Monday, October 8, 2012

ಬದುಕು ಭಾರ ಎಂದೆನಿಸಿದಾಗ ಇವರನ್ನೊಮ್ಮೆ ನೆನಪಿಸಿಕೊಳ್ಳಿ

        ಕಳೆದ ತಿಂಗಳು ಗುಲಬರ್ಗಾದಿಂದ ಬಾಗಲಕೋಟೆಗೆ ರೈಲಿನಲ್ಲಿ ಬರುತ್ತಿದ್ದಾಗ ನಾನಿದ್ದ ಭೋಗಿಗೆ ಇಬ್ಬರು ವ್ಯಕ್ತಿಗಳು ಹತ್ತಿದರು. ಅವರ ಸಂಭಾಷಣೆಯಿಂದ ಅವರಿಬ್ಬರೂ ಅಪ್ಪ ಮಗನೆಂದು ಗೊತ್ತಾಯಿತು. ಮಗ ಸ್ಪುರದ್ರೂಪಿಯಾಗಿದ್ದರೂ ಅವನ ಚಲನವಲನಗಳಿಂದ ಆತ ಮಾನಸಿಕ ಅಸ್ವಸ್ಥನೆಂದು ಯಾರಾದರೂ ಗುರುತಿಸಬಹುದಿತ್ತು. ಮಗನ ಪ್ರತಿ ಅಗತ್ಯಗಳಿಗೆ ತಂದೆಯ ನೆರವಿನ ಅವಶ್ಯಕತೆಯಿತ್ತು. ಮಗನ ಬೇಕು ಬೇಡಗಳನ್ನು ಪೂರೈಸುವ ಕೆಲವು ಸಂದರ್ಭಗಳಲ್ಲಿ ತಂದೆ ಸಿಟ್ಟು ಮಾಡಿಕೊಂಡು ಆಗಾಗ ಹೊಡೆಯುತ್ತಿದ್ದ. ಮರುಕ್ಷಣವೇ ತನ್ನ ಕೋಪಕ್ಕೆ ಪ್ರಾಯಶ್ಚಿತ ಎನ್ನುವಂತೆ ಮಗನನ್ನು ಬಿಗಿದಪ್ಪಿಕೊಂಡು ಕಣ್ಣೀರಿಡುತ್ತಿದ್ದ. ಹೀಗೆ ಬಹಳ ಹೊತ್ತಿನವರೆಗೆ ಅಪ್ಪ ಮತ್ತು ಮಗನ ವರ್ತನೆಗಳು ಪುನರಾವರ್ತನೆಯಾಗುತ್ತಲೇ ಇದ್ದವು. ಆ ತಂದೆಯ ಅಸಹಾಯಕತೆ ಅರ್ಥವಾಗುವಂತಿದ್ದರೂ ಕೆಲವೊಮ್ಮೆ ಬದುಕಿನಲ್ಲಿ ಎದುರಾಗುವ ಸಂಕಷ್ಟಗಳಿಗೆ ಎದೆಯೊಡ್ಡಲೇ ಬೇಕಾಗುತ್ತದೆ. ಬದುಕು ಅಸಹನೀಯ ಎಂದೆನಿಸಿದಾಗಲೆಲ್ಲ ಬೇರೆಯವರಿಗಾಗಿ ಬದಕುತ್ತಿರುವವರ ಬದುಕು ನಮಗೆಲ್ಲ ಒಂದು ನೀತಿಪಾಠವಾಗುತ್ತದೆ. ಅವರ ಜೀವನ ಪ್ರೀತಿ, ನಿಸ್ವಾರ್ಥ ಸೇವೆ ಉಳಿದವರ ಬದುಕಿಗೆ ಸ್ಫೂರ್ತಿಯಾಗುತ್ತದೆ. ಅಂಥ ಇಬ್ಬರು ವಿಶಿಷ್ಟ ವ್ಯಕ್ತಿಗಳ ಬದುಕಿನ ಸಾಧನೆ ಬಹಳ ತಿಂಗಳುಗಳ ಹಿಂದೆ ಇಂಟರ್ ನೆಟ್ ನಲ್ಲಿ ಓದಲು ಸಿಕ್ಕಿತ್ತು. ಅಸಮಾನ್ಯ ಭಾರತೀಯರು ಎನ್ನುವ ಶೀರ್ಷಿಕೆಯಡಿ ದೊರೆತ ಮಾಹಿತಿ ಓದಿ ಖುಷಿಯಾಯಿತು. ಆ ಆಂಗ್ಲ ಭಾಷಾ ಮಾಹಿತಿಯನ್ನೇ ಕನ್ನಡದ ಚೌಕಟ್ಟಿನಲ್ಲಿ ಕಟ್ಟಿ ನಿಯತಕಾಲಿಕೆಯೊಂದರಲ್ಲಿ ಪ್ರಕಟಿಸಿದ್ದೂ ಆಯಿತು. ಬ್ಲಾಗ್ ಓದುಗರಿಗಾಗಿ ಅದೇ ಲೇಖನವನ್ನು ಇಲ್ಲಿ ಬರೆಯುತ್ತಿದ್ದೇನೆ. ಓದಿ ನೋಡಿ ನಿಮಗೂ ಸ್ಫೂರ್ತಿಯ ಸೆಲೆಯೊಂದು  ತಟ್ಟನೆ ಬಂದು ಕೈ ಹಿಡಿಯಬಹುದು.

ಅವರ ಬದುಕು ಖೈದಿಗಳ ಮಕ್ಕಳಿಗಾಗಿ ಮೀಸಲು 

          ಈಗ ನಾನು ಯಾವ ವ್ಯಕ್ತಿಯ ಬದುಕಿನ ಸಾಧನೆಯನ್ನು ಹೇಳಲು ಹೊರಟಿರುವೇನು ಅವರು ನಿವೃತ್ತರಾಗಿ ಹತ್ತಿರ ಹತ್ತಿರ ಒಂದು ದಶಕವಾಯಿತು. ಬದುಕಿನ ಪ್ರತಿ ಹೆಜ್ಜೆ ಜೊತೆಗಿದ್ದು ಸ್ಫೂರ್ತಿಯ ಸೆಲೆಯಾಗಿದ್ದ  ಪತ್ನಿ ಒಂದು ದಿನ ಮರಳಿ ಬಾರದ ದಾರಿಗೆ ಹೊರಟು ಹೋದರು. ಇದ್ದೊಬ್ಬ ಮಗ ವಿದೇಶದಲ್ಲಿ ನೆಲೆ ನಿಂತಿರುವನು. ಅವರ ಸೂಕ್ಷ್ಮ ಹೃದಯ ಶಸ್ತ್ರ ಚಿಕಿತ್ಸೆಗೊಳಗಾಗಿ ಕೆಲವು ತಿಂಗಳುಗಳಾದವು. ಇಷ್ಟೆಲ್ಲಾ ಆಘಾತಗಳ ನಡುವೆಯೂ ಅವರೊಳಗಿನ ಸಾಮಾಜಿಕ ಕಾಳಜಿ ಇದೆಯಲ್ಲ ಅದು ಮೆಚ್ಚುವಂತಹದ್ದು. ಇಂಥದ್ದೊಂದು ಮೆಚ್ಚುಗೆಗೆ ಪಾತ್ರರಾದವರು ಭಾರತೀಯ ರಿಜರ್ವ್ ಬ್ಯಾಂಕಿನ ನಿವೃತ್ತ ಅಧಿಕಾರಿ ಶ್ರೀ ಮಣಿ ಅವರು.
      ಸಮಾಜಕ್ಕೆ ಉಪಯೋಗವಾಗುವಂಥ ಕೆಲಸ ಮಾಡಬೇಕೆನ್ನುವ ಕನಸು ಮಣಿ ಅವರಲ್ಲಿ ಮೊಳಕೆಯೊಡೆದದ್ದು ಅವರು ಬೆಂಗಳೂರಿಗೆ ವರ್ಗವಾಗಿ ಬಂದ ಆ ಪ್ರಾರಂಭದ ದಿನಗಳಲ್ಲಿ. ಪ್ರತಿ ದಿನ ಬ್ಯಾಂಕಿಗೆ ಬೆಂಗಳೂರಿನ ಕೇಂದ್ರ ಕಾರಾಗೃಹದ ಎದುರಿನಿಂದ ಹಾದು ಹೋಗುವಾಗಲೆಲ್ಲ ಅವರನ್ನು ಒಂದು ದೃಶ್ಯ ಕ್ಷಣಕಾಲ ಹಿಡಿದು ನಿಲ್ಲಿಸುತ್ತಿತ್ತು. ಒಳಗಡೆ ಅಪರಾಧಿಗಳಾಗಿ ಬಂಧಿತರಾಗಿರುವ ತಂದೆ ತಾಯಿ ಹೊರಗಡೆ ಅವರ ಭೇಟಿಗಾಗಿ ಅಳುತ್ತ ನಿಂತಿರುತ್ತಿದ್ದ ಮಕ್ಕಳು. ಅದರಲ್ಲೂ ಚಿಕ್ಕ ಮಕ್ಕಳು ಹೀಗೆ ಜೈಲಿನ ಹೊರಗಡೆ ಅಳುತ್ತ ನಿಂತಿರುತ್ತಿದ್ದ ದೃಶ್ಯ ಮಣಿ ಅವರ ಹೃದಯವನ್ನು ಕಲುಕುತ್ತಿತ್ತು. ಬಂಧಿತರಾಗಿ ಜೈಲು ಸೇರಿರುವ ಅಪ್ಪ ಅಮ್ಮಂದಿರ ಮಕ್ಕಳಿಗಾಗಿ ಏನನ್ನಾದರೂ ಮಾಡಬೇಕೆಂದು ನಿರ್ಧರಿಸಿದ ಮಣಿ ತಮ್ಮ ನಿವೃತ್ತಿಯ ನಂತರ 'ಸೋಕೇರ್' ಸಂಸ್ಥೆಯನ್ನು ಆರಂಭಿಸಿದರು. 