ಕೆಲವು ತಿಂಗಳುಗಳಿಂದ ಶಿಕ್ಷಣ ಕ್ಷೇತ್ರ ಬಹು ಚರ್ಚಿತ ವಿಷಯವಾಗಿ ರೂಪಾಂತರಗೊಂಡಿದೆ. ಅದಕ್ಕೆ ಕಾರಣಗಳಿಲ್ಲದಿಲ್ಲ. ಹೀಗೆ ಚರ್ಚೆಗೆ ಎತ್ತಿಕೊಂಡ ಬಹುಮುಖ್ಯ ವಿಷಯಗಳಲ್ಲಿ 'ಶಿಕ್ಷಣ ಹಕ್ಕು ಕಾಯ್ದೆ' ಮೊದಲನೆಯದು. ಕೇಂದ್ರ ಸರ್ಕಾರ ರೂಪಿಸಿದ ಈ ಕಾಯ್ದೆ ಕುರಿತು ನಗರ ಮತ್ತು ಹಳ್ಳಿಗಳು ಸೇರಿದಂತೆ ಎಲ್ಲ ಕಡೆ ವಿಸ್ತ್ರತ ಚರ್ಚೆ ನಡೆಯುತ್ತಿದೆ. ಸರ್ಕಾರ ಜಾರಿಗೆ ತಂದ ಈ ಕಾಯ್ದೆ ಅನ್ವಯ ಪ್ರತಿಯೊಂದು ಮಗುವಿಗೆ ತನಗೆ ಅಗತ್ಯವಾದ ಶಿಕ್ಷಣವನ್ನು ಅಂದರೆ ಒಂದರಿಂದ ಎಂಟನೇ ತರಗತಿಯವರೆಗೆ ಪಡೆಯುವ ಹಕ್ಕಿದೆ. ಕಡ್ಡಾಯ ಶಿಕ್ಷಣ ಎನ್ನುವ ಶಿಕ್ಷಣದ ನಿಯಮವೇ ಇರುವಾಗ ಈ ಶಿಕ್ಷಣ ಹಕ್ಕು ಕಾಯ್ದೆಯಲ್ಲಿ ಹೊಸದೇನಿದೆ ಎನ್ನುವುದು ಕೆಲವರ ವಾದ. ವಿಸ್ತ್ರತವಾಗಿ ಹೇಳುವುದಾದರೆ ಪ್ರತಿಯೊಂದು ರಾಜ್ಯದಲ್ಲಿನ ಎಲ್ಲ ಪ್ರಕಾರದ ಅಂದರೆ ಸರ್ಕಾರಿ, ಅನುದಾನಿತ ಖಾಸಗಿ ಶಾಲೆಗಳು ಮತ್ತು ಅನುದಾನ ರಹಿತ ಖಾಸಗಿ ಶಾಲೆಗಳು ತಮ್ಮ ವ್ಯಾಪ್ತಿ ಪ್ರದೇಶದಲ್ಲಿ ವಾಸಿಸುತ್ತಿರುವ ಬಡತನ ರೇಖೆಯ ಕೆಳಗೆ ಬದುಕುತ್ತಿರುವ ಕುಟುಂಬಗಳಲ್ಲಿನ ಮಕ್ಕಳಿಗೆ ಶೇಕಡಾ 25 ರಷ್ಟು ಪ್ರವೇಶ ದಾಖಲಾತಿಯನ್ನು ಕಾಯ್ದಿರಿಸಬೇಕು. ಈ ವಿಷಯವಾಗಿ ಸರ್ಕಾರ ಕಾಯ್ದೆಯನ್ನು ರೂಪಿಸಿರುವುದರಿಂದ ಇಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯವರು ನುಣುಚಿಕೊಳ್ಳುವ ಹಾಗಿಲ್ಲ. ಈ ಕಾಯ್ದೆಯನ್ವಯ ದಾಖಲಾತಿಯನ್ನು ಕಾಯ್ದಿರಿಸಲು ಖಾಸಗಿ ಶಿಕ್ಷಣ ಸಂಸ್ಥೆಗಳವರು ಮೀನ ಮೇಷ ಮಾಡುತ್ತಿದ್ದರೂ ಮುಂದೊಂದು ದಿನ ಇದು ಕಡ್ಡಾಯವಾಗಿ ನಮ್ಮ ಬಡ ಮಕ್ಕಳೂ ಸಿ ಬಿ ಎಸ್ ಸಿ, ಆಯ್ ಸಿ ಎಸ್ ಸಿ ಶಾಲೆಗಳಲ್ಲಿ ಓದಬಹುದು. ಆದರೆ ದೇಶದ ಎಲ್ಲ ಮಕ್ಕಳಿಗೂ ಈ ಕಾಯ್ದೆಯಡಿ ಈ ಮೇಲೆ ಹೇಳಿದಂಥ ಶಾಲೆಗಳಲ್ಲಿ ಶಿಕ್ಷಣ ಕೊಡಿಸಲು ಸಾಧ್ಯವೇ? ಇರಲಿ ಇದನ್ನು ಮುಂದೆ ನೋಡೋಣ.
