Monday, October 1, 2012

ಕ್ಷಮಿಸಿ ಬಿಡಿ ಬಾಪು ನಾವು ಕೃತಘ್ನರು

      ಮತ್ತೊಂದು ಗಾಂಧಿ ಜಯಂತಿ ಆಚರಣೆಗೆ ಇಡೀ ರಾಷ್ಟ್ರಕ್ಕೆ ರಾಷ್ಟ್ರವೇ ಸಿದ್ಧವಾಗುತ್ತಿದೆ. ಪ್ರತಿ ವರ್ಷ ಅಕ್ಟೋಬರ್ ಎರಡರಂದು ಗಾಂಧೀಜಿ ಅವರ ಹುಟ್ಟುಹಬ್ಬ ಆಚರಿಸಿ ದೇಶ ರಾಷ್ಟ್ರಪಿತನ ಗುಣಗಾನ ಮಾಡುತ್ತದೆ. ಗ್ರಾಮ ಪಂಚಾಯಿತಿಯಿಂದ ಪಾರ್ಲಿಮೆಂಟ್ ವರೆಗೆ ಅಂದು ಸಂಭ್ರಮವೋ ಸಂಭ್ರಮ. ಗಾಂಧಿ ಟೊಪ್ಪಿಗೆಗೆ ಅಂದು ಎಲ್ಲಿಲ್ಲದ ಬೇಡಿಕೆ ಮತ್ತು ಗೌರವ. ಕರವಸ್ತ್ರವಾದರೂ ಸರಿ ಜನ ಖಾದಿ ಬಟ್ಟೆಯನ್ನು ಖರೀದಿಸಿ ಪುನೀತರಾಗುತ್ತಾರೆ. 'ಈಶ್ವರ ಅಲ್ಲಾ ತೇರೋ ನಾಮ' ಹಾಡು ಎಲ್ಲರ ಬಾಯಲ್ಲೂ ಕೇಳಿ ಬರುತ್ತದೆ. ವರ್ಷವಿಡೀ ಧೂಳಿನಿಂದ ಮುಚ್ಚಿ ಹೋದ ಗಾಂಧಿ ಪ್ರತಿಮೆಯನ್ನು ಸ್ವಚ್ಚಗೊಳಿಸಿ ಹೂಗಳಿಂದ ಅಲಂಕಾರಗೊಳಿಸಲಾಗುತ್ತದೆ. ಗಾಂಧೀಜಿ ಅವರ ನೆನಪಿಗಾಗಿ ಶಾಲಾ, ಕಾಲೇಜುಗಳಿಗೆ ಮತ್ತು ಸರ್ಕಾರಿ ಕಚೇರಿಗಳಿಗೆ ರಜೆ ಘೋಷಿಸಲಾಗುತ್ತದೆ. ಮಹಾತ್ಮಾ ಗಾಂಧಿ ಹತ್ಯೆಯಾಗಿ ಹತ್ತಿರ ಹತ್ತಿರ ಅರವತ್ತು ವರ್ಷಗಳಾದವು. ಅನೇಕ ವರ್ಷಗಳಿಂದ ಗಾಂಧಿ ಜಯಂತಿ ಆಚರಿಸುತ್ತಿರುವ ನಾವು ಗಾಂಧೀಜಿ ಅವರ ತತ್ವ, ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದೆವೆಯೇ? ಅಂಹಿಸಾ ಪರಮೋಧರ್ಮ ಎಂದು ಅಚಲವಾಗಿ ನಂಬಿದ್ದ ಗಾಂಧೀಜಿ ಅವರ ವಿಚಾರಧಾರೆ ಇಂದು ಬಳಕೆಯಲ್ಲಿದೆಯೇ? ಗಾಂಧೀಜಿ ಅವರು ಬೋಧಿಸಿದ ಸಪ್ತ ಸಾಮಾಜಿಕ ಪಾಪಗಳೇನಾದವು? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಾದ ಸಮಯವಿದು. ದುರಂತವೆಂದರೆ ಇಂದು ನಾವು ಗಾಂಧೀಜಿ ಅವರನ್ನು ಬೇರೆಯೇ ರೀತಿಯಲ್ಲಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ಗಾಂಧೀಜಿ ಅವರ ಆದರ್ಶ, ತತ್ವಗಳೇನು ಎನ್ನುವುದಕ್ಕಿಂತ ಅವರಲ್ಲಿನ ದೌರ್ಬಲ್ಯಗಳು ಮತ್ತು ವೈಯಕ್ತಿಕ ಬದುಕಿನ ಸಮಸ್ಯೆಗಳನ್ನು ಅರಿಯುವ ಪ್ರಯತ್ನ ನಡೆದಿದೆ. ಗಾಂಧೀಜಿ ಅನೇಕ ದೌರ್ಬಲ್ಯಗಳಿರುವ ಒಬ್ಬ ಸಾಮಾನ್ಯ ಮನುಷ್ಯ ಎಂದು ಹೇಳುವ ಹುನ್ನಾರ ವ್ಯವಸ್ಥಿತವಾಗಿ ಅನಾವರಣಗೊಳ್ಳುತ್ತಿದೆ.

ಗಾಂಧಿ ಮತ್ತು ಸಿನಿಮಾ 

       ಇದುವರೆಗೆ ಗಾಂಧೀಜಿ ಪಾತ್ರವಿರುವ ಅನೇಕ ಸಿನಿಮಾಗಳು ಭಾರತೀಯ ಭಾಷೆಗಳಲ್ಲಿ ತಯ್ಯಾರಾಗಿವೆ. ಆ ಎಲ್ಲ ಸಿನಿಮಾಗಳಲ್ಲಿ ಗಾಂಧೀಜಿ ಅವರನ್ನು ಸ್ವಾತಂತ್ರ್ಯ ಹೋರಾಟಗಾರನಾಗಿ ಮತ್ತು ಒಬ್ಬ ಪರಿಪೂರ್ಣ ವ್ಯಕ್ತಿಯಾಗಿ ಚಿತ್ರಿಸಲಾಗಿದೆ. 1982ರಲ್ಲಿ ರಿಚರ್ಡ್ ಆಟೆನ್ ಬರೋ ನಿರ್ದೇಶಿಸಿದ 'ಗಾಂಧಿ' ಸಿನಿಮಾ ಇದುವರೆಗೆ ನಾವು ನೋಡಿದ ಗಾಂಧಿ ಬದುಕು ಆಧರಿಸಿ ನಿರ್ಮಾಣಗೊಂಡ ಸಿನಿಮಾಗಳಲ್ಲೇ ಇದೊಂದು ಪರಿಪೂರ್ಣ ಚಿತ್ರ. ಆದರೆ ಕೆಲವು ವರ್ಷಗಳ ಹಿಂದೆ ಗಾಂಧೀಜಿ ಕುರಿತು ಸಿನಿಮಾವೊಂದು ಬಿಡುಗಡೆಯಾಯಿತು. ಆ ಚಿತ್ರದ ನಿರ್ಮಾಪಕ ಮತ್ತು ನಿರ್ದೇಶಕ ಇದೊಂದು ವಿಭಿನ್ನ ಚಿತ್ರ ಎಂದು ಹೇಳಿಕೊಂಡರು. ಈ ಚಿತ್ರದಲ್ಲಿ ಗಾಂಧೀಜಿ ಅವರನ್ನು ಒಬ್ಬ ಸಾಮಾನ್ಯ ವ್ಯಕ್ತಿಯಂತೆ ತೋರಿಸಿರುವುದೇ ಅದರಲ್ಲಿನ ವಿಭಿನ್ನತೆ. ವಿಕ್ಷಿಪ್ತ ವ್ಯಕ್ತಿತ್ವದ ಹರಿಲಾಲ ಗಾಂಧಿ ಎನ್ನುವ ಮತ್ತೊಬ್ಬ ಗಾಂಧಿ ಈ ಚಿತ್ರದ ನಿಜವಾದ ಹೀರೋ. ಹರಿಲಾಲನ ಪಾತ್ರವನ್ನು ವೈಭವೀಕರಿಸಿ ಆ ಮೂಲಕ ಗಾಂಧೀಜಿ ಅವರ ಬದುಕಿನ ದೌರ್ಬಲ್ಯಗಳನ್ನು ತೋರಿಸಲು ಪ್ರಯತ್ನಿಸಲಾಗಿದೆ. ಗಾಂಧೀಜಿ ಮೊದಲ ಮಗನಾದ ಈ ಹರಿಲಾಲ ಕುಡುಕ ಮತ್ತು ಸೋಮಾರಿ. ವಿದ್ಯಾಭ್ಯಾಸವನ್ನು ಮಧ್ಯೆದಲ್ಲೇ ಬಿಟ್ಟ ಹರಿಲಾಲನದು ಬೇಜವಾಬ್ದಾರಿಯಿಂದ ವರ್ತಿಸುವ ವ್ಯಕ್ತಿತ್ವ. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಂಡಿರುವ ತಂದೆ ಅದಕ್ಕಾಗಿ ಕುಟುಂಬವನ್ನು ನಿರ್ಲಕ್ಷಿಸುತ್ತಿರುವರು ಎನ್ನುವ ಮನೋಭಾವ ಆತನದು. ಈ ಕಾರಣದಿಂದಾಗಿಯೇ ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಗಾಂಧೀಜಿಯನ್ನು ಅವಮಾನಿಸಿ ಅವರಿಗೆ ಮುಜುಗರವನ್ನುಂಟು ಮಾಡಲು ಪ್ರಯತ್ನಿಸುತ್ತಾನೆ. ತನ್ನ ತಾಯಿಯೊಂದಿಗೆ ತಂದೆ ಕ್ರೂರವಾಗಿ ವರ್ತಿಸುತ್ತಿರುವರು ಎನ್ನುವ ಸಂದೇಹ ಅವನನ್ನು ಕಾಡುತ್ತಿರುತ್ತದೆ. ಆದ್ದರಿಂದ ತಂದೆಯನ್ನು ಸಮಾಜದಲ್ಲಿ ತೆಲೆ  ಎತ್ತದಂತೆ ನಿರಂತರವಾಗಿ ಅವಮಾನ ಮಾಡುವುದು ಹರಿಲಾಲನ ಉದ್ದೇಶವಾಗಿರುತ್ತದೆ. ಹೀಗೆ ಗಾಂಧೀಜಿ ಮತ್ತು ಹರಿಲಾಲನ ನಡುವಿನ ಸಂಕೀರ್ಣ ಸಂಬಂಧದ ಚಿತ್ರಣ ಈ ಸಿನಿಮಾದಲ್ಲಿದೆ. ಗಾಂಧೀಜಿ ಮತ್ತು ಹರಿಲಾಲ ನಡುವಣ ಸಂಬಂಧ ಹೇಗಿತ್ತು ಎಂದು ಹೇಳಲು ಗಾಂಧೀಜಿ ಇವತ್ತು ನಮ್ಮ ನಡುವೆ ಇಲ್ಲ. ಅವರ ಹತ್ಯೆಯಾದ  ಆರು ತಿಂಗಳಿಗೆ  ಹರಿಲಾಲ ಅಸುನೀಗಿದ. ಇವರಿಬ್ಬರ ಸಂಬಂಧಕ್ಕೆ ಸಾಕ್ಷಿಯಾಗಿದ್ದ ಕಸ್ತೂರಬಾ ಗಾಂಧೀಜಿ ಹತ್ಯೆಗಿಂತ ಮೊದಲೇ ಸಾವನ್ನಪ್ಪಿದರು. ಹೀಗಾಗಿ ಈ ಚಿತ್ರದಲ್ಲಿ ನೈಜತೆಗಿಂತ ಕಾಲ್ಪನಿಕತೆಯೇ ಹೆಚ್ಚು. ಈ ಚಿತ್ರವನ್ನು ನೋಡಿದ ವೀಕ್ಷಕರಲ್ಲಿ ಅನೇಕ ಪ್ರಶ್ನೆಗಳು ಉದ್ಭವಿಸುತ್ತವೆ. ಗಾಂಧೀಜಿ ಅವರ ವೈಯಕ್ತಿಕ ಬದುಕಿನ ಘಟನೆಗಳಿಗೆ ಕಾಲ್ಪನಿಕತೆಯನ್ನು ಬೆರೆಸಿ ಸಿನಿಮಾ ತಯ್ಯಾರಿಸುವ ಅವಶ್ಯಕತೆಯಾದರೂ ಏನಿತ್ತು? ಗಾಂಧೀಜಿ ಅವರನ್ನು ಸಾಮಾನ್ಯ ವ್ಯಕ್ತಿಯಂತೆ ಚಿತ್ರಿಸುವುದರಿಂದ ಆಗುವ ಉಪಯೋಗವಾದರೂ ಏನು? ಸಿನಿಮಾದ ಮೂಲಕ ಹರಿಲಾಲ ಗಾಂಧಿಯನ್ನು ಇಡೀ ಜಗತ್ತಿಗೆ ಪರಿಚಯಿಸುವ ಅಗತ್ಯವಾದರೂ ಏಕೆ? ಒಂದು ವಿಷಯವಂತೂ ಸ್ಪಷ್ಟವಾಗಿದೆ ಗಾಂಧೀಜಿ ಅವರ ಜನಪ್ರಿಯತೆಯನ್ನು ಬಳಸಿಕೊಂಡು ಸಿನಿಮಾದ ಮೂಲಕ ಹಣ ಮತ್ತು ಪ್ರಶಸ್ತಿಗಳನ್ನು ಗಳಿಸುವುದು ಈ ಸಿನಿಮಾ ಜನರ ಉದ್ದೇಶವಾಗಿದೆ. ಆದರೆ ಅವರು ಅದಕ್ಕಾಗಿ ಬಳಸಿಕೊಂಡ ವಿಧಾನ ಮಾತ್ರ ಸರಿಯಿಲ್ಲ. ಒಬ್ಬ ವ್ಯಕ್ತಿ ಸತ್ತ ಅರವತ್ತು ವರ್ಷಗಳ ನಂತರ ಅವರ ವೈಯಕ್ತಿಕ ಬದುಕಿನ ಘಟನೆಗಳನ್ನು ತೆರೆದಿಟ್ಟು ಒಬ್ಬ ಸಾಮಾನ್ಯ ವ್ಯಕ್ತಿ ಎಂದು ಹೇಳಲು ಹೊರಟಿರುವುದು ಅಕ್ಷಮ್ಯ ಅಪರಾಧ.

ಮೋಹನದಾಸ ಮತ್ತು ಪ್ರೇಮ ಪ್ರಕರಣ 

        ಗಾಂಧೀಜಿ ಅವರ ಬದುಕಿನ ಕುರಿತು ಅನೇಕ ಪುಸ್ತಕಗಳು ಪ್ರಕಟವಾಗಿವೆ. ಇತ್ತೀಚಿಗೆ ಪ್ರಕಟವಾದ ಪುಸ್ತಕವೊಂದರಲ್ಲಿ ಲೇಖಕರು ಗಾಂಧೀಜಿ ಅವರ ಬದುಕಿನಲ್ಲಿ ಪ್ರೇಮಪ್ರಕರಣವೊಂದು ನಡೆಯಿತೆಂದು ಹೇಳಿರುವರೆಂದು ಕೆಲವರು ವಿಮರ್ಶಿಸುವುದರ  ಮೂಲಕ ಓದುಗರ ಸಮೂಹದಲ್ಲಿ ಕುತೂಹಲ ಹುಟ್ಟಿಸುತ್ತಾರೆ. ಆ ಪ್ರಭೃತಿಗಳು  ಮುಂದುವರೆದು ಪುಸ್ತಕದ ಕೆಲವು ಪುಟಗಳು ಗಾಂಧೀಜಿ ಮತ್ತು ಬಂಗಾಳದ ಸಾಮಾಜಿಕ ಕಾರ್ಯಕರ್ತೆ ಸರಳಾದೇವಿಯ ನಡುವಣ ಸಂಬಂಧಕ್ಕೆ ಮೀಸಲಾಗಿವೆ ಎಂದು ಹೇಳುತ್ತಾರೆ. ಕವಿ ರವೀಂದ್ರನಾಥ ಟ್ಯಾಗೋರರ ಸೋದರ ಸಂಬಂಧಿ ಸರಳಾದೇವಿ ಹಾಗೂ ಮಹಾತ್ಮಾ ಗಾಂಧಿ ಪರಸ್ಪರ ಪ್ರೀತಿಸುತ್ತಿದ್ದರು ಎನ್ನುವ ವಿಷಯ ಪುಸ್ತಕದಲ್ಲಿದೆ ಎಂದು ಅನೇಕ ಪತ್ರಿಕೆಗಳು ವಿಮರ್ಶಾ ಲೇಖನವನ್ನು ಪ್ರಕಟಿಸಿದವು. ಆ ಸಂದರ್ಭ ಗಾಂಧೀಜಿಗೆ ಐವತ್ತು ವರ್ಷ ವಯಸ್ಸು ಮತ್ತು ಸರಳಾದೇವಿ ವಯಸ್ಸು ನಲವತ್ತೇಳು ಎಂದು ಹೇಳುವ ಅಕ್ಯಾಡೆಮಿಕ ವಿಮರ್ಶಕರು  ಗಾಂಧೀಜಿ ಅವರ ಆದರ್ಶಗಳನ್ನೆಲ್ಲ ಗಾಳಿಗೆ ತೂರಿರುವರು. ಕೊನೆಗೆ ಎರಡೂ ಕುಟುಂಬಗಳ ಒತ್ತಡದಿಂದಾಗಿ ಈ ಪ್ರೇಮ ಸಂಬಂಧ ಮುರಿದುಬಿತ್ತು ಎಂದೆನ್ನುವ ಇವರುಗಳು   ಅವರಿಬ್ಬರ ನಡುವೆ ಇದ್ದದ್ದು ಅದೊಂದು ಅಧ್ಯಾತ್ಮಿಕ ಪ್ರೀತಿ ಎಂದು ಮರೆತಿರುವುದು ಬಹುದೊಡ್ಡ ದುರಂತ.  