1999 ರಲ್ಲಿ ಸ್ಥಾಪನೆಯಾದ ಈ ಸಂಸ್ಥೆಗೆ ಈಗ ಹನ್ನೆರಡು ವರ್ಷಗಳು. ತಮ್ಮ ಪತ್ನಿಯ ಸಹಕಾರದೊಂದಿಗೆ ಸಂಸ್ಥೆಯನ್ನು ಹುಟ್ಟು ಹಾಕಿದ ಮಣಿ ಅವರು ನಿವೃತ್ತಿಯ ನಂತರ ಬಂದ ಹಣ ಹಾಗೂ ಜೀವಮಾನವಿಡಿ ದುಡಿದು ಗಳಿಸಿದ್ದೆಲ್ಲವನ್ನು ಸಂಸ್ಥೆಗಾಗಿ ಖರ್ಚು ಮಾಡಿರುವರು. ಇವತ್ತು 136 ಮಕ್ಕಳಿಗೆ ಆಶ್ರಯ ನೀಡಿರುವ 'ಸೋಕೇರ್' ಸಂಸ್ಥೆ ಕರ್ನಾಟಕದಲ್ಲಿ ಒಂದು ದೊಡ್ಡ ಸಂಸ್ಥೆಯಾಗಿ ಬೆಳೆದು ನಿಂತಿದೆ.
       ಆ ಸಂಸ್ಥೆಯಲ್ಲಿ ಎಲ್ಲವೂ ಅಚ್ಚುಕಟ್ಟು. ಎಲ್ಲ 136 ಮಕ್ಕಳನ್ನು ಬೆಂಗಳೂರಿನ ಅತ್ಯುತ್ತಮ ಶಾಲೆಗಳಿಗೆ ಸೇರಿಸಲಾಗಿದೆ. ಬೆಳಗಿನ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟ ಎಲ್ಲದರಲ್ಲೂ ವಿಶೇಷ ಕಾಳಜಿ. ಮಕ್ಕಳ  ಓದಿಗೆ ಅನುಕೂಲವಾಗಲೆಂದು ಆರು ಜನ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಈ ಸಂಸ್ಥೆಯಲ್ಲಿ ಶಾಲಾ ಓದಿನ ಜೊತೆಗೆ ಇತರ ಚಟುವಟಿಕೆಗಳಾದ ಹಾಡು, ನೃತ್ಯ, ಚಿತ್ರಕಲೆಗಳಿಗೂ ಪ್ರಾಮುಖ್ಯತೆ ನೀಡಲಾಗಿದೆ. ಒಟ್ಟಿನಲ್ಲಿ ಮಣಿ ಅವರದು ಅತ್ಯುತ್ತಮ ನಾಗರಿಕರನ್ನು ತಯ್ಯಾರಿಸುವ ಪ್ರಯತ್ನ. ಸಮಾಜದಿಂದ ಬಹಿಷ್ಕೃತರಾದ ಮತ್ತು ಕಳಂಕಿತರೆಂದು ಗುರುತಿಸಲ್ಪಟ್ಟವರ ಮಕ್ಕಳನ್ನು ಸಮಾಜವೇ ಒಪ್ಪಿಕೊಳ್ಳುವಂತೆ ಅವರು ಮಾಡುತ್ತಿರುವ ಕೆಲಸ ಅಭಿನಂದನಾರ್ಹ.
         ಕರ್ನಾಟಕದ ವಿವಿಧ ಜೈಲುಗಳಲ್ಲಿ ಬಂಧಿತರಾಗಿರುವವರ ಮಕ್ಕಳು ಮಣಿ ಅವರ ಆಶ್ರಯದಲ್ಲಿ ಅತ್ಯುತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳುತ್ತಿರುವರು. ಅದೆಷ್ಟೋ ಜನ ಜೈಲಿನಿಂದ ಬಿಡುಗಡೆಯಾದ ನಂತರವೂ ತಮ್ಮ ಮಕ್ಕಳನ್ನು  ಕರೆದುಕೊಂಡು ಹೋಗಲು