ಸರ್ಕಾರ ಶಿಕ್ಷಣದ ವಿಷಯವಾಗಿ ಇಂಥದ್ದೊಂದು ಕಾಯ್ದೆಯನ್ನು ಜಾರಿಗೆ ತಂದಿದೆ ಎಂದ ಮಾತ್ರಕ್ಕೆ ಮಕ್ಕಳ ಶಿಕ್ಷಣದ ವಿಷಯವಾಗಿ ಎಲ್ಲ ಸಮಸ್ಯೆಗಳು ಪರಿಹರಿಸಲ್ಪಟ್ಟಿವೆ ಎಂದರ್ಥವಲ್ಲ. ಏಕೆಂದರೆ ಶಿಕ್ಷಣ ಮಾಧ್ಯಮದ ವಿಷಯವಾಗಿ ಅನೇಕ ಗೊಜಲುಗಳಿವೆ. ಈ ದಿನಗಳಲ್ಲಿ ಪಾಲಕರಲ್ಲಿ ತಮ್ಮ ಮಕ್ಕಳಿಗೆ ಮಾತೃಭಾಷೆಯಲ್ಲಿ ಶಿಕ್ಷಣ ಕೊಡಿಸಬೇಕೆ ಇಲ್ಲವೇ ಇಂಗ್ಲಿಷ್ ಮಾಧ್ಯಮದ ಮೂಲಕ ಶಿಕ್ಷಣ ಕೊಡಿಸಬೇಕೆ ಎನ್ನುವ ವಿಷಯವಾಗಿ ಒಂದು ರೀತಿಯ ಅನಿಶ್ಚಿತತೆ ಮನೆಮಾಡಿಕೊಂಡಿದೆ. ಪಾಲಕರಲ್ಲಿನ ಈ ಅನಿಶ್ಚಿತತೆಗೆ ಕಾರಣ ಏನು ಎಂದು ಹುಡುಕಿಕೊಂಡು ಹೊರಟಾಗ ನಾವು ಮತ್ತೆ ಹೊಣೆಗಾರರನ್ನಾಗಿ ಮಾಡುವುದು ಸರ್ಕಾರವನ್ನೇ. ಸರ್ಕಾರ ಇಂಗ್ಲಿಷ್ ಶಾಲೆಗಳ ಸ್ಥಾಪನೆಗೆ ಅನುಮತಿ ನೀಡುತ್ತಿರುವ ಪರಿಣಾಮ ಈ ದಿನಗಳಲ್ಲಿ ಇಂಗ್ಲಿಷ್ ಮಾಧ್ಯಮದ ಖಾಸಗಿ ಶಾಲೆಗಳು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಾಪನೆಯಾಗುತ್ತಿವೆ. ಸರ್ಕಾರಿ ಶಾಲೆಗಳನ್ನೇ ಮೂಲೆಗುಂಪಾಗಿಸುತ್ತ ಖಾಸಗಿ ಒಡೆತನದ ಶೈಕ್ಷಣಿಕ ಉದ್ದಿಮೆ ಆಯಾ ರಾಜ್ಯದಲ್ಲಿ ತೆಲೆ ಎತ್ತಿದೆ. ಜೊತೆಗೆ ಬಹುಪಾಲು ಪಾಲಕರು ಈ ಇಂಗ್ಲಿಷ್ ಮಾಧ್ಯಮ ಶಿಕ್ಷಣದ ಕಡೆ ವಲಸೆ ಹೋಗುತ್ತಿರುವರು. ಪಾಲಕರ ಈ ದೌರ್ಬಲ್ಯವನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುತ್ತಿರುವ ಖಾಸಗಿ ಇಂಗ್ಲಿಷ್ ಮಾಧ್ಯಮ ಶಿಕ್ಷಣ ಸಂಸ್ಥೆಗಳ ಮಾಲೀಕರು ಲಕ್ಷಾಂತರ ರುಪಾಯಿಗಳನ್ನು ಶುಲ್ಕದ ರೂಪದಲ್ಲಿ ವಸೂಲಿ ಮಾಡುತ್ತಿರುವರು. ಹಾಗಾದರೆ ಆ ಖಾಸಗಿ ಸಂಸ್ಥೆಗಳ ಲಕ್ಷಾಂತರ ರೂಪಾಯಿಗಳ ಶುಲ್ಕವನ್ನು ಎಲ ಪಾಲಕರಿಗೂ ಭರಿಸಲು ಸಾಧ್ಯವಾಗುತ್ತದೆಯೇ ಎನ್ನುವುದು ಇಲ್ಲಿನ ಪ್ರಮುಖ ಪ್ರಶ್ನೆಯಾಗಿದೆ. ಹಣವಿದ್ದವರು ಮಾತ್ರ ಖಾಸಗಿ ಶಾಲೆಗಳಲ್ಲಿ ತಮ್ಮ ಮಕ್ಕಳಿಗೆ ಪ್ರವೇಶ ದೊರಕಿಸಿ ಕೊಡುತ್ತಿದ್ದರೆ ಹಣವಿಲ್ಲದವರು ಅನಿವಾರ್ಯವಾಗಿ ಸರ್ಕಾರಿ ಶಾಲೆಗಳತ್ತ ಮುಖ ಮಾಡಬೇಕಾದಂಥ ಪರಿಸ್ಥಿತಿ ನಿರ್ಮಾಣಗೊಂಡಿದೆ. ಒಂದೇ ಓಣಿಯಲ್ಲಿ ಅಕ್ಕಪಕ್ಕದ ಮನೆಗಳಲ್ಲಿ ವಾಸಿಸುತ್ತಿರುವ ಎರಡು ಕುಟುಂಬಗಳಲ್ಲಿನ ಶಾಮ ಇಂಗ್ಲಿಷ್ ಮಾಧ್ಯಮದ ಶಾಲೆಯಲ್ಲಿ ಓದುತ್ತಿದ್ದರೆ ರಾಮ ಸರ್ಕಾರಿ ಕನ್ನಡ ಶಾಲೆಯನ್ನು ನೆಚ್ಚಿಕೊಂಡಿರುವನು. ಇಂಗ್ಲಿಷ್ ಮಾತನಾಡುವ ಶಾಮನೆದುರು ಕನ್ನಡ ಮಾತನಾಡುವ ರಾಮ ಮಂಕಾಗಿ ಕಾಣಿಸುತ್ತಿರುವ ಪರಿಣಾಮ ಅವನ (ರಾಮನ) ಶೈಕ್ಷಣಿಕ ಪ್ರಗತಿ ಕುಂಠಿತಗೊಳ್ಳುತ್ತಿದೆ. ಸಹಜವಾಗಿಯೇ ಇದು ಆತನ ಪಾಲಕರಲ್ಲಿ ಆತಂಕವನ್ನು ಸೃಷ್ಟಿಸಿದೆ. ಅಂದರೆ ಬಡವರ ಮಕ್ಕಳ ಶಿಕ್ಷಣ ಅದು ಸರ್ಕಾರದ ಕನ್ನಡ ಶಾಲೆಗಳಿಗೆ ಮಾತ್ರ ಸೀಮಿತವಾಗಬೇಕೆ? ಇಂಥದ್ದೊಂದು ಸಮಸ್ಯೆಯನ್ನು ಸೃಷ್ಟಿಸಿರುವ ಸರ್ಕಾರ ಸಹಜವಾಗಿಯೇ ಆ ಸಮಸ್ಯೆಯ ನಿವಾರಣೆಯ ಹೊಣೆ ಹೊರಬೇಕಾಗುವುದು ಅನಿವಾರ್ಯವಾಗುತ್ತದೆ. ಈ ರೀತಿಯ ಸಮಸ್ಯೆಯೊಂದು ಎದುರಾಗಿರುವ ಸಂದರ್ಭದಲ್ಲೇ ಶಿಕ್ಷಣದ ಹಕ್ಕು ಕಾಯ್ದೆ ಜಾರಿಗೆ ಬರುತ್ತದೆ. ಆ ಕಾಯ್ದೆಯ ಮೂಲಕವಾದರೂ ಎಲ್ಲ ಬಡ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮದ ಶಾಲೆಗಳಿಗೆ ಪ್ರವೇಶ ದೊರಕಿಸಿ ಕೊಡಲು ಸಾಧ್ಯವೇ?
