಮ್ಮ ಮನೆಯ ಹತ್ತಿರವೇ ಇದೆ. ನನಗೆ ಆಶ್ಚರ್ಯವಾಯಿತು ಏಕೆಂದರೆ ಈಗಾಗಲೇ ಶಾಲೆಗಳು ಮುಚ್ಚಲ್ಪಟ್ಟಿವೆ. ಅವುಗಳನ್ನು ನಾಶಪಡಿಸುವ ಅಗತ್ಯವಾದರೂ ಏಕೆ?
# ರಜೆಯ ನಂತರ ನಮಗೆ ವಾರ್ಷಿಕ ಪರೀಕ್ಷೆಗಳಿವೆ. ಆದರೆ ಇದು ಸಾಧ್ಯವಾಗುವುದು ತಾಲಿಬಾನಿಗಳು ಹುಡುಗಿಯರನ್ನು ಶಾಲೆಗೆ ಹೋಗಲು ಅನುಮತಿ ನೀಡಿದರೆ ಮಾತ್ರ.
# ಪಾಕಿಸ್ತಾನದ ಸೇನೆ ಉಗ್ರರ ವಿರುದ್ಧದ ತನ್ನ ಕಾರ್ಯಾಚರಣೆಯನ್ನು ಸಮರ್ಪಕವಾಗಿ ನಿರ್ವಹಿಸಿದ್ದರೆ ಇಂದು ಈ ಪರಿಸ್ಥಿತಿ ಎದುರಾಗುತ್ತಿರಲಿಲ್ಲ.
# ಇಸ್ಲಾಮಾಬಾದಿಗೆ ಇದು ನನ್ನ ಮೊದಲ ಭೇಟಿ. ಸುಂದರ ಕಟ್ಟಡಗಳು ಮತ್ತು ವಿಶಾಲ ರಸ್ತೆಗಳಿಂದಾಗಿ ನಗರ ಆಕರ್ಷಕವಾಗಿ ಕಾಣಿಸುತ್ತದೆ. ಆದರೆ ನನ್ನ ಸ್ವಾತ್ ಕಣಿವೆಗೆ ಹೋಲಿಸಿದಾಗ ಇಲ್ಲಿ ನಿಸರ್ಗ ಸೌಂದರ್ಯದ ಕೊರತೆ ಇದೆ.
# ಜನರು ಸರ್ಕಾರಕ್ಕಿಂತ ಸೇನಾಪಡೆಯ ಮಾತುಗಳನ್ನು ಹೆಚ್ಚು ನಂಬುತ್ತಿರುವರು.
# ಓ ದೇವರೆ ಸ್ವಾತ್ ಕಣಿವೆಗೆ ಶಾಂತಿಯನ್ನು ತಂದುಕೊಡು. ಅದು ಸಾಧ್ಯವಾಗದಿದ್ದರೆ ಅಮೇರಿಕ ಇಲ್ಲವೇ ಚೀನಾ ದೇಶವನ್ನಾದರೂ ಇಲ್ಲಿಗೆ ಕಳಿಸಿಕೊಡು.
# ನನಗೆ ನಿಜವಾಗಿಯೂ ಬೇಸರವಾಗುತ್ತಿದೆ. ಏಕೆಂದರೆ ಇಲ್ಲಿ ಓದಲು ಪುಸ್ತಕಗಳೇ ಇಲ್ಲ.
# ನನ್ನದೊಂದು ಕನಸಿದೆ. ಈ ದೇಶವನ್ನು ಉಳಿಸಲು ನಾನು ರಾಜಕಾರಣಿಯಾಗಲೇ ಬೇಕಿದೆ. ನನ್ನ ದೇಶದಲ್ಲಿ ಅನೇಕ ಸಮಸ್ಯೆಗಳಿವೆ. ರಾಜಕಾರಣಿಯಾಗಿ ನಾನು ಆ ಎಲ್ಲ ಸಮಸ್ಯೆಗಳನ್ನು ನಿರ್ಮೂಲನೆ ಮಾಡಬೇಕಿದೆ.
# ಒಂದು ವೇಳೆ ಅಧ್ಯಕ್ಷ ಜರ್ದಾರಿ ಮಗಳು ಸ್ವಾತ್ ಕಣಿವೆಯಲ್ಲಿ ಓದುತ್ತಿದ್ದರೆ ಇಲ್ಲಿನ ಶಾಲೆಗಳು ಮುಚ್ಚುತ್ತಿರಲಿಲ್ಲ.
# ತಾಲಿಬಾನಿಗಳು ನನ್ನನ್ನು ಕೊಲ್ಲಲು ಬಂದರೆ ಅವರಿಗೆ ಸ್ಪಷ್ಟವಾಗಿ ಹೇಳುತ್ತೇನೆ ನೀವು ಮಾಡಲು ಹೊರಟಿರುವುದು ತಪ್ಪು ಎಂದು. ಏಕೆಂದರೆ ಶಿಕ್ಷಣ ನಮ್ಮ ಆಜನ್ಮಸಿದ್ಧ ಹಕ್ಕು.
ಹೇಳಿಕೇಳಿ ಪಾಕಿಸ್ತಾನ ಭಯೋತ್ಪಾದಕರ ಬೀಡು. ವಿಶ್ವದ ಪರಮಪಾತಕಿ ಬಿನ್ ಲಾಡೆನ್ ಗೆ ಸೇನಾ ತರಬೇತಿ ಶಿಬಿರದ ಅನತಿ ದೂರದಲ್ಲೇ ರಾಜಾಶ್ರಯ ನೀಡಿದ ನೆಲವದು. ಇವತ್ತಿಗೂ ಭಾರತದ ಮೇಲೆ ದಾಳಿಯ ಸಂಚು ರೂಪಿಸಿದ ಉಗ್ರರನ್ನು ತನ್ನ ಮಡಿಲಲ್ಲಿಟ್ಟುಕೊಂಡು ಸಾಕುತ್ತಿದೆ. ಅಂಥ ನೆಲದ ಉಗ್ರರಿಗೆ ತಮ್ಮದೇ ನೆಲದ ಕುಡಿಯೊಂದು ಹೀಗೆ ತಿರುಗಿ ಬೀಳುವುದನ್ನು ಸಹಿಸಲಾದರೂ ಹೇಗೆ ಸಾಧ್ಯ. ಅದಕ್ಕೆಂದೇ ಮಲಾಲಾಳ ಹತ್ಯೆಗೆ ಸಂಚು ರೂಪಿಸುತ್ತಾರೆ. ಅಕ್ಟೋಬರ್ 9, 2012 ರಂದು ಪರೀಕ್ಷೆ ಬರೆದು ಶಾಲಾವಾಹನದಲ್ಲಿ ಮನೆಗೆ ತೆರಳುತ್ತಿದ್ದ ಮಲಾಲಾಳನ್ನು ಮಾರ್ಗ ಮಧ್ಯದಲ್ಲೇ ಅಡ್ಡಗಟ್ಟಿದ ಉಗ್ರರು ಅವಳ ಮೇಲೆ ಗುಂಡಿನ ಮಳೆಗರೆಯುತ್ತಾರೆ. ಉಗ್ರರ ಗುಂಡೇಟಿನಿಂದ ಮಲಾಲಾಳ ದೇಹ ನೆಲಕ್ಕೊರಗುತ್ತದೆ. ಆದರೆ ಆಕೆಯದು ಗಟ್ಟಿ ಜೀವ ನೋಡಿ. ಅವಳ ಹೆಸರಿನಲ್ಲೇ ಶೂರತ್ವ ಇರುವುದರಿಂದ ಗುಂಡೇಟಿನ ನಡುವೆಯೂ ಉಸಿರಾಡುತ್ತಾಳೆ. ತಕ್ಷಣವೇ ಅವಳನ್ನು ವಿಮಾನದ ಮೂಲಕ ಪೇಶಾವರ್ ನ ಮಿಲ್ಟ್ರಿ ಆಸ್ಪತ್ರೆಗೆ ದಾಖಲಿಸಲಾಗುತ್ತದೆ. ಮೂರು ಗಂಟೆಗಳ ಸತತ ಚಿಕಿತ್ಸೆಯ ನಂತರ ಕೊನೆಗೂ ಮಲಾಲಾಳ ದೇಹದಲ್ಲಿನ ಗುಂಡುಗಳನ್ನು ಹೊರತೆಗೆಯುವಲ್ಲಿ ವೈದ್ಯರು ಯಶಸ್ವಿಯಾಗುತ್ತಾರೆ. ಅಕ್ಟೋಬರ್ 11 ರಂದು ಹೆಚ್ಚಿನ ಚಿಕಿತ್ಸೆಗಾಗಿ ರಾವಲ್ಪಿಂಡಿಯ ಆರ್ಮ್ ಫೋರ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗುತ್ತದೆ. ವಿದೇಶಿ ಆಸ್ಪತ್ರೆಗಳಿಂದ ಚಿಕಿತ್ಸೆಗೆ ನೆರವು ನೀಡುವ ಭರವಸೆಯ ಮಾತುಗಳು ಕೇಳಿ ಬಂದಾಗ ಕೊನೆಗೆ ಅಕ್ಟೋಬರ್ 15 ರಂದು ಮಲಾಲಾ ಇಂಗ್ಲೆಂಡಿಗೆ ಪ್ರಯಾಣ ಬೆಳೆಸುತ್ತಾಳೆ. ಸಧ್ಯ ಬರ್ಮಿಂಗ್ ಹ್ಯಾಮ್ ನ ಕ್ವಿನ್ ಎಲಿಜಿಬತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಲಾಲಾ ಚೇತರಿಸಿಕೊಳ್ಳುತ್ತಿದ್ದಾಳೆ. ವೈದ್ಯರು ಪ್ರತಿಶತ 70 ರಷ್ಟು ಬದುಕುಳಿಯುವ ಸಾಧ್ಯತೆ ಇದೆ ಎಂದು ಭರವಸೆ ನೀಡಿರುವರು. ಇಡೀ ಜಗತ್ತು ಮಲಾಲಾಳಿಗಾಗಿ ಪ್ರಾರ್ಥಿಸುತ್ತಿದೆ.
ಪಾಕಿಸ್ತಾನದ ಸರ್ಕಾರ ಮಲಾಲಾಳನ್ನು ಉಳಿಸಿಕೊಳ್ಳಲು ಶತ ಪ್ರಯತ್ನ ಮಾಡುತ್ತಿದೆ. ಆಕೆಯ ತಂದೆ ಜಿಯಾವುದ್ದೀನ್ ಗೆ ಲಂಡನ್ನಿನ ರಾಯಭಾರಿ ಕಚೇರಿಯಲ್ಲಿ ಕೆಲಸ ಕೊಟ್ಟು ಇಡೀ ಕುಟುಂಬವನ್ನು ಸ್ಥಳಾಂತರಿಸಿದೆ. ಮುಂದಿನ ದಿನಗಳಲ್ಲಿ ತಾಲಿಬಾನಿಗಳಿಂದ ಮಲಾಲಾಳ ಕುಟುಂಬಕ್ಕೆ ತೊಂದರೆ ಆಗದಿರಲಿ ಎನ್ನುವ ಮುನ್ನೆಚ್ಚರಿಕೆ ಇದು. ಈ ನಡುವೆ ತಾಲಿಬಾನ್ ಉಗ್ರರ ಪಡೆ ಮಲಾಲಾಳ ಮೇಲಾದ ಹತ್ಯಾ ಯತ್ನದ ಜವಾಬ್ದಾರಿಯನ್ನು ಹೊತ್ತುಕೊಂಡಿದೆ. ಮಲಾಲಾ ಧರ್ಮ ನಿಂದಕ ಮತ್ತು ಅಶ್ಲೀಲತೆಯ ಸಂಕೇತ ಎಂದು ಜರೆದಿದೆ. ಆಕೆ ಬದುಕುಳಿದರೂ ಅವಳನ್ನು ಕೊಲ್ಲಲು ಮತ್ತೊಮ್ಮೆ ಪ್ರಯತ್ನಿಸುವುದಾಗಿ ಘೋಷಿಸಿದೆ.
ಮಲಾಲಾ ಬದುಕಿ ಬರಲಿ ಇದು ಎಲ್ಲರ ಹಾರೈಕೆ. ಮಲಾಲಾಳ ಸ್ನೇಹಿತೆ ಹೇಳಿದಂತೆ "ಸ್ವಾತ್ ಕಣಿವೆಯಲ್ಲಿನ ಪ್ರತಿಯೊಬ್ಬ ಹೆಣ್ಣುಮಗು ಮಲಾಲಾ. ನಾವು ಶಿಕ್ಷಿತರಾಗುತ್ತೇವೆ. ನಾವು ಜಯಶಾಲಿಗಳಾಗುತ್ತೇವೆ. ತಾಲಿಬಾನಿಗಳು ನಮ್ಮನ್ನು ಸೋಲಿಸಲು ಸಾಧ್ಯವಿಲ್ಲ". ಅಲ್ಲಿ ಮಲಾಲಾಳ ಧ್ವನಿ ಪ್ರತಿಧ್ವನಿಸುತ್ತಿದೆ. ಕ್ರಮೇಣ ಆ ಧ್ವನಿ ಇಡೀ ಪಾಕಿಸ್ತಾನವನ್ನು ವ್ಯಾಪಿಸಲಿದೆ.
ನವೆಂಬರ್ 14 ಮಕ್ಕಳ ದಿನ (ಈಗಾಗಲೇ ವಿಶ್ವಸಂಸ್ಥೆ ನವೆಂಬರ್ 10 ಮಲಾಲಾ ದಿನ ಎಂದು ಘೋಷಿಸಿದೆ). ಅದಕ್ಕಾಗಿ ದೂರದ ಇಂಗ್ಲೆಂಡಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆ ಹೆಣ್ಣು ಮಗು ನೆನಪಾಯಿತು. ಇಂಟರ್ ನೆಟ್ ನಲ್ಲಿ ಹುಡುಕಿದಾಗ ಒಂದಿಷ್ಟು ಮಾಹಿತಿ ದೊರೆಯಿತು. ಹೀಗೆ ದೊರೆತ ಮಾಹಿತಿಗೆ ಒಂದಿಷ್ಟು ರೆಕ್ಕೆ ಪುಕ್ಕ ಜೋಡಿಸಿದಾಗ ಅದೊಂದು ಲೇಖನವಾಗಿ ಈಗ ನಿಮ್ಮೆದುರು.
-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ
No comments:
Post a Comment