ಇಚ್ಚಿಸುತ್ತಿಲ್ಲ. ಅಷ್ಟರ ಮಟ್ಟಿಗೆ 'ಸೋಕೇರ್' ಸಂಸ್ಥೆ ಅಪರಾಧಿಗಳ ಮಕ್ಕಳನ್ನು ಅತ್ಯಂತ ಕಾಳಜಿಯಿಂದ ನೋಡಿಕೊಳ್ಳುತ್ತಿದೆ. ಮಣಿ ಅವರು ಹೇಳುವಂತೆ 'ನಮ್ಮ  ಸಂಸ್ಥೆ ಮಕ್ಕಳಿಗೆ ಅಗತ್ಯವಾದ ಸಂಪೂರ್ಣ ಶಿಕ್ಷಣವನ್ನು ಕೊಡಲು ಬದ್ಧವಾಗಿದೆ. ಏಕೆಂದರೆ ಅಪರಾಧಿಗಳ ಮಕ್ಕಳು ಅಪರಾಧಿಗಳಾಗುವುದನ್ನು ಸಂಸ್ಥೆ ಬಯಸುವುದಿಲ್ಲ'. ಇದು ತೋರ್ಪಡಿಕೆಯ ಮಾತಲ್ಲ. ಸಮಾಜವನ್ನು ಕುರಿತು ಬಹುವಾಗಿ ಚಿಂತಿಸುವ ಪ್ರಾಂಜಲ ಮನಸ್ಸಿನ ಮಾತುಗಳಿವು. ಸಾಮಾಜಿಕ ಕಾಳಜಿ ಮತ್ತು ತುಡಿತವೆಂದರೆ ಇದೆ ಇರಬಹುದೇನೋ.
           ವಿದೇಶದಲ್ಲಿ ನೆಲೆ ನಿಂತಿರುವ ಮಗ ಅಪ್ಪನನ್ನು ವಿಶ್ರಾಂತಿಗೆ ಒತ್ತಾಯಿಸಿದಾಗಲೆಲ್ಲ ಮಣಿ ವ್ಯಗ್ರರಾಗುತಾರೆ. ವಿಶ್ರಾಂತಿಗೆ ಒತ್ತಾಯಿಸದಂತೆ ವಿನಂತಿಸುತ್ತಾರೆ. ಏಕೆಂದರೆ ಆ ಮಕ್ಕಳ ಏಳ್ಗೆಯಲ್ಲೇ ಅವರ ಬದುಕಿನ ಜೀವಸೆಲೆ ಅಡಗಿದೆ. ಹೃದಯ ಚಿಕಿತ್ಸೆಯ ನಂತರ ವೈದ್ಯರು ವಿಶ್ರಾಂತಿಗೆ ಸೂಚಿಸಿದ್ದರೂ ಮಣಿ ಅವರು ತಮ್ಮ ಹೆಚ್ಚಿನ ಸಮಯವನ್ನು ಕಳೆಯುತ್ತಿರುವುದು ಮಕ್ಕಳೊಂದಿಗೆ. ಇವತ್ತಿಗೂ ಅವರು ಆ ಮಕ್ಕಳಿಗೆ ಪ್ರೀತಿಯ ಮಣಿ ಅಂಕಲ್. ಅಂಕಲ್ ಬರುತ್ತಿದ್ದಂತೆ ಮಕ್ಕಳು ಅವರ ತೊಡೆ ಎರುತ್ತವೆ, ಹೆಗಲ ಮೇಲೆ ಕೈ ಇಡುತ್ತವೆ, ಕಥೆ ಹೇಳಿರೆಂದು ಪೀಡಿಸುತ್ತವೆ. ಹೆಂಡತಿ ಸತ್ತ ವಿಷಾಧದ ಛಾಯೆ ಅವರ ಕಣ್ಣುಗಳಲ್ಲಿದ್ದರೂ ಮಕ್ಕಳನ್ನು  ಕಂಡೊಡನೆ ಮನಸ್ಸು ಪ್ರಫುಲ್ಲವಾಗುತ್ತದೆ. ಬದುಕಿನ ಕೊನೆಯ ಮೆಟ್ಟಿಲಿನ ಮೇಲೆ ನಿಂತಿರುವ ವ್ಯಕ್ತಿ ಇದೀಗ  ಚಿಗುರುತ್ತಿರುವ ಮಕ್ಕಳ ಬದುಕಿಗೆ ಆಸರೆಯಾಗುತ್ತಾರೆ. ತನ್ನದೆಲ್ಲವನ್ನೂ ಸಮಾಜಕ್ಕೆ ಸಮರ್ಪಿಸಿಕೊಳ್ಳುತಾರೆ. ಆ ಮೂಲಕ ಬೇರೆಯವರ ಬದುಕಿಗೆ ಮಾದರಿಯಾಗುತ್ತಾರೆ.