ಇತಿಹಾಸದಲ್ಲಿ ಮುಚ್ಚಿಹೋದ ಸಂಗತಿಯೊಂದನ್ನು ಬೆಳಕಿಗೆ ತಂದಂತೆ ಕಪೋಕಲ್ಪಿತ ವಿಷಯಗಳನ್ನೆಲ್ಲ ಸೇರಿಸಿ ಗಾಂಧೀಜಿ ಅವರ ಕುರಿತು ಪುಸ್ತಕ ಬರೆಯುತ್ತಿರುವುದು ಮತ್ತು ಅಂಥ ಬರವಣಿಗೆಯನ್ನು ಪೂರ್ವಾಗ್ರಹ ಪೀಡಿತ ಮನೋಭಾವದಿಂದ ವಿಮರ್ಶಿಸುತ್ತಿರುವುದು ನಾವು ಗಾಂಧೀಜಿ ಅವರಿಗೆ ಮಾಡುತ್ತಿರುವ ಬಹುದೊಡ್ಡ ಅಪಮಾನ. ಹೀಗೆ ಅನಗತ್ಯವಾದ ವಿಷಯವನ್ನು ಅನಾವರಣಗೊಳಿಸುವುದರಿಂದ ಲೇಖಕರು ಹಾಗೂ ವಿಮರ್ಶಕರನ್ನು ಹೊರತುಪಡಿಸಿ ಬೇರೆ ಯಾರಿಗೂ ಪ್ರಯೋಜನವಾಗಲಾರದು. ಇಂಥ ಕಾಮಾಲೆ ಮನಸ್ಸಿನ ವಿಮರ್ಶೆಗಳಿಂದ   ಪುಸ್ತಕಗಳು ಪ್ರಕಟವಾದ ಕೆಲವೇ ದಿನಗಳಲ್ಲಿ ಅವುಗಳ ಲಕ್ಷಾಂತರ ಪ್ರತಿಗಳು ಮಾರಾಟವಾಗುತ್ತವೆ. ಓದುಗರೊಬ್ಬರು  ಹೇಳಿದಂತೆ  ಈ ಪ್ರಕಾರದ  ವಿಮರ್ಶೆಗಳಿಂದ  ಪುಸ್ತಕಗಳ ಪ್ರತಿಗಳು ಮಾರಾಟವಾಗಿ ಲೇಖಕರ ಜೇಬುಗಳು ಭರ್ತಿಯಾಗುತ್ತವೆ. ಅನೇಕ ಇತಿಹಾಸಕಾರರು ಇಂಥ ವಿಷಯಗಳನ್ನು ಸಮರ್ಥಿಸುವುದರ ಮೂಲಕ ಗಾಂಧೀಜಿ ಅವರ ವ್ಯಕ್ತಿತ್ವಕ್ಕೆ ಕಳಂಕ ತರುತ್ತಿರುವರು.

