'ದೀಪಾವಳಿ ಹಬ್ಬಕ್ಕ ಟಿವ್ಯಾಗ ಹೊಸ ಸಿನಿಮಾ ಹಾಕ್ತಾರ. ಮೂರ ದಿನಾ ಸಿನಿಮಾ ನೋಡ್ಕೊತ ಫುಲ್ ಎಂಜಾಯ್' ಎಂದು ಮಗಳು ಮೂರು ಮೂರು ಸಲ ತಿವಿದು ಹೇಳಿದಾಗಲೇ ಗೊತ್ತಾಯ್ತು ದೀಪಾವಳಿ ಹಬ್ಬಕ್ಕೆ ಇನ್ನು ಎರಡೇ ದಿನ ಬಾಕಿ ಅಂತ (ಈ ಲೇಖನ ವಿಜಯ ಕರ್ನಾಟಕದ ಬಾಗಲಕೋಟೆ ಪುರವಣಿಗೆ ಬರೆಯುತ್ತಿರುವ ಹೊತ್ತು ದೀಪಾವಳಿ ಹಬ್ಬ ಆಗಿರಲಿಲ್ಲ ಮತ್ತು ಮಗಳು ಈ ಸಾರಿ ಹಬ್ಬಕ್ಕೆಂದು ತಾತನ ಮನೆಗೆ ಹೋಗಿ ಬರ್ಜರಿಯಾಗಿ ಆಚರಿಸಿದ್ದಾಳೆ). ಇವತ್ತಿನ ಮಕ್ಕಳ ದೀಪಾವಳಿ ಹಬ್ಬ ಕೇವಲ ಟಿ.ವಿ ಕಾರ್ಯಕ್ರಮಗಳಿಗೆ ಸೀಮಿತವಾಗುತ್ತಿರುವುದು ನೆನಪಾಗಿ ಬೇಸರವಾಯಿತು. ಈ ದಿನಗಳಲ್ಲಿ ನಾವುಗಳೆಲ್ಲ ಹಬ್ಬಗಳನ್ನು ಆಚರಿಸುವುದಕ್ಕಿಂತ ಅವುಗಳನ್ನು ಟಿ.ವಿ ಚಾನೆಲ್ ಗಳಲ್ಲಿ ನೋಡಿ ಸಂಭ್ರಮಿಸುತ್ತಿದ್ದೇವೆ. ಈ ಹಬ್ಬ ಹರಿದಿನಗಳಂದು ಮನೆಯ ಸದಸ್ಯರೆಲ್ಲ ಟಿ.ವಿ ಎದುರು ಯಾವಾಗ ಕುಳಿತೆವೋ ಎಂದು ಕಾತರಿಸುತ್ತಾರೆ. ನಮ್ಮ ಸಂಪ್ರದಾಯ, ಆಚರಣೆಗಳೆಲ್ಲ ಟಿವಿ ಎನ್ನುವ ಮೂರ್ಖ ಪೆಟ್ಟಿಗೆಯೊಳಗೆ ಬಂಧಿಸಲ್ಪಟ್ಟಿರುವುದು ಸಧ್ಯದ ಮಟ್ಟಿಗೆ ಸಾಂಸ್ಕೃತಿಕ ಲೋಕದ ಬಹುದೊಡ್ಡ ತಳಮಳ.