ಅನಾಥ ಶವಗಳ ಬಂಧು 

       ಸಾಮಾನ್ಯವಾಗಿ ವಾರದ ರಜೆಯಾದ ರವಿವಾರದಂದು ಪ್ರತಿಯೊಬ್ಬರ ದಿನಚರಿ ಆರಂಭವಾಗುವುದು ತಡವಾಗಿಯೇ. ಚಹಾ ಕುಡಿಯುತ್ತ, ದಿನಪತ್ರಿಕೆ ಓದುತ್ತ ಆ ದಿನದ ಬೆಳಗನ್ನು ಅತ್ಯಂತ ಸೋಮಾರಿತನದಿಂದ ಕಳೆಯುವುದು ನಮ್ಮೆಲ್ಲರ ರೂಡಿ. ಅಂಥದ್ದೇ ಒಂದು ರವಿವಾರದ ಬೆಳಿಗ್ಗೆ ಎಸ್.ಶ್ರೀಧರ್ ಚೆನ್ನೈನ ಸರ್ಕಾರಿ ಆಸ್ಪತ್ರೆ ಎದುರು ನಿಂತಿರುವರು. ಆಸ್ಪತ್ರೆಯ ಸಿಬ್ಬಂದಿ ಬಿಳಿ ಬಟ್ಟೆಯಲ್ಲಿ ಸುತ್ತಿದ 17 ಶವಗಳನ್ನು ಶ್ರೀಧರ್ ಅವರಿಗೆ ಒಪ್ಪಿಸುವರು. ಆ 17 ಶವಗಳಲ್ಲಿ ಯಾರೊಬ್ಬರೂ ಶ್ರೀಧರ್ ಅವರ ಬಂಧುವಲ್ಲ. ಆ ಎಲ್ಲ 17 ಶವಗಳನ್ನು ಚಿತಾಗಾರಕ್ಕೆ ಕೊಂಡೊಯ್ದು ಶ್ರೀಧರ್ ಅವುಗಳ ಅಂತ್ಯಕ್ರಿಯೆ ನೆರವೇರಿಸುವರು. ರವಿವಾರದ ರಜಾದಿನ ಬೆಳ್ಳಂ ಬೆಳಿಗ್ಗೆ ಹೀಗೆ ಚಿತಾಗಾರದಲ್ಲಿ ನಿಂತಿದ್ದಕ್ಕೆ ಅವರಲ್ಲಿ ಸ್ವಲ್ಪವೂ ಬೇಸರವಿಲ್ಲ. ಬದಲಾಗಿ 17 ಆತ್ಮಗಳಿಗೆ ಶಾಂತಿ ದೊರಕಿಸಿದ ತೃಪ್ತಿ ಅವರ ಮುಖದಲ್ಲಿ ಕಾಣುತ್ತಿತ್ತು.
           ಇಂಡಿಯಾ ಇನ್ಫೋಲೈನ್ ನ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಎಸ್.ಶ್ರೀಧರ ಕಳೆದ 24 ವರ್ಷಗಳಿಂದ ಅನಾಥ ಶವಗಳ ಅಂತ್ಯಕ್ರಿಯೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವರು. ಸಮಾನ ಮನಸ್ಕರ ಜೊತೆಗೂಡಿ 'ಅನಾಥ ಪ್ರೇತ' ಎನ್ನುವ ಸಂಸ್ಥೆ ಸ್ಥಾಪಿಸಿರುವ ಶ್ರೀಧರ ಇದುವರೆಗೆ 600 ಅನಾಥ ಶವಗಳಿಗೆ ಮುಕ್ತಿ ದೊರಕಿಸಿರುವರು. ಚೆನ್ನೈನ ಸರ್ಕಾರಿ ಆಸ್ಪತ್ರೆ ಅಥವಾ ವೃದ್ಧಾಶ್ರಮದಲ್ಲಿ ಅನಾಥ ವ್ಯಕ್ತಿ ಸಾವನ್ನಪ್ಪಿದರೆ ತಕ್ಷಣವೇ ಶ್ರೀಧರ ಅವರಿಗೆ ಕರೆ ಹೋಗುತ್ತದೆ. ಸ್ನೇಹಿತರು ದೇಣಿಗೆಯಾಗಿ ಕೊಟ್ಟ ವಾಹನದೊಂದಿಗೆ ಅಲ್ಲಿಗೆ ಹೋಗುವ ಶ್ರೀಧರ ಶವದೊಂದಿಗೆ ಚಿತಾಗಾರಕ್ಕೆ ತೆರಳುತ್ತಾರೆ. ಅವರಿಗೆ ಸತ್ತಿರುವ ವ್ಯಕ್ತಿ ಗಂಡೋ ಅಥವಾ ಹೆಣ್ಣೋ ಎನ್ನುವುದರ ಹೊರತು ಬೇರೇನೂ ಗೊತ್ತಿರುವುದಿಲ್ಲ. ಆದ್ದರಿಂದ ಅಂತ್ಯಸಂಸ್ಕಾರ ಹಿಂದೂ ಪದ್ಧತಿಯ ಪ್ರಕಾರ ನೆರವೇರುತ್ತದೆ. ಅಂತ್ಯಸಂಸ್ಕಾರದ ಸಂದರ್ಭದಲ್ಲಿ ಶ್ರೀಧರ ಯಾವ ಮಂತ್ರಗಳನ್ನೂ ಉಚ್ಚರಿಸುವುದಿಲ್ಲ. ಆ ಸಮಯದಲ್ಲಿ ಅವರು ಪಠಿಸುವುದು 'ರಘುಪತಿ ರಾಘವ ರಾಜಾರಾಂ' ಎನ್ನುವ ದಿವ್ಯ ಮಂತ್ರವನ್ನು ಮಾತ್ರ.    
          24 ವರ್ಷಗಳ ಹಿಂದೆ 'ವಿಶ್ರಾಂತಿ' ಎನ್ನುವ ಹೆಸರಿನ ವೃದ್ಧಾಶ್ರಮದಲ್ಲಿ ನಡೆದ ಒಂದು ಘಟನೆ ಶ್ರೀಧರ್ ಅವರ ಬದುಕಿನ ದಿಕ್ಕನ್ನೇ ಬದಲಿಸಿತು. ಪ್ರತಿದಿನದಂತೆ ಆ ದಿನವೂ ಅವರು 'ವಿಶ್ರಾಂತಿ' ವೃದ್ಧಾಶ್ರಮಕ್ಕೆ ಹೋದ ಆ ಸಂದರ್ಭ ಆಶ್ರಮದ ಮುಖ್ಯಸ್ಥೆ ಸಾವಿತ್ರಿ ಅಲ್ಲಿರಲಿಲ್ಲ. ಈ ಕುರಿತು ಆಶ್ರಮದ ಸಿಬ್ಬಂದಿಯನ್ನು ವಿಚಾರಿಸಿದಾಗ ಆಕೆ ಸ್ಮಶಾನಕ್ಕೆ ಹೋಗಿರುವುದಾಗಿ ತಿಳಿದುಬಂತು. ನೇರವಾಗಿ ಸ್ಮಶಾನಕ್ಕೆ ಹೋದ ಶ್ರೀಧರ್ ಅವರಿಗೆ ಅಲ್ಲಿ ಕಂಡ ದೃಶ್ಯ ಒಂದು ಕ್ಷಣ ದಿಗ್ಮೂಢರನ್ನಾಗಿಸಿತು. ಸಾವಿತ್ರಿ ಕೆಲವು ಕ್ಷಣಗಳ ಹಿಂದೆ ಆಶ್ರಮದಲ್ಲಿ ಅಸುನೀಗಿದ್ದ ವೃದ್ಧರೊಬ್ಬರ ಅಂತ್ಯಕ್ರಿಯೆಯನ್ನು ಸೂಕ್ತ ವಿಧಿ ವಿಧಾನದ ಮೂಲಕ ನೆರವೇರಿಸುತ್ತಿದ್ದರು. ಹೆಣ್ಣು ಮಗಳೊಬ್ಬಳು ಹೀಗೆ ಸ್ಮಶಾನಕ್ಕೆ ಬಂದು ಶವಸಂಸ್ಕಾರದ ಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಿರುವುದು ಶ್ರೀಧರ್ ಅವರ ಮೇಲೆ ಗಾಢವಾದ ಪರಿಣಾಮ ಬೀರಿತು. ಆ ದಿನವೇ ಶ್ರೀಧರ್ ನಿರ್ಧರಿಸಿದರು. ಅಂದಿನಿಂದ ಶವಸಂಸ್ಕಾರ ಅವರಿಗೆ ಪವಿತ್ರ ಕಾಯಕವಾಯಿತು. ಆ ದಿನಗಳಲ್ಲಿ ಚಿತಾಗಾರಗಳು ಇರಲಿಲ್ಲವಾದ್ದರಿಂದ ಶ್ರೀಧರ್ ಅದೆಷ್ಟೋ  ಶವಗಳಿಗೆ ತಮ್ಮ ಕೈಯಾರೆ ಅಗ್ನಿಸ್ಪರ್ಷ ಮಾಡಿರುವರು. ಶ್ರೀಧರ್ ಹೇಳುತ್ತಾರೆ 'ಅಪರಿಚಿತ ಶವವೊಂದಕ್ಕೆ ಮೊದಲ ಬಾರಿಗೆ ಅಗ್ನಿಸ್ಪರ್ಷ ಮಾಡಿದ ಆ ದಿನ ನನಗೆ ಊಟ ಸೇರಲಿಲ್ಲ. ರಾತ್ರಿ ನಿದ್ದೆ ಹತ್ತಿರ ಸುಳಿಯಲಿಲ್ಲ. ನಾನು ಮಾಡುತ್ತಿರುವುದು ಸರಿಯೇ ಎಂದು ನನ್ನನ್ನು ನಾನು ಅನೇಕ ಬಾರಿ ಪ್ರಶ್ನಿಸಿಕೊಂಡೆ. ಕೊನೆಗೆ ನಾನು ಮಾಡುತ್ತಿರುವ ಈ ಕಾರ್ಯದಲ್ಲಿ ದೈವತ್ವ ಗೋಚರಿಸಿತು'. ಅವರ ಕುರಿತು ಓದುತ್ತ ಹೋದಂತೆ ಮನಸ್ಸು ಅಭಿಮಾನದಿಂದ ಭಾರವಾಗುತ್ತದೆ.
         ಧನ್ಯೋಸ್ಮಿ  ಎಂದು ಕಾಲಕ್ಕೆ ಕೈಮುಗಿಯಬೇಕೆನಿಸುತ್ತದೆ. ಏಕೆಂದರೆ ಈ ಮೇಲೆ ಹೆಸರಿಸಿರುವಂಥ ವ್ಯಕ್ತಿಗಳು ಸಾಧಿಸುತ್ತಿರುವ ಕಾಲದಲ್ಲೇ ನಾವುಗಳು ಜೀವಿಸುತ್ತಿರುವುದಕ್ಕೆ.

-ರಾಜಕುಮಾರ.ವ್ಹಿ.ಕುಲಕರ್ಣಿ (ಕುಮಸಿ), ಬಾಗಲಕೋಟೆ 

2 comments:

  1. Nobody is having Time to Read the Reality. Everyone things about His Earning, His Family.


    Some Times to Take an opportunity to keep the Mind cool and Fresh. and Try for mindset on certain Goal for the My Benefits or contribution to the Society may this kind of article Help Us.... Keeps us for it...

    Thanks for Publishing...... Try to Empower the same.........

    With regards.......

    ReplyDelete