ಇನ್ನು ಕೆಲವು ಅಪ್ರಿಯ ಸತ್ಯಗಳು 

1. ಗಾಂಧಿ ಜಯಂತಿಯಂದು ಮಧ್ಯ ಮತ್ತು ಮಾಂಸದಂಗಡಿಗಳನ್ನು ತೆರೆಯಬಾರದು ಎನ್ನುವ ಆದೇಶವಿದ್ದರೂ ಇದರ ಉಲ್ಲಂಘನೆಯಾಗುತ್ತಿದೆ. ಗಾಂಧಿ ಜನ್ಮದಿನ ಎನ್ನುವುದನ್ನು ಮರೆತು ಜನರು ಮಾಂಸ ಮತ್ತು ಮಧ್ಯ ಸೇವನೆ ಮಾಡುವುದು ಸಾಮಾನ್ಯವಾಗಿದೆ.
2. ಗಾಂಧಿ ಜಯಂತಿಯಂದು ಸರ್ಕಾರಿ ರಜೆ ಇರುವುದರಿಂದ ಶಾಲಾ ಕಾಲೇಜುಗಳಲ್ಲಿ ಮತ್ತು ಸರ್ಕಾರಿ ಕಚೇರಿಗಳಲ್ಲಿ ಗಾಂಧಿ ಜಯಂತಿ ಆಚರಣೆ ವಿರಳವಾಗುತ್ತಿದೆ.
3. ಪ್ರತಿವರ್ಷ ಸ್ವಾತಂತ್ರ್ಯೋತ್ಸವ ಮತ್ತು ಗಣರಾಜ್ಯ ದಿನಗಳಂದು ಗಾಂಧೀಜಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಸಂಪ್ರದಾಯ ಕಡಿಮೆಯಾಗುತ್ತಿದೆ.
4. ಇತ್ತೀಚಿನ ದಿನಗಳಲ್ಲಿ ಶಾಲಾ ಕಾಲೇಜುಗಳಲ್ಲಿ ಮತ್ತು ಸರ್ಕಾರಿ ಕಚೇರಿಗಳಲ್ಲಿ ಗಾಂಧೀಜಿ ಭಾವಚಿತ್ರ ಕಣ್ಮರೆಯಾಗುತ್ತಿದೆ.
5. ಗಾಂಧೀಜಿ ಪ್ರತಿಮೆಗೆ ಅಪಮಾನವಾದರೂ ಜನರು ಪ್ರತಿಭಟಿಸುತ್ತಿಲ್ಲ. ಸರ್ಕಾರ ಕೂಡ ತಪ್ಪಿತಸ್ಥರನ್ನು ಗುರುತಿಸಿ ಶಿಕ್ಷಿಸುವ ದಿಸೆಯಲ್ಲಿ ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ.
6. ಭಾರತದ ನೋಟುಗಳಲ್ಲಿರುವ ಗಾಂಧೀಜಿ ಅವರ ಚಿತ್ರವನ್ನು ವಿರೂಪಗೊಳಿಸಿ ಆನಂದ ಪಡೆಯುವ ವಿಕೃತರ ಸಂಖ್ಯೆ ಹೆಚ್ಚುತ್ತಿದೆ.
7. ಗಾಂಧೀಜಿ ಸ್ವಾತಂತ್ರ್ಯ ಚಳುವಳಿಯಲ್ಲಿ ಮಂದಗಾಮಿ ಗುಂಪಿಗೆ ಸೇರಿದವರಾಗಿದ್ದು ರಾಷ್ಟ್ರಕ್ಕೆ ಅವರು ನೀಡಿದ ಕೊಡುಗೆ ಅತ್ಯಲ್ಪ ಎಂದು ಹೇಳುತ್ತಿರುವುದು ನಿಜಕ್ಕೂ ಆಶ್ಚರ್ಯದ ಸಂಗತಿ.
8. ಗಾಂಧೀಜಿ ಕುರಿತು ಅನೇಕ ಜೋಕುಗಳು ಚಾಲ್ತಿಯಲ್ಲಿವೆ. ವ್ಯಂಗ್ಯ ಚಿತ್ರಕಾರರಿಗಂತೂ ಗಾಂಧೀಜಿ ಚಿತ್ರ ರಚನೆ ಅತ್ಯಂತ ಸರಳ. ಗಾಂಧೀಜಿ ಹಾಸ್ಯ ಬರಹಗಾರರಿಗೆ ಮತ್ತು ವ್ಯಂಗ್ಯ ಚಿತ್ರಕಾರರಿಗೆ ವಿಷಯವಸ್ತುವಾಗುತ್ತಿರುವುದು ಅತ್ಯಂತ ಖೇದದ ಸಂಗತಿ.

-ರಾಜಕುಮಾರ.ವ್ಹಿ.ಕುಲಕರ್ಣಿ (ಕುಮಸಿ), ಬಾಗಲಕೋಟೆ 

No comments:

Post a Comment