ಈಗ ನಾನು ಮತ್ತೆ ಶಿಕ್ಷಣ ಮಾಧ್ಯಮದ ವಿಷಯಕ್ಕೆ ಬರುತ್ತೇನೆ. ಸರ್ಕಾರ ಏನು ಮಾಡಬೇಕು. ಅದರೆದುರು ಎರಡು ಆಯ್ಕೆಗಳಿವೆ. ಒಂದು ಒಂದರಿಂದ ಹತ್ತನೇ ತರಗತಿಯವರೆಗೆ ಮಾತೃ ಭಾಷಾ ಶಿಕ್ಷಣವನ್ನು ಕಡ್ಡಾಯಗೊಳಿಸುವುದು. ಹೀಗೆ ಮಾಡುವುದರ ಮೂಲಕ ಆಯಾ ರಾಜ್ಯದ ಮಕ್ಕಳು ಬಡವ, ಶ್ರೀಮಂತ ಎನ್ನುವ ಭೇದವಿಲ್ಲದೆ ಎಲ್ಲರೂ ತಮ್ಮ ಮಾತೃ ಭಾಷೆಯ ಮೂಲಕವೇ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಪೂರೈಸಿದಂತಾಗುತ್ತದೆ. ಜೊತೆಗೆ ಮಗುವಿನ ಶಿಕ್ಷಣದಲ್ಲಿ ಪ್ರಾದೇಶಿಕ ವಿಷಯ ವಸ್ತುವಿಗೂ ಪ್ರಾಮುಖ್ಯತೆ ನೀಡಿದಂತಾಗುತ್ತದೆ. ಅದರೊಂದಿಗೆ ಕಲಿಯುವ ಭಾಷೆಯಾಗಿ ಇಂಗ್ಲಿಷನ್ನು ಒಂದನೇ ತರಗತಿಯಿಂದಲೇ ಕಲಿಯುವಂಥ ವ್ಯವಸ್ಥೆಯನ್ನು ಪರಿಚಯಿಸಬೇಕು. ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಎದುರು ಹಾಕಿಕೊಂಡು ಇಂಥದ್ದೊಂದು ಕೆಲಸಕ್ಕೆ ಕೈಹಾಕುವುದು ಅದು ಸರ್ಕಾರದ ಸಾಮರ್ಥ್ಯವನ್ನು ಮೀರಿದ ಸಂಗತಿ. ಇನ್ನು ಸರ್ಕಾರಕ್ಕಿರುವ ಎರಡನೇ ಆಯ್ಕೆ ಎಂದರೆ ಪ್ರತಿ ಹಳ್ಳಿಗಳನ್ನೊಳಗೊಂಡಂತೆ ಎಲ್ಲ ಪ್ರದೇಶಗಳಲ್ಲಿ ಇಂಗ್ಲಿಷ್ ಮಾಧ್ಯಮದ ಶಾಲೆಗಳನ್ನು ತೆರೆಯ ಬೇಕು. ಇದು ಒಂದರ್ಥದಲ್ಲಿ ಮುಂದೊಂದು ದಿನ ಎಲ್ಲ ಕನ್ನಡ ಶಾಲೆಗಳನ್ನು ಮುಚ್ಚುವಂತಹ ಅಪಾಯವೊಂದನ್ನು ನಾವಾಗಿಯೇ ಆಹ್ವಾನಿಸಿದಂತೆ. ಅಂಥದ್ದೊಂದು ಅಪಾಯ ಎದುರಾಗಬಾರದೆಂದು ಸರ್ಕಾರ 'ಶಿಕ್ಷಣದ ಹಕ್ಕು ಕಾಯ್ದೆ'ಯನ್ನು ಜಾರಿಗೆ ತಂದಿದೆ. ಆದರೆ ಇಲ್ಲೊಂದು ಪ್ರಶ್ನೆ ಎದುರಾಗುತ್ತದೆ. ಬಡತನ ರೇಖೆಯ ಕೆಳಗೆ ಬದುಕುತ್ತಿರುವ ಕುಟುಂಬಗಳಲ್ಲಿನ ಪ್ರತಿಶತ 25 ರಷ್ಟು ಮಕ್ಕಳಿಗೆ ಮಾತ್ರ ಖಾಸಗಿ ಇಂಗ್ಲಿಷ್ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ದೊರಕಿಸಿ ಕೊಟ್ಟರೆ ಉಳಿದ ಮಕ್ಕಳು ಏನು ಮಾಡಬೇಕು?. ಹಾಗಾದರೆ ಉಳಿದ ಮಕ್ಕಳು ಕನ್ನಡ ಶಾಲೆಗಳನ್ನೇ ಅವಲಂಬಿಸಬೇಕೇ? ಅವರಲ್ಲಿನ ಇಂಗ್ಲಿಷ್ ಮಾಧ್ಯಮದ ಮೂಲಕ ಕಲಿಯಬೇಕೆನ್ನುವ ಆಸೆಯನ್ನು ಚಿವುಟಿ ಹಾಕಬೇಕೆ? ಒಂದು ರೀತಿಯಲ್ಲಿ ಮಕ್ಕಳ ಶಿಕ್ಷಣ ವಿಷಯವಾಗಿ ಸರ್ಕಾರವೇ ತಾರತಮ್ಯವನ್ನು ಸೃಷ್ಟಿಸಿದಂತಾಗುತ್ತದೆ. ಹೀಗೆ ಮಾಡುವುದರ ಬದಲು ಸರ್ಕಾರ ಒಂದೇ ಮಾಧ್ಯಮದ ಶಿಕ್ಷಣವನ್ನು ಕಡ್ಡಾಯಗೊಳಿಸುವುದು ಸೂಕ್ತ.
ಶಿಕ್ಷಣದ ವಿಷಯವಾಗಿ ಎರಡನೇ ಬಹು ಚರ್ಚಿತ ಸಂಗತಿ ಎಂದರೆ ಅದು ಏಕರೂಪ ಪಠ್ಯಕ್ರಮ . ಕೇಂದ್ರ ಸರ್ಕಾರ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆಯನ್ನು ಜಾರಿಗೆ ತಂದಿದ್ದೆ ತಡ ಎಲ್ಲ ರಾಜ್ಯಗಳಲ್ಲಿ ಏಕರೂಪ ಪಠ್ಯಕ್ರಮ ಪರಿಚಯಿಸುವ ಸಿದ್ಧತೆ ಪ್ರಾರಂಭವಾಗಿದೆ. ಪರಿಣಾಮವಾಗಿ ಪಠ್ಯ ಪುಸ್ತಕಗಳಲ್ಲಿ ಪ್ರಾದೇಶಿಕತೆ ಮಾಯವಾಗಿ ಮಕ್ಕಳ ಮೇಲೆ ರಾಷ್ಟ್ರೀಯ ಸಂಗತಿಗಳನ್ನು ಬಲವಂತವಾಗಿ ಹೇರಿದಂತಾಗುತ್ತದೆ. ತನ್ನ ಪರಿಸರದಲ್ಲಿನ ಪರಿಚಿತ ಸಂಗತಿಗಳನ್ನು ಓದುತ್ತಿದ್ದ ಮಗು ತನ್ನದಲ್ಲದ ಅಪರಿಚಿತ ವಿಷಯಗಳನ್ನು ಅಭ್ಯಾಸ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಇದು ಭಾಷಾ ವಿಜ್ಞಾನ ಮತ್ತು ಸಮಾಜ ವಿಜ್ಞಾನಕ್ಕೆ ಸಂಬಂಧಿಸಿದ ಸಮಸ್ಯೆಯಾದರೆ ಗಣಿತ ಮತ್ತು ವಿಜ್ಞಾನದ ವಿಷಯಗಳು ಅತ್ಯಂತ ಜಟಿಲವಾಗಿವೆ. ರಾಷ್ಟ್ರಮಟ್ಟದ ಅರ್ಹತಾ ಪರೀಕ್ಷೆಯಲ್ಲಿ ಪ್ರಾದೇಶಿಕ ಅಸಮಾನತೆ ಇಲ್ಲದೆ ಎಲ್ಲ ಮಕ್ಕಳೂ ಜೊತೆಯಾಗಿ ಸ್ಪರ್ಧಿಸಲಿ ಎನ್ನುವ ಸರ್ಕಾರದ ಕ್ರಮವೇನೋ ಸ್ವಾಗತಾರ್ಹ. ಆದರೆ ಹೀಗೆ ಮಾಡುವಾಗ ಇಲ್ಲಿ ಮತ್ತೆ ಕನ್ನಡ ಮಾಧ್ಯಮದಲ್ಲಿ ಓದುತ್ತಿರುವ ಮಕ್ಕಳ ಪ್ರಶ್ನೆ ಎದುರಾಗುತ್ತದೆ. ಏಕರೂಪ ಪಠ್ಯಕ್ರಮದ ವ್ಯಾಪ್ತಿಗೆ ಕನ್ನಡ ಮಾಧ್ಯಮ ಶಿಕ್ಷಣವನ್ನು ಸೇರಿಸುವುದಾದರೂ ಹೇಗೆ? ಪಿಯುಸಿ ಹಂತದಲ್ಲಿ ಗಣಿತ ಮತ್ತು ವಿಜ್ಞಾನವನ್ನು ಕನ್ನಡ ಭಾಷೆಯಲ್ಲಿ ಕಲಿಯಲು ಅವಕಾಶ ಮತ್ತು ಅನುಕೂಲತೆಗಳಿಲ್ಲದಂತಹ ಹೊತ್ತಿನಲ್ಲಿ ಕನ್ನಡ ಮಾಧ್ಯಮದ ಶಿಕ್ಷಣವನ್ನು ರಾಷ್ಟ್ರೀಯ ಅರ್ಹತಾ ಪರೀಕ್ಷೆಗನುಗುಣವಾಗಿ ಅಣಿಗೊಳಿಸಲು ಸಾಧ್ಯವೇ? ಸಾಧ್ಯವಿಲ್ಲ ಎಂದಾದರೆ ಕನ್ನಡ ಮಾಧ್ಯಮದಲ್ಲಿ ಓದುತ್ತಿರುವ ಮಕ್ಕಳು ಇಂಗ್ಲಿಷ್ ಮಾಧ್ಯಮದ ಏಕರೂಪ ಪಠ್ಯಕ್ರಮವನ್ನು ಅಭ್ಯಸಿಸುತ್ತಿರುವ ಮಕ್ಕಳ ಪ್ರಬಲ ಸ್ಪರ್ಧೆಯ ನಡುವೆ ಅವರುಗಳೆಂದು ವೃತ್ತಿಪರ ಶಿಕ್ಷಣಕ್ಕೆ ಪ್ರವೇಶ ಪಡೆಯಬೇಕು. ಅಂಥದ್ದೊಂದು ಸಾಧ್ಯತೆ ಅಸಾಧ್ಯವಾಗಿರುವುದರಿಂದ ಕನ್ನಡ ಭಾಷೆಯಲ್ಲಿ ಓದುತ್ತಿರುವ ಈ ಬಡ ಮಕ್ಕಳು ಹೋಟೆಲ್ಲುಗಳಲ್ಲೊ, ಕಿರಾಣಿ ಅಂಗಡಿಗಳಲ್ಲೊ ಕೆಲಸ ಮಾಡುತ್ತ ತಮ್ಮ ಬದುಕನ್ನು ರೂಪಿಸಿಕೊಳ್ಳಬೇಕಾಗುತ್ತದೆ.