ಇನ್ನು ದೀಪಾವಳಿ ಹಬ್ಬದ ವಿಷಯಕ್ಕೆ ಬಂದರೆ ಅದು ನಾವು ಆಚರಿಸುವ ಹಬ್ಬಗಳಲ್ಲೇ ಬಹುದೊಡ್ಡ ಹಬ್ಬ. ಹಿಂದೆ ನಾವು ಚಿಕ್ಕವರಿದ್ದಾಗ ದೀಪಾವಳಿ ಹಬ್ಬ ಇನ್ನೂ ಎಂಟು ದಿನಗಳಿವೆ ಎನ್ನುವಾಗಲೇ ನಮ್ಮ ಸಡಗರಕ್ಕೆ ಎಲ್ಲೆ ಇರುತ್ತಿರಲಿಲ್ಲ. ಮನೆಯಲ್ಲಿ ಅಮ್ಮ, ಅಜ್ಜಿ, ಅಕ್ಕ ಹಬ್ಬಕಾಗಿ ತಯ್ಯಾರಿಸುವ ಉಂಡಿ, ಚೆಕ್ಕುಲಿ, ಗಿಲಗಂಚಿ, ಚುಡುವಾ, ಸೇವು, ಜಾಮೂನು, ಅನಾರಸ ಹೀಗೆ ವಿವಿಧ ಖಾದ್ಯಗಳು ಬಾಯಲ್ಲಿ ನೀರೂರಿಸುತ್ತಿದ್ದವು. ತಿಂಡಿಯ ಆಸೆಗಾಗಿ ನಾವು ಮಕ್ಕಳೆಲ್ಲ ಅಡುಗೆ ಮನೆಯೊಳಗೆ ಹತ್ತಾರು ಸಲ ಹೋಗಿ ಬರುವುದು ಮತ್ತು ಅಮ್ಮನಿಂದ ಬಯ್ಯಿಸಿಕೊಳ್ಳುವುದು ನಡೆಯುತ್ತಿತ್ತು. ನಮ್ಮ ಮನದ ಇಂಗಿತ ಅರಿತ ಅಜ್ಜಿ ಅಮ್ಮನ ಕಣ್ತಪ್ಪಿಸಿ ಮನೆಯ ಹಿತ್ತಲಿಗೆ ನಮ್ಮನ್ನು ಕರೆದೊಯ್ದು ಒಂದಿಷ್ಟು ತಿಂಡಿ ತಿನ್ನಲು ಕೊಡುತ್ತಿದ್ದಳು. ತಿಂಡಿಗಳೆಲ್ಲ ಸಿದ್ಧವಾದ ನಂತರ ನಮ್ಮ ಕೈಗೆ ನಿಲುಕದಂತೆ ದೊಡ್ಡ ಡಬ್ಬಿಗಳಲ್ಲಿ ತುಂಬಿ ಅಟ್ಟದ ಮೇಲೆ ಒಯ್ದಿಡುತ್ತಿದ್ದರು. ನಾವುಗಳೆಲ್ಲ ಅಟ್ಟದ ಮೇಲಿನ ತಿಂಡಿಗಳಿಂದ ತುಂಬಿದ ಡಬ್ಬಿಗಳನ್ನು ಆಸೆಯಿಂದ ನೋಡುತ್ತ ದೀಪಾವಳಿ ಹಬ್ಬಕ್ಕಾಗಿ ಕಾಯುತ್ತಿದ್ದೇವು. ಒಮ್ಮೊಮ್ಮೆ ಮನೆಯಲ್ಲಿ ಯಾರೂ ಇಲ್ಲದಿದ್ದ ಸಂದರ್ಭ ಅಟ್ಟ ಹತ್ತಿ ತಿಂಡಿ ತಿನ್ನುವ ಸಾಹಸ ಮಾಡುತ್ತಿದ್ದದುಂಟು.
ದೀಪಾವಳಿ ಹಬ್ಬದ ಹಿಂದಿನ ದಿನ ಅಪ್ಪ ಪೇಟೆಯಿಂದ ನಮಗೆಲ್ಲ ಹೊಸ ಬಟ್ಟೆಗಳನ್ನು ಮತ್ತು ಹಬ್ಬಕ್ಕಾಗಿ ಪಟಾಕಿಗಳನ್ನು ತರುತ್ತಿದ್ದ. ಹೊಸ ಬಟ್ಟೆಗಳನ್ನು ಪದೆ ಪದೆ ಮುಟ್ಟಿ ನೋಡುವಾಗಿನ ಸಂಭ್ರಮ ಮತ್ತು ಸಡಗರ ವರ್ಣನಾತೀತ. ನರಕಚತುರ್ದಶಿಯಂದು ನಸುಕಿನಲ್ಲೇ ಏಳಬೇಕಿರುವುದರಿಂದ ಹಿಂದಿನ ರಾತ್ರಿ ನಮಗೆಲ್ಲ ಬೇಗನೆ ಊಟ ಮಾಡಿಸಿ ಮಲಗಿಸುತ್ತಿದ್ದರು. ಪಟಾಕಿ ಸಿಡಿಸುವ ಮತ್ತು ಹೊಸ ಬಟ್ಟೆ ಧರಿಸುವ ಕನಸುಗಳೊಂದಿಗೆ ನಾವೆಲ್ಲ ನಿದ್ರೆಗೆ ಜಾರುತ್ತಿದ್ದೇವು. ನರಕ ಚತುರ್ದಶಿಯಂದು ಬೆಳಿಗ್ಗೆ ನಾಲ್ಕು ಗಂಟೆಗೇ ಆರತಿ ಬೆಳಗುವ ಸಂಪ್ರದಾಯವಿತ್ತು. ಕೃಷ್ಣ ನರಕಾಸುರನನ್ನು ಕೊಂದು ಬಂದಿದ್ದರ ಪ್ರತೀಕವಾಗಿ ಎಲ್ಲ ಮನೆಗಳಲ್ಲಿ ವಿಶೇಷವಾಗಿ ಮಕ್ಕಳನ್ನು ಸಾಲಾಗಿ ಕೂಡಿಸಿ ಹೆಣ್ಣು ಮಕ್ಕಳು ಆರತಿ ಮಾಡುತ್ತಿದ್ದರು. ಈ ಕಾರ್ಯಕ್ರಮ ಮುಗಿಯುತ್ತಿದ್ದಂತೆಯೇ ನಾವೆಲ್ಲ ಪಟಾಕಿ ಸಿಡಿಸಲು ಅಂಗಳಕ್ಕೆ ಲಗ್ಗೆ ಇಡುತ್ತಿದ್ದೇವು. ಒಂದಾದ ಮೇಲೊಂದರಂತೆ ಪಟಾಕಿಗಳು ಸಿಡಿದು ಆಕಾಶದಲ್ಲಿ ಬಣ್ಣ ಬಣ್ಣದ ಚಿತ್ತಾರ ಮೂಡಿಸುತ್ತಿದ್ದವು. ಇಡೀ ಊರು ಪಟಾಕಿಗಳ ಸದ್ದಿನಲ್ಲಿ ಮುಳುಗೆಳುತ್ತಿತ್ತು.
ಬೆಳಕು ಹರಿಯುವವರೆಗೂ ಪಟಾಕಿಗಳ ಸಂಭ್ರಮದಲ್ಲಿ ಮೈಮರೆತು ಕುಣಿಯುತ್ತಿದ್ದ ನಮ್ಮನ್ನೆಲ್ಲ ಅಮ್ಮ ಬಲವಂತವಾಗಿ ಕರೆದೊಯ್ದು ಬಚ್ಚಲ ಮನೆಯಲ್ಲಿ ಕೂಡಿಸುತ್ತಿದ್ದಳು. ಮೈಗೆಲ್ಲ ಎಣ್ಣೆ ಸವರಿದ ಬಿಸಿ ನೀರಿನ ಸ್ನಾನ ಮೈಗೆ ಹಿತವೆನಿಸುತ್ತಿತ್ತು. ಸ್ನಾನ ಮಾಡಿ ಹೊಸಬಟ್ಟೆ ತೊಟ್ಟು ಫಲಹಾರಕ್ಕೆ ಅಣಿಯಾಗುತ್ತಿದ್ದೇವು. ಮಕ್ಕಳು, ಗಂಡಸರು, ನೆರೆಹೊರೆಯವರು ಮತ್ತು ಆಳುಕಾಳುಗಳು ಸೇರಿ ಹದಿನೈದಿಪ್ಪತ್ತು ಜನ ಇರುತ್ತಿದ್ದರು. ಮನೆಯ ಪಡಸಾಲೆಯಲ್ಲಿ ಎಲ್ಲರೂ ಸಾಲಾಗಿ ಕುಳಿತ ನಂತರ ಅಕ್ಕ ನಮ್ಮೆದುರು ಉದ್ದಕ್ಕೂ ಬಿಡಿಸುತ್ತಿದ್ದ ಬಣ್ಣದ ರಂಗೋಲಿ ಚಿತ್ತಾಕರ್ಷಕವಾಗಿರುತ್ತಿತ್ತು. ಪ್ರತಿಯೊಬ್ಬರೆದುರು ಪುಟ್ಟ ಮಗುವಿನ ಹಾಸಿಗೆ ಗಾತ್ರದ ಬಾಳೆ ಎಲೆ. ಎಳೆಯ ಸುತ್ತಲೂ ಉಂಡಿ, ಚೆಕ್ಕುಲಿ, ಗಿಲಗಂಚಿ, ಅನಾರಸ, ಜಾಮೂನುಗಳಿದ್ದರೆ ಮಧ್ಯದಲ್ಲಿ ಹಬೆಯಾಡುವ ಬಿಸಿ ಉಪಿಟ್ಟು ಅದರ ಮೇಲೆ ಕೆನೆ ಮೊಸರು. ಎಲೆಯ ಎಡಭಾಗದಲ್ಲಿ ರಸಬಾಳೆ ಹಣ್ಣು. ಬಾಯಲ್ಲಿ ನೀರೂರಿಸುವ ವಿವಿಧ ಭಕ್ಷಗಳ ಜೊತೆಗೆ ಅಮ್ಮ ಮತ್ತು ಅಜ್ಜಿಯ ಅಂತ:ಕರಣದ ಒತ್ತಾಯದಿಂದಾಗಿ ತಿಂಡಿಗಳೆಲ್ಲ ಒಂದೊಂದಾಗಿ ಹೊಟ್ಟೆಗಿಳಿಯುತ್ತಿದ್ದವು. ಆ ದಿನ ಊಟದ ನೆನಪೇ ಆಗದಂತೆ ಫಲಹಾರದಿಂದ ಹೊಟ್ಟೆ ಭಾರವಾಗುತ್ತಿತ್ತು. ರಾತ್ರಿಯಂತೂ ಊರಿನ ಎಲ್ಲ ಮನೆಗಳಲ್ಲಿ ಸ್ಪರ್ಧೆಯಂತೆ ಪಟಾಕಿಗಳನ್ನು ಸಿಡಿಸಿ ಬಾನಂಗಳದಲ್ಲಿ ಬಣ್ಣದ ಚಿತ್ತಾರ ಮೂಡಿಸುತ್ತಿದ್ದರು.
ದೀಪಾವಳಿ ಹಬ್ಬದ ಮೂರನೆ ದಿನವಾದ ಬಲಿಪಾಡ್ಯಮಿಯದು ಇನ್ನೊಂದು ವಿಶೇಷ ಆ ದಿನ ನಸುಕಿನ ನಾಲ್ಕು ಗಂಟೆಗೇ ಅಗಸರ ಚೆಂದಪ್ಪ ನಮಗೆಲ್ಲ ಆರತಿ ಬೆಳಗಲು ಬರುತ್ತಿದ್ದ. ತೆಲೆಯ ಮೇಲೆ ಕಂಬಳಿ ಹೊದ್ದು ಕೈಯಲ್ಲಿ ಆರತಿ ತಟ್ಟೆ ಹಿಡಿದು ಬರುವ ಚೆಂದಪ್ಪ ದೇವಧೂತನಂತೆ ಕಾಣಿಸುತ್ತಿದ. ಮನೆಯವರೆಲ್ಲರೂ ಸಾಲಾಗಿ ಕುಳಿತು ಅವನಿಂದ ಆರತಿ ಮಾಡಿಸಿಕೊಳ್ಳುತ್ತಿದ್ದೇವು. ಮನೆಯ ಹಿರಿಯರು ಅವನ ಆರತಿ ತಟ್ಟೆಗೆ ಒಂದಿಷ್ಟು ಹಣ ಹಾಕುತ್ತಿದ್ದರು. ಆ ದಿನ ಫಲಹಾರದ ಜೊತೆಗೆ ಮಧ್ಯಾಹ್ನದ ಊಟಕ್ಕೆ ವಿಶೇಷ ಅಡುಗೆ ಸಿದ್ಧವಾಗುತ್ತಿತ್ತು. ನೆರೆಹೊರೆಯವರನ್ನೂ ಉಪಹಾರಕ್ಕೆ ಮತ್ತು ಊಟಕ್ಕೆ ಕರೆಯುತ್ತಿದ್ದರು. ಒಂದು ಸೌಹಾರ್ದ ವಾತಾವರಣ ಈ ಹಬ್ಬ ತಂದುಕೊಡುತ್ತಿತ್ತು. ದೀಪಾವಳಿ ಹಬ್ಬದ ಆ ಮೂರು ದಿನಗಳು ಮನೆಯಲ್ಲಿನ ದನಕರುಗಳಿಗೂ ಆರತಿ ಬೆಳಗುತ್ತಿದ್ದುದೊಂದು ವಿಶೇಷ. ಊರಿನ ದನ ಕಾಯುವ ಹುಡುಗರು ಹುಲ್ಲಿನಿಂದ ಆರತಿ ತಟ್ಟೆಯನ್ನು ತಯ್ಯಾರಿಸಿ ಅದರೊಳಗೆ ಮಣ್ಣಿನ ಹಣತೆಯನ್ನಿಟ್ಟುಕೊಂಡು ರಾತ್ರಿ ಮನೆ ಮನೆಗೂ ತೆರಳಿ ದನಕರುಗಳಿಗೆ ಆರತಿ ಬೆಳಗುತ್ತಿದ್ದರು. ಆ ಹುಡುಗರಿಗೆ ಕೆಲವರು ಪಟಾಕಿಗಳನ್ನೋ ಇನ್ನು ಕೆಲವರು ಒಂದೆರಡು ರೂಪಾಯಿಗಳನ್ನೋ ಕೊಡುತ್ತಿದ್ದರು. ದೀಪಾವಳಿ ಹಬ್ಬದ ಆ ಮೂರು ದಿನಗಳ ಸಡಗರ ಸಂಭ್ರಮ ವರ್ಣನಾತೀತ. ಹೊಸ ಬಟ್ಟೆ, ವಿವಿಧ ಭಕ್ಷ ಭೋಜನಗಳು, ತರೇಹವಾರಿ ಪಟಾಕಿಗಳು ಈ ಎಲ್ಲ ಸಂಭ್ರಮಗಳ ನಡುವೆ ಮೂರು ದಿನಗಳು ಕಳೆದು ಹೋದದ್ದೇ ಗೊತ್ತಾಗುತ್ತಿರಲಿಲ್ಲ. ದೀಪಾವಳಿ ಮತ್ತೆ ಯಾವಾಗ ಬರುತ್ತದೋ ಎನ್ನುವ ಬೇಸರದಿಂದಲೇ ನಾವು ಮಕ್ಕಳೆಲ್ಲ ದೀಪಾವಳಿ ಹಬ್ಬಕ್ಕೆ ವಿದಾಯ ಹೇಳುತ್ತಿದ್ದೇವು.
ಇಂದು
'ರ್ರೀ ಸುಜಾತಾ ಈ ಸಲದ ದಿಪಾವಳಿಗಿ ಟಿವ್ಯಾಗ ಮುಂಜಾನಿ ಎಂಟರಿಂದ ರಾತ್ರಿ ಹತ್ತರತನಕ ಸ್ಪೆಷಲ್ ಪ್ರೋಗ್ರಾಮ್ ಹಾಕ್ಲಿಕತ್ತಾರ. ನಾನಂತೂ ಹನ್ನೊಂದರೊಳಗ ಹಬ್ಬದ ಕೆಲ್ಸಾ ಎಲ್ಲಾ ಮುಗಿಸಿ ಟಿವಿ ಎದರ ಕೂಡ್ತಿನಿ ನೋಡ್ರಿ' ಪಕ್ಕದ ಮನೆ ಸಾವಿತ್ರಮ್ಮ ಹೇಳುತ್ತಿದ್ದರೆ ಇಡೀ ಓಣಿ ಹೆಂಗಸರೆಲ್ಲ ಹಬ್ಬದ ಮೂರು ದಿನಗಳಂದು ಟಿವಿಯಲ್ಲಿ ಏನೇನು ಕಾರ್ಯಕ್ರಮಗಳಿವೆಯಂದು ಚರ್ಚಿಸುತ್ತಿದ್ದರು. ಹೌದು ಈ ಟಿವಿ ಚಾನೆಲ್ ಗಳಲ್ಲಿ ಮನೋರಂಜನಾ ಕಾರ್ಯಕ್ರಮಗಳ ಹಾವಳಿ ಪ್ರಾರಂಭವಾದ ಮೇಲಂತೂ ಹಬ್ಬಗಳು ತಮ್ಮ ವಿಶೇಷತೆಗಳನ್ನೇ ಕಳೆದು ಕೊಂಡಿವೆ. ಮೂರು ದಿನಗಳ ದೀಪಾವಳಿ ಹಬ್ಬವೂ ಇದರಿಂದ ಹೊರತಾಗಿಲ್ಲ. ಹಬ್ಬಕ್ಕೆಂದು ಮನೆಗಳಲ್ಲಿ ವಿಶೇಷ ತಿಂಡಿಗಳನ್ನು ತಯ್ಯಾರಿಸುವ ಸಂಪ್ರದಾಯ ನಮ್ಮ ಅಮ್ಮಂದಿರ ಕಾಲಕ್ಕೇ ಮುಗಿದು ಹೋಗಿದೆ. ಅಂಗಡಿಗಳಿಂದ ಹಬ್ಬಕ್ಕೆಂದು ಕಟ್ಟಿಸಿಕೊಂಡು ಬರುವ ಕಾಲು ಕೇಜಿ ತಿಂಡಿಯನ್ನೂ ಮಕ್ಕಳು ಮ್ಯಾಗಿ ಮತ್ತು ಪಿಜ್ಜಾದ ಪ್ರಭಾವದಿಂದಾಗಿ ಮೂಸಿಯೂ ನೋಡುತ್ತಿಲ್ಲ. ಹೊಸ ಬಟ್ಟೆ ಹಬ್ಬಕ್ಕೇ ತೊಡಬೇಕೆನ್ನುವ ನಿಯಮವಿಲ್ಲ. ಸಾಲು ಸಾಲು ಮರಗಳನ್ನು ನೆಲಕ್ಕುರುಳಿಸಿ ಪರಿಸರವನ್ನು ಹಾಳುಗೆಡುವುತ್ತಿರುವ ನಾವು ಪರಿಸರ ಮಾಲಿನ್ಯ ಎಂದು ನೆಪವೊಡ್ಡಿ ಪಟಾಕಿ ಸಿಡಿಸುವುದನ್ನು ನಿಷೇಧಿಸಿದ್ದೇವೆ. ಹಿಂದೆ ಎಲ್ಲ ದೀಪಾವಳಿ ಹಬ್ಬದಂದು ಪರಿಚಿತರ ಮತ್ತು ಸಂಬಂಧಿಕರ ಮನೆಗಳಿಗೆ ಹೋಗಿ ಫಲಹಾರ ಸೇವಿಸಿ ಪರಸ್ಪರ ಶುಭಾಷಯ ಕೊರುತ್ತಿದ್ದ ದಿನಗಳು ಮರೆಯಾಗಿ ಇಂದು ಪಕ್ಕದ ಮನೆಯವರಿಗೇ ಶುಭಾಷಯವನ್ನು ಎಸ್.ಎಮ್.ಎಸ್ ಮೂಲಕ ತಿಳಿಸುತ್ತಿದ್ದೇವೆ. ಇನ್ನು ನಮ್ಮ ನಂತರದ ಪೀಳಿಗೆಗೆ ದನಕರುಗಳಿಗೆ ದೀಪ ಬೆಳಗುವುದಾಗಲಿ, ನಸುಕಿನಲ್ಲಿ ಚೆಂದಪ್ಪ ಬಂದು ಆರತಿ ಮಾಡುವುದಾಗಲಿ, ಸಗಣಿಯಿಂದ ಪಾಂಡವರ ಮೂರ್ತಿಗಳನ್ನು ಮಾಡಿ ಪೂಜಿಸುವುದಾಗಲಿ ಗೊತ್ತೇ ಇಲ್ಲ. ಅದೆಲ್ಲ ಇತಿಹಾಸದ ಪುಟಗಳನ್ನು ಸೇರಿಕೊಂಡಿದೆ. ದೀಪಾವಳಿ ಅನ್ನುವುದು ಕೂಡಾ ಅದೊಂದು ಸಾಮಾನ್ಯ ದಿನದಂತೆಯೇ ಆಗಿ ಹೋಗಿದೆ. ಈ ಬದಲಾವಣೆಯನ್ನೆಲ್ಲ ಬೆರಗುಗಣ್ಣಿನಿಂದ ಗಮನಿಸುತ್ತಿರುವ 90 ವರ್ಷದ ನನ್ನ ಪರಿಚಯದ ಅಜ್ಜಿಯೊಬ್ಬಳು ಗೊಣಗುತ್ತಾಳೆ 'ನಮ್ಮ ಕಾಲದಾಗ ದೀಪಾವಳಿ ಇನ್ನು ಎಂಟು ದಿನ ಅನ್ನೋವಾಗಲೇ ಹಬ್ಬದ ತಯ್ಯಾರಿ ಶುರು ಆಗ್ತಿತ್ತು. ಮುಂದ ತುಳಸಿ ಲಗ್ನ ಮುಗಿಯೋವರೆಗೂ ಮನೆಯಲ್ಲಿ ದೀಪಾವಳಿ ಹಬ್ಬಾನೆ. ಆದರ ಈಗಿನ ಕಾಲದಾಗ ದೀಪಾವಳಿ ಯಾವಾಗ ಬರ್ತದ ಯಾವಾಗ ಹೋಗ್ತದ ಗೊತ್ತೇ ಆಗಂಗಿಲ್ಲ'.-ರಾಜಕುಮಾರ.ವ್ಹಿ.ಕುಲಕರ್ಣಿ (ಕುಮಸಿ), ಬಾಗಲಕೋಟೆ
No comments:
Post a Comment