ಶಿಕ್ಷಣದ ವಿಷಯವಾಗಿ ಯಾವುದೇ ಕಾಯ್ದೆ ಕಾನೂನು ರೂಪಿಸುವುದಕ್ಕಿಂತ ಮೊದಲು ಸರ್ಕಾರ ಅದರ ಸಾಧಕ ಬಾಧಕಗಳನ್ನು ಕುರಿತು ವಿವೇಚಿಸುವುದೊಳಿತು. ಸ್ಥಿತಿವಂತರು ತಮ್ಮ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮದ ಶಾಲೆಗಳಿಗೆ ಕಳುಹಿಸಿದರೆ ಬಡ ಮಕ್ಕಳಿಗಾಗಿ ಸರ್ಕಾರದ ಕನ್ನಡ ಶಾಲೆಗಳಿವೆ ಎನ್ನುವ ವಿತಂಡವಾದ ಸರಿಯಲ್ಲ. ಶಿಕ್ಷಣದ ಮಾಧ್ಯಮವನ್ನು ಸಾಮರ್ಥ್ಯದ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳುವುದಕ್ಕಿಂತ ಅದನ್ನು ಆಸಕ್ತಿಗನುಗುಣವಾಗಿ ಆಯ್ಕೆ ಮಾಡಿಕೊಳ್ಳುವಂತಹ ವಾತಾವರಣ ನಿರ್ಮಾಣವಾಗಬೇಕು. ಬಡವರ ಮತ್ತು ಶ್ರೀಮಂತರ ಮಕ್ಕಳು ಕೂಡಿಯೇ ಕನ್ನಡ ಶಾಲೆಗಳಲ್ಲೂ ಮತ್ತು ಇಂಗ್ಲಿಷ್ ಶಾಲೆಗಳಲ್ಲೂ ಕಲಿಯುವಂತಹ ದಿನಗಳು ಬರಬೇಕು.
ಇದ್ದದ್ದು ಇದ್ದಹಾಂಗ
ಕರ್ನಾಟಕ ಸರ್ಕಾರ ಆರನೇ ತರಗತಿಯಿಂದ ಇಂಗ್ಲಿಷ್ ಮಾಧ್ಯಮದ ಶಾಲೆಗಳನ್ನು ತೆರೆಯುವ ಯೋಜನೆ ರೂಪಿಸಿದ್ದೆ ತಡ ರಾಜ್ಯದ ಮೂಲೆ ಮೂಲೆಗಳಿಂದ ಆಕ್ರೋಶದ ಮಾತುಗಳು ಕೇಳಿ ಬಂದವು. ವಿಶೇಷವಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷರುಗಳು ತಮ್ಮ ತಮ್ಮ ಜಿಲ್ಲೆಗಳಲ್ಲಿ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡರು. ಜಿಲ್ಲಾಧಿಕಾರಿಗಳ ಕಚೇರಿ ಎದುರು ಉಪವಾಸ ಕುಳಿತರು. ಈ ವಿಷಯವಾಗಿ ಕನ್ನಡ ಪ್ರಭ ದಿನಪತ್ರಿಕೆ ವರದಿ ಪ್ರಕಟಿಸಿದ್ದೆ ತಡ ಅವರೆಲ್ಲರ ಬಣ್ಣ ಬಯಲಾಯಿತು. ಏಕೆಂದರೆ ಈ ಪರಿಷತ್ತಿನ ಜಿಲ್ಲಾಧ್ಯಕ್ಷರುಗಳಲ್ಲಿ ಹೆಚ್ಚಿನವರ ಮಕ್ಕಳು ಓದುತ್ತಿರುವುದು ಪ್ರತಿಷ್ಠಿತ ಇಂಗ್ಲಿಷ್ ಶಾಲೆಗಳಲ್ಲಿ. ಹೇಗಿದೆ ನೋಡಿ ಹೇಳುವುದು ಒಂದು ಮಾಡುವುದು ಇನ್ನೊಂದು.
-ರಾಜಕುಮಾರ.ವ್ಹಿ.ಕುಲಕರ್ಣಿ (ಕುಮಸಿ), ಬಾಗಲಕೋಟೆ

No comments:
Post a Comment